ಬನ್ ತಿಂದು ಹಣ ಕೊಡ್ಲಿಲ್ಲ, ಪೊಲೀಸರನ್ನ ಕರೆಸಿದ್ರೆ ಸೆಲ್ಯೂಟ್ ಮಾಡಿ ಎಂದ ನಕಲಿ ಐಪಿಎಸ್ ಅಧಿಕಾರಿ ಅರೆಸ್ಟ್​ – Kannada News | Fake IPS Arrested in Lucknow: Bun Dispute Leads to Impersonator’s Capture

ನಕಲಿ ಐಪಿಎಸ್ ಅಧಿಕಾರಿImage Credit source: India TV

ಲಕ್ನೋ, ಜೂನ್ 17: ಬನ್ ತಿಂದು ಹಣ ಕೊಡದೆ ಸತಾಯಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ಬಂಧಿಸಲು ಇದೊಂದೇ ಕಾರಣವಲ್ಲ. ಬನ್ ತಿಂದು ಹಣ ಕೊಟ್ಟಿಲ್ಲ ಸರ್ ಎಂದು ಅಂಗಡಿ ಮಾಲೀಕ ಪೊಲೀಸರಿಗೆ ಕರೆ ಮಾಡಿದ್ದ, ಪೊಲೀಸ್(Police) ಬಂದು ವಿಚಾರಿಸಿದಾಗ ತಾನು ನೋಯ್ಡಾದಲ್ಲಿ ಕೆಲಸ ಮಾಡುತ್ತಿರುವ ಐಪಿಎಸ್ ಅಧಿಕಾರಿ ನಂಗೆ ಸೆಲ್ಯೂಟ್ ಮಾಡುವುದು ಬಿಟ್ಟು ನನ್ನನ್ನೇ ಪ್ರಶ್ನೆ ಮಾಡ್ತಿದ್ದೀರಾ ಎಂದು ಆ ವ್ಯಕ್ತಿ ಗದರಿದ್ದಾನೆ.
ಹಾಗಾದರೆ ಮೊದಲು ಸಮವಸ್ತ್ರದಲ್ಲಿ ಬನ್ನಿ, ಗುರುತಿನ ಚೀಟಿ ತೋರಿಸಿ ಆಮೇಲೆ ಸೆಲ್ಯೂಟ್ ಮಾಡ್ತೀವಿ ಎಂದು ಪೊಲೀಸರು ಕೂಡ ಪಟ್ಟು ಹಿಡಿದಿದ್ದರು.

ವರದಿಗಳ ಪ್ರಕಾರ, ಲಕ್ನೋದ ರಸ್ತೆ ಬದಿಯ ಅಂಗಡಿಯೊಂದರಲ್ಲಿ ಈ ವ್ಯಕ್ತಿ ಬನ್ ತಿಂದು, ಅದಕ್ಕೆ ಆಗಿದ್ದ 40 ರೂಪಾಯಿ ಬಿಲ್ ಕೊಡದೇ ಹೋಗಲು ಯತ್ನಿಸಿದ್ದಾನೆ. ಅಂಗಡಿ ಮಾಲೀಕರು ಇದನ್ನು ವಿರೋಧಿಸಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದಾಗ ಆ ವ್ಯಕ್ತಿ ತಾನೊಬ್ಬ ದೊಡ್ಡ ಐಪಿಎಸ್ ಅಧಿಕಾರಿ ಎಂದು ಬೆದರಿಸಲು ಹಾದಿ ತುಳಿದಿದ್ದಾನೆ.

ವಿಚಾರಣೆಗೆ ಬಂದ ಕಾನ್‌ಸ್ಟೆಬಲ್‌ಗಳು ಆತನನ್ನು ಅಣ್ಣಾ ಎಂದು ಕರೆದಾಗ ಕೋಪಗೊಂಡಿದ್ದ, ತಕ್ಷಣವೇ ಪೊಲೀಸರನ್ನು ತಡೆದು, ಅಣ್ಣಾ ಅಂತಾ ಕರೀಬೇಡಿ ಸರ್ ಅನ್ನಿ ಎಂದು ದಬಾಯಿಸಿದ್ದಾನೆ. ನಾನೊಬ್ಬ ಐಪಿಎಸ್ ಅಧಿಕಾರಿ, ನೀವೇಕೆ ನನಗೆ ಸೆಲ್ಯೂಟ್ ಮಾಡುತ್ತಿಲ್ಲ ಎಂದು ಕರ್ತವ್ಯದಲ್ಲಿದ್ದ ಪೊಲೀಸರನ್ನೇ ಪ್ರಶ್ನಿಸಿ ವಿಶೇಷ ಮರ್ಯಾದೆ ನೀಡುವಂತೆ ಹಠ ಹಿಡಿದಿದ್ದಾನೆ.

ಮತ್ತಷ್ಟು ಓದಿ: ಕಸದ ರಾಶಿಯಲ್ಲಿ 59 ಜೀವಂತ ಗುಂಡುಗಳು ಪತ್ತೆ:ಪೊಲೀಸರೇ ಶಾಕ್, ಬೆಚ್ಚಿಬಿದ್ದ ಜನ

ಕಾನ್‌ಸ್ಟೆಬಲ್ ಪ್ರತಿಕ್ರಿಯೆಗೆ ನೆಟ್ಟಿಗರು ಫಿದಾ
ಆರೋಪಿಯ ನಾಟಕಕ್ಕೆ ಬೆದರದ ಕಾನ್‌ಸ್ಟೆಬಲ್ ಅತ್ಯಂತ ಶಾಂತವಾಗಿ ಮತ್ತು ವೃತ್ತಿಪರವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಆತನಿಗೆ ಖಡಕ್ ಆಗಿ ಉತ್ತರಿಸಿದ ಕಾನ್‌ಸ್ಟೆಬಲ್, ಮೊದಲು ಸರಿಯಾದ ಪೊಲೀಸ್ ಸಮವಸ್ತ್ರ ಧರಿಸಿ ಬನ್ನಿ, ನಿಮ್ಮ ಐಡಿ ಕಾರ್ಡ್ ತೋರಿಸಿ, ಆಮೇಲೆ ನಾನು ನಿಮಗೆ ಸೆಲ್ಯೂಟ್ ಮಾಡುತ್ತೇನೆ. ಅಲ್ಲಿಯವರೆಗೂ ಇಲ್ಲ ಎಂದು ಹೇಳಿದ್ದಾರೆ. ಕಾನ್‌ಸ್ಟೆಬಲ್ ಅವರ ಈ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ವಿಡಿಯೋ

ಕೇಳಿದಾಗ ಯಾವುದೇ ಗುರುತಿನ ಚೀಟಿ (ID Card) ತೋರಿಸದ ಹಿನ್ನೆಲೆಯಲ್ಲಿ ಆತ ನಕಲಿ ಎಂಬುದು ಸಾಬೀತಾಗಿದೆ. ಲಕ್ನೋದ ಮಹಾನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ವಂಚನೆ ಮತ್ತು ಸರ್ಕಾರಿ ಸಿಬ್ಬಂದಿಗೆ ದಾರಿ ತಪ್ಪಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಜೈಲಿಗಟ್ಟಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಾಳೆಯೇ ಪರಿಷತ್​​ ಚುನಾವಣೆ: 5ನೇ ಅಭ್ಯರ್ಥಿ ಗೆಲುವಿಗೆ ‘ಕೈ’ ತಂತ್ರ, ಏಕೈಕ ಕ್ಯಾಂಡಿಡೇಟ್​​ ವಿಜಯಕ್ಕೆ ಜೆಡಿಎಸ್​​ ಕಸರತ್ತು – Kannada News | Karnataka MLC Elections: Cross Voting Fears Drive Resort Politics as Congress and JDS Fight for Crucial Seats

ಪರಿಷತ್​​ ಸಮರ: ಜೋರಾದ ಸಂಖ್ಯಾ ಬಲದ ಅಂತಿಮ ಲೆಕ್ಕಾಚಾರ
Image Credit source: PTI

ಬೆಂಗಳೂರು, ಜೂನ್​​ 17: ನಾಳೆ (ಜೂನ್​ 18) ವಿಧಾನಪರಿಷತ್ ಚುನಾವಣೆ ನಡೆಯಲಿರುವ ಹಿನ್ನೆಲೆ ರಾಜ್ಯದ ಮೂರೂ ಪ್ರಮುಖ ಪಕ್ಷಗಳಲ್ಲಿಯೂ ಆತಂಕ ಹೆಚ್ಚಿದೆ. ಅದರಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಈ ಎಲೆಕ್ಷನ್​​ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದು, ಗೆಲುವಿಗಾಗಿ ಭಾರೀ ಲೆಕ್ಕಾಚಾರ ಶುರುವಾಗಿದೆ.

ಕಾಂಗ್ರೆಸ್‌ನಿಂದ ಐವರು, ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮೂವರು ಅಭ್ಯರ್ಥಿಗಳು ಅಖಾಡದಲ್ಲಿದ್ದು, ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ಮತ್ತು ಎನ್‌ಡಿಎ ಮೂರನೇ ಅಭ್ಯರ್ಥಿಯ ಭವಿಷ್ಯದ ಬಗ್ಗೆ ಕುತೂಹಲ ಹೆಚ್ಚಿದೆ. ಜೆಡಿಎಸ್ ಮತಬ್ಯಾಂಕ್ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದ್ದು, ಶಾಸಕರನ್ನು ಹಿಡಿದಿಡಲು ದಳಪತಿಗಳು ತಂತ್ರ ರೂಪಿಸಿದ್ದಾರೆ. ಮತ್ತೊಂದೆಡೆ ಜೆಡಿಎಸ್​​ ಕಾಂಗ್ರೆಸ್​​ ಶಾಸಕರನ್ನು ಸಂಪರ್ಕಿಸಿದೆ ಎಂಬ ಕಾರಣಕ್ಕೆ ಅಡ್ಡಮತದಾನದ ಭೀತಿಯಿಂದ ಈಗಾಗಲೇ ಕೈ ನಾಯಕರು ರೆಸಾರ್ಟ್ ವಾಸ್ತವ್ಯದಲ್ಲಿದ್ದಾರೆ. ಜೆಡಿಎಸ್​​ ಶಾಸಕರು ಕೂಡ ಇಂದು ದೇವನಹಳ್ಳಿ ಸಮೀಪದ ರೆಸಾರ್ಟ್‌ಗೆ ಸ್ಥಳಾಂತರವಾಗುವ ಸಾಧ್ಯತೆ ಇದ್ದು, ಕೊನೆಯ ಕ್ಷಣದ ರಾಜಕೀಯ ಕಸರತ್ತು ಜೋರಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ಸಿಕ್ತು ವಿಶೇಷ ಸ್ಥಾನ

ಸಂಖ್ಯಾ ಬಲದ ಅಂತಿಮ ಲೆಕ್ಕಾಚಾರ

  • ವಿಧಾನಸಭೆಯ ಹಾಲಿ ಬಲ- 222 ಶಾಸಕರು
  • ಕಾಂಗ್ರೆಸ್ – 135
  • ಬಿಜೆಪಿ – 62
  • ಜೆಡಿಎಸ್ – 18
  • ಪಕ್ಷೇತರರು – 2
  • ಸರ್ವೋದಯ ಕರ್ನಾಟಕ ಪಕ್ಷ – 1
  • ಬಿಜೆಪಿ ಉಚ್ಚಾಟಿತರು – 3

ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು 28 ಮೊದಲ ಪ್ರಾಶಸ್ತ್ಯದ ಮತಗಳು ಅಗತ್ಯವಾಗಿವೆ. ಹೀಗಾಗಿ ಕಾಂಗ್ರೆಸ್​​ಗೆ 5 ಅಭ್ಯರ್ಥಿಗಳನ್ನು ಗೆಲ್ಲಿಸಲು ಕನಿಷ್ಠ 140 ಮತಗಳು ಬೇಕು. 135 ತನ್ನದೇ ಮತಗಳನ್ನು ಹೊಂದಿರುವ ಆಡಳಿತಾರೂಢ ಪಕ್ಷಕ್ಕೆ 2 ಪಕ್ಷೇತರರು ಹಾಗೂ 1 ಸರ್ವೋದಯ ಪಕ್ಷದ ಸದಸ್ಯರ ಬೆಂಬಲದಿಂದ ಬಲ 138ಕ್ಕೆ ಏರಿಕೆ ಆಗಲಿದೆ. ಬಿಜೆಪಿ ಉಚ್ಚಾಟಿತ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಬೆಂಬಲ ನೀಡಿದರೆ ಸಂಖ್ಯೆ 140 ತಲುಪಲಿದೆ. ಹೀಗಾಗಿ ಕಾಂಗ್ರೆಸ್ ಐದೂ ಅಭ್ಯರ್ಥಿಗಳನ್ನು ಗೆಲ್ಲಿಸುವ ಲೆಕ್ಕಾಚಾರದಲ್ಲಿ ಇದೆ.

62 ಶಾಸಕರ ಬಲ ಹೊಂದಿರುವ ಬಿಜೆಪಿಯಿಂದ ಕಣದಲ್ಲಿರುವ 2 ಅಭ್ಯರ್ಥಿಗಳಿಗೆ ತಲಾ 28ರಂತೆ 56 ಮತಗಳು ಅಗತ್ಯವಿದೆ. ಹೀಗಾಗಿ 6 ಮತಗಳು ಹೆಚ್ಚುವರಿಯಾಗಿ ಉಳಿಯಲಿವೆ. ಆದರೆ ಓರ್ವ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿರುವ ಜೆಡಿಎಸ್​​ ಬಳಿ ಇರೋದು ಕೇವಲ 18 ಶಾಸಕರು. ಹೀಗಿದ್ದರೂ ಬಿಜೆಪಿಯ 6 ಹೆಚ್ಚುವರಿ ಮತ, ಜನಾರ್ದನ ರೆಡ್ಡಿ, ಬಸನಗೌಡ ಪಾಟೀಲ್​​ ಯತ್ನಾಳ್ ಬೆಂಬಲ ಸೇರಿದರೆ ಒಟ್ಟು 26 ಮತಗಳ ಗಡಿ ತಲುಪಲಿದೆ. ಆದರೆ ಗೆಲುವಿಗೆ 28 ಮತಗಳು ಬೇಕಿರುವ ಹಿನ್ನೆಲೆ 2 ಮತಗಳ ಕೊರತೆ ಜೆಡಿಎಸ್​​ಗೆ ಆಗಲಿದೆ.

ಇಂದು ಬಿಎಲ್​ಪಿ ಸಭೆ

ವಿಧಾನಪರಿಷತ್ ಚುನಾವಣೆ ಹಿನ್ನೆಲೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಇಂದು ಸಂಜೆ 6 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ಶಾಸಕರಿಗೆ ವಿಪ್ ಜಾರಿಯಾಗಲಿದ್ದು, ಮತದಾನ ಪ್ರಕ್ರಿಯೆ ಮತ್ತು ಮತ ಹಂಚಿಕೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಜೋಡಿ ನಂ. 1’ ಶೋನಲ್ಲಿ ಖಾಸಗಿ ವಿಷಯ ಚರ್ಚೆ; ಟ್ರೋಲ್ ಮಾಡಿದವರಿಗೆ ಗೀತಾ ಭಟ್ ಉತ್ತರ – Kannada News | Geetha Bharathi Bhat and Rajaram Clarify Jodi No 1 Controversy, Slam Social Media Trolls

ಜೀ ಕನ್ನಡ ವಾಹಿನಿಯಲ್ಲಿ ಪ್ರಸ್ತುತ ‘ಜೋಡಿ ನಂಬರ್ 1’ ರಿಯಾಲಿಟಿ ಶೋ ಯಶಸ್ವಿಯಾಗಿ ಪ್ರಸಾರ ಕಾಣುತ್ತಿದೆ. ಇತ್ತೀಚೆಗೆ ನಡೆದ ಎಪಿಸೋಡ್ ಒಂದರಲ್ಲಿ ಸ್ಪರ್ಧಿಗಳು ತಮ್ಮ ವೈಯಕ್ತಿಕ ವಿಷಯಗಳನ್ನು ವೇದಿಕೆ ಮೇಲೆ ಮುಕ್ತವಾಗಿ ಹೇಳಿಕೊಂಡಿದ್ದರು. ಆದರೆ, ಇದು ಸರಿ ಅಲ್ಲ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿದ್ದವು. ಕಲಾವಿದರು ತಮ್ಮ ಖಾಸಗಿ ವಿಷಯವನ್ನು ಟಿಆರ್‌ಪಿಗಾಗಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ ಎಂಬ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದೀಗ ಈ ಎಲ್ಲಾ ವಿವಾದ ಹಾಗೂ ನೆಗೆಟಿವ್ ಕಾಮೆಂಟ್‌ಗಳಿಗೆ ಶೋನ ಸ್ಪರ್ಧಿ, ನಟಿ ಗೀತಾ ಭಾರತಿ ಭಟ್ (Geetha Bharati Bhat) ಹಾಗೂ ಅವರ ಪತಿ ರಾಜಾರಾಮ್ ಭಟ್ ವಿಡಿಯೋ ಮೂಲಕ ಖಡಕ್ ಸ್ಪಷ್ಟನೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾ ಟ್ರೋಲ್‌ಗಳಿಗೆ ಗೀತಾ ಭಾರತಿ ಭಟ್ ಉತ್ತರ:

ಸಾಮಾಜಿಕ ಜಾಲತಾಣದಲ್ಲಿ ಜಂಟಿ ವಿಡಿಯೋ ಹಂಚಿಕೊಂಡಿರುವ ಈ ಜೋಡಿ, ನೆಟ್ಟಿಗರ ಸರಣಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ವಿಡಿಯೋದ ಆರಂಭದಲ್ಲಿಯೇ ಮಾತನಾಡಿದ ನಟಿ ಗೀತಾ ಭಾರತಿ ಭಟ್, ‘ಎಲ್ಲರಿಗೂ ನಮಸ್ಕಾರ, ಇಷ್ಟು ದಿನ ನೀವು ಮಾತನಾಡಿದ್ದನ್ನೆಲ್ಲಾ ನಾವು ತುಂಬಾನೇ ತಾಳ್ಮೆಯಿಂದ ಕೇಳಿಸಿಕೊಂಡಿದ್ದೀವಿ. ಈಗ ನಾವು ಮಾತನಾಡುವುದನ್ನು ಪ್ಲೀಸ್ ಸ್ವಲ್ಪ ಕೇಳಿಸಿಕೊಳ್ಳಿ’ ಎಂದು ಮಾತು ಆರಂಭಿಸಿದ್ದಾರೆ.

‘ನಾವು ವೇದಿಕೆ ಮೇಲೆ ಪ್ರೀತಿ ತೋರಿಸಿದಾಗ ನೀವೆಲ್ಲಾ ಸ್ಕ್ರಾಲ್ ಮಾಡಿದ್ರಿ. ಸ್ನೇಹದ ಬಗ್ಗೆ ಮಾತನಾಡಿದಾಗ ಅದನ್ನ ಸ್ಕಿಪ್ ಮಾಡಿದ್ರಿ. ಆದರೆ, ಗಂಡ-ಹೆಂಡತಿ ನಡುವೆ ನಡೆದ ಒಂದು ಮುಕ್ತ ಸಂಭಾಷಣೆಯನ್ನ ಜಗಳ ಅಂತ ಅಂದುಕೊಂಡು, ಅದನ್ನ ಲೈಕ್, ಶೇರ್, ಕಾಮೆಂಟ್, ಡಿಬೇಟ್, ಡಿಸ್ಕಷನ್ ಮಾಡಿ ಅದರ ಬಗ್ಗೆ ಇನ್ನೊಂದು ವಿಡಿಯೋ ಮಾಡಿ ವೈರಲ್ ಮಾಡಿದ್ರಿ, ರೀ-ಪೋಸ್ಟ್ ಮಾಡಿದ್ರಿ’ ಎಂದು ವ್ಯಂಗ್ಯವಾಡಿದ್ದಾರೆ.

‘ಎಂಟರ್‌ಟೈನ್‌ಮೆಂಟ್‌ಗೋಸ್ಕರ ಅಂತ ಕೊಡುವಂತಹ ಕಂಟೆಂಟ್‌ಗಳನ್ನ ನೀವು ತಿರುಗಿಯೂ ನೋಡುವುದಿಲ್ಲ. ಆದರೆ ಇಂತಹದ್ದೇನಾದರೂ ಒಂದು ಚಿಕ್ಕ ವಿವಾದ ನಡೀತಿದೆ ಅಂದ ತಕ್ಷಣ ಎಲ್ಲರೂ ಓಡಿ ಬಂದು ಅದನ್ನ ವೈರಲ್ ಮಾಡ್ತೀರಾ ಅಲ್ವಾ’ ಎಂದು ಪ್ರಶ್ನಿಸಿದ್ದಾರೆ.

‘ಜನರು ನಮಗೆ ಏನೇನೋ ಹೇಳ್ತಿದ್ದಾರೆ. ಟಿಆರ್‌ಪಿಗೋಸ್ಕರ ನಾವು ಇದನ್ನ ಮಾಡ್ತಾ ಇದ್ದೀವಿ, ದುಡ್ಡು ತಗೊಂಡು ಸ್ಟೇಜ್ ಮೇಲೆ ಜಗಳ ಮಾಡ್ತಾ ಇದ್ದೀವಿ. ನಾಲ್ಕು ಗೋಡೆಗಳ ಮಧ್ಯೆ ಇರಬೇಕಾಗಿರೋ ವಿಚಾರನ ತಗೊಂಡು ಬಂದು ಪಬ್ಲಿಕ್‌ನಲ್ಲಿ ಡಿಸ್ಕಸ್ ಮಾಡ್ತಾ ಇದ್ದೀವಿ ಅಂತ ಕಾಮೆಂಟ್ ಮಾಡ್ತಿದ್ದಾರೆ. ಓಕೆ ಫೈನ್, ಇದು ನಿಮ್ಮ ಅಭಿಪ್ರಾಯ ಆಗಿರಬಹುದು. ಆದರೆ ನಮಗೂ ಒಂದು ಒಪಿನಿಯನ್ ಇದೆ ಅಲ್ವಾ? ನಾಲ್ಕು ಗೋಡೆ ಮಧ್ಯೆ ಇರಬೇಕಾದ ವಿಚಾರನ ನಾವು ಅಲ್ಲೇ ಇಟ್ಟುಕೊಂಡಿದ್ದೀವಿ. ಡಿಸ್ಕಸ್ ಮಾಡಬೇಕಾದ ವಿಚಾರವನ್ನ ಮಾತ್ರ ವೇದಿಕೆ ಮೇಲೆ ಮಾತನಾಡಿದ್ದೀವಿ. ಎಲ್ಲರ ಮನೆಗಳಲ್ಲೂ ನಡೆಯುವಂತಹ ಸಾಮಾನ್ಯ ವಿಚಾರವನ್ನೇ ನಾವು ಚರ್ಚೆ ಮಾಡಿರೋದು’ ಎಂದು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ನಮಗೆ ಹತ್ತಾರು ಮೆಸೇಜ್‌ಗಳು ಬಂದಿವೆ:

ವೇದಿಕೆ ಮೇಲೆ ತಮ್ಮ ಮನದ ಮಾತು ಹಂಚಿಕೊಂಡಿದ್ದಕ್ಕೆ ಪಾಸಿಟಿವ್ ಪ್ರತಿಕ್ರಿಯೆಗಳೂ ಬಂದಿವೆ ಎಂದಿರುವ ಗೀತಾ, ‘ನಮಗೆ ಹತ್ತಾರು ಜನರು ಮೆಸೇಜ್ ಮಾಡಿದ್ದಾರೆ. ಮ್ಯಾಮ್, ನಮ್ಮ ಮನೆಯಲ್ಲೂ ಇದೇ ರೀತಿ ಆಗುತ್ತಿತ್ತು, ನಾವೂ ಮನಸ್ಸಲ್ಲೇ ಇಟ್ಟುಕೊಂಡು ಕೊರಗುತ್ತಿದ್ದೆವು, ಆದರೆ ಈ ಎಪಿಸೋಡ್ ನೋಡಿದ ಮೇಲೆ ನಮಗೂ ನಮ್ಮವರ ಜೊತೆ ಶೇರ್ ಮಾಡ್ಕೋಬೇಕು ಅಂತ ಅನಿಸ್ತು ಮ್ಯಾಮ್ ಅಂತ ಹೇಳಿದ್ದಾರೆ’ ಎಂದು ನೆನಪಿಸಿಕೊಂಡಿದ್ದಾರೆ.

ಇದೇ ವೇಳೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ಗಳ ವಿರುದ್ಧ ಕಿಡಿಕಾರಿದ ಗೀತಾ, ‘ಈ ಸೋಕಾಲ್ಡ್ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಇದ್ದಾರಲ್ಲ, ಆಲ್ರೆಡಿ ವೈರಲ್ ಆಗಿರೋ ವಿಡಿಯೋನ ತಗೊಂಡು, ಅದರ ಮೇಲೆ ತಮ್ಮ ಒಪಿನಿಯನ್ ಹೇಳಿ ಅದನ್ನ ಇನ್ನೊಂದು ವಿಡಿಯೋ ಮಾಡಿ ಹಾಕ್ತಾರೆ. ವಾಹಿನಿಯವರು ಆ ವಿಡಿಯೋನ ಡಿಲೀಟ್ ಮಾಡಿಸಿದರೆ, ತಕ್ಷಣ ಇವರದ್ದು ಇನ್ನೊಂದು ವಿಡಿಯೋ ರೆಡಿ ಆಗಿಬಿಡುತ್ತೆ. ‘ಚಾನೆಲ್‌ನವರು ನಾನು ನಿಜ ಹೇಳಿದ್ದಕ್ಕೆ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ, ಇವಾಗ ಇನ್ನೊಂದು ವಿಡಿಯೋ ಮಾಡಿದ್ದೀನಿ ನೋಡಿ’ ಅಂತ ಹಾಕ್ತಾರೆ. ಅದು ಒಂದೇ ದಿನದಲ್ಲಿ 1 ಮಿಲಿಯನ್ ವೀವ್ಸ್ ರೀಚ್ ಆಗುತ್ತೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಣ್ಣೀರು-ಬಿಸಿಯಲ್ಲಿ ಕೈ ಕಾಯಿಸಿಕೊಳ್ಳಬೇಡಿ ಎಂದ ಪತಿ ರಾಜಾರಾಮ್:

ವಿಡಿಯೋದಲ್ಲಿ ಪತ್ನಿಯ ಜೊತೆಗಿದ್ದ ರಾಜಾರಾಮ್ ಭಟ್ ಕೂಡ ನೆಟ್ಟಿಗರಿಗೆ ಬುದ್ಧಿವಾದ ಹೇಳಿದ್ದಾರೆ. ‘ನೀವೆಲ್ಲಾ ಇದನ್ನೆಲ್ಲಾ ಮಾಡೋದು ಟಿಆರ್‌ಪಿಗೋಸ್ಕರ ಅಲ್ವಾ? ಇನ್ನೊಬ್ಬರಿಗೆ ಹೇಳುವುದಕ್ಕಿಂತ ಮುಂಚೆ, ನಾನು ಏನು ಮಾಡ್ತಾ ಇದ್ದೀನಿ ಅನ್ನೋದನ್ನ ಮೊದಲು ತಿಳಿದುಕೊಳ್ಳಬೇಕು. ಬೇರೆಯವರ ಕಣ್ಣೀರು ಅಥವಾ ಕಷ್ಟದ ಬಿಸಿಯಲ್ಲಿ ತಾವು ಬಿಸಿ ಕಾಯಿಸಿಕೊಳ್ಳುವುದಲ್ಲ ಜೀವನ. ಜೀವನ ಅಂದರೆ ನಾಲ್ಕು ಜನಕ್ಕೆ ಒಳ್ಳೆಯದು ಮಾಡಬೇಕಾಗಿರೋದು ಅಷ್ಟೇ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಇದನ್ನೂ ಓದಿ: ‘ಸೂಪರ್ ಜೋಡಿ’; ಪತಿ ಜೊತೆ ಫೋಟೋ ಹಂಚಿಕೊಂಡ ಗೀತಾ ಭಾರತಿ ಭಟ್

ಕೊನೆಯಲ್ಲಿ ಮಾತನಾಡಿದ ಗೀತಾ ಭಾರತಿ ಭಟ್, ‘ನೀವು ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕೊಡ್ತೀರಾ ಅಂತ ಅಂದರೆ ಸೆನ್ಸಿಬಲ್ (ಅರ್ಥಪೂರ್ಣ) ಆಗಿರೋ ಕಂಟೆಂಟ್ ಕೊಡಿ. ದಯವಿಟ್ಟು ನೀವೇ ಯೋಚನೆ ಮಾಡಿ, ಪ್ರಾಬ್ಲಮ್ ಇರೋದು ಪ್ರೋಗ್ರಾಮ್‌ನಲ್ಲಿ ಅಲ್ಲ ಅಥವಾ ನಮ್ಮಲ್ಲಿ ಅಲ್ಲ. ನೆಗೆಟಿವ್ ಆಗಿರೋದನ್ನೇ ಹುಡುಕಿ ಅದನ್ನ ವೈರಲ್ ಮಾಡುವಂತಹ ನಿಮ್ಮ ಅಭ್ಯಾಸದಲ್ಲಿದೆ ಸಮಸ್ಯೆ. ಪ್ಲೀಸ್ ಥಿಂಕ್ ಮಾಡಿ’ ಎಂದು ವಿನಂತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗೋಲುಗಳ ಮೇಲೆ ಗೋಲು… ವಿಶ್ವ ದಾಖಲೆ ಸರಿಗಟ್ಟಿದ ಮೆಸ್ಸಿ..! – Kannada News | Lionel Messi equals World record in FIFA World Cup

ಆರೋಹೆಡ್ ಅಂಗಳದಲ್ಲಿ ನಡೆದಿದ್ದು ಕೇವಲ ಕಾಲ್ಚೆಂಡಿನ ಆಟವಾಗಿರಲಿಲ್ಲ, ಬದಲಾಗಿ ಫುಟ್‌ಬಾಲ್ ಮೈದಾನದ ಹಸಿರು ಹಾಸಿನ ಮೇಲೆ ಬರೆದ ಇತಿಹಾಸದ ಮಹಾಕಾವ್ಯ! ಕಾಲಿನಲ್ಲೇ ಕಲೆಯುಂಡು, ಚೆಂಡನ್ನೇ ತನ್ನ ಆಜ್ಞಾಧಾರಕನನ್ನಾಗಿ ಮಾಡಿಕೊಂಡಿರುವ ಫುಟ್‌ಬಾಲ್ ಲೋಕದ ಏಕೈಕ ‘ಮಾಂತ್ರಿಕ’ ಲಿಯೋನೆಲ್ ಮೆಸ್ಸಿ (Lionel Messi) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಹ್ಯಾಟ್ರಿಕ್ ಗೋಲು ದಾಖಲಿಸುವ ಮೂಲಕ ಎಂಬುದು ವಿಶೇಷ.

2026ರ ಫಿಫಾ ವಿಶ್ವಕಪ್‌ನ ಗ್ರೂಪ್ ‘ಜೆ’ ನ  ಆರಂಭಿಕ ಪಂದ್ಯದಲ್ಲಿ ಆಲ್ಜೀರಿಯಾ ವಿರುದ್ಧ ಭರ್ಜರಿ ಹ್ಯಾಟ್ರಿಕ್ ಗೋಲು ಸಿಡಿಸುವ ಮೂಲಕ ಮೆಸ್ಸಿ, ಜರ್ಮನಿಯ ದಿಗ್ಗಜ ಮಿರೋಸ್ಲಾವ್ ಕ್ಲೋಸ್ ಅವರ ಹೆಸರಲ್ಲಿದ್ದ ಅತಿ ಹೆಚ್ಚು ವಿಶ್ವಕಪ್ ಗೋಲುಗಳ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದ್ದಾರೆ.

  • ಮಿರೋಸ್ಲಾವ್ ಕ್ಲೋಸ್: ಜರ್ಮನಿ ಪರ 24 ವಿಶ್ವಕಪ್ ಪಂದ್ಯಗಳನ್ನಾಡಿರುವ ಮಿರೋಸ್ಲಾವ್ ಕ್ಲೋಸ್ 16 ಗೋಲುಗಳನ್ನು ಬಾರಿಸಿ ಫಿಫಾ ವಿಶ್ವಕಪ್​ ಇತಿಹಾಸದಲ್ಲೇ ಅತ್ಯಧಿಕ ಗೋಲು ದಾಖಲಿಸಿದ ವಿಶ್ವ ದಾಖಲೆ ನಿರ್ಮಿಸಿದ್ದರು.
  • ಲಿಯೋನೆಲ್ ಮೆಸ್ಸಿ: ಅರ್ಜೆಂಟೀನಾ ಪರ ಈವರೆಗೆ 27 ವಿಶ್ವಕಪ್ ಪಂದ್ಯಗಳನ್ನಾಡಿರುವ ಮೆಸ್ಸಿ ಒಟ್ಟು 16 ಗೋಲುಗಳನ್ನು ದಾಖಲಿಸಿದ್ದಾರೆ. ಈ ಮೂಲಕ ಫಿಫಾ ವಿಶ್ವಕಪ್​ನಲ್ಲಿ ಅತ್ಯಧಿಕ ಗೋಲು ದಾಖಲಿಸಿ ಕ್ಲೋಸ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮೆಸ್ಸಿ ಸರಿಗಟ್ಟಿದ್ದಾರೆ.

ಮೆಸ್ಸಿ ಅವರ ಈ ಭರ್ಜರಿ ಪ್ರದರ್ಶನದ ನೆರವಿನೊಂದಿಗೆ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಅಲ್ಜೀರಿಯಾ ವಿರುದ್ಧ 3-0 ಗೋಲುಗಳ ಅಮೋಘ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮೆಸ್ಸಿ ಮ್ಯಾಜಿಕ್:

ಅಮೆರಿಕದ ಕನ್ಸಾಸ್ ಸಿಟಿಯ ಆರೋಹೆಡ್ ಸ್ಟೇಡಿಯಂನಲ್ಲಿ ನಡೆದ ಪಂದ್ಯವು ಸಂಪೂರ್ಣವಾಗಿ ಮೆಸ್ಸಿ ಮಯವಾಗಿತ್ತು. ಈ ಪಂದ್ಯಕ್ಕೂ ಮುನ್ನ ವಿಶ್ವಕಪ್‌ಗಳಲ್ಲಿ 13 ಗೋಲುಗಳನ್ನು ಹೊಂದಿದ್ದ ಮೆಸ್ಸಿ, ಪಂದ್ಯದ 17ನೇ ನಿಮಿಷದಲ್ಲೇ ಅದ್ಭುತ ಲಾಂಗ್-ರೇಂಜ್ ಗೋಲು ಬಾರಿಸಿ ಅರ್ಜೆಂಟೀನಾಕ್ಕೆ 1-0 ಮುನ್ನಡೆ ತಂದುಕೊಟ್ಟರು.

ಇದಾದ ಬಳಿಕ 60ನೇ ನಿಮಿಷದಲ್ಲಿ ಎರಡನೇ ಗೋಲು ಮತ್ತು 76ನೇ ನಿಮಿಷದಲ್ಲಿ ಮೂರನೇ ಗೋಲು ಬಾರಿಸುವ ಮೂಲಕ ತಮ್ಮ ವಿಶ್ವಕಪ್ ವೃತ್ತಿಜೀವನದ ಚೊಚ್ಚಲ ಹ್ಯಾಟ್ರಿಕ್ ಪೂರೈಸಿದರು.

ಹಲವು ದಾಖಲೆಗಳು ಧೂಳೀಪಟ:

ಈ ಪಂದ್ಯದಲ್ಲಿ ಗೋಲು ಗಳಿಸುತ್ತಿದ್ದಂತೆ ಲಿಯೋನೆಲ್ ಮೆಸ್ಸಿ ಫುಟ್‌ಬಾಲ್ ಇತಿಹಾಸದ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡರು. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…

  • ಮೊದಲ ವಿಶ್ವಕಪ್ ಹ್ಯಾಟ್ರಿಕ್: ಮೆಸ್ಸಿ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅರ್ಜೆಂಟೀನಾ ಪರ 200ನೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಇದರ ನಡುವೆ 6 ಬಾರಿ ವಿಶ್ವಕಪ್​ನಲ್ಲಿ ಕಣಕ್ಕಿಳಿದಿದ್ದಾರೆ. ಇದಾಗ್ಯೂ ಅವರಿಗೆ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿಯ ವಿಶ್ವಕಪ್​ನ ಮೊದಲ ಮ್ಯಾಚ್​ನಲ್ಲೇ ತಮ್ಮ ಬಹುದೊಡ್ಡ ಕನಸನ್ನು ನನಸಾಗಿಸಿಕೊಂಡಿರುವುದು ವಿಶೇಷ.
  •  ಹಿರಿಯ ಆಟಗಾರ: 2006ರಲ್ಲಿ ಸೆರ್ಬಿಯಾ ಮತ್ತು ಮಾಂಟೆನೆಗ್ರೊ ವಿರುದ್ಧ 18ನೇ ವಯಸ್ಸಿನಲ್ಲಿ ತಮ್ಮ ಮೊದಲ ವಿಶ್ವಕಪ್ ಗೋಲು ಗಳಿಸಿದ್ದ ಮೆಸ್ಸಿ, ಈಗ 20 ವರ್ಷಗಳ ನಂತರ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಅತ್ಯಂತ ಹಿರಿಯ ಅರ್ಜೆಂಟೀನಾ ಆಟಗಾರ ಎನಿಸಿಕೊಂಡಿದ್ದಾರೆ.
  •  ಏಕೈಕ ಆಟಗಾರ: ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಆರು ವಿಭಿನ್ನ ವಿಶ್ವಕಪ್ ಟೂರ್ನಿಗಳಲ್ಲಿ (2006, 2010, 2014, 2018, 2022, 2026) ಅರ್ಜೆಂಟೀನಾ ತಂಡವನ್ನು ಪ್ರತಿನಿಧಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಿಜವಾದ ಕ್ಲೋಸ್ ಭವಿಷ್ಯ!

ಈ ಬಾರಿಯ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಸ್ವತಃ ಮಿರೋಸ್ಲಾವ್ ಕ್ಲೋಸ್ ಅವರೇ, “ನನ್ನ ವಿಶ್ವಕಪ್ ದಾಖಲೆಯನ್ನು ಮುರಿಯಲು ಯಾರಾದರೂ ಅರ್ಹರಿದ್ದರೆ ಅದು ಲಿಯೋನೆಲ್ ಮೆಸ್ಸಿ ಮಾತ್ರ” ಎಂದು ಹೇಳಿದ್ದರು.

ಇದನ್ನೂ ಓದಿ: ಫಿಫಾ ವಿಶ್ವಕಪ್ ಅಂಗಳದಲ್ಲಿ ನಾಲ್ವರು ಭಾರತೀಯ ಮೂಲದವರು!

ಮೆಸ್ಸಿ ಈಗ ಅವರ ದಾಖಲೆಯನ್ನು ಸರಿಗಟ್ಟಿದ್ದು, ಮುಂಬರುವ ಪಂದ್ಯಗಳಲ್ಲಿ ಇನ್ನೂ ಒಂದು ಗೋಲು ಗಳಿಸಿದರೆ ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಗೋಲು ಗಳಿಸಿದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

Published On – 8:44 am, Wed, 17 June 26

Source link

ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ: ಜೂನ್ 18 ರಿಂದ ಅನಿರ್ದಿಷ್ಟಾವಧಿ ಮುಷ್ಕರ – Kannada News | Bengaluru Small Traders and Street Vendors on Strike from June 18

ಬೆಂಗಳೂರು, ಜೂನ್ 17: ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳವನ್ನು ಖಂಡಿಸಿ ಮತ್ತು ತಮಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಬೆಂಗಳೂರಿನ (Bengaluru) ಸುಮಾರು 58,000ಕ್ಕೂ ಹೆಚ್ಚು ಬೇಕರಿ, ಬೀಡಾ ಅಂಗಡಿ ಮಾಲೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಜೂನ್ 18ರಿಂದ (ಗುರುವಾರ) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಮುಖ್ಯಾಂಶಗಳು

  • ಅಧಿಕಾರಿಗಳ ಕಿರುಕುಳ ಖಂಡಿಸಿ ಸಣ್ಣ ವ್ಯಾಪಾರಿಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ.
  • ಜೂನ್ 18 ರಿಂದ ಬೆಂಗಳೂರಿನಾದ್ಯಂತ ಬೇಕರಿ, ಸಣ್ಣ ಅಂಗಡಿಗಳು ಬಂದ್ ಆಗಲಿವೆ.
  • ಪ್ಲಾಸ್ಟಿಕ್ ನಿಷೇಧ ಹೆಸರಿನಲ್ಲಿ ತಾರತಮ್ಯದ ದಂಡ ವಿಧಿಸುತ್ತಿರುವುದಕ್ಕೆ ವ್ಯಾಪಾರಿಗಳ ಆಕ್ರೋಶ.

ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ರಾಜ್ಯ ಅಧ್ಯಕ್ಷರಾದ ರವಿಶೆಟ್ಟಿ ಬೈಂದೂರು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಣ್ಣ ವ್ಯಾಪಾರಿಗಳು ಕಾನೂನುಬದ್ಧವಾಗಿ ವ್ಯಾಪಾರ ಮಾಡುತ್ತಾ, ತೆರಿಗೆ ಪಾವತಿಸುತ್ತಿದ್ದರೂ ಸಹ ಅಧಿಕಾರಿಗಳಿಂದ ನಿರಂತರ ತಪಾಸಣೆ, ದಂಡ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ರಾಜ್ಯಾದ್ಯಂತ ಭಾಗಶಃ ಬೆಂಬಲ

ಈ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಎಲ್ಲಾ ಬೇಕರಿಗಳು ಮತ್ತು ಸಣ್ಣ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದ್ದರೂ, ಕರ್ನಾಟಕದ ಇತರ ಭಾಗಗಳಲ್ಲಿ ಭಾಗಶಃ ಸಹಕರಿಸುವ ಸಾಧ್ಯತೆಯಿದೆ ಎಂದು ಪರಿಷತ್ ತಿಳಿಸಿದೆ.

ಅಧಿಕಾರಿಗಳ ಕಿರುಕುಳದ ವಿರುದ್ಧ ವ್ಯಾಪಾರಿಗಳ ಆಕ್ರೋಶ

ಸಣ್ಣ ವ್ಯಾಪಾರಿಗಳ ಅಸೋಸಿಯೇಷನ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ವ್ಯಾಪಾರಿಗಳನ್ನು ಪೊಲೀಸ್ ಠಾಣೆ ಹಾಗೂ ಪಾಲಿಕೆ ಕಚೇರಿಗಳಿಗೆ ಅಲೆದಾಡಿಸಿ, ಸುದೀರ್ಘ ವಿಚಾರಣೆ ನಡೆಸಿ ನಿಂದಿಸಲಾಗುತ್ತಿದೆ. ಅಲ್ಲದೆ ಯಾವುದೇ ಮುನ್ಸೂಚನೆ ಇಲ್ಲದೆ ಅಂಗಡಿಗಳನ್ನು ಮುಚ್ಚಿಸಲಾಗುತ್ತಿದೆ. ನಿಷೇಧಿತ ಪ್ಲಾಸ್ಟಿಕ್ ಕವರ್‌ಗಳನ್ನು ಉತ್ಪಾದಿಸುವ ದೊಡ್ಡ ಸಂಸ್ಥೆಗಳು ಮತ್ತು ಸಗಟು ವ್ಯಾಪಾರಿಗಳನ್ನು ಬಿಟ್ಟು, ಸಣ್ಣ ಚಿಲ್ಲರೆ ವ್ಯಾಪಾರಿಗಳ ಮೇಲೆ ಅಧಿಕಾರಿಗಳು ಭಾರಿ ಮೊತ್ತದ ದಂಡ ಹೇರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ ರಸ್ತೆ ಗುಂಡಿಗಳ ಪತ್ತೆಗೆ ಎಐ ಮೊರೆಹೋದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಅಲ್ಲದೆ ಸರ್ಕಾರದಿಂದ ಅನುಮತಿ ಪಡೆದ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದರೂ ಸಹ ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ. ಹೀಗಾಗಿ ನಿಯಮಾವಳಿಗಳ ಹೆಸರಿನಲ್ಲಿ ನಡೆಯುತ್ತಿರುವ ಈ ಅನಗತ್ಯ ಕಿರುಕುಳ ನಿಲ್ಲುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಸಂಘಟನೆಗಳು ಎಚ್ಚರಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಕರ್ನಾಟಕವೇ ಅಗ್ರಗಣ್ಯ: 2025-26ನೇ ಹಣಕಾಸು ವರ್ಷದಲ್ಲಿ 173 ಬಿಲಿಯನ್ ಡಾಲರ್‌ ವಹಿವಾಟು – Kannada News | Karnataka retains no 1 spot in software exports contributes 41 percent of indias total

ಬೆಂಗಳೂರು, ಜೂನ್​​ 17: ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಕರ್ನಾಟಕವು ದೇಶದ ಅಗ್ರ ರಾಜ್ಯ ಎಂಬ ತನ್ನ ಸ್ಥಾನವನ್ನು ಮತ್ತೊಮ್ಮೆ ಉಳಿಸಿಕೊಂಡಿದೆ. ಈ ಕುರಿತ ಮಾಹಿತಯ್ನು ಸ್ವತಃ ಸಿಎಂ ಡಿ.ಕೆ. ಶಿವಕುಮಾರ್ ಅವರೇ ಎಕ್ಸ್​​ ಪೋಸ್ಟ್​​ ಮೂಲಕ ಹಂಚಿಕೊಂಡಿದ್ದು, 2025-26ನೇ ಹಣಕಾಸು ವರ್ಷದಲ್ಲಿ ಸುಮಾರು 173 ಬಿಲಿಯನ್ ಡಾಲರ್‌ (ಸುಮಾರು ₹19.7 ಲಕ್ಷ ಕೋಟಿ) ಮೌಲ್ಯದ ರಫ್ತು ದಾಖಲಿಸಿದೆ. ಇದರ ಜೊತೆಗೆ 34 ಬಿಲಿಯನ್ ಡಾಲರ್‌ ಮೌಲ್ಯದ ಸರಕು (Merchandise) ರಫ್ತಿನೊಂದಿಗೆ ಕರ್ನಾಟಕ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.

ಶೇ. 9.3ರಷ್ಟು ಬೆಳವಣಿಗೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಾಗೂ ಡೈರೆಕ್ಟರೇಟ್ ಜನರಲ್ ಆಫ್ ಕಮರ್ಷಿಯಲ್ ಇಂಟೆಲಿಜೆನ್ಸ್ ಅಂಡ್ ಸ್ಟಾಟಿಸ್ಟಿಕ್ಸ್ (DGCIS) ಅಂಕಿಅಂಶಗಳ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ರಾಜ್ಯದ ಸಾಫ್ಟ್‌ವೇರ್, ಸೇವೆ ಹಾಗೂ ಸರಕು ರಫ್ತುಗಳಲ್ಲಿ ಶೇ. 9.3ರಷ್ಟು ಬೆಳವಣಿಗೆ ದಾಖಲಾಗಿದೆ. ಭಾರತದ ಪ್ರಮುಖ ಸಾಫ್ಟ್‌ವೇರ್ ಮತ್ತು ಸೇವಾ ರಫ್ತು ರಾಜ್ಯವಾಗಿ ಕರ್ನಾಟಕ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಉತ್ಪಾದನಾ ಕ್ಷೇತ್ರ, ಏರೋಸ್ಪೇಸ್, ಸಂಶೋಧನೆ ಹಾಗೂ ನವೋದ್ಯಮಗಳಲ್ಲಿ ಕರ್ನಾಟಕದ ಶಕ್ತಿ ಅಡಗಿದೆ. ವಿಶ್ವಮಟ್ಟದ ಪ್ರತಿಭೆ, ಚೈತನ್ಯಮಯ ಆರ್ಥಿಕತೆ ಹಾಗೂ ಉದ್ಯಮಶೀಲತೆಯ ಮನೋಭಾವವೇ ರಾಜ್ಯದ ಯಶಸ್ಸಿನ ಮೂಲ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ಕೆಲವೇ ಎಐ ಮಾಡಲ್​ಗಳು ಇಡೀ ಉದ್ಯಮವನ್ನೇ ನುಂಗಿ ನೀರು ಕುಡಿಯಲು ಬಿಡಬಾರದು; ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ದೇಶದ ಸಾಫ್ಟ್‌ವೇರ್ ರಫ್ತಿನಲ್ಲಿ ಕರ್ನಾಟಕದ ಪ್ರಾಬಲ್ಯ

2025-26ನೇ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಸಾಫ್ಟ್‌ವೇರ್ ಮತ್ತು ಸೇವಾ ರಫ್ತಿನ ಶೇ. 41ರಷ್ಟು ಪಾಲು ಕರ್ನಾಟಕದ್ದಾಗಿದೆ.

ಇತರೆ ಪ್ರಮುಖ ರಾಜ್ಯಗಳ ಪಾಲು

  • ಮಹಾರಾಷ್ಟ್ರ – ಶೇ. 16
  • ತಮಿಳುನಾಡು – ಶೇ. 12.5
  • ಉತ್ತರ ಪ್ರದೇಶ – ಶೇ. 5
  • ಆಂಧ್ರ ಪ್ರದೇಶ – ಶೇ. 1
  • ಗುಜರಾತ್ – ಶೇ. 0.9

ಕರ್ನಾಟಕದ ಉತ್ಪನ್ನಗಳು, ಸೇವೆಗಳು ಮತ್ತು ಆಲೋಚನೆಗಳು ಜಾಗತಿಕ ಮಾರುಕಟ್ಟೆ ತಲುಪುತ್ತಿರುವ ಸಂದರ್ಭದಲ್ಲಿ ಹೂಡಿಕೆ, ಕೈಗಾರಿಕೆ, ಉದ್ಯಮಶೀಲತೆ ಹಾಗೂ ಉದ್ಯೋಗ ಸೃಷ್ಟಿಗೆ ಇನ್ನಷ್ಟು ಅವಕಾಶಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಗುರಿ ಎಂದು ಮುಖ್ಯಮಂತ್ರಿಗಳು ತಿಳಿಸಿರುವುದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:19 am, Wed, 17 June 26

Source link

‘ದೊಡ್ಡಣ್ಣ ನಿಧನ’ ಅಂತ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಡುಕ; ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ – Kannada News | Doddanna Fights Fake News: Cyber Police Complaint Against Death Hoax Spreaders

ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಅವರು (Doddanna) ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ಕಿಡಿಗೇಡಿಗಳಿಗೆ ಈಗ ಸರಿಯಾಗಿಯೇ ಕಾನೂನಿನ ಬಿಸಿ ಮುಟ್ಟಿದೆ. ತಾವಿನ್ನೂ ಆರೋಗ್ಯವಾಗಿ ಬದುಕಿರುವಾಗಲೇ ‘ಸತ್ತಿದ್ದಾರೆ’ ಎಂದು ಸುಳ್ಳು ಪೋಸ್ಟ್ ಹಾಕಿ ವಿಕೃತ ಆನಂದ ಪಟ್ಟವರ ವಿರುದ್ಧ ಹಿರಿಯ ನಟ ದೊಡ್ಡಣ್ಣ ಅವರು ಖುದ್ದಾಗಿ ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ನಟ ದೊಡ್ಡಣ್ಣ ಅವರ ಈ ದಿಟ್ಟ ಹೆಜ್ಜೆಯಿಂದಾಗಿ, ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವೀವ್ಸ್‌ಗಾಗಿ ಇಂತಹ ಕೆಟ್ಟ ಕೆಲಸ ಮಾಡುತ್ತಿದ್ದ ಕಿಡಿಗೇಡಿಗಳಿಗೆ ಈಗ ಜೈಲು ಪಾಲಾಗುವ ಭಯ ಶುರುವಾಗಿದೆ

ಏನಿದು ಘಟನೆ?

ಇತ್ತೀಚೆಗೆ ಸಾಮಾಜಿಕ ಜಾಲತಾಣದ ‘ಪಬ್ಲಿಕ್ ಫ್ರೆಂಡ್’ (Public Friend) ಎಂಬ ಖಾತೆಯಲ್ಲಿ ನಟ ದೊಡ್ಡಣ್ಣ ಅವರು ಇನ್ನಿಲ್ಲ ಎಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿತ್ತು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ದೊಡ್ಡಣ್ಣ ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಆಪ್ತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಇದಾದ ಬೆನ್ನಲ್ಲೇ ಸ್ವತಃ ದೊಡ್ಡಣ್ಣ ಅವರೇ ಮಾಧ್ಯಮಗಳ ಮುಂದೆ ಬಂದು, ‘ನಾನು ಚೆನ್ನಾಗಿದ್ದೇನೆ, ಆರೋಗ್ಯವಾಗಿದ್ದೇನೆ, ದಯವಿಟ್ಟು ಸುಳ್ಳು ಸುದ್ದಿ ನಂಬಬೇಡಿ’ ಎಂದು ಸ್ಪಷ್ಟನೆ ನೀಡಬೇಕಾಯಿತು.

ಇದೇ ಮೊದಲೇನಲ್ಲ… ಈ ಬಾರಿ ಬಿಡುವ ಮಾತೇ ಇಲ್ಲ

ದೊಡ್ಡಣ್ಣ ಅವರ ಬಗ್ಗೆ ಈ ರೀತಿ ನಿಧನದ ಸುದ್ದಿ ಹರಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಕೆಲವು ವರ್ಷಗಳಿಂದಲೂ ಆಗಾಗ ಇಂತಹ ವಿಕೃತ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಪ್ರತಿ ಬಾರಿಯೂ ಸುಮ್ಮನಾಗುತ್ತಿದ್ದ ದೊಡ್ಡಣ್ಣ, ಈ ಬಾರಿ ಮಾತ್ರ ಕಿಡಿಗೇಡಿಗಳಿಗೆ ಸರಿಯಾದ ಪಾಠ ಕಲಿಸಲೇಬೇಕು ಎಂದು ನಿರ್ಧರಿಸಿ ಸೈಬರ್ ಠಾಣೆಯ ಮೆಟ್ಟಿಲೇರಿದ್ದಾರೆ.

‘ನಾನು ಬದುಕಿರುವಾಗಲೇ ಸತ್ತಿದ್ದೇನೆ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ. ಎಐ ಮೂಲಕ ಎಡಿಟ್ ಮಾಡಿ ವೈರಲ್ ಮಾಡಿರುವುದರಿಂದ ನನಗೆ ತೀವ್ರ ಮಾನಸಿಕ ನೋವು ಹಾಗೂ ಅತೀವ ಆಘಾತ ಉಂಟಾಗಿದೆ. ನನ್ನ ಕುಟುಂಬಸ್ಥರು ಮತ್ತು ಅಭಿಮಾನಿಗಳು ಈ ವದಂತಿಯಿಂದ ನೊಂದಿದ್ದಾರೆ. ಆದ್ದರಿಂದ ಇಂತಹ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೊಡ್ಡಣ್ಣ ದೂರಿನಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ‘ನಾನು ಸತ್ತಿಲ್ಲ, ಟಿವಿ9 ನೋಡ್ತಾ ಆರಾಮಾಗಿದ್ದೇನೆ’; ದೊಡ್ಡಣ್ಣ ಸ್ಪಷ್ಟನೆ

ಕಳೆದ ಜೂನ್ 15 ರಂದು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೊಡ್ಡಣ್ಣ ಅವರು ಅಧಿಕೃತವಾಗಿ ದೂರು ನೀಡಿದ್ದಾರೆ. ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸೈಬರ್ ಪೊಲೀಸರು, ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಭರ್ಜರಿ ಬೇಟೆ ಆರಂಭಿಸಿದ್ದಾರೆ. ಆ ‘ಪಬ್ಲಿಕ್ ಫ್ರೆಂಡ್’ ಖಾತೆಯ ಐಪಿ ಅಡ್ರೆಸ್ ಹಾಗೂ ಅದರ ಹಿಂದಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ತನಿಖೆ ಚುರುಕುಗೊಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಣ್ಣ ಕುರಿತು ಇಂತಹ ನಕಲಿ ಪೋಸ್ಟ್‌ಗಳನ್ನು ಕ್ರಿಯೇಟ್ ಮಾಡಿದವರಿಗೆ ಮತ್ತು ಅದನ್ನು ಫಾರ್ವರ್ಡ್ ಮಾಡಿದವರಿಗೆ ನಡುಕ ಶುರುವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎನ್‌ಸಿಪಿಐಗೆ ಹೊಸ ಅಧ್ಯಕ್ಷರ ನೇಮಕ: ಟಿಎಂಸಿ ಬಂಡಾಯ ಸಂಸದರ ಅರ್ಜಿ ಸ್ವೀಕರಿಸುತ್ತಾರಾ ಸ್ಪೀಕರ್ ಓಂ ಬಿರ್ಲಾ? – Kannada News | TMC Rebel MPs Join NCPI: Speaker Om Birla’s Merger Decision and NDA Impact

ಕೋಲ್ಕತ್ತಾ, ಜೂನ್ 17: ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗಿನ ತೀವ್ರ ರಾಜಕೀಯ ಬಿಕ್ಕಟ್ಟಿನ ನಡುವೆ, ಬಂಡಾಯ ಸಂಸದರು ವಿಲೀನಗೊಳ್ಳಲು ಬಯಸಿರುವ ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಪಕ್ಷಕ್ಕೆ ಜ್ಯೋತಿಪ್ರಕಾಶ್ ಚಟರ್ಜಿ ಅವರನ್ನು ಹೊಸ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇತ್ತ, ಟಿಎಂಸಿಯ ಮೂರನೇ ಎರಡರಷ್ಟು ಸಂಸದರೊಂದಿಗೆ ಬಂಡಾಯ ಎದ್ದಿರುವ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ವಿಲೀನದ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಸ್ಪೀಕರ್ ಓಂ ಬಿರ್ಲಾ ಅವರ ಮುಂದಿನ ನಡೆ ಏನು?
ಮೂಲಗಳ ಪ್ರಕಾರ, ಬಂಡಾಯ ಸಂಸದರ ಮನವಿಯನ್ನು ಸ್ವೀಕರಿಸಿರುವ ಸ್ಪೀಕರ್ ಓಂ ಬಿರ್ಲಾ ಅವರು ತಕ್ಷಣವೇ ಯಾವುದೇ ನಿರ್ಧಾರ ಪ್ರಕಟಿಸುವುದಿಲ್ಲ. ಅವರು ಬಂಡಾಯ ಬಣದ ವಾದವನ್ನು ಕೇಳುವುದರ ಜೊತೆಗೆ, ಮಮತಾ ಬ್ಯಾನರ್ಜಿ ನೇತೃತ್ವದ ಅಧಿಕೃತ ಟಿಎಂಸಿ ನಾಯಕರ ಅಭಿಪ್ರಾಯವನ್ನೂ ಪಡೆಯಲಿದ್ದಾರೆ.

ಜುಲೈ ಮೂರನೇ ವಾರದಲ್ಲಿ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ಈ ಬಗ್ಗೆ ಅಂತಿಮ ತೀರ್ಮಾನ ಹೊರಬರಲಿದೆ. ಭವಿಷ್ಯದಲ್ಲಿ ಈ ವಿಷಯವು ನ್ಯಾಯಾಲಯದ ಮೆಟ್ಟಿಲೇರಿದರೆ ಯಾವುದೇ ಕಾನೂನು ತೊಡಕು ಎದುರಾಗಬಾರದು ಎಂಬ ಕಾರಣಕ್ಕೆ, ಸ್ಪೀಕರ್ ಅವರು ಕೇಂದ್ರ ಕಾನೂನು ಸಚಿವಾಲಯದಿಂದ ಲಿಖಿತ ಕಾನೂನು ಅಭಿಪ್ರಾಯವನ್ನು ಪಡೆಯಲಿದ್ದಾರೆ.

ಮತ್ತಷ್ಟು ಓದಿ: ಕಾಂಗ್ರೆಸ್ ಜೊತೆ ವಿಲೀನವಾಗುತ್ತಾ ಟಿಎಂಸಿ? ಮಮತಾ ಬ್ಯಾನರ್ಜಿಗೆ ದೊಡ್ಡ ಹುದ್ದೆಯ ಆಫರ್

ಎನ್‌ಡಿಎ (NDA) ಮೈತ್ರಿಕೂಟದಲ್ಲಿ ಬದಲಾಗಲಿದೆ ಸಮೀಕರಣ
ಬಂಡಾಯ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ಅವರ ಪ್ರಕಾರ, ಸದ್ಯಕ್ಕೆ ಅವರ ಬಣದಲ್ಲಿ 20 ಸಂಸದರಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಈ ಸಂಖ್ಯೆ 22 ಕ್ಕೆ ಏರಲಿದೆ. ಈ ಎಲ್ಲಾ ಬಂಡಾಯ ಸಂಸದರನ್ನು ಸೇರಿಸಿಕೊಳ್ಳಲು ಎನ್‌ಸಿಪಿಐ ಒಪ್ಪಿಕೊಂಡಿದೆ.

ಒಂದು ವೇಳೆ ಲೋಕಸಭಾ ಸ್ಪೀಕರ್ ಈ ಬಂಡಾಯ ಗುಂಪನ್ನು ಎನ್‌ಸಿಪಿಐ ಪಕ್ಷದ ಸಂಸದರೆಂದು ಅಧಿಕೃತವಾಗಿ ಗುರುತಿಸಿದರೆ, ಕೇಂದ್ರದಲ್ಲಿರುವ ಎನ್‌ಡಿಎ (NDA) ಮೈತ್ರಿಕೂಟದ ಸಮೀಕರಣವೇ ಬದಲಾಗಲಿದೆ. ಏಕೆಂದರೆ, ಪ್ರಸ್ತುತ ಎನ್‌ಡಿಎ ಮೈತ್ರಿಕೂಟದಲ್ಲಿ ಟಿಡಿಪಿ (16 ಸಂಸದರು) ಮತ್ತು ಜೆಡಿಯು (12 ಸಂಸದರು) ಪಕ್ಷಗಳಿಗಿಂತ ಹೆಚ್ಚು ಸ್ಥಾನಗಳನ್ನು ಹೊಂದುವ ಮೂಲಕ ಎನ್‌ಸಿಪಿಐ ಒಕ್ಕೂಟದ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.

ಎನ್‌ಸಿಪಿಐ ಪಕ್ಷದೊಳಗೇ ಗೊಂದ
ಎನ್‌ಸಿಪಿಐ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶಾಂತನು ಡೇ ಅವರು ಈ ಬೆಳವಣಿಗೆಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ (PTI) ಜೊತೆ ಹೇಳಿದ್ದಾರೆ. ಹೊಸ ಅಧ್ಯಕ್ಷರಾಗಿದ್ದಾರೆ ಎನ್ನಲಾದ ಜ್ಯೋತಿಪ್ರಕಾಶ್ ಚಟರ್ಜಿ ಯಾರೆಂದೇ ನನಗೆ ಗೊತ್ತಿಲ್ಲ. ದೊಡ್ಡ ನಾಯಕರು ನಮ್ಮ ಪಕ್ಷಕ್ಕೆ ಬರುತ್ತಿರುವುದು ಸಂತೋಷವೇ, ಆದರೆ ನಮ್ಮನ್ನು ಕತ್ತಲೆಯಲ್ಲಿ ಇಟ್ಟಿರುವುದು ನಿರಾಶೆ ಮೂಡಿಸಿದೆ ಎಂದು ಡೇ ಹೇಳಿದ್ದಾರೆ.

ಎನ್‌ಸಿಪಿಐ (NCPI) ಪಕ್ಷವನ್ನು 2023 ರಲ್ಲಿ ಸ್ಥಾಪಿಸಲಾಗಿದ್ದು, ಪಶ್ಚಿಮ ಬಂಗಾಳದ ಹೌರಾದಲ್ಲಿ ಇದರ ಪ್ರಧಾನ ಕಚೇರಿ ಇದೆ. ಈ ಪಕ್ಷವು ಈ ಹಿಂದೆ ತ್ರಿಪುರ ವಿಧಾನಸಭಾ ಚುನಾವಣೆಯ ಕೆಲವು ಸ್ಥಾನಗಳಲ್ಲೂ ಸ್ಪರ್ಧಿಸಿತ್ತು. ಸದ್ಯ ಈ ಪಕ್ಷದ ಹೆಸರಿನಲ್ಲೇ ಸಂಸತ್ತಿನಲ್ಲಿ ಪ್ರತ್ಯೇಕ ಮಾನ್ಯತೆ ಪಡೆಯಲು ಬಂಡಾಯ ಸಂಸದರು ಹೋರಾಟ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಯಂಗ್ ಇಂಡಿಯಾ ಪಾಲಿಗೆ ಇಂದು ನಿರ್ಣಾಯಕ ಪಂದ್ಯ..! – Kannada News | Do or Die for India A: Afghanistan A Clash to Decide Tri Series Final Fate

ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ 5ನೇ ಪಂದ್ಯದಲ್ಲಿ ಇಂದು (ಜೂನ್ 17) ತಿಲಕ್ ವರ್ಮಾ ನೇತೃತ್ವದ ಇಂಡಿಯಾ ‘ಎ’ ತಂಡವು ಇಮ್ರಾನ್ ಮಿರ್ ಸಾರಥ್ಯದ ಅಫ್ಘಾನಿಸ್ತಾನ್ ‘ಎ’ ತಂಡವನ್ನು ಎದುರಿಸಲಿದೆ. ಭಾರತ ತಂಡಕ್ಕೆ ಸರಣಿಯ ಫೈನಲ್ ರೇಸ್‌ನಲ್ಲಿ ಉಳಿಯಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಮ್ಯಾಚ್ ಟೀಮ್ ಇಂಡಿಯಾ ಪಾಲಿಗೆ ‘ಮಾಡೂ ಇಲ್ಲವೇ ಮಡಿ’ ಕದನವಾಗಿ ಮಾರ್ಪಟ್ಟಿದೆ.

ಟೀಮ್ ಇಂಡಿಯಾಗೆ ಸತತ ಸೋಲು:

ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎ ವಿರುದ್ಧ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದ್ದ ಭಾರತ ಎ ತಂಡವು, ಆ ನಂತರದ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ.

ಜೂನ್ 11 ರಂದು ನಡೆದ ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಮುಖಾಮುಖಿಯಲ್ಲಿ ಭಾರತ 349 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದರೂ, ಮಳೆಯ ಕಾರಣದಿಂದಾಗಿ DLS ನಿಯಮದನ್ವಯ ಕೇವಲ 4 ರನ್‌ಗಳಿಂದ ಸೋಲೊಪ್ಪಿಕೊಂಡಿತ್ತು.

ಜೂನ್ 14 ರಂದು ನಡೆದ ಶ್ರೀಲಂಕಾ ‘ಎ’ ವಿರುದ್ಧದ ಪಂದ್ಯವು ಟೈ ಆದ ನಂತರ, ರೋಚಕ ‘ಸೂಪರ್ ಓವರ್’ನಲ್ಲಿ ಭಾರತ ಮತ್ತೊಮ್ಮೆ ಸೋಲಿನ ಸುಳಿಗೆ ಸಿಲುಕಿತು.  ಈ ಎರಡು ಸೋಲುಗಳಿಂದ ಕಂಗೆಟ್ಟಿರುವ ಟೀಮ್ ಇಂಡಿಯಾ ಫೈನಲ್ ರೇಸ್​ನಲ್ಲಿ ಉಳಿಯಲು ಇಂದು ಗೆಲ್ಲಲೇಬೇಕು.

ಅಂಕ ಪಟ್ಟಿಯ ಲೆಕ್ಕಾಚಾರ:

ಪ್ರಸ್ತುತ ಲೀಗ್ ಹಂತದಲ್ಲಿ ಭಾರತ 3 ಪಂದ್ಯಗಳಿಂದ ಕೇವಲ 2 ಅಂಕಗಳನ್ನು ಹೊಂದಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಒಂದು ವೇಳೆ ಇಂದು ಭಾರತ ಸೋತರೆ, ಕೇವಲ 2 ಅಂಕಗಳೊಂದಿಗೆ ಟೂರ್ನಿಯಿಂದ ಹೊರಬೀಳಲಿದೆ.

ಅಫ್ಘಾನಿಸ್ತಾನ ಈಗಾಗಲೇ 2 ಅಂಕ ಹೊಂದಿದ್ದು, ಅವರಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವುದರಿಂದ ಇಂದಿನ ಪಂದ್ಯ ಗೆದ್ದರೆ ಅವರು ನೇರವಾಗಿ ಶ್ರೀಲಂಕಾ ಜೊತೆ ಫೈನಲ್ ಪ್ರವೇಶಿಸಲಿದ್ದಾರೆ.

ಆದ್ದರಿಂದ ಭಾರತ ಕೇವಲ ಗೆಲ್ಲುವುದಷ್ಟೇ ಅಲ್ಲದೆ, ಉತ್ತಮ ನೆಟ್ ರನ್ ರೇಟ್ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಅಫ್ಘಾನಿಸ್ತಾನ್ ತಂಡಕ್ಕೆ ಇಂದಿನ ಪಂದ್ಯ ಹೊರತುಪಡಿಸಿ ಮತ್ತೊಂದು ಪಂದ್ಯವಿದೆ. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಗೆಲುವಿನೊಂದಿಗೆ ನೆಟ್ ರನ್ ರೇಟ್ ಅನ್ನು ಟಾರ್ಗೆಟ್ ಮಾಡುವುದು ಅನಿವಾರ್ಯ.

ಅಫ್ಘಾನಿಸ್ತಾನ್ ಎ ತಂಡ: ಇಮ್ರಾನ್ ಮಿರ್ (ನಾಯಕ), ಹಸನ್ ಐಸಾಖಿಲ್, ಖಾಲಿದ್ ತನಿವಾಲ್, ಬಹಿರ್ ಶಾ, ಫರ್ಮಾನುಲ್ಲಾ ಸಫಿ, ಇಜಾಝ್ ಅಹ್ಮದ್ ಅಹ್ಮದ್‌ಝೈ, ಮೊಹಮ್ಮದ್ ಇಶಾಕ್ (ವಿಕೆಟ್ ಕೀಪರ್), ಶಮ್ಸ್ ಉರ್ ರೆಹಮಾನ್, ಅಬ್ದುಲ್ಲಾ ಅಹ್ಮದ್‌ಝಾಹಿ, ಝಹೀರ್ ಖಾನ್, ಖಲೀಲ್ ಗುರ್ಬಾಝ್, ನೂರ್ ಉಲ್ ರೆಹಮಾನ್, ಇಶಾಕ್ ರಹೀಮಿ, ಫೈಸಲ್ ಖಾನ್ಮೊ, ಮೊಹಮ್ಮದ್ ಇಬ್ರಾಹಿಂ.

ಇದನ್ನೂ ಓದಿ: ಮಿಂಚಿನಾಟದೊಂದಿಗೆ ಹೊಸ ಇತಿಹಾಸ ಬರೆದ ಎಂಬಾಪ್ಪೆ!

ಭಾರತ ಎ ತಂಡ: ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ರುತುರಾಜ್ ಗಾಯಕ್‌ವಾಡ್, ತಿಲಕ್ ವರ್ಮಾ (ನಾಯಕ), ಆಯುಷ್ ಬದೋನಿ, ನಿಶಾಂತ್ ಸಿಂಧು, ಸೂರ್ಯಾಂಶ್ ಶೆಡ್ಗೆ, ಅನ್ಕೂಲ್ ರಾಯ್, ವಿಪ್ರಾಜ್ ನಿಗಮ್, ಅರ್ಷದ್ ಖಾನ್, ಯಶ್ ಠಾಕೂರ್, ಅಂಶುಲ್ ಕಂಬೋಜ್, ಪ್ರಿಯಾಂಶ್ ಆರ್ಯ, ಕುಮಾರ್ ಕುಶಾಗ್ರ, ಅಶೋಕ್ ಶರ್ಮಾ.

Source link

ಹೊಸ ಫೆರಾರಿ ಕಾರಲ್ಲಿ ಮುಂಬೈ ಸುತ್ತಿದ ರಣವೀರ್; ಇದರ ಬೆಲೆ 6 ಕೋಟಿ ರೂಪಾಯಿ – Kannada News | Ranveer Singh’s New Ferrari 296 GTB: Don 3 Controversy Ignored, Flaunts Luxury Life

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ (Ranveer Singh) ಇತ್ತೀಚೆಗಷ್ಟೇ ತೆರೆಕಂಡ ‘ಧುರಂಧರ್’ ಚಿತ್ರದ ಭರ್ಜರಿ ಯಶಸ್ಸಿನ ಖುಷಿಯಲ್ಲಿದ್ದಾರೆ. ಆದರೆ, ಮತ್ತೊಂದೆಡೆ ಬಹುನಿರೀಕ್ಷಿತ ‘ಡಾನ್ 3’ ಚಿತ್ರದಿಂದ ಹೊರಬಂದ ವಿಚಾರವಾಗಿ ನಿರ್ದೇಶಕ ಫರ್ಹಾನ್ ಅಖ್ತರ್ ಹಾಗೂ ರಣವೀರ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿ ಬಿ-ಟೌನ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ಎಲ್ಲಾ ವಿವಾದ ಹಾಗೂ ಗಾಸಿಪ್‌ಗಳ ನಡುವೆಯೇ ರಣವೀರ್ ಸಿಂಗ್ ಮುಂಬೈ ರಸ್ತೆಗಳಲ್ಲಿ ತಮ್ಮ ಹೊಚ್ಚಹೊಸ ಐಷಾರಾಮಿ ಕಾರಿನಲ್ಲಿ ರೌಂಡ್ಸ್ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ರಣವೀರ್ ಸಿಂಗ್ ತಮ್ಮ ದುಬಾರಿ ಕಲೆಕ್ಷನ್‌ಗೆ ಸೇರ್ಪಡೆ ಮಾಡಿಕೊಂಡಿರುವ ಕಡುಗಪ್ಪು ಬಣ್ಣದ ‘ಫೆರಾರಿ 296 ಜಿಟಿಬಿ’ ಸೂಪರ್ ಕಾರ್ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಭಾರತದಲ್ಲಿ ಈ ರೇಸಿಂಗ್ ಕಾರಿನ ಬೆಲೆ ಬರೋಬ್ಬರಿ 6.36 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ‘ಬಾಲಿವುಡ್‌ನಲ್ಲಿ ಪಾಕಿಸ್ತಾನ ಪ್ರೇಮ ಹೆಚ್ಚಿದೆ’: ರಣವೀರ್ ಸಿಂಗ್ ಪರ ಬ್ಯಾಟ್ ಬೀಸಿದ ಕಂಗನಾ ರಣಾವತ್

ರಣವೀರ್ ಗ್ಯಾರೇಜ್‌ನಲ್ಲಿರುವ ಇತರ ದುಬಾರಿ ಕಾರುಗಳು:

ಬಾಲಿವುಡ್‌ನಲ್ಲಿ ಸಖತ್ ಕಾಸ್ಟ್‌ಲಿ ಲೈಫ್‌ಸ್ಟೈಲ್ ಹೊಂದಿರುವ ರಣವೀರ್ ಸಿಂಗ್‌ಗೆ ಕಾರುಗಳೆಂದರೆ ಅಪಾರ ಕ್ರೇಜ್. ಹೊಸ ಫೆರಾರಿ ಮಾತ್ರವಲ್ಲದೆ ಅವರ ಗ್ಯಾರೇಜ್‌ನಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಇನ್ನು ಹಲವು ಕಾರುಗಳಿವೆ.

ಮರ್ಸಿಡಿಸ್-ಮೇಬ್ಯಾಕ್ GLS 600: ಇದರ ಬೆಲೆ ಸುಮಾರು 3.11 ಕೋಟಿಯಿಂದ 3.35 ಕೋಟಿ ರೂ.

ಆಸ್ಟನ್ ಮಾರ್ಟಿನ್ ರೇಪಿಡ್ S: ಇದರ ಬೆಲೆ ಅಂದಾಜು 3.29 ಕೋಟಿ ರೂ.

ಲಂಬೋರ್ಗಿನಿ ಉರುಸ್ ಪರ್ಲ್ ಕ್ಯಾಪ್ಸುಲ್: ಇದರ ಬೆಲೆ ಬರೋಬ್ಬರಿ 3.98 ಕೋಟಿಯಿಂದ 4.71 ಕೋಟಿ ರೂ.

ರಣವೀರ್ ಸಿಂಗ್ ಮುಂದಿನ ಸಿನಿಮಾಗಳು:

ಸದ್ಯ ‘ಧುರಂಧರ್’ ಸಕ್ಸಸ್ ಬೆನ್ನಲ್ಲೇ ರಣವೀರ್ ಸಿಂಗ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಮುಂದಿನ ದಿನಗಳಲ್ಲಿ ಅವರು ಖ್ಯಾತ ಚಿತ್ರನಿರ್ಮಾಪಕ ಹನ್ಸಲ್ ಮೆಹ್ತಾ ಅವರ ಪುತ್ರ ಜೈ ಮೆಹ್ತಾ ನಿರ್ದೇಶಿಸಲಿರುವ ‘ಪ್ರಳಯ್’ ಎಂಬ ಜಾಂಬಿ ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ವಿವಾದ ಏನೇ ಇದ್ದರೂ ರಣವೀರ್ ಮಾತ್ರ ತಮ್ಮದೇ ಸ್ಟೈಲ್‌ನಲ್ಲಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version