ಸಾಲವೆಂದರೆ ಮಾರುದೂರ ಹೋಗುತ್ತೀರಾ? ಕೆಟ್ಟಸಾಲ, ಒಳ್ಳೆಯ ಸಾಲದ ವ್ಯತ್ಯಾಸ ತಿಳಿದಿರಿ… ಇಲ್ಲಿವೆ ಕೆಲ ಟ್ರಿಕ್ಸ್ – Kannada News | Know the difference of good debt, bad debt, learn the smart ways for wealth creation

ಪ್ರತಿಯೊಬ್ಬರೂ ಸಂಪೂರ್ಣ ಸಾಲಮುಕ್ತರಾಗಲು (Debt-free) ಬಯಸುತ್ತಾರೆ. ಆದರೆ ಶತಾಯಗತಾಯ ಯಾವುದೇ ಸಾಲವಿಲ್ಲದೆ ಬದುಕುತ್ತೇನೆ ಎಂದು ಹಠ ಹಿಡಿಯುವುದು ಸರಿಯಾದ ನಿರ್ಧಾರವಾಗದು ಎಂದು ಹಲವು ಪರಿಣಿತರು ಹೇಳುವುದುಂಟು. ಯಾವಾಗ ಸಾಲ ಮಾಡಬೇಕು, ಯಾಕೆ ಸಾಲ ಮಾಡಬೇಕು ಎನ್ನುವ ವಿವೇಚನೆ ಇರಬೇಕು. ಸಂಪೂರ್ಣ ಸಾಲ ರಹಿತರಾಗುವುದು ಕೆಲವು ಸಂದರ್ಭಗಳಲ್ಲಿ ನಿಮ್ಮ ಆಸ್ತಿ ಹಾಗೂ ಸಂಪತ್ತು ವೃದ್ಧಿಗೆ ಅಡ್ಡಿಯಾಗಬಹುದು. ಸಾಲರಹಿತವಾಗಿ ಬದುಕುತ್ತೇನೆ ಎನ್ನುವ ಬದಲು ಸಾಲವನ್ನು ಬುದ್ಧಿವಂತಿಕೆಯಿಂದ ಉಪಯೋಗಿಸುವ ಪ್ರಮುಖ ಹಣಕಾಸು ತಂತ್ರಗಳನ್ನು ತಿಳಿದಿರುವುದು ಉತ್ತಮ.

‘ಒಳ್ಳೆಯ ಸಾಲ’ ಮತ್ತು ‘ಕೆಟ್ಟ ಸಾಲ’ಗಳ ವ್ಯತ್ಯಾಸ ತಿಳಿದಿರಿ

  • ಒಳ್ಳೆಯ ಸಾಲ (Good Debt): ಹೋಮ್ ಲೋನ್ (ಆಸ್ತಿ ಮೌಲ್ಯ ಹೆಚ್ಚಾಗುತ್ತದೆ), ಎಜುಕೇಶನ್ ಲೋನ್ (ಸಂಪಾದನೆ ಸಾಮರ್ಥ್ಯ ಹೆಚ್ಚಿಸುತ್ತದೆ), ಉದ್ಯಮ ಸಾಲ (ಸಂಪತ್ತು ವೃದ್ಧಿಸುತ್ತದೆ).
  • ಕೆಟ್ಟ ಸಾಲ (Bad Debt): ಕ್ರೆಡಿಟ್ ಕಾರ್ಡ್ ಬಾಕಿ, ದುಬಾರಿ ಗ್ಯಾಜೆಟ್‌ಗಳು, ಐಷಾರಾಮಿ ಕಾರುಗಳು ಅಥವಾ ಆಡಂಬರದ ಜೀವನಶೈಲಿಗಾಗಿ ಮಾಡುವ ಸಾಲಗಳು.

ಹೋಮ್ ಲೋನ್ ಬೇಗ ತೀರಿಸುವುದು ಯಾವಾಗಲೂ ಜಾಣತನವಲ್ಲ

ನಿಮ್ಮ ಹೋಮ್ ಲೋನ್ ಬಡ್ಡಿ ದರ ಸುಮಾರು ಶೇ. 7% ಇದ್ದು, ನೀವು ಅದೇ ಹಣವನ್ನು ಮ್ಯೂಚುವಲ್ ಫಂಡ್ ಅಥವಾ ಇತರ ಹೂಡಿಕೆಗಳಲ್ಲಿ ಹೂಡಿದಾಗ ಶೇ. 9-10% ಲಾಭ ಸಿಗುತ್ತಿರುತ್ತದೆ ಎಂದಿಟ್ಟುಕೊಳ್ಳಿ. ಇಂಥ ಸಂದರ್ಭದಲ್ಲಿ ಗೃಹ ಸಾಲವನ್ನು ಮುಂಚಿತವಾಗಿ ತೀರಿಸುವ ಬದಲು ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕ ಆಗಬಲ್ಲುದು. ಆದರೆ, ಮಾರುಕಟ್ಟೆಯಲ್ಲಿ ಹೂಡಿಕೆ ರಿಸ್ಕ್ ಇರುತ್ತದಾದ್ದರಿಂದ ದೀರ್ಘಾವಧಿಯವರೆಗೆ ಹೂಡಿಕೆ ಇರಬೇಕು.

ಇದನ್ನೂ ಓದಿ: mAadhaar ಆ್ಯಪ್​ನಲ್ಲಿ ಐವರ ಪ್ರೊಫೈಲ್ ಸೇರಿಸಲು ಅವಕಾಶ; ಷರತ್ತುಗಳು, ಅನುಕೂಲಗಳು ಇತ್ಯಾದಿ ವಿವರ

ಸಾಲ ವಿಮುಕ್ತ ಬದುಕಿನ ಅನುಕೂಲ, ಅನನುಕೂಲಗಳು

  • ಪ್ರಯೋಜನಗಳು: ಬಡ್ಡಿ ಕಟ್ಟುವುದು ತಪ್ಪುತ್ತದೆ, ಮಾನಸಿಕ ನೆಮ್ಮದಿ ಸಿಗುತ್ತದೆ.
  • ಅನನುಕೂಲಗಳು: ಯಾವುದೇ ಸಾಲ ಅಥವಾ ಕ್ರೆಡಿಟ್ ಹಿಸ್ಟರಿ ಇಲ್ಲದಿದ್ದರೆ ಕ್ರೆಡಿಟ್ ಸ್ಕೋರ್ (CIBIL Score) ಕಡಿಮೆಯಾಗುತ್ತದೆ. ಅಲ್ಲದೆ, ತುರ್ತು ಸಂದರ್ಭದಲ್ಲಿ ಸಂಪೂರ್ಣವಾಗಿ ನಿಮ್ಮ ಉಳಿತಾಯದ ಹಣವನ್ನೇ ಬಳಸಬೇಕಾಗುತ್ತದೆ.

‘ಮಾಡಿಫೈಡ್ ಕ್ಯಾಶ್-ಓನ್ಲಿ’ ತಂತ್ರ ಬಳಸಿ

ದೈನಂದಿನ ಬಳಕೆ ಹಾಗೂ ಗ್ಯಾಜೆಟ್‌ಗಳಿಗೆ ಸಾಲ ಮಾಡಬೇಡಿ. ಮನೆ ಅಥವಾ ಶಿಕ್ಷಣದಂತಹ ದೊಡ್ಡ ಅಗತ್ಯಗಳಿಗೆ ಮಾತ್ರ ಸಾಲವನ್ನು ಒಂದು ಆಸ್ತಿಯನ್ನಾಗಿ (Strategic Tool) ಬಳಸಿ. ಇದು ಮಾಡಿಫೈಡ್ ಕ್ಯಾಶ್-ಓನ್ಲಿ (Modified Cash-Only) ತಂತ್ರ.

‘ಸಿಂಕಿಂಗ್ ಫಂಡ್’ ನಿರ್ಮಿಸಿ

ನೀವು ಕಾರು, ಮೊಬೈಲ್ ಇತ್ಯಾದಿ ಖರೀದಿಸಬೇಕೆಂದಿದ್ದರೆ ವರ್ಷದ ಮೊದಲೇ ಪ್ಲಾನ್ ಮಾಡಿ, ಸಣ್ಣ ಸಣ್ಣ ಮೊತ್ತವನ್ನು ಕೂಡಿಡುತ್ತಾ ಹೋಗಿ. ಇದು ಸಿಂಕಿಂಗ್ ಫಂಡ್ (Sinking Fund). ಇದರಿಂದ ಬ್ಯಾಂಕ್‌ಗೆ ಬಡ್ಡಿ ಕಟ್ಟುವ ಬದಲು, ಉಳಿತಾಯದ ಹಣಕ್ಕೆ ಬಡ್ಡಿ ಗಳಿಸಬಹುದು.

28-36% ನಿಯಮ (Mortgage Rule)

ಸಾಲದ ಕಂತು ಎಷ್ಟಿರಬೇಕು ಎನ್ನುವುದಕ್ಕೆ ವಿವಿಧ ನಿಯಮಗಳಿವೆ. ಸಮರ್ಪಕ ಎನಿಸುವುದು 28-36% ನಿಯಮ. ನಿಮ್ಮ ಒಟ್ಟು ತಿಂಗಳ ಆದಾಯದಲ್ಲಿ ಸಾಲದ ಇಎಮ್‌ಐ (EMI) ಪಾವತಿಗಳು ಶೇಕಡಾ 28 ರಿಂದ 36 ರೊಳಗೆ ಇರಬೇಕು. ಇದರಲ್ಲಿ ಹೋಮ್ ಲೋನ್, ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿ ಯಾವುದೇ ಸಾಲದ ಮರುಪಾವತಿಗಳು ಸೇರುತ್ತವೆ. ಈ ಮಿತಿ ಮೀರಿದರೆ ಹಣಕಾಸಿನ ಒತ್ತಡ ಹೆಚ್ಚಾಗುತ್ತದೆ.

ಇದನ್ನೂ ಓದಿ: ಜಿಎಸ್​ಟಿ ಕಾಂಪೆನ್ಸೇಶನ್ ಸೆಸ್ ಅಂತ್ಯವಾದರೂ ರಾಜ್ಯಗಳಿಗೆ ತಗ್ಗಲ್ಲ ತೆರಿಗೆ ಸುಗ್ಗಿ; ಸಿಗಲಿದೆ 1.43 ಲಕ್ಷ ಕೋಟಿ ರೂ ಹೆಚ್ಚುವರಿ ಆದಾಯ

ಸಾಲದಿಂದ ಹೊರಬರಲು ಸೂಕ್ತ ವಿಧಾನವನ್ನು ಆಯ್ಕೆಮಾಡಿ

ನಿಮ್ಮ ಮೇಲಿರುವ ಸಾಲವನ್ನು ತೀರಿಸಲು ಈ 4 ಮಾರ್ಗಗಳಲ್ಲಿ ಒಂದನ್ನು ಬಳಸಿ:

  • ಡೆಟ್ ಅವಲಾಂಚ್ (Debt Avalanche): ಅತಿ ಹೆಚ್ಚು ಬಡ್ಡಿ ಇರುವ ಸಾಲವನ್ನು ಮೊದಲು ತೀರಿಸುವುದು.
  • ಡೆಟ್ ಸ್ನೋಬಾಲ್ (Debt Snowball): ಸಣ್ಣ ಮೊತ್ತದ ಸಾಲಗಳನ್ನು ಮೊದಲು ತೀರಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು.
  • ಡೆಟ್ ಕನ್ಸಾಲಿಡೇಶನ್ (Debt Consolidation): ಎಲ್ಲಾ ಸಾಲಗಳನ್ನು ಸೇರಿಸಿ ಕಡಿಮೆ ಬಡ್ಡಿದರದ ಒಂದೇ ಸಾಲವನ್ನಾಗಿ ಮಾಡುವುದು.

ಸಾಲವನ್ನು ಸಂಪೂರ್ಣವಾಗಿ ಇಲ್ಲದಂತೆ ಮಾಡುವುದು ಗುರಿಯಾಗಬಾರದು; ಬದಲಾಗಿ ಒಳ್ಳೆಯ ಸಾಲವನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಂಪತ್ತು ಬೆಳೆಸುವುದು ಜಾಣತನ ಎನ್ನುತ್ತಾರೆ ತಜ್ಞರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ರಾತ್ರಿ ಮಲಗುವ ಮುನ್ನ ಈ 3 ವಸ್ತು ನೋಡಬೇಡಿ; ಆರ್ಥಿಕ ನಷ್ಟ ಹಾಗೂ ನಿದ್ರಾಹೀನತೆಗೆ ಇದೇ ಕಾರಣ! – Kannada News | Vastu for Good Sleep: Avoid These 3 Things Before Bed to Attract Prosperity

ವಾಸ್ತು ಶಾಸ್ತ್ರವು ಮಾನವ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಾವು ಮನೆಯಲ್ಲಿ ವಾಸಿಸುವ, ತಿನ್ನುವ, ಕುಡಿಯುವ ಹಾಗೂ ಮಲಗುವ ಸರಿಯಾದ ವಿಧಾನ ಮತ್ತು ನಿಯಮಗಳನ್ನು ವಿವರಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ರಾತ್ರಿ ನಿದ್ರೆಗೆ ಜಾರುವ ಮುನ್ನ ಕೆಲವು ವಸ್ತುಗಳನ್ನು ನೋಡುವುದನ್ನು ತಪ್ಪಿಸಬೇಕು. ಇವುಗಳನ್ನು ನೋಡುವುದರಿಂದ ನಿದ್ರೆಗೆ ಭಂಗ ಉಂಟಾಗುವುದು ಮಾತ್ರವಲ್ಲದೆ, ದುಃಸ್ವಪ್ನಗಳು ಹಾಗೂ ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು. ಸಾಮಾನ್ಯವಾಗಿ ನಮ್ಮ ಮಲಗುವ ಕೋಣೆ, ಅಡುಗೆಮನೆ ಅಥವಾ ಸ್ನಾನಗೃಹದಲ್ಲಿ ಕಂಡುಬರುವ ಮತ್ತು ಮಲಗುವ ಮುನ್ನ ನೋಡಬಾರದ ಆ 3 ಪ್ರಮುಖ ವಸ್ತುಗಳು ಯಾವುವು ಎಂಬ ವಿವರ ಇಲ್ಲಿದೆ.

ಸಿಂಕ್‌ನಲ್ಲಿರುವ ಕೊಳಕು (ಎಂಜಲು) ಪಾತ್ರೆಗಳು:

ಅನೇಕರು ರಾತ್ರಿ ಊಟದ ನಂತರ ಪಾತ್ರೆಗಳನ್ನು ತೊಳೆಯದೆ ಸಿಂಕ್‌ನಲ್ಲಿಯೇ ಬಿಟ್ಟು ಮಲಗುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಅಡುಗೆಮನೆಯ ಸಿಂಕ್‌ನಲ್ಲಿ ಉಳಿಯುವ ಕೊಳಕು ಪಾತ್ರೆಗಳಿಂದ ರಾಹು ಮತ್ತು ಕೇತು ದೋಷಗಳು ಪ್ರಭಾವಿತವಾಗುತ್ತವೆ. ರಾತ್ರಿ ಈ ಕೊಳಕು ಪಾತ್ರೆಗಳನ್ನು ನೋಡಿ ಮಲಗುವುದರಿಂದ ಮಾನಸಿಕ ಅಶಾಂತಿ, ತಲೆಯಲ್ಲಿ ಭಾರವಾದ ಭಾವನೆ ಹಾಗೂ ನಿದ್ರಾಹೀನತೆ ಕಾಡುತ್ತದೆ. ಜೊತೆಗೆ ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪೆ ತಪ್ಪಿ ಆರ್ಥಿಕ ನಷ್ಟ ಉಂಟಾಗುತ್ತದೆ. ಆದ್ದರಿಂದ ಮಲಗುವ ಮುನ್ನ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಅತ್ಯಗತ್ಯ.

ಮಲಗುವ ಕೋಣೆಯಲ್ಲಿರುವ ಕನ್ನಡಿ:

ಪ್ರತಿಯೊಬ್ಬರ ಮಲಗುವ ಕೋಣೆಯಲ್ಲೂ ಕನ್ನಡಿ ಇರುವುದು ಸಹಜ, ಆದರೆ ರಾತ್ರಿ ಮಲಗುವ ಸಮಯದಲ್ಲಿ ಕನ್ನಡಿಯನ್ನು ನೋಡಬಾರದು. ಕನ್ನಡಿಯು ಧನಾತ್ಮಕ ಮತ್ತು ಋಣಾತ್ಮಕ (ಸಕಾರಾತ್ಮಕ ಮತ್ತು ನಕಾರಾತ್ಮಕ) ಶಕ್ತಿಗಳೆರಡನ್ನೂ ಹೀರಿಕೊಂಡು ಪ್ರತಿಫಲಿಸುತ್ತದೆ. ರಾತ್ರಿಯ ಸಮಯದಲ್ಲಿ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ. ರಾತ್ರಿ ಕನ್ನಡಿಯನ್ನು ನೋಡಿದಾಗ ಈ ನಕಾರಾತ್ಮಕ ಶಕ್ತಿಯು ದೇಹವನ್ನು ಪ್ರವೇಶಿಸಿ, ಅನಗತ್ಯ ಭಯ, ಒತ್ತಡ ಹಾಗೂ ಆತಂಕಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: ನವಗ್ರಹ ಮಂಟಪಕ್ಕೆ ಎಷ್ಟು ಬಾರಿ ಪ್ರದಕ್ಷಿಣೆ ಹಾಕುವುದು ಶುಭ? ಶಾಸ್ತ್ರೋಕ್ತ ನಿಯಮ ಇಲ್ಲಿದೆ

ದಿಂಬಿನ ಬಳಿ ನೀರು ಇಡುವುದು:

ನೀರು ಅತ್ಯಂತ ಚಂಚಲವಾದ ತತ್ವವಾಗಿದೆ. ರಾತ್ರಿಯಲ್ಲಿ ನೀರನ್ನು ನೋಡುವುದು ಅಥವಾ ಮಲಗುವಾಗ ದಿಂಬಿನ ತಲೆಯ ಬಳಿ ನೀರಿನ ಪಾತ್ರೆ/ಬಾಟಲಿಯನ್ನು ಇಟ್ಟುಕೊಂಡು ಮಲಗುವುದು ವಾಸ್ತುವಿನಲ್ಲಿ ನಿಷೇಧಿಸಲಾಗಿದೆ. ಮನಸ್ಸಿನ ಕಾರಕನಾದ ಚಂದ್ರ ಮತ್ತು ನೀರಿನ ಅಂಶ ಒಂದಕ್ಕೊಂದು ಸಂಬಂಧಿಸಿರುವುದರಿಂದ, ದಿಂಬಿನ ಬಳಿ ನೀರಿಟ್ಟುಕೊಳ್ಳುವುದು ಮನಸ್ಸಿನ ಹಂಚಲತೆಯನ್ನು ಹೆಚ್ಚಿಸುತ್ತದೆ. ಇದು ಮಾನಸಿಕ ತೊಂದರೆಗೆ ಕಾರಣವಾಗಿ, ನೆಮ್ಮದಿಯ ಮತ್ತು ಆಳವಾದ ನಿದ್ರೆಗೆ ಅಡ್ಡಿಪಡಿಸುತ್ತದೆ.

ಆದ್ದರಿಂದ ಉತ್ತಮ ಆರೋಗ್ಯ, ಶಾಂತಿಯುತ ನಿದ್ರೆ ಮತ್ತು ಮನೆಯಲ್ಲಿ ಸಮೃದ್ಧಿ ನೆಲೆಸಲು ರಾತ್ರಿ ಮಲಗುವ ಮುನ್ನ ಅಡುಗೆಮನೆಯನ್ನು ಸ್ವಚ್ಛವಾಗಿಟ್ಟು, ಮಲಗುವ ಕೋಣೆಯ ಕನ್ನಡಿಯನ್ನು ಬಟ್ಟೆಯಿಂದ ಮುಚ್ಚಿ ಮಲಗುವುದು ಶ್ರೇಯಸ್ಕರ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Jog Falls: ಧುಮ್ಮುಕ್ಕಿ ಹರಿಯುತ್ತಿರೋ ಜೋಗ ಜಲಪಾತ! – Kannada News | Jog falls roars in full glory amidst heavy malnad rains

ಶಿವಮೊಗ್ಗ, ಜುಲೈ 26: ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ವಿಶ್ವವಿಖ್ಯಾತ ಜೋಗ ಜಲಪಾತ ಸಂಪೂರ್ಣವಾಗಿ ಭೋರ್ಗರೆಯುತ್ತಿದೆ. ನಿರಂತರ ಮಳೆಯಿಂದಾಗಿ ಶರಾವತಿ ನದಿಯ ಒಡಲು ತುಂಬಿ ಹರಿದು ಜೋಗ ಜಲಪಾತದ ವೈಭವವನ್ನು ಇಮ್ಮಡಿಗೊಳಿಸಿದೆ. ಅಮೋಘವಾದ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಸಾಮಾನ್ಯವಾಗಿ ಪ್ರತಿ ವರ್ಷ ಉತ್ತಮ ಮಳೆಯಾದಾಗ ಜೋಗ ಜಲಪಾತ ತುಂಬಿ ಹರಿಯುತ್ತದೆ. ಆಗ ರಾಜಾ, ರಾಣಿ, ರೋರರ್, ರಾಕೆಟ್ ಎಂಬ ನಾಲ್ಕು ಜಲಧಾರೆಗಳು ಒಂದಾಗಿ ಹರಿಯುವ ಮನಮೋಹಕ ದೃಶ್ಯವನ್ನು ವೀಕ್ಷಿಸಲು ಜನಸಾಗರವೇ ಹರಿದುಬರುತ್ತದೆ. ಈ ವರ್ಷವೂ ಮಳೆ ಉತ್ತಮವಾಗಿದ್ದು, ಜಲಪಾತ ಸಂಪೂರ್ಣ ಮೈದುಂಬಿ ಹರಿಯುತ್ತಿದೆ. ಮಳೆ ನಡುವೆಯೂ ಸಾವಿರಾರು ಪ್ರವಾಸಿಗರು ಜಲಪಾತದ ಸೌಂದರ್ಯವನ್ನು ಸವಿಯಲು ತಂಡೋಪತಂಡವಾಗಿ ಆಗಮಿಸಿ, ಜೋಗ ಜಲಪಾತದ ಸೌಂದರ್ಯಕ್ಕೆ ಮಾರುಹೋಗುತ್ತಿದ್ದಾರೆ. ಮಲೆನಾಡಿನ ಈ ಅದ್ಭುತ ಪ್ರಾಕೃತಿಕ ವೈಭವವು ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪರೂಪದ ವಿವಾಹ: ಒಂದೇ ವೇದಿಕೆಯಲ್ಲಿ ಮೂವರು ಸಹೋದರಿಯರನ್ನು ವರಿಸಿದ ಯುವಕ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ – Kannada News | Amroha Viral: Man Marries Three Sisters; Hindu Law On Polygamy Explored

ಅಮ್ರೋಹಾ, ಜುಲೈ 26:  ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ದೇವಾಲಯವೊಂದರಲ್ಲಿ ಮೂವರು ಮಹಿಳೆಯರು ಒಂದೇ ವ್ಯಕ್ತಿಯನ್ನು ವಿವಾಹ(Marriage)ವಾಗುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಹಾಗೂ ಕಾನೂನು ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.

ಮದುವೆಯಾದ ಮಹಿಳೆಯರನ್ನು ಅಮ್ರೋಹಾದ ಧೋರಿಯಾ ಗ್ರಾಮದ ಸರೋಜ್, ಸಾವಿತ್ರಿ ಮತ್ತು ಸಂತೋಷ್ ಎಂದು ಗುರುತಿಸಲಾಗಿದೆ. ಸರೋಜ್ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದರೆ, ಸಾವಿತ್ರಿ ಮತ್ತು ಸಂತೋಷ್ 12ನೇ ತರಗತಿ ಪೂರ್ಣಗೊಳಿಸಿದ್ದಾರೆ. ಇವರಲ್ಲಿ ಇಬ್ಬರು ಸ್ವಂತ ಸಹೋದರಿಯರು ಹಾಗೂ ಮತ್ತೊಬ್ಬರು ಸೋದರಸಂಬಂಧಿಯಾಗಿದ್ದು, ಮೂವರೂ ಬಾಲ್ಯದಿಂದಲೂ ಒಂದೇ ಮನೆಯಲ್ಲಿ ಬೆಳೆದಿದ್ದಾರೆ. ವರ ವಿಕಾಸ್ ಎಂಬಾತ ಈ ಮಹಿಳೆಯರ ಸೋಶಿಯಲ್ ಮೀಡಿಯಾ ವೀಡಿಯೊಗಳಿಗೆ ಕ್ಯಾಮೆರಾಮನ್ ಆಗಿ ಕೆಲಸ ಮಾಡುತ್ತಿದ್ದನು.

ಒಂದೇ ವ್ಯಕ್ತಿಯನ್ನು ಮೂವರನ್ನು ಮದುವೆಯಾಗಲು ಕಾರಣವೇನು?
ತಾವು ಬಾಲ್ಯದಿಂದಲೂ ಒಂದಾಗಿ ಬೆಳೆದಿದ್ದು, ಮದುವೆಯ ನಂತರ ಬೇರೆಯಾಗಲು ಇಷ್ಟವಿರಲಿಲ್ಲ ಎಂದು ಮಹಿಳೆಯರು ತಿಳಿಸಿದ್ದಾರೆ. ಕುಟುಂಬದವರು ಬೇರೆ ಬೇರೆ ಕಡೆ ಮದುವೆ ಮಾಡಲು ಹೊರಟಾಗ, ಬೇರೆಯಾಗುವ ಬದಲು ಜೀವ ಕಳೆದುಕೊಳ್ಳಲು ಯೋಚಿಸಿದ್ದೆವು. ನಂತರ ಮೂವರೂ ಒಟ್ಟಾಗಿ ವಿಕಾಸ್‌ನನ್ನು ಮದುವೆಯಾಗಲು ನಿರ್ಧರಿಸಿದೆವು ಎಂದು ಅವರು ಹೇಳಿದ್ದಾರೆ. ತಮ್ಮ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡದಂತೆ ಮನವಿ ಮಾಡಿರುವ ಅವರು, “ಪ್ರಾಚೀನ ಕಾಲದಲ್ಲಿ ರಾಜ ದಶರಥನಿಗೂ ಮೂವರು ರಾಣಿಯರಿದ್ದರು, ಹಾಗಿದ್ದಾಗ ನಮ್ಮ ಮದುವೆ ತಪ್ಪಾಗುವುದೇಗೆ? ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ಓದಿ: ಬೆಳಗಾವಿಯಲ್ಲಿ ಬರಗಾಲದ ಭೀತಿ; ಮಳೆರಾಯನನ್ನು ಒಲಿಸಿಕೊಳ್ಳಲು ‘ಕತ್ತೆಗಳ ಮದುವೆ’ ಮಾಡಿದ ಶೇಡಬಾಳ ಗ್ರಾಮಸ್ಥರು

ದೇವಾಲಯದ ಆಡಳಿತ ಮಂಡಳಿ ಸ್ಪಷ್ಟನೆ
ಹಸನ್‌ಪುರದ ಮಾ ಚಾಮುಂಡಾ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ ಎನ್ನಲಾಗಿದೆಯಾದರೂ, ದೇವಾಲಯದ ಆಡಳಿತ ಮಂಡಳಿಯು ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ದೇವಾಲಯದಲ್ಲಿ ನವೀಕರಣ ಕಾರ್ಯ ನಡೆಯುತ್ತಿದ್ದಾಗ ಈ ವೀಡಿಯೊ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದೆ.

ವಿಡಿಯೋ

ಹಿಂದೂ ಕಾನೂನು ಏನು ಹೇಳುತ್ತದೆ?
ಸಾಮಾಜಿಕ ಮಾಧ್ಯಮಗಳಲ್ಲಿ ಈ ವೀಡಿಯೊ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. ಆದರೆ, 1955ರ ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ. ಮೊದಲ ಪತ್ನಿ ಜೀವಂತವಾಗಿರುವಾಗ ಅಥವಾ ಕಾನೂನಾತ್ಮಕ ವಿಚ್ಛೇದನ ಪಡೆಯದೆ ಎರಡನೇ ಮದುವೆಯಾಗುವುದು ಕಾನೂನುಬಾಹಿರ ಹಾಗೂ ಅನೂರ್ಜಿತ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟೀಮ್ ಇಂಡಿಯಾ ಆಟಗಾರ ಗಾಯಾಳು: ತಂಡದಲ್ಲಿ ಒಂದು ಬದಲಾವಣೆ ಖಚಿತ – Kannada News | Prince Yadav Ruled Out: India’s Probable XI for 3rd T20I

ಝಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಈಗಾಗಲೇ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾಗೆ ಅಂತಿಮ ಪಂದ್ಯಕ್ಕೂ ಮುನ್ನ ಭಾರಿ ಆಘಾತ ಎದುರಾಗಿದೆ. ಶನಿವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ಪ್ರಿನ್ಸ್ ಯಾದವ್ ಗಾಯಗೊಂಡಿದ್ದು, ಹೀಗಾಗಿ ಅವರು ಮೂರನೇ ಪಂದ್ಯದಿಂದ ಹೊರಗುಳಿದಿದ್ದಾರೆ.

ಝಿಂಬಾಬ್ವೆ ಇನ್ನಿಂಗ್ಸ್‌ನ ತನ್ನ ಎರಡನೇ ಓವರ್‌ನ ಎರಡನೇ ಎಸೆತವನ್ನು ಎಸೆಯುವಾಗ ಪ್ರಿನ್ಸ್ ಯಾದವ್ ಅವರ ಹ್ಯಾಮ್‌ಸ್ಟ್ರಿಂಗ್ ಸ್ನಾಯು ಸೆಳೆತಕ್ಕೊಳಗಾಯಿತು. ರನ್-ಅಪ್ ಮಧ್ಯದಲ್ಲೇ ತೀವ್ರ ನೋವಿನಿಂದ ನರಳಿದ ಅವರು ತಕ್ಷಣವೇ ಮೈದಾನದಲ್ಲೇ ಕುಳಿತುಕೊಂಡರು.

ತಂಡದ ಫಿಸಿಯೋ ತಪಾಸಣೆ ನಡೆಸಿದ ಬಳಿಕ, ಅವರು ಕುಂಟುತ್ತಾ ಮೈದಾನದಿಂದ ಹೊರನಡೆದಿದ್ದರು. ಹೀಗಾಗಿ ಅವರ ಓವರ್‌ನ ಬಾಕಿ ಉಳಿದ ಎಸೆತಗಳನ್ನು ಆಲ್ ರೌಂಡರ್ ಶಿವಂ ದುಬೆ ಪೂರ್ಣಗೊಳಿಸಿದ್ದರು.

ಮೈದಾನದಿಂದ ಹೊರಹೋಗುವ ಮುನ್ನ ಪ್ರಿನ್ಸ್ ಯಾದವ್ ಕೇವಲ 10 ರನ್ ನೀಡಿ ಝಿಂಬಾಬ್ವೆ ತಂಡದ ನಾಯಕ ಸಿಕಂದರ್ ರಾಝ ಸೇರಿದಂತೆ 2 ಪ್ರಮುಖ ವಿಕೆಟ್ ಪಡೆಯುವ ಮೂಲಕ ಎದುರಾಳಿಗಳಿಗೆ ಆರಂಭಿಕ ಆಘಾತ ನೀಡಿದ್ದರು. ಇದೀಗ ಹ್ಯಾಮ್‌ಸ್ಟ್ರಿಂಗ್ ಇಂಜುರಿ ಕಾರಣ ಮೂರನೇ ಟಿ20 ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಸುಳಿವು ನೀಡಿದ ಶ್ರೇಯಸ್ ಅಯ್ಯರ್:

ದ್ವಿತೀಯ ಟಿ20 ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, ದುರದೃಷ್ಟವಶಾತ್ ನಮ್ಮ ಪ್ರಮುಖ ಆಟಗಾರರೊಬ್ಬರು ಗಾಯಗೊಂಡಿದ್ದಾರೆ. ಹೀಗಾಗಿ ಭಾನುವಾರ ನಡೆಯಲಿರುವ ಅಂತಿಮ ಪಂದ್ಯದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ನೀವು ನಿರೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

ಹೀಗಾಗಿ ಭಾನುವಾರ ನಡೆಯಲಿರುವ ಝಿಂಬಾಬ್ವೆ ವಿರುದ್ಧದ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಕಂಡು ಬರುವುದು ಖಚಿತ. ಇಲ್ಲಿ ಪ್ರಿನ್ಸ್ ಯಾದವ್ ಬದಲಿಗೆ ವೇಗದ ಬೌಲಿಂಗ್ ಆಲ್​ರೌಂಡರ್ ಸೂರ್ಯಂಶ್ ಶೆಡ್ಗೆಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ.

ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಸೂರ್ಯಂಶ್ ಶೆಡ್ಗೆ, ಯಶ್ ಠಾಕೂರ್, ಮಯಾಂಕ್ ಯಾದವ್.

ಇದನ್ನೂ ಓದಿ: ಅಗ್ರಸ್ಥಾನ ಮರಳಿ ಪಡೆದ ಟೀಮ್ ಇಂಡಿಯಾ

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ , ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ ಮತ್ತು ಮಯಾಂಕ್ ಯಾದವ್.

Source link

Video: ಮನೆಗೆ ಮರಳುತ್ತಿದ್ದಂತೆ ಅಜ್ಜಿಯನ್ನು ಕಂಡು ಕುಣಿದು ಕುಪ್ಪಳಿಸಿದ ಯುವಕ – Kannada News | The grandson danced with joy upon seeing his grandmother as soon as he returned home.

ಅಜ್ಜ ಅಜ್ಜಿಗೆ (grandparents) ಮೊಮ್ಮಕ್ಕಳೆಂದರೆ ಜೀವಕ್ಕಿಂತ. ಮೊಮ್ಮಕ್ಕಳನ್ನು ಕಂಡರೆ ಈ ಹಿರಿಜೀವಗಳು ಮಕ್ಕಳಂತೆ ಸಂಭ್ರಮಿಸುತ್ತಾರೆ. ಆದರೆ ಇಲ್ಲೊಬ್ಬ ಮೊಮ್ಮಗನು ಅಜ್ಜಿಯನ್ನು ಕಂಡೊಡನೆ ಕುಣಿದು ಕುಪ್ಪಳಿಸಿದ್ದಾನೆ. ಮನೆಗೆ ಮರಳುತ್ತಿದ್ದಂತೆ ಅಂಗಳದಲ್ಲಿ ನಿಂತಿದ್ದ ತನ್ನ ಪ್ರೀತಿಯ ಅಜ್ಜಿಯನ್ನು ಕಂಡು ಖುಷಿಯಲ್ಲಿ ಕುಣಿದಾಡಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಶಿಭ್ಯ ಶರ್ಮ (shibhya sharma) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಅಂಗಳದಲ್ಲಿ ಅಜ್ಜಿ ನಿಂತುಕೊಂಡಿರುವುದನ್ನು ಕಾಣಬಹುದು. ಕಾರಿನಿಂದ ಇಳಿದ ಯುವಕನೊಬ್ಬ ತನ್ನ ಅಜ್ಜಿಯನ್ನು ಕಂಡು ಕುಣಿಯಲು ಶುರು ಮಾಡಿದ್ದಾನೆ. ತನ್ನ ಖುಷಿಯನ್ನು ತಡೆಯಲಾಗದೆ ತನ್ನ ಪ್ರೀತಿಯ ಅಜ್ಜಿಯನ್ನು ತಬ್ಬಿಕೊಂಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಅಮೆರಿಕದ ಸಂಪತ್ತು ಬೇಡ, ಭಾರತದ ಮಣ್ಣು ಸಾಕು: ಭಾರತೀಯಳಾಗಿ ಸಾಯ್ತೀನಿ ಅಂದ 94 ವರ್ಷದ ವೃದ್ಧೆ

ಜುಲೈ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಶುದ್ಧ ಪ್ರೀತಿ ಎಂದು ಹೇಳಿದರೆ, ಮತ್ತೊಬ್ಬರು, ಹ್ಯಾಪಿ ಮೂವ್ಮೆಂಟ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ಎಷ್ಟು ಸುಂದರ ಬಾಂಧವ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂಗಾರು ಮಳೆ ಕೊರತೆ: ಭರಚುಕ್ಕಿ ಜಲಪಾತ ಭಣಭಣ, ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಮುಖ – Kannada News | Monsoon Deficit Dries Up Barachukki Falls, Tourist Footfall Drops Sharply

ಚಾಮರಾಜನಗರ, ಜುಲೈ 26: ರಾಜ್ಯದಲ್ಲಿ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿಯದ ಕಾರಣ, ಚಾಮರಾಜನಗರ ಜಿಲ್ಲೆಯ ವಿಶ್ವವಿಖ್ಯಾತ ಭರಚುಕ್ಕಿ ಜಲಪಾತ ಬಣಗುಡುತ್ತಿದೆ. ಕೊಳ್ಳೇಗಾಲ ತಾಲೂಕಿನಲ್ಲಿರುವ ಈ ಜಲಪಾತವು ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಲ್ಲಿ ಹಾಲ್ನೊರೆಯಂತೆ ಉಕ್ಕಿ ಹರಿಯುತ್ತಿತ್ತು. ಆದರೆ ಈ ಬಾರಿ ಮಳೆ ಕೊರತೆಯಿಂದ ಜಲಪಾತದ ಬಂಡೆಗಳು ಮಾತ್ರ ಕಾಣುತ್ತಿದೆ. ಮಳೆಗಾಲ ಆರಂಭವಾದರೂ ಕಾವೇರಿ ಕೊಳ್ಳ ಮತ್ತು ಹಳೆ ಮೈಸೂರು ಭಾಗದಲ್ಲಿ ಸಾಕಷ್ಟು ಮಳೆಯಾಗಿಲ್ಲ. ಪರಿಣಾಮ ಕಾವೇರಿ ನದಿ ಹಾಗೂ ಕೆ.ಆರ್.ಎಸ್. ಡ್ಯಾಂ ಸಹ ಭರ್ತಿಯಾಗಿಲ್ಲ. ಇದರಿಂದ ಭರಚುಕ್ಕಿ ಜಲಪಾತಕ್ಕೆ ನೀರಿನ ಹರಿವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮಳೆ ಕೊರತೆ ಭರಚುಕ್ಕಿಯ ಸೌಂದರ್ಯಕ್ಕೆ ಧಕ್ಕೆ ತಂದಿದ್ದು, ಪ್ರವಾಸೋದ್ಯಮಕ್ಕೂ ಹೊಡೆತ ನೀಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಮಾಯಣ: ಯಶ್ ಜತೆಗಿನ ಕ್ಲೈಮ್ಯಾಕ್ಸ್ ಶೂಟಿಂಗ್ ಇನ್ನೂ ಬಾಕಿಯಿದೆ ಎಂದ ರಣಬೀರ್ ಕಪೂರ್ – Kannada News | Ramayana Movie Ranbir Kapoor Yash climax shooting San Diego Comic Con

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ (Yash) ಅವರನ್ನು ಬಿಗ್ ಸ್ಕ್ರೀನ್ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಇವರಿಬ್ಬರೂ ಇದುವರೆಗೆ ಯಾವುದೇ ಪ್ರಮುಖ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ ಎಂಬ ಕುತೂಹಲಕಾರಿ ವಿಷಯ ಹೊರಬಿದ್ದಿದೆ. ಇತ್ತೀಚೆಗೆ ನಡೆದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (San Diego Comic-Con) ಕಾರ್ಯಕ್ರಮದಲ್ಲಿ ಮಾತನಾಡಿದ ರಣ್‌ಬೀರ್ ಕಪೂರ್, ಚಿತ್ರದ ಪ್ರಮುಖ ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ಇನ್ನೂ ಬಾಕಿಯಿದೆ ಎಂದು ತಿಳಿಸಿದ್ದಾರೆ.

ಸಿನಿಮಾದಲ್ಲಿ ಇಬ್ಬರ ಪಾತ್ರಗಳು ಅತ್ಯಂತ ಪ್ರಮುಖವಾಗಿದ್ದರೂ, ಅವರು ಒಟ್ಟಿಗೆ ಕಾಣಿಸಿಕೊಳ್ಳುವ ದೃಶ್ಯಗಳು ಕಥೆಯ ಕೊನೆಯಲ್ಲಿ ಬರಲಿವೆ ಎಂದು ರಣಬೀರ್ ಹೇಳಿದ್ದಾರೆ. ‘ಚಿತ್ರದ ಕೊನೆಯಲ್ಲಿ ಶ್ರೀರಾಮ ಮತ್ತು ರಾವಣ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಮಧ್ಯದಲ್ಲಿ ಬಹುಶಃ ಒಂದು ಭೇಟಿಯಿರಬಹುದು. ಆದರೆ ನಾವು ಇನ್ನೂ ಆ ದೃಶ್ಯಗಳನ್ನು ಚಿತ್ರೀಕರಿಸಿಲ್ಲ. ಹಾಗಾಗಿ ನಮಗೆ ಇಬ್ಬರಿಗೂ ಒಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿಲ್ಲ. ಆದರೆ ನನಗೆ ಯಶ್ ಅವರ ಪರಿಚಯ ಸಾಕಷ್ಟು ಸಮಯದಿಂದ ಇದೆ ಮತ್ತು ನಾನು ಅವರ ನಟನೆಯ ದೊಡ್ಡ ಅಭಿಮಾನಿ. ರಾವಣನ ಪಾತ್ರ ಮಾಡಲು ಅವರಂತಹ ನಟನೇ ಬೇಕಿತ್ತು’ ಎಂದು ರಣ‌ಬೀರ್ ಹೊಗಳಿದ್ದಾರೆ.

ಯಶ್ ಅಭಿನಯಕ್ಕೆ ಮೆಚ್ಚುಗೆ:

ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಪಾತ್ರವನ್ನು ನಿಭಾಯಿಸಿರುವ ಶೈಲಿಯನ್ನು ರಣಬೀರ್ ಕಪೂರ್ ಶ್ಲಾಘಿಸಿದ್ದಾರೆ. ‘ನಾವು ಹಲವು ವರ್ಷಗಳಿಂದ ರಾವಣನ ಪಾತ್ರವನ್ನು ಒಂದೇ ರೀತಿಯ ಸಾಂಪ್ರದಾಯಿಕ ಶೈಲಿಯಲ್ಲಿ ನೋಡಿಕೊಂಡು ಬಂದಿದ್ದೇವೆ. ಆದರೆ ಯಶ್ ಅವರು ಈ ಪಾತ್ರವನ್ನು ಅತ್ಯಂತ ಸ್ವ್ಯಾಗ್ ಹಾಗೂ ಪ್ರಾಮಾಣಿಕತೆಯಿಂದ ನಟಿಸಿದ್ದು, ರಾವಣನ ಪಾತ್ರಕ್ಕೆ ಜೀವ ತುಂಬಿದ್ದಾರೆ’ ಎಂದು ತಿಳಿಸಿದ್ದಾರೆ.

ರಾಮಾಯಣ ಬಗ್ಗೆ ಯಶ್ ಮಾತು:

ಈ ಬೃಹತ್ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ ಯಶ್, ಸರಿಯಾದ ದೃಷ್ಟಿಕೋನ ಮತ್ತು ಕಥೆಯನ್ನು ಪ್ರಾಮಾಣಿಕವಾಗಿ ತಲುಪಿಸುವುದೇ ಅತ್ಯಂತ ಮುಖ್ಯ ವಿಷಯ ಎಂದಿದ್ದಾರೆ. ‘ಸರಿಯಾದ ಉದ್ದೇಶ ಹಾಗೂ ಉತ್ತಮ ತಂಡ ಜೊತೆಗಿದ್ದರೆ ಎಲ್ಲವೂ ತಾನಾಗಿಯೇ ಸರಿಯಾಗುತ್ತದೆ. ಈ ಕಥೆಯು ನಮಗೆ ಜೀವನದ ಹಲವು ಮಗ್ಗಲುಗಳನ್ನು ಕಲಿಯಲು ನೆರವಾಗಿದೆ. ತಾಂತ್ರಿಕವಾಗಿ ಮೇಕಪ್ ಮತ್ತು ಲುಕ್‌ಗಳ ವಿಷಯದಲ್ಲಿ ಸಾಕಷ್ಟು ಸವಾಲುಗಳಿದ್ದವು. ಆದರೆ ಅಂತಿಮವಾಗಿ ನಾವು ಉತ್ತಮ ಕಥೆಯನ್ನು ಜಗತ್ತಿಗೆ ತಲುಪಿಸಲು ಶ್ರಮಿಸುತ್ತಿದ್ದೇವೆ. ಅದನ್ನು ನಾವು ಅತ್ಯಂತ ನೈಜವಾಗಿ ತರಲು ಸಮರ್ಥರಾಗಿದ್ದೇವೆ ಎಂಬ ನಂಬಿಕೆ ನನಗಿದೆ’ ಎಂದು ಯಶ್ ಹೇಳಿದ್ದಾರೆ.

ಇದನ್ನೂ ಓದಿ: ‘ರಾಮಾಯಣ ಚಿತ್ರದಲ್ಲಿ ಸೀತೆ ಪಾತ್ರ ಮಾಡಲು ನಾನು ಶುದ್ಧವಾಗಿದ್ದೆ’: ಸಾಯಿ ಪಲ್ಲವಿ

‘ರಾಮಾಯಣ’ ಚಿತ್ರದ ಪಾತ್ರವರ್ಗ:

ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ಶ್ರೀರಾಮನಾಗಿ, ಯಶ್ ಅವರು ರಾವಣನಾಗಿ ಹಾಗೂ ಸಾಯಿ ಪಲ್ಲವಿ ಅವರು ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಸನ್ನಿ ಡಿಯೋಲ್ ಹನುಮಂತನಾಗಿ, ರವಿ ದುಬೆ ಲಕ್ಷ್ಮಣನಾಗಿ ಬಣ್ಣ ಹಚ್ಚಿದ್ದಾರೆ. ಅರುಣ್ ಗೋವಿಲ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ, ಶೀಬಾ ಚಡ್ಡಾ ಮತ್ತು ಇಂದಿರಾ ಕೃಷ್ಣನ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

NEET Exam: ವೈದ್ಯಕೀಯ ಪ್ರವೇಶಕ್ಕೆ ರಾಜ್ಯದಿಂದಲೇ ಪರೀಕ್ಷೆ: ‘NEET ಬೇಡ, ನಮ್ಮ CET ಬೇಕು’ ಸಹಿ ಅಭಿಯಾನ! – Kannada News | Ban NEET, Restore KEA CET: Signature Campaign Begins in Karnataka

ಬೆಂಗಳೂರು, ಜುಲೈ 26: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಮತ್ತು ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆ ಬೆನ್ನಲ್ಲೇ ಕರ್ನಾಟಕದಲ್ಲಿ ನೀಟ್ ವಿರುದ್ಧದ ಆಕ್ರೋಶ ಮತ್ತಷ್ಟು ಜೋರಾಗಿದ್ದು, ‘ನಮಗೆ NEET ಬೇಡ, ನಮ್ಮ K-CET ಬೇಕು’ ಎಂಬ ಹೊಸ ಸಹಿ ಅಭಿಯಾನಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.

ಕವಿರಾಜ್ ನೇತೃತ್ವದಲ್ಲಿ ಬೃಹತ್ ಸಹಿ ಅಭಿಯಾನ

ಚಿತ್ರ ಸಾಹಿತಿ ಕವಿರಾಜ್ ಅವರ ನೇತೃತ್ವದಲ್ಲಿ ನಾಡಿನ ಸಾಹಿತಿಗಳು, ಹೋರಾಟಗಾರರು, ವಿದ್ಯಾರ್ಥಿಗಳು ಹಾಗೂ ಪೋಷಕರು ಒಂದಾಗಿ ಈ ಸೈನ್ ಪಿಟಿಷನ್ (Sign Petition) ಅಭಿಯಾನವನ್ನು ಕೈಗೆತ್ತಿಕೊಂಡಿದ್ದಾರೆ. ಅಭಿಯಾನ ಶುರುವಾದ ಕೇವಲ ಒಂದೇ ದಿನದಲ್ಲಿ 2,000ಕ್ಕೂ ಅಧಿಕ ಜನರು ಸಹಿ ಸಂಗ್ರಹಿಸುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ವೈದ್ಯಕೀಯ ಸೀಟುಗಳ ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಸಿಇಟಿ ಪರೀಕ್ಷೆಯನ್ನೇ ಆಧಾರವಾಗಿಟ್ಟುಕೊಳ್ಳಬೇಕು ಎಂಬುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

KEA ಮಾದರಿಯೇ ಬೆಸ್ಟ್: ಸಿಇಟಿಗೆ ಪಟ್ಟು

ಎಂಜಿನಿಯರಿಂಗ್ ಪ್ರವೇಶ ಪ್ರಕ್ರಿಯೆಯನ್ನು ಯಾವುದೇ ಲೋಪದೋಷಗಳಿಲ್ಲದೆ ಅತ್ಯಂತ ಯಶಸ್ವಿಯಾಗಿ ಹಾಗೂ ಪಾರದರ್ಶಕವಾಗಿ ನಡೆಸುತ್ತಿರುವ ಕರ್ನಾಟಕ ಸಿಇಟಿ ಮಾಡಲ್ ಇಡೀ ದೇಶಕ್ಕೇ ಬೆಸ್ಟ್ ಮಾಡಲ್ ಆಗಿದೆ. ಹೀಗಾಗಿ, ಕಷ್ಟಪಟ್ಟು ಓದುವ ರಾಜ್ಯದ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಠಕವಾಗುತ್ತಿರುವ ಕೇಂದ್ರದ ನೀಟ್ ವ್ಯವಸ್ಥೆಯನ್ನು ರದ್ದುಗೊಳಿಸಿ, ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕೆಇಎ ಮೂಲಕವೇ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಬೇಕೆಂದು ರಾಜ್ಯಾದ್ಯಂತ ಆಗ್ರಹ ವ್ಯಕ್ತವಾಗುತ್ತಿದೆ.

ವೈದ್ಯಕೀಯ ಪ್ರವೇಶಕ್ಕೆ ನೀಟ್ ಏಕೆ ರದ್ದಾಗಬೇಕು?

  • ರಾಜ್ಯ ಪಠ್ಯಕ್ರಮಕ್ಕೆ ಅನ್ಯಾಯ: ಶೇ 90ರಷ್ಟು ಸ್ಥಳೀಯ ವಿದ್ಯಾರ್ಥಿಗಳು ರಾಜ್ಯ ಪಠ್ಯಕ್ರಮದಲ್ಲಿದ್ದು, NEET ಸಂಪೂರ್ಣವಾಗಿ CBSE/NCERT ಆಧಾರಿತವಾಗಿದೆ.
  • ಕೋಚಿಂಗ್ ದಂಧೆ: ದುಬಾರಿ ಕೋಚಿಂಗ್ ಜಾಲದಿಂದ ಬಡ, ಗ್ರಾಮೀಣ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟುಗಳು ಕೈಗೆಟುಕುತ್ತಿಲ್ಲ.
  • ಅಕ್ರಮ ಹಾಗೂ ಕೇಂದ್ರೀಕೃತ ಲೋಪ: ಪ್ರಶ್ನೆಪತ್ರಿಕೆ ಸೋರಿಕೆ, ನಕಲಿ ದಾಖಲೆ ಮತ್ತು ED ಆರೋಪಗಳು ಕೇಂದ್ರೀಕೃತ ವ್ಯವಸ್ಥೆಯ ಪಾರದರ್ಶಕತೆಯನ್ನು ಪ್ರಶ್ನಿಸುವಂತೆ ಮಾಡಿದ್ದು, ವಿದ್ಯಾರ್ಥಿಗಳನ್ನು ಹತಾಶೆಗೆ ದೂಡಿದೆ.
  • ಸ್ಥಳೀಯರಿಗೆ ಸೀಟು ಕೊರತೆ: ದೇಶವ್ಯಾಪಿ ಪೈಪೋಟಿಯಿಂದ ಕರ್ನಾಟಕದ ಮಕ್ಕಳಿಗೆ ಕೈಗೆಟಕುವ ಶುಲ್ಕದ ಸೀಟುಗಳು ಸಿಗುತ್ತಿಲ್ಲ. ಜತೆಗೆ, ಕನ್ನಡ ಬಾರದ ವೈದ್ಯರಿಂದ ಗ್ರಾಮೀಣ ಆರೋಗ್ಯ ಸೇವೆಗೂ ಧಕ್ಕೆಯಾಗುತ್ತಿದೆ.

ಪ್ರಮುಖ ಬೇಡಿಕೆಗಳೇನು?

ದೇಶಾದ್ಯಂತ ಕಡ್ಡಾಯಗೊಳಿಸಿರುವ NEET ಅನ್ನು ತಕ್ಷಣವೇ ರದ್ದುಗೊಳಿಸಬೇಕು. ವೈದ್ಯಕೀಯ ಪ್ರವೇಶಾತಿ ಹಕ್ಕನ್ನು ರಾಜ್ಯಗಳಿಗೆ ಮರಳಿಸಿ, ಕರ್ನಾಟಕದಲ್ಲಿ KEA-CET ಮರುಸ್ಥಾಪಿಸಬೇಕು. ಶಿಕ್ಷಣವನ್ನು ಸಂಪೂರ್ಣವಾಗಿ ರಾಜ್ಯ ಪಟ್ಟಿಗೆ ಮರಳಿ ತರಬೇಕು ಮತ್ತು ಕೇಂದ್ರದ ಪಾತ್ರವನ್ನು ಕೇವಲ ಗುಣಮಟ್ಟದ ನಿಯಮ ರೂಪಿಸುವುದಕ್ಕೆ ಸೀಮಿತಗೊಳಿಸಬೇಕು ಎಂಬುದೆ ಅಭಿಯಾನದ ಹಿಂದಿನ ಪ್ರಮುಖ ಬೇಡಿಕೆಗಳಾಗಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:46 am, Sun, 26 July 26

Source link

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್​​ಗೆ ಮತ್ತೊಂದು ಶಾಕ್​​: ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಸಂಬಂಧ FIR – Kannada News | KPSC Scam: FIR Registered Against Former Chairman Shivashankarappa Sahukar Over Veterinary Officers Recruitment Fraud

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್​​ಗೆ ಮತ್ತೊಂದು ಶಾಕ್

ಬೆಂಗಳೂರು, ಜುಲೈ 26: 400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ ಸಂಬಂಧ KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ವಿರುದ್ಧ ಮತ್ತೊಂದು FIR ದಾಖಲಾಗಿದೆ. ಸಂಬಂಧಿಕರಿಗೆ, ಹಣ ನೀಡಿದವರಿಗೆ ಹುದ್ದೆ ಎಂದು ಆರೋಪಿಸಿ ಪಶು ವೈದ್ಯಾಧಿಕಾರಿ ಮಂಜುನಾಥ ಎಂಬುವರು ನಾಲ್ವರ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಆಧಾರದಲ್ಲಿ ಶಿವಶಂಕರಪ್ಪ ಸಾಹುಕರ್, KPSC ಸದಸ್ಯರು, ಕೆಲ ಅಭ್ಯರ್ಥಿಗಳ ಮೇಲೆ FIR ದಾಖಲಾಗಿದೆ.

KPSC ಮಾಜಿ ಅಧ್ಯಕ್ಷರ ವಿರುದ್ಧದ ಆರೋಪವೇನು?

2026 ಜನವರಿಯಲ್ಲಿ ನಡೆದಿದ್ದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಸುಮಾರು 29 ಅಭ್ಯರ್ಥಿಗಳು ಅಕ್ರಮವಾಗಿ ಉತ್ತೀರ್ಣರಾಗಿದ್ದಾರೆ. ಶಿವಶಂಕರಪ್ಪ ಸಂಬಂಧಿ ಸೂಗುರೇಶ್‌ ಜಾಕ ಸೇರಿ 24 ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅನುಮಾನದ ಜೊತೆಗೆ, ಇಂತಹ ಕೆಲ ಅಭ್ಯರ್ಥಿಗಳಿಗೆ ಮಧ್ಯವರ್ತಿಗಳು ತರಬೇತಿ ನೀಡಿದ್ದಾರೆ. ಕೆಲವರಿಗೆ OMR ಶೀಟ್ ತಿದ್ದುಪಡಿ ಅಕ್ರಮ ನಡೆಸಿದ್ದಾರೆ ಎಂದು ದೂರಲಾಗಿತ್ತು. ಅಲ್ಲದೆ, ಈ ಬಗ್ಗೆ 80 ಲಕ್ಷ ರೂಪಾಯಿಗಳ ಡೀಲ್ ಆಡಿಯೋ ಕೂಡ ವೈರಲ್ ಆಗಿತ್ತು. ಅಭ್ಯರ್ಥಿಗಳ ಖಾಸಗಿ ಮಾಹಿತಿ, OMR ಶೀಟ್ ಅಂಕಗಳ ಮಾಹಿತಿ ಮಧ್ಯವರ್ತಿಗಳಿಗೆ ಸಿಕ್ಕಿದ್ದರ ಹಿಂದೆ ಆರೋಪಿಗಳ ಕೈವಾಡ ಇದೆ. ಹೀಗಾಗಿ ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ದಾಖಲಾಗಿದ್ದ ದೂರಿನ ಅನ್ವಯ ವಂಚನೆ ಮತ್ತು ಕರ್ನಾಟಕ ಪಬ್ಲಿಕ್​​ ಎಕ್ಸಾಮಿನೇಷನ್​​ ಆ್ಯಕ್ಟ್​​ ಅಡಿ ಎಫ್​​ಐಆರ್​​ ದಾಖಲಾಗಿದೆ.

ಇದನ್ನೂ ಓದಿ: KPSCಯಲ್ಲಿ ಮತ್ತೊಂದು ಬ್ರಹ್ಮಾಂಡ ಅಕ್ರಮ? 80 ಲಕ್ಷ ರೂಪಾಯಿಗೆ ಒಂದು ಪಶು ವೈದ್ಯಾಧಿಕಾರಿ ಸೀಟ್​​ ಬಿಕರಿ?

‘ವಿದ್ಯಾರ್ಥಿಗಳ ಜೀವನದ ಜೊತೆಗೆ ಚೆಲ್ಲಾಟ ಬೇಡ’

ಸಾಲು ಸಾಲು ವಿವಾದಗಳ ಹಿನ್ನೆಲೆ ಕೆಪಿಎಸ್ಸಿಯಲ್ಲೂ ಬದಲಾವಣೆ ಆಗಲಿದ್ಯಾ ಎಂಬ ಪ್ರಶ್ನೆಗೆ ರಾಜ್ಯ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಪ್ರತಿಕ್ರಿಯಿಸಿದ್ದು, ಯಾರೂ ವಿದ್ಯಾರ್ಥಿಗಳ ಜೀವನದ ಜೊತೆಗೆ ಚೆಲ್ಲಾಟ ಆಡುವಂತಿಲ್ಲ. ಆಡಳಿತ ವಿಪಕ್ಷದವರು ಎಲ್ಲರು ಸೇರಿ ಕ್ರಾಂತಿ ಮಾಡೋಣ. ಹೊಸ ಕಾನೂನು ಜಾರಿಗೆ ತರೋಣ. ಆ ಮೂಲಕ ಕೇಂದ್ರ, ರಾಜ್ಯದಲ್ಲಿ ಪಾರದರ್ಶಕವಾದ ನೇಮಕಾತಿ ವ್ಯವಸ್ಥೆ ಜಾರಿಗೆ ಮಾಡೋಣ ಎಂದವರು ತಿಳಿಸಿದ್ದಾರೆ. ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, KPSC ಚೇರ್ಮನ್ ಯಾರ ನಾಮಿನಿ? ಅವರ ಪರ ಹೈಕೋರ್ಟ್​​ನಲ್ಲಿ ಡಿಫೆಂಡ್​​ ಮಾಡುತ್ತಿರೋದು ಯಾರೆಂದು ಪ್ರಶ್ನಿಸಿದ್ದಾರೆ.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:51 am, Sun, 26 July 26

Source link

Exit mobile version