ಬೆಂಗಳೂರು, ಏಪ್ರಿಲ್ 07: ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೀದಿ ನಾಯಿಗಳ (Stray Dogs)ಜೊತೆಗೆ ಸಾಕು ನಾಯಿಗಳ ದಾಳಿಯೂ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ರಾಜಾಜಿನಗರದ 1ನೇ ಬ್ಲಾಕ್‌ನಲ್ಲಿ 11 ವರ್ಷದ ಬಾಲಕನ ಮೇಲೆ ಸಾಕು ನಾಯಿ ದಾಳಿ ನಡೆಸಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬಾಲಕ ಒದ್ದಾಡುತ್ತಿದ್ದರೂ ಕ್ಯಾರೇ ಎನ್ನದ ಮಾಲೀಕರು
ಮಾರ್ಚ್ 21ರಂದು ಬೆಳಗ್ಗೆ ಬ್ರೆಡ್ ತರಲು ಸೈಕಲ್‌ನಲ್ಲಿ ತೆರಳುತ್ತಿದ್ದ ಬಾಲಕನ ಮೇಲೆ ವಾಕ್‌ಗೆ ಕರೆತಂದ ನಾಯಿಯು ಏಕಾಏಕಿ ದಾಳಿ ಮಾಡಿ ತೊಡೆಗೆ ಕಚ್ಚಿ ಗಾಯಗೊಳಿಸಿದೆ. ಘಟನೆಯಿಂದ ಬೆಚ್ಚಿಬಿದ್ದ ಬಾಲಕ ನೋವಿನಿಂದ ಬಳಲುತ್ತಿದ್ದರೂ, ನಾಯಿ ಮಾಲೀಕರು ಯಾವುದೇ ರೀತಿಯ ಸಹಾಯ ಮಾಡದೇ ಉದಾಸೀನತೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಚಿಕಿತ್ಸೆ ವೆಚ್ಚವನ್ನು ಕುಟುಂಬಸ್ಥರೇ ಭರಿಸಿದ್ದು, ಇದರಿಂದ ಆಕ್ರೋಶಗೊಂಡ ಪೋಷಕರು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ನಾಯಿ ಮಾಲೀಕನಿಗೆ ನೋಟಿಸ್
ಘಟನೆಯಾಗಿ 15 ದಿನಗಳು ಕಳೆದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ನಾಯಿ ಮಾಲೀಕನಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲು ಮುಂದಾಗಿದ್ದಾರೆ. ಬಾಲಕನ ತಾತ ವೇಣು ಮಾಧವ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಹೆಚ್ಚುತ್ತಿರುವ ಇಂತಹ ಘಟನೆಗಳು ಜನರಲ್ಲಿ ಭೀತಿ ಹುಟ್ಟಿಸುತ್ತಿವೆ. ಸಾಕು ಪ್ರಾಣಿಗಳನ್ನು ಹೊರಗೆ ಕರೆದುಕೊಂಡು ಹೋಗುವಾಗ ಮಾಲೀಕರು ಕಡ್ಡಾಯವಾಗಿ ಮುನ್ನೆಚ್ಚರಿಕೆ ವಹಿಸಬೇಕು, ಇಲ್ಲವಾದರೆ ಇಂತಹ ಅಪಾಯಗಳು ಮರುಕಳಿಸುವ ಸಾಧ್ಯತೆ ಇದೆ.
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಹೊಸಪೇಟೆ ಖಾಲಿ ಇರುವ ವಿವಿಧ 82 ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಲು ಬಯಸುವ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈ ನೇಮಕಾತಿಯು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ನಿಯಮಾವಳಿಗಳ ಅನ್ವಯ ನಡೆಯಲಿದೆ.
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು ನಾಲ್ಕು ವರ್ಗದ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವ್ಯವಸ್ಥಾಪಕರು ಅಥವಾ ಪ್ರಥಮ ದರ್ಜೆ ಸಹಾಯಕರ 22 ಹುದ್ದೆಗಳಿಗೆ 44,425 ರಿಂದ 83,700 ರೂ. ರವರೆಗೆ ವೇತನ ನಿಗದಿಯಾಗಿದೆ. ದ್ವಿತೀಯ ದರ್ಜೆ ಸಹಾಯಕರ 28 ಹುದ್ದೆಗಳಿಗೆ 34,100 ರಿಂದ 67,400 ರೂ. ವೇತನ ಶ್ರೇಣಿ ಇದ್ದರೆ, ಒಬ್ಬ ವಾಹನ ಚಾಲಕನ ಹುದ್ದೆಗೆ ರೂ. 31,775 ರಿಂದ 61,300 ಹಾಗೂ 31 ಕಿರಿಯ ಸೇವಕ ಹುದ್ದೆಗಳಿಗೆ ರೂ. 29,600 ರಿಂದ 52,800 ರವರೆಗೆ ಮಾಸಿಕ ವೇತನ ಲಭ್ಯವಿರುತ್ತದೆ.
ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಅರ್ಜಿಗಳನ್ನು ಕೇವಲ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದೆ. ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸುವ ಯಾವುದೇ ಭೌತಿಕ ಅರ್ಜಿಗಳನ್ನು ಬ್ಯಾಂಕ್ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆಸಕ್ತರು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಆದ www.bellarydcc.bank.in ಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಏಪ್ರಿಲ್ 6, 2026 ರಿಂದ ಚಾಲನೆ ನೀಡಲಾಗಿದ್ದು, ಮೇ 6 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ವಯೋಮಿತಿ, ಕನಿಷ್ಠ ವಿದ್ಯಾರ್ಹತೆ, ಮೀಸಲಾತಿ ವರ್ಗೀಕರಣ, ಅರ್ಜಿ ಶುಲ್ಕ ಮತ್ತು ಲಿಖಿತ ಪರೀಕ್ಷೆಯ ವಿವರಗಳನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸವಿಸ್ತಾರವಾದ ಅಧಿಸೂಚನೆಯನ್ನು ಪರಿಶೀಲಿಸಲು ಸೂಚಿಸಲಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮುಂಬೈ, ಏಪ್ರಿಲ್ 07: ಮುಖ್ಯರಸ್ತೆಯಿಂದ ಹೋದರೆ ತುಂಬಾ ಸಮಯವಾಗುತ್ತದೆ ಎಂದು ಶಾರ್ಟ್ಕಟ್ನಲ್ಲಿ ಹೋಗಿ ಕಾರು(Car) ಬಾವಿಗೆ ಬಿದ್ದ ಪರಿಣಾಮ 9 ಮಂದಿ ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ. ತೆಗೆದುಕೊಂಡ ಒಂದೇ ಒಂದು ನಿರ್ಧಾರದಿಂದ 6 ಮಂದಿ ಮಕ್ಕಳು ಸೇರಿ ಕುಟುಂಬದ 9 ಮಂದಿ ಸಾವಿನ ಮನೆ ಕದ ತಟ್ಟಿದ್ದಾರೆ. ದರ್ಗುಡೆ ಕುಟುಂಬದ 9 ಮಂದಿ ದಿಂಡೋರಿಯಲ್ಲಿರುವ ತರಬೇತಿ ಕೇಂದ್ರವು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳಿದ್ದರು.ಅವರಲ್ಲಿ ಸುನಿಲ್ ದರ್ಗುಡೆ (32), ಅವರ ಪತ್ನಿ ರೇಷ್ಮಾ (27), ಮಗಳು ಗುಣವಂತಿ (11), ಸುನಿಲ್ ಅವರ ಅತ್ತಿಗೆ ಆಶಾ (32), ಅವರ ಮಕ್ಕಳಾದ ಶ್ರೇಯಶ್ (11), ಶ್ರಾವಣಿ (11), ಶ್ರದ್ಧಾ (13) ಮತ್ತು ಸೃಷ್ಟಿ (14), ಮತ್ತು ಸಂಬಂಧಿಕರ ಮಗು ಸಮೃದ್ಧಿ (7) ಸೇರಿದ್ದಾರೆ.
ಕಾರ್ಯಕ್ರಮಕ್ಕೆ ಹಾಜರಾದ ನಂತರ, ಒಂಬತ್ತು ಮಂದಿ ಸುಮಾರು 10 ಕಿ.ಮೀ ದೂರದಲ್ಲಿರುವ ತಮ್ಮ ಹಳ್ಳಿಗೆ ತೆರಳಿದರು. ಸಂಜೆ ಸಮಯವಾಗಿತ್ತು, ಹಾಗಾಗಿ ಶಾರ್ಟ್ ಕಟ್ ರಸ್ತೆ ಮೂಲಕ ಹೋಗೋಣವೆಂದು ಕಾರು ಓಡಿಸುತ್ತಿದ್ದ ಸುನಿಲ್ ನಿರ್ಧರಿಸಿದ್ದರು. ಆದರೆ ಅದು ಎಲ್ಲರ ಜೀವಕ್ಕೂ ಕುತ್ತು ತಂದಿತ್ತು.
ಕಾರು ರಸ್ತೆ ಬದಿಯ ಬಾವಿಯ ಗೋಡೆಗೆ ಡಿಕ್ಕಿ ಹೊಡೆದು ಅದರೊಳಗೆ ಉರುಳಿತು. ಆಳವಾದ ಬಾವಿಯಲ್ಲಿ 40 ಅಡಿ ಎತ್ತರದವರೆಗೆ ನೀರು ಇತ್ತು.ಶಬ್ದ ಕೇಳಿದ ಸ್ಥಳೀಯ ನಿವಾಸಿಗಳು ಬಾವಿಗೆ ಧಾವಿಸಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು. ನಿವಾಸಿಗಳು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಲು ಪ್ರಯತ್ನಿಸಿದರು, ಆದರೆ ಕತ್ತಲೆ ಮತ್ತು ಬಾವಿಯ ಆಳವು ಪ್ರಮುಖ ಸವಾಲಾಗಿತ್ತು.
ಅಗ್ನಿಶಾಮಕ ದಳದವರು ವಾಹನವನ್ನು ಪತ್ತೆಹಚ್ಚಲು ದೀಪಗಳನ್ನು ಬಳಸಿದರು. ಈಜುಗಾರರು ಒಳಗೆ ಬಂದರು, ಮತ್ತು ಹಗ್ಗಗಳನ್ನು ಬಳಸಿ ಕಾರನ್ನು ಬಾವಿಯಿಂದ ಹೊರತೆಗೆಯಲಾಯಿತು. ಆದರೆ ಆಗಲೇ ತುಂಬಾ ತಡವಾಗಿತ್ತು. ಕಾರಿನಲ್ಲಿದ್ದವರೆಲ್ಲರೂ ಸತ್ತಿದ್ದರು. ವಾಹನದ ಹೊರಗೆ ಮಕ್ಕಳಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿತ್ತು. ಬಾವಿಯ ಪಕ್ಕದ ರಸ್ತೆಯನ್ನು ಕೆಲವು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು, ಆದರೆ ಬಾವಿಯನ್ನು ಮುಚ್ಚಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಈ ಬಗ್ಗೆ ನಾಗರಿಕ ಅಧಿಕಾರಿಗಳು ಮತ್ತು ಬಾವಿಯ ಮಾಲೀಕರು ವಿವಾದದಲ್ಲಿ ಸಿಲುಕಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನದ ಜ್ಞಾನವಿಲ್ಲದೆ ವೃತ್ತಿಜೀವನದಲ್ಲಿ ಮುನ್ನಡೆಯುವುದು ಅಸಾಧ್ಯ ಎಂಬಂತಾಗಿದೆ. ಇದನ್ನು ಮನಗಂಡ ವಿಶ್ವದ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯವು (Harvard University), ಕೃತಕ ಬುದ್ಧಿಮತ್ತೆ (AI), ಡೇಟಾ ಸೈನ್ಸ್ ಮತ್ತು ಪ್ರೋಗ್ರಾಮಿಂಗ್‌ನಂತಹ ಅತ್ಯಾಧುನಿಕ ವಿಷಯಗಳಲ್ಲಿ ಉಚಿತ ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸಿದೆ.
ನೀವು ಈಗಷ್ಟೇ ಪದವಿ ಮುಗಿಸಿದ್ದರೆ ಅಥವಾ ಅನುಭವಿ ವೃತ್ತಿಪರರಾಗಿರಲಿ, ಈ ಕೋರ್ಸ್‌ಗಳು ನಿಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಉತ್ತಮ ವೇದಿಕೆಯಾಗಿವೆ. ಈ ಕೋರ್ಸ್‌ಗಳ ಪ್ರಮುಖ ವಿವರಗಳು ಇಲ್ಲಿವೆ:
ಡೇಟಾ ಸೈನ್ಸ್ ಮತ್ತು ಮೆಷಿನ್ ಲರ್ನಿಂಗ್ (Data Science & Machine Learning):
ಡೇಟಾ ಸೈನ್ಸ್ ಲೋಕಕ್ಕೆ ಕಾಲಿಡಲು ಬಯಸುವವರಿಗೆ ಇದು ಅಡಿಪಾಯದಂತಿದೆ. ಇದರಲ್ಲಿ ಮೆಷಿನ್ ಲರ್ನಿಂಗ್‌ನ ಮೂಲಭೂತ ಅಂಶಗಳು, ವಿವಿಧ ಅಲ್ಗಾರಿದಮ್‌ಗಳು ಮತ್ತು ಶಿಫಾರಸು ವ್ಯವಸ್ಥೆಗಳನ್ನು (Recommendation Systems) ನಿರ್ಮಿಸುವುದನ್ನು ಕಲಿಸಲಾಗುತ್ತದೆ.
ಅವಧಿ: 8 ವಾರಗಳು (ಸ್ವಯಂ-ವೇಗದ ಕಲಿಕೆ).
ಬಿಸಿನೆಸ್‌ಗಾಗಿ ಕಂಪ್ಯೂಟರ್ ಸೈನ್ಸ್ (Computer Science for Business):
ವ್ಯವಹಾರ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಬಯಸುವವರಿಗಾಗಿ ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಕ್ಲೌಡ್ ಕಂಪ್ಯೂಟಿಂಗ್, ವೆಬ್ ಡೆವಲಪ್‌ಮೆಂಟ್ ಮತ್ತು ಪ್ರೋಗ್ರಾಮಿಂಗ್ ಭಾಷೆಗಳ ಪರಿಚಯವಿರುತ್ತದೆ.
ಲಭ್ಯತೆ: ಏಪ್ರಿಲ್ 1 ರಿಂದ ಡಿಸೆಂಬರ್ 30, 2026 ರವರೆಗೆ.
ತಂತ್ರಜ್ಞಾನದ ಮೂಲಭೂತ ಜ್ಞಾನ (Understanding Technology):
ತಾಂತ್ರಿಕೇತರ ಹಿನ್ನೆಲೆಯುಳ್ಳವರಿಗೆ (Non-technical background) ಇದು ಅತ್ಯುತ್ತಮ ಆಯ್ಕೆ. ಇಂಟರ್ನೆಟ್, ಸೈಬರ್ ಭದ್ರತೆ ಮತ್ತು ಮಲ್ಟಿಮೀಡಿಯಾಗಳ ಕಾರ್ಯವೈಖರಿಯನ್ನು ಇಲ್ಲಿ ಸರಳವಾಗಿ ವಿವರಿಸಲಾಗುತ್ತದೆ.
ಅವಧಿ: 6 ವಾರಗಳು.
ಪೈಥಾನ್ ಮೂಲಕ ಡೇಟಾ ಸೈನ್ಸ್ (Data Science with Python):
ಪೈಥಾನ್ ಪ್ರೋಗ್ರಾಮಿಂಗ್ ಬಳಸಿಕೊಂಡು ಡೇಟಾ ವಿಶ್ಲೇಷಣೆ ಮಾಡುವುದು ಹೇಗೆ ಎಂಬ ಪ್ರಾಯೋಗಿಕ ಜ್ಞಾನವನ್ನು ಈ ಕೋರ್ಸ್ ನೀಡುತ್ತದೆ. ಪ್ರಮುಖ ಲೈಬ್ರರಿಗಳಾದ Pandas, Numpy ಮತ್ತು Matplotlib ಬಳಕೆಯ ಬಗ್ಗೆ ಇಲ್ಲಿ ತರಬೇತಿ ಇರುತ್ತದೆ.
ಅವಧಿ: 8 ವಾರಗಳು.
ವೆಬ್ ಡೆವಲಪ್‌ಮೆಂಟ್ (Web Development):
ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ನಿರ್ಮಾಣದಲ್ಲಿ ಆಸಕ್ತಿ ಇರುವವರಿಗೆ ಇದು ಸೂಕ್ತ. HTML, CSS, JavaScript ಮತ್ತು Django ನಂತಹ ಪ್ರಮುಖ ಪರಿಕರಗಳನ್ನು ಇಲ್ಲಿ ಕಲಿಸಲಾಗುತ್ತದೆ.
ಆರಂಭಿಕರಿಗಾಗಿ ಪ್ರೋಗ್ರಾಮಿಂಗ್ (Programming for Beginners):
ಪ್ರೋಗ್ರಾಮಿಂಗ್‌ನ ಶೂನ್ಯ ಜ್ಞಾನ ಇರುವವರಿಗಾಗಿ ಈ ಕೋರ್ಸ್ ರೂಪಿಸಲಾಗಿದೆ. ವೇರಿಯೇಬಲ್‌ಗಳು, ಲೂಪ್‌ಗಳು ಮತ್ತು ಫಂಕ್ಷನ್‌ಗಳಂತಹ ಮೂಲಭೂತ ವಿಷಯಗಳನ್ನು ಇಲ್ಲಿ ಮೊದಲಿನಿಂದ ಕಲಿಸಲಾಗುತ್ತದೆ.
ಅವಧಿ: 3 ವಾರಗಳು.
ವಿಶೇಷತೆ ಏನು?
ಈ ಎಲ್ಲಾ ಕೋರ್ಸ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಕಲಿಯುವವರು ತಮ್ಮ ಅನುಕೂಲಕ್ಕೆ ತಕ್ಕಂತೆ (Self-paced) ಸಮಯವನ್ನು ನಿಗದಿಪಡಿಸಿಕೊಳ್ಳಬಹುದು. ಜಾಗತಿಕ ಮಟ್ಟದ ಶಿಕ್ಷಣವನ್ನು ಉಚಿತವಾಗಿ ಪಡೆಯಲು ಇದು ಒಂದು ಸುವರ್ಣ ಅವಕಾಶವಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 07: ಪೊಲೀಸರ ಹದ್ದಿನ ಕಣ್ಣಿನ ನಡುವೆಯೂ ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಮುಂದುವರಿದಿದೆ. ಖಾಕಿ ಚಾಪೆ ಕೆಳಗೆ ತೂರಿದರೆ ದಂಧೆಕೋರರು ರಂಗೋಲಿ ಕೆಳಗೆ ನುಗ್ಗುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಡ್ರಗ್ಸ್ ಪೆಡ್ಲರ್ಗಳಿಗೆ ಬೆಂಗಳೂರು ಪೊಲೀಸರು ಭರ್ಜರಿ ಶಾಕ್ ಕೊಟ್ಟಿದ್ದಾರೆ. 12 ವರ್ಷಗಳಿಂದ ಡ್ರಗ್ಸ್ ಪೆಡ್ಲಿಂಗ್ ನಡೆಸುತ್ತಿದ್ದ ಆರೋಪಿ ಸೇರಿ ವಿವಿಧ ಪ್ರಕರಣಗಲ್ಲಿ ಒಟ್ಟು ಐವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ನೈಜೀರಿಯಾ ಪ್ರಜೆಯ ಬಂಧನ
ಭಾರತೀಯ ಮಹಿಳೆ ಮದುವೆಯಾಗಿ 12 ವರ್ಷಗಳಿಂದ ಡ್ರಗ್ಸ್ ಪೆಡ್ಲಿಂಗ್ ನಡೆಸುತ್ತಿದ್ದ ನೈಜೀರಿಯಾ ಪ್ರಜೆ ಇಮ್ಯಾನ್ಯುಯಲ್ ಎಂಬಾತನನ್ನು ಬೆಂಗಳೂರಿನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. 2014ರಲ್ಲಿ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಇಮ್ಯಾನ್ಯುಯಲ್, ಬೆಂಗಳೂರಿಗೆ ಬಂದು ಇಲ್ಲಿಯ ಮಹಿಳೆಯನ್ನೇ ಮದುವೆ ಕೂಡ ಆಗಿದ್ದ. 4-5 ಮನೆಗಳನ್ನು ಬಾಡಿಗೆ ಪಡೆದು ಡ್ರಗ್ ಪೆಡ್ಲಿಂಗ್ ನಡೆಸ್ತಿದ್ದ ಈತ, ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಸಬ್ ಪೆಡ್ಲರ್ಸ್ಗಳಿಗೆ ಡ್ರಗ್ ಮಾರಾಟ ಮಾಡ್ತಿದ್ದ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಹೆಬ್ಬಗೋಡಿ ಪೊಲೀಸರು, ಆರೋಪಿಯನ್ನು ಬಂಧಿಸಿ MDMA, ಎಲ್ಎಸ್ಡಿ, ವಿವಿಧ ಮಾದರಿಯ ಸಿಂಥೆಟಿಕ್ ಡ್ರಗ್ಸ್ ಸೇರಿ 14 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಸೀಜ್ ಮಾಡಿದ್ದಾರೆ. ಡ್ರಗ್ಸ್ ಸೀಜ್ ಪ್ರಕರಣದಲ್ಲಿ ಇನ್ನುಳಿದವರಿಗಾಗಿ ಶೋಧ ಮುಂದುವರಿದಿದೆ.
ಯಲಹಂಕ ಉಪನಗರ ಪೊಲೀಸರು ಗಾಂಜಾ ಪೆಡ್ಲರ್ಗಳಾದ ಕೇರಳದ ಆದೇಶ್(19), ಮೊಹಮ್ಮದ್ ನಿಶಾದ್(24) ಎಂಬವರನ್ನು ಬಂಧಿಸಿದ್ದಾರೆ. ಮೂರು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಒಡಿಶಾದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ 10 ಲಕ್ಷ 50 ಸಾವಿರ ಮೌಲ್ಯದ 21 ಕೆಜಿ ತೂಕದ ಗಾಂಜಾ ಜಪ್ತಿ ಮಾಡಲಾಗಿದ್ದು, ಸದ್ಯ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
ಆಟೋ ಡ್ರೈವಿಂಗ್ ನೆಪದಲ್ಲಿ ಗಾಂಜಾ ಪೆಡ್ಲಿಂಗ್
ಡೆಲಿವರಿ ಬಾಯ್, ಆಟೋ ಡ್ರೈವಿಂಗ್ ನೆಪದಲ್ಲಿ ಗಾಂಜಾ ಪೆಡ್ಲಿಂಗ್ ಮಾಡುತ್ತಿದ್ದ ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಮತ್ತು ಪ್ರೇಮ್ ಬಂಧಿತರಾಗಿದ್ದು, ಇವರು ತಮಿಳುನಾಡಿನಿಂದ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದರು. ರಾಹುಲ್ ಡೆಲಿವರಿ ಬಾಯ್ ಆಗಿದ್ರೆ, ಪ್ರೇಮ್ ಆಟೋ ಡ್ರೈವರ್ ಆಗಿದ್ದ. ಬಂಧಿತರಿಂದ 3 ಲಕ್ಷ ಮೌಲ್ಯದ 7 ಕೆಜಿ 500 ಗ್ರಾಂ ಗಾಂಜಾ ಸೀಜ್ ಮಾಡಲಾಗಿದೆ.
‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾದ ಬಳಿಕ ಅಲ್ಲು ಅರ್ಜುನ್ (Allu Arjun) ಎದುರು ಹಲವಾರು ಅವಕಾಶಗಳು, ಆಯ್ಕೆಗಳು ಇದ್ದವು ಆದರೆ ಅಲ್ಲು ಅರ್ಜುನ್ ಅವರು ತಮಿಳಿನ ಅಟ್ಲಿ ಜೊತೆಗೆ ಸಿನಿಮಾ ಮಾಡಲು ಮುಂದಾದರು. ಆರಂಭದಲ್ಲಿ ಸ್ವತಃ ಅಲ್ಲು ಅರ್ಜುನ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ನಿರ್ಣಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಅಟ್ಲಿ, ಅಲ್ಲು ಅರ್ಜುನ್ಗಾಗಿ ಹಾಲಿವುಡ್ ಮಾದರಿ ಕತೆ ಹೆಣೆದಿದ್ದು, ಸಿನಿಮಾಕ್ಕಾಗಿ ಹಾಲಿವುಡ್ನ ಹಲವು ಖ್ಯಾತನಾಮ ವಿಎಫ್ಎಕ್ಸ್ ಸಂಸ್ಥೆಗಳೊಟ್ಟಿಗೆ ಕೈಜೋಡಿಸಿದ್ದು, ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟ-ನಟಿಯರನ್ನು ಸಿನಿಮಾ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಸಿನಿಮಾದ ಅಪ್ಡೇಟ್ ಒಂದು ಹೊರಬಿದ್ದಿದ್ದು, ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಸಿನಿಮಾದ ಟೈಟಲ್ ಪೋಸ್ಟರ್ ನಾಳೆ ಅಂದರೆ ಏಪ್ರಿಲ್ 08ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಪೋಸ್ಟರ್ ಬಿಡುಗಡೆ ಸುದ್ದಿ ನೀಡುವ ಸಲುವಾಗಿ ಅಲ್ಲು ಅರ್ಜುನ್ ಸೇರಿದಂತೆ ಚಿತ್ರತಂಡ ಇಂದು (ಏಪ್ರಿಲ್ 07) ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ಪೋಸ್ಟರ್ನಲ್ಲಿ ರಾಕ್ಷಸನ ಬೃಹತ್ ಕೈ ಒಂದು ಕಾಣುತ್ತಿದೆ. ದೈಥ್ಯ ರಾಕ್ಷಸನ ಮುಂಗೈನ ಚಿತ್ರ ಇದಾಗಿದ್ದು, ಬೆರಳ ತುದಿಗಿರುವ ಚೂಪಾದ ದೊಡ್ಡ ಉಗುರುಗಳು ಭೀತಿ ಮೂಡಿಸುವಂತಿವೆ.
ಅಟ್ಲಿ ಮತ್ತು ಅಲ್ಲು ಅರ್ಜುನ್ ಅವರ ಈ ಸಿನಿಮಾ ಹಾಲಿವುಡ್ನ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯ ಕತೆಯನ್ನು ಹೊಂದಿರಲಿದೆ. ಸಿನಿಮಾದ ಕತೆ ನಡೆಯುವುದು ಭೂಮಿಯಲ್ಲಿ ಅಲ್ಲವಂತೆ ಬೇರೆ ಯಾವುದೋ ಲೋಕದಲ್ಲಂತೆ. ಅಲ್ಲಿ ಅತ್ಯಾಧುನಿಕ ವಾಹನಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಚಿತ್ರ, ವಿಚಿತ್ರ ಆಕಾರದ ದೈತ್ಯರು, ಪ್ರಾಣಿಗಳು ಇರಲಿವೆ. ಇವುಗಳ ನಡುವೆ ಮನುಷ್ಯರು ಅಸ್ಥಿತ್ವಕ್ಕಾಗಿ ಹೋರಾಡುವ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆಯಂತೆ.
ಸಿನಿಮಾಕ್ಕಾಗಿ ಅಟ್ಲಿ, ಹಾಲಿವುಡ್ನ ಹಲವು ಪ್ರಸಿದ್ಧ ವಿಎಫ್ಎಕ್ಸ್ ಸಂಸ್ಥೆಗಳು, ಜನಪ್ರಿಯ ಸ್ಟುಡಿಯೋಗಳ ಜೊತೆಗೆ ಕೈಜೋಡಿಸಿದ್ದಾರೆ. ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಸಹ ಇದ್ದು, ಈ ಸಿನಿಮಾನಲ್ಲಿ ಅವರು ವಿಲನ್ ಆಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಸನ್ ನೆಟ್ವರ್ಕ್ಸ್ನ ಕಲಾನಿಧಿ ಮಾರನ್ ಅವರು ಬಂಡವಾಳ ಹೂಡಿದ್ದಾರೆ. ಇದು ಅವರ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ.
ನವದೆಹಲಿ, ಏಪ್ರಿಲ್ 7: ಎಲ್ಪಿಜಿ ಬಿಕ್ಕಟ್ಟಿನಿಂದ ಬಹಳ ಕಷ್ಟ ಎದುರಿಸುತ್ತಿರುವ ವರ್ಗಗಳಲ್ಲಿ ವಲಸಿಗ ಕಾರ್ಮಿಕರಿದ್ದಾರೆ (Migrant workers). ಇವರಿಗೆ ನಿರಾಳ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಣ್ಣ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯನ್ನು ಹೆಚ್ಚಿಸಿದೆ. ವರದಿಗಳ ಪ್ರಕಾರ ಸರ್ಕಾರವು ಎಲ್ಲಾ ರಾಜ್ಯಗಳಿಗೂ 5 ಕಿಲೋ ತೂಕದ ಫ್ರೀ ಟ್ರೇಡ್ ಎಲ್ಪಿಜಿ ಸಿಲಿಂಡರ್ಗಳ (5 kg free trade LPG cylinder) ಹಂಚಿಕೆಯನ್ನು ಎರಡು ಪಟ್ಟು ಹೆಚ್ಚಿಸಿದೆ. ಇದರಿಂದ ಈ ಸಣ್ಣ ಗ್ಯಾಸ್ ಸಿಲಿಂಡರ್ ಲಭ್ಯತೆ ದ್ವಿಗುಣಗೊಂಡಿದೆ.
ವಲಸಿಗ ಕಾರ್ಮಿಕರಿಗೆ ವಿತರಿಸಲು ಲಭ್ಯ ಇರುವ ನಿತ್ಯದ ಐದು ಕಿಲೋ ಮುಕ್ತ ವ್ಯಾಪಾರ ಎಲ್ಪಿಜಿ ಸಿಲಿಂಡರ್ಗಳನ್ನು ಎರಡು ಪಟ್ಟು ಹೆಚ್ಚಿಸಲಾಗುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸೋಮವಾರ ಆದೇಶ ಹೊರಡಿಸಿದೆ.
ಮಾರ್ಚ್ 2 ಮತ್ತು 3ರಂದು ನಿತ್ಯ ಸರಾಸರಿ ವಿತರಿಸಲಾಗುತ್ತಿದ್ದ ಸಿಲಿಂಡರ್ಗಳ ಸಂಖ್ಯೆಯನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಹಿಂದಿನ ಆದೇಶದಲ್ಲಿ 5 ಕಿಲೋ ಎಲ್ಪಿಜಿ ಸಿಲಿಂಡರ್ ಹಂಚಿಕೆಯನ್ನು ಶೇ. 20ಕ್ಕೆ ಮಿತಿಗೊಳಿಸಲಾಗಿತ್ತು. ಈಗ ಹೊಸ ಆದೇಶದಲ್ಲಿ ಇದನ್ನು ಹೆಚ್ಚಿಸಲಾಗಿದೆ.
ಏನಿದು ಫ್ರೀ ಟ್ರೇಡ್ ಎಲ್ಪಿಜಿ ಸಿಲಿಂಡರ್?
ಕೆಲಸದ ನಿಮಿತ್ತ ಬೇರೆ ಬೇರೆ ಊರುಗಳಿಗೆ ವಲಸೆ ಹೋಗಿರುವ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳು ಇಲ್ಲದ, ಹಾಗೂ ಕಡಿಮೆ ಗ್ಯಾಸ್ ಅವಶ್ಯಕತೆ ಇರುವ ಕಾರ್ಮಿಕರು, ವಿದ್ಯಾರ್ಥಿಗಳು, ಉದ್ಯೋಗಸ್ಥರು ಮೊದಲಾದವರಿಗೆ ಗ್ಯಾಸ್ ಪಡೆಯಲು ಅನುಕೂಲವಾಗಲೆಂದು ಸರ್ಕಾರ ಇತ್ತೀಚೆಗೆ ಸಣ್ಣ ಸಣ್ಣ ಎಲ್ಪಿಜಿ ಸಿಲಿಂಡರ್ಗಳನ್ನು ಬಿಡುಗಡೆ ಮಾಡಿದೆ.
ಆಧಾರ್ ಇತ್ಯಾದಿ ದಾಖಲೆ ನೀಡಿ ಈ ಸಿಲಿಂಡರ್ಗಳನ್ನು ಪಡೆಯಬಹುದು. ಸೆಕ್ಯೂರಿಟಿ ಡೆಪಾಸಿಟ್ ಇಡುವುದಾಗಲೀ, ಡಿಸ್ಟ್ರಿಬ್ಯೂಟರ್ ಏಜೆನ್ಸಿಯಲ್ಲಿ ನೊಂದಾಯಿಸುವುದಾಗಲೀ ಅವಶ್ಯಕತೆ ಇರುವುದಿಲ್ಲ. 2 ಕಿಲೋ, 5 ಕಿಲೋ ಮತ್ತು 10 ಕಿಲೋ ತೂಕದ ಫೈಬರ್ ಕಾಂಪೊಸಿಟ್ ಸಿಲಿಂಡರ್ಗಳನ್ನು ವಿತರಿಸುತ್ತಿದೆ.
ಸದ್ಯ ಐದು ಕಿಲೋ ಎಲ್ಪಿಜಿ ಸಿಲಿಂಡರ್ಗಳ ಹಂಚಿಕೆಯನ್ನು ಎರಡು ಪಟ್ಟು ಹೆಚ್ಚಿಸುತ್ತಿರುವುದು ವಲಸಿಗ ಕಾರ್ಮಿಕರನ್ನು ಗುರಿಯಾಗಿಸಿ ಮಾತ್ರವೇ. ಎಲ್ಪಿಜಿ ಸಿಗದ ಹಿನ್ನೆಲೆಯಲ್ಲಿ ದೇಶಾದ್ಯಂತ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸ್ ಹೋಗುತ್ತಿರುವ ಟ್ರೆಂಡ್ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿರಬಹುದು. ಈ ಹೆಚ್ಚುವರಿ ಸಿಲಿಂಡರ್ ಹಂಚಿಕೆಯು ವಲಸೆ ಕಾರ್ಮಿಕರಿಗೆ ಮಾತ್ರವೇ ಮಾಡಲಾಗಿದೆ.
ಬೆಂಗಳೂರು, ಏಪ್ರಿಲ್ 7: ಇಸ್ರೇಲ್, ಇರಾನ್, ಅಮೆರಿಕ ಸೇನಾ ಸಂಘರ್ಷದ ನಂತರ ಉಂಟಾದ ಗ್ಯಾಸ್ ಕೊರತೆಯಿಂದಾಗಿ, ವಾಣಿಜ್ಯ ಮತ್ತು ಗೃಹಬಳಕೆಯ ಇಂಡಕ್ಷನ್ ಸ್ಟವ್‌ಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಹಿಂದೆ ದಿನಕ್ಕೆ ಕೇವಲ 40 ವಾಣಿಜ್ಯ ಇಂಡಕ್ಷನ್ ಸ್ಟವ್‌ಗಳಿಗೆ ಬೇಡಿಕೆ ಇದ್ದರೆ, ಈಗ ಅದು 200ಕ್ಕೆ ಏರಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಸ್ಟಾರ್ ಹೋಟೆಲ್‌ಗಳು ಗ್ಯಾಸ್‌ಗೆ ಪರ್ಯಾಯವಾಗಿ ವಿದ್ಯುತ್ ಚಾಲಿತ ಇಂಡಕ್ಷನ್ ಒಲೆಗಳತ್ತ ಮುಖ ಮಾಡಿವೆ. ಪೀಣ್ಯ ಇಂಡಸ್ಟ್ರಿಯಲ್ಲಿ ತಯಾರಕರು ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಕಾರ್ಮಿಕರ ಕೊರತೆಯ ನಡುವೆಯೂ ಉತ್ಪಾದನೆಯನ್ನು ಹೆಚ್ಚಿಸಲು ಶಿಫ್ಟ್‌ಗಳನ್ನು ವಿಸ್ತರಿಸಲಾಗುತ್ತಿದೆ. ಗೃಹಬಳಕೆದಾರರಲ್ಲಿಯೂ ಇಂಡಕ್ಷನ್ ಸ್ಟವ್‌ಗಳ ಮಾರಾಟದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಹಿಂದೆ ದಿನಕ್ಕೆ ಒಂದು ಅಥವಾ ಎರಡು ಸ್ಟವ್‌ಗಳು ಮಾರಾಟವಾಗುತ್ತಿದ್ದರೆ, ಈಗ ಅದು 15-20ಕ್ಕೆ ಏರಿದೆ. ಪೂರೈಕೆ ಕೊರತೆಯಿಂದಾಗಿ ಗ್ರಾಹಕರಿಗೆ ಬೇಕಾದ ಎಲ್ಲಾ ಮಾಡೆಲ್‌ಗಳು ಲಭ್ಯವಾಗುತ್ತಿಲ್ಲ. ಕಂಪನಿಗಳಿಂದ ಸ್ಟಾಕ್ ಪಡೆಯುವುದು ಕೂಡ ಮಾರಾಟಗಾರರಿಗೆ ಸವಾಲಾಗಿದೆ.
ವರದಿ: ಈರಣ್ಣ, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಹಿಂದೂ ಧರ್ಮದಲ್ಲಿ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನವನ್ನೇ ನಾವು ‘ಅಕ್ಷಯ ತೃತೀಯ’ ಎಂದು ಆಚರಿಸುತ್ತೇವೆ. ಈ ದಿನದ ವಿಶೇಷತೆಯೆಂದರೆ, ಇದು ‘ಸ್ವಯಂ ಸಿದ್ಧ ಮುಹೂರ್ತ’. ಅಂದರೆ, ಯಾವುದೇ ಶುಭ ಕಾರ್ಯವನ್ನು ಮಾಡಲು ಈ ದಿನ ಪ್ರತ್ಯೇಕವಾಗಿ ಪಂಚಾಂಗ ನೋಡಿ ಶುಭ ಸಮಯ ಹುಡುಕುವ ಅಗತ್ಯವಿಲ್ಲ. ಅಕ್ಷಯ ತೃತೀಯದಂದು ಮಾಡುವ ದಾನ, ಪೂಜೆ ಮತ್ತು ಹೂಡಿಕೆಗಳು ಅಕ್ಷಯವಾಗಿ (ಎಂದೂ ಮುಗಿಯದ) ಇರುತ್ತವೆ ಎಂಬುದು ಭಕ್ತರ ನಂಬಿಕೆ.
ಏಪ್ರಿಲ್ 19 ರಂದು ಅಕ್ಷಯ ತೃತೀಯ: ಈ ವರ್ಷದ ವಿಶೇಷತೆ ಏನು?
ಈ ವರ್ಷ ಏಪ್ರಿಲ್ 19 ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದ್ದು, ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಈ ದಿನ ಅತ್ಯಂತ ವಿಶೇಷವಾಗಿರಲಿದೆ. ಈ ದಿನ ಆಕಾಶದಲ್ಲಿ ‘ಗಜಕೇಸರಿ ರಾಜಯೋಗ’ ಎಂಬ ಶಕ್ತಿಯುತ ಯೋಗವು ನಿರ್ಮಾಣವಾಗುತ್ತಿದೆ. ಚಂದ್ರ ಮತ್ತು ಗುರು ಗ್ರಹಗಳು ಪರಸ್ಪರ ಕೇಂದ್ರ ಸ್ಥಾನದಲ್ಲಿದ್ದಾಗ ಈ ಯೋಗವು ಸೃಷ್ಟಿಯಾಗುತ್ತದೆ. ಇದನ್ನು ರಾಜಯೋಗವೆಂದೇ ಕರೆಯಲಾಗುತ್ತಿದ್ದು, ಇದು ಕೆಲವು ರಾಶಿಯವರ ಬದುಕಿನಲ್ಲಿ ಬಂಪರ್ ಲಾಭಗಳನ್ನು ತರಲಿದೆ.
ಈ 3 ರಾಶಿಯವರಿಗೆ ಶುಕ್ರದೆಸೆ ಆರಂಭ:
ಮೇಷ ರಾಶಿ:
ಮೇಷ ರಾಶಿಯವರಿಗೆ ಈ ವರ್ಷದ ಅಕ್ಷಯ ತೃತೀಯವು ಒಂದು ವರದಾನವೇ ಸರಿ. ಗಜಕೇಸರಿ ಯೋಗದ ಪ್ರಭಾವದಿಂದ ನೀವು ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ. ಹೊಸ ಉದ್ಯಮ ಅಥವಾ ವ್ಯಾಪಾರವನ್ನು ಪ್ರಾರಂಭಿಸಲು ಇದು ಸುವರ್ಣ ಕಾಲ. ಅನಿರೀಕ್ಷಿತವಾಗಿ ಆರ್ಥಿಕ ಲಾಭಗಳು ಉಂಟಾಗುವ ಸಾಧ್ಯತೆಯಿದ್ದು, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ತುಲಾ ರಾಶಿ:
ತುಲಾ ರಾಶಿಯವರ ಜೀವನದಲ್ಲಿ ಈ ರಾಜಯೋಗವು ಸುಖ-ಸಂತೋಷವನ್ನು ತುಂಬಲಿದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಮಯವಿದು. ಹೊಸ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಅಥವಾ ಕೆಲಸ ಬದಲಾಯಿಸಲು ಇಚ್ಛಿಸುವವರಿಗೆ ಉತ್ತಮ ಅವಕಾಶಗಳು ಕೈಬೀಸಿ ಕರೆಯಲಿವೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಆರ್ಥಿಕ ಸ್ಥಿತಿ ಸದೃಢವಾಗಲಿದೆ.
ಧನು ರಾಶಿಯ ಅಧಿಪತಿ ಗುರುವಾಗಿರುವುದರಿಂದ, ಗಜಕೇಸರಿ ಯೋಗದ ಗರಿಷ್ಠ ಲಾಭ ಇವರಿಗೆ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಬೌದ್ಧಿಕ ಸಾಮರ್ಥ್ಯ ಹೆಚ್ಚಾಗಲಿದ್ದು, ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸುವಿರಿ. ಹಣಕಾಸಿನ ಹರಿವು ಹೆಚ್ಚಾಗುವುದರಿಂದ ಹಳೆಯ ಸಾಲಗಳಿಂದ ಮುಕ್ತಿ ಪಡೆಯುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಇದು ನಿಮಗೆ ಸಮೃದ್ಧಿಯ ಕಾಲ.
ಲಕ್ಷ್ಮಿ ಪೂಜೆ ಮತ್ತು ಹೂಡಿಕೆಯ ಮಹತ್ವ:
ಅಕ್ಷಯ ತೃತೀಯದಂದು ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ. ಜನರು ಈ ದಿನ ಚಿನ್ನವನ್ನು ಖರೀದಿಸಲು ಮುಗಿಬೀಳುತ್ತಾರೆ, ಏಕೆಂದರೆ ಇದು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಇದರೊಂದಿಗೆ ಬಡವರಿಗೆ ಅನ್ನದಾನ ಅಥವಾ ವಸ್ತ್ರದಾನ ಮಾಡುವುದರಿಂದ ಶಾಶ್ವತ ಪುಣ್ಯ ನಿಮ್ಮದಾಗಲಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 07: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು (ಏಪ್ರಿಲ್ 07)ರಂದು ಪ್ರಕಟವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಫಲಿತಾಂಶ ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಪ್ರಕಟಣೆಯನ್ನು ಮುಂದೂಡಲಾಗಿರುವ ಬಗ್ಗೆ ಮಾಹಿತಿ ಸಿಕ್ಕ ಕಾರಣ, ಫಲಿತಾಂಶದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ವಿದ್ಯಾರ್ಥಿಗಳು ನಿರಾಸೆಗೊಂಡಿದ್ದರು. ಈ ನಡುವೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಏಪ್ರಿಲ್ 9ರಂದು ದ್ವಿತೀಯ ಪಿಯಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ದೊರೆತಿದೆ.
ಫೆಬ್ರವರಿ 28 ರಿಂದ ಮಾರ್ಚ್ 17ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ರಾಜ್ಯದಲ್ಲಿ ನಡೆದಿದ್ದು, 7,10,363ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಕ್ಸಾಂ ಬರೆದಿದ್ದಾರೆ. ಇಲ್ಲಿಯವರೆಗೆ ಇದ್ದ ಮಾಹಿತಿಯ ಪ್ರಕಾರ ಏಪ್ರಿಲ್ 7ರಂದು ಅಂದರೆ ಇಂದೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ಅಧಿಕೃತ ಪ್ರಕಟಣೆ ಹೊರಬಾರದ ಕಾರಣ ಅನಿಶ್ಚಿತತೆ ಉಂಟಾದ ಪರಿಣಾಮ ವಿದ್ಯಾರ್ಥಿಗಳಲ್ಲಿಯೂ ಗೊಂದಲ ಮೂಡಿತ್ತು. ಈ ನಡುವೆ ಫಲಿತಾಂಶ ಪ್ರಕಟವಾಗಲಿರುವ ದಿನಾಂಕದ ಬಗ್ಗೆ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ. ಇನ್ನು ಪ್ರಕಟವಾಗಲಿರುವ ಫಲಿತಾಂಶ ಆನ್‌ಲೈನ್‌ನಲ್ಲಿ ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕ (Date of Birth) ನಮೂದಿಸಿ ಮಾರ್ಕ್ಸ್ ಅನ್ನು ಪರಿಶೀಲಿಸಬಹುದಾಗಿದೆ.
ರಾಜ್ಯದಲ್ಲಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದ್ದು, ಏಪ್ರಿಲ್ 9ರಂದು ಮತದಾನ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಫಲಿತಾಂಶವನ್ನು ಶಿಕ್ಷಣ ಸಚಿವರ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಕಟಿಸಲು ಕೆಲ ಅಡ್ಡಿಗಳಿವೆ. ನೀತಿ ಸಂಹಿತೆ ಇರುವುದರಿಂದ ಸಚಿವರು ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲು ಚುನಾವಣಾ ಆಯೋಗದಿಂದ ಅನುಮತಿ ಪಡೆಯಬೇಕಿರುವ ಕಾರಣ ಫಲಿತಾಂಶ ಪ್ರಕಟ ವಿಳಂಬವಾಗಿದೆ.