ಶುರುವಾಗಿದೆ ‘ಮಾರ್ಕ್’ ಸಿನಿಮಾ ಅಡ್ವನ್ಸ್ ಬುಕಿಂಗ್: ಹೈಪ್ ಹೇಗಿದೆ? – Kannada News | Sudeep starrer Mark movie advance booking open for special show

ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಸಹ ಇದೇ ಡಿಸೆಂಬರ್​​ನಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ಸಹ ಕನ್ನಡದ ಬಹು ನಿರೀಕ್ಷಿತ ಸಿನಿಮಾ ಆಗಿದೆ. ಡಿಸೆಂಬರ್ 25ರಂದು ಸಿನಿಮಾ ತೆರೆಗೆ ಬರಲಿದೆ. ಸಿನಿಮಾದ ಟ್ರೈಲರ್ ಡಿಸೆಂಬರ್ 7ಕ್ಕೆ ಬಿಡುಗಡೆ ಆಗಲಿದೆ.

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸುದೀಪ್ ನಿರತರಾಗಿದ್ದಾರೆ. ಸಿನಿಮಾನಲ್ಲಿ ನಟಿಸಿರುವ ಜೊತೆಗೆ ಸಿನಿಮಾಕ್ಕೆ ಸಹ ನಿರ್ಮಾಪಕರೂ ಆಗಿದ್ದಾರೆ ಕಿಚ್ಚ ಸುದೀಪ್. ಸೂಪರ್ ಹಿಟ್ ‘ಮ್ಯಾಕ್ಸ್’ ಸಿನಿಮಾದ ತಂತ್ರಜ್ಞರ ತಂಡವೇ ‘ಮಾರ್ಕ್’ ಸಿನಿಮಾಕ್ಕೂ ಜೊತೆಯಾಗಿದೆ. ಸಿನಿಮಾ ಬಿಡುಗಡೆಗೆ ಇನ್ನೂ ನಾಲ್ಕು ದಿನಗಳು ಇರುವಂತೆಯೇ ಸಿನಿಮಾದ ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಮಾತ್ರವಲ್ಲದೆ ಬುಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಮಾರ್ನಿಂಗ್ ಶೋಗಳು ಹೌಸ್​​ಫುಲ್ ಸಹ ಆಗುತ್ತಿವೆ.

‘ಮಾರ್ಕ್’ ಸಿನಿಮಾದ ಫ್ಯಾನ್ಸ್ ಶೋ ಟಿಕೆಟ್ ಬುಕಿಂಗ್ ಮಾತ್ರವೇ ಓಪನ್ ಆಗಿದೆ. ಬೆಂಗಳೂರು, ಮೈಸೂರು ಇನ್ನೂ ಕೆಲವು ಕಡೆಗಳಲ್ಲಿ ‘ಮಾರ್ಕ್’ ಸಿನಿಮಾದ ವಿಶೇಷ ಶೋ ಅನ್ನು ಬೆಳಿಗ್ಗೆ 6 ಗಂಟೆ ವೇಳೆಗೆ ಪ್ರದರ್ಶನ ಮಾಡಲಾಗುತ್ತಿದ್ದು, ಪ್ರಸ್ತುತ ಈ ವಿಶೇಷ ಶೋನ ಟಿಕೆಟ್​​ಗಳು ಮಾತ್ರವೇ ಮುಂಗಡ ಬುಕಿಂಗ್​​ಗೆ ಲಭ್ಯವಿದೆ. ವೀರೇಶ್, ಸಿದ್ಧೇಶ್ವರ, ನವರಂಗ್, ಸಂತೋಷ್, ಶ್ರೀನಿವಾಸ್, ಸೌಂದರ್ಯ (ದೊಡ್ಡಬಳ್ಳಾಪುರ) ಇನ್ನೂ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಈಗಾಗಲೇ ‘ಮಾರ್ಕ್’ ಸಿನಿಮಾದ ಮಾರ್ನಿಂಗ್ ಶೋ ಟಿಕೆಟ್ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿವೆ.

ಇದನ್ನೂ ಓದಿ:ಅಪ್ಪನ ಸಿನಿಮಾ ಮೂಲಕ ವಿತರಕಿ ಆದ ಸುದೀಪ್ ಪುತ್ರಿ

ಬೆಂಗಳೂರಿನಲ್ಲಿ ಮಾತ್ರವೇ ಅಲ್ಲ, ಮೈಸೂರು, ಚಿತ್ರದುರ್ಗ, ತುಮಕೂರು, ಕೋಲಾರ, ಶಿವಮೊಗ್ಗ ಇನ್ನೂ ಕೆಲವು ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳ ಚಿತ್ರಮಂದಿರಗಳಲ್ಲಿ ‘ಮಾರ್ಕ್’ ಸಿನಿಮಾದ ಅರ್ಲಿ ಮಾರ್ನಿಂಗ್ ಶೋ ಅನ್ನು ಪ್ರದರ್ಶನ ಮಾಡಲಾಗುತ್ತಿದ್ದು, ಅಡ್ವಾನ್ಸ್ ಬುಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಟಿಕೆಟ್​​ಗಳು ಸೋಲ್ಡ್ ಔಟ್ ಆಗಿವೆ. ಅದರಲ್ಲೂ ಈ ವಿಶೇಷ ಶೋಗೆ ಟಿಕೆಟ್ ದರವನ್ನೂ ಸಹ ಹೆಚ್ಚು ಮಾಡಲಾಗಿದೆ. ವಿಶೇಷ ಶೋಗೆ 400 ರೂಪಾಯಿ, ಕೆಲವು ಚಿತ್ರಮಂದಿರಗಳಲ್ಲಿ 500 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.

‘ಮಾರ್ಕ್’ ಸಿನಿಮಾ ಡಿಸೆಂಬರ್ 25 ಕ್ಕೆ ಬಿಡುಗಡೆ ಆಗುತ್ತಿದ್ದು, ಅದೇ ದಿನ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ. ಆದರೆ ಸುದೀಪ್ ಹಾಗೂ ತಂಡ ಜಾಣತನದಿಂದ ಅಡ್ವಾನ್ಸ್ ಬುಕಿಂಗ್ ಮೊದಲೇ ಓಪನ್ ಮಾಡಿದ್ದಾರೆ ಮಾತ್ರವಲ್ಲದೆ ಬೆಳಿಗ್ಗೆ 6 ಗಂಟೆಯ ವಿಶೇಷ ಶೋ ಪ್ರದರ್ಶನವನ್ನು ಸಹ ಮಾಡುವುದರ ಮೂಲಕ ಹೆಚ್ಚಿನ ಗಳಿಕೆಯ ಭರವಸೆ ಮೂಡಿಸಿದ್ದಾರೆ. ‘ಮಾರ್ಕ್’ ಸಿನಿಮಾನಲ್ಲಿ ಸುದೀಪ್ ಜೊತೆಗೆ ಶೈನ್ ಟಾಮ್ ಚಾಕೊ, ಯೋಗಿ ಬಾಬು ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ವಿಜಯ್ ಕಾರ್ತಿಕೇಯ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:22 pm, Sat, 20 December 25

Source link

‘ಈ ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ’ ಎಂದಿದ್ದ ಉಪ್ಪಿ; ಶಿವಣ್ಣನ ರಿಯಾಕ್ಷನ್ ಹೇಗಿತ್ತು?

ಶಿವರಾಜ್​ಕುಮಾರ್ ಅವರು ‘ಓಂ’ ಸಿನಿಮಾದಲ್ಲಿ ನಟಿಸಿದ್ದಾರೆ. ಉಪೇಂದ್ರ ಈ ಚಿತ್ರಕ್ಕೆ ಡೈರೆಕ್ಟರ್. ಸಿನಿಮಾ ಶೂಟ್ ವೇಳೆ ನಡೆದ ಘಟನೆ ಬಗ್ಗೆ ಉಪೇಂದ್ರ ಅವರು ಮಾತನಾಡಿದ್ದಾರೆ. ‘45’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಉಪ್ಪಿ ಈ ಘಟನೆ ನೆನಪಿಸಿಕೊಂಡರು. ಒಂದು ದೃಶ್ಯದ ಬಗ್ಗೆ ಶಿವಣ್ಣಗೆ ಅಸಮಾಧಾನ ಇತ್ತು. ಈ ಬಗ್ಗೆ ಉಪೇಂದ್ರ ಬಳಿ ನಿರಂತರವಾಗಿ ಕೇಳಿದ್ದರಂತೆ. ಆದರೆ, ದೃಶ್ಯ ತೆಗೆಯಲು ಉಪೇಂದ್ರ ಒಪ್ಪಲೇ ಇಲ್ಲ. ಕೊನೆಗೆ ಶಿವಣ್ಣ ಅವರು ಯಾರದ್ದೋ ಬಳಿ ಹೇಳಿ ಕಳುಹಿಸಿದರಂತೆ. ಅವರು ಬಂದು ಹೇಳಿದಾಗ, ‘ಈ ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ’ ಎಂದಿದ್ದರು. ಇದನ್ನು ಆ ವ್ಯಕ್ತಿ ಶಿವಣ್ಣಗೆ ಹೇಳಿದ್ದರು. ಮರಳಿ ಉಪ್ಪಿ ಬಳಿ ಬಂದ ಶಿವಣ್ಣ, ‘ಇನ್ಮುಂದೆ ಏನನ್ನೂ ಹೇಳೋದಿಲ್ಲ’ ಎಂದಿದ್ದರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿಯಿಂದ ಹಲ್ಲೆ: ಕಣ್ಣಿಗೆ ಖಾರದಪುಡಿ ಎರಚಿ ಹೇಯ ಕೃತ್ಯ – Kannada News | Bagalkote: Mentally Challenged Student Assaulted by Divya Jyothi School Teacher Couple

ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ

ಬಾಗಲಕೋಟೆ, ಡಿಸೆಂಬರ್​ 20: ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿ (Teacher Couple) ಹಲ್ಲೆ (Assaulted) ನಡೆಸಿ ರಾಕ್ಷಸಿ ಕೃತ್ಯ ಮೆರೆದಿರುವಂತಹ ಘಟನೆ ಬಾಗಲಕೋಟೆ ನವನಗರದ 54ನೇ ಸೆಕ್ಟರ್​​ನಲ್ಲಿರುವ ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆಯಲ್ಲಿ ನಡೆದಿದೆ. ದೀಪಕ್ ರಾಠೋಡ್​​(16) ಹಲ್ಲೆಗೊಳಗಾದ ಬುದ್ಧಿಮಾಂದ್ಯ ಬಾಲಕ. ಮಹಾರಾಷ್ಟ್ರ ಮೂಲದ ಶಿಕ್ಷಕ ಅಕ್ಷಯ್ ಇಂಗಳಕರ್ ಬೆಲ್ಟ್, ಪ್ಲಾಸ್ಟಿಕ್ ಪೈಪ್‌ನಿಂದ ಹಲ್ಲೆ ಮಾಡಿದರೆ, ಅವರ ​​ಪತ್ನಿ ಮಾಲಿನಿ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ ಹೇಯ ಕೃತ್ಯವೆಸಗಿದ್ದಾರೆ. ಹಲ್ಲೆಯನ್ನ ಪ್ರಶ್ನಿಸಲು ಬಂದ ಪೋಷಕರಿಗೆ ಶಿಕ್ಷಕ ದಂಪತಿ ಬೆದರಿಕೆ ಹಾಕಿದ್ದಾರೆ. ಸದ್ಯ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಶಿಕ್ಷಕ ಅಕ್ಷಯ್ ಮತ್ತು ಅವರ ಪತ್ನಿ ಮಾಲಿನಿಯಿಂದ ಮಾತ್ರವಲ್ಲದೆ ಸಹ ಶಿಕ್ಷಕ ವಿಶಾಲ್ ಪಾಟೀಲ್​ನಿಂದಲೂ ಬಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಸದ್ಯ ಬುದ್ಧಿಮಾಂದ್ಯ ಶಾಲೆಯ ಮುಂದೆ ಪೋಷಕರು ಜಮಾಯಿಸಿದ್ದಾರೆ. ಈ ನೀಚ ಶಿಕ್ಷಕ ದಂಪತಿ ಕೃತ್ಯಕ್ಕೆ ಮಕ್ಕಳ ಪೋಷಕರು ಕಣ್ಣೀರು ಹಾಕಿದ್ದು, ಇವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಶಿಕ್ಷಕ ದಂಪತಿಯನ್ನ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಬಾಲಕನ ತಾಯಿ ಹೇಳಿದ್ದಿಷ್ಟು 

ಇನ್ನು ಟಿವಿ9 ಎದುರು ದೀಪಕ್ ರಾಠೋಡ್​ ತಾಯಿ ಪಾರ್ವತಿ ಕಣ್ಣೀರಿಟ್ಟಿದ್ದು, ನಾನು ಪ್ರತಿ ತಿಂಗಳು ಆರು ಸಾವಿರ ರೂ ಹಣ ಕೊಡುತ್ತೇವೆ. ನಮ್ಮ ಮಕ್ಕಳಿಗೆ ಬಾತ್ ರೂಮ್, ಶೌಚಾಲಯ ತೊಳೆಯುವುದಕ್ಕೆ ಹಚ್ಚುತ್ತಾರೆ. ಒಪ್ಪದಿದ್ದಾಗ ಕಣ್ಣಲ್ಲಿ ಖಾರದ ಪುಡಿ ಹಾಕುವುದು, ಬೆಲ್ಟ್ ಹಾಗೂ ಪ್ಲಾಸ್ಟಿಕ್ ಪೈಪ್‌ನಿಂದ ಹಲ್ಲೆ ಮಾಡಿದ್ದಾರೆ. ಅವರ ಮೇಲೆ‌ ಕಠಿಣ ಕ್ರಮ ಆಗಬೇಕು. ಇದನ್ನು ‌ಕೇಳಲು ಬಂದರೆ ಏನು ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ ಅಂತಾರೆ. ನಮ್ಮ ಮಗ‌ ಅಷ್ಟೇ ಅಲ್ಲ ಬೇರೆ ಮಕ್ಕಳಿಗೂ ಹಲ್ಲೆ ಮಾಡಿದ್ದಾರೆ. ಈ ಶಾಲೆಯ ಲೈಸೆನ್ಸ್ ರದ್ದು ಮಾಡಿ ಬಂದ್​ ಮಾಡಬೇಕು ಎಂದು ಬಾಲಕನ‌ ತಾಯಿ ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಪೊಲೀಸ್​​ ವಿಚಾರಣೆ ವೇಳೆ ಶಿಕ್ಷಕ ಮತ್ತು ಪತ್ನಿ ವಾದ

ಹಲ್ಲೆ ಸಂಬಂಧ ಬಾಗಲಕೋಟೆಯ ನವನಗರ ಠಾಣೆ ಪೊಲೀಸರಿಂದ ಶಿಕ್ಷಕ ಅಕ್ಷಯ್​, ಪತ್ನಿ ಮಾಲಿನಿ ವಿಚಾರಣೆ ಮಾಡಿದ್ದು, ನಾವು ಹಲ್ಲೆ ಮಾಡಿಲ್ಲ ಎಂದು ವಾದ ಮಾಡಿದ್ದಾರೆ. ನಾವು ಖಾರದಪುಡಿ ಎರಚಿಲ್ಲ ಹುಡುಗರೇ ಎರಚಿಕೊಂಡಿದ್ದಾರೆ. ಬೇಕಿದ್ದರೆ ಬೇರೆ ಹುಡುಗರನ್ನ ‌ಕೇಳಿ ಎಂದು ಶಿಕ್ಷಕ ದಂಪತಿ ಸಮರ್ಥನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಬಾರದೆಂದರೆ ಈ ಸರಳ ಸಲಹೆಯನ್ನು ಪಾಲಿಸಿ – Kannada News | How to stop tears while chopping onions?

ಈರುಳ್ಳಿ (onions) ಹಾಕಿದ್ರೆ ಅಡುಗೆಯ ರುಚಿ ಮತ್ತಷ್ಟು ಹೆಚ್ಚುತ್ತದೆ. ಹಾಗಾಗಿ ಪ್ರತಿ ಅಡುಗೆಯಲ್ಲೂ ಈರುಳ್ಳಿಯನ್ನು ಬಳಕೆ ಮಾಡಲಾಗುತ್ತದೆ. ಆದ್ರೆ ಕಣ್ಣಲ್ಲಿ ನೀರು ಬರುವ ಕಾರಣ, ಕಿರಿಕಿರಿ ಉಂಟಾಗುವ ಕಾರಣ ಈರುಳ್ಳಿಯನ್ನು ಕತ್ತರಿಸುವುದೇ ಹಲವರಿಗೆ ತುಂಬಾನೇ ಕಷ್ಟದ ಕೆಲಸವಾಗಿಬಿಟ್ಟಿದೆ. ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರಲು ಅದರಲ್ಲಿರುವ ಸಲ್ಫರ್‌ ಸಂಯುಕ್ತಗಳು ಕಾರಣ. ಹೌದು ಈರುಳ್ಳಿ ಕಟ್‌ ಮಾಡುವಾಗ ಸಲ್ಫರ್‌ ಸಂಯುಕ್ತಗಳು ಗಾಳಿಯಲ್ಲಿ ಬಿಡುಗಡೆಯಾಗಿ ಕಣ್ಣುಗಳಲ್ಲಿನ ತೇವಾಂಶದೊಂದಿಗೆ ಸೇರಿಕೊಂಡು ಕಿರಿಕಿರಿ ಮತ್ತು ಕಣ್ಣೀರನ್ನು ಉಂಟುಮಾಡುತ್ತದೆ. ಹೀಗಿರುವಾಗ ಈ ಒಂದಷ್ಟು ತಂತ್ರಗಳನ್ನು ಪಾಲಿಸುವ ಮೂಲಕ ಯಾವುದೇ ಕಿರಿಕಿರಿ, ಕಣ್ಣಿನ ಉರಿ ಇಲ್ಲದೆ ಆರಾಮದಾಯಕವಾಗಿ ಈರುಳ್ಳಿ ಕತ್ತರಿಸಬಹುದು.

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಬಾರದೆಂದರೆ ಈ ಸಲಹೆ ಪಾಲಿಸಿ:

ಈರುಳ್ಳಿಯನ್ನು ನೀರಲ್ಲಿ ನೆನೆಸಿ: ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಬಾರದೆಂದರೆ ಅವುಗಳನ್ನು ಸಿಪ್ಪೆ ತೆಗೆದು ಕತ್ತರಿಸುವ ಅರ್ಧ ಗಂಟೆ ಮೊದಲು ನೀರಿನಲ್ಲಿ ನೆನೆಸಿಡಿ. ನೀವು ಹೀಗೆ ಮಾಡುವುದರಿಂದ, ಈರುಳ್ಳಿಯಲ್ಲಿರುವ ಅನಿಲಗಳು ನೀರಿನೊಂದಿಗೆ ಚೆನ್ನಾಗಿ ಬೆರೆತು ನಿಮ್ಮ ಕಣ್ಣುಗಳಲ್ಲಿ ನೀರು ಬರದಂತೆ ತಡೆಯುತ್ತದೆ.

ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿಡಿ: ನೀವು ಬಯಸಿದರೆ, ಕತ್ತರಿಸುವ ಮೊದಲು  ಈರುಳ್ಳಿಯನ್ನು 10 ನಿಮಿಷಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇಡಬಹುದು. ಹೀಗೆ ಈರುಳ್ಳಿಯನ್ನು ತಂಪಾಗಿಸುವುದರಿಂದ ಸಲ್ಫರ್ ಸಂಯುಕ್ತಗಳ ಪರಿಣಾಮವನ್ನು ಕಡಿಮೆಯಾಗುತ್ತದೆ ಮತ್ತು ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದಿಲ್ಲ.

ಫ್ಯಾನ್ ಅಡಿಯಲ್ಲಿ ಈರುಳ್ಳಿ ಕತ್ತರಿಸಿ: ಫ್ಯಾನ್ ಆನ್‌ ಮಾಡಿ ಈರುಳ್ಳಿ ಕತ್ತರಿಸಲು ಪ್ರಯತ್ನಿಸಿ.  ಏಕೆಂದರೆ ಗಾಳಿಯ ಹರಿವು ಸಲ್ಫರ್ ಸಂಯುಕ್ತಗಳು ಕಣ್ಣುಗಳನ್ನು ತಲುಪುವುದನ್ನು ತಡೆಯುತ್ತದೆ.

ಚಾಕುವಿನ ಮೇಲೆ ನಿಂಬೆ ರಸವನ್ನು ಹಚ್ಚಿ: ಈರುಳ್ಳಿ ಕ್ತರಿಸುವಾಗ ಕಣ್ಣುಗಳಲ್ಲಿ ನೀರು ಬರುವುದನ್ನು ತಡೆಯಲು ಒಂದು ಉತ್ತಮ ಮಾರ್ಗವೆಂದರೆ ಈರುಳ್ಳಿ ಕತ್ತರಿಸುವ ಮೊದಲು ಚಾಕುವಿಗೆ ನಿಂಬೆ ರಸವನ್ನು ಹಚ್ಚುವುದು. ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: ಬೆಳಗ್ಗೆ, ರಾತ್ರಿ; ಸ್ನಾನ ಮಾಡಲು ಸೂಕ್ತ ಸಮಯ ಯಾವುದು ಗೊತ್ತಾ?

ಬಿಸಿ ನೀರು ಹತ್ತಿರದಲ್ಲಿಡಿ: ಈರುಳ್ಳಿ ಕತ್ತರಿಸುವಾಗ ಬಿಸಿನೀರನ್ನು ನಿಮ್ಮ ಹತ್ತಿರದಲ್ಲಿ ಇರಿಸಿ. ಇದು ಈರುಳ್ಳಿಯಿಂದ ಆವಿಯನ್ನು ಹೊರಹಾಕುವ ಮೂಲಕ ಆಮ್ಲವನ್ನು ತಟಸ್ಥಗೊಳಿಸುತ್ತದೆ. ಇದರಿಂದ ತಡೆಯಬಹುದು.

ಇದಲ್ಲದೆ ಈರುಳ್ಳಿ ಕತ್ತರಿಸುವಾಗ ಆಗಾಗ್ಗೆ ಕಣ್ಣುಗಳನ್ನು ಸ್ವಚ್ಛ ನೀರಿನಿಂದ ತೊಳೆಯುವುದರಿಂದಲೂ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಹತ್ಯೆ; ಯೂನಸ್ ಸರ್ಕಾರದಿಂದ 7 ಜನರ ಬಂಧನ – Kannada News | 7 people Arrested For Hindu Mans Lynching In Bangladesh

ಢಾಕಾ, ಡಿಸೆಂಬರ್ 20: ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಹಿಂದೂ ವ್ಯಕ್ತಿಯನ್ನು ಥಳಿಸಿ, ಕಟ್ಟಿಹಾಕಿ, ಬೆಂಕಿ ಹಚ್ಚಲಾಗಿತ್ತು. ವಿದ್ಯಾರ್ಥಿ ರಾಜಕೀಯ ನಾಯಕನ ಸಾವಿನ ನಂತರ ಬಾಂಗ್ಲಾದೇಶಾದ್ಯಂತ (Bangladesh) ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದ ಕಾರಣದಿಂದಾಗಿ ಧರ್ಮನಿಂದನೆಯ ಆರೋಪದ ಮೇಲೆ ಬಾಂಗ್ಲಾದೇಶದ ಮೈಮೆನ್ಸಿಂಗ್ ಪ್ರದೇಶದಲ್ಲಿ ಹಿಂದೂ ವ್ಯಕ್ತಿಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಲಾಗಿದೆ.

ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ ನಂತರ 7 ಶಂಕಿತರನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಹೇಳಿದ್ದಾರೆ. ಬಂಧಿತರನ್ನು ಎಂಡಿ ಲಿಮನ್ ಸರ್ಕಾರ್, ಎಂಡಿ ತಾರೆಕ್ ಹೊಸೈನ್, ಎಂಡಿ ಮಾಣಿಕ್ ಮಿಯಾ, ಇರ್ಷಾದ್ ಅಲಿ, ನಿಜುಮ್ ಉದ್ದೀನ್, ಅಲೋಮ್‌ಗಿರ್ ಹೊಸೈನ್ ಮತ್ತು ಎಂಡಿ ಮಿರಾಜ್ ಹೊಸೈನ್ ಅಕಾನ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂ ಯುವಕನನ್ನು ಥಳಿಸಿ, ಮರಕ್ಕೆ ಕಟ್ಟಿಹಾಕಿ, ಸುಟ್ಟು ಹಾಕಿದ ಪಾಪಿಗಳು

ಮೈಮೆನ್‌ಸಿಂಗ್‌ನ ಭಾಲುಕಾದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಯುವ ಗಾರ್ಮೆಂಟ್ ಕಾರ್ಖಾನೆ ಕಾರ್ಮಿಕ ದೀಪು ಚಂದ್ರ ದಾಸ್‌ನನ್ನು ಉದ್ರಿಕ್ತ ಗುಂಪೊಂದು ಹೊಡೆದು ಕೊಂದಿತ್ತು. ಸಾವಿರಾರು ಜನರು ನೋಡುತ್ತಿರುವಾಗಲೇ ಆತನನ್ನು ಕಟ್ಟಿಹಾಕಿ, ಕೊಂದು ನಂತರ ಅವರ ದೇಹವನ್ನು ಸುಟ್ಟುಹಾಕಲಾಯಿತು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಬರ್ಬರ ಹತ್ಯೆ; ಯೂನಸ್ ಸರ್ಕಾರದಿಂದ ಖಡಕ್ ಎಚ್ಚರಿಕೆ

ಈ ಘಟನೆಯು ಬಾಂಗ್ಲಾದೇಶದ ಅಲ್ಪಸಂಖ್ಯಾತರು ಮತ್ತು ನೆರೆಯ ಭಾರತದ ರಾಜಕೀಯ ವಲಯಗಳಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿತು. ಇದು ಕಳೆದ ವರ್ಷದ ವಿದ್ಯಾರ್ಥಿ ದಂಗೆಯಲ್ಲಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳು ಎದುರಿಸುತ್ತಿರುವ ಅಪಾಯವನ್ನು ಒತ್ತಿಹೇಳುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಲ್ಲಿ ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ – Kannada News | Bengaluru: Greater Bengaluru Authority Demolishes Unauthorized Houses; Over 190 Structures Razed

ಬೆಂಗಳೂರು, ಡಿಸೆಂಬರ್​ 20: ನಗರದಲ್ಲಿ ಅನಧಿಕೃತ ನಿವೇಶನಗಳ ವಿರುದ್ಧ ಜಿಬಿಎ ಸಮರ ಸಾರಿದೆ. ಇಂದು ಬೆಳ್ಳಂಬೆಳಗ್ಗೆ ಶ್ರೀನಿವಾಸಪುರದ ಕೋಗಿಲು ಲೇಔಟ್​ನಲ್ಲಿ 200 ಹೆಚ್ಚು ಮನೆಗಳ ತೆರವು ಕಾರ್ಯ ಮಾಡಲಾಗಿತು. 14 ಎಕರೆ ಪಾಲಿಕೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ 190ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಲಾಗಿದೆ. ಜಿಬಿಎ ಕಾರ್ಯಕ್ಕೆ ಸೂರು ಕಳೆದುಕೊಂಡವರು ಹಿಡಿಶಾಪ ಹಾಕಿದ್ದಾರೆ. ಒಂದೇ ಒಂದೂ ಸೂಚನೆ ಕೊಡದೇ ಕೆಡವಿದ್ದಾರೆ ಅಂತಾ ಕೆಂಡಕಾರದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ನೀವು ಕೂಡ ಮುಖದವರೆಗೂ ಬ್ಲಾಂಕೆಟ್ ಹೊದ್ದು ಮಲಗ್ತೀರಾ ಈ ಅಭ್ಯಾಸ ಎಷ್ಟು ಡೇಂಜರ್ ನೋಡಿ! – Kannada News | Face Covering at Night: How It Affects Breathing & Health

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲಿಯೂ ದಿನದಿಂದ ದಿನಕ್ಕೆ ಚಳಿ (winter) ಹೆಚ್ಚಾಗುತ್ತಿದೆ. ಈ ರೀತಿ ತಾಪಮಾನ ಕಡಿಮೆಯಾದಾಗ, ಸ್ವಾಭಾವಿಕವಾಗಿ ಚಳಿಯಿಂದ ರಕ್ಷಣೆ ಪಡೆಯಲು ಮುಖದ ವರೆಗೆ ಬೆಡ್ ಶಿಟ್ ಅಥವಾ ಕಂಬಳಿ ಹೊದ್ದು ಮಲಗುತ್ತೇವೆ. ಇದು ಉಷ್ಣತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ಬಹಳ ಆರಾಮದಾಯಕವೆನಿಸುತ್ತದೆ, ಆದರೆ ಇತ್ತೀಚಿನ ಸಂಶೋಧನೆ ಹೇಳುವ ಪ್ರಕಾರ, ಈ ರೀತಿಯ ಅಭ್ಯಾಸ ಉಸಿರಾಟದ ವ್ಯವಸ್ಥೆಯ ಮೇಲೆ ಗಮನಾರ್ಹ ಒತ್ತಡವನ್ನು ಬೀರುತ್ತದೆ ಎಂದು ತಿಳಿಸಿದೆ. ಹೌದು, ರಾತ್ರಿ ಮಲಗುವಾಗ ಮುಖ ಮುಚ್ಚಿಕೊಳ್ಳುವುದರಿಂದ (Face Covering at Night) ಉಸಿರಾಟ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಉಂಟಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹಾಗಾದರೆ ಇದು ಆರೋಗ್ಯದ ಮೇಲೆ ಯಾವ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿದ್ರೆ ಮಾಡುವ ಸಮಯದಲ್ಲಿ ಮುಖವನ್ನು ಕಂಬಳಿ ಅಥವಾ ಬೆಡ್ ಶಿಟ್ ನಿಂದ ಮುಚ್ಚಿಕೊಂಡು ಮಲಗುವುದರಿಂದ, ನಾವು ಹೊರಹಾಕುವ ಗಾಳಿ (ಕಾರ್ಬನ್ ಡೈಆಕ್ಸೈಡ್) ಹೊರಹೋಗಲು ಜಾಗವಿಲ್ಲದೆ ಅಲ್ಲಿಯೇ ಸಿಲುಕುತ್ತದೆ. ಪರಿಣಾಮವಾಗಿ, ನಾವು ಅರಿವಿಲ್ಲದೆಯೇ ಪದೇ ಪದೇ ಇಂಗಾಲದ ಡೈಆಕ್ಸೈಡ್ ಅನ್ನು ಉಸಿರಾಡುತ್ತೇವೆ. ಇದು ದೇಹವು ಪಡೆಯುವ ತಾಜಾ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಬೆಳಿಗ್ಗೆ ಎಚ್ಚರಗೊಳ್ಳುವಾಗ ತಲೆನೋವು ಕಂಡುಬರುವುದು, ದಿನವಿಡೀ ದಣಿದ ಅನುಭವ, ಏಕಾಗ್ರತೆಯ ಕೊರತೆ, ನಿದ್ರೆ ಮಾಡುವಾಗ ಆಗಾಗ ಎಚ್ಚರಗೊಳ್ಳುವಂತಹ ಸಮಸ್ಯೆಗಳು ಉದ್ಭವಿಸಬಹುದು. ಅಷ್ಟು ಮಾತ್ರವಲ್ಲ, ಮುಖ ಮುಚ್ಚಿಕೊಳ್ಳುವುದರಿಂದ ಆ ಪ್ರದೇಶದಲ್ಲಿ ತೇವಾಂಶ ಮತ್ತು ಬೆವರು ಸಂಗ್ರಹವಾಗುತ್ತದೆ. ಕಂಬಳಿಯ ಮೇಲಿನ ಧೂಳು ಮತ್ತು ಬ್ಯಾಕ್ಟೀರಿಯಾಗಳು ಕೂಡ ಚರ್ಮದ ಸಂಪರ್ಕಕ್ಕೆ ಬರಬಹುದು, ಇದು ಮೊಡವೆ ಮತ್ತು ಉರಿಯೂತದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ನಿದ್ರೆಯ ಸಮಯದಲ್ಲಿ ದೇಹದ ಉಷ್ಣತೆಯ ಹೆಚ್ಚಳವು ನಿದ್ರೆಗೆ ಅಡ್ಡಿಪಡಿಸುತ್ತದೆ.

ಕಂಬಳಿಯಿಂದ ಮುಖ ಮುಚ್ಚಿ ಮಲಗುವ ಅಭ್ಯಾಸ ಯಾರಿಗೆ ಹೆಚ್ಚು ಅಪಾಯಕಾರಿ?

ಈ ಅಭ್ಯಾಸವು ಅಸ್ತಮಾ, ಸೈನಸ್ ಮತ್ತು ಅಲರ್ಜಿ ಸಮಸ್ಯೆಗಳಿರುವವರಿಗೆ ತುಂಬಾ ಅಪಾಯಕಾರಿ. ಅದರಲ್ಲಿಯೂ ಶಿಶುಗಳಲ್ಲಿ ಈ ಅಪಾಯ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಇತರರಿಗಿಂತ ತುಸು ಹೆಚ್ಚೆ ನಿಮ್ಗೆ ಚಳಿಯಾಗುತ್ತಾ? ಇದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ

ಮುನ್ನೆಚ್ಚರಿಕೆ ಅಥವಾ ಪರ್ಯಾಯಗಳು:

  • ಯಾವಾಗಲೂ ಕಂಬಳಿ ಅಥವಾ ಬೆಡ್ ಶಿಟ್ ಅನ್ನು ಭುಜದವರೆಗೆ ಮಾತ್ರ ಹೊದ್ದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.
  • ಬೆಚ್ಚಗಿರಲು ದಪ್ಪ ಬಟ್ಟೆ ಅಥವಾ ಸಾಕ್ಸ್‌ಗಳನ್ನು ಧರಿಸಿ.
  • ಹತ್ತಿಯ ಹಾಸಿಗೆಯನ್ನು ಬಳಸಿ.
  • ಬೆಳಕು ಬರದೆ ಕತ್ತಲೆಯಾಗಬೇಕೆಂದರೆ ಮುಖದ ಮೇಲೆ ಕಂಬಳಿ ಅಥವಾ ಬೆಡ್ ಶಿಟ್ ಹಾಕಿಕೊಳ್ಳುವ ಬದಲು ಐ ಮಾಸ್ಕ್ ಧರಿಸಿ.
  • ನಿಮ್ಮ ಪಾದಗಳ ಬಳಿ ಬಿಸಿನೀರಿನ ಬಾಟಲಿಗಳನ್ನು ಇಡುವುದರಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ – Kannada News | Bigg Boss Kannada season 12 new promo released

ಬಿಗ್​​ಬಾಸ್ (Bigg Boss) ಮನೆಯಲ್ಲಿ ಕೆಲವೊಮ್ಮೆ ಸ್ಪರ್ಧಿಗಳು ಮಕ್ಕಳಿಗಿಂತಲೂ ಕಡೆಯಾಗಿ ವರ್ತಿಸುತ್ತಾರೆ. ತೀರ ಸಿಲ್ಲಿ ವಿಷಯಗಳಿಗೆ ಸಿಲ್ಲಿಯಾಗಿ ಜಗಳ ಮಾಡುತ್ತಾರೆ. ಉದ್ದೇಶಪೂರ್ವಕವಾಗಿ ಹಠ ಮಾಡುತ್ತಾರೆ. ಇದ್ದಕ್ಕಿದ್ದಂತೆ ಕಣ್ಣೀರು ಹಾಕುತ್ತಾರೆ ಇನ್ನೂ ಏನೇನೋ. ಕಳೆದ ವಾರ ಬಿಗ್​​ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ಆಡಿಸಲಾಗಿತ್ತು. ಅದಕ್ಕೆ ರಾಶಿಕಾ ಉಸ್ತುವಾರಿ ಆಗಿದ್ದರು. ಆ ಟಾಸ್ಕ್​​​ ಗೊಂದಲಗಳ ಗೂಡಾಗಿತ್ತು. ಇದೀಗ ಸುದೀಪ್ ಅವರು ಆ ಟಾಸ್ಕ್ ವಿಷಯನ್ನೇ ಮುಖ್ಯವಾಗಿ ಹಿಡಿದುಕೊಂಡು ಇಡೀ ಮನೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಆಧುನಿಕ ಸಮಾಜದ ಸಂಬಂಧಗಳ ಕಡೆಗೆ ಬೆಳಕು ಚೆಲ್ಲುವ ಒಂದು ಪುಟ್ಟ ಕಾದಂಬರಿ’ನಮಗೂಂದು ಸೊಸೆ ಬೇಕು!’ – Kannada News | K. Satyanarayana’s ‘Namagoondu Sose Beku!’: Family, Marriage and Society

K. Satyanarayana’s ‘Namagoondu Sose Beku!’

ಕನ್ನಡದ ಸಾಹಿತ್ಯ ಲೋಕದಲ್ಲಿ ಕೆ. ಸತ್ಯನಾರಾಯಣ ಅವರು ಅತ್ಯಂತ ಪ್ರಮುಖ ಕಥೆಗಾರರು ಮತ್ತು ಕಾದಂಬರಿಕಾರರು. ಅವರ ಲೇಖನಿಯಲ್ಲಿ ಮೂಡಿದ ಇತ್ತೀಚಿನ ಕೃತಿಯೆಂದರೆ ‘ನಮಗೂಂದು ಸೊಸೆ ಬೇಕು!’ ಕಾದಂಬರಿ. ಇದು ಸಮಾಜದಲ್ಲಿನ ಕೌಟುಂಬಿಕ ಸಂಬಂಧಗಳು, ವಿವಾಹ ವ್ಯವಸ್ಥೆ ಮತ್ತು ಮನೆಗೆ ಸೊಸೆಯನ್ನು ಹುಡುಕುವ ಪ್ರಕ್ರಿಯೆಯಲ್ಲಿ ಎದುರಾಗುವ ಹಾಸ್ಯ ಹಾಗೂ ವಾಸ್ತವದ ಸಂಗತಿಗಳನ್ನು ಆಧರಿಸಿದ ಕಥೆಯಾಗಿದೆ.

ಏನಿದೆ ಕಾದಂಬರಿಯಲ್ಲಿ?

ಈ ಕಾದಂಬರಿಯು ಮಹಾಭಾರತದ ಉತ್ತರೆಯ ಮುಗ್ಧತೆ ಮತ್ತು ವಿರಾಟರಾಜನರ ಮನೆಯ ಕಥೆಯೊಂದಿಗೆ ಆಧುನಿಕ ಸಮಾಜದ ಸಂಬಂಧಗಳ ಕಡೆಗೆ ಬೆಳಕು ಚೆಲ್ಲುವ ಒಂದು ಪುಟ್ಟ ಕಾದಂಬರಿ. ಪುಸ್ತಕವು ಕುಟುಂಬದ ಮೌಲ್ಯಗಳು, ಸಂಬಂಧಗಳಲ್ಲಿನ ಸಂಘರ್ಷ, ಮತ್ತು ತಲೆಮಾರುಗಳ ನಡುವಿನ ವ್ಯತ್ಯಾಸಗಳನ್ನು ವಾಸ್ತವಿಕವಾಗಿ ಚಿತ್ರಿಸುವುದಲ್ಲದೇ, ವಿಶೇಷವಾಗಿ ಸೊಸೆಯ ಪಾತ್ರ ಮತ್ತು ಕುಟುಂಬದ ಜವಾಬ್ದಾರಿಗಳ ಸುತ್ತ ಸುತ್ತುತ್ತದೆ. ಓದುಗರು ಕಾದಂಬರಿ ಬಗ್ಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದರೂ, ಅದರ ಸರಳ ನಿರೂಪಣೆ ಮತ್ತು ಭಾವನಾತ್ಮಕ ಆಳವು ಗಮನ ಸೆಳೆಯುತ್ತದೆ. ಇದು ಕೇವಲ ಯುದ್ಧಕ್ಕೆ ಸೀಮಿತವಾಗದೆ, ಉತ್ತರೆಯ ಮುಗ್ಧತೆ ಮತ್ತು ಬದುಕಿನ ಸಂಜೆಯವರೆಗಿನ ಪಯಣವನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ.

ಮತ್ಸ್ಯ ದೇಶದ ಅರಮನೆಯ ವೈಭವದೊಂದಿಗೆ ಆರಂಭವಾಗಿ, ಸೊಸೆಯ ಹುಡುಕಾಟದ ಮೂಲಕ ಕುಟುಂಬದ ಸಂಬಂಧಗಳ ಸೂಕ್ಷ್ಮತೆಗಳನ್ನು ವಿವರಿಸುವ ಈ ಕಾದಂಬರಿ, ಆಧುನಿಕ ಸೊಸೆ ಮತ್ತು ಹಳೆಯ ಪೀಳಿಗೆಯ ಆಲೋಚನೆಗಳ ನಡುವಿನ ಸಂಘರ್ಷ, ಮಹಿಳೆಯರ ಪಾತ್ರ ಮತ್ತು ಜವಾಬ್ದಾರಿಗಳ ಕುರಿತು ಚರ್ಚಿಸುತ್ತದೆ. ಕಾದಂಬರಿಯು ಸರಳ ಭಾಷೆಯಲ್ಲಿದ್ದು, ಸುಲಭವಾಗಿ ಓದಿಸಿಕೊಳ್ಳುವಂತಿದೆ. ಪಾತ್ರಗಳ ಭಾವನಾತ್ಮಕ ಆಳ ಮತ್ತು ವಾಸ್ತವಿಕ ಚಿತ್ರಣ ಓದುಗರಿಗೆ ಹತ್ತಿರವಾಗುವಂತೆ ಮಾಡಿದರೆ, ಸೊಸೆಯ ಪಾತ್ರದ ಮೂಲಕ ಭಾರತೀಯ ಸಮಾಜದಲ್ಲಿನ ಮಹಿಳೆಯರ ಪಾತ್ರದ ವಿಶ್ಲೇಷಣೆಗೆ ಇದು ಒಂದು ಮಾರ್ಗದರ್ಶಿಯಾಗಿದೆ.ಇದು ಕುಟುಂಬದ ನಾಟಕ ಮತ್ತು ಆಧುನಿಕ ಜೀವನದ ಸವಾಲುಗಳನ್ನು ಚೆನ್ನಾಗಿ ನಿರೂಪಿಸುತ್ತದೆ. ಒಟ್ಟಾರೆಯಾಗಿ ‘ನಮಗೊಂದು ಸೊಸೆ ಬೇಕು’ ಒಂದು ಪುಟ್ಟ ಕಾದಂಬರಿಯಾಗಿದ್ದರೂ, ಕುಟುಂಬ ಸಂಬಂಧಗಳ ಕುರಿತು ಆಳವಾದ ಚಿಂತನೆಗೆ ಹಚ್ಚುವ ಕೃತಿಯಾಗಿದೆ. (ವಿವಿಧ ಮೂಲಗಳಿಂದ ಮಾಹಿತಿ ಪಡೆಯಲಾಗಿದೆ)

ಲೇಖಕರ ಬಗ್ಗೆ

ಕೆ. ಸತ್ಯನಾರಾಯಣ ಏಪ್ರಿಲ್ 21, 1954 ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಜನಿಸಿದ ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಸುವರ್ಣ ಪದಕದೊಂದಿಗೆ ಪಡೆದಿದ್ದಾರೆ.ಭಾರತೀಯ ಕಂದಾಯ ಸೇವೆಗೆ ಸೇರಿದ ಇವರು, ಆದಾಯ ತೆರಿಗೆ ಇಲಾಖೆಯಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ನಿರ್ವಹಿಸಿ, 2014 ರಲ್ಲಿ ಪ್ರಧಾನ ಮುಖ್ಯ ಆಯುಕ್ತರಾಗಿ ನಿವೃತ್ತರಾದರು.ಇವರು ಸುಮಾರು 36 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಕಥೆ, ಕಾದಂಬರಿ, ಪ್ರಬಂಧ ಮತ್ತು ವಿಮರ್ಶೆಗಳಲ್ಲಿ ಸಕ್ರಿಯರಾಗಿದ್ದಾರೆ.ಸಾವಿನ ದಶಾವತಾರ, ಹನ್ನೊಂದನೆಯ ಇಂದ್ರಿಯ, ನಕ್ಸಲ್ ವರಸೆ, ಮತ್ತು ಚಿಕ್ಕಪುಟ್ಟಮ್ಮನವರ ಗೃಹನ್ಯಾಯ, ರಾಜಧಾನಿಯಲ್ಲಿ ಶ್ರೀಮತಿಯರು, ಸನ್ನಿಧಾನ, ವಿಕಲ್ಪ ಎಂದು ಹಲವು ಕೃತಿಗಳನ್ನು ರಚಿಸಿದ್ದಾರೆ.

ಪುಸ್ತಕದ ವಿವರ

ಪುಸ್ತಕದ ಹೆಸರು: ನಮಗೂಂದು ಸೊಸೆ ಬೇಕು, ಲೇಖಕರು: ಕೆ. ಸತ್ಯನಾರಾಯಣ, ಪ್ರಕಾಶಕರು: ವೀರಲೋಕ, ಬೆಲೆ: 150, ಪುಟಗಳ ಸಂಖ್ಯೆ: 139

Source link

ಕಲಬುರಗಿ: ಬಿಜೆಪಿ ಕಾರ್ಯಕರ್ತನ ಮನೆಯಲ್ಲೇ ಪಕ್ಷದ ಕಾರ್ಯಕರ್ತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ – Kannada News | Kalaburagi Incident: BJP Woman Worker Dies After Fire Incident at Party Activist’s House

ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರ, ಜ್ಯೋತಿ ಪಾಟೀಲ್

ಕಲಬುರಗಿ, ಡಿಸೆಂಬರ್ 20: ಕಲಬುರಗಿ (Kalaburagi) ಜಿಲ್ಲೆಯ ನಂದಿಕೂರ್ ಗ್ರಾಮದಲ್ಲಿ ಬಿಜೆಪಿ (BJP) ಕಾರ್ಯಕರ್ತೆ ಜ್ಯೋತಿ ಪಾಟೀಲ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಈ ಘಟನೆ ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರ ಅವರ ಮನೆಯ ಆವರಣದಲ್ಲಿ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನೆ ಬಳಿಕ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆತ್ಮಹತ್ಯೆ ನಡೆದ ಮಲ್ಲಿನಾಥ್ ಬಿರಾದಾರರ ಮನೆ ನಂದಿಕೂರ್ ಗ್ರಾಮದಲ್ಲಿದ್ದು, ಘಟನೆ ನಂತರ ಕುಟುಂಬಸ್ಥರು ಮನೆ ಖಾಲಿ ಮಾಡಿಕೊಂಡು ತೆರಳಿದ್ದಾರೆ. ಸದ್ಯ ಮನೆಗೆ ಬೀಗ ಹಾಕಲಾಗಿದ್ದು, ಸ್ಥಳದಲ್ಲಿ ನಿಶ್ಯಬ್ದ ವಾತಾವರಣ ನಿರ್ಮಾಣವಾಗಿದೆ.

ಪೊಲೀಸ್ ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಜ್ಯೋತಿ ಪಾಟೀಲ್ ತಡರಾತ್ರಿ ಮಲ್ಲಿನಾಥ್ ಬಿರಾದಾರರ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ. ಮಲ್ಲಿನಾಥ್ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಜ್ಯೋತಿ ಪಾಟೀಲ್ ಬಾಗಿಲು ಬಡಿದಿದ್ದರು. ಮಲ್ಲಿನಾಥ್ ಬಿರಾದಾರ್ ಪತ್ನಿ, ಮೂವರು ಮಕ್ಕಳು ಮನೆಯಲ್ಲಿ ವಾಸಮಾಡುತ್ತಿದ್ದರು. ಇವರು ಬಾಗಿಲು ತೆರೆದ ತಕ್ಷಣ ಜ್ಯೋತಿ ಪಾಟೀಲ್ ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ. ಜ್ಯೋತಿ ಪಾಟೀಲ್ ಕಲಬುರಗಿಯ ಬ್ರಹ್ಮಪುರ ಬಡಾವಣೆಯ ನಿವಾಸಿಯಾಗಿದ್ದಾರೆ. ಆದರೆ ಈ ಸಾವು ಆತ್ಮಹತ್ಯೆಯೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್ ಪತಿ ಹೇಳಿದ್ದೇನು?

ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್ ಅವರ ಪತಿ ಚಿದಾನಂದ ಅವರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಆತ್ಮಹತ್ಯೆ ಎಂದು ನನಗೆ ಅನಿಸುತ್ತಿಲ್ಲ. ಅವಳು ಯಾಕೆ ಪೆಟ್ರೋಲ್ ಸುರಿದುಕೊಂಡು ಸಾಯಬೇಕು? ಇದು ಕೊಲೆ ಆಗಿರಬಹುದೆಂಬ ಶಂಕೆ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸೈಬರ್ ಅಪರಾಧ ಲೋಕದ ಅತಿದೊಡ್ಡ ವಂಚನೆ ಬಯಲಿಗೆಳೆದ ದಾವಣಗೆರೆ ಪೊಲೀಸ್! ವಂಚಕನ ಖಾತೆಯಲ್ಲಿ 1000 ಕೋಟಿ ರೂ.ಗೂ ಹೆಚ್ಚು ವಹಿವಾಟು

ಘಟನೆಯ ಎಲ್ಲ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಫರಹತಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಯ ಹಿಂದಿನ ನಿಜವಾದ ಕಾರಣ ಏನು, ಯಾರಾದರೂ ಇದಕ್ಕೆ ಕಾರಣರಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಸಾಕ್ಷ್ಯ ಸಂಗ್ರಹ ಹಾಗೂ ವಿಚಾರಣೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version