ರಣರಂಗದಿಂದ ಓಡಿ ಹೋಗುವ ಹೇಡಿ ನಾನಲ್ಲ ಎಂದ ಸಿದ್ದರಾಮಯ್ಯ: ಏನಿದು ಸಿಎಂ ಸರಣಿ ಪೋಸ್ಟ್​ಗಳ ಮರ್ಮ? – Kannada News | I will not run away from the battle, says Siddaramaiah; what is the secret behind the CM series of posts

ಬೆಂಗಳೂರು, ಫೆಬ್ರವರಿ 21: ಸಿಎಂ ಸಿದ್ದರಾಮಯ್ಯ (Siddaramaiah) ನಿನ್ನೆ ಮಾಡಿದ ಸರಣಿ ಟ್ವೀಟ್​ಗಳು ಸದ್ಯ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷಗಳ ನಾಯಕರಿಗೆ ಸಿದ್ದರಾಮಯ್ಯ ಮಾಡಿರುವ ಪೋಸ್ಟ್​ಗಳೇ ಅಸ್ತ್ರವಾಗಿವೆ. ಇನ್ನು ಡಿಕೆ ಶಿವಕುಮಾರ್​ ಸಿಎಂ ಆಗ್ತಾರೆ ಅಂತಾ ಅವರ ಆಪ್ತ ಶಾಸಕರು ನೀಡುತ್ತಿರುವ ಡೇಟ್​ಗಳು ಕಾಂಗ್ರೆಸ್​ ಪಕ್ಷದಲ್ಲಿ ಪಟ್ಟದ ಕಾಳಗವನ್ನ ತೀವ್ರಗೊಳಿಸಿದೆ.

ರಣರಂಗದಿಂದ ಓಡಿ ಹೋಗುವ ಹೇಡಿ ನಾನಲ್ಲ

ಸಾಮಾಜಿಕ ನ್ಯಾಯಕ್ಕಾಗಿ ನನ್ನ ಉಸಿರ ಇರೋವರೆಗೆ ಹೋರಾಡುತ್ತೇನೆ. ನನ್ನ ನಾಲ್ಕು ದಶಕಗಳ ರಾಜಕೀಯ ಜೀವನ ಎಂದಿಗೂ ಹೂವಿನ ಹಾಸಿಗೆ ಆಗಿರಲಿಲ್ಲ, ಅದು ಕಲ್ಲು-ಮುಳ್ಳುಗಳ ಹಾದಿಯಾಗಿತ್ತು. ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಾಗಲು ಕಾರಣ. ನನ್ನ ಮೇಲೆ ವಿರೋಧಿಗಳು ನಡೆಸುತ್ತಿರುವ ಬಹುತೇಕ ದಾಳಿಗಳು, ಮಾಡುತ್ತಿರುವ ಟೀಕೆ-ಆರೋಪಗಳಿಗೆ ನಾನು ಹುಟ್ಟಿದ ಜಾತಿಯೂ ಒಂದು ಕಾರಣ. ನನ್ನನ್ನು ರಾಜಕೀಯವಾಗಿ ಮುಗಿಸಲು ಹಲವಾರು ದೊಡ್ಡ ದೊಡ್ಡ ನಾಯಕರು ಹಲವಾರು ಬಗೆಯ ಕುಟಿಲ ಕಾರಸ್ತಾನಗಳನ್ನು ಮಾಡಿದ್ದಾರೆ. ನನ್ನ ವಿರುದ್ಧ ಯಾಕೆ ಷಡ್ಯಂತ್ರ ಮಾಡುತ್ತಿದ್ದಾರೆ ಎನ್ನುವುದೂ ನನಗೆ ಗೊತ್ತಿದೆ. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಹೋರಾಟವನ್ನು ನನ್ನ ಉಸಿರು ಇರುವವರೆಗೆ ನಡೆಸುತ್ತೇನೆ, ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ ಎಂದಿದ್ದಾರೆ.

ಸಾಮಾಜಿಕ ನ್ಯಾಯವೆಂದರೆ ನಾನು ಆರಿಸಿಕೊಂಡ ಬದುಕಿನ ಹಾದಿ

ಸಾಮಾಜಿಕ ನ್ಯಾಯ ಎನ್ನುವುದು ನನ್ನ ಪಾಲಿಗೆ ಒಂದು ಸಿದ್ಧಾಂತ ಅಲ್ಲ, ಅದು ಸರ್ವ ಸಮಾನತೆಯ ಗುರಿಯನ್ನು ತಲುಪಲು ನಾನು ಆರಿಸಿಕೊಂಡ ಬದುಕಿನ ಹಾದಿ. ಸಾಮಾನ್ಯವಾಗಿ ಸಾಮಾಜಿಕ ನ್ಯಾಯ ಎಂದರೆ ಯಾರಿಂದಲೋ ಕಿತ್ತು, ಇನ್ನಾರಿಗೋ ಹಂಚುವ ಜನವಿರೋಧಿಯಾದ, ತಾರತಮ್ಯದ ನೀತಿ ಎಂಬಂತೆ ಬಿಂಬಿಸಲಾಗುತ್ತಿದೆ. ಸಂಪತ್ತು, ಅಧಿಕಾರ ಮತ್ತು ಅವಕಾಶಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಅಭಿವೃದ್ದಿಯ ಫಲವನ್ನು ಜಾತಿ, ಧರ್ಮ, ಪ್ರದೇಶಗಳ ಭೇದವಿಲ್ಲದೆ ಸರ್ವರಿಗೂ ಸಮಾನವಾಗಿ ಹಂಚಿಕೆಯಾಗಬೇಕೆನ್ನುವುದು ಸಂವಿಧಾನದ ಆಶಯವಾಗಿ ಹೊರಹೊಮ್ಮಿರುವ ಸಾಮಾಜಿಕ ನ್ಯಾಯದ ಪರಿಕಲ್ಪನೆ. ಇದೇ ನಿಜವಾದ ವೈಜ್ಞಾನಿಕವಾದ ಅಭಿವೃದ್ಧಿ ಮಾದರಿ. ಜಾತಿ, ಲಿಂಗ, ವರ್ಗ, ಪ್ರದೇಶಗಳ ತಾರತಮ್ಯ ನಿವಾರಣೆಗಳ ಜೊತೆಯಲ್ಲಿ ನಗರ ಮತ್ತು ಹಳ್ಳಿಗಳ ನಡುವಿನ ಅಂತರವನ್ನು ನಿವಾರಿಸುವುದು ಕೂಡಾ ಸಾಮಾಜಿಕ ನ್ಯಾಯವೇ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಲೇವಡಿ

ನಿನ್ನೆ ಸಿಎಂ ಸಿದ್ದರಾಮಯ್ಯ ಮಾಡಿರುವ ಸರಣಿ ಟ್ವೀಟ್​ಗಳು ಸಿಎಂ ಕುರ್ಚಿ ಕಾಳಗಕ್ಕೆ ಹೊಸ ಆಯಾಮ ತಂದು ಕೊಟ್ಟಿವೆ. ಏಕೆಂದರೆ ಸಿಎಂ ಬಳಸಿದ ಪದಗಳು ಅಷ್ಟು ಹರಿತವಾಗಿವೆ. ಇದೆಲ್ಲವನ್ನ ಸಿಎಂ ಸಿದ್ದರಾಮಯ್ಯ ಯಾರಿಗೆ ಹೇಳಿದ್ದು, ಯಾಕೆ ಅನ್ನೋ ಪ್ರಶ್ನೆ ರಾಜಕಾರಣದಲ್ಲಿ ಹರಿದಾಡುತ್ತಿದೆ. ಆದರೆ ಜೆಡಿಎಸ್, ಬಿಜೆಪಿ ನಾಯಕರು ಸಿಎಂರ ಈ ಮಾತುಗಳ ಕಾಂಗ್ರೆಸ್​ನವರಿಗೆ ಅಂತಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕರು ಸಿಎಂ ಮಾತು ಕೈ ಪಡೆಗೆ ಹೇಳಿದ್ದು ಅನ್ನೋದನ್ನ ತಳ್ಳಿಹಾಕ್ತಿದ್ದಾರೆ. ಡಿಕೆ ಶಿವಕುಮಾರ್​ ಆಪ್ತ ಶಾಸಕ ಇಕ್ಬಾಲ್ ಹುಸೇನ್ ನಮ್ಮಲ್ಲಿ ಯಾವ ಪಟ್ಟಭದ್ರ ಶಕ್ತಿ ಇಲ್ಲ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:26 pm, Sat, 21 February 26

Source link

Video: ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?

ಖ್ಯಾತ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ ಯವರು ಟಿವಿ9ನ ವಿಶೇಷ ಪಾಡ್‌ಕಾಸ್ಟ್‌ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಎದುರಾಗುವ ಸವಾಲುಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಅವರು ಅಂಕಗಳಿಗಿಂತ ಜ್ಞಾನ ಸಂಪಾದನೆ ಹೆಚ್ಚು ಮುಖ್ಯ ಎಂದು ಪ್ರತಿಪಾದಿಸಿದ್ದಾರೆ. ಸಚಿನ್ ತೆಂಡೂಲ್ಕರ್, ಅಣ್ಣಾ ಹಜಾರೆ ಮತ್ತು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಂತಹವರ ಉದಾಹರಣೆಗಳನ್ನು ನೀಡಿ, ಜೀವನದಲ್ಲಿ ಅಂಕಗಳಷ್ಟೇ ನಿರ್ಣಾಯಕವಲ್ಲ ಎಂದು ತಿಳಿಸಿದ್ದಾರೆ.

ಆತ್ಮವಿಶ್ವಾಸ ನಮ್ಮೊಳಗೆ ಇರಬೇಕು ಮತ್ತು ಇತರರೊಂದಿಗೆ ಹೋಲಿಸಿಕೊಳ್ಳುವುದನ್ನು ತಪ್ಪಿಸಬೇಕು. ಸ್ವಯಂ ಸ್ಪರ್ಧೆಯು ಯಶಸ್ಸಿಗೆ ಮುಖ್ಯ. ವಿಷಯದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಮತ್ತು ಹಿಂದಿನ ತರಗತಿಗಳ ಅಡಿಪಾಯವನ್ನು ಬಲಪಡಿಸುವ ಮೂಲಕ ಮರೆವಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಜ್ಞಾನವನ್ನು ಬೆನ್ನತ್ತಿದರೆ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಬಡ ಮಕ್ಕಳಿಗೆ ವಿದ್ಯಾ ದೇವತೆಯಾದ ಭಾರತೀಯ ಶಿಕ್ಷಕಿಗೆ ವಿಶ್ವ ಮನ್ನಣೆ: ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಪಡೆದ ರೂಬಲ್ ನಾಗಿ

 

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಸುಂಕದ ಬಗ್ಗೆ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮಗಳ ಅಧ್ಯಯನ ಮಾಡುತ್ತಿದ್ದೇವೆ; ಭಾರತ ಪ್ರತಿಕ್ರಿಯೆ – Kannada News | Studying Developments Indias First Reaction After US Supreme Court Order On Trump Tariffs

ನವದೆಹಲಿ, ಫೆಬ್ರವರಿ 21: ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ (Donald Trump) ವಿಧಿಸಿದ ಸುಂಕಗಳನ್ನು ರದ್ದುಗೊಳಿಸುವ ಯುಎಸ್ ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮಗಳನ್ನು ಭಾರತ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ ಎಂದು ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. “ನಿನ್ನೆ ಸುಂಕಗಳ ಕುರಿತು ಅಮೆರಿಕದ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ನಾವು ಗಮನಿಸಿದ್ದೇವೆ. ಅಧ್ಯಕ್ಷ ಟ್ರಂಪ್ ಆ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಯುಎಸ್ ಸರ್ಕಾರ ಈಗಾಗಲೇ ಕೆಲವು ಕ್ರಮಗಳನ್ನು ಪ್ರಕಟಿಸಿದೆ. ಈ ಎಲ್ಲಾ ಬೆಳವಣಿಗೆಗಳ ಪರಿಣಾಮಗಳಿ ಬಗ್ಗೆ ನಾವು ಅಧ್ಯಯನ ಮಾಡುತ್ತಿದ್ದೇವೆ” ಎಂದು ವಾಣಿಜ್ಯ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕದಲ್ಲಿ ನಡೆದ ಬೆಳವಣಿಗೆಗಳ ನಂತರ ಭಾರತದಿಂದ ಬಂದ ಮೊದಲ ಅಧಿಕೃತ ಪ್ರತಿಕ್ರಿಯೆ ಇದಾಗಿದೆ. ರಷ್ಯಾದೊಂದಿಗಿನ ಕಚ್ಚಾ ತೈಲ ವ್ಯಾಪಾರದಿಂದಾಗಿ ಭಾರತದ ಮೇಲೆ ವಿಧಿಸಲಾಗಿದ್ದ ಶೇ. 25ರಷ್ಟು ಆರಂಭಿಕ ಸುಂಕವನ್ನು ಶೇ. 50ಕ್ಕೆ ಏರಿಸಿತ್ತು. ಇತ್ತೀಚೆಗೆ ಟ್ರಂಪ್ ಸರ್ಕಾರದೊಂದಿಗಿನ ಬಹುನಿರೀಕ್ಷಿತ ಮಧ್ಯಂತರ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಸುಂಕವನ್ನು ಶೇ. 18ಕ್ಕೆ ಇಳಿಸಲಾಗಿತ್ತು.

ಇದನ್ನೂ ಓದಿ: ಮನಬಂದಂತೆ ಸುಂಕ ಹೇರಿದ ಟ್ರಂಪ್​ಗೆ ಶಾಕ್ ಕೊಟ್ಟ ಅಮೆರಿಕದ ಸುಪ್ರೀಂ ಕೋರ್ಟ್

ಆದರೆ, ಭಾರತವು ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಇಂಧನ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಮತ್ತು ಅಮೇರಿಕನ್ ಇಂಧನ ಉತ್ಪನ್ನಗಳ ಖರೀದಿಯನ್ನು ವಿಸ್ತರಿಸಲು ಬದ್ಧವಾಗಿದೆ ಎಂದು ಟ್ರಂಪ್ ಹೇಳಿದ ನಂತರ ರಷ್ಯಾದ ತೈಲ ಆಮದುಗಳಿಗೆ ಸಂಬಂಧಿಸಿದ ಹೆಚ್ಚುವರಿ ಶೇ. 25ರಷ್ಟು ಸುಂಕಗಳನ್ನು ಹಿಂತೆಗೆದುಕೊಳ್ಳಲಾಯಿತು.

ಡೊನಾಲ್ಡ್​ ಟ್ರಂಪ್​ ಕ್ಯಾಬಿನೆಟ್ ಒಪ್ಪಿಗೆಯಿಲ್ಲದೆ ಸುಂಕದ ಬಗ್ಗೆ ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಟ್ರಂಪ್ ಹೇರಿದ ಸುಂಕಗಳ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಟ್ರಂಪ್ ಇಂದು ಜಾಗತಿಕವಾಗಿ ಹೊಸ ಸುಂಕವನ್ನು ಘೋಷಿಸಿದ್ದಾರೆ. ಆ ಪ್ರಕಾರ, ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತಕ್ಕೆ ವಿಧಿಸಲಾದ ಸುಂಕ ಇದೀಗ ಶೇ. 18ರಿಂದ ಶೇ. 10ಕ್ಕೆ ಇಳಿಕೆಯಾಗಿದೆ. ಫೆಬ್ರವರಿ 24ರಿಂದ ಈ ಆದೇಶ ಜಾರಿಗೆ ಬರಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ! ಎಲ್ಲವೂ ಸುಟ್ಟು ಭಸ್ಮ – Kannada News | Karnataka Village Fury: Enraged Father in Law Burns Son in Law’s Home Over Love Marriage

ಮಂಡ್ಯ, ಫೆ.21: ಪ್ರೀತಿಸಿ ಮದುವೆಯಾದ ಅಳಿಯನ ಮೇಲೆ ಕೋಪಗೊಂಡ ಮಾವನೊಬ್ಬ ಅಳಿಯನ ಮನೆಗೇ ಬೆಂಕಿ ಹಚ್ಚಿರುವ ಘಟನೆ ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದೆ. ಚುಂಚಗಹಳ್ಳಿ ಗ್ರಾಮದ ವಿನೋದ್ ಮತ್ತು ಕಾವ್ಯಾ ಎಂಬುವರು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಕಾವ್ಯಾ ಮನೆಯಲ್ಲಿ ತೀವ್ರ ವಿರೋಧವಿತ್ತು. ಮನೆಯವರ ವಿರೋಧದ ನಡುವೆಯೂ ಈ ಜೋಡಿ ಕಳೆದ ಗುರುವಾರ ಮದುವೆಯಾಗಿತ್ತು. ತನ್ನ ಮಗಳು ವಿರೋಧದ ನಡುವೆ ಮದುವೆಯಾಗಿದ್ದರಿಂದ ಕಾವ್ಯಾ ತಂದೆ ಚನ್ನೇಗೌಡ ತೀವ್ರ ಆಕ್ರೋಶಗೊಂಡಿದ್ದರು. ಇದೇ ಕೋಪದಲ್ಲಿ ಇಂದು (ಶನಿವಾರ) ಬೆಳಿಗ್ಗೆ ಅಳಿಯ ವಿನೋದ್ ಮನೆಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆಬರೆ ಹಾಗೂ ಅಡುಗೆ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಘಟನೆ ನಡೆದ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಮನೆಗೆ ಬೆಂಕಿ ಹಚ್ಚುವ ಭರದಲ್ಲಿ ಆರೋಪಿ ಚನ್ನೇಗೌಡನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AUS: ಆಸ್ಟ್ರೇಲಿಯಾವನ್ನು ಆಸ್ಟ್ರೇಲಿಯಾದಲ್ಲೇ ಸೋಲಿಸಿ ಟಿ20 ಸರಣಿ ಗೆದ್ದ ಟೀಂ ಇಂಡಿಯಾ – Kannada News | India Women Dominate Australia T20s: Harmanpreet’s Team Wins Series 2 1

ಪ್ರಸ್ತುತ ಭಾರತ ಮಹಿಳಾ ಪಡೆ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಮೂರು ಮಾದರಿಗಳ ಸರಣಿಯನ್ನು ಆಡಲಿದೆ. ಅದರ ಭಾಗವಾಗಿ ನಡೆದ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಳ್ಳುವ ಮೂಲಕ ಹರ್ಮನ್​ಪ್ರೀತ್ ಕೌರ್ ಪಡೆ ಪ್ರವಾಸವನ್ನು ಸರಣಿ ಗೆಲುವಿನೊಂದಿಗೆ ಆರಂಭಿಸಿದೆ. ಸರಣಿಯ ಮೊದಲ ಪಂದ್ಯವನ್ನು ಗೆದ್ದಿದ್ದ ಭಾರತ ವನಿತಾ ಪಡೆ, ಎರಡನೇ ಪಂದ್ಯದಲ್ಲಿ ಸೋಲು ಕಂಡಿತ್ತು. ಆದರೆ ಮೂರನೇ ಹಾಗೂ ಸರಣಿ ನಿರ್ಧಾರಕ ಪಂದ್ಯದಲ್ಲಿ ಉಪನಾಯಕಿ ಸ್ಮೃತಿ ಮಂಧಾನ ಅವರ ಸ್ಫೋಟಕ ಬ್ಯಾಟಿಂಗ್‌ ಹಾಗೂ ಕನ್ನಡತಿ ಶ್ರೇಯಾಂಕ ಪಾಟೀಲ್ ಅವರ ಸ್ಪಿನ್ ಮ್ಯಾಜಿಕ್​ನ ನೆರವಿನಿಂದ ಭಾರತ ತಂಡ ಮೂರನೇ ಪಂದ್ಯವನ್ನು 17 ರನ್​ಗಳಿಂದ ಗೆದ್ದುಕೊಂಡು ಸರಣಿ ವಶಪಡಿಸಿಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ 176 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 159 ರನ್ ಗಳಿಸಲಷ್ಟೇ ಶಕ್ತವಾಯಿತು.

Published On – 5:52 pm, Sat, 21 February 26

Source link

‘ನಾನು ಬಾಲಿವುಡ್ ಬಿಡಲು ಬಯಸಲಿಲ್ಲ, ನನ್ನನ್ನು ಬಲವಂತಪಡಿಸಲಾಯಿತು’; ಪ್ರಿಯಾಂಕಾ ಚೋಪ್ರಾ – Kannada News | Priyanka Chopra Reveals Shocking Truth: “Was Forced to Leave Bollywood for Global Career

ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಹಾಲಿವುಡ್‌ನಲ್ಲಿಯೂ ಜನಪ್ರಿಯತೆ ಗಳಿಸಿರುವ ತಾರೆಗಳಲ್ಲಿ ಪ್ರಿಯಾಂಕಾ ಚೋಪ್ರಾ  (Priyanka Chopra) ಒಬ್ಬರು. ಅವರು ಜಾಗತಿಕ ಐಕಾನ್ ಆಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಪ್ರಿಯಾಂಕಾ ಹಾಲಿವುಡ್‌ನಲ್ಲಿ ಅವಕಾಶಗಳನ್ನು ಹುಡುಕಲು ಅಮೆರಿಕಕ್ಕೆ ಹೋದರು. ಅಲ್ಲಿ ಅವರು ಮತ್ತೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದಾಗ್ಯೂ, ಅವರು ತಮ್ಮ ಹಾಲಿವುಡ್ ಪ್ರಯಾಣದ ಬಗ್ಗೆ ಆಘಾತಕಾರಿ ವಿಷಯ ಹೇಳಿದ್ದಾರೆ. ನಾನು ಎಂದಿಗೂ ಬಾಲಿವುಡ್ ಬಿಡಲು ಬಯಸಲಿಲ್ಲ, ಆದರೆ ಹೊರಗೆ ಅವಕಾಶಗಳನ್ನು ಹುಡುಕಲು ನನ್ನನ್ನು ಬಲವಂತವಾಗಿ ಒತ್ತಾಯಿಸಲಾಯಿತು ಎಂದು ಪ್ರಿಯಾಂಕಾ ಹೇಳಿದ್ದಾರೆ.

ಬಾಲಿವುಡ್‌ನಿಂದ ಹಾಲಿವುಡ್‌ಗೆ ಪ್ರಯಾಣ ಮಾಡಿದ ಬಗ್ಗೆ ಪ್ರಿಯಾಂಕಾ ಮುಕ್ತವಾಗಿ ಮಾತನಾಡಿದರು.
‘ನಾನು ಬಾಲಿವುಡ್ ಬಿಡಲು ಎಂದಿಗೂ ಬಯಸಿರಲಿಲ್ಲ. ನಾನು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾಗ, ಅದಕ್ಕೆ ಸಾಕಷ್ಟು ಲಿಮಿಟೇಷನ್ ಇದೆ ಎನಿಸಿತು. ನಾನು ಏಳ್ಗೆ ಕಾಣಲು ಬಯಸಿದ್ದೆ. ಕಲಾವಿದನಾಗಿ ಅವಕಾಶಗಳನ್ನು ಹುಡುಕಲು ನನ್ನ ಮೇಲೆ ಒತ್ತಡವಿತ್ತು. ನಾನು ಅಮೆರಿಕದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ’ ಎಂದಿದ್ದಾರೆ ಅವರು.

‘ನಮ್ಮ ಭಾರತೀಯ ಚಲನಚಿತ್ರಗಳು ನನಗೆ ತುಂಬಾ ಇಷ್ಟ. ವಾರಣಾಸಿ ಚಿತ್ರದ ಮೂಲಕ ಭಾರತಕ್ಕೆ ಮರಳುತ್ತಿದ್ದೇನೆ. ಈ ಬಗ್ಗೆ ನನಗೆ ತುಂಬಾ ಸಂತೋಷ ಇದೆ. ನಾನು ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗಿಲ್ಲ. ನಾನು ಎಂದಿಗೂ ಆಯ್ಕೆ ಮಾಡಿಲ್ಲ. ನಾನು ಎರಡರಲ್ಲೂ ಆ್ಯಕ್ಟೀವ್ ಆಗಿದ್ದೇನೆ. ಎರಡೂ ಕಡೆ ಕೆಲಸ ಮಾಡಲು ನನಗೆ ಇಷ್ಟ’ ಎಂದು ಪ್ರಿಯಾಂಕಾ ಹೇಳಿದರು.ಎರಡೂ ಸ್ಥಳಗಳಲ್ಲಿ ಕೆಲಸ ಮಾಡೋದು ಎಂದರೆ ಖುಷಿ ಎಂದಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾರನ್ನು ಮಹಾನ್ ವ್ಯಕ್ತಿಗೆ ಹೋಲಿಸಿದ ಹಾಲಿವುಡ್ ಸ್ಟಾರ್ ವಿನ್ ಡೀಸೆಲ್

ಪ್ರಿಯಾಂಕಾ, ನಿಕ್ ಜೋನಸ್​​ನ ವಿವಾಹ ಆಗಿದ್ದಾರೆ. ಅವರು ಹಾಲಿವುಡ್‌ನಲ್ಲಿ ಅವಕಾಶಗಳನ್ನು ಹುಡುಕಲು ಪ್ರಾರಂಭಿಸಿದರು. ಆ ಬಳಿಕ ಅಲ್ಲಿಯೇ ಸೆಟಲ್ ಆದರು. ಮಹೇಶ್ ಬಾಬು ನಟನೆಯ ‘ವಾರಣಾಸಿ’ ಸಿನಿಮಾಗೆ ನಾಯಕಿ. ಈ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಲೇವಡಿ – Kannada News | HD Kumaraswamy Reacts to Siddaramaiahs CM Tweet

ಬೆಂಗಳೂರು, ಫೆಬ್ರವರಿ 21: ಸಿಎಂ ಆಗಿರುವುದನ್ನು ಸಹಿಸುತ್ತಿಲ್ಲ ಎಂಬ ಸಿದ್ದರಾಮಯ್ಯ ಟ್ವೀಟ್​ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಇದು ಸಿದ್ದರಾಮಯ್ಯ ಅವರ ಒಳಗಿನ ದುಗುಡವನ್ನು ತೋರಿಸುತ್ತದೆ. ಅಧಿಕಾರ ಶಾಶ್ವತವಲ್ಲ, ಸಿದ್ದರಾಮಯ್ಯ ಅವರು ಎಂಟು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಕೇವಲ ಕುರುಬ ಸಮುದಾಯದವರು ಮಾತ್ರವಲ್ಲ, ಮೈಸೂರಿನ ರಾಜಕಾರಣದಲ್ಲಿ ಜಾತಿ ಭೇದ ಮರೆತು ಹಲವು ಸಮಾಜಗಳು ಅವರ ರಾಜಕೀಯ ಬೆಳವಣಿಗೆಗೆ ಶಕ್ತಿ ತುಂಬಿವೆ. ಈ ಸಾಮಾನ್ಯ ಜ್ಞಾನ ಅವರಿಗೆ ಇಲ್ವಾ ಎಂದು ಪ್ರಶ್ನಿಸಿದರು. ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಸಮಾಜದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ. ತಮ್ಮ ಪಕ್ಷದಲ್ಲಿ ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ, ಆದರೆ ರಾಜ್ಯದ ಜನತೆಗೆ ನಿರಾಸೆ ಮಾಡಿದ್ದಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸರ್​​ 12 ಬೇಡ.. 11 ಪರ್ಸೆಂಟ್ ಸಾಕು: ಕಮಿಷನ್​​ ಪಡೆಯುವಾಗಲೇ ಬಿಜೆಪಿ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ – Kannada News | Shirahatti MLA Dr Chandru Lamani Arrested in Bribery Case by Lokayukta

ಗದಗ, ಫೆ.21: ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ (Chandru Lamani) ಅವರು 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಅವರ ಬಾಲಾಜಿ ಆಸ್ಪತ್ರೆಯಲ್ಲಿ ಈ ದಾಳಿ ನಡೆದಿದೆ. ಶಾಸಕ ಲಮಾಣಿ ಅವರೊಂದಿಗೆ ಅವರ ಸರ್ಕಾರಿ ಪಿಎ ವಾಲ್ಮೀಕಿ ಮತ್ತು ಖಾಸಗಿ ಪಿಎ ಮಂಜುನಾಥ್ ಹಾಗೂ ಗುರು ಲಮಾಣಿ ಎಂಬ ಇಬ್ಬರು ಸಹಾಯಕರು ಸಹ ಲೋಕಾಯುಕ್ತರ ವಶದಲ್ಲಿದ್ದಾರೆ. ಒಟ್ಟು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಗುತ್ತಿಗೆದಾರರೊಬ್ಬರಿಂದ 5 ಲಕ್ಷ ರೂ. ಕಮಿಷನ್ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಏಕಾಏಕಿ ದಾಳಿ ನಡೆಸಿದರು. ರಸ್ತೆ ಪಕ್ಕದಲ್ಲಿ ಒಂದು ಕೋಟಿ ರೂಪಾಯಿ ಮೊತ್ತದ ವಾಲ್ ನಿರ್ಮಾಣ ಮಾಡುವ ಕೆಲಸಕ್ಕೆ ಶಾಸಕರು 12 ಪರ್ಸೆಂಟ್ ಕಮಿಷನ್ ಕೇಳಿದ್ದರು. ನಂತರ 11 ಪರ್ಸೆಂಟ್​​​ ಗೆ ವ್ಯವಹಾರ ಕುದುರಿತ್ತು ಎನ್ನಲಾಗಿದೆ. ಈ ಹಣವನ್ನು ಅವರ ಪಿಎ ಮೂಲಕ ಸ್ವೀಕರಿಸಲು ಸೂಚಿಸಿದಾಗ, ಲೋಕಾಯುಕ್ತರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಇದೀಗ ಅವರನ್ನು ವಶಪಡೆದುಕೊಂಡು ವಿಚಾರಣೆ ಕರೆದುಕೊಂಡು ಹೋಗುವ ದೃಶ್ಯ ಇಲ್ಲಿದೆ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆ ಡೀಲ್​​ನಿಂದ ಅಸಮಾಧಾನಗೊಂಡ ‘ಟೈಟಾನಿಕ್’ ನಿರ್ದೇಶಕ; ಹಾಲಿವುಡ್​​ಗೆ ಎಚ್ಚರಿಕೆ ಕೊಟ್ಟ ಜೇಮ್ಸ್ ಕ್ಯಾಮೆರಾನ್ – Kannada News | James Cameron Warns: Netflix Warner Bros Deal Threatens Cinema’s Future and Theaters

ಹಾಲಿವುಡ್​​ನಲ್ಲಿ ‘ಟೈಟಾನಿಕ್’, ‘ಅವತಾರ್’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಜೇಮ್ಸ್ ಕ್ಯಾಮೆರಾನ್ ಅವರಿಗೆ ಇದೆ. ಅವರು ಸಿನಿಮಾ ರಂಗದ ಬಗ್ಗೆ ಕಾಳಜಿ ವಹಿಸುತ್ತಾರೆ. ಈಗ ಮುಂದಿನ ದಿನಗಳಲ್ಲಿ ಹಾಲಿವುಡ್​ಗೆ ಬರಬಹುದಾದ ತೊಂದರೆ ಬಗ್ಗೆ ಅವರು ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆ ನೀಡಲು ಕಾರಣ ಆಗಿದ್ದು, ಆ ಒಂದು ಡೀಲ್. ಅಷ್ಟಕ್ಕೂ ಜೇಮ್ಸ್ ಕ್ಯಾಮೆರಾನ್ (James Cameron) ಮಾತನಾಡಿದ್ದು, ಯಾವ ವಿಷಯದ ಬಗ್ಗೆ? ಇಲ್ಲಿದೆ ವಿವರ.

ಇತ್ತೀಚೆಗೆ ನೆಟ್​ಫ್ಲಿಕ್ಸ್ ಸಂಸ್ಥೆ ದೊಡ್ಡ ಮೊತ್ತ ನೀಡಿ ವಾರ್ನರ್ ಬ್ರೋಸ್​​ನ ಖರೀದಿ ಮಾಡಿತ್ತು. ಈ ಡೀಲ್​​ನಿಂದ ನೆಟ್​ಫ್ಲಿಕ್ಸ್ ದೊಡ್ಡ ಲಾಭ ಕಾಣುತ್ತಿದೆ. ಅತಿ ದೊಡ್ಡ ಸ್ಟುಡಿಯೋನ ತನ್ನ ತೆಕ್ಕೆಗೆ ತೆಗೆದುಕೊಂಡ ಖುಷಿ ನೆಟ್​ಫ್ಲಿಕ್ಸ್​ಗೆ ಇದೆ. ಆದರೆ, ಈ ಸಂಸ್ಥೆ ಒಟಿಟಿ ಚಿತ್ರಗಳನ್ನು ನಿರ್ಮಿಸುತ್ತದೆ. ಹೀಗಾಗಿ, ಆ ನಿಟ್ಟಿನಲ್ಲಿ ಮಾತ್ರ ಯೋಚಿಸುತ್ತದೆ ಎಂಬ ಭಯ ಜೆಮ್ಸ್ ಕ್ಯಾಮೆರೂನ್ ಅವರದ್ದು.

‘ವಾರ್ನರ್ ಬ್ರದರ್ಸ್ ಡಿಸ್ಕವರಿಯನ್ನು ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡುವ ಪ್ರಸ್ತಾಪವು ಸಿನಿಮಾ ರಂಗಕ್ಕೆ ಹಾನಿ ತರುವಂಥದ್ದು. ನಾನು ಚಿತ್ರರಂಗ ಹಾಗೂ ರಂಗಭೂಮಿಗೆ ನನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ. ನನ್ನ ಎಲ್ಲಾ ಸಿನಿಮಾಗಳು ಕೆಳಮಟ್ಟದ ವಿಡಯೋ ಮಾರುಕಟ್ಟೆಗಳಲ್ಲಿಯೂ ಪ್ರದರ್ಶನಗೊಳ್ಳುತ್ತವೆ ಅನ್ನೋದು ನನಗೆ ಗೊತ್ತು. ಆದರೆ ನನ್ನ ಮೊದಲ ಪ್ರೀತಿ ಸಿನಿಮಾ’ ಎಂದು ಜೇಮ್ಸ್ ಕ್ಯಾಮೆರಾನ್ ಅಮೇರಿಕನ್ ಸೆನೆಟರ್ ಮೈಕ್ ಲೀಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಇಂತಹ ಒಪ್ಪಂದ ಜಾರಿಗೆ ಬಂದರೆ ಚಿತ್ರಮಂದಿರಗಳು ಮುಚ್ಚಲ್ಪಡುತ್ತವೆ ಎಂದು ಜೇಮ್ಸ್ ಕ್ಯಾಮೆರಾನ್ ಆತಂಕ ಹೊರಹಾಕಿದ್ದಾರೆ. ಈ ಡೀಲ್​​ನಿಂದ ಕೆಲವೇ ಸಿನಿಮಾಗಳು ನಿರ್ಮಾಣ ಆಗುತ್ತವಂತೆ. ಸಾಕಷ್ಟು ಜನರಿಗೆ ಕೆಲಸ ಕೊಟ್ಟ ಚಿತ್ರರಂಗಕ್ಕೆ ಇದರಿಂದ ನಷ್ಟ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹಾಲಿವುಡ್ ಫೇಮಸ್ ಸ್ಟುಡಿಯೋನ 74 ಲಕ್ಷ ಕೋಟಿ ರೂಪಾಯಿಗೆ ಖರೀದಿಸಿದ ನೆಟ್​ಫ್ಲಿಕ್ಸ್

‘ಉಳಿದಿರುವ ಕೆಲವೇ ಚಲನಚಿತ್ರ ನಿರ್ಮಾಣ ಸ್ಟುಡಿಯೋಗಳಲ್ಲಿ ವಾರ್ನರ್ ಬ್ರದರ್ಸ್ ಒಂದಾಗಿದೆ. ಅದು ಕೂಡ ಪಥವನ್ನು ಬದಲಾಯಿಸಿದರೆ ಚಿತ್ರರಂಗ ಸಾಕಷ್ಟು ನಷ್ಟ ಅನುಭವಿಸಲಿದೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೆಹಲಿ, ಉತ್ತರ ಪ್ರದೇಶದ ದೇವಾಲಯಗಳ ಮೇಲೆ ದಾಳಿಗೆ ಎಲ್‌ಇಟಿ, ಜೈಶ್ ಸಂಚು; ಗುಪ್ತಚರ ಮಾಹಿತಿ – Kannada News | LeT and Jaish may Target Temples In Delhi and Uttar Pradesh around Red Fort Intel Suggests

ನವದೆಹಲಿ, ಫೆಬ್ರವರಿ 21: ಪಾಕಿಸ್ತಾನ ಮೂಲದ ಉಗ್ರಗಾಮಿ ಗುಂಪು ಲಷ್ಕರ್-ಎ-ತೈಬಾ (ಎಲ್‌ಇಟಿ) ಕೆಂಪು ಕೋಟೆ ಮತ್ತು ಚಾಂದನಿ ಚೌಕ್ ಸುತ್ತಮುತ್ತ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಒಳಗೊಂಡ ಪ್ರಮುಖ ಭಯೋತ್ಪಾದಕ ದಾಳಿಯನ್ನು (Terror Attack) ಪ್ಲಾನ್ ಮಾಡುತ್ತಿದೆ ಎಂಬ ಹೊಸ ಗುಪ್ತಚರ ಮಾಹಿತಿಯ ನಂತರ ನವದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಉಗ್ರರ ಟಾರ್ಗೆಟ್ ಪಟ್ಟಿಯಲ್ಲಿ ದೆಹಲಿ ಹಾಗೂ ಉತ್ತರ ಪ್ರದೇಶದ ದೇವಾಲಯವೂ ಸೇರಿರುವ ಸಾಧ್ಯತೆಯಿದೆ. ಫೆಬ್ರವರಿ 6ರಂದು ಇಸ್ಲಾಮಾಬಾದ್‌ನ ಮಸೀದಿಯಲ್ಲಿ ನಡೆದ ಸ್ಫೋಟಕ್ಕೆ ಸೇಡು ತೀರಿಸಿಕೊಳ್ಳುವ ಪ್ರಯತ್ನವಾಗಿ ದಾಳಿಯ ಪ್ಲಾನ್ ನಡೆದಿರಬಹುದು ಎಂದು ಮೂಲಗಳು ತಿಳಿಸಿವೆ.

ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ, ಪ್ರಮುಖ ಧಾರ್ಮಿಕ ಮತ್ತು ಪರಂಪರೆಯ ತಾಣಗಳ ಸುತ್ತಲೂ ನಿಯೋಜನೆಗಳನ್ನು ಹೆಚ್ಚಿಸಿವೆ. ವಾಹನಗಳು ಮತ್ತು ಜನಸಂದಣಿ ಕೇಂದ್ರಗಳ ಮೇಲೆ ತಪಾಸಣೆಗಳನ್ನು ತೀವ್ರಗೊಳಿಸಿವೆ. ಗುಪ್ತಚರ ಇಲಾಖೆ ಈ ಬಗ್ಗೆ ನಿರಂತರವಾಗಿ ತನಿಖೆ ನಡೆಸುತ್ತಿದೆ. ನವೆಂಬರ್ 2025ರಲ್ಲಿ ಕೆಂಪು ಕೋಟೆ ಬಳಿ ನಡೆದ ಮಾರಕ ಸ್ಫೋಟದ ನಂತರವೂ ಈ ಎಚ್ಚರಿಕೆ ನೀಡಲಾಗಿತ್ತು. ದೇಶಾದ್ಯಂತದ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಏಜೆನ್ಸಿಗಳು ಈ ಬಗ್ಗೆ ಕಣ್ಣಿಟ್ಟಿವೆ.

ಇದನ್ನೂ ಓದಿ: Video: ಐಇಡಿ ನಿಷ್ಕ್ರಿಯ, ದೀಪಾವಳಿ ಸಮಯದಲ್ಲಿ ತಪ್ಪಿದ ದೊಡ್ಡ ಅನಾಹುತ, ಶೋಪಿಯಾನ್​ನಲ್ಲಿ ಭಯೋತ್ಪಾದಕ ದಾಳಿ ವಿಫಲ

ದೆಹಲಿಯ ಭದ್ರತಾ ಸಂಸ್ಥೆಗಳು ಮತ್ತು ಕೇಂದ್ರ ಪಡೆಗಳು ಸೂಕ್ಷ್ಮ ಸ್ಥಳಗಳಲ್ಲಿ ಅದರಲ್ಲೂ ವಿಶೇಷವಾಗಿ ಭಾರತದ ಅತ್ಯಂತ ಪ್ರಸಿದ್ಧ ಪರಂಪರೆಯ ತಾಣಗಳಲ್ಲಿ ಒಂದಾದ ಮತ್ತು ರಾಷ್ಟ್ರೀಯ ಹೆಮ್ಮೆಯ ಸಾಂಕೇತಿಕ ಸ್ಥಳವಾದ ಐತಿಹಾಸಿಕ ಕೆಂಪು ಕೋಟೆ ಮತ್ತು ಹಳೆಯ ದೆಹಲಿಯನ್ನು ಸುತ್ತುವರೆದಿರುವ ಜನನಿಬಿಡ ಮಾರುಕಟ್ಟೆಗಳು ಮತ್ತು ದೇವಾಲಯಗಳ ಸುತ್ತಲೂ ಭದ್ರತೆ ಹೆಚ್ಚಿಸಿವೆ. ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ನಡುವೆ ಹಂಚಿಕೊಂಡ ಗುಪ್ತಚರ ಮಾಹಿತಿಗಳು, ಲಷ್ಕರ್-ಎ-ತೈಬಾ ನಗರದಲ್ಲಿ ಐಇಡಿ ದಾಳಿಯನ್ನು ಯೋಜಿಸುತ್ತಿರಬಹುದು ಎಂದು ಹೇಳಿವೆ. ಇದು ಜನದಟ್ಟಣೆಯ ಸಾರ್ವಜನಿಕ ಪ್ರದೇಶಗಳು, ದೇವಸ್ಥಾನಗಳು ಮತ್ತು ಚಾಂದನಿ ಚೌಕ್ ಪ್ರದೇಶವನ್ನು ಗುರಿಯಾಗಿರಿಸಿಕೊಳ್ಳಬಹುದು ಎನ್ನಲಾಗಿದೆ.

ಇದನ್ನೂ ಓದಿ: Pahalgam Terror Attack: ಪಹಲ್ಗಾಮ್ ಭಯೋತ್ಪಾದಕ ದಾಳಿ; ಕಾಶ್ಮೀರದ 1,500 ಜನರು ವಶಕ್ಕೆ

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ ಭಾರತೀಯ ಪಡೆಗಳು ಪಾಕಿಸ್ತಾನದಲ್ಲಿ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡವು. ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಮತ್ತು ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್‌ನ ಸಹಚರರೊಂದಿಗೆ ಸಂಪರ್ಕ ಹೊಂದಿರುವ ಪ್ರಮುಖ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version