ಬೆಳಗಾವಿ, ಏಪ್ರಿಲ್ 14: ಬಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಬ್ಬ ರೋಗಿ ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿಯ ಬ್ರಹ್ಮ ನಗರದಲ್ಲಿ ನಿನ್ನೆ ನಡೆದಿದೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದಿದ್ದಕ್ಕೆ ಯುವಕ ಸಾವನ್ನಪ್ಪಿರುವುದಾಗಿ ಆರೋಪ ಕೇಳಿಬಂದಿದೆ. ರಾತ್ರಿ ಡ್ಯೂಟಿಗೆ 7 ವೈದ್ಯರು ಇದ್ರೂ ಗೈರಾಗಿದ್ದಕ್ಕೆ ಮೃತಪಟ್ಟಿದ್ದಾನೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಶಿವು ಬದುಕುತ್ತಿದ್ದ ಎಂದು ಅಣ್ಣ ರಮೇಶ್ ಲಿಂಗಪುರಿ ಹೇಳಿದ್ದಾರೆ. ಈ ನಿರ್ಲಕ್ಷ್ಯಕ್ಕೆ ಕಾರಣರಾದ ವೈದ್ಯರನ್ನು ಅಮಾನತುಗೊಳಿಸಬೇಕೆಂದು ಕುಟುಂಬ ಒತ್ತಾಯಿಸಿದೆ.
ಕೃಷ್ಣಗಿರಿ(ತಮಿಳುನಾಡು) ಏಪ್ರಿಲ್ 14): ತಮಿಳುನಾಡು ವಿಧಾನಸಭಾ ಚುನಾವಣೆ ರಂಗೇರಿದ್ದು, ಕರ್ನಾಟಕದ ನಾಯಕರು ಸಹ ತಮಿಳುನಾಡು ಚುನಾವಣೆಯಲ್ಲಿ ಪ್ರಚಾರಕ್ಕಿಳಿರಿದ್ದಾರೆ. ಹೌದು…ಕರ್ನಾಟಕ ವಿಪಕ್ಷ ನಾಯಕ ಆರ್. ಅಶೋಕ್ ಅವರು ಇಂದು (ಏಪ್ರಿಲ್ 14) ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಥಳಿ ವಿಧಾನಸಭಾ ಕ್ಷೇತ್ರದ ಡೆಂಕಣಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಜಗದೀಶ್ ಪರ ಪ್ರಚಾರ ನಡೆಸಿದರು. ಇದೇ ವೇಳೆ ಅಶೋಕ್ ಕನ್ನಡದಲ್ಲೇ ಮಾತನಾಡಿದ್ದಾರೆ. ನಾನು ಕರ್ನಾಟಕದಲ್ಲಿ ವಿಪಕ್ಷ ನಾಯಕನಾಗಿ ಕೆಲಸ ಮಾಡುತ್ತಿದ್ದೇನೆ. 2028ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದೇ ಬರುತ್ತದೆ. ತಮಿಳುನಾಡಿನಲ್ಲಿ ಕೂಡಾ ಬಿಜೆಪಿ ಸರ್ಕಾರ ಬರಬೇಕು. ಥಳಿ ಕ್ಷೇತ್ರ ಕರ್ನಾಟಕದ ಗಡಿಯಲ್ಲಿ ಇದೆ. ಒಕ್ಕಲಿಗ ಗೌಡ ಜನಾಂಗದೊಂದಿಗೆ ಥಳಿ ಕ್ಷೇತ್ರದ ಬಹಳ ಸಂಬಂಧ ಇದೆ ಎಂದರು.
ಹಾಸನ, ಏಪ್ರಿಲ್ 14: ಜಿಲ್ಲೆ ಅರಕಲಗೂಡು ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜೆಡಿಎಸ್ ಶಾಸಕ ಎ.ಮಂಜು ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ. ಶಾಸಕ ಎ.ಮಂಜು ಭಾಷಣ ವೇಳೆ ದಲಿತ ವಿರೋಧಿ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಶ್ರೀಧರಗೌಡ ಬೆಂಬಲಿಗ ಹಾಗೂ ಡಿಎಸ್ಎಸ್ ಮುಖಂಡ ನಟರಾಜ್ ಘೋಷಣೆ ಕೂಗಿದ್ದಾರೆ. ನೀವು ದಲಿತ ವಿರೋಧಿ, ಬರೀ ಹಿಂದೂಗಳ ಪರ ಎಂದಿದ್ದಾರೆ. ನಟರಾಜ್ ಘೋಷಣೆ ಕೂಗುತ್ತಿದ್ದರಿಂದ ಸಿಟ್ಟಾದ ಶಾಸಕ ಎ.ಮಂಜು, ಸುಮ್ನೇ ಕೂತ್ಕತಿಯಾ ಇಲ್ವಾ, ಜಾಸ್ತಿ ಮಾತಾಡಿದ್ರೆ ಅಷ್ಟೇ. ನನಗೆ ನಿನ್ನ ಸರ್ಟಿಫಿಕೆಟ್ ಬೇಕಾಗಿಲ್ಲ. ಇದೆಲ್ಲ ಚೆನ್ನಾಗಿರಲ್ಲ, ಹೊರಗೆ ಕಳುಹಿಸಬೇಕಾಗುತ್ತೆ ಎಂದಿದ್ದಾರೆ.
ನಟ ಧರ್ಮ ಕೀರ್ತಿರಾಜ್ ಮತ್ತು ನಟಿ ಅನುಷಾ ರೈ (Anusha Rai) ಅವರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಸಿನಿಮಾಗಳಲ್ಲಿ ಕೂಡ ಅವರು ಜೋಡಿಯಾಗಿ ನಟಿಸಿ ಗಮನ ಸೆಳೆದಿದ್ದಾರೆ. ‘ಬೆಂಗಳೂರು ಇನ್’ ಸಿನಿಮಾದಲ್ಲಿ ಅವರಿಬ್ಬರು ಮತ್ತೊಮ್ಮೆ ತೆರೆಹಂಚಿಕೊಂಡಿದ್ದಾರೆ. ರಿಯಲ್ ಲೈಫ್ನಲ್ಲೂ ಅವರು ಜೋಡಿಯಾಗಲಿ ಎಂಬ ಬಯಕೆ ಅಭಿಮಾನಿಗಳಿಗೆ ಇದೆ. ಆ ಬಗ್ಗೆ ಧರ್ಮ ಕೀರ್ತಿರಾಜ್ (Dharma Keerthiraj) ಅವರು ಮಾತನಾಡಿದ್ದಾರೆ. ‘ಸ್ನೇಹಿತೆಯಾಗಿ, ಸಹ-ನಟಿಯಾಗಿ ನಾನು ಅನುಷಾ ಅವರನ್ನು ಗೌರವಿಸುತ್ತೇನೆ. ಅವರಿಗೂ ಅದೇ ಭಾವನೆ ಇದೆ. ಅವರ ಮತ್ತು ನನ್ನ ಜೀವನ ಪ್ರತ್ಯೇಕವಾಗಿದೆ. ಪರದೆ ಮೇಲೆ ಜನರು ನಮ್ಮ ಜೋಡಿಯನ್ನು ಇಷ್ಟಪಡುತ್ತಾರೆ. ಅದನ್ನು ನಾವು ಇಲ್ಲ ಅಂತ ಹೇಳಿಲ್ಲ. ಆದರೆ ವೈಯಕ್ತಿಕ ಜೀವನದ ವಿಷಯ ಬಂದಾಗ ನಮ್ಮ ಲೈಫ್ ಬೇರೆ ಬೇರೆ ಆಗಿದೆ’ ಎಂದು ಧರ್ಮ ಕೀರ್ತಿರಾಜ್ ಅವರು ಹೇಳಿದ್ದಾರೆ.
ಮಾರ್ಚ್ 19ರಂದು ಕನ್ನಡದ ‘ಲವ್ ಮಾಕ್ಟೇಲ್ 3’ ಸಿನಿಮಾ ಬಿಡುಗಡೆ ಆಗಿತ್ತು. ಡಾರ್ಲಿಂಗ್ ಕೃಷ್ಣ (Darling Krishna) ನಿರ್ದೇಶನ ಮಾಡಿ, ನಾಯಕನಾಗಿ ನಟಿಸಿರುವ ಈ ಸಿನಿಮಾದ ರಿಲೀಸ್ ಅಷ್ಟು ಸುಲಭವಾಗಿ ಇರಲಿಲ್ಲ. ಭಾರಿ ನಿರೀಕ್ಷೆ ಮೂಡಿಸಿದ್ದ ‘ಧುರಂಧರ್ 2’ ಚಿತ್ರದ ಎದುರು ಕನ್ನಡದ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಪ್ರಬಲ ಪೈಪೋಟಿಯ ನಡುವೆಯೂ ಈ ಸಿನಿಮಾ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿಕೊಂಡಿದೆ. ಇದರಿಂದ ಚಿತ್ರತಂಡಕ್ಕೆ ಬಹಳ ಖುಷಿ ಆಗಿದೆ. ವಿಶೇಷವಾಗಿ ಫ್ಯಾಮಿಲಿ ಪ್ರೇಕ್ಷಕರು ‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾದ ಕೈ ಹಿಡಿದಿದ್ದಾರೆ.
ಬಿಡುಗಡೆಯಾದ ಮೊದಲ ದಿನದಿಂದಲೇ ‘ಲವ್ ಮಾಕ್ಟೇಲ್ 3’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈ ಸಿನಿಮಾದಲ್ಲಿನ ಎಮೋಷನಲ್ ಕಥೆಗೆ ಜನರು ಫಿದಾ ಆದರು. ಈ ಚಿತ್ರ ದಿನದಿಂದ ದಿನಕ್ಕೆ ಉತ್ತಮ ಪ್ರದರ್ಶನ ಕಂಡಿತ್ತು. ಇದೀಗ 25 ದಿನಗಳನ್ನು ಯಶಸ್ವಿಯಾಗಿ ದಾಟುವ ಮೂಲಕ 2026ರಲ್ಲಿ ಸೂಪರ್ ಹಿಟ್ ಆದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮುಂದಕ್ಕೆ ಹೋಗುತ್ತಲೇ ಮಾರ್ಚ್ 19ರಂದು ‘ಲವ್ ಮಾಕ್ಟೇಲ್ 3’ ಸಿನಿಮಾವನ್ನು ವಿತರಣೆ ಮಾಡಲು ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ನಿರ್ಧರಿಸಿತು. ಪಕ್ಕಾ ಪ್ಲ್ಯಾನ್ ಪ್ರಕಾರ ರಾಜ್ಯಾದ್ಯಂತ ಈ ಚಿತ್ರವನ್ನು ವಿತರಣೆ ಮಾಡಿತು. ದೇಶದಾದ್ಯಂತ ‘ಧುರಂಧರ್ 2’ ಸಿನಿಮಾ ಚಿತ್ರಮಂದಿರಗಳನ್ನು ಬಾಚಿಕೊಂಡಿತು. ಅದರ ನಡುವೆಯೂ ‘ಲವ್ ಮಾಕ್ಟೇಲ್ 3’ ಸಿನಿಮಾ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿತು.
25 ದಿನಗಳ ಯಶಸ್ವಿ ಪ್ರದರ್ಶನದ ಗೆಲುವಿಗೆ ಕಾರಣರಾದ ಪ್ರೇಕ್ಷಕರಿಗೆ ಡಾರ್ಲಿಂಗ್ ಕೃಷ್ಣ ಅವರು ಧನ್ಯವಾದ ಅರ್ಪಿಸಿದ್ದಾರೆ. ‘ಲವ್ ಮಾಕ್ಟೇಲ್’ ಸರಣಿಯ ಹ್ಯಾಟ್ರಿಕ್ ಗೆಲುವನ್ನು ಅವರು ಸಂಭ್ರಮಿಸಿದ್ದಾರೆ. ‘ಕ್ರಿಸ್‌ಮಿ’ ಬ್ಯಾನರ್ ಮೂಲಕ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿ ಗೆಲುವು ಕಂಡಿದ್ದಾರೆ.
ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತಾ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ರೇಚಲ್ ಡೇವಿಡ್, ಶ್ವೇತಾ ಪ್ರಸಾದ್, ನಯೇರಾ, ಜಗದೀಶ್, ಗಿರಿರಾಜ್, ಅಭಿಲಾಶ್, ದಳಪತಿ ಮುಂತಾದವರು ನಟಿಸಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಅವರು ಛಾಯಾಗ್ರಹಣ ಮತ್ತು ಸಂಕಲನ ಮಾಡಿದ್ದಾರೆ. ನಕುಲ್ ಅಭ್ಯಂಕರ್ ಅವರು ಸಂಗೀತ ನೀಡಿದ್ದಾರೆ.
ಬೆಂಗಳೂರು, (ಏಪ್ರಿಲ್ 14): ಕರ್ನಾಟಕದಲ್ಲಿ (Karnataka) ಈ ಬಾರಿಯ ಬೇಸಿಗೆ ಬಿಸಿಲು ಜನರ ನೆತ್ತಿ ಸುಡುತ್ತಿದೆ. ರಾಜ್ಯದ 5ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕಲಬುರಗಿ ಜಿಲ್ಲೆಯಲ್ಲಿ ಅತ್ಯಧಿಕವಾಗಿ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈ ಬೇಸಿಗೆಯ ಹಂಗಾಮಿನಲ್ಲಿ ಗರಿಷ್ಠವಾಗಿದೆ. ಗದಗ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿಯೂ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗಿದ್ದು, ಇಲ್ಲಿನ ಜನರನ್ನು ಹೈರಾಣಿಗಿಸಿದೆ. ಇನ್ನು ಈ ಬಾರಿಯ ಬಿಸಿಲು ಸಿಲಿಕಾನ್ ಸಿಟಿ ಬೆಂಗಳೂರು (bengaluru temperature) ಜನರನ್ನು ಸಹ ಬಿಟ್ಟಿಲ್ಲ. ಹೌದು…ರಾಜಧಾನಿ ಬೆಂಗಳೂರಿನಲ್ಲಿಂದು ಗರಿಷ್ಟ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ ವರ್ಷದ ಬೇಸಿಗೆ ಬಿಸಿಲ ದಾಖಲೆಯನ್ನು ಮುರಿದಿದೆ.
ಬೆಂಗಳೂರಿನಲ್ಲಿ ದಾಖಲೆ ಬರೆದ ಬಿಸಿಲು
ಏಪ್ರಿಲ್ 13ರಂದು ಬೆಂಗಳೂರು ನಗರದಲ್ಲಿ 35.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಕಳೆದ ವರ್ಷದ ಮಾರ್ಚ್ ತಿಂಗಳ 35.4 ಡಿಗ್ರಿ ದಾಖಲೆಯನ್ನು ಮೀರಿಸಿತ್ತು. ಆದ್ರೆ, ಇಂದು (ಏಪ್ರಿಲ್ 14) ಬೆಂಗಳೂರಿನಲ್ಲಿ 36.8 ಡಿಗ್ರಿ ತಾಪಮಾನ ದಾಖಲಾಗಿದ್ದು, ಇದು ದಾಖಲೆಯಾಗಿದೆ. ಸಾಮಾನ್ಯಕ್ಕಿಂತ 2ರಿಂದ 3 ಡಿಗ್ರಿ ಹೆಚ್ಚು ತಾಪಮಾನ ದಾಖಲಾಗುತ್ತಿರುವುದರಿಂದ ಜನರಿಗೆ ಹೆಚ್ಚು ಬಿಸಿಯ ಅನುಭವವಾಗುತ್ತಿದ್ದು, ರಾತ್ರಿ ಬಿಸಿ ಗಾಳಿಯಿಂದ ಜನ ಕಂಗಾಲಾಗಿದ್ದಾರೆ.
ಈ ವರ್ಷ ರಾಜಧಾನಿಯಲ್ಲಿ ಬಿಸಲು ಎಫೆಕ್ಟ್ ಜನರ ಆರೋಗ್ಯದ ಮೇಲೆ ಬೀಳುತ್ತಿದೆ. ತಾಪಮಾನ ಹೆಚ್ಚಳವಾಗುತ್ತಿರುವವುದರಿಂದ ನಿತ್ರಾಣ, ನಿರ್ಜಲೀಕರಣ , ಚರ್ಮದಲ್ಲಿ ಅಲರ್ಜಿ ಹಾಗೂ ಅಜೀರ್ಣ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ಇನ್ನು ಗರ್ಭಿಣಿಯರು ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಸುವಂತೆ ವೈದ್ಯರು ಮನವಿ ಮಾಡಿದ್ದಾರೆ. ಬಿಸಿಲಿನಲ್ಲಿ ಹೆಚ್ಚಾಗಿ ಓಡಾಟ ಮಾಡದ್ದಂತೆ ಹಾಗೂ ಹೊರಗಡೆ ಆಹಾರ ತಿಂಡಿ ಪದಾರ್ಥ ಸೇವನೆ ಮಾಡದ್ದಂತೆ ಸಲಹೆ ನೀಡಿದ್ದಾರೆ.
ಕಲಬುರಗಿಯಲ್ಲಿ ಏ.17ರವರೆಗೂ ಭಾರಿ ಬಿಸಿ ಗಾಳಿ
ಈಗಾಗಲೇ ಉರಿ ಬಿಸಿಲಿನಿಂದಾಗಿ ತತ್ತರಿಸಿರುವ ಕಲಬುರಗಿ ಜಿಲ್ಲೆಗೆ ಏ.17ರವರೆಗೆ ಭಾರಿ ಬಿಸಿ ಗಾಳಿಯ ಅಲೆಗಳ ಎಲ್ಲೋ ಅಲರ್ಟ್ ನೀಡಲಾಗಿದೆ. ಹೀಟ್‌ವೇವ್‌ನಿಂದ ಆರೋಗ್ಯ ತೊಂದರೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಮಧ್ಯಾಹ್ನ 12ರಿಂದ ಸಂಜೆ 5ರವರೆಗೂ ಹೊರಗೆ ಅಡ್ಡಾಡದಂತೆ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಇನ್ನೂ ಉತ್ತರ ಒಳನಾಡಿನ ಬೀದರ್, ರಾಯಚೂರು, ಗದಗ, ಕೊಪ್ಪಳ, ಬಳ್ಳಾರಿ, ವಿಜಯಪುರ, ಕಲಬುರಗಿ, ಜಿಲ್ಲೆಗಳಲ್ಲಿ 42 ರಿಂದ 44 ಡಿಗ್ರಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲೂ 2 ಡಿಗ್ರಿ ಏರಿಕೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ 2 ರಿಂದ 3 ಡಿಗ್ರಿ ಏರಿಕೆಯಾಗುವ ಸಾಧ್ಯತೆ ಇದೆ.
ಬೆಂಗಳೂರು, ಏಪ್ರಿಲ್ 14: ಬೆಂಗಳೂರು ವಿಶ್ವವಿದ್ಯಾಲಯ (Bangaluru University)ಜ್ಞಾನಭಾರತಿ ಆವರಣ ನಗರಕ್ಕೆ ಒಂದು ರೀತಿ ಆಕ್ಸಿಜನ್ ಪ್ಲಾಂಟ್ ಇದ್ದಂತೆ. ಈ ಆವರಣದಲ್ಲಿ ಈಗಾಗಲೇ ಸಾಕಷ್ಟು ಸಂಸ್ಥೆಗಳಿಗೆ ಜಾಗ ನೀಡಲಾಗಿದೆ. ಇದೀಗ ಇಲ್ಲಿ ರೋಗಿಗಳ ತುರ್ತು ಚಿಕಿತ್ಸೆಗೆ ನೆರವಾಗಲು ಏರ್ ಆಂಬುಲೆನ್ಸ್ ಹೆಲಿಪ್ಯಾಡ್ (Air Ambulance Helipad) ನಿರ್ಮಾಣ ಮಾಡಲು ಒತ್ತಾಯ ಕೇಳಿಬಂದಿದೆ.
ಏರ್ ಆಂಬುಲೆನ್ಸ್ ಹೆಲಿಪ್ಯಾಡ್ಗೆ ಶಾಸಕ ಒತ್ತಾಯ
ಬೆಂಗಳೂರಿನಲ್ಲಿ 1100 ಎಕರೆಗಳ ವಿಶಾಲ ವ್ಯಾಪ್ತಿ ಹೊಂದಿರುವ ಬೆಂಗಳೂರು ವಿಶ್ವವಿದ್ಯಾಲಯ ಈಗ ಕಿರಿದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಸಂಸ್ಥೆಗಳಿಗೆ ಜಾಗ ನೀಡಲಾಗಿದೆ. ಇನ್ನು ಇದೇ ಕ್ಯಾಂಪಸ್ನಲ್ಲಿ ರೋಗಿಗಳ ತುರ್ತು ಚಿಕಿತ್ಸೆಗೆ ನೆರವಾಗಲು ಏರ್ ಆಂಬುಲೆನ್ಸ್ ಹೆಲಿಪ್ಯಾಡ್ ನಿರ್ಮಾಣ ಮಾಡಬೇಕು ಅಂತ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ.
ಇನ್ನು ಹೆಲಿಪ್ಯಾಡ್ ನಿರ್ಮಾಣ ಮಾಡುವ ಪ್ರಸ್ತಾವನೆ ಬಗ್ಗೆ ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಸಂಘ ಆಕ್ಷೇಪ ಎತ್ತಿದೆ. ವಿವಿ ಜಾಗವನ್ನು ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಬಳಸಬೇಕು. ಏರ್ ಆಂಬುಲೆನ್ಸ್ ಹೆಲಿಪ್ಯಾಡ್ ಮಾಡಲು ನಮ್ಮ ತಕರಾರು ಇಲ್ಲ, ಆದರೆ ಬೇರೆ ಎಲ್ಲಾದರೂ ಜಾಗ ನೀಡಿದರೆ ಉತ್ತಮ ಎಂದಿದ್ದಾರೆ.
ಇನ್ನು ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಬರೆದ ಪತ್ರಕ್ಕೆ ಸ್ಪಂದಿಸಿರುವ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್, ಪರಿಶೀಲಿಸಿ ವರದಿ ನೀಡಿ ಅಂತ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಗಳಿಗೆ ಸೂಚನೆ ನೀಡಿದ್ದಾರೆ. ಒಟ್ಟಾರೆ ನಗರಕ್ಕೆ ಏರ್ ಆಂಬುಲೆನ್ಸ್ ಹೆಲಿಪ್ಯಾಡ್ ಅವಶ್ಯಕತೆ ಇದೆ. ಆದರೆ ಅದು ನಿರ್ಮಾಣ ಮಾಡಲು ಜಾಗ ಇಲ್ಲಿ ಸಿಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ನವದೆಹಲಿ, ಏಪ್ರಿಲ್ 14: ಪ್ರಧಾನಿ ಮೋದಿಗೆ (PM Narendra Modi) ಇಂದು ಸಂಜೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಾರ್ಮುಜ್ ಜಲಸಂಧಿಯ ದಿಗ್ಬಂಧನ, ಇರಾನ್ ಮೇಲಿನ ದಾಳಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ 40 ನಿಮಿಷ ಮಾತುಕತೆ ನಡೆಸಿದ್ದಾರೆ. ಈ ವರ್ಷ ಇಬ್ಬರು ನಾಯಕರ ನಡುವಿನ ಮೂರನೇ ಕರೆ ಇದಾಗಿದೆ. ಹಾರ್ಮುಜ್ ಜಲಸಂಧಿಯ ದಿಗ್ಬಂಧನದ ವಿಷಯದ ಕುರಿತು ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಚರ್ಚಿಸಿದ್ದಾರೆ ಎಂದು ಅಮೆರಿಕದ ರಾಯಭಾರ ಕಚೇರಿ ತಿಳಿಸಿದೆ.
ಅಮೆರಿಕ-ಇರಾನ್ ಶಾಂತಿ ಮಾತುಕತೆ ವಿಫಲವಾದ ನಂತರ ಪಶ್ಚಿಮ ಏಷ್ಯಾದಲ್ಲಿ ಹೆಚ್ಚಿದ ಉದ್ವಿಗ್ನತೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಮಾರು 40 ನಿಮಿಷಗಳ ದೂರವಾಣಿ ಸಂಭಾಷಣೆ ನಡೆಸಿದರು. ಪ್ರಧಾನಿ ಮೋದಿ ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.
“ನನ್ನ ಸ್ನೇಹಿತರಾದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಫೋನ್ ಕರೆ ಬಂದಿತ್ತು. ಈ ವೇಳೆ ವಿವಿಧ ವಲಯಗಳಲ್ಲಿ ನಮ್ಮ ದ್ವಿಪಕ್ಷೀಯ ಸಹಕಾರದಲ್ಲಿ ಸಾಧಿಸಲಾದ ಪ್ರಗತಿಯನ್ನು ನಾವು ಪರಿಶೀಲಿಸಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿಯನ್ನು ಸಹ ನಾವು ಚರ್ಚಿಸಿದ್ದೇವೆ. ಹಾರ್ಮುಜ್ ಜಲಸಂಧಿಯನ್ನು ಮುಕ್ತ ಮತ್ತು ಸುರಕ್ಷಿತವಾಗಿರಿಸುವ ಮಹತ್ವವನ್ನು ಒತ್ತಿ ಹೇಳಿದ್ದೇವೆ” ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.
Received a call from my friend President Donald Trump. We reviewed the substantial progress achieved in our bilateral cooperation in various sectors. We are committed to further strengthening our Comprehensive Global Strategic Partnership in all areas. We also discussed the…
ಅಮೆರಿಕ ಮತ್ತು ಇರಾನ್ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸುಮಾರು 21 ಗಂಟೆಗಳ ನೇರ ಮಾತುಕತೆಗಳನ್ನು ನಡೆಸಿ, ಶಾಂತಿ ಒಪ್ಪಂದಕ್ಕೆ ಬರಲು ವಿಫಲವಾದ ನಂತರ ಭಾರತ ಮತ್ತು ಅಮೆರಿಕದ ನಡುವೆ ಈ ದೂರವಾಣಿ ಮಾತುಕತೆ ನಡೆದಿದೆ. ಇರಾನ್ ತನ್ನ ಪರಮಾಣು ಉತ್ಪಾದನೆಯನ್ನು ನಿಲ್ಲಿಸಲು ನಿರಾಕರಿಸಿದ್ದರಿಂದ ಶಾಂತಿ ಮಾತುಕತೆಗಳು ಫಲಪ್ರದವಾಗಲಿಲ್ಲ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಅಮೆರಿಕ ಚರ್ಚೆಗಳನ್ನು ಹಳಿತಪ್ಪಿಸಿದೆ ಎಂದು ಇರಾನ್ ಆರೋಪಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 22ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಕಣಕ್ಕಿಳಿಯಲಿದ್ದಾರಾ? ಎಂಬುದೇ ಪ್ರಶ್ನೆ. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಕಾಲಿನ ಹಿಮ್ಮಡಿ ನೋವಿಗೆ ಒಳಗಾಗಿದ್ದ ವಿರಾಟ್ ಕೊಹ್ಲಿ ಸೋಮವಾರ ಆರ್ಸಿಬಿ ತಂಡದೊಂದಿಗೆ ಬೆಂಗಳೂರಿಗೆ ಪ್ರಯಾಣಿಸಿಲ್ಲ ಎಂದು ವರದಿಯಾಗಿತ್ತು. ಅಲ್ಲದೆ ಮುಂಬೈನಲ್ಲೇ ಫಿಸಿಯೋ ಜೊತೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಮಂಗಳವಾರ ವಿರಾಟ್ ಕೊಹ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಅಷ್ಟೇ ಅಲ್ಲದೆ ಸಾಯಂಕಾಲ ನಡೆದ ಆರ್ಸಿಬಿ ತಂಡದ ಟ್ರೈನಿಂಗ್ನಲ್ಲೂ ಕಾಣಿಸಿಕೊಂಡಿದ್ದಾರೆ. ಈ ವೇಳೆ ಸಂಪೂರ್ಣ ಫಿಟ್ನೆಸ್ನೊಂದಿಗೆ ಕಾಣಿಸಿಕೊಂಡಿರುವ ಕಿಂಗ್ ಕೊಹ್ಲಿ ಬ್ಯಾಟಿಂಗ್ ಅಭ್ಯಾಸವನ್ನೂ ಸಹ ನಡೆಸಿದ್ದಾರೆ.
ಇದರೊಂದಿಗೆ ಬುಧವಾರ (ಏ.15) ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಅದರಂತೆ ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲೂ ಆರ್ಸಿಬಿ ಪರ ಕಿಂಗ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಇನಿಂಗ್ಸ್ ಆರಂಭಿಸುವುದನ್ನುಬ ಎದುರು ನೋಡಬಹುದು.
ಇತ್ತೀಚಿನ ದಿನಗಳಲ್ಲಿ ಅನೇಕರು ದೇಹದಲ್ಲಿ ಐರನ್ ಕೊರತೆಯಿಂದ (Iron Deficiency) ಬಳಲುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಪೋಷಕಾಂಶಗಳ ಕೊರತೆ ಮತ್ತು ದೇಹದ ಹೆಚ್ಚಿದ ಅಗತ್ಯತೆಗಳು ಇದರ ಪ್ರಮುಖ ಕಾರಣಗಳಾಗಿವೆ. ಐರನ್ ಕೊರತೆಯಿಂದ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗುತ್ತದೆ, ಇದರಿಂದ ದಣಿವು, ದುರ್ಬಲತೆ, ತಲೆ ಸುತ್ತು, ಉಸಿರಾಟದ ತೊಂದರೆ ಹೀಗೆ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಇದನ್ನು ನಿರ್ಲಕ್ಷ್ಯ ಮಾಡುವವರ ಸಂಖ್ಯೆ ಹೆಚ್ಚಾಗಿ ಇರುವುದರಿಂದ ಈ ರೀತಿಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾದರೆ ಈ ರೀತಿಯ ಸಮಸ್ಯೆಯನ್ನು ತಡೆಗಟ್ಟಲು ಏನು ಮಾಡಬಹುದು, ಯಾವ ರೀತಿಯ ಆಹಾರ ಐರನ್ ಕೊರತೆಯನ್ನು ನೀಗಿಸುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಐರನ್ ಹೆಚ್ಚಿಸಲು ಯಾವ ಆಹಾರ ಸೇವನೆ ಮಾಡಬೇಕು?
ಸಾಮಾನ್ಯವಾಗಿ ಐರನ್ ಕೊರತೆಯನ್ನು ನಿವಾರಿಸಲು ಆಹಾರದಲ್ಲಿ ಐರನ್ ಸಮೃದ್ಧ ಪದಾರ್ಥಗಳನ್ನು ಸೇರಿಸಬೇಕು. ಪಾಲಕ್, ಮೆಂತೆ ಮತ್ತು ಸಾಸಿವೆ ಸೊಪ್ಪುಗಳಂತಹ ಹಸಿರು ಸೊಪ್ಪು ಉತ್ತಮ ಮೂಲಗಳಾಗಿವೆ. ಜೊತೆಗೆ ಬೀಟ್‌ರೂಟ್, ದಾಳಿಂಬೆ, ಖರ್ಜೂರ ಮತ್ತು ಒಣದ್ರಾಕ್ಷಿ ಹೀಮೋಗ್ಲೋಬಿನ್ ಹೆಚ್ಚಿಸಲು ಸಹಾಯಕವಾಗುತ್ತದೆ. ದಾಲ್, ಕಡಲೆ, ರಾಜ್ಮಾ ಮತ್ತು ಸೋಯಾಬೀನ್ ಕೂಡ ಐರನ್ ಸಮೃದ್ಧವಾಗಿದ್ದು, ನಿಯಮಿತವಾಗಿ ಸೇವಿಸಬೇಕು. ಮಾಂಸಾಹಾರ ಸೇವಿಸುವವರು ಮೊಟ್ಟೆ, ಮೀನು ಮತ್ತು ಕೋಳಿ ಮಾಂಸವನ್ನು ಆಹಾರದಲ್ಲಿ ಸೇರಿಸಬಹುದು.
ಐರನ್ ಇರುವ ಆಹಾರ ಸೇವಿಸುವುದಷ್ಟೇ ಸಾಕಾಗುವುದಿಲ್ಲ, ಅದು ದೇಹದಲ್ಲಿ ಸರಿಯಾಗಿ ಅವಶೋಷಣೆಯಾಗಬೇಕು. ಇದಕ್ಕಾಗಿ ವಿಟಮಿನ್ ಸಿ ಇರುವ ನಿಂಬೆ, ಕಿತ್ತಳೆ ಮತ್ತು ನೆಲ್ಲಿಕಾಯಿ ಸೇವಿಸುವುದು ಉತ್ತಮ. ಇದು ಐರನ್ ಪೋಷಣೆಯನ್ನು ಹೆಚ್ಚಿಸುತ್ತದೆ. ಆದರೆ, ಐರನ್ ಸಮೃದ್ಧ ಆಹಾರಗಳೊಂದಿಗೆ ಚಹಾ ಅಥವಾ ಕಾಫಿ ಸೇವಿಸುವುದನ್ನು ತಪ್ಪಿಸಬೇಕು.
ಜೀವನಶೈಲಿಯ ಮಹತ್ವ
ಸರಿಯಾದ ಸಮಯಕ್ಕೆ ಆಹಾರ ಸೇವನೆ, ಸರಿಯಾಗಿ ನಿದ್ರೆ ಮತ್ತು ದೈನಂದಿನ ವ್ಯಾಯಾಮ ದೇಹದ ಆರೋಗ್ಯವನ್ನು ಉತ್ತಮವಾಗಿಡುತ್ತವೆ. ಐರನ್ ಕೊರತೆ ಹೆಚ್ಚಿದ್ದರೆ ವೈದ್ಯರ ಸಲಹೆಯೊಂದಿಗೆ ಸಪ್ಲಿಮೆಂಟ್ ತೆಗೆದುಕೊಳ್ಳಬಹುದು. ಐರನ್ ಕೊರತೆಯನ್ನು ಸರಿಯಾದ ಆಹಾರ ಮತ್ತು ಜೀವನಶೈಲಿಯಿಂದ ನಿಯಂತ್ರಿಸಬಹುದು. ನಿಯಮಿತ ಆರೋಗ್ಯ ತಪಾಸಣೆ ಮತ್ತು ಸಮತೋಲನ ಆಹಾರದಿಂದ ದೇಹವನ್ನು ಶಕ್ತಿಯುತವಾಗಿಡುವುದು ಅತ್ಯಂತ ಮುಖ್ಯ.