ಕೋಲಾರ–ಚಿಕ್ಕಬಳ್ಳಾಪುರ ಶಾಸಕರ ಪ್ರತ್ಯೇಕ ಸಭೆ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನ, ಮುಂದಿನ ನಡೆ ಬಗ್ಗೆ ಚರ್ಚೆ – Kannada News | Kolar Chikkaballapur Congress MLAs Hold Meeting Over Karnataka Cabinet Berths Denial

ಕೋಲಾರ, ಆಗಸ್ಟ್ 4: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ (Karnataka Cabinet Expansion) ಕೋಲಾರ (Kolar) ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಯಾವುದೇ ಶಾಸಕರಿಗೂ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಗಳ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಿ, ಮುಂದಿನ ರಾಜಕೀಯ ನಡೆ ಕುರಿತು ಚರ್ಚಿಸಲು ಮುಂದಾಗಿದ್ದಾರೆ. ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಚಿಂತಾಮಣಿ ಶಾಸಕ ಎಂ.ಸಿ. ಸುಧಾಕರ್, ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ಏಳು ಶಾಸಕರು ಭಾಗವಹಿಸುವ ಸಾಧ್ಯತೆ ಇದೆ. ವಿಧಾನಪರಿಷತ್ ಸದಸ್ಯರಾದ ಎಂ.ಎಲ್. ಅನಿಲ್ ಕುಮಾರ್ ಹಾಗೂ ನಜೀರ್ ಅಹಮದ್ ಬಾಗಿ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಕೆಜಿಎಫ್ ಶಾಸಕಿ ರೂಪಕಲಾ ಅವರು ಸಭೆಯಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಎರಡು ಜಿಲ್ಲೆಗಳ ಏಳು ಶಾಸಕರ ಪೈಕಿ ಯಾರಿಗೂ ಸಚಿವ ಸ್ಥಾನ ಸಿಗದಿರುವ ಹಿನ್ನೆಲೆಯಲ್ಲಿ, ಪಕ್ಷದೊಳಗೆ ತಮ್ಮ ಮುಂದಿನ ನಡೆ ಏನಾಗಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ

ಕಾಂಗ್ರೆಸ್ ಹೈಕಮಾಂಡ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಕಡೆಗಣಿಸಿದೆ ಎಂಬ ಅಸಮಾಧಾನ ಶಾಸಕರಲ್ಲಿ ವ್ಯಕ್ತವಾಗಿದೆ. ಸರ್ಕಾರದ ಮೊದಲ ಅವಧಿಯಲ್ಲಿ ಚಿಂತಾಮಣಿ ಶಾಸಕ ಎಂ.ಸಿ. ಸುಧಾಕರ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಎರಡನೇ ಅವಧಿಯಲ್ಲಿ ಕೋಲಾರ ಜಿಲ್ಲೆಯ ಮತ್ತೊಬ್ಬ ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆ ಇತ್ತು ಎನ್ನಲಾಗಿತ್ತು. ಆದರೆ ಸಂಪುಟ ವಿಸ್ತರಣೆಯಲ್ಲಿ ಎರಡೂ ಜಿಲ್ಲೆಗಳಿಂದ ಯಾರಿಗೂ ಸ್ಥಾನ ಸಿಗದಿರುವುದು ಶಾಸಕರಿಗೆ ನಿರಾಸೆ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಸಾಮೂಹಿಕ ರಾಜೀನಾಮೆ ನೀಡಬೇಕೇ ಅಥವಾ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಮನವೊಲಿಸಬೇಕೇ ಎಂಬ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬರಲಿದೆ ಎನ್ನಲಾಗಿದೆ.

ಕೆ.ಎಚ್. ಮುನಿಯಪ್ಪ ವಿರುದ್ಧ ನಾರಾಯಣಸ್ವಾಮಿ ಆರೋಪ

ಸಚಿವ ಸ್ಥಾನ ಕೈತಪ್ಪಲು ಸಚಿವ ಕೆ.ಎಚ್. ಮುನಿಯಪ್ಪ ಅವರೇ ಕಾರಣ ಎಂಬ ಗಂಭೀರ ಆರೋಪವನ್ನು ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾಡಿದ್ದಾರೆ. ಕೊನೆಯ ಕ್ಷಣದವರೆಗೂ ತಮಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು ಎಂದು ಹೇಳಿರುವ ಅವರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಆಯ್ಕೆಯಾಗಿರುವ ಏಕೈಕ ಬಲಗೈ ಸಮುದಾಯದ ಶಾಸಕ ತಾವು ಎಂದು ಉಲ್ಲೇಖಿಸಿದ್ದಾರೆ.

ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸವಿತ್ತು. ಆದರೆ ತಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ನಾರಾಯಣಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ; ರಾಜೀನಾಮೆ ಎಚ್ಚರಿಕೆ, ಬೆಂಬಲಿಗರ ಪ್ರತಿಭಟನೆ

ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಮೋಸ ಮಾಡಿದ್ದಾರೆ ಎಂದು ನಾರಾಯಣಸ್ವಾಮಿ ನೇರ ಆರೋಪ ಮಾಡಿದ್ದು, ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‌ನೊಳಗಿನ ಅಸಮಾಧಾನ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಭಾರಿ ಗೆಲುವು: 30 ವರ್ಷಗಳ ಬಿಜೆಪಿ ಭದ್ರಕೋಟೆ ಧೂಳಿಪಟ, ಪತ್ನಿ ಜಾಹ್ನವಿ ಹೇಳಿದ್ದೇನು? – Kannada News | Prashant Kishor Marks Political Debut With Big Bankipur Bypoll Victory

ಬಂಕಿಪುರ, ಆಗಸ್ಟ್ 04: ಪ್ರಸಿದ್ಧ ಚುನಾವಣಾ ತಂತ್ರಜ್ಞ ಹಾಗೂ ‘ಜನ್ ಸುರಾಜ್’ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್(Prashant Kishor) ಬಿಹಾರದ ಬಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ 19,324 ಮತಗಳ ಭಾರಿ ಅಂತರದ ಭವ್ಯ ಗೆಲುವು ಸಾಧಿಸುವ ಮೂಲಕ ಸಕ್ರಿಯ ರಾಜಕೀಯಕ್ಕೆ ಅದ್ಧೂರಿ ಪಾದಾರ್ಪಣೆ ಮಾಡಿದ್ದಾರೆ. ಚುನಾವಣಾ ಆಯೋಗದ ಅಧಿಕೃತ ಮಾಹಿತಿಯ ಪ್ರಕಾರ, ಪ್ರಶಾಂತ್ ಕಿಶೋರ್ ಅವರು ಒಟ್ಟು 64,151 ಮತಗಳನ್ನು ಪಡೆದರೆ, ಅವರ ನಿಕಟ ಸ್ಪರ್ಧಿ ಬಿಜೆಪಿಯ ನೀರಜ್ ಕುಮಾರ್ 44,827 ಮತಗಳನ್ನು ಗಳಿಸಿದರು. ಆರ್‌ಜೆಡಿ (RJD) ಅಭ್ಯರ್ಥಿ ರೇಖಾ ಕುಮಾರಿ ಕೇವಲ 14,273 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

ನಾನು ರಾಜಕೀಯದಿಂದ ದೂರವೇ ಇರುತ್ತೇನೆ: ಪ್ರಶಾಂತ್ ಕಿಶೋರ್ ಪತ್ನಿ ಸ್ಪಷ್ಟನೆ
ಗಂಡನ ಐತಿಹಾಸಿಕ ಗೆಲುವಿನ ಕುರಿತು ಖಾಸಗಿ ವಾಹಿನಿ ಎನ್​ಡಿಟಿವಿ ಜತೆ ಮಾತನಾಡಿದ ಪ್ರಶಾಂತ್ ಕಿಶೋರ್ ಅವರ ಪತ್ನಿ ಡಾ. ಜಾಹ್ನವಿ ದಾಸ್, ನಾವೆಲ್ಲರೂ ತುಂಬಾ ಸಂತೋಷವಾಗಿದ್ದೇವೆ. ಈ ದೊಡ್ಡ ಗೆಲುವಿಗಾಗಿ ಮಾ ಕಾಮಾಕ್ಯ ದೇವಿ, ಬಂಕಿಪುರ ಮತ್ತು ಬಿಹಾರದ ಜನತೆಗೆ ಹಾಗೂ ಜನ್ ಸುರಾಜ್ ತಂಡದ ಪ್ರತಿಯೊಬ್ಬ ಸದಸ್ಯರಿಗೆ ಧನ್ಯವಾದಗಳು ಎಂದಿದ್ದಾರೆ.
ನೀವು ರಾಜಕೀಯಕ್ಕೆ ಬರುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಿಂದ ನಾನು ಎಂದಿಗೂ ದೂರವೇ ಇರುತ್ತೇನೆ. ಆ ಕೆಲಸ ನಿರ್ವಹಿಸಲು ಅವರ ಬಳಿ ಅತ್ಯುತ್ತಮ ತಂಡವಿದೆ. ಆದರೆ ವೈಯಕ್ತಿಕ ಜೀವನದಲ್ಲಿ ಅವರಿಗೆ ಪೂರ್ಣ ಬೆಂಬಲ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಗೆಲುವಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್, ನಾನಿಲ್ಲಿ ಯಾವುದೇ ಪವಾಡ ಮಾಡಿಲ್ಲ. ಕೇವಲ 30 ದಿನಗಳ ಕಠಿಣ ಶ್ರಮದಿಂದ ಬಿಜೆಪಿಯ 30 ವರ್ಷಗಳ ಸುರಕ್ಷಿತ ಭದ್ರಕೋಟೆಯನ್ನು ಕೆಡವಿದ್ದೇನೆ ಎಂದರು. ಬಂಕಿಪುರ ಕ್ಷೇತ್ರದ ಜನರಿಗೆ ನನ್ನ ಬಾಗಿಲು ಸದಾ ತೆರೆದಿರುತ್ತದೆ. ಕೇವಲ 3 ತಿಂಗಳಲ್ಲಿ ಬಂಕಿಪುರದಲ್ಲಿ ಪ್ರತ್ಯಕ್ಷ ಬದಲಾವಣೆಯನ್ನು ನೀವು ನೋಡಲಿದ್ದೀರಿ ಎಂದು ಅಭಿವೃದ್ಧಿಯ ಭರವಸೆ ನೀಡಿದರು.

ಮತ್ತಷ್ಟು ಓದಿ: ಬಂಕಿಪುರ, ಡಾಟಿಯಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು ಏಕೆ?; ಪ್ರಶಾಂತ್ ಕಿಶೋರ್ ಗೆಲುವಿಗೆ ಕಾರಣವೇನು?

ಬಿಹಾರ ರಾಜಕೀಯದಲ್ಲಿ ಹೊಸ ಅಲೆ: ಕಳೆದ ಎರಡು ವರ್ಷಗಳಿಂದ ‘ಜನ್ ಸುರಾಜ್’ ಪಾದಯಾತ್ರೆಯ ಮೂಲಕ ಬಿಹಾರದಾದ್ಯಂತ ಸಂಚರಿಸಿದ್ದ ಪ್ರಶಾಂತ್ ಕಿಶೋರ್, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಬಂಕಿಪುರ ಕ್ಷೇತ್ರವು ಈ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಕ್ಷೇತ್ರವಾಗಿತ್ತು. ದಶಕಗಳಿಂದ ಬಿಜೆಪಿಯ ತೆಕ್ಕೆಯಲ್ಲಿದ್ದ ಈ ನಗರ ಕ್ಷೇತ್ರವನ್ನು ಕಳೆದುಕೊಂಡಿರುವುದು ಕೇಸರಿ ಪಡೆಗೆ ತೀವ್ರ ರಾಜಕೀಯ ಆಘಾತ ತಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಹಳ್ಳಿ ಪವರ್’ ಅಂಗಳಕ್ಕೆ ಘಾಟಿ ಗಾನವಿ ಸಹೋದರಿ ದರ್ಶಿನಿ ಎಂಟ್ರಿ: ಮೊದಲ ದಿನವೇ ಜಗಳ – Kannada News | Ghati Gaanvi Sister Darshini Enters Halli Power Reloaded: Heated Argument Breaks Out on Day 1

ಮಾಡ್ರನ್ ಕಾರ್ಪೆಟ್‌ನಿಂದ ಹಳ್ಳಿಯ ಅಂಗಳಕ್ಕೆ ಕಾಲಿಡಲಿರುವ 16 ಚೆಲುವೆಯರಿಗೆ ಬದುಕು ಕಲಿಸಲು ಸಜ್ಜಾಗಿರುವ ಜೀ ಕನ್ನಡದ ‘ಹಳ್ಳಿ ಪವರ್ రీಲೋಡೆಡ್’ (Halli Power Reloaded) ಶೋ ಈಗಿನಿಂದಲೇ ಭಾರೀ ಸದ್ದು ಮಾಡುತ್ತಿದೆ. ಕಳೆದ ‘ಹಳ್ಳಿ ಪವರ್’ ಸೀಸನ್​ನ ಘಾಟಿ ಗಾನವಿ ಅವರ ಸಹೋದರಿ ದರ್ಶಿನಿ ಈ ಶೋಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು, ಕಾಲಿಡುತ್ತಿದ್ದಂತೆಯೇ ಇತರ ಸ್ಪರ್ಧಿಗಳೊಂದಿಗೆ ವಾಕ್ಸಮರ ನಡೆಸುವ ಮೂಲಕ ವಾತಾವರಣ ಬಿಸಿಯೇರಿಸಿದ್ದಾರೆ.

ಐಟಿ ಉದ್ಯೋಗಿ ಹಾಗೂ ಉದ್ಯಮಿ ದರ್ಶಿನಿ!

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ದರ್ಶಿನಿ, ತಮ್ಮ ಪರಿಚಯ ಮಾಡಿಕೊಳ್ಳುತ್ತಾ ತಾವು ಐಟಿ ಉದ್ಯೋಗಿ ಹಾಗೂ ಬೊಬಾ ಟೀ ಉದ್ಯಮ ನಡೆಸುತ್ತಿರುವ ಉದ್ಯಮಿ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ವೇದಿಕೆಯಲ್ಲಿ ಅವರ ಚಹಾ ಬೆಲೆಯ ಪ್ರಸ್ತಾಪ ಬಂದಾಗ, ಹಳ್ಳಿಯ ಹಿರಿಯ ಜೀವವೊಂದು 5 ರೂಪಾಯಿ ಚಹಾದ ಬಗ್ಗೆ ಮಾತನಾಡಿದರೆ, ದರ್ಶಿನಿ ತಮ್ಮ ಬೊಬಾ ಟೀ ಬೆಲೆ 120 ರೂಪಾಯಿ ಎಂದು ಹೇಳುವುದು ಪ್ರೋಮೋದಲ್ಲಿ ಕಂಡುಬಂದಿದೆ.

ಮೊದಲ ದಿನವೇ ಶುರುವಾಯ್ತು ಜಗಳದ ಬಿಸಿ!

ವೇದಿಕೆಯಲ್ಲಿ ದರ್ಶಿನಿ ಪ್ರವೇಶಿಸುತ್ತಿದ್ದಂತೆ ಇತರ ಸ್ಪರ್ಧಿಗಳ ಜೊತೆ ಮಾತಿನ ಚಕಮಕಿ ಆರಂಭವಾಗಿದೆ. ‘ದರ್ಶಿನಿ ಈ ಶೋನ ವಿಲನ್ ಆಗಲಿದ್ದಾರೆ’ ಎಂದು ಸಹೋದರಿ ಘಾಟಿ ಗಾನವಿ ಕಾಮೆಂಟ್ ಮಾಡಿದ್ದಾರೆ. ‘ದೊಡ್ಡಮ್ಮ ಅವರ ಮೌತ್ ಪೀಸ್ ಬಂದುಬಿಟ್ಟಿದೆ’ ಎಂದು ಮತ್ತೋರ್ವ ಸ್ಪರ್ಧಿ ತಿರುಗೇಟು ನೀಡಿದ್ದಾರೆ. ಇದಕ್ಕೆ ತೀವ್ರವಾಗಿ ಕಿಡಿಕಾರಿದ ಗಾನ್ವಿ ಮತ್ತು ದರ್ಶಿನಿ, ‘ನಿನ್ನ ಬಾಯಿ ಮುಚ್ಚು, ನೀನು ನನ್ನನ್ನು ಶಾಟ್ ಅಪ್ ಎನ್ನಲು ಸಾಧ್ಯವಿಲ್ಲ’ ಎಂದು ಏಕವಚನದಲ್ಲೇ ಕೂಗಾಡಿದ್ದಾರೆ. ‘ನಾನು ಈ ಶೋನ ಮೊದಲ ರನ್ನರ್ ಅಪ್’ ಎಂದು ಹೇಳಿಕೊಳ್ಳುವ ಸ್ಪರ್ಧಿಗೆ ಗಾನವಿ ತಕ್ಕ ಉತ್ತರ ನೀಡಿದ್ದು, ಮೊದಲ ದಿನವೇ ರಗಡ್ ಆಗಿ ‘ಹಳ್ಳಿ ಪವರ್’ ಆಟ ಶುರುವಾಗಿದೆ.

ಇದನ್ನೂ ಓದಿ: ಜೀ ಕನ್ನಡದಲ್ಲಿ ಆಗಸ್ಟ್ 8ರಿಂದ ‘ಹಳ್ಳಿ ಪವರ್ ರೀಲೋಡೆಡ್’ ಧಮಾಕಾ

ಪ್ರಸಾರ ಸಮಯದ ವಿವರ:

ಈ ರೋಚಕ ಹಾಗೂ ಸಸ್ಪೆನ್ಸ್‌ನಿಂದ ಕೂಡಿದ ‘ಹಳ್ಳಿ ಪವರ್ ರೀಲೋಡೆಡ್’ ಗ್ರ್ಯಾಂಡ್ ಓಪನಿಂಗ್ ಇದೇ ಆಗಸ್ಟ್ 8ರಿಂದ ಪ್ರಸಾರವಾಗಲಿದೆ. ಈ ಶೋ ಶನಿವಾರ ಮತ್ತು ಭಾನುವಾರ ರಾತ್ರಿ 9:00 ಗಂಟೆಗೆ ಹಾಗೂ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೀ ಕನ್ನಡದಲ್ಲಿ ‘ಹೊಸ ಕಥೆಗಳ ಪರ್ವ’: ಕಿರುತೆರೆಗೆ ಕಾಲಿಡಲು ಸಜ್ಜಾಗಿವೆ 5 ಹೊಸ ಧಾರಾವಾಹಿಗಳು – Kannada News | Zee Kannada Announces 5 New Serials Under Hosa Kathegala Parva and Halli Power Reality Show

ಜೀ ಕನ್ನಡ ಧಾರಾವಾಹಿಗಳುImage Credit source: Zee Kannada

ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ‘ಜೀ ಕನ್ನಡ’ ತನ್ನ ವೀಕ್ಷಕರಿಗೆ ಸಾಲು ಸಾಲು ಹೊಸ ಮನರಂಜನೆಯ ಕೊಡುಗೆ ನೀಡಲು ಮುಂದಾಗಿದೆ. ‘ಹೊಸ ಕಥೆಗಳ ಪರ್ವ’ ಹೆಸರಿನಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ 5 ಹೊಚ್ಚ ಹೊಸ ಧಾರಾವಾಹಿಗಳ ಪ್ರೋಮೋಗಳನ್ನು ಹಂಚಿಕೊಳ್ಳಲಾಗಿದ್ದು, ಕಿರುತೆರೆ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಜೀ ಕನ್ನಡಕ್ಕೆ ಬರಲಿರುವ ಆ 5 ಹೊಸ ಧಾರಾವಾಹಿಗಳು:

ಶಿವ ಶಕ್ತಿ: ಬಾಕ್ಸಿಂಗ್‌ ಕನಸು ಹೊತ್ತ ಶಕ್ತಿಗೆ ‘ಶಿವ’ನ ಬೆಂಬಲ ಮತ್ತು ಪ್ರೇರಣೆ ಸಿಕ್ಕರೆ ಏನಾಗಬಹುದು ಎಂಬ ರೋಚಕ ಕ್ರೀಡಾ-ಭಾವನಾತ್ಮಕ ಹಿನ್ನೆಲೆಯ ಕಥೆ ಇದು.

ಅರಸಿ: ಮನೇಲಿ ಕೆಲಸದವಳ ಮಗಳಾಗಿದ್ದರೂ, ತನ್ನ ಗುಣ ಹಾಗೂ ನಡೆಯಿಂದ ಇಡೀ ಊರೇ ಮೆಚ್ಚುವಂತೆ ಬೆಳೆಯುವ ಸ್ವಾಭಿಮಾನಿ ಹುಡುಗಿಯ ಕಥೆಯನ್ನು ‘ಅರಸಿ’ ತರಲಿದೆ.

ರಾಮ್ ಲೀಲಾ: ಒಬ್ಬ ಸೂಪರ್‌ಸ್ಟಾರ್ ಮತ್ತು ಆತನನ್ನೇ ಅಪಾರವಾಗಿ ಆರಾಧಿಸುವ ಅಭಿಮಾನಿ ಹುಡುಗಿಯ ನಡುವಿನ ಬಾಂಧವ್ಯ ಹಾಗೂ ಕಥಾಹಂದರ ‘ರಾಮ್ ಲೀಲಾ’.

ಮಿಲನ: ಜೀವನದ ತಿರುವುಗಳಲ್ಲಿ ಎದುರಾಗುವ ಹಾಗೂ ನವಜೋಡಿಗಳ ಕಥೆಯನ್ನು ಹೇಳುವ ಪಯಣವೇ ‘ಮಿಲನ’.

ಗೌರಿಪುತ್ರ: ‘ಅಮ್ಮನ ಆಸೆಯೇ ಉಸಿರು’ ಎಂದು ಬದುಕುವ ತಾಯಿ-ಮಗನ ಬಾಂಧವ್ಯವನ್ನು ಎತ್ತಿಹಿಡಿಯುವ ಭಾವನಾತ್ಮಕ ಧಾರಾವಾಹಿ ‘ಗೌರಿಪುತ್ರ’.

ಈ ಎಲ್ಲಾ 5 ಧಾರಾವಾಹಿಗಳು ವಿಭಿನ್ನ ಶೈಲಿಯಲ್ಲಿ ಮೂಡಿಬಂದಿದ್ದು, ಶೀಘ್ರದಲ್ಲೇ ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಲಿವೆ. ಇದರ ಜೊತೆಗೆ ಮೋಕ್ಷಿತಾ ಪೈ ನಟನೆಯ ‘ಜಗದ್ಧಾತ್ರಿ’ ಧಾರಾವಾಹಿ ಕೂಡ ತೆರೆಗೆ ಬರಲಿದೆ. ಹೊಸ ಐದು ಧಾರಾವಾಹಿಗಳು ಮಧ್ಯಾಹ್ನ ಪ್ರಸಾರ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆ. 2ಕ್ಕೆ ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಆಡಿಷನ್

ಆಗಸ್ಟ್ 8ರಿಂದ ‘ಹಳ್ಳಿ ಪವರ್’ ಆರಂಭ

ಧಾರಾವಾಹಿಗಳ ಹಬ್ಬದ ಜೊತೆಗೆ, ಗ್ರಾಮೀಣ ಸೊಗಡು ಹಾಗೂ ಕದನ ಕುತೂಹಲ ಮೂಡಿಸುವ ಜನಪ್ರಿಯ ರಿಯಾಲಿಟಿ ಶೋ ‘ಹಳ್ಳಿ ಪವರ್’ ಕೂಡ ಇದೇ ಆಗಸ್ಟ್ 8ರಿಂದ ಪ್ರಸಾರವಾಗಲಿದ್ದು, ವೀಕ್ಷಕರಿಗೆ ಪಕ್ಕಾ ಮನರಂಜನೆ ನೀಡಲಿದೆ. ಅಕುಲ್ ಬಾಲಾಜಿ ಈ ಶೋ ನಡೆಸಿಕೊಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೀಣ್ಯದಲ್ಲಿ ಪುಡಿ ರೌಡಿಗಳ ಪುಂಡಾಟ, ಕಲ್ಲು ತೂರಿ ಕಾರು ಧ್ವಂಸ! – Kannada News | Bengaluru Crime: Rowdy Nuisance in Peenya, Car Vandalized; Police Negligence Alleged

ಬೆಂಗಳೂರು, ಆಗಸ್ಟ್ 04: ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಕರಿಹೋಬನಹಳ್ಳಿಯಲ್ಲಿ ಪುಡಿ ರೌಡಿಗಳ ಹಾವಳಿ ಮಿತಿಮೀರಿದ್ದು, ಸ್ಥಳೀಯರು ಭೀತಿಯಲ್ಲಿ ದಿನ ದೂಡುವಂತಾಗಿದೆ. ಗಣಿ ಮತ್ತು ನಂಜುಂಡ ಎಂಬ ಪುಂಡರು ಗಾಂಜಾ ಹಾಗೂ ಡ್ರಗ್ಸ್ ಸೇವಿಸಿ ಏರಿಯಾದಲ್ಲಿ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ.

ಕಳೆದ 3ನೇ ತಾರೀಖಿನಂದು ರಾತ್ರಿ ಸ್ಥಳೀಯರು ಇವರ ಪುಂಡಾಟವನ್ನು ಪ್ರಶ್ನಿಸಿದ್ದಕ್ಕೆ, ಆಕ್ರೋಶಗೊಂಡ ಆರೋಪಿಗಳು ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಗ್ಲಾಸ್ ಒಡೆದು ದಾಂಧಲೆ ನಡೆಸಿದ್ದಾರೆ. ಈ ಕೃತ್ಯದ ವಿಡಿಯೋ ಹಾಗೂ ವ್ಹೀಲಿಂಗ್ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆರೋಪಿಗಳ ಹಾವಳಿಗೆ ಬೇಸತ್ತು ಸಂತ್ರಸ್ತರು ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಸೂಕ್ತ ಸಾಕ್ಷ್ಯಗಳಿದ್ದರೂ ಪೊಲೀಸರು ಎಫ್‌ಐಆರ್‌ (FIR) ದಾಖಲಿಸದೇ ಕೇವಲ ಎನ್‌ಸಿಆರ್‌ (NCR) ಮಾಡಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೃಷಿ ಅಧಿಕಾರಿಗಳ ನೇಮಕಾತಿ ಅಕ್ರಮ ಆರೋಪ: GKVK ವಿವಿಗೆ ಬೀಗ ಜಡಿದು ಕೃಷಿ ವಿದ್ಯಾರ್ಥಿಗಳ ಪ್ರತಿಭಟನೆ! – Kannada News | GKVK Students Protest in Bengaluru Against Agriculture Officer Recruitment Rules

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ

ಬೆಂಗಳೂರು, ಆಗಸ್ಟ್ 04: ರಾಜ್ಯ ಸರ್ಕಾರದ ಕೃಷಿ ಇಲಾಖೆ ವಿರುದ್ಧ ಕೃಷಿ ಪದವೀಧರರು ತೀವ್ರ ಆಕ್ರೋಶ ಹೊರಹಾಕಿದ್ದು, ಹೋರಾಟದ ಹಾದಿ ಹಿಡಿದಿದ್ದಾರೆ. ನೇಮಕಾತಿ ನಿಯಮಗಳನ್ನು ಗಾಳಿಗೆ ತೂರಿ ಕೃಷಿ ಅಧಿಕಾರಿ (AO) ಹಾಗೂ ಕೃಷಿ ಸಹಾಯಕ ಅಧಿಕಾರಿ (AAO) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಆರೋಪಿಸಿ, ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK) ವಿದ್ಯಾರ್ಥಿಗಳು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.

ಅನ್ಯ ಪದವೀಧರರಿಗೆ ಅವಕಾಶ: ವಿದ್ಯಾರ್ಥಿಗಳ ಆಕ್ರೋಶ

ಇತ್ತೀಚೆಗಷ್ಟೇ ಸರ್ಕಾರವು 900ಕ್ಕೂ ಹೆಚ್ಚು ಕೃಷಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಆದರೆ, ಕೃಷಿ ಸಂಬಂಧಿತ ಪಠ್ಯಕ್ರಮಗಳನ್ನು ಓದಿದ ಪದವೀಧರರ ಬದಲಿಗೆ ಬಿ.ಇ/ಬಿ.ಟೆಕ್‌ನಲ್ಲಿ ಬಯೋ ಕೆಮಿಸ್ಟ್ರಿ ಓದಿದ ಅಭ್ಯರ್ಥಿಗಳಿಗೂ ಈ ಹುದ್ದೆಗಳಿಗೆ ಅವಕಾಶ ಕಲ್ಪಿಸಿರುವುದು ಕೃಷಿ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. “ವರ್ಷಗಟ್ಟಲೆ ಕೃಷಿ ವಿಷಯಗಳಲ್ಲೇ ಪದವಿ ಪಡೆದ ನಮಗೂ, ತಂತ್ರಜ್ಞಾನ ಪದವಿಯಲ್ಲಿ ಬಯೋ ಕೆಮಿಸ್ಟ್ರಿ ಓದಿದವರಿಗೂ ವ್ಯತ್ಯಾಸವಿಲ್ಲವೇ?” ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

ಡೀನ್ ಕಚೇರಿಗೆ ಬೀಗ ಜಡಿದು ಆಕ್ರೋಶ

ಕಳೆದ 15 ದಿನಗಳಿಂದ ಜಿಕೆವಿಕೆ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಜಿಕೆವಿಕೆ ಡೀನ್ ಕಚೇರಿಗೆ ಬೀಗ ಜಡಿದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ಶಿಕ್ಷಣದ ಅಸ್ತಿತ್ವಕ್ಕೇ ಧಕ್ಕೆ ತರುತ್ತಿರುವ ಈ ತಾರತಮ್ಯದ ನೇಮಕಾತಿ ನಿಯಮಾವಳಿಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ವಿಧಾನಸೌಧ ಮುತ್ತಿಗೆಗೆ ಎಚ್ಚರಿಕೆ

ಕೃಷಿ ವಿದ್ಯಾರ್ಥಿನಿ ರೇಷ್ಮಾ ಮಾತನಾಡಿ, “ಸರ್ಕಾರ ನಮ್ಮ ಭವಿಷ್ಯದ ಜೊತೆ ಆಟವಾಡುತ್ತಿದೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ತಕ್ಷಣವೇ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ನಡೆಸಿ, ವಿಧಾನಸೌಧ ಮುತ್ತಿಗೆ ಹಾಕಲಿದ್ದೇವೆ” ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ಕೃಷಿ ವಿದ್ಯಾರ್ಥಿಗಳ ಈ ಉಗ್ರ ಹೋರಾಟಕ್ಕೆ ಸರ್ಕಾರ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:36 am, Tue, 4 August 26

Source link

ಸೋಮವಾರದ ಪರೀಕ್ಷೆಯಲ್ಲೂ ಪಾಸ್ ಆದ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’; ಭರ್ಜರಿ ಕೆಲಕ್ಷನ್ – Kannada News | Spider Man: Brand New Day Dominates Indian Box Office with 281 Cr Net Collection in 5 Days

ಬಹುನಿರೀಕ್ಷಿತ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ (Spider Man Movie) ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇದು ಸೋಮವಾರವೂ ಮುಂದುವರಿಸಿದೆ. ವಿಶ್ವದಾದ್ಯಂತ ಅಪಾರ ಪ್ರೇಕ್ಷಕರನ್ನು ಹೊಂದಿರುವ ಈ ಸೂಪರ್‌ಹೀರೋ ಚಿತ್ರವು ಭಾರತದಲ್ಲೂ ತನ್ನ ಪಾರುಪತ್ಯ ಮೆರೆಯುತ್ತಿದ್ದು, ಬಿಡುಗಡೆಯಾದ ಮೊದಲ ದಿನದಿಂದಲೇ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರಿಂದ ಲಭಿಸುತ್ತಿರುವ ಅಭೂತಪೂರ್ವ ಸ್ಪಂದನೆಯಿಂದಾಗಿ ಸಿನಿಮಾ ಪ್ರದರ್ಶನ ಕಾಣುವ ಶೋಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ.

ಚಿತ್ರವು ಬಿಡುಗಡೆಯಾದ ಮೊದಲ ದಿನವಾದ ಗುರುವಾರ ದೇಶಾದ್ಯಂತ 17,250 ಶೋಗಳಿಂದ ಶೇ. 72.3ರಷ್ಟು ಭರ್ತಿಯಾಗಿ ಭರ್ಜರಿ 60.60 ಕೋಟಿ ರೂಪಾಯಿ ಗಳಿಸುವ ಮೂಲಕ ಶುಭಾರಂಭ ಮಾಡಿತ್ತು. ಎರಡನೇ ದಿನವಾದ ಶುಕ್ರವಾರವೂ ತನ್ನ ಓಟ ಮುಂದುವರಿಸಿದ ಚಿತ್ರವು 16,902 ಶೋಗಳಲ್ಲಿ ಶೇ. 64.8ರಷ್ಟು ಆಕ್ಯುಪೆನ್ಸಿಯೊಂದಿಗೆ 49.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿತು.

ವಾರಾಂತ್ಯದ ದಿನಗಳಲ್ಲಿ ಈ ಚಿತ್ರದ ಕ್ರೇಜ್ ಮತ್ತಷ್ಟು ಹೆಚ್ಚಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಹಣದ ಮಳೆಯೇ ಹರಿದಿದೆ. 3ನೇ ದಿನ ಶನಿವಾರ 17,703 ಶೋಗಳಿಂದ ಶೇ. 77.0ರಷ್ಟು ಭರ್ತಿಯಾಗಿ 70.25 ಕೋಟಿ ರೂಪಾಯಿ ಬಾಚಿಕೊಂಡರೆ, 4ನೇ ದಿನ ಭಾನುವಾರ ದಾಖಲೆಯ 18,051 ಶೋಗಳಲ್ಲಿ ಶೇ. 78.7ರಷ್ಟು ಆಕ್ಯುಪೆನ್ಸಿಯೊಂದಿಗೆ ಬರೋಬ್ಬರಿ 77.75 ಕೋಟಿ ರೂಪಾಯಿ ಗಳಿಸಿ ಹೊಸ ದಾಖಲೆ ಬರೆದಿತ್ತು.

ಇದನ್ನೂ ಓದಿ: ಥಿಯೇಟರ್‌ನಲ್ಲಿ ‘ಸ್ಪೈಡರ್ ಮ್ಯಾನ್’ ಕಥೆ ಹೇಳುತ್ತಿದ್ದ ಯುವಕನಿಗೆ ಧರ್ಮದೇಟು; ವಿಡಿಯೋ ವೈರಲ್

ಸಾಮಾನ್ಯವಾಗಿ ವಾರದ ಮೊದಲ ಕೆಲಸದ ದಿನವಾದ ಸೋಮವಾರದಂದು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುವುದು ಸಹಜ. ಆದರೆ 5ನೇ ದಿನ ಸೋಮವಾರದಂದೂ ಸಹ ತನ್ನ ಪಾರಮ್ಯ ಮೆರೆದಿರುವ ಈ ಚಿತ್ರ, ದೇಶಾದ್ಯಂತ 16,874 ಶೋಗಳಿಂದ ಶೇ. 50.5ರಷ್ಟು ಭರ್ತಿಯಾಗಿ ಬರೋಬ್ಬರಿ 23.80 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ, ಭಾರತದಲ್ಲಿ ಇದುವರೆಗೆ ಒಟ್ಟು 336.91 ಕೋಟಿ ರೂಪಾಯಿ ಗ್ರೋಸ್ ಹಾಗೂ 281.75 ಕೋಟಿ ನೆಟ್ ಕಲೆಕ್ಷನ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತದಲ್ಲಿ ಕೌಂಟ್‌ಡೌನ್‌ ಶುರು: ಏಕಾಏಕಿ ನೂರಾರು ವಾಟ್ಸಾಪ್‌ ಖಾತೆಗಳು 24 ಗಂಟೆ ಬ್ಯಾನ್ – Kannada News | WhatsApp Account Ban India: Why Hundreds Banned and How to Recover Your Account

ನವದೆಹಲಿ, ಆಗಸ್ಟ್​ 04: ಭಾರತದಲ್ಲಿ ಸಾವಿರಾರು ವಾಟ್ಸಾಪ್ (WhatsApp) ಬಳಕೆದಾರರಿಗೆ ಸೋಮವಾರ ರಾತ್ರಿ ಆಘಾತ ಎದುರಾಗಿದೆ. ಯಾವುದೇ ಪೂರ್ವ ಸೂಚನೆಯಿಲ್ಲದೆ ಏಕಾಏಕಿ ನೂರಾರು ವಾಟ್ಸಾಪ್‌ ಖಾತೆಗಳನ್ನು 24 ಗಂಟೆಗಳ ಕಾಲ ‘ಪರಿಶೀಲನೆಗೆ’ ಒಳಪಡಿಸಲಾಗಿದ್ದು, ಸಂದೇಶ ರವಾನೆ ಸೇರಿದಂತೆ ಅಪ್ಲಿಕೇಶನ್‌ನ ಎಲ್ಲಾ ಸೇವೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಸೋಮವಾರ ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಬಳಕೆದಾರರು ಅಪ್ಲಿಕೇಶನ್ ತೆರೆದಾಗ ನಿಮ್ಮ ಖಾತೆಯು ಪರಿಶೀಲನೆಯಲ್ಲಿದೆ. ಸೇವಾ ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದ್ದು, 24 ಗಂಟೆಗಳಲ್ಲಿ ಫಲಿತಾಂಶ ತಿಳಿಸಲಾಗುವುದು ಎಂಬ ಸಂದೇಶ ಕಂಡುಬಂದಿದೆ.

ದೈನಂದಿನ ಕಚೇರಿ ಕೆಲಸ ಮತ್ತು ವೈಯಕ್ತಿಕ ಸಂವಹನಕ್ಕೆ ವಾಟ್ಸಾಪ್ ಪ್ರಮುಖ ಮಾಧ್ಯಮವಾಗಿರುವುದರಿಂದ, ಖಾತೆಗಳು ಹಠಾತ್ತನೆ ನಿರ್ಬಂಧಗೊಂಡಿದ್ದಕ್ಕೆ ನೆಟ್ಟಿಗರು ಎಕ್ಸ್ (ಟ್ವಿಟರ್) ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಥರ್ಡ್-ಪಾರ್ಟಿ ಆ್ಯಪ್​ಗಳನ್ನು ಬಳಸದೆ, ಕೇವಲ ಅಧಿಕೃತ ವಾಟ್ಸಾಪ್ ಆಪ್‌ ಬಳಸುತ್ತಿದ್ದರೂ ತಮ್ಮ ಖಾತೆಯನ್ನು ಬ್ಯಾನ್ ಮಾಡಲಾಗಿದೆ ಎಂದು ಹಲವು ಬಳಕೆದಾರರು ದೂರಿದ್ದಾರೆ.

ನಮ್ಮ ಸೇವಾ ನಿಯಮಗಳನ್ನು ಉಲ್ಲಂಘಿಸುವ ಹಾಗೂ ಸ್ಪ್ಯಾಮ್ (Spam) ರವಾನಿಸುವ ಖಾತೆಗಳ ವಿರುದ್ಧ ನಾವು ನಿರಂತರವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಕೆಲವೊಮ್ಮೆ ನಮ್ಮ ಸ್ವಯಂಚಾಲಿತ ಅಲ್ಗಾರಿದಮ್‌ಗಳಿಂದಾಗಿ (AI Tools) ತಾಂತ್ರಿಕ ದೋಷ ಸಂಭವಿಸಿ, ಸರಿ ಇರುವ ಖಾತೆಗಳೂ ಪರಿಶೀಲನೆಗೆ ಒಳಗಾಗುತ್ತವೆ. ಅಂತಹ ಸಂದರ್ಭಗಳಲ್ಲಿ ನಾವು ಪರಿಶೀಲಿಸಿ, ಸಾಧ್ಯವಾದಷ್ಟು ಬೇಗ ಖಾತೆಗಳನ್ನು ಪುನರಾರಂಭಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಿ:WhatsApp RTO challan scam: ವಾಟ್ಸ್ಆ್ಯಪ್​ನಲ್ಲಿ ಹರಿದಾಡುತ್ತಿದೆ ಆರ್​ಟಿಒ ಚಲನ್ ಸ್ಕ್ಯಾಮ್: ಈರೀತಿ ಮೆಸೇಜ್ ಬಂದರೆ ಎಚ್ಚರ

ಖಾತೆಗಳನ್ನು ಸುರಕ್ಷಿತವಾಗಿಡುವುದು ಹೇಗೆ?: ವಾಟ್ಸಾಪ್ ನಿಯಮಾವಳಿಗಳ ಪ್ರಕಾರ, ಒಂದೇ ಬಾರಿಗೆ ಅತಿಯಾಗಿ ಅಪರಿಚಿತ ಸಂಖ್ಯೆಗಳಿಗೆ ಸಂದೇಶ ರವಾನಿಸುವುದು (Bulk Messaging), ದ್ವೇಷಪೂರಿತ ಸಂದೇಶಗಳನ್ನು ಫಾರ್ವರ್ಡ್ ಮಾಡುವುದು ಹಾಗೂ ಅನಧಿಕೃತ ವಾಟ್ಸಾಪ್ ಜಿಬಿ (WhatsApp GB) ಆಪ್‌ಗಳನ್ನು ಬಳಸುವುದು ಖಾತೆ ನಿಷೇಧಕ್ಕೆ ಕಾರಣವಾಗಬಹುದು.

ದೂರು ಸಲ್ಲಿಸುವ ವಿಧಾನ: ನಿಮ್ಮ ಖಾತೆಯು ಆಕಸ್ಮಿಕವಾಗಿ ನಿರ್ಬಂಧಗೊಂಡಿದ್ದರೆ, ಪರಿಶೀಲನಾ ಪರದೆಯಲ್ಲಿ ಕಾಣಿಸುವ (ಪರಿಶೀಲನೆಗೆ ವಿನಂತಿ) ಬಟನ್ ಒತ್ತಿ ಮೆಟಾ ತಂಡಕ್ಕೆ ನೇರ ದೂರು ಸಲ್ಲಿಸಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IND vs SL: ಭಾರತ ತಂಡಕ್ಕೆ ಮತ್ತೆ ಮೂವರು ಆಯ್ಕೆ – Kannada News | Kotian, Dubey Named India’s Net Bowlers for SL Tests

ಶ್ರೀಲಂಕಾ ವಿರುದ್ಧದ ಸರಣಿಗಾಗಿ ಭಾರತ ತಂಡಕ್ಕೆ ಮತ್ತೆ ಮೂವರು ಆಟಗಾರರು ಆಯ್ಕೆಯಾಗಿದ್ದಾರೆ. ಆದರೆ ಈ ಮೂವರು ಆಯ್ಕೆಯಾಗಿರುವುದು ನೆಟ್ ಬೌಲರ್​ಗಳಾಗಿ ಎಂಬುದು ವಿಶೇಷ. ದೇಶಿ ಕ್ರಿಕೆಟ್‌ನ ಸ್ಟಾರ್ ಆಲ್‌ರೌಂಡರ್‌ಗಳಾದ ತನುಷ್ ಕೋಟ್ಯಾನ್, ಹರ್ಷ್ ದುಬೆ ಹಾಗೂ ಯುವ ಸ್ಪಿನ್ನರ್ ವಿಪ್ರಾಜ್ ನಿಗಮ್ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಶ್ರೀಲಂಕಾದ ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಭಾರತೀಯ ಬ್ಯಾಟರ್‌ಗಳಿಗೆ ಅತ್ಯುತ್ತಮ ತರಬೇತಿ ನೀಡುವ ಉದ್ದೇಶದಿಂದ ಈ ಮೂವರು ಸ್ಪಿನ್ನರ್‌ಗಳನ್ನು ನೆಟ್ ಬೌಲಿಂಗ್‌ಗಾಗಿ ಬಿಸಿಸಿಐ ನಿಯೋಜಿಸಿದೆ. ಅದರಂತೆ ಈ ಮೂವರು ಆಟಗಾರರು ಮಂಗಳವಾರ (ಆಗಸ್ಟ್ 4) ಸಂಜೆ ಮುಂಬೈನಿಂದ ಚಾರ್ಟರ್ಡ್ ವಿಮಾನದ ಮೂಲಕ ಟೀಮ್ ಇಂಡಿಯಾ ಜೊತೆ ಶ್ರೀಲಂಕಾಗೆ ಪ್ರಯಾಣಿಸಲಿದ್ದಾರೆ.

ಲಂಕಾ ಸ್ಪಿನ್ ಸಾಮ್ರಾಜ್ಯ:

ಶ್ರೀಲಂಕಾ ವಿರುದ್ಧದ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC 2025-27) ಭಾಗವಾಗಿರುವುದರಿಂದ ಭಾರತಕ್ಕೆ ಇದು ಅತ್ಯಂತ ನಿರ್ಣಾಯಕವಾಗಿದೆ. ಲಂಕಾ ನೆಲದಲ್ಲಿ ಸ್ಪಿನ್ ಬೌಲಿಂಗ್ ಎದುರಿಸುವುದು ಸದಾ ಸವಾಲಿನ ಕೆಲಸ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಈ ಮೂವರು ಯುವ ಆಟಗಾರರಿಗೆ ಮಣೆ ಹಾಕಿದೆ.

  • ತನುಷ್ ಕೋಟ್ಯಾನ್: ಮುಂಬೈನ 27 ವರ್ಷದ ಈ ಆಫ್-ಸ್ಪಿನ್ ಆಲ್‌ರೌಂಡರ್ ದೇಶಿ ಕ್ರಿಕೆಟ್‌ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಈ ಹಿಂದೆ 2024ರ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್‌ಗೆ ಭಾರತ ತಂಡಕ್ಕೆ ಇವರು ಆಯ್ಕೆಯಾಗಿದ್ದರಾದರೂ, ಇನ್ನೂ ಅಧಿಕೃತ ಪಾದಾರ್ಪಣೆ ಮಾಡಿಲ್ಲ.
  • ಹರ್ಷ್ ದುಬೆ: ವಿದರ್ಭದ ಈ ಎಡಗೈ ಸ್ಪಿನ್ನರ್ ಇತ್ತೀಚೆಗೆ ಶ್ರೀಲಂಕಾ ‘ಎ’ ವಿರುದ್ಧ ನಡೆದ ಎರಡು ಅನ್‌ಅಫೀಶಿಯಲ್ ಟೆಸ್ಟ್ ಪಂದ್ಯಗಳಲ್ಲಿ ಭಾರತ ‘ಎ’ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು.
  • ವಿಪ್ರಾಜ್ ನಿಗಮ್: ಈ ಇಬ್ಬರ ಜೊತೆಗೆ ಯುವ ಸ್ಪಿನ್ನರ್ ವಿಪ್ರಾಜ್ ಕೂಡ ಹಿರಿಯ ಆಟಗಾರರೊಂದಿಗೆ ಒಟ್ಟಿಗೆ ಅಭ್ಯಾಸ ನಡೆಸಿ ಅನುಭವ ಪಡೆಯಲಿದ್ದಾರೆ.

ಭಾರತ vs ಶ್ರೀಲಂಕಾ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಮೈದಾನ / ಸ್ಥಳ ಸಮಯ (IST)
ಮೊದಲ ಟೆಸ್ಟ್ ಆಗಸ್ಟ್ 15 – 19, 2026 ಅಂತರರಾಷ್ಟ್ರೀಯ ಕ್ರೀಡಾಂಗಣ, ಗಾಲೆ ಬೆಳಗ್ಗೆ 10:00 ಗಂಟೆಗೆ
ಎರಡನೇ ಟೆಸ್ಟ್ ಆಗಸ್ಟ್ 23 – 27, 2026 ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC), ಕೊಲೊಂಬೊ ಬೆಳಗ್ಗೆ 10:00 ಗಂಟೆಗೆ

ಇದನ್ನೂ ಓದಿ: ರಾಜೀವ್ ಕುಮಾರ್… ಟೀಮ್ ಇಂಡಿಯಾ ಹಿಂದಿದ್ದ ಕಾಣದ ‘ಕೈ’

ಭಾರತ ಟೆಸ್ಟ್ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಆಖಿಬ್ ನಬಿ.

Source link

ವಿಜಯಲಕ್ಷ್ಮಿ ದರ್ಶನ್ ಒತ್ತಾಯದಿಂದಲೇ ನಾವು ನಿರ್ಮಾಪಕರಾದೆವು: ಜಯಣ್ಣ-ಭೋಗೇಂದ್ರ – Kannada News | How Vijayalakshmi Darshan Pushed Jayanna Bogendra to Become Film Producers

ಕನ್ನಡ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳನ್ನು ವಿತರಣೆ ಮಾಡಿ, ಸಾಕಷ್ಟು ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಖ್ಯಾತಿ ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ಅವರಿಗೆ ಸಲ್ಲುತ್ತದೆ. ಈಗ ಇವರು ತಾವು ನಿರ್ಮಾಪಕರಾಗಿದ್ದು ಹೇಗೆ ಎಂಬ ಕುತೂಹಲಕಾರಿ ಕಥೆಯನ್ನು ಹಂಚಿಕೊಂಡಿದ್ದಾರೆ. ತಾವು ಸಿನಿಮಾ ನಿರ್ಮಾಣ ಕ್ಷೇತ್ರಕ್ಕೆ ಬರಲು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರೇ (Vijayalakshmi Darshan) ಮುಖ್ಯ ಕಾರಣ ಎಂದು ಅವರು ತಿಳಿಸಿದ್ದಾರೆ.

ವಿದೇಶಿ ಶೂಟಿಂಗ್‌ ವೇಳೆ ನಡೆದಿದ್ದೇನು?

ಚಂದನ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜಯಣ್ಣ-ಭೋಗೇಂದ್ರ, ‘ನಾವು ದರ್ಶನ್ ಅವರ ಸಿನಿಮಾಗಳ ಹಾಡುಗಳ ಶೂಟಿಂಗ್‌ಗಾಗಿ ಆಸ್ಟ್ರೇಲಿಯಾ ಸೇರಿದಂತೆ ವಿವಿಧ ವಿದೇಶಗಳಿಗೆ ಜೊತೆಯಲ್ಲೇ ಹೋಗುತ್ತಿದ್ದೆವು. ‘ಸ್ನೇಹನಾ ಪ್ರೀತಿನಾ’ ಮತ್ತು ‘ಭೂಪತಿ’ ಚಿತ್ರಗಳ ಶೂಟಿಂಗ್ ವೇಳೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಮೇಡಂ ನಮಗೆ ನಿರ್ಮಾಪಕರಾಗುವಂತೆ ಸಾಕಷ್ಟು ಒತ್ತಾಯ ಮಾಡಿದರು’ ಎಂದಿದ್ದಾರೆ.

‘ನೀವೇ ಸ್ವತಃ ಹಣ ಹೂಡಿ ಸಿನಿಮಾ ನಿರ್ಮಾಣ ಮಾಡಿ, ಆ ಲಾಭವನ್ನು ನೀವೇ ಪಡೆದುಕೊಳ್ಳಿ, ನಾವೇ ನಿಮಗೆ ಕಾಲ್‌ಶೀಟ್ ನೀಡುತ್ತೇವೆ ಎಂದು ವಿಜಯಲಕ್ಷ್ಮಿ ಅವರು ಪ್ರೀತಿಯಿಂದ ಫೋರ್ಸ್ ಮಾಡಿದರು. ಅವರ ಆ ಪ್ರೀತಿಯ ಒತ್ತಡದಿಂದಾಗಿಯೇ ನಾವು ನಿರ್ಮಾಪಕರಾಗಲು ನಿರ್ಧರಿಸಿದೆವು’ ಎಂದು ಅವರು ಹಳೆಯ ನೆನಪನ್ನು ಮೆಲಕು ಹಾಕಿದ್ದಾರೆ.

ಕೃತಜ್ಞತೆಗಾಗಿ ‘ವಿಜಯಲಕ್ಷ್ಮಿ ಪ್ರೆಸೆಂಟ್ಸ್‌’

ವಿಜಯಲಕ್ಷ್ಮಿ ಅವರ ಈ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ, ‘ಅರ್ಜುನ್’ ಸಿನಿಮಾ ರಿಲೀಸ್ ಮಾಡುವಾಗ ‘ವಿಜಯಲಕ್ಷ್ಮಿ ದರ್ಶನ್ ಪ್ರೆಸೆಂಟ್ಸ್’ ಎಂದು ಹೆಸರನ್ನು ಹಾಕಿದ್ದಾಗಿ ಜಯಣ್ಣ ಅವರು ಹೇಳಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ

‘ಆರಂಭದಲ್ಲಿ ಸಿನಿಮಾ ನಿರ್ಮಾಣ ಕ್ಷೇತ್ರದ ಕಷ್ಟ-ನಷ್ಟಗಳು, ರಿಸ್ಕ್ ನಮಗೆ ಗೊತ್ತಿದ್ದರಿಂದ ನಮಗೆ ಪ್ರೊಡ್ಯೂಸರ್ ಆಗುವ ಮನಸ್ಸಿರಲಿಲ್ಲ. ಬರೀ ವಿತರಣೆ ಮತ್ತು ಪ್ರದರ್ಶನದಲ್ಲಷ್ಟೇ ಮುಂದುವರಿಯಬೇಕೆಂದಿದ್ದೆವು. ಆದರೆ ವಿಜಯಲಕ್ಷ್ಮಿ ಮೇಡಂ ಅವರ ಮಾತಿನಿಂದಾಗಿ ಅಡ್ವಾನ್ಸ್ ನೀಡಿ ‘ಅರ್ಜುನ್’ ಸಿನಿಮಾ ಮೂಲಕ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟೆವು. ದೇವರ ದಯೆಯಿಂದ ಅಂದಿನಿಂದ ಇಂದಿನವರೆಗೂ ಯಾವುದೇ ತೊಂದರೆಯಿಲ್ಲದೆ ಯಶಸ್ವಿಯಾಗಿ ಸಾಗುತ್ತಿದ್ದೇವೆ’ ಎಂದು ಭೋಗೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version