ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್ 11 ಪ್ರಕಟಿಸಿದ ಆರ್ ಅಶ್ವಿನ್ – Kannada News | India Test Squad for Sri Lanka Tour: Ashwin Picks Bold Playing XI

ಮುಂಬರುವ ಶ್ರೀಲಂಕಾ ಪ್ರವಾಸಕ್ಕಾಗಿ ಬಿಸಿಸಿಐ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಈ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಹಲವು ಹೊಸ ಮುಖಗಳ ಜೊತೆಗೆ ಹಲವು ಹಳೆಯ ಮುಖಗಳು ಸೇರಿವೆ. ಅದರಲ್ಲೂ ಗುರ್ನೂರ್ ಬ್ರಾರ್ ಮತ್ತು ಸರಾಂಶ್ ಜೈನ್ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುವ ಅವಕಾಶ ಹೊಂದಿದ್ದಾರೆ. ಹಾಗೆಯೇ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಟೆಸ್ಟ್ ತಂಡವನ್ನು ಕೂಡಿಕೊಂಡಿದ್ದಾರೆ. ಆದಾಗ್ಯೂ ಬುಮ್ರಾ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವುದು ಅವರ ಫಿಟ್‌ನೆಸ್ ಕ್ಲಿಯರೆನ್ಸ್ ಅನ್ನು ಅವಲಂಬಿಸಿರುತ್ತದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಇದೆಲ್ಲದರ ನಡುವೆ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಸಂಭಾವ್ಯ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದ್ದಾರೆ.

ತಂಡದಲ್ಲಿ ಮೂವರು ಸ್ಪಿನ್ನರ್‌

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಂಭಾವ್ಯ ಪ್ಲೇಯಿಂಗ್ 11 ಬಗ್ಗೆ ಮಾತನಾಡಿದ ಅಶ್ವಿನ್, ‘ ಈ ಟೆಸ್ಟ್ ಸರಣಿಯಲ್ಲಿ ರವೀಂದ್ರ ಜಡೇಜಾ ಖಂಡಿತವಾಗಿಯೂ ಆಡುತ್ತಾರೆ. ಹಾಗೆಯೇ ಕಳೆದ ಪಂದ್ಯದಲ್ಲಿ 7 ವಿಕೆಟ್ ಪಡೆದಿದ್ದ ಮಾನವ್ ಸುತಾರ್ ಜೊತೆಗೆ ಕುಲ್ದೀಪ್ ಯಾದವ್ ಕೂಡ ಆಡಬೇಕು ಎಂದಿದ್ದಾರೆ. ಅಂದರೆ ಅಶ್ವಿನ್ ತಮ್ಮ ತಂಡದಲ್ಲಿ ಮೂವರು ಸ್ಪಿನ್ನರ್‌ಗಳಿಗೆ ಅವಕಾಶ ನೀಡಿದ್ದಾರೆ.

ಬ್ಯಾಟಿಂಗ್ ಕ್ರಮಾಂಕ ಹೇಗಿರಬೇಕು

ಇವರ ಜೊತೆಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಸರಾಂಶ್ ಜೈನ್ ಅವರನ್ನು ಮೊದಲ ಟೆಸ್ಟ್‌ನಲ್ಲಿ ಆಡಿಸಬೇಕು. ಸರಾಂಶ್ ಜೈನ್ ಅವರನ್ನು 7 ನೇ ಸ್ಥಾನದಲ್ಲಿ ಆಡಿಸಬೇಕು ಎಂದು ನಾನು ಭಾವಿಸುತ್ತೇನೆ. 5 ನೇ ಸ್ಥಾನದಲ್ಲಿ ರಿಷಭ್ ಪಂತ್, 4 ನೇ ಸ್ಥಾನದಲ್ಲಿ ಶುಭ್​ಮನ್ ಗಿಲ್, 3 ನೇ ಸ್ಥಾನದಲ್ಲಿ ದೇವದತ್ ಪಡಿಕ್ಕಲ್ ಅಥವಾ ಸಾಯಿ ಸುದರ್ಶನ್, ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಆಡಬೇಕು ಎಂದಿದ್ದಾರೆ.

ಸಾಯಿ ಸುದರ್ಶನ್​ಗೆ ಅವಕಾಶ

ಇನ್ನು ಸಾಯಿ ಸುದರ್ಶನ್ ಅವರ ಅಮೋಘ ಫಾರ್ಮ್​ ಬಗ್ಗೆ ಮಾತನಾಡಿರುವ ಅಶ್ವಿನ್, ತಂಡಕ್ಕೆ ಅತಿದೊಡ್ಡ ಅನಾನುಕೂಲವೆಂದರೆ ಸಾಯಿ ಸುದರ್ಶನ್ ಅವರ ಫಿಟ್ನೆಸ್. ಇತ್ತೀಚೆಗೆ ಭಾರತ ‘ಎ’ ಸರಣಿಯಲ್ಲಿ ಸಾಯಿ ಎರಡು ಶತಕಗಳನ್ನು ಗಳಿಸಿದರು, ಅದರಲ್ಲಿ ಒಂದು ಶತಕ ಗ್ಯಾಲೆಯಲ್ಲಿ ಸಿಡಿಯಿತು. ಗಾಲೆಯಲ್ಲಿನ ಪರಿಸ್ಥಿತಿ ವಿಶಿಷ್ಟವಾಗಿದೆ. ಗಾಳಿಯಿಂದಾಗಿ ಚೆಂಡು ಗಾಳಿಯಲ್ಲಿ ಸ್ವಿಂಗ್ ಆಗುತ್ತದೆ. ಹೀಗಾಗಿ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಆದರೆ ಸಾಯಿ ಅಲ್ಲಿ ಶತಕ ಬಾರಿಸಿದರು. ಹೀಗಾಗಿ ಅವರ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ ಆದ್ದರಿಂದ ಅವರು ಫಿಟ್ ಆಗಿದ್ದರೆ ಭಾರತಕ್ಕೆ ಪ್ರಯೋಜನಕಾರಿಯಾಗಬಹುದು ಎಂದಿದ್ದಾರೆ.

ಭಾರತ ಟೆಸ್ಟ್ ತಂಡ

ಶುಭಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಜಸ್ಪ್ರೀತ್ ಬುಮ್ರಾ, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ಸರಾಂಶ್ ಜೈನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆತ್ಮಹತ್ಯೆ ಸ್ಪಾಟ್​ ಆಗುತ್ತಿದೆಯಾ ಮೆಟ್ರೋ? ಈವರೆಗೆ ಪ್ರಾಣ ಕಳೆದುಕೊಂಡವರೆಷ್ಟು? – Kannada News | Bengaluru Metro: 6 Deaths, 16 death Attempts, 10 Lakh in Fines Collected

ಬೆಂಗಳೂರು, ಜುಲೈ 29: ನಮ್ಮ ಮೆಟ್ರೋ (Namma Metro) ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವವರು, ಪ್ರಯಾಣಿಕರಿಗೆ ಕಿರಿಕಿರಿ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ ನಮ್ಮ ಮೆಟ್ರೋದಲ್ಲಿ 6 ಜನರು ಪ್ರಾಣ ಕಳೆದುಕೊಂಡಿದ್ದರೆ, 16 ಜನರು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದಾರೆ. 8 ಜನರು ಹಳಿಗೆ ಹಾರಿದ್ದರೆ, 30 ಜನರು ಅನಧಿಕೃತವಾಗಿ ಮೆಟ್ರೋ ಟ್ರ್ಯಾಕ್​​ಗೆ ಇಳಿದಿದ್ದಾರೆ.

ನಮ್ಮ ಮೆಟ್ರೋ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಳವಾಗುತ್ತಿದೆಯಾ?

ಇತ್ತೀಚೆಗೆ ನಮ್ಮ ಮೆಟ್ರೋ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಳವಾಗುತ್ತಿದೆಯಾ ಎಂಬ ಆತಂಕಗಳು ಎದುರಾಗಿವೆ. ಏಕೆಂದರೆ ಇಲ್ಲಿಯವರೆಗೆ ನಮ್ಮ 6 ಜನರು ಪ್ರಾಣ ಕಳೆದುಕೊಂಡಿದ್ದಾರೆ. 16 ಜನರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. 8 ಜನರು ಟ್ರ್ಯಾಕ್​ಗೆ ಹಾರಿದ್ದಾರೆ. 30 ಜನರು ಅನಧಿಕೃತವಾಗಿ ಮೆಟ್ರೋ ಟ್ರ್ಯಾಕ್​​ಗೆ ಇಳಿದಿದ್ದಾರೆ. ಇನ್ನು ಕಳೆದ ಸೋಮವಾರ ಆರ್.ವಿ ರೋಡ್ ಟು ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ಬರುವ ಹುಸ್ಕೂರು ಗೇಟ್ ಮೆಟ್ರೋ ಸ್ಟೇಷನ್​ನಲ್ಲಿ ಮೆಟ್ರೋ ರೈಲು ಬರುವ ವೇಳೆ ಸುಮಾರು 37 ವರ್ಷದ ವ್ಯಕ್ತಿ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

10 ಲಕ್ಷ ರೂ ದಂಡ ವಸೂಲಿ

ಇನ್ನು ಕಳೆದ ಮೂರು ವರ್ಷದಲ್ಲಿ ಬಿಎಂಆರ್ಸಿಎಲ್ ಅಧಿಕಾರಿಗಳು 2240 ಜನರ ಮೇಲೆ ಕೇಸ್ ದಾಖಲಿಸಿ, ಬರೋಬ್ಬರಿ 10 ಲಕ್ಷ ರೂ ದಂಡ ವಸೂಲಿ ಮಾಡಿದ್ದಾರೆ. ಮೆಟ್ರೋ ಟ್ರ್ಯಾಕ್​​ಗೆ ಜಿಗಿದ, ಟ್ರ್ಯಾಕ್ ಮೇಲೆ ಓಡಾಡಿದ, ಮದ್ಯಪಾನ ಮಾಡಿ ಮೆಟ್ರೋ ರೈಲಿನಲ್ಲಿ ಕಿರಿಕ್ ಮಾಡಿದ, ಜೋರಾಗಿ ಮ್ಯೂಸಿಕ್ ಹಾಕಿ ಪ್ರಯಾಣಿಕರಿಗೆ ತೊಂದರೆ ನೀಡಿದ, ಟಿಕೆಟ್, ಪಾಸ್ ದುರ್ಬಳಕೆ, ಊಟ-ತಿಂಡಿ ಮಾಡಿರುವುದು, ನೆಲದ ಮೇಲೆ ಕುಳಿತುಕೊಂಡಿದ್ದ, ರೈಲಿನಲ್ಲಿ ಅನ್ಯ ಪ್ರಯಾಣಿಕರ ಜೊತೆ ಜಗಳ, ರೈಲಿನಲ್ಲಿ ಉಗುಳಿದ ನಮ್ಮ ಮೆಟ್ರೋ ಪ್ರಯಾಣಿಕರಿಂದ ಕಳೆದ ಮೂರು ವರ್ಷದಲ್ಲಿ 2240 ಕೇಸ್ ದಾಖಲಿಸಲಾಗಿದ್ದು, ಬರೋಬ್ಬರಿ 10 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ.

904 ಪ್ರಯಾಣಿಕರು ಮೆಟ್ರೋದಲ್ಲಿ ಹುಚ್ಚಾಟ

2025ರಲ್ಲಿ 5 ಜನರು ಪ್ರಯಾಣಿಕರು ಆತ್ಮಹತ್ಯೆಗೆ ಯತ್ನಿಸಿದ್ದರೆ, ಒಬ್ಬ ಪ್ರಯಾಣಿಕ ಪ್ರಾಣ ಕಳೆದುಕೊಂಡಿದ್ದು, ಐವರು ಪ್ರಯಾಣಿಕರು ಅನಧಿಕೃತವಾಗಿ ಮೆಟ್ರೋ ಟ್ರ್ಯಾಕ್​ಗೆ ಇಳಿದಿದ್ದರು. ಇನ್ನು ಇಬ್ಬರು ಪ್ರಯಾಣಿಕರು ಟ್ರ್ಯಾಕ್​​ ಬಿದ್ದಿದ್ದರು. ‘ಈ ವರ್ಷದ ನಾಲ್ಕು ತಿಂಗಳಿನಲ್ಲಿ 904 ಪ್ರಯಾಣಿಕರು ಮೆಟ್ರೋದಲ್ಲಿ ಹುಚ್ಚಾಟವಾಡಿ 3.59 ಲಕ್ಷ ರೂ ದಂಡ ಪಾವತಿ ‌ಮಾಡಿದ್ದಾರೆ’ ಎಂದು ಬಿಎಂಆರ್​ಸಿಎಲ್ ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ​ ಯಶ್ವಂತ್ ಚೌವ್ಹಾಣ್ ಹೇಳಿದ್ದಾರೆ.

ಇದನ್ನೂ ಓದಿ: ಮೆಟ್ರೋಗೆ ಮೂರು ವರ್ಷದಲ್ಲಿ ₹1,614 ಕೋಟಿ ನಷ್ಟ: ಮತ್ತೆ ಟಿಕೆಟ್ ದರ ಏರಿಕೆಗೆ ಬಿಎಂಆರ್‌ಸಿಎಲ್ ಕಸರತ್ತು

ಒಟ್ಟಿನಲ್ಲಿ ಯಾವುದೇ ಟ್ರಾಫಿಕ್ ಕಿರಿಕಿರಿ ಇಲ್ಲದೇ ನೆಮ್ಮದಿಯಿಂದ ಸಂಚಾರಿಸೋಣ ಅಂತ ಅದೆಷ್ಟೋ ಜನ ಮೆಟ್ರೋದಲ್ಲಿ ಸಂಚಾರ ಮಾಡುತ್ತಾರೆ. ಆದರೆ ಅದೇ ಮೆಟ್ರೋ ನಿಲ್ದಾಣಗಳು ಇದೀಗ ಆತ್ಮಹತ್ಯೆ ಸ್ಥಳಗಳಾಗಿ ಬದಲಾಗುತ್ತಿದ್ದು, ಈಗಾಲಾದರೂ BMRCL ಹೆಚ್ಚಿನ ಭದ್ರತೆಯನ್ನ ಒದಗಿಸುತ್ತಾ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರತಿದಿನ ವೈಟ್ ರೈಸ್ ತಿನ್ನುತ್ತಿದ್ದೀರಾ? ತೂಕ ನಿಯಂತ್ರಣಕ್ಕೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ – Kannada News | White Rice vs Brown Rice: Which Is Better for Weight Management?

ಭಾರತೀಯರ ಆಹಾರದಲ್ಲಿ ಅನ್ನಕ್ಕೆ ಪ್ರಮುಖ ಸ್ಥಾನವಿದೆ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಮನೆಗಳಲ್ಲಿ ಪ್ರತಿದಿನ ಬಿಳಿ ಅಕ್ಕಿ ಅಂದರೆ ವೈಟ್ ರೈಸ್ ಸೇವಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಈ ವೈಟ್ ರೈಸ್ ಅಕ್ಕಿ ತಿಂದರೆ ದಪ್ಪಗಾಗುತ್ತಾರೆ ಎಂದು ತಿಳಿದು ಅನ್ನ ಸೇವನೆ ಮಾಡುವುದನ್ನೇ ಸಂಪೂರ್ಣವಾಗಿ ಬಿಡುತ್ತಿದ್ದಾರೆ. ಆದರೆ ಪೌಷ್ಟಿಕ ತಜ್ಞರ ಪ್ರಕಾರ, ಕೇವಲ ವೈಟ್ ರೈಸ್ ತಿನ್ನುವುದರಿಂದ ತೂಕ ಹೆಚ್ಚುವುದಿಲ್ಲ. ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ದೀರ್ಘಕಾಲ ಸೇವಿಸಿದಾಗ ಮಾತ್ರ ತೂಕ ಹೆಚ್ಚಾಗುತ್ತದೆ. ಅಂದರೆ, ತೂಕ ಹೆಚ್ಚಲು ಒಂದೇ ಒಂದು ಆಹಾರ ಕಾರಣವಲ್ಲ; ಒಟ್ಟಾರೆ ಆಹಾರ ಪದ್ಧತಿ, ಜೀವನಶೈಲಿ ಮತ್ತು ದೈಹಿಕ ಚಟುವಟಿಕೆ ಪ್ರಮುಖ ಪಾತ್ರ ವಹಿಸುತ್ತವೆ.

ವೈಟ್ ರೈಸ್ ತೂಕ ಹೆಚ್ಚಿಸುತ್ತದೆಯೇ?

ಡಯಟಿಷಿಯನ್‌ಗಳ ಪ್ರಕಾರ, ಬಿಳಿ ಅಕ್ಕಿ ಅಥವಾ ವೈಟ್ ರೈಸ್ ಕಾರ್ಬೋಹೈಡ್ರೇಟ್‌ನ ಉತ್ತಮ ಮೂಲವಾಗಿದೆ. ಕಾರ್ಬೋಹೈಡ್ರೇಟ್ ದೇಹಕ್ಕೆ ಶಕ್ತಿ ಒದಗಿಸುವ ಪ್ರಮುಖ ಪೋಷಕಾಂಶವಾಗಿದೆ. ಹೌದು, ಬ್ರೌನ್ ರೈಸ್‌ಗಿಂತ ವೈಟ್ ರೈಸ್ ಫೈಬರ್ ಪ್ರಮಾಣ ಕಡಿಮೆ ಇರುತ್ತದೆ. ಕಾರಣ, ಅಕ್ಕಿಯನ್ನು ಹೆಚ್ಚು ಸಂಸ್ಕರಿಸುವ ಪ್ರಕ್ರಿಯೆಯಲ್ಲಿ ಹೊರಪದರ ತೆಗೆದುಹಾಕಲಾಗುತ್ತದೆ. ಹಾಗಾಗಿ ಇದರ ಸೇವನೆ ಹೊಟ್ಟೆ ಬೇಗ ಖಾಲಿಯಾಗುವ ಅನುಭವವಾಗಬಹುದು ಹೊರತು ಬಿಳಿ ಅಕ್ಕಿ ಆರೋಗ್ಯಕ್ಕೆ ಹಾನಿಕಾರಕವಲ್ಲ.

ಸಂಶೋಧನೆಗಳು ಏನು ಹೇಳುತ್ತವೆ?

ಕೆಲವು ಅಧ್ಯಯನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈಟ್ ರೈಸ್ ಸೇವಿಸುವುದು ಮತ್ತು ತೂಕ ಹೆಚ್ಚಾಗುವುದು ನಡುವೆ ಸಂಬಂಧ ಕಂಡುಬಂದಿದೆ. ಆದರೆ ಹಲವು ಸಂಶೋಧನೆಗಳಲ್ಲಿ ಅಂತಹ ಸ್ಪಷ್ಟ ಸಂಬಂಧ ಕಂಡುಬಂದಿಲ್ಲ. ಹೀಗಾಗಿ, ತೂಕ ಹೆಚ್ಚಲು ಕೇವಲ ಬಿಳಿ ಅಕ್ಕಿಯೇ ಕಾರಣ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ.

ಅನ್ನವನ್ನು ಯಾವ ರೀತಿಯಲ್ಲಿ ಸೇವಿಸಬೇಕು?

  • ಅನ್ನದ ಜೊತೆಗೆ ಬೇಳೆ ಅಥವಾ ಸಾಂಬಾರ್
  • ಹಸಿರು ತರಕಾರಿ
  • ಮೊಸರು
  • ಮೊಟ್ಟೆ
  • ಮೀನು ಅಥವಾ ಚಿಕನ್
  • ಸಲಾಡ್
    ಇವುಗಳನ್ನು ಸೇರಿಸಿದರೆ ಪ್ರೋಟೀನ್, ಫೈಬರ್ ಹಾಗೂ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ. ಇದರಿಂದ ಹೊಟ್ಟೆ ಹೆಚ್ಚು ಹೊತ್ತು ತುಂಬಿರುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವೂ ಸ್ಥಿರವಾಗಿರಲು ಸಹಾಯವಾಗುತ್ತದೆ.

ಇದನ್ನೂ ಓದಿ: ಐಸ್‌ಕ್ರೀಮ್ ತಿಂದ ಬಳಿಕ ವೈದ್ಯರು ಹೇಳುವ 5 ಆರೋಗ್ಯ ಸಲಹೆಗಳನ್ನು ತಪ್ಪದೆ ಪಾಲಿಸಿ

ಅನ್ನ ಬೇಯಿಸುವ ವಿಧಾನವೂ ಮುಖ್ಯ:

ಎಣ್ಣೆಯಲ್ಲಿ ಫ್ರೈ ಮಾಡಿದ ರೈಸ್ ಅಥವಾ ಹೆಚ್ಚು ತುಪ್ಪ, ಬೆಣ್ಣೆ ಸೇರಿಸಿದ ಅನ್ನಕ್ಕಿಂತ ಸರಳವಾಗಿ ಬೇಯಿಸಿದ ಅನ್ನ ಉತ್ತಮ. ತುಂಬಾ ಎಣ್ಣೆ, ತುಪ್ಪ ಅಥವಾ ಹೆಚ್ಚು ಕ್ಯಾಲೊರಿ ಇರುವ ಪಲಾವ್, ಬಿರಿಯಾನಿಗಳನ್ನು ಆಗಾಗ ಸೇವಿಸಿದರೆ ತೂಕ ಹೆಚ್ಚುವ ಸಾಧ್ಯತೆ ಇರುತ್ತದೆ.

ತೂಕ ನಿಯಂತ್ರಣಕ್ಕೆ ಈ ಅಭ್ಯಾಸಗಳನ್ನು ಪಾಲಿಸಿ

  • ಒಮ್ಮೆಲೇ ಹೆಚ್ಚು ಅನ್ನ ಸೇವನೆ ಮಾಯುವುದಕ್ಕಿಂತ ಮಿತ ಪ್ರಮಾಣದಲ್ಲಿ ಸೇವಿಸಿ.
  • ಊಟದಲ್ಲಿ ತರಕಾರಿ ಮತ್ತು ಸಲಾಡ್ ಇರಲಿ.
  • ಬೇಳೆ, ಕಡಲೆ, ಮೊಟ್ಟೆ, ಮೀನು, ಕೋಳಿ ಅಥವಾ ಪನೀರ್ ಸೇರಿಸುವುದರಿಂದ ಬೇಗ ಹಸಿವಾಗುವುದಿಲ್ಲ.
  • ವಾರಕ್ಕೆ ಕನಿಷ್ಠ 150 ನಿಮಿಷ ದೈಹಿಕ ಚಟುವಟಿಕೆ ಮಾಡಿ.
  • ಸಾಫ್ಟ್ ಡ್ರಿಂಕ್ಸ್, ಸಿಹಿ ಪದಾರ್ಥಗಳು ಮತ್ತು ಪ್ಯಾಕೆಟ್ ಜ್ಯೂಸ್‌ಗಳ ಸೇವನೆಯನ್ನು ಮಿತಗೊಳಿಸಿ.

ಯಾರು ವೈಟ್ ರೈಸ್ ಮಿತವಾಗಿ ಸೇವಿಸಬೇಕು?

  • ಮಧುಮೇಹ ಇರುವವರು
  • ಸ್ಥೂಲಕಾಯ ಸಮಸ್ಯೆ ಇರುವವರು
  • ಮೆಟಾಬಾಲಿಕ್ ಸಿಂಡ್ರೋಮ್ ಇರುವವರು
    ಇಂತಹವರು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆಯಂತೆ ಆಹಾರದ ಪ್ರಮಾಣವನ್ನು ನಿಗದಿಪಡಿಸಿಕೊಳ್ಳುವುದು ಸೂಕ್ತ.

ಗಮನಿಸಿ: ಬಿಳಿ ಅಕ್ಕಿಯನ್ನು ಸಂಪೂರ್ಣವಾಗಿ ಬಿಡುವುದರಿಂದ ಮಾತ್ರ ತೂಕ ಇಳಿಯುವುದಿಲ್ಲ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ, ಒತ್ತಡ ನಿಯಂತ್ರಣ ಮತ್ತು ಮಿತ ಪ್ರಮಾಣದ ಆಹಾರ ಸೇವನೆಯೇ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಪ್ರಮುಖ ಮಾರ್ಗಗಳಾಗಿವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Duleep Trophy 2026: ಪೂರ್ವ ವಲಯ ತಂಡ ಪ್ರಕಟ; ವೈಭವ್​ಗೆ ಉಪನಾಯಕತ್ವ – Kannada News | Duleep Trophy 2026: Ishan Kishan to Lead East Zone; Vaibhav Sooryavanshi, 15, Vice Captain

2026 ರ ದುಲೀಪ್ ಟ್ರೋಫಿ ಇದೇ ಆಗಸ್ಟ್ 23 ರಂದು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಲ್ಲಿ ಪ್ರಾರಂಭವಾಗಲಿದೆ. ಈ ಪಂದ್ಯಾವಳಿಗೆ ಇಂದು ಪೂರ್ವ ವಲಯ ತಂಡವನ್ನು ಪ್ರಕಟಿಸಲಾಗಿದೆ. ತಂಡದ ನಾಯಕತ್ವವನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್​ಗೆ ವಹಿಸಿದ್ದಾರೆ. ಉಪನಾಯಕನಾಗಿ 15 ವರ್ಷದ ವೈಭವ್ ಸೂರ್ಯವಂಶಿಯನ್ನು ಆಯ್ಕೆ ಮಾಡಲಾಗಿದೆ. ಅತಿ ಕಿರಿಯ ವಯಸ್ಸಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ವಿಶ್ವ ದಾಖಲೆ ನಿರ್ಮಿಸಿದ್ದ ವೈಭವ್​ಗೆ ಇದೀಗ ಭಾರತ ದೇಶೀಯ ಕ್ರಿಕೆಟ್​ನಲ್ಲಿ ತಂಡವೊಂದರ ಉಪನಾಯಕತ್ವದ ಜವಾಬ್ದಾರಿ ಸಿಕ್ಕಿದೆ.

ವೈಭವ್​ಗೆ ಉಪನಾಯಕತ್ವ

ಮೇಲೆ ಹೇಳಿದಂತೆ ದುಲೀಪ್ ಟ್ರೋಫಿ ಆಗಸ್ಟ್ 23 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಾವಳಿಯ ಆರಂಭದೊಂದಿಗೆ ಇರಾನಿ ಕಪ್, ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಸೇರಿದಂತೆ ಹಲವಾರು ಪಂದ್ಯಾವಳಿಗಳನ್ನು ಒಳಗೊಂಡಿರುವ ಭಾರತೀಯ ಕ್ರಿಕೆಟ್ ದೇಶೀಯ ಸೀಸನ್​ ಆರಂಭಕ್ಕೆ ಚಾಲನೆ ಸಿಗಲಿದೆ. ಇತರ ಪಂದ್ಯಾವಳಿಗಳಲ್ಲಿ, ಎಲ್ಲಾ ಆಟಗಾರರು ತಮ್ಮ ರಾಜ್ಯಗಳ ಪರವಾಗಿ ಆಡಿದರೆ, ದುಲೀಪ್ ಟ್ರೋಫಿಯಲ್ಲಿ ಬಹು ರಾಜ್ಯ ಸಂಘಗಳ ಆಟಗಾರರು ಒಂದೇ ವಲಯ ತಂಡದ ಪರ ಆಡಲಿದ್ದಾರೆ. ಇದೀಗ ಅದೇ ರೀತಿ, ಪೂರ್ವ ವಲಯ ತಂಡವನ್ನು ಘೋಷಿಸಲಾಗಿದ್ದು, ವೈಭವ್ ಉಪನಾಯಕತ್ವದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಈ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಆಡುತ್ತಿದ್ದು, ಅವರನ್ನು ನೇರವಾಗಿ ತಂಡದ ಉಪನಾಯಕನನ್ನಾಗಿ ನೇಮಿಸಲಾಗಿದೆ. ಗಮನಾರ್ಹವಾಗಿ, 15 ಸದಸ್ಯರ ಪೂರ್ವ ವಲಯ ತಂಡದಲ್ಲಿ ಬಿಹಾರ ಕ್ರಿಕೆಟ್ ಅಸೋಸಿಯೇಷನ್​ನಿಂದ ಆಯ್ಕೆಯಾದ ಏಕೈಕ ಆಟಗಾರ ವೈಭವ್. ಸಮಷ್ಟಿಪುರದ ಈ ಯುವ ಕ್ರಿಕೆಟಿಗ ತನ್ನ ಅಲ್ಪಾವಧಿಯ ವೃತ್ತಿಜೀವನದಲ್ಲಿ ಬಿಹಾರ ಕ್ರಿಕೆಟ್ ಮೇಲೆ ಬೀರಿದ ಪರಿಣಾಮವನ್ನು ಇದು ಒತ್ತಿ ಹೇಳುತ್ತದೆ. ಕಳೆದ ವರ್ಷ ಅವರನ್ನು ಬಿಹಾರ ಕ್ರಿಕೆಟ್ ತಂಡದ ಉಪನಾಯಕನನ್ನಾಗಿಯೂ ನೇಮಿಸಲಾಗಿತ್ತು.

ಇಶಾನ್ ಕಿಶನ್​ಗೆ ನಾಯಕತ್ವ

ಕಳೆದ ವರ್ಷ ಜಾರ್ಖಂಡ್ ಕ್ರಿಕೆಟ್ ತಂಡವನ್ನು ಮೊದಲ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಶಸ್ತಿಗೆ ಕೊಂಡೊಯ್ದಿದ್ದ ಇಶಾನ್ ಕಿಶನ್ ಅವರಿಗೆ ಈ ತಂಡದ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ಈ ಪಂದ್ಯಾವಳಿ ಮತ್ತು ಈ ಜವಾಬ್ದಾರಿ ಇಶಾನ್ ಕಿಶನ್ ಅವರಿಗೆ ನಿರ್ಣಾಯಕವಾಗಿದೆ, ಏಕೆಂದರೆ ಇದು ಟೆಸ್ಟ್ ತಂಡಕ್ಕೆ ಮರಳಲು ಅವರಿಗೆ ಸಹಾಯ ಮಾಡುತ್ತದೆ. ತಂಡದಲ್ಲಿ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ, ಮುಖೇಶ್ ಕುಮಾರ್ ಮತ್ತು ಅಭಿಮನ್ಯು ಈಶ್ವರನ್ ಅವರಂತಹ ಹಿರಿಯ ಆಟಗಾರರು ಕೂಡ ಇದ್ದಾರೆ.

ಪೂರ್ವ ವಲಯ ತಂಡ

ಅಭಿಮನ್ಯು ಈಶ್ವರನ್, ಸುದೀಪ್ ಘರಾಮಿ, ಮೊಹಮ್ಮದ್ ಶಮಿ, ಮುಖೇಶ್ ಕುಮಾರ್, ಶಹಬಾಜ್ ಅಹ್ಮದ್, ಸೂರಜ್ ಜೈಸ್ವಾಲ್, ಇಶಾನ್ ಕಿಶನ್ (ನಾಯಕ), ವೈಭವ್ ಸೂರ್ಯವಂಶಿ (ಉಪನಾಯಕ), ವಿರಾಟ್ ಸಿಂಗ್, ಕುಮಾರ್ ಕುಶಾಗ್ರ, ಶಿಖರ್ ಮೋಹನ್, ಸುಬ್ರಾಂಶು ಸೇನಾಪತಿ, ಅಭಿಜಿತ್ ಸರ್ಕಾರ್, ಅನುಕೂಲ್ ರಾಯ್ ಮತ್ತು ಡೆನಿಶ್ ದಾಸ್.

ಸ್ಟ್ಯಾಂಡ್‌ಬೈ ಆಟಗಾರರು: ಆಯುಷ್ ಲೋಹರುಕ, ಶ್ರೀದಂ ಪಾಲ್, ಸಂಬಿತ್ ಎಸ್ ಬರಾಲ್, ಶರಣದೀಪ್ ಸಿಂಗ್ ಮತ್ತು ಸ್ವಸ್ತಿಕ್ ಸಮಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪಾರ್ಟ್ನರ್’ ಚಿತ್ರದ ‘ಅಮೋರಾ’ ಹಾಡಿನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡ ಅಜಯ್ ರಾವ್, ಬೃಂದಾ – Kannada News | Krishna Ajay Rao Brinda Acharya Partner Movie Amora Song Release

ಬೃಂದಾ ಆಚಾರ್ಯ ಹಾಗೂ ಕೃಷ್ಣ ಅಜಯ್ ರಾವ್ (Krishna Ajay Rao) ಅವರು ಜೋಡಿಯಾಗಿ ನಟಿಸಿರುವ ‘ಪಾರ್ಟ್ನರ್’ (Partner) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿವೆ. ‘ಹೆಚ್.ಪಿ.ಆರ್. ಎಂಟರ್ ಪ್ರೈಸಸ್’ ಮೂಲಕ ಹರೀಶ್ ದೇವಿತಂದ್ರೆ ಅವರು ಈ ಸಿನಿಮಾ ನಿರ್ಮಿಸಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಕವಿರಾಜ್, ಪ್ರಮೋದ್ ಮರವಂತೆ, ನಾಗಾರ್ಜುನ ಶರ್ಮಾ ಸಾಹಿತ್ಯ ರಚಿಸಿದ್ದಾರೆ. ಇತ್ತೀಚೆಗೆ ‘ಪಾರ್ಟ್ನರ್’ ಸಿನಿಮಾದ ‘ಅಮೋರಾ ಅಮೋರಾ’ ಸಾಂಗ್ ಬಿಡುಗಡೆ ಮಾಡಲಾಯಿತು.

ಈ ಸಿನಿಮಾಗೆ ಸುಜ್ಞಾನ್ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ. ‘ಮಳೆ’, ‘ಧೈರ್ಯಂ’, ‘ದಿಲ್ ಪಸಂದ್’ ಸಿನಿಮಾಗಳ ನಂತರ ನಿರ್ದೇಶಕ ಶಿವತೇಜಸ್ ಅವರು ‘ಪಾರ್ಟ್ನರ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈಗಿನ ಜೆನ್ ಜಿ ಹುಡುಗ-ಹುಡುಗಿಯರ ಲವ್, ಬ್ರೇಕಪ್, ಲಿವಿಂಗ್ ಟುಗೆದರ್ ಮುಂತಾದ ವಿಷಯಗಳನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಜೀವನ ಎಂದರೆ ಇದಲ್ಲ, ಅದು ಬೇರೇನೇ ಇದೆ ಎಂದು ನಿರ್ದೇಶಕ ಶಿವತೇಜಸ್ ಅವರು ಈ ಸಿನಿಮಾ ಮೂಲಕ ಹೇಳಹೊರಟಿದ್ದಾರೆ.

ಈಗ ರಿಲೀಸ್ ಆಗಿರುವ ‘ಅಮೋರಾ ಅಮೋರಾ’ ಹಾಡಿಗೆ ನಾಗಾರ್ಜುನ ಶರ್ಮಾ ಅವರು ಸಾಹಿತ್ಯ ಬರೆದಿದ್ದಾರೆ. ಕುನಾಲ್ ಗಂಜಾವಾಲಾ ಅವರ ಕಂಠದಲ್ಲಿ ಈ ಗೀತೆ ಮೂಡಿಬಂದಿದೆ. ನಕುಲ್ ಅಭ್ಯಂಕರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ಹರೀಶ್ ದೇವಿತಂದ್ರೆ ಅವರಿಗೆ ಪಾಠ ಹೇಳಿಕೊಟ್ಟ ಗುರುಗಳಾದ ನಾಗಭೂಷಣ್ ದಂಪತಿ ‘ಅಮೋರಾ ಅಮೋರಾ’ ಹಾಡನ್ನು ವೇದಿಕೆಯಲ್ಲಿ ರಿಲೀಸ್ ಮಾಡಿದರು.

ಹಾಡಿನ ಬಿಡುಗಡೆ ವೇಳೆ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಮಾತನಾಡಿದರು. ಅಜಯ್ ರಾವ್ ಅವರು ಮಾತನಾಡಿ, ‘ನನ್ನ ಮನಸಿಗೆ ತುಂಬಾ ಹತ್ತಿರವಾದ ಸಿನಿಮಾ ಇದು. ನನ್ನ ಹೃದಯದ ಒಂದು ಭಾಗವನ್ನೇ ಇದರಲ್ಲಿ ಹಾಕಿದ್ದೇನೆ. ಕೆಲವು ಸಿನಿಮಾಗಳು ಆರಂಭದಿಂದಲೇ ಏನೋ ಒಂದು ಮ್ಯಾಜಿಕ್ ಮಾಡುತ್ತವೆ ಎನಿಸುತ್ತದೆ. ಅಂತಹ ಒಂದು ಸಿನಿಮಾ ಇದು. ಈ ಚಿತ್ರದ ಮೇಲೆ ನನಗೆ ತುಂಬಾ ಭರವಸೆ ಇದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಬೃಂದಾ ಆಚಾರ್ಯ ಜೊತೆ ಸ್ಟೆಪ್ ಹಾಕಿದ ಅಜಯ್ ರಾವ್

‘ಯಾವುದೇ ಮುಜುಗರ ಇಲ್ಲದೇ ಕುಟುಂಬ ಸಮೇತ ಕುಳಿತು ನೋಡುವಂಥ ಸಿನಿಮಾ ನಿರ್ಮಿಸಿದ್ದೇವೆ’ ಎಂದು ನಿರ್ಮಾಪಕ ಹರೀಶ್ ಹೇಳಿದ್ದಾರೆ. ಇದು ತಮ್ಮ ವೃತ್ತಿಜೀವನದ ಬೆಸ್ಟ್ ಸಾಂಗ್ ಎಂದು ನಟಿ ಬೃಂದಾ ಆಚಾರ್ಯ ಅವರು ಹೇಳಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆ ಆಗಿದ್ದು, ಒಂದೇ ದಿನದಲ್ಲಿ 5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉಕ್ರೇನ್ ಬಳಿ ಕಪ್ಪು ಸಮುದ್ರದ ಬಂದರಿನಲ್ಲಿ ದಾಳಿ; ಹಡಗಿನಲ್ಲಿ ಸಿಲುಕಿದ 13 ಭಾರತೀಯ ನಾವಿಕರು – Kannada News | 13 Indian Sailors Trapped On Ship in Ukraine Port Amid Black Sea Attacks

ಕೈವ್, ಜುಲೈ 29: ಉಕ್ರೇನ್‌ನ ಚೊರ್ನೊಮೊರ್ಸ್ಕ್ ಬಂದರಿನ ಬಳಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ಮುಂದುವರಿದಿರುವ ಬೆನ್ನಲ್ಲೇ, ಅಲ್ಲಿನ ಸರಕು ಸಾಗಣೆ ಹಡಗೊಂದರಲ್ಲಿ ಸಿಲುಕಿರುವ 15 ಸಿಬ್ಬಂದಿಯ ಪೈಕಿ 13 ಭಾರತೀಯ ನಾವಿಕರು ಸೇರಿದ್ದಾರೆ ಎಂದು ‘ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ’ (FSUI) ತಿಳಿಸಿದೆ. ಕಪ್ಪು ಸಮುದ್ರದ ಬಂದರಿನ ಬಳಿ ರಷ್ಯಾ ಮತ್ತು ಉಕ್ರೇನ್ (Russia-Ukraine War) ನಡುವೆ ಭೀಕರ ಕಾಳಗ ಮುಂದುವರಿದಿದೆ. ಅಲ್ಲಿ ಸಿಲುಕಿರುವ ನಾವಿಕರು ಅತ್ಯಂತ ಭಯಾನಕ ಪರಿಸ್ಥಿತಿಯಲ್ಲಿದ್ದಾರೆ. ಯಾವ ಕ್ಷಣದಲ್ಲಾದರೂ ನೇರ ದಾಳಿ ನಡೆಯಬಹುದು ಎಂಬ ಭಯದಲ್ಲಿ ಜೀವಿಸುತ್ತಿದ್ದಾರೆ ಎಂದು ನಾವಿಕರ ಸಂಘಟನೆ ಎಚ್ಚರಿಸಿದೆ.

“ಹಡಗಿನ ತೀರಾ ಹತ್ತಿರದಲ್ಲೇ ಪದೇ ಪದೇ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಲಾಗುತ್ತಿದೆ. ಸಿಬ್ಬಂದಿಯು ಯಾವುದೇ ಕ್ಷಣದಲ್ಲಿ ನೇರ ದಾಳಿಗೆ ತುತ್ತಾಗಬಹುದು ಎಂಬ ಭೀತಿಯಲ್ಲಿದ್ದಾರೆ” ಎಂದು ಸಂಸ್ಥೆ ಹೇಳಿದ್ದು, ಭಾರತ ಸರ್ಕಾರ, ಹಡಗಿನ ಮಾಲೀಕರು, ಹಡಗಿನ ಧ್ವಜದ ದೇಶ ಹಾಗೂ ಇತರ ಅಧಿಕಾರಿಗಳು ತಕ್ಷಣವೇ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿ, ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದೆ.

ಇದನ್ನೂ ಓದಿ: ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು, 21 ಜನರಿಗೆ ಗಾಯ

ನಾವಿಕರ ಸಂಘಟನೆಯು ಹಡಗಿನಿಂದಲೇ ಚಿತ್ರೀಕರಿಸಲಾಗಿದೆ ಎನ್ನಲಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಹಡಗಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಪ್ರಮಾಣದ ದಟ್ಟ ಹೊಗೆ ಏಳುತ್ತಿರುವುದು ಕಂಡುಬಂದಿದೆ. ಇದು ಬಂದರಿನಲ್ಲಿರುವ ತೀವ್ರ ಭದ್ರತಾ ಅಭದ್ರತೆಯನ್ನು ಎತ್ತಿಹಿಡಿದಿದೆ.

ಅಲ್ಲಿ ಸಿಲುಕಿರುವ 13 ಭಾರತೀಯ ನಾವಿಕರು ಸಂಕಷ್ಟದಲ್ಲಿರುವ ವರದಿಗಳ ಕುರಿತು ಭಾರತದ ವಿದೇಶಾಂಗ ಸಚಿವಾಲಯವಾಗಲಿ ಅಥವಾ ಸಂಬಂಧಪಟ್ಟ ಹಡಗು ಕಂಪನಿಯಾಗಲಿ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಶಾಲೆ ಆರಂಭವಾಗಿ ಎರಡು ತಿಂಗಳಾದ್ರೂ ವಿದ್ಯಾರ್ಥಿಗಳಿಗಿಲ್ಲ ಶೂ ಭಾಗ್ಯ: ಬರಿಗಾಲಲ್ಲೇ ಶಾಲೆಗೆ ಬರುತ್ತಿರುವ ಮಕ್ಕಳು – Kannada News | Students Still Without Shoes Two Months Into School Year, Forced to Attend Barefoot

ಕಲಬುರಗಿ, ಜುಲೈ 29: ಬಡ‌ ಮಕ್ಕಳಿಗಾಗಿ ರಾಜ್ಯ ಸರ್ಕಾರ ಪ್ರತಿವರ್ಷ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತ ಶೂ ಹಾಗೂ ಸಾಕ್ಸ್ ನೀಡುತ್ತದೆ. ಆದರೆ ಪ್ರಸಕ್ತ ವರ್ಷ ಶಾಲೆ ಆರಂಭವಾಗಿ ಎರಡು ತಿಂಗಳು‌ ಕಳೆದರೂ ಸಹ ಕಲಬುರಗಿ (kalaburagi) ಜಿಲ್ಲೆಯ ಶಾಲಾ‌ ಮಕ್ಕಳಿಗೆ ಶೂ ಭಾಗ್ಯ (Shoe Bhagya) ಸಿಕಿಲ್ಲ. ಹೀಗಾಗಿ ಕೆಲ ವಿದ್ಯಾರ್ಥಿಗಳು ಚಪ್ಪಲಿ ಹಾಕಿಕೊಂಡು ಬಂದರೆ, ಇನ್ನು ಕೆಲ ವಿದ್ಯಾರ್ಥಿಗಳು ಬರಿಗಾಲಿನಲ್ಲಿ ಶಾಲೆಗೆ ಬರುತ್ತಿದ್ದಾರೆ. ಶೂ ಖರೀದಿಗೆ ಹಣವಿಲ್ಲ, ಇನ್ನಾದರೂ ನಮಗೆ ಶೂ ನೀಡಿ ಎಂದು ಮಕ್ಕಳು ಟಿವಿ9 ಎದುರು ಅಳಲು ತೋಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಬರಿಗಾಲಿನಲ್ಲಿ ಶಾಲೆಗೆ ಬರುವ ಪ್ರತಿಸ್ಥಿತಿ ನಿರ್ಮಾಣ

ರಾಜ್ಯದಲ್ಲಿ ಕಾಂಗ್ರೆಸ್ ನೈತೃತ್ವದ ಸರ್ಕಾರ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಶೂ ಭಾಗ್ಯ ಯೋಜನೆ ಜಾರಿಗೆ ತಂದಿದ್ದರು. ಆ ಮೂಲಕ 1 ರಿಂದ 10ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಸರ್ಕಾರ ಉಚಿತವಾಗಿ 2 ಜೊತೆ ಶೂ ಮತ್ತು ಸಾಕ್ಸ್​ಗಳನ್ನು ನೀಡಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಶಾಲೆಗಳು ಆರಂಭವಾಗಿ ಇದೀಗ ಎರಡು ತಿಂಗಳು ಕಳೆದರೂ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯ ಒಂದೇ ಒಂದು‌ ವಿದ್ಯಾರ್ಥಿಗೆ ಶೂ ಮತ್ತು ಸಾಕ್ಸ್ ವಿತರಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಬರಿಗಾಲಿನಲ್ಲಿ ಶಾಲೆಗೆ ಬರುವ ಪ್ರತಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ‘ಚಡ್ಡಿ’ ಮುಜುಗರ! 7ನೇ ತರಗತಿ ಬಾಲಕರಿಗೂ ಹಾಫ್ ಪ್ಯಾಂಟ್ ಬಟ್ಟೆ ವಿತರಣೆ, ಪೋಷಕರಿಗೆ ಇಕ್ಕಟ್ಟು

ಲಕ್ಷಾಂತರ ಬಡ ಮ್ಕಕಳಿಗೆ ಅನುಕೂಲವಾಗಬೇಕಿದ್ದ ಯೋಜನೆ ಹಳ್ಳ ಹಿಡಿಯಿತಾ ಎಂಬ ಅನುಮಾನ ಶುರುವಾಗಿದೆ. ಇನ್ನು ಟಿವಿ9 ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಶೂ ಭಾಗ್ಯ ಯೋಜನೆಯಡಿ ಇನ್ನು ಶೂ ವಿತರಣೆಯಾಗಿಲ್ಲ ಎನ್ನುವುದು ಬಯಲಾಗಿದೆ. ‘ಶೂ ಸಾಕ್ಸ್ ಖರೀದಿ ಮಾಡುವುದಕ್ಕೆ ನಮ್ಮ ಬಳಿ ಹಣವಿಲ್ಲ, ಹೀಗಾಗಿ ಸರ್ಕಾರ ಕೂಡಲೇ ಶೂ ವಿತರಿಸಬೇಕು’ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು.

ಟೆಂಡರ್‌ ಕರೆದು ವಿತರಿಸಲು ಮುಂದಾದ ಸರ್ಕಾರ

ಇನ್ನು ಕಳೆದ ವರ್ಷ ಇಷ್ಟೋತ್ತಿಗಾಗಲೇ ಎಲ್ಲಾ ಶಾಲೆಗಳಿಗೆ ಶೂ ಮತ್ತು ಸಾಕ್ಸ್ ವಿತರಿಸಲಾಗಿತ್ತು. ಆಯಾ ಶಾಲೆಯ ಮಕ್ಕಳ ಶಾಲಾ ದಾಖಲಾತಿ ಅನುಸಾರ ಮುಖ್ಯೋಪಾಧ್ಯಾರ ಖಾತೆಗಳಿಗೆ ಸರ್ಕಾರ ಹಣ ಹಾಕುತ್ತಿದ್ದರು. ಆ ಹಣದಿಂದ ಆಯಾ ತಾಲ್ಲೂಕು ಹಾಗೂ ಜಿಲ್ಲೆಯ ಸ್ಥಳೀಯ ಅಂಗಡಿಗಳಲ್ಲಿ ಶಾಲೆಯ ಮುಖ್ಯೋಪಾಧ್ಯಾರು ಶೂ ಮತ್ತು ಸಾಕ್ಸ್ ಖರೀದಿಸಿ ವಿತರಣೆ ಮಾಡುತ್ತಿದ್ದರು. ಆದರೆ ಪ್ರಸಕ್ತ ವರ್ಷ ಆ ಯೋಜನೆ ಕೈ ಬಿಟ್ಟು ರಾಜ್ಯ ಸರ್ಕಾರವೇ ಟೆಂಡರ್‌ ಕರೆದು ವಿತರಿಸಲು ಮುಂದಾಗಿರುವುದರಿಂದ ಇಲ್ಲಿಯವರೆಗೆ ಶೂ ಮತ್ತು ಸಾಕ್ಸ್ ವಿತರಣೆಯಾಗಿಲ್ಲ.

ಡಿಡಿಪಿಐ ಶಂಕ್ರಮ್ಮ ಢವಳಗಿ ಹೇಳಿದ್ದಿಷ್ಟು 

‘ಸದ್ಯ ಕಲಬುರಗಿ ಜಿಲ್ಲೆಯಲ್ಲಿ 1 ಲಕ್ಷ 94 ಸಾವಿರ 850 ಮಕ್ಕಳು ಶೂ ಮತ್ತು ಸಾಕ್ಸ್​ಗಾಗಿ ಈಗಾಗಲೇ ನೋಂದಣಿ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲಿ ಎಲ್ಲಾ ಶಾಲಾ ಮಕ್ಕಳಿಗೆ ವಿತರಣೆ ಮಾಡುವುದಾಗಿ ಕಲಬುರಗಿ ಡಿಡಿಪಿಐ ಶಂಕ್ರಮ್ಮ ಢವಳಗಿ’ ಹೇಳಿದ್ದಾರೆ.

ಇದನ್ನೂ ಓದಿ: ಶಾಲಾ ಮಕ್ಕಳಿಗಿನ್ನು ಚಪ್ಪಲಿ ಭಾಗ್ಯ!: ಮಕ್ಕಳ ಆರೋಗ್ಯ ಗಮನದಲ್ಲಿರಿಸಿ ಶಿಕ್ಷಣ ಇಲಾಖೆಯಿಂದ ಹೊಸ ಚಿಂತನೆ

ಒಟ್ಟಿನಲ್ಲಿ ರಾಜ್ಯ ಸರ್ಕಾರ ಶೂ ಟೆಂಡರ್ ಕರೆದ ಪರಿಣಾಮ ಮಕ್ಕಳಿಗೆ ಶೂ ಭಾಗ್ಯ ವಿತರಣೆ ವಿಳಂಬಕ್ಕೆ ಕಾರಣವಾಗಿದೆ. ಹೀಗಾಗಿ ಆದಷ್ಟು ಬೇಗ ರಾಜ್ಯ ಸರ್ಕಾರ ಕಲಬುರಗಿ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ಶೂ ವಂಚಿತ ವಿದ್ಯಾರ್ಥಿಗಳಿಗೆ ಶೂ ಭಾಗ್ಯ ಕಲ್ಪಿಸಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ICC T20 Ranking: ಟಿ20 ರ‍್ಯಾಂಕಿಂಗ್​ನಲ್ಲಿ ಇತಿಹಾಸ ನಿರ್ಮಿಸಿದ ಇಶಾನ್ ಕಿಶನ್ – Kannada News | Ishan Kishan Tops ICC T20 Batting Rankings with 916 Points, Surpassing Kohli Surya

ಐಸಿಸಿ ಇಂದು ಬಿಡುಗಡೆ ಮಾಡಿರುವ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ನಂಬರ್ 1 ಸ್ಥಾನದಲ್ಲಿ ಮುಂದುವರೆದಿದ್ದಾರೆ. 916 ರೇಟಿಂಗ್ ಪಾಯಿಂಟ್​ಗಳೊಂದಿಗೆ ಕಿಶನ್ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಐಸಿಸಿ ಟಿ20 ಶ್ರೇಯಾಂಕದಲ್ಲಿ ಅಭಿಷೇಕ್ ಶರ್ಮಾ ನಂತರ ಅತಿ ಹೆಚ್ಚು ರೇಟಿಂಗ್ ಪಾಯಿಂಟ್ ಪಡೆದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ(PC-PTI).

ಪ್ರಸ್ತುತ ಟಿ20 ಶ್ರೇಯಾಂಕದಲ್ಲಿ ಅಭಿಷೇಕ್ ಶರ್ಮಾ 3 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದಾಗ್ಯೂ, ಟಿ20 ರ್ಯಾಂಕಿಂಗ್​ನಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್‌ಗಳನ್ನು ಪಡೆದ ದಾಖಲೆ ಅವರ ಹೆಸರಿನಲ್ಲೇ ಇದೆ. ಇಂಗ್ಲೆಂಡ್‌ನ ಡೇವಿಡ್ ಮಲನ್ ಈ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದರೆ, ಇಶಾನ್ ಕಿಶನ್ 3 ನೇ ಸ್ಥಾನದಲ್ಲಿದ್ದಾರೆ. ಗಮನಾರ್ಹವಾಗಿ, ನಾಲ್ಕು ಭಾರತೀಯ ಆಟಗಾರರು ಅಗ್ರ ಐದರಲ್ಲಿದ್ದಾರೆ, ಡೇವಿಡ್ ಮಲನ್ ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯೇತರ ಆಟಗಾರ(PC-PTI).

ಇನ್ನು ಅತಿ ಹೆಚ್ಚು ರೇಟಿಂಗ್‌ ಪಾಯಿಂಟ್‌ಗಳನ್ನು ಹೊಂದಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿಯನ್ನೂ ಹಿಂದಿಕ್ಕಿದ್ದಾರೆ. ವಿರಾಟ್ ಅವರ ಅತ್ಯುತ್ತಮ ಟಿ20 ರೇಟಿಂಗ್ ಪಾಯಿಂಟ್ ಒಟ್ಟು 909 ಆಗಿದ್ದರೆ, ಸೂರ್ಯ 912 ರೇಟಿಂಗ್ ಪಾಯಿಂಟ್ ಗಳಿಸಿದ್ದರು. ಇಶಾನ್ ಈಗ ಇಬ್ಬರನ್ನೂ ಹಿಂದಿಕ್ಕಿದ್ದಾರೆ(PC-PTI).

ಆದಾಗ್ಯೂ ಅಭಿಷೇಕ್ ಶರ್ಮಾ 931 ರೇಟಿಂಗ್ ಪಾಯಿಂಟ್​​ಗಳೊಂದಿಗೆ ಟಿ20 ಶ್ರೇಯಾಂಕದಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್ ಪಡೆದಿರುವ ಆಟಗಾರನೆನಿಸಿಕೊಂಡಿದ್ದಾರೆ. ಅಭಿಷೇಕ್ ಶರ್ಮಾ ಸುಮಾರು 11 ತಿಂಗಳುಗಳ ಕಾಲ ಅಂತರರಾಷ್ಟ್ರೀಯ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನವನ್ನು ಹೊಂದಿದ್ದರು. ಕಳೆದ ವರ್ಷ ಜುಲೈನಲ್ಲಿ ಅಭಿಷೇಕ್ ಅಗ್ರಸ್ಥಾನಕ್ಕೇರಿದ್ದರು(PC-PTI).

ಈ ತಿಂಗಳ ಆರಂಭದಲ್ಲಿ ಇಶಾನ್ ಕಿಶನ್ ಅಗ್ರಸ್ಥಾನಕ್ಕೇರುವ ಮೂಲಕ ಅಭಿಷೇಕ್ ಅವರನ್ನು ಹಿಂದಿಕ್ಕಿದರು. ಜಿಂಬಾಬ್ವೆ ಪ್ರವಾಸದ ವೇಳೆ ಇಶಾನ್ ಕಿಶನ್ ಆಡಿದ ಮೂರು ಟಿ20 ಪಂದ್ಯಗಳಲ್ಲಿ 48.33 ಸರಾಸರಿಯಲ್ಲಿ 145 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ 154 ಕ್ಕಿಂತ ಹೆಚ್ಚಿತ್ತು. ಈ ಸರಣಿಯಲ್ಲಿ ಅವರ ಪ್ರದರ್ಶನವು ಅವರ ರೇಟಿಂಗ್ ಪಾಯಿಂಟ್‌ಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ(PC-PTI).

Published On – 8:52 pm, Wed, 29 July 26

Source link

ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ – Kannada News | Today Meeting cancelled:​​​​​​ Rahul Gandhi approval on Karnataka cabinet expansion On July 30

ನವದೆಹಲಿ, (ಜುಲೈ 29): ಡಿಕೆ ಶಿವಕುಮಾರ್ ಸರ್ಕಾರದ ಮಹತ್ವಾಕಾಂಕ್ಷೆಯ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಶುರುವಾಗಿದೆ. ದೆಹಲಿಯಲ್ಲಿ ರಾಜ್ಯ ನಾಯಕರಾದ ಸಿಎಂ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಇಂದು (ಜುಲೈ 29) ಸಭೆಗೆ ಹೈಕಮಾಂಡ್ ಸಿದ್ಧ ಆಗಿತ್ತು. ಆದ್ರೆ ಲೋಕಸಭೆ ಕಾರ್ಯಕಲಾಪ ಹಿನ್ನಲೆ ರಾಹುಲ್ ಜೊತೆಗಿನ ಇಂದಿನ ಸಭೆ ರದ್ದಾಗಿದ್ದು, ನಾಳೆಗೆ (ಜುಲೈ 30) ಮುಂದೂಡಿಕೆ ಆಗಿದೆ. ಆದ್ರೆ, ನಾಳಿನ ಸಭೆಯ ಸಮಯ ಇನ್ನೂ ನಿಗದಿ ಆಗಿಲ್ಲ.ಈ ಸಭೆಯಲ್ಲಿ ಸಂಪುಟ ಸೇರ್ಪಡೆಯಾಗೋ ಶಾಸಕರ ಬಗ್ಗೆ ವಿವರವಾಗಿ ಚರ್ಚೆ ನಡೆಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಶ್ನೆಪತ್ರಿಕೆ ಸೋರಿಕೆ ಜಾಲ ನಿರ್ಮೂಲನೆಯೇ ತಿದ್ದುಪಡಿ ಮಸೂದೆಯ ಗುರಿ; ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ – Kannada News | Amendment bill aims to dismantle paper leak ecosystem union education minister pralhad joshi says

ನವದೆಹಲಿ, ಜುಲೈ 29: ಲೋಕಸಭೆ ಅಧಿವೇಶನದಲ್ಲಿ ಇಂದು ಅಂಗೀಕರಿಸಿರುವ ಸಾರ್ವಜನಿಕ ಪರೀಕ್ಷೆ ಅಕ್ರಮ ತಡೆ ತಿದ್ದುಪಡಿ ಮಸೂದೆಯು ಪ್ರಶ್ನೆಪತ್ರಿಕೆ ಸೋರಿಕೆ ಜಾಲವನ್ನು ಸಂಪೂರ್ಣ ನಿರ್ಮೂಲನಗೊಳಿಸಲಿದೆ ಎಂದು ಕೇಂದ್ರದ ನೂತನ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯಲ್ಲಿ ಇಂದು ಮಂಡಿಸಿರುವ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026 (Public Examinations (Prevention of Unfair Means) Amendment Bill 2026) ಅನ್ನು ಸಂಸತ್‌ ಅಂಗೀಕರಿಸಿದ್ದು, ಪರೀಕ್ಷಾ ಅಕ್ರಮಗಳನ್ನು ತಡೆಯುವಲ್ಲಿ ಕಠಿಣ ಕಾನೂನು ಚೌಕಟ್ಟನ್ನು ತಂದಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳಲ್ಲಿ ತೊಡಗುವವರಿಗೆ ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ತ್ವರಿತ ನ್ಯಾಯಾಲಯಗಳ ಸ್ಥಾಪನೆ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದಿದ್ದಾರೆ.

ಪರೀಕ್ಷಾ ಅಕ್ರಮದ ವಿರುದ್ಧ ಕಠಿಣ ಕ್ರಮ:

ಪರೀಕ್ಷಾ ಅಕ್ರಮಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಹ ಮಹತ್ವದ ನಿಯಮಗಳನ್ನು ಒಳಗೊಂಡಿರುವ ಈ ಮಸೂದೆ ಪ್ರಶ್ನೆಪತ್ರಿಕೆ ಸೋರಿಕೆ ಜಾಲವನ್ನು ಸಂಪೂರ್ಣ ನಿರ್ಮೂಲನೆಗೊಳಿಸಲು ಕಟಿಬದ್ಧವಾಗಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ದೇಶಾದ್ಯಂತ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ನ್ಯಾಯಸಮ್ಮತತೆಯನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Anti-paper Leak Bill Passed: ವಿರೋಧ ಪಕ್ಷಗಳ ಭಾರಿ ಗದ್ದಲದ ನಡುವೆಯೂ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಅಂಗೀಕಾರ

“ಪರೀಕ್ಷಾ ಅಕ್ರಮಗಳನ್ನು ಮಟ್ಟಹಾಕಲು ಕಠಿಣ ಕಾನೂನು ಚೌಕಟ್ಟನ್ನು ತರುವ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕವನ್ನು ಲೋಕಸಭೆಯು ಅಂಗೀಕರಿಸಿದೆ. ಈ ವಿಧೇಯಕವು ಪರೀಕ್ಷಾ ಅಕ್ರಮದ ಜಾಲವನ್ನು ನಿರ್ಮೂಲನೆ ಮಾಡುವ ಮತ್ತು ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ವಿಶ್ವಸನೀಯತೆ ಹಾಗೂ ನ್ಯಾಯಸಮ್ಮತತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ವಂದೇ ಮಾತರಂ ಗೀತೆಗೆ ಅವಮಾನ ಮಾಡುವುದು ಕ್ರಿಮಿನಲ್ ಅಪರಾಧ; ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ

ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕದಲ್ಲೇನಿದೆ?:

ಕೇಂದ್ರ ಸರ್ಕಾರವು ದೇಶಾದ್ಯಂತ ನಡೆಯುವ ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಪಾರದರ್ಶಕತೆ ತರಲು ಹಾಗೂ ಪರೀಕ್ಷಾ ಅಕ್ರಮ ಅಥವಾ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026 ಅನ್ನು ಸಂಸತ್ತಿನಲ್ಲಿ ಅಂಗೀಕರಿಸಿದೆ. ಈ ವಿಧೇಯಕದ ಮುಖ್ಯ ಉದ್ದೇಶಗಳೆಂದರೆ, ಪ್ರವೇಶ ಪರೀಕ್ಷೆಗಳು (NEET, CUET ಇತ್ಯಾದಿ) ಹಾಗೂ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವುದನ್ನು ತಡೆಯುವುದು. ಪರೀಕ್ಷಾ ಅಕ್ರಮ ನಡೆಸುವ ಸೈಬರ್ ಕ್ರೈಮ್ ಜಾಲ, ಕೋಚಿಂಗ್ ಸೆಂಟರ್‌ಗಳು ಮತ್ತು ಪ್ರಭಾವಿ ಸಿಂಡಿಕೇಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು. ಕಷ್ಟಪಟ್ಟು ಓದುವ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಮತ್ತು ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version