ಬೆಂಗಳೂರಿನಲ್ಲಿ ಬಾಂಗ್ಲಾದೇಶಿ ದಂಪತಿ ಮೇಲೆ ಹಲ್ಲೆ: ವೈದ್ಯನ ಬಂಧನ – Kannada News | Bengaluru Doctor Arrested for Assaulting Bangladeshi Couple in Bellandur

ಬೆಂಗಳೂರು, ಜುಲೈ 26: ಬೆಳ್ಳಂದೂರಿನಲ್ಲಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ದಂಪತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸ್ಥಳೀಯ ವೈದ್ಯರೊಬ್ಬರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಸಾಯಿ ಕ್ಲಿನಿಕ್‌ನ ಡಾ. ನಾಗೇಂದ್ರ ಬಂಧಿತ ವೈದ್ಯ. ವೈಟ್ ಫೀಲ್ಡ್ ಸಮೀಪದ ಬೆಟ್ಟದಾಸಪುರದಲ್ಲಿ ವಾಸವಾಗಿರುವ ಬಾಂಗ್ಲಾದೇಶ ಮೂಲದ ನಸ್ರೀನಾ ಬಿಲಾಲ್ (23) ಎಂಬ ಮಹಿಳೆ ನೀಡಿದ ದೂರಿನನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ನಡೆದಿದ್ದೇನು?

ನಸ್ರೀನಾ ಬಿಲಾಲ್ ಹಾಗೂ ಅವರ ಪತಿ ಮಹಮ್ಮದ್ ಬಿಲಾಲ್ (ಚಾಲಕ) ಅವರು ಬಾಂಗ್ಲಾದೇಶದ ನಿವಾಸಿಗಳು ಎಂಬ ಕಾರಣಕ್ಕೆ ಡಾ. ನಾಗೇಂದ್ರ ಅವರು ದಂಪತಿಯ ಪೌರತ್ವವನ್ನು ಪ್ರಶ್ನಿಸಿ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ವೈದ್ಯ ನಾಗೇಂದ್ರ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರಿನ ಆಧಾರದ ಮೇಲೆ ಬೆಳ್ಳಂದೂರು ಪೊಲೀಸರು ಡಾ. ನಾಗೇಂದ್ರ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಅಧಿಕಾರಿಗಳು ಹೇಳಿದ್ದೇನು?

ಸಂತ್ರಸ್ತರು ಬಾಂಗ್ಲಾದೇಶಿ ಮೂಲದವರಾಗಿದ್ದು, ಪ್ರದೇಶದಲ್ಲಿ ಅಕ್ರಮ ವಲಸಿಗರು ಹೆಚ್ಚಾಗಿದ್ದಾರೆಂಬ ಭಾವೋದ್ವೇಗದಿಂದ ವೈದ್ಯರು ಈ ರೀತಿ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ. “ದಂಪತಿ ಬಾಂಗ್ಲಾದೇಶದವರಾಗಿದ್ದರೂ ಅವರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ, ವೈದ್ಯರು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಬದಲು ನಮಗೆ ಮಾಹಿತಿ ನೀಡಬೇಕಿತ್ತು” ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಈ ದಂಪತಿಯ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇನ್ಷೂರೆನ್ಸ್ ಪಾಲಿಸಿಗೆ ಕಡ್ಡಾಯ ‘ಏಜೆಂಟ್ ಟ್ಯಾಗಿಂಗ್’; ಯಾರು ಯಾರಿಗೆ ವಿಮೆ ಮಾರಿದರು, ಮಾಹಿತಿ ಇರಬೇಕು: ಐಆರ್​ಡಿಎಐ ಮುಖ್ಯಸ್ಥರ ಪ್ರಸ್ತಾಪ – Kannada News | IRDAI chief suggests agent tagging for every insurance policy to curb mis selling

ನವದೆಹಲಿ, ಜುಲೈ 26: ಇನ್ಷೂರೆನ್ಸ್ ಸೆಕ್ಟರ್​ನಲ್ಲಿ ಸಾಕಷ್ಟು ಮಿಸ್​ಸೆಲ್ಲಿಂಗ್ (Mis-selling) ನಡೆಯುತ್ತಿದೆ ಎನ್ನುವ ಆರೋಪ ಇದೆ. ಅಂದರೆ, ಒಬ್ಬ ವ್ಯಕ್ತಿಯ ಅಗತ್ಯಗಳನ್ನು ಪರಿಗಣಿಸದೆಯೇ ತಪ್ಪಾದ ವಿಮಾ ಪಾಲಿಸಿಗಳನ್ನು (Insurance Policies) ಮಾರಾಟ ಮಾಡಲಾಗುತ್ತಿರುವ ಪ್ರಕರಣಗಳು ಬಹಳ ಇವೆ. ಇದಕ್ಕೆ ಕಡಿವಾಣ ಹಾಕಲು ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ ಐಆರ್​ಡಿಎಐ (IRDAI) ಮುಂದಾಗಿದೆ. ಪ್ರಾಧಿಕಾರ ಮುಖ್ಯಸ್ಥ ಅಜಯ್ ಸೇಠ್ ಅವರು ಪ್ರತಿಯೊಂದು ವಿಮಾ ಪಾಲಿಸಿಗೂ ಏಜೆಂಟ್ ಟ್ಯಾಗ್ ಕಡ್ಡಾಯಗೊಳಿಸುವ ಪ್ರಸ್ತಾಪ ಮಾಡಿದ್ದಾರೆ. ಅವರ ಪ್ರಕಾರ, ವಿಮಾ ಕಂಪನಿಗಳು ಪ್ರತಿಯೊಂದು ಇನ್ಶೂರೆನ್ಸ್ ಪಾಲಿಸಿಯನ್ನು ಅದನ್ನು ಮಾರಾಟ ಮಾಡಿದ ಏಜೆಂಟ್ ಅಥವಾ ಪಾಯಿಂಟ್ ಆಫ್ ಸೇಲ್ (POS) ವ್ಯಕ್ತಿಯೊಂದಿಗೆ ಕಡ್ಡಾಯವಾಗಿ ಲಿಂಕ್ (ಟ್ಯಾಗ್) ಮಾಡಬೇಕು.

ದೆಹಲಿಯಲ್ಲಿ ಇನ್ಷೂರೆನ್ಸ್ ಬ್ರೋಕರ್ಸ್ ಅಸೋಸಿಯೇಶನ್​ನ (ಐಬಿಎಐ) ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅಜಯ್ ಸೇಠ್, “ಪ್ರತಿಯೊಂದು ಪಾಲಿಸಿಯನ್ನು ಮಾರಾಟ ಮಾಡಿದ ಮಧ್ಯವರ್ತಿ ಅಥವಾ ಏಜೆಂಟ್‌ನೊಂದಿಗೆ ನೇರವಾಗಿ ಗುರುತಿಸುವ (Agent Tagging) ವ್ಯವಸ್ಥೆ ಅಗತ್ಯವಾಗಿದೆ” ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಖರೀದಿಸುವ ಮುನ್ನ, ಈ 5 ಅಂಶಗಳು ಗಮನದಲ್ಲಿರಲಿ…

ಏನಿದು ‘ಏಜೆಂಟ್ ಟ್ಯಾಗಿಂಗ್’?

ಯಾವುದೇ ವಿಮಾ ಪಾಲಿಸಿಯನ್ನು (ಲೈಫ್ ಇನ್ಶೂರೆನ್ಸ್, ಹೆಲ್ತ್ ಇನ್ಶೂರೆನ್ಸ್ ಅಥವಾ ಜನರಲ್ ಇನ್ಶೂರೆನ್ಸ್) ಮಾರಾಟ ಮಾಡಿದಾಗ, ಆ ಪಾಲಿಸಿಯ ದಾಖಲೆಯಲ್ಲಿ ಅದನ್ನು ಮಾರಾಟ ಮಾಡಿದ ಏಜೆಂಟ್ ಅಥವಾ POS ವ್ಯಕ್ತಿಯ ವಿವರಗಳು ಸ್ಪಷ್ಟವಾಗಿ ನಮೂದಾಗಿರಬೇಕು.

ಈ ನಿರ್ಧಾರದ ಮುಖ್ಯ ಉದ್ದೇಶಗಳೇನು?

  • ತಪ್ಪು ಮಾರಾಟ ತಡೆಗಟ್ಟುವುದು: ಗ್ರಾಹಕರಿಗೆ ತಪ್ಪಾದ ಅಥವಾ ಗೊಂದಲಕಾರಿ ಮಾಹಿತಿ ನೀಡಿ ಪಾಲಿಸಿ ಮಾರಾಟ ಮಾಡುವುದನ್ನು (Mis-selling) ತಡೆಯಲು ಇದು ನೆರವಾಗುತ್ತದೆ.
  • ಹೊಣೆಗಾರಿಕೆ: ಪಾಲಿಸಿ ಮಾರಾಟದ ನಂತರ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಏಜೆಂಟ್‌ನ ಜವಾಬ್ದಾರಿಯನ್ನು ಖಚಿತಪಡಿಸಲಾಗುತ್ತದೆ (Accountability).
  • ಪಾರದರ್ಶಕತೆ ಹೆಚ್ಚಿಸುವುದು: ವಿಮಾ ವಲಯದಲ್ಲಿ ಗ್ರಾಹಕರ ನಂಬಿಕೆಯನ್ನು ಬಲಪಡಿಸಲು ಮತ್ತು ಪಾಲಿಸಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಈ ಕ್ರಮ ಕೈಗೊಳ್ಳಲಾಗಿದೆ.
  • ಕ್ಲೈಮ್ ಸಲ್ಲಿಕೆ ವೇಳೆ ನೆರವು: ಪಾಲಿಸಿದಾರರಿಗೆ ನವೀಕರಣ (Renewal) ಅಥವಾ ಕ್ಲೈಮ್ (Claim) ಸಲ್ಲಿಕೆಯ ಸಮಯದಲ್ಲಿ ಸೂಕ್ತ ಸಹಾಯ ಸಿಗುವಂತೆ ಮಾಡಲು ಇದು ಸಹಕಾರಿಯಾಗಿದೆ.

ಇದನ್ನೂ ಓದಿ: ಭಾರತ್ ಟ್ಯಾಕ್ಸಿ ಮಾದರಿಯಲ್ಲಿ ಸಹಕಾರಿ ಸಂಸ್ಥೆಗಳಿಂದಲೂ ಇನ್ಷೂರೆನ್ಸ್ ಸೇವೆ; ಸರ್ಕಾರ ಯೋಚನೆ

IRDAI ಮುಖ್ಯಸ್ಥ ಅಜಯ್ ಸೇಠ್ ಅವರ ಈ ಪ್ರಸ್ತಾಪವು ಜಾರಿಗೆ ಬಂದಲ್ಲಿ, ವಿಮಾ ರಂಗದಲ್ಲಿ ಗ್ರಾಹಕರ ಹಿತರಕ್ಷಣೆಯನ್ನು ಹೆಚ್ಚಿಸಲಿದ್ದು, ‘ತಪ್ಪು ಮಾರಾಟ’ಕ್ಕೆ ಕಡಿವಾಣ ಹಾಕಲು ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇರತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

National Testing Agency: ನೀಟ್ ಪರೀಕ್ಷೆ ವಿವಾದ; ದೇಶದ ಅತಿದೊಡ್ಡ ಪರೀಕ್ಷಾ ಸಂಸ್ಥೆ ‘NTA’ ಕುರಿತು ನೀವು ತಿಳಿಯಬೇಕಾದ ಪ್ರಮುಖ ವಿಷಯಗಳಿವು – Kannada News | Beyond NEET: Understanding NTA – India’s National Testing Agency and Its Exams

ಇತ್ತೀಚೆಗೆ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ವಿದ್ಯಾರ್ಥಿಗಳಿಂದ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪ್ರಲ್ಹಾದ್ ಜೋಶಿ ಅವರನ್ನು ನಿಯೋಜಿಸಲಾಗಿದೆ. ಆದ್ದರಿಂದ ದೇಶಾದ್ಯಂತ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗಳಿಗೆ ಅಗತ್ಯವಿರುವ ಪ್ರವೇಶ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA)ಯ ಜವಾಬ್ದಾರಿ ಹಾಗೂ ನೀಟ್ ಹೊರತಾಗಿ ಇದು ನಡೆಸುವ ಇನ್ನುಳಿದ ಪರೀಕ್ಷೆಗಳು ಯಾವುವು ಎಂಬುದರ ಸಮಗ್ರ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಎಂದರೇನು?

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA) ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಅತ್ಯಂತ ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿದೆ. ದೇಶಾದ್ಯಂತ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗಳಿಗೆ ಅಗತ್ಯವಿರುವ ಪ್ರವೇಶ ಪರೀಕ್ಷೆಗಳನ್ನು ಪಾರದರ್ಶಕ, ನ್ಯಾಯಯುತ ಮತ್ತು ಅತ್ಯಂತ ದಕ್ಷತೆಯಿಂದ ನಡೆಸುವುದು ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ.

NTA ಸಂಸ್ಥೆಯ ಸ್ಥಾಪನೆ ಮತ್ತು ಹಿನ್ನೆಲೆ:

ಭಾರತದಲ್ಲಿ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ನಡೆಸುವಲ್ಲಿ ಏಕರೂಪತೆ ಮತ್ತು ಉನ್ನತ ಗುಣಮಟ್ಟವನ್ನು ತರುವ ನಿಟ್ಟಿನಲ್ಲಿ ಶಿಕ್ಷಣ ಸಚಿವಾಲಯವು 2018 ರಲ್ಲಿ NTA ಅನ್ನು ಸ್ಥಾಪಿಸಿತು. ಅಂದಿನಿಂದ ಇಂದಿನವರೆಗೆ ಈ ಸಂಸ್ಥೆಯು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬೃಹತ್ ಪರೀಕ್ಷಾ ಏಜೆನ್ಸಿಯಾಗಿ ಬೆಳೆದು ನಿಂತಿದೆ.

ಬೃಹತ್ ಪ್ರಮಾಣದ ಪರೀಕ್ಷಾ ನಿರ್ವಹಣೆ ಮತ್ತು ಸಾಧನೆ:

ಸ್ಥಾಪನೆಯಾದ ಅತ್ಯಲ್ಪ ಅವಧಿಯಲ್ಲೇ NTA ಕ್ರಾಂತಿಕಾರಿ ಪ್ರಗತಿಯನ್ನು ಸಾಧಿಸಿದೆ. ಶಿಕ್ಷಣ ಸಚಿವಾಲಯದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಇದುವರೆಗೆ 66 ಮಿಲಿಯನ್‌ಗೂ ಹೆಚ್ಚು (6.6 ಕೋಟಿ+) ಅಭ್ಯರ್ಥಿಗಳು NTA ನಡೆಸುವ ವಿವಿಧ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ, ಸಂಸ್ಥೆಯು ಯಶಸ್ವಿಯಾಗಿ 270 ಕ್ಕೂ ಹೆಚ್ಚು ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ಸಂಘಟಿಸಿ ಸೈ ಎನಿಸಿಕೊಂಡಿದೆ.

ಇದನ್ನೂ ಓದಿ: ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

NTA ನಿರ್ವಹಿಸುವ ಪ್ರಮುಖ ಪರೀಕ್ಷೆಗಳು:

ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ಕಠಿಣ ಹಾಗೂ ಪ್ರಸಿದ್ಧ ಪರೀಕ್ಷೆಗಳನ್ನು NTA ನಡೆಸುತ್ತದೆ:

  • NEET UG: ವೈದ್ಯಕೀಯ (MBBS, BDS ಇತ್ಯಾದಿ) ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ದೇಶದ ಏಕೈಕ ಪ್ರವೇಶ ಪರೀಕ್ಷೆ.
  • JEE Main: ಪ್ರಮುಖ ತಾಂತ್ರಿಕ ಸಂಸ್ಥೆಗಳ (NIT, IIIT) ಎಂಜಿನಿಯರಿಂಗ್ ಪ್ರವೇಶಕ್ಕೆ ಹಾಗೂ JEE Advanced ಅರ್ಹತೆಗಾಗಿ ನಡೆಸುವ ಪರೀಕ್ಷೆ.
  • UGC NET: ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಅರ್ಹತೆ ಮತ್ತು ಕಿರಿಯ ಸಂಶೋಧನಾ ಫೆಲೋಶಿಪ್‌ಗಾಗಿ (JRF) ನಡೆಸುವ ಪರೀಕ್ಷೆ.
  • ಇತರ ಪರೀಕ್ಷೆಗಳು: ಪ್ರಮುಖ ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆಗಳು (CUET), ಮ್ಯಾನೇಜ್‌ಮೆಂಟ್, ಫಾರ್ಮಸಿ ಹಾಗೂ ವಿವಿಧ ಇಲಾಖಾ ನೇಮಕಾತಿ ಪರೀಕ್ಷೆಗಳು.

ಪಾರದರ್ಶಕತೆ ಮತ್ತು ತಂತ್ರಜ್ಞಾನ ಆಧಾರಿತ ಪರೀಕ್ಷಾ ವ್ಯವಸ್ಥೆಯ ಮೂಲಕ NTA ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿ ಕೋಟ್ಯಂತರ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಕನಸುಗಳಿಗೆ ಬಲವಾದ ತಡಿಪಾಯ ಹಾಕಿಕೊಟ್ಟಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

NEET ವಿಚಾರವಾಗಿ ಕೇಂದ್ರ ಸಚಿವರ ರಾಜೀನಾಮೆ ಬೆನ್ನಲ್ಲೇ ಕರ್ನಾಟಕದಲ್ಲಿ ನಡೆದ ಗಂಭೀರ ಘಟನೆಗಳಿಗೆ ಹೊಣೆ ಯಾರೆಂದು ಕಾಂಗ್ರೆಸ್​​ಗೆ ಅಶೋಕ್​​ ಪ್ರಶ್ನೆ – Kannada News | Ashoka Questions Congress Over Accountability for Karnataka’s Major Incidents

ಆರ್. ಅಶೋಕ್Image Credit source: PTI

ಬೆಂಗಳೂರು, ಜುಲೈ 26: ಕರ್ನಾಟಕದ ಕಾಂಗ್ರೆಸ್ ವಿರುದ್ಧ ದ್ವಂದ್ವ ನೀತಿ ಆರೋಪ ಮಾಡಿ ಎಕ್ಸ್ ಪೋಸ್ಟ್ ಮೂಲಕ ಸರ್ಕಾರದ ವಿರುದ್ಧ ವಿಧಾನ ಸಭೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ. ಕೇಂದ್ರದಲ್ಲಿ NEET ಪರೀಕ್ಷೆಗೆ ಸಂಬಂಧಿಸಿದ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಆಡಳಿತಾತ್ಮಕ ಹೊಣೆ ಹೊತ್ತು ಕೇಂದ್ರ ಸಚಿವರು ರಾಜೀನಾಮೆ ನೀಡಿದ್ದಾರೆ. ಹಾಗಾದರೆ ಕರ್ನಾಟಕದಲ್ಲಿ ನಡೆದ ಗಂಭೀರ ಘಟನೆಗಳಿಗೆ ನೈತಿಕ ಮತ್ತು ಆಡಳಿತಾತ್ಮಕ ಹೊಣೆ ಯಾರು ಹೊರುತ್ತಾರೆ? ಎಂದವರು ಖಾರವಾಗಿ ಪ್ರಶ್ನಿಸಿದ್ದಾರೆ.

ಸರ್ಕಾರಕ್ಕೆ ಅಶೋಕ್​​ ಸಾಲು ಸಾಲು ಪ್ರಶ್ನೆ

KPSC ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಒಂದು ಹುದ್ದೆಗೆ ₹80 ಲಕ್ಷ ಡೀಲ್ ನಡೆದಿರುವ ಆರೋಪದ ಆಡಿಯೋ ಬಹಿರಂಗವಾಗಿದೆ. ಈ ಆರೋಪಗಳ ಕುರಿತು ಸಮಗ್ರ, ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ಯಾವಾಗ? ಐಪಿಎಲ್ ವಿಜಯೋತ್ಸವದ ಕಾಲ್ತುಳಿತ ದುರಂತದಲ್ಲಿ 11 ಅಮಾಯಕ ಜೀವಗಳು ಬಲಿಯಾದವು. ಆ ದುರಂತಕ್ಕೆ ನೈತಿಕ ಮತ್ತು ಆಡಳಿತಾತ್ಮಕ ಹೊಣೆ ಯಾರು ಹೊರುತ್ತಾರೆ? ನೊಂದ ಕುಟುಂಬಗಳಿಗೆ ಸಂಪೂರ್ಣ ನ್ಯಾಯ ಯಾವಾಗ ದೊರೆಯುತ್ತದೆ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿ ತಡೆಯಲಾರದೆ ನೂರಾರು ಬಡವ ಸಾಲಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ? ಇದಕ್ಕೆಲ್ಲ ಯಾರು ಹೊಣೆ? ಎಂದವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಿದ್ದರಾಮಯ್ಯ; 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದ ಮಾಜಿ ಸಿಎಂ

ಪ್ರಜಾಪ್ರಭುತ್ವದಲ್ಲಿ ಅಧಿಕಾರ ಎಂದರೆ ಕೇವಲ ಹುದ್ದೆಯಲ್ಲ; ಅದರೊಂದಿಗೆ ಜವಾಬ್ದಾರಿಯೂ ಇರುತ್ತದೆ. ತಪ್ಪುಗಳು ನಡೆದಾಗ ಅಧಿಕಾರಿಗಳ ಮೇಲೆ ಗೂಬೆ ಕೂರಿಸದೆ, ನಾಮಕಾವಸ್ತೆ ತನಿಖೆಗಳ ಹೆಸರಿನಲ್ಲಿ ತಪ್ಪಿಸಿಕೊಳ್ಳದೆ ಉತ್ತರದಾಯಿತ್ವ ಸ್ವೀಕರಿಸಬೇಕು. ಪ್ರತಿಯೊಂದು ಪ್ರಕರಣದಲ್ಲೂ ಸತ್ಯ ಹೊರಬರಬೇಕು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಾಗಬೇಕು ಹಾಗೂ ಜನರ ವಿಶ್ವಾಸವನ್ನು ಮರುಸ್ಥಾಪಿಸುವ ಕಾರ್ಯ ನಡೆಯಬೇಕು ಎಂದವರು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:44 pm, Sun, 26 July 26

Source link

ಡೋಪಿಂಗ್​ನಲ್ಲಿ ಸಿಕ್ಕಿಬಿದ್ದ ಭಾರತದ ರೋವರ್: ಚಿನ್ನದ ಪದಕ ವಾಪಸ್! – Kannada News | India to Lose Historic World Cup Gold Due to Doping

ಭಾರತೀಯ ಕ್ರೀಡಾಲೋಕಕ್ಕೆ ಭಾರಿ ಆಘಾತ ಎದುರಾಗಿದ್ದು, ರೋಯಿಂಗ್ ಇತಿಹಾಸದಲ್ಲೇ ದೇಶಕ್ಕೆ ಲಭಿಸಿದ್ದ ಮೊದಲ ಐತಿಹಾಸಿಕ ವಿಶ್ವಕಪ್ ಚಿನ್ನದ ಪದಕ ಈಗ ಡೋಪಿಂಗ್‌ ಗ್ರಹಣಕ್ಕೆ ಸಿಲುಕಿ ಕೈತಪ್ಪುವುದು ಬಹುತೇಕ ಖಚಿತವಾಗಿದೆ. ಕಳೆದ ಜೂನ್ ತಿಂಗಳಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ವಿಶ್ವ ರೋಯಿಂಗ್ ಕಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ರೋವರ್ ಲಕ್ಷಯ್, ಉದ್ದೀಪನ ಮದ್ದು (ಡೋಪಿಂಗ್) ಪರೀಕ್ಷೆಯಲ್ಲಿ ನಿಷೇಧಿತ ಸ್ಟೆರಾಯ್ಡ್ ಬಳಸಿ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ವಿಶ್ವ ರೋಯಿಂಗ್ ಕಪ್‌ನಲ್ಲಿ ಗೆದ್ದಿದ್ದ ಚಿನ್ನದ ಪದಕವನ್ನು ವಾಪಸ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಐತಿಹಾಸಿಕ ಚಿನ್ನದ ಪದಕ:

ಕಳೆದ ಜೂನ್ 28, 2026 ರಂದು ಸ್ವಿಟ್ಜರ್ಲೆಂಡ್‌ನ ಲುಸರ್ನ್‌ನಲ್ಲಿ ನಡೆದ ವಿಶ್ವ ರೋಯಿಂಗ್ ಕಪ್ III ರ ಲೈಟ್‌ವೇಟ್ ಪುರುಷರ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಲಕ್ಷಯ್ ಮತ್ತು ಉಜ್ವಲ್ ಕುಮಾರ್ ಸಿಂಗ್ ಜೋಡಿ 6:26.09 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಭಾರತಕ್ಕೆ ಚೊಚ್ಚಲ ವಿಶ್ವಕಪ್ ಚಿನ್ನದ ಪದಕ ಗೆದ್ದು ಕೊಟ್ಟಿದ್ದರು. ಆದರೀಗ ಈ ಸಂಭ್ರಮವು ತೆರೆಬಿದ್ದಿದೆ.

ಸಿಕ್ಕಿ ಬಿದ್ದಿದ್ದು ಹೇಗೆ?

ಲಕ್ಷಯ್ ಅವರು ಭಾರತೀಯ ಸೇನೆಯಲ್ಲಿ ಹವಿಲ್ದಾರ್ ಆಗಿದ್ದು, ಪುಣೆಯ ಆರ್ಮಿ ರೋಯಿಂಗ್ ನೋಡ್​ನಲ್ಲಿ ತರಬೇತಿ ಪಡೆಯುತ್ತಿದ್ದರು. ಮೇ 25, 2026 ರಂದು ಪುಣೆಯ ಆರ್ಮಿ ರೋಯಿಂಗ್ ನೋಡ್​ನಲ್ಲಿ ತರಬೇತಿ ಪಡೆಯುತ್ತಿದ್ದಾಗ ಅಧಿಕಾರಿಗಳು ಹಠಾತ್ ಭೇಟಿ ನೀಡಿ ಈ ‘ಸ್ಪರ್ಧೆಯ ಹೊರಗಿನ’ ಮಾದರಿಯನ್ನು ಸಂಗ್ರಹಿಸಿದ್ದರು. ಕ್ರೀಡಾಪಟುಗಳು ತರಬೇತಿಯ ಸಮಯದಲ್ಲಿ ರಹಸ್ಯವಾಗಿ ಶಕ್ತಿವರ್ಧಕಗಳನ್ನು ಬಳಸದಂತೆ ತಡೆಯಲು ಈ ರೀತಿ ಮಾಡಲಾಗುತ್ತದೆ.

ಹೀಗೆ ಸಂಗ್ರಹಿಸಲಾದ ಲಕ್ಷಯ್ ಅವರ ಮಾದರಿಯಲ್ಲಿ ವಿಶ್ವ ಉದ್ದೀಪನ ಮದ್ದು ಪ್ರತಿರೋಧಕ ಸಂಸ್ಥೆ (WADA) ನಿಷೇಧಿಸಿರುವ ‘ಸ್ಟಾನೋಜೋಲೋಲ್’ ಎಂಬ ಶಕ್ತಿ ವರ್ಧಕ ಅನಾಬೊಲಿಕ್ ಸ್ಟೆರಾಯ್ಡ್ ಪತ್ತೆಯಾಗಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಉದ್ದೀಪನ ಮದ್ದು ಪ್ರತಿರೋಧಕ ಸಂಸ್ಥೆ ತಕ್ಷಣದಿಂದ ಜಾರಿಗೆ ಬರುವಂತೆ ಲಕ್ಷಯ್ ಅವರನ್ನು ತಾತ್ಕಾಲಿಕ ಅಮಾನತ್ತಿನಲ್ಲಿಟ್ಟಿದ್ದಾರೆ.

ಪದಕ ಕೈತಪ್ಪುವುದು ಏಕೆ?

ವಿಶ್ವ ರೋಯಿಂಗ್ ನಿಯಮಾವಳಿಗಳ ಪ್ರಕಾರ, ಒಬ್ಬ ಕ್ರೀಡಾಪಟು ಡೋಪಿಂಗ್ ಪರೀಕ್ಷೆಯಲ್ಲಿ ಫೇಲ್ ಆದ ದಿನಾಂಕದ ನಂತರ ಅವರು ಭಾಗವಹಿಸಿದ ಎಲ್ಲಾ ಸ್ಪರ್ಧೆಗಳ ಫಲಿತಾಂಶಗಳನ್ನು ರದ್ದುಗೊಳಿಸಲಾಗುತ್ತದೆ. ಲಕ್ಷಯ್ ಅವರ ಮಾದರಿಯನ್ನು ಮೇ ತಿಂಗಳಲ್ಲಿ ಪಡೆಯಲಾಗಿದ್ದು, ಪದಕವನ್ನು ಜೂನ್ ಅಂತ್ಯದಲ್ಲಿ ಗೆಲ್ಲಲಾಗಿದೆ. ಹಾಗಾಗಿ ಈ ಚಿನ್ನದ ಪದಕವನ್ನು ಹಿಂಪಡೆಯಲಾಗುತ್ತದೆ. ಇದು ಅವರೊಂದಿಗೆ ಶ್ರಮ ಪಟ್ಟಿದ್ದ ಸಹ-ರೋವರ್ ಉಜ್ವಲ್ ಕುಮಾರ್ ಸಿಂಗ್ ಅವರಿಗೂ ಭಾರಿ ಅನ್ಯಾಯ ಮಾಡಿದಂತಾಗಿದೆ.

ಮುಂದಿನ ಕಾನೂನು ಹೋರಾಟ ಮತ್ತು ಶಿಕ್ಷೆ:

ಭಾರತೀಯ ರೋಯಿಂಗ್ ಫೆಡರೇಶನ್ (RFI) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಲಕ್ಷಯ್ ಅವರ ನಿರಪರಾಧಿತ್ವವನ್ನು ಸಾಬೀತುಪಡಿಸಲು ಪ್ರಯೋಗಾಲಯದಲ್ಲಿ ‘ಬಿ’ ಮಾದರಿಯ ಪರೀಕ್ಷೆಗೆ ವಿನಂತಿಸಲು ಕ್ರೀಡಾಪಟುವಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದೆ.

ಇದನ್ನೂ ಓದಿ: ಸ್ಕ್ವಾಷ್ ಚಾಂಪಿಯನ್‌ಶಿಪ್​ನಲ್ಲಿ ಹೊಸ ಇತಿಹಾಸ ಬರೆದ ಅನಾಹತ್ ಸಿಂಗ್

ಒಂದು ವೇಳೆ ‘ಬಿ’ ಮಾದರಿ ಪರೀಕ್ಷೆಯಲ್ಲೂ ಡೋಪಿಂಗ್ ಸಾಬೀತಾದರೆ, ಲಕ್ಷಯ್ ಅವರಿಗೆ ಕನಿಷ್ಠ 4 ವರ್ಷಗಳ ಕಾಲ ಕ್ರೀಡಾ ನಿಷೇಧ ವಿಧಿಸಲಾಗುತ್ತದೆ.

Source link

ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ ಅಧಿಕಾರ ಸ್ವೀಕಾರ: ನವದೆಹಲಿಯ ಕರ್ತವ್ಯ ಭವನದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ – Kannada News | Pralhad Joshi Assumes Charge as Union Education Minister, Holds First High Level Review Meeting

ನವದೆಹಲಿ, ಜುಲೈ 26: ನೂತನ ಕೇಂದ್ರ ಶಿಕ್ಷಣ ಸಚಿವರಾಗಿ ಧಾರವಾಡ ಕ್ಷೇತ್ರದ ಸಂಸದ ಪ್ರಲ್ಹಾದ್ ಜೋಶಿ ಅವರು ಭಾನುವಾರ ದೆಹಲಿಯ ‘ಕರ್ತವ್ಯ ಭವನ’ದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರ ಸ್ವೀಕರಿಸಿದ ತಕ್ಷಣವೇ ಅವರು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಇಲಾಖೆಯ ಕಾರ್ಯವೈಖರಿ ಹಾಗೂ ಮುಂದಿನ ಆದ್ಯತೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಅಧಿಕಾರ ಸ್ವೀಕಾರದ ನಂತರ ಸಾಮಾಜಿಕ ಜಾಲತಾಣ ಎಕ್ಸ್​​ ಪೋಸ್ಟ್​ನಲ್ಲಿ ಧನ್ಯವಾದ ತಿಳಿಸಿರುವ ಪ್ರಲ್ಹಾದ ಜೋಶಿ, ‘‘ಇಂದು ನಾನು ಕೇಂದ್ರ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ಈ ಗುರುತರ ಜವಾಬ್ದಾರಿಯನ್ನು ಹಸ್ತಾಂತರಿಸಿದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಅತ್ಯಂತ ವಿನಮ್ರತೆ ಹಾಗೂ ನಿಷ್ಠೆಯಿಂದ ಈ ಕರ್ತವ್ಯವನ್ನು ಸ್ವೀಕರಿಸುತ್ತಿದ್ದೇನೆ’’ ಎಂದು ಬರೆದುಕೊಂಡಿದ್ದಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ವಿದ್ಯಾರ್ಥಿಗಳಿಂದ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಧರ್ಮೇಂದ್ರ ಪ್ರಧಾನ್ ಅವರು ಶನಿವಾರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪ್ರಲ್ಹಾದ್ ಜೋಶಿ ಅವರನ್ನು ನಿಯೋಜಿಸಲಾಗಿದೆ.

ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪ್ರಲ್ಹಾದ್ ಜೋಶಿ ಅವರು ಮೋದಿ ಸರ್ಕಾರದಲ್ಲಿ ಈ ಹಿಂದೆ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಜೋಶಿ ಅವರ ಮುಂದೆ ನೀಟ್ ಹಾಗೂ ಇತರ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವುದು, ಪರೀಕ್ಷಾ ಸುಧಾರಣೆಗಳನ್ನು ಜಾರಿಗೆ ತರುವುದು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅನುಷ್ಠಾನವನ್ನು ಪರಿಣಾಮಕಾರಿಯಾಗಿ ಮುನ್ನಡೆಸುವ ಪ್ರಮುಖ ಸವಾಲುಗಳಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶಾಸಕ, ಸಂಸದರಾಗಲು ವಯೋಮಿತಿ 21ಕ್ಕೆ ಇಳಿಕೆ: ಆಗಸ್ಟ್ ಮೊದಲ ವಾರದಲ್ಲೇ ವಿಧೇಯಕ ತರಲು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ನಿರ್ಧಾರ – Kannada News | Telangana CM Proposes Lowering MLA, MP Age to 21: A Major Electoral Reform

ಹೈದರಾಬಾದ್, ಜುಲೈ 26: ಭಾರತದಲ್ಲಿ ಶಾಸಕ(MLA) ಅಥವಾ ಸಂಸದ ಆಗಲು ಸ್ಪರ್ಧಿಸಲು ಪ್ರಸ್ತುತ ಇರುವ ಕನಿಷ್ಠ ವಯೋಮಿತಿಯನ್ನು 25 ರಿಂದ 21 ವರ್ಷಕ್ಕೆ ಇಳಿಸಲು ತೆಲಂಗಾಣ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹೈದರಾಬಾದ್‌ನಲ್ಲಿ ನಡೆದ ವಿದ್ಯಾರ್ಥಿಗಳ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ(Revant Reddy), ಆಗಸ್ಟ್ ಮೊದಲ ವಾರದಲ್ಲಿ ರಾಜ್ಯ ಶಾಸನಸಭೆ ಹಾಗೂ ವಿಧಾನ ಪರಿಷತ್ತಿನ ವಿಶೇಷ ಅಧಿವೇಶನ ಕರೆದು ಈ ಕುರಿತು ನಿರ್ಣಯ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಸ್ಪರ್ಧಿಸಲು ಕನಿಷ್ಠ ವಯಸ್ಸು 25 ವರ್ಷ ಹಾಗೂ ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ 30 ವರ್ಷಗಳಾಗಿದೆ. ಆದರೆ, ಈ ವಯೋಮಿತಿಯನ್ನು 21 ವರ್ಷಕ್ಕೆ ಇಳಿಸಲು ತೆಲಂಗಾಣ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ. ಜರ್ಮನಿ ಮತ್ತು ಗ್ರೇಟ್ ಬ್ರಿಟನ್‌ನಂತಹ ದೇಶಗಳಲ್ಲಿ 18 ವರ್ಷ ತುಂಬಿದವರು ಶಾಸನಸಭೆಗೆ ಆಯ್ಕೆಯಾಗುವುದಲ್ಲದೆ ಪ್ರಧಾನಿ ಹಾಗೂ ಅಧ್ಯಕ್ಷರಾಗಬಹುದು. ಸಿಂಗಾಪುರದಲ್ಲಿ 21 ವರ್ಷ ಮೇಲ್ಪಟ್ಟವರು ಪ್ರಧಾನಿಯಾಗಲು ಅರ್ಹತೆ ಪಡೆಯುತ್ತಾರೆ ಎಂದು ರೇವಂತ್ ರೆಡ್ಡಿ ಉಲ್ಲೇಖಿಸಿದರು.

ಆಗಸ್ಟ್ ಮೊದಲ ವಾರದಲ್ಲಿ ವಿಧಾನಮಂಡಲದ ಉಭಯ ಸೌಧಗಳಲ್ಲಿ ವಿಸ್ತೃತ ಚರ್ಚೆ ನಡೆಸಿ ನಿರ್ಣಯ ಅಂಗೀಕರಿಸಲಾಗುವುದು. ಈ ನಿರ್ಣಯವನ್ನು ಕೇಂದ್ರ ಪ್ರಧಾನಮಂತ್ರಿಗೆ ರವಾನಿಸಲಾಗುವುದು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಈ ಕಾಯ್ದೆಗೆ ಸಂಸತ್ತಿನಲ್ಲಿ ಅನುಮೋದನೆ ಸಿಗುವಂತೆ ಶ್ರಮಿಸುವುದಾಗಿ ಅವರು ಭರವಸೆ ನೀಡಿದರು.

ರಾಹುಲ್ ಗಾಂಧಿಯೇ ದೇಶದ ಮುಂದಿನ ಪ್ರಧಾನಿಯಾಗಬೇಕು: ಸಿಎಂ ರೇವಂತ್ ರೆಡ್ಡಿ

21 ವರ್ಷದ ಯುವಕ ಸಿವಿಲ್ ಸೇವೆಗಳಿಗೆ (IAS/IPS) ಆಯ್ಕೆಯಾಗಬಹುದು, ಸ್ಥಳೀಯ ಸಂಸ್ಥೆಗಳ ಚುನಾವಣೆ ಸ್ಪರ್ಧಿಸಬಹುದಾದರೆ, ಶಾಸಕ ಅಥವಾ ಸಂಸದನಾಗಲು ಏಕೆ ಸಾಧ್ಯವಿಲ್ಲ?” ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಜೆನ್​ ಜಿ ಪ್ರಮಾಣ ಶೇ. 30 ರಷ್ಟಿದ್ದರೂ, ಸಂಸತ್ತಿನಲ್ಲಿ ಅವರ ಪ್ರಾತಿನಿಧ್ಯ ಶೇ. 1 ಕ್ಕಿಂತ ಕಡಿಮೆಯಿದೆ.

ವಿಡಿಯೋ

ಈ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 61ನೇ ಸಂವಿಧಾನ ತಿದ್ದುಪಡಿಯ ಮೂಲಕ ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಿದ್ದರು. ಹಾಗೆಯೇ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳ ಮೂಲಕ 21 ವರ್ಷದ ಯುವಕರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರು.

ಭಾರತೀಯ ಸಂವಿಧಾನದ ವಿಧಿ 84(b) (ಲೋಕಸಭೆಗೆ) ಮತ್ತು ವಿಧಿ 173(b) (ವಿಧಾನಸಭೆಗೆ) ಅಡಿಯಲ್ಲಿ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಇದನ್ನು ಬದಲಾಯಿಸಲು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಬೇಕಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Kargil Vijay Divas: ಕಾರ್ಗಿಲ್ ವಿಜಯ್ ದಿವಸ ಹಿನ್ನೆಲೆಯಲ್ಲಿ ಹುತಾತ್ಮ ವೀರ ಸೈನಿಕರಿಗೆ ಡಿಕೆ ಪುಷ್ಪನಮನ! – Kannada News | Kargil Vijay Divas: CM D.K. Shivakumar Honours Martyred Soldiers in Bengaluru

ಬೆಂಗಳೂರು, ಜುಲೈ 26: ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯು ಸಾಧಿಸಿದ ವಿಜಯವನ್ನು ಮತ್ತು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರ ಬಲಿದಾನವನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಸಮಾರಂಭದಲ್ಲಿ ಮಿಲಿಟರಿ ಸಿಬ್ಬಂದಿಯು ಹುತಾತ್ಮ ಸೈನಿಕರಿಗೆ ಗೌರವ ವಂದನೆ ಸಲ್ಲಿಸಿದರು. ಸಲಾಮಿ ಶಸ್ತ್ರ ಮತ್ತು ಶೋಕ ಶಸ್ತ್ರದೊಂದಿಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರ ಮಹಾನ್ ತ್ಯಾಗವನ್ನು ಸ್ಮರಿಸಲಾಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಿದ್ದರಾಮಯ್ಯ: 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದ ಮಾಜಿ ಸಿಎಂ – Kannada News | ‘Will Not Contest 2028 Polls’: Former CM Siddaramaiah Announces Retirement From Electoral Politics

ಮಂಡ್ಯ, ಜುಲೈ 26: ಇತ್ತೀಚೆಗಷ್ಟೇ ಕರ್ನಾಟಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಹಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, 2028ರ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ ಎಂದು ಹೇಳುವ ಮೂಲಕ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ‌.ಆರ್.ಪೇಟೆಯಲ್ಲಿ‌ ನಡೆದಿದ್ದ K.R.ಪೇಟೆ ಕೃಷ್ಣ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಅಡಿರುವ ಅವರು, ಈ ರೀತಿ ಹೇಳಿಕೆ ನೀಡಿದ್ದಾರೆ. ಆದರೆ ಅದೇ ವೇಳೆ ನೀವಿನ್ನೂ 10 ವರ್ಷ ರಾಜಕೀಯದಲ್ಲಿ ಇರಬೇಕೆಂದು ಬೆಂಬಲಿಗರು ಒತ್ತಾಯಿಸಿರುವ ಘಟನೆಯೂ ನಡೆದಿದೆ.

ಸಿದ್ದರಾಮಯ್ಯ ಹೇಳಿರೋದೇನು?

ಚುನಾವಣಾ ರಾಜಕೀಯದ ನಿವೃತ್ತಿಯ ತೀರ್ಮಾನದ ಬಗ್ಗೆ ರಾಹುಲ್​​ ಗಾಂಧಿ ಅವರಿಗೂ ಹೇಳಿದ್ದೇನೆ ಎಂದು ಸಿದ್ದರಾಮಯ್ಯನವರು ಆಡಿರುವ ಮಾತುಗಳನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಅವರ ಈ ಮಾತಿಗೆ ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ನೀವು ರಾಜಕೀಯದಲ್ಲಿ ಇರಬೇಕು ಎಂದು ಒತ್ತಾಯಿಸಿದರೂ ಸಿದ್ದರಾಮಯ್ಯನವರು ಮಾತ್ರ ತಮ್ಮ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಸಿಎಂ ಬದಲಾದರೂ ಬದಲಾಗದ ಮಾಹಿತಿ ಬೋರ್ಡ್!

ಸಿದ್ದರಾಮಯ್ಯ ಅವರು ಒಟ್ಟು ಎರಡು ಅವಧಿಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಒಟ್ಟು 8 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರ ನಡೆಸುವ ಮೂಲಕ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನೂ ಬರೆದಿದ್ದಾರೆ. ಮೊದಲ ಅವಧಿಯಲ್ಲಿ 13 ಮೇ 2013 ರಿಂದ 15 ಮೇ 2018 ರವರೆಗೆ ಅವರು ಸಿಎಂ ಆಗಿ 5 ವರ್ಷಗಳ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರೆ, ಎರಡನೇ ಅವಧಿಯಲ್ಲಿ 20 ಮೇ 2023 ರಿಂದ 3 ಜೂನ್ 2026 ರವರೆಗೆ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಹಿಂದೆಯೂ ಇಂತಹುದ್ದೇ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ

2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ, ಇದು ತಮ್ಮ ಕೊನೆಯ ಚುನಾವಣೆ ಎಂದು ಮಾಧ್ಯಮಗಳ ಮುಂದೆ ಸಿದ್ದರಾಮಯ್ಯ ಹೇಳಿದ್ದರು. ಆ ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರಗಳಿಂದ ಸ್ಪರ್ಧಿಸುವ ಮುನ್ನ, 2018ರ ಚುನಾವಣೆಯು ಬಹುಪಾಲು ತಮ್ಮ ಕೊನೆಯ ಚುನಾವಣೆಯಾಗಲಿದೆ ಎಂದು ಪುನರುಚ್ಚರಿಸಿದ್ದರು. 2024ರ ಏಪ್ರಿಲ್‌ನಲ್ಲಿ ಮೈಸೂರಿನಲ್ಲಿ ಮಾತನಾಡುವ ಸಂದರ್ಭಗಳಲ್ಲಿಯೂ ತನಗೆ ಈಗ 77 ವರ್ಷ. ಈ ಅವಧಿ ಮುಗಿಯುವಾಗ 81-82 ವರ್ಷ ದಾಟಿರುತ್ತದೆ. ಆ ಸಂದರ್ಭದಲ್ಲಿ ಉತ್ಸಾಹದಿಂದ ಕೆಲಸ ಮಾಡಲು ಆರೋಗ್ಯ ಸಹಕರಿಸುವುದಿಲ್ಲ. ಹಾಗಾಗಿ 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಾಕ್ಸ್ ಆಫೀಸ್‌ನಲ್ಲಿ ಎಡವಿದ ‘ದಿ ಇಂಡಿಯಾ ಸ್ಟೋರಿ’: ಕಾಜಲ್ ಅಗರ್‌ವಾಲ್ ಸಿನಿಮಾಗೆ ನೀರಸ ಪ್ರತಿಕ್ರಿಯೆ – Kannada News | Kajal Aggarwal starrer The India Story movie 2026 Box Office Collection Day 2 Hit or Flop

ಜನಪ್ರಿಯ ನಟಿ ಕಾಜಲ್ ಅಗರ್‌ವಾಲ್ (Kajal Aggarwal) ಹಾಗೂ ಶ್ರೇಯಸ್ ತಲ್ಪಾಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ದಿ ಇಂಡಿಯಾ ಸ್ಟೋರಿ: ಸ್ಲೋ ಪಾಯ್ಸನ್ ಇನ್ ಪ್ರೋಗ್ರೆಸ್’ (The India Story: Slow Poison in Progress) ಸಿನಿಮಾ ಜುಲೈ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ರೈತರು ಬಳಸುವ ಕ್ರಿಮಿನಾಶಕಗಳ (Pesticides) ದುಷ್ಪರಿಣಾಮ ಹಾಗೂ ಜನರ ಆರೋಗ್ಯದ ಮೇಲಾಗುವ ಕಠೋರ ಪರಿಣಾಮಗಳನ್ನು ಆಧರಿಸಿ ನಿರ್ಮಿಸಲಾದ ಈ ಸಾಮಾಜಿಕ ಕಥಾವಸ್ತುವಿನ ಸಿನಿಮಾ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ತೀವ್ರ ಹೆಣಗಾಡುತ್ತಿದೆ.

ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್‌ನಿಲ್ಕ್ ವರದಿಯ ಪ್ರಕಾರ, ‘ದಿ ಇಂಡಿಯಾ ಸ್ಟೋರಿ’ ಸಿನಿಮಾ ತನ್ನ ಬಿಡುಗಡೆಯ ಎರಡನೇ ದಿನವಾದ ಶನಿವಾರ (ಜುಲೈ 25) ಭಾರತದಲ್ಲಿ ಅಂದಾಜು 25 ಲಕ್ಷ ರೂಪಾಯಿ ನೆಟ್ ಗಳಿಕೆ ಮಾಡಿದೆ. ಇದರೊಂದಿಗೆ ಎರಡು ದಿನಗಳಲ್ಲಿ ಈ ಚಿತ್ರ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 41 ಲಕ್ಷ ರೂಪಾಯಿ ನೆಟ್ ಸಂಗ್ರಹಿಸಲಷ್ಟೇ ಶಕ್ತವಾಗಿದೆ. ಇನ್ನು ವಿಶ್ವಾದ್ಯಂತ ಒಟ್ಟು ಗ್ರೋಸ್ ಗಳಿಕೆ ಎರಡು ದಿನಗಳಲ್ಲಿ ಕೇವಲ 46 ಲಕ್ಷ ರೂಪಾಯಿ ತಲುಪಿದೆ.

ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನ ಗಳಿಕೆಯಲ್ಲಿ ಸಣ್ಣ ಪ್ರಮಾಣದ ಏರಿಕೆ ಕಂಡುಬಂದಿದ್ದರೂ, ವಾರಾಂತ್ಯದ ಲಾಭವನ್ನು ಪಡೆದುಕೊಳ್ಳಲು ಸಿನಿಮಾ ವಿಫಲವಾಗಿದೆ. ಸುಮಾರು 20ರಿಂದ 30 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಚೇತರಿಸಿಕೊಳ್ಳಲು ಶನಿವಾರ ಮತ್ತು ಭಾನುವಾರ ಭಾರಿ ಗಳಿಕೆ ಕಾಣಬೇಕಿತ್ತು. ಆದರೆ ಪ್ರೇಕ್ಷಕರ ನೀರಸ ಪ್ರತಿಕ್ರಿಯೆಯಿಂದಾಗಿ ಗಳಿಕೆಯ ನಿರೀಕ್ಷೆಗಳು ಹುಸಿಯಾಗಿವೆ.

‘ದಿ ಇಂಡಿಯಾ ಸ್ಟೋರಿ’ ಸಿನಿಮಾ ಬಗ್ಗೆ ವಿವರ:

ಚೇತನ್ ಡಿ.ಕೆ. ನಿರ್ದೇಶನ ಹಾಗೂ ಸಾಗರ್ ಬಿ. ಶಿಂಧೆ ನಿರ್ಮಾಣದ ಈ ಸಾಮಾಜಿಕ ಕಳಕಳಿಯ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಂಡಿದೆ. 2025ರ ಜನವರಿಯಲ್ಲಿ ಪುಣೆಯಲ್ಲಿ ಮುಹೂರ್ತ ಕಂಡಿದ್ದ ಈ ಚಿತ್ರದ ಚಿತ್ರೀಕರಣವನ್ನು ಕೊಲ್ಹಾಪುರ ಸೇರಿದಂತೆ ವಿವಿಧೆಡೆ ನಡೆಸಿ ಅಕ್ಟೋಬರ್ ವೇಳೆಗೆ ಪೂರ್ಣಗೊಳಿಸಲಾಗಿತ್ತು. ಚಿತ್ರದಲ್ಲಿ ಮುರಳಿ ಶರ್ಮಾ, ಮನೀಶ್ ವಾಧ್ವಾ, ತ್ರಿಶಾ ಶಾರದಾ, ಅತುಲ್ ತಿವಾರಿ, ಕಮಲೇಶ್ ಸಾವಂತ್ ಹಾಗೂ ಶಾಮ್ ಮಶಾಲ್ಕರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ‘ಮಗ ಹೆಮ್ಮೆಪಡುವ ಸಿನಿಮಾ ಮಾತ್ರ ಈಗ ಒಪ್ಪಿಕೊಳ್ಳುವೆ’: ನಟಿ ಕಾಜಲ್ ಅಗರ್ವಾಲ್ ಮನದ ಮಾತು

ಚಿತ್ರದ ಕಥಾಹಂದರ ಹಾಗೂ ವಿಮರ್ಶೆ:

ಆಹಾರದಲ್ಲಿ ಬಳಕೆಯಾಗುವ ಕ್ರಿಮಿನಾಶಕ ಹಾಗೂ ರಾಸಾಯನಿಕಗಳಿಂದ ಕಲುಷಿತಗೊಂಡ ಆಹಾರ ಸೇವಿಸಿ ಕ್ಯಾನ್ಸರ್‌ಗೆ ಬಲಿಯಾಗುವ ಪುಟ್ಟ ಮಗಳ ಸಾವಿಗೆ ನ್ಯಾಯ ಕೋರಿ ಹೋರಾಡುವ ತಂದೆಯ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಶ್ರೇಯಸ್ ತಲ್ಪಾಡೆ ಅವರು ನೊಂದ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಕಾಜಲ್ ಅಗರ್‌ವಾಲ್ ಧೈರ್ಯವಂತ ವಕೀಲೆಯಾಗಿ ಶಕ್ತಿಶಾಲಿ ಕ್ರಿಮಿನಾಶಕ ಕಂಪನಿಗಳ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುವ ಪಾತ್ರವನ್ನು ಮಾಡಿದ್ದಾರೆ.

ಸಿನಿಮಾದ ಸೋಲಿಗೆ ಕಾರಣ ಏನು?

ಸಮಾಜಕ್ಕೆ ಅತ್ಯಂತ ಅಗತ್ಯವಾದ ಹಾಗೂ ಕಣ್ಣು ತೆರೆಸುವಂತಹ ಕಥಾವಸ್ತುವನ್ನು ಹೊಂದಿದ್ದರೂ, ಸಿನಿಮಾದ ನಿರೂಪಣೆ ಅತ್ಯಂತ ನಿಧಾನಗತಿಯಿಂದ ಸಾಗುವುದು ಪ್ರೇಕ್ಷಕರಿಗೆ ನೀರಸವೆನಿಸಿದೆ. ಕಾಜಲ್ ಅಗರ್‌ವಾಲ್, ಶ್ರೇಯಸ್ ತಲ್ಪಾಡೆ ಹಾಗೂ ಮುರಳಿ ಶರ್ಮಾ ಅವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದರೂ, ಭಾವನಾತ್ಮಕವಾಗಿ ಪ್ರೇಕ್ಷಕರ ಮನ ಮುಟ್ಟುವಲ್ಲಿ ಸಿನಿಮಾ ವಿಫಲವಾಗಿದೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version