PM Modi Speech: ಸಕ್ಕರೆ ನಾಡಲ್ಲಿ ರಾಗಿ ಮುದ್ದೆಯ ಗುಣಗಾನ, ಕರ್ನಾಟಕದ ದೇಸಿ ಆಹಾರದ ತಾಕತ್ತು ಕೊಂಡಾಡಿದ ನರೇಂದ್ರ ಮೋದಿ – Kannada News | PM Modi Praises Ragi Mudde and Karnataka Culture in Mandya: A Call for Millets

ಮಂಡ್ಯ, ಏಪ್ರಿಲ್ 15: ರಾಗಿ ಮುದ್ದೆ ಕೇವಲ ಆಹಾರವಲ್ಲ ಅದೊಂದು ಶಕ್ತಿ, ಮಂಡ್ಯದಲ್ಲಿ ದೇವೇಗೌಡರು ಅದನ್ನು ಫೇಮಸ್ ಮಾಡಿದ್ದಾರೆ, ಯುವಕರು ರಾಗಿ ಮುದ್ದೆ ಹಾಗೂ ನವಧಾನ್ಯಗಳನ್ನು ಹೆಚ್ಚು ಸೇವಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕರ್ನಾಟಕದ ಸಂಸ್ಕೃತಿ ಮತ್ತು ಮಠದ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕರ್ನಾಟಕಕ್ಕೆ ಬರುವುದೆಂದರೆ ನನಗೆ ಖುಷಿಯ ವಿಷಯ. ಇಲ್ಲಿಗೆ ಬಂದಾಗಲೆಲ್ಲಾ ಹೊಸ ಪ್ರೇರಣೆ ಸಿಗುತ್ತದೆ. ಅದರಲ್ಲೂ ಸಕ್ಕರೆ ನಾಡು ಮಂಡ್ಯಕ್ಕೆ ಬಂದಿರುವುದು ಈ ಭೇಟಿಯನ್ನು ಇನ್ನಷ್ಟು ಮಹತ್ವಪೂರ್ಣವಾಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ತತ್ವಜ್ಞಾನ ಮತ್ತು ತಂತ್ರಜ್ಞಾನದ ಸಮೃದ್ಧಿ
ಕರ್ನಾಟಕದ ಮಣ್ಣಿನ ಗುಣವನ್ನು ಬಣ್ಣಿಸಿದ ಪ್ರಧಾನಿ, ಈ ಮಣ್ಣು ತತ್ವಜ್ಞಾನ ಮತ್ತು ತಂತ್ರಜ್ಞಾನ ಎರಡರಲ್ಲೂ ಸಮೃದ್ಧವಾಗಿದೆ. ಇಲ್ಲಿ ದರ್ಶನದ ಆಳವೂ ಇದೆ, ಟೆಕ್ನಾಲಜಿಯ ಶಕ್ತಿಯೂ ಇದೆ. ಆದಿಚುಂಚನಗಿರಿ ಮಠವು ಕಳೆದ ಎರಡು ಸಾವಿರ ವರ್ಷಗಳಿಂದ ಭಾರತದ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಜೀವಂತವಾಗಿರಿಸಿರುವ ಸಾಕ್ಷಾತ್ ರೂಪ ಎಂದರು.

ಬಾಲಗಂಗಾಧರನಾಥ ಶ್ರೀಗಳು: ಕೇವಲ ಸಂತರಲ್ಲ, ಸಮಾಜದ ಬಂಧು
ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಸ್ಮರಿಸಿದ ಮೋದಿ, ಅವರು ಕೇವಲ ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಸೀಮಿತವಾಗಿರಲಿಲ್ಲ. ಗ್ರಾಮೀಣ ಭಾಗದಿಂದ ಬಂದಿದ್ದರಿಂದ ಅವರಿಗೆ ಹಳ್ಳಿಯ ಯುವಕರ ಆಕಾಂಕ್ಷೆ ಮತ್ತು ಸವಾಲುಗಳ ಅರಿವಿತ್ತು. ಭಕ್ತಿ ಎಂದರೆ ಸಮಾಜದಿಂದ ದೂರ ಹೋಗುವುದಲ್ಲ, ಸಮಾಜದ ಜವಾಬ್ದಾರಿ ತೆಗೆದುಕೊಳ್ಳುವುದು ಎಂದು ಅವರು ತೋರಿಸಿಕೊಟ್ಟರು. ಬಡ ಮಕ್ಕಳಿಗೆ ಎಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ನೀಡುವ ಮೂಲಕ ಅವರು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.

ಮನುಷ್ಯರಷ್ಟೇ ಅಲ್ಲ, ಜೀವಿಗಳ ಮೇಲೂ ಕರುಣೆ
ಸ್ವಾಮೀಜಿಯವರ ಪರಿಸರ ಪ್ರೇಮವನ್ನು ಮೆಚ್ಚಿದ ಪ್ರಧಾನಿ, ಅವರ ಕರುಣೆ ಕೇವಲ ಮನುಷ್ಯರಿಗೆ ಸೀಮಿತವಾಗಿರಲಿಲ್ಲ. ರಾಷ್ಟ್ರಪಕ್ಷಿ ನವಿಲುಗಳ ಸಂರಕ್ಷಣೆಗಾಗಿ ಅವರು ನಡೆಸಿದ ಸಾಮಾಜಿಕ ಆಂದೋಲನವು ಇಂದಿಗೂ ನಮಗೆ ಮಾದರಿ. ಪರಿಸರ ಸಂರಕ್ಷಣೆ ನಮ್ಮ ಸಾಂಸ್ಕೃತಿಕ ಚೇತನದ ಭಾಗ ಎಂಬುದನ್ನು ಅವರು ಸಾಬೀತುಪಡಿಸಿದರು ಎಂದರು.

ಅನ್ನ, ಅಕ್ಷರ, ಆರೋಗ್ಯ ಮತ್ತು ಅಧ್ಯಾತ್ಮ, ಆಶ್ರಯ, ಅರಣ್ಯ ಮತ್ತು ಅನುಕಂಪ. ಆಕಳು (ಗೋರಕ್ಷಣೆ), ಅನುಬಂಧ ಮತ್ತು ಸ್ವಚ್ಛತೆ ಈ ಸೇವೆಯನ್ನು ಮೋದಿ ಶ್ಲಾಘಿಸಿದರು. ಈ ಮಠವು ಸ್ವದೇಶಿ ಮತ್ತು ಆತ್ಮನಿರ್ಭರತೆಯ ಸಂಕೇತವಾಗಿದೆ. ನಮ್ಮ ಸರ್ಕಾರ ಕೂಡ ಆಯುಷ್ಮಾನ್ ಭಾರತ್ ಅಡಿಯಲ್ಲಿ ಉಚಿತ ಚಿಕಿತ್ಸೆ ನೀಡುವ ಮೂಲಕ ಮಠದ ಆಶಯದಂತೆಯೇ ಆರೋಗ್ಯ ಸೇವೆಯನ್ನು ಬಡವರಿಗೆ ತಲುಪಿಸುತ್ತಿದೆ ಎಂದು ಮೋದಿ ಅವರು ಸರ್ಕಾರದ ಯೋಜನೆಗಳನ್ನು ಮಠದ ಸೇವೆಯೊಂದಿಗೆ ಸಮೀಕರಿಸಿದರು.

ಭೈರವೈಕ್ಯ ಮಂದಿರದಲ್ಲಿ ಬಾಲಗಂಗಾಧರನಾಥ ಶ್ರೀಗಳ ಆಶೀರ್ವಾದ ಪಡೆದಿದ್ದು ನನ್ನ ಭಾಗ್ಯ. ಅವರ ಪರಂಪರೆ ನಮ್ಮೆಲ್ಲರಿಗೂ ಕರ್ತವ್ಯದ ಹಾದಿಯಲ್ಲಿ ನಡೆಯಲು ಸ್ಫೂರ್ತಿ ನೀಡಲಿ ಎಂದು ಹಾರೈಸಿದರು.

ಕರ್ನಾಟಕದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆಶಾ ಭೋಸ್ಲೆ ಹಾಡು ಪ್ರಸಾರ ಮಾಡಿದ ಪಾಕ್ ಟಿವಿಗೆ ನೊಟೀಸ್, ಆದರೆ… – Kannada News | Pakistan issue notice to tv channel which telecast Asha Bhosle song

ಕಲೆಗೆ, ಕಲಾವಿದರಿಗೆ ಗಡಿ ಇಲ್ಲ ಎನ್ನಲಾಗುತ್ತದೆ. ಆದರೆ ಸರ್ಕಾರಗಳು ಈ ಗಡಿ ಹೇರುವ ಪ್ರಯತ್ನ ಮಾಡಿದರೂ ಸಹ ಅವು ಕಲೆಯ ಪ್ರಸರಣಕ್ಕೆ ತಡೆ ಒಡ್ಡಿಲ್ಲ. ಇತ್ತೀಚೆಗಷ್ಟೆ ಭಾರತದ ಖ್ಯಾತ ಗಾಯಕಿ ಆಶಾ ಭೊಸ್ಲೆ (Asha Bhosle) ನಿಧನ ಹೊಂದಿದರು. ಭಾರತದ ಹಲವು ವಾಹಿನಿಗಳು, ರೆಡಿಯೋ ಚಾನೆಲ್​​ಗಳು ಆಶಾ ಭೋಸ್ಲೆ ನೆನಪಲ್ಲಿ ಅವರ ಹಲವಾರು ಹಾಡುಗಳನ್ನು ಪ್ರಸಾರ ಮಾಡಿ ಗೌರವ ಸೂಚಿಸಿದವು. ನೆರೆಯ ಪಾಕಿಸ್ತಾನದಲ್ಲಿ ಸಹ ಆಶಾ ಭೊಸ್ಲೆ ಅವರ ಗೌರವಾರ್ಥ ಅವರ ಹಾಡುಗಳನ್ನು ಚಾನೆಲ್ ಒಂದು ಪ್ರಸಾರ ಮಾಡಿತ್ತು. ಆದರೆ ಈಗ ಪಾಕ್ ಸರ್ಕಾರ ಆ ಚಾನೆಲ್​​ಗೆ ನೊಟೀಸ್ ನೀಡಿದೆ.

ಭಾರತದ ಖ್ಯಾತ ಗಾಯಕಿ ಆಶಾ ಭೋಂಸ್ಲೆ ಅವರು ಕಳೆದ ಭಾನುವಾರ ನಿಧನರಾದಾಗ, ಅವರಿಗೆ ಗೌರವ ನಮನ ಸಲ್ಲಿಸಿ ಆಶಾ ಭೋಸ್ಲೆ ಅವರ ಜನಪ್ರಿಯ ಹಾಡುಗಳನ್ನು ಪಾಕಿಸ್ತಾನದ ‘ಜಿಯೋ ನ್ಯೂಸ್’ (Geo News) ಚಾನೆಲ್‌ ಪ್ರಸಾರ ಮಾಡಿತ್ತು, ಆಶಾ ಭೊಸ್ಲೆ ಅವರಿಗೆ ಗೌರವ ಸಹ ಸಲ್ಲಿಸಲಾಗಿತ್ತು. ಇದೀಗ ಪಾಕಿಸ್ತಾನದ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ (PEMRA) ಜಿಯೋ ನ್ಯೂಸ್​​ಗೆ ನೋಟಿಸ್ ನೀಡಿದೆ. ಆಶಾ ಭೋಂಸ್ಲೆ ಅವರ ನಿಧನದ ಸುದ್ದಿಯೊಂದಿಗೆ ‘ಭಾರತೀಯ ಕಂಟೆಂಟ್’ ಪ್ರಸಾರ ಮಾಡಿದ್ದಕ್ಕಾಗಿ ಈ ನೋಟಿಸ್ ನೀಡಲಾಗಿದ್ದು, ವಿವರಣೆ ಕೇಳಲಾಗಿದೆ.

ಜಿಯೋ ನ್ಯೂಸ್‌ನ ಎಂಡಿ ಅಜರ್ ಅಬ್ಬಾಸ್ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ‘ದಿಗ್ಗಜ ಕಲಾವಿದರು ನಿಧನರಾದಾಗ ಅವರ ಸಾಧನೆಯನ್ನು ಸ್ಮರಿಸುವುದು ಸಂಪ್ರದಾಯ. ಆಶಾ ಭೋಸ್ಲೆ ಅವರಂತಹ ಮಹಾನ್ ಗಾಯಕಿ ಪಾಕಿಸ್ತಾನದ ಖ್ಯಾತ ಗಾಯಕಿ ನೂರ್ ಜಹಾನ್ ಅವರನ್ನು ‘ಅಕ್ಕ’ ಎಂದು ಕರೆಯುತ್ತಿದ್ದರು ಮತ್ತು ನುಸ್ರತ್ ಫತೇ ಅಲಿ ಖಾನ್ ಅವರೊಂದಿಗೆ ಕೆಲಸ ಮಾಡಿದ್ದರು. ಯುದ್ಧದ ಸಮಯದಲ್ಲಿ ಕಲೆ ಮತ್ತು ಕಲಾವಿದರು ಬಲಿಯಾಗಬಾರದು’ ಎಂದು ಅವರು ಟ್ವಿಟ್ಟರ್​​ನಲ್ಲಿ ನಲ್ಲಿ ಬರೆದುಕೊಂಡಿದ್ದಾರೆ. ಅಜರ್ ಅಬ್ಬಾಸ್ ಅವರ ಟ್ವೀಟ್​​ಗೆ ಸಾಕಷ್ಟು ಬೆಂಬಲ ಸಹ ವ್ಯಕ್ತವಾಗಿದೆ.

ಇದನ್ನೂ ಓದಿ:ಆಶಾ ಭೋಸ್ಲೆ ಬಗ್ಗೆ ಹಲವರಿಗೆ ತಿಳಿಯದ ವಿಷಯಗಳು ಇಲ್ಲಿವೆ

ಭಾರತೀಯ ಮಾಧ್ಯಮಗಳ ಮೇಲೆ ಪಾಕಿಸ್ತಾನವು 2018 ರಿಂದಲೇ ನಿಷೇಧ ಹೇರಿದೆ. ಆದಾಗ್ಯೂ, ಅಲ್ಲಿ ಭಾರತೀಯ ಚಲನಚಿತ್ರಗಳು ಮತ್ತು ಹಾಡುಗಳು ಟ್ರೆಂಡ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ತೆರೆಕಂಡ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಪಾಕಿಸ್ತಾನದಲ್ಲಿ ದೊಡ್ಡ ಅಲೆ ಎಬ್ಬಿಸಿವೆ. ಜನ ಪೈರಸಿ ಸಿಡಿಗಳನ್ನು ಖರೀದಿಸಿ ಸಿನಿಮಾ ನೋಡಿದ್ದಾರೆ. ಪಾಕ್ ನೆಟ್​​ಫ್ಲಿಕ್ಸ್​​ನಲ್ಲಿಯೂ ಸಹ ‘ಧುರಂಧರ್’ ಸಿನಿಮಾ ಟಾಪ್ ಟ್ರೆಂಡಿಂಗ್​​ನಲ್ಲಿತ್ತು. ಪಾಕಿಸ್ತಾನದ ಸ್ಪಾಟಿಫೈ (ಆನ್​ಲೈನ್ ಹಾಡುಗಳ ಆಪ್) ಇತರೆ ಆನ್​​ಲೈನ್ ವೇದಿಕೆಗಳಲ್ಲಿ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಹಾಡುಗಳೇ ಟ್ರೆಂಡಿಂಗ್​​ನಲ್ಲಿವೆ.

‘ಧುರಂಧರ್: ದಿ ರಿವೆಂಜ್’ ಸಿನಿಮಾದ ‘ಜೈಯೇ ಸಜನ’ ಹಾಡು 6 ಲಕ್ಷಕ್ಕೂ ಹೆಚ್ಚು ಬಾರಿ ಪ್ಲೇ ಆಗುವ ಮೂಲಕ 3ನೇ ಸ್ಥಾನದಲ್ಲಿದೆ. ಭಾರತದ ಕರಣ್ ಔಜ್ಲಾ ಅವರ ‘ಬಾಯ್‌ಫ್ರೆಂಡ್’ ಹಾಡು 6ನೇ ಸ್ಥಾನದಲ್ಲಿದೆ. ಪಾಕಿಸ್ತಾನ ನೆಟ್‌ಫ್ಲಿಕ್ಸ್ ನಲ್ಲಿ ‘ಧುರಂಧರ್’ ಮೊದಲ ಭಾಗವು 3ನೇ ಸ್ಥಾನದಲ್ಲಿದ್ದರೆ, ರಾಣಿ ಮುಖರ್ಜಿ ನಟಿಸಿರುವ ‘ಮರ್ದಾನಿ 3’ ಮತ್ತು ‘ವಧ್ 2’ ಮೊದಲ ಎರಡು ಸ್ಥಾನಗಳಲ್ಲಿವೆ. ಪಾಕಿಸ್ತಾನ ಸರ್ಕಾರವು ಟಿವಿ ಮತ್ತು ಚಿತ್ರಮಂದಿರಗಳಲ್ಲಿ ಭಾರತೀಯ ಕಂಟೆಂಟ್ ಮೇಲೆ ನಿಯಂತ್ರಣ ಹೇರಿದ್ದರೂ, ಡಿಜಿಟಲ್ ಜಗತ್ತಿನಲ್ಲಿ ಜನರು ಭಾರತೀಯ ಸಂಗೀತ ಮತ್ತು ಸಿನಿಮಾಗಳನ್ನು ಅತಿಯಾಗಿ ಇಷ್ಟಪಡುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:24 pm, Wed, 15 April 26

Source link

ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ಪೊಲೀಸ್​ ಎಂಟ್ರಿ: ಹುಡುಗಿಗೆ 18 ತುಂಬಲು ಬಾಕಿ ಇತ್ತು ಕೇವಲ 4 ತಿಂಗಳು – Kannada News | Underage Marriage Foiled in Nelamangala: Child Protection Unit Stops Illegal Wedding

ನೆಲಮಂಗಲ, ಏ.15: ವಯಸ್ಸು ತುಂಬದ ಬಾಲಕಿಗೆ ಮದುವೆ ಮಾಡಲು ಮುಂದಾಗಿದ್ದ ಪೋಷಕರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ರಿಸೆಪ್ಷನ್ ಮುಗಿಸಿ ತಾಳಿ ಕಟ್ಟಬೇಕಿದ್ದ ಸಂಭ್ರಮದ ಕ್ಷಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿ ವಿವಾಹವನ್ನು ತಡೆದಿದ್ದಾರೆ. ನೆಲಮಂಗಲದ ಕಾವಾಡಿ ಮಠದ ಕಲ್ಯಾಣ ಮಂಟಪದಲ್ಲಿ ಕೇಶವ್ ಗೌಡ ಹಾಗೂ ಕೋಮಲ ಎಂಬುವವರ ವಿವಾಹ ನಿಶ್ಚಯವಾಗಿತ್ತು. ನಿನ್ನೆ ರಾತ್ರಿ ಅದ್ಧೂರಿಯಾಗಿ ರಿಸೆಪ್ಷನ್ ಕೂಡ ಮುಗಿದಿತ್ತು. ಆದರೆ ಇಂದು ತಾಳಿ ಕಟ್ಟುವ ಕೆಲವೇ ಸಮಯದ ಮೊದಲು ಅಧಿಕಾರಿಗಳು ದಾಳಿ ನಡೆಸಿದ್ದಾರೆ. 18 ವರ್ಷ ತುಂಬಿದೆ ಎಂದು ಭಾವಿಸಿ ಪೋಷಕರು ಮದುವೆ ನಿಶ್ಚಯಿಸಿದ್ದರು. ಆದರೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅನಿತಾ ಲಕ್ಷ್ಮಿ ನೇತೃತ್ವದ ತಂಡ ದಾಖಲೆಗಳನ್ನು ಪರಿಶೀಲಿಸಿದಾಗ, ಬಾಲಕಿಗೆ 18 ವರ್ಷ ತುಂಬಲು ಇನ್ನೂ 4 ತಿಂಗಳು ಬಾಕಿ ಇರುವುದು ದೃಢಪಟ್ಟಿದೆ. ಮದುವೆಗೆ ಈಗಾಗಲೇ 5 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದರೂ, ಕಾನೂನಿಗೆ ತಲೆಬಾಗಿ ಮದುವೆ ನಿಲ್ಲಿಸಿದ್ದಾರೆ. “4 ತಿಂಗಳ ನಂತರ ಅದೇ ಹುಡುಗಿಯನ್ನು ಮದುವೆಯಾಗುತ್ತೇನೆ” ಎಂದು ವರ ಕೇಶವ್ ಗೌಡ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಬಾಲ್ಯ ವಿವಾಹ ಕಾನೂನುಬಾಹಿರ ಎಂದು ಪೋಷಕರಿಗೆ ತಿಳಿಹೇಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಜಮೀರ್ ಅಚ್ಚರಿಯ ನಡೆ: ನಸೀರ್ ಅಹ್ಮದ್ ನಿವಾಸಕ್ಕೆ ಭೇಟಿ ನೀಡಿದ ಜಮೀರ್, ಕುತೂಹಲ ಮೂಡಿಸಿದ ಚರ್ಚೆ! – Kannada News | Karnataka Politics: Zameer Naseer Meet After CM Siddaramaiah’s Davangere Upset

ಬೆಂಗಳೂರು, ಏ.15: ದಾವಣಗೆರೆ ಉಪಚುನಾವಣೆ ಟಿಕೆಟ್ ಹಂಚಿಕೆ ವಿವಾದದ ಬೆನ್ನಲ್ಲೇ ರಾಜಕೀಯ ಬೆಳವಣಿಗೆಗಳು ವೇಗ ಪಡೆದುಕೊಂಡಿವೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹ್ಮದ್ ಅವರನ್ನು ವಜಾ ಮಾಡಿದ ನಂತರ, ಸಚಿವ ಜಮೀರ್​​​ ಜತೆ ಸಿಎಂ ಸಿದ್ಧರಾಮಯ್ಯ ಅವರು ಚರ್ಚೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗರಂ ಆಗಿದ್ದರು. ಹೈಕಮಾಂಡ್​ ಕೇಳುವ ಎಲ್ಲ ಪ್ರಶ್ನೆಗೂ ನೀನೇ ಉತ್ತರ ನೀಡುಬೇಕು ಎಂದು ಹೇಳಿದ್ದರು ಎಂದು ಹೇಳಲಾಗಿದೆ. ಇದರ ಬೆನ್ನಲೇ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಇಂದು ನಸೀರ್ ಅಹ್ಮದ್ ನಿವಾಸಕ್ಕೆ ಭೇಟಿ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ನಸೀರ್ ಅಹ್ಮದ್ ಅವರ ಸರ್ಕಾರಿ ನಿವಾಸಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ನಸೀರ್ ಅಹ್ಮದ್ ಅವರ ವಜಾ ಬಳಿಕ ನಡೆದ ಮೊದಲ ಭೇಟಿ ಇದಾಗಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಅವರಿಗೆ “ಹೈಕಮಾಂಡ್ ದೂರುಗಳ ಬಗ್ಗೆ ನೀನೇ ಉತ್ತರ ನೀಡಬೇಕು” ಎಂದು ತಾಕೀತು ಮಾಡಿದ್ದರು. ಇದರ ಬೆನ್ನಲ್ಲೇ ಜಮೀರ್ ಅಹ್ಮದ್ ಅವರು ಅಸಮಾಧಾನಗೊಂಡಿರುವ ನಾಯಕರನ್ನು ಭೇಟಿ ಮಾಡುತ್ತಿರುವುದು ಮಹತ್ವ ಪಡೆದಿದೆ.

ಇದನ್ನೂ ಓದಿ: ಜಮೀರ್​​ಗೆ ಸಿಎಂ ಸಿದ್ದರಾಮಯ್ಯ ಬಿಗ್ ಶಾಕ್!: ಹೈಕಮಾಂಡ್ ನಿನ್ನ ಮೇಲೆ ಸಿಟ್ಟಾಗಿದೆ, ನೀನೇ ಸಮಜಾಯಿಷಿ ನೀಡಬೇಕು

ದಾವಣಗೆರೆಯಲ್ಲಿ ಎದ್ದಿರುವ ಬಂಡಾಯದ ಕಿಚ್ಚು ಹೈಕಮಾಂಡ್ ಮಟ್ಟಕ್ಕೆ ತಲುಪಿದ್ದು, ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ಅವರ ಅಸಮಾಧಾನವನ್ನು ಶಮನಗೊಳಿಸಲು ಜಮೀರ್ ಅಹ್ಮದ್ ಸಂಧಾನಕ್ಕೆ ಇಳಿದಿದ್ದಾರೆಯೇ ಅಥವಾ ಮುಂದಿನ ಹೋರಾಟದ ಬಗ್ಗೆ ಚರ್ಚಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ದಾವಣಗೆರೆ ಚುನಾವಣೆಯಲ್ಲಿ ಆಗಿರುವ ಗೊಂದಲದಿಂದ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್​​​​​​​​​​​​​​​​​ ಮುಸ್ಲಿಂ ನಾಯಕರ ತಲೆದಂಡ ಮಾಡುತ್ತಿದೆ ಎಂದು ಹೇಳಲಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:47 am, Wed, 15 April 26

Source link

Sri Guru Bhairavaikya Mandir: ಮೋದಿ ಲೋಕಾರ್ಪಣೆಗೊಳಿಸಿದ ಆದಿಚುಂಚನಗಿರಿಯ ಶ್ರೀ ಗುರುಭಾವೈಕ್ಯ ಮಂದಿರದ ವಿಶೇಷತೆ ಏನು ಗೊತ್ತಾ? – Kannada News | PM Modi Opens Sri Guru Bhairavaikya Mandira, Adichunchanagiri: Honoring Balgangadharanatha Swamiji

ನಾಗಮಂಗಲ (ಮಂಡ್ಯ): ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು(ಏ.15) ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಭೇಟಿ ನೀಡಿದ್ದು, ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಲೋಕಾರ್ಪಣೆಗೊಳಿಸಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು. ಆದ್ದರಿಂದ ಮೋದಿ ಭೇಟಿ ನೀಡಿದ ಶ್ರೀ ಗುರುಭಾವೈಕ್ಯ ಮಂದಿರದ ವಿಶೇಷತೆ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಶ್ರೀ ಗುರುಭಾವೈಕ್ಯ ಮಂದಿರ:

ಈ ಸುಂದರ ಮಂದಿರವು ಆದಿಚುಂಚನಗಿರಿ ಮಠದ 71ನೇ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಸಮಾಧಿ ಸ್ಥಳವಾಗಿದೆ (ಲಿಂಗೈಕ್ಯರಾದ ಸ್ಥಳ). ಶ್ರೀಗಳು ಜನವರಿ 13, 2013ರಂದು ಲಿಂಗೈಕ್ಯರಾದರು. ಅವರ ದಿವ್ಯ ಸ್ಮರಣೆ ಹಾಗೂ ಭಕ್ತರ ದರ್ಶನಕ್ಕಾಗಿ ಅತ್ಯಂತ ಶ್ರದ್ಧೆಯಿಂದ ಈ ಭವ್ಯ ಮಂದಿರವನ್ನು ನಿರ್ಮಿಸಲಾಗಿದೆ.

ವಾಸ್ತುಶಿಲ್ಪದ ವೈಭವ; ಕಣ್ಮನ ಸೆಳೆಯುವ ಶಿಲ್ಪಕಲೆ:

ಶ್ರೀ ಗುರುಭಾವೈಕ್ಯ ಮಂದಿರವು ಭಾರತೀಯ ವಾಸ್ತುಶಿಲ್ಪದ ಒಂದು ಅತ್ಯುತ್ತಮ ನಿದರ್ಶನವಾಗಿದೆ. ಇದು ಸಂಪೂರ್ಣವಾಗಿ ಕಲ್ಲಿನಿಂದ ಕೆತ್ತಲ್ಪಟ್ಟಿದ್ದು, ಅದ್ಭುತ ಶಿಲ್ಪಕಲೆಯನ್ನು ಒಳಗೊಂಡಿದೆ. ಮಂದಿರದ ಗರ್ಭಗುಡಿಯಲ್ಲಿ ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಅಮೃತಶಿಲೆಯ ಭವ್ಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಇದನ್ನು ನೋಡುವಾಗ ಗುರುಗಳು ನಮ್ಮ ಮುಂದೆಯೇ ಕುಳಿತಿದ್ದಾರೆ ಎಂಬ ಅನುಭವ ಭಕ್ತರಿಗಾಗುತ್ತದೆ. ಮಂದಿರದ ಒಳಗಿರುವ ಪ್ರಶಾಂತತೆಯು ಧ್ಯಾನ ಮತ್ತು ಆಧ್ಯಾತ್ಮಿಕ ಚಿಂತನೆಗೆ ಸೂಕ್ತವಾಗಿದ್ದು, ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಮಾನಸಿಕ ಶಾಂತಿ ದೊರೆಯುತ್ತದೆ.

ಆಧ್ಯಾತ್ಮಿಕ ಶಕ್ತಿ; ಭಕ್ತರ ಪಾಲಿನ ‘ನಡೆದಾಡುವ ದೇವರು’:

ಆದಿಚುಂಚನಗಿರಿ ಮಠದ ಇತಿಹಾಸದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಕಾಲವನ್ನು ‘ಸುವರ್ಣಯುಗ’ ಎಂದು ಕರೆಯಲಾಗುತ್ತದೆ. ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಅವರು ಮಾಡಿದ ಕ್ರಾಂತಿಕಾರಿ ಕಾರ್ಯಗಳಿಂದಾಗಿ ಅವರು ಕೋಟ್ಯಂತರ ಭಕ್ತರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಭಕ್ತರಿಗೆ ಇದು ಕೇವಲ ಒಂದು ಕಟ್ಟಡವಲ್ಲ; ಇದು ಗುರುಗಳ ದಿವ್ಯ ಚೇತನ ಸದಾ ಜಾಗೃತವಾಗಿರುವ ಶಕ್ತಿ ಕೇಂದ್ರವಾಗಿದೆ.

ದರ್ಶನದ ಮಾಹಿತಿ:

ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಸಾರ್ವಜನಿಕರಿಗೆ ದರ್ಶನ ಲಭ್ಯವಿರುತ್ತದೆ. ಶ್ರೀಕ್ಷೇತ್ರಕ್ಕೆ ಬರುವ ಭಕ್ತರು ಕಾಲಭೈರವೇಶ್ವರ ಸ್ವಾಮಿಯ ದರ್ಶನದ ಜೊತೆಗೆ ಈ ಮಂದಿರಕ್ಕೂ ಭೇಟಿ ನೀಡುವುದನ್ನು ಮರೆಯಬೇಡಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:13 pm, Wed, 15 April 26

Source link

PM Modi in Adichunchanagiri: ಮೋದಿಯಿಂದ ಭೈರವೈಕ್ಯ ಮಂದಿರ ಲೋಕಾರ್ಪಣೆ! – Kannada News | PM Modi Inaugurates Sri Guru Bhairavaikya Mandira In Mandya

ಮಂಡ್ಯ, ಏಪ್ರಿಲ್ 15: ಕೊನೆಗೂ ಭಕ್ತರು ಕಾದು ಕುಳಿತಿದ್ದ ಕ್ಷಣ ಬಂದೇ ಬಿಟ್ಟಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿಗಳ ಗದ್ದುಗೆಯ ಸ್ಥಳದಲ್ಲಿ ನಿರ್ಮಿಸಲಾಗಿರುವ ಈ ಭವ್ಯ ದೇಗುಲವನ್ನು ಪ್ರಧಾನಿಗಳು ಉದ್ಘಾಟಿಸಿ, ಸ್ವಾಮೀಜಿಗಳ ಮೂರ್ತಿಗೆ ಪೂಜೆ ಸಲ್ಲಿಸಿದ್ದಾರೆ.

ದ್ರಾವಿಡ, ಚಾಲುಕ್ಯ, ಹೊಯ್ಸಳ ಮತ್ತು ಗಂಗರ ಶೈಲಿಯ ವಿನ್ಯಾಸಗಳನ್ನು ಒಳಗೊಂಡಿರುವ ಈ ಮಂದಿರವು ಒಡಿಶಾದ ಸೂರ್ಯ ದೇವಾಲಯದ ನಿರ್ಮಾಣದಿಂದ ಪ್ರೇರಣೆ ಪಡೆದಿದೆ. ಸುಮಾರು ಹತ್ತು ವರ್ಷಗಳ ನಿರಂತರ ಪರಿಶ್ರಮದಿಂದ 80 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮಂದಿರವು ವಾಸ್ತುಶಿಲ್ಪಿ ಶಂಕರ್ ಸ್ಥಪತಿ ಅವರ ಮೇಲ್ವಿಚಾರಣೆಯಲ್ಲಿ ಮೂಡಿಬಂದಿದೆ. ಉದ್ಘಾಟನೆಯ ವೇಳೆ ಪ್ರಧಾನಿ ಮೋದಿ ಜೊತೆಗೆ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಕುಮಾರಸ್ವಾಮಿ ಮತ್ತು ಶೋಭಾ ಕರಂದ್ಲಾಜೆ ಅವರು ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಬೆಂಗಳೂರು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಹೊಸ ಟೆನ್ಷನ್! ಜಿಬಿಎ ಯಡವಟ್ಟಿನ ನಿರ್ಧಾರಕ್ಕೆ ಪ್ರಾಪರ್ಟಿ ಟ್ಯಾಕ್ಸ್ ಕಟ್ಟೋಕೆ ಆಗದೆ ನಿವಾಸಿಗಳು ಪರದಾಟ – Kannada News | Bengaluru Property Tax: New Waste Data Rule Blocks Apartment Tax Payments Online

ಬೆಂಗಳೂರು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಹೊಸ ಟೆನ್ಷನ್!

ಬೆಂಗಳೂರು, ಏಪ್ರಿಲ್ 15: ನಗರದಲ್ಲಿನ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಪ್ರಾಪರ್ಟಿ ಟ್ಯಾಕ್ಸ್ ಪಾವತಿಯಲ್ಲಿ ಹೊಸ ಸಮಸ್ಯೆ ಎದುರಾಗಿದೆ. ಜಿಬಿಎ (GBA) ತೆಗೆದುಕೊಂಡಿರುವ ಇತ್ತೀಚಿನ ನಿರ್ಧಾರದಿಂದಾಗಿ ನಿವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಆನ್‌ಲೈನ್ ಮೂಲಕ ಪ್ರಾಪರ್ಟಿ ಟ್ಯಾಕ್ಸ್ ಕಟ್ಟಲು ಇದೀಗ ಕಸದ ವಿಲೇವಾರಿ ಕುರಿತು ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕಾಗಿದೆ.

ಜಿಬಿಎ ಹೊಸ ನಿಯಮಕ್ಕೆ ನಿವಾಸಿಗಳು ಕಂಗಾಲು

ಮನೆಯಲ್ಲಿ ಉತ್ಪತ್ತಿಯಾಗುವ ಒಣ ಕಸ ಮತ್ತು ಹಸಿ ಕಸದ ಪ್ರಮಾಣವನ್ನು ಪ್ರತ್ಯೇಕವಾಗಿ ದಾಖಲಿಸದಿದ್ದರೆ ಆನ್‌ಲೈನ್ ಮೂಲಕ ಪ್ರಾಪರ್ಟಿ ಟ್ಯಾಕ್ಸ್ ಕಟ್ಟಲು ಸಾಧ್ಯವಿಲ್ಲ. ಈ ನಿಯಮದಿಂದಾಗಿ ಅನೇಕರು ಟ್ಯಾಕ್ಸ್ ಕಟ್ಟಲು ಪರದಾಡುತ್ತಿದ್ದಾರೆ. ವಿಶೇಷವಾಗಿ ಅಪಾರ್ಟ್ಮೆಂಟ್‌ಗಳಲ್ಲಿ ದಿನವೂ 100 ಕಿಲೋಗ್ರಾಂಕ್ಕೂ ಹೆಚ್ಚು ಕಸ ಸಂಗ್ರಹವಾಗುತ್ತಿದ್ದು, ಈ ಮಟ್ಟವನ್ನು ಮೀರಿ ಹೋದರೆ ಜಿಬಿಎ ವತಿಯಿಂದ ಕಸದ ನಿರ್ವಹಣೆ ಮಾಡಲಾಗುವುದಿಲ್ಲ ಎಂಬ ಅಂಶ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

ಹಿಂದೆ ಈ ರೀತಿಯ ಆಯ್ಕೆಯೇ ಇರಲಿಲ್ಲ

ಹೀಗಾಗಿ ಹಲವಾರು ಅಪಾರ್ಟ್ಮೆಂಟ್‌ಗಳು ಖಾಸಗಿ ಸಂಸ್ಥೆಗಳ ಮೂಲಕವೇ ಕಸದ ವಿಲೇವಾರಿ ಮಾಡಿಸುತ್ತಿವೆ. ಆದರೆ ಈಗ ಪ್ರತಿ ಫ್ಲ್ಯಾಟ್‌ನ ನಿವಾಸಿಯೂ ತನ್ನದೇ ಆದ ಕಸದ ಲೆಕ್ಕವನ್ನು ಆನ್‌ಲೈನ್‌ನಲ್ಲಿ ನೀಡಬೇಕು ಎಂಬ ನಿಯಮ ಜಾರಿಗೆ ಬಂದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಅಂದಾಜಿನಲ್ಲಿ ಒಂದೊಂದು ಕೆಜಿ ಅಂತ ಲೆಕ್ಕ ಹಾಕಿ, ನಾಲ್ಕು ಕೆಜಿ ಅಂತ ದಾಖಲಿಸಿದ್ರೂ ಹಣ ಪಾವತಿ ಆಗ್ತಿಲ್ಲ100KGಗಿಂತ ಮೇಲೆ ದಾಖಲು ಮಾಡಬೇಕು ಅಂತ ತೋರಿಸುತ್ತಿದೆ ಎಂದು ನಿವಾಸಿಗಳು ದೂರುತ್ತಿದ್ದಾರೆ. ಹಿಂದೆ ಈ ರೀತಿಯ ಆಯ್ಕೆಯೇ ಇರಲಿಲ್ಲ ಎಂದು ನಿವಾಸಿಗಳು ಹೇಳುತ್ತಿದ್ದಾರೆ. ಈ ಕುರಿತು ಬೆಂಗಳೂರು ಅಪಾರ್ಟ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ಮಲ್ಯ ತಕ್ಷಣ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.

ವರದಿ: ಅರುಣ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಮಲಲ್ಲಾನ ದರ್ಶನ ಪಡೆದ ‘ಕೈ’ ಪಡೆ: ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕ ಕಾಂಗ್ರೆಸ್ ಶಾಸಕರ ಭೇಟಿ! – Kannada News | 15 Congress MLAs from Karnataka Visit Ayodhya Ram Mandir

ಮಂಡ್ಯ, ಏ.15: ರಾಜ್ಯದ 15 ಕಾಂಗ್ರೆಸ್ ಶಾಸಕರು ಅಯೋಧ್ಯೆಗೆ ಭೇಟಿ ನೀಡಿ ರಾಮನ ದರ್ಶನ ಪಡೆದು ಸಂತೋಷ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಸುತ್ತಿದ್ದ ಶಾಸಕರು, ನಂತರ ಅಯೋಧ್ಯೆಗೆ ತೆರಳಿ ರಾಮನ ಆಶೀರ್ವಾದ ಪಡೆದಿದ್ದಾರೆ. ಈ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕರು, ರಾಮನ ದರ್ಶನ ಪಡೆಯಬೇಕೆಂಬುದು ತಮ್ಮ ಬಯಕೆಯಾಗಿತ್ತು ಎಂದು ತಿಳಿಸಿದ್ದಾರೆ. ಅಯೋಧ್ಯೆಯಲ್ಲಿರುವ ರಾಮವಿಗ್ರಹವನ್ನು ಮೈಸೂರಿನ ಅರುಣ್ ಯೋಗಿರಾಜ್ ಅವರು ಕೆತ್ತಿರುವುದು ಕರ್ನಾಟಕಕ್ಕೆ ಅತ್ಯಂತ ಸಂತೋಷ ತಂದಿದೆ ಎಂದು ಶಾಸಕರು ಹೇಳಿದ್ದಾರೆ. ಕರ್ನಾಟಕ ಹನುಮಂತನ ಜಾಗ ಎಂಬುದು ಹಾಗೂ ಅಯೋಧ್ಯೆಗೆ ರಾಜ್ಯದ ನಂಟಿದೆ ಎಂದು ಭಾವಿಸಲಾಗಿದೆ. ರಾಮನ ದರ್ಶನ ಲಭಿಸಿರುವುದು ತಮಗೆ ಬಹಳ ಸಂತೋಷವಾಗಿದೆ ಎಂದು ಭೇಟಿ ನೀಡಿದ ಶಾಸಕರು ತಿಳಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದ ಅಭಿವೃದ್ಧಿಗೆ ಸಿಎಂ 18 ಸೂತ್ರ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸಲ್ಲಿಸಿದ ‘ಬೇಡಿಕೆಗಳ ಪಟ್ಟಿಯಲ್ಲಿ’ ಏನೇನಿದೆ? – Kannada News | PM Modi in Bengaluru: CM Siddaramaiah Submits 18 Point Memorandum for Karnataka’s Growth

ಬೆಂಗಳೂರು, ಏ.15: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಡ್ಯದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನ ಹೆಚ್‌ಎಎಲ್ (HAL) ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದರು, ಈ ವೇಳೆ ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಅಭಿವೃದ್ಧಿ ಯೋಜನೆಗಳ ಕುರಿತಾದ 18 ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಯಾವೆಲ್ಲ ಮನವಿಗಳನ್ನು ಮಾಡಿದ್ದಾರೆ ಎಂಬುದನ್ನು ಇಲ್ಲಿ ಹೇಳಲಾಗಿದೆ ನೋಡಿ.

ಪ್ರಮುಖ 18 ಬೇಡಿಕೆಗಳು:

  • ಕೋಲಾರ ರೈಲ್ವೆ ಕೋಚ್ ಫ್ಯಾಕ್ಟರಿ: 1,123 ಎಕರೆ ಭೂಮಿ ನೀಡಿದ್ದರೂ ಅನುಷ್ಠಾನಗೊಳ್ಳದ ಈ ಯೋಜನೆಯ ಪುನರುಜ್ಜೀವನಕ್ಕೆ ಮನವಿ.
  • ಹೈ-ಸ್ಪೀಡ್ ರೈಲು ವಿಸ್ತರಣೆ: ಬೆಂಗಳೂರು-ಮೈಸೂರು ವಿಭಾಗವನ್ನು ಪ್ರಸ್ತಾವಿತ ಹೈ-ಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಸೇರಿಸಲು ಕೋರಿಕೆ.
  • ಸಬರ್ಬನ್ ರೈಲು ಮತ್ತು ಮುಂಬೈ ಕಾರಿಡಾರ್: ಬೆಂಗಳೂರು ಉಪನಗರ ರೈಲು ಯೋಜನೆಗೆ ಹಣ ಬಿಡುಗಡೆ ಹಾಗೂ ಕಿತ್ತೂರು-ಕಲ್ಯಾಣ ಕರ್ನಾಟಕ ಸಂಪರ್ಕಿಸುವ ಬೆಂಗಳೂರು-ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್ ಆರಂಭಿಸಲು ವಿನಂತಿ.
  • ಜಲ ಜೀವನ್ ಮಿಷನ್ (JJM): ಕೇಂದ್ರದಿಂದ ಬರಬೇಕಾದ ₹17,554 ಕೋಟಿ ಬಾಕಿ ಹಣ ಬಿಡುಗಡೆಗೆ ಒತ್ತಾಯ.
  • 15ನೇ ಹಣಕಾಸು ಆಯೋಗದ ಅನುದಾನ: ಗ್ರಾಮ ಪಂಚಾಯತ್‌ಗಳಿಗೆ ಬರಬೇಕಾದ ₹2,860 ಕೋಟಿ ಅನುದಾನ ಬಿಡುಗಡೆಗೆ ಮನವಿ.
  • ರಾಷ್ಟ್ರೀಯ ಹೆದ್ದಾರಿ ಯೋಜನೆಗಳು: ಕಳೆದ 12 ವರ್ಷಗಳಿಂದ ಬಾಕಿ ಇರುವ ಹೊಸ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಮಂಜೂರಾತಿಗೆ ಕೋರಿಕೆ.
  • ಕಂದಾಯ ಕೊರತೆ ಅನುದಾನ: 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ₹5,495 ಕೋಟಿ ಬಿಡುಗಡೆಗೆ ವಿನಂತಿ.
  • ಬೆಂಗಳೂರಿಗೆ ವಿಶೇಷ ಪ್ಯಾಕೇಜ್: ನಗರದ ಮೂಲಸೌಕರ್ಯ ಅಭಿವೃದ್ಧಿಗಾಗಿ ₹26,000 ಕೋಟಿ ವಿಶೇಷ ಅನುದಾನಕ್ಕೆ ಬೇಡಿಕೆ.
  • ಮೇಕೆದಾಟು ಯೋಜನೆ: ಕುಡಿಯುವ ನೀರಿನ ಉದ್ದೇಶದ ಈ ಯೋಜನೆಗೆ ಶೀಘ್ರವಾಗಿ ಕೇಂದ್ರದ ಅನುಮೋದನೆಗೆ ಒತ್ತಾಯ.
  • ಭದ್ರಾ ಮೇಲ್ದಂಡೆ ಯೋಜನೆ: ಈ ಯೋಜನೆಗೆ ‘ರಾಷ್ಟ್ರೀಯ ಮಾನ್ಯತೆ’ ನೀಡಿ, ಘೋಷಿತ ₹5,300 ಕೋಟಿ ಸಹಾಯಧನ ಬಿಡುಗಡೆಗೆ ಮನವಿ.
  • ಕೃಷ್ಣಾ ಮೇಲ್ದಂಡೆ ಯೋಜನೆ (UKP-III): ಕೃಷ್ಣಾ ನ್ಯಾಯಾಧೀಕರಣ-2ರ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಮತ್ತು ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡಲು ಮನವಿ.
  • ಮಹದಾಯಿ (ಕಳಸಾ ನಾಲಾ): ಕುಡಿಯುವ ನೀರಿನ ಯೋಜನೆಗೆ ವನ್ಯಜೀವಿ ವಿಭಾಗದಿಂದ ಶೀಘ್ರ ಅನುಮತಿ ಕೊಡಿಸಲು ವಿನಂತಿ.
  • ನದಿಗಳ ಜೋಡಣೆ: ಗೋದಾವರಿ-ಕಾವೇರಿ ಮತ್ತು ಬೆಡ್ತಿ-ವರದಾ ಯೋಜನೆಗಳಲ್ಲಿ ಕರ್ನಾಟಕಕ್ಕೆ 40-45 TMC ನೀರು ಹಂಚಿಕೆಗೆ ಒತ್ತಾಯ.
  • ಮೀಸಲಾತಿ ರಕ್ಷಣೆ: ರಾಜ್ಯದ 56% ಮೀಸಲಾತಿ ನೀತಿಯನ್ನು ಸಂವಿಧಾನದ 9ನೇ ವೇಳಾಪಟ್ಟಿಗೆ ಸೇರಿಸಲು ಮನವಿ.
  • ST ಪಟ್ಟಿಗೆ ಸೇರ್ಪಡೆ: ರಾಜ್ಯ ಶಿಫಾರಸು ಮಾಡಿರುವ ಕೆಲವು ಹಿಂದುಳಿದ ಜಾತಿಗಳನ್ನು ಕೇಂದ್ರದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಕೋರಿಕೆ.
  • ಕಲ್ಯಾಣ ಕರ್ನಾಟಕ ಅಭಿವೃದ್ಧಿ: ಆರ್ಟಿಕಲ್ 371(J) ಅಡಿಯಲ್ಲಿ ವಾರ್ಷಿಕ ₹5,000 ಕೋಟಿ ಅನುದಾನ ಮತ್ತು ಪ್ರತಿ ಜಿಲ್ಲೆಯಲ್ಲೂ ಸಾರ್ವಜನಿಕ ವಲಯದ ಉದ್ಯಮ (PSU) ಸ್ಥಾಪನೆಗೆ ಮನವಿ.
  • ಶರಾವತಿ ಪಂಪ್ಡ್ ಸ್ಟೋರೇಜ್: 2,000 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಶೀಘ್ರ ಅನುಮತಿಗೆ ಕೋರಿಕೆ.
  • ರಾಯಚೂರಿನಲ್ಲಿ ಏಮ್ಸ್ (AIIMS): ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಸುಧಾರಣೆಗಾಗಿ ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸಲು ಮಂಜೂರಾತಿಗೆ ಮನವಿ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆ.ಆರ್.ಮಾರುಕಟ್ಟೆ ಫ್ಲೈಓವರ್ ಕೆಳಗೆ ಅಗ್ನಿ ಅವಘಡ! – Kannada News | Massive Fire Breaks Out At KR Market

ಬೆಂಗಳೂರು, ಏಪ್ರಿಲ್ 15: ಬೆಂಗಳೂರಿನ ಹೃದಯಭಾಗದಲ್ಲಿರುವ ಕೆ.ಆರ್. ಮಾರ್ಕೆಟ್ ಬಳಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಮಾರ್ಕೆಟ್ ಬಳಿಯ ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ಜ್ವಾಲೆಗಳು ಕಸದ ರಾಶಿಯನ್ನು ವ್ಯಾಪಿಸಿ, ಅದನ್ನು ಸಂಪೂರ್ಣವಾಗಿ ಸುಟ್ಟು ಬೂದಿ ಮಾಡಿದೆ. ಅಗ್ನಿ ಅವಘಡದಿಂದಾಗಿ ಮಾರ್ಕೆಟ್ ಸುತ್ತಮುತ್ತ ದಟ್ಟ ಹೊಗೆ ಆವರಿಸಿಕೊಂಡಿದೆ. ಇದು ಸ್ಥಳದಲ್ಲಿ ಉಸಿರಾಟದ ಸಮಸ್ಯೆಯನ್ನುಂಟುಮಾಡುತ್ತಿದೆ ಮತ್ತು ಗೋಚರತೆಯನ್ನು ಕಡಿಮೆ ಮಾಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ, ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

 

Source link

Exit mobile version