ಬಿಹಾರ ಉಪಚುನಾವಣೆ: ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷಕ್ಕೆ ಪರೀಕ್ಷೆ: ಬಂಕಿಪುರದಲ್ಲಿ ತ್ರಿಕೋನ ಸ್ಪರ್ಧೆ – Kannada News | Bihar By election: Prashant Kishor’s Jan Suraaj Party Faces Crucial Test in Bankipur

ನವದೆಹಲಿ, ಆಗಸ್ಟ್ 03: ಬಿಹಾರ, ಮಧ್ಯಪ್ರದೇಶ ಮತ್ತು ಗುಜರಾತ್‌ ರಾಜ್ಯಗಳ ಮೂರು ಪ್ರಮುಖ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30 ರಂದು ನಡೆದಿದ್ದ ಉಪಚುನಾವಣೆಯ ಮತಎಣಿಕೆ ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡಿದೆ. ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆಯುತ್ತಿದ್ದು, ನಂತರ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ (EVM) ದಾಖಲಾದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಈ ಫಲಿತಾಂಶವು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮಾತ್ರವಲ್ಲದೆ, ಬಿಹಾರದ ಪ್ರಶಾಂತ್ ಕಿಶೋರ್(Prashant Kishor) ನೇತೃತ್ವದ ‘ಜನ್ ಸುರಾಜ್’ ಪಕ್ಷಕ್ಕೂ ಅತ್ಯಂತ ನಿರ್ಣಾಯಕವಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜೀನಾಮೆಯಿಂದ ತೆರವಾದ ಈ ಕ್ಷೇತ್ರವನ್ನು ಬಿಜೆಪಿಯ ಸುರಕ್ಷಿತ ‘ನಗರ ಭದ್ರಕೋಟೆ’ ಎಂದೇ ಪರಿಗಣಿಸಲಾಗಿದೆ. ಈ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮಧ್ಯಪ್ರದೇಶದ ದಾಟಿಯಾ ಕ್ಷೇತ್ರವು ಬಿಜೆಪಿಯ ಮತ್ತೊಂದು ಸಾಂಪ್ರದಾಯಿಕ ಭದ್ರಕೋಟೆಯಾಗಿದ್ದು, ಇಲ್ಲಿ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿದೆ. ಗುಜರಾತ್‌ನ ಮಂಜಲ್ಪುರ ಕ್ಷೇತ್ರದಲ್ಲೂ ಭಾರಿ ಮತದಾನ ದಾಖಲಾಗಿದ್ದು, ಫಲಿತಾಂಶದತ್ತ ಎಲ್ಲರ ಕುತೂಹಲ ನೆಟ್ಟಿದೆ.

ಪ್ರಶಾಂತ್ ಕಿಶೋರ್ ಹಾಗೂ ಜನ್ ಸುರಾಜ್ ಭವಿಷ್ಯಕ್ಕೆ ಅಗ್ನಿಪರೀಕ್ಷೆ
ರಾಜಕೀಯ ಪ್ರವೇಶದ ನಂತರದ ಪ್ರಮುಖ ಪರೀಕ್ಷೆ: ಪ್ರಸಿದ್ಧ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ತಮ್ಮ ‘ಜನ್ ಸುರಾಜ್’ ಪಾದಯಾತ್ರೆಯ ನಂತರ ಅಧಿಕೃತ ರಾಜಕೀಯ ಪಕ್ಷವಾಗಿ ‘ಜನ್ ಸುರಾಜ್ ಪಾರ್ಟಿ’ಯನ್ನು ಸ್ಥಾಪಿಸಿ ಬಿಹಾರದ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ.

ಮತ್ತಷ್ಟು ಓದಿ: ಬಂಕಿಪುರ ಉಪಚುನಾವಣೆ : ಪ್ರಶಾಂತ್ ಕಿಶೋರ್ ಕುಟುಂಬದ ಒಟ್ಟು ಆಸ್ತಿ 198 ಕೋಟಿ ರೂ.ಗೂ ಅಧಿಕ!

ಬಂಕಿಪುರ ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರ ಪಕ್ಷವು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಸಾಂಪ್ರದಾಯಿಕ ಆರ್‌ಜೆಡಿ-ಕಾಂಗ್ರೆಸ್ (ಮಹಾಘಟಬಂಧನ) ಹಾಗೂ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಪರ್ಯಾಯವಾಗಿ ಯುವಜನತೆ ಮತ್ತು ನಗರವಾಸಿಗಳ ಮತಗಳನ್ನು ಸೆಳೆಯುವ ತಂತ್ರ ಹೆಣೆದಿದೆ.

ಬಿಹಾರ ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಈ ಸಮಯದಲ್ಲಿ, ಈ ಉಪಚುನಾವಣೆಯ ಫಲಿತಾಂಶವು ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷದ ನಿಜವಾದ ‘ಜನಪ್ರಿಯತೆ’ ಮತ್ತು ಪ್ರಭಾವ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಲಿದೆ. ಜುಲೈ 30 ರಂದು ನಡೆದ ಮತದಾನದಲ್ಲಿ ಮೂರೂ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಭಾರಿ ಪ್ರಮಾಣದ ಮತದಾನ ದಾಖಲಾಗಿತ್ತು.

ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ಆಡಳಿತಾರೂಢ ಬಿಜೆಪಿ ಮೈತ್ರಿಕೂಟಕ್ಕೆ ಈ ಸಣ್ಣ ಉಪಚುನಾವಣೆಗಳು ರಾಜ್ಯ ನಾಯಕತ್ವ ಮತ್ತು ಆಡಳಿತ ವೈಖರಿಯ ಮೇಲಿನ ‘ಪ್ರಜಾಪ್ರಭುತ್ವದ ತೀರ್ಪು’ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸೈಬರ್ ಹೂಡಿಕೆ ವಂಚನೆ ಪ್ರಕರಣಗಳು! ಸಾರ್ವಜನಿಕರಿಗೆ ಪೊಲೀಸರ ಸೂಚನೆ – Kannada News | Investment Frauds Surge in Bengaluru: Cyber Crime Police Issues Advisory

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸೈಬರ್ ಹೂಡಿಕೆ ವಂಚನೆ ಪ್ರಕರಣಗಳು! Image Credit source: gettyimages.com

ಬೆಂಗಳೂರು, ಆಗಸ್ಟ್ 03: ಬೆಂಗಳೂರಿನಲ್ಲಿ ಸೈಬರ್ ಅಪರಾಧಗಳ ಪೈಕಿ ಆನ್‌ಲೈನ್ ಹೂಡಿಕೆ ವಂಚನೆ (Investment Fraud) ಪ್ರಕರಣಗಳು ಅತ್ಯಂತ ವೇಗವಾಗಿ ಹೆಚ್ಚಾಗುತ್ತಿವೆ. ಡಿಜಿಟಲ್ ಅರೆಸ್ಟ್ ಹಾಗೂ ಇತರ ಸೈಬರ್ ಅಪರಾಧಗಳಿಗಿಂತಲೂ ಹೂಡಿಕೆ ನೆಪದಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸುವ ಪ್ರಕರಣಗಳೇ ಅಗ್ರಸ್ಥಾನದಲ್ಲಿವೆ ಎಂದು ಸೈಬರ್ ಕ್ರೈಂ ಪೊಲೀಸರ ವರದಿಗಳು ತಿಳಿಸಿವೆ.

ಅಪರಾಧಿಗಳ ಕಾರ್ಯಾಚರಣೆ ಮತ್ತು ವಂಚನೆಯ ವಿಧಾನ

ವಂಚಕರು ಮುಖ್ಯವಾಗಿ ವಾಟ್ಸಾಪ್, ಟೆಲಿಗ್ರಾಂ ಹಾಗೂ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರನ್ನು ಸಂಪರ್ಕಿಸುತ್ತಾರೆ. ಆರಂಭದಲ್ಲಿ ಪಾರ್ಟ್-ಟೈಮ್ ಉದ್ಯೋಗ, ಆನ್‌ಲೈನ್ ಟಾಸ್ಕ್ ಅಥವಾ ರಿವ್ಯೂ ನೀಡುವಂತಹ ಸಣ್ಣ ಕೆಲಸಗಳನ್ನು ನೀಡಿ ಕಮಿಷನ್ ರೂಪದಲ್ಲಿ ಹಣ ಪಾವತಿಸಿ ಸಂತ್ರಸ್ತರ ನಂಬಿಕೆ ಗಳಿಸುತ್ತಾರೆ.

ಒಮ್ಮೆ ನಂಬಿಕೆ ಬಂದ ನಂತರ, ನಕಲಿ ಟ್ರೇಡಿಂಗ್ ಆಪ್‌ಗಳು ಅಥವಾ ಕ್ರಿಪ್ಟೋ ಹೂಡಿಕೆ ಯೋಜನೆಗಳಲ್ಲಿ ಹಣ ಹೂಡಿದರೆ ಪ್ರತಿದಿನ ಗರಿಷ್ಠ ಲಾಭ ನೀಡುವುದಾಗಿ ಆಮಿಷ ಒಡ್ಡುತ್ತಾರೆ. ಆರಂಭದಲ್ಲಿ ಕೆಲವೇ ಸಾವಿರ ರೂಪಾಯಿಗಳ ಹೂಡಿಕೆಗೆ ತಕ್ಷಣವೇ ಲಾಭದ ಹಣ ನೀಡಿ ಪ್ರಚೋದಿಸುತ್ತಾರೆ. ಆದರೆ, ಸಂತ್ರಸ್ತರು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ ಮೇಲೆ ತಮ್ಮ ಹಣವನ್ನು ಹಿಂಪಡೆಯಲು ಹೋದಾಗ, ವಿವಿಧ ಶುಲ್ಕಗಳ ನೆಪದಲ್ಲಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ಕೊನೆಗೆ ಸಂಪರ್ಕ ಕಡಿತಗೊಳಿಸುತ್ತಾರೆ.

ಸೈಬರ್ ಪೊಲೀಸರ ಕಾರ್ಯಾಚರಣೆ ಮತ್ತು ಮುನ್ನೆಚ್ಚರಿಕೆ ಸಲಹೆಗಳು

ಬೆಂಗಳೂರು ನಗರ ಸೈಬರ್ ಕ್ರೈಂ ವಿಭಾಗ (CCB) ಹಲವು ವಂಚನೆ ಜಾಲಗಳನ್ನು ಪತ್ತೆಹಚ್ಚಿ, ಹೂಡಿಕೆ ವಂಚನೆಗೆ ಬಳಸುತ್ತಿದ್ದ ನೂರಾರು ನಕಲಿ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಆದಾಗ್ಯೂ, ಅಪರಿಚಿತ ಅಪ್ಲಿಕೇಶನ್‌ಗಳು ಹಾಗೂ ಮೆಸೇಜಿಂಗ್ ಆಪ್‌ಗಳ ಮೂಲಕ ಬರುವ ಹೂಡಿಕೆ ಆಫರ್‌ಗಳ ಬಗ್ಗೆ ಸಾರ್ವಜನಿಕರು ಸದಾ ಜಾಗರೂಕರಾಗಿರಬೇಕು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಖಾತರಿಪಡಿಸದ ಆನ್‌ಲೈನ್ ಲಿಂಕ್‌ಗಳ ಮೂಲಕ ಹಣ ಹೂಡಿಕೆ ಮಾಡಬೇಡಿ. ಒಂದು ವೇಳೆ ಸೈಬರ್ ವಂಚನೆಗೆ ಒಳಗಾದಲ್ಲಿ ತಕ್ಷಣವೇ ರಾಷ್ಟ್ರೀಯ ಸೈಬರ್ ಹೆಲ್ಪ್‌ಲೈನ್ ಸಂಖ್ಯೆ 1930ಕ್ಕೆ ಕರೆ ಮಾಡಿ ದೂರು ನೀಡಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲು ಶ್ರೀಲಂಕಾ ವಿರುದ್ಧ ಗೆಲ್ಲಿ, ಫೈನಲ್ ಆಮೇಲೆ ನೋಡೋಣ! – Kannada News | Forget WTC Finals, Focus on Rebuilding Team: Deep Dasgupta to Team India

ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿ ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ದೃಷ್ಟಿಯಿಂದ ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದರೆ ಮಾತ್ರ ಭಾರತ ತಂಡದ WTC ಫೈನಲ್ ಹಾದಿ ಸುಗಮವಾಗಲಿದೆ. ಆದರೆ ಟೀಮ್ ಇಂಡಿಯಾ ಸದ್ಯ ಫೈನಲ್ ತಲುಪುವ ಒತ್ತಡವನ್ನು ಬದಿಗಿಟ್ಟು, ಶ್ರೀಲಂಕಾ ವಿರುದ್ಧ ಕೇವಲ ಪಂದ್ಯಗಳನ್ನು ಗೆಲ್ಲುವ ಕಡೆಗೆ ಗಮನ ಹರಿಸಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ದೀಪ್ ದಾಸ್‌ಗುಪ್ತಾ ಸಲಹೆ ನೀಡಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಕುರಿತು ಮಾತನಾಡಿ ದೀಪ್ ದಾಸ್‌ಗುಪ್ತಾ, ನಾನು ಹೇಳಲಿರುವ ಮಾತು ಕೆಲವರಿಗೆ ಇಷ್ಟವಾಗದೇ ಇರಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಾವು WTC ಫೈನಲ್ ಅರ್ಹತೆಯ ಬಗ್ಗೆ ಸಂಪೂರ್ಣವಾಗಿ ಮರೆತುಬಿಡುವುದು ಒಳ್ಳೆಯದು. ಅದರ ಬಗ್ಗೆ ಈಗ ಚರ್ಚಿಸದಿರುವುದು ಉತ್ತಮ ಎಂದಿದ್ದಾರೆ.

WTC ಫೈನಲ್ ತಲುಪಲೇಬೇಕು ಎಂಬ ಹಠಕ್ಕೆ ಬಿದ್ದರೆ, ತಂಡವು ನಿರ್ದಿಷ್ಟ ಪಂದ್ಯ ಅಥವಾ ಸರಣಿ ಗೆಲ್ಲಲು ಕೇವಲ ತಾತ್ಕಾಲಿಕ ‘ಶಾರ್ಟ್‌ಕಟ್’ ಮಾರ್ಗಗಳನ್ನು ಹುಡುಕಲು ಆರಂಭಿಸುತ್ತದೆ ಎಂದು ದೀಪ್ ದಾಸ್‌ಗುಪ್ತಾ ಎಚ್ಚರಿಸಿದ್ದಾರೆ. ಇದು ದೀರ್ಘಾವಧಿಯಲ್ಲಿ ತಂಡಕ್ಕೆ ನಷ್ಟವನ್ನು ಉಂಟು ಮಾಡಲಿದೆ.

ನಾವು ಸದ್ಯಕ್ಕೆ ಕೇವಲ ಬ್ಯಾಂಡ್-ಏಡ್ ಹಾಕಿಕೊಂಡು ನಡೆಯಬೇಕೇ ಅಥವಾ ಸೂಕ್ತವಾದ ಹೊಲಿಗೆ ಹಾಕಿಸಿಕೊಂಡು ವಿಶ್ರಾಂತಿ ಪಡೆದು, 100% ಫಿಟ್‌ನೆಸ್‌ನೊಂದಿಗೆ ಭವಿಷ್ಯಕ್ಕೆ ಸಿದ್ಧರಾಗಬೇಕೇ ಎಂಬುದನ್ನು ನಿರ್ಧರಿಸಬೇಕು. ಅಂದರೆ ಫೈನಲ್​ಗೆ ತಲುಪಲು ಆಡಬೇಡಿ, ಟೆಸ್ಟ್ ತಂಡವನ್ನು ಬಲಿಷ್ಠಗೊಳಿಸಲು ಯೋಜನೆ ರೂಪಿಸಬೇಕೆಂದು ದೀಪ್ ದಾಸ್‌ಗುಪ್ತಾ ಹೇಳಿದ್ದಾರೆ.

ತಾಯ್ನಾಡಿನಲ್ಲಿ ಮಾತ್ರವಲ್ಲದೆ ವಿದೇಶಿ ನೆಲದಲ್ಲೂ ಸರಣಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದ 2020-21ರ ಬಲಿಷ್ಠ ಟೀಮ್ ಇಂಡಿಯಾವನ್ನು ಮತ್ತೆ ಕಟ್ಟುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಇದೇ ವೇಳೆ ದೀಪ್ ದಾಸ್‌ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ರಾಜೀವ್ ಕುಮಾರ್… ಟೀಮ್ ಇಂಡಿಯಾ ಹಿಂದಿದ್ದ ಕಾಣದ ‘ಕೈ’

ಮುಂದಿನ ತಿಂಗಳುಗಳಲ್ಲಿ ಶ್ರೀಲಂಕಾ ಮತ್ತು ನ್ಯೂಝಿಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಆಡುವುದು ಮತ್ತು ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಕಠಿಣ ಸರಣಿಯನ್ನು ಎದುರಿಸುವುದು ಭಾರತದ ಮುಂದಿರುವ ಅತೀ ದೊಡ್ಡ ಸವಾಲಾಗಿದೆ. ಹೀಗಾಗಿ, ಪಾಯಿಂಟ್‌ಗಳ ಲೆಕ್ಕಾಚಾರ ಬದಿಗಿಟ್ಟು ಬಲಿಷ್ಠ ತಂಡ ನಿರ್ಮಾಣಕ್ಕೆ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶುಭ್​ಮನ್ ಗಿಲ್ ಒತ್ತು ನೀಡಬೇಕು ಎಂದು ದೀಪ್ ದಾಸ್‌ಗುಪ್ತಾ ಹೇಳಿದ್ದಾರೆ.

Source link

ಇರಾನ್ ಜತೆ ಮತ್ತೆ ಶಾಂತಿ ಮಾತುಕತೆ, ದಾಳಿ ರದ್ದು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು – Kannada News | US Iran Peace Talks Begin: Trump Halts Attacks, Focus on Hormuz and Nuclear Program

ವಾಷಿಂಗ್ಟನ್, ಆಗಸ್ಟ್​ 03: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮುಂದುವರೆದಿರುವಂತೆಯೇ, ಇರಾನ್ ಜೊತೆಗಿನ ರಾಜತಾಂತ್ರಿಕ ಮಾತುಕತೆಗಳು ಇಂದಿನಿಂದ ಆರಂಭವಾಗಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ದೃಢಪಡಿಸಿದ್ದಾರೆ. ಇರಾನ್ ಮೇಲಿನ ಪ್ರಬಲ ಮಿಲಿಟರಿ ದಾಳಿಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವ ಅಮೆರಿಕ, ಶಾಂತಿ ಒಪ್ಪಂದಕ್ಕೆ ಆದ್ಯತೆ ನೀಡಲು ನಿರ್ಧರಿಸಿದೆ. ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ನಮ್ಮ ಗುರಿ ಅನಗತ್ಯವಾಗಿ ಜನರ ಜೀವ ತೆಗೆಯುವುದಲ್ಲ. ಮಾತುಕತೆಯ ಮಾರ್ಗ ತೆರೆದಿದ್ದು, ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.

ದಾಳಿ ಮುಂದೂಡಿಕೆ: ಇರಾನ್‌ನ ಇಂಧನ ಮೂಲಸೌಕರ್ಯಗಳ ಮೇಲೆ ಭಾನುವಾರ ನಡೆಸಲು ಯೋಜಿಸಲಾಗಿದ್ದ ಬೃಹತ್ ದಾಳಿಯನ್ನು ಅಮೆರಿಕ ಮುಂದೂಡಿದೆ.ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (MBS), ಕತಾರ್ ಹಾಗೂ ಯುಎಇ ನಾಯಕರು ಟ್ರಂಪ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿ, ಯುದ್ಧದ ಬದಲು ರಾಜತಾಂತ್ರಿಕ ಮಾರ್ಗಕ್ಕೆ ಅವಕಾಶ ನೀಡುವಂತೆ ಕೋರಿದ್ದರು. ಸಮರ ಉಲ್ಬಣಗೊಂಡರೆ ಇಡೀ ಗಲ್ಫ್ ಪ್ರದೇಶದ ಆರ್ಥಿಕತೆಗೆ ಧಕ್ಕೆಯಾಗಲಿದೆ ಎಂಬ ಕಳವಳವನ್ನು ಅವರು ವ್ಯಕ್ತಪಡಿಸಿದ್ದರು.

ತೈಲ ಮಾರ್ಗ ಮುಕ್ತಗೊಳಿಸುವ ಗುರಿ: ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ತಕ್ಷಣವೇ ಮುಕ್ತಗೊಳಿಸುವುದು ಹಾಗೂ ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ತಡೆ ಒಡ್ಡುವುದು ಈ ಮಾತುಕತೆಯ ಮುಖ್ಯ ಪ್ರಸ್ತಾವನೆಯಾಗಿದೆ.

ಮತ್ತಷ್ಟು ಓದಿ: ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್

ಇರಾನ್ ನಿಲುವು: ಇರಾನ್‌ನ ವಿದೇಶಾಂಗ ಸಚಿವಾಲಯವು ಹಾರ್ಮುಜ್ ಜಲಸಂಧಿಯ ಸಾಗಣೆ ನಿಯಮಗಳು ಯುದ್ಧಕ್ಕೂ ಮೊದಲು ಇದ್ದ ಸ್ಥಿತಿಗೆ ಸುಲಭವಾಗಿ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಜಲಸಂಧಿಯ ಭದ್ರತೆ ಹಾಗೂ ನೌಕಾಯಾನ ಮಾರ್ಗದ ಕುರಿತು ಓಮನ್ ದೇಶದ ಜೊತೆ ಇರಾನ್ ಪ್ರತ್ಯೇಕವಾಗಿ ಮಾತುಕತೆ ನಡೆಸುತ್ತಿದೆ.

ಆರು ತಿಂಗಳ ಸಂಘರ್ಷ: ಇಸ್ರೇಲ್ ಮತ್ತು ಅಮೆರಿಕದ ಪಡೆಗಳು ಇರಾನ್ ಮೇಲೆ ನಡೆಸಿದ ಮಿಲಿಟರಿ ಕಾರ್ಯಾಚರಣೆಗಳ ನಂತರ ಮಧ್ಯಪ್ರಾಚ್ಯದಲ್ಲಿ ಭಾರಿ ಬಿಕ್ಕಟ್ಟು ಎದುರಾಗಿತ್ತು. ಇರಾನ್ ಬೆಂಬಲಿತ ಗುಂಪುಗಳು ಮತ್ತು ಅಮೆರಿಕದ ಪಡೆಗಳ ನಡುವೆ ಸರಣಿ ದಾಳಿಗಳು ನಡೆದಿದ್ದವು.

ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದ್ದರಿಂದ ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆ ವ್ಯತ್ಯಯಗೊಂಡು ತೈಲ ಬೆಲೆಗಳಲ್ಲಿ ಏರಿಕೆ ಕಂಡುಬಂದಿತ್ತು. ಇದೀಗ ಶಾಂತಿ ಮಾತುಕತೆಯ ಭರವಸೆಯಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಸಣ್ಣ ಮಟ್ಟದ ಚೇತರಿಕೆ ಕಂಡುಬಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:53 am, Mon, 3 August 26

Source link

ರಶೀದ್ ಖಾನ್ ಸ್ಪಿನ್ ಮೋಡಿ: 20 ಎಸೆತಗಳಲ್ಲಿ 5 ವಿಕೆಟ್​! – Kannada News | Rashid Khan claimed the first five wicket haul in the Hundred 2026

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್​ನಲ್ಲಿ ಅಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ 5 ವಿಕೆಟ್​ಗಳ ಸಾಧನೆ ಮಾಡಿದ್ದಾರೆ. ಅದು ಸಹ 20 ಎಸೆತಗಳಲ್ಲಿ ಎಂಬುದು ವಿಶೇಷ. ಅಂದರೆ ‘ದಿ ಹಂಡ್ರೆಡ್’ ಲೀಗ್‌ನಲ್ಲಿ ಪ್ರತಿ ಇನ್ನಿಂಗ್ಸ್‌ಗೆ ಇರುವುದು ಕೇವಲ 100 ಎಸೆತಗಳು ಮಾತ್ರ. ಬ್ಯಾಟರ್‌ಗಳ ಅಬ್ಬರವೇ ಹೆಚ್ಚಾಗಿರುವ 100 ಎಸೆತಗಳ ಈ ಟೂರ್ನಿಯಲ್ಲಿ ಕೇವಲ 20 ಎಸೆತಗಳ ಕೋಟಾದಲ್ಲಿ ಎದುರಾಳಿ ಪಡೆಯ 5 ವಿಕೆಟ್ ಪಡೆಯುವುದು ಅತಿ ದೊಡ್ಡ ಸಾಹಸವೇ ಸರಿ.

2021 ರಲ್ಲಿ ಆರಂಭವಾದ ಈ ಲೀಗ್‌ನ ಪುರುಷರ ವಿಭಾಗದಲ್ಲಿ ಇದುವರೆಗೆ ಕೇವಲ 8 ಮಂದಿ ಬೌಲರ್‌ಗಳು ಮಾತ್ರ ಈ ಐತಿಹಾಸಿಕ ಮೈಲಿಗಲ್ಲು ತಲುಪಲು ಯಶಸ್ವಿಯಾಗಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಅಫ್ಘಾನಿಸ್ತಾನದ ಸ್ಪಿನ್ ಮಾಂತ್ರಿಕ ರಶೀದ್ ಖಾನ್.

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಎಂಐ ಲಂಡನ್ ಪರ ಕಣಕ್ಕಿಳಿದ ರಶೀದ್ ಖಾನ್, ಟಿಮ್ ಸೈಫರ್ಟ್, ಜೋಸ್ ಬಟ್ಲರ್, ಹೆನ್ರಿಕ್ ಕ್ಲಾಸೆನ್, ಟಾಮ್ ಮೂರ್ಸ್ ಹಾಗೂ ಲಿಯಾಮ್ ಡಾಸನ್ ವಿಕೆಟ್ ಕಬಳಿಸಿದರು. ಈ ಮೂಲಕ ಕೇವಲ 20 ಎಸೆತಗಳಲ್ಲಿ 17 ರನ್​ ನೀಡಿ 5 ವಿಕೆಟ್​ಗಳ ಸಾಧನೆ ಮಾಡಿದರು.

ಇದನ್ನೂ ಓದಿ: ರಾಜೀವ್ ಕುಮಾರ್… ಟೀಮ್ ಇಂಡಿಯಾ ಹಿಂದಿದ್ದ ಕಾಣದ ‘ಕೈ’

ಈ ಸಾಧನೆ ಏಕೆ ಇಷ್ಟೊಂದು ವಿಶೇಷ?

ಸಾಮಾನ್ಯ ಟಿ20 ಕ್ರಿಕೆಟ್‌ನಲ್ಲಿ ಒಬ್ಬ ಬೌಲರ್‌ಗೆ 24 ಎಸೆತಗಳ ಅವಕಾಶ ಇರುತ್ತದೆ. ಆದರೆ ದಿ ಹಂಡ್ರೆಡ್‌ನಲ್ಲಿ ಬೌಲರ್‌ಗೆ ಸಿಗುವುದು ಕೇವಲ 20 ಎಸೆತಗಳು (5 ಅಥವಾ 10 ಎಸೆತಗಳ ಸ್ಪೆಲ್) ಮಾತ್ರ. ಈ 20 ಎಸೆತಗಳ ಅತ್ಯಲ್ಪ ಅವಧಿಯಲ್ಲಿ ಬ್ಯಾಟರ್‌ಗಳು ಪ್ರತಿಯೊಂದು ಚೆಂಡನ್ನೂ ಬೌಂಡರಿಗಟ್ಟಲು ಯತ್ನಿಸುತ್ತಿರುತ್ತಾರೆ.

ಇಂತಹ ಒತ್ತಡದ ಪರಿಸ್ಥಿತಿಯಲ್ಲೂ ರನ್ ನಿಯಂತ್ರಿಸಿ, ಎದುರಾಳಿ ಪಡೆಯ ಅರ್ಧದಷ್ಟು ತಂಡವನ್ನು ಒಬ್ಬನೇ ಬೌಲರ್ ಪೆವಿಲಿಯನ್‌ಗೆ ಅಟ್ಟುವುದು ನಿಜಕ್ಕೂ ಶ್ರೇಷ್ಠ ಪ್ರದರ್ಶನ.

ಹೀಗಾಗಿಯೇ, ನೂರಾರು ಪಂದ್ಯಗಳು ಮುಗಿದಿದ್ದರೂ ದಿ ಹಂಡ್ರೆಡ್ ಲೀಗ್‌ನಲ್ಲಿ ಕೇವಲ 8 ಬೌಲರ್‌ಗಳಿಗೆ ಮಾತ್ರ 5 ವಿಕೆಟ್​ಗಳ ಗೊಂಚಲು​ ಪಡೆಯಲು ಸಾಧ್ಯವಾಗಿದೆ.

‘ದಿ ಹಂಡ್ರೆಡ್’ ಲೀಗ್‌ನಲ್ಲಿ 5 ವಿಕೆಟ್ ಪಡೆದ ಬೌಲರ್​ಗಳು:

ಕ್ರಮಾಂಕ ಬೌಲರ್ ಹೆಸರು ವಿಕೆಟ್/ರನ್ ತಂಡ ಸೀಸನ್ ಎದುರಾಳಿ ತಂಡ
1 ಮಾರ್ಚೆಂಟ್ ಡಿ ಲ್ಯಾಂಗೆ 5 / 20 ಟ್ರೆಂಟ್ ರಾಕೆಟ್ಸ್ 2021 ಸದರ್ನ್ ಬ್ರೇವ್
2 ಇಮ್ರಾನ್ ತಾಹಿರ್ 5 / 25 ಬರ್ಮಿಂಗ್ಹ್ಯಾಮ್ ಫೀನಿಕ್ಸ್ 2021 ವೆಲ್ಷ್ ಫೈರ್
3 ಹೆನ್ರಿ ಬ್ರೂಕ್ಸ್ 5 / 25 ಬರ್ಮಿಂಗ್ಹ್ಯಾಮ್ ಫೀನಿಕ್ಸ್ 2022 ಸದರ್ನ್ ಬ್ರೇವ್
4 ಜೋಶ್ ಲಿಟಲ್ 5 / 13 ಮ್ಯಾಂಚೆಸ್ಟರ್ ಒರಿಜಿನಲ್ಸ್ 2022 ಓವಲ್ ಇನ್ವಿನ್ಸಿಬಲ್ಸ್
5 ಕ್ಯಾಲ್ವಿನ್ ಹ್ಯಾರಿಸನ್ 5 / 11 ಮ್ಯಾಂಚೆಸ್ಟರ್ ಒರಿಜಿನಲ್ಸ್ 2023 ನಾರ್ದರ್ನ್ ಸೂಪರ್‌ಚಾರ್ಜರ್ಸ್
6 ಸ್ಯಾಮ್ ಕರ್ರನ್ 5 / 16 ಓವಲ್ ಇನ್ವಿನ್ಸಿಬಲ್ಸ್ 2024 ಲಂಡನ್ ಸ್ಪಿರಿಟ್
7 ಟಿಮ್ ಸೌಥಿ 5 / 12 ಬರ್ಮಿಂಗ್ಹ್ಯಾಮ್ ಫೀನಿಕ್ಸ್ 2024 ಟ್ರೆಂಟ್ ರಾಕೆಟ್ಸ್
8 ರಶೀದ್ ಖಾನ್ 5 / 17 ಎಂಐ ಲಂಡನ್ 2026 ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್

Source link

ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ – Kannada News | Kabini Dam Full, Water released after heavy monsoon rain: Bidarahalli Bridge Submerged After Heavy Inflow

ಮೈಸೂರು, ಆಗಸ್ಟ್ 3: ಮೈಸೂರು ಜಿಲ್ಲೆಯ ಎಚ್​ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಬಳಿಯ ಕಬಿನಿ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. ಕೇರಳದ ವಯನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮವಾಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ, ಕಬಿನಿ ಜಲಾಶಯದಿಂದ ಹೊರಹರಿವನ್ನು ಹೆಚ್ಚಿಸಲಾಗಿದ್ದು, ಇದರ ನೇರ ಪರಿಣಾಮವಾಗಿ ಜಲಾಶಯದ ಸಮೀಪವಿರುವ ಸರ್ಗೂರು ತಾಲೂಕಿನ ಬಿದರಹಳ್ಳಿ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ.

ಈ ಸೇತುವೆ ಬಿದರಹಳ್ಳಿ ಗ್ರಾಮ ಮತ್ತು ಎಚ್.ಡಿ. ಕೋಟೆ ನಡುವೆ ಪ್ರಮುಖ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಸೇತುವೆ ಮುಳುಗಡೆಯಾಗುವುದರಿಂದ, ಗ್ರಾಮಸ್ಥರು ಸುಮಾರು 15 ಕಿಲೋಮೀಟರ್ ಹೆಚ್ಚುವರಿ ದೂರವನ್ನು ಸುತ್ತಿ ಬರಬೇಕಾಗಿದೆ. ಇದು ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಹಾಗೂ ವೈದ್ಯಕೀಯ ಚಿಕಿತ್ಸೆಗಾಗಿ ತೆರಳುವ ರೋಗಿಗಳಿಗೆ ತೀವ್ರ ತೊಂದರೆಯನ್ನುಂಟುಮಾಡಿದೆ. ಈ ಸಮಸ್ಯೆ ಪ್ರತಿ ಮಳೆಗಾಲದಲ್ಲೂ ಎದುರಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರವಾಗಿ ಅತ್ಯಾಧುನಿಕ ಹೊಸ ಸೇತುವೆಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮುಂದಿನ ಮಳೆಗಾಲದ ವೇಳೆಗೆ ಈ ಸೇತುವೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಮನದ ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ – Kannada News | Priyanka Upendra Discusses Prajaakeeya, She wants Upendra To contestant Election

ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ ಅವರು ಇತ್ತೀಚೆಗೆ ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಬಗ್ಗೆ ಕೆಲವು ಮಾಹಿತಿ ನೀಡಿದ್ದಾರೆ. ದಳಪತಿ ವಿಜಯ್ ತಮಿಳು ನಾಡು ಸಿಎಂ ಆದ ಬಳಿಕ ಉಪೇಂದ್ರ ಅವರಿ್ಡ ಪ್ರಜಾಕೀಯ ಪಕ್ಷದ ಕುರಿತು ಆಸಕ್ತಿ ಹೆಚ್ಚಾಯಿತೇ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ವಿಜಯ್ ಅವರು ಗೆದ್ದ ನಂತರ ಉಪೇಂದ್ರ ಮತ್ತಷ್ಟು ಸಕ್ರಿಯರಾಗಿದ್ದಾರೆ. ಪ್ರಜಾಕೀಯ 50,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ವಿದೇಶದಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ನಡೆಯುವ ಚುನಾವಣೆಯಲ್ಲಿ ಉಪೇಂದ್ರ ಅವರು ಸ್ಪರ್ಧಿಸಬೇಕು’ ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Dam Water Level: 100 ಅಡಿ ಭರ್ತಿಯಾದ‌ ಕೆ.ಆರ್.ಎಸ್ ಜಲಾಶಯ! – Kannada News | KRS Dam Water Level Crosses 100 Feet Mark, Cauvery Reservoir News

ಬೆಂಗಳೂರು, ಆಗಸ್ಟ್ 03: ಕಾವೇರಿ ಹಾಗೂ ಮಲೆನಾಡು ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಪ್ರಬಲ ಮುಂಗಾರು ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕಾವೇರಿ ನಾಡಿನ ಜೀವನಾಡಿ ಕೃಷ್ಣರಾಜಸಾಗರ (ಕೆ.ಆರ್.ಎಸ್) ಜಲಾಶಯದ ನೀರಿನ ಮಟ್ಟ 100 ಅಡಿಯ ಗಡಿ ದಾಟುವ ಮೂಲಕ ಶತಕದ ಸನಿಹಕ್ಕೆ ತಲುಪಿ ಭರ್ತಿಯಾಗುವತ್ತ ಸಾಗಿದೆ.

1. ಕೆ.ಆರ್.ಎಸ್. ಜಲಾಶಯ (ಮಂಡ್ಯ)

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ಮಟ್ಟ: 100.34 ಅಡಿ
  • ಒಳಹರಿವು: 32,048 ಕ್ಯೂಸೆಕ್
  • ಹೊರಹರಿವು: 1,821 ಕ್ಯೂಸೆಕ್
  • ಗರಿಷ್ಠ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ: 23.079 ಟಿಎಂಸಿ

ಕೇವಲ ಮೂರು ದಿನಗಳ ಅಂತರದಲ್ಲೇ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟದಲ್ಲಿ ಬರೋಬ್ಬರಿ 8 ಅಡಿ ಏರಿಕೆ ಕಂಡುಬಂದಿದ್ದು, ಪ್ರಸ್ತುತ 23 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಭಾರೀ ಪ್ರಮಾಣದ ಒಳಹರಿವು ಮುಂದುವರಿದಿದ್ದು, ಇದೇ ವೇಗದಲ್ಲಿ ಇನ್ನು 10 ರಿಂದ 15 ದಿನಗಳ ಕಾಲ ನೀರು ಹರಿದುಬಂದರೆ ಕೆ.ಆರ್.ಎಸ್ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆಯಿದೆ.

2. ಹೇಮಾವತಿ ಜಲಾಶಯ (ಗೊರೂರು, ಹಾಸನ)

  • ಗರಿಷ್ಠ ಮಟ್ಟ: 2922.00 ಅಡಿ (37 ಟಿಎಂಸಿ)
  • ಇಂದಿನ ಮಟ್ಟ: 2911.75 ಅಡಿ (28.022 ಟಿಎಂಸಿ)
  • ಒಳಹರಿವು: 12,859 ಕ್ಯೂಸೆಕ್
  • ಹೊರಹರಿವು: 500 ಕ್ಯೂಸೆಕ್ (ಕಾಲುವೆಗೆ: 000 ಕ್ಯೂಸೆಕ್)

ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲೂ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವರ್ಷ ಇದೇ ದಿನ 2921.40 ಅಡಿ (36.523 ಟಿಎಂಸಿ) ನೀರಿತ್ತು. ಆಗ 5,252 ಕ್ಯೂಸೆಕ್ ಒಳಹರಿವು, ನದಿಗೆ 2,400 ಕ್ಯೂಸೆಕ್ ಹಾಗೂ ಕಾಲುವೆಗೆ 4,300 ಕ್ಯೂಸೆಕ್ ಹೊರಹರಿವು ಇತ್ತು.

3. ತುಂಗಭದ್ರಾ ಜಲಾಶಯ (ಮುನಿರಾಬಾದ್, ಕೊಪ್ಪಳ)

  • ಗರಿಷ್ಠ ಸಂಗ್ರಹ ಸಾಮರ್ಥ್ಯ: 105 ಟಿಎಂಸಿ
  • ಇಂದಿನ ಸಂಗ್ರಹ: 44 ಟಿಎಂಸಿ (ನಿನ್ನೆ 40 ಟಿಎಂಸಿ ಇತ್ತು – ಒಂದೇ ದಿನದಲ್ಲಿ 4 ಟಿಎಂಸಿ ನೀರು ಸಂಗ್ರಹ)
  • ಒಳಹರಿವು: 30,000ಕ್ಕೂ ಹೆಚ್ಚು ಕ್ಯೂಸೆಕ್

ಮಲೆನಾಡು ಭಾಗದಲ್ಲಿ ಆರ್ಭಟಿಸುತ್ತಿರುವ ಮಳೆಯಿಂದಾಗಿ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಹರಿದುಬರುವ ಒಳಹರಿವಿನಲ್ಲಿ ಭಾರೀ ಏರಿಕೆಯಾಗಿದೆ. ಒಂದೇ ದಿನದಲ್ಲಿ ಜಲಾಶಯದಲ್ಲಿ 4 ಟಿಎಂಸಿ ನೀರು ಸಂಗ್ರಹಗೊಂಡಿದ್ದು, ಕೊಪ್ಪಳ ಸೇರಿದಂತೆ ನಾಲ್ಕು ಜಿಲ್ಲೆಗಳ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CWG 2026: 61 ರಿಂದ 39… ಈ ಬಾರಿ ಪದಕ ಕಮ್ಮಿಯಾಗಲು ಇದುವೇ ಅಸಲಿ ಕಾರಣ! – Kannada News | The Real Reason Behind India’s Medal Drop in Commonwealth games 2026

ಗ್ಲ್ಯಾಸ್ಗೋದಲ್ಲಿ ಮುಕ್ತಾಯಗೊಂಡ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಕ್ರೀಡಾಕೂಟದ ಅಂತ್ಯಕ್ಕೆ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನೊಂದಿಗೆ ಒಟ್ಟು 39 ಪದಕಗಳನ್ನು ಗೆದ್ದ ಭಾರತೀಯ ಅಥ್ಲೀಟ್‌ಗಳು ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಇದು 2022ರ ಬರ್ಮಿಂಗ್​​​ಹ್ಯಾಮ್​ ಕೂಟದ ಪ್ರದರ್ಶನಕ್ಕೆ ಹೋಲಿಸಿದರೆ ತುಂಬಾ ಕಮ್ಮಿ. ಏಕೆಂದರೆ ಕಳೆದ ಬಾರಿ ಬರೋಬ್ಬರಿ 61 ಪದಕಗಳನ್ನು ಮುಡಿಗೇರಿಸಿಕೊಂಡಿದ್ದ ಭಾರತ, ಈ ಬಾರಿ ಕೇವಲ 39 ಪದಕಗಳಿಗಷ್ಟೇ ತೃಪ್ತಿಪಡಬೇಕಾಗಿ ಬಂದಿದೆ.

ಆದರೆ, ಪದಕಗಳ ಈ ಕುಸಿತಕ್ಕೆ ಕ್ರೀಡಾಪಟುಗಳ ವೈಫಲ್ಯ ಖಂಡಿತಾ ಕಾರಣವಲ್ಲ, ಬದಲಿಗೆ ಕ್ರೀಡಾಕೂಟದ ಹೊಸ ನಿಯಮಾವಳಿಗಳೇ ಕಾರಣ! ಈ ಬಾರಿ ಭಾರತಕ್ಕೆ ಪದಕದ ಗ್ಯಾರಂಟಿ ನೀಡುತ್ತಿದ್ದ ಹಲವು ಪ್ರಮುಖ ಕ್ರೀಡೆಗಳನ್ನು ಕೂಟದಿಂದ ಕೈಬಿಟ್ಟಿರುವುದು ಒಟ್ಟಾರೆ ಪದಕಗಳ ಸಂಖ್ಯೆಯಲ್ಲಿ ಇಷ್ಟೊಂದು ಭಾರಿ ವ್ಯತ್ಯಾಸ ಉಂಟಾಗಲು ಅಸಲಿ ಕಾರಣವಾಗಿದೆ.

‘ಮೆಡಲ್ ಗ್ಯಾರಂಟಿ’ ಕ್ರೀಡೆಗಳಿಗೇ ಕತ್ತರಿ:

ಆತಿಥೇಯ ನಗರವಾದ ಗ್ಲ್ಯಾಸ್ಗೋ ತನ್ನ ಆರ್ಥಿಕ ಹೊರೆಯನ್ನು ತಗ್ಗಿಸಲು ಈ ಬಾರಿ ಕ್ರೀಡಾಕೂಟವನ್ನು ಕೇವಲ 10 ಕ್ರೀಡೆಗಳಿಗೆ ಸೀಮಿತಗೊಳಿಸಿತು. ಈ ನಿರ್ಧಾರದಿಂದಾಗಿ ಭಾರತಕ್ಕೆ ನೂರಕ್ಕೆ ನೂರು ಪದಕ ತಂದುಕೊಡುತ್ತಿದ್ದ 9 ಪ್ರಮುಖ ಕ್ರೀಡೆಗಳನ್ನು ಕೂಟದಿಂದ ಸಂಪೂರ್ಣವಾಗಿ ಹೊರಗಿಡಲಾಯಿತು.

  • ಕುಸ್ತಿಯ ಕಣ್ಮರೆ: ಕಳೆದ ಬಾರಿ ಭಾರತ ಕುಸ್ತಿಯೊಂದರಲ್ಲೇ 12 ಪದಕಗಳನ್ನು ಬಾಚಿತ್ತು. ಈ ಬಾರಿ ಕುಸ್ತಿಯೇ ಇರಲಿಲ್ಲ.
  • ಬ್ಯಾಡ್ಮಿಂಟನ್: ಕಳೆದ ಬಾರಿ ಬ್ಯಾಡ್ಮಿಂಟನ್‌ನಲ್ಲಿ ಭಾರತೀಯರು 6 ಪದಕ ಗೆದ್ದಿದ್ದರು. ಈ ಬಾರಿ ಈ ಕ್ರೀಡೆ ಇರಲಿಲ್ಲ.
  • ಟೇಬಲ್ ಟೆನಿಸ್: 2022 ರಲ್ಲಿ ಟೇಬಲ್ ಟೆನಿಸ್‌ನಲ್ಲಿ 7 ಪದಕಗಳು ಭಾರತದ ಮುಡಿಗೇರಿದ್ದವು. ಈ ಬಾರಿ ಟೇಬಲ್ ಟೆನಿಸ್‌ ಅನ್ನು ಕೂಡ ಕೈಬಿಡಲಾಯಿತು.
  • ಹಾಕಿ ಮತ್ತು ಕ್ರಿಕೆಟ್ ಇಲ್ಲ: ಭಾರತಕ್ಕೆ ಪದಕದ ಭರವಸೆ ಮೂಡಿಸುತ್ತಿದ್ದ ಪುರುಷರ ಹಾಗೂ ಮಹಿಳೆಯರ ಹಾಕಿ ಮತ್ತು ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳೂ ಈ ಬಾರಿ ಇರಲಿಲ್ಲ.

ಅಂದರೆ ಕಳೆದ ಬಾರಿಯ 61 ಪದಕಗಳಲ್ಲಿ ಬರೋಬ್ಬರಿ 30 ಪದಕಗಳು ಬಂದಿದ್ದು ಇದೇ ಕ್ರೀಡೆಗಳಿಂದ. ಆದರೆ ಈ ಬಾರಿ ಕ್ರೀಡಾಕೂಟ ಆರಂಭವಾಗುವ ಮುನ್ನವೇ ಭಾರತ ತನ್ನ ಅರ್ಧದಷ್ಟು ಪದಕದ ಅವಕಾಶಗಳನ್ನು ಕಳೆದುಕೊಂಡಿತ್ತು. ಜೊತೆಗೆ, ಭಾರತದ ಸಾಂಪ್ರದಾಯಿಕ ಕ್ರೀಡೆಗಳಾದ ಶೂಟಿಂಗ್ ಮತ್ತು ಆರ್ಚರಿ ಕೂಡ ಈ ಬಾರಿ ಇರಲಿಲ್ಲ.

ಕಣಕ್ಕಿಳಿದ ಅಥ್ಲೀಟ್‌ಗಳ ಸಂಖ್ಯೆಯೂ ಕಮ್ಮಿ!

ಕ್ರೀಡೆಗಳ ಸಂಖ್ಯೆ ಕಡಿತಗೊಂಡಿದ್ದರಿಂದ ಸಹಜವಾಗಿಯೇ ಭಾರತೀಯ ಕ್ರೀಡಾಪಟುಗಳ ಸಂಖ್ಯೆಯೂ ಇಳಿಮುಖವಾಯಿತು. 2022ರಲ್ಲಿ ಭಾರತದಿಂದ 210 ಅಥ್ಲೀಟ್‌ಗಳು ಭಾಗವಹಿಸಿದ್ದರೆ, ಈ ಬಾರಿ ಕೇವಲ 122 ಅಥ್ಲೀಟ್‌ಗಳಷ್ಟೇ ಗ್ಲ್ಯಾಸ್ಗೋಗೆ ತೆರಳಿದ್ದರು. ಸ್ಪರ್ಧಿಸುವ ಅವಕಾಶಗಳೇ ಕಮ್ಮಿಯಾದಾಗ ಪದಕಗಳ ಸಂಖ್ಯೆ ತಗ್ಗುವುದು ಅನಿವಾರ್ಯವಾಯಿತು.

10 ಕ್ರೀಡೆಗಳಲ್ಲೇ ಮಿಂಚಿಂಗ್:

ಪದಕಗಳ ಒಟ್ಟು ಸಂಖ್ಯೆ ಕಡಿಮೆಯಾಗಿದ್ದರೂ, ಲಭ್ಯವಿದ್ದ 10 ಕ್ರೀಡೆಗಳಲ್ಲಿ ಭಾರತೀಯರು ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.

  • ಬಾಕ್ಸಿಂಗ್‌ನಲ್ಲಿ ಐತಿಹಾಸಿಕ ಪಂಚ್: ಭಾರತದ ಬಾಕ್ಸರ್​​ಗಳು ಈ ಬಾರಿ 7 ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
  • ವೇಟ್‌ಲಿಫ್ಟಿಂಗ್: ಭಾರತೀಯ ವೇಟ್‌ಲಿಫ್ಟರ್​ಗಳು ಈ ಬಾರಿ ಬರೋಬ್ಬರಿ 8 ಪದಕಗಳಿಗೆ ಕೊರೊಳೊಡಡಿದ್ದಾರೆ.
  • ಪ್ಯಾರಾ ಸ್ಪೋರ್ಟ್ಸ್​: ಪ್ಯಾರಾ ಕ್ರೀಡಾಪಟುಗಳು ಕೂಡ 7 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಕಮ್ಮಿಯಾಗಿರಬಹುದು, ಆದರೆ ಕ್ರೀಡಾಪಟುಗಳ ಛಲ ಮತ್ತು ಹೋರಾಟದ ಗುಣ ಮಾತ್ರ ಕಿಂಚಿತ್ತೂ ಕಮ್ಮಿಯಾಗಿರಲಿಲ್ಲ. ಪ್ರತಿಕೂಲ ಪರಿಸ್ಥಿತಿ ಮತ್ತು ಸೀಮಿತ ಅವಕಾಶಗಳ ನಡುವೆಯೂ ಭಾರತ ತನ್ನ 4ನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1

2022ರಲ್ಲಿ ಹಲವು ಪ್ರಮುಖ ಕ್ರೀಡೆಗಳ ಬೆಂಬಲದೊಂದಿಗೆ 4ನೇ ಸ್ಥಾನ ಪಡೆದಿದ್ದ ಭಾರತ, ಈ ಬಾರಿ ಅತ್ಯಂತ ಕಡಿಮೆ ಕ್ರೀಡೆ ಹಾಗೂ ಸೀಮಿತ ಅಥ್ಲೀಟ್‌ಗಳಿದ್ದರೂ ಅದೇ ರ‍್ಯಾಂಕಿಂಗ್ ಉಳಿಸಿಕೊಂಡಿರುವುದು ನಿಜಕ್ಕೂ ಭಾರತೀಯ ಕ್ರೀಡಾಲೋಕದ ಸಾಧನೆಗೆ ಸಾಕ್ಷಿಯಾಗಿದೆ.

Source link

ಮಂಗಳೂರು-ಬೆಂಗಳೂರು ರೈಲು ಪ್ರಯಾಣಿಕರೇ ಗಮನಿಸಿ: ಎಡಕುಮೇರಿ ಗುಡ್ಡಕುಸಿತದಿಂದ ಇಂದೂ ಹಲವು ರೈಲುಗಳ ಸಂಚಾರ ಬಂದ್ – Kannada News | Sakleshpur Yedakumari Landslide: Train Services Halted, Routes Diverted on Mangaluru Bengaluru Route

ಎಡಕುಮೇರಿ ಬಳಿ ರೈಲ್ವೆ ಹಳಿ ಮೇಲೆ ಗುಡ್ಡಕುಸಿತವಾಗಿರುವುದು.Image Credit source: tv9

ಹಾಸನ, ಆಗಸ್ಟ್ 3: ಹಾಸನ ಜಿಲ್ಲೆಯ (Hassan) ಸಕಲೇಶಪುರ ತಾಲೂಕಿನ ಎಡಕುಮೇರಿ–ಶಿರಿಬಾಗಿಲು ಬಳಿ ರೈಲ್ವೆ ಹಳಿ ಮೇಲೆ ಗುಡ್ಡಕುಸಿತವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು–ಬೆಂಗಳೂರು ಮಾರ್ಗದಲ್ಲಿ (Mangalore Bangalore Train) ರೈಲು ಸಂಚಾರಕ್ಕೆ ಮತ್ತೆ ಅಡಚಣೆ ಉಂಟಾಗಿದೆ. ಶನಿವಾರ ರಾತ್ರಿ ಕುಸಿದ ಮಣ್ಣು ತೆರವು ಕಾರ್ಯಾಚರಣೆ ಮಳೆಯ ನಡುವೆಯೂ ಮುಂದುವರಿದಿದ್ದು, ಇಂದು ಕೂಡ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಹಾಗೂ ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಗುಡ್ಡದಿಂದ ಮತ್ತೆ ಮತ್ತೆ ಮಣ್ಣು ಕುಸಿಯುತ್ತಿರುವುದರಿಂದ ತೆರವು ಕಾರ್ಯಾಚರಣೆಗೆ ಮಳೆ ಅಡ್ಡಿಯಾಗುತ್ತಿದೆ. ರೈಲ್ವೆ ಹಳಿ ಮೇಲೆ ಕೆಸರು ತುಂಬಿದ್ದು, ಹಳಿಯ ಪಕ್ಕದಲ್ಲೇ ಮೇಲಿನಿಂದ ನೀರು ಧುಮ್ಮಿಕ್ಕುತ್ತಿದೆ. ಮಣ್ಣು ಮತ್ತಷ್ಟು ಕುಸಿಯದಂತೆ ರೈಲ್ವೆ ಇಲಾಖೆ ಸಿಬ್ಬಂದಿ ಮರಳಿನ ಮೂಟೆಗಳನ್ನು ಜೋಡಿಸಿ ತಡೆಗೋಡೆ ನಿರ್ಮಿಸುತ್ತಿದ್ದಾರೆ.

ಇಂದು ಕೂಡ ಕೆಲವು ರೈಲುಗಳ ಸಂಚಾರ ಬಂದ್

ಗುಡ್ಡಕುಸಿತದ ಹಿನ್ನೆಲೆಯಲ್ಲಿ ಯಶವಂತಪುರ–ಕಾರವಾರ ಎಕ್ಸ್‌ಪ್ರೆಸ್, ಮಂಗಳೂರು–ಯಶವಂತಪುರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ಹಾಗೂ ಕಾರವಾರ–ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಇಂದು ಕೂಡ ಸ್ಥಗಿತಗೊಳಿಸಲಾಗಿದೆ.

ಹಲವು ರೈಲುಗಳ ಮಾರ್ಗ ಬದಲು

ಇನ್ನು ಬೆಂಗಳೂರು–ಮುರ್ಡೇಶ್ವರ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 17377 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಹಾಗೂ 17378 ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್‌ಪ್ರೆಸ್ ರೈಲುಗಳನ್ನು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಮಾಡಲು ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ, ರೈಲು ಸಂಚಾರ ಸ್ಥಗಿತ!

ಮಳೆಯ ನಡುವೆ ಎಡಕುಮೇರಿ ಭಾಗದಲ್ಲಿ ತೆರವು ಮತ್ತು ಸುರಕ್ಷತಾ ಕಾರ್ಯಾಚರಣೆ ಮುಂದುವರಿದಿರುವುದರಿಂದ, ಮಂಗಳೂರು–ಬೆಂಗಳೂರು ಮಾರ್ಗದಲ್ಲಿ ಪ್ರಯಾಣಿಸುವವರು ರೈಲು ಸಂಚಾರದ ಸ್ಥಿತಿಯನ್ನು ಪರಿಶೀಲಿಸಿ ಪ್ರಯಾಣಿಸುವಂತೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version