ಬೆಂಗಳೂರು, (ಮಾರ್ಚ್ 10): ದಲಿತ ಒಳಮೀಸಲಾತಿ (Internal reservation )ನೀಡಿಕೆಯು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಜಟಾಪಟಿಗೆ ಕಾರಣವಾಗಿದೆ. ಸರ್ಕಾರ ಒಳ ಮೀಸಲಾತಿ ನೀಡದೇ ಸರ್ಕಾರಿ ನೌಕರರ ನೇಮಕಾತಿಗೆ ಮುಂದಾಗಿದೆ. ಇದಕ್ಕೆ ದಲಿತ ಎಡಗೈ ನಾಯಕರು ವಿರೋಧಿಸುತ್ತಿದ್ದಾರೆ. ಇದರಿಂದ ಸ್ವಪಕ್ಷದಲ್ಲೇ ಹೊತ್ತಿಕೊಂಡ ಈ ಭಿನ್ನಾಭಿಪ್ರಾಯದ ಕಿಡಿ, ಪರಿಸ್ಥಿತಿ ಕೈಮೀರಿಸುತ್ತಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕಚೇರಿಯಲ್ಲಿ ದಲಿತ ಸಚಿವರು ಮಹತ್ವದ ಸಭೆ ನಡೆಸಿದ್ದು, ಗೊಂದಲ ಪರಿಹಾರ ಕುರಿತು ಸಿದ್ದರಾಮಯ್ಯ ಜೊತೆಗೆ ಚರ್ಚಿಸಿದ್ದಾರೆ.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಮುನಿಯಪ್ಪ, ಒಳಮೀಸಲಾತಿ ಆಧರಿಸಿ ನೇಮಕಾತಿ ಮಾಡಿಕೊಳ್ಳುವುದಾಗಿ ಸಿಎಂ ಕೂಡ ಭರವಸೆ ನೀಡಿದ್ದಾರೆ. ಮಾರ್ಚ್ 27ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನವಾಗುತ್ತೆ. ಬಲ ಸಮುದಾಯ ನಾಯಕರು ಒಳಮೀಸಲಾತಿಗೆ ಒಪ್ಪಿಕೊಂಡಿದ್ದಾರೆ. ಎಡ, ಬಲ ಸಮುದಾಯಗಳಿಗೆ ಸರಿಸಮವಾಗಿ ಒಳಮೀಸಲಾತಿ ಹಂಚಿಕೆ ಮಾಡಲಾಗುತ್ತೆ. ಮಾ.27ರವರೆಗೆ ಯಾವುದೇ ನೇಮಕಾತಿ ಅಧಿಸೂಚನೆ ಪ್ರಕಟಣೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.
ದೇವನಹಳ್ಳಿ, ಮಾರ್ಚ್ 10: ಸಣ್ಣ ಕಿಡಿಯಿಂದ ಹೊತ್ತಿಕೊಂಡ ಬೆಂಕಿ ಕೇಬಲ್ ಫ್ಯಾಕ್ಟರಿಯನ್ನೇ ಸಂಪೂರ್ಣವಾಗಿ ಸುಟ್ಟು (cable factory fire)ಬೂದಿ ಮಾಡಿದ್ದು, ಕೋಟ್ಯಂತರ ರೂ ಮೌಲ್ಯದ ಕೇಬಲ್ ವೈರ್ಗಳು ಬೆಂಕಿಗಾಹುತಿಯಾಗಿದೆ. ಸತತ 22 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂದಿದ್ದು, ಸ್ಥಳಿಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಹಳ್ಳಿ ಕೈಗಾರಿಕಾ ಪ್ರದೇಶದ ಅಡ್ವಾನ್ಸ್ ಕೇಬಲ್ ಟೆಕ್ನಾಲಜಿಸ್ ಫ್ಯಾಕ್ಟರಿಯಲ್ಲಿ ನಿನ್ನೆ ಘಟನೆ ನಡೆದಿದೆ.
ನಿನ್ನೆ ಸಂಜೆ ಐದು ಗಂಟೆ ಸಮಯಕ್ಕೆ ಕಾರ್ಮಿಕರೆಲ್ಲಾ ಕೆಲಸ ಮುಗಿಸಿ ಮನೆಗೆ ತೆರಳುವ ತವಕದಲ್ಲಿರುವಾಗಲೇ ಮೂಲೆಯೊಂದರಲ್ಲಿ ಹೊತ್ತಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಸಂಪೂರ್ಣ ಫ್ಯಾಕ್ಟರಿಯನ್ನೇ ಆವರಿಸಿತ್ತು. ಹೆದ್ದಾರಿಯ ಫ್ಲೈಓವರ್ ಮೇಲೆ ನಿಂತ್ತು ನೋಡಿದ ಜನರಿಗೆ ಅಕ್ಷರಶಃ ಯಾವುದೋ ಬಾಂಬ್ ಬಿದ್ದಂತೆ ಬಾನೆತ್ತರಕ್ಕೆ ದಟ್ಟ ಹೊಗೆ ಆವರಿಸಿರುವ ದೃಶ್ಯ ಕಂಡುಬಂದಿದ್ದು ಎಲ್ಲರೂ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಿರು. ಇನ್ನು ಅಗ್ನಿ ಅವಘಡಕ್ಕೆ ಸಂಪೂರ್ಣ ಕೈಗಾರಿಕಾ ಫ್ಯಾಕ್ಟರಿ ಸುಟ್ಟು ಭಸ್ಮವಾಗಿದ್ದು, 22 ಗಂಟೆಗೂ ಅಧಿಕ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.
ಕೋಟ್ಯಂತರ ರೂ ನಷ್ಟ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಹಳ್ಳಿ ಕೈಗಾರಿಕಾ ಪ್ರದೇಶದ ಅಡ್ವಾನ್ಸ್ ಕೇಬಲ್ ಟೆಕ್ನಾಲಜಿಸ್ ಫ್ಯಾಕ್ಟರಿಯಲ್ಲಿ ನಿನ್ನೆ ಸಂಜೆ 05:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಕಾಣಿಸುತ್ತಿದ್ದಂತೆ ಎಚ್ಚೆತ್ತ ಕಾರ್ಮಿಕರು ಆಡಳಿತ ಮಂಡಳಿ ಮೊದಲಿಗೆ ಬೆಂಕಿ ನಂದಿಸುವ ಯತ್ನ ಮಾಡಿದರು ರಬ್ಬರ್ ಮತ್ತು ಪ್ಲಾಸ್ಟಿಕ್ಗೆ ಬೆಂಕಿ ಹೊತ್ತಿಕೊಂಡ ಕಾರಣ ಬೆಂಕಿ ನಂದಿಸಲು ವಿಫಲವಾಗಿ ಫ್ಯಾಕ್ಟರಿಯಿಂದ ಹೊರಗಡೆ ಬಂದಿದ್ದಾರೆ.
ಇನ್ನು ಕಾರ್ಮಿಕರು ಹೊರಗಡೆ ಬರುತ್ತಿದ್ದಂತೆ ಬೆಂಕಿ ತನ್ನ ರುದ್ರ ನರ್ತನವನ್ನೆ ತೋರಿದ್ದು, ಕ್ಷಣ ಮಾತ್ರದಲ್ಲೇ ಒಂದು ಎಕರೆಯಷ್ಟು ವಿಸ್ತೀರ್ಣದಲ್ಲಿರುವ ಸಂಪೂರ್ಣ ಫ್ಯಾಕ್ಟರಿಗೆ ಬೆಂಕಿ ಆವರಿಸಿದೆ. ಬೆಂಕಿಯ ಕೆನ್ನಾಲೆಗೆ ಫ್ಯಾಕ್ಟರಿ ಧಗಧಗನೆ ಹೊತ್ತಿ ಉರಿದು ಕೆಲ ಸಿಲಿಂಡರ್ ಸಹ ಸ್ಪೋಟಗೊಂಡಿವೆ ಎನ್ನಲಾಗ್ತಿದ್ದು, ಬೆಂಕಿಯ ರುದ್ರ ನರ್ತನಕ್ಕೆ ಫ್ಯಾಕ್ಟರಿ ಸುಟ್ಟು ಕರಕಲಾಗಿದೆ.
ಫ್ಯಾಕ್ಟರಿಗೆ ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಸ್ಥಳಕ್ಕೆ ದೌಡಾಯಿಸಿ ಬಂದಿದ್ದು, ಮೊದಲಿಗೆ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಆದರೆ ಎಷ್ಟೇ ನೀರು ಹೊಡೆದರು ಬೆಂಕಿ ಹತೋಟಿಗೆ ಬಾರದ ಕಾರಣ ಚಿಕ್ಕಬಳ್ಳಾಪುರ, ಕೋಲಾರ, ಗೌರಿಬಿದನೂರು, ಯಲಹಂಕ, ವೈಟ್ ಫೀಲ್ಡ್, ನೆಲಮಂಗಲ, ದೇವನಹಳ್ಳಿ ಸೇರಿದಂತೆ ಹಲವು ಭಾಗಗಳಿಂದ 15ಕ್ಕೂ ಅಧಿಕ ಅಗ್ನಿಶಾಮಕ ವಾಹನ ಹಾಗೂ ನೂರಕ್ಕೂ ಅಧಿಕ ಸಿಬ್ಬಂದಿಯನ್ನ ಕರೆಸಿಕೊಂಡಿದ್ದಾರೆ. ಜೊತೆಗೆ ಫ್ಯಾಕ್ಟರಿ ಪಕ್ಕದಲ್ಲೇ ಇದ್ದ ರೈತನ ಕೃಷಿ ಹೊಂಡದಿಂದ ನೀರನ್ನ ತುಂಬಿಕೊಂಡು ಬಂದು ರಾತ್ರಿ ಪೂರ್ತಿ ನೀರು ಹೊಡೆದರ ಬೆಂಕಿ ಹಾರಿಲ್ಲ. ಕೊನೆಗೆ ಸತತ 22 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ನಂದಿಸಿದ್ದರು ಸಹ ಅಲ್ಲಲ್ಲಿ ಹೊಗೆ ಹಾಡುತ್ತಲ್ಲಿದ್ದು, ಅದನ್ನ ಸಹ ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ.
ಇನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಫ್ಯಾಕ್ಟರಿಯಲ್ಲಿ ಬೆಂಕಿ ಹೊತ್ತಿಕೊಳ್ಳಲು ಸೂಕ್ತ ತುರ್ತು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದಿರುವುದು ಕಾರಣ ಎನ್ನಲಾಗುತ್ತಿದೆ. ಆಕಸ್ಮಿಕ ಅಗ್ನಿ ಅವಘಡಕ್ಕೆ ಕೋಟಿ ಕೋಟಿ ಮೌಲ್ಯದ ಕೇಬಲ್ ಹಾಗೂ ಕಚ್ಚಾ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕ ಬೆಂಕಿ ಅವಘಡಕ್ಕೆ ಕಾರಣ ಏನು ಅನ್ನೋದು ಬೆಳಕಿಗೆ ಬರಬೇಕಿದೆ.
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮತ್ತು ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ (Ramya Divya Spandana) ಅವರು ಕಾನೂನು ಸಮರ ಸಾರಿದ್ದಾರೆ. ಆ ಪ್ರಕರಣದ ವಿಚಾರಣೆ ಸಲುವಾಗಿ ಇಂದು (ಮಾರ್ಚ್ 10) ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ‘ಇವತ್ತು ಸಾಕ್ಷಿ ನೀಡಬೇಕಿತ್ತು. ಕ್ರಾಸ್ ಎಕ್ಸಾಮಿನೇಷನ್ಗೆ ಮುಂದಿನ ದಿನಾಂಕದಲ್ಲಿ ಕರೆದಿದ್ದಾರೆ. ನನಗೆ ಈ ಕೇಸ್ ಮಾಡಬೇಕು ಅಂತ ಆಸೆ ಇಲ್ಲ. ಆರೋಪಿಗಳನ್ನು ನೋಡಿದರೆ ಬೇಜಾರಾಗುತ್ತದೆ. ಆದರೆ ನಾನು ಇದನ್ನು ನನಗೋಸ್ಕರ ಮಾಡುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹೆಣ್ಮಕ್ಕಳಿಗೆ ತುಂಬಾ ಕಿರುಕುಳ ನೀಡುತ್ತಾರೆ. ಅದನ್ನು ನಿಲ್ಲಿಸಬೇಕು. ಹೆಣ್ಮಕ್ಕಳಿಗೆ ರಕ್ಷಣೆ ನೀಡಬೇಕು. ಆ ಕಾರಣಕ್ಕಾಗಿ ಕೇಸ್ ಹಾಕಿದ್ದೇನೆ’ ಎಂದು ರಮ್ಯಾ (Ramya) ಅವರು ಹೇಳಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಇದಾಗ್ಯೂ ಐಪಿಎಲ್ನ ವೇಳಾಪಟ್ಟಿ ಪ್ರಕಟವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಕೆಲ ರಾಜ್ಯಗಳಲ್ಲಿನ ಚುನಾವಣೆ. ಮುಂಬರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ವೇಳಾಪಟ್ಟಿಗೆ ದಿನಾಂಕ ನಿಗದಿ ಮಾಡಲು ಸಮಸ್ಯೆ ಎದುರಾಗಿದೆ. ಹೀಗಾಗಿ ಐಪಿಎಲ್ ಆರಂಭಿಸಲು ಮೊದಲು 15 ದಿನಗಳ ವೇಳಾಪಟ್ಟಿ ಪ್ರಕಟಿಸಲು ಬಿಸಿಸಿಐ ಚಿಂತಿಸಿದೆ.
15 ದಿನಗಳ ವೇಳಾಪಟ್ಟಿ:
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಮಾರ್ಚ್ 28 ರಿಂದ ಶುರುವಾಗಲಿದೆ. ಇದಕ್ಕಾಗಿ ಮೊದಲಿಗೆ 15 ದಿನಗಳ ವೇಳಾಪಟ್ಟಿಯನ್ನು ಪ್ರಕಟಿಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ. ಇನ್ನು ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ನಿಗದಿಯಾದ ಬಳಿಕ ಉಳಿದ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ವಿಳಂಬ ಯಾಕೆ?
ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಚುನಾವಣಾ ಸಮಯದಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಮತದಾನದ ಕರ್ತವ್ಯದಲ್ಲಿ ಇರುತ್ತಾರೆ. ಇದರಿಂದಾಗಿ ಪಂದ್ಯಗಳಿಗೆ ಅಗತ್ಯವಿರುವ ಹೆಚ್ಚಿನ ಭದ್ರತೆಯನ್ನು ಒದಗಿಸುವುದು ಕಷ್ಟವಾಗುತ್ತದೆ.
ಭಾರತೀಯ ಚುನಾವಣಾ ಆಯೋಗವು ಈ ರಾಜ್ಯಗಳ ಮತದಾನದ ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ದಿನಾಂಕಗಳು ತಿಳಿದ ನಂತರವಷ್ಟೇ ಪಂದ್ಯಗಳ ಸ್ಥಳ ಮತ್ತು ಸಮಯವನ್ನು ಬಿಸಿಸಿಐ ಖಚಿತಪಡಿಸಿಕೊಳ್ಳಲು ಸಾಧ್ಯ.
ಬಿಸಿಸಿಐ ಈ ಹಿಂದೆಯೂ (ಉದಾಹರಣೆಗೆ 2024 ಮತ್ತು 2019 ರಲ್ಲಿ) ಸಾರ್ವತ್ರಿಕ ಚುನಾವಣೆಗಳ ಕಾರಣದಿಂದ ಇದೇ ರೀತಿಯಲ್ಲಿ ಹಂತ-ಹಂತವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಇದೀಗ ಕೇವಲ ಮೊದಲ 15 ದಿನಗಳ (ಮಾರ್ಚ್ 28 ರಿಂದ ಏಪ್ರಿಲ್ ಮಧ್ಯಭಾಗದವರೆಗೆ) ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲು ಬಿಸಿಸಿಐ ಚಿಂತಿಸಿದೆ. ಉಳಿದ ಪಂದ್ಯಗಳ ಪಟ್ಟಿಯು ಮಾರ್ಚ್ ತಿಂಗಳ ಅಂತ್ಯದೊಳಗೆ ಹೊರಬರುವ ನಿರೀಕ್ಷೆಯಿದೆ.
ಉದ್ಘಾಟನಾ ಪಂದ್ಯ ಎಲ್ಲಿ?
ಈ ಬಾರಿಯ ಐಪಿಎಲ್ನ ಉದ್ಘಾಟನಾ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಅಲ್ಲದೆ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಅಥವಾ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಣಕ್ಕಿಳಿಯಲಿದೆ ಎಂದು ವರದಿಯಾಗಿದೆ.
ಫೈನಲ್ ಯಾವಾಗ?
ಪ್ರಸ್ತುತ ಮಾಹಿತಿಯಂತೆ ಈ ಬಾರಿಯ ಐಪಿಎಲ್ನ ಫೈನಲ್ ಪಂದ್ಯವು ಮೇ 31 ರಂದು ನಡೆಯಲಿದೆ. ಈ ಪಂದ್ಯವನ್ನೂ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆಯೋಜಿಸಲು ಚಿಂತಿಸಲಾಗಿದೆ.
ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಅದೇ ದಿನ ಬಿಡುಗಡೆ ಆಗಲಿದ್ದು, ದೊಡ್ಡ ಪ್ರತಿಸ್ಪರ್ಧೆಯನ್ನು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಒಡ್ಡಿದೆ. ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಸಿನಿಮಾದ ನಾಯಕ ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದು, ಪ್ರಚಾರಗಳಲ್ಲಿ ಪಾಲ್ಗೊಳ್ಳುವಷ್ಟು ಸಮಯ ಅವರಿಗಿಲ್ಲ. ಆಡಳಿತದ ದೃಷ್ಟಿಯಿಂದ ಅದು ಉಚಿತವೂ ಅಲ್ಲ. ಆದರೆ ಪವನ್ ಕಲ್ಯಾಣ್ ಗೈರು ಹಾಜರಿಯಲ್ಲಿ ನಟಿ ಶ್ರೀಲೀಲಾ ಸಿನಿಮಾದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದಾರೆ.
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದು, ಇದೀಗ ಸಿನಿಮಾದ ಪ್ರಚಾರದ ಜವಾಬ್ದಾರಿಯನ್ನು ಶ್ರೀಲೀಲಾ ವಹಿಸಿಕೊಂಡಿದ್ದು, ತಾವೇ ಆಂಧ್ರ-ತೆಲಂಗಾಣದ ಪ್ರಮುಖ ನಗರಗಳಿಗೆ ತೆರಳಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಅವರು ಹೈದರಾಬಾದ್ನ ಗುರುನಾನಕ್ ವಿಶ್ವವಿದ್ಯಾಲಯಕ್ಕೆ ತೆರಳಿ, ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಪ್ರಚಾರ ಮಾಡಿದ್ದಾರೆ. ವಿಶೇಷವೆಂದರೆ ಸಿನಿಮಾದ ನಾಯಕ, ನಿರ್ದೇಶಕ ಇತರೆ ಯಾರೂ ಇಲ್ಲದೇ ಕೇವಲ ತಮ್ಮ ತಂಡದೊಂದಿಗೆ ಒಬ್ಬರೇ ಹೋಗಿ ಸಿನಿಮಾ ಪ್ರಚಾರ ಮಾಡಿದ್ದಾರೆ. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ರಾಶಿ ಖನ್ನಾ ಸಹ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಅವರೂ ಸಹ ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲ.
ಗುರುನಾನಕ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಟ್ಟಿಗೆ ಸಂವಾದ ಮಾಡಿದ್ದಲ್ಲದೆ, ಸಿನಿಮಾದ ಡೈಲಾಗ್ ಹೇಳಿ, ಹಾಡುಗಳ ಸಾಲುಗಳನ್ನು ಹೇಳಿ ಸಖತ್ ಕ್ರೇಜ್ ಹುಟ್ಟಿಸಿದ್ದಾರೆ. ವಿದ್ಯಾರ್ಥಿಗಳಿಂದ ಸಿನಿಮಾದ ಹಾಡಿನ ಸಾಲುಗಳನ್ನು ಸಹ ಹಾಡಿಸಿದ್ದು, ತಮ್ಮ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ. ಶ್ರೀಲೀಲಾರ ಈ ಶ್ರಮವನ್ನು ಗುರುತಿಸಿರುವ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಹಂಚಿಕೊಂಡು, ಶ್ರೀಲೀಲಾರನ್ನು ಕೊಂಡಾಡಿದೆ.
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಯು/ಎ ಪ್ರಮಾಣ ಪತ್ರ ದೊರೆತಿದ್ದು, ಇಂದಷ್ಟೆ ಸಿನಿಮಾದ ಹಾಡಿನ ಸಣ್ಣ ತುಣಕನ್ನು ಸಹ ಬಿಡುಗಡೆ ಮಾಡಿದೆ. ‘ಧುರಂಧರ್ 2’ ಎದುರಿಗೆ ‘ಉಸ್ತಾದ್ ಭಗತ್ ಸಿಂಗ್’ ಸ್ಪರ್ಧೆ ಇದ್ದು, ಸಿನಿಮಾಕ್ಕೆ ಭರ್ಜರಿ ಪ್ರಚಾರದ ಅವಶ್ಯಕತೆ ಇದೆ. ಈಗಾಗಲೇ ‘ಧುರಂಧರ್ 2’ ಸಿನಿಮಾದಿಂದಾಗಿ ಪ್ರೀಮಿಯರ್ ಶೋ ಆಯೋಜಿಸುವ ಯೋಜನೆಯನ್ನು ಚಿತ್ರತಂಡ ಕೈಬಿಟ್ಟಿದೆ. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ನಿರ್ಮಾಣ ಸಂಸ್ಥೆ ಶೀಘ್ರವೇ ಹಮ್ಮಿಕೊಳ್ಳಲಿದ್ದು ನಟ ಪವನ್ ಕಲ್ಯಾಣ್ ಅವರು ಆ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಪವನ್ ಕಲ್ಯಾಣ್ರ ಆಪ್ತ ಹರೀಶ್ ಶಂಕರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಹಾಡುಗಳನ್ನು ನಿರ್ದೇಶಿಸಿರುವುದು ದೇವಿಶ್ರೀ ಪ್ರಸಾದ್, ಹಿನ್ನೆಲೆ ಸಂಗೀತ ನೀಡಿರುವುದು ಎಸ್ ತಮನ್. ಸಿನಿಮಾನಲ್ಲಿ ಶ್ರೀಲೀಲಾ ಜೊತೆಗೆ ರಾಶಿ ಖನ್ನಾ ಸಹ ನಟಿಸಿದ್ದಾರೆ. ಇವರುಗಳ ಜೊತೆಗೆ ಆರ್ ಪಾರ್ತಿಬನ್, ಆಶುತೋಶ್ ರಾಣಾ, ನವಾಬ್ ಶಾ, ರಾಜೀವ್ ಕನಕಾಲ ಇನ್ನೂ ಕೆಲವು ಕಲಾವಿದರು ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ.
ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ (T20 World Cup) ಎತ್ತಿಹಿಡಿದಿದೆ. ಈ ಸಂಭ್ರಮದೊಂದಿಗೆ ತಂಡದ ಎಲ್ಲಾ ಆಟಗಾರರು ತಮ್ಮ ತಮ್ಮ ಮನೆಗಳತ್ತ ಪ್ರಯಾಣ ಬೆಳೆಸಿದ್ದಾರೆ. ಬಳಿಕ ಎಲ್ಲಾ ಆಟಗಾರರು ಮುಂಬರುವ ಐಪಿಎಲ್ನಲ್ಲಿ (IPL) ಕಣಕ್ಕಿಳಿಯಲಿದ್ದಾರೆ. ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾದ ಆಟಗಾರನೊಬ್ಬನಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು ವೈಯಕ್ತಿಕ ಜೀವನದಲ್ಲಿ ಹೊಸ ಇನ್ನಿಂಗ್ಸ್ ಪ್ರಾರಂಭಿಸಲಿದ್ದಾರೆ. ತಂಡದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav) ಮಾರ್ಚ್ 14, 2026 ರಂದು ವಂಶಿಕಾ (Vanshika) ಅವರನ್ನು ವಿವಾಹವಾಗಲಿದ್ದಾರೆ. ವಿವಾಹ ಸಮಾರಂಭವು ಉತ್ತರಾಖಂಡದ ಮುಸ್ಸೂರಿಯ ಸುಂದರ ಗಿರಿಧಾಮದಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ನಡೆಯಲಿದೆ. ಈ ವಿಶೇಷ ಸಂದರ್ಭದಲ್ಲಿ ನಿಕಟ ಸಂಬಂಧಿಗಳು ಮತ್ತು ಎರಡೂ ಕುಟುಂಬಗಳ ಆಯ್ದ ಅತಿಥಿಗಳು ಭಾಗವಹಿಸಲಿದ್ದಾರೆ.
ಕುಲ್ದೀಪ್ಗೆ ಕೂಡಿಬಂತು ಕಂಕಣ ಭಾಗ್ಯ
ಮದುವೆಗೆ ಒಂದು ದಿನ ಮೊದಲು ಮಾರ್ಚ್ 13 ರಂದು ಅರಿಶಿನ ಮತ್ತು ಮೆಹೆಂದಿ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಸಾಂಪ್ರದಾಯಿಕ ಸಮಾರಂಭದಲ್ಲಿ ಕುಟುಂಬ ಮತ್ತು ಆಪ್ತರು ಭಾಗವಹಿಸಲಿದ್ದಾರೆ. ವಾಸ್ತವವಾಗಿ ಜೂನ್ 4, 2025 ರಂದು ಕುಲ್ದೀಪ್ ಮತ್ತು ವಂಶಿಕಾ ಲಕ್ನೋದ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಾಗೆಯೇ ಇಬ್ಬರ ವಿವಾಹವು ನವೆಂಬರ್ 2025 ಕ್ಕೆ ನಿಗದಿಯಾಗಿತ್ತು. ಆದರೆ ಭಾರತೀಯ ಕ್ರಿಕೆಟ್ ತಂಡದ ಕಾರ್ಯನಿರತ ಕ್ಯಾಲೆಂಡರ್ ಮತ್ತು ಟಿ20 ವಿಶ್ವಕಪ್ ತಂಡದಲ್ಲಿ ಕುಲ್ದೀಪ್ ಅವರ ಆಯ್ಕೆಯಿಂದಾಗಿ, ವಿವಾಹ ದಿನಾಂಕವನ್ನು ಮುಂದೂಡಲಾಯಿತು.
ಸಮಾರಂಭದಲ್ಲಿ ಗಣ್ಯರು ಬಾಗಿ
ಕುಲ್ದೀಪ್ ಯಾದವ್ ಅವರ ತಂದೆ ರಾಮ್‌ಸಿನ್ಹ್ ಯಾದವ್ ಅವರು ಮಾರ್ಚ್ 8 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ವಿವಾಹ ಆರತಕ್ಷತೆಗೆ ಹಾಜರಾಗಲು ಆಹ್ವಾನ ನೀಡಿದ್ದಾರೆ. ವಿವಾಹದ ನಂತರ, ಮಾರ್ಚ್ 17 ರಂದು ಲಕ್ನೋದ ಹೋಟೆಲ್ ಸೆಂಟ್ರಮ್‌ನಲ್ಲಿ ಭವ್ಯ ಆರತಕ್ಷತೆ ಏರ್ಪಡಿಸಲಾಗಿದೆ. ಈ ಸಮಾರಂಭದಲ್ಲಿ ಬಿಸಿಸಿಐ ಮತ್ತು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಅಧಿಕಾರಿಗಳು, ಭಾರತೀಯ ಕ್ರಿಕೆಟ್ ತಂಡದ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಮತ್ತು ಇತರ ಅತಿಥಿಗಳು ಭಾಗವಹಿಸಬಹುದು.
ಕುಲ್ದೀಪ್ ಯಾದವ್ ಭಾರತ ಟಿ20 ವಿಶ್ವಕಪ್ ತಂಡದಲ್ಲಿದ್ದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಕುಲ್ದೀಪ್ ಕೇವಲ 14 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಆದರೆ ಈ ಪಂದ್ಯದ ನಂತರ ಕುಲ್ದೀಪ್ಗೆ ಆಡುವ ಅವಕಾಶ ಸಿಗಲಿಲ್ಲ ಆದಾಗ್ಯೂ ಕುಲ್ದೀಪ್ ಯಾದವ್ ಮೂರು ಸ್ವರೂಪಗಳಲ್ಲಿ 191 ಪಂದ್ಯಗಳನ್ನು ಆಡಿದ್ದು, 22.50 ಸರಾಸರಿ ಮತ್ತು 4.84 ರ ಎಕಾನಮಿ ದರದಲ್ಲಿ 365 ವಿಕೆಟ್‌ಗಳನ್ನು ಪಡೆದಿದ್ದಾರೆ. 31 ವರ್ಷದ ಕುಲ್ದೀಪ್ ಯಾದವ್ ಇದುವರೆಗೆ 9 ಬಾರಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್ ನಟ ವರುಣ್ ಧವನ್ (Varun Dhawan) ಅಭಿನಯದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಬಿಡುಗಡೆ ದಿನಾಂಕದಲ್ಲಿ ಮಹತ್ವದ ಬದಲಾವಣೆಯಾಗಿದೆ. ‘ರಾಕಿಂಗ್ ಸ್ಟಾರ್’ ಯಶ್ (Yash) ಅವರ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರದೊಂದಿಗೆ ಬಾಕ್ಸ್ ಆಫೀಸ್ ಕ್ಲ್ಯಾಶ್ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವರುಣ್ ಧವನ್ ನಟನೆಯ ಚಿತ್ರವು ಈ ಮೊದಲು ಜೂನ್ 5ರಂದು ಬಿಡುಗಡೆ ಆಗುವುದಾಗಿ ಘೋಷಿಸಿತ್ತು. ಆದರೆ, ಈಗ ಒಂದು ವಾರ ತಡವಾಗಿ ಅಂದರೆ ಜೂನ್ 12ರಂದು ತೆರೆಗೆ ಬರಲಿದೆ. ‘ಟಿಪ್ಸ್ ಫಿಲ್ಮ್ಸ್’ ಸಂಸ್ಥೆಯು ಈ ಕುರಿತು ಅಧಿಕೃತ ಮಾಹಿತಿ ನೀಡಿದೆ.
‘ನಮ್ಮ ಚಿತ್ರವು ಜೂನ್ 5ರಂದು ಬಿಡುಗಡೆ ಆಗಬೇಕೆಂದು ತಿಂಗಳುಗಳ ಹಿಂದೆಯೇ ನಿರ್ಧರಿಸಲಾಗಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಬಿಡುಗಡೆಯನ್ನು ಮುಂದೂಡುವುದು ಸೂಕ್ತ ಎಂದು ಭಾವಿಸಿದ್ದೇವೆ. ಚಿತ್ರರಂಗದ ಆರೋಗ್ಯಕರ ಬೆಳವಣಿಗೆಗಾಗಿ ನಿರ್ಮಾಪಕರು ಪರಸ್ಪರ ಸಹಕರಿಸುವುದು ಮುಖ್ಯ’ ಎಂದು ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರತಂಡ ಹೇಳಿದೆ.
ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರವು ಮಾರ್ಚ್ 19ರಂದು ಬಿಡುಗಡೆಯಾಗಬೇಕಿತ್ತು. ಆದರೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿ ಸದ್ಯಕ್ಕೆ ಹತೋಟಿಗೆ ಬರುವಂತೆ ಕಾಣುತ್ತಿಲ್ಲ. ಆದ್ದರಿಂದ ಚಿತ್ರತಂಡವು ಬಿಡುಗಡೆಯನ್ನು ಜೂನ್ 4ಕ್ಕೆ ಮುಂದೂಡಿದೆ. ಮಾರ್ಚ್ 19ರಂದು ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೇಂಜ್’ ಚಿತ್ರದೊಂದಿಗೆ ಇದು ಸಂಘರ್ಷಕ್ಕಿಳಿಯಬೇಕಿತ್ತು. ಆದರೆ ಕ್ಲ್ಯಾಶ್ ತಪ್ಪಿದೆ.
‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದಲ್ಲಿ ವರುಣ್ ಧವನ್, ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಚಂಕಿ ಪಾಂಡೆ, ಮೌನಿ ರಾಯ್, ರೋಹಿತ್ ಸರಾಫ್ ಮತ್ತು ಜಿಮ್ಮಿ ಶೇರ್ಗಿಲ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಹಿರಿಯ ನಿರ್ದೇಶಕ ಡೇವಿಡ್ ಧವನ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
‘ಟಾಕ್ಸಿಕ್’ ಚಿತ್ರತಂಡವು ಏಕಾಏಕಿ ಬಿಡುಗಡೆ ದಿನಾಂಕ ಬದಲಾಯಿಸಿದ್ದರಿಂದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ತಂಡಕ್ಕೆ ಬೇಸರ ಆಗಿತ್ತು. ಆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಈಗ ಈ ಚಿತ್ರದ ರಿಲೀಸ್ ದಿನಾಂಕ ಬದಲಾಗಿದೆ. ಒಂದು ವಾರ ತಡವಾಗಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ನವದೆಹಲಿ, ಮಾರ್ಚ್ 10: ಬಿಕ್ಕಟ್ಟು ಎದುರಿಸುತ್ತಿರುವ ಇಂಡಿಗೋ ಏರ್ಲೈನ್ಸ್ ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ (Pieter Elbers) ರಾಜೀನಾಮೆ ನೀಡಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಪೈಲಟ್ಗಳಿಲ್ಲದೇ ಹಲವಾರು ಫ್ಲೈಟ್ಗಳು ಸ್ಥಗಿತಗೊಂಡ ಬಳಿಕ ಸಿಇಒ ತಲೆದಂಡವಾಗಬಹುದು ಎನ್ನುವ ನಿರೀಕ್ಷೆ ಇತ್ತು. ಅಂತೆಯೇ ಪೀಟರ್ಸ್ ರಾಜೀನಾಮೆ ಕೊಟ್ಟಿದ್ದಾರೆ. ಇಂದು ಮಂಗಳವಾರ ಅವರ ರಾಜೀನಾಮೆ ನಿರ್ಧಾರವನ್ನು ಇಂಡಿಗೋ ಸಂಸ್ಥೆ ಪ್ರಕಟಿಸಿದೆ. ಸಂಸ್ಥೆಯ ನಿರ್ವಾಹಕ ನಿರ್ದೇಶಕ ರಾಹುಲ್ ಭಾಟಿಯಾ ಅವರು ಹಂಗಾಮಿ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಇಂಡಿಗೋದ ಮಾಲಕಸಂಸ್ಥೆಯಾದ ಇಂಟರ್ಗ್ಲೋಬ್ ಏವಿಯೇಶನ್ನ ಪ್ರೊಮೋಟರ್ ಆಗಿರುವ ರಾಹುಲ್ ಭಾಟಿಯಾ ಅವರು ಹೊಸ ಸಿಇಒ ಬರುವವರೆಗೂ ಸಂಸ್ಥೆಯ ಮುಖ್ಯ ಎಕ್ಸಿಕ್ಯೂಟಿವ್ ಸ್ಥಾನವನ್ನು ನಿಭಾಯಿಸಲಿದ್ದಾರೆ
ಸರ್ಕಾರವು ಫ್ಲೈಟ್ ಸುರಕ್ಷತೆ ದೃಷ್ಟಿಯಿಂದ ಸಿಬ್ಬಂದಿಯ ಫ್ಲೈಟ್ ಕರ್ತವ್ಯ ಸಮಯ ಪರಿಮಿತಿ ನಿಯಮಗಳನ್ನು ರೂಪಿಸಿದೆ. ಇದು ಜಾರಿ ಮಾಡಲು ಸಾಕಷ್ಟು ಗಡುವು ಕೊಡಲಾಗಿತ್ತು. ಅಂತಿಮ ಗಡುವು ಮುಗಿಯುತ್ತಿದ್ದರಿಂದ ಹೊಸ ನಿಯಮಗಳನ್ನು ಇಂಡಿಗೋ ಪಾಲಿಸಲೇಬೇಕಾಯಿತು. ಪೈಲಟ್ಗಳ ಕರ್ತವ್ಯ ಸಮಯವನ್ನು ಸೀಮಿತಗೊಳಿಸಬೇಕು. ನಿರ್ದಿಷ್ಟ ಅವಧಿ ವಿಶ್ರಾಂತಿಗೆ ಅವಕಾಶ ಕೊಡಬೇಕು ಇತ್ಯಾದಿ ನಿಯಮಗಳಿವೆ.
ನವೆಂಬರ್ನಲ್ಲಿ ಹೊಸ ಫ್ಲೈಟ್ ಡ್ಯೂಟಿ ನಿಯಮಗಳು ಜಾರಿಗೆ ಬಂದಿದ್ದು. ಇದನ್ನು ಪಾಲಿಸಬೇಕೆಂದರೆ ಪೈಲಟ್ಗಳ ಸಂಖ್ಯೆ ಹೆಚ್ಚಿಸಬೇಕಿತ್ತು. ಇಂಡಿಗೋ ಆ ಕೆಲಸ ಮಾಡಲಿಲ್ಲ. ಹೀಗಾಗಿ, ಅನೇಕ ಇಂಡಿಗೋ ಫ್ಲೈಟ್ಗಳಿಗೆ ಪೈಲಟ್ಗಳೇ ಇಲ್ಲವಾದರು. ಹೀಗಾಗಿ, ಹಲವು ಫ್ಲೈಟ್ಗಳನ್ನು ನಿಲ್ಲಸಬೇಕಾಯಿತು. ವಿಮಾನಗಳು ನಿಲುಗಡೆಗೊಂಡವು. ಬಹಳ ಜನರ ಟಿಕೆಟ್ಗಳು ಕ್ಯಾನ್ಸಲ್ ಆಯಿತು. ಇದರಿಂದ ಕೆಲ ದಿನಗಳ ಕಾಲ ಬಿಕ್ಕಟ್ಟು ಉದ್ಭವವಾಗಿತ್ತು.
ನವದೆಹಲಿ, ಮಾರ್ಚ್ 10: ಆಂತರಿಕ ಬಳಕೆಗೆಂದು ಇಡಲಾಗಿರುವ ತೈಲ ಸಂಗ್ರಹವನ್ನು (Strategic Oil Reserves) ಬಿಡುಗಡೆ ಮಾಡಬೇಕೆಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆಯಾದ ಐಇಎ ಮಾಡಿರುವ ಪ್ಲಾನ್ಗೆ ಭಾರತ ನಕಾರ ತೋರಿದೆ. ಜಾಗತಿಕವಾಗಿ ತೈಲ ಬೆಲೆ ಕಡಿಮೆಗೊಳಿಸಲು ಐಇಎ ತೈಲ ಸಂಗ್ರಹ ಬಿಡುಗಡೆ ಮಾಡುವಂತೆ ಎಲ್ಲಾ ದೇಶಗಳಿಗೂ ನೀಡಿರುವ ಕರೆಗೆ ಭಾರತ ಓಗೊಟ್ಟಿಲ್ಲ. ಈ ಬಿಕ್ಕಟ್ಟು ಸೃಷ್ಟಿಸಿದವರು ತಾವಲ್ಲ. ನಮ್ಮಿಂದ ಈ ಕೆಲಸ ಆಗಲ್ಲ ಎಂದು ಭಾರತ ಹೇಳೀದೆ.
‘ತೈಲ ಸಂಗ್ರಹವನ್ನು ಭಾರತ ಬಿಡುಗಡೆ ಮಾಡುವುದಿಲ್ಲ. ಈ ಬಿಕ್ಕಟ್ಟು ಸೃಷ್ಟಿಗೆ ನಾವು ಕಾರಣರಲ್ಲ. ಇದಕ್ಕೆ ಕಾರಣರಾದವರು ತೈಲ ಬೆಲೆ ಇಳಿಕೆ ಮಾಡುವ ಜವಾಬ್ದಾರಿ ಹೊಂದಿದ್ದಾರೆ’ ಎಂದು ಸರ್ಕಾರದ ಮೂಲಗಳು ಹೇಳಿದ್ದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾರತದಲ್ಲಿ ಭೂಗತ ತೈಲ ಸಂಗ್ರಹ ಸಾಮರ್ಥ್ಯ 5.33 ಮಿಲಿಯನ್ ಟನ್ಗಳಷ್ಟಿವೆ. ಆದರೆ, ಇದರಲ್ಲಿ ಶೇ 80 ಮಾತ್ರವೇ ಭರ್ತಿಯಾಗಿರುವುದು. ಭಾರತಕ್ಕೆ ಮೊದಲ ಬಳಕೆ ಎನ್ನುವುದು ಸರ್ಕಾರದ ನೀತಿಯಾಗಿದೆ. ಪೂರೈಕೆಯಲ್ಲಿ ವ್ಯತ್ಯಯವಾದಾಗ ಈ ಸಂಗ್ರಹವನ್ನು ಬಳಸಲಾಗುತ್ತದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಭಾರತದಲ್ಲಿ ಭೂಗತ ತೈಲ ಸಂಗ್ರಹಗಾರಗಳು ಮೂರು ಕಡೆ ಇವೆ. ಕರ್ನಾಟಕದಲ್ಲಿ ಎರಡು ಮತ್ತು ಆಂಧ್ರದಲ್ಲಿ ಒಂದು ಇದೆ. ಇಲ್ಲಿ ಕಚ್ಚಾ ತೈಲ ಸಂಗ್ರಹ ಕೆಲ ವಾರಗಳ ಬಳಕೆಗೆ ಸಾಕಾಗುವಷ್ಟು ಇದೆ. ಇದರ ಜೊತೆಗೆ ರಿಫೈನರಿಗಳಲ್ಲಿ ತೈಲ ಸಂಗ್ರಹ ಇದೆ.
ಬೆಂಗಳೂರು, ಮಾರ್ಚ್ 10: ಬೀದಿ ನಾಯಿಗಳ ನಿಯಂತ್ರಣಕ್ಕೆ ಶಿಕ್ಷಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲು ಮುಂದಾಗಿರುವ ಸರ್ಕಾರದ ನಿರ್ಧಾರದ ಬಗ್ಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾನ, ಜನಗಣತಿ, ಜಾತಿಗಣತಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಈಗಾಗಲೇ ಶಿಕ್ಷಕರು ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗೆ ಹಾಲು-ಮೊಟ್ಟೆ ವಿತರಣೆಯಂತಹ ಬೋಧಕೇತರ ಕೆಲಸಗಳಲ್ಲಿಯೂ ನಿರತರಾಗಿದ್ದಾರೆ. ರಾಜ್ಯಾದ್ಯಂತ ಈಗಾಗಲೇ ಶಿಕ್ಷಕರ ಕೊರತೆ ಇದ್ದು, ಇಂತಹ ಸಂದರ್ಭದಲ್ಲಿ ನಾಯಿ ಕಾಯುವ ಜವಾಬ್ದಾರಿ ನೀಡುವುದು ಹಾಸ್ಯಾಸ್ಪದ. ಶಿಕ್ಷಕ ಸಮುದಾಯಕ್ಕೆ ಮಾಡುವ ಅವಮಾನ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಪತ್ರ ಮುಖೇನ ತಿಳಿಸಿದ್ದಾರೆ.
ಹೊರಟ್ಟಿ ಬರೆದ ಪತ್ರದಲ್ಲೇನಿದೆ?
ರಾಜ್ಯದ ಎಲ್ಲಾ ಶಿಕ್ಷಕರು ಮತದಾನದ ಕೆಲಸಗಳು, ಜನಗಣತಿ, ಜಾತಿಗಣತಿ, ಮತದಾರರ ಪಟ್ಟಿ ಪರಿಷ್ಕರಣೆ, ಮಕ್ಕಳಿಗೆ ಹಾಲು, ಮೊಟ್ಟೆ ವಿತರಣೆ ಇನ್ನೂ ಮುಂತಾದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಇದೀಗ ಅವುಗಳ ಜೊತೆಗೆ ಸರ್ಕಾರವು ಬೀದಿ ನಾಯಿಗಳನ್ನು ಕಾಯುವ ಹೊಣೆಗಾರಿಕೆಯನ್ನು ಶಿಕ್ಷಕರಿಗೆ ನೀಡಿರುವ ಕುರಿತು ದಿನಪತ್ರಿಕೆಯಲ್ಲಿ ವರದಿಯಾಗಿದ್ದು, ಸರ್ಕಾರದ ಈ ಕ್ರಮ ನಿಜಕ್ಕೂ ಬಹಳ ಬೇಸರದ ಸಂಗತಿಯಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿರುವ ಸರ್ಕಾರವು, ಶಾಲಾ ಶಿಕ್ಷಕರನ್ನ ನೋಡೆಲ್ ಅಧಿಕಾರಿಗಳನ್ನಾಗಿ ನೇಮಕ ಮಾಡುವಂತೆ ಸೂಚಿಸಿದೆ. ಇದು ಸರ್ಕಾರವು ಶಿಕ್ಷಕರನ್ನು ನಾಯಿಗಳಿಗಿಂತ ಕಡೆಯದಾಗಿ ನೋಡುತ್ತಿದೆ ಎನ್ನುವ ಅರ್ಥದಲ್ಲಿ ಬಿಂಬಿತವಾಗುತ್ತದೆ.
ಈಗಾಗಲೇ ಶಿಕ್ಷಕರು ಹಲವು ಕೆಲಸಗಳನ್ನು ನಿರ್ವಹಿಸುತ್ತಿರುವ ಕಾರಣ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚು ಗಮನ ಹರಿಸಲು ಆಗುತ್ತಿಲ್ಲ. ಇದರಿಂದ ಮಕ್ಕಳ ಕಲಿಕೆಯ ಗುಣಮಟ್ಟ ಕಡಿಮೆಯಾಗಿ ಫಲಿತಾಂಶವು ಸಹ ಕಡಿಮೆಯಾಗುತ್ತದೆ. ಪ್ರಸ್ತುತ ರಾಜ್ಯಾದ್ಯಂತ ಶಿಕ್ಷಕರ ಕೊರತೆ ಕಾಣುತ್ತಿದೆ. ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವು ಜನಗಣತಿ ಆರಂಭಿಸುತ್ತಿದ್ದು ಅದರಲ್ಲೂ ಈ ಶಿಕ್ಷಕರೇ ಪಾಲ್ಗೊಳ್ಳಬೇಕಿದೆ. ಶಿಕ್ಷಕರ ಕೊರತೆಯ ನಡುವೆಯೇ ಸರ್ಕಾರದ ಎಲ್ಲಾ ಕಾರ್ಯಕ್ರಮಗಳಿಗೂ ಅವರನ್ನು ನಿಯೋಜಿಸುವುದರ ಜೊತೆಗೆ ಈಗ ಬೀದಿ ನಾಯಿಗಳ ನಿಯಂತ್ರಣ ಹೊಣೆ ಅವರಿಗೆ ನೀಡಲು ಹೊರಟ ಕ್ರಮ ನಿಜಕ್ಕೂ ಹಾಸ್ಯಾಸ್ಪದ. ಹೀಗಾಗಿ ಈ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಹೊರಟ್ಟಿ ಆಗ್ರಹಿಸಿದ್ದಾರೆ.