ಕೊಲ್ಕತ್ತಾ, ಮಾರ್ಚ್ 17: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ (West Bengal Assembly Elections) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಇಂದು 291 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಟಿಎಂಸಿ ಮುಖ್ಯಸ್ಥೆ ಮತ್ತು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಭದ್ರಕೋಟೆಯಾದ ಭವಾನಿಪುರದಿಂದ ಸ್ಪರ್ಧಿಸಲಿದ್ದಾರೆ. ಇಂದು ಟಿಎಂಸಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 52 ಮಹಿಳಾ ಅಭ್ಯರ್ಥಿಗಳಿದ್ದಾರೆ. ಇದಲ್ಲದೆ, 95 ಅಭ್ಯರ್ಥಿಗಳು ಎಸ್‌ಸಿ/ಎಸ್‌ಟಿ ಸಮುದಾಯಗಳವರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನಡುವಿನ ತೀವ್ರ ಪೈಪೋಟಿಗೆ ಈ ಬಾರಿಯೂ ಭವಾನಿಪುರ ಸಾಕ್ಷಿಯಾಗಲಿದೆ. ಸೋಮವಾರ, ಬಿಜೆಪಿ ತನ್ನ 144 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸುವೇಂದು ಅಧಿಕಾರಿಯ ಹೆಸರನ್ನು ಘೋಷಿಸಿತ್ತು. ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯನ್ನು ಸೋಲಿಸಿದ ನಂದಿಗ್ರಾಮದಿಂದಲೂ ಸ್ಪರ್ಧಿಸಲಿದ್ದಾರೆ. ಟಿಎಂಸಿಯ ಪಬಿತ್ರ ಕರ್ ಈ ಬಾರಿ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿಯ ವಿರುದ್ಧ ಸ್ಪರ್ಧಿಸಲಿದ್ದಾರೆ.
2018ರ ವಿಧಾನಸಭಾ ಚುನಾವಣೆಗೆ ಮುನ್ನ ಹಲವಾರು ನಾಯಕರು ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಅವರಲ್ಲಿ ಸುವೇಂದು ಅಧಿಕಾರಿ ಕೂಡ ಒಬ್ಬರು.
ಟಿಎಂಸಿ 3 ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿದೆ.
ಟಿಎಂಸಿ ಮೂರು ಸ್ಥಾನಗಳನ್ನು ಅನಿತ್ ಥಾಪಾ ನೇತೃತ್ವದ ಭಾರತೀಯ ಗೂರ್ಖಾ ಪ್ರಜಾತಂತ್ರಿಕ್ ಮೋರ್ಚಾ (ಬಿಜಿಪಿಎಂ)ಗೆ ಬಿಟ್ಟುಕೊಟ್ಟಿದೆ. ಈ ಸ್ಥಾನಗಳೆಂದರೆ, ಕಾಲಿಂಪಾಂಗ್, ಡಾರ್ಜಿಲಿಂಗ್ ಮತ್ತು ಕುರ್ಸಿಯೋಂಗ್.
294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆ ಮೇ 4ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
40 ವರ್ಷದ ನಂತರ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದು ಅತ್ಯಂತ ಮುಖ್ಯವಾಗುತ್ತದೆ. ಈ ವಯಸ್ಸಿನಲ್ಲಿ ದೇಹದ ಮೆಟಾಬಾಲಿಸಮ್ ನಿಧಾನಗೊಳ್ಳಬಹುದು ಮತ್ತು ಜೀವನಶೈಲಿಗೆ ಸಂಬಂಧಿತ ರೋಗಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ನಿಯಮಿತ ಆರೋಗ್ಯ ತಪಾಸಣೆಗಳ ಮೂಲಕ ದೇಹದಲ್ಲಿ ನಡೆಯುವ ಬದಲಾವಣೆಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಅಗತ್ಯ. ತಜ್ಞರ ಪ್ರಕಾರ, ಈ ನಿಯಮಗಳು ಮಹಿಳೆಯರು ಮತ್ತು ಪುರುಷರು ಇಬ್ಬರಿಗೂ ಸಮಾನವಾಗಿ ಅನ್ವಯಿಸುತ್ತವೆ. ವಯಸ್ಸು ಹೆಚ್ಚಾದಂತೆ ದೇಹದ ಅಗತ್ಯತೆಗಳು ಬದಲಾಗುತ್ತವೆ ಮತ್ತು ವಿವಿಧ ಅಂಗಾಂಗಗಳ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ನಿಯಮಿತ ಪರೀಕ್ಷೆಗಳ ಮೂಲಕ ದೇಹ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ವೈದ್ಯರು ತಿಳಿದು, ಸರಿಯಾದ ಸಲಹೆ ನೀಡಬಹುದು. ಹಾಗಾದರೆ 40ರ ನಂತರ ಪುರುಷ ಮತ್ತು ಮಹಿಳೆಯರು (Women) ಯಾವ ತಪಾಸಣೆ ಮಾಡಿಸಿಕೊಳ್ಳಬೇಕು, ಇದರಿಂದ ಸಿಗುವ ಉಪಯೋಗಗಳೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಪುರುಷರಿಗೆ ಅಗತ್ಯವಿರುವ ತಪಾಸಣೆಗಳು:
ವೈದ್ಯರ ಸಲಹೆಯಂತೆ, 40 ವರ್ಷದ ನಂತರ ಪುರುಷರು ಬ್ಲಡ್ ಪ್ರೆಶರ್, ಬ್ಲಡ್ ಶುಗರ್, ಲಿಪಿಡ್ ಪ್ರೊಫೈಲ್ ಮತ್ತು ಲಿವರ್ ಫಂಕ್ಷನ್ ಟೆಸ್ಟ್‌ಗಳನ್ನು ನಿಯಮಿತವಾಗಿ ಮಾಡಿಸಬೇಕು. ಇವು ಹೃದಯ ಆರೋಗ್ಯ ಮತ್ತು ಮೆಟಾಬಾಲಿಕ್ ಸಮಸ್ಯೆಗಳ ಅಪಾಯವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ. ಕಿಡ್ನಿ ಫಂಕ್ಷನ್ ಮತ್ತು ಮೂತ್ರ ಪರೀಕ್ಷೆ ಕೂಡ ಮುಖ್ಯ. ಪ್ರೋಸ್ಟೇಟ್ ಸಮಸ್ಯೆಗಳ ಪತ್ತೆಗೆ ಪಿಎಸ್ಎ (PSA) ಟೆಸ್ಟ್ ಸಹ ಮಾಡಿಸಬಹುದು. ಕಣ್ಣು, ಹಲ್ಲು ಮತ್ತು ಈಸಿಜಿ (ECG) ಪರೀಕ್ಷೆಗಳು ಕೂಡ ಅವಶ್ಯಕ.
ಮಹಿಳೆಯರಲ್ಲಿ 40 ನಂತರ ಹಾರ್ಮೋನಲ್ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಬ್ಲಡ್ ಪ್ರೆಶರ್, ಬ್ಲಡ್ ಶುಗರ್ ಮತ್ತು ಕೊಲೆಸ್ಟ್ರಾಲ್ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಬೇಕು. ಥೈರಾಯ್ಡ್ ಫಂಕ್ಷನ್ ಟೆಸ್ಟ್ ಕೂಡ ಅಗತ್ಯ. ಮ್ಯಾಮೋಗ್ರಫಿ ಮತ್ತು ಬ್ರೆಸ್ಟ್ ಪರೀಕ್ಷೆಗಳಿಂದ ಸಮಸ್ಯೆಗಳನ್ನು ಬೇಗ ಗುರುತಿಸಬಹುದು. ಪ್ಯಾಪ್ ಸ್ಮಿಯರ್ ಟೆಸ್ಟ್ ಮೂಲಕ ಸರ್ವೈಕಲ್ ಆರೋಗ್ಯವನ್ನು ಪರಿಶೀಲಿಸಬಹುದು. ಜೊತೆಗೆ ಬೋನ್ ಡೆನ್ಸಿಟಿ ಟೆಸ್ಟ್ ಸಹ ಉಪಯುಕ್ತವಾಗಿದೆ.
ಎಷ್ಟು ಬಾರಿ ತಪಾಸಣೆ ಮಾಡಿಸಬೇಕು?
40 ವರ್ಷದ ನಂತರ ವರ್ಷಕ್ಕೆ ಕನಿಷ್ಠ ಒಂದು ಬಾರಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಬೇಕು. ಹೈ ಬ್ಲಡ್ ಪ್ರೆಶರ್ ಅಥವಾ ಡಯಾಬಿಟೀಸ್ ಇರುವವರು ವೈದ್ಯರ ಸಲಹೆಯಂತೆ ಹೆಚ್ಚು ಬಾರಿ ಪರೀಕ್ಷೆ ಮಾಡಿಸಬೇಕು. ನಿಯಮಿತ ತಪಾಸಣೆಗಳು ಉತ್ತಮ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿವೆ. ಅಷ್ಟೇ ಅಲ್ಲ ಇದರಿಂದ ಆರೋಗ್ಯ ಸಮಸ್ಯೆಗಳನ್ನು ಮುಂಚಿತವಾಗಿ ಪತ್ತೆಹಚ್ಚಿ ಅದನ್ನು ತಡೆಗಟ್ಟಬಹುದು.
ಮಂಗಳೂರು, ಮಾರ್ಚ್ 17: ಮೂಡುಬಿದ್ರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದಿರುವ ನಡುವೆ, ಇನ್ಸ್ಪೆಕ್ಟರ್ ಮಹಿಳೆಯೊಂದಿಗೆ ಮಾತನಾಡಿರುವ ಆಡಿಯೋ ಸಂಭಾಷಣೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾನು ಆಕೆಯ ಟಚ್ ಬಿಟ್ಟಿದ್ದೀನಿ, ದೇವರಾಣೆ ನೀನು ಬಿಟ್ರೆ ನನಗೆ ಯಾರೂ ಬೇಡ ಎಂಬಂತಹ ಪದಗಳು ಆಡಿಯೋದಲ್ಲಿದ್ದು, ನೂರಾರು ಮಹಿಳೆಯರಿಗೆ ಸಂದೇಶ್ ಕಿರುಕುಳ ನೀಡಿದ್ದಾರೆ ಎಂಬ ಸಂತ್ರಸ್ತೆಯ ಆರೋಪಗಳಿಗೆ ಇಂಬು ನೀಡುವಂತವೆ. ಹಳೆಯಂಗಡಿಯವಳು ಯಾರು ಅಂತಾ ಮಹಿಳೆ ಸಂದೇಶ್ರನ್ನು ತರಾಟೆಗೆ ಪಡೆದಿದ್ದು, ಟೀಚರ್ ಜೊತೆ ಏನು ಸಂಬಂಧ ಮತ್ತು ಮನೆ ಕೆಲಸದವಳ ಜೊತೆ ಏನು ನಡೀತಿದೆ ಅಂತಲೂ ಪ್ರಶ್ನಿಸಿರೋದು ಆಡಿಯೋದಲ್ಲಿದೆ.
ಇವತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಭವಿಷ್ಯದ ಭದ್ರತೆಗೆ ಇರುವ ಸ್ಕೀಮ್ಗಳಲ್ಲಿ ಇಪಿಎಫ್ ಅಕೌಂಟ್ ಪ್ರಮುಖವಾದುದು. ಪ್ರತೀ ಉದ್ಯೋಗಿಗೂ ಕಂಪನಿ ವತಿಯಿಂದ ಇಪಿಎಫ್ ಅಕೌಂಟ್ ತೆರೆಯಲಾಗುತ್ತದೆ. ಉದ್ಯೋಗಿಯ ಸಂಬಳದಲ್ಲಿ ಶೇ. 12ರಷ್ಟು ಹಣವನ್ನು ಕಡಿತಗೊಳಿಸಿ ಈ ಅಕೌಂಟ್ಗೆ ಹಾಕಲಾಗುತ್ತದೆ. ಕಂಪನಿ (ಉದ್ಯೋಗದಾತರು) ವತಿಯಿಂದಲೂ ಅಷ್ಟೇ ಪ್ರಮಾಣದಲ್ಲಿ ಹಣವು ಇಪಿಎಫ್ ಅಕೌಂಟ್ಗೆ ಸೇರ್ಪಡೆಯಾಗುತ್ತದೆ. ಸರ್ಕಾರದಿಂದ (ಇಪಿಎಫ್ಒ ಸಂಸ್ಥೆ) ಪ್ರತೀ ವರ್ಷ ಇಪಿಎಫ್ ಅಕೌಂಟ್ನಲ್ಲಿರುವ ಹಣಕ್ಕೆ ಬಡ್ಡಿ ಸಂದಾಯ ಆಗುತ್ತದೆ. ಹೀಗೆ ಉದ್ಯೋಗಿ ನಿವೃತ್ತಿಯಾಗುವವರೆಗೂ ಹಣ ಬೆಳೆಯಬೇಕೆನ್ನುವುದು ಉದ್ದೇಶ.
ಇದೇ ವೇಳೆ, ಉದ್ಯೋಗಿಯು ಕಂಪನಿ ಬದಲಿಸಿ ಹೊಸ ಕಂಪನಿ ಸೇರಿದಾಗ ಹೊಸ ಇಪಿಎಫ್ ಅಕೌಂಟ್ ರಚನೆಯಾಗುತ್ತದೆ. ಉದ್ಯೋಗಿಯು ತನ್ನ ವೃತ್ತಿಜೀವನದಲ್ಲಿ ಹಲವು ಕಂಪನಿಗಳಲ್ಲಿ ಕೆಲಸ ಮಾಡಬಹುದಾದ್ದರಿಂದ ಬಹು ಇಪಿಎಫ್ ಅಕೌಂಟ್ಗಳು ಇದ್ದಿರಲು ಸಾಕು. ಕಂಪನಿ ಬದಲಿಸಿದಾಗ ಹಿಂದಿನ ಕಂಪನಿಯ ಇಪಿಎಫ್ ಅಕೌಂಟ್ ಅನ್ನು ವಿಲೀನಗೊಳಿಸಲು ಹೊಸ ಕಂಪನಿಯ ಎಚ್ಆರ್ಗೆ ತಿಳಿಸಿದರೆ ಸುಲಭವಾಗಿ ವಿಲೀನಗೊಳಿಸಬಹುದು. ಇಲ್ಲದಿದ್ದರೆ ಒಬ್ಬ ವ್ಯಕ್ತಿಗೆ ಹಲವು ಇಪಿಎಫ್ ಅಕೌಂಟ್ಗಳು ಇರುತ್ತವೆ.
ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್ಗಳಿದ್ದರೆ ಅವನ್ನು ಇತ್ತೀಚಿನ ಇಪಿಎಫ್ ಅಕೌಂಟ್ಗೆ ವಿಲೀನಗೊಳಿಸಬಹುದು. ಆನ್ಲೈನ್ನಲ್ಲೇ ಸುಲಭವಾಗಿ ಈ ಕೆಲಸ ಮಾಡಬಹುದು. ಹಾಗೆ ಮಾಡಲು ಯುಎಎನ್ ಆ್ಯಕ್ಟಿವೇಟ್ ಆಗಿರಬೇಕು. ಇಪಿಎಫ್ ಅಕೌಂಟ್ಗಳನ್ನು ವಿಲೀನಗೊಳಿಸುವ ಕ್ರಮ ಹೀಗಿದೆ:
ಈಗ ವಿಲೀನಕ್ಕೆ ನೀವು ಅರ್ಜಿ ಸಲ್ಲಿಸಿದಂತಾಗುತ್ತದೆ. ಈ ಅರ್ಜಿಗೆ ನಿಮ್ಮ ಈಗಿನ ಕಂಪನಿಯು ಅನುಮೋದನೆ ನೀಡಬೇಕು. ಆಗ ಈ ಅರ್ಜಿಯನ್ನು ಇಪಿಎಫ್ಒ ಪರಿಶೀಲಿಸಿ, ಇಪಿಎಫ್ ಅಕೌಂಟ್ಗಳನ್ನು ವಿಲೀನಗೊಳಿಸುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಮಹಿಳಾ ಪ್ರಧಾನ ಆ್ಯಕ್ಷನ್ ಕಹಾನಿ ಇರುವ ‘ಪೊಲೀಸ್ ಕಂಪ್ಲೈಂಟ್’ ಸಿನಿಮಾದಲ್ಲಿ ವರಲಕ್ಷ್ಮೀ ಶರತಕುಮಾರ್ ಹಾಗೂ ರಾಗಿಣಿ ದ್ವಿವೇದಿ (Ragini Dwivedi) ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ನವೀನ್ ಚಂದ್ರ, ಕೃಷ್ಣ ಸಾಯಿ ಅವರು ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್, ಶರತ್ ಲೋಹಿತಾಶ್ವ, ಸಪ್ತಗಿರಿ, ಅನಿಲ್ ರಾಜ್, ಪೃಥ್ವಿರಾಜ್, ಜೆಮಿನಿ ಸುರೇಶ್ ಮುಂತಾದ ಕಲಾವಿದರು ನಟಿಸಿದ್ದಾರೆ. ಈ ಹಿಂದೆ ‘ಅನು’, ‘ದಂಡು’, ‘ಆಪ್ತ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದ ಸಂಜೀವ ಮೆಗೋಟಿ ಅವರು ‘ಪೊಲೀಸ್ ಕಂಪ್ಲೈಂಟ್’ (Police Complaint) ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
‘ಎಂ.ಎಸ್.ಕೆ. ಪ್ರಮೀದಾಶ್ರೀ ಫಿಲ್ಮ್ಸ್’ ಬ್ಯಾನರ್ ಮೂಲಕ ‘ಪೊಲೀಸ್ ಕಂಪ್ಲೈಂಟ್’ ಚಿತ್ರ ನಿರ್ಮಾಣವಾಗಿದೆ. ಈಗಾಗಲೇ ಬಹುತೇಕ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಟೀಸರ್ ಮತ್ತು ಹಾಡೊಂದನ್ನು ಬಿಡುಗಡೆ ಮಾಡಿದೆ. ನಟಿ ಪ್ರೇಮಾ ಟೀಸರ್ ರಿಲೀಸ್ ಮಾಡಿದರು. ಮೊದಲ ಹಾಡನ್ನು ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್ ಬಿಡುಗಡೆಗೊಳಿಸಿದರು.
ಈ ವೇಳೆ ನಿರ್ದೇಶಕ ಸಂಜೀವ್ ಮೆಗೋಟಿ ಮಾತನಾಡಿದರು. ‘ಸುಮಾರು 10 ವರ್ಷದ ನಂತರ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಾವು ಮಾಡಿದ ಕರ್ಮ ಹೇಗೆ ನಮ್ಮನ್ನು ಕಾಡುತ್ತದೆ ಎಂಬ ಒಂದು ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಕನ್ನಡ ಮತ್ತು ತೆಲುಗಿನ ಸುಮಾರು 50ಕ್ಕೂ ಹೆಚ್ಚಿನ ಕಲಾವಿದರು ನಟಿಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವ ಯೋಜನೆಯಿದೆ’ ಎಂದು ಅವರು ಹೇಳಿದರು.
ನಟಿ ರಾಗಿಣಿ ದ್ವಿವೇದಿ ಅವರು ‘ಪೊಲೀಸ್ ಕಂಪ್ಲೈಂಟ್’ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ‘ನನ್ನ ವೃತ್ತಿಜೀವನದಲ್ಲಿ ಇದೊಂದು ವಿಭಿನ್ನ ಸಿನಿಮಾ. ಇದರಲ್ಲಿ ತಾಯಿ ಮತ್ತು ಮಗುವಿನ ಸಂಬಂಧದ ಸುತ್ತ ನನ್ನ ಪಾತ್ರ ಸಾಗುತ್ತದೆ. ಆ್ಯಕ್ಷನ್, ಹಾರರ್ ಜತೆಗೆ ಎಮೋಶನ್ಸ್ ಸಹ ಈ ಸಿನಿಮಾದಲ್ಲಿದೆ. ಎಲ್ಲಾ ರೀತಿಯ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗಲಿದೆ’ ಎಂದು ರಾಗಿಣಿ ಹೇಳಿದರು.
‘ಈವರೆಗೆ ತೆಲುಗಿನಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಕನ್ನಡದಲ್ಲಿ ಹೀರೋ ಆಗಿ ಇದು ನನಗೆ ಮೊದಲ ಸಿನಿಮಾ. ಸಿನಿಮಾದ ಕಥೆ ಮತ್ತು ಪಾತ್ರ ತುಂಬಾ ಚೆನ್ನಾಗಿದೆ’ ಎಂದು ಕೃಷ್ಣಸಾಯಿ ಹೇಳಿದರು. ಬಿಡುಗಡೆಯಾಗಿರುವ ಹಾಡಿಗೆ ಆರೋಹಣ ಸುಧೀಂದ್ರ ಸಂಗೀತ ನೀಡಿದ್ದು, ಬಿ.ಆರ್. ಛಾಯಾ ಧ್ವನಿಯಾಗಿದ್ದಾರೆ. ಈ ಸಿನಿಮಾಗೆ ಹರೀಶ್ ಸೊಂಡೇಕೊಪ್ಪ ಛಾಯಾಗ್ರಹಣ ಮಾಡಿದ್ದಾರೆ.
ಚಾಮರಾಜನಗರ, ಮಾರ್ಚ್ 17: ಗಡಿನಾಡು ಚಾಮರಾಜನಗರದಲ್ಲಿ ಮಾನವ ಮತ್ತು ಕಾಡು ಪ್ರಾಣಿ ಸಂಘರ್ಷ ಮತ್ತೆ ಮುಂದುವರೆದಿದೆ. ಕಳೆದ ವಾರ ಮೂರು ಹಸುವನ್ನ ಕೊಂದು ತಿಂದಿದ್ದ 5 ವರ್ಷದ ಹೆಣ್ಣು ಹುಲಿ (tiger) ವಿದ್ಯುತ್ ಶಾಕ್ಗೆ ಬಲಿಯಾಗಿರುವಂತಹ (death) ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ. ಜಾನುವಾರು ಸತ್ತಾಗ ಬಾರದ ಅರಣ್ಯ ಸಿಬ್ಬಂದಿ ಇದೀಗ ಹುಲಿ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಓಡೋಡಿ ಬಂದಿದ್ದ ಅರಣ್ಯಾಧಿಕಾರಿಗಳಿಗೆ ರೈತರು ಚಳಿ ಕೂಡ ಬಿಡಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗೆ ಘೇರಾವ್ ಹಾಕಿದ ಅನ್ನದಾತರು
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಜಮೀನು ಒಂದಕ್ಕೆ ನೀಡಿದ್ದ ವಿದ್ಯುತ್ ಸಂಪರ್ಕದಿಂದ 5 ವರ್ಷ ಪ್ರಾಯದ ಹೆಣ್ಣು ಹುಲಿ ಸಾವನ್ನಪ್ಪಿದೆ. ಈ ಹಿನ್ನಲೆ ಸ್ಥಳಕ್ಕೆ ಬಂದ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿಗೆ ಘೇರಾವ್ ಹಾಕಿ ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಕಳೆದ 15 ದಿನಗಳಲ್ಲಿ ರವಿಚಂದ್ರ ಎಂಬುವವರ ಜಮೀನಿನಲ್ಲಿ ಮೇಯುತ್ತಿದ್ದ ಮೂರು ಜಾನುವಾರುಗಳ ಮೇಲೆ ವ್ಯಾಘ್ರ ದಾಳಿ ಮಾಡಿತ್ತು. ಮೂರು ಹಸುವನ್ನ ಕೊಂದು ತಿಂದು ತೇಗಿತ್ತು. ಆಗ ಬಂಡೀಪುರ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದರೆ ಸ್ಥಳಕ್ಕೆ ಬಾರದೆ ಉಡಾಫೆ ತೋರಿದ್ದರು. ಆದರೆ ಇಂದು ಹುಲಿ ಸತ್ತ ವಿಚಾರ ತಿಳಿದ ತಕ್ಷಣ ಇಡೀ ಬಂಡೀಪುರ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ಇದರಿಂದ ರೊಚ್ಚಿಗೆದ್ದ ರೈತ ವರ್ಗ ಅರಣ್ಯ ಸಿಬ್ಬಂದಿಗೆ ಘೇರಾವ್ ಹಾಕಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಹುಲಿಯ ಕಾಟಕ್ಕೆ ಈ ಭಾಗದ ರೈತರು ರೋಸಿಹೋಗಿದ್ದಾರೆ. ಆಗಲೇ ಅರಣ್ಯ ಸಿಬ್ಬಂದಿ ಬೋನಿಟ್ಟು ಹುಲಿಯನ್ನ ಹಿಡಿದಿದ್ದರೆ ಇಂದು ಹುಲಿ ಬಲಿಯಾಗುತ್ತಿರಲಿಲ್ಲ ಎಂದು ರೈತ ದಿನೇಶ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಜಮೀನಿನಲ್ಲಿ ವಿದ್ಯುತ್ ಕೊಟ್ಟು ಹುಲಿ ಸಾವಿಗೆ ಕಾರಣವಾದವರ ಮೇಲೆ ಎಫ್ಐಆರ್ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಿ, ಆದರೆ ಕರ್ತವ್ಯ ಲೋಪ ಎಸಗಿದ ಅರಣ್ಯ ಇಲಾಖೆಯ ಸಿಎಫ್ ಪ್ರಭಾಕರನ್ ಮೇಲೆ ಎಫ್ ಐ ಆರ್ ಮಾಡಿದರೆ ಮಾತ್ರ ರೈತನ ಮೇಲೆ ಎಫ್ಐಆರ್ ಮಾಡಬೇಕು. ಇಲ್ಲದೆ ಹೋದರೆ ಯಾವುದೇ ಕಾರಣಕ್ಕೂ ಪ್ರಕರಣ ದಾಖಲು ಮಾಡುವುದಕ್ಕೆ ಬಿಡಲ್ಲವೆಂದು ರೈತರು ಪಟ್ಟುಹಿಡಿದರು. ರೈತರ ಉಗ್ರ ರೂಪಕ್ಕೆ ಬೆದರಿದ ಬಂಡೀಪುರ ಸಿಎಫ್ ಪ್ರಭಾಕರನ್, ಪೊಲೀಸ್ ರಕ್ಷಣೆ ಜೊತೆ ಸ್ಥಳಕ್ಕೆ ಬಂದಿದ್ದು ಹಾಸ್ಯಸ್ಪದವಾಗಿತ್ತು.
ಬೆಂಗಳೂರು, ಮಾರ್ಚ್ 17: ಆಧುನಿಕ ಕನ್ನಡ ಸಾಹಿತ್ಯದ ಸರ್ವಜ್ಞ, ಸಾಹಿತ್ಯ ದಿಗ್ಗಜ ಡಿ.ವಿ. ಗುಂಡಪ್ಪನವರು ಕೇವಲ ಸಾಹಿತಿಯಷ್ಟೇ ಅಲ್ಲದೆ ಪತ್ರಕರ್ತರ ಹಿತರಕ್ಷಣೆಗಾಗಿ 95 ವರ್ಷಗಳ ಹಿಂದೆಯೇ ಸಂಘಟನೆಯನ್ನು ಕಟ್ಟಿದ ದೂರದರ್ಶಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ.
ನಗರದಲ್ಲಿ ನಡೆದ ಬೆಂಗಳೂರು ಜಿಲ್ಲಾ ಘಟಕದ ನೂತನ ಕಚೇರಿ ಪೂಜೆ ಹಾಗೂ ಡಿ.ವಿ.ಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡಿ.ವಿ.ಜಿ ಅವರು ಅಂದು ಹಾಕಿಕೊಟ್ಟ ಅಡಿಪಾಯದ ಮೇಲೆ ಇಂದು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ ಹೆಮ್ಮರವಾಗಿ ಬೆಳೆದಿದೆ. ಸುಮಾರು 10,000 ಸದಸ್ಯರನ್ನು ಹೊಂದಿರುವ ಇದು ದೇಶದ ಅತಿದೊಡ್ಡ ಸಂಘಟನೆಗಳಲ್ಲಿ ಒಂದಾಗಿದೆ. ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣ ಸಮಿತಿಯ ಶಿಫಾರಸಿನ ಮೇರೆಗೆ ಹುಬ್ಬಳ್ಳಿಯಲ್ಲಿ ನಡೆದ ಸಮ್ಮೇಳನದಲ್ಲಿ ಈ ಸಂಘಕ್ಕೆ ಮರುನಾಮಕರಣ ಮಾಡಲಾಗಿದೆ ಎಂದು ಹೇಳುವ ಮೂಲಕ ಇತಿಹಾಸವನ್ನು ತಗಡೂರು ಸ್ಮರಿಸಿದ್ದಾರೆ.
ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯದ (ಕಂದಾಯ) ಸದಸ್ಯ ಕೆ.ಎಚ್. ಅಶ್ವತ್ಥನಾರಾಯಣ ಮಾತನಾಡಿ, ಡಿ.ವಿ.ಜಿ ಪ್ರೌಢಶಾಲೆವರೆಗೆ ಓದಿದ್ದರೂ ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಅವರು ಹೊಂದಿದ್ದ ಪಾಂಡಿತ್ಯ ಅಪ್ರತಿಮವಾದುದು. ಅವರ ‘ಮಂಕುತಿಮ್ಮನ ಕಗ್ಗ’ ಕೃತಿಯು ಸಮಾಜದ ಪ್ರತಿಯೊಂದು ಸಮಸ್ಯೆಗೆ ಪರಿಹಾರ ನೀಡುವ ಶಕ್ತಿ ಹೊಂದಿವೆ ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ದೇಶಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಹೇಗೋ, ಪತ್ರಕರ್ತರು ಮತ್ತು ಸಾಮಾನ್ಯ ಜನರ ಬದುಕಿಗೆ ಡಿ.ವಿ.ಜಿ ಅವರ ‘ಮಂಕುತಿಮ್ಮನ ಕಗ್ಗ’ ಸಂವಿಧಾನದಂತಿದೆ ಎಂದು ಕೊಂಡಾಡಿದ್ದಾರೆ.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಹಿರಿಯ ಪತ್ರಕರ್ತ ಭೋಪಯ್ಯ ಭಾಗವಹಿಸಿದ್ದರು. ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ಬೆಂಗಳೂರು ನಗರ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷರಾದ ಎಸ್.ಸೋಮಶೇಖರ ಗಾಂಧಿ ಸ್ವಾಗತಿಸಿದರು. ಬೆಂಗಳೂರು ನಗರ ಜಿಲ್ಲೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರವೀಶ್ ವಂದನಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಘಟಕದ ಕಚೇರಿಯಲ್ಲಿ ವಿದ್ಯುಕ್ತವಾಗಿ ಪೂಜೆ ಸಲ್ಲಿಸಿದ ನೂತನ ಪದಾಧಿಕಾರಿಗಳು ಸಂಘದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದರು.
ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಮಾರ್ನಸ್ ಲಬುಶೇನ್ ಮೊದಲ ಬಾರಿಗೆ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಆಡುತ್ತಿದ್ದು, ಬಯಸದೆ ಬಂದ ಭಾಗ್ಯವೆಂಬಂತೆ ತಮ್ಮ ಮೊದಲ ಸೀಸನ್ನಲ್ಲಿಯೇ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಲಬುಶೇನ್ ಹೈದರಾಬಾದ್ ಕಿಂಗ್ಸ್ಮೆನ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ.
ಪಾಕಿಸ್ತಾನ ಸೂಪರ್ ಲೀಗ್ನ ಈ ಹೊಸ ತಂಡದ ಜವಾಬ್ದಾರಿಯನ್ನು ಮಾರ್ನಸ್ ಲಬುಶೇನ್ ವಹಿಸಿಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿ ಘೋಷಿಸಿದೆ. ವಾಸ್ತವವಾಗಿ ಮಾರ್ನಸ್ ಲಬುಶೇನ್ ಅವರಿಗೆ ಟಿ20 ಕ್ರಿಕೆಟ್ನಲ್ಲಿ ಹೆಚ್ಚಿನ ಅನುಭವವಿಲ್ಲ. ಅದರಲ್ಲೂ ಫ್ರಾಂಚೈಸ್ ಕ್ರಿಕೆಟ್ನಲ್ಲಿ ಲಬುಶೇನ್ ಕೇವಲ ಬಿಗ್ ಬ್ಯಾಷ್ ಲೀಗ್ನಲ್ಲಿ ಆಡಿದ್ದು, ಇದಲ್ಲದೆ, ಅವರು ಇಂಗ್ಲೆಂಡ್ನ ಟಿ20 ಬ್ಲಾಸ್ಟ್ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದಾರೆ.
ಲಬುಶೇನ್ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ಉತ್ತಮ ಆಟಗಾರ, ಆದರೆ ಟಿ20 ಕ್ರಿಕೆಟ್ನಲ್ಲಿ ಅವರದ್ದು ದೊಡ್ಡ ಹೆಸರಲ್ಲ. ತಮ್ಮ ವೃತ್ತಿಜೀವನದಲ್ಲಿ ಕೇವಲ 55 ಟಿ20 ಪಂದ್ಯಗಳನ್ನು ಆಡಿರುವ ಲಬುಶೇನ್ 26.5 ಸರಾಸರಿಯಲ್ಲಿ 1381 ರನ್ ಗಳಿಸಿದ್ದಾರೆ. ಇದರಲ್ಲಿ ಕೇವಲ 8 ಅರ್ಧಶತಕಗಳು ಸೇರಿವೆ.
ಅಚ್ಚರಿಯ ಸಂಗತಿಯೆಂದರೆ ಹೈದರಾಬಾದ್ ಕಿಂಗ್ಸ್ಮೆನ್ ತಂಡದಲ್ಲಿ ಟಿ20 ಕ್ರಿಕೆಟ್ನ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಇದ್ದಾರಾದರೂ ಅವರಿಗೆ ನಾಯಕತ್ವವನ್ನು ನೀಡಲಾಗಿಲ್ಲ. ಮ್ಯಾಕ್ಸ್ವೆಲ್ ಇಡೀ ಸೀಸನ್ಗೆ ಲಭ್ಯವಿಲ್ಲದಿರುವ ಸಾಧ್ಯತೆಯಿದೆ, ಅದಕ್ಕಾಗಿಯೇ ಲಬುಶೇನ್ ಅವರಿಗೆ ನಾಯಕತ್ವವನ್ನು ನೀಡಲಾಗಿದೆ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ… ಮತ್ತೆ ಯುಗಾದಿ ಬಂದಿದೆ.. ಹೊಸ ಆರಂಭ, ಹೊಸ ವರ್ಷ, ಶುದ್ಧತೆ, ಹೊಸ ನಿರೀಕ್ಷೆ ಮತ್ತು ಸಮೃದ್ಧಿಯ ಸಂಕೇತವಾಗಿ ಯುಗಾದಿ (Ugadi) ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂಗಳ ಈ ಪವಿತ್ರ ಹಬ್ಬದ ದಿನ ದೇವರ ಪೂಜಾ ಕಾರ್ಯದ ಜೊತೆಗೆ ಮನೆಮಂದಿಯೆಲ್ಲಾ ಬೇವು ಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಸ್ನೇಹಿತರು, ಸಂಬಂಧಿಕರಿಗೂ ಬೇವು-ಬೆಲ್ಲವನ್ನು ಹಂಚುತ್ತಾರೆ. ಹೌದು ಸಂಕ್ರಾಂತಿ ಹಬ್ಬದಂದು ಎಳ್ಳು ಬೆಲ್ಲ ಸವಿಯುವ ಹಾಗೆ ಯುಗಾದಿ ಹಬ್ಬದಂದು ಬೇವು ಬೆಲ್ಲ ಸೇವಿಸುವ ಆಚರಣೆ ರೂಢಿಯಲ್ಲಿದೆ. ಇದು ಕೇವಲ ಆಚರಣೆಯಲ್ಲ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಬೇವು-ಬೆಲ್ಲವನ್ನು ಸವಿಯುವುದರ ಹಿಂದಿರುವ ವೈಜ್ಞಾನಿಕ ಕಾರಣವೇನು ಎಂಬುದನ್ನು ತಿಳಿಯೋಣ ಬನ್ನಿ.
ಬೇವು-ಬೆಲ್ಲದ ಆಧ್ಯಾತ್ಮಿಕ ಮಹತ್ವವೇನು?
ನೋವು-ನಲಿವನ್ನು ಸಂಕೇತಿಸುತ್ತದೆ: ಕಹಿ ಬೇವು ಮತ್ತು ಸಿಹಿ ಬೆಲ್ಲವು ಜೀವನದ ದ್ವಂದ್ವ ಸ್ವಭಾವವನ್ನು ಸಂಕೇತಿಸುತ್ತದೆ. ಸಂತೋಷ ಮತ್ತು ದುಃಖ, ಸವಾಲುಗಳು ಮತ್ತು ಯಶಸ್ಸು ಎಲ್ಲವನ್ನು ಬೇವು ಬೆಲ್ಲದಂತೆ ಸಮಾನವಾಗಿ ಸ್ವೀಕರಿಸಬೇಕು ಜೀವನವು ಕಹಿ ಮತ್ತು ಸಿಹಿ ಅನುಭವಗಳ ಮಿಶ್ರಣವಾಗಿದ್ದು, ಈ ಎರಡನ್ನೂ ಸಮಾನವಾಗಿ ಸ್ವೀಕರಿಸುವುದರಿಂದ ಜೀವನವು ಸಂತೋಷದಿಂದ ಸಾಗುತ್ತದೆ ಎಂಬುದನ್ನು ಸಂಕೇತಿಸುತ್ತದೆ.
ಶುಭ ಆರಂಭದ ಸಂಕೇತ: ಹಿಂದೂ ಸಂಪ್ರದಾಯದಲ್ಲಿ, ಬೇವನ್ನು ದೈವಿಕ ಗುಣಗಳನ್ನು ಹೊಂದಿರುವ ಪವಿತ್ರ ಮರವೆಂದು ಪರಿಗಣಿಸಲಾಗುತ್ತದೆ. ಇದನ್ನು ಬೆಲ್ಲದೊಂದಿಗೆ ಪ್ರಸಾದವಾಗಿ ಅರ್ಪಿಸುವುದು ಶುದ್ಧೀಕರಣ ಮತ್ತು ಹೊಸ ವರ್ಷದ ಆಶೀರ್ವಾದದ ಆರಂಭವನ್ನು ಸೂಚಿಸುತ್ತದೆ. ಇದು ನಕಾರಾತ್ಮಕತೆಯನ್ನು ಶುದ್ಧೀಕರಿಸುತ್ತದೆ ಮತ್ತು ಸಕಾರಾತ್ಮಕತೆಯನ್ನು ಆಕರ್ಷಿಸುತ್ತದೆ, ಮುಂಬರುವ ವರ್ಷವನ್ನು ಸಮೃದ್ಧಗೊಳಿಸುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಹೊಸ ವರ್ಷವಾದ ಯುಗಾದಿ ಹಬ್ಬದ ದಿನ ಬೇವು ಬೆಲ್ಲವನ್ನು ಸ್ವೀಕರಿಸಲಾಗುತ್ತದೆ.
ಬೇವು ಬೆಲ್ಲದ ಸೇವನೆಯ ವೈಜ್ಞಾನಿಕ ಮಹತ್ವವೇನು?
ಯುಗಾದಿ ಹಬ್ಬದ ದಿನದಿಂದ ವಸಂತ ಕಾಲ ಆರಂಭವಾಗುತ್ತದೆ. ಈ ಸಮಯದಲ್ಲಿ ಸೂರ್ಯನ ಪ್ರಖರತೆ ಹೆಚ್ಚಾದಂತೆ ವಾತಾವರಣವು ಒಣಗಿ, ಬಿಸಿಲಿನಿಂದ ಕೂಡಿ, ಬೆಚ್ಚಗಾಗುತ್ತದೆ ಮತ್ತು ಸೂರ್ಯನ ಶಾಖದ ಪ್ರಭಾವದಿಂದಾಗಿ ದೇಹದಲ್ಲಿ ಪಿತ್ತರದ ಅಂಶವೂ ಹೆಚ್ಚಾಗುತ್ತದೆ. ಇದರಿಂದಾಗಿ ಹೊಟ್ಟೆ ಸಂಬಂಧಿ ಕಾಯಿಲೆಗಳು, ಬಾಯಿ ಹುಣ್ಣು, ವಾಂತಿ, ಎದೆಯುರಿ, ಅತಿಯಾದ ಬೆವರುವಿಕೆ, ತುರಿಕೆ ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಗಳನ್ನು ತಡೆಗಟ್ಟಲು, ಅತಿಯಾದ ಪಿತ್ತರಸದ ಅಂಶವನ್ನು ಕಡಿಮೆ ಮಾಡಲು ಮತ್ತು ರೋಧನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯುಗಾದಿ ಹಬ್ಬದಂದು ಬೇವು ಬೆಲ್ಲವನ್ನು ಸೇವನೆ ಮಾಡಲಾಗುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಬೇವು-ಬೆಲ್ಲದ ಮಿಶ್ರಣವು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ದೇಹವನ್ನು ತಂಪಾಗಿಸುತ್ತದೆ: ಕಹಿಯಾದ ಬೇವನ್ನು ಸಿಹಿಯಾದ ಬೆಲ್ಲದೊಂದಿಗೆ ಸೇವಿಸಿದಾಗ, ದೇಹದಲ್ಲಿನ ಪಿತ್ತರಸ ಅಂಶವು ಕಡಿಮೆಯಾಗುತ್ತದೆ ಮತ್ತು ಇದು ದೇಹವನ್ನು ತಂಪಾಗಿಸುತ್ತದೆ.
ಬೇವು ದೇಹವನ್ನು ನಿರ್ವಿಷಗೊಳಿಸುತ್ತದೆ: ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ವಿಷವನ್ನು ತೆಗೆದುಹಾಕುತ್ತದೆ, ಚರ್ಮ ಮತ್ತು ಜೀರ್ಣಕ್ರಿಯೆಯ ಆರೋಗ್ಯವನ್ನು ಉತ್ತೇಜಿಸುತ್ತದೆ.
ಬೇವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ: ಬೇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ.
ಬೆಲ್ಲಜೀರ್ಣಕ್ರಿಯೆಗೆಸಹಾಯ ಮಾಡುತ್ತದೆ: ಬೆಲ್ಲ ನೈಸರ್ಗಿಕ ಜೀರ್ಣಕಾರಿ ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ, ಆಮ್ಲೀಯತೆ ಮತ್ತು ಉಬ್ಬುವಿಕೆಯನ್ನು ತಡೆಯುತ್ತದೆ.
ಬೆಲ್ಲ ಕಬ್ಬಿಣದಿಂದ ಸಮೃದ್ಧವಾಗಿದೆ: ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ರಕ್ತಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಬೆಲ್ಲ ತ್ವರಿತ ಶಕ್ತಿಯನ್ನು ಒದಗಿಸುತ್ತದೆ: ಬೆಲ್ಲವು ನೈಸರ್ಗಿಕ ಶಕ್ತಿಯ ಮೂಲವಾಗಿದ್ದು, ಇದು ಬೇಸಿಗೆಯಲ್ಲಿ ದೇಹ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಗಾಯಗಳನ್ನು ಗುಣಪಡಿಸುತ್ತದೆ: ಬೇವು ಬೆಲ್ಲದ ಮಿಶ್ರಣವು ಉರಿಯೂತ ನಿವಾರಕ ಗುಣಗಳನ್ನು ಹೊಂದಿರುವುದರಿಂದ, ಇದು ಗಾಯಗಳನ್ನು ಗುಣಪಡಿಸುತ್ತದೆ ಮತ್ತು ಅವುಗಳನ್ನು ಬೇಗನೆ ಗುಣಪಡಿಸುತ್ತದೆ.
ಪ್ರಸ್ತುತ ವಿಶ್ವ ಕ್ರಿಕೆಟ್ನ ಬೆಸ್ಟ್ ಆಲ್ರೌಂಡರ್ ಯಾರು ಎಂಬು ಪ್ರಶ್ನೆ ಬಂದರೆ ಅದಕ್ಕೆ ಹಲವರ ಉತ್ತರ ಹಾರ್ದಿಕ್ ಪಾಂಡ್ಯ ಎಂದಾಗಿರುವುದರಲ್ಲಿ ಅನುಮಾನವಿಲ್ಲ. ಸೀಮಿತ ಓವರ್ಗಳಲ್ಲಿ ಹಾರ್ದಿಕ್ರಂತಹ ಪರಿಣಾಮಕಾರಿ ಆಲ್ರೌಂಡರ್ ಮತ್ತೊಬ್ಬರಿಲ್ಲ. ಭಾರತ ತಂಡ ಎರಡೆರಡು ಟಿ20 ವಿಶ್ವಕಪ್ ಗೆಲ್ಲುವಲ್ಲಿ ಹಾರ್ದಿಕ್ ಪಾಂಡ್ಯ ಕೊಡುಗೆ ಅಪಾರ. ಇಂತಹ ಹಾರ್ದಿಕ್ ಪಾಂಡ್ಯ ತನ್ನ ಆದರ್ಶ ವ್ಯಕ್ತಿಯನ್ನು ಬದಲಾಯಿಸಿದ್ದಾರೆ.
ವಾಸ್ತವವಾಗಿ ಕ್ರಿಕೆಟ್ನ ಆರಂಭಿಕ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ಬಳಿ ನಿಮ್ಮ ಐಡಲ್ ಯಾರು ಎಂಬ ಪ್ರಶ್ನೆ ಕೇಳಿದರೆ ಅವರಿಂದ ಬರುತ್ತಿದ್ದ ಉತ್ತರ, ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಆಗಿತ್ತು. ಹಾರ್ದಿಕ್ ಹಲವು ಬಾರಿ ಪಠಾಣ್ ಅವರ ಹೆಸರನ್ನು ಪುನರುಚ್ಚರಿಸಿದ್ದಾರೆ. ಆದರೆ ಇದೀಗ ಹಾರ್ದಿಕ್ ಅವರ ಐಡಲ್ ಬದಲಾಗಿದ್ದಾರೆ.
2015 ರಲ್ಲಿ ಕ್ರಿಕ್ಟ್ರಾಕರ್ಗೆ ನೀಡಿದ ಸಂದರ್ಶನದಲ್ಲಿ ಹಾರ್ದಿಕ್ ಪಾಂಡ್ಯ ಅವರು ಇರ್ಫಾನ್ ಪಠಾಣ್ ಅವರನ್ನು ತಮ್ಮ ಐಡಲ್ ಎಂದು ಉಲ್ಲೇಖಿಸಿದ್ದರು. ಇದಕ್ಕೆ ಕಾರಣವನ್ನು ನೀಡಿದ್ದ ಹಾರ್ದಿಕ್, ‘ಇರ್ಫಾನ್ ಪಠಾಣ್, ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೂಡ ಮಾಡುತ್ತಾರೆ. ಹೀಗಾಗಿ ಅವರು ಬೆಸ್ಟ್ ಸರಿಯಾದ ಆಲ್ರೌಂಡರ್. ಆದ್ದರಿಂದ ನಾನು ಬಾಲ್ಯದಿಂದಲೂ ಅವರನ್ನು ಅನುಸರಿಸುತ್ತಿದ್ದೇನೆ. ಅವರಂತೆಯೇ, ನಾನು ಕೂಡ ಆಲ್ರೌಂಡರ್. ಬರೋಡಾ ಪರ ಆಡುವಾಗ ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ’ ಎಂದಿದ್ದರು.
ಆದರೆ 11 ವರ್ಷಗಳ ನಂತರ ಅಂದರೆ 2026 ರಲ್ಲಿ, ಹಾರ್ದಿಕ್ ಪಾಂಡ್ಯ ಅವರನ್ನು ನಿಮ್ಮ ಐಡಲ್ ಯಾರು ಎಂದು ಮತ್ತೆ ಕೇಳಿದಾಗ, ಅವರ ಉತ್ತರ ವಿಭಿನ್ನವಾಗಿತ್ತು. ಈ ಬಾರಿ, ಇರ್ಫಾನ್ ಪಠಾಣ್ ಬದಲಿಗೆ, ಅವರು ವಾಸಿಂ ಜಾಫರ್ ಎಂದು ಹೆಸರಿಸಿದರು. ಬಿಸಿಸಿಐನ ನಮನ್ ಪ್ರಶಸ್ತಿ ಸಮಾರಂಭದಲ್ಲಿ ಹಾರ್ದಿಕ್ ಪಾಂಡ್ಯ ಈ ಹೇಳಿಕೆ ನೀಡಿದ್ದು, ‘ದೇಶೀಯ ಕ್ರಿಕೆಟ್ನಲ್ಲಿ ಜಾಫರ್ ಅವರ ಸ್ಥಿರ ಪ್ರದರ್ಶನವು ಯಾವಾಗಲೂ ನನಗೆ ಸ್ಫೂರ್ತಿ ನೀಡಿದೆ’ ಎಂದು ಪಾಂಡ್ಯ ಹೇಳಿದರು.
ಈಗ ಪ್ರಶ್ನೆ ಏನೆಂದರೆ ಹಾರ್ದಿಕ್, ಇರ್ಫಾನ್ ಪಠಾಣ್ ಅವರ ಹೆಸರನ್ನು ಕೈಬಿಟ್ಟಿದ್ಯಾಕೆ ಎಂಬುದು. ಇದಕ್ಕೆ ಕಾರಣ, ಸಂದರ್ಶನವೊಂದರಲ್ಲಿ ಇರ್ಫಾನ್ ಪಠಾಣ್ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ, ಹಾರ್ದಿಕ್ ಪಾಂಡ್ಯ ಅವರ ದೂರಿನ ಆಧಾರದ ಮೇಲೆ 2025 ರ ಐಪಿಎಲ್ನಲ್ಲಿ ತಮ್ಮನ್ನು ವೀಕ್ಷಕ ವಿವರಣೆಗಾರನ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದಿದ್ದರು. ಇದು ಇಬ್ಬರ ನಡುವಿನ ಬಿರುಕುಗೆ ಕಾರಣವಾಗಿರಬಹುದು.
ಇದಕ್ಕೂ ಮೊದಲು, 2021 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಸಮಯದಲ್ಲಿ, ಪಾಂಡ್ಯ ಸಹೋದರರ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿ ದೀಪಕ್ ಹೂಡಾ ಬರೋಡಾ ತಂಡವನ್ನು ತೊರೆದಿದ್ದರು. ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಕೂಡ ದೀಪಕ್ ಹೂಡಾ ಅವರನ್ನು ಅಮಾನತುಗೊಳಿಸಿತ್ತು. ಈ ಕ್ರಮವನ್ನು ಪಠಾಣ್ ಸಹೋದರರು ತೀವ್ರವಾಗಿ ಖಂಡಿಸಿದ್ದರು.
ಈ ಘಟನೆಗಳ ಹೊರತಾಗಿ, ಇರ್ಫಾನ್ ಪಠಾಣ್ ಸಾಮಾಜಿಕ ವೇದಿಕೆಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಟೀಕಿಸಿದ್ದಾರೆ. ಬಹುಶಃ ಇದರಿಂದಾಗಿಯೇ ಹಾರ್ದಿಕ್, ಇರ್ಫಾನ್ ಪಾಂಡ್ಯ ಅವರನ್ನು ತಮ್ಮ ಆದರ್ಶ ವ್ಯಕ್ತಿ ಎಂದು ಪರಿಗಣಿಸದಿರಲು ಪ್ರಮುಖ ಕಾರಣವಾಗಿರಬಹುದು.