ಹುಬ್ಬಳ್ಳಿ ಲವ್ ಜಿಹಾದ್ ಕೇಸ್‌: ಯುವತಿಯನ್ನು ಮಾಡೆಲ್ ಮಾಡ್ತೇನೆಂದು ನಂಬಿಸಿ ಗರ್ಭಿಣಿ ಮಾಡಿದ್ನಾ ಸಮೀರ್?

ಹುಬ್ಬಳ್ಳಿ ಲವ್ ಜಿಹಾದ್ ಕೇಸ್‌: ಯುವತಿಯನ್ನು ಮಾಡೆಲ್ ಮಾಡ್ತೇನೆಂದು ನಂಬಿಸಿ ಗರ್ಭಿಣಿ ಮಾಡಿದ್ನಾ ಸಮೀರ್?

ಹುಬ್ಬಳ್ಳಿ, ಏಪ್ರಿಲ್ 4: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ (Hubballi) ಸದ್ದು ಮಾಡುತ್ತಿರುವ ‘ಲವ್ ಜಿಹಾದ್ (Love Jihad)’ ಆರೋಪದ ಪ್ರಕರಣ ಕ್ಷಣಕ್ಕೊಂದು ಸ್ಫೋಟಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಾಡೆಲಿಂಗ್ ಆಸೆ ತೋರಿಸಿ ಯುವತಿಯನ್ನು ನಂಬಿಸಿದ್ದ ಜಿಮ್ ಟ್ರೈನರ್ ಸಮೀರ್, ಆಕೆಯನ್ನು ಗರ್ಭಿಣಿ ಮಾಡಿ ನಂತರ ಗರ್ಭಪಾತ ಮಾಡಿಸಿದ್ದಾನೆಯೇ ಎಂಬ ದಟ್ಟ ಅನುಮಾನ ಇದೀಗ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು ವೈದ್ಯಕೀಯ ದಾಖಲೆಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಯುವತಿಯ ಪೋಷಕರ ಆರೋಪದ ಪ್ರಕಾರ, ಸಮೀರ್ ಆಕೆಗೆ ‘ನಿನ್ನನ್ನು ದೊಡ್ಡ ಮಾಡೆಲ್ ಮಾಡುತ್ತೇನೆ, ಅದಕ್ಕಾಗಿ ನಿತ್ಯ ಜಿಮ್‌ಗೆ ಬಾ’ ಎಂದು ನಂಬಿಸಿದ್ದ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುವ ಕನಸು ಕಂಡಿದ್ದ ಯುವತಿ, ಸಮೀರ್ ಮಾತುಗಳನ್ನು ನಂಬಿ ಆತನೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಸಮೀರ್, ಯುವತಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ನಡುವೆ ಯುವತಿ ಗರ್ಭಿಣಿಯಾಗಿದ್ದು, ಆಕೆಗೆ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿತ್ತು ಎಂಬ ಬಲವಾದ ಅನುಮಾನವೂ ಇದೀಗ ಪೊಲೀಸರಿಗೆ ವ್ಯಕ್ತವಾಗಿದೆ.

ಏನಿದು ಪ್ರಕರಣ? ಪೂರ್ಣ ಹಿನ್ನೆಲೆ ಇಲ್ಲಿದೆ

ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಜಿಮ್ ಟ್ರೈನರ್ ಸಮೀರ್ ವಿರುದ್ಧ ಲವ್ ಜಿಹಾದ್ ಮತ್ತು ಲೈಂಗಿಕ ದೌರ್ಜನ್ಯದ ದೂರು ದಾಖಲಾಗಿತ್ತು. ಯುವತಿಯನ್ನು ನಂಬಿಸಿ ಹೋಟೆಲ್‌ವೊಂದಕ್ಕೆ ಕರೆದೊಯ್ದು, ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪಿಸುವ ಔಷಧ ನೀಡಿ ಅತ್ಯಾಚಾರ ಎಸಗಿದ್ದಾನೆ ಮತ್ತು ಆ ದೃಶ್ಯಗಳನ್ನು ವಿಡಿಯೋ ಮಾಡಿ ಬೆದರಿಕೆ ಹಾಕುತ್ತಿದ್ದಾನೆ, ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾನೆ ಎಂಬುದು ದೂರಿನ ಸಾರಾಂಶವಾಗಿತ್ತು.

ಆದರೆ, ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದ್ದ ಆರೋಪಿ ಸಮೀರ್, ತಾನು ಯಾವುದೇ ಔಷಧ ನೀಡಿಲ್ಲ ಎಂದು ವಾದಿಸಿದ್ದ. ‘ವಿಡಿಯೋ ರೆಕಾರ್ಡ್ ಆಗಿರುವುದು ನಿಜ, ಆದರೆ ಅದನ್ನು ನಾನು ಮಾಡಿಲ್ಲ, ಆ ಹುಡುಗಿಯೇ ತನ್ನ ಫೋನ್‌ನಲ್ಲಿ ಚಿತ್ರೀಕರಿಸಿದ್ದಾಳೆ. ಅಂದು ಪ್ರಜ್ಞೆ ತಪ್ಪಿದ್ದು ನಾನೇ ಹೊರತು ಆಕೆಯಲ್ಲ’ ಎಂದು ಸ್ಫೋಟಕ ಹೇಳಿಕೆ ನೀಡಿದ್ದ.

ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ವಿಡಿಯೋ ಇರೋದು ನಿಜ, ಆದ್ರೆ… ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆರೋಪಿ!

ಇದೀಗ ಗರ್ಭಪಾತದ ಆರೋಪ ಕೇಳಿಬಂದಿರುವುದರಿಂದ ಪೊಲೀಸರು ಯುವತಿ ಮತ್ತು ಸಮೀರ್ ಇಬ್ಬರನ್ನೂ ಮುಖಾಮುಖಿ ವಿಚಾರಣೆ ನಡೆಸಲು ಸಜ್ಜಾಗಿದ್ದಾರೆ. ಸದ್ಯ ಯುವತಿಯ ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಸತ್ಯಾಸತ್ಯತೆ ಶೀಘ್ರದಲ್ಲೇ ಹೊರಬೀಳಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tulasi and Menstruation: ಮುಟ್ಟಿನ ಸಮಯದಲ್ಲಿ ತುಳಸಿ ಗಿಡ ಏಕೆ ಮುಟ್ಟಬಾರದು? ಸತ್ಯ ಮತ್ತು ಮಿಥ್ಯಗಳು

ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ತುಳಸಿಯನ್ನು ಕೇವಲ ಗಿಡವಾಗಿ ನೋಡದೆ ‘ಲಕ್ಷ್ಮಿ’ಯ ಸ್ವರೂಪ ಎಂದು ಪೂಜಿಸಲಾಗುತ್ತದೆ. ಹಿರಿಯರು ಇಂದಿಗೂ ಮಹಿಳೆಯರು ಮುಟ್ಟಿನ ಸಮಯದಲ್ಲಿ ತುಳಸಿ ಗಿಡವನ್ನು ಮುಟ್ಟಬಾರದು ಎಂದು ಹೇಳುತ್ತಾರೆ. ಇದರ ಹಿಂದಿನ ಅಸಲಿ ಕಾರಣಗಳೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸಾಂಪ್ರದಾಯಿಕ ಮತ್ತು ಧಾರ್ಮಿಕ ನಂಬಿಕೆಗಳು:

ಪುರಾಣಗಳ ಪ್ರಕಾರ ತುಳಸಿಯು ಅತ್ಯಂತ ಶುದ್ಧ ಮತ್ತು ದೈವಿಕ ಶಕ್ತಿಯ ಸಂಕೇತ. ಮುಟ್ಟಿನ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ‘ಅಶುದ್ಧತೆ’ ಇರುತ್ತದೆ ಎಂಬುದು ಹಳೆಯ ಕಾಲದ ನಂಬಿಕೆ. ಈ ಸಮಯದಲ್ಲಿ ತುಳಸಿಯನ್ನು ಮುಟ್ಟಿದರೆ ಗಿಡವು ತನ್ನ ಪವಿತ್ರತೆಯನ್ನು ಕಳೆದುಕೊಳ್ಳುತ್ತದೆ ಮತ್ತು ಒಣಗಿ ಹೋಗುತ್ತದೆ ಎಂದು ಹಿರಿಯರು ನಂಬುತ್ತಾರೆ.

ವೈಜ್ಞಾನಿಕ ದೃಷ್ಟಿಕೋನ:

ಆಧುನಿಕ ವಿಜ್ಞಾನದ ಪ್ರಕಾರ, ಮಹಿಳೆಯರ ಋತುಚಕ್ರಕ್ಕೂ ಮತ್ತು ಸಸ್ಯಗಳ ಆರೋಗ್ಯಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಮಹಿಳೆಯರ ದೇಹದಲ್ಲಿ ಈ ಸಮಯದಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳು ಸಸ್ಯಗಳನ್ನು ಒಣಗಿಸುವ ಶಕ್ತಿಯನ್ನು ಹೊಂದಿರುವುದಿಲ್ಲ. ಯಾವುದೇ ವೈಜ್ಞಾನಿಕ ಸಂಶೋಧನೆಯೂ ಸಹ “ಮಹಿಳೆಯರ ಸ್ಪರ್ಶದಿಂದ ಗಿಡ ಒಣಗುತ್ತದೆ” ಎಂಬ ವಾದವನ್ನು ಸಾಬೀತುಪಡಿಸಿಲ್ಲ. ಗಿಡ ಒಣಗಲು ಮುಖ್ಯ ಕಾರಣಗಳು ನೀರು, ಸೂರ್ಯನ ಬೆಳಕು ಅಥವಾ ಪೋಷಕಾಂಶಗಳ ಕೊರತೆಯೇ ಹೊರತು ಮಾನವ ಸ್ಪರ್ಶವಲ್ಲ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಹಿರಿಯರು ಈ ನಿಯಮ ಮಾಡಲು ಅಸಲಿ ಕಾರಣವೇನು?

ಹಿಂದಿನ ಕಾಲದಲ್ಲಿ ಈ ನಿಯಮಗಳನ್ನು ಜಾರಿಗೆ ತರಲು ಕೆಲವು ಪ್ರಾಯೋಗಿಕ ಕಾರಣಗಳಿದ್ದವು:

ವಿಶ್ರಾಂತಿಯ ಅಗತ್ಯ:

ಹಿಂದಿನ ಕಾಲದಲ್ಲಿ ಮಹಿಳೆಯರು ಮನೆಯಲ್ಲೇ ದೈಹಿಕವಾಗಿ ತುಂಬಾ ಕೆಲಸ ಮಾಡಬೇಕಿತ್ತು. ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು, ಸೊಂಟ ನೋವು ಮತ್ತು ಅತಿಯಾದ ರಕ್ತಸ್ರಾವದಿಂದ ಅವರಿಗೆ ವಿಶ್ರಾಂತಿ ನೀಡಲು ‘ದೂರವಿರುವ’ ಪದ್ಧತಿಯನ್ನು ತರಲಾಯಿತು.

ನೈರ್ಮಲ್ಯದ ಕಾಳಜಿ:

ಅಂದು ಇಂದಿನಂತೆ ಸ್ಯಾನಿಟರಿ ಪ್ಯಾಡ್‌ಗಳ ಸೌಲಭ್ಯವಿರಲಿಲ್ಲ. ಸೋಂಕು ಹರಡದಂತೆ ತಡೆಯಲು ಮತ್ತು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅವರನ್ನು ದೇವಸ್ಥಾನ ಅಥವಾ ಪವಿತ್ರ ಗಿಡಗಳಿಂದ ದೂರವಿಡಲಾಗುತ್ತಿತ್ತು.

ರೋಗನಿರೋಧಕ ಶಕ್ತಿ: ಈ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ರೋಗನಿರೋಧಕ ಶಕ್ತಿ ಸ್ವಲ್ಪ ಕಡಿಮೆಯಿರುತ್ತದೆ. ತುಳಸಿ ಗಿಡವು ಗಿಡಮೂಲಿಕೆಗಳ ಆಗರವಾಗಿದ್ದರೂ, ತೋಟದ ಕೆಲಸ ಅಥವಾ ಗಿಡದ ಆರೈಕೆಯಲ್ಲಿ ತೊಡಗುವುದರಿಂದ ಅವರಿಗೆ ಆಯಾಸವಾಗಬಾರದು ಎಂಬುದು ಅಂದಿನವರ ಕಾಳಜಿಯಾಗಿತ್ತು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾವಿಗೆ ಬಿದ್ದ ಕಾರು; ಒಂದೇ ಕುಟುಂಬದ 6 ಮಕ್ಕಳು ಸೇರಿ 9 ಮಂದಿ ದಾರುಣ ಸಾವು!

ನಾಸಿಕ್‌, ಏ.4: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಭೀಕರ ಘಟನೆಯೊಂದು ನಡೆದಿದೆ. ಕಾರು ಬಾವಿಗೆ ಬಿದ್ದು 9 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ 6 ಮಕ್ಕಳಿದ್ದರೂ ಎಂದು ಹೇಳಲಾಗಿದೆ. ನಾಸಿಕ್‌ನ ದಿಂಡೋರಿ ತಾಲೂಕಿನಲ್ಲಿ ತಡರಾತ್ರಿ ಈ ಅಪಘಾತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

ಪೊಲೀಸರ ಪ್ರಕಾರ, ಮಾರುತಿ XL6 ಕಾರಿನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಬಾವಿಗೆ ಉರುಳಿ ಬಿದ್ದಿದೆ. ವಾಹನದಲ್ಲಿದ್ದ 9 ಜನ ಪ್ರಯಾಣಿಕರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತರೆಲ್ಲರೂ ಇಂದೋರ್ ಗ್ರಾಮದ ದರ್ಗುಡೆ ಕುಟುಂಬದವರು ಎಂದು ಹೇಳಲಾಗಿದೆ.

ಅಪಘಾತದಲ್ಲಿ ಸಾವನ್ನಪ್ಪಿದ 6 ಮಕ್ಕಳಲ್ಲಿ 7 ವರ್ಷದ ಬಾಲಕಿಯೂ ಒಬ್ಬಳು ಎಂದು ಪೊಲೀಸರು ಹೇಳಿದ್ದಾರೆ. ಮೃತರಲ್ಲಿ ಸುನಿಲ್ ದರ್ಗುಡೆ, ಅವರ ಪತ್ನಿ ಮತ್ತು ಅವರ ಮಗಳು ಸೇರಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ, ದರ್ಗುಡೆ ಕುಟುಂಬವು ಖಾಸಗಿ ಕಾರ್ಯಕ್ರಮವೊಂದಕ್ಕೆ ವಾಪಸ್ ಬರುವಾಗ ಈ ಘಟನೆ ನಡೆದಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ವಾಹನದ ಚಾಲಕನ ನಿಯಂತ್ರಣ ತಪ್ಪಿ, ವಾಹನವು ನೇರವಾಗಿ ನೀರು ತುಂಬಿದ ಬಾವಿಗೆ ಬಿದ್ದಿದೆ. ಅಪಘಾತದ ಬಗ್ಗೆ ತಿಳಿದ ತಕ್ಷಣ, ಅಲ್ಲಿ ಜನರು ಮತ್ತು ಪೊಲೀಸರು ರಕ್ಷಣಾ ಕಾರ್ಯಕ್ಕಾಗಿ ಸ್ಥಳಕ್ಕೆ ಧಾವಿಸಿದರು. ಎನ್‌ಡಿಆರ್‌ಎಫ್ ಸಿಬ್ಬಂದಿ ಕೂಡ ಸ್ಥಳಕ್ಕೆ ತಲುಪಿ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಇದನ್ನೂ ಓದಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು; ಓರ್ವ ಸ್ಥಳದಲ್ಲೇ ಸಾವು, ಮೂವರಿಗೆ ಗಾಯ

ರಕ್ಷಣಾ ಕಾರ್ಯಾಚರಣೆ ತಡರಾತ್ರಿಯವರೆಗೂ ಮುಂದುವರೆದಿದೆ ಎಂದು ಹೇಳಲಾಗಿದೆ. ಆದರೆ, ಅಪಘಾತದ ಸ್ಥಳದಲ್ಲಿ ಹೆಚ್ಚಿನ ಜನಸಂದಣಿ ಇದ್ದ ಕಾರಣ ರಕ್ಷಣಾ ಸಿಬ್ಬಂದಿ ತೊಂದರೆಗಳನ್ನು ಎದುರಿಸಿದರು. ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ಹೇಳಿದ್ದಾರೆ. ದಿಂಡೋರಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಪಘಾತದ ನಿಖರವಾದ ಕಾರಣವನ್ನು ಏನು ಎಂಬ ಬಗ್ಗೆ ಕಾರಣ ಹುಡುಕುತ್ತಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Haier New AC: ಭಾರತದ ಮೊದಲ ಸ್ವಯಂ ಶುಚಿಗೊಳಿಸುವ ಎಸಿ ಬಿಡುಗಡೆ, 10 ಸೆಕೆಂಡುಗಳಲ್ಲಿ ಫುಲ್ ಕೂಲ್: ಬೆಲೆ ಕೇವಲ…

ಬೆಂಗಳೂರು (ಏ. 04): ಹೈಯರ್ (Haier) ಭಾರತದಲ್ಲಿ ಹೊಸ ಡೆಸರ್ಟ್ ರೋಸ್ ಎಸಿ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯ ಸ್ಪ್ಲಿಟ್ ಎಸಿಗಳು ಸೆಲ್ಫ್ ಔಟ್‌ಡೋರ್ ಕ್ಲೀನಿಂಗ್ ತಂತ್ರಜ್ಞಾನವನ್ನು ಹೊಂದಿವೆ. ಇದು ಈ ಎಸಿಯ ನಿರ್ವಹಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಸ್ವಚ್ಛವಾದ ಹೊರಾಂಗಣದಿಂದಾಗಿ, ಶುದ್ಧ ಮತ್ತು ತಂಪಾದ ಗಾಳಿಯು ಮನೆಯೊಳಗೆ ಬರುತ್ತದೆ. ಇದು ಸೆಲ್ಫ್ ಆಟೋ ಕ್ಲೀನ್ ಔಟ್‌ಡೋರ್ ಹೊಂದಿರುವ ಭಾರತದ ಮೊದಲ ಎಸಿ ಆಗಿದೆ. ಇದರಲ್ಲಿ, ಹೊರಾಂಗಣ ಫ್ಯಾನ್ ಪ್ರತಿ ಬಾರಿ ಸ್ವಿಚ್ ಆಫ್ ಮಾಡಿದಾಗ 15 ಸೆಕೆಂಡುಗಳ ಕಾಲ ಹಿಮ್ಮುಖವಾಗಿ ತಿರುಗುತ್ತದೆ, ಇದರಿಂದಾಗಿ ಕಂಡೆನ್ಸರ್ ಕಾಯಿಲ್‌ಗಳಲ್ಲಿ ಸಂಗ್ರಹವಾದ ಧೂಳು ಸ್ವಚ್ಛಗೊಳ್ಳುತ್ತದೆ.

ಹೈಯರ್ ಡೆಸರ್ಟ್ ರೋಸ್ ಸರಣಿಯ ಈ AC AI-AtmoX ತಂತ್ರಜ್ಞಾನವನ್ನು ಹೊಂದಿದೆ. ಈ ತಂತ್ರಜ್ಞಾನವು ಮುಖ್ಯವಾಗಿ AI-AtmoX ನ್ಯೂರೋ, AI-ಪವರ್ ಮ್ಯಾನೇಜರ್ ಮತ್ತು AI-AtmoX ಆಟೋ ಕ್ಲೀನ್ ಸೇರಿದಂತೆ ಮೂರು ಆಯ್ಕೆಗಳ ಮೇಲೆ ಕಾರ್ಯನಿರ್ವಹಿಸುತ್ತದೆ. AI-AtmoX ನ್ಯೂರೋ ಬಗ್ಗೆ ಹೇಳುವುದಾದರೆ, ಇದು AI ಕ್ಲೈಮೇಟ್ ಕಂಟ್ರೋಲ್ 2.0 ಅನ್ನು ಆಧರಿಸಿದೆ, ಇದು ಬಳಕೆದಾರರಿಗೆ ಅನುಗುಣವಾಗಿ AC ಯ ತಂಪಾಗಿಸುವಿಕೆಯನ್ನು ಹೊಂದಿಸುತ್ತದೆ. AI ತಂತ್ರಜ್ಞಾನದಿಂದಾಗಿ, ನೀವು ಮನೆಗೆ ತಲುಪಿದಾಗ ಅಂರೆ ನೀವು 100 ಮೀಟರ್ ದೂರದಲ್ಲಿರುವಾಗAC ಅಟೊಮೆಟಿಕ್ ಆಗಿ ಆನ್ ಆಗುತ್ತದೆ.

AI-AtmoX ಪವರ್ ಮ್ಯಾನೇಜರ್ ತಂತ್ರಜ್ಞಾನವು ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರೂಮ್ ತಣ್ಣಗಾದ ನಂತರ ಅದು ಸ್ವಯಂಚಾಲಿತವಾಗಿ ಕಂಪ್ರೆಸರ್ ಅನ್ನು ಆಫ್ ಮಾಡುತ್ತದೆ ಮತ್ತು AC ಪವರ್ ಅನ್ನು ನಿರ್ವಹಿಸುತ್ತದೆ. AI-AtmoX ಆಟೋ ಕ್ಲೀನ್ ವೈಶಿಷ್ಟ್ಯವು AC ಯನ್ನು ಸ್ವಯಂಚಾಲಿತವಾಗಿ ಸ್ವಚ್ಛಗೊಳಿಸುತ್ತದೆ, ಹೊರಾಂಗಣ ಮತ್ತು ಒಳಾಂಗಣ ಪರಿಸರಗಳಿಂದ ಧೂಳು ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ.

Tech Tips: ಲ್ಯಾಪ್‌ಟಾಪ್ ಚಾರ್ಜರ್‌ನಿಂದ ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್ಸ್

ಡೆಸರ್ಟ್ ರೋಸ್ ಎಸಿ ಬೆಲೆ ಎಷ್ಟು?

ಹೈಯರ್‌ನ ಈ ಹೊಸ ಸರಣಿಯ ಆರಂಭಿಕ ಬೆಲೆ ರೂ. 55,990. ಇದು ಎರಡು ಮಾದರಿಗಳಲ್ಲಿ ಬರುತ್ತದೆ: ಗೋಲ್ಡ್ ಸ್ಟ್ರೈಪ್ ಮತ್ತು ನೆಬ್ಯುಲಾ ಬ್ಲೂ ಸ್ಟ್ರೈಪ್. ಇವು ಭಾರತದಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಪ್ರಮುಖ ಚಿಲ್ಲರೆ ಚಾನೆಲ್‌ಗಳ ಮೂಲಕ ಖರೀದಿಗೆ ಲಭ್ಯವಿದೆ.

ಈ ಹೈಯರ್ ಎಸಿ ಸರಣಿಯು AI ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಮಾನವ ಪತ್ತೆ ಕಾರ್ಯವನ್ನು ಸಹ ಒಳಗೊಂಡಿದೆ, ಇದು ಕೋಣೆಯಲ್ಲಿ ಯಾರೂ ಇಲ್ಲದ 15 ನಿಮಿಷಗಳಲ್ಲಿ ಆಟೋ ಎಲ್ 3 ಮೋಡ್ ಅನ್ನು ಸಕ್ರಿಯಗೊಳಿಸುತ್ತದೆ. ಇದಲ್ಲದೆ, ಇದು 30 ನಿಮಿಷಗಳ ನಂತರ ಎಸಿಯ ವಿದ್ಯುತ್ ಅನ್ನು ಆಫ್ ಮಾಡುತ್ತದೆ. ಈ ರೀತಿಯಾಗಿ, ಎಸಿ ಆಕಸ್ಮಿಕವಾಗಿ ಆನ್ ಆಗಿದ್ದರೂ ಸಹ, ಅದು ವಿದ್ಯುತ್ ಅನ್ನು ಬಳಸುವುದಿಲ್ಲ. ಇದಲ್ಲದೆ, ಈ ಎಸಿ ಆನ್ ಮಾಡಿದ ಕೇವಲ 10 ಸೆಕೆಂಡುಗಳಲ್ಲಿ ತಂಪಾದ ಗಾಳಿಯನ್ನು ತಲುಪಿಸಲು ಪ್ರಾರಂಭಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಎಲ್ಲೂ ಇಲ್ಲ ಅಂದ್ರೆ ಕೊನೆಗೆ ಸ್ಯಾಂಡಲ್​​ವುಡ್​​ನಲ್ಲಾದರೂ ಕೆಲಸ ಮಾಡಬಹುದು’; ವಿರಾಟ್ ಕೊಹ್ಲಿ

ಐಪಿಎಲ್ ಕಾರಣಕ್ಕೆ ವಿರಾಟ್ ಕೊಹ್ಲಿ ಅವರು ಸದ್ಯ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಭಾನುವಾರ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಸಿಎಸ್​ಕೆ ವಿರುದ್ಧದ ಪಂದ್ಯಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಮಧ್ಯೆ ಅವರು ದ್ಯಾನಿಶ್ ಸೇಠ್ ಜೊತೆ ಯೂಟ್ಯೂಬ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಕೇವಲ ಐದು ನಿಮಿಷ ಇರೋ ಈ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಸ್ಯಾಂಡಲ್​​ವುಡ್​​ನಲ್ಲಿ ಆ್ಯಕ್ಟ್ ಮಾಡೋ ಬಗ್ಗೆ ಕೊಹ್ಲಿ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಆರ್​​ಸಿಬಿ ಇನ್​​ಸೈಡರ್ ನ್ಯಾಗ್ಸ್ (ದ್ಯಾನಿಶ್ ಸೇಠ್) ಇದ್ದಲ್ಲಿ ಫನ್​​ಗೆ ಬರ ಇರೋದಿಲ್ಲ. ಐಪಿಎಲ್ ಮ್ಯಾಚ್ ನಡೆಯುವಾಗ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ವಿಡಿಯೋಗಳನ್ನು ಮಾಡುವ ಮೂಲಕ ನ್ಯಾಗ್ಸ್ ಅವರು ಗಮನ ಸೆಳೆಯುತ್ತಾ ಇರುತ್ತಾರೆ. ಈಗ ಅವರು ವಿರಾಟ್ ಕೊಹ್ಲಿ ಸಂದರ್ಶನ ಮಾಡಿದ್ದಾರೆ. ಆಗ ಆರ್​​ಸಿಬಿ ಮಾಲೀಕತ್ವ ಬದಲಾದ ಬಗ್ಗೆ ಮಾತನಾಡಿದ್ದಾರೆ.

‘ಕಂಪನಿ ಯಾವುದೇ ಬರಲಿ, ನ್ಯಾಗ್ಸ್ ಇದ್ದೇ ಇರ್ತಾರೆ. ನೀವು ಹಾಗೂ ಜಿರಳೆ ಮಾತ್ರ ಎಲ್ಲ ಕಡೆಗಳಲ್ಲಿ ಉಳಿದುಕೊಳ್ಳಲು ಸಾಧ್ಯ’ ಎಂದು ಕೊಹ್ಲಿ ಹೇಳಿದರು. ಇದಕ್ಕೆ ಕೌಂಟರ್ ಕೊಟ್ಟ ನ್ಯಾಗ್ಸ್, ‘ನಿಮಗೆ ಅಭದ್ರತಾ ಭಾವ ಕಾಡುತ್ತಿದೆಯೇ? ಹಾಗೆ ಕಾಡುತ್ತಿದ್ದರೆ ಹೇಳಿ ನಾನು ನಿಮ್ಮನ್ನು ನನ್ನ ಜೊತೆ ಕರೆದುಕೊಂಡು ಹೋಗುತ್ತೇನೆ, ಭಯಬೇಡಿ’ ಎಂದು ನ್ಯಾಗ್ಸ್ ಹೇಳಿದರು.

‘ನನಗೆ ಅಭದ್ರತಾ ಭಾವ ಕಾಡುತ್ತಿಲ್ಲ. ಏಕೆಂದರೆ ಎಲ್ಲೂ ಆಗಿಲ್ಲ ಅಂದ್ರೆ ಕೊನೆಗೆ ನಿಮ್ಮ ಇನ್​​ಫ್ಲ್ಯುಯೆನ್ಸ್ ಬಳಸಿ ನಾನು ಸ್ಯಾಂಡಲ್​​ವುಡ್​​ನಲ್ಲಿ ಕೆಲಸ ಮಾಡಬಹುದು. ನಿವು ಇಲ್ಲಿ ದೊಡ್ಡ ಸ್ಟಾರ್ ಅಲ್ಲವೇ? ನಾನು ಸೈಡ್ ರೋಲ್ ಮಾಡುತ್ತೇನೆ’ ಎಂದಿದ್ದಾರೆ ಕೊಹ್ಲಿ. ಆಗ ನ್ಯಾಗ್ಸ್ ‘ನಾನು ನಿಮ್ಮ ಪರ ಇದ್ದೇನೆ ಭಯ ಬೇಡ’ ಎಂದರು. ಈ ಫನ್ ಗಮನ ಸೆಳೆದಿದೆ.

ಇದನ್ನೂ ಓದಿ: ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ತಂದೆ ವಿರಾಟ್ ಕೊಹ್ಲಿ..! ಯುವತಿಯ ಸ್ಫೋಟಕ ವಿಡಿಯೋ ವೈರಲ್

ದ್ಯಾನಿಶ್ ಅವರು ಕನ್ನಡದಲ್ಲಿ ‘ಹಂಬಲ್ ಪೊಲಿಟೀಶಿಯನ್ ನೋಗರಾಜ್’ ಸಿನಿಮಾದಲ್ಲಿ ನಟಿಸಿದರು. ಆ ಬಳಿಕ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ‘ಫ್ರೆಂಚ್ ಬಿರಿಯಾನಿ’ ಸಿನಿಮಾ ಮೆಚ್ಚುಗೆ ಪಡೆದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಪೋಕ್ಸೋ ಪ್ರಕರಣಗಳನ್ನು ತಕ್ಷಣ ವರದಿ ಮಾಡಬೇಕು; ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ!

ಬೆಂಗಳೂರು, ಏಪ್ರಿಲ್ 04: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಾಸಗಿ ಆಸ್ಪತ್ರೆಗಳಿಗಾಗಿ ಮಹತ್ವದ ನಿರ್ದೇಶನ ಹೊರಡಿಸಿದೆ. ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ, ಪೋಕ್ಸೋ ಕಾಯ್ದೆ 2012ರಡಿ (POCSO Act) ಕಡ್ಡಾಯವಾಗಿ ವರದಿ ಸಲ್ಲಿಸುವಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪತ್ತೆಯಾದಾಗ ಖಾಸಗಿ ಆಸ್ಪತ್ರೆಗಳು ತಕ್ಷಣವೇ ಪೊಲೀಸ್ ಇಲಾಖೆ ಅಥವಾ ವಿಶೇಷ ಕಿಶೋರ ಪೊಲೀಸ್ ಘಟಕಕ್ಕೆ ಮಾಹಿತಿ ನೀಡಬೇಕು ಎಂದು ಇಲಾಖೆಯು ಸ್ಪಷ್ಟಪಡಿಸಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳು ಆಸ್ಪತ್ರೆಗಳಿಗೆ ಮೊದಲು ತಿಳಿಯುವುದರಿಂದ ತಕ್ಷಣದ ಕ್ರಮ ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ.ಸಂಕಷ್ಟದಲ್ಲಿರುವ ಮಕ್ಕಳಿಗೆ ನೆರವಾಗಲು ಚೈಲ್ಡ್‌ಲೈನ್ 1098 ಸೇವೆಯನ್ನು ಬಳಸಬಹುದಾಗಿದೆ.

ನಿಯಮ ಪಾಲಿಸದಿದ್ದರೆ ಆಸ್ಪತ್ರೆ ವಿರುದ್ಧ ಕ್ರಮ

ಈ ನಿಯಮಗಳನ್ನು ಪಾಲಿಸದ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಪ್ರಕರಣಗಳನ್ನು ಮರೆಮಾಚುವುದು ಅಥವಾ ವರದಿ ಮಾಡಲು ವಿಳಂಬ ಮಾಡುವುದು ತನಿಖೆಗೆ ಅಡ್ಡಿಯಾಗುವುದಲ್ಲದೆ, ಸಂತ್ರಸ್ತರ ಸುರಕ್ಷತೆಗೂ ಅಡ್ಡಿಯಾಗುತ್ತದೆ.

ಇದನ್ನೂ ಓದಿ ಜೈಲಿನಿಂದಲೇ ಅಪ್ರಾಪ್ತ ಬಾಲಕಿಗೆ ಪೋಕ್ಸೊ ಆರೋಪಿ ಬೆದರಿಕೆ: ಆತನಿಗೆ ಮೊಬೈಲ್ ಕೊಟ್ಟವರು ಯಾರು?

ಇದಲ್ಲದೆ, ಆಸ್ಪತ್ರೆಗಳು ತಮ್ಮ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವಂತೆ ಹಾಗೂ ಇಂತಹ ಪ್ರಕರಣಗಳನ್ನು ನಿಭಾಯಿಸುವಲ್ಲಿ ಸರಿಯಾದ ಕ್ರಮಗಳನ್ನು ಅನುಸರಿಸುವಂತೆಯೂ ಸೂಚಿಸಲಾಗಿದೆ. ಈ ಕ್ರಮದ ಮೂಲಕ ಮಕ್ಕಳ ರಕ್ಷಣೆಯಲ್ಲಿ ಖಾಸಗಿ ಆಸ್ಪತ್ರೆಗಳ ಜವಾಬ್ದಾರಿಯನ್ನು ಹೆಚ್ಚಿಸುವುದೇ ಸರ್ಕಾರದ ಉದ್ದೇಶವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು; ಓರ್ವ ಸ್ಥಳದಲ್ಲೇ ಸಾವು, ಮೂವರಿಗೆ ಗಾಯ

ಪೆದ್ದಪಲ್ಲಿ, ಏ.4: ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಗೋದಾವರಿಖನಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ನಗರದ ರಾಜೇಶ್ ಥಿಯೇಟರ್ ಬಳಿ ಈ ದುರ್ಘಟನೆ ನಡೆದಿದೆ. ಅತಿ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ವಾಹನದ ಒಳಗಿದ್ದ ನಾಲ್ವರು ಸಿಲುಕಿಕೊಂಡಿದ್ದರು. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಶ್ರೀಧರ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಸಿಂಗರೇಣಿ ಕಾಲರೀಸ್ ಕಂಪನಿಯ (Singareni) ಉದ್ಯೋಗಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇತರ ಮೂವರನ್ನು ಪೊಲೀಸರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಪೊಲೀಸರು ಕಾರಿನೊಳಗೆ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಅತಿ ವೇಗವೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಸದ ಶಶಿ ತರೂರ್ ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ಕೇರಳ, ಏ.4: ಮಲಪ್ಪುರಂ ಜಿಲ್ಲೆಯಲ್ಲಿ ಶುಕ್ರವಾರ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಬೆಂಗಾವಲು ವಾಹನವನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸಲಾಗಿದೆ. ಇದರ ಜತೆಗೆ ಅವರ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ವಿಡಿಯೋವೊಂದು ಎಕ್ಸ್​ ಖಾತೆಯಲ್ಲಿ ವೈರಲ್​​ ಆಗಿದೆ. ಶಶಿ ತರೂರ್ ಅವರು ವಂಡೂರಿನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ತಿರುವಳ್ಳಿ ಚೆಲ್ಲಿತೋಡು ಸೇತುವೆ ಬಳಿ ಬೆಂಗಾವಲು ಪಡೆಯನ್ನು ತಡೆಹಿಡಿಯಲಾಯಿತು. ಭದ್ರತಾ ಸಿಬ್ಬಂದಿಯ ದೂರಿನ ಆಧಾರದ ಮೇಲೆ, ವಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೂವರನ್ನು ಬಂಧಿಸಿ, ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಳಿಕಾವು ಮೂಲದ ಉಮ್ಮಾರ ಎಂಬ ಆರೋಪಿಯ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ. ಕೇರಳದಲ್ಲಿ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ಮನೆ ನಿರ್ಮಾಣ ಕಾರ್ಯದಲ್ಲಿ ವಿಘ್ನ ಬರಬಾರದೆಂದರೆ ಈ ವಾಸ್ತು ನಿಯಮ ಪಾಲಿಸಿ

ಪ್ರತಿಯೊಬ್ಬರಿಗೂ ಸ್ವಂತ ಮನೆಯ ಕನಸು ಇರುತ್ತದೆ. ಈ ಕನಸನ್ನು ನನಸು ಮಾಡುವಾಗ, ಗೃಹಾರಂಭಕ್ಕೆ ಸರಿಯಾದ ಸಮಯವನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ. ಹಿಂದೂ ಸನಾತನ ಸಂಸ್ಕೃತಿ ಮತ್ತು ಪರಂಪರೆಗಳಲ್ಲಿ, ಕೆಲವು ನಿರ್ದಿಷ್ಟ ಮಾಸಗಳಲ್ಲಿ ಶಂಕುಸ್ಥಾಪನೆ ಅಥವಾ ಪಾಯ ಪೂಜೆ ಮಾಡುವುದು ನಿರ್ವಿಘ್ನವಾಗಿ ಕಾರ್ಯ ನೆರವೇರಲು ಸಹಾಯಕವಾಗುತ್ತದೆ. ಈ ಬಗ್ಗೆಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಮನೆ ನಿರ್ಮಾಣದ ಸಮಯದಲ್ಲಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜಾತಕದಲ್ಲಿರುವ ಮನೆ ಯೋಗವನ್ನು ಪರಿಶೀಲಿಸಲಾಗುತ್ತದೆ. ನಾಲ್ಕನೇ ಮನೆ, ಅದರ ಅಧಿಪತಿ ಮತ್ತು ಅದರ ಮೇಲಿನ ದೃಷ್ಟಿಯ ಬಲ, ಹಾಗೆಯೇ ಒಂಬತ್ತನೇ ಮತ್ತು ಹನ್ನೊಂದನೇ ಮನೆಯ ಯೋಗಾಯೋಗಗಳನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇದರ ಜೊತೆಗೆ, ಪಂಚಾಂಗದ ಆಧಾರದ ಮೇಲೆ ಶುಭ ಮುಹೂರ್ತಗಳನ್ನು ಸಹ ಪರಿಗಣಿಸುವುದು ವಾಡಿಕೆ. ವಾಸ್ತು ಪುರುಷನು ಈಶಾನ್ಯದ ಕಡೆ ತಲೆ ಇಟ್ಟುಕೊಂಡು, ನೈರುತ್ಯದ ಕಡೆ ಕಾಲು ಇಟ್ಟು ಮಲಗಿರುತ್ತಾನೆ ಎಂಬುದು ವಾಸ್ತುಶಾಸ್ತ್ರದ ಪ್ರಮುಖ ಅಂಶ.

ಗೃಹಾರಂಭಕ್ಕೆ ಸೂಕ್ತ ಮಾಸಗಳ ಕುರಿತು ಬಾದರಾಯಣರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ, ವೈಶಾಖ ಮಾಸ, ಫಾಲ್ಗುಣ ಮಾಸ, ಶ್ರಾವಣ ಮಾಸ ಮತ್ತು ಮಾಘ ಮಾಸಗಳಲ್ಲಿ ಗೃಹಾರಂಭ ಮಾಡಿದರೆ ಅದು ನಿರ್ವಿಘ್ನವಾಗಿ ಪರಿಪೂರ್ಣಗೊಳ್ಳುತ್ತದೆ. ನಾರದ ಮಹರ್ಷಿಗಳು ಪುಷ್ಯ ಮಾಸವನ್ನೂ ಗೃಹಾರಂಭಕ್ಕೆ ಶುಭ ಎಂದು ಸೇರಿಸಿದ್ದಾರೆ. ಧನ, ಕನಕ, ಆರೋಗ್ಯ ಮತ್ತು ಆಯುಷ್ಯ ಉತ್ತಮವಾಗಿರಲು ಶುಭ-ಅಶುಭ ಮಾಸಗಳನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳುವುದು ಅವಶ್ಯಕ. ಯಾವಾಗಲೂ ಸ್ಥಿರ ಮಾಸ ಮತ್ತು ಸ್ಥಿರ ರಾಶಿಗಳಲ್ಲಿ ಶಂಕುಸ್ಥಾಪನೆ ಮಾಡುವುದು ಅತ್ಯಂತ ಉತ್ತಮವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ವಿವಿಧ ಮಾಸಗಳಲ್ಲಿ ಗೃಹಾರಂಭದ ಫಲಗಳು ಹೀಗಿವೆ:

  • ಚೈತ್ರ ಮಾಸ: ಈ ಮಾಸದಲ್ಲಿ ಗೃಹಾರಂಭ ಮಾಡಿದರೆ ಶೋಕಗಳು ಜಾಸ್ತಿಯಾಗುವ ಸಾಧ್ಯತೆ ಇದೆ.
  • ವೈಶಾಖ ಮಾಸ: ಈ ಮಾಸವು ಧನಯೋಗ, ಕೀರ್ತಿ ಮತ್ತು ಪ್ರತಿಷ್ಠೆಗಳನ್ನು ಹೆಚ್ಚಿಸುತ್ತದೆ. ಇದು ಅತ್ಯಂತ ಶುಭಕರ ಮಾಸಗಳಲ್ಲಿ ಒಂದು.
  • ಜೇಷ್ಠ ಮಾಸ: ಜೇಷ್ಠ ಮಾಸದಲ್ಲಿ ಅನಾರೋಗ್ಯದ ಸಾಧ್ಯತೆ ಇರುವುದರಿಂದ ಪಾಯ ಹಾಕುವುದನ್ನು ಸಾಮಾನ್ಯವಾಗಿ ತಪ್ಪಿಸಲಾಗುತ್ತದೆ.
  • ಆಷಾಢ ಮಾಸ: ಈ ಮಾಸದಲ್ಲಿ ಪ್ರಾರಂಭಿಸಿದರೆ ಅಪಘಾತಗಳು ಮತ್ತು ವಾಹನ ಕಂಟಕಗಳು ಹೆಚ್ಚಾಗುವ ಸಾಧ್ಯತೆ ಇದೆ.
  • ಶ್ರಾವಣ ಮಾಸ: ಶ್ರಾವಣ ಮಾಸವು ಧನಯೋಗವನ್ನು ತರುತ್ತದೆ ಮತ್ತು ಶುಭವೆಂದು ಪರಿಗಣಿಸಲಾಗುತ್ತದೆ.
  • ಭಾದ್ರಪದ ಮಾಸ: ಈ ಮಾಸವು ದಾರಿದ್ರ್ಯವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಆದ್ದರಿಂದ ಇದನ್ನು ತಪ್ಪಿಸುವುದು ಉತ್ತಮ.
  • ಆಶ್ವೀಜ ಮಾಸ: ಆಶ್ವೀಜ ಮಾಸವು ಕಲಹಗಳನ್ನು ತರಬಹುದು.
  • ಕಾರ್ತಿಕ ಮಾಸ: ಈ ಮಾಸದಲ್ಲಿ ಹಣಕಾಸಿನ ತೊಂದರೆ ಇಲ್ಲದಿದ್ದರೂ ಅನುಕೂಲ ಮಾಡಿಕೊಡುತ್ತದೆ.
  • ಮಾರ್ಗಶಿರ ಮಾಸ: ಈ ಮಾಸದಲ್ಲಿ ಕೆಲಸಗಳು ನಿಧಾನವಾಗಿ ಸಾಗುವ ಸಾಧ್ಯತೆ ಇದೆ.
  • ಪುಷ್ಯ ಮಾಸ: ಎಲ್ಲರಿಗೂ ಅಷ್ಟು ಶುಭವಲ್ಲದಿದ್ದರೂ, ನಾರದ ಮಹರ್ಷಿಗಳು ಇದನ್ನು ಶುಭವೆಂದು ಪರಿಗಣಿಸಿದ್ದಾರೆ.
  • ಮಾಘ ಮಾಸ: ಒಳ್ಳೆ ಮನಸ್ಸಿನಿಂದ ಪ್ರಾರಂಭಿಸಿದರೆ ಮನೆ ಬೇಗ ಪೂರ್ಣಗೊಳ್ಳಲು ಸಹಾಯಕ.
  • ಫಾಲ್ಗುಣ ಮಾಸ: ಇದು ಕೂಡ ಗೃಹಾರಂಭಕ್ಕೆ ಶುಭ ಮಾಸವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಜಿಗುಪ್ಸೆ: ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಕುರಿಗಾಹಿ ಯುವಕ ಆತ್ಮಹತ್ಯೆ!

ಚಿಕ್ಕಮಗಳೂರು, ಏಪ್ರಿಲ್ 4: ಮದುವೆ ವಯಸ್ಸು ಮೀರಿದರೂ ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ಯುವಕನೊಬ್ಬ ಕುಡಿದ ಮತ್ತಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ತಾಲ್ಲೂಕಿನ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬ್ರಹ್ಮಸಂದ್ರ ಗ್ರಾಮದ ನಿವಾಸಿ ಕುಮಾರ್ (26) ಮೃತಪಟ್ಟ ದುರ್ದೈವಿ. ಕುಮಾರ್ ಕಡೂರು ತಾಲ್ಲೂಕಿನ ಬೋರಗಾನಹಳ್ಳಿಯ ಪರಮೇಶ್ವರಪ್ಪ ಎಂಬುವವರ ತೋಟದಲ್ಲಿ ಕುರಿ ಮಂದೆ ಬಿಟ್ಟುಕೊಂಡು ಕೆಲಸ ಮಾಡುತ್ತಿದ್ದ.

ಘಟನೆಯ ಹಿನ್ನೆಲೆ

ಇತ್ತೀಚೆಗೆ ರಾಮನವಮಿ ಹಬ್ಬಕ್ಕೆ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಕುಮಾರ್, ಮದುವೆ ಮಾಡಿಸಿ ಮಾಡುವಂತೆ ಪೋಷಕರ ಬಳಿ ಪಟ್ಟು ಹಿಡಿದಿದ್ದ. ಆದರೆ, ಪೋಷಕರು ಮೊದಲು ಇಬ್ಬರು ಅಣ್ಣಂದಿರ ಮದುವೆಯಾಗಲಿ, ನಂತರ ನಿನಗೆ ಮದುವೆ ಮಾಡುತ್ತೇವೆ ಎಂದು ತಿಳಿಸಿದ್ದರು. ಅಲ್ಲಿಯವರೆಗೆ ಕುರಿ ಮೇಯಿಸಿಕೊಂಡು ಇರುವಂತೆ ಸೂಚಿಸಿ ಮಗನನ್ನು ವಾಪಸ್ ಕಳುಹಿಸಿದ್ದರು.

ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ವಿಡಿಯೋ ಇರೋದು ನಿಜ, ಆದ್ರೆ… ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆರೋಪಿ!

ಆದರೆ, ತನಗೆ ಮದುವೆಯಾಗುತ್ತಿಲ್ಲ ಎಂಬ ಚಿಂತೆಯಲ್ಲಿದ್ದ ಕುಮಾರ್, ಮಾನಸಿಕವಾಗಿ ಜಿಗುಪ್ಸೆಗೆ ಒಳಗಾಗಿದ್ದ. ಇದೇ ವಿಚಾರವಾಗಿ ಮನನೊಂದು ಕುಡಿದ ಮತ್ತಿನಲ್ಲಿ ತೋಟದ ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version