ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಪ್ಪು ಬಣ್ಣದ ಮಹೀಂದ್ರಾ ಥಾರ್ (Thar) ಎಸ್‌ಯುವಿಯ ಮುಂಭಾಗದ ಚಕ್ರದ ಅಡಿಯಲ್ಲಿ ಪುಟ್ಟ ಕರುವೊಂದು ಆಕಸ್ಮಿಕವಾಗಿ ಸಿಲುಕಿಕೊಂಡಿತ್ತು. ತನ್ನ ಕರು ಅಪಾಯದಲ್ಲಿರುವುದನ್ನು ಕಂಡ ತಾಯಿ ಹಸು ಗಾಬರಿಗೊಂಡು, ಕಾರಿನ ಮೇಲೆರಗಲು ಪ್ರಯತ್ನಿಸುತ್ತಿತ್ತು. ಕರುವಿನ ರಕ್ಷಣೆಗಾಗಿ ಹಸು ಕಾರನ್ನು ತನ್ನ ಕೊಂಬಿನಿಂದ ಎತ್ತಲು ಪ್ರಯತ್ನಿಸುತ್ತಿದ್ದ ದೃಶ್ಯ ವಿಡಿಯೋದಲ್ಲಿದೆ.ತಕ್ಷಣವೇ ಸ್ಥಳಕ್ಕೆ ಬಂದ ಕಾರಿನ ಮಾಲೀಕರು ಮತ್ತು ಸ್ಥಳೀಯರು ಹಸುವನ್ನು ಸಮಾಧಾನಪಡಿಸಲು ಯತ್ನಿಸಿದರು. ನಂತರ ಅತ್ಯಂತ ಎಚ್ಚರಿಕೆಯಿಂದ ಕಾರಿನ ಮುಂಭಾಗವನ್ನು ಜ್ಯಾಕ್ (Jack) ಬಳಸಿ ಮೇಲಕ್ಕೆತ್ತಿ, ಅಡಿಯಲ್ಲಿ ಸಿಲುಕಿದ್ದ ಕರುವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಚಕ್ರದ ಅಡಿಯಿಂದ ಹೊರಬಂದ ತಕ್ಷಣ ಕರು ಓಡಿ ಹೋಗಿ ತನ್ನ ತಾಯಿಯನ್ನು ಸೇರಿಕೊಂಡಿತು. ಈ ಅಪರೂಪದ ಪುನರ್ಮಿಲನವನ್ನು ಕಂಡು ನೆರೆದಿದ್ದ ಜನರು ಹರ್ಷ ವ್ಯಕ್ತಪಡಿಸಿದರು. ಸಕಾಲದಲ್ಲಿ ಸ್ಪಂದಿಸಿ ಮೂಕಪ್ರಾಣಿಯ ಜೀವ ಉಳಿಸಿದ ಕಾರಿನ ಮಾಲೀಕನ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆಯ ಸುರಿಮಳೆಗರೆಯುತ್ತಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ (Hardik Pandya) ಕಾರುಗಳ ಮೇಲಿನ ಮೋಹ ಎಂತಹದ್ದು ಎಂಬುದು ಎಲ್ಲರಿಗೂ ತಿಳಿದಿರುವಂತದ್ದೇ. ಪಾಂಡ್ಯ ಗ್ಯಾರೆಜ್ನಲ್ಲಿ ಹಲವು ದುಬಾರಿ ಕಾರುಗಳ ಸಂಗ್ರಹವಿದೆ. ಇದೀಗ ಅವುಗಳ ಪಟ್ಟಿಗೆ ಮತ್ತೊಂದು ದುಬಾರಿ ಕಾರು ಸೇರ್ಪಡೆಗೊಂಡಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ಕೇವಲ ಆರು ತಿಂಗಳಲ್ಲಿ ನಾಲ್ಕನೇ ಐಷಾರಾಮಿ ಕಾರನ್ನು ಖರೀದಿಸಿದಂತ್ತಾಗಿದೆ. ಈ ಬಾರಿ ಇತ್ತೀಚೆಗೆ ಬಿಡುಗಡೆಯಾದ ಕಾರನ್ನು ಖರೀದಿಸಿರುವ ಹಾರ್ದಿಕ್, ತಮ್ಮ ಗೆಳತಿ ಮಹಿಕಾ ಅವರೊಂದಿಗೆ ಕಾರಿನ ಮುಂದೆ ನಿಂತ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಹೊಸ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ ಹೊಸ ಜನರೇಷನ್ನ ಮರ್ಸಿಡಿಸ್-ಬೆನ್ಜ್ ವಿ-ಕ್ಲಾಸ್ ಕಾರನ್ನು ಖರೀದಿಸಿದ್ದಾರೆ. ಈ ಮೂಲಕ ಈ ಕಾರನ್ನು ಖರೀದಿಸಿದ ಭಾರತದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಈ ಐಷಾರಾಮಿ MPV (ಬಹುಪಯೋಗಿ ವಾಹನ) ಕಾರಿಗೆನ ಬೆಲೆ ಸುಮಾರು ₹1.4 ಕೋಟಿ ರೂ. ಎನ್ನಲಾಗುತ್ತಿದೆ. ಆರಾಮದಾಯಕ ಕುಟುಂಬ ಪ್ರಯಾಣ ಮತ್ತು ಪ್ರೀಮಿಯಂ ಐಷಾರಾಮಿಗೆ ಹೆಸರುವಾಸಿಯಾದ ಇದು ವಿಶಾಲವಾದ ಒಳಾಂಗಣ, ಉನ್ನತ-ಮಟ್ಟದ ವೈಶಿಷ್ಟ್ಯಗಳು ಮತ್ತು ಸಾಟಿಯಿಲ್ಲದ ಸೌಕರ್ಯವನ್ನು ಹೊಂದಿದೆ.
HARDIK PANDYA GIFT 1.7 CRORE CAR TO HIS GIRLFRIEND
– Hardik Pandya gifted India’s first Mercedes-Benz V-Class to his girlfriend Mahieka sharma today, and its price is around ₹1.7 crore.pic.twitter.com/Cplo3im3iO
ಹಾರ್ದಿಕ್ ಪಾಂಡ್ಯ ಅವರ ಗ್ಯಾರೇಜ್ ಈಗಾಗಲೇ ಹಲವಾರು ದುಬಾರಿ ಕಾರುಗಳಿಂದ ತುಂಬಿದೆ. ಪಾಂಡ್ಯ ಇತ್ತೀಚೆಗೆ ಸುಮಾರು ₹4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಖರೀದಿಸಿ, ಅವರ ಮಗನಿಗೆ ಉಡುಗೊರೆಯಾಗಿ ನೀಡಿದ್ದರು. ಆ ಬಳಿಕ ಸುಮಾರು 12 ಕೋಟಿ ರೂ. ಮೌಲ್ಯದ ಫೆರಾರಿ 12-ಸಿಲಿಂಡರ್ ಕಾರನ್ನು ಪಾಂಡ್ಯ ಇತ್ತೀಚೆಗೆ ಖರೀದಿಸಿದ್ದರು. ಹಾಗೆಯೇ 4.5 ಕೋಟಿ ರೂ. ಮೌಲ್ಯದ ಲಂಬೋರ್ಘಿನಿ ಉರುಸ್ ಕಾರನ್ನು ಸಹ ಖರೀದಿಸಿದ್ದರು.
ಇನ್ನು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಲೀಗ್ನಲ್ಲಿ ಗೆಲುವಿನ ಶುಭಾರಂಭ ಮಾಡಿದ್ದಾರೆ. ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಎದುರಿಸಿದ್ದ ಮುಂಬೈ, ಕೆಕೆಆರ್ ನೀಡಿದ್ದ 221 ರನ್ಗಳ ಗುರಿಯನ್ನು ಕೊನೆಯ ಓವರ್ನಲ್ಲಿ ಬೆನ್ನಟ್ಟಿ ಗೆಲುವು ಸಾಧಿಸಿತು. ಈ ಮೂಲಕ 2013 ರ ನಂತರ ಐಪಿಎಲ್ನ ಮೊದಲ ಪಂದ್ಯದಲ್ಲಿ ಗೆದ್ದ ಸಾಧನೆಯನ್ನು ಮುಂಬೈ ತಂಡ ಮಾಡಿದೆ. ಹಾಗೆಯೇ 221 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಿದ ದಾಖಲೆ ಕೂಡ ಮುಂಬೈ ಪಾಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ದೆಹಲಿ, ಮಾ.30: ನಾವು ಯಾವಾಗಲೂ ನಮ್ಮ ವಯಸ್ಸು ಹೆಚ್ಚುತ್ತಿರುವುದರ ಬಗ್ಗೆ ಯೋಚಿಸುತ್ತೇವೆ ಮತ್ತು ಪ್ರತಿದಿನ ನಮ್ಮ ಆರೋಗ್ಯದ ಕಡೆ ಗಮನ ಕೊಡುತ್ತೇವೆ. ಫಿಟ್ನೆಸ್ ಟ್ರ್ಯಾಕ್ ಮಾಡುತ್ತೇವೆ, ಡಯಟ್ ಮತ್ತು ಕ್ಯಾಲೋರಿಗಳನ್ನು ಲೆಕ್ಕ ಹಾಕುತ್ತೇವೆ, ನಿದ್ರೆಯನ್ನು ಟ್ರ್ಯಾಕ್ ಮಾಡುತ್ತೇವೆ ಮತ್ತು ನಿಯಮಿತವಾಗಿ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುತ್ತೇವೆ. ಇವೆಲ್ಲವೂ ನಾವು ವಯಸ್ಸಾದರೂ ಆರೋಗ್ಯಕರವಾಗಿ ಮತ್ತು ಯುವಕರಂತೆ ಕಾಣಲು ನೆರವಾಗುತ್ತವೆ. ಆದರೆ, ನೀವು ಎಂದಾದರೂ ನಿಮ್ಮ ಹಲ್ಲಿನ ವಯಸ್ಸಿನ ಬಗ್ಗೆ ಯೋಚಿಸಿದ್ದೀರಾ? ನಿಮ್ಮ ದಂತ ವಯಸ್ಸು ನಿಮ್ಮ ನಿಜವಾದ ವಯಸ್ಸಿಗಿಂತ ಹೆಚ್ಚಿರಬಹುದು. ಈ ಪ್ರಮುಖ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಸೆನ್ಸೋಡೈನ್ ಮತ್ತು ಟಿವಿ9 ನೆಟ್ವರ್ಕ್, ಇಂಡಿಯನ್ ಡೆಂಟಲ್ ಅಸೋಸಿಯೇಷನ್ (IDA) ಸಹಯೋಗದೊಂದಿಗೆ ನಿಮ್ಮ ದಂತ ವಯಸ್ಸು ತಿಳಿಯಿರಿ (Know Your Dental Age) ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಿವೆ.
ಈ ಅಭಿಯಾನಕ್ಕೆ ಚಾಲನೆ ನೀಡಲು, ಹೆಲಿಯಾನ್ ಇಂಡಿಯಾದ ಸಿಇಒ ಮತ್ತು ಏಷ್ಯಾ ಅಧ್ಯಕ್ಷರಾದ ಮಿಸ್ಟರ್ ಕೆದಾರ್ ಲೆಲೆ, ಟಿವಿ9 ನೆಟ್ವರ್ಕ್‌ನ ಪ್ರತಿನಿಧಿ ಎಂಜಾಸ್ ಮತ್ತು ಕೇಂದ್ರ ಸಚಿವೆ ಅನುಪ್ರಿಯ ಪಟೇಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮಿಸ್ಟರ್ ಕೆದಾರ್ ಲೆಲೆ ಅವರು, “ಸ್ವಯಂ ಅರಿವು ಮತ್ತು ಸ್ವಯಂ ಪರೀಕ್ಷೆಯು ಆರೋಗ್ಯದ ಕಡೆಗೆ ಪ್ರಮುಖ ಹೆಜ್ಜೆ ಇಡಲು ಸಹಾಯ ಮಾಡುತ್ತದೆ” ಎಂದು ಹೇಳಿದರು. ಸಚಿವೆ ಅನುಪ್ರಿಯ ಪಟೇಲ್ ಅವರು ಈ ಅಭಿಯಾನವನ್ನು ಶ್ಲಾಘಿಸಿ, “ನಮ್ಮ ದೇಶದ ಜನರಲ್ಲಿ ಮೌಖಿಕ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಇನ್ನು ತುಂಬಾ ಕಡಿಮೆ ಇದೆ. ಅವರಿಗೆ ಮೂಲವಾಗಿ ಏನು ಮಾಡಬೇಕು ಎಂದು ತಿಳಿದಿಲ್ಲ, ಇದು ನಮ್ಮ ಆದ್ಯತೆ ಪಟ್ಟಿಯಲ್ಲಿ ಬಹಳ ಹಿಂದಿದೆ ಎಂಬ ಅರ್ಥವನ್ನು ನೀಡುತ್ತದೆ. ಇಂತಹ ಸಂದರ್ಭದಲ್ಲಿ ನೀವು ಮಾಡುತ್ತಿರುವ ಈ ವಿಶೇಷ ಅಭಿಯಾನ ಅತ್ಯಂತ ಪ್ರಶಂಸನೀಯವಾಗಿದೆ” ಎಂದು ಹೇಳಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
ಮೌಖಿಕ ಆರೋಗ್ಯವನ್ನು ನಿರ್ಲಕ್ಷಿಸುವುದರಿಂದ ಹಲ್ಲುಗಳ ವಯಸ್ಸು ಹೆಚ್ಚಾಗಬಹುದು, ಇದನ್ನು ಡೆಂಟಲ್ ಏಜಿಂಗ್ ಎಂದು ಕರೆಯಲಾಗುತ್ತದೆ. ಸಂವೇದನಾಶೀಲತೆ, ಹಲ್ಲಿನ ಸವೆತ, ದಂತ ಕವಚ ಸಮಸ್ಯೆ, ವಸಡು ಸಮಸ್ಯೆ ಮತ್ತು ಹಲ್ಲು ಹಳದಿಯಾಗುವಿಕೆ ಇವೆಲ್ಲವೂ ಡೆಂಟಲ್ ಏಜಿಂಗ್‌ನ ಲಕ್ಷಣಗಳಾಗಿವೆ. ವರ್ಲ್ಡ್ ಓರಲ್ ಹೆಲ್ತ್ ಡೇ ಸಂದರ್ಭದಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಫಿಟ್ ಆಗಿರಲು ನಾವು ಪ್ರತಿದಿನ ಸಾವಿರಾರು ಹೆಜ್ಜೆಗಳನ್ನು ಹಾಕುತ್ತೇವೆ, ಕ್ಯಾಲೋರಿಗಳನ್ನು ಲೆಕ್ಕ ಹಾಕುತ್ತೇವೆ, ನಿದ್ರೆಯನ್ನು ಟ್ರ್ಯಾಕ್ ಮಾಡುತ್ತೇವೆ. ಇದೇ ರೀತಿ ನಮ್ಮ ಹಲ್ಲುಗಳ ವಯಸ್ಸಿನ ಬಗ್ಗೆಯೂ ಗಮನ ಹರಿಸುವುದು ಅಷ್ಟೇ ಮುಖ್ಯ.
ನಿಮ್ಮ ಹಲ್ಲುಗಳ ವಯಸ್ಸನ್ನು ತಿಳಿದುಕೊಳ್ಳಲು ಮತ್ತು ಅವುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಪ್ರಸ್ತುತಪಡಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಡೆಂಟಲ್ ಏಜ್ ಅನ್ನು ಪರಿಶೀಲಿಸಿಕೊಳ್ಳಬಹುದು. ನಿಮ್ಮ ಹಲ್ಲುಗಳ ವಯಸ್ಸು ನಿಮಗಿಂತ ಹೆಚ್ಚು ಹೆಚ್ಚಾಗಲು ಬಿಡಬೇಡಿ. ಹಲ್ಲು ನೋವು ಪ್ರಾರಂಭವಾಗುವ ಮೊದಲು ನೀವು ಕ್ರಮ ಕೈಗೊಳ್ಳಬೇಕು. ಮೌಖಿಕ ಆರೋಗ್ಯಕ್ಕಾಗಿ ಈ ಮೊದಲ ಹೆಜ್ಜೆಯನ್ನು ಇಟ್ಟು, ಆರೋಗ್ಯಕರ ನಗುವನ್ನು ಕಾಪಾಡಿಕೊಳ್ಳಿ.
ತುಮಕೂರು, ಮಾರ್ಚ್ 30: ಕೌಟುಂಬಿಕ ಕಲಹಕ್ಕೆ ಯುವಕನೋರ್ವ ಬಲಿಯಾಗಿರುವ ಘಟನೆ ತುಮಕೂರುನಗರದ ಬನಶಂಕರಿಯಲ್ಲಿ ನಡೆದಿದೆ. ಅಣ್ಣನಿಂದಲೇ ತಮ್ಮ ಭೀಕರವಾಗಿ ಕೊಲೆಯಾಗಿದ್ದರೆ, ತಂದೆಯೂ ಕೃತ್ಯಕ್ಕೆ ಸಾಥ್ ಕೊಟ್ಟಿದ್ದ ಎಂಬ ವಿಷಯ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಸ್ಟಾಲಿನ್ (29) ಮೃತ ಯುವಕನಾಗಿದ್ದು, ಆತನ ಸಹೋದರ ನವೀನ್ ಮತ್ತು ತಂದೆ ಜಾನ್ ಪಾಲ್ ಎಂಬುವವರೇ ಆರೋಪಿಗಳಾಗಿದ್ದಾರೆ. ಮೃತ ನವೀನ್ಗೆ ವಿವಾಹ ಕೂಡ ನಿಶ್ಚಯವಾಗಿತ್ತು. ಆತ ಜೊತೆಯಾಗಿ ಬಾಳಬೇಕಿದ್ದ ಯುವತಿ ಆಡಿದ್ದ ಒಂದು ಮಾತೇ ಸ್ಟಾಲಿನ್ ಕುಟುಂಬದಲ್ಲಿ ಬೆಂಕಿಯ ಕಿಡಿ ಹೊತ್ತಿಸಿತ್ತು ಎನ್ನಲಾಗಿದೆ. ಇದೇ ತಿಂಗಳ 22ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ಜಾನ್ ಪಾಲ್ಗೆ ಇಬ್ಬರು ಗಂಡುಮಕ್ಕಳಿದ್ದು, ಆ ಪೈಕಿ ನವೀನ್ ಮೊದಲ ಮಗನಾದರೆ ಮೃತ ಸ್ಟಾಲಿನ್ ಎರಡನೇ ಪುತ್ರ. ನವೀನ್ಗೆ ಅದಾಗಲೇ ಮದುವೆಯಾಗಿದ್ದು, ಆತನ ಹೆಂಡತಿ ತುಂಬು ಗರ್ಭಿಣಿ ಕೂಡ ಹೌದು. ಈ ನಡುವೆ ಸ್ಟಾಲಿನ್ಗೆ ಜನಿಫರ್ ಎಂಬ ಯುವತಿಯ ಜೊತೆಗೆ ಮದುವೆ ನಿಶ್ಚಯವಾಗಿತ್ತು. ವಿವಾಹ ತಯಾರಿಯ ನಡುವೆ ತಾನು ಮದುವೆಯಾಗಬೇಕಿದ್ದ ಸ್ಟಾಲಿನ್ ಮತ್ತು ಆತನ ಅತ್ತಿಗೆ ಅಂದರೆ ನವೀನ್ ಪತ್ನಿ ನಡುವೆ ಅಕ್ರಮ ಸಂಬಂಧ ಇರೋದಾಗಿ ಆಕೆ ಗಂಭೀರ ಆರೋಪ ಮಾಡಿದ್ದಳು. ಇದೇ ವಿಚಾರವಾಗಿ ಸ್ಟಾಲಿನ್ ಮನೆಯಲ್ಲಿ ಒಂದು ವಾರದಿಂದ ಗಲಾಟೆ ನಡೆಯುತ್ತಿತ್ತು. ಇದು ವಿಕೋಪಕ್ಕೆ ಹೋಗಿ ಮಾರ್ಚ್ 22ರಂದು ಅಣ್ಣ ನವೀನ್ ತಮ್ಮ ಸ್ಟಾಲಿನ್ನ ಕೊಲೆ ಮಾಡಿದ್ದ. ಬಳಿಕ ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನವನ್ನು ನಡೆಸಲಾಗಿತ್ತು ಎಂಬುದೀಗ ಗೊತ್ತಾಗಿದೆ.
ಕಿರಿಯ ಮಗನ ಕೊಲೆ ಮಾಡಿದ್ದ ನವೀನ್ಗೆ ತಂದೆ ಜಾನ್ ಪಾಲ್ ಕೂಡ ಬೆಂಬಲ ನೀಡಿದ್ದು, ಆರೋಪಿಗಳು ಘಟನೆ ಬಗ್ಗೆ ಕಥೆ ಕಟ್ಟಿದ್ದರು. ಬೈಕ್ ನಿಲ್ಲಿಸುವಾಗ ಕುಸಿದು ಬಿದ್ದು ಕಂಬಿ ತಾಗಿ ಹೊಟ್ಟೆಗೆ ಗಾಯವಾಗಿದೆ ಎಂದು ಹೇಳಿ ಸ್ಟಾಲಿನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಐದು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಿದ್ದಗಂಗಾ ಆಸ್ಪತ್ರೆಯಲ್ಲಿ ಸ್ಟಾಲಿನ್ ಮೃತಪಟ್ಟಿದ್ದಾರೆ. ಮೃತದೇಹ ಕುಟುಂಬಕ್ಕೆ ನೀಡುವ ಮುನ್ನ ಜಯನಗರ ಪೊಲೀಸರಿಗೆ ಆಸ್ಪತ್ರೆ ಮಾಹಿತಿ ಹಿನ್ನೆಲೆ ಪರಿಶೀಲಿಸಿದಾಗ ಚಾಕುವಿನಿಂದ ಇರಿದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ತಂದೆ ಜಾನ್ ಪಾಲ್ನ ಪೊಲೀಸರು ವಿಚಾರಣೆ ನಡೆಸಿದ್ದು, ಈತ ಆರಂಭದಲ್ಲಿ ಕತೆ ಹೇಳಿದ್ದ. ಆದರೆ ಬಳಿಕ ಅಸಲಿ ಸತ್ಯವನ್ನು ಬಿಚ್ಚಿಟ್ಟ ಹಿನ್ನೆಲೆ ಕೊಲೆ ರಹಸ್ಯ ಬಯಲಾಗಿದೆ.
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾ ಮಾರ್ಚ್ 19ರಂದೇ ತೆರೆಗೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ವಿಳಂಬ ಆಗಿದೆ. ಈಗ ಸಿನಿಮಾ ಬಗ್ಗೆ ಕಿಯಾರಾ ಅಡ್ವಾಣಿ ಮಾತನಾಡಿದ್ದಾರೆ. ಅವರು ಸಿನಿಮಾ ಒಪ್ಪಿಕೊಂಡಿದ್ದರ ಕಾರಣವನ್ನು ವಿವರಿಸಿದ್ದಾರೆ.
‘ಟಾಕ್ಸಿಕ್’ ಸಿನಿಮಾದಲ್ಲಿ ಹಲವು ಹೀರೋಯಿನ್ಗಳು ನಟಿಸಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ ಮೊದಲಾದವರು ಪ್ರಮುಖರು. ಈಗ ರಿಲೀಸ್ ಆಗಿರುವ ಬಹುತೇಕ ಟೀಸರ್ ಹಾಗೂ ಗ್ಲಿಂಪ್ಸ್ ಯಶ್ ಅವರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಸಿನಿಮಾ ರಿಲೀಸ್ ಪೋಸ್ಟ್ಪೋನ್ ಆಗುವುದಕ್ಕೂ ಮೊದಲು ‘ಟಾಕ್ಸಿಕ್’ ಸಿನಿಮಾದ ಸಾಂಗ್ ರಿಲೀಸ್ ಆಗಿತ್ತು. ಕಿಯಾರಾ ಹಾಗೂ ಯಶ್ ಒಟ್ಟಾಗಿ ಕಾಣಿಸಿಕೊಂಡ ಹಾಡಿನ ಲಿರಿಕಲ್ ವಿಡಿಯೋ ಇದಾಗಿತ್ತು.
ಈಗ ಕಿಯಾರಾ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದ್ದಾರೆ. ‘ನಾನು ಈವರೆಗೆ ನೋಡಿದ ಭಿನ್ನ ಪಾತ್ರಗಳಲ್ಲಿ ನಾಡಿಯಾ ಕೂಡ ಒಂದು. ನಮ್ಮ ನಿರ್ದೇಶಕಿ ಗಿತು ಮೋಹನ್ದಾಸ್ ಪಾತ್ರವನ್ನು ಬರೆದ ರೀತಿ ಹಾಗೂ ಪಾತ್ರವನ್ನು ಕೆತ್ತಿದ ರೀತಿ ನನಗೆ ಇಷ್ಟ ಆಯಿತು. ನಾನು ಆ ಚಾಲೆಂಜ್ನ ಸ್ವೀಕರಿಸಬೇಕು ಎನಿಸಿತು. ಅವರ ಆಲೋಚನೆಯಲ್ಲಿ ನನ್ನ ಪಾತ್ರವನ್ನು ಹೇಗೆ ನಿರ್ವಹಿಸಿದ್ದೇನೆ ಎಂಬುದನ್ನು ನೀವೇ ನೋಡಿ’ ಎಂದು ಕಿಯಾರಾ ಕೋರಿದ್ದಾರೆ.
ಇತ್ತೀಚೆಗೆ ರಿಲೀಸ್ ಆದ ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡು ಎಲ್ಲರ ಮೆಚ್ಚುಗೆ ಪಡೆದಿದೆ. ಈ ಹಾಡಿನ ವಿಡಿಯೋ ಕೂಡ ರಿಲೀಸ್ ಆಗಬೇಕಿತ್ತು ಎಂದು ಅಭಿಮಾನಿಗಳು ಬಯಸಿದ್ದರು. ಶೀಘ್ರವೇ ಅದನ್ನು ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ. ವಿಶಾಲ್ ಮಿಶ್ರಾ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಈ ಸಿನಿಮಾ ಜೂನ್ 4ರಂದು ರಿಲೀಸ್ ಆಗಲಿದೆ. ಮಲಯಾಳಂನ ಗೀತು ಮೋಹನ್ ದಾಸ್ ನಿರ್ದೇಶನ ಮಾಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ಮೈಸೂರು, ಮಾರ್ಚ್ 30: ಜಿಲ್ಲೆಯ ಸರಗೂರು ತಾಲೂಕಿನ ನುಗು ಜಲಾಶಯದ ಬಳಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳು ಮುಖ್ಯ ರಸ್ತೆಗೆ ನುಗ್ಗಿ ಕೆಲಕಾಲ ಆತಂಕ ಸೃಷ್ಟಿಸಿವೆ. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಓಡಿಸಲು ಮುಂದಾದ ವೇಳೆ, ಕಾಡಾನೆಗಳು ಜೀಪ್ ಮೇಲೆ ದಾಳಿ ನಡೆಸಿ ಜಖಂಗೊಳಿಸಿವೆ. ಅದೃಷ್ಟವಶಾತ್ ಜೀಪ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಮತ್ತೆ ಕಾಡಿಗೆ ಹಿಂತಿರುಗಿಸಿದ್ದಾರೆ.
ಕಲಬುರಗಿ, ಮಾರ್ಚ್ 30: ಕಲಬುರಗಿ (Kalaburagi) ಜಿಲ್ಲೆಯಲ್ಲಿ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ್ದ ರೈತರು ಹಿಂಗಾರು ಹಾಗೂ ಬೇಸಿಗೆ ಬೆಳೆಗಳ ಮೂಲಕ ಬದುಕು ಕಟ್ಟಿಕೊಳ್ಳಬೇಕೆಂದು ನಿರೀಕ್ಷೆ ಇಟ್ಟಿದ್ದರು. ಆದರೆ ಇದೀಗ ‘ಕಸ್ಕೂಟಾ’ ಎಂಬ ರೋಗದಿಂದ ಬೆಳೆಗಳು ನಾಶವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಸಮಸ್ಯೆ ಗಂಭೀರವಾಗಿ ಕಾಣಿಸಿಕೊಂಡಿದೆ. ರೈತರು ತಮ್ಮ ಜಮೀನಿನಲ್ಲಿ ಒಣಗಿ ಹೋಗಿರುವ ತೊಗರಿ ಬೆಳೆಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತೊಗರಿ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳಿಗೆ ಕಸ್ಕೂಟಾ ಎಂಬ ರೋಗ ಆವರಿಸಿ ಬೆಳೆಗಳನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದೆ ಎಂದು ರೈತರು ತಿಳಿಸಿದ್ದಾರೆ.
ಈ ಭಾಗದ ರೈತರು ಈ ಬಾರಿ ಅತಿಯಾದ ಮಳೆಯಿಂದ ಮುಂಗಾರು ಬೆಳೆಗಳನ್ನು ಕಳೆದುಕೊಂಡಿದ್ದರು. ಸಾಲ ಮಾಡಿ ಬೆಳೆದ ಬೆಳೆ ಹಾಳಾದ ಕಾರಣ, ಸಾಲ ತೀರಿಸಲು ಹಾಗೂ ಕುಟುಂಬದ ಜೀವನ ಸಾಗಿಸಲು ಹಿಂಗಾರು ಮತ್ತು ಬೇಸಿಗೆ ಬೆಳೆಗಳ ಮೇಲೆ ನಿರೀಕ್ಷೆ ಇಟ್ಟಿದ್ದರು. ಆದರೆ ಈಗ ಬೆಳೆಗಳು ಕೈಗೆ ಬರುತ್ತವೆ ಎನ್ನುವಷ್ಟರಲ್ಲಿ ಕಸ್ಕೂಟಾ ರೋಗ ವ್ಯಾಪಕವಾಗಿ ಹರಡಿದ್ದು, ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ನಿಂತಲ್ಲೇ ಒಣಗಿಸುತ್ತಿದೆ.
ಸಾಲ ಮಾಡಿ ಬೆಳೆ ಬೆಳೆದ ರೈತರಿಗೆ ಈ ರೋಗ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಹಿಂಗಾರು ಹಾಗೂ ತೋಟಗಾರಿಕೆ ಬೆಳೆಗಳಿಗೂ ಹಾನಿ ಉಂಟಾಗಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಸರ್ಕಾರ ತಕ್ಷಣ ರೈತರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಇಲ್ಲವಾದರೆ ಸಾಲದ ಒತ್ತಡದಿಂದ ಬದುಕು ಸಾಗಿಸಲು ಕಷ್ಟವಾಗುತ್ತದೆ ಎಂದು ತಮ್ಮ ಅಸಹಾಯತೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಚಿಂಚೋಳಿ, ಚಿತ್ತಾಪುರ ಮತ್ತು ಸೇಡಂ ತಾಲೂಕುಗಳಲ್ಲಿನ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳಿಗೆ ಈ ರೋಗದಿಂದ ಹಾನಿಯಾಗಿದೆ. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೋಗದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಕೃಷಿ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಇದು ವಿದೇಶದಿಂದ ಹರಡಿರುವ ರೋಗವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಕೂಡ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ರೋಗ ತಡೆಗಟ್ಟಲು ಯಾವುದೇ ಕ್ರಿಮಿನಾಶಕ ಅಥವಾ ಔಷಧಿಯನ್ನು ಇನ್ನೂ ನೀಡಿಲ್ಲವೆಂದು ರೈತರು ದೂರಿದ್ದಾರೆ.
ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವರು ಚಿಂಚೋಳಿ ಭೇಟಿ ನೀಡಿದ ವೇಳೆ ರೈತರು ತಮ್ಮ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದರು. ಆದರೂ ಮೂರು ತಾಲೂಕಿನ ರೈತರಿಗೆ ಇನ್ನೂ ಯಾವುದೇ ಸ್ಪಷ್ಟ ಪರಿಹಾರ ದೊರೆತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬೌಲಿಂಗ್ ಮಾಡದಂತೆ ಕ್ಯಾಮರೋನ್ ಗ್ರೀನ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಬಂಧ ಹೇರಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯುತ್ತಿರುವ ಗ್ರೀನ್ ಫಿಟ್ನೆಸ್ ಸಮಸ್ಯೆಯಿಂದ ಬಳುತ್ತಿದ್ದು, ಹೀಗಾಗಿ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯುವಂತೆ ಸೂಚಿಸಲಾಗಿದೆ.
ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಕ್ಯಾಮರೋನ್ ಗ್ರೀನ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಬರೋಬ್ಬರಿ 25.20 ಕೋಟಿ ರೂ.ಗೆ ಖರೀದಿಸಿದೆ. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡಿರಲಿಲ್ಲ.
ಇದಕ್ಕೆ ಮುಖ್ಯ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾದ ಸೂಚನೆ. ಅಂದರೆ ಬೆನ್ನು ನೋವಿನಿಂದ ಬಳಲುತ್ತಿರುವ ಕ್ಯಾಮರೋನ್ ಗ್ರೀನ್ಗೆ ಬೌಲಿಂಗ್ ಮಾಡಲು ಎನ್ಒಸಿ ನೀಡಲಾಗಿಲ್ಲ. ಸಂಪೂರ್ಣ ಫಿಟ್ನೆಸ್ ಸಾಧಿಸುವರೆಗೆ ಕೇವಲ ಬ್ಯಾಟರ್ ಆಗಿ ಆಡುವಂತೆ ಸೂಚಿಸಲಾಗಿದೆ.
2024ರ ಕೊನೆಯಲ್ಲಿ ಅವರು ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ದೀರ್ಘಕಾಲದ ಫಿಟ್ನೆಸ್ ಕಾಪಾಡಿಕೊಳ್ಳಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (CA) ಅವರ ಬೌಲಿಂಗ್ ಮೇಲೆ ಸದ್ಯಕ್ಕೆ ನಿರ್ಬಂಧ ಹೇರಿದೆ.
ಇದಾಗ್ಯೂ ಐಪಿಎಲ್ನ ದ್ವಿತಿಯಾರ್ಧದ ವೇಳೆಗೆ ಅವರು ಸಂಪೂರ್ಣವಾಗಿ ಫಿಟ್ನೆಸ್ ಸಾಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅಂದರೆ ಏಪ್ರಿಲ್ ಎರಡನೇ ವಾರದ ವೇಳೆಗೆ ಅವರು ಬೌಲಿಂಗ್ ಆರಂಭಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಪಂದ್ಯಗಳಲ್ಲಿ ಕ್ಯಾಮರೋನ್ ಗ್ರೀನ್ ಕೇವಲ ಬ್ಯಾಟರ್ ಆಗಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಅತ್ತ ಅನುಭವಿ ವೇಗಿಗಳ ಕೊರತೆ ಎದುರಿಸುತ್ತಿರುವ ಕೆಕೆಆರ್ ತಂಡಕ್ಕೆ ಗ್ರೀನ್ ಅವರ ಫಿಟ್ನೆಸ್ ಸಮಸ್ಯೆಯು ಹಿನ್ನಡೆಯಾಗಿ ಪರಿಣಮಿಸಿರುವುದು ಸುಳ್ಳಲ್ಲ.
ಧಾರವಾಡ, ಮಾರ್ಚ್ 30: ಕೇಂದ್ರ ಕಾರಾಗೃಹದಲ್ಲಿ ಪೋಕ್ಸೊ ಪ್ರಕರಣದ ಆರೋಪಿಯೊಬ್ಬ ಜೈಲಿನಿಂದಲೇ ಅಪ್ರಾಪ್ತ ಬಾಲಕಿಗೆ ವಿಡಿಯೋ ಕರೆ ಮಾಡಿ ನಿರಂತರ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ಈ ಆರೋಪಿಯು ಬಾಲಕಿಗೆ ಬೆದರಿಕೆ ಹಾಕುತ್ತಾ, ನ್ಯಾಯಾಲಯದಲ್ಲಿ ತನ್ನ ಪರವಾಗಿ ಮಾತನಾಡಲು ಒತ್ತಾಯಿಸಿದ್ದಾನೆ. ಆರೋಪಿಯು ತನ್ನ ಕೈ ಮೇಲೆ ಸಂತ್ರಸ್ತೆಯ ಹೆಸರನ್ನು ಬರೆದುಕೊಂಡು ವಿಡಿಯೋ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯು ಜೈಲುಗಳಲ್ಲಿ ಮೊಬೈಲ್ ಫೋನ್‌ಗಳ ಸುಲಭ ಲಭ್ಯತೆ ಮತ್ತು ಬಳಕೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸ್ ಅಧಿಕಾರಿಗಳು ಜೈಲುಗಳಲ್ಲಿ ಮೊಬೈಲ್‌ಗಳ ಬಳಕೆಗೆ ಅವಕಾಶವಿಲ್ಲ ಎಂದು ಪದೇ ಪದೇ ಹೇಳುತ್ತಿರುತ್ತಾರೆ. ಆದರೆ, ಈ ಪ್ರಕರಣವು ಇದಕ್ಕೆ ವ್ಯತಿರಿಕ್ತವಾದ ಚಿತ್ರಣವನ್ನು ನೀಡಿದೆ. ಲವ್ ಜಿಹಾದ್ ಆರೋಪವೂ ಕೇಳಿಬಂದಿರುವ ಈ ಪ್ರಕರಣದ ಆರೋಪಿಯು ಬಾಲಕಿಗೆ ನಿರಂತರವಾಗಿ ಹಿಂಸೆ ನೀಡುತ್ತಿದ್ದು, ಆಕೆಯ ಕುಟುಂಬ ಆತಂಕಗೊಂಡಿದೆ. ಜೈಲಾಧಿಕಾರಿಗಳ ಸಹಾಯವಿಲ್ಲದೆ ಇಂತಹ ಕೃತ್ಯ ಅಸಾಧ್ಯ ಎಂದು ಕುಟುಂಬದವರು ಆರೋಪಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಶುಭಾರಂಭ ಮಾಡಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 220 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ (78) ಹಾಗೂ ರಯಾನ್ ರಿಕೆಲ್ಟನ್ (81) ಸ್ಫೋಟಕ ಅರ್ಧಶತಕ ಬಾರಿಸಿದರು. ಈ ಹಾಫ್ ಸೆಂಚುರಿಗಳ ನೆರವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು 19.1 ಓವರ್ಗಳಲ್ಲಿ 224 ರನ್ಗಳಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಅವರ ಬ್ಯಾಟಿಂಗ್ ವೈಖರಿಯನ್ನು ಹಾಡಿ ಹೊಗಳಿದ್ದಾರೆ. ಅದರಲ್ಲೂ ಹಿಟ್ಮ್ಯಾನ್ನ ಸಿಡಿಲಬ್ಬರದ ಬ್ಯಾಟಿಂಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ, ಐಪಿಎಲ್ ಸೀಸನ್ನ ಮೊದಲ ಪಂದ್ಯದಲ್ಲಿ ಗೆಲ್ಲಲು ನಾವು 13 ವರ್ಷಗಳಿಂದ ಕಾಯುತ್ತಿದ್ದೆವು. ಇದೀಗ ಈ ಕಾಯುವಿಕೆ ಕೊನೆಗೊಂಡಿರುವುದು ಸಂತಸದ ವಿಷಯ. ಅದು ಸಹ ಬೃಹತ್ ಮೊತ್ತವನ್ನು ಬೆನ್ನತ್ತಿ ಗೆದ್ದಿರುವುದು ಖುಷಿಯ ವಿಚಾರ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪವರ್ಪ್ಲೇನಲ್ಲಿ ಬ್ಯಾಟಿಂಗ್ ಮಾಡಿದ ರೀತಿ ನೋಡಿಯೇ ನಮಗೆ ಈ ಪಿಚ್ ಬ್ಯಾಟಿಂಗ್ ಸ್ನೇಹಿ ಎಂಬುದು ನಮಗೆ ತಿಳಿದಿತ್ತು. ಇದಾಗ್ಯೂ ನಾವು ಕೆಕೆಆರ್ 240, 250 ರನ್ಗಳಿಸದಂತೆ ತಡೆಯುವುದು ನಮ್ಮ ಉದ್ಧೇಶವಾಗಿತ್ತು. ಏಕೆಂದರೆ 240 ಕ್ಕಿಂತ ಹೆಚ್ಚಿನ ಮೊತ್ತ ಗಳಿಸಿದರೆ ಚೇಸ್ ಮಾಡುವುದು ಸುಲಭವಲ್ಲ.
ಅದರಂತೆ ನಮ್ಮ ಬೌಲರ್ಗಳು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 220 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಈ ಮೊತ್ತವನ್ನು ಚೇಸ್ ಮಾಡಬಹುದು ಎಂಬ ನಂಬಿಕೆಯಿತ್ತು. ಇದಕ್ಕಾಗಿ ನಾವು ಉತ್ತಮ ಆರಂಭ ಪಡೆಯಬೇಕಿತ್ತು. ಅಂತಹದೊಂದು ಆರಂಭವನ್ನು ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಒದಗಿಸಿದ್ದರು.
ರೋಹಿತ್ ಶರ್ಮಾ ಕೆಲ ಅತ್ಯುತ್ತಮ ಹೊಡೆತಗಳನ್ನು ಬಾರಿಸಿದ್ದರು. ಇದೇ ವೇಳೆ ರಿಕೆಲ್ಟನ್ ಕೂಡ ಅದ್ಭುತವಾಗಿ ಆಡಿದ್ದರು. ನಾನು ಕೆಲ ಬ್ಯಾಟ್ಸ್‌ಮನ್‌ಗಳು ಅದ್ಭುತ ಹೊಡೆತಗಳನ್ನು ಬಾರಿಸುವುದನ್ನುನೋಡಿದ್ದೇನೆ. ಆದರೆ ರೋಹಿತ್ ಶರ್ಮಾ ಅವರ ಶಾಟ್ಗಳನ್ನು ನೋಡುವಾಗ, ಎಲ್ಲರೂ ಬಾಯಿ ಬಿಟ್ಟುಕೊಂಡಿರುತ್ತಾರೆ. ಅಂತಹದೊಂದು ಅಸಾಧಾರಣ ಬ್ಯಾಟಿಂಗ್.
ರೋಹಿತ್ ಶರ್ಮಾನ ಬ್ಯಾಟಿಂಗ್ ನೋಡಿದ್ರೇನೇ ಗೊತ್ತಾಗುತ್ತದೆ. ಅವರು ಎಂತಹ ಆಟಗಾರ ಎಂಬುದು. ಅವರು ಪ್ರದರ್ಶನವನ್ನು ಅಸಾಧಾರಣ, ಅದ್ಭುತ ಎನ್ನುವುದಕ್ಕಿಂತ ಕಡಿಮೆ ಏನೂ ಇಲ್ಲ. ರೋಹಿತ್ ಶರ್ಮಾ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೋಡಿ ನನಗಂತು ತುಂಬಾ ಖುಷಿಯಾಗಿದೆ.
ಹಾಗೆಯೇ ಈ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಕೂಡ ಉತ್ತಮ ಬೌಲಿಂಗ್ ಮಾಡಿದ್ದರು. ಈ ಸೀಸನ್ ಆರಂಭಕ್ಕೂ ಮುನ್ನವೇ ನಾನು ಅವನಿಗೆ ಹೇಳಿದ್ದೆ, ‘ಫ್ರಾಂಚೈಸಿಗಳನ್ನು ಬದಲಿಸುವುದು ಸಾಕು. ನಿಮ್ಮ ವೃತ್ತಿಜೀವನದ ಉಳಿದ ಭಾಗ ಇಲ್ಲಿಯೇ ಇರಬೇಕೆಂದು ನಾನು ಬಯಸುತ್ತೇನೆ’ ಎಂದು. ಇದೀಗ ಮುಂಬೈ ಇಂಡಿಯನ್ಸ್ನಲ್ಲಿ ಸಿಕ್ಕ ಅವಕಾಶವನ್ನು ಶಾರ್ದೂಲ್ ಬಳಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ 13 ವರ್ಷಗಳ ಬಳಿಕ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡ ಗೆದ್ದಿರುವುದು ನಿಜಕ್ಕೂ ಖುಷಿ ಕೊಟ್ಟಿದೆ. ಇದೇ ಪ್ರದರ್ಶನವನ್ನು ಮುಂದಿನ ಪಂದ್ಯಗಳಲ್ಲೂ ಮುಂದುವರೆಸುವ ವಿಶ್ವಾಸವಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.