3 ದಿನದಿಂದ ಒಂದೇ ಸಾಂಬಾರು, ಗಂಡನ ಬೈಗುಳಕ್ಕೆ ದುರಂತ ಅಂತ್ಯಕಂಡ ಬೆಂಗಳೂರಿನ ಮಹಿಳೆ

3 ದಿನದಿಂದ ಒಂದೇ ಸಾಂಬಾರು, ಗಂಡನ ಬೈಗುಳಕ್ಕೆ ದುರಂತ ಅಂತ್ಯಕಂಡ ಬೆಂಗಳೂರಿನ ಮಹಿಳೆ

ಬೆಂಗಳೂರು, (ಮಾರ್ಚ್ 07) : ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ನಡೆದ ಜಗಳವೊಂದು ಅಂತಿಮವಾಗಿ ಗೃಹಿಣಿಯೊಬ್ಬರ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಮೂರು ದಿನದ ಹಳೇ ಸಾಂಬಾರ್ ಬಡಿಸಿದ ವಿಚಾರಕ್ಕೆ ಪತಿ ಕಿರಿಕ್ ತೆಗೆದಿದ್ದರಿಂದ ಮನನೊಂದ ಪತ್ನಿ ವಿಷ ಸೇವಿಸಿ ಪ್ರಾಣಬಿಟ್ಟಿದ್ದಾಳೆ. ಮೃತ ಮಹಿಳೆಯನ್ನು ಕಾವ್ಯ (27) ಎಂದು ಗುರುತಿಸಲಾಗಿದೆ. ಈಕೆ ಕಳೆದ ಐದು ವರ್ಷಗಳ ಹಿಂದೆ ರಂಗಸ್ವಾಮಿ ಎಂಬುವವರನ್ನು ಮದುವೆಯಾಗಿದ್ದು, ಇವರಿಗೆ ನಾಲ್ಕು ವರ್ಷದ ಒಂದು ಮಗುವಿದೆ. ಆದ್ರೆ, ಇದೀಗ ತಾಯಿಯನ್ನು ಕಳೆದುಕೊಂಡ ಮಗು ಅನಾಥವಾಗಿದೆ.

ಪತಿಗೆ ಕಳೆದ ಮೂರು ದಿನಗಳಿಂದ ಒಂದೇ ಸಾಂಬಾರು ಬಡಿಸಿದ್ದಾಳೆ. ಫ್ರಿಡ್ಜ್‌ನಲ್ಲಿಟ್ಟು ತೆಗೆದು ಬಿಸಿ ಮಾಡಿ ಅದೇ ಸಾರನನ್ನು ಮೂರು ದಿನದಿಂದ ಬಡಿಸಿದ್ದಾಳೆ. ಎರಡು ದಿನ ಸಹಿಸಿಕೊಂಡ ಗಂಡ ಮೂರನೇ ದಿನ ಆಕ್ರೋಶಗೊಂಡಿದ್ದು, ಮೂರು ದಿನದ ಹಿಂದಿನ ಸಾರನ್ನು ಬಡಿಸುತ್ತಿದ್ದಿಯಾ ಎಂದು ಪತ್ನಿ ವಿರುದ್ದ ಜಗಳಕ್ಕೆ ನಿಂತಿದ್ದಾನೆ. ಅಲ್ಲದೇ ಪತ್ನಿಗೆ ಹಿಗ್ಗಾಮುಗ್ಗ ಬೈದಿದ್ದಾನೆ. ಪತಿಯ ಆಕ್ರೋಶಭರಿತ ಬೈಗುಳಕ್ಕೆ ನೊಂದ ಪತ್ನಿ ಬದುಕನ್ನೇ ಅಂತ್ಯಗೊಳಿಸಿದ್ದಾಳೆ.

ಇದನ್ನೂ ಓದಿ: 3ನೇ ಮದ್ವೆ ಆಸೆಗೆ 2ನೇ ಗಂಡನಿಗೆ ಪರಲೋಕದ ದಾರಿ: ತನಿಖೆಯಲ್ಲಿ ಬಯಲಾಯ್ತು ಖತರ್ನಾಕ್ ಸ್ಟೋರಿ

ಪತಿಯ ನಿಂದನೆ ಹಾಗೂ ಹಲ್ಲೆಯ ಯತ್ನದಿಂದ ತೀವ್ರವಾಗಿ ಮನನೊಂದ ಕಾವ್ಯ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಕಾವ್ಯ ವಾಂತಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಕುಟುಂಬ ಸದಸ್ಯರು ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಮಾರ್ಗಮಧ್ಯದಲ್ಲೇ ಕಾವ್ಯ ಕೊನೆಯುಸಿರೆಳೆದಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರಂಗಸ್ವಾಮಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ: ಓಂ ಬಿರ್ಲಾ ಬಗ್ಗೆ ಮೋದಿ ಹೇಳಿದ್ದಿಷ್ಟು

ದೆಹಲಿ, ಮಾ.7: ಲೋಕಸಭೆಯ ಸಭಾಪತಿ ಓಂ ಬಿರ್ಲಾ ಅವರ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ (Opposition sponsored motion) ಕುರಿತು ನಾಳೆ (ಮಾ.8) ಸದನದಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಓಂ ಬಿರ್ಲಾ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಓಂ ಬಿರ್ಲಾ ಅವರು ಎಷ್ಟು ಅದ್ಭುತ ಸಂಸದರೋ ಅಷ್ಟೇ ಸಮರ್ಥ ಸಭಾಪತಿಯೂ ಆಗಿದ್ದಾರೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಅವರು ದೇಶದ ಸಂವಿಧಾನಕ್ಕೆ ಸಂಪೂರ್ಣವಾಗಿ ಸಮರ್ಪಿತರಾಗಿದ್ದಾರೆ ಮತ್ತು ಸಂಸದೀಯ ವ್ಯವಸ್ಥೆಗಳ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಓಂ ಬಿರ್ಲಾ ಅವರು ಯಾವುದೇ ಒಂದು ಪಕ್ಷಕ್ಕೆ ಸೀಮಿತರಾಗಿಲ್ಲ. ಅವರು ಪಕ್ಷ ಮತ್ತು ಪ್ರತಿಪಕ್ಷಗಳಿಗಿಂತಲೂ ಮಿಗಿಲಾದ ಜವಾಬ್ದಾರಿಯನ್ನು ಅತ್ಯಂತ ಪಾರದರ್ಶಕವಾಗಿ ನಿಭಾಯಿಸುತ್ತಿದ್ದಾರೆ. ಎಷ್ಟೇ ಕಠಿಣ ಮಾತುಗಳು ಕೇಳಿಬಂದರೂ ಓಂ ಬಿರ್ಲಾ ಅವರು ಯಾವಾಗಲೂ ಮುಗುಳ್ನಗುತ್ತಲೇ ಇರುತ್ತಾರೆ. ಇಂತಹ ಹಿರಿಯ ಮುಖಂಡನ ವರ್ತನೆಯು ಸದನದ ಘನತೆಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ವಿಡಿಯೋವೊಂದು ಹಂಚಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ

ನಟಿ ರಾಧಿಕಾ ಪಂಡಿತ್ (Radhika Pandit) ಹುಟ್ಟುಹಬ್ಬ ಇಂದು (ಮಾರ್ಚ್ 07). ನಟನೆ ಬಿಟ್ಟು ಹಲವು ವರ್ಷಗಳಾಗಿದ್ದರೂ ಸಹ ಇಂದಿಗೂ ಕಡಿಮೆ ಆಗಿಲ್ಲ ರಾಧಿಕಾ ಪಂಡಿತ್ ಅವರ ಕ್ರೇಜ್. ಇಂದು ಸಹ ರಾಜ್ಯದ ನಾನಾ ಕಡೆಗಳಿಂದ ರಾಧಿಕಾ ಪಂಡಿತ್ ಅವರನ್ನು ಭೇಟಿ ಆಗಲು ಅಭಿಮಾನಿಗಳು ಆಗಮಿಸಿದ್ದರು. ರಾಧಿಕಾ ಪಂಡಿತ್ ಸಹ ತಮಗಾಗಿ ಬಂದ ಅಭಿಮಾನಿಗಳನ್ನು ಭೇಟಿ ಆದರು. ಅವರೊಟ್ಟಿಗೆ ಸೆಲ್ಫಿ ತೆಗೆಸಿಕೊಂಡರು. ಅವರು ಪ್ರೀತಿಯಿಂದ ತಂದಿದ್ದ ಕೇಕ್ ಕತ್ತರಿಸಿ ಖುಷಿ ಪಟ್ಟರು. ಅಭಿಮಾನಿಗಳೊಟ್ಟಿಗೆ ನಗು ಮುಖದೊಂದಿಗೆ ಸೆಲ್ಫಿ ಸಹ ತೆಗೆಸಿಕೊಂಡರು. ಅಭಿಮಾನಿಗಳಿಗೆ ಆಟೊಗ್ರಾಫ್ ಸಹ ಹಾಕಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಪ್ಪಿದ ದೊಡ್ಡ ಅನಾಹುತ: ಡಿಸಿಎಂ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

ಲಖನೌ, ಮಾ.7: ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಇಂದು (ಮಾ.7) ಭಾರೀ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಲಖನೌನಿಂದ ಕೌಶಂಬಿಗೆ ಹೊರಟಿದ್ದ ಅವರ ಹೆಲಿಕಾಪ್ಟರ್‌ನಲ್ಲಿ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಮೌಸಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಅವರು ಲಖನೌನ ಲಾ ಮಾರ್ಟಿನಿಯರ್ ಕಾಲೇಜು ಮೈದಾನದಿಂದ ಕೌಶಂಬಿಯಲ್ಲಿ ನಡೆಯಬೇಕಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆಲಿಕಾಪ್ಟರ್ ಮೂಲಕ ಹೊರಟಿದ್ದರು. ಹೆಲಿಕಾಪ್ಟರ್ ಗಾಳಿಯಲ್ಲಿರುವಾಗಲೇ ಇದ್ದಕ್ಕಿದ್ದಂತೆ ಕೆಬಿನ್‌ನೊಳಗೆ ದಟ್ಟವಾದ ಹೊಗೆ ಆವರಿಸಿತು. ಅಷ್ಟೇ ಅಲ್ಲದೆ, ಕಾಕ್‌ಪಿಟ್‌ನಲ್ಲಿದ್ದ ಡಿಜಿಟಲ್ ಡಿಸ್‌ಪ್ಲೇ ಸಿಸ್ಟಮ್ ಕೂಡ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೈಲಟ್ ತಕ್ಷಣವೇ ಲಖನೌ ಏರ್ ಟ್ರಾಫಿಕ್ ಕಂಟ್ರೋಲ್ (ATC) ಅನ್ನು ಸಂಪರ್ಕಿಸಿ ತುರ್ತು ಪರಿಸ್ಥಿತಿಯ ಮಾಹಿತಿ ನೀಡಿದರು. ಎಟಿಸಿಯಿಂದ ತಕ್ಷಣದ ಅನುಮತಿ ಪಡೆದ ಪೈಲಟ್, ಹೆಲಿಕಾಪ್ಟರ್ ಅನ್ನು ಲಖನೌನ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಅಮೌಸಿ) ತಿರುಗಿಸಿ ಸುರಕ್ಷಿತವಾಗಿ ಇಳಿಸಿದರು.ಹೆಲಿಕಾಪ್ಟರ್‌ನಲ್ಲಿ ಡಿಸಿಎಂ ಜೊತೆಗೆ ಅವರ ಆಪ್ತ ಸಹಾಯಕ ವಿವೇಕ್ ಮತ್ತು ಇಬ್ಬರು ಪೈಲಟ್‌ಗಳಿದ್ದರು. ಲ್ಯಾಂಡಿಂಗ್ ಆದ ತಕ್ಷಣ ಎಲ್ಲರನ್ನೂ ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಯಿತು. ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ‘ಭಾರತೀಯರ ಹೃದಯ ಒಡೆದು ಟ್ರೋಫಿ ಗೆಲ್ಲುತ್ತೇವೆ’; ಫೈನಲ್​ಗೂ ಮುನ್ನ ಕಿವೀಸ್ ನಾಯಕನ ಹೇಳಿಕೆ

2026 ರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಾರ್ಚ್ 8 ರಂದು ನಡೆಯುವ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಪರ್ತಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್, ಟ್ರೋಫಿಗಾಗಿ ಕೆಲವು ಹೃದಯಗಳನ್ನು ಒಡೆಯುವುದಕ್ಕೆ ನನಗೆ ಯಾವುದೇ ಅಭ್ಯಂತರವಿಲ್ಲ ಎಂದಿದ್ದಾರೆ. ಅಂದರೆ ಟಿ20 ವಿಶ್ವಕಪ್ ಗೆದ್ದು ಟೀಂ ಇಂಡಿಯಾ ಅಭಿಮಾನಿಗಳ ಹೃದಯ ಒಡೆಯುವುದಕ್ಕೆ ನಾವು ಸಿದ್ಧ ಎಂಬುದು ಕಿವೀಸ್ ನಾಯಕನ ಹೇಳಿಕೆಯಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್, 2023 ರ ಏಕದಿನ ವಿಶ್ವಕಪ್​ ಫೈನಲ್​ಗೂ ಮುನ್ನ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ನೀಡಿದ್ದ ಹೇಳಿಕೆಯನ್ನೇ ಪುನಾರವರ್ತಿಸಿದ್ದಾರೆ. ವಾಸ್ತವವಾಗಿ 2023 ರ ಏಕದಿನ ವಿಶ್ವಕಪ್ ಫೈನಲ್​ಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕಮ್ಮಿನ್ಸ್, ‘ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರನ್ನು ಮೌನಗೊಳಿಸುವುದಾಗಿ’ ಹೇಳಿದ್ದರು. ಕಮ್ಮಿನ್ಸ್ ಹೇಳಿದಂತೆಯೇ ಫೈನಲ್ ಪಂದ್ಯದಲ್ಲಿ ಸೋತಿದ್ದ ಟೀಂ ಇಂಡಿಯಾ ಅಭಿಮಾನಿಗಳನ್ನು ಮೌನಕ್ಕೆ ತಳ್ಳಿತ್ತು.

ಇದೀಗ ಮಿಚೆಲ್ ಸ್ಯಾಂಟ್ನರ್ ಕೂಡ ಅದೇ ರೀತಿಯ ಹೇಳಿಕೆಯನ್ನು ನೀಡಿದ್ದು, ‘ಈ ಫೈನಲ್ ಗೆಲ್ಲಲು ತಮ್ಮ ತಂಡವನ್ನು ಪ್ರಬಲ ಸ್ಪರ್ಧಿ ಎಂದು ಪರಿಗಣಿಸದಿದ್ದರೂ, ಸಣ್ಣ ವಿವರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಪ್ರದರ್ಶನವನ್ನು ಸುಧಾರಿಸಲು ಪ್ರಯತ್ನಿಸುತ್ತೇವೆ. ‘ನಮ್ಮ ಗೆಲುವು ಕೆಲವು ಅಭಿಮಾನಿಗಳ ಹೃದಯವನ್ನು ಒಡೆದರೆ, ನಮ್ಮ ಮೊದಲ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲಲು ನಾವು ಬಯಸುವುದರಿಂದ ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ’ ಎಂದಿದ್ದಾರೆ.

ಫೈನಲ್ ಪಂದ್ಯಕ್ಕೂ ಮುನ್ನ ಮಿಚೆಲ್ ಸ್ಯಾಂಟ್ನರ್ ನೀಡಿರುವ ಈ ಹೇಳಿಕೆ ಭಾರತೀಯ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಏಕೆಂದರೆ 2023 ರ ಏಕದಿನ ವಿಶ್ವಕಪ್ ಫೈನಲ್​ನಲ್ಲೂ ಕಮ್ಮಿನ್ಸ್ ಈ ರೀತಿಯ ಹೇಳಿಕೆಯನ್ನು ನೀಡಿ, ಹೇಳಿದಂತೆಯೇ ಮಾಡಿ ತೋರಿಸಿದ್ದರು. ಹೀಗಾಗಿ ಮಿಚೆಲ್ ಸ್ಯಾಂಟ್ನರ್ ಕೂಡ ಅದೇ ರೀತಿ ಮಾಡುತ್ತಾರೆಯೇ ಎಂಬುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಆದಾಗ್ಯೂ ಟಿ20 ಮಾದರಿಯಲ್ಲಿ ಭಾರತ ತಂಡ ಬಲಿಷ್ಠವಾಗಿರುವುದರಿಂದ ಕಿವೀಸ್ ನಾಯಕನ ಹೇಳಿಕೆಯನ್ನು ಅವರಿಗೆ ತಿರುಗುಬಾಣ ಮಾಡಲಿದೆ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಟ್ಟುಹಬ್ಬಕ್ಕೆ ಯಶ್ ಕೊಟ್ಟ ಉಡುಗೊರೆಯೇನು? ರಾಧಿಕಾ ಪಂಡಿತ್ ಉತ್ತರ ಕೇಳಿ

ಇಂದು (ಮಾರ್ಚ್ 07) ರಾಧಿಕಾ ಪಂಡಿತ್ (Radhika Pandit) ಹುಟ್ಟುಹಬ್ಬ. ಕನ್ನಡದ ಸ್ಟಾರ್ ನಟಿಯಾಗಿ ಮೆರೆದ ರಾಧಿಕಾ ಪಂಡಿತ್, ಯಶ್ ಅವರನ್ನು ಮದುವೆ ಆದ ಬಳಿಕ ನಟನೆಯಿಂದ ಅಂತರ ಕಾಯ್ದುಕೊಂಡರು. ಅದರಲ್ಲೂ ಮಕ್ಕಳಾದ ಬಳಿಕ ನಟನೆಗೆ ಸಂಪೂರ್ಣ ವಿದಾಯವನ್ನೇ ಹೇಳಿಬಿಟ್ಟರು. ನಟನೆ ಬಿಟ್ಟು ಸಾಕಷ್ಟು ವರ್ಷಗಳಾಗಿದ್ದರೂ ಸಹ ರಾಧಿಕಾ ಪಂಡಿತ್ ಅವರ ಕ್ರೇಜ್ ಅಭಿಮಾನಿಗಳಲ್ಲಿ ಇನ್ನೂ ಕಡಿಮೆ ಆಗಿಲ್ಲ. ಇಂದು ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ರಾಜ್ಯದ ಹಲವು ಮೂಲೆಗಳಿಂದ ಅಭಿಮಾನಿಗಳು ಬಂದು ತಮ್ಮ ಮೆಚ್ಚಿನ ನಟಿಗೆ ಶುಭಾಶಯಗಳನ್ನು ಕೋರಿದರು. ಈ ವೇಳೆ ಟಿವಿ9 ಜೊತೆಗೆ ವಿಶೇಷವಾಗಿ ಮಾತನಾಡಿದ ರಾಧಿಕಾ ಪಂಡಿತ್, ಯಶ್ ತಮಗೆ ಕೊಟ್ಟ ಉಡುಗೊರೆ ಏನು? ಎಂಬುದನ್ನು ಸಹ ಹೇಳಿಕೊಂಡರು.

ಟಿವಿ9 ಜೊತೆಗೆ ಮಾತನಾಡಿದ ರಾಧಿಕಾ ಪಂಡಿತ್, ‘ನನಗೆ ವೈಯಕ್ತಿಕವಾಗಿ ಬಹಳ ಖುಷಿಯಾಗುತ್ತದೆ. ಇಷ್ಟು ವರ್ಷಗಳಾದ ಬಳಿಕವೂ ಕರ್ನಾಟಕದ ಹಲವು ಮೂಲೆಗಳಿಂದ ಜನ ಬಂದು ನನಗೆ ಜನ್ಮದಿನದ ಶುಭಾಶಯ ತಿಳಿಸುತ್ತಾರೆ. ಇದು ನಿಜಕ್ಕೂ ಖುಷಿಯ ವಿಷಯ. ಇವತ್ತಿನ ಒಂದು ದಿನ ನಾನು ಅವರೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಇಷ್ಟಪಡುತ್ತೇನೆ. ಜನರಿಂದ ಇಷ್ಟೋಂದು ಪ್ರೀತಿ ಪಡೆಯುತ್ತಿರುವ ನಾನು ಅದೃಷ್ಟವಂತೆ ಎಂದೇ ಭಾವಿಸುತ್ತೇನೆ. ಕೆಲವರು ಜನರಿಗಷ್ಟೆ ಈ ರೀತಿಯ ಜನ ಪ್ರೀತಿ ಸಿಗುತ್ತದೆ. ಅದು ನನಗೆ ಸಿಕ್ಕಿರುವುದಕ್ಕೆ ನಾನು ಧನ್ಯ’ ಎಂದರು ರಾಧಿಕಾ.

ಇದನ್ನೂ ಓದಿ:ರಾಧಿಕಾ ಪಂಡಿತ್ ಮಗಳ ಹುಟ್ಟುಹಬ್ಬಕ್ಕೆ ಕ್ಯೂಟ್ ವಿಡಿಯೋ

‘ನಿಮ್ಮ ನಟನೆ ಇಷ್ಟವಾಗುತ್ತೆ, ನಿಮ್ಮ ಸಿನಿಮಾ ಇಷ್ಟವಾಗುತ್ತೆ ಎಂದು ಅಭಿಮಾನಿಗಳು ಹೇಳಿದಾಗ ಸಹಜವಾಗಿಯೇ ಖುಷಿ ಆಗುತ್ತದೆ. ಆದರೆ ನಿಮ್ಮ ವ್ಯಕ್ತಿತ್ವ ಇಷ್ಟ, ನೀವು ನನಗೆ ಸ್ಪೂರ್ತಿ, ನೀವು ನನಗೆ ಆದರ್ಶ ಎಂದು ಜನರು ಹೇಳಿದಾಗ ನಿಜಕ್ಕೂ ಹೆಮ್ಮೆ ಆಗುತ್ತದೆ. ಪ್ರತಿ ವರ್ಷವೂ ನಾನು ತಪ್ಪದೇ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ. ಆ ಒಂದು ದಿನ ಅವರೊಟ್ಟಿಗೆ ಕಳೆಯುವುದು ನನಗೆ ಇಷ್ಟ. ಇದು ನನಗೆ ಕಷ್ಟ, ಮುಜುಗರ ಎಂದೆಲ್ಲ ಎನಿಸುವುದಿಲ್ಲ, ಅಭಿಮಾನಿಗಳನ್ನು ಭೇಟಿ ಮಾಡುವುದನ್ನು ನಾನು ಎಂಜಾಯ್ ಮಾಡುತ್ತೇನೆ’ ಎಂದಿದ್ದಾರೆ ರಾಧಿಕಾ.

ಯಶ್ ಅವರು ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಕೊಟ್ಟರು? ಎಂಬ ಪ್ರಶ್ನೆಗೆ ಉತ್ತರಿಸಿದ ರಾಧಿಕಾ, ‘ನಾವು ವಸ್ತುಗಳನ್ನು ಉಡುಗೊರೆಯಾಗಿ ಕೊಡುವುದಿಲ್ಲ. ಪರಸ್ಪರರಿಗೆ ಸಮಯ ಕೊಡುವುದೇ ನಮ್ಮ ಪಾಲಿಗೆ ಉಡುಗೊರೆ. ನಾವು ಯಾವುದೇ ರೀತಿಯ ವಸ್ತುಗಳನ್ನು ಪರಸ್ಪರ ಕೊಡು-ಕೊಳ್ಳುವುದು ಮಾಡುವುದಿಲ್ಲ. ಇಬ್ಬರೂ ಜೊತೆಗಿರುವುದೇ ನಮಗೆ ಉಡುಗೊರೆ, ಸಣ್ಣ ಪುಟ್ಟ ವಿಷಯಗಳೇ ನಮಗೆ ಹೆಚ್ಚು ಪರಿಣಾಮಕಾರಿ ಎನಿಸುತ್ತವೆ’ ಎಂದಿದ್ದಾರೆ ನಟಿ ರಾಧಿಕಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಸಂಜು ಸ್ಯಾಮ್ಸನ್​ 26 ರನ್​ ಬಾರಿಸಿದರೆ ಭಾರತಕ್ಕೆ ಗೆಲುವು ಖಚಿತ

Source link

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರ ಪರಾಭವನಾಮ ಸಂವತ್ಸರದ ವೃಷಭ ರಾಶಿಯ ವಾರ್ಷಿಕ ಭವಿಷ್ಯವನ್ನು ಇಲ್ಲಿ ವಿವರಿಸಿದ್ದಾರೆ. ಈ ವರ್ಷದಲ್ಲಿ ಗುರು ಗ್ರಹವು ಎರಡರಿಂದ ಮೂರನೇ ಮನೆಗೆ, ಶನಿ ಹನ್ನೊಂದರಲ್ಲಿ, ರಾಹು ಹತ್ತರಿಂದ ಒಂಬತ್ತಕ್ಕೆ ಮತ್ತು ಕೇತು ನಾಲ್ಕರಿಂದ ಮೂರನೇ ಮನೆಗೆ ಸಂಚರಿಸಲಿದೆ.

ವೃಷಭ ರಾಶಿಯವರಿಗೆ ಈ ವರ್ಷ ಆದಾಯದಲ್ಲಿ ಏರಿಕೆ ಕಂಡುಬರಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹೊಸ ಯೋಜನೆಗಳಿಗೆ ಮನ್ನಣೆ ಸಿಗುತ್ತದೆ ಹಾಗೂ ಗುತ್ತಿಗೆದಾರರು, ಸಂಗೀತಗಾರರು, ಶಿಕ್ಷಕರು, ಎಂಜಿನಿಯರ್‌ಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಸರ್ಕಾರಿ ನೌಕರರಿಗೆ ಉತ್ತಮ ಅವಕಾಶಗಳು ಲಭಿಸಲಿವೆ. ರಾಜಕೀಯದಲ್ಲಿ ಪ್ರಗತಿ, ಅಧಿಕಾರ ಪ್ರಾಪ್ತಿ ಸಹ ಸಾಧ್ಯ. ಮಹಿಳೆಯರಿಗೆ ವೃತ್ತಿ ಕ್ಷೇತ್ರದಲ್ಲಿ ಬಡ್ತಿ, ಆಸ್ತಿ ವಿಷಯದಲ್ಲಿ ಶುಭ ಫಲಗಳು ದೊರೆಯಲಿವೆ. ಆರೋಗ್ಯದ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದಾದರೂ, ದೈವಾನುಗ್ರಹ ಉತ್ತಮವಾಗಿದೆ. ವರ್ಷದ ಉತ್ತರಾರ್ಧವು ಹೆಚ್ಚು ಶುಭಕರವಾಗಿರುತ್ತದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳಿಗೆ ಕೊಡಬೇಕಿದ್ದ ಹಾಸಿಗೆ,ಬೆಡ್‌ಶೀಟ್‌ ಅಧಿಕಾರಿ ಮನೆಯಲ್ಲಿ: ಲೋಕಾಯುಕ್ತ ಶಾಕ್

Source link

2 ವರ್ಷದ ಮಗುವಿಗೆ ಬಂತು ಮಾರಕ ಕಾಯಿಲೆ! ನೆರವಿನ ಭರವಸೆ ನೀಡಿದ ಕೇಂದ್ರ ಸಚಿವ ಹೆಚ್​ಡಿಕೆ

ಮಂಡ್ಯ, ಮಾರ್ಚ್​ 07: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಎರಡು ವರ್ಷದ ಮಗುವಿಗೆ ನೆರವು ನೀಡುವಂತೆ ಪೋಷಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಸಹಾಯದ ಭರವಸೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಶಿವಾರ ಗ್ರಾಮದ ಎರಡು ವರ್ಷದ ಸಾಯಿ ಚಿರಾಗ್ ಎಂಬ ಮಗು ಎಸ್‌ಎಂಎ (Spinal Muscular Atrophy) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ.

ಮಗುವಿನ ಪೋಷಕರಾದ ಚೇತನ್ ಮತ್ತು ಭಾರ್ಗವಿ ದಂಪತಿ ಮಂಡ್ಯದ ವಿಸಿ ಫಾರಂನಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮಗುವಿನ ಚಿಕಿತ್ಸೆಗೆ ಸುಮಾರು 16 ಕೋಟಿ ರೂಪಾಯಿ ಅಗತ್ಯವಿದ್ದು, ವಿದೇಶಗಳಿಂದ ಸುಮಾರು 1.75 ಕೋಟಿ ರೂಪಾಯಿ ನೆರವು ಸಿಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವಂತೆ ಪೋಷಕರು ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ. ಕುಮಾರಸ್ವಾಮಿ, ಬಾಲಕನ ಚಿಕಿತ್ಸೆಗೆ ಸಾಧ್ಯವಾದಷ್ಟು ನೆರವು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಪ್ರಧಾನಮಂತ್ರಿ ಪರಿಹಾರ ನಿಧಿ (PM Fund) ಮೂಲಕ ಸಹಾಯ ದೊರಕುವಂತೆ ಪ್ರಯತ್ನಿಸಲಾಗುತ್ತದೆ. ಜೊತೆಗೆ ವೈಯಕ್ತಿಕವಾಗಿಯೂ ನೆರವು ನೀಡುವುದಾಗಿ ಹೇಳಿದ್ದಾರೆ.

ಎಸ್‌ಎಂಎ ಮಾರಕವೇ?

ಇದೊಂದು ಅಪರೂಪದ ಜಿನೆಟಿಕ್ ಕಾಯಿಲೆಯಾಗಿದ್ದು, ಇದು ಮಕ್ಕಳ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಈ ಕಾಯಿಲೆ ನರಮಂಡಲದ ಮೇಲೆ ಪರಿಣಾಮ ಬೀರಿ ಮಕ್ಕಳಲ್ಲಿ ಕೈ-ಕಾಲುಗಳ ಚಲನೆ ನಿಧಾನವಾಗಿ ಕುಂದುತ್ತ ಹೋಗುವಂತೆ ಮಾಡುತ್ತದೆ. ಚಿಕಿತ್ಸೆ ಸಿಗದಿದ್ದರೆ ಮಗು ನಡೆಯುವುದು, ಕುಳಿತುಕೊಳ್ಳುವುದು ಅಥವಾ ಉಸಿರಾಟಕ್ಕೂ ತೊಂದರೆ ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ ಗ್ರಾಮೀಣ ಮಕ್ಕಳಿಗಾಗಿ ಕೇಂದ್ರದ ಗಿಫ್ಟ್: ಮಂಡ್ಯದಲ್ಲಿ ತಲೆಯೆತ್ತಲಿದೆ ಅತಿ ದೊಡ್ಡ ಸ್ಫೋರ್ಟ್ಸ್​ ಕಾಂಪ್ಲೆಕ್ಸ್​

ಸಾಯಿ ಚಿರಾಗ್‌ ಮಗುವಿಗೆ ಈಗಾಗಲೇ ಕಾಲುಗಳಲ್ಲಿ ಆರಂಭವಾದ ನಿಶಕ್ತಿ ನಿಧಾನವಾಗಿ ದೇಹದ ಮೇಲ್ಭಾಗಕ್ಕೂ ಹರಡುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈಗ ಸೋಂಕು ಸೊಂಟದವರೆಗೂ ತಲುಪಿದ್ದು, ಮುಂದಿನ ಆರು ತಿಂಗಳೊಳಗೆ ಚಿಕಿತ್ಸೆ ನೀಡದಿದ್ದರೆ ದೇಹಪೂರ್ತಿ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಮಗು ವಿಕಲಚೇತನನಾಗುವ ಭೀತಿ ವ್ಯಕ್ತವಾಗಿದ್ದು, ತಕ್ಷಣ ಚಿಕಿತ್ಸೆಗೆ ಸಹಾಯ ಮಾಡಬೇಕೆಂದು ಪೋಷಕರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version