ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ; ವೈಭವ್​ ಸೂರ್ಯವಂಶಿಗೆ ನಾಯಕತ್ವ – Kannada News | India U19 Squad for SA Tour: Vaibhav Suryavanshi to Lead as World Cup Prep Begins

ಮುಂದಿನ ಜನವರಿ ತಿಂಗಳಿಂದ ಆರಂಭವಾಗಲಿರುವ 19 ವರ್ಷದೊಳಗಿನವರ ವಿಶ್ವಕಪ್​ಗಾಗಿ (U19 World Cup) ಬಿಸಿಸಿಐ 15 ಸದಸ್ಯರ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಈ ಐಸಿಸಿ (ICC) ಟೂರ್ನಿಯಲ್ಲಿ ಆಯುಷ್ ಮ್ಹಾತ್ರೆ ನಾಯಕನಾಗಿ ತಂಡವನ್ನು ಮುನ್ನಡೆಸಿದರೆ, ವಿಹಾನ್ ಮಲ್ಹೋತ್ರಾ ಉಪನಾಯಕನ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. ನಿರೀಕ್ಷೆಯಂತೆಯೇ ಸ್ಫೋಟಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Suryavanshi) ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ವಿಶ್ವಕಪ್ ಜೊತೆಗೆ ಟೀಂ ಇಂಡಿಯಾ ಮುಂದಿನ ವರ್ಷದ ಆರಂಭದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದೆ. ಅಂಡರ್-19 ವಿಶ್ವಕಪ್‌ಗೆ ಆಯ್ಕೆಯಾದ ಅದೇ ತಂಡ ಈ ಸರಣಿಯಲ್ಲೂ ಆಡಲಿದೆ.

ವೈಭವ್​ಗೆ ನಾಯಕತ್ವ

ಅಂಡರ್-19 ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಈ ಸರಣಿ ಯುವ ಭಾರತ ತಂಡಕ್ಕೆ ನಿರ್ಣಾಯಕವಾಗಿದೆ. ಆಯುಷ್ ಮ್ಹಾತ್ರೆ ಮತ್ತು ವಿಹಾನ್ ಮಲ್ಹೋತ್ರಾ ಈ ಸರಣಿಯಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಘೋಷಿಸಿದೆ. ಇಬ್ಬರೂ ಗಾಯಗಳಿಂದ ಬಳಲುತ್ತಿದ್ದು, ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಪರಿಣಾಮವಾಗಿ, ಈ ಪ್ರವಾಸದಲ್ಲಿ ವೈಭವ್ ಸೂರ್ಯವಂಶಿ ತಂಡವನ್ನು ಮುನ್ನಡೆಸಿದರೆ, ಆರನ್ ಜಾರ್ಜ್ ಅವರನ್ನು ಉಪನಾಯಕರನ್ನಾಗಿ ನೇಮಿಸಿದೆ. ಮೂರು ಪಂದ್ಯಗಳು ಕ್ರಮವಾಗಿ ಜನವರಿ 3, 5 ಮತ್ತು 7 ರಂದು ವಿಲೋಮೋರ್ ಪಾರ್ಕ್‌ನಲ್ಲಿ ನಡೆಯಲಿವೆ.

2024 ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ ಅವರ ಮೊದಲ ನಾಯಕತ್ವ ಇದಾಗಿದೆ. ಅವರ ನಾಯಕತ್ವದಲ್ಲಿ, ಭಾರತೀಯ ತಂಡವು ಜನವರಿ 3 ರಂದು ಪ್ರಾರಂಭವಾಗುವ ಈ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಯು ವಿಶ್ವಕಪ್‌ಗೆ ತಯಾರಿ ನಡೆಸಲು ಸಹಾಯ ಮಾಡುತ್ತದೆ. ವೈಭವ್‌ಗೆ ಇದು ವಿಶೇಷ ಅವಕಾಶವಾಗಿದ್ದು, ಅಲ್ಲಿ ಅವರು ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಲು ಮತ್ತು ನಾಯಕತ್ವದ ಪಟ್ಟುಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಈ ಏಕದಿನ ಸರಣಿಯು ವಿಶ್ವಕಪ್‌ಗೆ ಮೊದಲು ನಡೆಯಲಿದ್ದು, ಜನವರಿ ಮೊದಲ ವಾರದಲ್ಲಿ ಆರಂಭವಾಗಲಿದೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತ ತಂಡ: ವೈಭವ್ ಸೂರ್ಯವಂಶಿ (ನಾಯಕ), ಆರನ್ ಜಾರ್ಜ್ (ಉಪನಾಯಕ), ವೇದಾಂತ್ ತ್ರಿವೇದಿ, ಅಭಿಗ್ಯಾನ್ ಕುಂಡು (ವಿಕೆಟ್ ಕೀಪರ್), ಹರ್ವಂಶ್ ಸಿಂಗ್ (ವಿಕೆಟ್ ಕೀಪರ್), ಆರ್.ಎಸ್. ಅಂಬ್ರಿಸ್, ಕನಿಷ್ಕ್ ಚೌಹಾಣ್, ಖಿಲನ್ ಎ. ಪಟೇಲ್, ಮೊಹಮ್ಮದ್ ಅನನ್, ಹೆನಿಲ್ ಪಟೇಲ್, ಡಿ. ದೀಪೇಶ್, ಕಿಶನ್ ಕುಮಾರ್ ಸಿಂಗ್, ಉಧವ್ ಮೋಹನ್, ಯುವರಾಜ್ ಗೋಹಿಲ್, ರಾಹುಲ್ ಕುಮಾರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:40 pm, Sat, 27 December 25

Source link

ಬಿಗ್ ಬಾಸ್ ಆದೇಶಕ್ಕೆ ನಲುಗಿ ಹೋದ ಗಿಲ್ಲಿ ನಟ; ಇದಕ್ಕೆ ಕಾರಣ ರಘು-ಸೂರಜ್? – Kannada News | Bigg Boss Kannada 12: Gilli Nata Captaincy Twist and Family Week Voting Shock

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಗಿಲ್ಲಿ ನಟ ಅವರು ಈ ವಾರ ತಾವೇ ಕ್ಯಾಪ್ಟನ್ ಎಂದು ಬೀಗಿದ್ದರು. ಈ ವಾರ ಫ್ಯಾಮಿಲಿ ವೀಕ್ ಆಗಿತ್ತು. ಈ ಪೈಕಿ ಬಹುತೇಕರು ಗಿಲ್ಲಿ ಕ್ಯಾಪ್ಟನ್ ಆಗಬೇಕು ಎಂದು ಬಯಸಿದ್ದರು. ಗಿಲ್ಲಿಗೆ ಹೆಚ್ಚು ವೋಟ್ ಬಿದ್ದಿದ್ದರಿಂದ ಅವರು ತಾವೇ ಕ್ಯಾಪ್ಟನ್ ಎಂದುಕೊಂಡಿದ್ದರು. ಆದರೆ, ಬಿಗ್ ಬಾಸ್ ಕೊಟ್ಟ ಟ್ವಿಸ್ಟ್​​ಗೆ ಗಿಲ್ಲಿ ನಲುಗಿ ಹೋದರು. ಆ ಬಗ್ಗೆ ಇಲ್ಲಿದೆ ವಿವರ.

ಈ ವಾರ ಗಿಲ್ಲಿ ನಟ ಅವರಿಗೆ ತುಂಬಾನೇ ಹೈಪ್ ಸಿಕ್ಕಿತು. ಮನೆಯಿಂದ ಬಂದ ಸ್ಪರ್ಧಿಗಳ ಕುಟುಂಬದವರು ಗಿಲ್ಲಿಯನ್ನು ಮೆಚ್ಚಿಕೊಂಡರು. ಹೀಗಾಗಿ, ಅವರಿಗೆ ಕ್ಯಾಪ್ಟನ್ ಆಗಬೇಕು ಎಂದು ಸಾಕಷ್ಟು ವೋಟ್​​ಗಳು ಬಿದ್ದವು. ಅತ್ಯಧಿಕ ವೋಟ್ ಪಡೆದಿದ್ದರಿಂದ ತಾವೇ ಕ್ಯಾಪ್ಟನ್ ಎಂದು ಅವರು ಭಾವಿಸಿದ್ದರು. ಉಳಿದ ಸ್ಪರ್ಧಿಗಳಿಗೂ ಅದೇ ರೀತಿಯ ಊಹೆ ಇತ್ತು. ಆದರೆ, ಆ ಊಹೆ ತಪ್ಪಾಗಿದೆ.

‘ಅತಿ ಹೆಚ್ಚು ವೋಟ್ ಪಡೆದ ಗಿಲ್ಲಿ ಎಂದು ಪಾಸ್ ಕೊಟ್ಟ ಬಿಗ್ ಬಾಸ್ ಅಶ್ವಿನಿ ಹೆಸರನ್ನು ಕೂಡ ಸೇರಿಸಿದರು. ಆ ಬಳಿಕ ಗಿಲ್ಲಿ ಶಾಕ್ ಆಗಿ ಕೈ ಎತ್ತಿದರು. ‘ಅವರಿಗೆ ಬಂದಿದ್ದು ಕೇವಲ ಎರಡು ವೋಟ್ ಮಾತ್ರ ಅಲ್ಲವೇ’ ಎಂದು ಪ್ರಶ್ನೆ ಮಾಡಿದರು. ಆದರೆ, ಬಿಗ್ ಬಾಸ್ ಇದಕ್ಕೆ ಸೊಪ್ಪು ಹಾಕಿಲ್ಲ. ‘ಅಶ್ವಿನಿ ಹಾಗೂ ಗಿಲ್ಲಿ ಕ್ಯಾಪ್ಟನ್ಸಿ ಟಾಸ್ಕ್​​ಗೆ ಆಯ್ಕೆ ಆಗಿದ್ದಾರೆ’ ಎಂದು ಘೋಷಿಸಿದರು. ಗಿಲ್ಲಿ ಆಟವನ್ನು ಗೆದ್ದು ಕ್ಯಾಪ್ಟನ್ ಆದರು.

ಇದನ್ನೂ ಓದಿ: ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ಆರಂಭದಲ್ಲೇ ನಿಯಮ ಮುರಿದಿದ್ದಕ್ಕೆ ಬಿಗ್ ಬಾಸ್ ಎಚ್ಚರಿಕೆ

ಬಿಗ್ ಬಾಸ್​​ಗೆ ಟಾಸ್ಕ್ ಕೊಡೋಕೆ ರಘು ಹಾಗೂ ಸೂರಜ್ ಆಡಿದ ಮಾತು ಕಾರಣವೇ ಎನ್ನುವ ಪ್ರಶ್ನೆ ಮೂಡಿದೆ. ಈ ಮೊದಲು ಮಾತನಾಡಿದ ರಘು, ‘ಗಿಲ್ಲಿ ಇವತ್ತು ಮಲಗೋದಿಲ್ಲ. ಈಗಾಗಲೇ ನಾಲ್ಕು ವೋಟ್ ಸಿಕ್ಕಿದೆ. ಅವನು ಗೇಮ್ ಆಡಿಯಂತೂ ಕ್ಯಾಪ್ಟ್ ಆಗಲ್ಲ, ಹೀಗಾದರೂ ಮಾಡೋಣ ಅಂತ’ ಎಂದು ರಘು ಹೇಳಿದ್ದರು. ‘ಬಿಗ್ ಬಾಸ್​ ಪ್ಲ್ಯಾನ್ ಹಾಕಿದಾರೆ’ ಎಂದು ಸೂರಜ್ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:41 pm, Sat, 27 December 25

Source link

ಪ್ರಶಸ್ತಿಗಳು ಪದವಿಗಳಲ್ಲ… ವ್ಯಕ್ತಿಯ ಹೆಸರಿಗೆ ಭಾರತ ರತ್ನ, ಪದ್ಮಪ್ರಶಸ್ತಿಗಳನ್ನು ಸೇರಿಸುವಂತಿಲ್ಲ: ಬಾಂಬೆ ಹೈಕೋರ್ಟ್ – Kannada News | Bharat Ratna, Padma Awards Not Titles, Can’t Be Used As Prefix, Suffix: Bombay High Court

ನವದೆಹಲಿ, ಡಿಸೆಂಬರ್ 27: ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಇತ್ಯಾದಿ ನಾಗರಿಕ ಪ್ರಶಸ್ತಿಗಳು (civilian awards) ಅಧಿಕೃತ ಪದವಿಗಳಲ್ಲ (titles). ಅವುಗಳನ್ನು ಪ್ರಶಸ್ತಿವಿಜೇತರ ಹೆಸರಿನ ಹಿಂದೆ ಅಥವಾ ಮುಂದೆ ಜೋಡಿಯಾಗಿ ಬಳಸಲು ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಸ್ಪಷ್ಟಪಡಿಸಿದೆ. ಪದ್ಮಶ್ರೀ ಡಾ. ಶರದ್ ಎಂ ಹರ್ಡೀಕರ್ ಅವರನ್ನೊಳಗೊಂಡ ರಿಟ್ ಅರ್ಜಿಯೊಂದರ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್​ನ ಏಕಸದಸ್ಯ ಪೀಠದ ನ್ಯಾಯಾಧೀಶ ಸೋಮಶೇಖರ್ ಸುಂದರೇಶನ್ ಈ ತೀರ್ಪು ನೀಡಿದ್ದಾರೆ.

ಹೈಕೋರ್ಟ್​ನಿಂದ ಬಂದ ಈ ತೀರ್ಪು ಹೊಸದಲ್ಲ. ಈ ಹಿಂದೆ ಸಾಂವಿಧಾನಿಕ ಪೀಠವೊಂದು ನೀಡಿದ ತೀರ್ಪನ್ನು ಪುನರುಚ್ಚರಿಸಿದೆ. 1995ರಲ್ಲಿ ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠವು ನಾಗರಿಕ ಪ್ರಶಸ್ತಿಗಳನ್ನು ವ್ಯಕ್ತಿಯ ಹೆಸರಿನೊಂದಿಗೆ ಬಳಸಬಾರದು ಎಂದು ತೀರ್ಪು ಕೊಟ್ಟಿತ್ತು. ಬಾಂಬೆ ಹೈಕೋರ್ಟ್​ನ ಏಕಸದಸ್ಯ ಪೀಠವು ಆ ಸಾಂವಿಧಾನಿಕ ಪೀಠದ ತೀರ್ಪನ್ನು ಉಲ್ಲೇಖಿಸುತ್ತಾ, ನಾಗರಿಕ ಪ್ರಶಸ್ತಿಗಳನ್ನು ವ್ಯಕ್ತಿಯ ಹೆಸರಿನೊಂದಿಗೆ ಬಳಸುವುದು ಕಾನೂನಿನ ಮಾನ್ಯತೆ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಸೊಮಾಲಿಲ್ಯಾಂಡ್​ಗೆ ಮಾನ್ಯತೆ ಕೊಟ್ಟ ವಿಶ್ವದ ಏಕೈಕ ದೇಶ ಇಸ್ರೇಲ್; ಯಾವುದಿದು ಆಫ್ರಿಕನ್ ನಾಡು?

ಡಾ. ತ್ರಂಬಕ್ ವಿ ದಾಪಕೇಕರ್ ವರ್ಸಸ್ ಪದ್ಮಶ್ರೀ ಡಾ. ಶರದ್ ಎಂ ಹರ್ಡೀಕರ್ ಪ್ರಕರಣದ ವಿಚಾರಣೆ ವೇಳೆ ನ್ಯಾ| ಸೋಮಶೇಖರ್ ಸುಂದರೇಶನ್ ಅವರು ಮೇಲಿನ ವಿಚಾರ ಪ್ರಸ್ತಾಪಿಸಿದರು. ಶರದ್ ಹರ್ಡೀಕರ್ ಅವರ ಹೆಸರಿನ ಜೊತೆ ಪದ್ಮಶ್ರೀ ಅನ್ನು ಸೇರಿಸಿರುವುದಕ್ಕೆ ನ್ಯಾಯಾಧೀಶರು ಆಕ್ಷೇಪಿಸಿದರು.

ನಾಗರಿಕ ಪ್ರಶಸ್ತಿಗಳನ್ನು ಗೌರವ ಪದವಿಗಳಂತೆ ಬಳಸಬಾರದು. ಹಾಗೆ ಬಳಸಲು ಕಾನೂನಿನಲ್ಲಿ ಅನುಮತಿ ಇಲ್ಲ. ಕೋರ್ಟ್ ವಿಚಾರಗಳಲ್ಲಿ ಇದನ್ನು ಬಳಸಬಾರದು ಎಂದು ಜಡ್ಜ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತ ವಿರೋಧಿ ಶಕ್ತಿಗಳೊಂದಿಗೆ ರಾಹುಲ್ ಗಾಂಧಿ? ಜರ್ಮನಿಗೆ ಹೋಗಿದ್ದು ಯಾಕೆ? ಬಿಜೆಪಿ ಟೀಕೆ

ಹಾಗಾದರೆ ವ್ಯಕ್ತಿಯ ಜೊತೆ ಪ್ರಶಸ್ತಿ ಹೆಸರು ಬಳಸಲೇ ಬಾರದಾ?

ನಟ ಡಾ. ರಾಜಕುಮಾರ್ ಅವರನ್ನು ಪದ್ಮಭೂಷಣ ಡಾ. ರಾಜಕುಮಾರ್ ಎಂದು ಕರೆಯುವುದು ರೂಢಿ. ಆದರೆ, ಅಧಿಕೃತ ದಾಖಲೆಗಳಲ್ಲಿ ಅವರ ಹೆಸರರಿನ ಜೊತೆ ಪದ್ಮಭೂಷಣ, ನಟ ಇತ್ಯಾದಿ ವಿಶೇಷಣಗಳು ಇರುವಂತಿಲ್ಲ. ಇಲ್ಲಿ ವಿಶ್ವವಿದ್ಯಾಲಯಗಳಲ್ಲಿ ಸಿಗುವ ಡಾಕ್ಟರೇಟ್ ಪದವಿಗಳನ್ನು ಹೆಸರಿನ ಜೊತೆ ಬಳಸಲು ಅಡ್ಡಿ ಇಲ್ಲ. ಆದರೆ, ಪ್ರಶಸ್ತಿಗಳ ಹೆಸರು ಬಳಸುವಂತಿಲ್ಲ. ಹಾಗೆಯೇ, ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಹೀಗೆ ಬಳಸಲು ಅಡ್ಡಿ ಇರುವುದಿಲ್ಲ. ಅಧಿಕೃತ ದಾಖಲೆಗಳಲ್ಲಿ ಮಾತ್ರ ಇದನ್ನು ಬಳಸಬಾರದು ಎಂಬುದು ಕೋರ್ಟ್​ನ ತೀರ್ಪಿನ ಇಂಗಿತ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

SSLC ಫಲಿತಾಂಶ ಸುಧಾರಣೆ ಮಾಡುವ ಶಿಕ್ಷಕರಿಗೆ ಬಂಪರ್ ಗಿಫ್ಟ್ ಘೋಷಿಸಿದ ಸರ್ಕಾರ – Kannada News | Karnataka Education Department Plan thousand rupees Gift for Teachers Who achieve 75 Percent result in SSLC exams

ಬೆಂಗಳೂರು, ಡಿಸೆಂಬರ್ 27): ಈಗಾಗಲೇ ಸರ್ಕಾರ  ಶಿಕ್ಷಕರನ್ನ (Teachers)  ಸಮೀಕ್ಷೆಗೆ ಬಳಕೆ ಮಾಡಿ ಶಾಲೆಗಳಿಗೆ ರಜೆ ನೀಡಿ ಮಕ್ಕಳ ಕಲಿಕಾ ದಿನದ ಅವಧಿ ಕಡಿಮೆಯಾಗುವಂತೆ ಮಾಡಿದೆ. ಈ ನಡುವೆ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರನ್ನ BLO ಕೆಲಸಕ್ಕೆ ಬಳಕೆ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ, ಈ ವರ್ಷ ಎಸ್​​ಎಸ್​ಎಲ್​​ಸಿ​ ಪರೀಕ್ಷೆಯಲ್ಲಿ (SSLC Exams) ​  75% ಫಲಿತಾಶಂಶ ಸಾಧಿಸುವ ಗುರಿ ನೀಡಿದ್ದಾರೆ. ಈ ಹಿನ್ನಲೆ SSLC ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಹೊಸ ಪ್ಲಾನ್ ಮಾಡಿದ್ದು, ಫಲಿತಾಂಶ ಸುಧಾರಣೆಗೆ ಪ್ರೌಢಶಾಲಾ ಶಿಕ್ಷಕರಿಗೆ ಬಂಫರ್ ಆಫರ್ ನೀಡಿದೆ. 10ನೇ ತರಗತಿ ವಾರ್ಷಿಕ ಪರೀಕ್ಷೆ ಫಲಿತಾಂಶ ಸುಧಾರಿಸುವ ಶಿಕ್ಷಕರಿಗೆ ಹೆಚ್ಚುವರಿ ಒಂದು ಸಾವಿರ ಪ್ರೋತ್ಸಾಹಧನ ನೀಡಲು ಮುಂದಾಗಿದೆ. ಈ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸರ್ಕಾರಿ ಶಾಲೆಗಳು ಮುಂದಾಗಿದ್ದು, SSLC ಫಲಿತಾಂಶ ಸುಧಾರಣೆಗೆ ಸರ್ಕಾರಿ ಶಾಲೆಗಳಿಂದ ಸರ್ಕಸ್ ನಡೆದಿದೆ. ಮುಂಜಾನೆ ಹಾಗೂ ಸಂಜೆ ಸ್ಪೆಷಲ್ ಕ್ಲಾಸ್ ಮಾಡಲು ಶಿಕ್ಷಕರು ಮುಂದಾಗಿದ್ದಾರೆ.

ಪ್ರತಿವರ್ಷ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಖಾಸಗಿ ವಲಯದ ಶಾಲೆಗಳಿಂದ ಉತ್ತಮ ಫಲಿತಾಂಶ ಹಿನ್ನಲೆ ಹಾಗೂ ಕಳೆದ ವರ್ಷ SSLC ಫಲಿತಾಂಶ ಕುಸಿತದಿಂದ ಸಿಎಂ ಗರಂ ಆಗಿದ್ದರು. ಹೀಗಾಗಿ ಈ ಬಾರಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಶಿಕ್ಷಣ ಇಲಾಖೆಗೆ ಟಾರ್ಗೆಟ್ ನೀಡಿದ್ದು, ಪ್ರಸಕ್ತ ವರ್ಷ 75% ಫಲಿತಾಂಶ ಸಾಧಿಸುವ ಗುರಿ ನೀಡಿರುವ ಹಿನ್ನಲೆ ಎಸ್ಎಸ್ಎಲ್ ಸಿ ಮಕ್ಕಳಿಗೆ ಸ್ಪೆಷಲ್ ಕ್ಲಾಸ್ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಹೆಚ್ಚುವರಿಯಾಗಿ ಒಂದು ಸಾವಿರ ರೂಪಾಯಿಯನ್ನು ನೀಡಲು ಸರ್ಕಾರ ಪ್ಲ್ಯಾನ್ ಮಾಡಿದೆ.

ಇದನ್ನೂ ಓದಿ: SSLC, 2nd PUC Exam 2026 TimeTable: ಎಸ್​ಎಸ್​ಎಲ್​​ಸಿ, ಪಿಯು ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಕಳೆದೊಂದು ತಿಂಗಳಲ್ಲಿ ಕಂಪ್ಲೀಟ್ ಪಠ್ಯ ಕವರ್ ಮಾಡಿ ಜನವರಿ-ಫೆಬ್ರವರಿಯಲ್ಲಿ ಪರೀಕ್ಷೆಗಳು ಹಾಗೂ ಮಾರ್ಚ್ ತಿಂಗಳಲ್ಲಿ ಅಂತಿಮ ಪರೀಕ್ಷೆಗೆ ತಯಾರಿ ಶುರು ಮಾಡಿದ್ದಾರೆ. ಆದರೆ ಈ ಬಾರಿ ಹಲವು ರಜೆಗಳ ಕಾರಣ ಇನ್ನೆರಡು ತಿಂಗಳಲ್ಲಿ ಪಠ್ಯಕ್ರಮ ಮುಗಿಸುವುದು ಸವಾಲಾಗಿದೆ. ಇದರಿಂದ ಹೆಚ್ಚುವರಿ ಕ್ಲಾಸ್ ಶುರು ಮಾಡಿದ್ದು ಮಕ್ಕಳನ್ನ ತಯಾರು ಮಾಡುವ ಹೊಣೆ ಶಿಕ್ಷಕರಿಗೆ ನೀಡಿದ್ದಾರೆ. ರಜಾ ದಿನಗಳಲ್ಲಿ ತರಗತಿಗಳನ್ನ ನಡೆಸಿ ಪಠ್ಯ ಕಂಪ್ಲೀಟ್ ಮಾಡಿ ಫಲಿತಾಂಶ ಸುಧಾರಿಸಲು ಶಿಕ್ಷಕರಿಗೆ ಹೆಚ್ಚುವರಿ ಪ್ರೊತ್ಸಾಹಧನ ನೀಡಲು ಇಲಾಖೆ ಮುಂದಾಗಿದೆ

ಒಟ್ಟಿನಲ್ಲಿ ಮಕ್ಕಳು ಮತ್ತು ಶಿಕ್ಷಕರನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಿದ್ದು, ನಿಗದಿತ ಶಾಲಾ ಅವಧಿ ಮುಗಿದ ಬಳಿಕ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳ ಶಿಕ್ಷಕರು ವಿಶೇಷ ತರಗತಿಗಳನ್ನು ಕೈಗೊಳ್ಳಬೇಕಿದೆ. ಈ ವೇಳೆ ವಿದ್ಯಾರ್ಥಿಗಳ ಬರವಣಿಗೆ ಕೌಶಲ್ಯ, ಪಾಠಗಳ ಪುನರಾವರ್ತನೆ ಮೂಲಕ ಅವರನ್ನು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವಂತೆ ಮಾಡಬೇಕಿದೆ. ಇದಕ್ಕೆ ಶಿಕ್ಷಕರಿಗೆ ಪ್ರೋತ್ಸಾಹಧನದ ಪ್ಲಾನ್ ಮಾಡಿದ್ದು, ಇದು ಎಷ್ಟರ ಮಟ್ಟಿಗೆ ಪ್ರಗತಿ ಕಾಣುತ್ತೆ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದಕ್ಷಿಣ ಭಾರತದ ಕುಂಭಮೇಳ ಕೊಪ್ಪಳ ಅಜ್ಜನ ಜಾತ್ರೆಗೆ ಸಿದ್ಧತೆ: ಈ ಬಾರಿ ಭಕ್ತರಿಗೆ ಏನು ಸ್ಪೆಷಲ್ ಗೊತ್ತಾ? – Kannada News | South India Kumbh Mela–Koppal Gavi Matha Fair 2026: Preparations Begin for Grand Dasoha

ಕೊಪ್ಪಳ, ಡಿಸೆಂಬರ್​ 27: ದಕ್ಷಿಣ ಭಾರತ ಕುಂಭಮೇಳ ಎಂದು ಹೆಸರಾಗಿರುವ ಗವಿಮಠದ ಜಾತ್ರೆಗೆ (Gavi Matha fair) ದಿನಗಣನೆ ಶುರುವಾಗಿದೆ. ಮಠದ ಜಾತ್ರೆಗೆ ಲಕ್ಷ ಲಕ್ಷ ಜನ ಬರುತ್ತಾರೆ. ರಥೋತ್ಸವದ ವೈಶಿಷ್ಟ್ಯವೇ ಮಠದ ದಾಸೋಹ. ಹೀಗಾಗಿ ಮಠದ ಆವರಣದಲ್ಲಿ ಮಹಾ ದಾಸೋಹಕ್ಕೆ ಅಂತಿಮ ಸಿದ್ದತೆಗಳು ನಡೆಯುತ್ತಿವೆ. ಲಕ್ಷ ಲಕ್ಷ ಜನ ಬರುವ ಜಾತ್ರೆಯಲ್ಲಿ ನಿರಂತರ 18 ದಿನಗಳ ಕಾಲ ದಾಸೋಹ ನಡೆಯಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಭಕ್ತರು ಆ ಜಾತ್ರೆಗೆ ಬರುವ ನೀರಿಕ್ಷೆಯಿದೆ. ಈ ಬಾರಿ ರಥೋತ್ಸವಕ್ಕೂ ಐದು ದಿನ ಮೊದಲೇ ದಾಸೋಹಕ್ಕೆ ಪ್ಲ್ಯಾನ್ ಮಾಡಲಾಗಿದೆ. ಜೊತೆಗೆ ಉತ್ತರ ಕರ್ನಾಟಕದ ಫೇಮಸ್ ಮಿರ್ಚಿ ಕೂಡ ದಾಸೋಹದಲ್ಲಿ ಇರಲಿದೆ. ಸುಮಾರು ಐದು ಲಕ್ಷ ಜನರಿಗೆ ಮಿರ್ಚಿ ಉಣಬಡಿಸಲು ಭಕ್ತ ಸಮೂಹ ಸಿದ್ಧವಾಗಿದೆ.

ದಕ್ಷಿಣ ಭಾರತದ ಕುಂಭಮೇಳ ಎಂದು ಹೆಸರಾಗಿರುವ ಕೊಪ್ಪಳದ ಗವಿಮಠದ ಜಾತ್ರೆಗೆ ದಿನಗಣನೆ ಶುರುವಾಗಿದೆ. ಜನವರಿ 5ರಂದು ಗವಿ ಮಠದ ಜಾತ್ರೆಗೆ ಕೊಪ್ಪಳ ಜಿಲ್ಲೆಯವರೇ ಆದ ರಾಜ್ಯಪಾಲರಾಗಿರುವ ವಿಜಯ್ ಶಂಕರ್ ಅವರು ಚಾಲನೆ ನೀಡಲಿದ್ದಾರೆ. ಕೊಪ್ಪಳದ ಗವಿ ಮಠದ ಜಾತ್ರೆ ಅಂದ್ರೆ ಅದು ದಾಸೋಹ.  ಜಾತ್ರೆಯಲ್ಲಿ ಲಕ್ಷ ಲಕ್ಷ ಜನರಿಗೆ ಊಟ ಬಡಿಸಲಾಗತ್ತೆ. ಈಗಾಗಲೇ ಮಹಾ ದಾಸೋಹಕ್ಕೆ ಬೇಕಾದ ಸಿದ್ದತೆಗಳನ್ನ ಮಾಡಿಕೊಳ್ಳಲಾಗ್ತಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಬಲ್ಡೋಟಾ ಸ್ಟೀಲ್ ಕಾರ್ಖಾನೆ ಆರಂಭಕ್ಕೆ ವಿರೋಧ: ದುಸ್ಥಿತಿ ಕಂಡು ಗವಿಸಿದ್ದೇಶ್ವರ ಸ್ವಾಮೀಜಿ ಕಣ್ಣೀರು

ಗವಿ ಮಠದ ಪಕ್ಕದ ಜಾಗದಲ್ಲಿ ಈಗಾಗಲೇ ಊಟದ ಕೌಂಟರ್​ಗಳನ್ನ ನಿರ್ಮಾಣ ಮಾಡಲಾಗಿದೆ. ಸುಮಾರು 80 ಕೌಂಟರ್​ಗಳನ್ನ ನಿರ್ಮಾಣ ಮಾಡಲಾಗಿದೆ. ಸುಮಾರು 6 ಎಕರೆ ಪ್ರದೇಶದಲ್ಲಿ ದಾಸೋಹಕ್ಕೆ ಸಿದ್ದತೆ ಮಾಡಿಕೊಳ್ಳಲಾಗ್ತಿದೆ. ಈಗಾಗಲೇ ದಾಸೋಹಕ್ಕೆ ಅವಶ್ಯವಿರುವ ಅಕ್ಕಿ ಜೊತೆಗೆ ರೊಟ್ಟಿಗಳನ್ನ ಸಂಗ್ರಹ ಮಾಡಲಾಗಿದೆ. ಅಲ್ಲದೆ 3 ಟನ್​ಗಳಷ್ಟು ಕಟ್ಟಿಗೆ ಸಂಗ್ರಹ ಮಾಡಲಾಗಿದೆ. ಜನವರಿ 5ರಂದು ರಥೋತ್ಸವ ಇದ್ದರೂ ಈ ಬಾರಿ ಜನವರಿ 1ರಿಂದ ದಾಸೋಹಕ್ಕೆ ಚಾಲನೆ ನೀಡಲಾಗ್ತಿದೆ. ಜಾತ್ರೆಗಿಂತ ಐದು ದಿನ ಮೊದಲೇ ದಾಸೋಹ ಆರಂಭವಾಗಲಿದೆ. ಈಗಾಗಲೇ ಭಕ್ತರು ಅವರ ಶಕ್ತಿಗಣುಸಾರವಾಗಿ ರೊಟ್ಟಿ, ಅಕ್ಕಿಯನ್ನ ಕೊಟ್ಟು ಹೋಗುತ್ತಿದ್ದಾರೆ.

ಇನ್ನು ಕೊಪ್ಪಳ ಗವಿ ಮಠದ ಜಾತ್ರೆಗೆ ಅದರದ್ದೇ ಆದ ಇತಿಹಾಸವಿದೆ. ಈ ಜಾತ್ರೆಯಲ್ಲಿ ಸುಮಾರು ಐದರಿಂದ ಆರು ಲಕ್ಷ ಜನ ಭಾಗಿಯಾಗ್ತಾರೆ. ಈ ಜಾತ್ರೆಯ ವಿಶೇಷವೇ ಮಾಹಾ ದಾಸೋಹ. ಭಕ್ತರು ಅಜ್ಜನಿಗೆ ಈಗಾಗಲೇ ದಾಸೋಹಕ್ಕೆ ಅವಶ್ಯವಿರುವ ವಸ್ತುಗಳನ್ನ ಮಠಕ್ಕೆ ಅರ್ಪಿಸಿತ್ತಿದ್ದಾರೆ. ಕೊಪ್ಪಳ, ಗದಗ, ಸಿಂಧನೂರ ಭಾಗದಿಂದ ಭಕ್ತರು ರೊಟ್ಟಿಗಳನ್ನ ತಂದು ಕೊಡ್ತಾರೆ. ನಿರಂತರ 18 ದಿನ ನಡೆಯುವ ದಾಸೋಹದಲ್ಲಿ ಸುಮಾರು 10 ರಿಂದ 15 ಲಕ್ಷ ಜನ ಊಟ ಮಾಡಲಿದ್ದಾರೆ.

ಇದನ್ನೂ ಓದಿ: ವಾರದಲ್ಲಿ 6 ದಿನ ಮೌನ ವ್ರತ: ಭಕ್ತರ ಅಚ್ಚರಿಗೆ ಕಾರಣವಾಯ್ತು ಗವಿಸಿದ್ದೇಶ್ವರ ಸ್ವಾಮೀಜಿ ನಡೆ

ದಾಸೋಹದ ಜೊತೆಗೆ ಜಾತ್ರೆಯ ಮತ್ತೊಂದು ವಿಶೇಷ ಮಿರ್ಚಿ. ಗವಿ ಮಠದ ಭಕ್ತರು ಕಳೆದ 10 ವರ್ಷಗಳಿಂದ ರಥೋತ್ಸವದ ಮರುದಿನ ಭಕ್ತರಿಗೆ ಮಿರ್ಚಿ ಉಣಬಡಿಸಲಾಗುತ್ತದೆ. ಈ ಬಾರಿಯೂ ಸುಮಾರು ಐದರಿಂದ ಆರು ಲಕ್ಷ ಜನರಿಗೆ ಮಿರ್ಚಿ ಉಣಬಡಿಸೋದಕ್ಕೆ ಭಕ್ತ ಸಮೂಹ ಪ್ಲ್ಯಾನ್ ಮಾಡಿಕೊಂಡಿದೆ. ಕಳೆದ ವರ್ಷ 20 ಕ್ವಿಂಟಾಲ್ ಹಸೆ ಹಿಟ್ಟು ಬಳಕೆಯಾಗಿತ್ತು. ಈ ಬಾರಿ 25 ಕ್ವಿಂಟಾಲ್ ಹಸೆ ಹಿಟ್ಟು ಬಳಸಲು ಸಿದ್ದರಾಗಿದ್ದಾರೆ.

ದಾಸೋಹದಲ್ಲಿ ಮೈಸೂರ್ ಪಾಕ್

ಒಟ್ಟಾರೆ ಗವಿ ಮಠದ ಜಾತ್ರೆಗೆ ದಿನಗಣನೆ ಶುರುವಾಗಿದೆ. ಈ ಬಾರಿ ದಾಸೋಹದಲ್ಲಿ ಮೈಸೂರ್ ಪಾಕ್ ಕೂಡ ಸಿಗಲಿದೆ. ಸಿಂಧನೂರಿನ ಗವಿ ಮಠದ ಭಕ್ತರು 5 ಲಕ್ಷ ಮೈಸೂರ್ ಪಾಕ್ ನೀಡಲು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಅಕ್ಷಯ್ ಖನ್ನಾಗೆ ಯಶಸ್ಸು ತಲೆಗೇರಿದೆ’; ದೊಡ್ಡ ನಿರ್ಧಾರ ತೆಗೆದುಕೊಂಡ ನಿರ್ಮಾಪಕ – Kannada News | Drishyam 3: Akshay Khanna Out Over Fee & Wig Dispute, Jaideep Steps In

‘ಧುರಂಧರ್’ ಚಿತ್ರದ ಮೂಲಕ ಅಕ್ಷಯ್ ಖನ್ನಾ ಅವರು ದೊಡ್ಡ ಮಟ್ಟದ ಖ್ಯಾತಿ ಪಡೆದಿದ್ದಾರೆ. ಈ ಯಶಸ್ಸಿನ ಬಳಿಕ ‘ದೃಶ್ಯಂ 3’ ಸಿನಿಮಾದಿಂದ ಹೊರ ನಡೆದಿದ್ದಾಗಿ ವರದಿ ಆಗಿತ್ತು. ಅಕ್ಷಯ್ ಖನ್ನಾ ಹಾಗೂ ನಿರ್ಮಾಪಕರ ನಡುವೆ ಸಂಭಾವನೆ ವಿಷಯಕ್ಕೆ ಕಿರಿಕ್​ ಉಂಟಾಗಿದೆ. ಹೀಗಾಗಿ, ಅಕ್ಷಯ್ ಹೊರ ನಡೆದಿದ್ದಾರೆ ಎನ್ನಲಾಗಿದೆ. ಈಗ ‘ದೃಶ್ಯಂ 3’ ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ಅವರು ಅಕ್ಷಯ್ ಖನ್ನಾ ಬಗ್ಗೆ ಮಾತನಾಡಿದ್ದಾರೆ. ಅವರು ಈಗ ಒಂದು ದೊಡ್ಡ ನಿರ್ಧಾರ ಕೂಡ ತೆಗೆದುಕೊಂಡಿದ್ದಾರೆ.

ಹಲವು ಸುತ್ತಿನ ಮಾತುಕತೆ ನಂತರದಲ್ಲಿ ನಿರ್ಮಾಪಕರು ಅಕ್ಷಯ್ ಖನ್ನಾ ಸಂಭಾವನೆ ಫಿಕ್ಸ್ ಮಾಡಿದ್ದರು. ‘ದೃಶ್ಯಂ 2’ ಸಿನಿಮಾದಲ್ಲಿ ಅವರಿಗೆ ವಿಗ್ ಇರಲಿಲ್ಲ. ಆದರೆ, ಈ ಚಿತ್ರದಲ್ಲಿ ಅವರು ವಿಗ್ ಬೇಕು ಎಂದು ಹಠ ಹಿಡಿದಿದ್ದರಂತೆ. ಇದು ಸೀಕ್ವೆಲ್ ಆಗಿರುವುದರಿಂದ ಹಿಂದಿನ ಸಿನಿಮಾ ಪಾತ್ರಕ್ಕೂ ಇದಕ್ಕೂ ಹೊಂದಿಕೆ ಆಗುವುದಿಲ್ಲ ಎಂದು ಹೇಳಿದರೂ ಅಕ್ಷಯ್ ಖನ್ನಾ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆ ಬಳಿಕ ಅಕ್ಷಯ್ ಸಿನಿಮಾದಿಂದ ಹೊರ ನಡೆಯುವ ನಿರ್ಧಾರ ಮಾಡಿದರು ಎನ್ನಲಾಗಿದೆ.

ಅಕ್ಷಯ್ ಖನ್ನಾಗೆ ವೃತ್ತಿಪರತೆ ಇಲ್ಲ ಎಂಬುದು ಕುಮಾರ್ ಮಂಗತ್ ಆರೋಪ ಆಗಿದೆ. ‘ಅಕ್ಷಯ್ ಏನೂ ಅಲ್ಲದಿದ್ದ ಒಂದು ಕಾಲವಿತ್ತು. ಆಗ ನಾನು ಅವರ ಜೊತೆ ಸೆಕ್ಷನ್ 375 (2019) ಸಿನಿಮಾ ಮಾಡಿದ್ದೆ. ವೃತ್ತಿಪರತೆ ಇಲ್ಲ, ಅವರ ಜೊತೆ ಸಿನಿಮಾ ಮಾಡಬೇಡಿ ಎಂದು ಅನೇಕರು ಹೇಳಿದರು. ಸೆಟ್​​ನಲ್ಲಿ ಅವರ ಎನರ್ಜಿ ಟಾಕ್ಸಿಕ್ ಎನಿಸುತ್ತಿತ್ತು. ಸೆಕ್ಷನ್ 375 ಅವರಿಗೆ ಮನ್ನಣೆ ನೀಡಿತು. ‘ದೃಶ್ಯಂ 2’ ಚಿತ್ರಕ್ಕೂ ನಾನು ಅವಕಾಶ ಕೊಟ್ಟೆ. ಆ ಚಿತ್ರದ ಬಳಿಕವೇ ಅವರಿಗೆ ದೊಡ್ಡ ಆಫರ್‌ಗಳು ಬಂದವು. ಅದಕ್ಕೂ ಮೊದಲು ಅವರು 3-4 ವರ್ಷ ಮನೆಯಲ್ಲೇ ಇರುತ್ತಿದ್ದರು’ ಎಂದಿದ್ದಾರೆ ಕುಮಾರ್ ಮಂಗತ್.

‘ಕೆಲವು ನಟರು ಹಲವು ಕಲಾವಿದರ ಜೊತೆ ಸಿನಿಮಾ ಮಾಡುತ್ತಾರೆ. ಆ ಸಿನಿಮಾ ಹಿಟ್ ಆದ ಬಳಿಕ ತಾವು ದೊಡ್ಡ ಸ್ಟಾರ್ ಎಂದು ಭಾವಿಸುತ್ತಾರೆ. ಅಕ್ಷಯ್ ಖನ್ನಾ ವಿಷಯದಲ್ಲೂ ಅದೇ ಆಗಿದೆ. ಅವರು ಈಗ ತಮ್ಮನ್ನು ತಾವು ಸೂಪರ್ ಸ್ಟಾರ್ ಎಂದು ಭಾವಿಸಿದ್ದಾರೆ. ಯಶಸ್ಸು ಅವರ ತಲೆಗೆ ಏರಿದೆ. ಧುರಂಧರ್ ಹಿಟ್ ಆಗಲು ಸಾಕಷ್ಟು ಕಾರಣ ಇದೆ’ ಎಂದು ಕುಮಾರ್ ಮಂಗತ್ ಹೇಳಿದ್ದಾರೆ.

ಇದನ್ನೂ ಓದಿ: 2 ಕೋಟಿಯಿಂದ 21 ಕೋಟಿ ರೂಪಾಯಿಗೆ ಏರಿಕೆ ಆಯ್ತು ಅಕ್ಷಯ್ ಖನ್ನಾ ಸಂಬಳ

ಅಕ್ಷಯ್ ಖನ್ನಾ ಜಾಗಕ್ಕೆ ಜೈದೀಪ್ ಅವರನ್ನು ಆಯ್ಕೆ ಮಾಡುವ ದೊಡ್ಡ ನಿರ್ಧಾರವನ್ನು ನಿರ್ಮಾಪಕರು ಮಾಡಿದ್ದಾರೆ. ಇದನ್ನು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

U19 World Cup: ಅಂಡರ್-19 ವಿಶ್ವಕಪ್​ಗೆ 15 ಸದಸ್ಯರ ಭಾರತ ತಂಡ ಪ್ರಕಟ – Kannada News | India U19 World Cup Squad Announced: Ayush Mhatre Captain, Vaibhav Suryavanshi Included

ಮುಂದಿನ ವರ್ಷ ಅಂದರೆ 2026 ರಂದು ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಬಿಸಿಸಿಐ ಕೆಲವೇ ದಿನಗಳ ಹಿಂದೆ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವನ್ನು ಪ್ರಕಟಿಸಿತ್ತು. ಆದರೆ ಅದಕ್ಕೂ ಮುನ್ನ ಐಸಿಸಿ ಅಂಡರ್-19 ವಿಶ್ವಕಪ್ ನಡೆಯಲಿದ್ದು, ಈ ವಿಶ್ವಕಪ್‌ಗಾಗಿ ಭಾರತ ಯುವ ತಂಡವನ್ನು ಈಗ ಪ್ರಕಟಿಸಲಾಗಿದೆ. ಡಿಸೆಂಬರ್ 27 ರ ಶನಿವಾರದಂದು ಬಿಸಿಸಿಐ, ಈ ಟೂರ್ನಮೆಂಟ್‌ಗಾಗಿ 15 ಸದಸ್ಯರ ಭಾರತೀಯ ತಂಡವನ್ನು ಘೋಷಿಸಿದೆ. ಇದರಲ್ಲಿ 14 ವರ್ಷದ ಸ್ಟಾರ್ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಸೇರಿದ್ದು, ಎಂದಿನಂತೆ ಆಯುಷ್ ಮ್ಹಾತ್ರೆ ಅವರಿಗೆ ಮತ್ತೊಮ್ಮೆ ತಂಡದ ನಾಯಕತ್ವ ನೀಡಲಾಗಿದೆ. ಜನವರಿ 15 ರಂದು ಯುನೈಟೆಡ್ ಸ್ಟೇಟ್ಸ್ ವಿರುದ್ಧದ ಗುಂಪು ಪಂದ್ಯದೊಂದಿಗೆ ಟೀಂ ಇಂಡಿಯಾ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.

ಭಾರತ ತಂಡ: ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪನಾಯಕ), ವೈಭವ್ ಸೂರ್ಯವಂಶಿ, ಆರನ್ ಜಾರ್ಜ್, ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂಡು, ಹರ್ವಂಶ್ ಸಿಂಗ್, ಆರ್‌ಎಸ್ ಅಂಬರೀಶ್, ಕಾನಿಷ್ಕ್ ಚೌಹಾಣ್, ಖಿಲಾನ್ ಪಟೇಲ್, ಮೊಹಮ್ಮದ್ ಎನಾನ್, ಹೆನಿಲ್ ಪಟೇಲ್, ಡಿ.ದೀಪೇಶ್, ಕಿಶನ್ ಕುಮಾರ್ ಸಿಂಗ್, ಉದ್ಧವ್ ಮೋಹನ್.

Published On – 8:30 pm, Sat, 27 December 25

Source link

ಸೊಮಾಲಿಲ್ಯಾಂಡ್​ಗೆ ಮಾನ್ಯತೆ ಕೊಟ್ಟ ವಿಶ್ವದ ಏಕೈಕ ದೇಶ ಇಸ್ರೇಲ್; ಯಾವುದಿದು ಆಫ್ರಿಕನ್ ನಾಡು? – Kannada News | Israel becomes first country to recognize Somaliland, know the importance of this African land

ಟೆಲ್ ಅವಿವ್, ಡಿಸೆಂಬರ್ 27: ದಶಕಗಳ ಹಿಂದೆ ಸೊಮಾಲಿಯಾ ದೇಶದಿಂದ ಪ್ರತ್ಯೇಕಗೊಂಡಿದ್ದ ಸೊಮಾಲಿಲ್ಯಾಂಡ್ (Somaliland) ಅನ್ನು ಸ್ವತಂತ್ರ ದೇಶ ಎಂದು ಇಸ್ರೇಲ್ ಮಾನ್ಯ ಮಾಡಿದೆ. ಸೋಮಾಲಿಲ್ಯಾಂಡ್​ಗೆ ಅಧಿಕೃತ ದೇಶವೆಂಬ ಮಾನ್ಯತೆ ಕೊಟ್ಟ ಮೊದಲ ದೇಶವೂ ಇಸ್ರೇಲ್ ಆಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಅವರ ಕಚೇರಿಯು ಈ ವಿಚಾರವನ್ನು ಪ್ರಕಟಿಸಿದ್ದು, ಸೋಮಾಲಿಲ್ಯಾಂಡ್ ಜೊತೆ ಇಸ್ರೇಲ್ ಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುತ್ತದೆ ಎಂದು ಘೋಷಿಸಿದೆ. ಆದರೆ, ಆಫ್ರಿಕಾ ಹಾಗೂ ಮಧ್ಯಪ್ರಾಚ್ಯದ ಹಲವು ದೇಶಗಳು ಇದನ್ನು ಬಲವಾಗಿ ವಿರೋಧಿಸಿವೆ.

ಸೋಮಾಲಿಲ್ಯಾಂಡ್ ಅಧ್ಯಕ್ಷ ಅಬ್ದಿರಹಮಾನ್ ಮೊಹಮ್ಮದ್ ಅಬ್ದುಲ್ಲಾಹಿ ಅವರು ಇಸ್ರೇಲ್ ಬೆಂಬಲವನ್ನು ಐತಿಹಾಸಿಕ ಕ್ಷಣವೆಂದು ಬಣ್ಣಿಸಿದ್ದಾರೆ. ಅಬ್ದಿರಹಮಾನ್ ಜೊತೆ ದೂರವಾಣಿ ಮೂಲಕ ಮಾತನಾಡಿದ ಇಸ್ರೇಲ್ ಪ್ರಧಾನಿಯವರು, ಸೊಮಾಲಿಲ್ಯಾಂಡ್ ಜನತೆಗೆ ಶುಭ ಹಾರೈಕೆ ಮಾಡಿದ್ದಾರೆ. ಆದರೆ, ಸೊಮಾಲಿಲ್ಯಾಂಡ್ ಅನ್ನು ಪ್ರತ್ಯೇಕ ದೇಶವೆಂದು ಮಾನ್ಯ ಮಾಡಿದ ಇಸ್ರೇಲ್ ಕ್ರಮವನ್ನು ಸೊಮಾಲಿಯಾ ಹಾಗೂ ಆಫ್ರಿಕನ್ ಯೂನಿಯನ್ ಬಲವಾಗಿ ವಿರೋಧಿಸಿವೆ. ಸೊಮಾಲಿಲ್ಯಾಂಡ್ ಸೊಮಾಲಿಯಾದ ಅವಿಭಾಜ್ಯ ಅಂಗ ಎಂದು ಆಫ್ರಿಕನ್ ಒಕ್ಕೂಟ ಹೇಳಿದೆ.

ಇದನ್ನೂ ಓದಿ: ಕಠಿಣ ಶಿಕ್ಷೆಯಾಗಲಿ; ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ, ಅಲ್ಪಸಂಖ್ಯಾತರ ಹಿಂಸಾಚಾರಕ್ಕೆ ಭಾರತ ಖಂಡನೆ

ಯಾವುದಿದು ಸೊಮಾಲಿಲ್ಯಾಂಡ್?

ಸೊಮಾಲಿಲ್ಯಾಂಡ್ 1991ರಲ್ಲಿ ಸೊಮಾಲಿಯಾ ಬಿಕ್ಕಟ್ಟಿನ ವೇಳೆ ಪ್ರತ್ಯೇಕಗೊಂಡ ಪ್ರದೇಶ. ಇದು ಗಲ್ಫ್ ಪ್ರದೇಶದ ಕೆಳಗೆ ಇದೆ. ಗಲ್ಫ್ ಪ್ರದೇಶಕ್ಕೂ ಸೊಮಾಲಿಲ್ಯಾಂಡ್​ಗೂ ನಡುವೆ ಗಲ್ಫ್ ಆಫ್ ಏಡನ್ ಬರುತ್ತದೆ. ಇದು ಬಹಳ ಕಿರಿದಾದ ಸಮುದ್ರ ಮಾರ್ಗವಾಗಿದೆ. ನಿತ್ಯವೂ ನೂರಾರು ಹಡಗುಗಳು ಇಲ್ಲಿ ಹಾದು ಹೋಗುತ್ತವೆ. ಜಾಗತಿಕ ವ್ಯಾಪಾರ ವಹಿವಾಟು ಸುಗಮವಾಗಿ ನಡೆಯಲು ಈ ಮಾರ್ಗ ಸುರಕ್ಷಿತವಾಗಿರಬೇಕು. ಹಾಗಾಗಿ, ಈ ಸೋಮಾಲಿಲ್ಯಾಂಡ್ ವಿಚಾರ ಪ್ರಸಕ್ತ ಬಹಳ ಮುಖ್ಯ.

1991ರಲ್ಲಿ ಸೊಮಾಲಿಲ್ಯಾಂಡ್ ಸ್ವಯಂ ಆಗಿ ಪ್ರತ್ಯೇಕ ದೇಶವೆಂದು ಘೋಷಿಸಿಕೊಂಡಿತು. ಮೂರು ದಶಕಗಳ ಕಾಲ ಸ್ವತಂತ್ರವಾಗಿಯೇ ಅಸ್ತಿತ್ವದಲ್ಲಿದೆ. ಅದರದ್ದೇ ಸ್ವಂತ ಸರ್ಕಾರ, ಸಂವಿಧಾನ, ಕರೆನ್ಸಿ, ಪಾಸ್​ಪೋರ್ಟ್, ಭದ್ರತಾ ಪಡೆಗಳು ಹೀಗೆ ಎಲ್ಲಾ ವ್ಯವಸ್ಥೆ ಇದೆ. ಚುನಾವಣೆಗಳು ನಡೆಯುತ್ತವೆ. ಸೊಮಾಲಿಯಾದಲ್ಲಿ ಇರುವಂತೆ ಸೊಮಾಲಿಲ್ಯಾಂಡ್​ನಲ್ಲಿ ಸಿವಿಲ್ ವಾರ್ ಇತ್ಯಾದಿ ಬಿಕ್ಕಟ್ಟು ಇಲ್ಲದೆ ಶಾಂತಿಯುತವಾಗಿದೆ.

ಇದನ್ನೂ ಓದಿ: ಇದು ಬಾಂಗ್ಲಾದೇಶದ 2ನೇ ವಿಮೋಚನೆ: 2024ರ ದಂಗೆಯನ್ನು ಹೊಗಳಿದ ಬಿಎನ್​ಪಿ ನಾಯಕ ತಾರಿಖ್ ರಹಮಾನ್

ಆದರೆ, ಸೊಮಾಲಿಲ್ಯಾಂಡ್​ಗೆ ಪ್ರಮುಖ ಸಮಸ್ಯೆ ಇರುವುದು ಇದಕ್ಕೆ ಇಲ್ಲದ ಅಂತಾರಾಷ್ಟ್ರೀಯ ಮಾನ್ಯತೆ. ವಿಶ್ವಬ್ಯಾಂಕ್ ಇತ್ಯಾದಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಧನಸಹಾಯ ಸಿಕ್ಕುವುದಿಲ್ಲ. ಹೀಗಾಗಿ, ಸೋಮಾಲಿಲ್ಯಾಂಡ್​ನಲ್ಲಿ ಹೆಚ್ಚಿನ ಅಭಿವೃದ್ಧಿ ಆಗಿಲ್ಲ. ಹಲವು ದೇಶಗಳು ಸೊಮಾಲಿಲ್ಯಾಂಡ್ ಜೊತೆ ಬೇರೆ ಬೇರೆ ರೂಪಗಳಲ್ಲಿ ಸಂಬಂಧ ಹೊಂದಿವೆಯಾದರೂ ಯಾವುವೂ ಕೂಡ ಅದನ್ನು ಸ್ವತಂತ್ರ ದೇಶವೆಂದು ಅಧಿಕೃತವಾಗಿ ಮಾನ್ಯ ಮಾಡಿಲ್ಲ. ಹಾಗೆ ಮಾಡಿದ ಮೊದಲ ದೇಶ ಇಸ್ರೇಲ್ ಆಗಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೈದಾನದಲ್ಲೇ ಕುಸಿದು ಬಿದ್ದು ಪ್ರಾಣ ಚೆಲ್ಲಿದ ಕ್ಯಾಪಿಟಲ್ಸ್ ತಂಡದ ಕೋಚ್ – Kannada News | BPL Tragedy: Dhaka Capitals Coach Mahbub Zaki Dies of Heart Attack Before Match

2025-26ರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನ (BPL) ಮೂರನೇ ಪಂದ್ಯ ಢಾಕಾ ಕ್ಯಾಪಿಟಲ್ಸ್ ಹಾಗೂ ರಾಜ್‌ಶಾಹಿ ರಾಯಲ್ಸ್ ನಡುವೆ ಸಿಲ್ಹೆಟ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಈ ಪಂದ್ಯ ಆರಂಭಕ್ಕೂ ಮುನ್ನವೇ ಮೈದಾನದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಮೈದಾನದಲ್ಲಿ ಪಂದ್ಯ ಪೂರ್ವ ತಯಾರಿ ನಡೆಸುತ್ತಿದ್ದಾಗ ಢಾಕಾ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಮಹಬೂಬ್ ಅಲಿ ಝಾಕಿ (Mahbub Ali Zaki) ಹಠಾತ್ತನೆ ಅಸ್ವಸ್ಥರಾಗಿ ಮೈದಾನದಲ್ಲಿ ಕುಸಿದು ಬಿದ್ದಿದ್ದಾರೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಅವರನ್ನು ಉಳಿಸಲಾಗಲಿಲ್ಲ.

ಢಾಕಾ ಕ್ಯಾಪಿಟಲ್ಸ್ ಕೋಚ್‌ಗೆ ಹೃದಯಾಘಾತ ​

ಹೃದಯಾಘಾತದಿಂದ ಮೆಹಬೂಬ್ ಅಲಿ ಝಾಕಿ ಮೈದಾನದಲ್ಲಿಯೇ ಹಠಾತ್ತನೆ ಕುಸಿದು ಬಿದ್ದರು. ಝಾಕಿ ಅವರನ್ನು ತಕ್ಷಣವೇ ಸಿಪಿಆರ್ ನೀಡಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ಫ್ರಾಂಚೈಸಿ ಝಾಕಿ ಅವರು ಪ್ರಸ್ತುತ ಐಸಿಯುನಲ್ಲಿದ್ದಾರೆ ಎಂದಿತ್ತು . ತಂಡವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಝಾಕಿ ಅಭ್ಯಾಸದ ಸಮಯದಲ್ಲಿ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಕುಸಿದು ಬಿದ್ದರು. ಅವರಿಗೆ ತಕ್ಷಣ ಮೈದಾನದಲ್ಲಿ ವೈದ್ಯಕೀಯ ನೆರವು ನೀಡಲಾಯಿತು. ಸಿಪಿಆರ್ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆಯ ಬಳಿಕ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದಿತ್ತು. ಆದಾಗ್ಯೂ, ಸ್ವಲ್ಪ ಸಮಯದ ನಂತರ, ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ, ‘ಮೆಹಬೂಬ್ ಅಲಿ ಝಾಕಿ ನಿಧನರಾಗಿದ್ದಾರೆ ಎಂಬ ಪೋಸ್ಟ್ ಅನ್ನು ಹಂಚಿಕೊಂಡಿದೆ.

ಢಾಕಾ ಕ್ಯಾಪಿಟಲ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ‘ಢಾಕಾ ಕ್ಯಾಪಿಟಲ್ಸ್ ಕುಟುಂಬದ ಪ್ರೀತಿಯ ಸಹಾಯಕ ತರಬೇತುದಾರ ಹೃದಯ ಕಾಯಿಲೆಯಿಂದ ನಿಧನರಾಗಿದ್ದಾರೆ ಎಂದು ತಿಳಿಸಲು ನಮಗೆ ತುಂಬಾ ದುಃಖವಾಗುತ್ತಿದೆ . ಈ ಸರಿಪಡಿಸಲಾಗದ ನಷ್ಟದಿಂದ ನಾವು ತುಂಬಾ ದುಃಖಿತರಾಗಿದ್ದೇವೆ . ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ನಮ್ಮ ಹೃತ್ಪೂರ್ವಕ ಸಂತಾಪಗಳು’ ಎಂದು ಬರೆದುಕೊಂಡಿದೆ.

ಬಾಂಗ್ಲಾದೇಶ ಕ್ರಿಕೆಟ್‌ಗೆ ಮಹತ್ವದ ಕೊಡುಗೆ

ಮಹಬೂಬ್ ಅಲಿ ಝಾಕಿ ಬಾಂಗ್ಲಾದೇಶ ಕ್ರಿಕೆಟ್‌ನ ದೀರ್ಘಕಾಲೀನ ಸದಸ್ಯರಾಗಿದ್ದರು ಮತ್ತು ಹಲವಾರು ಆಟಗಾರರಿಗೆ ಮಾರ್ಗದರ್ಶಕರಾಗಿದ್ದರು . ಈ ಘಟನೆಯು ಇಡೀ ತಂಡ ಮತ್ತು ಕ್ರಿಕೆಟ್ ಜಗತ್ತನ್ನು ಆಘಾತಗೊಳಿಸಿದೆ. ಅವರು 2020 ರ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ಬಾಂಗ್ಲಾದೇಶ ತಂಡದ ತರಬೇತುದಾರರ ಭಾಗವಾಗಿದ್ದರು, ಇದು ಬಾಂಗ್ಲಾದೇಶದ ಮೊದಲ ಮತ್ತು ಏಕೈಕ ಐಸಿಸಿ ಟ್ರೋಫಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಹುಲ್ ಗಾಂಧಿ ಬತ್ತಳಿಕೆಯಲ್ಲಿ ಸಿಎಂ ಕುರ್ಚಿ ತೀರ್ಮಾನ: ಸಂಕ್ರಾಂತಿ ಬಳಿಕ ರಾಜಕೀಯ ಕ್ರಾಂತಿ? – Kannada News | Karnataka Power Tussle: Rahul Gandhi to final DK Shivakumar And Siddaramaiah power Sharing after Sankranthi

ನವದೆಹಲಿ, ಡಿಸೆಂಬರ್ 27): ಕರ್ನಾಟಕದಲ್ಲಿ (Karnataka) ಸಿಎಂ ಕುರ್ಚಿ ಚರ್ಚೆ ಜೀವಂತವಿದೆ. ಹೈಕಮಾಂಡ ಹೇಳಿದಂತೆ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್  (DK Shivakumar)ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದರೂ ಸಹ​ ಈ ಬೆಳವಣಿಗೆ ಯಾವ ವಿರಾಮವೂ ಬಿದ್ದಿಲ್ಲ. ಹೀಗಾಗಿ ಇವತ್ತಿನ ಸಿಎಂ ಸಿದ್ದರಾಮಯ್ಯರ ದೆಹಲಿ ಪ್ರವಾಸ ಕಾಂಗ್ರೆಸ್ ಪಾಲಿಗೆ ಕುತೂಹಲದ ವಿಚಾರ. ವಿಷಯ ಅಂದ್ರೆ ಇಂದು (ಡಿಸೆಂಬರ್ 27) ದೆಹಲಿಯ ಇಂದಿರಾ ಭವನದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು, ಘಟಾನುಘಟಿ ಹೈಕಮಾಂಡ್ ನಾಯಕರು ಭಾಗವಹಿಸಿದ್ದರು. ಇದೇ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಇದ್ದು, ಈ ವೇಳೆ ರಾಜ್ಯ ಕಾಂಗ್ರೆಸ್​​ನಲ್ಲಿನ ಬೆಳವಣಿಗೆಗಳನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಅವರ ಕಿವಿಗೆ ಹಾಕಿದ್ದಾರೆ. ಈ ಮೂಲಕ ಗೊಂದಲ ನಿವಾರಿಸಿಕೊಳ್ಳಲು ಯತ್ನಿಸಿದರಾದರೂ ಅದು ಸಾಧ್ಯವಾಗಿಲ್ಲ.

ಹೌದು…ಸಿಡಬ್ಲ್ಯೂ ಸಭೆಯಲ್ಲಿಂದು ಸಿಎಂ ಸಿದ್ದರಾಮಯ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಚರ್ಚೆ ನಡೆಸಿದ್ದು, ಈ ವೇಳೆ ವೇಣುಗೋಪಾಲ್ ಜನವರಿಯಲ್ಲಿ ಬಂದು ಭೇಟಿ ಆಗುವಂತೆ ಸೂಚಿಸಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯರ ದೆಹಲಿ ಭೇಟಿ ಕೇವಲ CWC ಸಭೆಗಷ್ಟೇ ಸೀಮಿತವಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ

ಸಂಕ್ರಾಂತಿಗೆ ರಾಜಕೀಯ ಕ್ರಾಂತಿ ಆಗುತ್ತಾ?

ಅಷ್ಟಕ್ಕೂ ವಿಷಯ ಅಂದ್ರೆ, ರಾಜ್ಯದ ಸಿಎಂ ಕುರ್ಚಿ ತೀರ್ಮಾನ ಸದ್ಯ ರಾಹುಲ್ ಗಾಂಧಿ ಬತ್ತಳಿಕೆಯಲ್ಲಿದೆ. ಎಲ್ಲದಕ್ಕೂ ಲೋಕಸಭೆ ವಿಪಕ್ಷ ನಾಯಕನಿಂದ್ಲೇ ಉತ್ತರ ಸಿಗಬೇಕಿದೆ. ಆದರೆ ರಾಹುಲ್ ಗಾಂಧಿ ನಾಳೆ (ಡಿಸೆಂಬರ್ 28) ರಾತ್ರಿ ರಾಹುಲ್ ಗಾಂಧಿ ವಿದೇಶಕ್ಕೆ ತೆರಳುತ್ತಿದ್ದು, ಜನವರಿ 9ರಂದು ಭಾರತಕ್ಕೆ ಮರಳಲಿದ್ದಾರೆ. ಆ ಬಳಿಕ ಕರ್ನಾಟಕ ಸಿಎಂ ಕುರ್ಚಿ ಕದನ ಬ್ರೇಕ್ ಬೀಳಲಿದ್ದು, ಸಿಎಂ ಬದಲಾವಣೆ ಆಗುತ್ತಾರಾ? ಅಥವಾ ಸಿದ್ದರಾಮಯ್ಯ ಬಾಕಿ ಎರಡು ವರ್ಷ ಪೂರ್ಣಗೊಳಿಸುತ್ತಾರಾ ಎಂಬುದು ಗೊತ್ತಾಗಲಿದೆ. ಹೀಗಾಗಿ ರಾಹುಲ್ ಗಾಂಧಿ ವಾಪಾಸಾದ ಬಳಿಕ ಸಿಎಂ ಸಿದ್ದರಾಮಯ್ಯ ಸಂಪುಟ ಪುನಾರಚನೆ ವಿಚಾರಕ್ಕಾಗಿ ದೆಹಲಿಗೆ ತೆರಳಲಿದ್ದಾರೆ. ಅಷ್ಟೇ ಅಲ್ಲದೇ ಸಿಎಂ ಹಾಗೂ ಡಿಸಿಎಂ ಸೇರಿದಂತೆ ಉಭಯ ಬಣದ ನಾಯಕರು ಈ ವೇಳೆ ದೆಹಲಿ ಯಾತ್ರೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಜನವರಿ 15ರ ಬಳಿಕ ರಾಜ್ಯದಲ್ಲಿ ಕ್ಷಿಪ್ರ ಬೆಳವಣಿಗೆ ಆಗುವ ಮುನ್ಸೂಚನೆ ಸಿಕ್ಕಿದೆ.

ಹೈಕಮಾಂಡ್ ಮನವೊಲಿಕೆಗೆ ಡಿಕೆಶಿ ಯತ್ನ

ಇನ್ನೊಂದೆಡೆ ಡಿಕೆ ಶಿವಕುಮಾರ್, ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿಕೊಂಡು ಮುನ್ನಡೆಯುತ್ತಿದ್ದಾರೆ. ಇನ್ನು ರಾಹುಲ್ ಗಾಂಧಿಗೆ ಸಿದ್ದರಾಮಯ್ಯನವರನ್ನ ಮುಂದುವರೆಸುವ ಮನಸ್ಸಿದೆ. ಇತ್ತ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಗೆ ಡಿಕೆಶಿಯನ್ನು ಸಿಎಂ ಮಾಡಬೇಕೆನ್ನುವ ಮನಸ್ಸಿದ. ಹೀಗಾಗಿ ಡಿಕೆ ಶಿವಕುಮಾರ್, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಮೂಲಕ ರಾಹುಲ್ ಗಾಂಧಿ ಮನವೊಲಿಸುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಕರ್ನಾಟಕ ಸಿಎಂ ಕುರ್ಚಿ ಕದನ ತೀವ್ರ ಕುತೂಹಲ ಮೂಡಿಸಿದ್ದು, ಅಂತಿಮವಾಗಿ ರಾಹುಲ್ ಗಾಂಧಿ  ಒಲವು ತೋರುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ. ಒಂದು ವೇಲೆ ಸಿಎಂ ಬದಲಾವಣೆ ಆದರೂ ಆಗದಿದ್ದರೂ ರಾಜಕೀಯ ಆಟ ಶುರುವಾಗುವುದು ಗ್ಯಾರಂಟಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version