
ನವದೆಹಲಿ, ಮಾರ್ಚ್ 23: ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ ಪರಿಣಾಮ ಗಗನಕ್ಕೇರಿದ್ದ ತೈಲ ಬೆಲೆಗಳು (crude oil prices) ಇದೀಗ ತಗ್ಗಿವೆ. ಸೋಮವಾರ ಬ್ರೆಂಟ್ ಕ್ರೂಡ್ ಶೇ 11ರಷ್ಟು ಕಡಿಮೆ ಆಗಿದೆ. ಒಂದು ಬ್ಯಾರಲ್ ತೈಲದ ಬೆಲೆ 100 ಡಾಲರ್ಗಿಂತ ಕಡಿಮೆಗೆ ಇಳಿದಿದೆ. ತೈಲ ಬೆಲೆ ಏರಲು ಕಾರಣವಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಟ್ರೂತ್ ಸೋಷಿಯಲ್ನಲ್ಲಿ ಪೋಸ್ಟ್ ಹಾಕಿದ ಬಳಿಕ ತೈಲ ಬೆಲೆ ಕೆಳ ಜಾರಿದೆ.
ಬ್ರೆಂಟ್ ಮತ್ತು ಡಬ್ಲ್ಯುಟಿಐ ಕ್ರೂಡ್ ಫ್ಯೂಚರ್ ಬೆಲೆಗಳಲ್ಲಿ ಇಳಿಕೆ
ಇರಾನ್ನ ವಿದ್ಯುತ್ ಘಟಕಗಳು ಮತ್ತು ಇಂಧನ ಘಟಕಗಳ (Energy infrastructure) ಮೇಲೆ ದಾಳಿಯನ್ನು ಐದು ದಿನ ಮುಂದೂಡಿದ್ದೇವೆ. ಎರಡು ದಿನಗಳಿಂದ ಇರಾನ್ ಜೊತೆ ಉತ್ತಮ ಮಾತುಕತೆ ನಡೆಸಿರುವುದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ತಿಳಿಯಾಗುವ ಆಶಾಭಾವನೆ ಮೂಡಿರುವುದರಿಂದ ತೈಲ ಬೆಲೆ ಕಡಿಮೆಗೊಂಡಿರಬಹುದು. ಬ್ರೆಂಟ್ ಪ್ಯೂಚರ್ಸ್ ಮತ್ತು ಡಬ್ಲ್ಯುಟಿಐ ಫ್ಯೂಚರ್ಸ್ ಎರಡೂ ಕೂಡ ಶೇ. 10ಕ್ಕಿಂತಲೂ ಹೆಚ್ಚಿನ ಪ್ರಮಾಣದಷ್ಟು ಕುಸಿತ ಕಂಡಿವೆ.
ಇದನ್ನೂ ಓದಿ: PM Modi speech: ಸಾಧ್ಯವಿರುವೆಡೆಯೆಲ್ಲಾ ತೈಲ ಮತ್ತು ಅನಿಲ ಪಡೆಯುತ್ತಿದ್ದೇವೆ- ಪ್ರಧಾನಿ ಮೋದಿ
ಸೋಮವಾರ ಒಂದು ಹಂತದಲ್ಲಿ ಬ್ರೆಂಟ್ ಫ್ಯೂಚರ್ಸ್ ಬ್ಯಾರಲ್ಗೆ 98 ಡಾಲರ್ ಬೆಲೆ ಹೊಂದಿತ್ತು. ಡಬ್ಲ್ಯುಟಿಐ ಕ್ರೂಡ್ ಫ್ಯೂಚರ್ಸ್ 91 ಡಾಲರ್ ಬೆಲೆ ಹೊಂದಿತ್ತು. ಟ್ರಂಪ್ ಹೇಳಿಕೆಯ ಪರಿಣಾಮ ಇದು. ಮತ್ತೊಂದು ಸಕಾರಾತ್ಮಕ ವಿಚಾರ ಎಂದರೆ, ಇರಾನ್ ಜೊತೆ ಅಮೆರಿಕ ನಡೆಸಿದ ಮಾತುಕತೆ ಎರಡು ದಿನಕ್ಕೆ ಸೀಮಿತವಾಗಿಲ್ಲ. ಈ ವಾರಾದ್ಯಂತ ಮಾತುಕತೆಗಳು ಮುಂದುವರಿಯಲಿವೆ. ಅಲ್ಲಿಯವರೆಗೆ ಇರಾನ್ನ ವಿದ್ಯುತ್ ಮತ್ತು ಇಂಧನ ಘಟಕಗಳ ಮೇಲೆ ಮಿಲಿಟರಿ ದಾಳಿಗಳನ್ನು ನಿಲ್ಲಿಸುವಂತೆ ಟ್ರಂಪ್ ಸೂಚಿಸಿದ್ದಾರೆ.
ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಗಣನೀಯ ಇಳಿಕೆ ಕಷ್ಟಸಾಧ್ಯ. ಗೋಲ್ಡ್ಮ್ಯಾನ್ ಸ್ಯಾಕ್ಸ್ ಮಾಡಿರುವ ಅಂದಾಜು ಪ್ರಕಾರ 2026ರಲ್ಲಿ ಬ್ರೆಂಟ್ ಕ್ರೂಡ್ನಲ್ಲಿ ತೈಲ ಬೆಲೆ ಸರಾಸರಿಯಾಗಿ 85 ಡಾಲರ್ ಇರಬಹುದು ಎನ್ನಲಾಗಿದೆ. ಇನ್ನು ಡಬ್ಲ್ಯುಟಿಐನಲ್ಲಿ ಸರಾಸರಿ ಬೆಲೆ 79 ಡಾಲರ್ ಇರಲಿದೆ ಎಂದು ಗೋಲ್ಡ್ಮ್ಯಾನ್ ಸ್ಯಾಕ್ಸ್ನ ವರದಿ ಹೇಳುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ