MNS Personnel Now Ex-Servicemen: ಮಿಲಿಟರಿ ನರ್ಸಿಂಗ್ ಸೇವಾ ಸಿಬ್ಬಂದಿಗೆ ರಕ್ಷಣಾ ಸಚಿವಾಲಯದಿಂದ ಗುಡ್​ ನ್ಯೂಸ್​; ಮಾಜಿ ಸೈನಿಕ ಮಾನ್ಯತೆ, ಸರ್ಕಾರಿ ಸೌಲಭ್ಯಗಳು – Kannada News | MNS Personnel Now Ex Servicemen: MoD Grants Re employment Benefits, Reservations

ಮಿಲಿಟರಿ ನರ್ಸಿಂಗ್ ಸೇವೆ (Military Nursing Service – MNS) ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ರಕ್ಷಣಾ ಸಚಿವಾಲಯದಿಂದ ಮಹತ್ವದ ಮತ್ತು ಸಂತಸದ ಸುದ್ದಿ ದೊರೆತಿದೆ. ಇನ್ಮುಂದೆ MNS ಉದ್ಯೋಗಿಗಳನ್ನು ಅಧಿಕೃತವಾಗಿ “ಮಾಜಿ ಸೈನಿಕರು” (Ex-Servicemen) ಎಂದು ಪರಿಗಣಿಸಲಾಗುತ್ತದೆ. ಈ ನಿರ್ಧಾರದಿಂದ ಅವರಿಗೆ ಮರು ಉದ್ಯೋಗ (Re-employment) ಸೇರಿದಂತೆ ಹಲವು ಸರ್ಕಾರಿ ಸೌಲಭ್ಯಗಳು ಲಭ್ಯವಾಗಲಿವೆ. ಈ ಸಂಬಂಧ ರಕ್ಷಣಾ ಸಚಿವಾಲಯ ನಿಯಮಗಳಲ್ಲಿ ತಿದ್ದುಪಡಿ ಮಾಡಿ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು, ಅವು ಫೆಬ್ರವರಿ 9, 2026ರಿಂದಲೇ ಅನ್ವಯವಾಗುತ್ತಿವೆ.

ಕೇಂದ್ರ ಸರ್ಕಾರದ ಸಂವಿಧಾನದ ವಿಧಿ 309ರ ಅಡಿಯಲ್ಲಿ “ಮಾಜಿ ಸೈನಿಕರ (ಕೇಂದ್ರ ನಾಗರಿಕ ಸೇವೆಗಳು ಮತ್ತು ಹುದ್ದೆಗಳಲ್ಲಿ ಮರು ಉದ್ಯೋಗ) ತಿದ್ದುಪಡಿ ನಿಯಮಗಳು, 2026” ಅನ್ನು ಪ್ರಕಟಿಸಲಾಗಿದೆ. ಈ ತಿದ್ದುಪಡಿಯ ಮೂಲಕ ಮಾಜಿ ಸೈನಿಕರ ವ್ಯಾಖ್ಯಾನವನ್ನು ವಿಸ್ತರಿಸಿ, ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿನ MNS ಸಿಬ್ಬಂದಿಯನ್ನು ಕೂಡ ಅದರೊಳಗೆ ಸೇರಿಸಲಾಗಿದೆ. ಹುದ್ದೆ ಅಥವಾ ಶ್ರೇಣಿಯ ಭೇದವಿಲ್ಲದೆ, ಎಲ್ಲ MNS ಉದ್ಯೋಗಿಗಳಿಗೂ ಈ ಮಾನ್ಯತೆ ನೀಡಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಬಡ ಮಕ್ಕಳಿಗೆ ವಿದ್ಯಾ ದೇವತೆಯಾದ ಭಾರತೀಯ ಶಿಕ್ಷಕಿಗೆ ವಿಶ್ವ ಮನ್ನಣೆ: ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಪಡೆದ ರೂಬಲ್ ನಾಗಿ

ಈ ನಿರ್ಧಾರದಿಂದಾಗಿ MNS ಸಿಬ್ಬಂದಿಗೆ ಸೇವಾ ನಿವೃತ್ತಿಯ ನಂತರ ಮತ್ತೆ ಉದ್ಯೋಗ ಪಡೆಯುವುದು ಸುಲಭವಾಗಲಿದೆ. ಇನ್ನು ಮುಂದೆ ಅವರು ಇತರ ಮಾಜಿ ಸೈನಿಕರಂತೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಹಾಗೂ ಆದ್ಯತೆಯ ಪ್ರಯೋಜನಗಳನ್ನು ಪಡೆಯಬಹುದು. ಗ್ರೂಪ್ C ನೇಮಕಾತಿಯಲ್ಲಿ ಶೇ.10 ಮೀಸಲಾತಿ ಮತ್ತು ಗ್ರೂಪ್ D ನೇಮಕಾತಿಯಲ್ಲಿ ಶೇ.20 ಮೀಸಲಾತಿ ಸಿಗಲಿದೆ. ಜೊತೆಗೆ, ಮಿಲಿಟರಿ ಸೇವೆಯ ಅವಧಿಗೆ ಹೆಚ್ಚುವರಿಯಾಗಿ 3 ವರ್ಷಗಳ ವಯೋಮಿತಿ ಸಡಿಲಿಕೆ ಲಭ್ಯವಾಗುತ್ತದೆ. UPSC ಮತ್ತು SSC ನೇಮಕಾತಿಗಳಲ್ಲಿಯೂ ಸಮಾನ ಆದ್ಯತೆ ದೊರೆಯಲಿದೆ.

ಒಟ್ಟಿನಲ್ಲಿ, MNS ಸಿಬ್ಬಂದಿಯ ಸೇವೆಯನ್ನು ಗೌರವಿಸಿ ಅವರಿಗೆ ಸಮಾನ ಹಕ್ಕುಗಳು ಮತ್ತು ಭದ್ರ ಭವಿಷ್ಯ ಒದಗಿಸಲು ಸರ್ಕಾರ ತೆಗೆದುಕೊಂಡಿರುವ ಈ ಕ್ರಮ ಬಹಳ ಮಹತ್ವದ್ದಾಗಿದೆ. ದೇಶಸೇವೆಯಲ್ಲಿ ತೊಡಗಿರುವ ನರ್ಸಿಂಗ್ ಸಿಬ್ಬಂದಿಗೆ ಇದು ನಿಜಕ್ಕೂ ದೊಡ್ಡ ಉತ್ತೇಜನವಾಗಿದ್ದು, ಅವರ ವೃತ್ತಿಜೀವನಕ್ಕೆ ಹೊಸ ದಿಕ್ಕು ನೀಡಲಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:39 pm, Wed, 11 February 26

Source link

ಮದುವೆ ಮನೆಗೆ ನುಗ್ಗಿ ಮಂಗಳಮುಖಿಯರ ರಂಪಾಟ: ವಿಡಿಯೋ ನೋಡಿ – Kannada News | Chikkamagaluru Wedding Chaos: Transgender Group Demands Money

ಚಿಕ್ಕಮಗಳೂರು, ಫೆಬ್ರವರಿ 11: ಮದುವೆ ಮನೆಗೆ ನುಗ್ಗಿ ಹಣ ಕೊಡುವಂತೆ ಮಂಗಳಮುಖಿಯರು ರಂಪಾಟ ಮಾಡಿರುವಂತಹ ಘಟನೆ ನಗರದ ರಂಗಣ್ಣನ ಛತ್ರದಲ್ಲಿ ನಡೆದಿದೆ. ಮದುವೆ ಮುಗಿದ ಬಳಿಕ ರಿಸೆಪ್ಷನ್​​ನಡೆದಿತ್ತು. ವಧು, ವರ ಇದ್ದ ಸ್ಟೇಜ್ ಮೇಲೆ ಹತ್ತಿದ ಮಂಗಳಮುಖಿಯರು ನಾವು ಕೇಳಿದಷ್ಟು ಹಣ ನೀಡುವಂತೆ ರಂಪಾಟ ಮಾಡಿದ್ದಾರೆ. ಹಣ ನೀಡಿದರೂ ಹೆಚ್ಚು ಬೇಕು ಎಂದು ಕಿರಿಕ್ ಮಾಡಿದ್ದಾರೆ. ಈ ವೇಳೆ ಸಂಬಂಧಿಕರು ಮಂಗಳಮುಖಿಯರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ‌ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೆಯಿಲ್ಲ, ಡಿಎಂಕೆ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ; ಕಾಂಗ್ರೆಸ್​ಗೆ ಸಿಎಂ ಸ್ಟಾಲಿನ್ ಸಂದೇಶ – Kannada News | No Power sharing in Tamil Nadu CM MK Stalin’s message to ally Congress ahead of election

ಚೆನ್ನೈ, ಫೆಬ್ರವರಿ 11: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಡಿಎಂಕೆ ಸ್ವಂತವಾಗಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಿತ್ರಪಕ್ಷಗಳ ನಡುವಿನ ಬಿರುಕು ಬಗ್ಗೆ ಗುಸುಗುಸು ಕೇಳಿಬರುತ್ತಿರುವ ನಡುವೆಯೂ 2026ರ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಾಗಿ ಹೇಳಿದ್ದಾರೆ. ತಾವು ರಾಹುಲ್ ಗಾಂಧಿಯೊಂದಿಗೆ ಸಹೋದರ ಬಾಂಧವ್ಯ ಹೊಂದಿರುವುದಾಗಿ ಹೇಳಿದ್ದಾರೆ. ಆದರೆ ಡಿಎಂಕೆ ತನ್ನದೇ ಆದ ಸರ್ಕಾರವನ್ನು ರಚಿಸುತ್ತದೆ ಎಂದು ಸ್ಟಾಲಿನ್ ಪ್ರತಿಪಾದಿಸಿದ್ದಾರೆ. ಡಿಎಂಕೆ ಪಕ್ಷವು 2021ಕ್ಕಿಂತ ಇನ್ನೂ ಹೆಚ್ಚಿನ ಮುನ್ನಡೆ ಸಾಧಿಸುವ ವಿಶ್ವಾಸ ಹೊಂದಿದೆ ಎಂದು ಹೇಳಿದ್ದಾರೆ.

“ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಪ್ರಬಲವಾಗಿದೆ. ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಲಿದೆ. ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಪ್ರಶ್ನೆ ಈಗ ಉದ್ಭವಿಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಷ್ಟೇ ಅಲ್ಲ ಕೇರಳ, ತಮಿಳುನಾಡಲ್ಲೂ ನಡೆದಿದೆ ರಾಜ್ಯಪಾಲರು VS ಸರ್ಕಾರ ಸಂಘರ್ಷ! ಅಲ್ಲಿ ಏನೇನಾಗಿತ್ತು? ಇಲ್ಲಿದೆ ನೋಡಿ

2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ 234 ಸ್ಥಾನಗಳಲ್ಲಿ 133 ಸ್ಥಾನಗಳನ್ನು ಗೆದ್ದು ಸ್ವಂತವಾಗಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿತು. ಅದರ ಮಿತ್ರಪಕ್ಷವಾಗಿ ಸ್ಪರ್ಧಿಸಿದ ಕಾಂಗ್ರೆಸ್ 25 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದಿತು. ಆದರೆ, ಕಾಂಗ್ರೆಸ್​ಗೆ ಯಾವುದೇ ಸಚಿವ ಸ್ಥಾನ ನೀಡಲಾಗಿಲ್ಲ.

ಈ ಬಾರಿ ಕೂಡ ಮಿತ್ರಪಕ್ಷಗಳ ನಡುವೆ ಘರ್ಷಣೆ ಉಂಟಾಗಿದ್ದು, ಕಾಂಗ್ರೆಸ್ ಕಠಿಣ ಚೌಕಾಶಿ ನಡೆಸುತ್ತಿದೆ. ತಮಿಳುನಾಡಿನಲ್ಲಿ ಡಿಎಂಕೆ ತನ್ನನ್ನು ನಿಗ್ರಹಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಬಯಸುತ್ತಿರುವುದಾಗಿ ಹೇಳಿದೆ.

ಇದನ್ನೂ ಓದಿ: ಖಾಸಗಿ ಶಾಲೆಗಳ ಶುಲ್ಕ ವಸೂಲಿಗೆ ಬೀಳುತ್ತಾ ಬ್ರೇಕ್? ತಮಿಳುನಾಡು ಮಾದರಿ ಶಿಕ್ಷಣ ನೀತಿ ಜಾರಿಗೆ ಒತ್ತಾಯ

“ಮೈತ್ರಿಕೂಟದಲ್ಲಿ ಬಿರುಕು ಮೂಡಿಸಲು ಕೆಲವರು ಅಧಿಕಾರ ಹಂಚಿಕೆಯ ವಿಷಯವನ್ನು ಕೆಣಕುತ್ತಿದ್ದಾರೆ. ಆ ತಂತ್ರ ಕೆಲಸ ಮಾಡುವುದಿಲ್ಲ. ಮೈತ್ರಿಕೂಟದಲ್ಲಿನ ಗೊಂದಲದ ವದಂತಿಗಳನ್ನು ಉದ್ದೇಶಪೂರ್ವಕವಾಗಿ ಹರಡಲಾಗುತ್ತಿದೆ. ರಾಜಕೀಯವನ್ನು ಮೀರಿ, ನಾನು ರಾಹುಲ್ ಗಾಂಧಿಯನ್ನು ಸಹೋದರನಂತೆ ನೋಡುತ್ತೇನೆ. ಅವರು ನನ್ನನ್ನು ಸಹ ಅದೇ ರೀತಿ ನೋಡುತ್ತಾರೆ” ಎಂದು ಸ್ಟಾಲಿನ್ ಹೇಳಿದ್ದಾರೆ.

ರಾಹುಲ್ ಗಾಂಧಿ ಕಳೆದ ತಿಂಗಳು ಡಿಎಂಕೆ ಸಂಸದೆ ಕನಿಮೋಳಿ ಅವರನ್ನು ಭೇಟಿಯಾದರು. ಸೀಟು ಹಂಚಿಕೆ ಮಾತುಕತೆಗಳು ಫೆಬ್ರವರಿ 22ರಿಂದ ಔಪಚಾರಿಕವಾಗಿ ಪ್ರಾರಂಭವಾಗಲಿವೆ ಎಂದು ಡಿಎಂಕೆ ಇಂದು ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SA vs AFG: ಎರಡೆರಡು ಸೂಪರ್​ ಓವರ್​ಗೆ ಸಾಕ್ಷಿಯಾದ ಈ ಪಂದ್ಯದಲ್ಲಿ ಏನೆಲ್ಲಾ ಆಯ್ತು? – Kannada News | T20 World Cup 2026: SA vs AFG Creates History with Double Super Over Thriller!

2026 ರ ಟಿ20 ವಿಶ್ವಕಪ್​ನ (2026 T20 World Cup ) 13ನೇ ಪಂದ್ಯ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ (South Africa vs Afghanistan) ನಡುವೆ ನಡೆಯಿತು. ಅಹಮದಾಬಾದ್​ನಲ್ಲಿ ನಡೆದ ಈ ಪಂದ್ಯ ಟಿ20 ವಿಶ್ವಕಪ್​ ಇತಿಹಾಸದಲ್ಲೇ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಏಕೆಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಎರಡೆರಡು ಸೂಪರ್ ಓವರ್​ಗಳು ನಡೆದಿದ್ದು ಇದೇ ಮೊದಲ ಬಾರಿಗೆ. ಈ ದಾಖಲೆಗೆ ಕಾರಣವಾಗಿದ್ದು, ಆಫ್ರಿಕಾ ಹಾಗೂ ಅಫ್ಘನ್ ತಂಡದ ರಣರೋಚಕ ಹೋರಾಟ. ಹಾಗಿದ್ದರೆ ಈ ಪಂದ್ಯದಲ್ಲಿ ಏನೆಲ್ಲ ಆಯ್ತು? ಎರಡೆರಡು ಸೂಪರ್ ಓವರ್​ಗಳಲ್ಲಿ ಉಭಯ ತಂಡಗಳ ಪ್ರದರ್ಶನ ಹೇಗಿತ್ತು? ಕೊನೆಯ ಆಫ್ರಿಕಾ ಗೆಲುವು ಸಾಧಿಸಲು ಕಾರಣವಾಗಿದ್ದೇನು ಎಂಬುದನ್ನು ನೋಡುವುದಾದರೆ..

ಮೊದಲಿಗೆ ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಪ್ರಿಕಾ 187 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ 187 ರನ್ ಬಾರಿಸಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿತು. ಹೀಗಾಗಿ ಸೂಪರ್​ ಓವರ್​ನತ್ತ ಸಾಗಿದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್‌ ಮಾಡಬೇಕಾಯಿತು.

ಮೊದಲ ಸೂಪರ್ ಓವರ್: ಅಫ್ಘಾನಿಸ್ತಾನದ ಬ್ಯಾಟಿಂಗ್

ಅದರಂತೆ ಅಫ್ಘನ್ ಪರ ಅಜ್ಮತುಲ್ಲಾ ಒಮರ್ಜೈ ಹಾಗೂ ರಹಮಾನುಲ್ಲಾ ಗುರ್ಬಾಜ್ ಇನ್ನಿಂಗ್ಸ್ ಆರಂಭಿಸಿದರು. ಇತ್ತ ಆಫ್ರಿಕಾ ಪರ ಲುಂಗಿ ಎಂಗಿಡಿ ಬೌಲಿಂಗ್ ಆರಂಭಿಸಿದರು. ಸ್ಟ್ರೈಕ್​ನಲ್ಲಿದ್ದ ಒಮರ್ಜೈ, ಮೊದಲ ಎಸೆತದಲ್ಲಿ ಬೌಂಡರಿ ಹಾಗೂ 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಮೂರನೇ ಎಸೆತದಲ್ಲಿ 1 ರನ್ ಬಂದರೆ, 4ನೇ ಎಸೆತದಲ್ಲೂ 1 ರನ್ ಬಂತು. ಐದನೇ ಎಸೆತವನ್ನು ಒಮರ್ಜೈ ಬೌಂಡರಿಗಟ್ಟಿದರೆ, ಕೊನೆಯ ಎಸೆತದಲ್ಲಿ 1 ರನ್ ಬಂತು. ಹೀಗಾಗಿ ಅಫ್ಘನ್ ತಂಡ ಮೊದಲ ಸೂಪರ್ ಓವರ್​ನಲ್ಲಿ 17 ರನ್ ಕಲೆಹಾಕಿತು.

ದಕ್ಷಿಣ ಆಫ್ರಿಕಾದ ಬ್ಯಾಟಿಂಗ್

ಗೆಲುವಿಗೆ 18 ರನ್ ಗುರಿ ಬೆನ್ನಟ್ಟಿದ ಆಫ್ರಿಕಾ ಪರ ಬ್ರೆವಿಸ್ ಹಾಗೂ ಮಿಲ್ಲರ್ ಇನ್ನಿಂಗ್ಸ್ ಆರಂಭಿಸಿದರೆ, ಅಫ್ಘನ್ ಪರ ಫಾರೂಕಿ ಬೌಲಿಂಗ್ ಮಾಡಿದರು. ಮೊದಲ ಎಸೆತದಲ್ಲಿ ಮಿಲ್ಲರ್ ಸಿಂಗಲ್ ತೆಗೆದುಕೊಂಡರು. ಎರಡನೇ ಎಸೆತದಲ್ಲಿ ಸ್ಟ್ರೈಕ್​ಗೆ ಬಂದ ಬ್ರೆವಿಸ್ ಭರ್ಜರಿ ಸಿಕ್ಸರ್ ಬಾರಿಸಿದರು. ಆದರೆ ಮೂರನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಈ ಹಂತದಲ್ಲಿ ಆಫ್ರಿಕಾ ಗೆಲುವಿಗೆ 3 ಎಸೆತಗಳಲ್ಲಿ 11 ರನ್ ಬೇಕಿದ್ದವು. ಬ್ರೆವಿಸ್ ಔಟಾದ ಬಳಿಕ ಬಂದ ಸ್ಟಬ್ಸ್ 4 ಎಸೆತವನ್ನು ಬೌಂಡರಿಗಟ್ಟಿದರು. ಆದರೆ 5ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಹೀಗಾಗಿ ಕೊನೆಯ ಎಸೆತದಲ್ಲಿ ಗೆಲುವಿಗೆ 7 ರನ್ ಬೇಕಿದ್ದವು. ಇತ್ತ ಕೊನೆಯ ಎಸೆತವನ್ನು ಸ್ಟಬ್ಸ್ ಸಿಕ್ಸರ್​ಗಟ್ಟಿದರು. ಹೀಗಾಗಿ ಪಂದ್ಯ ಮತ್ತೆ ಟೈ ಆಯಿತು.

ಎರಡನೇ ಸೂಪರ್ ಓವರ್: ದಕ್ಷಿಣ ಆಫ್ರಿಕಾದ ಬ್ಯಾಟಿಂಗ್

ಪಂದ್ಯ ಮತ್ತೆ ಟೈ ಆದ ಕಾರಣ ಎರಡನೇ ಸೂಪರ್ ಓವರ್ ನಡೆಸಲಾಯಿತು. ಈ ಬಾರಿ ಆಫ್ರಿಕಾ ಮೊದಲು ಬ್ಯಾಟಿಂಗ್‌ ಮಾಡಿತು. ತಂಡದ ಪರ ಮಿಲ್ಲರ್ ಹಾಗೂ ಸ್ಟಬ್ಸ್ ಇನ್ನಿಂಗ್ಸ್ ಆರಂಭಿಸಿದರೆ, ಅಫ್ಘನ್ ಪರ ಅಜ್ಮತುಲ್ಲಾ ಒಮರ್ಜೈ ಬೌಲಿಂಗ್ ಮಾಡಿದರು. ಮೊದಲ ಎಸೆತವನ್ನು ಸಿಕ್ಸರ್​ಗಟ್ಟಿದ ಸ್ಟಬ್ಸ್ ಎರಡನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ನಂತರ ಸ್ಟ್ರೈಕ್​ಗೆ ಬಂದ ಮಿಲ್ಲರ್ ಮೂರನೇ ಎಸೆತದಲ್ಲಿ 2 ರನ್ ತೆಗೆದುಕೊಂಡರೆ, ಆ ಬಳಿಕ ಸತತ 2 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲಿ ಎರಡು ಬಂದವು. ಹೀಗಾಗಿ ಆಫ್ರಿಕಾ 23 ರನ್ ಕಲೆಹಾಕಿತು.

SA vs AFG: ಅಬ್ಬಬ್ಬಾ ಎಂಥಾ ಪಂದ್ಯ! 2ನೇ ಸೂಪರ್​ ಓವರ್​ನಲ್ಲಿ ಅಫ್ಘನ್ ಮಣಿಸಿದ ಆಫ್ರಿಕಾ

ಅಫ್ಘಾನಿಸ್ತಾನದ ಬ್ಯಾಟಿಂಗ್

ಗೆಲುವಿಗೆ 24 ರನ್​ಗಳ ಗುರಿ ಬೆನ್ನಟ್ಟಿದ ಅಫ್ಘನ್ ಪರ ಅನುಭವಿ ನಬಿ ಹಾಗೂ ಒಮರ್ಜೈ ಬ್ಯಾಟಿಂಗ್‌ ಆರಂಭಿಸಿದರೆ, ಆಫ್ರಿಕಾ ಪರ ಸ್ಪಿನ್ನರ್ ಕೇಶವ್ ಮಹಾರಾಜ್ ಬೌಲಿಂಗ್ ಮಾಡಿದರು. ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ ನಬಿ ಅದರಲ್ಲಿ ವಿಫಲರಾದರು. ನಂತರ ಎರಡನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಹೀಗಾಗಿ ಕೊನೆಯ 4 ಎಸೆತಗಳಲ್ಲಿ ಅಫ್ಘನ್ ಗೆಲುವಿಗೆ 24 ರನ್ ಬೇಕಿದ್ದವು. ಈ ವೇಳೆ ಬ್ಯಾಟಿಂಗ್​ಗೆ ಬಂದ ಗುರ್ಬಾಜ್ ಸತತ ಮೂರು ಎಸೆತಗಳಲ್ಲಿ 3 ಸಿಕ್ಸರ್ ಬಾರಿಸಿ ಪಂದ್ಯವನ್ನು ರೋಚಕಗೊಳಿಸಿದರು.

ಇದರಿಂದ ಒತ್ತಡಕ್ಕೊಳಗಾದ ಮಹಾರಾಜ್ 6ನೇ ಎಸೆತವನ್ನು ವೈಡ್ ಮಾಡಿದರು. ಹೀಗಾಗಿ ಅಫ್ಘನ್ ತಂಡಕ್ಕೆ ಕೊನೆಯ ಎಸೆತದಲ್ಲಿ 5 ರನ್ ಬೇಕಿದ್ದವು. ಆದರೆ ಕೊನೆಯ ಎಸೆತದಲ್ಲಿ ಗುರ್ಬಾಜ್​ಗೆ ಯಾವುದೇ ರನ್ ಕಲೆಹಾಕಲು ಸಾಧ್ಯವಾಗದೆ ಕ್ಯಾಚ್ ನೀಡಿ ಔಟಾದರು. ಅಂತಿಮವಾಗಿ ಅಫ್ಘನ್ ತಂಡ 4 ರನ್​ಗಳಿಂದ ಪಂದ್ಯ ಸೋತಿತು. ಒಂದು ವೇಳೆ ಅಫ್ಘನ್ ಪರ ಗುರ್ಬಾಜ್ ಮೊದಲೇ ಬ್ಯಾಟಿಂಗ್​ಗೆ ಬಂದಿದ್ದರೆ ಪಂದ್ಯದ ಫಲಿತಾಂಶ ಬೇರೆಯದ್ದೇ ಆಗುವ ಸಾಧ್ಯತೆಗಳಿದ್ದವು. ಆದರೆ ಅದು ಆಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:35 pm, Wed, 11 February 26

Source link

SA vs AFG: ಅಬ್ಬಬ್ಬಾ ಎಂಥಾ ಪಂದ್ಯ! 2ನೇ ಸೂಪರ್​ ಓವರ್​ನಲ್ಲಿ ಅಫ್ಘನ್ ಮಣಿಸಿದ ಆಫ್ರಿಕಾ – Kannada News | T20 World Cup: SA vs AFG Thriller Double Super Over Win for Proteas in Ahmedabad!

ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ (South Africa vs Afghanistan) ನಡುವಿನ 2026 ರ ಟಿ20 ವಿಶ್ವಕಪ್ (T20 World Cup 2026) ಪಂದ್ಯ ರಣರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಎರಡೆರಡು ಸೂಪರ್​ ಓವರ್​ಗಳು ನಡೆದ ಈ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ದಕ್ಷಿಣ ಆಫ್ರಕಾ ತಂಡ ಯಶಸ್ವಿಯಾಯಿತು. ವಾಸ್ತವವಾಗಿ ಸೂಪರ್​ ಓವರ್​ಗೂ ಮುನ್ನವೇ ದಕ್ಷಿಣ ಆಫ್ರಿಕಾ ತಂಡಕ್ಕೆ ಸುಲಭ ಜಯ ಧಕ್ಕಿತ್ತು. ಆದರೆ 20ನೇ ಓವರ್​ನಲ್ಲಿ ಕಗಿಸೋ ರಬಾಡ ಮಾಡಿದ ಎರಡೆರಡು ನೋ ಬಾಲ್​ಗಳು ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದಲ್ಲದೆ ಪಂದ್ಯವನ್ನು ಸೂಪರ್​ ಓವರ್​ಗೆ ತಳ್ಳಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ 187 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಅಫ್ಘನ್ ಕೂಡ ಇದೇ ಮೊತ್ತವನ್ನು ಕಲೆಹಾಕಿತು. ಇದರಿಂದ ಪಂದ್ಯ ಸೂಪರ್​ ಓವರ್​ಗೆ ಸಾಗಿತು. ಸೂಪರ್​ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘನ್ 17 ರನ್ ಕಲೆಹಾಕಿದರೆ, ಇತ್ತ ಆಫ್ರಿಕಾ ಕೂಡ 17 ರನ್ ಬಾರಿಸಿತು. ಇದರಿಂದ ಪಂದ್ಯ ಎರಡನೇ ಸೂಪರ್​ ಓವರ್​ಗೆ ಸಾಗಿತು, ಎರಡನೇ ಸೂಪರ್​ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ 23 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘನ್ 19 ರನ್ ಕಲೆಹಾಕಲಷ್ಟೇ ಶಕ್ತವಾಗಿ ಪಂದ್ಯವನ್ನು ಸೋತಿತು.​

187 ರನ್ ಕಲೆಹಾಕಿದ ಆಫ್ರಿಕಾ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 187 ರನ್ ಕಲೆಹಾಕಿತು. ತಂಡದ ಪರ ಅಮೋಘ ಪ್ರದರ್ಶನ ನೀಡಿದ ಕ್ವಿಂಟನ್ ಡಿ ಕಾಕ್ ಮತ್ತು ರಯಾನ್ ರಿಕಲ್ಟನ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಡಿ ಕಾಕ್ 41 ಎಸೆತಗಳಲ್ಲಿ 59 ರನ್ ಗಳಿಸಿದರೆ, ರಯಾನ್ ರಿಕಲ್ಟನ್ ಕೇವಲ 28 ಎಸೆತಗಳಲ್ಲಿ 61 ರನ್​ಗಳ ಇನ್ನಿಂಗ್ಸ್ ಆಡಿದರು. ಡೆವಾಲ್ಡ್ ಬ್ರೆವಿಸ್ ಹಾಗೂ ಡೇವಿಡ್ ಮಿಲ್ಲರ್ ಕೂಡ ಕ್ರಮವಾಗಿ 23 ಮತ್ತು 20 ರನ್​ಗಳ ಕಾಣಿಕೆ ನೀಡುವ ಮೂಲಕ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.

ಕೊನೆಯವರೆಗೂ ಹೋರಾಟ ಬಿಡದ ಅಫ್ಘನ್

ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕ ರಹಮಾನುಲ್ಲಾ ಗುರ್ಬಾಜ್ 42 ಎಸೆತಗಳಲ್ಲಿ 7 ಸಿಕ್ಸರ್ ಸಹಿತ 84 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆದರೆ ಗುರ್ಬಾಜ್ ಔಟಾದ ಬಳಿಕ ತಂಡದ ಮಧ್ಯಮ ಕ್ರಮಾಂಕ ಆಘಾತ ಅನುಭವಿಸಿತು. ನೈಬ್ ಹಾಗೂ ಅಟ್ಟಲ್ ಒಂದೇ ಓವರ್​ನಲ್ಲಿ ಶೂನ್ಯಕ್ಕೆ ಔಟಾದರು. ಒಮರ್ಜೈ ಹಾಗೂ ರಶೀದ್ ಖಾನ್ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ವಿಕೆಟ್ ಒಪ್ಪಿಸಿದರು. ಇದರಿಂದ ಅಫ್ಘನ್ ತಂಡದ ಸೋಲು ಖಚಿತ ಎನ್ನಲಾಗುತಿತ್ತು.

ರಬಾಡ ಮಾಡಿದ ಎಡವಟ್ಟು

ಇದಕ್ಕೆ ಪೂರಕವಾಗಿ ಕೊನೆಯ ಓವರ್​ನಲ್ಲಿ ಅಫ್ಘನ್ ಗೆಲುವಿಗೆ 12 ರನ್ ಬೇಕಿದ್ದವು, ಕೈಯಲ್ಲಿ ಉಳಿದಿದ್ದು ಕೊನೆಯ ವಿಕೆಟ್ ಮಾತ್ರ. ಸ್ಟ್ರೈಕ್​ನಲ್ಲಿದ್ದ ನೂರ್ ಅಹ್ಮದ್ ರಬಾಡ ಬೌಲ್ ಮಾಡಿದ 20ನೇ ಓವರ್​ನ ಮೊದಲ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿ ಕ್ಯಾಚ್ ನೀಡಿದರು. ಇಲ್ಲಿಗೆ ಅಫ್ಘನ್ ಇನ್ನಿಂಗ್ಸ್ ಅಂತ್ಯವಾಯಿತು ಎಂದುಕೊಳ್ಳುವಾಗಲೇ ಅಂಪೈರ್​ಗಳು ನೋ ಬಾಲ್ ಎಂಬ ಸಿಗ್ನಲ್ ನೀಡುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು.

ಇದರಿಂದ ಬದುಕುಳಿದ ನೂರ್ ಎರಡನೇ ಎಸೆತವನ್ನು ಸಿಕ್ಸರ್​ಗಟ್ಟಿದರು. ಹೀಗಾಗಿ ಉಳಿದ ಮೂರು ಎಸೆತಗಳಲ್ಲಿ 4 ರನ್ ಬೇಕಿದ್ದವು. ಇತ್ತ ರಬಾಡ ನಾಲ್ಕನೇ ಎಸೆತವನ್ನು ಸಹ ನೋ ಬಾಲ್ ಎಸೆದರು. ಈ ಎಸೆತದಲ್ಲಿ ಅಫ್ಘನ್ 2 ರನ್ ಕಲೆಹಾಕಿತು. ಒಟ್ಟಾರೆ ಮೂರು ರನ್ ಬಂದವು. ಅಂತಿಮವಾಗಿ 2 ಎಸೆತಗಳಲ್ಲಿ 2 ರನ್ ಬೇಕಿದ್ದವು. ಸ್ಟೈಕ್​ನಲ್ಲಿದ್ದ ನೂರ್ ಐದನೇ ಎಸೆತವನ್ನು ವೈಡ್​ ಲಾಂಗ್ ಆಫ್​ನತ್ತ ಆಡಿ ಎರಡು ರನ್​ಗೆ ಓಡಿದರು. ಆದರೆ ನಾನ್ ಸ್ಟ್ರೈಕ್​ನಲ್ಲಿದ್ದ ಫಜಲ್ಹಕ್ ಫಾರೂಕಿ ರನ್ ಓಡುವುದರಲ್ಲಿ ತೋರಿದ ಉದಾಸೀನತೆ ತಂಡವನ್ನು ಸೋಲಿನ ದವಡೆಗೆ ತಳ್ಳಿತು.

T20 World Cup: ಟಿ20 ವಿಶ್ವಕಪ್​ನಿಂದ 7 ಸ್ಟಾರ್ ಆಟಗಾರರು ಔಟ್

ಸೂಪರ್​ ಓವರ್​ನಲ್ಲಿ ಗೆದ್ದ ಆಫ್ರಿಕಾ

ಹೀಗಾಗಿ ಐದನೇ ಎಸೆತದಲ್ಲಿ ಅಫ್ಘನ್ ತಂಡಕ್ಕೆ 1 ರನ್ ಸಿಕ್ಕರೆ, ಇತ್ತ ದಕ್ಷಿಣ ಆಫ್ರಿಕಾ ಕೊನೆಯ ವಿಕೆಟ್ ಉರುಳಿಸಿ ಪಂದ್ಯವನ್ನು ಟೈನತ್ತ ಕೊಂಡೊಯ್ಯಿತು. ಪಂದ್ಯ ಟೈ ಆದ ಕಾರಣ ಅಂಪೈರ್​ಗಳು ಸೂಪರ್​ ಓವರ್​ ನಡೆಸಲು ಮುಂದಾದರು. ಒಂದಲ್ಲ ಅಂತಾ ಎರಡೆರಡು ಸೂಪರ್ ಓವರ್​ಗಳಿಗೆ ಸಾಕ್ಷಿಯಾದ ಈ ಪಂದ್ಯವನ್ನು ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ ಗೆದ್ದುಕೊಂಡಿತು.

Published On – 3:21 pm, Wed, 11 February 26

Source link

ಬೆಂಗಳೂರಿನಲ್ಲಿ ಶಾಲಾ ಬಸ್​ ಹರಿದು ಮಕ್ಕಳಿಬ್ಬರು ಸಾವು: ಹಾಲು ತರಲು ಹೊರಟ್ಟಿದ್ದವರು ದುರಂತ ಅಂತ್ಯ – Kannada News | Bengaluru School Bus Accident: Two Children Die in Tragic Thanisandra Crash

ಬೆಂಗಳೂರು, ಫೆಬ್ರವರಿ 11: ಶಾಲಾ ಬಸ್​ ಹರಿದು (School Bus Accident) ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ನಗರದ ಥಣಿಸಂದ್ರದ ಪೊಲೀಸ್ ಕ್ವಾರ್ಟರ್ಸ್​​ ಬಳಿ ನಡೆದಿದೆ. ವರ್ಷಾ(2) ಹಾಗೂ ಭಾನು(4) ಮೃತ ಮಕ್ಕಳು. ಖಾಸಗಿ ಶಾಲೆಗೆ ಸೇರಿದ ಬಸ್ ಬೈಕ್​​ಗೆ​ ಡಿಕ್ಕಿ ಹೊಡೆದು ಮಕ್ಕಳು ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರ ಡಿಸಿಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹೆಣ್ಣೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಯಾದಗಿರಿ ಮೂಲದ ನಾಗನಗೌಡ ಅವರು ಸಿಎಆರ್​ನಲ್ಲಿ ಕಾನ್ಸ್​ಟೇಬಲ್​​ ಆಗಿದ್ದಾರೆ. ತಮ್ಮ ಮಗಳು ವರ್ಷ ಮತ್ತು ಅಣ್ಣನ ಮಗಳಾದ ಭಾನು ಅನ್ನು ಬೈಕ್​ನಲ್ಲಿ ಕೂರಿಸಿಕೊಂಡು ಹಾಲು ತರಲು ಹೋಗುತ್ತಿದ್ದರು. ಇದೇ ವೇಳೆ ಸ್ಕೂಲ್ ಟೈಮ್​​ ಆಗಿದ್ದರಿಂದ ಬಸ್ ಮಕ್ಕಳ ಪಿಕಪ್​ಗೆ ತೆರಳುತ್ತಿತ್ತು. ಬಸ್​ ಬರುವುದನ್ನು ಕಂಡು ನಾಗನಗೌಡ ಅವರು ಬೈಕ್ ನಿಲ್ಲಿಸಿದ್ದರು.

ಇದನ್ನೂ ಓದಿ: ಬೊಲೆರೋಗೆ ಹಿಂದಿನಿಂದ ಡಿಕ್ಕಿ ಹೊಡೆದು ಅರ್ಧ ಕಿಲೋಮೀಟರ್ ತಳ್ಳಿಕೊಂಡು ಹೋಗಿ ಉರುಳಿಬಿದ್ದ ಕಂಟೇನರ್!

ಹೆಣ್ಣೂರು ಸಂಚಾರಿ ಠಾಣೆ ವ್ಯಾಪ್ತಿಯ ಥಣಿಸಂದ್ರ ಬಳಿ ಶಾಲಾ ಬಸ್​ ಯೂಟರ್ನ್ ತೆಗೆದುಕೊಳ್ಳುವಾಗ ಬೈಕ್​ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್​ನಿಂದ ಕೆಳಗೆ ಬಿದ್ದ ಇಬ್ಬರು ಮಕ್ಕಳ ಮೇಲೆ ಬಸ್ ಹಿಂಬದಿ ಚಕ್ರ ಹರಿದಿದೆ. ಕೂಡಲೇ ಮಕ್ಕಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಕಾನ್ಸ್​ಟೇಬಲ್ ನಾಗನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಶಾಲಾ ಬಸ್ ಚಾಲಕ ವಶಕ್ಕೆ 

ಇನ್ನು ಇಬ್ಬರು ಮಕ್ಕಳ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆ ಬಳಿ ಕುಟುಂಬಸ್ಥರು ಜಮಾಯಿಸಿದ್ದು, ಮಕ್ಕಳನ್ನ‌ ಕಳೆದುಕೊಂಡ ಹಿನ್ನಲೆ  ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಹೆಣ್ಣೂರು ಸಂಚಾರ ಪೊಲೀಸರು ಶಾಲಾ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಅಂಡರ್​ಪಾಸ್​ಗೆ KSRTC ಬಸ್​ ಡಿಕ್ಕಿ: 19 ಪ್ರಯಾಣಿಕರಿಗೆ ಗಾಯ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೋಡಿಹಳ್ಳಿ ಬಳಿ ಅಂಡರ್​ಪಾಸ್​ಗೆ ಕೆಎಸ್​​ಆರ್​ಟಿಸಿ ಬಸ್ ಡಿಕ್ಕಿಯಾಗಿ 19 ಪ್ರಯಾಣಿಕರಿಗೆ ಗಾಯಗಳಾಗಿರುವಂತಹ ಘಟನೆ ನಡೆದಿದೆ. ಬೆಂಗಳೂರಿನಿಂದ ವಿರಾಜಪೇಟೆಗೆ ಕೆಎಸ್​ಆರ್​ಟಿಸಿ ಬಸ್ ಹೊರಟಿತ್ತು. ಗಾಯಾಳುಗಳಿಗೆ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮದ್ದೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರು: ಮಾರ್ಚ್ 5ರಂದು ಬೃಹತ್ ಹೋರಾಟಕ್ಕೆ ಕರೆ – Kannada News | Contractors Call for Massive Strike on March 5 Over Delayed Bill Payments

ಗುತ್ತಿಗೆದಾರರ ಸಂಘದ ಪೂರ್ವಭಾವಿ ಸಭೆImage Credit source: tv9 kannada

ಮಂಡ್ಯ, ಫೆಬ್ರವರಿ 11: ರಾಜ್ಯ ಸರ್ಕಾರ ಬಿಲ್ ಬಾಕಿ ಉಳಿಸಿಕೊಂಡ ವಿಚಾರವಾಗಿ ಸರ್ಕಾರದ ವಿರುದ್ಧ ಗುತ್ತಿಗೆದಾರರು ಸಮರಕ್ಕೆ ಮುಂದಾಗಿದ್ದಾರೆ. ಸಾವಿರಾರು ಕೋಟಿ ರೂ ಬಾಕಿ ಬಿಲ್ ಬಿಡುಗಡೆ (Pending Bills) ಮಾಡದ ಹಿನ್ನೆಲೆ ರಾಜ್ಯ ಕಾಂಗ್ರೆಸ್​​ ಸರ್ಕಾರದ ವಿರುದ್ಧ ತಿರುಗಿಬಿದ್ದ ಗುತ್ತಿಗೆದಾರರು, ಮಾರ್ಚ್ 5ರಂದು ಬೃಹತ್ ಹೋರಾಟಕ್ಕೆ ಕರೆ (Contractors Protest) ನೀಡಿದ್ದಾರೆ.

ಮಂಡ್ಯದ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾರ್ಚ್ 5ರಂದು ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದೆ.

ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ

ಸಭೆ ಬಳಿಕ ಮಾತನಾಡಿದ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್, ಸರ್ಕಾರ ಗುತ್ತಿಗೆದಾರರ 37 ಸಾವಿರ ಕೋಟಿ ರೂ ಬಾಕಿ ಉಳಿಸಿಕೊಂಡಿದೆ. ಮಂಡ್ಯ ಜಿಲ್ಲೆಯಲ್ಲಿ ಗುತ್ತಿಗೆದಾರರ 950 ಕೋಟಿ ರೂ ಹಣ ಬಾಕಿ ಇದೆ. ಹೀಗಾಗಿ ಗುತ್ತಿಗೆದಾರರಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡಿದ್ರೂ ನಮಗೆ ದುಡ್ಡು ಕೊಡುತ್ತಿಲ್ಲ. ಸಾಲಸೋಲ ಮಾಡಿ ಕೆಲಸ ಮಾಡಿದ್ದೇವೆ, ಈಗ ಬಡ್ಡಿ ಕಟ್ಟಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಕಿ ಬಿಲ್ ಕ್ಲಿಯರ್ ಮಾಡದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ

ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಿದರೆ ಯಾರೂ ಆಲಿಸುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಈಗ ಕಮಿಷನ್ ಹಾವಳಿ ಹೆಚ್ಚಾಗಿದೆ. ಈ ಹಿಂದೆ ನಮ್ಮ ಬೆನ್ನಿಗೆ ನಿಂತು ಈಗ ಅವರೇ ಭ್ರಷ್ಟರಾಗಿದ್ದಾರೆ. ನಮ್ಮಿಂದಲೇ ಅಧಿಕಾರಕ್ಕೆ ಬಂದವರು ನಮ್ಮನ್ನೇ ಕಡೆಗಣಿಸಿದ್ದಾರೆ. ಸರ್ಕಾರ ಎಚ್ಚೆತ್ತು ತಕ್ಷಣವೇ ಬಾಕಿ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಸರ್ಕಾರಕ್ಕೆ ಆರ್.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಗುತ್ತಿಗೆದಾರರಿಗೆ ಯಾಕೆ ಬಿಲ್ ಬಿಡುಗಡೆಯಾಗುತ್ತಿಲ್ಲ? ಕಾರಣ ಕೊಟ್ಟ ಹಣಕಾಸು ಇಲಾಖೆ ಕಾರ್ಯದರ್ಶಿ

ಈ ವಿಚಾರವಾಗಿ ಇತ್ತೀಚಿನ ರಾಜ್ಯ ಗುತ್ತಿಗೆದಾರರ ಪ್ರತಿನಿಧಿ ಸಂಘವು ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಸುಮಾರು 33 ಸಾವಿರ ಕೋಟಿ ರೂ ಮೊತ್ತದ ಪಾವತಿಗಳು ಇನ್ನೂ ಬಾಕಿ ಉಳಿದಿವೆ ಎಂದು ಗಮನಸೆಳೆದಿದ್ದರು. ಜೊತೆಗೆ ತಕ್ಷಣವೇ ಈ ಬಾಕಿ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸಂಘ ಒತ್ತಾಯಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಲ್ಲಿ ಮೂರುವರೆ ಗಂಟೆಗೆ ಒಂದು ಆತ್ಮಹತ್ಯೆ: ಬೆಚ್ಚಿ ಬೀಳಿಸುವಂತಿದೆ ಅಂಕಿ-ಅಂಶ – Kannada News | Suicide Crisis in Bengaluru: One Life Lost Every 3.5 Hours, Says Report

ಬೆಂಗಳೂರು, ಫೆಬ್ರವರಿ 11: ಐಟಿ ಸಿಟಿ ಬೆಂಗಳೂರಲ್ಲಿ ಆತ್ಮಹತ್ಯೆ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆ ಕಾಣುತ್ತಿದ್ದು, ಅಂಕಿ-ಅಂಶಗಳು ಬೆಚ್ಚಿಬೀಳಿಸುವಂತಿವೆ. ವರದಿಗಳ ಪ್ರಕಾರ, ನಗರದಲ್ಲಿ ಸರಾಸರಿ ಮೂರುವರೆ ಗಂಟೆಗೆ ಒಂದು ಆತ್ಮಹತ್ಯೆ ನಡೆಯುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 9,450 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ವರ್ಷಕ್ಕೆ ಸರಾಸರಿ ಎರಡು ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಗೃಹ ಇಲಾಖೆಯ ಮಾಹಿತಿಯಂತೆ, ಪ್ರತಿದಿನವೂ ಸುಮಾರು ಆರುರಿಂದ ಏಳು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ.

ಬೆಂಗಳೂರಲ್ಲಿ ನಡೆದ ಆತ್ಮಹತ್ಯೆ ಕೇಸ್​​ಗಳ ಅಂಕಿ-ಅಂಶ

ವರ್ಷ ಪ್ರಕರಣಗಳ ಸಂಖ್ಯೆ
2022 2,370
2023 2,313
2024 2,403
2025 2,300+

ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಲಾ ಬಸ್​ ಹರಿದು ಮಕ್ಕಳಿಬ್ಬರು ಸಾವು; ಹಾಲು ತರಲು ಹೊರಟ್ಟಿದ್ದವರು ದುರಂತ ಅಂತ್ಯ

ಆತ್ಮಹತ್ಯೆ ಪ್ರಕರಣ ಏರಿಕೆಗೆ ಕಾರಣಗಳೇನು?

ತಜ್ಞರ ಅಭಿಪ್ರಾಯದಂತೆ, ಮಾನಸಿಕ ಆರೋಗ್ಯ ಸಮಸ್ಯೆಗಳು, ಕುಟುಂಬ ಕಲಹಗಳು, ಆರ್ಥಿಕ ಸಂಕಷ್ಟ, ಸಂಬಂಧಗಳ ಭಂಗ ಹಾಗೂ ಭಾವನಾತ್ಮಕ ಒತ್ತಡಗಳು ಆತ್ಮಹತ್ಯೆ ಕೇಸ್​​ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (NIMHANS) ನೀಡಿದ ಮಾಹಿತಿಯಂತೆ, ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಸುಮಾರು ಮೂರನೇ ಒಂದು ಭಾಗ ಜನರಿಗೆ ಮಾನಸಿಕ ಅಸ್ವಸ್ಥತೆಗಳ ಹಿನ್ನೆಲೆ ಇದೆ. ಉಳಿದವರಲ್ಲಿ ಆರ್ಥಿಕ ಸಮಸ್ಯೆಗಳು, ರಿಲೇಶನ್​​ಸೀಪ್​​ ಬ್ರೇಕಪ್​​ ಹಾಗೂ ತೀವ್ರ ಭಾವನಾತ್ಮಕ ಒತ್ತಡ ಪ್ರಮುಖ ಕಾರಣಗಳಾಗಿವೆ.

ನಗರದಲ್ಲಿ ನಡೆದ ಬಹುತೇಕ ಆತ್ಮಹತ್ಯೆ ಪ್ರಕರಣಗಳನ್ನು ಗಮನಿಸಿದಾಗ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟವರ ಸಂಖ್ಯೆಯೇ ಬಹಳ ದೊಡ್ದದಿದೆ. ಒಟ್ಟು ಪ್ರಕರಣಗಳಲ್ಲಿ ಶೇಕಡಾ 86ರಷ್ಟು ಮಂದಿ ಪ್ರಾಣ ಕಳೆದುಕೊಳ್ಳಲು ಈ ವಿಧಾನವನ್ನೇ ಆಯ್ದುಕೊಂಡಿದ್ದಾರೆ. ವಿಷ ಸೇವನೆ ಮತ್ತು ಎತ್ತರದ ಕಟ್ಟಡಗಳಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಕೇಸ್​​ಗಳು ನಂತರದ ಸ್ಥಾನದಲ್ಲಿವೆ. ರೈಲು ಹಳಿಗಳ ಮೇಲೆ ಜಿಗಿಯುವುದು, ಬೆಂಕಿಯಿಂದ ಸುಟ್ಟುಕೊಂಡು ಮೃತಪಟ್ಟ ಪ್ರಕರಣಗಳೂ ಹೆಚ್ಚಿವೆ ಎನ್ನಲಾಗಿದೆ.

ಸಹಾಯವಾಣಿ ಆರಂಭ

ಆತ್ಮಹತ್ಯೆ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, NIMHANS ವತಿಯಿಂದ ಟೆಲಿ-ಮನಸ್ (Tele-MANAS) ಹೆಲ್ಪ್‌ಲೈನ್ ಆರಂಭಿಸಲಾಗಿದೆ. ಆತ್ಮಹತ್ಯೆ ಯೋಚನೆಗಳು ಅಥವಾ ಮಾನಸಿಕ ಸಂಕಷ್ಟ ಎದುರಿಸುತ್ತಿರುವವರು ತಕ್ಷಣ ಸಹಾಯಕ್ಕಾಗಿ 14416 / 1800-891-4416 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಟೈಮ್ಸ್​​ ನೌ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:05 pm, Wed, 11 February 26

Source link

ಬಜೆಟ್ ನಡುವೆ ಶಾಸಕರಿಂದ ವಿದೇಶ ಪ್ರವಾಸ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆಶಿ ಆಪ್ತ – Kannada News | DK Shivakumar Close Aide HC Balakrishna Reacts On Karnataka Congress MLAs foreign trip

ನವದೆಹಲಿ, (ಫೆಬ್ರವರಿ 11): ಕರ್ನಾಟಕ ಕಾಂಗ್ರೆಸ್​​​ನಲ್ಲಿ ಕುರ್ಚಿ ಕಿತ್ತಾಟ ಜೋರಾಗಿದ್ದು, ಇದೀಗ ದೆಹಲಿ ಅಂಗಳ ತಲುಪಿದೆ. ಸಿಎಂ ಪಟ್ಟಕ್ಕಾಗಿ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ರಾಹುಲ್​ ಗಾಂಧಿ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಸಿದ್ಧತೆಗಳನ್ನು ನಡೆಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​​ನಲ್ಲಿ ಶಾಸಕರ ವಿದೇಶ ಪ್ರವಾಸ ಭಾರೀ ಸಂಚಲನ ಮೂಡಿಸಿದೆ. ಹೌದು…ಅಧ್ಯಯನ ಹೆಸರಿನಲ್ಲಿ ಕೆಲ ಶಾಸಕರು ಫಾರಿನ್ ಟ್ರಿಪ್ ಹೋಗಲು ಮುಂದಾಗಿದ್ದಾರೆ. ಇನ್ನು ಈ ಬಗ್ಗೆ ಡಿಕೆ ಶಿವಕುಮಾರ್ ಆಪ್ತ ಶಾಸಕ ಎಚ್​​ಸಿ ಬಾಲಕೃಷ್ಣ ಮಾತನಾಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Source link

‘ವಲವಾರ’ ನೋಡಲು ಹೋಗಿ: ‘ಯಾವ ನಾಯಿಗೆ ಬೇಕು ನಿನ್ನ ಟಿಕೆಟ್’ ಎನ್ನಿ – Kannada News | Veerakaputra Srinivas supports Kannada movie Valavara viral Facebook post

‘ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರಲ್ಲ’ ಪರಭಾಷೆ ಸಿನಿಮಾಗಳನ್ನು ನೋಡುವ ಕನ್ನಡಿಗರ ಕಾಮನ್ ಡೈಲಾಗ್ ಇದು. ಆದರೆ ಒಳ್ಳೆ ಕನ್ನಡ ಸಿನಿಮಾಗಳು ಬಂದಾಗ ಈ ‘ಸಿನಿಮಾ ಪ್ರೇಮಿ’ಗಳು ಜಾಣ ಕುರುಡು ಪ್ರದರ್ಶಿಸುತ್ತಾರೆ. ಈಗ ಮತ್ತೊಮ್ಮೆ ಇದು ಸಾಬೀತಾಗಿದೆ. ಕನ್ನಡದಲ್ಲಿ ‘ವಲವಾರ’ ಹೆಸರಿನ ಸುಂದರ, ಅಪ್ಪಟ ಕನ್ನಡ ಸಿನಿಮಾ ಒಂದು ಬಿಡುಗಡೆ ಆಗಿದೆ. ಆದರೆ ಮತ್ತದೆ ಸಮಸ್ಯೆ, ಸಿನಿಮಾ ಮಂದಿರಕ್ಕೆ ಜನ ಬರುತ್ತಿಲ್ಲ. ಆದರೆ ಕೆಲವು ನಿಜವಾದ ಸಿನಿಮಾ ಪ್ರೇಮಿಗಳು, ಕನ್ನಡ ಮನಸುಗಳು, ಅಪ್ಪಟ ಕನ್ನಡ ಸಿನಿಮಾಕ್ಕೆ ಎಂದಿನಂತೆ ಈ ಬಾರಿಯೂ ಬೆಂಬಲಿಸುತ್ತಿದ್ದು, ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.

ತಮ್ಮ ಕನ್ನಡದ ಕೆಲಸಗಳು ಹಾಗೂ ವಿಷ್ಣುವರ್ಧನ್ ಸ್ಮಾರಕಕ್ಕಾಗಿ ಹೋರಾಟಗಳಿಂದ ಗುರುತಿಸಿಕೊಂಡಿರುವ ವೀರಕಪುತ್ರ ಶ್ರೀನಿವಾಸ್ ಅವರು ಫೇಸ್​​ಬುಕ್​​ನಲ್ಲಿ ‘ವಲವಾರ’ ಸಿನಿಮಾ ಬಗ್ಗೆ ಪೊಸ್ಟ್ ಒಂದನ್ನು ಹಂಚಿಕೊಂಡಿದ್ದು, ಆ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ‘ವಲವಾರ’ ಸಿನಿಮಾ ವೀಕ್ಷಿಸಿರುವ ವೀರಕಪುತ್ರ ಶ್ರೀನಿವಾಸ್ ಅವರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದು, ಸಿನಿಮಾಕ್ಕೆ ತಾವೇ ಟಿಕೆಟ್ ಕೊಡಿಸುವುದಾಗಿ ಸಹ ಹೇಳಿದ್ದಾರೆ. ಆದರೆ ಅವರಿಂದ ಟಿಕೆಟ್ ಪಡೆಯುವ ಮುನ್ನ ಅವರ ಫೇಸ್​​ಬುಕ್​​ನಲ್ಲಿ ಬರೆದಿರುವ ಪೋಸ್ಟ್ ಒಮ್ಮೆ ಓದಿಕೊಳ್ಳಿ..

ವೀರಕಪುತ್ರ ಶ್ರೀನಿವಾಸ್ ಅವರ ಫೇಸ್​​ಬುಕ್ ಪೋಸ್ಟ್

ಯಾವ ನಾಯಿಗೆ ಬೇಕೋ ನಿನ್ನ ಟಿಕೇಟ್…

ಈ ಸಿನಿಮಾವನ್ನು ಗೆಲ್ಲಿಸಿಕೊಳ್ಳದಿದ್ದ ಮೇಲೆ, ಉತ್ತಮ ಸಿನಿಮಾಗಳು ಬರುತ್ತಿಲ್ಲ ಎಂದು ಆರೋಪಿಸುವ ಹಕ್ಕು ನಮಗಿಲ್ಲ. ಇದು ಸಿನಿಮಾವಲ್ಲ; 70-90 ರ ನಡುವಿನಲ್ಲಿ ಹಳ್ಳಿಯಲ್ಲಿ ಹುಟ್ಟಿದ ಪ್ರತಿ ಬಡವನ ಕತೆ! ಇಲ್ಲಿ ನಿಮ್ಮ ಅಮ್ಮ ನಿಮಗೆ ಹೊಸ ರೂಪದಲ್ಲಿ ಸಿಗುತ್ತಾರೆ. ನೀವಾಕೆಯನ್ನು ಅಪ್ಪಿ ಅಳುವಿರಿ. ನಿಮ್ಮ ಬಾಲ್ಯ ನಿಮಗೆ ಟನ್ ಗಟ್ಟಲೆ ವಾಪಸ್ ಸಿಗುತ್ತದೆ. ನೀವದನ್ನು ಅಪ್ಪಿ ನಗುವಿರಿ. ಆ ಊರು, ಆ ಕೆರೆ, ಆ ಹಸು, ಆ ಹೊಲ, ಆ ಕೋಳಿ, ಅದೊಂದು ಪೊದೆ… ಎಲ್ಲವೂ ನಮ್ಮದೇ! ಒಂದು ಫೀಲ್ ಗುಡ್ ಮೂವಿ.

ಇವತ್ತು ಸಂಜೆ 7.30ಕ್ಕೆ ವೇಗ ಸಿಟಿ ಮಾಲ್ನಲ್ಲಿ ಈ ಸಿನಿಮಾವನ್ನು ನಾನು ಮತ್ತೊಮ್ಮೆ ನಿಮ್ಮ ಜೊತೆ ನೋಡಬೇಕೆನಿಸಿದೆ. ಬರ್ತೀರಾ ಪ್ಲೀಸ್…? ಟಿಕೆಟ್ ನಾನೇ ಕೊಡಿಸುವೆ.

ಅಥವಾ

ಸಂಪತ್ತಿಗೆ ಸವಾಲ್ ಸಿನಿಮಾದ ಡಾ.ರಾಜ್ ಅವರ ಸ್ಟೈಲಿನಲ್ಲಿ ಯಾವ ನಾಯಿಗೇ ಬೇಕೋ ನಿನ್ನ ಟಿಕೆಟ್! ಯಾವ ನಾಯಿಗೆ ಬೇಕೋ… ಅಂತ ಬೈದಾದರೂ ಬಂದು ನಿಮ್ಮದೇ ಹಣದಲ್ಲಿ ಸಿನಿಮಾ ನೋಡಿ. ಒಟ್ನಲ್ಲಿ ನೋಡಿ! ಏಕೆಂದರೆ ಇದು ಕನ್ನಡಕ್ಕಾಗಿ ಮಾತ್ರವಲ್ಲ; ನಮಗಾಗಿಯೂ ಹೌದು. ಬರ್ತೀರಾ?

ವೀರಕಪುತ್ರ ಶ್ರೀನಿವಾಸ್ ಅವರ ಈ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ಚಿತ್ರಸಾಹಿತಿ, ನಿರ್ದೇಶಕ ಕವಿರಾಜ್, ಮಾಜಿ ಬಿಗ್​​ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಇನ್ನೂ ಹಲವಾರು ಮಂದಿ ವೀರಕಪುತ್ರ ಶ್ರೀನಿವಾಸ್ ಅವರ ಈ ಪೋಸ್ಟ್​​ ಅನ್ನು ಹಂಚಿಕೊಳ್ಳುತ್ತಿರುವ ಜೊತೆಗೆ ಸಿನಿಮಾ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಸಹ ದಾಖಲಿಸುತ್ತಿದ್ದಾರೆ.

ಇದನ್ನೂ ಓದಿ:‘ವಲವಾರ’ ಸಿನಿಮಾ ವಿಮರ್ಶೆ; ಹಾಸ್ಯ, ಭಾವನೆಗಳ ಮಿಶ್ರಣ; ಬಾಲ್ಯ ನೆನಪಿಸೋ ಪಯಣ

ವಲವಾರ ಸಿನಿಮಾ ಬಗ್ಗೆ

ಸುನತ್ ಗೌಡ ಎಂಬುವರು ನಿರ್ದೇಶಿಸಿರುವ ‘ವಲವಾರ’ ಸಿನಿಮಾ ಅಪ್ಪಟ ಹಳ್ಳಿಗಾಡಿನ ಆಪ್ತವಾದ ಸಿನಿಮಾ. ಒಂದು ಹಸು ಹಾಗೂ ಇಬ್ಬರು ಮಕ್ಕಳು ಹಾಗೂ ತಂದೆಯ ನಡುವಿನ ಕತೆಯನ್ನು ಸಿನಿಮಾ ಒಳಗೊಂಡಿದೆ. ಹಲವಾರು ಮಂದಿ ‘ವಲವಾರ’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಒಳ್ಳೆಯ ಕನ್ನಡ ಸಿನಿಮಾಕ್ಕೆ ಇದೀಗ ಕನ್ನಡಿಗರ ಬೆಂಬಲ ಬೇಕಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version