ರಾಂಪುರ, ಜನವರಿ 12: ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಪೊಲೀಸ್ ಠಾಣೆಯೊಳಗೆ ಬಜರಂಗದಳದ ಕಾರ್ಯಕರ್ತ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು ಪೊಲೀಸ್ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಸೂರಜ್ ಪಟೇಲ್ ಎಂಬ ವ್ಯಕ್ತಿ ಪೊಲೀಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳನ್ನು ಬಳಸಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. “ನನ್ನನ್ನು ಮುಟ್ಟಿ ನೋಡಿ, ಇಡೀ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ” ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಸೂರಜ್ ಪಟೇಲ್ ಪೂರ್ವಾನುಮತಿ ಇಲ್ಲದೆ ಪೊಲೀಸ್ ಠಾಣೆಗೆ ಬಂದು ಆ ಸಮಯದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಸುಹೈಲ್ ಎಂಬ ವ್ಯಕ್ತಿಯನ್ನು ಭೇಟಿಯಾಗಬೇಕೆಂದು ಹಠ ಹಿಡಿದಾಗ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ತನಿಖಾಧಿಕಾರಿ ಅಥವಾ ಕರ್ತವ್ಯ ಅಧಿಕಾರಿಯನ್ನು ಸಂಪರ್ಕಿಸಲು ಸೂಚಿಸಿದ್ದಾರೆ. ಇದರಿಂದ ಸೂರಜ್ ಆಕ್ರೋಶಗೊಂಡರು. ಈ ಘಟನೆಯನ್ನು ಸ್ಥಳದಲ್ಲಿದ್ದ ಯಾರೋ ಒಬ್ಬರು ರೆಕಾರ್ಡ್ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಹಿಳಾ ಪ್ರೀಮಿಯರ್ ಲೀಗ್ 2026 ರ ಸೀಸನ್ಗೆ ಅದ್ಭುತ ಆರಂಭ ಸಿಕ್ಕಿದೆ. ನಡೆದಿರುವ ಐದು ಪಂದ್ಯಗಳು ಅಭಿಮಾನಿಗಳನ್ನು ರಂಜಿಸಿವೆ. ಟೂರ್ನಮೆಂಟ್ನ ಆರಂಭಿಕ ಪಂದ್ಯಗಳು ನವಿ ಮುಂಬೈನಲ್ಲಿ ನಡೆಯುತ್ತಿದ್ದು, ಎಲ್ಲಾ ಪಂದ್ಯಗಳಿಗೂ ಕ್ರೀಡಾಂಗಣ ಭರ್ತಿಯಾಗುತ್ತಿದೆ. ಒಟ್ಟಾರೆಯಾಗಿ, ಟೂರ್ನಮೆಂಟ್ ಉತ್ತಮ ಆರಂಭವನ್ನು ಕಂಡಿರುವುದು ಬಿಸಿಸಿಐಗೆ ಸಮಾಧಾನಕರ ಸುದ್ದಿಯಾಗಿದೆ.
ಆದಾಗ್ಯೂ ಬಿಸಿಸಿಐಗೆ ಕೊಂಚ ಹಿನ್ನಡೆಯುಂಟಾಗಿದ್ದು, ಟೂರ್ನಮೆಂಟ್ನ ಎರಡು ಪಂದ್ಯಗಳಿಗೆ ಪ್ರೇಕ್ಷಕರಿಗೆ ಮೈದಾನಕ್ಕೆ ಎಂಟ್ರಿ ಇಲ್ಲ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಮುಂಬೈ ಮತ್ತು ನವಿ ಮುಂಬೈನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಂದಾಗಿ ಭದ್ರತಾ ದೃಷ್ಟಿಯಿಂದ ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.
ಈ ತಿಂಗಳ 15 ರಂದು ಮಹಾರಾಷ್ಟ್ರದಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳು ನಡೆಯಲಿವೆ. ಈ ಚುನಾವಣಾ ಕರ್ತವ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಭಾಗವಹಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ನವಿ ಮುಂಬೈನಲ್ಲಿ WPL ಪಂದ್ಯಗಳನ್ನು ಸಹ ನಿಗದಿಪಡಿಸಲಾಗಿದೆ. ಮತದಾನದ ದಿನ ಮತ್ತು ಚುನಾವಣೆಯ ಹಿಂದಿನ ದಿನದಂದು ಭದ್ರತೆ ಒದಗಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಈ ಕಾರಣದಿಂದಾಗಿ, ಜನವರಿ 14, 15 ಮತ್ತು 16 ರಂದು ನಿಗದಿಯಾಗಿದ್ದ ಪಂದ್ಯಗಳನ್ನು ಖಾಲಿ ಕ್ರೀಡಾಂಗಣಗಳಲ್ಲಿ ನಡೆಸಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ. ವೇಳಾಪಟ್ಟಿಯ ಪ್ರಕಾರ ಜನವರಿ 14 ರಂದು ದೆಹಲಿ ಕ್ಯಾಪಿಟಲ್ಸ್ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಸೆಣಸಲಿದ್ದು, ನವೆಂಬರ್ 15 ರಂದು ಮುಂಬೈ ಇಂಡಿಯನ್ಸ್, ಯುಪಿ ವಾರಿಯರ್ಸ್ ವಿರುದ್ಧ ಸೆಣಸಲಿದೆ.
ಹಾಗೆಯೇ ಈ ಎರಡು ಪಂದ್ಯಗಳು ಮಾತ್ರವಲ್ಲದೆ, ಜನವರಿ 16 ರಂದು ನಡೆಯಲಿರುವ ಆರ್ಸಿಬಿ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಪಂದ್ಯವನ್ನು ಸಹ ಪ್ರೇಕ್ಷಕರಿಲ್ಲದೆ ನಡೆಸಬೇಕಾಗಬಹುದು, ಏಕೆಂದರೆ ಆ ದಿನ ಮತ ಎಣಿಕೆ ಮತ್ತು ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಆದಾಗ್ಯೂ, ಈ ವಿಷಯದ ಬಗ್ಗೆ ಈ ಸಮಯದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ. ಆದಾಗ್ಯೂ ಈ 3 ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲಿ ನಡೆದರೆ ಬಿಸಿಸಿಐ ಆದಾಯದ ಮೇಲೆ ಪರಿಣಾಮ ಬೀರಬಹುದು.
ಪ್ರಸ್ತುತ, ಈ ಮೂರು ದಿನಾಂಕಗಳ ಪಂದ್ಯಗಳ ಟಿಕೆಟ್ ಮಾರಾಟವನ್ನು ಅಧಿಕೃತ ಟಿಕೆಟ್ ವೇದಿಕೆಗಳಲ್ಲಿ ಸ್ಥಗಿತಗೊಳಿಸಲಾಗಿದೆ. ಜನವರಿ 17 ರಂದು ನಡೆಯುವ ಡಬಲ್ ಹೆಡರ್ ಪಂದ್ಯಗಳಿಗೆ ಮಾತ್ರ ಟಿಕೆಟ್ಗಳು ಲಭ್ಯವಿದೆ. ಇದರರ್ಥ 17 ರಿಂದ ಮತ್ತೆ ಪ್ರೇಕ್ಷಕರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.
ಪಂದ್ಯಗಳು ನಿಗದಿಯಂತೆ ನಡೆಯಲಿವೆ, ಆದರೆ ಜನಸಂದಣಿಯನ್ನು ನಿಯಂತ್ರಿಸುವ ಬಗ್ಗೆ ಮಾತ್ರ ಚರ್ಚಿಸಲಾಗುತ್ತಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಚುನಾವಣಾ ದಿನಾಂಕಗಳನ್ನು ಘೋಷಿಸುವ ಮೊದಲು ಡಬ್ಲ್ಯೂಪಿಎಲ್ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿರುವುದರಿಂದ ಈ ಪರಿಸ್ಥಿತಿ ಉದ್ಭವಿಸಿದೆ. ಆರಂಭಿಕ ಪಂದ್ಯಗಳಿಗೆ ಪ್ರೇಕ್ಷಕರಿಂದ ಭಾರಿ ಪ್ರತಿಕ್ರಿಯೆ ದೊರೆತ ಸಮಯದಲ್ಲಿ, ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ಆಡುವುದನ್ನು ನೋಡುವುದು ಅಭಿಮಾನಿಗಳಿಗೆ ಸ್ವಲ್ಪ ನಿರಾಶಾದಾಯಕವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಡೆಸ್ಕ್‌ನಲ್ಲೇ ಕುಳಿತು ಕೆಲಸ ಮಾಡುವ ವೃತ್ತಿಪರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ದಿನಕ್ಕೆ ಎಂಟು ಗಂಟೆಗಳಿಗೂ ಹೆಚ್ಚು ಕಾಲ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ಉದ್ಯೋಗಿಗಳು ಸರಿಯಾದ ಭಂಗಿಯ ಬದಲು ಮನಸ್ಸಿಗೆ ಬಂದಂತೆ ಕುಳಿತುಕೊಂಡಿರುತ್ತಾರೆ. ಇದರ ಜೊತೆಗೆ, ಕೆಲಸ ಮಾಡುವ ಸ್ಥಳ ಅಥವಾ ಆಫೀಸ್ ತಲುಪುವುದಕ್ಕಾಗಿ ಕೆಟ್ಟ ಕೆಟ್ಟ ರಸ್ತೆಗಳಲ್ಲಿ ಎರಡು ಮೂರು ಗಂಟೆಗಳ ಕಾಲ ಸಂಚರಿಸುತ್ತಾರೆ. ಹೀಗೆ ನಮ್ಮ ಮಧ್ಯೆ ಇರುವ ಅತ್ಯಧಿಕ ಜನ ತಮ್ಮ ದಿನದ ಹೆಚ್ಚಿನ ಅವಧಿಯನ್ನು ಕುಳಿತುಕೊಂಡೇ ಕಳೆಯುತ್ತಾರೆ. ಹಾಗಾಗಿ ಕುಳಿತುಕೊಳ್ಳುವ ಭಂಗಿ ಸರಿಯಾಗಿ ಇಲ್ಲದಿದ್ದರೆ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂಬುದರ ಬಗ್ಗೆ ಸರ್ಜಾಪುರ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯ ಕನ್ಸಲ್ಟೆಂಟ್- ನ್ಯೂರೊ ಸ್ಪೈನ್ ಸರ್ಜರಿ ಡಾ ಅಜಯ್ ಹೆಗ್ಡೆ (Dr. Ajay Hegde) ಅವರು ಈ ಕುರಿತು ಕೆಲವು ವಿಷಯಗಳನ್ನು ಟಿವಿ9 ಕನ್ನಡ ಜೊತೆ ಹಂಚಿಕೊಂಡಿದ್ದು ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.
ಡಾ ಅಜಯ್ ಹೆಗ್ಡೆ ಹೇಳುವ ಪ್ರಕಾರ, ಒಂದೇ ಜಾಗದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ಅಥವಾ ನಿಂತುಕೊಳ್ಳುವುದು, ದೇಹಕ್ಕೆ ಮತ್ತು ಭಂಗಿಗೆ ಪೂರಕವಲ್ಲದ ವಿನ್ಯಾಸ ಮತ್ತು ಚಲನಶೀಲತೆಯ ಕೊರತೆ, ಭಂಗಿಯ ಅಸಮತೋಲನ ಸೇರಿದಂತೆ ದಿನನಿತ್ಯ ರೂಢಿಸಿಕೊಂಡ ಹಲವಾರು ಅಭ್ಯಾಸಗಳು ಸ್ನಾಯು ಮತ್ತು ಮೂಳೆಗೆ ಸಂಬಂಧ ಪಟ್ಟ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇವುಗಳಲ್ಲಿ ಹರ್ನಿಯೇಟೆಡ್ ಡಿಸ್ಕ್, ಕಾರ್ಪಲ್ ಟನಲ್ ಸಿಂಡ್ರೋಮ್ ಮತ್ತು ದೀರ್ಘಕಾಲದ ಬೆನ್ನು ನೋವು ಪ್ರಮುಖವಾಗಿವೆ. ವಿಶೇಷವಾಗಿ ಯುವ ಜನತೆಯಲ್ಲಿ ಕುತ್ತಿಗೆ ನೋವು, ಭುಜದ ಬಿಗಿತದಂತಹ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗುತ್ತಿರುವುದನ್ನು ಆರೋಗ್ಯ ತಜ್ಞರು ಗಮನಿಸಿದ್ದಾರೆ ಎಂದು ಹೇಳಿದ್ದಾರೆ.
ಬೆನ್ನು ನೋವಿನ ಸಮಸ್ಯೆ ಹೆಚ್ಚಳಕ್ಕೆ ಕಾರಣವೇನು?
ಕೊರೊನಾ ಸಾಂಕ್ರಾಮಿಕ ಕಡಿಮೆಯಾದ ನಂತರ ಉದ್ಯೋಗಿಗಳು ಮತ್ತೆ ಪುನಃ ಆಫೀಸ್ ಗಳಿಗೆ ಹೋಗಲು ಆರಂಭಿಸಿದ್ದು ಸಹಜವಾಗಿ ಪ್ರಯಾಣವನ್ನು ಪುನರಾರಂಭಿಸಿದ್ದಾರೆ. ಈ ಬದಲಾವಣೆಯು ಬೆನ್ನು ನೋವಿನ ಸಮಸ್ಯೆ 10 ರಿಂದ 30% ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ.
ಸ್ಥಿರವಾಗಿ ಕುಳಿತುಕೊಳ್ಳುವುದು, ದೀರ್ಘ ಪ್ರಯಾಣ ಮಾಡುವುದು ಮತ್ತು ಹೆಚ್ಚಿನ ಒತ್ತಡದಿಂದ ಸ್ನಾಯು- ಮೂಳೆಗೆ ಸಂಬಂಧಿಸಿದ ಕಾಯಿಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಕೇವಲ ವೃತ್ತಿಪರರು ಮಾತ್ರವಲ್ಲದೇ, ವಿದ್ಯಾರ್ಥಿಗಳು ಮತ್ತು ವಯಸ್ಕರನ್ನೂ ಸಹ ಈ ರೀತಿಯ ಸಮಸ್ಯೆ ವ್ಯಾಪಕವಾಗಿ ಬಾಧಿಸುತ್ತಿವೆ.
ವಾರಕ್ಕೆ 40 ಗಂಟೆಗಳಿಗಿಂತ ಹೆಚ್ಚು ಸಮಯ ಕುಳಿತು ಕೆಲಸ ಮಾಡುವವರು ಮತ್ತು ದೀರ್ಘ ಪ್ರಯಾಣ ಮಾಡುವವರಲ್ಲಿ ಈ ರೀತಿಯ ಸ್ನಾಯು- ಮೂಳೆಗಳ ನೋವು ಹೆಚ್ಚಾಗಿ ಕಂಡುಬರುತ್ತಿದೆ.
ದೈನಂದಿನ ಪ್ರಯಾಣದಿಂದಾಗುವ ಸಮಸ್ಯೆಗಳನ್ನು ಕಡಿಮೆ ಮಾಡಲು ರಸ್ತೆಗಳ ಗುಣಮಟ್ಟವನ್ನು ಸುಧಾರಿಸುವುದು ಮುಖ್ಯ. ಜೊತೆಗೆ ಕಚೇರಿಗಳಲ್ಲಿ ಸಮಯ ಸಿಕ್ಕಾಗ ವಿರಾಮ ತೆಗೆದುಕೊಂಡು ಸ್ವಲ್ಪ ಚಲಿಸಬೇಕು. ಒಂದೇ ಕಡೆಯಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವುದಕ್ಕಿಂತ ಗಂಟೆಗೊಮ್ಮೆಯಾದರೂ ಎದ್ದು ತಿರುಗಾಡುವುದು ಒಳ್ಳೆಯದು. ಸಾಧ್ಯವಾದಲ್ಲಿ ಸಾರ್ವಜನಿಕ ಸಾರಿಗೆಯ ಬಳಕೆ ಮಾಡುವುದು. ಒಟ್ಟಾರೆ, ಬೆಂಗಳೂರಿನಲ್ಲಿ ಕೆಲಸ ಮತ್ತು ಪ್ರಯಾಣ ಸೇರಿದಂತೆ ದೈನಂದಿನ ಒತ್ತಡಗಳು ನಗರದ ಉದ್ಯೋಗಿಗಳ ಆರೋಗ್ಯ ಮತ್ತು ಭಂಗಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಇದನ್ನು ಎದುರಿಸಲು ಕೆಲವು ಬದಲಾವಣೆ ಮಾಡಿಕೊಳ್ಳುವುದು ಬಹಳ ಒಳ್ಳೆಯದು.
ವಿಜಯಪುರ, ಜನವರಿ 12: ಬಿಜೆಪಿಯಿಂದ ಉಚ್ಛಾಟನೆಗೊಂಡಿರೋ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಹೈಕಮಾಂಡ್ ನಾಯಯಕರು ತಮ್ಮ ಜೊತೆ ನೇರ ಸಂಪರ್ಕದಲ್ಲಿ ಇರೋದಾಗಿ ಯತ್ನಾಳ್ ಹೇಳಿರೋದೀಗ ಭಾರಿ ಕುತೂಹಲ ಕೆರಳಿಸಿದೆ. ವಿಜಯಪುರ ಶಾಸಕ ಮರಳಿ ಬಿಜೆಪಿಗೆ ಬರ್ತಾರಾ ಎನ್ನುವ ಪ್ರಶ್ನೆಗಳು ಇತ್ತೀಚೆಗೆ ಮೇಲಿಂದ ಮೇಲೆ ಕೇಳಿಬರುತ್ತಿತ್ತು. ಈ ನಡುವೆ ಉಚ್ಛಾಟಿತ ನಾಯಕನ ಹೇಳಿಕೆ ಹೊಸ ಚರ್ಚೆ ಹುಟ್ಟುಹಾಕಿದೆ. ಕಾಂಗ್ರೆಸ್ ಹಿರಿಯ ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕುರಿತೂ ಶಾಸಕ ಯತ್ನಾಳ್ ಮಹತ್ವದ ಹೇಳಿಕೆ ನೀಡಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡೋದಾಗಿ ತಿಳಿಸಿದ್ದಾರೆ. ಅಲ್ಲದೆ, ಪಕ್ಷದ ಅಭ್ಯರ್ಥಿಗಳು ಆಹ್ವಾನಿಸಿದರೆ ಪ್ರಚಾರಕ್ಕೂ ಹೋಗಲು ಸಿದ್ಧವಿರುವುದಾಗಿ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ನವದೆಹಲಿ, ಜನವರಿ 12: ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಇಂದು ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನವೆಂಬರ್ 10ರ ದೆಹಲಿ ಸ್ಫೋಟವನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ (UN) ಚಾರ್ಟರ್ ಪ್ರಕಾರ “ಸಮಗ್ರ ಮತ್ತು ನಿರಂತರ ರೀತಿಯಲ್ಲಿ” ಭಯೋತ್ಪಾದನೆಯನ್ನು ಎದುರಿಸಲು ಸಂಘಟಿತ ಅಂತರರಾಷ್ಟ್ರೀಯ ಪ್ರಯತ್ನಗಳಿಗೆ ಕರೆ ನೀಡಿದರು.
ಭಾರತ ಮತ್ತು ಜರ್ಮನಿ ಜಂಟಿಯಾಗಿ ನೇತೃತ್ವದ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮದ (ಐಪಿಒಐ) ಸಾಮರ್ಥ್ಯ ವೃದ್ಧಿ ಮತ್ತು ಸಂಪನ್ಮೂಲ ಹಂಚಿಕೆ ಸ್ತಂಭದ ಅಡಿಯಲ್ಲಿ ಚಟುವಟಿಕೆಗಳನ್ನು ಒಳಗೊಂಡಂತೆ ಈ ಪ್ರದೇಶದಲ್ಲಿ ಬರ್ಲಿನ್‌ನ ನಿರಂತರ ಪ್ರಕ್ರಿಯೆಗಳನ್ನು ಭಾರತ ಸ್ವಾಗತಿಸಿದೆ.
“ಯುಎನ್ 1267 ನಿರ್ಬಂಧಗಳ ಸಮಿತಿಯಲ್ಲಿ ಪಟ್ಟಿ ಮಾಡಲಾದವುಗಳನ್ನು ಒಳಗೊಂಡಂತೆ ಭಯೋತ್ಪಾದಕರು ಮತ್ತು ಭಯೋತ್ಪಾದಕ ಘಟಕಗಳ ವಿರುದ್ಧ ಸಹಕಾರವನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ಭಯೋತ್ಪಾದಕ ಸುರಕ್ಷಿತ ತಾಣಗಳು ಮತ್ತು ಮೂಲಸೌಕರ್ಯವನ್ನು ನಿರ್ಮೂಲನೆ ಮಾಡಲು ಹಾಗೂ ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಭಯೋತ್ಪಾದಕ ಜಾಲಗಳು ಮತ್ತು ಹಣಕಾಸು ಅಡ್ಡಿಪಡಿಸಲು ಎರಡೂ ದೇಶಗಳು ಕೆಲಸ ಮಾಡುವುದನ್ನು ಮುಂದುವರಿಸಲು ಕರೆ ನೀಡಿವೆ” ಎಂದು ಜಂಟಿ ಹೇಳಿಕೆ ತಿಳಿಸಿದೆ.
ಭಾರತ ಮತ್ತು ಜರ್ಮನ್ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಮೆರ್ಜ್ ಇಂದು 2 ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ತಮ್ಮ ಭೇಟಿಯ ಮೊದಲ ದಿನದಂದು ಮೆರ್ಜ್ ಅಹಮದಾಬಾದ್‌ನಲ್ಲಿರುವ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು. ನಂತರ, ಅವರು ಮತ್ತು ಪ್ರಧಾನಿ ಮೋದಿ ಸಬರಮತಿ ನದಿ ದಂಡೆಗೆ ಭೇಟಿ ನೀಡಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಉದ್ಘಾಟಿಸಿದರು.
ಇದರ ನಂತರ, ಇಬ್ಬರು ನಾಯಕರು ದ್ವಿಪಕ್ಷೀಯ ಸಭೆ ನಡೆಸಿದರು, ಈ ಸಂದರ್ಭದಲ್ಲಿ ಅವರು ರಷ್ಯಾ-ಉಕ್ರೇನ್ ಯುದ್ಧ ಮತ್ತು ಗಾಜಾದಲ್ಲಿನ ಪರಿಸ್ಥಿತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ಹಾಗೇ, ಭಯೋತ್ಪಾದನೆ ಮಾನವೀಯತೆಗೆ ಗಂಭೀರ ಬೆದರಿಕೆ ಎಂದು ಇಬ್ಬರೂ ಅಭಿಪ್ರಾಯಪಟ್ಟರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚಿಕ್ಕಬಳ್ಳಾಪುರ, (ಜನವರಿ 12): ಕೆಎಸ್ಆರ್ಟಿಸಿ ಬಸ್ ನಲ್ಲಿ 22 ಲಕ್ಷ ರೂಪಾಯಿ ಮೌಲ್ಯದ 240 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆಯನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಳಗವಾರ ಗ್ರಾಮದ ಮಹಿಳೆ ವನಜಾಕ್ಷಿ ಎಂಬಾಕೆ, ದೇವಸ್ಥಾನಕ್ಕೆ ಹೋಗುವ ಸಲುವಾಗಿ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಕ್ರಾಸ್ ನಿಂದ ಸೂಲಿಬೆಲೆಗೆ ತೆರಳಲು ಬಸ್ ಹತ್ತುತ್ತಿದ್ದ ವೇಳೆ, ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು, ಆಂದ್ರ ಪ್ರದೇಶದ ಕುಪ್ಪಂ ಮೂಲದ ಮೀನಾಕ್ಷಿಯನ್ನ ಬಂಧಿಸಿದ್ದಾರೆ. ಬಂಧಿತ ಮಹಿಳೆಯಿಂದ 22 ಲಕ್ಷ ರೂಪಾಯಿ ಮೌಲ್ಯದ 240 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ನಟಿ, ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ಬಿಗ್ ಬಾಸ್ ಫಿನಾಲೆ (Bigg Boss Kannada Finale) ವಾರಕ್ಕೆ ಕಾಲಿಟ್ಟಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಯಾವುದೇ ಟಾಸ್ಕ್ ಇಲ್ಲ. ಆದರೆ ಕೆಲವು ಚಟುವಟಿಕೆಗಳನ್ನು ನೀಡಲಾಗಿದೆ. ಅಭಿಮಾನಿಗಳು ನಿಮ್ಮನ್ನು ಯಾವ ಬಿರುದುಗಳಿಂದ ಗುರುತಿಸಬೇಕು ಎಂಬ ಇಚ್ಛೆ ಇದೆ ಎಂದು ಸ್ಪರ್ಧಿಗಳಿಗೆ ಬಿಗ್ ಬಾಸ್ ಕೇಳಿದ್ದಾರೆ. ಅಶ್ವಿನಿ ಗೌಡ (Ashwini Gowda) ಅವರು ತಮ್ಮ ಆಯ್ಕೆಗಳನ್ನು ತಿಳಿಸಿದ್ದಾರೆ. ‘ಛಲಗಾರ್ತಿ ಅಶ್ವಿನಿ, ಹಠವಾದಿ ಅಶ್ವಿನಿ, ಕಿಚ್ಚು ಅಶ್ವಿನಿ, ಬೆಂಕಿ ಅಶ್ವಿನಿ, ಖಡಕ್ ಅಶ್ವಿನಿ’ ಎಂಬಿತ್ಯಾದಿ ಬಿರುದುಗಳನ್ನು ಅಶ್ವಿನಿ ಗೌಡ ಅವರು ಸೂಚಿಸಿದ್ದಾರೆ. ಗಿಲ್ಲಿ ನಟ (Gilli Nata) ಅವರು ‘ಪಳಾರ್ ಗಿಲ್ಲಿ, ಕಲಾಕಾರ್ ಗಿಲ್ಲಿ, ಕಿತಾಪತಿ ಕಿಂಗ್, ಮಾತಿನ ಮಲ್ಲ’ ಎಂಬಿತ್ಯಾದಿ ಬಿರುದುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಬರಲಿದೆ. ವೀಕ್ಷಕರ ಕೌತುಕ ಹೆಚ್ಚಾಗಿದೆ.
ಬೆಂಗಳೂರು, ಜನವರಿ 12: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail)ಇತ್ತೀಚೆಗೆ ಪರಿಶೀಲನೆ ನಡೆಸಿದ್ದಾಗ ಮೊಬೈಲ್ (Mobile) ಹಾಗೂ ಸಿಮ್ ಕಾರ್ಡ್ಗಳು ಪತ್ತೆಯಾಗಿದ್ದವು. ಆದರೆ ಇದೀಗ ವಿಚಿತ್ರ ಘಟನೆಯೊಂದು ನಡೆದಿದೆ. ಜೈಲಿನಲ್ಲಿರುವ ಮಗನ ಭೇಟಿಗೆ ಬಂದಿದ್ದ ತಾಯಿ ತಮ್ಮ ಖಾಸಗಿ ಭಾಗದಲ್ಲಿ ಮೊಬೈಲ್ ಕೊಂಡೊಯ್ದು ಸಿಕ್ಕಿಬಿದಿದ್ದಾರೆ. ಸದ್ಯ ತಾಯಿ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜೈಲಿನಲ್ಲಿರುವ ಮಗ ಭರತ್ನನ್ನು ನೋಡಲು ತಾಯಿ ಲಕ್ಷ್ಮೀ ನರಸಮ್ಮ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು. ವಿಸಿಟರ್ ಪಾಸ್ ಪಡೆದುಕೊಂಡು ಬಂದಿದ್ದ ಲಕ್ಷ್ಮೀ ನರಸಮ್ಮರನ್ನು ತಪಾಸಣೆ ಮಾಡಿದಾಗ ಗುಪ್ತಾಂಗದಲ್ಲಿ ಮೊಬೈಲ್ ಇಟ್ಕೊಂಡು ಬಂದಿದ್ದು ಪತ್ತೆ ಆಗಿದೆ.
ಎಫ್ಐಆರ್ನಲ್ಲಿ ಏನಿದೆ?
ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಪರಮೇಶ್ ಹೆಚ್.ಎ ಅವರ ತಮ್ಮ ಸಂಸ್ಥೆಯ ಸಿಬ್ಬಂದಿ ಕು. ವಸಂತಮ್ಮ ವೀಕ್ಷಕಿ ಮುಖ್ಯ ವೀಕ್ಷಕರು ಮುಖಾಂತರ ಕಳುಹಿಸಿದ ದೂರಿನ ಸಾರಾಂಶವೇನೆಂದರೆ ಕೇಂದ್ರ ಕಾರಾಗೃಹದ ಮುಖ್ಯದ್ವಾರದ ಹೊರಗೆ ಎಡಭಾಗದಲ್ಲಿರುವ ತಪಾಸಣಾ ವಿಭಾಗ-01 (ಸಾಮಾನ್ಯ ಸಂದರ್ಶನ ವಿಭಾಗ) ಬಂದಿಗಳ ಸಂದರ್ಶನಕ್ಕೆ ಬರುವ ಸಾರ್ವಜನಿಕರನ್ನು ಮತ್ತು ಅವರು ತರುವಂತಹ ವಸ್ತುಗಳನ್ನು ತಪಾಸಣೆ ಮಾಡಲು ಸಾಮಾನ್ಯ ಕರ್ತವ್ಯಕ್ಕೆ ಕೆಎಸ್ಐಎಸ್ಎಫ್ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಜನವರಿ 02ರಂದು ಸಮಯ ಸುಮಾರು ಮಧ್ಯಾಹ್ನ 12:10 ಗಂಟೆಗೆ ಸಾಮಾನ್ಯ ಸಂದರ್ಶನಕ್ಕೆ ಲಕ್ಷ್ಮೀ ನರಸಮ್ಮ (38) ಅವರು ವಿಸಿಟರ್ ಪಾಸ್ ಪಡೆದುಕೊಂಡು 9689/2205 ವಿಚಾರಣಾಧೀನಾ ಸಂಖ್ಯೆ ಹೊಂದಿರುವ ಭರತ್ ಎಂಬ ಕಾರಾಗೃಹ ಬಂದಿಯ ಸಂದರ್ಶನಕ್ಕೆ ಬಂದ ಸಂದರ್ಭದಲ್ಲಿ ತಪಾಸಣಾ ಕರ್ತವ್ಯದಲ್ಲಿದ್ದ ಆಶಾರಾಣಿ ವೈ ಎನ್, ತಪಾಸಣಾ ಕೊಠಡಿಗೆ ಕರೆದುಕೊಂಡು ಹೋಗಿ ಭೌತಿಕವಾಗಿ ತಪಾಸಣೆ ನಡೆಸಿದಾಗ, ಖಾಸಗಿ ಭಾಗದೊಳಗೆ ಒಂದು ಸಂಖ್ಯೆಯ ಬೇಸಿಕ್ ಕಂಪನಿಯ ನೀಲಿ ಬಣ್ಣದ ಮೊಬೈಲ್ (ಸಿಮ್ ಸಹಿತ) ಪತ್ತೆ ಆಗಿದೆ.
ಮಹಿಳೆಯು ಕಾರಾಗೃಹದ ನಿಯಮ ಉಲ್ಲಂಘನೆ ಮಾಡಿ ಕೆಎಸ್ಐಎಸ್ಎಫ್ ಸಿಬ್ಬಂದಿಯವರ ಕಣ್ಣಪ್ಪಿಸಿ ಕಾರಾಗೃಹದ ಒಳಗಡೆ ನಿಷೇಧಿತ ವಸ್ತು, ಸಾಗಿಸಲು ಪ್ರಯತ್ನಿಸಿರುವುದರಿಂದ ಲಕ್ಷ್ಮೀ ನರಸಮ್ಮ ಮತ್ತು ವಿಚಾರಣಾ ಬಂದಿ ಭರತ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ವರದಿಗಳ ಪ್ರಕಾರ, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರೂ, ದೆಹಲಿ ನಾಯಕ ಆಯುಷ್ ಬದೋನಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯಕ್ಕಾಗಿ ಕಾಯಬೇಕಾಗುತ್ತದೆ. ಎರಡನೇ ಪಂದ್ಯದಲ್ಲಿ ಆಯುಷ್ಗೆ ಆಡುವ ಅವಕಾಶ ಸಿಗುವ ಸಾಧ್ಯತೆಗಳಿಲ್ಲ. ತಂಡದ ಆಡಳಿತ ಮಂಡಳಿಯು ಬಡೋನಿಗಿಂತ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಆದ್ಯತೆ ನೀಡಲಿದೆ ಎಂದು ವರದಿಯಾಗಿದ್ದು, ಮುಂದಿನ ಏಕದಿನ ಪಂದ್ಯದಲ್ಲಿ ಅವರು ಆಡುವುದನ್ನು ಕಾಣಬಹುದು.
ಕಲಬುರಗಿ, (ಜನವರಿ 12): ಉತ್ತರ ಕರ್ನಾಟದ ಭಾಗದಲ್ಲಿ ಹುಟ್ಟಬೇಕಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun kharge) ಅವರು ತೀಕ್ಷ್ಣವಾಗಿ ಟಾಂಗ್ ಕೊಟ್ಟಿದ್ದಾರೆ. ಕಲಬುರಗಿ ಜಿಲ್ಲೆ ಯಡ್ರಾಮಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಖರ್ಗೆ, ಈ ಭಾಗದಲ್ಲಿ ಹುಟ್ಟಬೇಕಿತ್ತು ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ನೀವು ಇಲ್ಲಿ ಹುಟ್ಟುವುದು ಬೇಡ. ನಾವು ಅಲ್ಲಿ ಹುಟ್ಟುವುದು ಬೇಡ. ನಿಮ್ಮ ಮೈಸೂರು, ಬೆಂಗಳೂರಿನ ರೀತಿ ಅಭಿವೃದ್ಧಿ ಮಾಡಿ ಸಾಕು. ಮುಖ್ಯಮಂತ್ರಿ ಹಾಗೂ ಡಿಸಿಎಂ ಈ ಭಾಗದ ಬಗ್ಗೆ ಗಮನ ಕೊಡಿ. ದೆಹಲಿಯಿಂದ ಬಂದು ನಾನು ಜನರಿಗೆ ಪ್ರಚೋದನೆ ಕೊಡ್ತಿಲ್ಲ. ಅದರ ಬದಲಾಗಿ ನಿಮ್ಮ ಭಾಗದಷ್ಟೇ ನಮ್ಮ ಭಾಗವನ್ನು ಅಭಿವೃದ್ಧಿ ಮಾಡಿ ಎಂದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ