ಅಂಟಾರ್ಟಿಕಾದಿಂದ ರೋಮ್​ ವರೆಗೆ ‘ವಾರಣಾಸಿ’ ಚಿತ್ರೀಕರಣ ನಡೆದಿದ್ದು ಎಲ್ಲೆಲ್ಲಿ? – Kannada News | In which contries did Varanasi movie has been shot till now

ರಾಜಮೌಳಿ (Rajamouli) ನಿರ್ದೇಶನದ ‘ವಾರಣಾಸಿ’ ವಿಶ್ವ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾದ ಕ್ಯಾನ್ವಾಸ್ ಬಲು ವಿಶಾಲ. ಇದೊಂದು ‘ಆಕ್ಷನ್-ಅಡ್ವೇಂಚರ್’ ಕತೆ ಹೊಂದಿರುವ ಸಿನಿಮಾ ಆಗಿದ್ದು, ಸಿನಿಮಾಕ್ಕಾಗಿ ವಿಶ್ವದ ಹಲವು ಪ್ರಮುಖ ದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಬಗ್ಗೆ ನಿರ್ದೇಶಕ ರಾಜಮೌಳಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸಿನಿಮಾದ ಕಥೆಯು ಖಂಡಗಳನ್ನು ದಾಟಿ ಶತಮಾನಗಳನ್ನು ದಾಟಿ ಸಾಗುತ್ತದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾದ ಹೆಸರಿನಂತೆ ಕತೆ ಪ್ರಾರಂಭವಾಗುವುದು ‘ವಾರಣಾಸಿ’ಯಲ್ಲಿ ಆದರೆ ಅದು ಅಲ್ಲಿಂದ ಹಲವು ದೇಶಗಳನ್ನು ದಾಟಿ ಸಾಗಿ ಕೊನೆಗೆ ಮತ್ತೆ ವಾರಣಾಸಿಗೆ ಬರುತ್ತದೆಯಂತೆ. ಬೃಹತ್ ಕ್ಯಾನ್ವಾಸ್ ಹೊಂದಿರುವ ಈ ಸಿನಿಮಾವನ್ನು ರಾಜಮೌಳಿ ಅವರು ಹಲವು ದೇಶಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ಅವುಗಳ ಬಗ್ಗೆ ಸ್ಥೂಲವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಪವಿತ್ರ ನಗರ ವಾರಣಾಸಿಯಿಂದ ಆರಂಭವಾಗಿ ಅಂಟಾರ್ಕ್ಟಿಕಾಕ್ಕೆ ಹೋಗಿ, ಅಲ್ಲಿಂದ ಆಫ್ರಿಕಾ, ನಂತರ ಕಾಲದಲ್ಲಿ ಹಿಂದೆ ಸರಿದು ಪ್ರಾಚೀನ ರೋಮ್‌ಗೆ ಪ್ರಯಾಣಿಸಿ, ಅಂತಿಮವಾಗಿ ಎಲ್ಲವೂ ಎಲ್ಲಿ ಆರಂಭವಾಯಿತೋ ಅಲ್ಲಿಗೆ ಮರಳುತ್ತದೆ ಎಂದು ರಾಜಮೌಳಿ ಇತ್ತೀಚೆಗಿನ ಹೇಳಿದ್ದಾರೆ. ‘ನಾವು ಒಂದು ಟೀಸರ್ ಬಿಡುಗಡೆ ಮಾಡಿದ್ದೇವೆ, ಆದರೆ ನಾನು ಕಥೆಯನ್ನು ಹೆಚ್ಚು ಬಹಿರಂಗಪಡಿಸಲು ಸಾಧ್ಯವಿಲ್ಲ, ಬದಲಿಗೆ, ಕಥೆಯನ್ನು ಬಿಟ್ಟುಕೊಡದೆ ಪ್ರೇಕ್ಷಕರು ಯಾವ ರೀತಿಯ ಅನುಭವವನ್ನು ನಿರೀಕ್ಷಿಸಬಹುದು ಎಂಬುದನ್ನು ತೋರಿಸುವ ವೀಡಿಯೊವನ್ನು ನಾವು ಮಾಡಿದ್ದೇವೆ’ ಎಂದು ರಾಜಮೌಳಿ ಯುರೋಪಿಯನ್ ಮ್ಯಾಗಜೀನ್ ‘ತ್ಸೌನಾಮಿ’ ಜೊತೆಗಿನ ಸಂಭಾಷಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:‘ವಾರಣಾಸಿ’: ಪ್ರಿಯಾಂಕಾ ಚೋಪ್ರಾ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ರಾಜಮೌಳಿ

ಚಿತ್ರೀಕರಣದ ಶೇಕಡಾ 80 ರಷ್ಟು ಭಾಗ ಪೂರ್ಣಗೊಂಡಿದ್ದು, ಸಣ್ಣಪುಟ್ಟ ದೃಶ್ಯಗಳು ಮಾತ್ರ ಬಾಕಿ ಇವೆ, ಎಲ್ಲಾ ಪ್ರಮುಖ ಆಕ್ಷನ್ ದೃಶ್ಯಗಳನ್ನು ಈಗಾಗಲೇ ಚಿತ್ರೀಕರಿಸಲಾಗಿದೆ ಎಂದು ರಾಜಮೌಳಿ ಹೇಳಿದ್ದಾರೆ. ‘ಆರ್‌ಆರ್‌ಆರ್’ ಮುಗಿದ ನಂತರ ನಾವು 2022 ರಲ್ಲಿ ಕಥೆಯ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆವು. ಇದು ಸುಮಾರು ನಾಲ್ಕುವರೆ ವರ್ಷಗಳಿಂದ ಸಾಗುತ್ತಿದೆ, ದಸರಾ ಹಬ್ಬದೊಳಗೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಗುರಿಯೊಂದಿಗೆ ಉಳಿದ ಶೇಕಡಾ 20 ರಷ್ಟು ಚಿತ್ರೀಕರಣವನ್ನು ಹೈದರಾಬಾದ್‌ನಲ್ಲಿ ನಡೆಸಲಾಗುವುದು ‘ವಾರಣಾಸಿ’ ಸಂಪೂರ್ಣವಾಗಿ ಐಮ್ಯಾಕ್ಸ್ (IMAX) ತಂತ್ರಜ್ಞಾನದಲ್ಲಿ ಚಿತ್ರೀಕರಿಸಲಾದ ಮೊದಲ ಇಂಗ್ಲಿಷ್ ಅಲ್ಲದ ಚಿತ್ರ ಎಂದಿದ್ದಾರೆ.

ಅಂತಾರಾಷ್ಟ್ರೀಯ ಮಾಧ್ಯಮಗಳು ‘ವಾರಣಾಸಿ’ ಚಿತ್ರವನ್ನು ‘ಇಂಡಿಯಾನ ಜೋನ್ಸ್’ ಮತ್ತು ‘ಜೇಮ್ಸ್ ಬಾಂಡ್’ ಫ್ರಾಂಚೈಸಿಗಳ ಮಿಶ್ರಣ ಎಂದು ಬಣ್ಣಿಸಿವೆ. ಮುಂಚೆ ‘ಇನ್ವರ್ಸ್’ ಜೊತೆಗಿನ ಸಂದರ್ಶನದಲ್ಲಿ ಎಸ್​ಎಸ್ ರಾಜಮೌಳಿ ಅವರು ಕಥೆಯ ತಿರುಳಾಗಿರುವ ತಂದೆ-ಮಗನ ಸಂಬಂಧದ ಬಗ್ಗೆ ಮಾತನಾಡಿದ್ದರು. ಮಹೇಶ್ ಬಾಬು ಅವರು ಸಾಮಾನ್ಯ ಮನುಷ್ಯ ರುದ್ರ ಮತ್ತು ಭಗವಾನ್ ರಾಮನಾಗಿ ದ್ವಿಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ‘ನೀವು ರಾಮನ ಸಂಪೂರ್ಣ ಕಥೆಯನ್ನು ಅರ್ಥಮಾಡಿಕೊಳ್ಳದೇ ಇರಬಹುದು, ಪಾತ್ರಗಳ ಭಾವನೆಗಳನ್ನು ನೀವು ಅರ್ಥಮಾಡಿಕೊಂಡರೆ, ಅಲ್ಲಿ ಏನು ನಡೆಯುತ್ತಿದೆ ಎಂಬುದು ನಿಮಗೆ ತಿಳಿಯುತ್ತದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಹಾರಾಷ್ಟ್ರದಲ್ಲಿ ಹಾಲೇತರ ಪನೀರ್ ಸಂಪೂರ್ಣ ನಿಷೇಧ; ನಿಯಮ ಉಲ್ಲಂಘಿಸಿದರೆ 6 ತಿಂಗಳು ಜೈಲು, 1 ಲಕ್ಷ ರೂ. ದಂಡ – Kannada News | Maharashtra Government bans Analogue or non dairy paneer violators face 6 months in jail and Rs 1 lakh fine

ಮುಂಬೈ, ಆಗಸ್ಟ್ 5: ನಾವು ಸೇವಿಸುವ ಆಹಾರ ಎಷ್ಟು ಕಲಬೆರಕೆ ಆಗುತ್ತಿದೆ ಎಂದರೆ ಯಾವುದು ಅಸಲಿ, ಯಾವುದು ನಕಲಿ ಎಂದು ಗುರುತಿಸುವುದೇ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಇದೀಗ ಹಾಲೇತರ ಪನೀರ್ (Paneer) ಅಥವಾ ಅನಲಾಗ್ ಪನೀರ್ (Analogue paneer) ಬಳಕೆಯ ಮೇಲೆ ನಿಷೇಧ ಹೇರಿದೆ. ನೋಡಲು ಹಾಲಿನ ಪನೀರ್ ರೀತಿಯೇ ಇರುವ ಅನಲಾಗ್ ಪನೀರ್ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಕಾರಣಕ್ಕೆ ಸಾರ್ವಜನಿಕ ಆರೋಗ್ಯದ ಕಾಳಜಿಯಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಛತ್ತೀಸ್‌ಗಢದ ನಂತರ ಇಂತಹ ನಿಷೇಧವನ್ನು ಹೇರಿದ ಎರಡನೇ ರಾಜ್ಯ ಮಹಾರಾಷ್ಟ್ರವಾಗಿದೆ.

ಮಹಾರಾಷ್ಟ್ರ ರಾಜ್ಯದಾದ್ಯಂತ ಅನಲಾಗ್ ಪನೀರ್‌ನ ತಯಾರಿಕೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ಸಾಗಾಣಿಕೆ, ಸಗಟು ಮತ್ತು ಚಿಲ್ಲರೆ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಶಿಕ್ಷೆಯ ಪ್ರಮಾಣ:

ನಿಷೇಧ ಹೇರಿದರೂ ಅನಲಾಗ್ ಪನೀರ್ ಬಳಸುವವರಿಗೆ ಆಹಾರ ಭದ್ರತೆ ಮತ್ತು ಮಾನದಂಡಗಳ ಕಾಯ್ದೆ 2006ರ (FSSAI) ಅಡಿಯಲ್ಲಿ ಅಪರಾಧದ ತೀವ್ರತೆಗೆ ಅನುಗುಣವಾಗಿ ಶಿಕ್ಷೆಯನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ, 2 ಲಕ್ಷ ಮನೆಗಳಿಗೆ ವಿದ್ಯುತ್ ಸ್ಥಗಿತ

ಸಾಮಾನ್ಯ ಉಲ್ಲಂಘನೆ: 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡ.

ಅಸುರಕ್ಷಿತ ಆಹಾರದಿಂದ ಸಾವು ಸಂಭವಿಸಿದರೆ: ಜೀವಾವಧಿ ಶಿಕ್ಷೆ ಹಾಗೂ ಕನಿಷ್ಠ 10 ಲಕ್ಷ ರೂ. ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ಗ್ರಾಹಕರಿಗೆ ವಂಚನೆ: ಅನಲಾಗ್ ಪನೀರ್ ಅನ್ನು ಅಸಲಿ ಹಾಲಿನ ಪನೀರ್ ಎಂದು ನಂಬಿಸಿ ಮಾರಾಟ ಮಾಡುವುದು ಗ್ರಾಹಕರನ್ನು ಹಾದಿತಪ್ಪಿಸುವ ಮತ್ತು ಕಾನೂನುಬಾಹಿರ ವ್ಯಾಪಾರ ಜಾಲಕ್ಕೆ ಸೇರುತ್ತದೆ ಎಂದು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಎಚ್ಚರಿಸಿದೆ.

ಏನಿದು ‘ಅನಲಾಗ್’ ಪನೀರ್?:

ಅನಲಾಗ್ ಪನೀರ್ ಎಂಬುದು ಸಾಂಪ್ರದಾಯಿಕ ಹಾಲಿನ ಕೊಬ್ಬಿನ (ಮಲೈ) ಬದಲಿಗೆ ಸಸ್ಯಜನ್ಯ ಎಣ್ಣೆ (ಪಾಮ್ ಆಯಿಲ್), ಸ್ಟಾರ್ಚ್ ಹಾಗೂ ಇತರ ರಾಸಾಯನಿಕಗಳನ್ನು ಬಳಸಿ ತಯಾರಿಸುವ ಹಾಲೇತರ ಪನೀರ್ ಉತ್ಪನ್ನವಾಗಿದೆ. ಆಹಾರ ಭದ್ರತಾ ಪ್ರಾಧಿಕಾರದ (FSSAI) ನಿಯಮಾವಳಿಗಳ ಪ್ರಕಾರ, ಪನೀರ್ ಅನ್ನು ಕೇವಲ ಹಾಲಿನಿಂದ ಮಾತ್ರ ತಯಾರಿಸಬೇಕು. ಅದರಲ್ಲಿ ಯಾವುದೇ ಪಿಷ್ಟ (ಸ್ಟಾರ್ಚ್) ಅಥವಾ ಹಾಲೇತರ ಕೊಬ್ಬನ್ನು ಸೇರಿಸುವಂತಿಲ್ಲ. FSSAI ಅನಲಾಗ್ ಪನ್ನೀರ್ ಮಾರಾಟಕ್ಕೆ ಅವಕಾಶ ನೀಡುತ್ತದೆಯಾದರೂ, ಅದನ್ನು ‘ಅನಲಾಗ್’ ಎಂದೇ ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯವಾಗಿದೆ. ಆದರೆ, ಹೆಚ್ಚಿನ ಹೋಟೆಲ್ ಹಾಗೂ ವ್ಯಾಪಾರಿಗಳು ಇದನ್ನು ಅಸಲಿ ಪನೀರ್ ಎಂದೇ ಮಾರಿ ವಂಚಿಸುತ್ತಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ ಪೇಪರ್ ಲೀಕ್ ಮಾಸ್ಟರ್‌ಮೈಂಡ್ ವಿಜಯೇಂದ್ರ ಗುಪ್ತಾ ಬಿಹಾರದಲ್ಲಿ ಬಂಧನ

ಕಳೆದ ವರ್ಷ ಮಹಾರಾಷ್ಟ್ರ ವಿಧಾನಸಭೆಯಲ್ಲೂ ಅನಲಾಗ್ ಪನೀರ್ ನಿಷೇಧಿಸುವಂತೆ ಶಾಸಕರು ಒತ್ತಾಯಿಸಿದ್ದರು. ಪ್ರಸ್ತುತ ಜುಲೈ 30ರ ಆದೇಶದ ಮೂಲಕ ಈ ನಿಷೇಧವನ್ನು ಜಾರಿಗೆ ತರಲಾಗಿದೆ. ಮೇ ತಿಂಗಳಿನಿಂದ ಮಹಾರಾಷ್ಟ್ರದಾದ್ಯಂತ ನಕಲಿ ಹಾಲು ಮತ್ತು ಪನೀರ್ ತಯಾರಿಕಾ ಘಟಕಗಳ ಮೇಲೆ ಎಫ್‌ಡಿಎ (FDA) ಭಾರಿ ದಾಳಿಗಳನ್ನು ನಡೆಸುತ್ತಿದೆ. ಪುಣೆಯ ಮಂಜರಿ ಖುರ್ದ್‌ನಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಸುಮಾರು 1,400 ಕೆಜಿ ನಕಲಿ ಪನೀರ್ ಅನ್ನು ವಶಪಡಿಸಿಕೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:28 pm, Wed, 5 August 26

Source link

ಎಸ್ಟೀಮ್ ಮಾಲ್–ಪಶುವೈದ್ಯಕೀಯ ಕಾಲೇಜು ಸುರಂಗ ಯೋಜನೆಯಿಂದ 893 ಮರಗಳಿಗೆ ಕುತ್ತು? ಪರಿಸರವಾದಿಗಳ ಆತಂಕ – Kannada News | Tunnel Road Threatens Green Cover: 893 Trees at Risk for 2.2 km Esteem Mall Veterinary College Project in Bengaluru

ಸುರಂಗ ಯೋಜನೆಯಿಂದ 893 ಮರಗಳಿಗೆ ಕುತ್ತು?

ಬೆಂಗಳೂರು, ಆಗಸ್ಟ್​​ 05: ಎಸ್ಟೀಮ್ ಮಾಲ್‌ನಿಂದ ಪಶುವೈದ್ಯಕೀಯ ಕಾಲೇಜುವರೆಗೆ ನಿರ್ಮಾಣವಾಗಲಿರುವ 2.2 ಕಿ.ಮೀ. ಉದ್ದದ ಸುರಂಗ ಮಾರ್ಗ (ಟನಲ್) ಯೋಜನೆಯಿಂದ 893 ಮರಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ತಿಳಿಸಿದೆ. ಇದರಿಂದ ಉತ್ತರ ಬೆಂಗಳೂರಿನ ಪ್ರಮುಖ ಹಸಿರು ವಲಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಡಿಎ ಅಧಿಕಾರಿಗಳ ಪ್ರಕಾರ, ಯೋಜನೆಯಿಂದ ಪರಿಣಾಮ ಬೀರುವ 893 ಮರಗಳಲ್ಲಿ ಸುಮಾರು ಶೇ. 85ರಷ್ಟು ಮರಗಳನ್ನು ಸ್ಥಳಾಂತರ (Transplantation) ಮಾಡಲು ಉದ್ದೇಶಿಸಲಾಗಿದೆ. ಈ ಮರಗಳನ್ನು ವಿಶ್ವವಿದ್ಯಾಲಯದ ಆವರಣ ಹಾಗೂ ಬಿಡಿಎಗೆ ಸೇರಿದ ಜಾಗಗಳಿಗೆ ಸ್ಥಳಾಂತರಿಸುವ ಯೋಜನೆ ಇದೆ. ಆದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಸುದರ್ಶನ್ ಅವರು, ಈ ಕುರಿತು ಬಿಡಿಎ ಇನ್ನೂ ಫಾರ್ಮ್–1 ಅಡಿಯಲ್ಲಿ ಸಂಪೂರ್ಣ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಿದ್ದಾರೆ. ಅರ್ಜಿ ಸಲ್ಲಿಸಿದ ಬಳಿಕ ಅರಣ್ಯ ಇಲಾಖೆ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ಇದನ್ನೂ ಓದಿ: ಹೆಬ್ಬಾಳ ಜಂಕ್ಷನ್​​ನಲ್ಲಿ ಟ್ರಾಫಿಕ್​​ ಸಮಸ್ಯೆಗೆ ಮುಕ್ತಿ ನೀಡಲು ಮುಂದಾದ ಬಿಡಿಎ: ಟ್ವಿನ್ ಟನಲ್ ಯೋಜನೆಗೆ ಚಾಲನೆ

ಹಸಿರು ವಲಯಕ್ಕೆ ಧಕ್ಕೆ

ಈ ಸುರಂಗ ಮಾರ್ಗದ ಸಂರೇಖೆ (Alignment) ಪಶುವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ ಮರಗಳ ಉದ್ಯಾನ (Tree Park), ಹೆಬ್ಬಾಳ ಕೆರೆಯ ಬಫರ್ ವಲಯ ಹಾಗೂ ಸುತ್ತಮುತ್ತಲಿನ ಶಿಕ್ಷಣ ಸಂಸ್ಥೆಗಳ ಆವರಣಗಳ ಮೂಲಕ ಹಾದು ಹೋಗುತ್ತದೆ. ಈ ಪ್ರದೇಶಗಳು ನಗರದಲ್ಲಿನ ಜೀವ ವೈವಿಧ್ಯ ಸಂರಕ್ಷಣೆಗೆ ಪ್ರಮುಖ ಆಶ್ರಯ ತಾಣಗಳಾಗಿವೆ. ಸ್ವತಂತ್ರ ಸಂಶೋಧಕ ಹಾಗೂ ಪರಿಸರ ಶಿಕ್ಷಣ ತಜ್ಞ ಹರೀಶ ಎ.ಎಸ್. ಅವರ ಪ್ರಕಾರ, ಈ ಹಸಿರು ಪ್ರದೇಶಗಳು ಪಕ್ಷಿಗಳು, ಚಿಟ್ಟೆಗಳು ಹಾಗೂ ಇತರ ವನ್ಯಜೀವಿಗಳಿಗೆ ಸುಮಾರು 10 ಕಿ.ಮೀ. ಉದ್ದದ ಹಸಿರು ಸಂಪರ್ಕ ಮಾರ್ಗವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದವು. ಆದರೆ, ಮೂಲಸೌಕರ್ಯ ಯೋಜನೆಗಳಿಂದ ಈ ನೈಸರ್ಗಿಕ ಸಂಪರ್ಕ ಈಗಾಗಲೇ ದುರ್ಬಲಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಮರ ಸ್ಥಳಾಂತರ ಯಶಸ್ವಿಯಾಗುವುದು ಅನುಮಾನ

ಪರಿಸರ ಮತ್ತು ಪರಿಸರಶಾಸ್ತ್ರ ಸಂಶೋಧನಾ ಸಂಸ್ಥೆ ATREEಗೆ ಸಂಬಂಧಿಸಿದ ವಿಜ್ಞಾನಿ ಹಾಗೂ ಸಸ್ಯಶಾಸ್ತ್ರಜ್ಞ ಗಣೇಶನ್ ಅವರು, ದೊಡ್ಡ ಮರಗಳ ಸ್ಥಳಾಂತರ ವೈಜ್ಞಾನಿಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಮರಗಳ ಸ್ಥಳಾಂತರ ಕೇವಲ ಹೆಸರಿಗಷ್ಟೇ ನಡೆಯುತ್ತದೆ. ಇವು ಬಹುತೇಕ ಪ್ರೌಢ (ಮೆಚ್ಯೂರ್) ಮರಗಳಾಗಿದ್ದು, ಸ್ಥಳಾಂತರಕ್ಕೆ ಸೂಕ್ತವಾಗಿರುವುದಿಲ್ಲ. ಜಾತಿ ಆಧಾರಿತ ಮೌಲ್ಯಮಾಪನ, ಬೇರುಗಳ ಪೂರ್ವಸಿದ್ಧತೆ ಹಾಗೂ ಹಲವು ತಿಂಗಳ ನಿರ್ವಹಣೆ ಅಗತ್ಯವಿರುತ್ತದೆ. ಆದರೆ ಇಂತಹ ಕ್ರಮಗಳನ್ನು ಸಾಮಾನ್ಯವಾಗಿ ಅನುಸರಿಸುವುದಿಲ್ಲ,” ಎಂದು ಅವರು ತಿಳಿಸಿದ್ದಾರೆ. ಭಾರೀ ಯಂತ್ರಗಳ ಮೂಲಕ ಮರಗಳನ್ನು ಕಿತ್ತು ಸ್ಥಳಾಂತರಿಸುವಾಗ ಬೇರುಗಳು ಹಾಗೂ ಕೊಂಬೆಗಳು ಹಾನಿಗೊಳಗಾಗುವುದರಿಂದ ಅವು ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಎಂದು ಅವರು ಎಚ್ಚರಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಚಿವ ರಾಮಲಿಂಗಾರೆಡ್ಡಿಗೆ ‘ಅರ್ಚಕರ ಕಣ್ಮಣಿ’ ಬಿರುದು ಸನ್ಮಾನ: ಮುಜರಾಯಿ ಖಾತೆ ನೀಡಲು ಸಿಎಂಗೆ ಅರ್ಚಕರ ಒಕ್ಕೂಟ ಮನವಿ – Kannada News | Bengaluru Priests’ Meet: Ramalinga Reddy ‘Archakara Kanmani’, CM DKS Urged for Muzrai Reforms

ಬೆಂಗಳೂರು ಆ,5: ಕರ್ನಾಟಕ ರಾಜ್ಯ ಮುಜರಾಯಿ ದೇಗುಲಗಳ ಅರ್ಚಕರು, ಆಗಮಿಕರು ಹಾಗೂ ಮುಜರಾಯಿ ಇಲಾಖೆ ನೌಕರರ ಸಂಘದ ಆಶ್ರಯದಲ್ಲಿ ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಇಂದು (ಆ.5) ನಡೆದ ‘ರಾಜ್ಯ ಮುಜರಾಯಿ ದೇಗುಲಗಳ ಅರ್ಚಕರ ಬೃಹತ್ ಸಮಾವೇಶ’ದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ‘ಅರ್ಚಕರ ಕಣ್ಮಣಿ’ ಬಿರುದು ನೀಡಿ ಭವ್ಯವಾಗಿ ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಹಾಗೂ ಸಾವಿರಾರು ಅರ್ಚಕರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಜಗುರು ದ್ವಾರಕನಾಥ್, “ರಾಮಲಿಂಗಾರೆಡ್ಡಿ ಅವರು ಮುಜರಾಯಿ ಇಲಾಖೆಗೆ ಸಂಜೀವಿನಿಯಂತೆ ಕೆಲಸ ಮಾಡಿದ್ದಾರೆ. ಬಡ ಅರ್ಚಕರ ಸುದೀರ್ಘ ಸಮಸ್ಯೆಗೆ ಸ್ಪಂದಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಪ್ರಸ್ತುತ ಅವಧಿ ಸೇರಿದಂತೆ ಮುಂದಿನ 5 ವರ್ಷಗಳ ಕಾಲ ರಾಜ್ಯದ ಸಿಎಂ ಆಗಿ ಆಡಳಿತ ನಡೆಸಲಿ” ಎಂದು ಆಶೀರ್ವದಿಸಿದರು.

ರಾಜ್ಯದಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಲು ಮೈಸೂರು ಮಹಾರಾಜರ ಕಾಲದ ಪದ್ಧತಿಯಂತೆ ರಾಜ್ಯದ 36,000 ಮುಜರಾಯಿ ದೇವಾಲಯಗಳಲ್ಲಿ ಅರ್ಚಕರಿಂದ ರುದ್ರಜಪ ಮಾಡಿಸಲು ಸರ್ಕಾರ ಸುತ್ತೋಲೆ ಹೊರಡಿಸಬೇಕು ಮತ್ತು ಉಸ್ತುವಾರಿಗೆ ಅಧಿಕಾರಿಗಳನ್ನು ನೇಮಿಸಬೇಕು ಎಂದು ರಾಜಗುರು ದ್ವಾರಕನಾಥ್ ಸರ್ಕಾರವನ್ನು ಒತ್ತಾಯಿಸಿದರು.

ಬಡ ಅರ್ಚಕರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮನೆಗಳಿಲ್ಲದೆ ಕಷ್ಟಪಡುತ್ತಿರುವ ಜನರಿಗೆ ಸರ್ಕಾರ ಮನೆಗಳನ್ನು ಕಟ್ಟಿಸಿಕೊಡಬೇಕೆಂದು ವೇದಿಕೆಯಲ್ಲಿ ಮನವಿ ಮಾಡಲಾಯಿತು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ ಅವರು, ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮತ್ತೆ ಮುಜರಾಯಿ ಖಾತೆಯನ್ನು ವಹಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗವಾಗಿ ಮನವಿ ಸಲ್ಲಿಸಿದರು.

ಇದನ್ನೂ ಓದಿ: ‘ಕೈ’ ಮನೆಯಲ್ಲಿ ತಾರಕಕ್ಕೇರಿದ ಅಸಮಾಧಾನ: ವಿಪಕ್ಷದ ಸಾಲಿನಲ್ಲಿ ಆಸನ ಕೇಳಲು ಮುಂದಾದ ಜಯಚಂದ್ರ, ಹೆಚ್​ಡಿಕೆ ನಡೆ ಸ್ಮರಿಸಿದ ಎಸ್​ಆರ್ ಶ್ರೀನಿವಾಸ್​

ಸಾಲು ಸಾಲು ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದ ಅವರು, “ನಮ್ಮ ಅರ್ಚಕರ ಸಂಘದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿದರೆ ಮುಂದಿನ 10 ವರ್ಷಗಳ ಕಾಲ ನೀವೇ ರಾಜ್ಯದ ಮುಖ್ಯಮಂತ್ರಿಯಾಗಿ ಇರುತ್ತೀರಿ” ಎಂದು ಸಿಎಂ ಅವರಿಗೆ ಶುಭ ಹಾರೈಸಿದರು. ಈ ವೇಳೆ ನೆರೆದಿದ್ದ ಅರ್ಚಕರು ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಖಾತೆ ನೀಡುವಂತೆ ಘೋಷಣೆಗಳನ್ನು ಕೂಗಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TET Deadline Extended: ಸರ್ಕಾರಿ ಶಾಲೆ ಶಿಕ್ಷಕರಿಗೆ ‘ಟಿಇಟಿ’ ಕಡ್ಡಾಯ; ಸುಪ್ರೀಂ ಕೋರ್ಟ್‌ನಿಂದ ಗಡುವು ವಿಸ್ತರಣೆ – Kannada News | TET Deadline Extended to 2028: Mandatory for Govt Teachers by Supreme Court Order

ಸರ್ಕಾರಿ ಶಾಲೆ ಶಿಕ್ಷಕರಿಗೆ ‘ಟಿಇಟಿ’ ಕಡ್ಡಾಯ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಅರ್ಹತೆಯು ಕಡ್ಡಾಯ ಎಂದು ಕೇಂದ್ರ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ಅಂತಿಮ ಗಡುವನ್ನು ಈಗ ವಿಸ್ತರಿಸಲಾಗಿದೆ. ಈ ಹಿಂದೆ ನೀಡಲಾಗಿದ್ದ ಆಗಸ್ಟ್ 31, 2027 ರ ಗಡುವನ್ನು ಮತ್ತೊಂದು ವರ್ಷ ವಿಸ್ತರಿಸಿ, ಆಗಸ್ಟ್ 31, 2028 ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೋಕಸಭೆಯಲ್ಲಿ ಆಯೋಜಿಸಲಾದ ಕಲಾಪದ ವೇಳೆ ಘೋಷಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ಮತ್ತು ಕಾಯ್ದೆಯ ನಿಯಮಗಳು:

ಲೋಕಸಭೆ ಸದಸ್ಯರೊಬ್ಬರು ಕೇಳಿದ ಲಿಖಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೇ 29, 2026 ರಂದು ಪರಿಶೀಲನಾ ಅರ್ಜಿಗಳನ್ನು ವಿಲೇವಾರಿ ಮಾಡುವ ಸಮಯದಲ್ಲಿ ಸುಪ್ರೀಂ ಕೋರ್ಟ್ ಶಿಕ್ಷಕರಿಗೆ ಈ ಒಂದು ವರ್ಷದ ಹೆಚ್ಚುವರಿ ಅವಧಿಯನ್ನು ಮಂಜೂರು ಮಾಡಿದೆ ಎಂದು ತಿಳಿಸಿದರು. ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (RTE ಕಾಯ್ದೆ), 2009 ರ ಸೆಕ್ಷನ್ 23 ರ ಅಡಿಯಲ್ಲಿ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಗೊಳ್ಳಲು ಹಾಗೂ ಮುಂದುವರಿಯಲು ಟಿಇಟಿ ಕಡ್ಡಾಯ ಕನಿಷ್ಠ ಅರ್ಹತೆಯಾಗಿದೆ. ಸೆಪ್ಟೆಂಬರ್ 1, 2025 ರಂದು ನೀಡಿದ್ದ ತೀರ್ಪಿನಲ್ಲೂ ನ್ಯಾಯಾಲಯ ಇದನ್ನೇ ಪುನರುಚ್ಚರಿಸಿತ್ತು.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ವರ್ಷಕ್ಕೆ ಎರಡು ಬಾರಿ TET ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್ ನಿರ್ದೇಶನ:

ಶಿಕ್ಷಣ ವಿಷಯವು ಭಾರತ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದ್ದು (Concurrent List), ಶಿಕ್ಷಕರ ನೇಮಕಾತಿ ಹಾಗೂ ಸೇವಾ ನಿಯಮಗಳ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ್ದಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಕರಿಗೆ ಅನುಕೂಲ ಮಾಡಿಕೊಡಲು ರಾಜ್ಯ ಸರ್ಕಾರಗಳು ಪ್ರತಿ ಆರು ತಿಂಗಳಿಗೊಮ್ಮೆ, ವರ್ಷಕ್ಕೆ ಎರಡು ಬಾರಿ ಟಿಇಟಿ ಪರೀಕ್ಷೆಗಳನ್ನು ನಡೆಸಲು ಪ್ರಯತ್ನಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ನಿಯಮಿತ ಪರೀಕ್ಷೆಗಳಿಂದಾಗಿ ಅರ್ಹ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಉತ್ತೀರ್ಣರಾಗಲು ಸಾಧ್ಯವಾಗುತ್ತದೆ.

2013 ಕ್ಕಿಂತ ಮೊದಲು ನೇಮಕಗೊಂಡ ಶಿಕ್ಷಕರ ಮೇಲೆ ಪರಿಣಾಮ:

ಈ ಕಡ್ಡಾಯ ಟಿಇಟಿ ನಿಯಮವು 2013 ಕ್ಕಿಂತ ಮೊದಲು ನೇಮಕಗೊಂಡಿರುವ ಕೆಲವು ಶಿಕ್ಷಕರ ಸೇವಾ ಪರಿಸ್ಥಿತಿಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಅಂತಹ ಶಿಕ್ಷಕರ ಸೇವಾ ದಾಖಲೆಗಳು ಮತ್ತು ಸಂಪೂರ್ಣ ವಿವರಗಳು ಆಯಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತ ವ್ಯಾಪ್ತಿಯಲ್ಲಿ ಸುರಕ್ಷಿತವಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AUS: ಬಹು ಸರಣಿಗಳ ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ – Kannada News | Australia Women’s A Tour India: Full Squad, Schedule and Venues for Sep Series

ಬಹು ಸರಣಿಗಳ ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ಮಹಿಳಾ ಎ ತಂಡವನ್ನು (Australia Women’s A Tour India) ಪ್ರಕಟಿಸಲಾಗಿದೆ. ಭಾರತ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ ಮಹಿಳಾ ಎ ತಂಡಗಳ ನಡುವೆ ಬರುವ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಲ್ಲಿ ಮೂರು ಮಾದರಿಗಳ ಸರಣಿ ನಡೆಯಲಿದೆ. ಆಸ್ಟ್ರೇಲಿಯಾ ಎ ಮಹಿಳಾ ತಂಡದ ಈ ಭಾರತ ಪ್ರವಾಸ ಮೂರು ವಾರಗಳ ನಡೆಯಲಿದ್ದು, ಈ ಪ್ರವಾಸದಲ್ಲಿ ಮೂರು ಟಿ20 ಪಂದ್ಯಗಳು, ಮೂರು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳು ಮತ್ತು ಒಂದು ನಾಲ್ಕು ದಿನಗಳ ಪಂದ್ಯ ನಡೆಯಲಿದೆ.

15 ಸದಸ್ಯರ ಆಸ್ಟ್ರೇಲಿಯಾ ಎ ಮಹಿಳಾ ತಂಡ

ಇನ್ನು ಈ ಭಾರತ ಪ್ರವಾಸಕ್ಕಾಗಿ 15 ಸದಸ್ಯರ ಆಸ್ಟ್ರೇಲಿಯಾ ಎ ಮಹಿಳಾ ತಂಡವನ್ನು ಪ್ರಕಟಿಸಿದ್ದು, ಅನುಭವಿ ವೇಗಿಗಳಾದ ಟೇಲಾ ವ್ಲೇಮಿಂಕ್ ಮತ್ತು ಡಾರ್ಸಿ ಬ್ರೌನ್ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಟೇಲಾ ವ್ಲೇಮಿಂಕ್ ಗಾಯದಿಂದ ಚೇತರಿಸಿಕೊಂಡು ಬಹಳ ದಿನಗಳ ಮಂತರ ಕ್ರಿಕೆಟ್​ಗೆ ಮರಳುತ್ತಿದ್ದು, ಡಾರ್ಸಿ ಬ್ರೌನ್ ಕೂಡ ಬಹಳ ದಿನಗಳ ನಂತರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಈ ಸರಣಿಯಲ್ಲಿ ತಹ್ಲಿಯಾ ವಿಲ್ಸನ್ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಎ ತಂಡವನ್ನು ಮುನ್ನಡೆಸಲಿದ್ದು, ನಿಕೋಲ್ ಫಾಲ್ಟಮ್ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ರಾಚೆಲ್ ಟ್ರೆನಮನ್ ನಾಲ್ಕು ದಿನಗಳ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಮೊದಲಿಗೆ ಮೂರು ಟಿ20 ಪಂದ್ಯಗಳು ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ನಂತರ ಮೂರು ಏಕದಿನ ಪಂದ್ಯಗಳು ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕೊನೆಯದಾಗಿ ನಾಲ್ಕು ದಿನಗಳ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ಎ ಮಹಿಳಾ ತಂಡ: ಡಾರ್ಸಿ ಬ್ರೌನ್, ಮೈಟ್ಲಾನ್ ಬ್ರೌನ್, ನಿಕೋಲ್ ಫಾಲ್ಟಮ್, ಟೆಸ್ ಫ್ಲಿಂಟಾಫ್, ಸಿಯಾನಾ ಜಿಂಜರ್, ಚಾರ್ಲಿ ನಾಟ್, ಅನಿಕಾ ಲಿಯರಾಯ್ಡ್, ಕೇಟೀ ಮ್ಯಾಕ್, ಲಿಲ್ಲಿ ಮಿಲ್ಸ್, ಫ್ರಾಂಕಿ ನಿಕ್ಲಿನ್, ಹೇಲಿ ಸಿಲ್ವರ್-ಹೋಮ್ಸ್, ರಾಚೆಲ್ ಟ್ರೆನಮನ್, ಕೋರ್ಟ್ನಿ ವೆಬ್, ತಹ್ಲಿಯಾ ವಿಲ್ಸನ್ ಮತ್ತು ಟೇಲಾ ವ್ಲೇಮಿಂಕ್.

ಪ್ರವಾಸದ ವೇಳಾಪಟ್ಟಿ

ಟಿ20 ಸರಣಿ

  • ಸೆಪ್ಟೆಂಬರ್ 12 – ಮೊದಲ ಟಿ20, ನ್ಯೂ ಚಂಡೀಗಢ
  • ಸೆಪ್ಟೆಂಬರ್ 15 – ಎರಡನೇ ಟಿ20, ನ್ಯೂ ಚಂಡೀಗಢ
  • ಸೆಪ್ಟೆಂಬರ್ 17 – ಮೂರನೇ ಟಿ20, ನ್ಯೂ ಚಂಡೀಗಢ

ಏಕದಿನ ಸರಣಿ

  • ಸೆಪ್ಟೆಂಬರ್ 20- ಮೊದಲ ಏಕದಿನ ಪಂದ್ಯ, ಮೊಹಾಲಿ
  • ಸೆಪ್ಟೆಂಬರ್ 23- ಎರಡನೇ ಏಕದಿನ ಪಂದ್ಯ, ಮೊಹಾಲಿ
  • ಸೆಪ್ಟೆಂಬರ್ 25 – ಮೂರನೇ ಏಕದಿನ ಪಂದ್ಯ, ಮೊಹಾಲಿ
  • ಸೆಪ್ಟೆಂಬರ್ 29–ಅಕ್ಟೋಬರ್ 2- ನಾಲ್ಕು ದಿನಗಳ ಪಂದ್ಯ, ಧರ್ಮಶಾಲಾ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:10 pm, Wed, 5 August 26

Source link

ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್ – Kannada News | Cabinet Expansion Row: Gubbi MLA SR Srinivas U turn after DK Shivakumar Call

ತುಮಕೂರು, (ಆಗಸ್ಟ್ 05): ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್​​​ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕರು ಬೇಸರಗೊಂಡಿದ್ದು, ಪಕ್ಷದ ನಡೆಗೆ ಆಕ್ರೋಶಗೊಂಡಿದ್ದಾರೆ. ಈ ಸಾಲಿನಲ್ಲಿ ಗುಬ್ಬಿ ಶಾಸಕ ಎಸ್​​ಆರ್ ಶ್ರೀನಿವಾಸ್ ಸಹ ಒಬ್ಬರಾಗಿದ್ದು, ಸಚಿವ ಸ್ಥಾನ ಸಿಗದಿದ್ದಕ್ಕೆ ಕೆಎಸ್​​​ಆರ್​​​​ಟಿಸಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಸಿಎಂ ಡಿಕೆ ಶಿವಕುಮಾರ್, ಶ್ರೀನಿವಾಸ್ ಅವರಿಗೆ ಕರೆ ಮಾಡಿ ಮನವೊಲಿಸಿದ್ದು, ಇದೀಗ ಶ್ರೀನಿವಾಸ್ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಹೌದು…ಸಿಎಂ ಡಿಕೆ ಶಿವಕುಮಾರ್ ಕರೆ ಬಳಿಕ ಮಾತನಾಡಿದ ಶ್ರೀನಿವಾಸ್, ಕೆಎಸ್​​ಆರ್​​​ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಹೊರಟ್ಟಿದ್ದೆ. ಆದ್ರೆ, ಎಲ್ಲಾ ನಿಗಮ ಮಂಡಳಿಗಳನ್ನ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಇನ್ನು ನನಗೆ ಯಾವುದೇ ಅಸಮಾಧಾನ ಇಲ್ಲ ಎಂದು ಉಲ್ಟಾ ಹೊಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಲ್ಲುಗೆ ಹೋಗಿದ್ದ ‘ಘಜಿನಿ’ ಆಫರ್ ಆಮಿರ್​​ಗೆ ಕೊಡಿಸಿದ್ದ ಪ್ರದೀಪ್ ರಾವತ್ – Kannada News | How Pradeep Rawat Chose Aamir Khan Over Salman Khan for Historic Ghajini Remake

‘ಘಜಿನಿ’ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಚಿತ್ರ. ಇದು 100 ಕೋಟಿ ರೂಪಾಯಿ ಗಳಿಸಿದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಸಿನಿಮಾದ ಯಶಸ್ಸಿನ ಹಿಂದೆ ಹಿರಿಯ ನಟ ದಿವಂಗತ ಪ್ರದೀಪ್ ರಾವತ್ ಅವರ ಬಹುಮುಖ್ಯ ಪಾತ್ರವಿತ್ತು. ಅವರ ನಿರ್ಧಾರವೇ ಈ ಸಿನಿಮಾ ಹಿಂದಿಗೆ ರಿಮೇಕ್ ಆಗಲು ಕಾರಣವಾಗಿತ್ತು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಹಿರಿಯ ನಟ ಪ್ರದೀಪ್ ರಾವತ್ ಅವರು ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು. ಈ ಸಂದರ್ಭದಲ್ಲಿ ‘ಘಜಿನಿ ಸಿನಿಮಾ ದಿನಗಳನ್ನು ಪುನರ್ ವಿಮರ್ಶಿಸೋಣ.

ಪ್ರದೀಪ್ ರಾವತ್ ಅವರು ಆರಂಭದಲ್ಲಿ ತೆಲುಗಿನ ‘ಸೈ’ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿ ಸಖತ್ ಪ್ರಸಿದ್ಧಿ ಪಡೆದಿದ್ದರು. ನಂತರ ತಮಿಳಿನ ‘ಘಜಿನಿ’ ಸಿನಿಮಾದಲ್ಲಿ ಮಿಂಚಿದರು. ಈ ಸಿನಿಮಾ ಸೂಪರ್ ಹಿಟ್ ಆಯಿತು.

ತಮಿಳು ಘಜಿನಿ ಗೆಲುವಿನ ಬಳಿಕ ನಿರ್ದೇಶಕ ಮುರುಗದಾಸ್ ಅವರಿಗೆ ಈ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡುವ ಆಸೆ ಇತ್ತು. ಮುರುಗದಾಸ್ ಅವರಿಗೆ ಸಲ್ಲು ಎಂದರೆ ತುಂಬಾ ಇಷ್ಟವಿತ್ತು. ಅವರು ಸಲ್ಮಾನ್ ಖಾನ್ ಅವರನ್ನೇ ನಾಯಕನನ್ನಾಗಿ ಮಾಡಲು ಬಯಸಿದ್ದರು. ಆದರೆ ಪ್ರದೀಪ್ ರಾವತ್ ಅವರು ಆಮಿರ್ ಖಾನ್ ಹೆಸರು ಸೂಚಿಸಿದರು.

‘ಸಲ್ಮಾನ್ ಖಾನ್ ಕೋಪಿಷ್ಟ ಸ್ವಭಾವದವರು. ನಿರ್ದೇಶಕ ಮುರುಗದಾಸ್ ಅವರಿಗೆ ಹಿಂದಿ ಅಥವಾ ಇಂಗ್ಲಿಷ್ ಭಾಷೆ ಬರುತ್ತಿರಲಿಲ್ಲ. ಆದರೆ ಆಮಿರ್ ಖಾನ್ ಶಾಂತ ಸ್ವಭಾವದವರು. ಅವರು ಎಲ್ಲರೊಂದಿಗೂ ಗೌರವದಿಂದ ನಡೆದುಕೊಳ್ಳುತ್ತಾರೆ. ಹೀಗಾಗಿ ಆಮಿರ್ ಖಾನ್ ಈ ಪಾತ್ರಕ್ಕೆ ಸೂಕ್ತ’ ಎಂದು ರಾವತ್ ಸೂಚಿಸಿದ್ದರು.

ಇದನ್ನೂ ಓದಿ: ಹಿರಿಯ ನಟ ಪ್ರದೀಪ್ ರಾವತ್ ನಿಧನ: ‘ಘಜಿನಿ’, ‘ಲಗಾನ್’ ಖ್ಯಾತಿಯ ಖಳನಟ ಇನ್ನಿಲ್ಲ

ಪ್ರದೀಪ್ ರಾವತ್ ಅವರು ಆಮಿರ್ ಖಾನ್ ಅವರನ್ನು ಒಪ್ಪಿಸಲು ಸುಮಾರು ಆರು ತಿಂಗಳು ಶ್ರಮಿಸಿದರು. ಕೊನೆಗೆ ಸಿನಿಮಾ ವೀಕ್ಷಿಸಿದ ಆಮಿರ್ ತಕ್ಷಣವೇ ನಟಿಸಲು ಒಪ್ಪಿಕೊಂಡರು. ಈ ಸಿನಿಮಾಗಾಗಿ ಆಮಿರ್ ಖಾನ್ ಸಾಕಷ್ಟು ಜಿಮ್ ಮಾಡಿದ್ದರು. ಚಿತ್ರೀಕರಣದ ವೇಳೆ ಅವರು ತೀವ್ರ ಗಾಯಗೊಂಡಿದ್ದರು. ಎಲ್ಲಾ ಸವಾಲುಗಳನ್ನು ಮೀರಿ ಸಿನಿಮಾ ಬಿಡುಗಡೆಯಾಯಿತು. ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆಯಿತು.

ಪ್ರಶ್ನೆ: ಪ್ರದೀಪ್ ರಾವತ್ ಹೇಗೆ ನಿಧನ ಹೊಂದಿದರು?
ಉತ್ತರ:
ರಕ್ತದ ಕ್ಯಾನ್ಸರ್

ಪ್ರಶ್ನೆ: ಪ್ರದೀಪ್ ರಾವತ್​​ಗೆ ಎಷ್ಟು ವರ್ಷ ಆಗಿತ್ತು?
ಉತ್ತರ:
74 ವರ್ಷ

ಪ್ರಶ್ನೆ: ಪ್ರದೀಪ್ ರಾವತ್ ನಟಿಸಿದ ಕನ್ನಡದ ಸಿನಿಮಾಗಳು ಯಾವವು?
ಉತ್ತರ:
ಗಜ, ಅಭಯ್, ಬಚ್ಚನ್ ಮೊದಲಾದವು

Source link

ಹೆಚ್​ಕೆ ಪಾಟೀಲ್​ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗದಗ-ಬೆಟಗೇರಿ ನಗರಸಭೆಯ 22 ಸದಸ್ಯರ ಸಾಮೂಹಿಕ ರಾಜೀನಾಮೆ – Kannada News | Karnataka Cabinet Expansion: 22 Gadag Councillors Resign in Support of HK Patil

ಎಚ್.ಕೆ. ಪಾಟೀಲ್Image Credit source: HK Patil facebook page

ಗದಗ, ಆಗಸ್ಟ್ 5: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಗದಗ ಶಾಸಕ ಎಚ್.ಕೆ. ಪಾಟೀಲ್ (HK Patil) ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗದಗ-ಬೆಟಗೇರಿ (Gadag) ನಗರಸಭೆಯ 22 ಕಾಂಗ್ರೆಸ್ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸದಸ್ಯರು, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ರಾಜೀನಾಮೆ ನೀಡಿದ 22 ಸದಸ್ಯರ ಪೈಕಿ 17 ಮಂದಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಸದಸ್ಯರಾಗಿದ್ದು, ಉಳಿದವರು ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಎಚ್.ಕೆ. ಪಾಟೀಲ್ ಅವರು ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಮೂರು ಬಾರಿ ಶಾಸಕರಾಗಿ ಹಾಗೂ ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಹೀಗಿದ್ದರೂ ಅವರಿಗೆ ಸಚಿವ ಸ್ಥಾನ ನೀಡದಿರುವುದು ಅನ್ಯಾಯ ಎಂದು ಕಾಂಗ್ರೆಸ್ ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯನ್ನೂ ಪ್ರತಿಭಟನಾಕಾರರು ಮುಂದಿಟ್ಟಿದ್ದಾರೆ.

‘ಎಚ್.ಕೆ. ಪಾಟೀಲ್‌ಗೆ ಸಚಿವ ಸ್ಥಾನ ಸಿಗುವವರೆಗೂ ಶರ್ಟ್ ಧರಿಸಲ್ಲ’

ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡಿರುವ ಅವರ ಬೆಂಬಲಿಗ ರಾಚಪ್ಪ ಗಡಾದ್, ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗುವವರೆಗೂ ಶರ್ಟ್ ಧರಿಸುವುದಿಲ್ಲ ಎಂದು ಮಂಗಳವಾರ ಪ್ರತಿಜ್ಞೆ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೋಮವಾರ ಬಿಡುಗಡೆ ಮಾಡಿದ ಸಚಿವರ ಅಂತಿಮ ಪಟ್ಟಿಯಲ್ಲಿ ಪಾಟೀಲ್ ಅವರ ಹೆಸರು ಇಲ್ಲದಿರುವುದು ಬೇಸರ ತಂದಿದೆ ಎಂದು ಹೇಳಿದ ಅವರು, ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಶರ್ಟ್ ತೆಗೆದು ಪ್ರತಿಜ್ಞೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಎನ್.ಎ. ಹ್ಯಾರಿಸ್ ಬೆಂಬಲಿಗರ ಪ್ರತಿಭಟನೆ

ಇತ್ತ ಬೆಂಗಳೂರಿನಲ್ಲಿ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರನ್ನು ಕರ್ನಾಟಕ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ನೂರಾರು ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಮಂಗಳವಾರ ಬೆಳಗ್ಗೆ ಬ್ರಿಗೇಡ್ ರಸ್ತೆಯ ವಾರ್ ಮೆಮೋರಿಯಲ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಹಣೆಗೆ ಮತ್ತು ಕೈಗಳಿಗೆ ಕಪ್ಪು ಪಟ್ಟಿ ಧರಿಸಿ, ಶಾಸಕರ ಭಾವಚಿತ್ರಗಳು ಹಾಗೂ ಫಲಕಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು.

ರಸ್ತೆ ತಡೆಗೆ ಪ್ರತಿಭಟನಾಕಾರರು ಮುಂದಾದ ಹಿನ್ನೆಲೆಯಲ್ಲಿ ಅಶೋಕನಗರ ಪೊಲೀಸರು ಸುಮಾರು 20 ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.

ಮಹದೇವಪ್ಪ ಬೆಂಬಲಿಗರಿಂದಲೂ ಸಾಮೂಹಿಕ ರಾಜೀನಾಮೆ

ಟಿ ನರಸೀಪುರ ಕ್ಷೇತ್ರದ ಶಾಸಕ ಎಚ್.ಸಿ. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡದಿರುವುದಕ್ಕೂ ಅಸಮಾಧಾನ ವ್ಯಕ್ತವಾಗಿದೆ. ನೂತನ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಟಿ. ನರಸೀಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರು ಹಾಗೂ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.

ತಮ್ಮ ನಾಯಕನಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಅವರು, ರಾಜೀನಾಮೆ ಪತ್ರಗಳನ್ನು ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ಅವರಿಗೆ ಕಳುಹಿಸಿದ್ದಾರೆ. ಹಿರಿಯ ದಲಿತ ನಾಯಕ ಹಾಗೂ ಪಕ್ಷದ ನಿಷ್ಠಾವಂತ ಹಿರಿಯ ಮುಖಂಡರಾಗಿರುವ ಎಚ್.ಸಿ. ಮಹದೇವಪ್ಪ ಅವರನ್ನು ಸಚಿವ ಸಂಪುಟ ವಿಸ್ತರಣೆಯಲ್ಲಿ ಕಡೆಗಣಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕೈ’ ಮನೆಯಲ್ಲಿ ತಾರಕಕ್ಕೇರಿದ ಅಸಮಾಧಾನ: ವಿಪಕ್ಷದ ಸಾಲಿನಲ್ಲಿ ಆಸನ ಕೇಳಲು ಮುಂದಾದ ಜಯಚಂದ್ರ, ಹೆಚ್​ಡಿಕೆ ನಡೆ ಸ್ಮರಿಸಿದ ಎಸ್​ಆರ್ ಶ್ರೀನಿವಾಸ್​ – Kannada News | Karnataka Congress Rift Deepens:TB Jayachandra Demands Opposition Seat; SR Srinivas Hails HD Kumaraswamy

ಟಿ.ಬಿ.ಜಯಚಂದ್ರ ಮತ್ತು ಎಸ್​​.ಆರ್​​. ಶ್ರೀನಿವಾಸ್​​Image Credit source: SR Srinivas Facebook

ಬೆಂಗಳೂರು, ಆಗಸ್ಟ್​​ 05: ಸಚಿವ ಸಂಪುಟ ವಿಸ್ತರಣೆ ಬಳಿಕ ಮಂತ್ರಿಸ್ಥಾನ ವಂಚಿತ ಆಕಾಂಕ್ಷಿ ಶಾಸಕರ ಅಸಮಾಧಾನ ಕಾಂಗ್ರೆಸ್​​​ನಲ್ಲಿ ತಾರಕಕ್ಕೇರಿದೆ. ಪಕ್ಷದ ವರಿಷ್ಠರ ಮನವೊಲಿಕೆ ಯತ್ನದ ಹೊರತಾಗಿಯೂ ಹಲವು ಶಾಸಕರು ಆಕ್ರೋಶ ಮುಂದುವರಿಸಿರೋದು ಪಕ್ಷಕ್ಕೀಗ ತಲೆನೋವಾಗಿ ಮಾರ್ಪಟ್ಟಿದೆ. ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನೆಲೆ ಬೆಂಗಳೂರಿನಿತ್ತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್​​ ಸಿಂಗ್​​ ಸುರ್ಜೆವಾಲಾ ಹೊರಟಿದ್ದು, ಅಸಮಾಧಾನಿತ ಶಾಕರನ್ನು ಭೇಟಿಯಾಗಿ ಅವರು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ವಿಪಕ್ಷದ ಸಾಲಿನಲ್ಲಿ ಪ್ರತ್ಯೇಕ ಆಸನದ ಬೇಡಿಕೆಗೆ ಜಯಚಂದ್ರ ತೀರ್ಮಾನ

ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ವಂಚಿತರಾದ ಹಿನ್ನೆಲೆ ವಿಧಾನಸಭೆಯಲ್ಲಿ ವಿಪಕ್ಷ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸುವಂತೆ ವಿಧಾನಸಭಾಧ್ಯಕ್ಷರಿಗೆ ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ಪತ್ರ ಬರೆಯಲು ಮುಂದಾಗಿದ್ದಾರೆ. ಆಡಳಿತ ಪಕ್ಷದ ಸದಸ್ಯರ ಸಾಲಿನಲ್ಲಿ ಕುಳಿತುಕೊಳ್ಳಲು ಇಚ್ಛೆಯಿಲ್ಲ. ಹೀಗಾಗಿ ವಿರೋಧ ಪಕ್ಷದ ಸಾಲಿನಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಬೇಕು ಎಂಬ ಬಗ್ಗೆ ಆಗ್ರಹವಿರುವ ಪತ್ರವನ್ನು ಜಯಚಂದ್ರ ಸಿದ್ಧಪಡಿಸಿಕೊಂಡಿದ್ದಾರೆ. ಅಲ್ಲಿಂದಲೇ ಸರ್ಕಾರದ ಕಾರ್ಯ ವೈಖರಿ ಗಮನಿಸಿ ಸಲಹೆ, ಮಾರ್ಗದರ್ಶನ ನೀಡುವ ಬಗ್ಗೆಯೂ ಅವರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ನೂತನ ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯಬೇಕಿರುವ ಹಿನ್ನೆಲೆ, ರಾಜ್ಯಪಾಲರು ಸಿಎಂ ಶಿಫಾರಸಿನ ಮೇರೆಗೆ ಹಂಗಾಮಿ ಸ್ಪೀಕರ್ ಆಗಿ ಟಿ.ಬಿ.ಜಯಚಂದ್ರ ನೇಮಿಸಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಈ ಜವಾಬ್ದಾರಿಯನ್ನೂ ಅವರು ನಿರಾಕರಿಸಿರುವ ಮಾಹಿತಿ ಇದೆ.

ಇದನ್ನೂ ಓದಿ: ಅಸಮಾಧಾನಿತರ ಕೋಪ ಶಮನಕ್ಕೆ ಮುಂದಾದ ಕಾಂಗ್ರೆಸ್​​: ಶಾಸಕರ ಜೊತೆ ನಾಯಕರ ಚರ್ಚೆ

ಹೆಚ್.ಡಿ.ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ S.R.ಶ್ರೀನಿವಾಸ್​

ಮತ್ತೊಂದೆಡೆ, ನಾನು ಕುಮಾರಸ್ವಾಮಿರನ್ನು ಈಗ ನೆನೆಪು ಮಾಡಿಕೊಳ್ಳಬೇಕು. ನನಗೆ ಸಚಿವ ಸ್ಥಾನ ಸಿಗಲ್ಲ ಎಂದು ಮನೆಯಲ್ಲಿಯೇ ಕುಳಿತಿದ್ದೆ. ಆಗ ಹೆಚ್​ಡಿಕೆ ಅವರೇ ಕರೆ ಮಾಡಿ ಸಚಿವರನ್ನಾಗಿ ಮಾಡಿದ್ರು. ಅದನ್ನು ನಾನು ಯಾವತ್ತೂ ಮರೆಯಲ್ಲ ಎಂದು ಗುಬ್ಬಿ ಶಾಸಕ ಎಸ್​.ಆರ್.ಶ್ರೀನಿವಾಸ್ ಹೇಳಿದ್ದಾರೆ. ಯಾವುದೋ ಒಂದು ವಿಚಾರಕ್ಕೆ ಮಾತ್ರ ಭಿನ್ನಾಭಿಪ್ರಾಯ ಆಗಿತ್ತು. ಉಳಿದಂತೆ ನಮ್ಮಿಬ್ಬರ ನಡುವೆ ಏನೂ ಇಲ್ಲ ಎಂದವರು ಹೇಳಿರೋದು ಅಚ್ಚರಿಗೆ ಕಾರಣವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:41 pm, Wed, 5 August 26

Source link

Exit mobile version