ಬೆಂಗಳೂರು, ಮಾರ್ಚ್ 25: ಭಾರತ್ ಪೆಟ್ರೋಲಿಯಂ ಲಿಮಿಟೆಡ್‌ನಿಂದ ಇಂಧನ ಪೂರೈಕೆ ಸ್ಥಗಿತಗೊಂಡಿರುವುದರಿಂದ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗುವ ಆತಂಕ ಎದುರಾಗಿದೆ. ಅಖಿಲ ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಈ ಕುರಿತು ಎಚ್ಚರಿಕೆ ನೀಡಿದೆ. ಕಂಪನಿಯು ಮುಂಗಡ ಹಣ ಪಡೆದಿದ್ದರೂ ಲೋಡ್ ನೀಡುತ್ತಿಲ್ಲ ಎಂದು ಫೆಡರೇಶನ್ ತಿಳಿಸಿದೆ. ಈ ಸಮಸ್ಯೆ ಪ್ರಸ್ತುತ ಬೆಂಗಳೂರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಾದ ಆನೇಕಲ್, ಕೋಲಾರ, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ಭಾಗಗಳಲ್ಲಿ ಕಂಡುಬಂದಿದೆ. ಇದು ಮುಂದಿನ ದಿನಗಳಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ. ಹೆಚ್‌ಪಿಸಿ ಮತ್ತು ಐಓಸಿ ಕೂಡ ಇದೇ ಹಾದಿ ಹಿಡಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂದು ಫೆಡರೇಶನ್ ಆತಂಕ ವ್ಯಕ್ತಪಡಿಸಿದೆ. ಕೂಡಲೇ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಮಧ್ಯ ಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಅಖಿಲ ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಮನವಿ ಮಾಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 25: ಅಮೆರಿಕ-ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮ ಭಾರತ ಸೇರಿ ಹಲವು ದೇಶಗಳ ಮೇಲಾಗುತ್ತಿದೆ. ಭಾರತದಲ್ಲಿ ಎಲ್‌ಪಿಜಿ(LPG) ಕೊರತೆ ಎದುರಾಗಿದೆ. ಇದರ ನಡುವೆ ಕೇಂದ್ರ ಸರ್ಕಾರವು ಬುಕಿಂಗ್ ನಿಯಮವನ್ನು ಬದಲಿಸಿದೆ. ನಿನ್ನೆ ಸಂಜೆ ಹೊಸ ನಿಯಮ ಜಾರಿಗೆ ಬಂದಿದ್ದು, 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ವಿತರಣಾ ಸಮಯವನ್ನು 25 ದಿನಗಳಿಂದ 35 ದಿನಗಳಿಗೆ ಹೆಚ್ಚಿಸಲಾಗಿದೆ. ನಿಯಮದ ಪ್ರಕಾರ ಒಂದು ಸಿಲಿಂಡರ್ ಬುಕ್ ಮಾಡಿದ ನಂತರ, 35 ದಿನಗಳ ನಂತರವೇ ಎರಡನೇ ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗುತ್ತದೆ.
ನಿಮ್ಮ ಬಳಿ 5 ಕೆಜಿ ಗ್ಯಾಸ್ ಸಿಲಿಂಡರ್ ಇದ್ದರೆ, ನೀವು ಅದನ್ನು 9 ರಿಂದ 16 ದಿನಗಳ ಅಂತರದಲ್ಲಿ ಬುಕ್ ಮಾಡಬಹುದು. ನೀವು 18 ರಿಂದ 32 ದಿನಗಳ ಅಂತರದಲ್ಲಿ 10 ಸಿಲಿಂಡರ್ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದು.
ತಿಂಗಳಿಗೆ ಎರಡು ಸಿಲಿಂಡರ್‌ಗಳನ್ನು ಮಾತ್ರ ಬುಕ್ ಮಾಡಬಹುದು
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಒಬ್ಬ ಸಾಮಾನ್ಯ ನಾಗರಿಕರು ತಿಂಗಳಿಗೆ ಗರಿಷ್ಠ ಎರಡು ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು ಎಂದು ಅಧಿಸೂಚನೆ ಹೊರಡಿಸಿದೆ.
ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಕೆವೈಸಿ ಕಡ್ಡಾಯ
ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಮಾತ್ರ ಸಿಲಿಂಡರ್ ಬುಕಿಂಗ್ ಮಾಡಬಹುದು. ಗ್ರಾಹಕರು ತಮ್ಮ ಸಂಖ್ಯೆಯನ್ನು ಬದಲಾಯಿಸಿದ್ದರೆ, ಅದನ್ನು ಏಜೆನ್ಸಿಯಲ್ಲಿ ಅಥವಾ ಅಪ್ಲಿಕೇಶನ್ ಮೂಲಕ ನವೀಕರಿಸಬೇಕು.
ಸಿಲಿಂಡರ್ ಪಡೆಯುವ ಸಮಯದಲ್ಲಿ ಒಟಿಪಿ ಅಗತ್ಯ
ವಿತರಣೆಯ ಸಮಯದಲ್ಲಿ, ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಎಂಬ OTP ಅನ್ನು ಸ್ವೀಕರಿಸುತ್ತಾರೆ.
ಈವೆಂಟ್ ಮತ್ತು ಅತಿಥಿಗಳ ಕುರಿತು ಪ್ರಶ್ನೆಗಳಿರುತ್ತವೆ
ಆ್ಯಪ್ ಮೂಲಕ ಹೆಚ್ಚುವರಿ ಸಿಲಿಂಡರ್ ಬಗ್ಗೆ ಬೇಡಿಕೆ ಇಡುವಾಗ, ಗ್ರಾಹಕರು ಅಂದಾಜು ಅತಿಥಿಗಳ ಸಂಖ್ಯೆ ಮತ್ತು ಹೆಚ್ಚುವರಿ ಬೇಡಿಕೆಗೆ ಕಾರಣವನ್ನು ನಮೂದಿಸಬೇಕಾಗಬಹುದು. ಗ್ರಾಹಕರು ಈಗಾಗಲೇ ತಮ್ಮ 12 ಸಬ್ಸಿಡಿ ಸಿಲಿಂಡರ್‌ಗಳನ್ನು ಬಳಸಿದ್ದರೂ ಇನ್ನೂ ಹೆಚ್ಚಿನದನ್ನು ಬಯಸಿದರೆ, ಅವರು ಹಲೋ ಬಿಪಿಸಿಎಲ್ ಮೊಬೈಲ್ ಅಪ್ಲಿಕೇಶನ್ ಮೂಲಕ ವಿವರಗಳನ್ನು ಒದಗಿಸಬೇಕು.
ಮುಂದಿನ ಬುಕಿಂಗ್‌ಗಾಗಿ ಹೆಚ್ಚು ಸಮಯ ಕಾಯಬೇಕು
ಈ ಹಿಂದೆ, ಗ್ರಾಹಕರು ಹಿಂದಿನ ಬುಕಿಂಗ್ ಮಾಡಿದ 21 ದಿನಗಳ ನಂತರ ಮುಂದಿನ ಸಿಲಿಂಡರ್ ಅನ್ನು ಬುಕ್ ಮಾಡಬಹುದಿತ್ತು. ಈಗ ಹೆಚ್ಚು ದಿನ ಕಾಯಬೇಕು.
ವರ್ಷಕ್ಕೆ ಗರಿಷ್ಠ 15 ಸಿಲಿಂಡರ್‌ಗಳು
ಗ್ರಾಹಕರು ಈಗಾಗಲೇ ತಮ್ಮ 12 ಸಬ್ಸಿಡಿ ಸಿಲಿಂಡರ್‌ಗಳನ್ನು ಬಳಸಿದ್ದರೂ ಇನ್ನೂ ಹೆಚ್ಚಿನದನ್ನು ಬಯಸಿದರೆ, ಅವರು ಹಲೋ ಬಿಪಿಸಿಎಲ್ ಮೊಬೈಲ್ ಅಪ್ಲಿಕೇಶನ್ ಮೂಲಕ ವಿವರಗಳನ್ನು ಒದಗಿಸಬೇಕು. ಮನೆಯಲ್ಲಿ ಮದುವೆ, ಕುಟುಂಬ ಕಾರ್ಯಕ್ರಮ ಅಥವಾ ವಿಶೇಷ ಕಾರ್ಯಕ್ರಮವಿದೆಯೇ ಎಂಬಂತಹ ಪ್ರಶ್ನೆಗಳನ್ನು ಕೇಳಬಹುದು. ಗ್ರಾಹಕರು ಈ ನಿಯಮಗಳಲ್ಲಿ ಯಾವುದೇ ತೊಂದರೆಗಳನ್ನು ಎದುರಿಸಿದರೆ ಅಥವಾ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ, ಅವರು ಅಧಿಕೃತ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1800-2333-555 ಅನ್ನು ಸಂಪರ್ಕಿಸಬಹುದು.
ಬೆಂಗಳೂರು, ಮಾರ್ಚ್ 25: ಜೀವನದಲ್ಲಿ ಏನನ್ನಾದರೂ ಸಾಧಿಸಬೆಕೆಂದುಕೊಂಡು ಬೆಂಗಳೂರಿಗೆ (Bengaluru) ಕೆಲಸ ಹುಡುಕಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕರ್ನಾಟಕವಷ್ಟೇ ಅಲ್ಲದೆ ಭಾರತದ ಮೂಲೆ ಮೂಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಅನ್ನ ನೀಡಿ ಸಲಹುತ್ತಿರುವ ಐಟಿ ಸಿಟಿ, ಪಾಶ್ಚಿಮಾತ್ಯರನ್ನೂ ಕೈ ಬೀಸಿ ಕರೆಯುತ್ತದೆ. ಹೀಗಿರುವಾಗ ಒಬ್ಬಂಟಿಯಾಗಿರಲು ಬೆಂಗಳೂರು ಸುರಕ್ಷಿತವೆ (Women Safety)ಎಂಬ ಪ್ರಶ್ನೆ ಹಲವರನ್ನು ಕಾಡುವುದುಂಟು. ಅದರಲ್ಲಿಯೂ ಒಬ್ಬಂಟಿ ಮಹಿಳೆಯರು ಇಲ್ಲಿ ನೆಮ್ಮದಿಯಿಂದ ಜೀವಿಸಬಹುದೆ ಎಂಬುದೂ ಗಮನಾರ್ಹವೇ. ಇದೇ ಕುತೂಹಲವನ್ನಿಟ್ಟುಕೊಂಡು ಪ್ರಶ್ನೆ ಮಾಡಿದ ಯುಕೆ ಯುವತಿಯೊಬ್ಬಳ ರೆಡಿಟ್ ಪೋಸ್ಟ್ ಈಗ ವೈರಲ್ ಆಗುತ್ತಿದೆ.
ವೈರಲ್ ಆದ ಯುವತಿಯ ಪೋಸ್ಟ್ನಲ್ಲೇನಿದೆ?
22 ವರ್ಷದ ಬ್ರಿಟಿಷ್ ಯುವತಿ ರೆಡಿಟ್‌ನಲ್ಲಿ ಪೋಸ್ಟ್ ಮಾಡುತ್ತಾ, ಬೆಂಗಳೂರಿನಲ್ಲಿ ಜೀವನ ಹೇಗಿರುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಕೇಳಿದ್ದಾಳೆ. ನಾನು ಯುಕೆಯ 22 ವರ್ಷದ ಯುವತಿ. ನನಗೆ ಬೆಂಗಳೂರಿನಲ್ಲಿ ಉದ್ಯೋಗದ ಅವಕಾಶ ಬಂದಿದೆ. ಆದರೆ ಅದನ್ನು ಸ್ವೀಕರಿಸುವುದರ ಬಗ್ಗೆ ನನಗೆ ಅನುಮಾನ ಇದೆ. ನಾನು ಒಬ್ಬಂಟಿಯಾಗಿ ಬೆಂಗಳೂರಿನಲ್ಲಿ ಇರಬಹುದೇ ಅಥವಾ ಸುರಕ್ಷತೆ ಸಮಸ್ಯೆ ಎದುರಾಗಬಹುದೇ ಎಂದು ಆಕೆ ನೆಟ್ಟಿಗರ ಬಳಿ ಕೇಳಿದ್ದಾಳೆ. ಇದಲ್ಲದೆ, ಬೆಂಗಳೂರು ನಗರದಲ್ಲಿ ಯುವ ವಿದೇಶಿಗರ ಸಮುದಾಯವಿದೆಯೇ? ಯುವ ಮಹಿಳೆಯರ ಜೀವನ ಇಲ್ಲಿ ಹೇಗಿರುತ್ತದೆ? ಎಂದು ಪ್ರಶ್ನಿಸಿದ್ದಾಳೆ.
ಯುವತಿಗೆ ನೆಟ್ಟಿಗರ ಪ್ರತಿಕ್ರಿಯೆ ಏನು?
ಭಾರತದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಾರೆ. ಇದೇ ಭಯದಲ್ಲಿ ತಾನು ಬೆಂಗಳೂರಿಗೆ ಬರುವುದು ಸೂಕ್ತವೇ ಎಂದು ಆಕೆ ಈ ಪೋಸ್ಟ್ ಮೂಲಕ ಕೇಳಿರಬಹುದು. ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣ ಬಳಕೆದಾರರು ವಿವಿಧ ಅನುಭವಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಓರ್ವ ಯೂಸರ್, ನೀವು ಬಿಳಿಯರಾಗಿದ್ದರೆ ಇಲ್ಲಿನ ಜನ ಖಂಡಿತಾ ನಿಮ್ಮನ್ನು ಕುತೂಹಲದಿಂದ ನೋಡುತ್ತಾರೆ. ನೀವು ವಿದೇಶಿಗರ ಅಭಿಪ್ರಾಯವನ್ನೇ ಕೇಳುವುದು ಒಳ್ಳೆಯದು ಎಂದಿದ್ದಾರೆ.
ಆಕೆಯ ಪೋಸ್ಟ್‌ಗೆ ಅಮೆರಿಕನ್ ಯುವತಿಯೊಬ್ಬಳು ಕಾಮೆಂಟ್ ಮಾಡಿ, ಬೇರೆ ಸಿಟಿಗಳಂತೆ ಬೆಂಗಳೂರು ಅಸುರಕ್ಷಿತವೇನಲ್ಲ. ಆದರೂ ನೀವು ಜಾಗರೂಕರಾಗಿರಬೇಕು. ಇಲ್ಲಿನ ಸಂಸ್ಕೃತಿ ಭಿನ್ನವಾಗಿರುತ್ತದೆ. ಆದರೆ ನೀವು ಸಮಯ ಕಳೆದಂತೆ ಹೊಂದಿಕೊಳ್ಳುವಿರಿ. ನನಗೆ ವೈಯಕ್ತಿಕವಾಗಿ ಇಲ್ಲಿನ ಹೋಮ್ ಸರ್ವಿಸ್ ಇಷ್ಟ. ಲಾಂಡ್ರಿಯಿಂದ ಹಿಡಿದು ಇಲ್ಲಿ ಹಲವು ವಸ್ತುಗಳು ಮತ್ತು ಸೇವೆಗಳು ಮನೆ ಬಾಗಿಲಿಗೆ ತಲುಪಲಿವೆ ಎಂದು ಹೇಳಿಕೊಂಡಿದ್ದಾರೆ.
ಭಾರತೀಯ ಚಿತ್ರರಂಗ ಎಂದರೆ ಅದು ಬಾಲಿವುಡ್ (Bollywood) ಎಂಬ ಕಾಲವೊಂದಿತ್ತು. ಆದರೆ ಈಗ ಅದು ಬದಲಾಗಿದೆ. ಭಾರತದ ಇತರೆ ಚಿತ್ರರಂಗ ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗಗಳು ಬಾಲಿವುಡ್ ಅನ್ನು ಮೀರಿ ಬೆಳೆದಿವೆ ಮತ್ತು ವಿಶ್ವದಾದ್ಯಂತ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡಿವೆ. ತೆಲುಗು ಚಿತ್ರರಂಗವಂತೂ ಭಾರತದ ಅತ್ಯಂತ ಯಶಸ್ವಿ ಚಿತ್ರರಂಗ ಎನಿಸಿಕೊಂಡಿದೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದೆ. ಯಾವ ಮಟ್ಟಿಗೆಂದರೆ ಇದೀಗ ಬಾಲಿವುಡ್ನವರು ಸಹ ಹೈದರಾಬಾದ್ ಕಡೆ ಮುಖ ಮಾಡಿದ್ದಾರೆ. ಹಾಲಿವುಡ್ ಸಹ ಅದೇ ದಾರಿ ಹಿಡಿದಿವೆ.
‘ಬಾಹುಬಲಿ’, ‘ಪುಷ್ಪ’, ‘RRR’, ‘ಪುಷ್ಪ 2’ ಮತ್ತು ಕಲ್ಕಿಯಂತಹ ಸಿನಿಮಾಗಳ ಮೂಲಕ ತೆಲುಗು ಚಿತ್ರರಂಗ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಸಹ ಭಾರಿ ಜನಪ್ರಿಯತೆ ಗಳಿಸಿಕೊಂಡಿದೆ. ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ತೆಲುಗು ಚಿತ್ರರಂಗಕ್ಕೆ ತಮ್ಮ ರಾಜ್ಯಗಳಲ್ಲಿ ವಿಶೇಷವಾಗಿ ಹೈದರಾಬಾದ್ ನಲ್ಲಿ ಲಭ್ಯವಿರುವ ಸಂಪನ್ಮೂಲದ ಸದುಪಯೋಗ ಪಡೆದುಕೊಂಡು ಇಷ್ಟು ಬೃಹತ್ ಆಗಿ ಬೆಳೆಯಲು ಸಾಧ್ಯವಾಗಿದೆ. ತೆಲುಗು ಚಿತ್ರರಂಗದ ಸೃಜನಶೀಲ ಕೇಂದ್ರವಾಗಿ ಹೈದರಾಬಾದ್ ಕಾರ್ಯನಿರ್ವಹಿಸುತ್ತಿದೆ.
ಈಗ ತೆಲುಗು ಚಿತ್ರರಂಗದ ಕ್ರಾಂತಿ ಇಡೀ ಭಾರತವನ್ನು ಆವರಿಸಿಕೊಂಡಿದ್ದು, ಮನೋರಂಜನಾ ಕ್ಷೇತ್ರದ ಎಲ್ಲಾ ಪ್ರಮುಖ ವಿಭಾಗಗಳು ತೆಲುಗು ರಾಜ್ಯಗಳತ್ತ ಗಮನ ಹರಿಸುತ್ತಿವೆ. ಹೈದರಾಬಾದ್ನ ಸಿಎಂ ರೇವಂತ್ ರೆಡ್ಡಿ ಸಹ ಸಿನಿಮಾಕ್ಕೆ ಭರಪೂರ ಬೆಂಬಲ ನೀಡುವುದಾಗಿ ಘೋಷಿಸಿದ್ದು, ಹೈದರಾಬಾದ್ನಲ್ಲಿ ವಿಶ್ವದರ್ಜೆಯ ಸಿನಿಮಾ ತಂತ್ರಜ್ಞಾನ ಸಿಗುವಂತಾಗಬೇಕು, ಹೈದರಾಬಾದ್ ಅನ್ನು ಟೆಕ್ ಹಬ್ ಜೊತೆಗೆ ಸಿನಿಮಾ ಹಬ್ ಆಗಿ ಮಾಡುವ ಕುರಿತು ಇತ್ತೀಚೆಗಿನ ಕೆಲ ಕಾರ್ಯಕ್ರಮಗಳಲ್ಲಿ ಮಾತನಾಡಿದ್ದಾರೆ.
ಇದರ ಭಾಗವಾಗಿ, ಸಂಜಯ್ ದತ್ ಮತ್ತು ಅಜಯ್ ದೇವಗನ್ ಅವರಂತಹ ಬಾಲಿವುಡ್ ತಾರೆಯರು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಹೊಸ ಅವಕಾಶಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಇತ್ತೀಚೆಗಷ್ಟೆ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿ ಆಗಿದ್ದ ಅಜಯ್ ದೇವಗನ್, ತಮ್ಮ ಒಡೆತನದ ಸಿನಿಮಾ ವಿಎಫ್ಎಕ್ಸ್ ಸಂಸ್ಥೆಯನ್ನು ಹೈದರಾಬಾದ್ನಲ್ಲಿ ಪ್ರಾರಂಭಿಸುತ್ತಿರುವುದಾಗಿ ಘೋಷಿಸಿದ್ದರು. ಸಂಜಯ್ ದತ್ ಸಹ ಸಿನಿಮಾ ಸಂಬಂಧ ಉದ್ಯಮವನ್ನು ಹೈದರಾಬಾದ್ನಲ್ಲಿ ಪ್ರಾರಂಭಿಸಲಿದ್ದು, ಇದಕ್ಕಾಗಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು. ಸಲ್ಮಾನ್ ಖಾನ್ ಸಹ ಮಾಲೀಕತ್ವ ಹೊಂದಿರುವ ನಿರ್ಮಾಣ ಸಂಸ್ಥೆಯೊಂದು ಬೃಹತ್ ಫಿಲಂ ಸಿಟಿ ಮತ್ತು ಅಪಾರ್ಟ್ಮೆಂಟ್ ಅನ್ನು ಹೈದರಾಬಾದ್ನಲ್ಲಿ ನಿರ್ಮಿಸಲು ಮುಂದಾಗಿದೆ.
ಇನ್ನು ಹಾಲಿವುಡ್ ಸಹ ಹೈದರಾಬಾದ್ ಮೇಲೆ ಕಣ್ಣಿಟ್ಟಿದೆ. ಕೆಲ ವಾರಗಳ ಹಿಂದಷ್ಟೆ ನೆಟ್ಫ್ಲಿಕ್ಸ್ ತನ್ನ ಕಚೇರಿಯನ್ನು ಹೈದರಾಬಾದ್ನಲ್ಲಿ ತೆರಿದೆ, ಇದು ಕೇವಲ ಕಚೇರಿ ಮಾತ್ರವೇ ಆಗಿರದೆ ಸ್ಟುಡಿಯೋ ಸಹ ಆಗಿದ್ದು, ನೆಟ್ಫ್ಲಿಕ್ಸ್ ಈ ರೀತಿಯ ಕೇವಲ ನಾಲ್ಕು ಸ್ಟುಡಿಯೋಗಳನ್ನು ಮಾತ್ರವೇ ಹೊಂದಿದ್ದು ಅದರಲ್ಲಿ ಒಂದು ಹೈದರಾಬಾದ್ನಲ್ಲಿದೆ. ಒಟ್ಟಾರೆಯಾಗಿ, ಬಾಲಿವುಡ್ ಮತ್ತು ಹಾಲಿವುಡ್ ಹೈದರಾಬಾದ್ನಲ್ಲಿ ಸಿನಿಮಾ ಉದ್ಯಮದ ಅವಕಾಶಗಳನ್ನು ಹುಡುಕಿ ಹೂಡಿಕೆ ಮಾಡುತ್ತಿದೆ. ಇದು ತೆಲುಗು ಚಿತ್ರರಂಗಕ್ಕೆ ಮತ್ತಷ್ಟು ಬೆಂಬಲ ನೀಡುವುದು ಖಾತ್ರಿ.
ದಾವಣಗೆರೆ, ಮಾರ್ಚ್ 25: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ರಂಗೇರಿರುವ ನಡುವೆಯೇ ಕಾಂಗ್ರೆಸ್ ವಿರುದ್ಧ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಮುಸ್ಲಿಂ ಹಾಗೂ ಅಹಿಂದ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಏಪ್ರಿಲ್ 9ರಂದು ನಡೆಯಲಿರುವ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ ಸಾದಿಕ್ ಪೈಲ್ವಾನ್, ‘ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಹಿಂದ ಶಕ್ತಿ ಪ್ರದರ್ಶನವಾಗಬೇಕು. ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಅಲ್ಪಸಂಖ್ಯಾತರು ಮತ್ತು ಅಹಿಂದ ಸಮುದಾಯವನ್ನು ಕಡೆಗಣಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ನಾನು ಕಣಕ್ಕಿಳಿದಿದ್ದೇನೆ’ ಎಂದು ಹೇಳಿದರು. ಜನರು ಬದಲಾವಣೆ ಬಯಸುತ್ತಿದ್ದಾರೆ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಯಾವ ಒತ್ತಡಕ್ಕೂ ತಲೆಬಾಗುವುದಿಲ್ಲ ಎಂದು ಹೇಳಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
‘ಧುರಂಧರ್ 2’ ಸಿನಿಮಾ (Dhurandhar 2 Movie) ಅಬ್ಬರಕ್ಕೆ ಎಲ್ಲರೂ ನಡುಗಿ ಹೋಗಿದ್ದಾರೆ. ಇಡೀ ಬಾಕ್ಸ್ ಆಫೀಸ್ ಶೇಕ್ ಆಗುತ್ತಿದೆ. ಈ ಚಿತ್ರದ ನಾಗಾಲೋಟಕ್ಕೆ ಎಲ್ಲಾ ಸಿನಿಮಾಗಳು ಮಂಕಾಗುತ್ತಿವೆ. ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಚಿತ್ರವಂತೂ ಮಕಾಡೆ ಮಲಗಿದೆ. ಈ ಚಿತ್ರ ಮಂಗಳವಾರ ಗಳಿಕೆ ಮಾಡಿದ್ದು ಕೇಲವ ಒಂದು ಕೋಟಿ ರೂಪಾಯಿ. ಆದರೆ, ತೆಲುಗು ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆದ ‘ಧುರಂಧರ್ 2’ಸಿನಿಮಾ, ಪವನ್ ಚಿತ್ರಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಿದೆ.
‘ಧುರಂಧರ್ 2’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ಆ ನಿರೀಕ್ಷೆಯನ್ನೂ ಮೀರಿ ‘ಧುರಂಧರ್ 2’ ಸಿನಿಮಾ ಗೆಲುವು ಕಂಡಿದೆ. ಈ ಚಿತ್ರದ ಗಳಿಕೆ ಮಂಗಳವಾರ 56 ಕೋಟಿ ರೂಪಾಯಿ ಇದೆ. ತೆಲುಗು ಭಾಷೆಯಲ್ಲೇ ಚಿತ್ರ ಮೂರು ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ‘ಧುರಂಧರ್ 2’ ಚಿತ್ರವು ಅನಾಯಾಸವಾಗಿ ‘ಉಸ್ತಾದ್ ಭಗತ್ ಸಿಂಗ್’ ಚಿತ್ರವನ್ನು ಮಣಿಸಿದೆ. ಪವನ್ ಚಿತ್ರ ಮಂಗಳವಾರ ಒಂದೂವರೆ ಕೋಟಿ ರೂಪಾಯಿ ಗಳಿಸಿದೆ ಎಂದು ವರದಿ ಆಗಿದೆ.
ಪವನ್ ಕಲ್ಯಾಣ್ ಅವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಒಪ್ಪಿಕೊಂಡ ಚಿತ್ರಗಳನ್ನು ಮುಗಿಸಬೇಕಾದ ಅನಿವಾರ್ಯತೆ ಕಾರಣದಿಂದ ಆದಷ್ಟು ಪ್ರಯತ್ನಿಸಿ ಶೂಟ್ ಮುಗಿಸಿಕೊಟ್ಟರು. ‘ಓಜಿ’, ‘ಹರಿ ಹರ ವೀರ ಮಲ್ಲು’ ಸಿನಿಮಾಗಳು ರಿಲೀಸ್ ಆಗಿ ಸೋತವು. ಈ ಸಾಲಿಗೆ ‘ಉಸ್ತಾದ್ ಭಗತ್ ಸಿಂಗ್’ ಕೂಡ ಸೇರ್ಪಡೆ ಆಗುತ್ತಿದೆ.
ಪವನ್ ಕಲ್ಯಾಣ್ಗೆ ಟಾಲಿವುಡ್ನಲ್ಲಿ ಬಹುಬೇಡಿಕೆ ಇದೆ. ಅವರು ಅನೇಕ ಚಿತ್ರಗಳನ್ನು ಮಣಿಸಿದ್ದಾರೆ. ಆದರೆ, ಈಗ ಅವರು ‘ ಧುರಂಧರ್ 2’ ಚಿತ್ರದ ಎದುರು ಮಂಡಿ ಊರಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಪವನ್ ಚಿತ್ರಕ್ಕೆ ಈಗಾಗಲೇ ಸಾಕಷ್ಟು ನೆಗೆಟಿವ್ ವಿಮರ್ಶೆ ಸಿಕ್ಕಿದೆ. ಹೀಗಾಗಿ, ಅವರ ಸಿನಿಮಾ ಮತ್ತೆ ಮೇಲಕ್ಕೆ ಏಳೋದು ಅನುಮಾನ ಎಂದೇ ಹೇಳಲಾಗುತ್ತಾ ಇದೆ.
ಪುಟಾಣಿಗಳ (little kids) ತೊದಲು ನುಡಿ, ತುಂಟಾಟ, ಅಪ್ಪ ಅಮ್ಮನ ಮುದ್ದಿಸುವ ರೀತಿ ನೋಡುವುದೇ ಚಂದ. ಕೆಲವೊಮ್ಮೆ ಈ ಪುಟಾಣಿ ಮಕ್ಕಳು ತಾವು ಮಾಡುವ ಕೆಲಸದಿಂದಲೇ ದೊಡ್ಡವರಂತೆ ಕಾಣುವುದಿದೆ.. ಇದೀಗ ಈ ಪುಟಾಣಿಯೂ ದೊಡ್ಡವರಂತೆ ನಡೆದುಕೊಂಡಿದೆ. ಗಾಯಗೊಂಡು ನಡೆಯಲು ಕಷ್ಟ ಪಡುತ್ತಿರುವ ತಾಯಿಯನ್ನು (mother) ಪುಟಾಣಿಯೊಂದು ತನ್ನ ಹೆಗಲ ಮೇಲೆ ಹೊತ್ತುಕೊಳ್ಳಲು ಪ್ರಯತ್ನಿಸಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ನೆಟ್ಟಿಗರು ತಾಯಿ ಮಗನ ಬಾಂಧವ್ಯಕ್ಕೆ ಫಿದಾ ಆಗಿದ್ದಾರೆ.
Leenesh Madhav ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ತಾಯಿಗೆ ಪುಟಾಣಿ ಬೆಂಬಲ ನೀಡುತ್ತಿರುವುದನ್ನು ಕಾಣಬಹುದು. ಕಾಲಿಗೆ ಗಾಯಗೊಂಡಿದ್ದು, ಬ್ಯಾಂಡೇಜ್ ಹಾಕಿಕೊಂಡು ನಡೆಯಲು ಕಷ್ಟ ಪಡುತ್ತಿರುವ ಮಹಿಳೆಯನ್ನು ನೀವು ಕಾಣಬಹುದು. ಅಲ್ಲೇ ಇದ್ದ ಪುಟಾಣಿಯೂ ತನ್ನ ತಾಯಿಯನ್ನು ತನ್ನ ಭುಜದ ಮೇಲೆ ಹೊತ್ತುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಈ ದೃಶ್ಯದಲ್ಲಿ ಕಾಣಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ತಾಯಿ ಮಗನ ಬಾಂಧವ್ಯ ಎಂದರೆ, ಮತ್ತೊಬ್ಬರು, ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಪುಟಾಣಿಯ ಸಹಾಯ ಮಾಡುವ ಗುಣ ನೋಡಿ ಖುಷಿಯಾಯ್ತು ಎಂದು ಹೇಳಿದ್ದಾರೆ.
ಬೆಂಗಳೂರು, ಮಾರ್ಚ್ 25: ಕರ್ನಾಟಕ ವಿಧಾನಸಭೆಯಲ್ಲಿ ಮಂಗಳವಾರ ಮಂಡನೆಯಾದ ಮಹಾಲೇಖಾಪರಿಶೋಧಕರ (CAG) ವರದಿಯು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಅನುಷ್ಠಾನದಲ್ಲಿ ಭಾರಿ ಅಕ್ರಮಗಳು ನಡೆದಿರುವುದನ್ನು ಬಹಿರಂಗಪಡಿಸಿದೆ. ವರದಿ ಪ್ರಕಾರ, ಈಗಾಗಲೇ ಪೂರ್ಣಗೊಂಡ ಮನೆ ಕಾಮಗಾರಿಗಳಿಗೆ ಮತ್ತೆ ಹಣ ಪಾವತಿ ಮಾಡಿರುವುದು, ಅರ್ಹತೆಯಿಲ್ಲದವರಿಗೆ ಹಣ ನೀಡಿರುವುದು ಹಾಗೂ ಯಾವುದೇ ಕೆಲಸ ಮಾಡದೇ ಕಾರ್ಮಿಕರಿಗೆ ವೇತನ ನೀಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಕೆಲಸವೇ ಇಲ್ಲದೆ ವೇತನ!
ಕೆಲವು ಸ್ಥಳಗಳಲ್ಲಿ ನಿರ್ಮಾಣ ಕಾರ್ಯವೇ ನಡೆಯದಿದ್ದರೂ ಕಾರ್ಮಿಕರಿಗೆ ವೇತನ ಪಾವತಿಸಲಾಗಿದೆ. ಅಲ್ಲದೆ, ನಿಯಮಿತ ಮಿತಿಗಿಂತ ಹೆಚ್ಚು ಹಣ ನೀಡಿರುವುದೂ ವರದಿಯಲ್ಲಿ ಉಲ್ಲೇಖವಾಗಿದೆ. ಹೆಚ್ಚಿನ ಕೆಲಸದ ಸ್ಥಳಗಳಲ್ಲಿ ಕುಡಿಯುವ ನೀರು, ವೈದ್ಯಕೀಯ ನೆರವು ಮತ್ತು ಮಕ್ಕಳ ಆರೈಕೆ ಸೌಲಭ್ಯಗಳ ಕೊರತೆಯಿಂದ ಮಹಿಳೆಯರು ಹಾಗೂ ವೃದ್ಧರು ಕೆಲಸದಲ್ಲಿ ಪಾಲ್ಗೊಳ್ಳಲು ಹಿಂಜರಿದಿರುವುದೂ ವರದಿಯಿಂದ ತಿಳಿದುಬಂದಿದೆ.
ಅರ್ಧದಲ್ಲೇ ಸ್ಥಗಿತಗೊಂಡ ಯೋಜನೆಗಳು
ನರೇಗಾ ಅಡಿ ಅಂಗೀಕೃತ ಯೋಜನೆಗಳಲ್ಲಿ ಬಹಳಷ್ಟು ಪ್ರಾರಂಭವಾಗದೇ ಉಳಿದಿದ್ದರೆ, ಕೆಲವು ಯೋಜನೆಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಪೂರ್ಣಗೊಳ್ಳದೇ ಉಳಿದಿವೆ ಎಂದು ವರದಿ ತಿಳಿಸಿದೆ.
ಹಾಜರಾತಿಯಲ್ಲಿ ಭಾರಿ ಗೋಲ್ಮಾಲ್
50 ಪ್ರಕರಣಗಳಲ್ಲಿ ಕಾರ್ಮಿಕರ ಹಾಜರಾತಿ ಗುರುತು ಹಾಕದೇ, ಸಹಿ ಅಥವಾ ಬೆರಳಚ್ಚು ಪಡೆಯದೇ ಇದ್ದರೂ, ಸುಮಾರು 5.51 ಲಕ್ಷ ರೂ. ವೇತನ ಪಾವತಿಸಿರುವುದು ಪತ್ತೆಯಾಗಿದೆ.
ಕೆಲಸ ಮಾಡಿದವರಿಗೆ ವೇತನವಿಲ್ಲ!
ಇನ್ನೊಂದೆಡೆ, 13 ಗ್ರಾಮ ಪಂಚಾಯಿತಿಗಳಲ್ಲಿ 17 ಕೆಲಸಗಳಲ್ಲಿ ತೊಡಗಿದ್ದ 497 ಕಾರ್ಮಿಕರಿಗೆ, ಎಲ್ಲಾ ದಾಖಲೆಗಳನ್ನು ಸಲ್ಲಿಸಿದರೂ 10.98 ಲಕ್ಷ ರೂ. ವೇತನ ಪಾವತಿಸದೇ ಇರುವುದಾಗಿ ಸಿಎಜಿ ವರದಿ ತಿಳಿಸಿದೆ. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ತಾಂತ್ರಿಕ ಸಮಿತಿಗಳು ರಚನೆಗೊಳ್ಳದ ಕಾರಣ ಅಸಂಬದ್ಧ ಅಂದಾಜುಗಳು, ಕಾಮಗಾರಿಗಳ ಅಸಮರ್ಪಕ ಅನುಷ್ಠಾನ ಮತ್ತು ಅನಿಯಮಿತ ವೆಚ್ಚಗಳು ಆಗಿರುವುದು ಗಮನಕ್ಕೆ ಬಂದಿದೆ.
ಕೆಲವು ಕಾಮಗಾರಿಗಳಲ್ಲಿ ಅಂದಾಜು ಪರಿಷ್ಕರಣೆ ಮಾಡದೇ ಹೆಚ್ಚುವರಿ ವೆಚ್ಚ ಮಾಡಲಾಗಿದೆ. ಜೊತೆಗೆ, ವೈಯಕ್ತಿಕ ಕಾಮಗಾರಿಗಳಲ್ಲಿ ವಸ್ತು ವೆಚ್ಚವನ್ನು ಲಾಭಾರ್ಥಿಗಳಿಗೆ ನೀಡಬೇಕಾದಲ್ಲಿ ನೇರವಾಗಿ ಮಾರಾಟಗಾರರಿಗೆ ಪಾವತಿಸಿರುವುದು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ.
ಒಟ್ಟಿನಲ್ಲಿ, ಗ್ರಾಮೀಣ ಉದ್ಯೋಗ ಸೃಷ್ಟಿ ಹಾಗೂ ಬಡಜನರ ಆರ್ಥಿಕ ಭದ್ರತೆ ಗುರಿಯಾಗಿಟ್ಟುಕೊಂಡ ಎಂನರೇಗಾ ಯೋಜನೆಯಲ್ಲಿ ಇಂತಹ ಅಕ್ರಮಗಳು ನಡೆದಿರುವುದು ಆತಂಕಕಾರಿಯಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬ ಆಗ್ರಹ ವ್ಯಕ್ತವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಇಸ್ಲಾಮಾಬಾದ್, ಮಾರ್ಚ್ 25: ಅಂದು ಭಾರತ-ಪಾಕಿಸ್ತಾನದ ನಡುವೆ ಸಂಘರ್ಷ ನಡೆಯುತ್ತಿರುವ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನು ಮಾಡಿದ್ದರೂ, ಅದೇ ಕೆಲಸವನ್ನು ಈಗ ಇರಾನ್-ಅಮೆರಿಕ ಮಧ್ಯೆ ಹುಟ್ಟುಕೊಂಡಿರುವ ಉದ್ವಿಗ್ನತೆ ನಡುವೆ ಪಾಕ್ ಮಾಡಲು ಹೊರಟಿದೆ. ಯಾರೂ ಆಹ್ವಾನಿಸದಿದ್ದರೂ ಶೆಹಬಾಜ್ ಷರೀಫ್ ಮಧ್ಯಸ್ಥಿಕೆಗೆ ಬಂದು ಕುಳಿತಿದ್ದಾರೆ, ತಾವು ಶಾಂತಿ ಸ್ಥಾಪಕ ಎಂದು ಕರೆದುಕೊಳ್ಳುತ್ತಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಒಪ್ಪಂದದ ನಂತರ, ಎರಡೂ ದೇಶಗಳ ನಡುವೆ ಅರ್ಥಪೂರ್ಣ ಮತ್ತು ನಿರ್ಣಾಯಕ ಸಂವಾದವನ್ನು ಆಯೋಜಿಸಲು ಪಾಕಿಸ್ತಾನ ಸಿದ್ಧವಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ಜೊತೆ ಇರಾನ್ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಂವಾದವನ್ನು ಬೆಳೆಸಲು ನಡೆಯುತ್ತಿರುವ ಪ್ರಯತ್ನಗಳನ್ನು ಪಾಕಿಸ್ತಾನ ಸ್ವಾಗತಿಸಿದೆ. ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳಿಗೆ ಆತಿಥೇಯ ಪಾತ್ರವನ್ನು ವಹಿಸುವ ಬಗ್ಗೆ ಪಾಕಿಸ್ತಾನವು ಮಹತ್ವದ ಹೇಳಿಕೆಯನ್ನು ನೀಡಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮಂಗಳವಾರ (ಮಾರ್ಚ್ 24, 2026) ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಮಾತುಕತೆಯ ಮೂಲಕ ಕೊನೆಗೊಳಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಪಾಕಿಸ್ತಾನ ಸ್ವಾಗತಿಸುತ್ತದೆ ಮತ್ತು ಸಂಪೂರ್ಣವಾಗಿ ಬೆಂಬಲಿಸುತ್ತದೆ, ಇದರಿಂದಾಗಿ ಮಧ್ಯಪ್ರಾಚ್ಯ ಪ್ರದೇಶ ಮತ್ತು ಅದರಾಚೆಗೆ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಬಹುದು ಎಂದು ಹೇಳಿದ್ದಾರೆ.
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಪ್ರಾರಂಭವಾಗಿ ಮೂರು ವಾರಗಳಿಗೂ ಹೆಚ್ಚು ಸಮಯ ಕಳೆದಿದೆ. ಈ ಯುದ್ಧದಲ್ಲಿ, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಹೆಚ್ಚಿನ ಸಂಖ್ಯೆಯ ಕ್ಷಿಪಣಿಗಳು ಮತ್ತು ದಾಳಿ ಡ್ರೋನ್‌ಗಳನ್ನು ಬಳಸಿಕೊಂಡು ಇರಾನ್ ಮೇಲೆ ಪ್ರಮುಖ ದಾಳಿ ನಡೆಸಿವೆ.
ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಹಲವಾರು ಉನ್ನತ ಇರಾನಿನ ನಾಯಕರು, ಹಿರಿಯ ಮಿಲಿಟರಿ ಅಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯ ನಾಗರಿಕರು ಸಾವನ್ನಪ್ಪಿದ್ದಾರೆ. ಇರಾನಿನ ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಯನ್ನು ಐದು ದಿನಗಳ ಕಾಲ ಮುಂದೂಡುವುದಾಗಿ ಮತ್ತು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಗಡುವನ್ನು ವಿಸ್ತರಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ಆದಾಗ್ಯೂ, ಇರಾನಿನ ಅಧಿಕಾರಿಗಳು ಯಾವುದೇ ರಹಸ್ಯ ಮಾತುಕತೆಗಳನ್ನು ನಿರಾಕರಿಸಿದ್ದಾರೆ, ಇರಾನ್ ಎಚ್ಚರಿಕೆಯ ನಂತರ ಟ್ರಂಪ್ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಮಧ್ಯವರ್ತಿಯಾಗಿ ಹೊರಹೊಮ್ಮಿದ ಸುದ್ದಿ ಭಾರತದ ರಾಜಕೀಯ ವಾತಾವರಣವನ್ನು ಬಿಸಿಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಭಾರತವು ಈ ಪಾತ್ರದಲ್ಲಿ ನಿರ್ಲಕ್ಷ್ಯ ವಹಿಸಿದೆ, ಅದನ್ನು ಭಾರತ ನಿಭಾಯಿಸಬೇಕಿತ್ತು ಎಂದು ಹೇಳಿದ್ದಾರೆ.
ಬೆಂಗಳೂರು, ಮಾರ್ಚ್ 25: ವಿಧಾನ ಪರಿಷತ್‌ನಲ್ಲಿ ರಾಜ್ಯದ ನಗರ ಪ್ರದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ (Waste management) ಕುರಿತು ಮಹತ್ವದ ಮಾಹಿತಿ ಹೊರಬಂದಿದೆ. ಪೌರಾಡಳಿತ ಸಚಿವ ರಹೀಂ ಖಾನ್ ಮಂಗಳವಾರ ಪರಿಷತ್‌ನಲ್ಲಿ ಮಾತನಾಡುತ್ತಾ, ಬೆಂಗಳೂರು ಹೊರತುಪಡಿಸಿ ರಾಜ್ಯದ 325 ನಗರ ಸ್ಥಳೀಯ ಸಂಸ್ಥೆಗಳು (ULBs) ಪ್ರತಿದಿನ ಒಟ್ಟು 7,304 ಮೆಟ್ರಿಕ್ ಟನ್ ಘನ ತ್ಯಾಜ್ಯವನ್ನು ಸಂಗ್ರಹಿಸುತ್ತಿವೆ ಎಂದು ತಿಳಿಸಿದ್ದಾರೆ. ಇದರಲ್ಲಿ 6,083 ಮೆಟ್ರಿಕ್ ಟನ್ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿದೆ ಎಂದು ವಿವರಿಸಿದರು.
ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಡಿಪಿಆರ್ ಸಿದ್ಧ
ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 219 ನಗರ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಸಂಸ್ಥೆಗಳಲ್ಲೂ ಈ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. 47 ನಗರ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಡಿಪಿಆರ್ ಸಿದ್ಧವಾಗಿದ್ದು, ಉಳಿದಡೆಗಳಿಗೂ ಶೀಘ್ರದಲ್ಲೇ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.
ಸ್ವಚ್ಛ ಭಾರತ ಮಿಷನ್–ಅರ್ಬನ್ 2.0 ಅಡಿಯಲ್ಲಿ 51 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೊಳ್ಳಲಾಗಿದ್ದು, 999 ಕಾಮಗಾರಿಗಳಲ್ಲಿ 542 ಪೂರ್ಣಗೊಂಡಿವೆ. ಒಣ ತ್ಯಾಜ್ಯ ಸಂಗ್ರಹ ಘಟಕಗಳಿಗೆ 259 ಕೋಟಿ ರೂ. ಹಾಗೂ 226 ನಗರ ಸಂಸ್ಥೆಗಳಲ್ಲಿ ಸ್ಯಾನಿಟರಿ ಲ್ಯಾಂಡ್‌ಫಿಲ್ ನಿರ್ಮಾಣಕ್ಕೆ 31 ಕೋಟಿ ರೂ. ಮೀಸಲಿಡಲಾಗಿದೆ. ಕಸ ಮಾಫಿಯಾ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.