ದಾಖಲೆಯ ಶತಕದೊಂದಿಗೆ ವಿಶ್ವ ದಾಖಲೆಯತ್ತ ಮುನ್ನುಗ್ಗಿದ ಜೋ ರೂಟ್ – Kannada News | Joe Root goes level with Ricky Ponting on 41 Test hundreds

ಆ್ಯಶಸ್ ಸರಣಿಯ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಜೋ ರೂಟ್ ಭರ್ಜರಿ ಶತಕ ಸಿಡಿಸಿದ್ದಾರೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 57 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರು ಬ್ಯಾಟರ್ ಗಳು ಪೆವಿಲಿಯನ್ ಗೆ ಮರಳಿದ್ದರು.

ಈ ಹಂತದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋ ರೂಟ್, ಹ್ಯಾರಿ ಬ್ರೂಕ್ ಜೊತೆಗೂಡಿ ಇನಿಂಗ್ಸ್ ಕಟ್ಟಿದರು. ಪರಿಣಾಮ 5ನೇ ವಿಕೆಟ್‌ಗೆ 169 ರನ್ ಗಳ ಜೊತೆಯಾಟ ಮೂಡಿಬಂತು.

ಇದರ ನಡುವೆ 97 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್ ಗಳೊಂದಿಗೆ 84 ರನ್ ಬಾರಿಸಿದ ಹ್ಯಾರಿ ಬ್ರೂಕ್ ಔಟಾದರು. ಇದಾಗ್ಯೂ ಮತ್ತೊಂದೆಡೆ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದ ಜೋ ರೂಟ್ ಆಕರ್ಷಕ ಶತಕ ಪೂರೈಸಿದರು.

ಈ ಶತಕದೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ವಿಶ್ವದ ಮೂರನೇ ಬ್ಯಾಟರ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್.

  • ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 51 ಶತಕ ಬಾರಿಸಿದ್ದಾರೆ.
  • ಸೌತ್ ಆಫ್ರಿಕಾದ ಜಾಕ್ಸ್ ಕಾಲಿಸ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಒಟ್ಟು 45 ಸೆಂಚುರಿ ಸಿಡಿಸಿದ್ದಾರೆ.
  • ಜೋ ರೂಟ್ 41 ಟೆಸ್ಟ್ ಶತಕಗಳೊಂದಿಗೆ ಇದೀಗ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ 242 ಎಸೆತಗಳನ್ನು ಎದುರಿಸಿದ ಜೋ ರೂಟ್ 15 ಫೋರ್ ಗಳೊಂದಿಗೆ ಒಟ್ಟು 160 ರನ್ ಕಲೆಹಾಕಿದರು. 160 ರನ್ ಗಳೊಂದಿಗೆ ಟೆಸ್ಟ್ ಕ್ರಿಕೆಟ್ ನ ರನ್ ಸಂಖ್ಯೆಯನ್ನು 13937 ಕ್ಕೇರಿಸಿದ್ದಾರೆ.

ಇದನ್ನೂ ಓದಿ: ಟಿ೨೦ ಕ್ರಿಕೆಟ್‌ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ನಿರ್ಮಿಸಿದ ಸ್ಪೇನ್

ಜೋ ರೂಟ್ ಇನ್ನು 1984 ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್. ಸಚಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 15921 ರನ್ ಗಳಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇಂಗ್ಲೆಂಡ್ ಆಲೌಟ್:

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ಜೋ ರೂಟ್ ಅವರ ಶತಕದ ನೆರವಿನೊಂದಿಗೆ ಒಟ್ಟು 384 ರನ್ ಗಳಿಸಿ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಪರ ಮೈಕೆಲ್ ನೇಸರ್ 4 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ ಹಾಗೂ ಸ್ಕಾಟ್ ಬೋಲ್ಯಾಂಡ್ ತಲಾ 2 ವಿಕೆಟ್ ಕಬಳಿಸಿದ್ದಾರೆ.

Published On – 11:26 am, Mon, 5 January 26

Source link

‘ಜನ ನಾಯಗನ್’ ತಂಡದಿಂದ ಇದೆಂಥಾ ತಪ್ಪು; ಟ್ರೋಲಿಗರಿಗೆ ಆಹಾರವಾದ ನಿರ್ದೇಶಕ – Kannada News | Jana Nayagan: Vijay’s Last Film Faces AI and Remake Row Post Trailer

ದಳಪತಿ ವಿಜಯ್ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಿ ‘ಜನ ನಾಯಗನ್’ (Jana Nayagan) ಮೂಡಿ ಬರುತ್ತಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಆದರೆ, ಯಾವಾಗ ಚಿತ್ರದ ಟ್ರೇಲರ್ ಬಿಡುಗಡೆ ಆಯಿತೋ ಅಲ್ಲಿಂದ ಸಿನಿಮಾಗೆ ಹಿನ್ನಡೆ ಉಂಟಾಗುತ್ತಿದೆ. ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರಿಮೇಕ್ ಇದು ಎಂಬುದು ಟ್ರೇಲರ್ ನೋಡಿದವರಿಗೆ ಸ್ಪಷ್ವವಾಗಿದೆ. ಇದರ ಜೊತೆಗೆ ಎಐ ಚಿತ್ರ ಟ್ರೇಲರ್​​ನಲ್ಲಿ ಬಳಕೆ ಮಾಡಲಾಗಿದೆ. ಇದಕ್ಕೆ ಅನೇಕರು ಕೋಪ ಹೊರಹಾಕಿದ್ದಾರೆ.

‘ಜನ ನಾಯಗನ್’ ಇದು ದಳಪತಿ ವಿಜಯ್ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ. ಇದು ಅವರ ಕೊನೆಯ ಚಿತ್ರ ಕೂಡ ಹೌದು. ಹೀಗಾಗಿ, ಸಹಜವಾಗಿಯೇ ನಿರೀಕ್ಷೆ ಇದೆ. ಸಿನಿಮಾಗೆ ಹೈಪ್ ಸಿಗಬೇಕು ಎಂದರೆ ಚಿತ್ರದ ಟ್ರೇಲರ್ ಬಿಡುಗಡೆ ಆಗಬೇಕು. ಆದರೆ, ‘ಜನ ನಾಯಗನ್’ ವಿಷಯದಲ್ಲಿ ಅದು ಉಲ್ಟಾ ಆಗಿದೆ. ಟ್ರೇಲರ್ ರಿಲೀಸ್ ಬಳಿಕ ಚಿತ್ರಕ್ಕೆ ನೆಗೆಟಿವ್ ಕಮೆಂಟ್ ಹೆಚ್ಚಿದೆ.

‘ಜನ ನಾಯಗನ್’ ಚಿತ್ರ ‘ಭಗವಂತ ಕೇಸರಿ’ಯ ರಿಮೇಕ್ ಎಂದು ಹೇಳಲಾಗುತ್ತಾ ಬರುತ್ತಿತ್ತು. ಆದರೆ, ತಂಡ ಇದನ್ನು ಒಪ್ಪಿಲ್ಲ. ಈಗ ಸಿನಿಮಾದ ಟ್ರೇಲರ್ ನೋಡಿದ ಬಳಿಕ ಇದು ಸ್ಪಷ್ಟವಾಗಿದೆ. ಇದರ ಜೊತೆಗೆ ಒಂದು ಶಾಟ್​​ನ ಜೆಮಿನಿ ಎಐ ಬಳಸಿ ರಚಿಸಲಾಗಿದೆ. ದುರಂತ ಎಂದರೆ ಜೆಮಿನಿ ಎಐ ಲೋಗೋನ ತೆಗೆಯಲು ತಂಡದವರು ಮರೆತಿದ್ದಾರೆ.

ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ನೂರಾರು ಕೋಟಿ ರೂಪಾಯಿ ಹಾಕಿ ಮಾಡೋ ಸಿನಿಮಾದಲ್ಲಿ ಈ ರೀತಿಯ ತಪ್ಪುಗಳು ಆದರೆ ಪ್ರೇಕ್ಷಕರಿಗೆ ಅದು ಕೋಪ ತರಿಸುತ್ತದೆ. ಇನ್ನು ಕೆಲವು ಶಾಟ್​​ಗಳಿಗೆ ನಿರ್ದೇಶಕ ‘ಎಐ’ ಮೊರೆ ಹೋಗುತ್ತಾನೆ ಎಂದಾದರೆ ಅಸಲಿ ಸಿನಿಮಾದ ಮಜ ಹೇಗೆ ಸಿಗೋಕೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ‘ಜನ ನಾಯಗನ್’ ಟ್ರೈಲರ್ ಬಿಡುಗಡೆ: ರೀಮೇಕಾ? ಸ್ವಮೇಕಾ?

ಎಚ್​. ವಿನೋದ್ ಅವರು ‘ಜನ ನಾಯಗನ್’ ನಿರ್ದೇಶನ ಮಾಡಿದ್ದಾರೆ. ಅವರು ರಿಮೇಕ್ ಮಾಡೋದ್ರಲ್ಲಿ ಎತ್ತಿದ ಕೈ. ಈ ಮೊದಲು ಕೂಡ ಅವರು ರಿಮೇಕ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದು ಇದೆ. ಆದರೆ, ಅವರು ಕಥೆಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಆದರೆ, ಇಲ್ಲಿ ಆ ರೀತಿ ಮಾಡಿಲ್ಲ ಎನ್ನಲಾಗುತ್ತಿದೆ. ಕೆವಿಎನ್​ ಸಂಸ್ಥೆ ನಿರ್ಮಾಣದ ಈ ಚಿತ್ರ ಜನವರಿ 14ರಂದು ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:13 am, Mon, 5 January 26

Source link

ಇಡೀ ಇಂದೋರ್​ಗೆ ನೀರು ಪೂರೈಸುತ್ತಿದ್ದ ಟ್ಯಾಂಕಿನಲ್ಲಿತ್ತು ವ್ಯಕ್ತಿಯ ಶವ, 30 ವರ್ಷಗಳ ಹಿಂದೆ ಏನಾಗಿತ್ತು? – Kannada News | Indore’s Bhagirathpura Recalls a Disturbing Water Tank Tragedy After 30 Years

ಇಂದೋರ್, ಜನವರಿ 05: ಇಂದೋರ್​ನಲ್ಲಿ ಚರಂಡಿ ನೀರು( Sewage Water) ಕುಡಿಯುವ ನೀರಿನ ಜತೆ ಮಿಶ್ರಣವಾಗಿ ಹಲವು ಜನರ ಜೀವಕ್ಕೆ ಕುತ್ತು ತಂದಿದೆ. ಆದರೆ ಭಾಗೀರಥಪುರದಲ್ಲಿ ಈ ರೀತಿಯ ದುರಂತ ಹೊಸದೇನಲ್ಲ. ಇಂದೋರ್​ 30 ವರ್ಷಗಳ ಹಿಂದೆ ನಡೆದಿರುವ ಘಟನೆಯನ್ನು ಅಲ್ಲಿನ ಜನತೆ ನೆನಪಿಸಿಕೊಂಡಿದ್ದಾರೆ. ಸುಭಾಷ್ ಚೌಕ್ ಟ್ಯಾಂಕ್‌ನಲ್ಲಿ ಕೊಳೆತ ಶವವೊಂದು ಪತ್ತೆಯಾಗಿತ್ತು. ಸಾವಿರಾರು ಜನರು ಆ ಟ್ಯಾಂಕಿನ ನೀರನ್ನೇ ಕುಡಿದಿದ್ದರು.

ಪಶ್ಚಿಮ ಇಂದೋರ್‌ನ ಸಾವಿರಾರು ಮನೆಗಳಿಗೆ ವಾರಗಳವರೆಗೆ ನೀರು ಪೂರೈಸುತ್ತಿದ್ದ ಟ್ಯಾಂಕ್‌ನೊಳಗೆ ಮಾನವ ಅಸ್ಥಿಪಂಜರ ಪತ್ತೆಯಾಗಿತ್ತು. ಜನರು ಅನಾರೋಗ್ಯಕ್ಕೆ ಒಳಗಾಗುತ್ತಲೇ ಇದ್ದರು. ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿ ತುಳುಕುತ್ತಿದ್ದರು. ಆದರೆ ನೀರಿನ ಟ್ಯಾಂಕಿನಲ್ಲಿ ಕೊಳೆತ ಶವವಿರಬಹುದು ಎನ್ನುವ ಸಣ್ಣ ಕಲ್ಪನೆಯೂ ಜನರಿಗಿರಲಿಲ್ಲ.

ನಲ್ಲಿಗಳಲ್ಲಿ ವಾಸನೆ ಬರಲು ಶುರುವಾಗಿತ್ತು ಆಗ ಟ್ಯಾಂಕ್ ತೆರೆದು ನೋಡಿದಾಗ ಅಲ್ಲಿದ್ದ ಅಸ್ಥಪಂಜರ ಕಂಡು ಜನರು ಗಾಬರಿಗೊಂಡಿದ್ದರು.ಮುನ್ಸಿಪಲ್ ಕಾರ್ಪೊರೇಷನ್ ಕಾಂಗ್ರೆಸ್ ಪಕ್ಷದ ನಿಯಂತ್ರಣದಲ್ಲಿತ್ತು ಮತ್ತು ಮಧುಕರ್ ವರ್ಮಾ ಮೇಯರ್ ಆಗಿದ್ದರು. ಇಂದಿನ ಪರಿಸ್ಥಿತಿಯೂ ಅಷ್ಟೇ ಗಂಭೀರವಾಗಿದೆ.ಭಾಗೀರಥಪುರದ ಇತ್ತೀಚಿನ ಅಂಕಿಅಂಶಗಳು ಆತಂಕಕಾರಿಯಾಗಿವೆ.

ಮತ್ತಷ್ಟು ಓದಿ: ಇಂದೋರ್: ಚರಂಡಿ ನೀರಿನ ಜತೆ ಮಿಶ್ರಣವಾಗಿದ್ದ ನೀರು ಕುಡಿದು 3 ಮಂದಿ ಸಾವು, ಹಲವರ ಸ್ಥಿತಿ ಗಂಭೀರ

ಕಲುಷಿತ ಕುಡಿಯುವ ನೀರಿನಿಂದಾಗಿ ಭಗೀರಥಪುರದಲ್ಲಿ ಅತಿಸಾರ ಹರಡುವಿಕೆಯಿಂದಾಗಿ, 142 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ 11 ಜನರು ಐಸಿಯುನಲ್ಲಿದ್ದಾರೆ. ಏತನ್ಮಧ್ಯೆ, ಸೋಂಕಿನ ಮೂಲ ತಿಳಿದುಬಂದಿಲ್ಲ. ಭಾಗೀರಥಪುರದಲ್ಲಿ 9,000 ಕ್ಕೂ ಹೆಚ್ಚು ಜನರ ತಪಾಸಣೆಯ ಸಮಯದಲ್ಲಿ 20 ಹೊಸ ಪ್ರಕರಣಗಳು ಕಂಡುಬಂದಿವೆ.

ಭಾಗೀರಥಪುರದಲ್ಲಿ ನಡೆಯುತ್ತಿರುವ ಸಮೀಕ್ಷೆಯ ಸಮಯದಲ್ಲಿ ಆರೋಗ್ಯ ತಂಡಗಳು 2,354 ಮನೆಗಳಿಂದ 9,416 ಜನರನ್ನು ಪರೀಕ್ಷಿಸಿವೆ. ಅಲ್ಲಿ ಆರು ಜನರು ಕಲುಷಿತ ನೀರಿನಿಂದ ಸಾವನ್ನಪ್ಪಿದ್ದಾರೆ ಮತ್ತು 20 ಹೊಸ ಪ್ರಕರಣಗಳನ್ನು ಗುರುತಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಸಾಂಕ್ರಾಮಿಕ ರೋಗ ಹರಡಿದ ನಂತರ 398 ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಪೈಕಿ 256 ಜನರನ್ನು ಚೇತರಿಸಿಕೊಂಡ ನಂತರ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ 142 ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇದರಲ್ಲಿ 11 ಮಂದಿ ಐಸಿಯುನಲ್ಲಿದ್ದಾರೆ ಎಂದು ಅವರು ಹೇಳಿದರು.

ಆರೋಗ್ಯ ಬಿಕ್ಕಟ್ಟಿನ ಬಗ್ಗೆ ತನಿಖೆ ನಡೆಸಲು ಕೋಲ್ಕತ್ತಾದ ರಾಷ್ಟ್ರೀಯ ಬ್ಯಾಕ್ಟೀರಿಯಾ ಸೋಂಕು ಸಂಶೋಧನಾ ಸಂಸ್ಥೆಯ (NIRBI) ತಂಡವು ಇಂದೋರ್‌ಗೆ ಆಗಮಿಸಿದೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಮಾಧವ ಪ್ರಸಾದ್ ಹಸಾನಿ ಹೇಳಿದ್ದಾರೆ. ಆಡಳಿತವು ಇದುವರೆಗೆ ಆರು ಸಾವುಗಳನ್ನು ದೃಢಪಡಿಸಿದೆ. ಆರು ತಿಂಗಳ ಮಗು ಸೇರಿದಂತೆ 16 ಜನರು ಅತಿಸಾರದಿಂದ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

US threat: ರಷ್ಯನ್ ತೈಲ ಖರೀದಿ- ಭಾರತದ ಮೇಲೆ ಮತ್ತೆ ಟ್ಯಾರಿಫ್ ಬೆದರಿಕೆ ಹಾಕಿದ ಟ್ರಂಪ್ – Kannada News | US president Donald Trump threatens more tariffs against India on Russian oil matter

ವಾಷಿಂಗ್ಟನ್, ಜನವರಿ 5: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಭಾರತದ ಮೇಲೆ ಬೆದರಿಕೆ ಹಾಕುವುದನ್ನು ಇನ್ನೂ ನಿಲ್ಲಿಸಿಲ್ಲ. ರಷ್ಯನ್ ತೈಲ ಆಮದನ್ನು ಭಾರತ ಮುಂದುವರಿಸುತ್ತಿರುವುದು ಅಮೆರಿಕ ಅಧ್ಯಕ್ಷರಿಗೆ ಕಿರಿಕಿರಿ ತಂದಂತಿದೆ. ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಬೈಟ್​ನಲ್ಲಿ ಅವರು ರಷ್ಯನ್ ತೈಲ ಖರೀದಿ ಸಂಬಂಧ ಭಾರತದ ಮೇಲೆ ಟ್ಯಾರಿಫ್ (US Tariffs) ಅನ್ನು ಮತ್ತಷ್ಟು ಹೆಚ್ಚಿಸಲು ಸಿದ್ಧರಿರುವುದಾಗಿ ಹೇಳಿದ್ದಾರೆ.

ಭಾರತದ ಮೇಲೆ ಅಮೆರಿಕ ಈಗಾಗಲೇ ಶೇ. 50ರಷ್ಟು ಆಮದು ಸುಂಕ ಹಾಕುತ್ತಿದೆ. ಇನ್ನೂ ಹೆಚ್ಚಿನ ಮಟ್ಟದ ಟ್ಯಾರಿಫ್ ಹಾಕುವುದಾಗಿ ಟ್ರಂಪ್ ಬೆದರಿಕೆ ಹಾಕುತ್ತಿದ್ದಾರೆ. ತನ್ನನ್ನು ಖುಷಿ ಪಡಿಸದಿದ್ದರೆ ಟ್ಯಾರಿಫ್ ಬರೆ ಹಾಕಬೇಕಾದೀತು ಎಂದು ಎಚ್ಚರಿಕೆ ಕೊಡುತ್ತಿದ್ದಾರೆ.

ಇದನ್ನೂ ಓದಿ: ತೈಲಸಮೃದ್ಧ ವೆನಿಜುವೆಲಾ ಮೇಲೆ ಅಮೆರಿಕ ದಾಳಿ; ಭಾರತಕ್ಕೆ ಎಷ್ಟು ನಷ್ಟ?

‘ಅವರು ನನ್ನನ್ನು ಖುಷಿಪಡಿಸಲು ಬಯಸುತ್ತಾರೆ. ಪಿಎಂ ಮೋದಿ ಬಹಳ ಒಳ್ಳೆಯ ಮನುಷ್ಯ, ಒಳ್ಳೆಯ ವ್ಯಕ್ತಿ. ನಾನು ಖುಷಿಯಾಗಿಲ್ಲ ಅಂತ ಅವರಿಗೆ ಗೊತ್ತು. ನನ್ನನ್ನು ಸಂತೋಷವಾಗಿ ಇಡುವುದು ಮುಖ್ಯ. ಅವರು ವ್ಯಾಪಾರ ಮಾಡುತ್ತಾರೆ. ನಾವು ಅವರ ಮೇಲೆ ಬಹಳ ಬೇಗ ಟ್ಯಾರಿಫ ಹೆಚ್ಚಿಸಬಲ್ಲೆವು..’ ಎಂದು ಟ್ರಂಪ್ ಹೇಳಿರುವ ಆಡಿಯೋ ತುಣಕನ್ನು ಎಎನ್​ಐ ಸುದ್ದಿ ಸಂಸ್ಥೆ ತನ್ನ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

ಟ್ರಂಪ್ ಮಾತನಾಡಿರುವ ಆಡಿಯೋ

ಉಕ್ರೇನ್ ಮೇಲೆ ದಾಳಿ ಮಾಡಿದ್ದಕ್ಕೆ ಅಮೆರಿಕವು ರಷ್ಯಾ ಮೇಲೆ ನಿಷೇಧ ಕ್ರಮ ತೆಗೆದುಕೊಂಡಿದೆ. ರಷ್ಯದ ಆರ್ಥಿಕತೆ ಉಳಿಯಲು ಅದರ ತೈಲವೂ ಪ್ರಮುಖ ಆಧಾರವಾಗಿದೆ. ರಷ್ಯನ್ ತೈಲವನ್ನು ಯಾರೂ ಖರೀದಿ ಮಾಡಬಾರದೆಂದು ಅಂತಾರಾಷ್ಟ್ರೀಯ ಸಮುದಾಯವನ್ನು ಅಮೆರಿಕ ಒತ್ತಾಯಿಸುತ್ತಾ ಬಂದಿದೆ. ಆದರೆ, ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಸಿಗುವುದರಿಂದ ಭಾರತ ಆ ಅವಕಾಶ ಬಳಸಿಕೊಳ್ಳುತ್ತಿದೆ. ಚೀನಾ ಮತ್ತು ಭಾರತವು ರಷ್ಯಾದಿಂದ ಅತಿಹೆಚ್ಚು ತೈಲ ಖರೀದಿಸುತ್ತಿರುವ ಎರಡು ರಾಷ್ಟ್ರಗಳು.

ಇದನ್ನೂ ಓದಿ: ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟರಾ ಟ್ರಂಪ್? ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ

ಕಳೆದ ವರ್ಷ ಟ್ರಂಪ್ ಅಧಿಕಾರಕ್ಕೆ ಬಂದಾಗ ಎಲ್ಲಾ ದೇಶಗಳ ಮೇಲೂ ಪ್ರತಿಸುಂಕ ಹಾಕಿದರು. ಭಾರತದ ಮೇಲೆ ಶೇ. 25ರಷ್ಟು ಪ್ರತಿಸುಂಕ ಹಾಕಿದರು. ನಂತರ, ರಷ್ಯನ್ ತೈಲ ಖರೀದಿಸುತ್ತಿರುವ ಕಾರಣವೊಡ್ಡಿ ಹೆಚ್ಚುವರಿ ಶೇ. 25ರಷ್ಟು ಟ್ಯಾರಿಫ್ ಹಾಕಿದ್ದಾರೆ. ಅಲ್ಲಿಗೆ ಭಾರತದ ಸರುಕುಗಳ ಮೇಲೆ ಅಮೆರಿಕ ಹಾಕುತ್ತಿರುವ ಟ್ಯಾರಿಫ್ ಶೇ. 50ರಷ್ಟಾಗಿದೆ. ಇದನ್ನೂ ಮೀರಿಸಿ ಇನ್ನೂ ಹೆಚ್ಚಿನ ಟ್ಯಾರಿಫ್ ಹಾಕುವುದಾಗಿ ಟ್ರಂಪ್ ಈಗ ಬೆದರಿಕೆ ಹಾಕುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 10:57 am, Mon, 5 January 26

Source link

ಧಾರವಾಡ ಬಸ್ ಡಿಪೋದಲ್ಲಿ ಹನುಮಾನ್ ಗುಡಿ ನಿರ್ಮಿಸಿದ ಮುಸ್ಲಿಂ ವ್ಯಕ್ತಿ! ಸಹೋದರತ್ವ, ಗೌರವದ ಸಂಕೇತ ಎಂದ ಲಾಲ್ ಸಾಬ್ – Kannada News | Muslim Man Builds Hanuman Temple at Dharwad Bus Depot, Symbol of Brotherhood and Mutual Respect

ಹನುಮಾನ್ ಗುಡಿ ಎದುರು ಲಾಲ್ ಸಾಬ್Image Credit source: The New Indian Express

ಧಾರವಾಡ, ಜನವರಿ 5: ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (NWKSRTC) ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಮುಸ್ಲಿಂ ಕಾನ್‌ಸ್ಟೆಬಲ್ ಒಬ್ಬರು ಧಾರವಾಡದ ಬಸ್ ಡಿಪೋ ಆವರಣದಲ್ಲಿ ಹನುಮಂತನ ಗುಡಿ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ. ಹನುಮಾನ ಗುಡಿ ನಿರ್ಮಾಣವು ಕಳೆದ ವರ್ಷ ಪೂರ್ಣಗೊಂಡಿದ್ದರೂ ಇತ್ತೀಚೆಗೆ ಬೆಳಕಿಗೆ ಬಂದಿದೆ. ಲಾಲ್ ಸಾಬ್ ರಸಲ್​ಸಾಬ್ ಬೂದಿಹಾಳ (60) ತಮ್ಮ ಸಮುದಾಯದ ಮುಖಂಡರು ಮತ್ತು ನಿಗಮದ ಉನ್ನತ ಅಧಿಕಾರಿಗಳ ವಿರೋಧದ ಹೊರತಾಗಿಯೂ ಹನುಮಾನ ಗುಡಿ ನಿರ್ಮಾಣ ಕೈಗೆತ್ತಿಕೊಂಡಿದ್ದರು. ಅವರು ಸ್ವಂತ ಹಣ ಮತ್ತು ಇಲಾಖೆಯಲ್ಲಿರುವ ಸಹೋದ್ಯೋಗಿಗಳ ನೆರವಿನಿಂದ ಗುಡಿ ನಿರ್ಮಾಣಕ್ಕೆ ಹಣ ಹೊಂದಿಸಿದ್ದರು.

ಗುಡಿ ನಿರ್ಮಾಣ ವಿಚಾರದಲ್ಲಿ ನಿಗಮದ ಭದ್ರತಾ ಮತ್ತು ವಿಜಿಲೆನ್ಸ್ ವಿಭಾಗದ ನೌಕರರು ಮತ್ತು ಅಧಿಕಾರಿಗಳ ನಡುವೆ ಘರ್ಷಣೆಗಳು ನಡೆದಿದ್ದವು ಎಂದು ರಸಲ್​ಸಾಬ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ. ಗುಡಿಯಲ್ಲಿ ಪ್ರತಿಷ್ಠಾಪಿಸಲು ತರಲಾದ ವಿಗ್ರಹವನ್ನು ಹೊಸ ಡಿಪೋ ಆವರಣದಲ್ಲಿ ಇರಿಸಲಾಗಿತ್ತು.

ಹನುಮಾನ ಗುಡಿ ಬಗ್ಗೆ ಲಾಲ್ ಸಾಬ್ ರಸಲ್​ಸಾಬ್ ಹೇಳಿದ್ದೇನು?

‘ಹೊಸ ಡಿಪೋದಲ್ಲಿ ಕರ್ತವ್ಯದಲ್ಲಿದ್ದಾಗ, ವಾಹನ ಪಾರ್ಕಿಂಗ್ ಸ್ಥಳದಲ್ಲಿ ವಿಗ್ರಹ ಬಿದ್ದಿರುವುದನ್ನು ನೋಡಿದೆ. ದೇವರ ಮೂರ್ತಿಯನ್ನು ಕೆಟ್ಟದಾಗಿ ನಡೆಸಿಕೊಂಡ ರೀತಿ ನನಗೆ ನೋವುಂಟು ಮಾಡಿತು ಮತ್ತು ಗುಡಿ ನಿರ್ಮಿಸಲು ನಿರ್ಧರಿಸಿದೆ. ಅನೇಕ ಜನರು ವಿರೋಧಿಸಿದರು. ಆದರೆ ನಾನು ಹಿಂದೆ ಸರಿಯಲಿಲ್ಲ. ಇದು ಕೇವಲ ಹನುಮಾನ ಗುಡಿಯಲ್ಲ, ಇದು ಇತರ ಧರ್ಮಗಳ ಕಡೆಗೆ ಸಹೋದರತ್ವ ಮತ್ತು ಗೌರವದ ಸಂಕೇತವಾಗಿದೆ’ ಎಂದು ಲಾಲ್ ಸಾಬ್ ರಸಲ್​ಸಾಬ್ ಬೂದಿಹಾಳ ತಿಳಿಸಿದ್ದಾರೆ.

ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉದ್ಯೋಗಿಗಳು ಹೇಳಿದ್ದೇನು?

ಗುಡಿ ನಿರ್ಮಾಣದ ಆರಂಭಿಕ ಹಂತದಲ್ಲಿ ಕೆಲವು ಉದ್ಯೋಗಿಗಳು ಕೈಜೋಡಿಸಿದ್ದರು. ಆದರೆ ವಿಜಿಲೆನ್ಸ್ ತಂಡದಿಂದ ಅಮಾನತುಗೊಳಿಸುವ ಬೆದರಿಕೆ ಬಂದ ನಂತರ ಅವರೆಲ್ಲ ಹಿಂದೆ ಸರಿದಿದ್ದರು ಎಂದು ಡಿಪೋದ ಒಬ್ಬರು ಉದ್ಯೋಗಿ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಆದಾಗ್ಯೂ, ಲಾಲ್‌ಸಾಬ್ ಎಂದಿಗೂ ಹಿಂದೆ ಸರಿಯಲಿಲ್ಲ. ಅವರಿಗೆ ಅವರ ಸಮುದಾಯದವರಿಂದಲೇ ಬೆದರಿಕೆಗಳು ಬಂದಿದ್ದವು. ಆದರೆ ದೃಢನಿಶ್ಚಯದ ಬಲ ಮತ್ತು ಹನುಮಂತನ ಆಶೀರ್ವಾದವು ಅವರು ಗುರಿ ತಲುಪಲು ಸಹಾಯ ಮಾಡಿತು ಎಂದು ಉದ್ಯೋಗಿ ಹೇಳಿದ್ದಾರೆ.

ಇದನ್ನೂ ಓದಿ: ಮರ್ಯಾದೆಗೇಡು ಹತ್ಯೆ ತಡೆಗೆ ವಿಶೇಷ ಕಾನೂನು: ಸಿದ್ದರಾಮಯ್ಯ ಅಧಿಕೃತ ಘೋಷಣೆ

ಲಾಲ್ ಸಾಬ್ ಒಬ್ಬ ನಿಷ್ಠಾವಂತ ವ್ಯಕ್ತಿ ಮತ್ತು ಅವರ ವಿರೋಧಿಗಳು ಗುಡಿ ನಿರ್ಮಾಣವನ್ನು ನಿಲ್ಲಿಸುವಲ್ಲಿ ವಿಫಲರಾದರು. ಒಂದು ಹಂತದ ನಂತರ, ಮುಸ್ಲಿಂ ಸಮುದಾಯದ ಬಹುಪಾಲು ಉದ್ಯೋಗಿಗಳೇ ಅವರನ್ನು ಬೆಂಬಲಿಸಿದರು ನಿಗಮದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್ – Kannada News | ‘Don’t Speak Kannada Here: AMC College Hostel Warden’s Remark Sparks Outrage at Prestigious College Near Bengaluru

ಆನೇಕಲ್, ಜನವರಿ 5: ಕರ್ನಾಟಕದಲ್ಲಿ ಕನ್ನಡ ಮಾತನಾಡುವಂತಿಲ್ಲವೇ? ಇಂಥದ್ದೊಂದು ಪ್ರಶ್ನೆ ಮೂಡಿಸುವಂತಹ ಘಟನೆ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ರಸ್ತೆ ಸಮೀಪದ ಕಲ್ಕೆರೆ ಬಳಿ ಇರುವ ಪ್ರತಿಷ್ಠಿತ ಕಾಲೇಜಿನ ಹಾಸ್ಟೆಲ್‌ನಲ್ಲಿ ನಡೆದಿದೆ. ಹಾಸ್ಟೆಲ್ ವಾರ್ಡನ್‌ ಒಬ್ಬರು, ‘ಕನ್ನಡ ಮಾತನಾಡಬೇಡಿ’ ಎಂದು ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬನ್ನೇರುಘಟ್ಟದಲ್ಲಿರುವ ಪ್ರತಿಷ್ಠಿತ ಕಾಲೇಜಿನ ಹಾಸ್ಟೆಲ್ ವಾರ್ಡನ್ ಸುರೇಶ್ ಎಂಬಾತ, ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಪರಸ್ಪರ ಕನ್ನಡದಲ್ಲಿ ಮಾತನಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ‘ಕನ್ನಡ ಮಾತನಾಡುವುದು ಇಲ್ಲಿ ಸರಿಯಲ್ಲ, ಕನ್ನಡ ಮಾತನಾಡಬೇಕಾದರೆ ಮನೆಯಲ್ಲೇ ಮಾತನಾಡಿ’ ಎಂದು ಉದ್ಧಟತನದ ಮಾತುಗಳನ್ನಾಡಿದ್ದಾನೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಇದಲ್ಲದೆ, ‘ಕನ್ನಡ ಬೇಡ, ಹಿಂದಿಯಲ್ಲಿ ಮಾತನಾಡಿ’ ಎಂದು ವಾರ್ಡನ್ ಅವಾಜ್ ಹಾಕಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧಿತ ವಿಡಿಯೋ ಈಗ ವೈರಲ್ ಆಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್! – Kannada News | Home Minister Parameshwara on JJ Nagar Stone Pelting, Juvenile Arrest

ಬೆಂಗಳೂರು, ಜನವರಿ 05: ಬೆಂಗಳೂರಿನ ಜೆಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಇಬ್ಬರು ಯುವತಿಯರು ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿತ್ತು. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹಸಚಿವ ಜಿ. ಪರಮೇಶ್ವರ್, ಬಂಧಿತರು 15 ಮತ್ತು 16 ವರ್ಷದ ಅಪ್ರಾಪ್ತ ವಯಸ್ಸಿನವರು. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಕಾನೂನು ಪ್ರಕಾರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಅವರು ಅಪ್ರಾಪ್ತರಾಗಿರುವುದರಿಂದ, ಜುವೆನೈಲ್ ನಿಯಮಗಳ ಅಡಿಯಲ್ಲಿ ಪ್ರಕರಣವನ್ನು ನಿರ್ವಹಿಸಲಾಗುವುದು. ಯಾರು ಈ ಬಾಲಕರನ್ನು ಪ್ರಚೋದಿಸಿದ್ದಾರೆ ಅಥವಾ ಘಟನೆ ಹೇಗೆ ನಡೆಯಿತು ಎಂಬುದರ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಇಂತಹ ಘಟನೆಗಳು ನಡೆದಾಗ ಬಿಜೆಪಿ ರಾಜಕೀಯ ಮಾಡಲು ಪ್ರಯತ್ನಿಸುತ್ತದೆ ಎಂಬ ಆರೋಪವನ್ನು ಮಾಡಿರುವ ಪರಮೇಶ್ವರ್, ಬಿಜೆಪಿ ಹೇಳಿಕೆ ನೀಡುವ ಮೊದಲೇ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಕಾನೂನು ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತದೆ ಮತ್ತು ಯಾರ ಪ್ರಚೋದನೆಗೂ ಒಳಗಾಗುವುದಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಮತೋಲನ ಕಳೆದುಕೊಂಡು ಸ್ಕೂಟಿಯಿಂದ ಬಿದ್ದ ಅಮ್ಮ-ಮಗಳು, ತಲೆ ಮೇಲೆ ಟ್ರಕ್ ಹರಿದು ಇಬ್ಬರೂ ಸಾವು – Kannada News | Chattisgarh: Mother and Daughter Killed in Road Accident After Scooter Loses Balance

ಛತ್ತೀಸ್​ಗಢ, ಜನವರಿ 05: ತರಕಾರಿ ತರಲೆಂದು ರಾತ್ರಿ ಮಾರ್ಕೆಟ್​ಗೆ ಹೋಗಿದ್ದ ಅಮ್ಮ-ಮಗಳು ಶವವಾಗಿ ಮನೆಗೆ ತಲುಪಿರುವ ಹೃದಯ ವಿದ್ರಾವಕ ಘಟನೆ ಛತ್ತೀಸ್​ಗಢದ ಕೋರ್ಬಾ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ದರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ  ಅಪಘಾತ(Accident) ನಡೆದಿದೆ. ಕೊರ್ಬಾದ ಕೊಹಾಡಿಯಾ ವಾರ್ಡ್ ನಿವಾಸಿ ರಾಮ್ ಕುಮಾರಿ ವರ್ಮಾ, ಭಾನುವಾರ ಸಂಜೆ ದರಿ ಮಾರುಕಟ್ಟೆಯಿಂದ ತರಕಾರಿ ಖರೀದಿಸಿ ಸ್ಕೂಟರ್‌ನಲ್ಲಿ ತನ್ನ ಮಗಳು ರೇಣು ವರ್ಮಾ ಜೊತೆ ಮನೆಗೆ ಹಿಂತಿರುಗುತ್ತಿದ್ದರು.

ದರಿ ಪಟ್ಟಣದ ಮುಖ್ಯ ರಸ್ತೆಯ ಮೂಲಕ ರಾತ್ರಿ 8 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೈಕ್ ಸವಾರನೊಬ್ಬ ತಾಯಿ ಮತ್ತು ಮಗಳಿದ್ದ ಸ್ಕೂಟಿ ಎದುರು ವೇಗವಾಗಿ ಹೋಗಿದ್ದರಿಂದ ಬ್ರೇಕ್ ಹಾಕಲಾಗದೆ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ.
ಅದೇ ಸಮಯದಲ್ಲಿ, ವೇಗವಾಗಿ ಬಂದ ಹೆವಿ ಡ್ಯೂಟಿ ಟ್ರಕ್ ಅವರಿಗೆ ಡಿಕ್ಕಿ ಹೊಡೆದಿದೆ.

ವಾಹನದ ಚಕ್ರ ಅವರ ತಲೆಯ ಮೇಲೆ ಹಾದು ಹೋಗಿದೆ. ತಾಯಿ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ, ಭಾರೀ ವಾಹನದ ಚಾಲಕ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಮತ್ತಷ್ಟು ಓದಿ: ಕಾರ್ ಮತ್ತು ಚಿಗರಿ ಬಸ್ ನಡುವೆ ಅಪಘಾತ; ಎದೆ ಝಲ್ಲೆನಿಸುವ ದೃಶ್ಯ ಕಾರ್ ಡ್ಯಾಶ್ ಕ್ಯಾಮರಾದಲ್ಲಿ ಸೆರೆ

ಕೋಪಗೊಂಡ ಜನರು ಜಮಾಯಿಸಿ ರಸ್ತೆ ತಡೆ ನಡೆಸಿದರು. ಅಪಘಾತದ ಬಗ್ಗೆ ಮಾಹಿತಿ ಪಡೆದ ದರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು.

ಸಾರ್ವಜನಿಕರ ಆಕ್ರೋಶವನ್ನು ಗಮನಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಆಗಮಿಸಿದರು ಮತ್ತು ಸುಮಾರು ಮೂರು ಗಂಟೆಗಳ ನಂತರ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿತು. ಜಿಲ್ಲಾ ಪೊಲೀಸರು ರಸ್ತೆ ಸುರಕ್ಷತಾ ಮಾಸವನ್ನು ಆಚರಿಸುತ್ತಿದ್ದ ಮತ್ತು ಸಂಚಾರ ನಿರ್ವಹಣೆಯನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ.

ದರಿ ಪ್ರದೇಶದ ಜನರು ಬಹಳ ಹಿಂದಿನಿಂದಲೂ ಭಾರೀ ವಾಹನಗಳ ವೇಗವನ್ನು ನಿಯಂತ್ರಿಸುವುದಲ್ಲದೆ, ಅವುಗಳ ಸಂಚಾರ ಮಾದರಿಯಲ್ಲಿ ಸುಧಾರಣೆಗಳನ್ನು ಸಹ ಒತ್ತಾಯಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಓವರ್‌ಲೋಡ್ ಮತ್ತು ಭಾರೀ ವಾಹನಗಳ ಸಂಚಾರವು ಸಾಮಾನ್ಯ ಜನರಿಗೆ ಪ್ರಯಾಣವನ್ನು ಕಷ್ಟಕರವಾಗಿಸಿದೆ. ಇದಲ್ಲದೆ, ಜಲ್ಲಿಕಲ್ಲು ಸಾಗಣೆಯಲ್ಲಿ ತೊಡಗಿರುವ ವಾಹನಗಳು ಜನರ ಜೀವವನ್ನು ಅಪಾಯಕ್ಕೆ ಸಿಲುಕಿಸುತ್ತವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:35 am, Mon, 5 January 26

Source link

Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ನಾಲ್ಕನೇ ಬೆಕ್ಕನ್ನು ಹುಡುಕಬಲ್ಲಿರಾ – Kannada News | Optical Illusion: Find the hidden fourth cat in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಟ್ರಿಕ್ಕಿ ಒಗಟಿನ ಚಿತ್ರಗಳು ಬಿಡಿಸುವುದು ಹೇಳುವಷ್ಟು ಸುಲಭವಲ್ಲ. ಆದರೆ ಈ ಚಿತ್ರಗಳನ್ನು ಬಿಡಿಸುವಾಗ ಹೆಚ್ಚಿನವರು ಹೆಚ್ಚು ಸಮಯ ತೆಗೆದು ಕೊಳ್ಳುತ್ತಾರೆ. ಕೆಲವರಿಗೆ ಉತ್ತರ ಕಂಡುಕೊಳ್ಳುವುದು ಕಷ್ಟವಾಗಲ್ಲ. ಇದೀಗ ನಿಮ್ಮ ಮೆದುಳಿಗೆ ಕೆಲಸ ನೀಡುವ ಹಾಗೂ ದೃಷ್ಟಿ ಸಾಮರ್ಥ್ಯ ಪರೀಕ್ಷಿಸುವ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿರುವ ಮೂರು ಬೆಕ್ಕುಗಳ ನಡುವೆ ನಾಲ್ಕನೇ ಬೆಕ್ಕು ಎಲ್ಲಿದೆ ಎನ್ನುವ ಸವಾಲು ಇಲ್ಲಿದೆ. ಈ ಒಗಟು ಬಿಡಿಸಲು ನಿಮಗಿರುವ ಕಾಲಾವಕಾಶ 7 ಸೆಕೆಂಡುಗಳು ಮಾತ್ರ ಎನ್ನುವುದು ನೆನಪಿರಲಿ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸುತ್ತದೆ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಗೊಂದಲಕ್ಕೀಡು ಮಾಡುವುದು ಸಹಜ. ಈ ಚಿತ್ರವು ಅದೇ ರೀತಿಯಿದ್ದು, ನಿಮಗೆ ಇಲ್ಲಿ ಮೂರು ಬೆಕ್ಕು ಕಾಣಿಸುತ್ತದೆ. ಆದರೆ ಈ ಚಿತ್ರದಲ್ಲಿ ನಾಲ್ಕು ಬೆಕ್ಕುಗಳಿವೆ. ಆ ನಾಲ್ಕನೇ ಬೆಕ್ಕನ್ನು ನೀವು ಕಂಡು ಹಿಡಿಯಬೇಕು. ನೀವು ಇದಕ್ಕೆ ಏಳು ಸೆಕೆಂಡುಗಳೊಳಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾದರೆ ನಿಮ್ಮ ವೀಕ್ಷಣಾ ಕೌಶಲ್ಯ ಅತ್ಯುತ್ತಮವಾಗಿದೆ ಎಂದರ್ಥ.

ಇದನ್ನೂ ಓದಿ:ರಾಮಗಿಳಿಗಳ ನಡುವೆ ಅಡಗಿರುವ ಊಸರವಳ್ಳಿಯನ್ನು ಗುರುತಿಸಿ

ನಾಲ್ಕನೇ ಬೆಕ್ಕು ನಿಮ್ಮ ಕಣ್ಣಿಗೆ ಬಿದ್ದಿತೇ?

ಈ ಚಿತ್ರವನ್ನು ಎಷ್ಟೇ ಸೂಕ್ಷ್ಮವಾಗಿ ಗಮನಿಸಿದರೂ ನಾಲ್ಕನೇ ಬೆಕ್ಕನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲವೇ. ಏಳು ಸೆಕೆಂಡುಗಳಲ್ಲಿ ಬೆಕ್ಕನ್ನು ಹುಡುಕುವುದು ಕಷ್ಟವಾಗಬಹುದು. ಕೆಲವರಿಗೆ ಮಾತ್ರ ಈ ಒಗಟು ಬಿಡಿಸಲು ಸಾಧ್ಯ. ನೀವು ಈ ಆಟದಲ್ಲಿ ವಿಫಲರಾಗಿದ್ದೀರಿ ಎಂದಾದರೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ನಾಲ್ಕನೇ ಬೆಕ್ಕು ಎಲ್ಲಿದೆ ಎಂದು ನಾವೇ ಹೇಳುತ್ತೇವೆ. ಈ ಕೆಳಗಿನ ಚಿತ್ರವನ್ನೊಮ್ಮೆ ನೋಡಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದಿನಿಂದ ಶುರು SSLC ಪೂರ್ವ ಸಿದ್ಧತಾ ಪರೀಕ್ಷೆ, ಮುಖ್ಯ ಪರೀಕ್ಷೆ ಯಾವಾಗ? – Kannada News | SSLC Preparatory Exams 2025 26: Karnataka KSEAB Timetable and Guidelines

ಇಂದಿನಿಂದ ಶುರು SSLC ಪೂರ್ವ ಸಿದ್ಧತಾ ಪರೀಕ್ಷೆ, ಮುಖ್ಯ ಪರೀಕ್ಷೆ ಯಾವಾಗ?

ಬೆಂಗಳೂರು, ಜನವರಿ 05: 2025-26ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಇಂದಿನಿಂದ ಮೊದಲ ಹಂತದ ಪೂರ್ವ ತಯಾರಿ ಪರೀಕ್ಷೆ ಆರಂಭಗೊಳ್ಳಲಿದೆ. ಮುಖ್ಯ ಪರೀಕ್ಷೆಗೂ ಮುನ್ನ 3 ಹಂತದಲ್ಲಿ ಪ್ರಿಪರೇಟರಿ ಪರೀಕ್ಷೆ ನಡೆಯಲಿದ್ದು, ಫೆಬ್ರುವರಿಯಲ್ಲಿ ಕೊನೆಯ ಹಂತದ ಪರೀಕ್ಷೆ ಮುಕ್ತಾಯಗೊಳ್ಳಲಿದೆ.

ಮೂರು ಹಂತದ ಪರೀಕ್ಷೆಯ ವೇಳಾಪಟ್ಟಿ ಇಲ್ಲಿದೆ

ಪೂರ್ವ ಸಿದ್ಧತಾ ಪರೀಕ್ಷೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ಈಗಾಗಲೇ ವೇಳಾಪಟ್ಟಿಗಳನ್ನು ಪ್ರಕಟಿಸಿದೆ. ಈ ಪರೀಕ್ಷೆಯು ಮುಖ್ಯ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ದಿಕ್ಸೂಚಿಯಾಗಿರಲಿದೆ ಎಂದು ಹೇಳಲಾಗಿದೆ. ಮೊದಲ ಹಂತದ ಪರೀಕ್ಷೆಯು ಇಂದಿನಿಂದ (ಜನವರಿ 5) ಆರಂಭವಾಗಿ, ಜನವರಿ 10ಕ್ಕೆ ಮುಕ್ತಾಯವಾದರೆ, ಎರಡನೇ ಹಂತದ ಪರೀಕ್ಷೆ ಜನವರಿ 27ರಿಂದ ಆರಂಭವಾಗಿ ಫೆಬ್ರುವರಿ 2ಕ್ಕೆ ಮುಗಿಯಲಿದೆ. ಕೊನೆಯ ಹಂತದ ಪರೀಕ್ಷೆ ಫೆಬ್ರುವರಿ 23ರಂದು ಆರಂಭವಾಗಲಿದ್ದು, ಅದೇ ತಿಂಗಳ 28ಕ್ಕೆ ಕೊನೆಗೊಳ್ಳಲಿದೆ.

ವೇಳಾಪಟ್ಟಿಯನ್ನು ಮಂಡಳಿಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಎಲ್ಲ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದ್ದು, ಪರೀಕ್ಷೆ ಕುರಿತ ಮಾಹಿತಿಯು ಎಲ್ಲ ವಿದ್ಯಾರ್ಥಿಗಳಿಗೆ ತಲುಪಲು ಕ್ರಮವಹಿಸುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಲಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಕಠಿಣ ಕ್ರಮ

ವೇಳಾಪಟ್ಟಿಯ ಅನುಸಾರ ಆಯಾ ದಿನದ ಪ್ರಶ್ನೆಪತ್ರಿಕೆಗಳನ್ನು ಮುಖ್ಯಶಿಕ್ಷಕರ ಲಾಗಿನ್‌ಗೆ ಅಪ್‌ಲೋಡ್ ಮಾಡಲಾಗುವುದು. ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಮುದ್ರಿಸಿ, ಪರೀಕ್ಷೆ ನಡೆಸಬೇಕು ಎಂದು ಹೇಳಲಾಗಿದೆ. ಮುಖ್ಯ ಪರೀಕ್ಷೆಯಂತೆಯೇ ಸಿದ್ಧತಾ ಪರೀಕ್ಷೆಯೂ ಪಾರದರ್ಶಕವಾಗಿ ನಡೆಯಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರಿಗೆ ಮಾರ್ಗದರ್ಶನ ಮಾಡುವ ಹೊಣೆ ಜಿಲ್ಲಾ ಉಪನಿರ್ದೇಶಕರದ್ದಾಗಿದ್ದಾಗಿದೆ ಎನ್ನಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ನಕಲು ಮತ್ತಿತರ ಪ್ರಕರಣಗಳು ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದ್ದು, ಪರೀಕ್ಷೆ ಮುಕ್ತಾಯವಾದ ಮರುದಿನವೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟವಾಗಲಿದೆ. ಮುಖ್ಯ ಪರೀಕ್ಷೆ ಮಾರ್ಚ್​ 18ರಿಂದ ಆರಂಭವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version