ಕಲ್ಲಂಗಡಿ (Watermelon) ಬೇಸಿಗೆಯ ಅತ್ಯಂತ ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿದೆ. ವಿಶ್ವಾದ್ಯಂತ ಜನ ಬೇಸಿಗೆಯ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಲು ಇಷ್ಟಪಡುತ್ತಾರೆ. ಸುಮಾರು 92 ಪ್ರತಿಶತ ನೀರು, ವಿಟಮಿನ್ ಎ, ಬಿ6, ಸಿ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಈ ಹಣ್ಣು ಶಾಖದಿಂದ ಪರಿಹಾರ ನೀಡಿ ದೇಹಕ್ಕೆ ತಾಜಾತನವನ್ನು ಒದಗಿಸುತ್ತದೆ. ಇದರಲ್ಲಿರುವ ಹೆಚ್ಚಿನ ನೀರಿನ ಅಂಶವು ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಕಲ್ಲಂಗಡಿ ಸೇವನೆಯಿಂದ ರಕ್ತದೊತ್ತಡವನ್ನು ಸಹ ನಿಯಂತ್ರಿಸಬಹುದು. ಹೀಗೆ ಈ ರುಚಿಕರ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಲು ಪ್ರತಿವರ್ಷ ಆಗಸ್ಟ್ 3 ರಂದು ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ಕಲ್ಲಂಗಡಿ ದಿನದ ಈ ಶುಭ ಸಂದರ್ಭದಲ್ಲಿ ಮಾವಿನಹಣ್ಣಿನಂತೆ ಕಲ್ಲಂಗಡಿ ಹಣ್ಣಿನಲ್ಲಿ ಎಷ್ಟೆಲ್ಲಾ ವಿಧಗಳಿವೆ, ಈ ಹಣ್ಣಿನ ಪ್ರಯೋಜನಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.
ರಾಷ್ಟ್ರೀಯ ಕಲ್ಲಂಗಡಿ ದಿನದ ಇತಿಹಾಸವೇನು?
ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಪ್ರಪಂಚದ ವಿವಿಧ ಭಾಗಗಳಲ್ಲಿ, ಮುಖ್ಯವಾಗಿ ಅಮೆರಿಕದಲ್ಲಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಕಲ್ಲಂಗಡಿ ದಿನವನ್ನು 1980 ರ ದಶಕದ ಆರಂಭದಲ್ಲಿ ಯುನೈಟೆಡ್ ಸ್ಟೇಟ್ನ ರಾಷ್ಟ್ರೀಯ ಕಲ್ಲಂಗಡಿ ಬೆಳೆಗಾರರು ಮತ್ತು ವಿತರಕರ ಸಂಘವು ಕೃಷಿ ಪ್ರಚಾರ ಕಾರ್ಯಕ್ರಮವಾಗಿ ರಾಷ್ಟ್ರೀಯ ಕಲ್ಲಂಗಡಿ ದಿನವನ್ನು ಪ್ರಾರಂಭಿಸಿತು. ಇಂದು ಪ್ರಪಂಚದ ಅನೇಕ ಕಡೆ ಈ ದಿನವನ್ನು ಆಚರಿಸಲಾಗುತ್ತದೆ.
ಕಲ್ಲಂಗಡಿ ಹಣ್ಣಿನಲ್ಲಿ ಎಷ್ಟೆಲ್ಲಾ ವಿಧಗಳಿವೆ:
ಮಾವಿನಹಣ್ಣಿನಲ್ಲಿ ಅಲ್ಫೋನ್ಸೋ, ಮಲ್ಲಿಕಾ, ತೋತಾಪುರಿ ಇತ್ಯಾದಿ ವಿಧಗಳಿರುವಂತೆ ಕಲ್ಲಂಗಡಿ ಹಣ್ಣಿನಲ್ಲೂ ಸಾಕಷ್ಟು ವಿಧಗಳಿವೆ ಅವುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಶುಗರ್ ಬೇಬಿ: ಇದು ಅತ್ಯಂತ ಜನಪ್ರಿಯ ಕಲ್ಲಂಗಡಿ ವಿಧಗಳಲ್ಲಿ ಒಂದಾಗಿದೆ, ಇದು 2-3 ಕೆಜಿ ತೂಕವಿರುತ್ತದೆ. ಇದರ ಬೀಜಗಳು ಚಿಕ್ಕದಾಗಿರುತ್ತವೆ ಮತ್ತು ಕಂದು ಬಣ್ಣದ್ದಾಗಿರುತ್ತವೆ. ಇದನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತದೆ.
ಅರ್ಕ ಜ್ಯೋತಿ: ಅರ್ಕ ಜ್ಯೋತಿ ವಿಧದ ಕಲ್ಲಂಗಡಿ ಹಣ್ಣುಗಳು ದುಂಡಗಿನ ಆಕಾರದಲ್ಲಿದ್ದು, ಇವು ಹಸಿರು ಪಟ್ಟೆಗಳನ್ನು ಹೊಂದಿರುತ್ತವೆ. ಇದರ ತೂಕ ಸುಮಾರು 4 ರಿಂದ 6 ಕೆಜಿ. ಇದು ಸ್ಥಳೀಯ ವಿಧವಾಗಿದ್ದು, ಪ್ರಕಾಶಮಾನವಾದ ಕೆಂಪು ತಿರುಳನ್ನು ಹೊಂದಿರುತ್ತದೆ.
ದುರ್ಗಾಪುರ ಕೇಸರ್: ಈ ಬಗೆಯ ಕಲ್ಲಂಗಡಿ ಹಣ್ಣು, 6 ರಿಂದ 8 ಕಿಲೋಗ್ರಾಂಗಳಷ್ಟು ತೂಗುತ್ತವೆ. ಈ ಹಣ್ಣು ಹಸಿರು ಬಣ್ಣದಲ್ಲಿ ಪಟ್ಟೆಗಳೊಂದಿಗೆ ಇರುತ್ತದೆ ಮತ್ತು ಇದರ ತಿರುಳು ಸ್ವಲ್ಪ ಕೇಸರಿ ಬಣ್ಣದಲ್ಲಿರುತ್ತವೆ.
ಅರ್ಕಾ ಮಾಣಿಕ್: ಈ ಪ್ರಕಾರದ ಕಲ್ಲಂಗಡಿ ಹಣ್ಣು ದುಂಡಗಿನ ಮತ್ತು ಅಂಡಾಕಾರದಲ್ಲಿರುತ್ತವೆ. ಇವು ಸುಮಾರು 5 ರಿಂದ 6 ಕೆಜಿ ತೂಗುತ್ತವೆ. ಅಲ್ಲದೆ ಈ ಹಣ್ಣು ಸಖತ್ ಸಿಹಿಯಾಗಿರುತ್ತದೆ.
ಅಸಾಹಿ ಯಾಮೊಟೊ: ಇದು ಜಪಾನಿನಲ್ಲಿ ಬೆಳೆಯುವ ಕಲ್ಲಂಗಡಿ ಹಣ್ಣಿನ ವಿಧವಾಗಿದೆ. ಈ ಕಲ್ಲಂಗಡಿ 6 ರಿಂದ 8 ಕಿಲೋಗ್ರಾಂಗಳಷ್ಟು ತೂಗುತ್ತದೆ. ಇದರ ಸಿಪ್ಪೆ ಹಸಿರು ಬಣ್ಣದ್ದಾಗಿದ್ದು, ಸೌಮು ಸಿಹಿಯನ್ನು ಹೊಂದಿರುತ್ತದೆ ಮತ್ತು ಈ ಕಲ್ಲಂಗಡಿ ಆಳವಾದ ಗುಲಾಬಿ ಬಣ್ಣದ ತಿರುಳನ್ನು ಹೊಂದಿರುತ್ತದೆ.
ಕಾಶಿ ಪಿತಾಂಬರ್: ಈ ಕಾಶಿ ಪಿತಾಂಬರ್ ಕಲ್ಲಂಗಡಿ ವಿಧವು ಹಳದಿ ಸಿಪ್ಪೆ ಮತ್ತು ಗುಲಾಬಿ ಬಣ್ಣದ ತಿರುಳನ್ನು ಹೊಂದಿದೆ. ಈ ಹಣ್ಣಿನ ಸರಾಸರಿ ತೂಕ 2.5 ರಿಂದ 3.5 ಕಿಲೋಗ್ರಾಂಗಳು.
ಕಾಶಿ ಮೋಹಿನಿ: ಈ ಬಗೆಯ ಕಲ್ಲಂಗಡಿ ಹಣ್ಣಿನ ತಿರುಳು ಗಾಢ ಕೆಂಪು ಬಣ್ಣವನ್ನು ಹೊಂದಿದ್ದು, ತುಂಬಾ ಸಿಹಿಯಾಗಿರುತ್ತದೆ. ಈ ವಿಧವು ಅತ್ಯುತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.
ಇದನ್ನೂ ಓದಿ: ಕೊರಿಯನ್ನರಂತೆ ಹೊಳೆಯುವ ತ್ವಚೆ ನಿಮ್ಮದಾಗಲು ಪ್ರತಿನಿತ್ಯ ಈ ಆಹಾರಗಳನ್ನು ಸೇವಿಸಿ
ಕಲ್ಲಂಗಡಿ ಹಣ್ಣಿನ ಆರೋಗ್ಯ ಪ್ರಯೋಜನಗಳೇನು?
- ಕಲ್ಲಂಗಡಿ ಹಣ್ಣಿನಲ್ಲಿ 92% ನೀರಿನಾಂಶವಿದ್ದು, ಇದು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ.
- ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೀನ್ ಎಂಬ ಪದಾರ್ಥವಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
- ನೀರಿನಂಶದಿಂದ ಸಮೃದ್ಧವಾಗಿರುವ ಈ ಹಣ್ಣು ತ್ವರಿತ ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಇದನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆ ಬೇಗನೆ ತುಂಬುತ್ತದೆ.
- ಕಲ್ಲಂಗಡಿ ವಿಟಮಿನ್ ಎ ಮತ್ತು ಸಿ ಯ ಉತ್ತಮ ಮೂಲವಾಗಿದೆ. ಇದು ಆಸ್ತಮಾದ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ.
- ಕಲ್ಲಂಗಡಿ ವಿಟಮಿನ್ ಎ, ವಿಟಮಿನ್ ಸಿ, ಬಿ6, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ವಿವಿಧ ಪೋಷಕಾಂಶಗಳ ಉಗ್ರಾಣವಾಗಿದೆ. ಅವು ಜೀವಕೋಶದ ಹಾನಿಯನ್ನು ತಡೆಗಟ್ಟಲು ಮತ್ತು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.
- ಈ ಹಣ್ಣಿನಲ್ಲಿ ನೀರಿನ ಅಂಶ ಮತ್ತು ಜೀವಸತ್ವಗಳು ಅಧಿಕವಾಗಿವೆ. ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ, ಕಲ್ಲಂಗಡಿಯಲ್ಲಿರುವ ಲೈಕೋಪೀನ್ ಸೂರ್ಯನ ನೇರಳಾತೀತ ಕಿರಣಗಳ ಹಾನಿಕಾರಕ ಪರಿಣಾಮಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಹೀಗೆ ಈ ಹಣ್ಣು ಚರ್ಮದ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 5:47 pm, Sun, 2 August 26