ಸನ್ನಡತೆ ಆಧಾರದ ಮೇಲೆ ಜೀವಾವಧಿ ಶಿಕ್ಷಿತರ ಬಿಡುಗಡೆ: ಹೊಸ ಬದುಕಿನತ್ತ 31 ಕೈದಿಗಳು

ಸನ್ನಡತೆ ಆಧಾರದ ಮೇಲೆ ಜೀವಾವಧಿ ಶಿಕ್ಷಿತರ ಬಿಡುಗಡೆ: ಹೊಸ ಬದುಕಿನತ್ತ 31 ಕೈದಿಗಳು

ಬೆಂಗಳೂರು, (ಮಾರ್ಚ್ 12): ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕರ್ನಾಟಕದ (Karnataka) ವಿವಿಧ ಜೈಲಿನಲ್ಲಿರುವ ಒಟ್ಟು 31 ಕೈದಿಗಳ (Prisoners) ಬಿಡುಗಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕೈದಿಗಳನ್ನು ಅವರ ‘ಸನ್ನಡತೆ’ಯ ಆಧಾರದ ಮೇಲೆ ಅವಧಿಪೂರ್ವವಾಗಿ ಬಿಡುಗಡೆಗೊಳಿಸಿ ಇಂದು (ಮಾರ್ಚ್ 12) ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದ ಕೈದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಮಾನವೀಯ ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ನಾಳೆ (ಮಾರ್ಚ್ 13) 31 ಕೈದಿಗಳು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮಹಾನಿರ್ದೇಶಕರು ಸಲ್ಲಿಸಿದ ಪ್ರಸ್ತಾವನೆಯನ್ನು ಆಧರಿಸಿ, ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಒಟ್ಟು 54 ಜೀವಾವಧಿ ಶಿಕ್ಷೆ ಕೈದಿಗಳ ಪ್ರಕರಣಗಳನ್ನು ಕೂಲಂಕಷವಾಗಿ ಚರ್ಚಿಸಲಾಗಿದ್ದು, ಸಮಿತಿಯು ಪರಿಶೀಲಿಸಿದ 54 ಪ್ರಕರಣಗಳ ಪೈಕಿ ಬಿಡುಗಡೆಗೆ 31 ಮಂದಿಯನ್ನು ಶಿಫಾರಸ್ಸು ಮಾಡಲಾಗಿತ್ತು. ಇನ್ನುಳಿದಂತೆ 21 ಕೈದಿಗಳ ಬಿಡುಗಡೆ ಅರ್ಜಿಯನ್ನು ತಿರಸ್ಕರಿಸಲಾಗಿದೆ. 2 ಪ್ರಕರಣಗಳು ಕೇಂದ್ರ ಗೃಹ ಸಚಿವಾಲಯದ ಅನುಮೋದನೆಗಾಗಿ ಬಾಕಿ ಉಳಿದಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಜೈಲುಗಳಲ್ಲಿ ಅಕ್ರಮ ಚಟುವಟಿಕೆ ತಡೆಗೆ ಅಲೋಕ್ ಕುಮಾರ್ ದಿಟ್ಟ ಕ್ರಮ: ಕೈದಿಗಳ ಭೇಟಿಗೆ ಹೊಸ ರೂಲ್ಸ್

ಸಂವಿಧಾನವು ರಾಜ್ಯಪಾಲರಿಗೆ ಶಿಕ್ಷೆಗೊಳಗಾದ ಕೈದಿಗಳ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವ ಅಥವಾ ಕ್ಷಮಾದಾನ ನೀಡುವ ವಿಶೇಷ ಅಧಿಕಾರವನ್ನು ನೀಡಿದೆ. ದೀರ್ಘಕಾಲ ಜೈಲುವಾಸ ಅನುಭವಿಸಿ, ಪಶ್ಚಾತ್ತಾಪದೊಂದಿಗೆ ಉತ್ತಮ ನಡವಳಿಕೆ ರೂಢಿಸಿಕೊಂಡ ಕೈದಿಗಳನ್ನು ಸಮಾಜಕ್ಕೆ ಮರಳಿಸುವುದು ಹಾಗೂ ಅವರ ಕುಟುಂಬದ ಪುನರ್ವಸತಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಪ್ರಮುಖ ನೀತಿಗಳಲ್ಲಿ ಒಂದಾಗಿದೆ. ಈ ಆಶಯದಡಿಯೇ ಬಿಡುಗಡೆ ಮಾಡಲಾಗುತ್ತಿದೆ.

ಯಾವ ಕಾರಾಗೃಹದಿಂದ ಎಷ್ಟು ಕೈದಿಗಳ ಬಿಡುಗಡೆ?

  • ಬೆಂಗಳೂರು ಕೇಂದ್ರ ಕಾರಾಗೃಹ: 14 ಕೈದಿಗಳು
  • ವಿಜಯಪುರ: 5 ಕೈದಿಗಳು
  • ಬಳ್ಳಾರಿ: 3 ಕೈದಿಗಳು
  • ಮೈಸೂರು: 2 ಕೈದಿಗಳು
  • ಬೆಳಗಾವಿ: 2 ಕೈದಿಗಳು
  • ಕಲಬುರಗಿ: 2 ಕೈದಿಗಳು
  • ಶಿವಮೊಗ್ಗ (ಪುರುಷ ಮತ್ತು ಮಹಿಳಾ ವಿಭಾಗ): 2 ಕೈದಿಗಳು
  • ಧಾರವಾಡ: 1 ಕೈದಿ

ಅವಧಿ ಪೂರ್ವ ಬಿಡುಗಡೆಯಾಗುತ್ತಿರುವ ಕೈದಿಗಳು

ಶ್ರೀನಿವಾಸ್ ಅಲಿಯಾಸ್ ಡ್ರೈವರ್ ಶ್ರೀನಿವಾಸ್, ಬಾಲರಾಜು, ವೆಂಕಟೇಶ್, ರಂಜಿತ್ @ ಬಟ್ಟ, ಭುವನೇಶ್ವರ ಟಿಪಿ, ಛತ್ರಪತಿ ನಾಯಕ್, ಲಿಂಗರಾಜು, ಶ್ರೀನಿವಾಸ್ ಮೂರ್ತಿ, ಯಮನಪ್ಪ, ನಿಲಕಂಠಾಚಾರ್ @ ಶಂಕರ್, ಬಾಬು, ರಾಜಾಚಾರಿ, ನಾರಾಯಣಗೌಡ, ವೆಂಕಟೇಶ್, ಚಂದ್ರಮ್ಮ, ತುಕಾರಾಮ್, ಜಯಮ್ಮ, ಸುಭಾಷ್, ತಿಮ್ಮಪ್ಪ, ಅಶೋಕ್, ಶಿವಪ್ಪ, ಆನಂದ, ಪ್ರಕಾಶ್, ಸುರೇಶ್, ಹೆಚ್‌ಕೆ ರವಿಕುಮಾರ್, ಜಿ.ಎಲ್ ಮೋಹನ್ ಕುಮಾರ್, ಮಂಜೆ ನಾಯ್ಕ್, ಲಕ್ಷ್ಮಿ ಕಾಂತ್, ಸರಸ್ವತಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದ ಪ್ರತಿಷ್ಠಿತ ಮಠದಲ್ಲಿ ಲೆಕ್ಕ ಪತ್ರ ವಿಚಾರಕ್ಕೆ ಗಲಾಟೆ: ಕೋಟ್ಯಂತರ ರೂ ಅವ್ಯವಹಾರ ಆರೋಪ

ದಾವಣಗೆರೆ, ಮಾರ್ಚ್​​ 12: ಹರಿಹರದ ಪಂಚಮಸಾಲಿ ಮಠ (harihara panchamasali peetha) ರಾಜ್ಯದ ಪ್ರತಿಷ್ಠಿತ ಮಠ. ಈ ಮಠಕ್ಕೆ ಕೋಟ್ಯಂತರ ಭಕ್ತರಿದ್ದಾರೆ. ನಿತ್ಯ ದಾಸೋಹ ಕೂಡ ಶುರುವಾಗಿದೆ. ರಾಜ್ಯದ ಬಹುತೇಕ ಕಡೆ ಈ ಮಠದ ಆಸ್ತಿ ಇದೆ. ಇಂತಹ ಮಠದಲ್ಲಿ ಇದೀಗ ಲೆಕ್ಕ ಪತ್ರ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಕೋಟ್ಯಂತರ ರೂ ಅವ್ಯವಹಾರ ನಡೆದಿದೆ. ಮಾತಿನ ಚಕಮಕಿ ವೇಳೆ ನೂಕಾಟ ತಳ್ಳಾಟ ಕೂಡ ನಡೆದಿದೆ. ಮೇಲಾಗಿ ಸರ್ಕಾರದಿಂದ ಬಂದ ಹಣವಾದರೂ ಎಲ್ಲಿ ಎಂಬ ಹತ್ತು ಹಲವಾರು ಪ್ರಶ್ನೆಗೆ ಉತ್ತರಿಸಿದೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ.

ರಾಜ್ಯದ ಪ್ರತಿಷ್ಠಿತ ಹರಿಹರದ ಪಂಚಮಸಾಲಿ ಮಠದಲ್ಲಿ ಘಟನೆ ನಡೆದಿದೆ. ಇದರಲ್ಲಿ ಆರೋಪಿ ಸ್ಧಾನದಲ್ಲಿ ಇರುವರು ದಾವಣಗೆರೆಯ ಬಿ.ಎಸ್ ಚನ್ನಬಸಪ್ಪ ಆ್ಯಂಡ್ ಸನ್ಸ್ ಮಾಲೀಕ ಹಾಗೂ ಮಠದ ಪ್ರಧಾನ ಧರ್ಮದರ್ಶಿ ಬಿಸಿ ಉಮಾಪತಿ, ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ ಹಾಗೂ ಕಾರ್ಯದರ್ಶಿ ಕೆಎಂ ಜ್ಯೋತಿ ಪ್ರಕಾಶ್.

ಇದನ್ನೂ ಓದಿ: 20 ವರ್ಷದ ಹಿಂದೆಯೇ 16,700 ರೂ ಕಟ್ಟಿದ್ರೂ ಇದುವರೆಗೂ ಎ ಖಾತಾ ಸಿಕ್ಕಿಲ್ಲ, ಇದು ಅಧಿಕಾರಿಗಳ ಕಾರ್ಯವೈಖರಿ

ಮಾರ್ಚ್​​ 10ರಂದು ರಾತ್ರಿ 7ರಿಂದ9 ಗಂಟೆ ವೇಳೆಗೆ ಗಲಾಟೆ ನಡೆದಿದೆ. ಈ ವೇಳೆ ಮಠದ ದಾಸೋಹದ ಉಸ್ತುವಾರಿ ಅಶೋಕ ಎಂಬುವವರ ಮೇಲೆ ಹಲ್ಲೆ ಮಾಡಲಾಗಿದೆ. ಸಿಸಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ಕಿತ್ತುಕೊಂಡು ಹೋಗುವುದನ್ನ ತಡೆಯಲು ಹೋದ ವೇಳೆ ಹಲ್ಲೆ ಮಾಡಲಾಗಿದೆ. ಇದಕ್ಕೆ ಮೂಲ ಕಾರಣ ಲೆಕ್ಕ ಪತ್ರದದ ಕಿತಾಪತಿ. 2008ರಲ್ಲಿ ಹರಿಹರ ಪಂಚಮಸಾಲಿ ಗುರುಪೀಠ ಆರಂಭವಾಗಿದೆ. ಬರೋಬ್ಬರಿ 100 ಕೋಟಿ ರೂ ಹಣ ಬಂದಿದೆ. ಲೆಕ್ಕಾ ಕೊಡಿ ಅಂದರೆ ಹೀಗೆ ಹಲ್ಲೆ, ಜಗಳ ಮಾಡುವುದು, ಡಿವಿಆರ್ ಕಿತ್ತುಕೊಂಡು ಹೋಗುವುದು ಮಾಡುತ್ತಿದ್ದಾರೆ. ಚಂದ್ರಶೇಖರ ಪೂಜಾರ ಬೆಂಬಲಿಗರಿಂದ ಇಂತಹ ಕೃತ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಸುದ್ದಿಗೋಷ್ಠಿಯಲ್ಲೂ ಗಲಾಟೆ

ಇಂದು ಮಠದ ಆಡಳಿತಾಧಿಕಾರಿ ಡಾ. ರಾಜಕುಮಾರ ಅವರು ಸುದ್ದಿಗೋಷ್ಠಿ ಮಾಡಿದ್ದು, ಆ ವೇಳೆ ಕೂಡ ಹೊನ್ನಾಳಿಯ ಕೆಲವರು ಗಲಾಟೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ಬೇವಿನಮರದ, ರಾಣೆಬೊನ್ನೂರು ಮಾಜಿ ಶಾಸಕ ಅರುಣಕುಮಾರ ಸೇರಿದಂತೆ ಪ್ರಮುಖರು ಹಾಜರಾಗಿದ್ದರು. ರಾಜಕುಮಾರ ಅವರು ಆಡಳಿತಾಧಿಕಾರಿ ಆಗಿ ಎರಡು ವರ್ಷವಾಗಿದೆ. ಅವರಿಗೆ ಚೆಕ್ ಬುಕ್ ಕೊಟ್ಟಿಲ್ಲ. ಮಠದ ದಾಖಲೆ ಕೊಟ್ಟಿಲ್ಲ. ಮೇಲಾಗಿ ಮಠದ ಆಸ್ತಿ ವಿಚಾರ ಕೇಳಿದರೂ ಸಹ ಹೇಳುತ್ತಿಲ್ಲ.

7ರಿಂದ 8 ಕೋಟಿ ರೂ ಅವ್ಯವಹಾರ ಆರೋಪ

ಸರ್ಕಾರದಿಂದ ಮಠಕ್ಕೆ 11 ಕೋಟಿ ರೂ ಬಂದಿದೆ. ಇದರಲ್ಲಿ ಸಹ ಹಣ ಗೋಲ್​ ಮಾಲ್​​ ಮಾಡಲಾಗಿದೆ. ಇತ್ತೀಚೆಗೆ ನಡೆದ ಮಠದ ಸಭೆಯಲ್ಲಿ ಬಾವಿ ಬೆಟ್ಟಪ್ಪ ಅವರು ಹೇಳಿದಂತೆ 7ರಿಂದ 8 ಕೋಟಿ ರೂ ಅವ್ಯವಹಾರ ನಡೆದಿದೆ. ಮೇಲಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಶಿಗ್ಗಾವಿಯಲ್ಲಿ ಎರಡು ಎಕರೆ ಹಾಗೂ ಬಸವರಾಜ್ ಬೊಮ್ಮಾಯಿ ನೀಡಿದ ಒಟ್ಟು ನಾಲ್ಕು ಎಕರೆ ಭೂಮಿ ಇದೆ. ಆದರೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಭೂಮಿ ಎಲ್ಲಿದೆ ಎಂಬ ಮಾಹಿತಿ ನೀಡುತ್ತಿಲ್ಲ. ಹೀಗೆ ಹತ್ತಾರು ಅವ್ಯವಹಾರ ಮಾಡಿ ಈಗ ಸ್ವಾಮೀಜಿಗಳ ಬಗ್ಗೆ ಮಾತಾಡುತ್ತಿದ್ದಾರೆ. ಸ್ವಾಮೀಜಿಗೆ ಚೆಕ್​ ಸಹಿ ಅಧಿಕಾರವಿಲ್ಲ. ಮಠದಿಂದ ಒಂದು ರೂ ಪಡೆದಿಲ್ಲ. ಇವರ ಬಗ್ಗೆ ಮಾತಾದಿದರೆ ಪ್ರತಿಭಟನೆ ಮಾಡಲು ಸಮಾಜ ಮುಖಂಡರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಗದಗದಲ್ಲಿ ನಕಲಿ ಲಾಟರಿ ಜಾಲ ಸಕ್ರಿಯ: ಕೇರಳ ಸರ್ಕಾರದ ಚಿಹ್ನೆ ದುರ್ಬಳಕೆ ಮಾಡಿ ವಂಚನೆ ಆರೋಪ

ತಿಂಗಳಿಗೆ ಮಠದ ಖರ್ಚು 4 ಲಕ್ಷ ರೂ. ಬಾಕಿ 20 ತಿಂಗಳ ಹಣ ಪಡೆಯಲಾಗಿದೆ. ಮಠದಕ್ಕೆ ಸಂಬಂಧಿಸಿದ 14 ಖಾತೆಗಳು ಬ್ಯಾಂಕ್​ನಲ್ಲಿವೆ. ಇವುಗಳಲ್ಲಿ ಕೇವಲ 17 ಲಕ್ಷ ರೂ ಇದೆ. ಈಗ ಹೊಸ ಆಡಳಿತಾಧಿಕಾರಿ ಬಂದ ಬಳಿಕ ಒಂದುವರೆ ಕೋಟಿ ರೂ ಹಣ ಠೇವಣಿ ಇಡಲಾಗಿದೆ. ಬಂದ ಬಡ್ಡಿಯಲ್ಲಿ ದಾಸೋಹ ಮಾಡಲಾಗುತ್ತಿದೆ. ಆದರೆ ಈ ಹಿಂದೆ ಯಾರ ಯಾರ ಕಡೆ ಹಣ ತೆಗೆದುಕೊಂಡಿದ್ದೀರಿ ಪಟ್ಟಿ ಕೊಡಿ ಅಂದರೆ ಕೊಡುತ್ತಿಲ್ಲ. ಒಟ್ಟಾರೆ ಪಂಚಮಸಾಲಿ ಮಠದದಲ್ಲಿ ಕೆಲ ಪ್ರಭಾವಿಗಳು ಸೇರಿ ಕೋಟ್ಯಂತರ ರೂ ಗೋಲ್ ಮಾಲ್ ಮಾಡಿದ ಆರೋಪ ಕೇಳಿ ಬರುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chanakya Niti: ಜೀವನದಲ್ಲಿ ಹಣ, ಶ್ರೀಮಂತಿಕೆ ಗಳಿಸಲು ಚಾಣಕ್ಯರ ಈ ಮಾತುಗಳನ್ನು ಪಾಲಿಸಿ

ಶ್ರೀಮಂತರಾಗಬೇಕು, ಜೀವನದಲ್ಲಿ ದುಡ್ಡು ಗಳಿಸಬೇಕು ಎಂಬ ಬಯಕೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಕಠಿಣ ಪರಿಶ್ರಮ ಪಡುತ್ತಾರೆ. ಹಣ ಗಳಿಸಲು ಕಠಿಣ ಪರಿಶ್ರಮ ಒಂದೇ ಸಾಲಲ್ಲ, ಈ ಕೆಲವೊಂದು ಸಲಹೆಗಳನ್ನೂ ಪಾಲಿಸಬೇಕು ಎಂದು ಆಚಾರ್ಯ ಚಾಣಕ್ಯರು (Acharya Chanakya) ಹೇಳಿದ್ದಾರೆ. ಹಾಗಿದ್ರೆ ಆಚರ್ಯ ಚಾಣಕ್ಯರು ಹೇಳಿರುವಂತೆ  ಜೀವನದಲ್ಲಿ ಆರ್ಥಿಕ ಸ್ಥಿರತೆ ಮತ್ತು ಸಮೃದ್ಧಿ ಲಭಿಸಲು ಯಾವ ವಿಷಯಗಳಿಗೆ ಗಮನ ಕೊಡಬೇಕು ಎಂಬುದನ್ನು ನೋಡೋಣ ಬನ್ನಿ.

ಹಣ, ಶ್ರೀಮಂತಿಕೆ ಗಳಿಸಲು ಏನು ಮಾಡಬೇಕು?

ದುಂದುವೆಚ್ಚವನ್ನು ತಪ್ಪಿಸಿ: ಹಣವು ನಿಮ್ಮ ಉತ್ತಮ ಸ್ನೇಹಿತನಾಗಿದ್ದು, ಅದು ಕಷ್ಟದ ಸಮಯದಲ್ಲಿ ನಿಮಗೆ ಸಾಕಷ್ಟು ಸಹಾಯಕ್ಕೆ ಬುರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಆದ್ದರಿಂದ ಹಣವನ್ನು ನೀರಿನಂತೆ ಖರ್ಚು ಮಾಡಬಾರದು, ಅನಗತ್ಯ ವಿಷಯಗಳಿಗೆ ಹಣ ಖರ್ಚು ಮಾಡುವವನು ಎಂದಿಗೂ ಶ್ರೀಮಂತನಾಗಲು ಸಾಧ್ಯವಿಲ್ಲ. ಹಾಗಾಗಿ ಒಂದೊಂದು ರೂಪಾಯಿಯನ್ನೂ ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು. ಆದಾಯದ ಸ್ವಲ್ಪ ಭಾಗವನ್ನು ಉಳಿಸಬೇಕು. ಆಗ ಮಾತ್ರ ಸಾಕಷ್ಟು ದುಡ್ಡು ಮಾಡಲು ಸಾಧ್ಯ.

 ಉತ್ತಮ ರೀತಿಯಲ್ಲಿ ಹೂಡಿಕೆ ಮಾಡಿ: ಚಾಣಕ್ಯ ನೀತಿಯ ಪ್ರಕಾರ, ಗಳಿಸಿದ ಹಣವನ್ನು ಪೆಟ್ಟಿಗೆಯಲ್ಲಿ ಸಂಗ್ರಹಿಸಿಡುವ ಬದಲು ಅದನ್ನು ನೀರಿನಂತೆ ಹರಿಯಲು ಬಿಡಬೇಕು. ಅಂದರೆ ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡಬೇಕು. ಹೀಗೆ ಸರಿಯಾದ ಸ್ಥಳದಲ್ಲಿ ನೀವು ಹೂಡಿಕೆ ಮಾಡುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.  ಅದೇ ತಪ್ಪು ವಿಧಾನಗಳ ಮೂಲಕ ಅಥವಾ ಯಾರನ್ನಾದರೂ ಮೋಸ ಮಾಡಿ ಗಳಿಸಿದ ಹಣವು ಹೆಚ್ಚು ಕಾಲ ಉಳಿಯುವುದಿಲ್ಲ. ಈ ರೀತಿ ಗಳಿಸಿದ ಹಣವು ವಿನಾಶಕ್ಕೆ ಕಾರಣವಾಗುತ್ತದೆ, ಆದ್ದರಿಂದ  ಯಾವಾಗಲೂ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಹಣವನ್ನು ಗಳಿಸಬೇಕು ಎಂದು ಹೇಳುತ್ತಾರೆ ಚಾಣಕ್ಯ.

ಇದನ್ನೂ ಓದಿ: ನೀವು ಮಾನಸಿಕವಾಗಿ ಸದೃಢರಾಗಬೇಕಂದ್ರೆ ಚಾಣಕ್ಯರ ಕಿವಿಮಾತುಗಳನ್ನು ಪಾಲಿಸಿ

ಅದೃಷ್ಟವನ್ನು ಅವಲಂಬಿಸಬೇಡಿ, ಕಷ್ಟಪಟ್ಟು ಕೆಲಸ ಮಾಡಿ: ಸೋಮಾರಿತನ ಮನುಷ್ಯನ ದೊಡ್ಡ ಶತ್ರು ಎಂದು ಚಾಣಕ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಅದೃಷ್ಟವನ್ನು ಮಾತ್ರ ಅವಲಂಬಿಸಿ ಕೆಲಸ ಮಾಡದವರು ಶ್ರೀಮಂತಿಕೆಯನ್ನು ಗಳಿಸಲು ಸಾಧ್ಯವೇ ಇಲ್ಲ. ಕಷ್ಟಪಟ್ಟು ದುಡಿಯುವವರು ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯ. ಹಾಗಾಗಿ  ಅದೃಷ್ಟವನ್ನು ಅವಲಂಬಿಸುವ ಬದಲು ಕಷ್ಟಪಟ್ಟು ದುಡಿಯಿರಿ.

ಒಳ್ಳೆಯ ವ್ಯಕ್ತಿಗಳ ಸಹವಾಸ: ಭವಿಷ್ಯದಲ್ಲಿ ನೀವು ಎಷ್ಟು ಯಶಸ್ವಿಯಾಗುತ್ತೀರಿ ಎಂಬುದನ್ನು ನಿಮ್ಮ ಸಹವಾಸ ನಿರ್ಧರಿಸುತ್ತದೆ. ನಿಮ್ಮ ಸ್ನೇಹಿತರು ಅಥವಾ ನಿಮ್ಮ ಸಂಘ ಕೆಟ್ಟದಾಗಿದ್ದರೆ, ನೀವು ಎಂದಿಗೂ ಪ್ರಗತಿ ಹೊಂದಲು ಸಾಧ್ಯವಿಲ್ಲ. ತಮ್ಮ ಗುರಿಗಳನ್ನು ಸಾಧಿಸಲು ದೃಢನಿಶ್ಚಯ ಹೊಂದಿರುವ ಮತ್ತು ಯಾವಾಗಲೂ ಪ್ರಗತಿಯ ಬಗ್ಗೆ ಯೋಚಿಸುವ ಜನರ ಸಹವಾಸದಲ್ಲಿರಿ, ಇದು ನಿಮ್ಮ ಆಲೋಚನಾ ವಿಧಾನವನ್ನು ಬದಲಾಯಿಸುತ್ತದೆ.  ಅದೇ ಕೆಟ್ಟ ಚಟಗಳನ್ನು ಹೊಂದಿರುವವ ಸಹವಾಸದಲ್ಲಿದ್ದರೆ ನಿಮ್ಮ ಜೀವನವೇ ಹಾಳಾಗುತ್ತದೆ. ಹಾಗಾಗಿ ಉತ್ತಮ ಜನರ ಸಹವಾಸವನ್ನು ಬೆಳೆಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಟ್ಯಾರಿಫ್​ಗೆ ನೆಪಗಳ ಹುಡುಕಾಟ; ಭಾರತ ಸೇರಿ 16 ಟ್ರೇಡಿಂಗ್ ಪಾರ್ಟ್ನರ್ಸ್ ಮೇಲೆ ಅಮೆರಿಕ ತನಿಖೆ

ನವದೆಹಲಿ, ಮಾರ್ಚ್ 12: ಹೆಚ್ಚು ಕೈಗಾರಿಕಾ ಸಾಮರ್ಥ್ಯ ಹೊಂದಲಾಗಿರುವ ಕುರಿತಂತೆ ವಿವಿಧ ದೇಶಗಳ ಮೇಲೆ ಅಮೆರಿಕ ತನಿಖೆ ಆರಂಭಿಸಿದೆ. ಅಮೆರಿಕದ ಕಾನೂನಿನ ಸೆಕ್ಷನ್ 301 ಅಡಿಯಲ್ಲಿ ಅನ್ಯಾಯದ ವ್ಯಾಪಾರ ಕ್ರಮಗಳನ್ನು ನಡೆಸಲಾಗುತ್ತಿರುವ ಆರೋಪದ ಮೇಲೆ ತನಿಖೆ ನಡೆಸಲಾಗುತ್ತದೆ. ಭಾರತವೂ ಒಳಗೊಂಡಂತೆ ಅಮೆರಿಕದ 16 ಟ್ರೇಡಿಂಗ್ ಪಾರ್ಟ್ನರ್ ದೇಶಗಳ ಕೈಗಾರಿಕಾ ನೀತಿಗಳನ್ನು ಅಮೆರಿಕ ಅವಲೋಕಿಸಲಿದೆ.

ಟ್ರಂಪ್ ಸರ್ಕಾರದ ಟ್ಯಾರಿಫ್ ಕ್ರಮವನ್ನು ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಅನೂರ್ಜಿತಗೊಳಿಸಿ, ಶೇ. 10ರ ಬೇಸ್​ಲೈನ್ ಟ್ಯಾರಿಫ್ ನಿಗದಿ ಮಾಡಿತ್ತು. ಕೋರ್ಟ್​ನ ಈ ತೀರ್ಪಿನ ವಿರುದ್ಧ ನಿಂತಿರುವ ಟ್ರಂಪ್ ಸರ್ಕಾರ ಪದೇ ಪದೇ ತನ್ನ ಟ್ಯಾರಿಫ್ ನೀತಿಯನ್ನು ಸಮರ್ಥಿಸಿಕೊಳ್ಳುತ್ತಲೇ ಇದೆ. ಈ ನಿಟ್ಟಿನಲ್ಲಿ ಅನ್​ಫೇರ್ ಟ್ರೇಡ್ ಪ್ರಾಕ್ಟಿಸಸ್ ಶಂಕೆಯ ಮೇಲೆ 16 ದೇಶಗಳಿಗೆ ಅಮೆರಿಕದ ತನಿಖೆಯ ಬಿಸಿ ಶುರುವಾಗಿದೆ.

ಇದನ್ನೂ ಓದಿ: ಫೆಬ್ರುವರಿ 2026ರಲ್ಲಿ ರೀಟೇಲ್ ಹಣದುಬ್ಬರ ಶೇ. 3.21ಕ್ಕೆ ಏರಿಕೆ; ಆರ್​ಬಿಐ ಮಿತಿಯಲ್ಲಿ ಬೆಲೆ ಏರಿಕೆ

ಭಾರತ ಅಲ್ಲದೇ, ಚೀನಾ, ಐರೋಪ್ಯ ಒಕ್ಕೂಟ, ಜಪಾನ್, ಸೌತ್ ಕೊರಿಯಾ, ಮೆಕ್ಸಿಕೋ, ತೈವಾನ್, ವಿಯೆಟ್ನಾಂ, ಥಾಯ್ಲೆಂಡ್, ಮಲೇಷ್ಯಾ, ಕಾಂಬೋಡಿಯಾ, ಸಿಂಗಾಪುರ್, ಇಂಡೋನೇಷ್ಯಾ, ಬಾಂಗ್ಲಾದೇಶ, ಸ್ವಿಟ್ಜರ್​ಲ್ಯಾಂಡ್ ಮತ್ತು ನಾರ್ವೆ ದೇಶಗಳು ಈ ತನಿಖೆಗೆ ಒಳಪಡುತ್ತಿವೆ. ಈ 16 ದೇಶಗಳು ಅಮೆರಿಕದ ಪ್ರಮುಖ ಟ್ರೇಡಿಂಗ್ ಪಾರ್ಟ್ನರ್​ಗಳ ಪೈಕಿ ಇವೆ. ಅಮೆರಿಕದ ಎರಡನೇ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಆದ ಕೆನಡಾವನ್ನು ಈ ತನಿಖೆಯಿಂದ ಹೊರತುಪಡಿಸಲಾಗಿದೆ.

ಯಾವ ಅಂಶಗಳ ಮೇಲೆ ನಡೆಯುತ್ತೆ ತನಿಖೆ?

ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ಗಳಲ್ಲಿ ಹೆಚ್ಚಿನ ಉತ್ಪಾದನೆ ಮತ್ತು ಸಾಮರ್ಥ್ಯ ಇರುವುದು, ಸರ್ಕಾರದ ಸಬ್ಸಿಡಿಗಳು, ಕಡಿಮೆ ವೇತನ, ಸರ್ಕಾರಿ ಉದ್ದಿಮೆಗಳ ವಾಣಿಜ್ಯೇತರ ಚಟುವಟಿಕೆ, ಅಸಮರ್ಪಕ ಪರಿಸರ ಮತ್ತು ಕಾರ್ಮಿಕ ವ್ಯವಸ್ಥೆಯ ಗುಣಮಟ್ಟ, ಸಬ್ಸಿಡಿಯಲ್ಲಿ ಸಾಲ ಇತ್ಯಾದಿ ಅಂಶಗಳನ್ನು ಅವಲೋಕಿಸಲಾಗುತ್ತದೆ.

ಇದನ್ನೂ ಓದಿ: ಪೆಟ್ರೋಲ್, ಎಲ್​ಪಿಜಿ ಕೊರತೆ ಇಲ್ಲ: ಸಂಸತ್​ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

ಒಟ್ಟಾರೆ, ಸರ್ಕಾರದ ಸಬ್ಸಿಡಿ ಇತ್ಯಾದಿ ಉತ್ತೇಜನಕಾರಿ ಸವಲತ್ತುಗಳ ನೆರವಿನಿಂದ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳು ಕಡಿಮೆ ಬೆಲೆಗೆ ಸರಕುಗಳನ್ನು ತಯಾರಿಸಿ ರಫ್ತು ಮಾಡುತ್ತಿವೆಯಾ ಎಂಬುದನ್ನು ಅಮೆರಿಕ ತನಿಖೆಯಲ್ಲಿ ಪತ್ತೆ ಮಾಡಲು ಹೊರಟಿದೆ. ಈ ರೀತಿ ಸವಲತ್ತು ಪಡೆದು ಕಡಿಮೆ ಬೆಲೆ ಸರಕುಗಳನ್ನು ತಯಾರಿಸಿ ಮಾರುತ್ತಿದ್ದರೆ ಅದು ಅಮೆರಿಕನ್ ಕಾನೂನು ಪ್ರಕಾರ ಅನ್​ಫೇರ್ ಟ್ರೇಡ್ ಪ್ರಾಕ್ಟಿಸಸ್ ಆಗುತ್ತದೆ. ತನಿಖೆಯಲ್ಲಿ ಇದು ಋಜುವಾತಾದರೆ, ಅಂಥ ದೇಶಗಳು ಮತ್ತು ಕಂಪನಿಗಳು, ಹಾಗು ಸರಕುಗಳ ಮೇಲೆ ಅಮೆರಿಕ ಹೆಚ್ಚಿನ ಟ್ಯಾರಿಫ್ ವಿಧಿಸಲು ಯೋಜಿಸುತ್ತಿದ್ದಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಭೂತ್ ಬಂಗ್ಲ’ ಸಿನಿಮಾದ ಟೀಸರ್ ನೋಡಿದ್ರಾ? ಹಾರರ್ ಜೊತೆ ಭರ್ಜರಿ ಕಾಮಿಡಿ

ಬಾಲಿವುಡ್‌ನ ಎವರ್‌ಗ್ರೀನ್ ಹಿಟ್ ಜೋಡಿ ಅಕ್ಷಯ್ ಕುಮಾರ್ (Akshay Kumar) ಮತ್ತು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಸುಮಾರು 14 ವರ್ಷಗಳ ಸುದೀರ್ಘ ಗ್ಯಾಪ್ ನಂತರ ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಹಾರರ್-ಕಾಮಿಡಿ ಸಿನಿಮಾ ‘ಭೂತ್ ಬಂಗ್ಲ’ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈಗ ಈ ಸಿನಿಮಾದ ಟೀಸರ್ (Bhooth Bangla Teaser) ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಈ ಸಿನಿಮಾದ ಪ್ರಚಾರದಲ್ಲಿ ಅಕ್ಷಯ್ ಕುಮಾರ್ ಅವರು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

‘ಹೇರಾ ಫೇರಿ’, ‘ಭೂಲ್ ಭುಲಯ್ಯ’, ‘ಗರಂ ಮಸಾಲಾ’ ರೀತಿಯ ಕ್ಲಾಸಿಕ್ ಕಾಮಿಡಿ ಚಿತ್ರಗಳನ್ನು ನೀಡಿದ ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಜೋಡಿ, 2026ರ ಅತ್ಯಂತ ನಿರೀಕ್ಷಿತ ಸಿನಿಮಾದ ಮೂಲಕ ಮರಳುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಿನಿಮಾದ ಟೀಸರ್‌ನಲ್ಲಿ ಹಾರರ್ ಮತ್ತು ಕಾಮಿಡಿಯ ಮಿಶ್ರಣವಿದ್ದು, ನೋಡುಗರಿಗೆ ನಗುವಿನ ಜೊತೆಗೆ ಭಯವನ್ನೂ ಹುಟ್ಟಿಸುವ ಸನ್ನಿವೇಶಗಳ ಸುಳಿವು ನೀಡಲಾಗಿದೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಹಿರಿಯ ಹಾಸ್ಯ ನಟರ ದಂಡೇ ಇಲ್ಲಿದೆ. ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ಪರೇಶ್ ರಾವಲ್, ರಾಜ್‌ಪಾಲ್ ಯಾದವ್ ಮತ್ತು ಅಸ್ರಾನಿ ಅವರು ಹಳೆಯ ಹಿಟ್ ಚಿತ್ರಗಳ ನೆನಪನ್ನು ಮರುಕಳಿಸುವಂತೆ ಮಾಡಿದ್ದಾರೆ. ಅಕ್ಷಯ್ ಕುಮಾರ್ ಅವರೊಂದಿಗೆ ಟಬು ಮತ್ತು ವಾಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು ಎರಡು ದಶಕಗಳ ನಂತರ ಅಕ್ಷಯ್ ಮತ್ತು ಟಬು ತೆರೆ ಹಂಚಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಡಬಲ್ ಧಮಾಕಾ ನೀಡಿದಂತಾಗಿದೆ.

‘ಭೂತ್ ಬಂಗ್ಲ’ ಸಿನಿಮಾ ಟೀಸರ್‌:

‘ಬಾಲಾಜಿ ಮೋಷನ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ಕೇಪ್ ಆಫ್ ಗುಡ್ ಫಿಲ್ಮ್ಸ್’ ಸಹಯೋಗದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವು ಏಪ್ರಿಲ್ 10ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹಾರರ್-ಕಾಮಿಡಿ ಶೈಲಿಯ ಈ ಚಿತ್ರವು ಬಾಲಿವುಡ್‌ನಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: ರುಂಡ ಇಲ್ಲದ ವ್ಯಕ್ತಿ ಜೊತೆ ಅಕ್ಷಯ್ ಕುಮಾರ್

ಚಿತ್ರರಂಗದಲ್ಲಿ ನಿರ್ದೇಶಕ ಪ್ರಿಯದರ್ಶನ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಜೊತೆ ಅಕ್ಷಯ್ ಕುಮಾರ್ ಕೈ ಜೋಡಿಸಿದರೆ ಅಭಿಮಾನಿಗಳಿಗೆ ಡಬಲ್ ಮನರಂಜನೆ ಗ್ಯಾರಂಟಿ. ಆ ಕಾರಣದಿಂದ ‘ಭೂತ್ ಬಂಗ್ಲ’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಟೀಸರ್ ನೋಡಿದ ಸಿನಿಪ್ರಿಯರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಿಡ್ನಿ ಆರೋಗ್ಯವಾಗಿ ಇರಬೇಕು ಅಂದ್ರೆ ಆರೋಗ್ಯ ತಜ್ಞರು ಹೇಳಿದ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಲೇಬೇಕು!

ಇತ್ತೀಚಿನ ಕೆಲವು ವರ್ಷಗಳಲ್ಲಿ ಕಿಡ್ನಿ (Kidney) ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿದೆ. ಅಸ್ವಸ್ಥ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಮಾಡಿಕೊಂಡ ಅನೇಕ ರೀತಿಯ ಬದಲಾವಣೆಗಳು ಇಂತಹ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣಗಳಾಗಿವೆ. ಆದರೆ ಕೆಲ ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸಿದರೆ ಕಿಡ್ನಿಯ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು. ಈ ಬಗ್ಗೆ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ಹಿಮಾಂಶು ವರ್ಮಾ ಮಾತನಾಡಿದ್ದು ಕಿಡ್ನಿ ಆರೋಗ್ಯವಾಗಿರಲು ಯಾವ ರೀತಿಯ ಸಲಹೆಗಳನ್ನು ಪಾಲಿಸಬೇಕು, ಇದರಿಂದ ಕಿಡ್ನಿ ಆರೋಗ್ಯ ಹೇಗೆ ಸುಧಾರಿಸುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಈ ಸಲಹೆಗಳನ್ನು ತಪ್ಪದೆ ಪಾಲನೆ ಮಾಡುವುದರಿಂದ ಕಿಡ್ನಿ ಆರೋಗ್ಯ ಹಾಳಾಗುವುದನ್ನು ತಡೆಯಬಹುದಾಗಿದೆ.

ಕಿಡ್ನಿಯನ್ನು ಆರೋಗ್ಯವಾಗಿಡಲು ಸಲಹೆಗಳು;

ನೀರು ಕುಡಿಯಿರಿ: ಪ್ರತಿ ದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಕಿಡ್ನಿ ಆರೋಗ್ಯಕ್ಕೆ ಅಗತ್ಯ. ಇದರಿಂದ ದೇಹದಲ್ಲಿನ ವಿಷಪದಾರ್ಥಗಳು ಹೊರಹೋಗುತ್ತವೆ ಮತ್ತು ಕಿಡ್ನಿಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

ಉಪ್ಪಿನ ಸೇವನೆಯನ್ನು ನಿಯಂತ್ರಿಸಿ: ಹೆಚ್ಚು ಉಪ್ಪು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗಬಹುದು, ಇದು ಕಿಡ್ನಿಗೆ ಹಾನಿಕಾರಕ. ಆದ್ದರಿಂದ ದಿನನಿತ್ಯ ಸೇವನೆ ಮಾಡುವ ಉಪ್ಪಿನ ಪ್ರಮಾಣವನ್ನು ನಿಯಂತ್ರಿಸುವುದು ಅಗತ್ಯ.

ರಕ್ತದೊತ್ತಡ ಮತ್ತು ಶುಗರ್ ನಿಯಂತ್ರಣದಲ್ಲಿರಲಿ: ಯಾರಾದರೂ ಹೈ ಬಿಪಿ ಅಥವಾ ಮಧುಮೇಹದಿಂದ ಬಳಲುತ್ತಿದ್ದರೆ ಅವುಗಳನ್ನು ನಿಯಂತ್ರಣದಲ್ಲಿಡುವುದು ಅತ್ಯಂತ ಮುಖ್ಯ. ಇಲ್ಲವಾದರೆ ಕಿಡ್ನಿಯ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.

ನಿಯಮಿತ ವ್ಯಾಯಾಮ ಮಾಡಿ: ಪ್ರತಿ ದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿದರೆ ದೇಹ ಫಿಟ್ ಆಗಿರುತ್ತದೆ ಮತ್ತು ಕಿಡ್ನಿ ಕಾಯಿಲೆಗಳ ಅಪಾಯ ಕಡಿಮೆಯಾಗಬಹುದು.

ಇದನ್ನೂ ಓದಿ: ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಿಡ್ನಿ ಕ್ಯಾನ್ಸರ್ ಸೂಚಕವೇ? ಯಾವಾಗ ವೈದ್ಯರ ಸಲಹೆ ಪಡೆಯಬೇಕು

ವೈದ್ಯರ ಸಲಹೆ ಇಲ್ಲದೆ ಪೇನ್‌ಕಿಲರ್ ಬಳಸದಿರಿ: ಕೆಲವು ಪೇನ್‌ಕಿಲರ್ ಔಷಧಿಗಳನ್ನು ದೀರ್ಘಕಾಲ ಬಳಸುವುದರಿಂದ ಕಿಡ್ನಿಗೆ ಹಾನಿಯಾಗಬಹುದು. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಔಷಧಿ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.

35 ವರ್ಷಗಳ ನಂತರ ಪೂರ್ಣ ಆರೋಗ್ಯ ತಪಾಸಣೆ: ಡಾ. ಹಿಮಾಂಶು ಹೇಳುವ ಪ್ರಕಾರ 35 ವರ್ಷಗಳ ನಂತರ ನಿಯಮಿತವಾಗಿ ಫುಲ್ ಬಾಡಿ ಚೆಕ್‌ಅಪ್ ಮಾಡಿಸಿಕೊಳ್ಳುವುದು ಅಗತ್ಯ. ಇದರಿಂದ ಯಾವುದೇ ಕಾಯಿಲೆಯನ್ನು ಮೊದಲ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿನ್ನದ ಸರ ಕಳ್ಳತನ: ಸಾರಿಗೆ ಬಸ್ ಸಮೇತ ಪೊಲೀಸ್ ಠಾಣೆಗೆ ಬಂದ ಮಹಿಳೆ

ಹಾವೇರಿ, ಮಾರ್ಚ್​ 12: ಸಾರಿಗೆ ಬಸ್​​ನಲ್ಲಿ ಚಿನ್ನದ ಸರ ಕಳ್ಳತನವಾಗಿದ್ದು (Gold Theft), ಬಸ್ ಸಮೇತ ಮಹಿಳೆ ಪೊಲೀಸ್ ಠಾಣೆಗೆ ಬಂದಿರುವಂತಹ ಘಟನೆ ಹಾವೇರಿ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಾನಗಲ್ ತಾಲ್ಲೂಕಿನ ಹಿರೇಬಾಸೂರು ಗ್ರಾಮದ ನಿವಾಸಿ ಮೀನಾಕ್ಷಿ ಕಾಗಿನೆಲೆ 10 ಗ್ರಾಂನ ಚಿನ್ನದ ಸರ ಕಳೆದುಕೊಂಡ ಮಹಿಳೆ. ಅಡಮಾನ ಇಟ್ಟಿದ್ದ ಚಿನ್ನ ಬಿಡಿಸಿಕೊಂಡು ಹೋಗುತ್ತಿದ್ದ ವೇಳೆ ಬಸ್​ನಲ್ಲಿ ಕಳ್ಳತನವಾಗಿದೆ. ನನಗೆ ಚಿನ್ನದ ಸರ ಹುಡುಕಿ ಕೊಡಿ ಎಂದು ಬಸ್ ಸಮೇತ ಮಹಿಳೆ ಪೊಲೀಸ್ ಠಾಣೆಗೆ ಬಂದಿದ್ದಾರೆ.

ದೇವಿ ದೇವಾಲಯದಲ್ಲಿ ಲಕ್ಷಾಂತರ ರೂ ಬೆಲೆ ಬಾಳುವ ಬೆಳ್ಳಿ ಆಭರಣ ಕಳ್ಳತನ

ತುಮಕೂರಿನ ಇತಿಹಾಸ ಪ್ರಸಿದ್ಧ ವಡ್ಡಗೆರೆ ವೀರನಾಗಮ್ಮ ದೇವಿ ದೇವಾಲಯದಲ್ಲಿ ಬರೋಬ್ಬರಿ 10 ಕೆ.ಜಿಗೂ ಅಧಿಕ ಲಕ್ಷಾಂತರ ರೂ ಬೆಲೆ ಬಾಳುವ ಬೆಳ್ಳಿ ಆಭರಣಗಳನ್ನು ಕಳ್ಳರು ಕದ್ದಿರುವಂತಹ ಘಟನೆ ನಿನ್ನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಹಬ್ಬ ಮುಗಿದ ಮೂರೇ ದಿನಕ್ಕೆ ದೇಗುಲಕ್ಕೆ ಕನ್ನ: 4 ಕೆಜಿ ಬೆಳ್ಳಿ, 30 ಗ್ರಾಂ ಚಿನ್ನಾಭರಣ ದೋಚಿ ಪರಾರಿ

ದೇವಸ್ಥಾನದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ಗ್ಯಾಸ್ ಕಟರ್ ಬಳಸಿ ದೇವಸ್ಥಾನದ ಬಾಗಿಲು ಕಟ್ ಮಾಡಿ ಕಳ್ಳತನ ಮಾಡಿದ್ದಾರೆ. ಕಳ್ಳತನದ ಬಳಿಕ ಸಿಸಿಟಿವಿ, ಡಿವಿಆರ್​​ ಅನ್ನು ಚಾಲಾಕಿ ಕಳ್ಳರು ತೆಗೆದುಕೊಂಡು ಹೋಗಿದ್ದಾರೆ. ಬೆಳಗ್ಗೆ ದೇವಸ್ಥಾನದ ಪೂಜೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಯೋವೃದ್ಧ ದಂಪತಿಗೆ ವಂಚಿಸಿದ ಮನೆಗೆಲಸದ ಮಹಿಳೆ ಬಂಧನ

ವಯೋವೃದ್ಧ ದಂಪತಿಗೆ ವಂಚಿಸಿದ ಮನೆಗೆಲಸದ ಮಹಿಳೆಯನ್ನು ಬೆಂಗಳೂರಿನ ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಧನಲಕ್ಷ್ಮೀಯಿಂದ 54 ಗ್ರಾಂ ಚಿನ್ನಾಭರಣ ಮತ್ತು 8 ಲಕ್ಷ ರೂ ನಗದು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕ: ಮಾಲೀಕ ಗಿರವಿಟ್ಟಿದ್ದ 13 ಲಕ್ಷ ಚಿನ್ನವನ್ನೇ ಮಾರಿದ ಭೂಪ

ಮನೆ ನಿರ್ವಹಣೆಗೆ ಪ್ರತಿ ತಿಂಗಳು ವೃದ್ಧ ದಂಪತಿ ಮನೆಗೆಲಸದಾಕೆ ಧನಲಕ್ಷ್ಮೀ ಜೊತೆ ತೆರಳಿ ಹಣ ಡ್ರಾ ಮಾಡುತ್ತಿದ್ದರು. ವೃದ್ಧ ದಂಪತಿ ಮನೆಯಲ್ಲಿ ಹಣ ಇಡುವುದನ್ನು ಧನಲಕ್ಷ್ಮೀ ಗಮನಿಸಿದ್ದಳು. ಒಂದು ವರ್ಷದಿಂದ ಹಣ, ಚಿನ್ನಾಭರಣ ಕದಿಯುತ್ತಿದ್ದಳು. ಕಳ್ಳತನದ ಬಗ್ಗೆ ವೃದ್ಧ ದಂಪತಿ ಅಳಿಯ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ನಂತರ ಪುಲಿಕೇಶಿನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್​ ತನಿಖೆ ವೇಳೆ ಧನಲಕ್ಷ್ಮೀ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಧನಲಕ್ಷ್ಮೀ ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪಾಕ್ ಆಟಗಾರನನ್ನು 2.34 ಕೋಟಿಗೆ ಖರೀದಿಸಿದ ಸನ್‌ರೈಸರ್ಸ್; ಭುಗಿಲೆದ್ದ ಆಕ್ರೋಶ

ಮುಂಬರುವ ದಿ ಹಂಡ್ರೆಡ್ ಲೀಗ್​ಗೆ ಇಂದು ಹರಾಜು ನಡೆಯುತ್ತಿದೆ. ಈ ಲೀಗ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಕಂಪನಿಗಳು ಫ್ರಾಂಚೈಸಿಗಳನ್ನು ಖರೀದಿಸಿವೆ. ಹೀಗಾಗಿ ಈ ಲೀಗ್‌ನಲ್ಲಿ ಪಾಕಿಸ್ತಾನದ ಆಟಗಾರರು ಆಡುವುದರಿಂದ ಭಾರತೀಯ ಒಡೆತನದ ಫ್ರಾಂಚೈಸಿಗಳು ಪಾಕಿಸ್ತಾನಿ ಆಟಗಾರನನ್ನು ಖರೀದಿಸುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿತ್ತು. ಏಕೆಂದರೆ ಪಾಕ್ ಆಟಗಾರರನ್ನು ಖರೀದಿಸಿದರೆ, ಭಾರತೀಯರ ಕೋಪಕ್ಕೆ ಗುರಿಯಾಗುವುದು ಖಚಿತವಾಗಿತ್ತು. ಆದಾಗ್ಯೂ ಕಾವ್ಯ ಮಾರನ್ ಒಡೆತನದ ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿ, ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ತನ್ನ ತಂಡಕ್ಕೆ ಖರೀದಿ ಮಾಡಿದೆ. ಪಾಕಿಸ್ತಾನಿ ಆಟಗಾರನನ್ನು ಖರೀದಿಸಿರುವ ಕಾವ್ಯ ಮಾರನ್ ಅವರ ಈ ನಿರ್ಧಾರವು ಈಗ ವಿವಾದವನ್ನು ಹುಟ್ಟುಹಾಕಿದೆ.

ಕಾವ್ಯ ಮಾರನ್ ಫ್ರಾಂಚೈಸಿ, ಅಬ್ರಾರ್ ಅಹ್ಮದ್ ಅವರನ್ನು 2.34 ಕೋಟಿ ರೂ.ಗೆ ಖರೀದಿಸಿದೆ. ಅಬ್ರಾರ್ ಅಹ್ಮದ್​ಗಾಗಿ ಟ್ರೆಂಟ್ ರಾಕೆಟ್ಸ್ ಹಾಗೂ ಸನ್‌ರೈಸರ್ಸ್ ಲೀಡ್ಸ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಕಾವ್ಯ ಮಾರನ್, ಅಬ್ರಾರ್ ಅಹ್ಮದ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಕಾವ್ಯ ಮಾರನ್ ಪಾಕ್ ಆಟಗಾರನನ್ನು ಖರೀದಿಸಿದ ಕೂಡಲೇ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟೀಕೆಗಳ ಮಳೆ ಶುರುವಾಗಿದೆ. ಕಾವ್ಯ ಮಾರನ್ ಮತ್ತು ಅವರ ದಿ ಹಂಡ್ರೆಡ್ ಫ್ರಾಂಚೈಸಿಯ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾತೆ. ಕೆಲವರು ಈ ನಿರ್ಧಾರವನ್ನು ನಾಚಿಕೆಗೇಡಿನ ಸಂಗತಿ ಎಂದು ಕರೆಯುತ್ತಿದ್ದರೆ, ಇತರರು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಜು ಸ್ಯಾಮ್ಸನ್​ಗಿಂತಲೂ ಈತ ಟೂರ್ನಮೆಂಟ್ ಆಟಗಾರ ಪ್ರಶಸ್ತಿಗೆ ಅರ್ಹ ಎಂದ ಡಿವಿಲಿಯರ್ಸ್

Source link

ಬೆಂಗಳೂರಿಗರಿಗೆ ಸಿಹಿಸುದ್ದಿ: ಗ್ಯಾಸ್ ಬಗ್ಗೆ ಜಿಲ್ಲಾಧಿಕಾರಿ ಮಹತ್ವದ ಸ್ಪಷ್ಟನೆ, ಹೋಟೆಲ್​ಗಳು ಬಂದ್ ಆಗಲ್ಲ

ಬೆಂಗಳೂರು, ಮಾರ್ಚ್​​ 12: ಗಲ್ಫ್​ ರಾಷ್ಟ್ರಗಳ ಯುದ್ಧದಿಂದಾಗಿ ದೇಶದ ಜನಸಾಮಾನ್ಯರಿಗೆ ಬಿಸಿ ತಟ್ಟಿದೆ. ಅದರಲ್ಲೂ ಗ್ಯಾಸ್​​​​​​ ಪೂರೈಕೆಯಲ್ಲಿನ ವ್ಯತ್ಯಯವೂ ರಾಜ್ಯದ ಜನ ಜೀವನದ ದಿಕ್ಕೇ ಬದಲಾಗುತ್ತಿದೆ. ಹೋಟೆಲ್​​​ಗಳು ಬಂದ್ ಆಗುತ್ತಿವೆ. ಇನ್ನು ಈ ಮಧ್ಯೆ ಬೆಂಗಳೂರಿನಲ್ಲಿ LPG​ ಸಿಲಿಂಡರ್ ಕೊರತೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದ್ದು, ಎಲ್​ಪಿಜಿ ದಾಸ್ತಾನು ಕೊರತೆ ಇಲ್ಲ. ಸುಳ್ಳು ವದಂತಿಗೆ ಕಿವಿಕೊಡಬೇಡಿ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ.ಜಿ ಹೇಳಿದ್ದಾರೆ. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಕೂಡ ಯಾವುದೇ ಹೋಟೆಲ್​ಗಳು ಬಂದ್ ಆಗಲ್ಲ ಎಂದಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರೋ ಯುದ್ಧದಿಂದಾಗಿ ಜಗತ್ತಿನಾದ್ಯಂತ ಅಸ್ಥಿರತೆ ಉಂಟಾಗಿದೆ. ಯುದ್ಧದ ಮೋಹದಿಂದ ಜಗತ್ತಿಗೆ ತೈಲದ ಹೊರೆಬಿದ್ದಿದೆ. ಅದರಲ್ಲೂ, ಭಾರತದಲ್ಲಂತೂ ಗ್ಯಾಸ್ ಗಂಡಾಂತರವನ್ನೇ ಸೃಷ್ಟಿಸಿದೆ. ಮರ್ಷಿಯಲ್ ಗ್ಯಾಸ್ ಪೂರೈಕೆ ಆಗದೆ ಹೋಟೆಲ್​ಗಳು ಬಂದ್ ಆಗುತ್ತಿವೆ.

ಎಲ್​ಪಿಜಿ ದಾಸ್ತಾನು ಕೊರತೆ ಇಲ್ಲ: ಸುಳ್ಳು ವದಂತಿಗೆ ಕಿವಿಕೊಡಬೇಡಿ: ಜಿಲ್ಲಾಧಿಕಾರಿ

ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್​ಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ.ಜಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಎಲ್‌ಪಿಜಿ ಸಿಲಿಂಡರ್​ ಸಿಗದೆ ಪರದಾಟ: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕೆ

ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲವು ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಅನಿಲದ ಕೊರತೆ ಇರುವುದಿಲ್ಲವಾದ್ದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಹಾಗೂ ಗೃಹಬಳಕೆ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಯಾವುದೇ ಕುಂದುಕೊರತೆಗಳು ಇದಲ್ಲಿ ಸಹಾಯವಾಣಿ 9611404384 ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವುದೇ ಹೋಟೆಲ್​ಗಳು ಬಂದ್ ಆಗಲ್ಲ: ಪಿಸಿ ರಾವ್​​ 

ಇನ್ನು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿಸಿ ರಾವ್​​ ಪ್ರತಿಕ್ರಿಯಿಸಿದ್ದು, ನಮ್ಮ ಉದ್ಯಮ ಉಳಿಯಬೇಕು. ಕಾರ್ಮಿಕರಿಗೂ, ಗ್ರಾಹಕರಿಗೂ ತೊಂದರೆ ಆಗಬಾರದು. ಗ್ರಾಹಕರ ನಂಬಿಕೆ ಉಳಿಸಿಕೊಳ್ಳಬೇಕು. ಯಾರೂ ಕೂಡ ಹೋಟೆಲ್ ಬಾಗಿಲು ಹಾಕಬಾರದು. ಬೆಂಗಳೂರಿನಲ್ಲಿ ಯಾವುದೇ ಹೋಟೆಲ್​ಗಳು ಬಂದ್ ಆಗಲ್ಲ. ಬಂದ್ ಆಗಿರುವ ಹೋಟೆಲ್​​ಗಳನ್ನ ಮತ್ತೆ ತೆರೆಯುವ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.

ಹೋಟೆಲ್​ ಬಾಗಿಲು ಹಾಕಿದರೆ ಎಲ್ಲರಿಗೂ ತೊಂದರೆ

ಪಿಜಿಯಲ್ಲಿರುವ ಬ್ಯಾಚುಲರ್ಸ್, ಐಟಿ ಕಂಪನಿ, ಆಸ್ಪತ್ರೆಗಳಿಗೆ ಹೋಟೆಲ್​ಗಳು ಹೆಚ್ಚು ನೆರವು ಆಗುತ್ತಿವೆ. ಬಾಗಿಲು ಹಾಕಿದರೆ ಮಾಲೀಕರು, ಕಾರ್ಮಿಕರು, ಜನರಿಗೂ ತೊಂದರೆ ಆಗುತ್ತೆ. ಕೇವಲ 20% ಕಡಿಮೆ ಬಳಕೆ ಮಾಡುತ್ತಿದ್ದೇವೆ. ನಮಗೆ ಒದಗಿಸುವ ಗ್ಯಾಸ್​ನಲ್ಲಿ 50% ಕೊಡಿ ಸಾಕು. ಪೆಟ್ರೋಲಿಯಂ ಕಂಪನಿಗಳ‌ ಮುಖ್ಯಸ್ಥರ ಜೊತೆ, ಸರ್ಕಾರದ ಕಾರ್ಯದರ್ಶಿಗಳ‌ ಜೊತೆ ಪರ್ಯಾಯ ಮಾರ್ಗಗಳ ಕುರಿತು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಲ್ಲಿಲ್ಲ ಗ್ಯಾಸ್ ಸಿಲಿಂಡರ್ ಟೆನ್ಶನ್! ಪ್ರತಿನಿತ್ಯ 70 ಸಾವಿರ ಮಕ್ಕಳಿಗೆ ಸಿಗುತ್ತೆ ಬಿಸಿ ಬಿಸಿ ಊಟ

ಸದ್ಯಕ್ಕೆ ಬಂದ ಮಾಹಿತಿ ಪ್ರಕಾರ ಎರಡು ಹಡಗು ಭಾರತ ತಲುಪಿದೆ. ಇನ್ನೂ ನಮಗೆ ಕೈಗೆ ಬರಬೇಕಿದೆ. ಯುಗಾದಿ, ರಂಜಾನ್ ಸಮಯದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. 50% ಅಗತ್ಯವಿರುವ ಗ್ಯಾಸ್ ಸಿಗಬಹುದು ಎಂಬ ವಿಶ್ವಾಸ ಇದೆ. ನಾಳೆಯಿಂದ ಹೋಟೆಲ್ ಎಲ್ಲವೂ ತೆರೆದಿರುತ್ತೆ. ಮೆಜೆಸ್ಟಿಕ್​ನಲ್ಲಿ ಬಂದ್ ಆಗಿರುವ ಹೋಟೆಲ್ ಓಪನ್ ಆಗುತ್ತೆ. 13% ಗ್ಯಾಸ್ ಬೆಂಗಳೂರಿಗೆ ಅಗತ್ಯ ಇದೆ. ಆದರೆ 7% ಗ್ಯಾಸ್ ಸಿಕ್ಕಿದ್ರೂ ನಿರ್ವಹಣೆ ಮಾಡಬಹುದು ಎಂದರು.

ಇನ್ನು ಗ್ಯಾಸ್ ಸಿಲಿಂಡರ್ ಕೊರತೆಯಿಂದ ಹೋಟೆಲ್​​ನಲ್ಲಿ ಬೆಲೆ ಏರಿಕೆ ಮಾಡುತ್ತಿಲ್ಲ. ವೈಯಕ್ತಿಕವಾಗಿ ಅವರು ಬೆಲೆ ಏರಿಸಿದರೆ ಸಂಘ ಜವಾಬ್ದಾರವಲ್ಲ. 98% ಹೋಟೆಲ್​​ಗಳು ಈ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಲ್ಲ ಎಂದು ಪಿಸಿ ರಾವ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

Exit mobile version