ನೋಂದಣಿ ಆಯ್ತು ‘ದಿ ಆಕ್ಸಿಡೆಂಟಲ್ ಕಾಕ್ರೋಚ್ ಪಾರ್ಟಿ’ ಸಿನಿಮಾ ಟೈಟಲ್ – Kannada News | The Accidental Cockroach Party: Movie Announced on NEET Paper Leak Protest

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಕ್ಷ’ (ಸಿಜೆಪಿ) ನಡೆಸಿದ್ದ ಪ್ರತಿಭಟನೆ ಇಡೀ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಈ ಹಗರಣ ಮತ್ತು ಅದರ ಬೆನ್ನಲ್ಲೇ ನಡೆದ ರಾಜಕೀಯ ಹೈಡ್ರಾಮಾಗಳು ಈಗ ಬೆಳ್ಳಿಪರದೆಗೆ ಬರಲು ಸಜ್ಜಾಗಿವೆ. ಸಿಜೆಪಿ ನಡೆಸಿದ ಈ ಹಠಾತ್ ಪ್ರತಿಭಟನೆಯ ತೆರೆಮರೆಯ ಕಥೆಯನ್ನಿಟ್ಟುಕೊಂಡು ದೊಡ್ಡ ಬಜೆಟ್ ಸಿನಿಮಾ ಮಾಡಲು ಬಾಲಿವುಡ್‌ನಲ್ಲಿ ಸಿದ್ಧತೆಗಳು ಶುರುವಾಗಿವೆ. ಈ ಚಿತ್ರಕ್ಕೆ ‘ದಿ ಆಕ್ಸಿಡೆಂಟಲ್ ಕಾಕ್ರೋಚ್ ಪಾರ್ಟಿ’ ಎಂಬ ವಿಭಿನ್ನ ಶೀರ್ಷಿಕೆಯನ್ನು ಇಡಲಾಗಿದ್ದು, ಅದನ್ನು ಅಧಿಕೃತವಾಗಿ ನೋಂದಣಿ ಕೂಡ ಮಾಡಿಸಲಾಗಿದೆ.

ಜೈಪುರ ಮೂಲದ ಗೋವಿಂದ್ ದೇವ್ ಬ್ರಹ್ಮ ಅವರು ಈ ಚಿತ್ರದ ಹಿಂದಿನ ಮಾಸ್ಟರ್ ಮೈಂಡ್. ಹಗರಣ ಮತ್ತು ಪ್ರತಿಭಟನೆಯ ಕುರಿತು ವ್ಯಾಪಕ ಸಂಶೋಧನೆ ನಡೆಸಿರುವ ಅವರು, ಚಿತ್ರಕಥೆಯನ್ನು ಸಿದ್ಧಪಡಿಸಿ ಅಧಿಕೃತವಾಗಿ ಈ ಪ್ರಾಜೆಕ್ಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಇಲ್ಲಿಯವರೆಗೆ ಸಾರ್ವಜನಿಕರಿಗೆ ತಿಳಿಯದ, ಪ್ರತಿಭಟನೆಯ ಹಿಂದೆ ನಡೆದ ಹಲವು ಆಘಾತಕಾರಿ ಸತ್ಯಗಳು ಮತ್ತು ಆಂತರಿಕ ರಾಜಕೀಯ ತಂತ್ರಗಳು ಈ ಸಿನಿಮಾ ಮೂಲಕ ಜಗತ್ತಿನ ಮುಂದೆ ಬರಲಿವೆ ಎಂದು ಚಿತ್ರತಂಡ ಹೇಳಿದೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕಥೆ

ನೀಟ್ ಪೇಪರ್ ಲೀಕ್ ಬೆನ್ನಲ್ಲೇ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆ ಸಾಕಷ್ಟು ಸಂಚಲನ ಮೂಡಿಸಿತ್ತು. ಆ ಬಳಿಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಇದು ಕೇವಲ ಮೇಲ್ನೋಟಕ್ಕೆ ಕಂಡ ರಾಜಕೀಯ ಕಥೆಯಲ್ಲ, ಬದಲಿಗೆ ಈ ಇಡೀ ಚಳುವಳಿಯ ಸ್ಕ್ರಿಪ್ಟ್ ಬರೆದದ್ದು ಯಾರು? ಇದರ ಹಿಂದಿದ್ದವರು ಯಾರು? ಎನ್ನುವ ಅಂಶಗಳನ್ನು ಸಿನಿಮಾ ಒಳಗೊಂಡಿರಲಿದೆ.

20 ಕೋಟಿ ಬಜೆಟ್, 2027ಕ್ಕೆ ರಿಲೀಸ್

ಇದು ಯಾವುದೇ ಸಣ್ಣ ಬಜೆಟ್‌ನ ಸಾಕ್ಷ್ಯಚಿತ್ರವಲ್ಲ. ಬದಲಿಗೆ ಬರೋಬ್ಬರಿ 20 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭಾರಿ ಬಜೆಟ್‌ನ ಕಮರ್ಷಿಯಲ್ ಸಿನಿಮಾ. ಸದ್ಯ ಗೋವಿಂದ ದೇವ್ ‘ಬ್ರಹ್ಮ’ ಅವರ ನೇತೃತ್ವದಲ್ಲಿ ಚಿತ್ರಕಥೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಶೂಟಿಂಗ್ ಸ್ಪಾಟ್‌ಗಳ ಹುಡುಕಾಟ ಕೂಡ ಭರದಿಂದ ಸಾಗಿದೆ.

ಇದನ್ನೂ ಓದಿ: ಕಾಕ್ರೋಚ್ ಜನತಾ ಪಾರ್ಟಿಗೆ ಲಕ್ಷ್ಮಣರೇಖೆ ಎಳೆದ ಬೆಂಗಳೂರು ಪೊಲೀಸರು, ಆಗಿದ್ದೇನು?

ಚಿತ್ರದ ನಾಯಕ ನಟರು ಹಾಗೂ ನಿರ್ದೇಶಕರ ಆಯ್ಕೆಗಾಗಿ ಮುಂಬೈನ ಪ್ರಮುಖ ಬಾಲಿವುಡ್ ನಿರ್ಮಾಪಕರೊಂದಿಗೆ ಮಾತುಕತೆ ಅಂತಿಮ ಹಂತ ತಲುಪಿದೆ. ತಾರಾಗಣದ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ 2027ರ ವೇಳೆಗೆ ‘ದಿ ಆಕ್ಸಿಡೆಂಟಲ್ ಕಾಕ್ರೋಚ್ ಪಾರ್ಟಿ’ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಹೈಟೆಕ್’ ಮೆಜೆಸ್ಟಿಕ್ : 4,997 ಕೋಟಿ ರೂ. ವೆಚ್ಚದ ಮೆಗಾ ಪ್ಲಾನ್‌ಗೆ ಶೀಘ್ರವೇ ಗ್ರೀನ್ ಸಿಗ್ನಲ್! – Kannada News | Rs 4,997 Crore Bengaluru Majestic Bus Station Revamp Closer to Approval

ಬೆಂಗಳೂರು, ಜುಲೈ 31: ರಾಜಧಾನಿಯ ಪ್ರಮುಖ ಸಾರಿಗೆ ಕೇಂದ್ರವಾದ ಮೆಜೆಸ್ಟಿಕ್ (ಕೆಂಪೇಗೌಡ) ಬಸ್ ನಿಲ್ದಾಣವನ್ನು 4,997 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆಧುನೀಕರಣಗೊಳಿಸುವ ಬೃಹತ್ ಯೋಜನೆ ಜಾರಿಯತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯ ಯೋಜನೆಗಳಿಗಾಗಿ ಇರುವ ರಾಜ್ಯ ಮಟ್ಟದ ಏಕ ಗವಾಕ್ಷಿ ಸಂಸ್ಥೆಯು (SLSWA) ಈ ಪ್ರಸ್ತಾವನೆಯನ್ನು ಅಂತಿಮ ಅನುಮೋದನೆಗಾಗಿ ಮುಖ್ಯಮಂತ್ರಿ ನೇತೃತ್ವದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿಗೆ (SHLCC) ಶಿಫಾರಸು ಮಾಡಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಒಟ್ಟು 12,936.86 ಕೋಟಿ ರೂ. ಮೌಲ್ಯದ ಏಳು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಲಾಯಿತು. 500 ಕೋಟಿ ರೂ.ಗೂ ಹೆಚ್ಚು ವೆಚ್ಚದ ಬೃಹತ್ ಯೋಜನೆಗಳನ್ನು SHLCC ಪರಿಶೀಲನೆಗೆ ಕಳುಹಿಸಲಾಗಿದ್ದು, ಇದರಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದ ಪುನರಾಭಿವೃದ್ಧಿ ಯೋಜನೆಯೂ ಸೇರಿದೆ.

ಯೋಜನೆಯಲ್ಲೇನಿದೆ?

  • ಆಧುನಿಕ ಮೂಲಸೌಕರ್ಯ: ಮೆಜೆಸ್ಟಿಕ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಯಾಣಿಕ ಸೌಲಭ್ಯಗಳು, ಸುಸಜ್ಜಿತ ತಂಗುದಾಣ ಹಾಗೂ ಸುಗಮ ಸಂಚಾರ ವ್ಯವಸ್ಥೆ ನಿರ್ಮಾಣ.
  • ಖಾಸಗಿ ಹೂಡಿಕೆ: ಪಿಪಿಪಿ ಮಾದರಿಯ ಮೂಲಕ ಖಾಸಗಿ ವಲಯದ ಬಂಡವಾಳ ಆಕರ್ಷಣೆ.
  • ಉದ್ಯೋಗ ಸೃಷ್ಟಿ: ಸಾರಿಗೆ, ಪ್ರವಾಸೋದ್ಯಮ ಮತ್ತು ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಾವಕಾಶಗಳ ಸೃಷ್ಟಿ.

ಇದೇ ಸಭೆಯಲ್ಲಿ ಮೈಸೂರಿನಲ್ಲಿ 729.43 ಕೋಟಿ ರೂ. ವೆಚ್ಚದ ‘ಫಿಲ್ಮ್ ಸಿಟಿ’ ಹಾಗೂ ಉತ್ತರ ಕನ್ನಡದ ಮಾಂಕಿ ಬಂದರಿನಲ್ಲಿ 6,925 ಕೋಟಿ ರೂ. ವೆಚ್ಚದ ‘ಬಹುಪಯೋಗಿ ಬಂದರು’ ನಿರ್ಮಾಣ ಯೋಜನೆಗಳನ್ನೂ SHLCC ಸಮಿತಿಗೆ ಶಿಫಾರಸು ಮಾಡಲಾಗಿದೆ. ಜೊತೆಗೆ ಮಂಗಳೂರಿನ ದೀಪಸ್ತಂಭ ಪ್ರವಾಸೋದ್ಯಮ ಮತ್ತು ಊಟಿಯ ಕರ್ನಾಟಕ ಸಿರಿ ತೋಟಗಾರಿಕೆ ತೋಟದ ಅಭಿವೃದ್ಧಿ ಸೇರಿದಂತೆ 285.43 ಕೋಟಿ ರೂ. ಮೌಲ್ಯದ ನಾಲ್ಕು ಸಣ್ಣ ಯೋಜನೆಗಳಿಗೆ ನೇರ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಶೀಘ್ರದಲ್ಲೇ ಉನ್ನತ ಮಟ್ಟದ ಸಮಿತಿಯಿಂದ ಆಡಳಿತಾತ್ಮಕ ಒಪ್ಪಿಗೆ ದೊರೆಯುವ ನಿರೀಕ್ಷೆಯಿದ್ದು, ಬೆಂಗಳೂರಿನ ಸಾರಿಗೆ ಕ್ಷೇತ್ರಕ್ಕೆ ಹೊಸ ಕಳೆ ಬರಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರಾವಳಿಗೆ ಆರೆಂಜ್ ಅಲರ್ಟ್, ಮಲೆನಾಡಿನಲ್ಲೂ ಭಾರಿ ಮಳೆ ಮುನ್ಸೂಚನೆ – Kannada News | Karnataka Weather: Heavy to Very Heavy Rain Forecast in Coastal and Interior Districts on July 31 and August 1

ಬೀದರ್​​ನ ಬಸವಕಲ್ಯಾಣದಲ್ಲಿ ಇತ್ತೀಚೆಗೆ ಸುರಿದ ಮಳೆ (ಸಂಗ್ರಹ ಚಿತ್ರ)Image Credit source: tv9

ಬೆಂಗಳೂರು, ಜುಲೈ 31: ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನವೂ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯಂತೆ (Weather Forecast) ಜುಲೈ 31ರಂದು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಕರಾವಳಿ ಭಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಭಾರೀ ಮಳೆ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಲ್ಲಿ 50-60 ಕಿ.ಮೀ ವೇಗದ ಗಾಳಿಯೊಂದಿಗೆ ವರ್ಷಧಾರೆಯಾಗುವ ಸಾಧ್ಯತೆ ಇದೆ. ಧಾರವಾಡ ಮತ್ತು ಗದಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಬಾಗಲಕೋಟೆ, ಬೀದರ್, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಮಳೆಯಾಗುತ್ತಾ?

ದಕ್ಷಿಣ ಒಳನಾಡಿನಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ to ಅತಿ ಭಾರಿ ಮಳೆ ಸಾಧ್ಯತೆ ಇದೆ. ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

ಆಗಸ್ಟ್ 1ರಂದು ಮುಂದುವರಿಯಲಿದೆ ಮಳೆ

ಆಗಸ್ಟ್ 1ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಸಾಧ್ಯತೆ ಇದ್ದರೆ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡಕ್ಕೆ ಆರೆಂಜ್ ಅಲರ್ಟ್ ಹಾಗೂ ಮಲೆನಾಡಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೀದರ್, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲೂ ಭಾರಿ ಮಳೆಯ ಮುನ್ಸೂಚನೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

ರಾಜ್ಯದಲ್ಲಿ ಎಲ್ಲೆಲ್ಲಿ ಹೆಚ್ಚು ಮಳೆಯಾಗಿದೆ?

ಐಎಂಡಿ ಪ್ರಕಾರ, ಗುರುವಾರ ಸಂಜೆಗೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ಅಗುಂಬೆ (ಶಿವಮೊಗ್ಗ)ಯಲ್ಲಿ 8 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಬೆಳ್ತಂಗಡಿ (ದಕ್ಷಿಣ ಕನ್ನಡ) 6 ಸೆಂ.ಮೀ., ಚಿಂಚೋಳಿ (ಕಲಬುರಗಿ) 5 ಸೆಂ.ಮೀ., ಧರ್ಮಸ್ಥಳ (ದಕ್ಷಿಣ ಕನ್ನಡ) 5 ಸೆಂ.ಮೀ., ಜಯಪುರ (ಚಿಕ್ಕಮಗಳೂರು) 5 ಸೆಂ.ಮೀ., ಕುಂದಾಪುರ (ಉಡುಪಿ) 5 ಸೆಂ.ಮೀ., ಸಂತಪುರ (ಬೀದರ್) 5 ಸೆಂ.ಮೀ., ಶೃಂಗೇರಿ (ಚಿಕ್ಕಮಗಳೂರು) 5 ಸೆಂ.ಮೀ. ಹಾಗೂ ಉಪ್ಪಿನಂಗಡಿ (ದಕ್ಷಿಣ ಕನ್ನಡ) 5 ಸೆಂ.ಮೀ. ಮಳೆ ದಾಖಲಾಗಿದೆ.

ಇದನ್ನೂ ಓದಿ: ಆಲಮಟ್ಟಿ ಭರ್ತಿಯತ್ತ; ಏರಿಕೆಯಾಗುತ್ತಿಲ್ಲ ಕೆಆರ್‌ಎಸ್, ಕಬಿನಿ, ಹೇಮಾವತಿ ನೀರಿನ ಮಟ್ಟ

ರಾಜ್ಯದಲ್ಲಿ ಜುಲೈ 30ರಂದು ಮುಂಗಾರು ಉತ್ತರ ಒಳನಾಡಿನಲ್ಲಿ ಸಕ್ರಿಯ, ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯ ಹಾಗೂ ಕರಾವಳಿ ಕರ್ನಾಟಕದಲ್ಲಿ ದುರ್ಬಲವಾಗಿತ್ತು. ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಣಬೀರ್ ಇನ್ಮೇಲೆ ಅನಿಮಲ್ ರೀತಿಯ ಸಿನಿಮಾ ಮಾಡಬಾರದು’; ಹಿರಿಯ ನಟನ ಕಿವಿಮಾತು – Kannada News | Nitish Bharadwaj Says Ranbir Kapoor Should Not Do Animal type Movie 

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಪಾರ್ಟ್ ಒನ್’ ಸಿನಿಮಾದ ಟ್ರೈಲರ್ ಜುಲೈ 31ರಂದು ಬಿಡುಗಡೆಯಾಗಿದೆ. ಬಿ.ಆರ್. ಚೋಪ್ರಾ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ಮಾಡಿದ್ದ ಹಿರಿಯ ನಟ ನಿತೀಶ್ ಭಾರದ್ವಾಜ್ ಹೊಸ ರಾಮಾಯಣ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಸಿನಿಮಾ ಆಸ್ಕರ್ ಪ್ರಶಸ್ತಿ ಗೆಲ್ಲುವುದು ಖಚಿತ ಎಂದು ಅವರು ಭವಿಷ್ಯ ನುಡಿದಿದ್ದಾರೆ. ನಟ ರಣಬೀರ್ ಕಪೂರ್ (Ranbir Kapoor) ಅಭಿನಯಕ್ಕೆ ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಆಸ್ಕರ್ ಗೆಲ್ಲುವ ಸಿನಿಮಾ

ನಟ ನಿತೀಶ್ ಭಾರದ್ವಾಜ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ‘ರಾಮಾಯಣ’ ಚಿತ್ರಕ್ಕೆ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಶೇ. 100ರಷ್ಟು ಆಸ್ಕರ್ ಪ್ರಶಸ್ತಿ ಸಿಗಲಿದೆ ಎಂದು ಬರೆದುಕೊಂಡಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ಅವರನ್ನು ಸತ್ಯಜಿತ್ ರೇ ಮತ್ತು ಶೇಖರ್ ಕಪೂರ್ ಅವರಿಗೆ ಹೋಲಿಸಿದ್ದಾರೆ. ಚಿತ್ರದ ವಿಎಫ್‌ಎಕ್ಸ್ ಮತ್ತು ತಂತ್ರಜ್ಞಾನದ ಬಳಕೆಯನ್ನು ಕೊಂಡಾಡಿದ್ದಾರೆ.

ರಣವೀರ್ ಸಿಂಗ್‌ಗೆ ರಣಬೀರ್ ಸಮಾನ

ರಣಬೀರ್ ಕಪೂರ್ ಈಗ ರಣವೀರ್ ಸಿಂಗ್ ಅವರಷ್ಟೇ ಪ್ರತಿಭಾವಂತ ನಟ ಎಂದು ನಿತೀಶ್ ಹೊಗಳಿದ್ದಾರೆ. ಭಾರತೀಯ ಚಿತ್ರರಂಗದ ಇಬ್ಬರು ಅಜೇಯ ಧುರಂಧರರಲ್ಲಿ ರಣಬೀರ್ ಕೂಡ ಒಬ್ಬರಾಗಿದ್ದಾರೆ ಎಂದಿದ್ದಾರೆ. ಇದೇ ವೇಳೆ ರಾವಣನ ಪಾತ್ರ ಮಾಡಿರುವ ನಟ ಯಶ್ ಅವರನ್ನು ಜಾಗತಿಕ ಚಿತ್ರರಂಗಕ್ಕೆ ಸ್ವಾಗತಿಸಿದ್ದಾರೆ. ಆಸ್ಕರ್ ವಿಜೇತ ಹ್ಯಾನ್ಸ್ ಜಿಮ್ಮರ್ ಸಂಗೀತದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅನಿಮಲ್ ಚಿತ್ರಗಳ ಸಹವಾಸ ಬೇಡ

ನಟ ರಣಬೀರ್ ಕಪೂರ್‌ಗೆ ನಿತೀಶ್ ಭಾರದ್ವಾಜ್ ಒಂದು ಕಿವಿಮಾತು ಹೇಳಿದ್ದಾರೆ. ಇನ್ನು ಮುಂದೆ ‘ಅನಿಮಲ್’ ತರಹದ ಸಿನಿಮಾಗಳನ್ನು ಮಾಡಬೇಡಿ ಎಂದು ವಿನಂತಿಸಿದ್ದಾರೆ. ಕೋಟಿ ಕೋಟಿ ಹಣ ಸಿಕ್ಕರೂ ಇಂತಹ ಚಿತ್ರಗಳಿಂದ ದೂರವಿರಿ ಎಂದಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿಹಿಡಿಯುವ ಜವಾಬ್ದಾರಿ ಈಗ ರಣಬೀರ್ ಮೇಲಿದೆ ಎಂದು ನೆನಪಿಸಿದ್ದಾರೆ. ನಟಿ ಸಾಯಿ ಪಲ್ಲವಿ ಅವರನ್ನು ಪ್ರೇಕ್ಷಕರು ಸೀತೆಯಾಗಿ ಸ್ವೀಕರಿಸಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: ಧೂಮ್ ವದಂತಿಗಳಿಗೆ ಕೊನೆಗೂ ಬ್ರೇಕ್ ಹಾಕಿದ ರಣಬೀರ್ ಕಪೂರ್

ಟೀಕೆಗಳಿಗೆ ರಣಬೀರ್ ಕಪೂರ್ ಉತ್ತರ

ಶ್ರೀರಾಮನ ಪಾತ್ರಕ್ಕೆ ರಣಬೀರ್ ಆಯ್ಕೆಯಾಗಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಕಾಮಿಕ್-ಕಾನ್ ಕಾರ್ಯಕ್ರಮದಲ್ಲಿ ರಣಬೀರ್ ಉತ್ತರ ನೀಡಿದ್ದಾರೆ. ‘ಶ್ರೀರಾಮನ ಪಾತ್ರ ಮಾಡಲು ನಾನು ಯೋಗ್ಯನೇ ಎಂಬ ಪ್ರಶ್ನೆ ನನಗೂ ಕಾಡಿತ್ತು. 4,000 ವರ್ಷಗಳ ಇತಿಹಾಸವಿರುವ ಕಥೆಯನ್ನು ಬೆಳ್ಳಿತೆರೆಗೆ ತರುವುದು ದೊಡ್ಡ ಜವಾಬ್ದಾರಿ. ಶ್ರೀರಾಮನ ಪಾತ್ರಕ್ಕೆ ಸೂಕ್ತ ಉದ್ದೇಶ ಮತ್ತು ನಂಬಿಕೆ ಇರುವ ಯಾವುದೇ ನಟನಾದರೂ ಹೊಂದಿಕೆಯಾಗುತ್ತಾನೆ’ ಎಂದು ಅವರು ಸಮರ್ಥಿಸಿಕೊಂಡಿದ್ದರು.

ಪ್ರಶ್ನೆ:ರಾಮಾಯಣ ರಿಲೀಸ್ ಯಾವಾಗ?
ಉತ್ತರ: ದೀಪಾವಳಿ

ಪ್ರಶ್ನೆ: ರಾಮಾಯಣ ನಿರ್ದೇಶಕ ಯಾರು?
ಉತ್ತರ: ನಿತೇಶ್ ತಿವಾರಿ

ಪ್ರಶ್ನೆ: ರಾಮಾಯಣ ಸಿನಿಮಾದಲ್ಲಿ ರಣಬೀರ್ ಪಾತ್ರವೇನು?
ಉತ್ತರ: ರಾಮನ ಪಾತ್ರ

Published On – 7:38 am, Fri, 31 July 26

Source link

Shiva Puja: ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ ಈ ತಪ್ಪು ಮಾಡಬೇಡಿ; ಪಾಲಿಸಬೇಕಾದ ಸರಿಯಾದ ನಿಯಮ ಇಲ್ಲಿದೆ! – Kannada News | Rules for Offering Bel Patra to Lord Shiva: Common Mistakes to Avoid as per Shiva Purana

ಶಿವನಿಗೆ ಬಿಲ್ವಪತ್ರೆImage Credit source: Getty Images

ಶಿವಪೂಜೆಯಲ್ಲಿ ಬಿಲ್ವಪತ್ರೆಗೆ (ಬೇಲ್ಪತ್ರ) ಅತ್ಯಂತ ಪವಿತ್ರವಾದ ಸ್ಥಾನವಿದೆ. ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಶಿವನು ಶೀಘ್ರವಾಗಿ ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬುದು ನಂಬಿಕೆ. ಆದರೆ, ಶಿವ ಮಹಾಪುರಾಣದ ಪ್ರಕಾರ ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸುವಾಗ ಕೆಲವು ವಿಶೇಷ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಸರಿಯಾದ ವಿಧಾನದಲ್ಲಿ ಅರ್ಪಿಸದಿದ್ದರೆ ಪೂಜೆಯ ಸಂಪೂರ್ಣ ಫಲ ಸಿಗುವುದಿಲ್ಲ. ಶಿವನ ಪೂರ್ಣ ಆಶೀರ್ವಾದ ಪಡೆಯಲು ಯಾವ ಏನು ತಪ್ಪಿಸಬೇಕು ಹಾಗೂ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಸೋಮವಾರ ಅಥವಾ ಚತುರ್ದಶಿಯಂದು ಬಿಲ್ವಪತ್ರೆ ಕೀಳಬೇಡಿ:

ಶಿವ ಪುರಾಣದ ಪ್ರಕಾರ, ಸೋಮವಾರ ಅಥವಾ ಚತುರ್ದಶಿ ತಿಥಿಯಂದು ಬಿಲ್ವಪತ್ರೆಯನ್ನು ಗಿಡದಿಂದ ಕೀಳಬಾರದು. ಈ ದಿನಗಳಲ್ಲಿ ಎಲೆಗಳನ್ನು ಕೀಳುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಸೋಮವಾರ ಅಥವಾ ಚತುರ್ದಶಿಯಂದು ಶಿವನಿಗೆ ಬಿಲ್ವಪತ್ರೆ ಅರ್ಪಿಸಬೇಕಿದ್ದರೆ, ಒಂದು ದಿನ ಮುಂಚಿತವಾಗಿ (ಅಂದರೆ ಭಾನುವಾರ ಅಥವಾ ತ್ರಯೋದಶಿಯಂದು) ಎಲೆಗಳನ್ನು ಕಿತ್ತು ಕಾಯ್ದಿರಿಸಿಕೊಳ್ಳಬೇಕು. ಒಂದು ದಿನ ಮುಂಚಿತವಾಗಿ ಕಿತ್ತಿಟ್ಟ ಬಿಲ್ವಪತ್ರೆಯು ಪೂಜೆಗೆ ಅಷ್ಟೇ ಪರಿಣಾಮಕಾರಿ ಹಾಗೂ ಪವಿತ್ರವಾಗಿರುತ್ತದೆ.

ಶಿವಲಿಂಗಕ್ಕೆ ಅರ್ಪಿಸಲು ಸರಿಯಾದ ಬಿಲ್ವಪತ್ರೆಯನ್ನು ಹೀಗೆ ಆಯ್ಕೆ ಮಾಡಿ:

ಬಿಲ್ವಪತ್ರೆಯನ್ನು ಕೀಳುವಾಗ ಯಾವಾಗಲೂ ಮೂರು ಎಲೆಗಳು ಒಂದೇ ತೊಟ್ಟಿನಲ್ಲಿ ಜೋಡಣೆಯಾಗಿರುವ ಎಲೆಯನ್ನೇ ಆರಿಸಿಕೊಳ್ಳಬೇಕು. ಈ ಮೂರು ಎಲೆಗಳು ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಹಾಗೂ ಶಿವನ ತ್ರಿಶೂಲದ ಸಂಕೇತವಾಗಿವೆ. ಹರಿದುಹೋದ, ಕೀಟಗಳು ತಿಂದ ಅಥವಾ ಕೇವಲ ಎರಡು ಎಲೆಗಳಿರುವ ಬಿಲ್ವಪತ್ರೆಯನ್ನು ಪೂಜೆಗೆ ಬಳಸಬಾರದು. ಹಾಗೆಯೇ, ಎಲೆಗಳನ್ನು ಕೀಳುವಾಗ ಮರದ ಕೊಂಬೆಗಳನ್ನು ಮುರಿಯಬಾರದು; ಕೊಂಬೆ ಮುರಿಯುವುದು ಶಿವನಿಗೆ ಅಗೌರವ ತೋರಿದಂತೆ ಎಂದು ನಂಬಲಾಗುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಶಿವಲಿಂಗಕ್ಕೆ ಎಷ್ಟು ಬಿಲ್ವಪತ್ರೆಗಳನ್ನು ಅರ್ಪಿಸಬೇಕು?

ಶಿವ ಪೂಜೆಯಲ್ಲಿ ಬಿಲ್ವಪತ್ರೆಗಳ ಸಂಖ್ಯೆಗೂ ವಿಶೇಷ ಮಹತ್ವವಿದೆ. ಶಿವ ಮಹಾಪುರಾಣದ ಪ್ರಕಾರ, ಶಿವಲಿಂಗಕ್ಕೆ ಯಾವಾಗಲೂ ಬೆಸ ಸಂಖ್ಯೆಯಲ್ಲಿ (Odd Numbers) ಬಿಲ್ವಪತ್ರೆಗಳನ್ನು ಅರ್ಪಿಸಬೇಕು. ಅಂದರೆ 3, 5, 7, 11, 21, 51 ಅಥವಾ 101 ರ ಸಂಖ್ಯೆಯಲ್ಲಿ ಬಿಲ್ವಪತ್ರೆಗಳನ್ನು ಅರ್ಪಿಸುವುದು ಅತ್ಯಂತ ಶುಭ. ಜೊತೆಗೆ, ಶಿವಲಿಂಗಕ್ಕೆ ಅರ್ಪಿಸುವ ಮುನ್ನ ಬಿಲ್ವಪತ್ರೆಯನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಬೇಕು. ಕೊಳಕಾಗಿರುವ ಅಥವಾ ತೊಳೆಯದ ಎಲೆಗಳನ್ನು ಎಂದಿಗೂ ಅರ್ಪಿಸಬಾರದು.

ಶಿವಲಿಂಗದ ಮೇಲೆ ಬಿಲ್ವಪತ್ರೆ ಅರ್ಪಿಸುವ ಸರಿಯಾದ ವಿಧಾನ:

ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಇಡುವ ವಿಧಾನವೂ ಅತ್ಯಂತ ಮುಖ್ಯವಾಗಿದೆ. ಬಿಲ್ವಪತ್ರೆಯನ್ನು ಅರ್ಪಿಸುವಾಗ ಅದರ ನಯವಾದ (ಮೃದುವಾದ) ಭಾಗವು ಶಿವಲಿಂಗಕ್ಕೆ ಸ್ಪರ್ಶಿಸುವಂತೆ ಅಂದರೆ ಕೆಳಮುಖವಾಗಿ ಇಡಬೇಕು. ಎಲೆಯ ಒರಟಾದ ಭಾಗವು ಮೇಲ್ಮುಖವಾಗಿರಬೇಕು. ಈ ರೀತಿ ಸರಿಯಾದ ಕ್ರಮದಲ್ಲಿ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಶಿವನ ವಿಶೇಷ ಅನುಗ್ರಹ ಲಭಿಸುತ್ತದೆ ಮತ್ತು ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:35 am, Fri, 31 July 26

Source link

ಭಿವಂಡಿಯಲ್ಲಿ ಭಾರಿ ಮಳೆಗೆ ಕುಸಿದ 4 ಅಂತಸ್ತಿನ ಕಟ್ಟಡ: 8-10 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ – Kannada News | Heavy Rains Trigger Partial Collapse of Four Storey Building in Bhiwandi, Rescue Efforts Continue

ಭಿವಂಡಿ, ಜುಲೈ 31: ಮಹಾರಾಷ್ಟ್ರದ ಭಿವಂಡಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ(Rain)ಯ ನಡುವೆ ಗುರುವಾರ ರಾತ್ರಿ ನಾಲ್ಕು ಅಂತಸ್ತಿನ ಕಟ್ಟಡ ಭಾಗಶಃ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸುಮಾರು 8 ರಿಂದ 10 ಜನರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ಸಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಭಿವಂಡಿ ಮಹಾನಗರ ಪಾಲಿಕೆ, ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಹಾಗೂ ಎನ್‌ಡಿಆರ್‌ಎಫ್ (NDRF) ಪಡೆಯು ಸ್ಥಳಕ್ಕೆ ಧಾವಿಸಿವೆ. ಅವಶೇಷಗಳ ಅಡಿಯಲ್ಲಿದ್ದ ಮಹಿಳೆಯೊಬ್ಬರನ್ನು ಎನ್‌ಡಿಆರ್‌ಎಫ್ ಸಿಬ್ಬಂದಿ ಯಶಸ್ವಿಯಾಗಿ ಜೀವಂತವಾಗಿ ಹೊರತೆಗೆದಿದ್ದು, ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ.

ಕಟ್ಟಡವನ್ನು ಆಡಳಿತ ಮಂಡಳಿಯು ಈಗಾಗಲೇ ಖಾಲಿ ಮಾಡಿಸಿತ್ತಾದರೂ, ನೆಲ ಮಹಡಿಯಲ್ಲಿ ಕೆಲವು ಕಾರ್ಮಿಕರು ದುರಸ್ತಿ ಕೆಲಸ ಮಾಡುತ್ತಿದ್ದರು. ಸುಮಾರು 6 ರಿಂದ 7 ಕಾರ್ಮಿಕರು ಮತ್ತು ಒಂದೆರಡು ನಿವಾಸಿಗಳು ಪ್ರಸ್ತುತ ಸಿಲುಕಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಭಿವಂಡಿ ಪಶ್ಚಿಮ ಕ್ಷೇತ್ರದ ಶಾಸಕ ಮಹೇಶ್ ಚೌಗುಲೆ ಮಾತನಾಡಿ, “ನಾರ್ಪೋಲಿಯ ಭಂಡಾರಿ ಕಾಂಪೌಂಡ್‌ನಲ್ಲಿರುವ ಈ ಕೊಹಿನೂರ್ ಕಟ್ಟಡವನ್ನು ಪುರಸಭೆಯು ‘ಸಿ-ಕ್ಯಾಟಗರಿ’ ಎಂದು ವರ್ಗೀಕರಿಸಿ ಸ್ಥಳಾಂತರಿಸಲು ಸೂಚಿಸಿತ್ತು. ಹೆಚ್ಚಿನ ಕುಟುಂಬಗಳು ಖಾಲಿ ಮಾಡಿದ್ದವು, ಆದರೆ ದುರಸ್ತಿ ಕೆಲಸಕ್ಕಾಗಿ ಇದ್ದ ಕೆಲವು ಕಾರ್ಮಿಕರು ಈ ದುರಂತಕ್ಕೆ ಸಿಲುಕಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

ವಿಡಿಯೋ

ಈ ದುರಂತವು ಸ್ಥಳೀಯ ಆಡಳಿತದ ಭದ್ರತಾ ಮಾನದಂಡಗಳ ಬಗ್ಗೆ ಪ್ರಮುಖ ಪ್ರಶ್ನೆಗಳನ್ನು ಎತ್ತಿದೆ, ಪುರಸಭೆಯು ಅತ್ಯಂತ ಅಪಾಯಕಾರಿ ಎಂದು ಘೋಷಿಸಿದ ಕಟ್ಟಡದೊಳಗೆ ದುರಸ್ತಿ ಕೆಲಸಕ್ಕೆ ಯಾರು ಅನುಮತಿ ನೀಡಿದರು? ನಾಲ್ಕು ಬಾರಿ ಅಧಿಕೃತ ನೋಟಿಸ್ ನೀಡಿದ್ದರೂ ಕಟ್ಟಡ ಸಂಪೂರ್ಣವಾಗಿ ಖಾಲಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಏಕೆ ವಿಫಲರಾದರು ಎನ್ನುವ ಪ್ರಶ್ನೆ ಎದ್ದಿದೆ.

ಮತ್ತಷ್ಟು ಓದಿ: Karnataka Weather Forecast: ನಾಳೆ 4 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​, ತಿಂಗಳಾಂತ್ಯದವರೆಗೂ ಮಳೆ ಮುನ್ಸೂಚನೆ

ಮಹಾರಾಷ್ಟ್ರದ ಕೊಂಕಣ ಕರಾವಳಿ ಹಾಗೂ ಠಾಣೆ-ಭಿವಂಡಿ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಭಾರಿ ಮಳೆಯಾಗುತ್ತಿದ್ದು, ಹಳೆಯ ಹಾಗೂ ಶಿಥಿಲಗೊಂಡ ಕಟ್ಟಡಗಳು ಕುಸಿಯುವ ಅಪಾಯ ಹೆಚ್ಚಾಗಿದೆ.

ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯಡಿ ‘ಸಿ-ಕ್ಯಾಟಗರಿ’ ಎಂದರೆ ತಕ್ಷಣವೇ ಕೆಡವಬೇಕಾದ ಅಥವಾ ಸಂಪೂರ್ಣವಾಗಿ ಖಾಲಿ ಮಾಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿರ್ಲಕ್ಷ್ಯ ವಹಿಸಿದ ಮನೆ ಮಾಲೀಕರು ಹಾಗೂ ಕಾಂಟ್ರಾಕ್ಟರ್‌ಗಳ ವಿರುದ್ಧ ಸೈಬರ್ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಚಿವ ಸಂಪುಟ ವಿಸ್ತರಣೆ ಹಗ್ಗಜಗ್ಗಾಟ ಕೊನೆಗೂ ಅಂತ್ಯ: ಸಿಕ್ತು ಹೈಕಮಾಂಡ್ ಗ್ರೀನ್ ಸಿಗ್ನಲ್! ಸೋಮವಾರ ಪ್ರಮಾಣವಚನ ಸಾಧ್ಯತೆ – Kannada News | Karnataka Cabinet Expansion Gets High Command Nod, New Ministers Likely to Take Oath on Monday

ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್, ಸಿಎಂ ಡಿಕೆ ಶಿವಕುಮಾರ್ ಹಾಗೂ ರಣದೀಪ್ ಸುರ್ಜೇವಾಲ (ಸಾಂದರ್ಭಿಕ ಚಿತ್ರ)Image Credit source: @DKShivakumar

ಬೆಂಗಳೂರು, ಜುಲೈ 31: ಹಲವು ದಿನಗಳಿಂದ ಕಗ್ಗಂಟಾಗಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ (Karnataka Cabinet expansion) ಕೊನೆಗೂ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಗುರುವಾರ ಸಂಜೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi ರಾಜ್ಯದ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಸ್ವೀಕರಿಸಿದ್ದು, ಎರಡು ದಿನದೊಳಗೆ ಪರಿಷ್ಕರಿಸಿ ಅಂತಿಮ ಪಟ್ಟಿಯನ್ನು ರಾಜ್ಯಕ್ಕೆ ಕಳುಹಿಸುವುದಾಗಿ ಸಂದೇಶ ನೀಡಿದ್ದಾರೆ. ಹೀಗಾಗಿ ಸೋಮವಾರ ನೂತನ ಸಚಿವರ ಪ್ರಮಾಣವಚನ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ರಾಹುಲ್ ಗಾಂಧಿ ಜೊತೆ ರಾಜ್ಯ ನಾಯಕರ ಸಭೆ

ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಹಲವು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ರಾಹುಲ್ ಗಾಂಧಿ ಭೇಟಿಗೆ ಸಮಯ ಸಿಗದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ವಿಳಂಬವಾಗುತ್ತಿತ್ತು. ಕೊನೆಗೂ ಗುರುವಾರ ಸಂಜೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ರಾಹುಲ್ ಗಾಂಧಿ ರಾಜ್ಯ ನಾಯಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಉಪಸ್ಥಿತರಿದ್ದರು.

ಸಿಎಂ, ಮಾಜಿ ಸಿಎಂ ಪ್ರತ್ಯೇಕ ಪಟ್ಟಿ

ಸಭೆಯಲ್ಲಿ ಡಿ.ಕೆ. ಶಿವಕುಮಾರ್ ತಮ್ಮದೇ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ರಾಹುಲ್ ಗಾಂಧಿ ಅವರಿಗೆ ಹಸ್ತಾಂತರಿಸಿದ್ದಾರೆ. ಸಿದ್ದರಾಮಯ್ಯ ಕೂಡ ತಮ್ಮ ಪ್ರತ್ಯೇಕ ಪಟ್ಟಿಯನ್ನು ನೀಡಿದ್ದಾರೆ. ಎರಡೂ ಪಟ್ಟಿಗಳನ್ನು ಸ್ವೀಕರಿಸಿದ ರಾಹುಲ್ ಗಾಂಧಿ, ತಮ್ಮ ಬಳಿ ಇರುವ ಪಟ್ಟಿಯೊಂದಿಗೆ ಹೆಸರುಗಳನ್ನು ಪರಿಶೀಲಿಸಿ ಅಂತಿಮಗೊಳಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ. ಬಳಿಕ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ರಾಹುಲ್ ಗಾಂಧಿ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನೂ ಪ್ರತ್ಯೇಕವಾಗಿ ಕರೆಸಿ ಮಾತುಕತೆ ನಡೆಸಿದ್ದಾರೆ.

ಹರಿಪ್ರಸಾದ್‌ಗೆ ದೆಹಲಿಯಲ್ಲೇ ಇರುವಂತೆ ಸೂಚನೆ

ರಾಜ್ಯ ನಾಯಕರಿಂದ ಪಟ್ಟಿಯನ್ನು ಪಡೆದಿರುವ ರಾಹುಲ್ ಗಾಂಧಿ, ಪರಿಷ್ಕರಣೆ ಬಳಿಕ ಎರಡು ದಿನದೊಳಗೆ ಅಂತಿಮ ಪಟ್ಟಿಯನ್ನು ರಾಜ್ಯಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಬಿ.ಕೆ. ಹರಿಪ್ರಸಾದ್ ಅವರಿಗೆ ದೆಹಲಿಯಲ್ಲೇ ಇರುವಂತೆ ಸೂಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಭಾನುವಾರ ರಾತ್ರಿ ಅಥವಾ ಅದಕ್ಕೂ ಮುನ್ನ ಸಚಿವರ ಅಂತಿಮ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದ್ದು, ಸೋಮವಾರ ಪ್ರಮಾಣವಚನ ನಡೆಯುವ ನಿರೀಕ್ಷೆ ವ್ಯಕ್ತವಾಗಿದೆ.

ಸಿಎಂ, ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸ್

ರಾಹುಲ್ ಗಾಂಧಿ ಅವರಿಂದ ಎರಡು ದಿನದೊಳಗೆ ಪಟ್ಟಿ ಕಳುಹಿಸುವ ಸಂದೇಶ ಬಂದ ಬಳಿಕ, ನಾಲ್ಕು ದಿನಗಳಿಂದ ದೆಹಲಿಯಲ್ಲಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಗುರುವಾರ ರಾತ್ರಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಹಲವು ಶಾಸಕರೂ ಶುಕ್ರವಾರ ಮುಂಜಾನೆ ಬೆಂಗಳೂರಿಗೆ ಮರಳಿದ್ದಾರೆ. ನಯನಾ ಮೋಟಮ್ಮ, ಶಿವಲಿಂಗೇಗೌಡ, ಶಿವರಾಜ್ ತಂಗಡಗಿ, ಪುಟ್ಟರಂಗಶೆಟ್ಟಿ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಹಲವು ಶಾಸಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ದೆಹಲಿಯಿಂದ ಬಂದ ಸಚಿವಾಕಾಂಕ್ಷಿಗಳು ಯಾರು ಏನಂದರು?

ಸೋಮವಾರ ಪ್ರಮಾಣವಚನ ನಡೆಯಲಿದೆ ಎಂದು ಶಿವಲಿಂಗೇಗೌಡ ತಿಳಿಸಿದ್ದು, ಭಾನುವಾರ ಸಚಿವರ ಪಟ್ಟಿ ಪ್ರಕಟವಾಗಲಿದೆ ಎಂಬ ಮಾಹಿತಿ ಇದೆ. ತನಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ. ರಾಜ್ಯಪಾಲರು ಶನಿವಾರ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.

ಸೋಮವಾರ ಪ್ರಮಾಣವಚನ ಕಾರ್ಯಕ್ರಮ ನಡೆಯುವ ನಿರೀಕ್ಷೆಯಿದ್ದು, ತಮಗೂ ಅವಕಾಶ ಸಿಗಬಹುದು ಎಂಬ ವಿಶ್ವಾಸವಿದೆ ಎಂದು ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

ತಮ್ಮ ತಂದೆ ಎನ್.ಎ. ಹ್ಯಾರಿಸ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸುವ ವಿಶ್ವಾಸವಿದೆ ಎಂದು ಮೊಹಮ್ಮದ್ ನಲಪಾಡ್ ಹ್ಯಾರಿಸ್ ಹೇಳಿದ್ದಾರೆ. ಸಿಎಂ ಅವರನ್ನು ಭೇಟಿ ಮಾಡಿ ಮಾತನಾಡಲು ತಾವು ದೆಹಲಿಗೆ ತೆರಳಿದ್ದಾಗಿ ತಿಳಿಸಿರುವ ಅವರು, ಯಾವುದೇ ಲಾಬಿ ಮಾಡಲು ಹೋಗಿರಲಿಲ್ಲ ಎಂದಿದ್ದಾರೆ.

ತಮ್ಮ ಸಮುದಾಯ ಹಾಗೂ ಕ್ಷೇತ್ರದ ಜನರು ಸಚಿವ ಸ್ಥಾನಕ್ಕೆ ಒತ್ತಾಯಿಸಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಸೋಮವಾರ ಒಳ್ಳೆಯ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದೇವೆ. ಸಚಿವ ಸ್ಥಾನ ಸಿಗುವ ವಿಶ್ವಾಸದಿಂದಲೇ ದೆಹಲಿಗೆ ತೆರಳಿ ವಾಪಸ್ ಬಂದಿರುವುದಾಗಿ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.

ಸೋಮವಾರ ಪ್ರಮಾಣವಚನಕ್ಕೆ ಸಿದ್ಧತೆ?

ಈ ನಡುವೆ, ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಲೋಕಭವನಕ್ಕೂ ಈಗಾಗಲೇ ಹಲವು ಬಾರಿ ಮಾಹಿತಿ ನೀಡಲಾಗಿತ್ತು. ಆದರೆ ದಿನಾಂಕ ಮುಂದೂಡಿಕೆಯಾಗುತ್ತಲೇ ಬಂದಿತ್ತು. ಇದೀಗ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಪ್ರಮಾಣವಚನ ನಡೆಯುವ ನಿರೀಕ್ಷೆ ಮತ್ತೆ ಗರಿಗೆದರಿದೆ.

ಇದನ್ನೂ ಓದಿ: ಸಭೆ ಬಳಿಕ ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು

ಒಟ್ಟಿನಲ್ಲಿ, ಕಾವೇರಿ ನೀರು ವಿವಾದದ ನಡುವೆಯೇ ರಾಜ್ಯ ಕಾಂಗ್ರೆಸ್‌ನಲ್ಲಿ ಹಲವು ದಿನಗಳಿಂದ ಕಗ್ಗಂಟಾಗಿದ್ದ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಮಟ್ಟದಲ್ಲಿ ಒಪ್ಪಿಗೆ ದೊರೆತಿದ್ದು, ಅಂತಿಮ ಪಟ್ಟಿಯಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸ್ಪೈಡರ್ ಮ್ಯಾನ್’ ದಾಖಲೆ; ಭಾರತದಲ್ಲಿ ಮೊದಲ ದಿನವೇ 72 ಕೋಟಿ ರೂ. ಗಳಿಕೆ – Kannada News | Spider Man: Brand New Day Box Office Day 1: Tom Holland Starrer Beats Avengers Endgame Record in India

ಟಾಮ್ ಹಾಲೆಂಡ್ ನಟನೆಯ ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಸಿನಿಮಾ (Spider Man) ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಜುಲೈ 30ರಂದು ರಿಲೀಸ್ ಆದ ಈ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದೆ. ಈ ಚಿತ್ರವು ಹಾಲಿವುಡ್‌ನ ಬಿಗ್ ಹಿಟ್ ‘ಅವೆಂಜರ್ಸ್: ಎಂಡ್‌ಗೇಮ್’ ದಾಖಲೆಯನ್ನು ಮುರಿದಿದೆ. ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಮೊದಲ ದಿನದ ವಿದೇಶಿ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಭರ್ಜರಿ ಕಲೆಕ್ಷನ್ ವಿವರ

ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ಈ ಸಿನಿಮಾ ಭಾರತದಲ್ಲಿ ಮೊದಲ ದಿನ 60.60 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್ ಬರೋಬ್ಬರಿ 72.44 ಕೋಟಿ ರೂಪಾಯಿ ತಲುಪಿದೆ. ಈ ಮುಂಚೆ ‘ಅವೆಂಜರ್ಸ್: ಎಂಡ್‌ಗೇಮ್’ ಸಿನಿಮಾ 65 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಈಗ ಸ್ಪೈಡರ್-ಮ್ಯಾನ್ ಆ ದಾಖಲೆಯನ್ನು ಸುಲಭವಾಗಿ ಹಿಂದಿಕ್ಕಿದೆ.

ಭಾಷಾವಾರು ಗಳಿಕೆ

ಭಾರತದಲ್ಲಿ ಈ ಸಿನಿಮಾ ಒಟ್ಟು 17,250 ಶೋಗಳಲ್ಲಿ ಪ್ರದರ್ಶನ ಕಂಡಿದೆ. ಚಿತ್ರಮಂದಿರಗಳಲ್ಲಿ ಸರಾಸರಿ 72.3ರಷ್ಟು ಆಸನಗಳು ಭರ್ತಿಯಾಗಿದ್ದವು. ಇಂಗ್ಲಿಷ್ ಆವೃತ್ತಿಯು 32.25 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ಡಬ್ಬಿಂಗ್ ಆವೃತ್ತಿಯು ಶೇಕಡಾ 95ರಷ್ಟು ಆಕ್ಯುಪೆನ್ಸಿ ಪಡೆದು 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು ತಮಿಳು ಆವೃತ್ತಿ 3 ಕೋಟಿ ಹಾಗೂ ತೆಲುಗು ಆವೃತ್ತಿ 3.25 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಕನ್ನಡ ಆವೃತ್ತಿಯಲ್ಲಿ 3 ಲಕ್ಷ ರೂಪಾಯಿ ಬಾಚಿಕೊಂಡಿದೆ.

ಇದನ್ನೂ ಓದಿ: ‘ಸ್ಪೈಡರ್ ಮ್ಯಾನ್’ ಹೊಸ ಚಿತ್ರಕ್ಕೆ ಸೆನ್ಸಾರ್ ಕತ್ತರಿ: 8 ಸೆಕೆಂಡ್‌ಗಳ ಚುಂಬನದ ದೃಶ್ಯ ಕಟ್

ಟಿಕೆಟ್ ಮಾರಾಟದಲ್ಲಿ ದಾಖಲೆ

ಬುಕಿಂಗ್ ಆ್ಯಪ್ ‘ಬುಕ್‌ಮೈಶೋ’ನಲ್ಲಿ ಈ ಚಿತ್ರ ಹೊಸ ದಾಖಲೆ ಬರೆದಿದೆ. ‘ದಿ ಒಡಿಸ್ಸಿ’ ಮೊದಲ ದಿನ 2.71 ಲಕ್ಷ ಟಿಕೆಟ್ ಮಾರಾಟ ಮಾಡಿತ್ತು. ಆದರೆ ಸ್ಪೈಡರ್-ಮ್ಯಾನ್ ಸಂಜೆ ಹೊತ್ತಿಗಾಗಲೇ 3.70 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟ ಮಾಡಿ ಮುನ್ನುಗ್ಗಿದೆ.

ದಾಖಲೆಯ ಓಪನಿಂಗ್‌ಗೆ ಕಾರಣಗಳೇನು?

ಈ ಸಿನಿಮಾ ಭಾರತದಲ್ಲಿ ಇಷ್ಟು ದೊಡ್ಡ ಮಟ್ಟದ ಓಪನಿಂಗ್ ಪಡೆಯಲು ಹಲವು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ, ಇದು ಜಗತ್ತಿನಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ನಿರೀಕ್ಷಿತ ಸಿನಿಮಾವಾಗಿತ್ತು. ಚಿತ್ರ ಬಿಡುಗಡೆಯಾದ ತಕ್ಷಣವೇ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಅತ್ಯುತ್ತಮ ವಿಮರ್ಶೆಗಳು ವ್ಯಕ್ತವಾದವು. ಇದರ ಜೊತೆಗೆ ಚಿತ್ರಮಂದಿರಗಳಲ್ಲಿ ದುಬಾರಿ ಟಿಕೆಟ್ ದರ ಇದ್ದರೂ ಅಭಿಮಾನಿಗಳು ಮುಗಿಬಿದ್ದು ನೋಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಸದ್ಯ ಬೇರೆ ಯಾವುದೇ ದೊಡ್ಡ ಸಿನಿಮಾಗಳ ಸ್ಪರ್ಧೆ ಇಲ್ಲದೇ ಇರುವುದು ಕೂಡ ಚಿತ್ರದ ಭರ್ಜರಿ ಗಳಿಕೆಗೆ ರಹದಾರಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾವೇರಿ ನೀರು ಬಿಡಲು ವಿರೋಧ: ಮಂಡ್ಯದಲ್ಲಿ ರೈತರ ಆಕ್ರೋಶ, ರಾಜ್ಯಾದ್ಯಂತ ಪ್ರತಿಭಟನೆಯ ಕಿಚ್ಚು – Kannada News | Cauvery Water Dispute: Farmers Protest Across Karnataka Against Release to Tamil Nadu

ಮಂಡ್ಯದಲ್ಲಿ ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರುImage Credit source: tv9

ಮಂಡ್ಯ, ಜುಲೈ 31: ತಮಿಳುನಾಡಿಗೆ (Tamil Nadu) ಕಾವೇರಿ ನೀರು (Cauvery Water) ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿ ಕರ್ನಾಟಕದಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳ ಪ್ರತಿಭಟನೆ ತೀವ್ರಗೊಂಡಿದೆ. ಮಂಡ್ಯದಲ್ಲಿ ಗುರುವಾರ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಟೈರ್‌ಗೆ ಬೆಂಕಿ ಹಚ್ಚಲು ಯತ್ನ, ಉರುಳು ಸೇವೆ ಹಾಗೂ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯಿತು.

ಮಂಡ್ಯದಲ್ಲಿ ಭುಗಿಲೆದ್​ದ ರೈತರ ಆಕ್ರೋಶ

ಕಾವೇರಿ ನೀರು ಬಿಡುಗಡೆಗೆ ವಿರೋಧಿಸಿ ಮಂಡ್ಯದಲ್ಲಿ ರೈತರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದ ಹೋರಾಟಗಾರರು, ಹೆದ್ದಾರಿಯಲ್ಲೇ ಉರುಳು ಸೇವೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರೆ, ಟೈರ್‌ಗೆ ಬೆಂಕಿ ಹಚ್ಚಲು ಕೂಡ ಯತ್ನಿಸಿದರು. ತಮಿಳುನಾಡಿಗೆ ನೀರು ಬಿಡದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ನೀರು ಬಿಟ್ಟರೆ ರೈತರ ಜೊತೆ ಹೋರಾಟ’

ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಣಿಗ ಕೂಡ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದರೆ ರೈತರೊಂದಿಗೆ ಸೇರಿಕೊಂಡು ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

KRS ಡ್ಯಾಂಗೆ ಬಿಜೆಪಿ ಮುತ್ತಿಗೆ

ಕಾವೇರಿ ನೀರು ಹಂಚಿಕೆ ವಿಚಾರವಾಗಿ ಬಿಜೆಪಿ ನಾಯಕರು ಇಂದು ಕೆಆರ್‌ಎಸ್ ಡ್ಯಾಂಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಆರ್‌ಎಸ್ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ 1,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಮಂಡ್ಯದಲ್ಲಿ ‘ಜನನಾಯಗನ್’ ಶೋ ಬಂದ್

ಕಾವೇರಿ ವಿವಾದದ ಬಿಸಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ ‘ಜನನಾಯಗನ್’ ಸಿನಿಮಾಗೂ ತಟ್ಟಿದೆ. ತಮಿಳುನಾಡು ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ವಿಜಯ್ ನಟನೆಯ ಸಿನಿಮಾ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಮಂಡ್ಯದ ಗುರುಶ್ರೀ ಚಿತ್ರಮಂದಿರಕ್ಕೆ ತೆರಳಿದ ಪ್ರತಿಭಟನಾಕಾರರು ಸಿನಿಮಾ ಪ್ರದರ್ಶನವನ್ನು ವಿರೋಧಿಸಿ ಪೋಸ್ಟರ್ ಹರಿದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಚಿತ್ರಮಂದಿರದಲ್ಲಿ ‘ಜನನಾಯಗನ್’ ಪ್ರದರ್ಶನ ಸ್ಥಗಿತಗೊಂಡಿತು.

ರಾಮನಗರ, ಹುಬ್ಬಳ್ಳಿ, ಕಾರವಾರದಲ್ಲೂ ಪ್ರತಿಭಟನೆ

ಕಾವೇರಿ ನೀರು ವಿವಾದದ ಕಿಚ್ಚು ಮಂಡ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.

ಹುಬ್ಬಳ್ಳಿಯಲ್ಲೂ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಆಗ್ರಹಿಸಿದರು. ಕಾರವಾರದಲ್ಲೂ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಾವೇರಿ ಹೋರಾಟಕ್ಕೆ ಫಿಲಂ ಚೇಂಬರ್ ಬೆಂಬಲ

ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರರಂಗದ ಬೆಂಬಲವೂ ವ್ಯಕ್ತವಾಗಿದೆ. ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ಧಕ್ಕೆಯಾದರೆ ಫಿಲಂ ಚೇಂಬರ್ ಹೋರಾಟದೊಂದಿಗೆ ನಿಲ್ಲಲಿದೆ ಎಂದು ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ತಿಳಿಸಿದ್ದಾರೆ.

ಇದನ್ನೂ ಓದಿ: ಕಾವೇರಿ ನೀರು ಮಧ್ಯೆ ಕರ್ನಾಟಕಕ್ಕೆ ಮತ್ತೊಂದು ಶಾಕ್, ಮೇಕೆದಾಟು ಡಿಪಿಆರ್ ವಾಪಸ್

ಒಟ್ಟಿನಲ್ಲಿ, ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ಆದೇಶದ ವಿರುದ್ಧ ಮಂಡ್ಯ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ಉಗ್ರ ಸ್ವರೂಪ ಪಡೆಯುವ ಸಾಧ್ಯತೆ ಕಂಡುಬರುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ರಾಜ್ಯದ ವಾಯು ಗುಣಮಟ್ಟ ತೃಪ್ತಿಕರ; ಬೆಂಗಳೂರಿನಲ್ಲಿ ಮಧ್ಯಮ ಮಟ್ಟದ AQI ದಾಖಲು – Kannada News | Karnataka AQI Today: Bengaluru Air Quality Remains Moderate, Most Cities Record Satisfactory AQI

ಬೆಂಗಳೂರು, ಜುಲೈ 31: ರಾಜ್ಯದಲ್ಲಿ ಮುಂಗಾರು ಮಳೆಯ ಪರಿಣಾಮ ವಾಯು ಮಾಲಿನ್ಯ ಪ್ರಮಾಣದಲ್ಲಿ ಕೊಂಚ ಇಳಿಕೆ ಕಂಡುಬಂದಿದ್ದು, ಇಂದು ಬಹುತೇಕ ನಗರಗಳಲ್ಲಿ ಗಾಳಿಯ ಗುಣಮಟ್ಟ (AQI) ‘ತೃಪ್ತಿಕರ’ (Satisfactory) ಮತ್ತು ‘ಮಧ್ಯಮ’ (Moderate) ಮಟ್ಟದಲ್ಲಿದೆ. ಬೆಂಗಳೂರಿನಲ್ಲಿ AQI ಸುಮಾರು 60 ರಿಂದ 80ರ ನಡುವಿನ ಮಟ್ಟದಲ್ಲಿ ದಾಖಲಾಗಿದ್ದು, ಆರೋಗ್ಯವಂತರು ಸಾಮಾನ್ಯ ಚಟುವಟಿಕೆಗಳನ್ನು ನಿರಾಳವಾಗಿ ನಡೆಸಬಹುದಾದ ಪರಿಸ್ಥಿತಿ ಇದೆ. ಆದರೆ ಮಕ್ಕಳು, ಹಿರಿಯ ನಾಗರಿಕರು ಹಾಗೂ ಉಸಿರಾಟದ ಸಮಸ್ಯೆ ಇರುವವರು ಹೆಚ್ಚಿನ ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲಿ ಹೆಚ್ಚು ಸಮಯ ಕಳೆಯದಿರುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಯಾವ ನಗರದಲ್ಲಿ ಎಷ್ಟು AQI?

ಲಭ್ಯವಿರುವ ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ತೃಪ್ತಿಕರವಾಗಿದ್ದರೆ, ಮೈಸೂರು, ಮಂಡ್ಯ ಹಾಗೂ ರಾಮನಗರ ಭಾಗಗಳಲ್ಲಿಯೂ ಗಾಳಿಯ ಗುಣಮಟ್ಟ ಉತ್ತಮದಿಂದ ಮಧ್ಯಮ ಮಟ್ಟದಲ್ಲಿದೆ. ಮತ್ತೊಂದೆಡೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಹಾಗೂ ಮಡಿಕೇರಿ ಭಾಗಗಳಲ್ಲಿ ಕೆಲವೆಡೆ AQI ಮಧ್ಯಮದಿಂದ ಸ್ವಲ್ಪ ಹೆಚ್ಚಿದ ಮಟ್ಟದಲ್ಲಿ ದಾಖಲಾಗಿದ್ದು, ವಾಹನ ಸಂಚಾರ, ತೇವಾಂಶ ಹಾಗೂ ಸ್ಥಳೀಯ ಹವಾಮಾನ ಇದಕ್ಕೆ ಕಾರಣವಾಗಿದೆ. ರಾಜ್ಯದ ಬಹುತೇಕ ನಗರಗಳಲ್ಲಿ AQI 100ರ ಒಳಗೇ ಇರುವುದರಿಂದ ಗಂಭೀರ ವಾಯು ಮಾಲಿನ್ಯದ ಆತಂಕ ಸದ್ಯಕ್ಕೆ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಳೆ ಪರಿಣಾಮದಿಂದ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ

ಮುಂಗಾರು ಮಳೆಯು ಧೂಳು ಹಾಗೂ ಸೂಕ್ಷ್ಮ ಕಣಗಳನ್ನು ನೆಲಕ್ಕಿಳಿಸುವುದರಿಂದ ವಾಯು ಗುಣಮಟ್ಟ ಸುಧಾರಣೆಗೆ ನೆರವಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ವಾಹನ ದಟ್ಟಣೆ ಮತ್ತು ನಿರ್ಮಾಣ ಕಾಮಗಾರಿಗಳಿಂದ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ AQI 100ರ ಗಡಿ ದಾಟಿದ್ದರೂ, ಇತ್ತೀಚಿನ ಮಳೆಯ ಪರಿಣಾಮ ಮಾಲಿನ್ಯ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ಆದಾಗ್ಯೂ, ಪೀಕ್ ಟ್ರಾಫಿಕ್ ವೇಳೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಜಂಕ್ಷನ್‌ಗಳು ಹಾಗೂ ನಿರ್ಮಾಣ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ PM2.5 ಮತ್ತು PM10 ಕಣಗಳ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ನಾಗರಿಕರು ಮುನ್ನೆಚ್ಚರಿಕೆ ವಹಿಸುವಂತೆ ಪರಿಸರ ತಜ್ಞರು ಸೂಚಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version