ದೆಹಲಿ, ಏಪ್ರಿಲ್ 26: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಖರ್ಗೆಯವರು ಎಐಸಿಸಿ ಅಧ್ಯಕ್ಷರು, ನಾನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ. ನಾವು ಭೇಟಿ ಮಾಡುವುದು ಸಹಜ ಎಂದು ಸ್ಪಷ್ಟಪಡಿಸಿದ್ದಾರೆ. ಬೇರೆ ಬೇರೆ ರಾಜ್ಯಗಳ ಚುನಾವಣೆಗೆ ತಮ್ಮನ್ನು ವೀಕ್ಷಕರಾಗಿ ಕಳಿಸಲಾಗಿತ್ತು. ಅಸ್ಸಾಂ, ತಮಿಳುನಾಡು, ಕೇರಳದಲ್ಲಿ ನಡೆದ ಚುನಾವಣಾ ಪ್ರಚಾರಗಳು ಮತ್ತು ಅಲ್ಲಿನ ಪರಿಸ್ಥಿತಿಗಳ ಕುರಿತು ಪಕ್ಷದ ಹಿರಿಯರಿಗೆ ವರದಿ ಸಲ್ಲಿಸುವುದು ನನ್ನ ಕರ್ತವ್ಯ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಐಪಿಎಲ್ 2026 ರ 36 ನೇ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರಸ್ಪರ ಮುಖಾಮುಖಿಯಾಗಿದ್ದವು. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ್ ತಂಡವನ್ನು ಮಣಿಸಿದ ಸನ್‌ರೈಸರ್ಸ್ ತಂಡ ಈ ಲೀಗ್ನ 5ನೇ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಅಲಂಕರಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡ ವೈಭವ್ ಸೂರ್ಯವಂಶಿ ಅವರ ದಾಖಲೆಯ ಶತಕದಿಂದ 229 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ನಾಯಕ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ 19ನೇ ಓವರ್ನಲ್ಲಿ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಪರ ಆರಂಭಿಕ ಜೋಡಿಯಾದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 40 ರನ್‌ಗಳ ಜೊತೆಯಾಟ ನೀಡಿದರು. ಯಶಸ್ವಿ 10 ರನ್‌ಗಳಿಗೆ ಔಟಾದರೆ, ನಂತರ ಬಂದ ಧ್ರುವ್ ಜುರೇಲ್ ಹಾಗೂ ವೈಭವ್ ಎರಡನೇ ವಿಕೆಟ್‌ಗೆ ಕೇವಲ 62 ಎಸೆತಗಳಲ್ಲಿ 112 ರನ್‌ಗಳ ಪಾಲುದಾರಿಕೆಯನ್ನು ನೀಡಿದರು. ಧ್ರುವ್ 35 ಎಸೆತಗಳಲ್ಲಿ 51 ರನ್ ಗಳಿಸಿ ಔಟಾದರು. ಇತ್ತ ತನ್ನ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ ವೈಭವ್ ಐಪಿಎಲ್ ವೃತ್ತಿಜೀವನದಲ್ಲಿ ತಮ್ಮ ಎರಡನೇ ಶತಕ ಮತ್ತು ಈ ಆವೃತ್ತಿಯ ಮೊದಲ ಶತಕ ಬಾರಿಸಿದರು.
ವೈಭವ್ ಕೇವಲ 37 ಎಸೆತಗಳಲ್ಲಿ 12 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಾಯದಿಂದ 103 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಡೊವೊವನ್ ಫೆರೇರಾ 33 ರನ್ ಗಳಿಸಿದರೆ, ಶಿಮ್ರಾನ್ ಹೆಟ್ಮೆಯರ್ 11 ರನ್ ಗಳಿಸಿದರು. ನಾಯಕ ರಿಯಾನ್ ಪರಾಗ್ 7 ರನ್ ಗಳಿಸಿ ಔಟಾದರೆ, ರವೀಂದ್ರ ಜಡೇಜಾ 4 ರನ್ ಗಳಿಸಿ ಅಜೇಯರಾಗಿ ಮರಳಿದರು. ಹೈದರಾಬಾದ್ ಪರ ಇಶಾನ್ ಮಾಲಿಂಗ 2, ಪ್ರುಫಲ್ ಹಿಂಗೆ, ಪ್ಯಾಟ್ ಕಮ್ಮಿನ್ಸ್, ಶಕೀಬ್ ಹುಸೇನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ 1 ವಿಕೆಟ್ ಪಡೆದರು.
ಶ್ರೀನಗರ, ಏಪ್ರಿಲ್ 25: ಜಮ್ಮು ಮತ್ತು ಕಾಶ್ಮೀರದಲ್ಲಿ (Avalanche in Kashmir) ಭಾರೀ ಹಿಮಪಾತವಾಗುತ್ತಿದೆ. ಝೋಜಿ ಲಾ ಪಾಸ್‌ನ ಶೈತಾನ್ ನಲ್ಲದಲ್ಲಿ ಹಿಮಪಾತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಈ ಹಿಮಪಾತದಿಂದಾಗಿ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಇಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಝೋಜಿಲಾ ಪಾಸ್ ಬಳಿ ಹಿಮಪಾತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ಹಲವಾರು ವಾಹನಗಳು ಹಿಮಪಾತದಲ್ಲಿ ಸಿಲುಕಿದ್ದು, ಇಲ್ಲಿಯವರೆಗೆ ಯಾವುದೇ ಜೀವಹಾನಿ ವರದಿಯಾಗಿಲ್ಲ. ಹಿಮವನ್ನು ತೆರವುಗೊಳಿಸುವ ಪ್ರಯತ್ನಗಳು ಮುಂದುವರೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ಅವರು ಡಾ ರಾಜ್ಕುಮಾರ್ (Dr Rajkumar) ಅವರ ಸಮಾಧಿಯ ಕುರಿತು ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಟೀಕೆಗೆ ಗುರಿಯಾಗಿತ್ತು. ರಾಜ್ಕುಮಾರ್ ಅವರಿಗೆ 2.50 ಎಕರೆ ಭೂಮಿಯನ್ನು ಸ್ಮಾರಕಕ್ಕಾಗಿ ಸರ್ಕಾರ ನೀಡಿತ್ತು ತಪ್ಪು ಎಂಬರ್ಥದ ಫೇಸ್ಬುಕ್ ಪೋಸ್ಟ್ ಅನ್ನು ಚೇತನ್ ಹಂಚಿಕೊಂಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿ. ಇಂದು ಅಭಿಮಾನಿಗಳು ಚೇತನ್ ಮನೆಗೆ ಮುತ್ತಿಗೆ ಹಾಕಿದರು. ಬಳಿಕ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಚೇತನ್ ಅಹಿಂಸ ಕ್ಷಮೆ ಕೇಳಿದರು. ಅದಾದ ಬಳಿಕವೂ ಸಹ ಸಾರಾ ಗೋವಿಂದು ಸಿಟ್ಟು ತಣಿದಿರಲಿಲ್ಲ. ಚೇತನ್ ವಿರುದ್ಧ ವಾಗ್ದಾಳಿ ನಡೆಸಿದರು. ವಿಡಿಯೋ ನೋಡಿ…
ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada
ಬೆಂಗಳೂರು, ಏಪ್ರಿಲ್ 25: ರಾಷ್ಟ್ರೀಯ ಜನಗಣತಿ–2027ರ(Caste Sensus) ಕಾರ್ಯಾಚರಣೆಯ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಗಣತಿದಾರರಿಗೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸಂಬಂಧಪಟ್ಟ ನಿವಾಸಿಯ ವಿರುದ್ಧ ಇದೀಗ ಆರ್ಟಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ನಡೆದಿದ್ದೇನು?
ವಾರ್ಡ್ ಸಂಖ್ಯೆ 43ರಲ್ಲಿ ಜನಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಗಣತಿದಾರರಾದ ಶ್ರೀಮತಿ ವೀಣಾ ಅವರು ಏಪ್ರಿಲ್ 20ರಂದು ಆರ್.ಟಿ. ನಗರದ ಸುಲ್ತಾನಪಾಳ್ಯದ ಪೇರಿ ಮೊನಾರ್ಕ್ ಅಪಾರ್ಟ್‌ಮೆಂಟ್‌ಗೆ ಮಾಹಿತಿ ಸಂಗ್ರಹಿಸಲು ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ನಿವಾಸಿಯೊಬ್ಬರು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಈ ಕುರಿತು ಏಪ್ರಿಲ್ 25ರಂದು ಮೇಲ್ವಿಚಾರಕರಾದ ಶ್ರೀಮತಿ ರಶ್ಮಿ ಆರ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕೇಳಿದಾಗ, ಆ ನಿವಾಸಿಯು ಗಣತಿ ಕಾರ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಮಹಿಳಾ ಸಿಬ್ಬಂದಿಯೊಂದಿಗೆ ಅತ್ಯಂತ ಅಸಭ್ಯವಾಗಿ ವರ್ತಿಸಿ ನಿಂದಿಸಿದ್ದಾರೆ.
ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಜನಗಣತಿ ಅಧಿಕಾರಿ ಡಾ. ಲೋಕೇಶ್ ಅವರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ವಿರುದ್ಧ ಜನಗಣತಿ ಕಾಯ್ದೆ 1948ರ ಸೆಕ್ಷನ್ 11(1) ಹಾಗೂ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ (BNS) ಕಲಂ 223 ಮತ್ತು 79ರ ಅಡಿಯಲ್ಲಿ ಕ್ರಮಕೈಗೊಳ್ಳಲಾಗಿದೆ.
ಆಯುಕ್ತರಿಂದ ಖಡಕ್ ಎಚ್ಚರಿಕೆ
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಜನಗಣತಿ ರಾಷ್ಟ್ರದ ಪ್ರಮುಖ ಕಾರ್ಯವಾಗಿದ್ದು, ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಅಡ್ಡಿಪಡಿಸುವುದು ಕಾನೂನುಬದ್ಧ ಅಪರಾಧವಾಗಿದೆ. ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಮತ್ತು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು, ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಮನವಿ
ಇನ್ನು ಸಾರ್ವಜನಿಕರಿಗೂ ಆಯುಕ್ತರು ಮನವಿ ಮಾಡಿದ್ದು, ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ನಿಖರ ಮಾಹಿತಿ ನೀಡಿ ಸಹಕರಿಸುವುದು ಅವರ ಕಾನೂನುಬದ್ಧ ಕರ್ತವ್ಯವಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ರಾಷ್ಟ್ರದ ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ತಿರುವಳ್ಳೂರು, ಏಪ್ರಿಲ್ 25: ತಮಿಳುನಾಡಿನ ತಿರುವಳ್ಳೂರಿನ 26 ವರ್ಷದ ಆಕಾಶ್ ಮತ್ತು 25 ವರ್ಷದ ಮೋನಿಕಾ ಕೇವಲ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಶಾಲೆಯಿಂದ ಕಾಲೇಜಿನವರೆಗೆ ಒಟ್ಟಿಗೇ ಓದಿದ್ದ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರೂ ಒಪ್ಪಿ ಮದುವೆ ಮಾಡಿಸಿದ್ದರು. ಆದರೆ, ಅವರ ಪ್ರೀತಿಯ ದಾಂಪತ್ಯ ಎರಡೇ ವರ್ಷದಲ್ಲಿ ಅಂತ್ಯವಾಗಿದೆ. ತಮಿಳುನಾಡಿನ ಸೆಖೆ ತಡೆಯಲಾರದೆ ಮೋನಿಕಾ ಆಕಾಶ್ ಬಳಿ ಮನೆಗೆ ಎಸಿ ಹಾಕಿಸು ಎಂದು ಹೇಳಿದ್ದಳು. ಆದರೆ, ಆಕಾಶ್ ಈಗ ಬೇಡವೆಂದು ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಮೋನಿಕಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ!
ಆಕಾಶ್ ತಿರುವಳ್ಳೂರಿನ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಮೋನಿಕಾ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದಳು. ಸೆಖೆಯಿಂದ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಮೋನಿಕಾ ತನ್ನ ಪತಿ ಆಕಾಶ್‌ಗೆ ಮನೆಗೆ ಎಸಿ ಖರೀದಿಸಲು ಕೇಳಿಕೊಂಡಿದ್ದಳು. ಆದರೆ, ಹೆಚ್ಚಿನ ಸಂಬಳವಿಲ್ಲದ ಆಕಾಶ್ ಅದಕ್ಕೆ ನಿರಾಕರಿಸಿದ್ದ . ಇದರಿಂದಾಗಿ, ಇಬ್ಬರ ನಡುವೆ ಜಗಳ ಉಂಟಾಗಿತ್ತು. ಆಕಾಶ್ನ ಮನೆಯವರೂ ಸೊಸೆಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.
ಸೆಖೆ ತಡೆಯಲಾಗದೆ ನಿನ್ನೆ ರಾತ್ರಿ ಆಕಾಶ್ ತನ್ನ ತಮ್ಮಂದಿರು ಮತ್ತು ಅಪ್ಪ-ಅಮ್ಮನ ಜೊತೆ ಟೆರೇಸಿನಲ್ಲಿ ಮಲಗಲು ಹೋಗಿದ್ದ. ಆಗ ಮೋನಿಕಾ ಮಾತ್ರ ಮನೆಯಲ್ಲಿ ಒಬ್ಬಂಟಿಯಾಗಿ ಮಲಗಿದ್ದಳು. ಬೆಳಿಗ್ಗೆ ಮುಂಜಾನೆ ಆಕಾಶ್ ರೂಂಗೆ ಬಂದಾಗ ತನ್ನ ಪತ್ನಿ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಆಘಾತಕ್ಕೊಳಗಾದನು.
ಮನೆಯಲ್ಲಿ ತನ್ನ ಪತ್ನಿ ಮೋನಿಕಾ ತನ್ನ ಸೀರೆಯಿಂದ ನೇಣು ಬಿಗಿದುಕೊಂಡಿರುವುದನ್ನು ನೋಡಿ ಆಕಾಶ್ ಕಿರುಚಿದನು. ಆ ಸಮಯದಲ್ಲಿ, ಮಹಡಿಯ ಮೇಲೆ ಮಲಗಿದ್ದ ಅವರ ತಂದೆ, ತಾಯಿ ಮತ್ತು ಸಹೋದರ ಅವರ ಕಿರುಚಾಟ ಕೇಳಿ ಕೆಳಗೆ ಬಂದರು. ನಂತರ, ಅವರು ಈ ಘಟನೆಯ ಬಗ್ಗೆ ಪುಲ್ಲರಂಬಕ್ಕಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಈ ವಿಷಯ ತಿಳಿದ ಪುಲ್ಲರಂಬಕ್ಕಂ ಪೊಲೀಸರು ಮೋನಿಕಾಳ ಶವವನ್ನು ವಶಪಡಿಸಿಕೊಂಡು ತಿರುವಲ್ಲೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಈ ಬಗ್ಗೆ ಅವರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
ಅವರು ಮದುವೆಯಾಗಿ ಕೇವಲ ಎರಡು ವರ್ಷಗಳಾಗಿವೆ. ಹೀಗಾಗಿ, ಈ ಆತ್ಮಹತ್ಯೆಗೆ ಬೇರೆ ಯಾವುದೇ ಕಾರಣಗಳಿವೆಯೇ ಎಂದು ಅವರು ತನಿಖೆ ನಡೆಸುತ್ತಿದ್ದಾರೆ. ಮೋನಿಕಾಳ ಶವವನ್ನು ಹೊರತೆಗೆದು ಶವಪರೀಕ್ಷೆಗಾಗಿ ತಿರುವಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇಂಪಾಲ, ಏಪ್ರಿಲ್ 25: ಹಿಂಸಾಚಾರ ಪೀಡಿತ ಮಣಿಪುರದಲ್ಲಿ (Manipur) ಶಾಶ್ವತ ಶಾಂತಿಯನ್ನು ಬಯಸುವ ಸಾವಿರಾರು ಪ್ರತಿಭಟನಾಕಾರರು ಇಂಪಾಲದಲ್ಲಿರುವ ಮುಖ್ಯಮಂತ್ರಿ ನಿವಾಸದ ಕಡೆಗೆ ಮೆರವಣಿಗೆ ನಡೆಸುವುದನ್ನು ತಡೆದ ನಂತರ ಇಂದು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಇಂಪಾಲದ ವಿವಿಧ ಭಾಗಗಳಿಂದ 4 ಪ್ರತ್ಯೇಕ ರ‍್ಯಾಲಿಗಳನ್ನು ಮುನ್ನಡೆಸಿದ ಮೈತೈ ಗುಂಪಿನ ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿ (COCOMI) ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಆದರೆ, ಬಾಬುಪರಾ ಪ್ರದೇಶದಲ್ಲಿರುವ ಮುಖ್ಯಮಂತ್ರಿಯವರ ಬಂಗಲೆಯನ್ನು ತಲುಪುವ ಮೊದಲು ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಹಲವು ಸ್ಥಳಗಳಲ್ಲಿ ತಡೆದವು. ಈ ವೇಳೆ ಹಿಂಸಾಚಾರ ನಡೆದಿದ್ದು, ಹಲವರಿಗೆ ಗಾಯಗಳಾಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಆನೇಕಲ್, ಏಪ್ರಿಲ್ 25: ಕರ್ತವ್ಯದಲಿದ್ದಾಗಲೇ ಬಿಎಂಟಿಸಿ ಬಸ್ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲೇ ಬಿಎಂಟಿಸಿ ಡಿಪೋದಲ್ಲಿ ಸಹೋದ್ಯೋಗಿಗಳು ಬಸ್‌ಗಳನ್ನು ನಿಲ್ಲಿಸಿ ಪ್ರತಿಭಟನೆಗೆ ಇಳಿದಿದ್ದು, ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಈ ಹಿಂದೆ ಮೃತಪಟ್ಟ ಚಾಲಕರ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿರುವ ನೌಕರರು, ಬಸ್‌ಗಳನ್ನು ಹೊರತೆಗೆಯದೆ ಪ್ರತಿಭಟಿಸಿದರು. ರಮೇಶ್ ಕುಟುಂಬಕ್ಕೆ ತಕ್ಷಣವೇ ಪರಿಹಾರ ಘೋಷಿಸಬೇಕು, ಇಲ್ಲವಾದರೆ ಡಿಪೋ ಮುಂದೆ ಶವವನ್ನಿಟ್ಟು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಐಪಿಎಲ್ 2026 ರ 36ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿದರು. ಈ ಮೂಲಕ ಐಪಿಎಲ್ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರು. ವೈಭವ್ ಐಪಿಎಲ್ನಲ್ಲಿ ಆಡುವ ಪ್ರತಿಯೊಂದು ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆಗಳನ್ನು ನಿರ್ಮಿಸುವುದು ಸರ್ವೆ ಸಾಮಾನ್ಯವಾಗಿದೆ. ಆದರೆ ಇಂದಿನ ಪಂದ್ಯದಲ್ಲಿ ವೈಭವ್ 2 ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆ.
ಎಂದಿನಂತೆ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಸೂರ್ಯವಂಶಿ, ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ಈ ಆವೃತ್ತಿಯಲ್ಲಿ ಕೇವಲ 15 ಎಸೆತಗಳಲ್ಲಿ ಮೂರನೇ ಅರ್ಧಶತಕ ಬಾರಿಸಿದ ದಾಖಲೆ ನಿರ್ಮಿಸಿದರು. ಹಾಗೆಯೇ ವೈಭವ್ 36 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದರು.
ಇನ್ನು ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 50 ರನ್‌ಗಳ ಗಡಿ ದಾಟುವ ಮೂಲಕ ಟಿ20 ಕ್ರಿಕೆಟ್ನಲ್ಲಿ 1,000 ರನ್ ಸಹ ಪೂರೈಸಿದರು. ಈ ಮೂಲಕ ಟಿ20ಕ್ರಿಕೆಟ್ನಲ್ಲಿ 1,000 ರನ್ ಪೂರೈಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವೈಭವ್ ಕೇವಲ 15 ನೇ ವಯಸ್ಸಿನಲ್ಲಿ ಈ ಸಾಧನೆ ಮಾಡುವ ಮೂಲಕ ವಿಶ್ವದಾಖಲೆಯನ್ನು ಸೃಷ್ಟಿಸಿದರು.
ವೈಭವ್ ಸೂರ್ಯವಂಶಿ 1,000 ಟಿ20 ರನ್ಗಳನ್ನು ಪೂರೈಸಲು ಕೇವಲ 473 ಎಸೆತಗಳನ್ನು ತೆಗೆದುಕೊಂಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಇದು ಕೂಡ ವಿಶ್ವ ದಾಖಲೆಯಾಗಿದೆ. ಈ ಹಿಂದೆ, ಯಾವುದೇ ಬ್ಯಾಟ್ಸ್ಮನ್ 500 ಕ್ಕಿಂತ ಕಡಿಮೆ ಎಸೆತಗಳಲ್ಲಿ 1,000 ಟಿ20 ರನ್ಗಳನ್ನು ಪೂರೈಸಿರಲಿಲ್ಲ. ಇದಕ್ಕೂ ಮೊದಲು, ಮಿಚೆಲ್ ಓವನ್ 533 ಎಸೆತಗಳಲ್ಲಿ 1000 ರನ್ ಪೂರೈಸುವ ಮೂಲಕ ಅಗ್ರಸ್ಥಾನದಲ್ಲಿದ್ದರು. ಇದೀಗ ಆ ದಾಖಲೆ ವೈಭವ್ ಪಾಲಾಗಿದೆ.
ಈ ಶತಕದ ಇನ್ನಿಂಗ್ಸ್ನಲ್ಲಿ ವೈಭವ್ ಬರೋಬ್ಬರಿ 12 ಸಿಕ್ಸರ್ಗಳನ್ನು ಬಾರಿಸಿದರು. ಈ ಮೂಲಕ ವೈಭವ್ ಐಪಿಎಲ್ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ನಿರ್ಮಿಸಿದರು. ಈ ಹಿಂದೆ, ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 11 ಸಿಕ್ಸರ್ಗಳನ್ನು ಬಾರಿಸಿದ್ದ ಮುರಳಿ ವಿಜಯ್ ಈ ದಾಖಲೆಯನ್ನು ಹೊಂದಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುರಿಗಾಹಿImage Credit source: tv9 kannada
ದಾವಣಗೆರೆ, ಏಪ್ರಿಲ್ 25: ಕುರಿಗಳು ತೋಟಕ್ಕೆ ನುಗ್ಗಿದವು ಎಂಬ ಕ್ಷುಲ್ಲಕ ಕಾರಣಕ್ಕಾಗಿ ಜಮೀನು ಮಾಲೀಕರು ಕುರಿಗಾಹಿ ತಂದೆ-ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ (Assault) ಮಾಡಿದ ಘಟನೆ ದಾವಣಗೆರೆ (davanagere)ತಾಲೂಕಿನ ನಾಗರಸನಹಳ್ಳಿ ಬಳಿ ನಡೆದಿದೆ. ಹಲ್ಲೆಯ ತೀವ್ರತೆಗೆ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಹಲ್ಲೆ ಮಾಡಿದ್ದಲ್ಲದೆ ಜೆಸಿಬಿಯಿಂದ ಗುಂಡಿ ತೆಗೆದು ಹೂತು ಹಾಕುವುದಾಗಿ ಬೆದರಿಕೆ ಕೂಡ ಹಾಕಲಾಗಿದೆ. ನಾಗರಾಜ್(18) ಮತ್ತು ಬಾಳಪ್ಪ(40) ಹಲ್ಲೆಗೊಳಗಾದ ಕುರಿಗಾಹಿಗಳು. ಹದಡಿ ಪೊಲೀಸ್ ಠಾಣೆಗೆ ಗಾಯಾಳು ಬಾಳಪ್ಪರಿಂದ ದೂರು ನೀಡಲಾಗಿದೆ.
ದಾವಣಗೆರೆ ತಾಲೂಕಿನ ನಾಗರಸನಹಳ್ಳಿಯ ಅಡಕೆ ತೋಟದಲ್ಲಿ ಈ ಕೃತ್ಯ ನಡೆದಿದೆ. ಪಕ್ಕದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದಾಗ ಕೇವಲ 4 ಕುರಿಗಳು ಅಕ್ಕಪಕ್ಕದ ಅಡಕೆ ತೋಟಕ್ಕೆ ನುಗ್ಗಿದ್ದವು. ಇದರಿಂದ ಕೆರಳಿದ ತೋಟದ ಮಾಲೀಕರು ಅಮಾನವೀಯವಾಗಿ ವರ್ತಿಸಿದ್ದಾರೆ.
ಕಾರಿಗನೂರು ಗ್ರಾಮದ ನಿವಾಸಿಗಳಾದ ಪ್ರಕಾಶ್ ಮತ್ತು ವೀರೇಶ್ ಎಂಬುವವರು ಮೊದಲು ನಾಗರಾಜ್ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ. ಜಮೀನು ಮಾಲೀಕರು ಮನಸೋಇಚ್ಛೆ ಥಳಿಸಿದಕ್ಕೆ ನಾಗರಾಜ್ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಮಗನ ಸ್ಥಿತಿ ಕಂಡು ಗಾಬರಿಯಾಗಿ ಪ್ರಶ್ನಿಸಲು ಹೋದ ತಂದೆ ಬಾಳಪ್ಪ ಅವರ ಮೇಲೂ ಜಮೀನು ಮಾಲೀಕರು ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದಾರೆ.
ಜೆಸಿಬಿಯಿಂದ ಹೂತು ಹಾಕುವ ಬೆದರಿಕೆ
ಇನ್ನೊಮ್ಮೆ ಕುರಿಗಳು ಅಡಕೆ ತೋಟಕ್ಕೆ ನುಗ್ಗಿದರೆ ನಿಮ್ಮನ್ನು ಬಿಡುವುದಿಲ್ಲ. ಜೆಸಿಬಿಯಿಂದ ಗುಂಡಿ ತೆಗೆದು ಇಲ್ಲೇ ಹೂತು ಹಾಕಿಬಿಡುತ್ತೇವೆ ಎಂದು ಜಮೀನು ಮಾಲೀಕರು ಕುರಿಗಾಹಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ನಾಗರಾಜ್ ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ತಮ್ಮ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಪ್ರಕಾಶ್ ಮತ್ತು ವೀರೇಶ್ ವಿರುದ್ಧ ಗಾಯಾಳು ಬಾಳಪ್ಪ ಅವರು ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.