ವಿಡಿಯೋ ಶೂಟ್ ಮಾಡಿ, ಅಪ್‌ಲೋಡ್ ಮಾಡಿ; ಕೇಂದ್ರ ಸರ್ಕಾರದಿಂದ ‘ಜೆಮ್ಸ್ ಆಫ್ ಇಂಡಿಯಾ’ ಚಾಲೆಂಜ್​ಗೆ ಚಾಲನೆ – Kannada News | Ministry of Information and Broadcasting launches Gems of India Challenge to discover grassroots digital creators from 1st August

ನವದೆಹಲಿ, ಜುಲೈ 21: ಭಾರತದ ತಳಮಟ್ಟದ ಹಾಗೂ ಪ್ರಾದೇಶಿಕ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳು, ಯೂಟ್ಯೂಬರ್‌ಗಳು ಮತ್ತು ವ್ಲಾಗರ್‌ಗಳ ಪ್ರತಿಭೆಯನ್ನು ದೇಶದಾದ್ಯಂತ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ‘ಜೆಮ್ಸ್ ಆಫ್ ಇಂಡಿಯಾ’ (Gems of India) ಚಾಲೆಂಜ್‌ಗೆ ಚಾಲನೆ ನೀಡಿದೆ. ದೇಶದ ಸಾಮಾನ್ಯ ಜನರ ಅಪೂರ್ವ ಕಥೆಗಳು, ಸ್ಥಳೀಯ ಸಂಸ್ಕೃತಿ, ಕಲೆ ಮತ್ತು ಸೃಜನಶೀಲತೆಯನ್ನು ಡಿಜಿಟಲ್ ವೇದಿಕೆಯ ಮೂಲಕ ಜಗತ್ತಿಗೆ ಪರಿಚಯಿಸಲು ಈ ಅಭಿಯಾನವನ್ನು ರೂಪಿಸಲಾಗಿದೆ.

ಈ ಸ್ಪರ್ಧೆಯು ಕೇಂದ್ರ ಸರ್ಕಾರದ ಅಧಿಕೃತ ಡಿಜಿಟಲ್ ವೇದಿಕೆಯಾದ ‘MyWAVES’ ಆಪ್‌ನಲ್ಲಿ ನಡೆಯಲಿದೆ. ದೇಶದ ಮೂಲೆ ಮೂಲೆಯಲ್ಲಿರುವ ಉದಯೋನ್ಮುಖ ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋಗಳನ್ನು ಚಿತ್ರೀಕರಿಸಿ, ಈ ಪ್ಲಾಟ್‌ಫಾರ್ಮ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಈ ಸ್ಪರ್ಧೆಯ ಉದ್ದೇಶವೇನು?:

“ಶೂಟ್ ಮಾಡಿ, ಅಪ್‌ಲೋಡ್ ಮಾಡಿ, ಮಿಂಚಿರಿ” (Shoot, Upload, Shine) ಎಂಬ ಶೀರ್ಷಿಕೆಯಡಿ ಆರಂಭವಾಗಿರುವ ಈ ಚಾಲೆಂಜ್ ಯುವಜನರು ಹಾಗೂ ಗ್ರಾಮೀಣ ಭಾಗದ ಪ್ರತಿಭಾವಂತರಿಗೆ ತಮ್ಮ ಕಲಾತ್ಮಕ ಸೃಜನಶೀಲತೆಯನ್ನು ಪ್ರದರ್ಶಿಸಲು ಮತ್ತು ರಾಷ್ಟ್ರೀಯ ಮಟ್ಟದ ಗುರುತಿಸುವಿಕೆ ಪಡೆಯಲು ಉತ್ತಮ ಅವಕಾಶ ಕಲ್ಪಿಸಿದೆ.

ಆಗಸ್ಟ್ 1ರಿಂದ ಉಚಿತ ಪ್ರವೇಶ ಆರಂಭ:

ಅರ್ಜಿ ಸಲ್ಲಿಕೆ ದಿನಾಂಕ: ಈ ‘ಜೆಮ್ಸ್ ಆಫ್ ಇಂಡಿಯಾ’ ಚಾಲೆಂಜ್‌ನಲ್ಲಿ ಭಾಗವಹಿಸಲು ಆಗಸ್ಟ್ 1ರಿಂದ MyWAVES ಪ್ಲಾಟ್‌ಫಾರ್ಮ್‌ನಲ್ಲಿ ಪ್ರವೇಶ ಪಡೆಯಬಹುದು. ಕಿರುಚಿತ್ರ ತಯಾರಕರು, ವ್ಲಾಗರ್‌ಗಳು, ಸಾಂಸ್ಕೃತಿಕ ತಜ್ಞರು, ತಂತ್ರಜ್ಞಾನ ಮತ್ತು ಸಾಮಾಜಿಕ ವಿಚಾರಗಳ ಕುರಿತು ಕಂಟೆಂಟ್ ಮಾಡುವ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಈ ಸ್ಪರ್ಧೆ ಮುಕ್ತವಾಗಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ ವಿರುದ್ಧ ರಾಜ್ಯಪಾಲರಿಗೆ ದೂರು, ಏನಿದು ನೀತಿ ?

ಈ ಸ್ಪರ್ಧೆಯ ಥೀಮ್ ಏನು?:

ಈ ಚಾಲೆಂಜ್‌ನಲ್ಲಿ ಪ್ರಾದೇಶಿಕ ವೈವಿಧ್ಯತೆ, ಭಾರತೀಯ ಸಂಸ್ಕೃತಿ, ನಾವೀನ್ಯತೆ, ಸ್ಥಳೀಯ ಪ್ರವಾಸೋದ್ಯಮ ಮತ್ತು ಸಾಮಾಜಿಕ ಸುಧಾರಣೆಗಳಂತಹ ವಿವಿಧ ವಿಷಯಗಳ ಮೇಲೆ ನಿರ್ಮಿಸಲಾದ ಸ್ವತಂತ್ರ ಕಂಟೆಂಟ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ಜಿಲ್ಲೆಗಳ ಸಂಸ್ಕೃತಿ, ಪರಂಪರೆ, ಪ್ರವಾಸೋದ್ಯಮ, ಸಂಪ್ರದಾಯಗಳು, ಇತಿಹಾಸ ಮತ್ತು ವಿಶಿಷ್ಟ ಸಾಧನೆಗಳನ್ನು ಬಿಂಬಿಸುವ 1ರಿಂದ 3 ನಿಮಿಷಗಳ ಕಿರು ವೀಡಿಯೊಗಳನ್ನು ಸಿದ್ಧಪಡಿಸಬೇಕಾಗುತ್ತದೆ.

ಆಯ್ಕೆಯಾಗುವ ಅತ್ಯುತ್ತಮ ಡಿಜಿಟಲ್ ಕ್ರಿಯೇಟರ್‌ಗಳಿಗೆ ಕೇಂದ್ರ ಸರ್ಕಾರದಿಂದ ಪುರಸ್ಕಾರ, ಪ್ರಮಾಣಪತ್ರ ಹಾಗೂ ರಾಷ್ಟ್ರೀಯ ಮಟ್ಟದ ದೊಡ್ಡ ವೇದಿಕೆಗಳಲ್ಲಿ ತಮ್ಮ ಕಂಟೆಂಟ್ ಅನ್ನು ಪ್ರದರ್ಶಿಸುವ ಅಪರೂಪದ ಅವಕಾಶ ಸಿಗಲಿದೆ. ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದ್ದು, ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳ ಕ್ರಿಯೇಟರ್‌ಗಳು ಇದರಲ್ಲಿ ಪಾಲ್ಗೊಳ್ಳಬಹುದು.

ಈ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರುವ ಮುನ್ನ, ಪೈಲಟ್ ಹಂತವಾಗಿ ಮೊದಲು ಈ ಕೆಳಗಿನ 6 ಪ್ರದೇಶಗಳಲ್ಲಿ ಪ್ರಾರಂಭಿಸಲಾಗುತ್ತಿದೆ. ಅವುಗಳೆಂದರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು, ಗೋವಾ, ಲಡಾಖ್.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಲಾದ ಯೂಟ್ಯೂಬ್ ವಿಡಿಯೋ ಯಾವುದು ಗೊತ್ತೆ?

ಈ ಪೈಲಟ್ ಕಾರ್ಯಕ್ರಮವನ್ನು ಪ್ರಸಾರ ಭಾರತಿ ‘ಮೈ ಭಾರತ್’ ಹಾಗೂ ಆಯಾ ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತಗಳ ಸಹಯೋಗದೊಂದಿಗೆ ಜಾರಿಗೊಳಿಸಲಾಗುತ್ತಿದೆ. ಸ್ಥಳೀಯ ಸಾಂಸ್ಕೃತಿಕ ಮತ್ತು ಶಿಕ್ಷಣ ಸಂಸ್ಥೆಗಳು ಕಂಟೆಂಟ್ ಅಭಿವೃದ್ಧಿಗೆ ಸಹಾಯ ಮಾಡಲಿವೆ. ವಿಶೇಷವೆಂದರೆ, ಯೂಟ್ಯೂಬ್ ಮತ್ತು ಮೆಟಾ ಕೂಡ ಈ ಅಭಿಯಾನದೊಂದಿಗೆ ಕೈಜೋಡಿಸಿದ್ದು, ತಮ್ಮ ಡಿಜಿಟಲ್ ನೆಟ್‌ವರ್ಕ್‌ಗಳ ಮೂಲಕ ಈ ಸ್ಪರ್ಧೆಗೆ ವ್ಯಾಪಕ ಪ್ರಚಾರ ನೀಡಲಿವೆ.

ನಗದು ಬಹುಮಾನ ಎಷ್ಟು?:

ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ಭಾರಿ ನಗದು ಬಹುಮಾನಗಳನ್ನು ಘೋಷಿಸಿದೆ.

ಜಿಲ್ಲಾ ಹಂತ: ಪ್ರತಿ ಜಿಲ್ಲೆಯಲ್ಲಿ ಗರಿಷ್ಠ 20 ವಿಜೇತರಿಗೆ ತಲಾ 50,000 ರೂ. ನಗದು ಬಹುಮಾನ ನೀಡಲಾಗುವುದು.

ರಾಜ್ಯ ಹಂತ: ಭಾಗವಹಿಸುವ ಪ್ರತಿ ಜಿಲ್ಲೆಯಿಂದ ಒಬ್ಬ ಅತ್ಯುತ್ತಮ ಕ್ರಿಯೇಟರ್‌ಗೆ 2 ಲಕ್ಷ ರೂ. ಬಹುಮಾನ ನೀಡಲಾಗುವುದು.

ರಾಷ್ಟ್ರೀಯ ಹಂತ: ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವವರಿಗೆ 5 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು.

ಸಂಸ್ಕೃತಿ, ಪರಂಪರೆ, ಪ್ರವಾಸೋದ್ಯಮ, ಮಾಧ್ಯಮ ಮತ್ತು ಶಿಕ್ಷಣ ಕ್ಷೇತ್ರದ ತಜ್ಞರನ್ನು ಒಳಗೊಂಡ ಜಿಲ್ಲಾ ಮತ್ತು ರಾಜ್ಯ ಮಟ್ಟದ ತೀರ್ಪುಗಾರರ ಸಮಿತಿಗಳು ಈ ವೀಡಿಯೊಗಳನ್ನು ಮೌಲ್ಯಮಾಪನ ಮಾಡಲಿವೆ. ಪೈಲಟ್ ಹಂತದ ಯಶಸ್ಸಿನ ನಂತರ ಈ ಯೋಜನೆಯನ್ನು ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ, ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್ – Kannada News | Karnataka Viral Fever: UT Khader Urges Caution Amidst COVID 19, Dengue Resurgence

ಬೆಂಗಳೂರು, ಜು.21: ದೇಶಾದ್ಯಂತ ಮತ್ತೆ ಕೊರೋನಾ, ಡೆಂಗ್ಯೂ ಹಾಗೂ H1N1 ನಂತಹ ವೈರಲ್ ರೋಗಗಳ ಭೀತಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಾದ ಅಗತ್ಯವಿಲ್ಲ, ಭಯಕ್ಕಿಂತ ಎಚ್ಚರಿಕೆ ವಹಿಸುವುದು ಮುಖ್ಯ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಅಭಯ ನೀಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಲಸಿಕೆ ಹಾಗೂ ಸಾರ್ವಜನಿಕ ಆರೋಗ್ಯದ ಕುರಿತು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು. ಕೋವಿಡ್ ಪ್ರಕರಣಗಳ ಕುರಿತು ಮಾತನಾಡಿದ ಸಚಿವರು, “ಸಾವಿರ ವರ್ಷ ಕಳೆದರೂ ಈ ವೈರಸ್ ಇದ್ದೇ ಇರುತ್ತದೆ. ಕೆಲವೊಂದು ವೈರಸ್‌ಗಳು ಗಾಳಿಯಲ್ಲಿ ನಿರಂತರವಾಗಿ ಇರುತ್ತವೆ. ನಾವು ಟೆಸ್ಟಿಂಗ್ ಹೆಚ್ಚಿಸಿದಾಗ ಕೆಲವೊಂದು ಪ್ರಕರಣಗಳು ಪಾಸಿಟಿವ್ ಬಂದೇ ಬರುತ್ತವೆ. ಇದಕ್ಕಾಗಿ ಯಾರೂ ಭಯಪಡುವ ಅಗತ್ಯವಿಲ್ಲ” ಎಂದರು.

ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ರೋಗ ಬೇಗ ತಗುಲುತ್ತದೆ. ವೈರಸ್‌ಗಿಂತ ನಾವು ಗಟ್ಟಿಯಾಗಬೇಕು ಮತ್ತು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಉತ್ತಮ ಆಹಾರ ಪದ್ಧತಿ, ಆರೋಗ್ಯಕರ ಜೀವನಶೈಲಿ ಹಾಗೂ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸೊಳ್ಳೆಗಳ ಉತ್ಪತ್ತಿ ತಡೆಗೆ ಕರೆ, ಜ್ವರ ಬಂದ ತಕ್ಷಣ ಟೆಸ್ಟ್ ಮಾಡಿಸಿ:

ಇದು ಸಾಂಕ್ರಾಮಿಕ ರೋಗಗಳ ಹಾಗೂ ವೈರಲ್ ಫೀವರ್ ಸೀಸನ್ ಆಗಿರುವುದರಿಂದ ಸೊಳ್ಳೆಗಳ ಉತ್ಪತ್ತಿಯಿಂದ ರೋಗಗಳು ಹೆಚ್ಚಾಗುತ್ತಿವೆ. ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್, ಟೆಸ್ಟಿಂಗ್ ಸೇರಿ ಡೆಂಗ್ಯೂ, H1N1 ಮತ್ತು ಕೋವಿಡ್ ಎದುರಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ. ಆದರೆ ಇದಕ್ಕೆ ಜನಸಾಮಾನ್ಯರು ಹಾಗೂ ಸಂಘ-ಸಂಸ್ಥೆಗಳ ಸಹಕಾರ ಅತ್ಯಗತ್ಯ” ಎಂದರು.

ಸಾರ್ವಜನಿಕರಿಗೆ ನೀಡಿದ ಪ್ರಮುಖ ಸೂಚನೆಗಳು:

ನಿರ್ಮಾಣ ಹಂತದ ಕಟ್ಟಡಗಳು ಹಾಗೂ ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಜ್ವರ ಅಥವಾ ಯಾವುದೇ ರೋಗಲಕ್ಷಣ ಕಂಡುಬಂದ ತಕ್ಷಣ ಟೆಸ್ಟ್ ಮಾಡಿಸಿಕೊಳ್ಳಬೇಕು.

ಕುಡಿಯಲು ಕಾಯಿಸಿ ಆರಿಸಿದ ಬಿಸಿ ನೀರನ್ನೇ ಬಳಸಬೇಕು.

ಡೆಂಗ್ಯೂ ಲಸಿಕೆ ಸಂಶೋಧನೆ ಬಗ್ಗೆ ಚರ್ಚೆ:

ಡೆಂಗ್ಯೂ ರೋಗಕ್ಕೆ ಲಸಿಕೆ ಸಂಶೋಧನೆ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಈ ಬಗ್ಗೆ ಈಗಾಗಲೇ ಮಾಹಿತಿ ಬಂದಿದ್ದು, ನಿನ್ನೆಯಷ್ಟೇ ಉನ್ನತ ಮಟ್ಟದ ಸಭೆ ನಡೆಸಿದ್ದೇನೆ. ನಮ್ಮ ರಾಜ್ಯಕ್ಕೆ ಈ ಲಸಿಕೆ ಸೂಕ್ತವೇ ಅಥವಾ ಇಲ್ಲವೇ ಹಾಗೂ ಆರೋಗ್ಯದ ಮೇಲೆ ಇದು ಬೀರುವ ಪರಿಣಾಮಗಳ ಕುರಿತು ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಇದನ್ನೂ ಓದಿ: ಜಿಬಿಎ ಇಂಜಿನಿಯರ್‌ಗಳ ಮೇಲೆ ಹೆಲ್ಮೆಟ್‌, ಪೆಪ್ಪರ್ ಸ್ಪ್ರೇ ದಾಳಿ: ಹಲ್ಲೆಗೆ ಹೆದರದೆ ಮತ್ತೆ ಅಖಾಡಕ್ಕಿಳಿದ ಜಿಬಿಎ ಪಡೆ

ಬಾಲಕಿಯರಿಗೆ ಕ್ಯಾನ್ಸರ್ ನಿರೋಧಕ (HPV) ಲಸಿಕೆ:

ಗರ್ಭಕಂಠದ ಕ್ಯಾನ್ಸರ್ ತಡೆಯಲು ನೀಡಲಾಗುವ ಹೆಚ್‌ಪಿವಿ ಲಸಿಕೆ ಕುರಿತು ಮಾತನಾಡಿದ ಅವರು, “ದೇಶಾದ್ಯಂತ ಬಹುದೊಡ್ಡ ಜನಸಂಖ್ಯೆಗೆ ಈ ಕ್ಯಾನ್ಸರ್ ಬಾಧಿಸುತ್ತಿದೆ. ಭವಿಷ್ಯದಲ್ಲಿ ಹೆಣ್ಣುಮಕ್ಕಳನ್ನು ಈ ಮಾರಕ ರೋಗದಿಂದ ಪಾರು ಮಾಡಲು ಹೆಚ್‌ಪಿವಿ ಲಸಿಕೆ ಸಹಕಾರಿಯಾಗಿದೆ. ಆದರೆ ಇದನ್ನು ಶೇಕಡಾ 100 ರಷ್ಟು ಕಡ್ಡಾಯ ಮಾಡುವುದಿಲ್ಲ. ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಮೂಲಕ ಲಸಿಕೆ ನೀಡುವ ಕಾರ್ಯಕ್ರಮ ರೂಪಿಸಲಾಗುವುದು” ಎಂದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

4 ದಿನಗಳ ಅಭ್ಯಾಸ ಪಂದ್ಯ: ಭಾರತದ ಟೆಸ್ಟ್ ಸರಣಿ ವೇಳಾಪಟ್ಟಿ ಪ್ರಕಟ – Kannada News | India Vs Sri Lanka Test Series Schedule 2026

ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯು ಆಗಸ್ಟ್ 7 ರಿಂದ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಮೊದಲು 4 ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದ್ದು, ಇದಾದ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್​ ಖಚಿತಪಡಿಸಿದೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನ ದೃಷ್ಟಿಯಿಂದ ಟೀಮ್ ಇಂಡಿಯಾ ಪಾಲಿಗೆ ಈ ಸರಣಿಯು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಈ ಸರಣಿಯಲ್ಲಿ ಗೆದ್ದರೆ ಮಾತ್ರ ಭಾರತ ತಂಡವು ಫೈನಲ್​ ರೇಸ್​ನಲ್ಲಿ ಉಳಿಯಲಿದೆ.

ಟೀಮ್ ಇಂಡಿಯಾ ಫೈನಲ್ ಲೆಕ್ಕಾಚಾರ:

ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಸರಣಿಯಲ್ಲಿ ಒಟ್ಟು 18 ಪಂದ್ಯಗಳನ್ನು ಆಡಬೇಕಾಗಿದ್ದು, ಅದರಲ್ಲಿ ಈಗಾಗಲೇ 9 ಪಂದ್ಯಗಳನ್ನು ಮುಗಿಸಿದೆ. ಉಳಿದಿರುವ 9 ಪಂದ್ಯಗಳು ಭಾರತದ ಭವಿಷ್ಯವನ್ನು ನಿರ್ಧರಿಸಲಿವೆ.

  • ಶ್ರೀಲಂಕಾ ಪ್ರವಾಸ (ವಿದೇಶಿ ಸರಣಿ): 2 ಟೆಸ್ಟ್ ಪಂದ್ಯಗಳು.
  • ನ್ಯೂಝಿಲೆಂಡ್ ಪ್ರವಾಸ (ವಿದೇಶಿ ಸರಣಿ): 2 ಟೆಸ್ಟ್ ಪಂದ್ಯಗಳು.
  • ಆಸ್ಟ್ರೇಲಿಯಾ ವಿರುದ್ಧ (ತವರಿನ ಸರಣಿ): 5 ಟೆಸ್ಟ್ ಪಂದ್ಯಗಳು.

ಅಂದರೆ ಟೀಮ್ ಇಂಡಿಯಾ ಮುಂದಿನ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದರೆ ಫೈನಲ್​ಗೇರುವುದು ಖಚಿತ. ಒಂದು ವೇಳೆ 7 ಅಥವಾ 6 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಇತರೆ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ.

ಭಾರತ ತಂಡದ ಮುಂದಿನ ಎದುರಾಳಿಗಳು ಶ್ರೀಲಂಕಾ, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ. ಇಲ್ಲಿ ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಶ್ರೀಲಂಕಾ ದುರ್ಬಲ ತಂಡ ಎನ್ನಬಹುದು.

ಹೀಗಾಗಿಯೇ ಶ್ರೀಲಂಕಾ ವಿರುದ್ಧದ 2 ಮ್ಯಾಚ್​ಗಳಲ್ಲೂ ಭಾರತ ತಂಡ ಗೆಲ್ಲಲೇಬೇಕು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ರೇಸ್​ನಲ್ಲಿ ಉಳಿಯಬಹುದು.

ಸರಣಿ ಯಾವಾಗ ಶುರು?

ಆಗಸ್ಟ್ 4 ರಂದು ಕೊಲಂಬೋ ತಲುಪಲಿರುವ ಟೀಮ್ ಇಂಡಿಯಾ, ಮೊದಲ ಟೆಸ್ಟ್‌ಗೂ ಮುನ್ನ ಸ್ಥಳೀಯ ಲಂಕಾ ಬೋರ್ಡ್ XI ವಿರುದ್ಧ 4 ದಿನಗಳ ಸುದೀರ್ಘ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದಾದ ಬಳಿಕ 2 ಟೆಸ್ಟ್ ಮ್ಯಾಚ್​ಗಳಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

ಭಾರತ ಮತ್ತು ಶ್ರೀಲಂಕಾ ಟೆಸ್ಟ್ ಸರಣಿ ವೇಳಾಪಟ್ಟಿ:

ಈ ಸರಣಿಯ ಬಳಿಕ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 8 ಮ್ಯಾಚ್​ಗಳ ಸರಣಿ ಆಡಲಿದೆ. ಈ ಸರಣಿ ಸೆಪ್ಟೆಂಬರ್ 26 ರಿಂದ ಶುರುವಾಗಲಿದ್ದು,  3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಾಗುತ್ತದೆ.

Source link

ಹೆಚ್ಎಸ್ಆರ್​​ ಲೇಔಟ್​​ನನಲ್ಲಿ ಎಸ್​ಐಆರ್​​ ವೇಳೆ ಲೋಪ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸಂಸದ ತೇಜಸ್ವಿ ಸೂರ್ಯ ಪತ್ರ – Kannada News | Voter List Row: MP Tejasvi Surya Writes to CEO Demanding Probe Into 13,000+ Voters Marked ‘Shifted’ in HSR Layout

ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸಂಸದ ತೇಜಸ್ವಿ ಸೂರ್ಯ ಪತ್ರImage Credit source: PTI and Tv9 Kannada

ಬೆಂಗಳೂರು, ಜುಲೈ 21: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ವಿಚಾರ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ. ಬೆಂಗಳೂರಿನ (Bengaluru) ಹೆಚ್ಎಸ್ಆರ್​​ ಲೇಔಟ್​​ನ ವಾರ್ಡ್ ನಂಬರ್ 53ರಲ್ಲಿ 13,000ಕ್ಕೂ ಹೆಚ್ಚು ಮತದಾರರನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರು ಎಂದು ದಾಖಲಿಸಿರುವ ಬಗ್ಗೆ ಉಲ್ಲೇಖಿಸಿರುವ ಅವರು, ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅನ್ಬುಕುಮಾರ್​​ ಅವರನ್ನು ಆಗ್ರಹಿಸಿದ್ದಾರೆ.

ತೇಜಸ್ವಿ ಸೂರ್ಯ ಬರೆದ ಪತ್ರದಲ್ಲಿ ಏನಿದೆ?

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ, ಹೆಚ್.ಎಸ್.ಆರ್ ಲೇಔಟ್ ವಾರ್ಡ್-174ರ ಒಟ್ಟು 53 ಮತಗಟ್ಟೆಗಳಲ್ಲಿ ನಡೆದಿರುವ ಮನೆ-ಮನೆ ಮತದಾರರ ಪರಿಶೀಲನೆ ಪ್ರಕ್ರಿಯೆಯಲ್ಲಿ ಗಂಭೀರ ಲೋಪದೋಷಗಳು ಹಾಗೂ ಸಂದೇಹಾಸ್ಪದ ಚಟುವಟಿಕೆಗಳು ನಡೆದಿರುವುದು ನಮ್ಮ ಗಮನಕ್ಕೆ ಬಂದಿವೆ.ಯಾವುದೇ ಸಮರ್ಪಕ ಹಾಗೂ ದೃಢೀಕೃತ ಭೌತಿಕ ಪರಿಶೀಲನೆ ನಡೆಸದೇ, ಸುಮಾರು 13,000ಕ್ಕೂ ಅಧಿಕ ಅರ್ಹ ಮತದಾರರನ್ನು “UEF – Permanent Shifting” (ಶಾಶ್ವತವಾಗಿ ಸ್ಥಳಾಂತರಗೊಂಡವರು) ಎಂದು ದಾಖಲಿಸಲಾಗಿದೆ. ಯಾವುದೇ ಭೌತಿಕ ಪರಿಶೀಲನೆಯಿಲ್ಲದೆ ಶೇ.75ರಷ್ಟು ಮನೆ-ಮನೆ ಮತದಾರರ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ ಎಂದು ವರದಿ ಸಲ್ಲಿಸಿರುವುದು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಕುರಿತು ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ ವಿರುದ್ಧ ರಾಜ್ಯಪಾಲರಿಗೆ ದೂರು, ಏನಿದು ನೀತಿ ?

ಸಂಸದರ ಪ್ರಮುಖ ಆರೋಪಗಳೇನು?

  • ಬೂತ್ ಮಟ್ಟದ ಏಜೆಂಟ್‌ಗಳ (BLA-2) ಗಮನಕ್ಕೆ ತರದೆ, ಅವರ ಅನುಮತಿ ಹಾಗೂ ಸಹಿ ಪಡೆಯದೆ ಏಕಪಕ್ಷೀಯವಾಗಿ ಸಾವಿರಾರು ಮತದಾರರನ್ನು “Permanent Shifting” ಎಂದು ದಾಖಲಿಸಲಾಗಿದೆ.
  • ಮನೆ-ಮನೆ ಭೇಟಿಯ ಸಮಯದಲ್ಲಿ ಕಡ್ಡಾಯವಾಗಿ ಮಾಡಬೇಕಾದ GPS ಆಧಾರಿತ ಛಾಯಾಚಿತ್ರ ಗ್ರಹಣೆ ಹಾಗೂ Enumeration Sticker ಅಳವಡಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
  • ಮತದಾರರು ನಿಜವಾಗಿಯೂ ಸ್ಥಳಾಂತರಗೊಂಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಕ್ಕಪಕ್ಕದ ನಿವಾಸಿಗಳಿಂದಾಗಲಿ ಅಥವಾ ಸ್ಥಳೀಯರಿಂದಾಗಲಿ ಯಾವುದೇ ಮಾಹಿತಿ ಪಡೆಯುವ ಪ್ರಕ್ರಿಯೆಯನ್ನು BLO ಅಧಿಕಾರಿಗಳು ಅನುಸರಿಸಿಲ್ಲ.
  • ಕಳೆದ ಚುನಾವಣೆಗಳಲ್ಲಿ ಶೇ.45ರಷ್ಟು ಸರಾಸರಿ ಮತದಾನ ದಾಖಲಾಗಿರುವ ಈ ವ್ಯಾಪ್ತಿಯಲ್ಲಿ, BLO ಅಧಿಕಾರಿಗಳು ಹಲವು ಮನೆಗಳಿಗೆ ಭೇಟಿಯೇ ನೀಡಿಲ್ಲವೆಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಸಂಸದರ ಪ್ರಮುಖ ಬೇಡಿಕೆಗಳೇನು?

ಚುನಾವಣಾ ಆಯೋಗದ ಸ್ಪಷ್ಟ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ನಡೆದಿರುವ ಈ ಪ್ರಕ್ರಿಯೆಯಿಂದಾಗಿ ಸಾವಿರಾರು ಅರ್ಹ ನಾಗರಿಕರು ತಮ್ಮ ಸಂವಿಧಾನಾತ್ಮಕ ಮತದಾನದ ಹಕ್ಕಿನಿಂದ ವಂಚಿತರಾಗುವ ಭೀತಿ ಎದುರಾಗಿದೆ. ಆದ್ದರಿಂದ, ಪ್ರಜಾಪ್ರಭುತ್ವದ ಆಶಯಗಳನ್ನು ಹಾಗೂ ಮತದಾರರ ಹಕ್ಕುಗಳನ್ನು ಎತ್ತಿಹಿಡಿಯುವ ಹಿತದೃಷ್ಟಿಯಿಂದ, ಆಯೋಗವು ತಕ್ಷಣವೇ ನಿಯಮಬಾಹಿರವಾಗಿ “UEF – Permanent Shifting” ಎಂದು ದಾಖಲಿಸಲಾದ ಎಲ್ಲಾ 13,000+ ಮತದಾರರ ಮಾಹಿತಿಯನ್ನು ಮರು ಭೌತಿಕ ಪರಿಶೀಲನೆಗೆ (Re-verification) ಒಳಪಡಿಸಬೇಕು. HSR ಲೇಔಟ್ ವಾರ್ಡ್-174ರ 53 ಮತಗಟ್ಟೆಗಳಲ್ಲಿ ನಡೆದ Enumeration ಕಾರ್ಯದ ಕುರಿತು ತಕ್ಷಣವೇ ಉನ್ನತ ಮಟ್ಟದ ಸಮಗ್ರ ತನಿಖೆಗೆ ಆದೇಶಿಸಬೇಕು. ಕರ್ತವ್ಯ ಲೋಪ ಎಸಗಿದ ಹಾಗೂ ಸುಳ್ಳು ವರದಿ ಸಲ್ಲಿಕೆಗೆ ಕಾರಣರಾದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಅವೇಂಜರ್ಸ್ ಡೂಮ್​​ಸ್ಡೇ’: ಒಬ್ಬನ ಎದುರಿಸಲು ಒಗ್ಗೂಡಿದ ಎಲ್ಲ ಸೂಪರ್​​ ಹೀರೋಗಳು – Kannada News | Avengers Doomsday movie trailer release, movie to be released in December

ಅವೇಂಜರ್ಸ್’ (Avengers), ವಿಶ್ವ ಸಿನಿಮಾ ರಂಗದ ಬಲು ಅದ್ಧೂರಿ ಆಕ್ಷನ್ ಸಿನಿಮಾ. ಈ ವರೆಗೆ ‘ಅವೇಂಜರ್ಸ್’ ಸರಣಿಯ ನಾಲ್ಕು ಸಿನಿಮಾಗಳು ಬಿಡುಗಡೆ ಆಗಿದ್ದು, ಈ ನಾಲ್ಕೂ ಸಿನಿಮಾಗಳು ದಾಖಲೆ ಮೊತ್ತದ ಗಳಿಕೆ ಮಾಡಿವೆ. ಅವೇಂಜರ್ಸ್ ಎಂಬುದು ಹಲವು ಸೂಪರ್ ಹೀರೋಗಳ ಗುಂಪಾಗಿದ್ದು, ಎಲ್ಲರೂ ಸೇರಿ ವಿಲನ್ ವಿರುದ್ಧ ಹೊಡೆದಾಡುವ ಕತೆಗಳನ್ನು ಈ ಸಿನಿಮಾಗಳು ಹೊಂದಿದ್ದರು. ಈ ಸಿನಿಮಾ ಸರಣಿಯ ಜನಪ್ರಿಯ ವಿಲನ್ ಥ್ಯಾನೋಸ್. ಆದರೆ ಇದೀಗ ‘ಅವೇಂಜರ್ಸ್’ ಸರಣಿಯ ಐದನೇ ಸಿನಿಮಾ ಬರುತ್ತಿದ್ದು, ಮಾರ್ವೆಲ್ ಯೂನಿವರ್ಸ್​​ನಲ್ಲಿರುವ ಎಲ್ಲ ಸೂಪರ್ ಹೀರೋಗಳು ಒಟ್ಟು ಸೇರಿ ಒಬ್ಬ ವಿಲನ್ ವಿರುದ್ಧ ಹೋರಾಟಕ್ಕೆ ನಿಂತಿವೆ.

‘ಅವೆಂಜರ್ಸ್: ಡೂಮ್ಸ್‌ಡೇ’ ಹೆಸರಿನ ಸಿನಿಮಾ ನಿರ್ಮಾಗೊಂಡಿದ್ದು, ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾನಲ್ಲಿ ಅವೇಂಜರ್ಸ್, ಥ್ಯಾನೋಸ್​​ಗಿಂತಲೂ ನೂರು ಪಟ್ಟು ಶಕ್ತಿಶಾಲಿ ವಿಲನ್ ಅನ್ನು ಎದುರಿಸುತ್ತಿದ್ದಾರೆ. ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಟ್ರೈಲರ್​​ನಲ್ಲಿ ತೋರಿಸಿರುವಂತೆ ಮಾರ್ವೆಲ್ ಯೂನಿವರ್ಸ್​​​ನಲ್ಲಿರುವ ಎಲ್ಲ ಸೂಪರ್ ಹೀರೋಗಳು ಒಟ್ಟಿಗೆ ಸೇರಿದ್ದು, ಒಬ್ಬ ಮಹಾನ್ ಶಕ್ತಿಶಾಲಿ ವಿಲನ್ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ. ವಿಶೇಷವೆಂದರೆ, ‘ಅವೇಂಜರ್ಸ್: ಎಂಡ್​​ಗೇಮ್’ನಲ್ಲಿ ಅವೇಂಜರ್ಸ್ ತಂಡದಿಂದ ನಿವೃತ್ತಿ ಪಡೆದಿದ್ದ ಕ್ಯಾಪ್ಟನ್ ಅಮೆರಿಕ ಸಹ ವಿಲನ್ ವಿರುದ್ಧ ಹೋರಾಡಲು ಮರಳಿ ಬಂದಿದ್ದಾನೆ.

ಈ ಬಾರಿ ಅವೇಂಜರ್ಸ್ ಗುಂಪನ್ನು ಥಾರ್ ಮುನ್ನಡೆಸುತ್ತಿದ್ದು, ಎಲ್ಲ ಸೂಪರ್ ಹೀರೋಗಳನ್ನು ಸಹ ಆತ ಒಟ್ಟಿಗೆ ಸೇರಿಸಿದ್ದಾನೆ. ಲೋಕಿ, ಕ್ಯಾಪ್ಟನ್ ಅಮೆರಿಕ, ಬ್ಲಾಕ್ ಪ್ಯಾಂಥರ್, ಆಂಟ್​ಮ್ಯಾನ್, ಬ್ಲಾಕ್ ಕ್ಯಾಪ್ಟನ್ ಅಮೆರಿಕ, ಬಕಿ, ಫೆಂಟಾಸ್ಟಿಕ್ ಫೈವ್ ತಂಡದ ಎಲ್ಲ ಸದಸ್ಯರು, ಹ್ಯೂಮನ್ ಟಾರ್ಚ್, ಶಾಂಗ್ ಚೀ, ಮೆಗ್ನಿಟೊ, ಡೆಡ್​​ಪೂಲ್ ಇನ್ನೂ ಹಲವಾರು ಸೂಪರ್ ಹೀರೋಗಳು ಕೇವಲ ಒಬ್ಬ ವಿಲನ್ ಎದುರು ಹೊಡೆದಾಲು ಒಂದಾಗಿದ್ದಾರೆ. ಅಂದಹಾಗೆ ಈ ಸೂಪರ್​​ ಹೀರೋಗಳೆಲ್ಲ ಒಂದಾಗಿರುವುದು ವಿಕ್ಟರ್ ವೋಮ್ ಡೂಮ್​​ಸ್ಡೇ ಎಂಬ ವಿಲನ್ ಜೊತೆ ಹೋರಾಡಲು.

ಇದನ್ನೂ ಓದಿ:ಬಿಡುಗಡೆ ಆಯ್ತು ‘ಸ್ಪೈಡರ್ ಮ್ಯಾನ್’ ಟ್ರೈಲರ್, ಗೆಳೆಯರೇ ಈಗ ಶತ್ರುಗಳು

‘ಅವೇಂಜರ್ಸ್: ಡೂಮ್​ಸ್ಡೇ’ ಸಿನಿಮಾನಲ್ಲಿ ಮುಖ್ಯ ವಿಲನ್ ಆಗಿರುವ ವಿಕ್ಟರ್ ವೋಮ್ ಡೂಮ್​​ಸ್ಡೇ ಪಾತ್ರದಲ್ಲಿ ರಾಬರ್ಟ್ ಡೌನಿ ಜೂನಿಯರ್ ನಟಿಸಿದ್ದಾರೆ. ಅವರು ನಟಿಸುತ್ತಿದ್ದ ಐರನ್ ಮ್ಯಾನ್ ಪಾತ್ರ ‘ಅವೇಂಜರ್ಸ್: ಎಂಡ್​​ಗೇಮ್’ ಸಿನಿಮಾನಲ್ಲಿ ಸತ್ತು ಹೋಗಿದ್ದು, ಇದೀಗ ರಾಬರ್ಟ್ ಅವರು ಡೂಮ್​​ಸ್ಡೇ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ಥಾರ್ ಪಾತ್ರದ ಹಿನ್ನೆಲೆ ಧ್ವನಿ ಇದ್ದು, ‘ನಾನು ಈ ವರೆಗೆ ಮಹಾನ್ ವಿಲನ್​ಗಳ ಜೊತೆ ಹೋರಾಡಿದ್ದೀನಿ, ನನಗಿಂತಲೂ ಹಲವು ಪಟ್ಟು ಶಕ್ತಿಶಾಲಿಗಳೊಟ್ಟಿಗೆ ಹೋರಾಡಿದ್ದೀನಿ, ಆದರೆ ನನಗೆ ಭಯವಾಗಿಲ್ಲ. ಆದರೆ ಮೊದಲ ಬಾರಿಗೆ ಈತನ ಎದುರಿಸಲು ಭಯವಾಗುತ್ತಿದೆ’ ಎಂದಿದ್ದಾನೆ. ಈ ಸಂಭಾಷಣೆ, ಡೂಮ್​​ಸ್ಡೇ ಪಾತ್ರಕ್ಕಿರುವ ಶಕ್ತಿಯ ಸುಳಿವು ನೀಡುತ್ತಿದೆ. ಸಿನಿಮಾ ಡಿಸೆಂಬರ್ 18ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಾಲಿವುಡ್‌ ಸುವರ್ಣಯುಗಕ್ಕೆ ಕರೆದೊಯ್ದ ‘ಅಲಂಕೃತ್‌’ ನೃತ್ಯ ಸಂಸ್ಥೆಯ ‘ಸದಾಬಹಾರ್‌’ ಕಲಾ ವೈಭವ – Kannada News | Sadabahar Dance Festival 2026: Alankruth Artists Revive Bollywood Golden Era in Bengaluru

ಬೆಂಗಳೂರು ಜುಲೈ 21: ಇಂದಿನ ಡಿಜಿಟಲ್ ಯುಗದ ಏಕತಾನತೆಯ ನಡುವೆ, ನೃತ್ಯ ಪ್ರೇಮಿಗಳನ್ನು ಐದು ದಶಕಗಳ ಹಿಂದಿನ ಸುಮಧುರ ನೆನಪುಗಳ ಲೋಕಕ್ಕೆ ಕರೆದೊಯ್ಯುವಲ್ಲಿ ‘ಅಲಂಕೃತ್‌’ ನೃತ್ಯ ಸಂಸ್ಥೆಯ ಕಲಾವಿದೆಯರು ಯಶಸ್ವಿಯಾಗಿದ್ದಾರೆ. ವಿದುಷಿ ಪೂರ್ಣ ಆಚಾರ್ಯ ಅವರ ಸಾರಥ್ಯದಲ್ಲಿ ಶನಿವಾರ ಸಂಜೆ (ಜುಲೈ 18) ಬೆಂಗಳೂರಿನ ಮೀನಾಕ್ಷಿ ರಂಗಮಂಚ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸದಾಬಹಾರ್‌ ನೃತ್ಯೋತ್ಸವ–2026’ ಪ್ರೇಕ್ಷಕರ ಅಪಾರ ಪ್ರಶಂಸೆಗೆ ಪಾತ್ರವಾಯಿತು.

ವೇದಿಕೆಯಲ್ಲಿ ಮರುಜೀವ ಪಡೆದ ಹಳೆಯ ಮಧುರ ಗೀತೆಗಳು

ಬಾಲಿವುಡ್‌ನ ಸುವರ್ಣಯುಗದ ಜನಪ್ರಿಯ ಮತ್ತು ಸಾರ್ವಕಾಲಿಕ ಮಧುರ ಗೀತೆಗಳಿಗೆ ಕಲಾವಿದೆಯರು ಅದ್ಭುತವಾಗಿ ಹೆಜ್ಜೆ ಹಾಕಿದರು. ಆಕರ್ಷಕ ನೃತ್ಯ ಸಂಯೋಜನೆ, ನಿಖರವಾದ ಲಯ ಹಾಗೂ ಭಾವಪೂರ್ಣ ಅಭಿನಯದ ಮೂಲಕ ಇಡೀ ಸಭಾಂಗಣದಲ್ಲಿ ನಾಸ್ಟಾಲ್ಜಿಯಾ ಮೂಡಿಸುವಲ್ಲಿ ಯಶಸ್ವಿಯಾದರು. ಈ ಪ್ರದರ್ಶನದ ಮೂಲಕ ಹಿರಿಯರು ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡರೆ, ಯುವ ಪೀಳಿಗೆಯು ಹಳೆಯ ಸಂಗೀತದ ಸೌಂದರ್ಯವನ್ನು ಕಣ್ತುಂಬಿಕೊಂಡಿತು.

ಸದಾಬಹಾರ್‌ ನೃತ್ಯೋತ್ಸವ–2026

ಗುರು–ಶಿಷ್ಯ ಪರಂಪರೆಯ ಶ್ರೇಷ್ಠ ಪ್ರದರ್ಶನ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಸಿದ್ಧ ತಬಲಾ ವಾದಕ ಪಂಡಿತ್‌ ಸತೀಶ್‌ ಹಂಪಿಹೊಳಿ ಅವರು, ‘ನಮ್ಮ ಗುರು–ಶಿಷ್ಯ ಪರಂಪರೆಗೆ ಅದ್ಭುತ ಇತಿಹಾಸವಿದೆ. ಕಲಾವಿದೆಯೂ, ಸಂಘಟಕರೂ ಆಗಿರುವ ಪೂರ್ಣ ಆಚಾರ್ಯ ಅವರು ಇಡೀ ಕಾರ್ಯಕ್ರಮವನ್ನು ಅತ್ಯಂತ ವಿನೂತನವಾಗಿ ರೂಪಿಸಿದ್ದಾರೆ. ಕಲೆಯ ಮೇಲಿರುವ ಅವರ ಬದ್ಧತೆಯೇ ಈ ಅದ್ಭುತ ಯಶಸ್ಸಿಗೆ ಕಾರಣ’ ಎಂದು ಶ್ಲಾಘಿಸಿದರು.

ಇದೇ ವೇಳೆ ಮಾತನಾಡಿದ ಖ್ಯಾತ ವಿದ್ವಾಂಸ ಜಗದೀಶ ಶರ್ಮಾ ಸಂಪ ಅವರು, ‘ಈ ಕಾರ್ಯಕ್ರಮದ ಪ್ರತಿಯೊಂದು ಪ್ರಸ್ತುತಿಯಲ್ಲೂ ವೈವಿಧ್ಯತೆಯಿತ್ತು. ಬಣ್ಣ, ನೃತ್ಯ, ಸಂಗೀತ ಎಲ್ಲವೂ ವಿಭಿನ್ನವಾಗಿದ್ದರೂ, ಪೂರ್ಣ ಆಚಾರ್ಯ ಅವರ ಸಮರ್ಥ ಸಂಯೋಜನೆಯಿಂದಾಗಿ ಇಡೀ ನೃತ್ಯೋತ್ಸವ ಒಂದು ಪರಿಪೂರ್ಣ ಕಲಾಕೃತಿಯಾಗಿ ಮೂಡಿಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮನ ಸೆಳೆದ ‘ಮಧುರಾಷ್ಟಕಂ’ ಕಥಕ್ ಪ್ರದರ್ಶನ

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಜಗದ್ಗುರು ಶ್ರೀ ವಲ್ಲಭಾಚಾರ್ಯರ ‘ಮಧುರಾಷ್ಟಕಂ’ ಸ್ತೋತ್ರಕ್ಕೆ ಕಥಕ್ ಶೈಲಿಯಲ್ಲಿ ಮೂಡಿಬಂದ ಭಾವಾಭಿನಯವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಇದರೊಂದಿಗೆ ವೇದಿಕೆಯ ಮೇಲೆ ಪ್ರದರ್ಶನಗೊಂಡ ಶಿವ–ಪಾರ್ವತಿ ನೃತ್ಯರೂಪಕ ಸೇರಿದಂತೆ ಪ್ರತಿಯೊಂದು ನೃತ್ಯವೂ ಹೊಸತನದಿಂದ ಕೂಡಿತ್ತು. ವೇಷಭೂಷಣ, ಸಾಹಿತ್ಯ ಹಾಗೂ ಬೆಳಕಿನ ವಿನ್ಯಾಸದ ಸುಂದರ ಸಂಗಮದೊಂದಿಗೆ ‘ಸದಾಬಹಾರ್‌’ ನೃತ್ಯೋತ್ಸವವು ಪ್ರೇಕ್ಷಕರ ಮನದಲ್ಲಿ ಸದಾ ಹಸಿರಾಗಿ ಉಳಿಯುವಂತಹ ಅನುಭವ ನೀಡಿತು.

ಇದನ್ನೂ ಓದಿ:

ಈ ಸಾಂಸ್ಕೃತಿಕ ಸಂಜೆಯಲ್ಲಿ ವಿದುಷಿ ಪೂರ್ಣ ಆಚಾರ್ಯ, ಶ್ರೀರಾಮದಾಸ ಆಚಾರ್ಯ, ಯಶವಂತ ರಾವ್‌, ಉದಯಕುಮಾರ್‌, ಭಾಸ್ಕರ್‌, ನಟಿ ರಾಧಿಕಾ ನಾರಾಯಣ್‌ ಹಾಗೂ ಖ್ಯಾತ ವಿದ್ವಾಂಸರಾದ ಜಗದೀಶ ಶರ್ಮಾ ಸಂಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:36 pm, Tue, 21 July 26

Source link

ಶಿವಾಜಿನಗರದಲ್ಲಿ ಫುಟ್​ಪಾತ್ ತೆರವು: ಪೂರ್ವ ಮಾಹಿತಿ ಇಲ್ಲದೆ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ – Kannada News | Shivaji Nagar Footpath Clearance: Traders Allege Sudden Eviction Without Notice

ಬೆಂಗಳೂರು, ಜುಲೈ 21: ಶಿವಾಜಿನಗರದಲ್ಲಿ ನಡೆದ ಫುಟ್​​ಪಾತ್​​ ಒತ್ತುವರಿ ತೆರವು ಕಾರ್ಯಾಚಾರಣೆ ವೇಳೆ ಭಾರಿ ಹೈಡ್ರಾಮಾವೇ ನಡೆದಿದೆ. ಜಿಬಿಎ ಸಿಬ್ಬಂದಿ ಮೇಲೆ ದಾಳಿ ನಡೆಸಿರುವ ಆರೋಪದ ಹಿನ್ನೆಲೆ ಹಲವರನ್ನು ವಶಕ್ಕೆ ಪಡೆದಿರುವ ನಡುವೆ ಅಧಿಕಾರಿಗಳ ವಿರುದ್ಧವೇ ವ್ಯಾಪಾರಿಗಳು ಗಂಭೀರ ಆರೋಪ ಮಾಡಿದ್ದಾರೆ. ನಮಗೆ ಒಂದು ನಿಮಿಷದ ಸಮಯವನ್ನೂ ನೀಡಿಲ್ಲ. ನಮ್ಮ ಫ್ರಿಡ್ಜ್, ಶೋಕೇಸ್ ಮತ್ತು ಇತರೆ ವ್ಯಾಪಾರದ ವಸ್ತುಗಳು ಸಂಪೂರ್ಣ ಪುಡಿಪುಡಿಯಾಗಿ ಹಾಳಾಗಿವೆ ಎಂದು ದೂರಿದ್ದಾರೆ. ಅರ್ಧ ಗಂಟೆ ಕಾಲಾವಕಾಶವನ್ನೂ ನೀಡದೆ ಬುಲ್ಡೋಜರ್ ಹಾಕಿ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ತಮ್ಮ ಜೀವ ಉಳಿಸಿಕೊಳ್ಳಲು ಸ್ಥಳದಿಂದ ಹೊರ ಓಡಿ ಬಂದಿದ್ದೇವೆ ಎಂದವರು ದೂರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜಿಬಿಎ ಇಂಜಿನಿಯರ್‌ಗಳ ಮೇಲೆ ಹೆಲ್ಮೆಟ್‌, ಪೆಪ್ಪರ್ ಸ್ಪ್ರೇ ದಾಳಿ: ಹಲ್ಲೆಗೆ ಹೆದರದೆ ಮತ್ತೆ ಅಖಾಡಕ್ಕಿಳಿದ ಜಿಬಿಎ ಪಡೆ – Kannada News | Shivajinagar Assault: GBA Officers Pepper Sprayed During Encroachment Drive

ಬೆಂಗಳೂರು, ಜು. 21: ರಾಜಧಾನಿ ಬೆಂಗಳೂರಿನ ಶಿವಾಜಿನಗರ ಪ್ರದೇಶದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಇಂಜಿನಿಯರ್‌ಗಳ ಮೇಲೆ ಹೆಲ್ಮೆಟ್ ಹಾಗೂ ಪೆಪ್ಪರ್ ಸ್ಪ್ರೇ ಬಳಸಿ ಭೀಕರ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ನಡೆದಿದೆ. ಈ ಕೃತ್ಯದ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ.

ಶಿವಾಜಿನಗರದಲ್ಲಿ ಫುಟ್‌ಪಾತ್ ತೆರವುಗೊಳಿಸಲು ಹೋದ ವೇಳೆ, ಕೆಲವರು ಗುಂಪು ಸೇರಿಸಿಕೊಂಡು ಜಿಬಿಎ ಸಹಾಯಕ ಕಾರ್ಯಪಾಲಕ ಅಭಿಯಂತರ ಮಾಧವ ರಾವ್, ಸಹಾಯಕ ಅಭಿಯಂತರ ಗೌತಮ್ ಅವರ ಮೇಲೆ ಹೆಲ್ಮೆಟ್‌ಗಳಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಇಷ್ಟಕ್ಕೇ ನಿಲ್ಲದ ಕಿಡಿಗೇಡಿಗಳು, ಸ್ಥಳದಲ್ಲಿದ್ದ ಮಹಿಳಾ ಇಂಜಿನಿಯರ್ ರುಚಿತಾ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಎರಚಿದ್ದಾರೆ. ಅಲ್ಲದೆ ಕಾರ್ಯಾಚರಣೆಯಲ್ಲಿದ್ದ ಜೆಸಿಬಿ ಚಾಲಕನಿಗೂ ಸ್ಪ್ರೇ ಎರಚಲು ಯತ್ನಿಸಿದ್ದಾರೆ. ಹಲ್ಲೆಗೊಳಗಾದ ಅಧಿಕಾರಿಗಳು ತಕ್ಷಣವೇ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ನಿರ್ಧರಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

‘ಓಟ್ ಬ್ಯಾಂಕ್‌ಗಾಗಿ ಸರ್ಕಾರ ಮೌನ’: ಆರ್. ಅಶೋಕ್

ಅಧಿಕಾರಿಗಳ ಮೇಲೆ ನಡೆದ ಈ ಮಾರಣಾಂತಿಕ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯ ಸರ್ಕಾರದ ವಿರುದ್ಧ ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ವಾಗ್ದಾಳಿ ನಡೆಸಿದ್ದಾರೆ. “ಶಿವಾಜಿನಗರದಲ್ಲಿ ಒತ್ತುವರಿ ತೆರವು ವೇಳೆ ಅಧಿಕಾರಿಯ ಮೇಲೆಯೇ ಹಲ್ಲೆ ನಡೆದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿ. ಬೇರೆ ಭಾಗಗಳಲ್ಲಿ ತೆರವು ವೇಳೆ ಕ್ಯಾಮೆರಾ ಮುಂದೆ ‘ರೀಲ್ಸ್’ ಮಾಡುವ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರೇ, ಈಗ ನಿಮ್ಮ ಮೌನ ಏಕೆ? ನಿಮ್ಮ ಓಟ್‌ ಬ್ಯಾಂಕ್ ರಾಜಕೀಯವೇ ಕಾನೂನಿಗಿಂತ ದೊಡ್ಡದಾಗಿದೆಯೇ?” ಎಂದು ಆರ್. ಅಶೋಕ್ ಪ್ರಶ್ನಿಸಿದ್ದಾರೆ.

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್

“ಕಾನೂನು ಪಾಲನೆ ಮಾಡುವ ಅಧಿಕಾರಿಗಳಿಗೆ ರಕ್ಷಣೆ ನೀಡಲಾಗದ ಸರ್ಕಾರವಿದ್ದರೆ ದುಷ್ಕರ್ಮಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಶಿವಾಜಿನಗರದಲ್ಲಿ ಒತ್ತುವರಿ ತೆರವು ಮಾಡಲು ಸರ್ಕಾರಕ್ಕೆ ಧೈರ್ಯವಿಲ್ಲವೇ? ರಾಜ್ಯದಲ್ಲಿ ಎರಡು ರೀತಿಯ ಕಾನೂನು ಇದೆಯೇ? ತಕ್ಷಣವೇ ದೋಷಿಗಳನ್ನು ಬಂಧಿಸಿ ಅಧಿಕಾರಿಗಳಿಗೆ ರಕ್ಷಣೆ ನೀಡಿ” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಶಿವಾಜಿನಗರ ಹಲ್ಲೆ ಪ್ರಕರಣ: ಇವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡಜನರಲ್ಲ, ಸಮಾಜಘಾತುಕರು; ಸಚಿವ ಕೃಷ್ಣಭೈರೇಗೌಡ ಕಿಡಿ

ಪೋಲಿಸ್ ಬಂದೋಬಸ್ತ್‌ನಲ್ಲಿ ಮತ್ತೆ ಬಿರುಸಿನ ಕಾರ್ಯಚರಣೆ:

ಇದರ ನಡುವೆ ಮಧ್ಯಾಹ್ನದ ವೇಳೆಗೆ ಜಿಬಿಎ ಆಡಳಿತ ಮಂಡಳಿ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಬೃಹತ್ ಕಾರ್ಯಾಚರಣೆಯನ್ನು ಪುನಃ ಆರಂಭಿಸಿತು. ಕೇಂದ್ರ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಹಾಗೂ ಜಿಬಿಎ ಯೂನಿಯನ್ ಅಧ್ಯಕ್ಷ ಅಮೃತ್ ರಾಜ್ ಅವರ ನೇತೃತ್ವದಲ್ಲಿ, ಸ್ಥಳಕ್ಕೆ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿ ತೆರವು ಕಾರ್ಯ ಮುಂದುವರಿಸಲಾಯಿತು. ಹಲ್ಲೆಗೆ ಜಗ್ಗದೆ, ಸ್ಥಳದಲ್ಲಿದ್ದ ಉಳಿದ ಅಕ್ರಮ ಅಂಗಡಿ ಮುಂಗಟ್ಟು ಹಾಗೂ ಒತ್ತುವರಿ ಜಾಗಗಳನ್ನು ಜೆಸಿಬಿ ಯಂತ್ರಗಳ ಮೂಲಕ ಸಂಪೂರ್ಣವಾಗಿ ಧ್ವಂಸಗೊಳಿಸಿ ಫುಟ್‌ಪಾತ್ ಮುಕ್ತಗೊಳಿಸಲಾಯಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ ವಿರುದ್ಧ ರಾಜ್ಯಪಾಲರಿಗೆ ದೂರು, ಏನಿದು ನೀತಿ ? – Kannada News | Complaints To Governor Against Karnataka Government bilingual policy in Karnataka, What Is bilingual policy

ಬೆಂಗಳೂರು, (ಜುಲೈ 21): ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯದ ಎಲ್ಲಾ ಶಾಲೆಗಳಲ್ಲಿ 1 ರಿಂದ 5ನೇ ತರಗತಿವರೆಗೆ ದ್ವಿಭಾಷಾ ನೀತಿ (bilingual policy) ಜಾರಿಗೆಗೆ ಸರ್ಕಾರ ಮುಂದಾಗಿದ್ದು, ಮತ್ತೊಂದೆಡೆ ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಸರ್ಕಾರಿ ಶಾಲೆಗಳಲ್ಲಿ 5ನೇ ತರಗತಿವರೆಗೆ ದ್ವಿಭಾಷಾ ನೀತಿ ಜಾರಿಗೆ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಿಯೋಗ ಇಂದು (ಜುಲೈ 21) ಲೋಕಭವನದಲ್ಲಿ ಗವರ್ನರ್ ಥಾವರ್ ಚೆಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ದೂರು ನೀಡಿದೆ. ಕನ್ನಡ ಭಾಷೆಯನ್ನು ತೆರೆಮರೆಗೆ ಸರಿಸುವ ಕುತಂತ್ರವಾಗಿದೆ. ಹೀಗಾಗಿ ಇದಕ್ಕೆ ಅವಕಾಶ ನೀಡಬೇಡಿ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಿಯೋಗವು ರಾಜ್ಯಪಾಲರಿಗೆ ಮನವಿ ಮಾಡಿದೆ.

ಹಾಲಿ ನಮ್ಮಲ್ಲಿ ತ್ರಿಭಾಷಾ ನೀತಿ ಜಾರಿಯಲ್ಲಿದೆ. ಪ್ರಥಮ-ಕನ್ನಡ, ದ್ವಿತೀಯ-ಆಂಗ್ಲಭಾಷೆ ಮತ್ತು ತೃತೀಯ-ಹಿಂದಿ ಭಾಷೆ ಬೋಧನೆ ಮಾಡಲಾಗುತ್ತಿದೆ. ದ್ವಿಭಾಷಾ ನೀತಿ ಜಾರಿಗೆ ಬಂದ ಮೇಲೆ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಪ್ರಥಮ ಹಾಗೂ ದ್ವಿತೀಯ ಆಂಗ್ಲ ಮಾಧ್ಯಮವಾಗಿ ಮಾತ್ರ ವ್ಯಾಸಂಗ ಮಾಡುತ್ತಾರೆ. ತೃತೀಯ ಭಾಷೆ ಇರುವುದಿಲ್ಲ. ಇನ್ನು, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಭಾಷೆಯನ್ನು ಪ್ರಥಮ ಭಾಷೆಯಾಗಿ ವ್ಯಾಸಂಗ ಮಾಡಲಿದ್ದು, ಕನ್ನಡವನ್ನು ದ್ವಿತೀಯ ಭಾಷೆಯಾಗಿ ವ್ಯಾಸಂಗ ಮಾಡುತ್ತಾರೆ.

ಇದನ್ನೂ ಓದಿ: ಶಾಲಾ ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಸೇರಿದಂತೆ ಹಲವು ಶಿಫಾರಸು ಮಾಡಿದ ಎಸ್​ಇಪಿ

ದ್ವಿಭಾಷಾ ನೀತಿಗೆ ರಾಜ್ಯ ಶಿಕ್ಷಣ ನೀತಿ ಶಿಫಾರಸ್ಸು

ಪ್ರಾಥಮಿಕ ಶಿಕ್ಷಣದ ಎಲ್ಲಾ ಮಾದರಿಯ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ 5ನೇ ತರಗತಿವರೆಗೆ ಕನ್ನಡ ಅಥವಾ ಮಾತೃ ಭಾಷೆ ಮತ್ತು ದ್ವಿಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸುವಂತೆ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಆಯೋಗ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ. ಆಯೋಗದ ಅಧ್ಯಕ್ಷ ಪ್ರೊ. ಸುಖ್‌ದೇವ್‌ ಥೋರಟ್‌ ನೇತೃತ್ವದ ನಿಯೋಗ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.

ಶಿಫಾರಸ್ಸಿನಲ್ಲೇನಿದೆ?

ಇತ್ತೀಚಿನ ದಿನಗಳಲ್ಲಿ ಬೋಧನಾ ಮಾಧ್ಯಮ ಮತ್ತು ತ್ರಿಭಾಷಾ ಸೂತ್ರದ ವಿಷಯ ವಿವಾದ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮ ಸೇರಿದಂತೆ ಎಲ್ಲಾ ಮಂಡಳಿಗಳ ಶಾಲೆಗಳಲ್ಲಿ 5ನೇ ತರಗತಿವರೆಗೆ ಕನ್ನಡ, ಮಾತೃಭಾಷೆಯನ್ನೇ ಬೋಧನೆ ಮಾಡುವುದನ್ನು ಕಡ್ಡಾಯಗೊಳಿಸಬೇಕೆಂದು ಆಯೋಗ ತನ್ನ ವರದಿಯಲ್ಲಿ ಸಲಹೆ ನೀಡಿದೆ. ಅಲ್ಲದೆ, ದ್ವಿಭಾಷಾ ನೀತಿ ಅನುಷ್ಠಾನ ಮಾಡುವುದು ಸೂಕ್ತ. ಕನ್ನಡ ಅಥವಾ ಮಾತೃ ಭಾಷೆ ಜತೆಗೆ ಇಂಗ್ಲಿಷ್‌ ಭಾಷೆಯನ್ನು ಬೋಧಿಸುವುದು ಉತ್ತಮ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಆ ಮೂಲಕ ಆಯೋಗವು ಪರೋಕ್ಷವಾಗಿ ತ್ರಿಭಾಷಾ ನೀತಿ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸಿದೆ. ಅದೇ ರೀತಿ ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ವಿಭಾಗಗಳಲ್ಲಿ ಆಯೋಗ ಸರಕಾರಕ್ಕೆ ಪ್ರತ್ಯೇಕ ಶಿಫಾರಸುಗಳನ್ನು ಮಾಡಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದ ವೇಳೆ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರದ್ದುಗೊಳಿಸಿ ಎಸ್‌ಇಪಿ ಜಾರಿಗೆ ತರುವುದಾಗಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುವ ಮೊದಲೇ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಿಸಿತ್ತು. ಆನಂತರ ಅಕಾರಕ್ಕೆ ಬಂದ ತಕ್ಷಣ 2023ರ ಅಕ್ಟೋಬರ್‌ನಲ್ಲಿ ರಾಜ್ಯ ಶಿಕ್ಷಣ ಆಯೋಗವನ್ನು ಶಿಕ್ಷಣ ತಜ್ಞ ಪ್ರೊ. ಸುಖ್‌ದೇವ್‌ ಥೋರಟ್‌ ಅಧ್ಯಕ್ಷತೆಯಲ್ಲಿ ರಚಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಿವಾಜಿನಗರ ಹಲ್ಲೆ ಪ್ರಕರಣ: ಇವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡಜನರಲ್ಲ, ಸಮಾಜಘಾತುಕರು; ಸಚಿವ ಕೃಷ್ಣಭೈರೇಗೌಡ ಕಿಡಿ – Kannada News | Shivajinagar Assault Case: ‘They Are Not Poor, They Are Anti Social Elements,’ Minister Krishna Byre Gowda Slams Attackers; 7 Detained

ಸಚಿವ ಕೃಷ್ಣಬೈರೇಗೌಡ ಕಿಡಿImage Credit source: Tv9 Kannada

ಬೆಂಗಳೂರು, ಜುಲೈ 21: ಜಿಬಿಎ ವತಿಯಿಂದ ನಡೆದ ಫುಟ್​ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಸಿಬ್ಬಂದಿ ಮೇಲೆ ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಹಲ್ಲೆ ನಡೆಸಿರುವ ಆರೋಪ ಶಿವಾಜಿನಗರದಲ್ಲಿ ಕೇಳಿಬಂದಿದೆ. ಈ ಬಗ್ಗೆ ಕಿಡಿ ಕಾರಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಇವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡಜನರಲ್ಲ. ಇವರು ಸಮಾಜಘಾತುಕ ಶಕ್ತಿಗಳು ಎಂದಿದ್ದಾರೆ. ಸರ್ಕಾರಿ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ ಪ್ರತಿಯೊಬ್ಬರನ್ನೂ ಬಂಧಿಸಲಾಗುವುದು ಈ ಬಗ್ಗೆ ಪೊಲೀಸ್ ಆಯುಕ್ತರು ಮತ್ತು ಜಿಬಿಎ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದವರು ತಿಳಿಸಿದ್ದಾರೆ.

ಸಚಿವ ಕೃಷ್ಣ ಭೈರೇಗೌಡರು ಹೇಳಿದ್ದೇನು?

ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವನ್ನು ಜಾರಿಗೊಳಿಸುವಾಗ ಸರ್ಕಾರಿ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವುದು ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ. ಕಾನೂನಿನಂತೆ ಸಾರ್ವಜನಿಕ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಪರವಾಗಿ ನಾವು ದೃಢವಾಗಿ ನಿಲ್ಲುತ್ತೇವೆ. ಸಾರ್ವಜನಿಕ ಕರ್ತವ್ಯದಲ್ಲಿರುವ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವ ಯಾರನ್ನೂ ಸಹ ನಾವು ಬಿಡುವುದಿಲ್ಲ. ನಾನು ಜಿಬಿಎ (GBA) ಮತ್ತು ಪೊಲೀಸರೊಂದಿಗೆ ಸತತ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇನೆ. ಅಲ್ಲದೆ ನಾವು ಒಟ್ಟಾಗಿ ಮಾದರಿಯಾಗುವಂತಹ ಕಠಿಣ ಕ್ರಮಗಳನ್ನು ಜರುಗಿಸುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಾಜಿನಗರದಲ್ಲಿ ಫುಟ್​ಪಾತ್ ತೆರವು ಕಾರ್ಯಾಚರಣೆ ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ ಆರೋಪ

ಅಧಿಕಾರಿಗಳ ಮೇಲೆ ದಾಳಿ ಸಂಬಂಧ 7 ಜನ ವಶಕ್ಕೆ

ಫುಟ್​ಪಾತ್​ ತೆರವು ವೇಳೆ ಅಧಿಕಾರಿಗಳ ಮೇಲೆ ದಾಳಿ ಸಂಬಂಧ 7 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಹಲ್ಲೆ ನಡೆದಿರುವ ಬಗ್ಗೆ ಎಇಇ ಮಾಧವ ರಾವ್ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಲಾಗಿದೆ. ವಿಶೇಷ ತಂಡ ರಚಿಸಿ ತನಿಖೆ ಮಾಡುತ್ತೇವೆ. ರಕ್ಷಣೆ ಕೋರಿ ಅಧಿಕಾರಿಗಳು ಮನವಿ ಸಲ್ಲಿಸಿದ್ದ ಬಗ್ಗೆ ಪರಿಶೀಲಿಸುತ್ತೇವೆ. ಕಾನೂನು ಕೈಗೆ ತೆಗೆದುಕೊಳ್ಳೋಕೆ ಯಾರಿಗೂ ಹಕ್ಕಿಲ್ಲ. ಯಾರೇ ತಪ್ಪು ಮಾಡಿದರೂ ಅವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:48 pm, Tue, 21 July 26

Source link

Exit mobile version