ಬಟ್ಟೆ ಬಿಚ್ಚಿ ದೇವಸ್ಥಾನಕ್ಕೆ ನುಗ್ಗಿ, ದೇವಿಯ ವಿಗ್ರಹದ ಜೊತೆ ಕೆರೆಗೆ ಹಾರಿದ ಸಾಫ್ಟ್​ವೇರ್ ಇಂಜಿನಿಯರ್! – Kannada News | Hyderabad Software Engineer Enters Temple without Cloth, Takes Goddess Idol, Jumps Into Pond, dies

ಹೈದರಾಬಾದ್, ಜುಲೈ 19: ಆಕೆಯ ಹೆಸರು ತೇಜಸ್ವಿನಿ. ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ದೇವಪಲ್ಲಿ ಮೂಲದ ವಕ್ಕುಲಗಡ್ಡಿ ಈಶ್ವರ್ ರಾವ್ ಮತ್ತು ಅರುಣಾ ದಂಪತಿಯ ಪುತ್ರಿಯಾದ 25 ವರ್ಷದ ತೇಜಸ್ವಿನಿ ಬೆಂಗಳೂರಿನಲ್ಲಿ (Bengaluru) ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸದಲ್ಲಿ ತೀವ್ರ ಒತ್ತಡವನ್ನು ಎದುರಿಸಿದ ಅವರು 6 ತಿಂಗಳ ಹಿಂದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ವಿಶಾಖಪಟ್ಟಣಕ್ಕೆ ತೆರಳಿದ್ದರು. ಇದಾದ ನಂತರ, 2 ತಿಂಗಳ ಹಿಂದೆ ಅವರು ತಮ್ಮ ತಾಯಿ ಅರುಣಾ ಅವರೊಂದಿಗೆ ಹೈದರಾಬಾದ್‌ಗೆ (Hyderabad) ಬಂದು ಪೀರ್ಜಾದಿಗುಡದ ಶಂಕರ್‌ನಗರ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ, ಶುಕ್ರವಾರ ಮಧ್ಯರಾತ್ರಿ 2.30ರ ಸುಮಾರಿಗೆ ತೇಜಸ್ವಿನಿ ಎಚ್ಚರಗೊಂಡು ತನ್ನ ತಾಯಿಯ ರೂಮನ್ನು ಹೊರಗಿನಿಂದ ಲಾಕ್ ಮಾಡಿ ಮನೆಯಿಂದ ಹೊರಗೆ ಹೋಗಿದ್ದರು. ಮನೆಯಿಂದ ಹೊರಟ ಆಕೆ ಬೆತ್ತಲೆಯಾಗಿ ನಡೆದುಕೊಂಡು ಹೋಗಿ ದೇವಸ್ಥಾನದೊಳಗೆ ಹೊಕ್ಕು, ಅಲ್ಲಿದ್ದ ದೇವರ ವಿಗ್ರಹವನ್ನು ಹಿಡಿದುಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!.

ಹೈದರಾಬಾದ್‌ನ ಈ ಯುವತಿಯ ನಿಗೂಢ ಸಾವು ಭಾರಿ ತಲ್ಲಣ ಸೃಷ್ಟಿಸಿದೆ. ಮೃತ ಯುವತಿ ಕೆರೆಗೆ ಜಿಗಿಯುವ ಮುನ್ನ ನಗ್ನ ಸ್ಥಿತಿಯಲ್ಲಿ ದೇವಸ್ಥಾನ ಪ್ರವೇಶಿಸಿ, ದೇವಿಯ ವಿಗ್ರಹವನ್ನು ಹೊತ್ತೊಯ್ದು ಕೆರೆಗೆ ಜಿಗಿದಿದ್ದಾರೆ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಪೊಲೀಸರು ಕೆರೆಯಲ್ಲಿ ನಾಪತ್ತೆಯಾಗಿರುವ ದೇವಿಯ ವಿಗ್ರಹಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರೂ ಅದಕ್ಕಾಗಿ ಆಕೆ ಆಯ್ದುಕೊಂಡ ಮಾರ್ಗದ ಬಗ್ಗೆ ತೀವ್ರ ಅನುಮಾನ, ನಿಗೂಢ ಪ್ರಶ್ನೆಗಳು ಎದ್ದಿರುವುದರಿಂದ ಪೊಲೀಸರು ಆಕೆಯ ಮಾನಸಿಕ ಸ್ಥಿತಿ ಬಗ್ಗೆ ತೀವ್ರ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ‘ಡಾಕ್ಟರ್ ಆಗಲು ನಾಲಾಯಕ್’; 4 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆಸ್ಪತ್ರೆಗೆ ಸುಪ್ರೀಂ ಕೋರ್ಟ್ ಛೀಮಾರಿ

ದೇವಸ್ಥಾನದೊಳಗೆ ಬೆತ್ತಲೆಯಾಗಿ ಹೋಗಿ ಕೆರೆಗೆ ಜಿಗಿದ ಯುವತಿ:

ಪೊಲೀಸ್ ತನಿಖೆಯ ಪ್ರಕಾರ, ತೇಜಸ್ವಿನಿ ತನ್ನ ಬಟ್ಟೆಗಳನ್ನೆಲ್ಲ ಮನೆಯಲ್ಲಿಯೇ ಬಿಚ್ಚಿಟ್ಟು ನಗ್ನ ಸ್ಥಿತಿಯಲ್ಲಿ ಸಮೀಪದ ದೇವಸ್ಥಾನಕ್ಕೆ ನುಗ್ಗಿದ್ದಾರೆ. ಅಲ್ಲಿ ಪೂಜಿಸಲ್ಪಡುತ್ತಿದ್ದ ಅಮ್ಮಾವರ ವಿಗ್ರಹವನ್ನು ಕೈಗೆತ್ತಿಕೊಂಡು ನೇರವಾಗಿ ಹತ್ತಿರದ ಕೆರೆಯತ್ತ ಹೆಜ್ಜೆ ಹಾಕಿದ್ದಾರೆ. ನಂತರ ಆ ವಿಗ್ರಹದೊಂದಿಗೇ ಕೆರೆಯ ನೀರಿಗೆ ಜಿಗಿದಿದ್ದಾರೆ. ಪೊಲೀಸರು ಆಕೆಯ ಮೃತದೇಹವನ್ನು ಹೊರತೆಗೆದಿದ್ದಾರೆಯಾದರೂ, ಆಕೆ ಹಿಡಿದುಕೊಂಡಿದ್ದ ದೇವಿಯ ವಿಗ್ರಹ ಇನ್ನು ಪತ್ತೆಯಾಗಿಲ್ಲ. ಆಕೆ ದೇವಸ್ಥಾನದೊಳಗೆ ಬಂದಿರುವ, ಹೋಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಕೆರೆಯಲ್ಲಿ ವಿಗ್ರಹಕ್ಕಾಗಿ ತೀವ್ರ ಶೋಧ ಕಾರ್ಯ:

ವಿಪತ್ತು ನಿರ್ವಹಣಾ ಪಡೆ (DRF) ಸಿಬ್ಬಂದಿ ದೋಣಿಗಳು ಹಾಗೂ ಅತ್ಯಾಧುನಿಕ ಉಪಕರಣಗಳೊಂದಿಗೆ ಕೆರೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ತನಿಖೆಯ ದೃಷ್ಟಿಯಿಂದ ಈ ವಿಗ್ರಹ ಅತ್ಯಂತ ಪ್ರಮುಖ ಸಾಕ್ಷ್ಯವಾಗಿರುವುದರಿಂದ, ಇಡೀ ಕೆರೆಯನ್ನು ಜಾಲಾಡಲಾಗುತ್ತಿದೆ. ಪೊಲೀಸರು ತೇಜಸ್ವಿನಿಯ ತಾಯಿ ಅರುಣಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ತೇಜಸ್ವಿನಿ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ ನೋಟ್ ವಶಪಡಿಸಿಕೊಂಡು ಪರಿಶೀಲಿಸುತ್ತಿದ್ದಾರೆ. ಇದರೊಂದಿಗೆ ಆಕೆಯ ಆರ್ಥಿಕ ವಹಿವಾಟುಗಳು ಮತ್ತು ಮೊಬೈಲ್ ಕರೆಗಳ ವಿವರಗಳನ್ನು ಕಲೆಹಾಕಲಾಗುತ್ತಿದೆ.

ಇದನ್ನೂ ಓದಿ: ಅಣ್ಣನ ಜೊತೆ ಮದುವೆ ನಿರಾಕರಿಸಿದ್ದಕ್ಕೆ ತಮ್ಮನಿಂದ ಯುವತಿ ಕೊಲೆ ಕೇಸ್​​ಗೆ ಬಿಗ್​​ ಟ್ವಿಸ್ಟ್​​: ಯುವತಿ ಪಾಲಿಗೆ ಮುಳುವಾದ ತಾಯಿಯ ಚೀಟಿ ವ್ಯವಹಾರ!

ಅಂದಹಾಗೆ, ತೇಜಸ್ವಿನಿ ಬಾಡಿಗೆಗೆ ಇದ್ದ ಫ್ಲ್ಯಾಟ್‌ಗೆ ದಿನಕ್ಕೆ ಸುಮಾರು 3,500 ರೂ. ಬಾಡಿಗೆ ಪಾವತಿಸುತ್ತಿದ್ದರು. ಅಂದರೆ ತಿಂಗಳಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದರು. ಆಕೆ ಇದ್ದ ಕಟ್ಟಡದ ಮೇಲಿನ ಎರಡು ಮಹಡಿಗಳನ್ನು ಲಾಡ್ಜ್ ಮಾದರಿಯಲ್ಲಿ ಕಾನೂನುಬಾಹಿರವಾಗಿ ನಡೆಸಲಾಗುತ್ತಿತ್ತು. ಈ ಕಟ್ಟಡದ ಮಾಲೀಕರಿಗೂ ಅಥವಾ ಅಲ್ಲಿ ತಂಗಿದ್ದವರಿಗೂ ಈ ಸಾವಿಗೂ ಏನಾದರೂ ಸಂಬಂಧವಿದೆಯೇ ಎಂಬ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಇಳಕಲ್‌ನಲ್ಲಿ ವರುಣನ ಅಬ್ಬರ: ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ!

ಬಾಗಲಕೋಟೆ, ಜುಲೈ 19: ಜಿಲ್ಲೆಯ ಇಳಕಲ್ ನಗರದಲ್ಲಿ ನಿನ್ನೆ ರಾತ್ರಿ ಸತತ 6 ರಿಂದ 7 ಗಂಟೆಗಳ ಕಾಲ ಸುರಿದ ಭರ್ಜರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಸುಮಾರು ಎರಡು ಅಡಿಯಷ್ಟು ನೀರು ನಿಂತಿದ್ದರಿಂದ ಕಾರು ಮತ್ತು ಬೈಕ್ ಸವಾರರು ತೀವ್ರ ಸಂಕಷ್ಟ ಎದುರಿಸಿದರು. ಮಳೆ ನೀರು ಸರಾಗವಾಗಿ ಹರಿದು ಹೋಗದ ಕಾರಣ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇನ್ನು ಹಲವು ವಸತಿ ಪ್ರದೇಶಗಳಲ್ಲಿ ಮಳೆ ನೀರು ಮನೆಗಳ ಬಾಗಿಲಿಗೆ ಬಂದು ನಿಂತಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸಾವರ್ಕರ್’ ಕುರಿತು ಸಿನಿಮಾ ಮಾಡಿ ‘ಅತ್ಯುತ್ತಮ ಚೊಚ್ಚಲ ನಿರ್ದೇಶಕ’ ರಾಷ್ಟ್ರ ಪ್ರಶಸ್ತಿ ಗೆದ್ದ ರಣದೀಪ್ ಹೂಡಾ – Kannada News | Randeep Hooda wins National Film Award Best Debut Director for Swatantryaveer Savarkar

ಪ್ರತಿಷ್ಠಿತ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಬಾಲಿವುಡ್‌ನ ಬಹುಮುಖ ಪ್ರತಿಭೆ ರಣದೀಪ್ ಹೂಡಾ (Randeep Hooda) ಅವರು ತಮ್ಮ ಚೊಚ್ಚಲ ನಿರ್ದೇಶನದ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ (Swatantryaveer Savarkar) ಸಿನಿಮಾಗಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ (Best Debut Director) ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಕೇವಲ ನಿರ್ದೇಶನ ಮಾತ್ರವಲ್ಲದೆ, ಮುಖ್ಯ ಭೂಮಿಕೆಯಲ್ಲಿ ನಟಿಸಿ, ಸಹ-ಬರಹಗಾರರಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು. ಈ ಗೌರವಕ್ಕೆ ಪಾತ್ರರಾದ ಬೆನ್ನಲ್ಲೇ ರಣದೀಪ್ ಹೂಡಾ ಅವರು ಚಿತ್ರದ ಜರ್ನಿ ಮತ್ತು ತಾವು ಎದುರಿಸಿದ ಸವಾಲುಗಳ ಕುರಿತು ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ.

ನನ್ನ ಶಕ್ತಿ ಮೀರಿದ ಸಿನಿಮಾ ಇದಾಗಿತ್ತು:

ಪ್ರಶಸ್ತಿ ಘೋಷಣೆಯಾದ ನಂತರ ಸಂತಸ ಹಂಚಿಕೊಂಡ ರಣದೀಪ್, ‘ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ ರಾಷ್ಟ್ರ ಪ್ರಶಸ್ತಿ ಒಲಿದಿರುವುದನ್ನು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಈ ಸಿನಿಮಾ ನನ್ನ ಜೀವನದಲ್ಲಿ ನಾನು ಮಾಡಿರುವ ಇತರ ಎಲ್ಲಾ ಕೆಲಸಗಳಿಗಿಂತಲೂ ಹೆಚ್ಚಿನ ಶ್ರಮ ಮತ್ತು ಬದ್ಧತೆಯನ್ನು ಕೇಳಿತ್ತು. ನನ್ನಲ್ಲಿದ್ದ ಶಕ್ತಿಯನ್ನೆಲ್ಲಾ ನಾನು ಈ ಚಿತ್ರಕ್ಕಾಗಿ ಧಾರೆ ಎರೆದಿದ್ದೇನೆ’ ಎಂದಿದ್ದಾರೆ.

ಚಿತ್ರೀಕರಣದ ಸವಾಲುಗಳ ಬಗ್ಗೆ ನೆನೆದ ಅವರು, ‘ಈ ಸಿನಿಮಾದ ಪಯಣದ ಪ್ರತಿಯೊಂದು ಹಂತದಲ್ಲೂ ನಮಗೆ ಅಡೆತಡೆಗಳು ಎದುರಾದವು. ಆದರೆ, ಆ ಎಲ್ಲಾ ಸವಾಲುಗಳನ್ನು ಜಯಿಸಿ ನಾವು ಮುನ್ನಡೆದಿದ್ದಕ್ಕೆ ನನಗೆ ಹೆಮ್ಮೆಯಿದೆ. ಎಷ್ಟೇ ಕಷ್ಟಗಳು ಬಂದರೂ, ಯಾವುದೋ ಒಂದು ಅದೃಶ್ಯ ಶಕ್ತಿ ನಮಗೆ ಧೃತಿಗೆಡದೆ ಮುನ್ನಡೆಯಲು ಧೈರ್ಯ ನೀಡುತ್ತಿತ್ತು’ ಎಂದು ಹೇಳಿದ್ದಾರೆ.

ಸಾವರ್ಕರ್ ತ್ಯಾಗದ ಮುಂದೆ ನಮ್ಮ ಕಷ್ಟ ಶೂನ್ಯ:

ಚಿತ್ರದಲ್ಲಿ ನಟನಾಗಿ, ಬರಹಗಾರನಾಗಿ ಹಾಗೂ ಮೊದಲ ಬಾರಿಗೆ ನಿರ್ದೇಶಕನಾಗಿ ಮೂರು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವ ಹಂಚಿಕೊಂಡ ಹೂಡಾ, ‘ವೀರ್ ಸಾವರ್ಕರ್ ಅವರ ಕಥೆಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ಪ್ರೇಕ್ಷಕರಿಗೆ ತಲುಪಿಸಬೇಕೆಂಬ ದೊಡ್ಡ ಜವಾಬ್ದಾರಿ ನನ್ನ ಮೇಲಿತ್ತು. ಹಾಗಾಗಿ ನಾನು ನನ್ನ ಸರ್ವಸ್ವವನ್ನೂ ಈ ಚಿತ್ರಕ್ಕೆ ನೀಡಿದ್ದೇನೆ. ಈ ಸಿನಿಮಾ ಮಾಡುವಾಗ ನಾವು ಅನುಭವಿಸಿದ ಕಷ್ಟಗಳು, ವೀರ್ ಸಾವರ್ಕರ್ ಅವರು ದೇಶಕ್ಕಾಗಿ ಸವೆಸಿದ ಜೀವನ ಮತ್ತು ಮಾಡಿದ ತ್ಯಾಗಕ್ಕೆ ಹೋಲಿಸಿದರೆ ತೀರಾ ಶೂನ್ಯ’ ಎಂದು ಗೌರವ ಸಲ್ಲಿಸಿದರು.

ಇದನ್ನೂ ಓದಿ: ಸಾವರ್ಕರ್​​ ಮೇಲಿನ ಗೌರವಕ್ಕೆ ಈ ರೀತಿ ಬದಲಾದ ನಟ ರಣದೀಪ್​ ಹೂಡಾ

ಯುವ ಪೀಳಿಗೆಗೆ ಪ್ರೇರಣೆಯಾಗಲಿ:

ತಮ್ಮ ಇಡೀ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ‘ಪ್ರತಿಯೊಂದು ಕಷ್ಟ-ಸುಖದಲ್ಲೂ ನನ್ನ ಬೆನ್ನಿಗೆ ನಿಂತು, ಈ ಕನಸನ್ನು ನನಸು ಮಾಡಿದ ಇಡೀ ತಂಡಕ್ಕೆ ನಾನು ಚಿರಋಣಿ. ಈ ಗೌರವ ಕೇವಲ ನನಗೊಬ್ಬನಿಗೆ ಸಂದಿದ್ದಲ್ಲ, ನಮ್ಮ ಇಡೀ ತಂಡಕ್ಕೆ ಸೇರಿದ್ದು. ಈ ಪ್ರಶಸ್ತಿಯು ಮುಂಬರುವ ಯುವ ಪೀಳಿಗೆಗೆ ವೀರ್ ಸಾವರ್ಕರ್ ಅವರ ದೇಶಭಕ್ತಿಯ ಪರಂಪರೆಯನ್ನು ಅರಿಯಲು ಮತ್ತು ಅದರ ಬಗ್ಗೆ ಯೋಚಿಸಲು ಪ್ರೇರಣೆ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಮಾತು ಮುಗಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಪಾನ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಪಿ.ವಿ ಸಿಂಧು! – Kannada News | PV Sindhu Scripts History: Wins Maiden Japan Open Title

ಭಾರತದ ಹೆಮ್ಮೆಯ ಶಟ್ಲರ್ ಪಿ.ವಿ ಸಿಂಧು ಜಪಾನ್ ಓಪನ್ ಸೂಪರ್ 750 ಟೂರ್ನಿಯ ಫೈನಲ್ ಪಂದ್ಯದಲ್ಲಿ ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಮಣಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಜಪಾನ್ ಓಪನ್ ಇತಿಹಾಸದಲ್ಲೇ ಪ್ರಶಸ್ತಿ ಮುಡಿಗೇರಿಸಿಕೊಂಡ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟೋಕಿಯೊd ಮೆಟ್ರೋಪಾಲಿಟನ್ ಜಿಮ್ನಾಷಿಯಂ ಕೋರ್ಟ್​ನಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಸಿಂಧು ಹಾಗೂ ಜಪಾನ್​ನ ಅಕಾನೆ ಯಮಗುಚಿ ಮುಖಾಮುಖಿಯಾಗಿದ್ದರು. ಇಡೀ ಪಂದ್ಯದುದ್ದಕ್ಕೂ ತಮ್ಮ ಎಂದಿನ ಆಕ್ರಮಣಕಾರಿ ಆಟ ಹಾಗೂ ಅತ್ಯುತ್ತಮ ರಕ್ಷಣಾತ್ಮಕ ಕೌಶಲ್ಯಗಳನ್ನು ಪ್ರದರ್ಶಿಸಿದ ಸಿಂಧು ವಿಶ್ವದ ನಂ.3 ಆಟಗಾರ್ತಿಯ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮರೆದರು.

ಈ ಪ್ರಾಬಲ್ಯದೊಂದಿಗೆ ಪಿ.ವಿ ಸಿಂಧು 21-17, 21-17 ನೇರ ಗೇಮ್‌ಗಳಿಂದ ಯಮಗುಚಿಯನ್ನು ಮಣಿಸಿ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

19 ತಿಂಗಳ ಪ್ರಶಸ್ತಿ ಬರಕ್ಕೆ ಬ್ರೇಕ್!

ಈ ಗೆಲುವಿನೊಂದಿಗೆ 31 ವರ್ಷದ ಪಿ.ವಿ ಸಿಂಧು ಅವರ ದೀರ್ಘಕಾಲದ ಪ್ರಶಸ್ತಿ ಬರ ಕೊನೆಗೊಂಡಿದೆ. ಡಿಸೆಂಬರ್ 2024 ರ ಸೈಯದ್ ಮೋದಿ ಇಂಡಿಯಾ ಇಂಟರ್ನ್ಯಾಷನಲ್ ಟೂರ್ನಿಯ ಬಳಿಕ ಗೆದ್ದ ಮೊದಲ ಬಿಡಬ್ಲ್ಯೂಎಫ್ (BWF) ಟೂರ್ನಿ ಇದಾಗಿದೆ.

ಮೊದಲ ಸೂಪರ್ 750 ಕಿರೀಟ:

ಪಿ.ವಿ ಸಿಂಧು ಅವರ ವೃತ್ತಿಜೀವನದ ಚೊಚ್ಚಲ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 750 ಪ್ರಶಸ್ತಿ ಇದಾಗಿದ್ದು, 2019 ರ ವಿಶ್ವ ಚಾಂಪಿಯನ್‌ಶಿಪ್ ಗೆಲುವಿನ ನಂತರದ ಅತ್ಯಂತ ದೊಡ್ಡ ಗೆಲುವಾಗಿದೆ.

ಟಾಪ್-8 ಗೆ ಪುನರಾಗಮನ:

ಈ ಅದ್ಭುತ ಪ್ರದರ್ಶನದಿಂದಾಗಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌ನಲ್ಲಿ ಮತ್ತೆ ಟಾಪ್-8 ರೊಳಗೆ ಸ್ಥಾನ ಪಡೆಯುವುದು ಖಚಿತವಾಗಿದೆ.

ಚಾಂಪಿಯನ್ ಹಾದಿ:

ಪಿ.ವಿ ಸಿಂಧು ಅವರ ಈ ಐತಿಹಾಸಿಕ ಜಪಾನ್ ಓಪನ್ ಗೆಲುವಿನ ಹಾದಿ ಸುಲಭದ್ದಾಗಿರಲಿಲ್ಲ. ಟೂರ್ನಿಯುದ್ದಕ್ಕೂ ಸಿಂಧು ವಿಶ್ವದ ದಿಗ್ಗಜ ಆಟಗಾರ್ತಿಯರನ್ನು ಮಣಿಸಿ ಫೈನಲ್ ತಲುಪಿದ್ದರು.

  •  ರೌಂಡ್ ಆಫ್ 32: ವಾಂಗ್ ಲಿಂಗ್ ಚಿಂಗ್ (ಮಲೇಷ್ಯಾ) ವಿರುದ್ಧ ಗೆಲುವು (21-14, 21-11)
  •  ಪ್ರಿ-ಕ್ವಾರ್ಟರ್ ಫೈನಲ್: ಹಾನ್ ಯುಯೆ (ಚೀನಾ – ವಿಶ್ವ ನಂ. 5) ವಿರುದ್ಧ ಗೆಲುವು (21-16, 21-14)
  •  ಕ್ವಾರ್ಟರ್ ಫೈನಲ್: ನೊಜೊಮಿ ಒಕುಹರಾ (ಜಪಾನ್) ಗಾಯದ ಕಾರಣ ಪಂದ್ಯದಿಂದ ಹಿಂದೆ ಸರಿದಿದ್ದರಿಂದ ವಾಕ್ ಓವರ್.
  •  ಸೆಮಿಫೈನಲ್: ಚೆನ್ ಯುಫೀ (ಚೀನಾ – ಒಲಿಂಪಿಕ್ ಚಾಂಪಿಯನ್) ವಿರುದ್ಧ ಗೆಲುವು (21-19, 15-10 ರ ಬಳಿಕ ಚೀನಾ ಆಟಗಾರ್ತಿ ರಿಟೈರ್ಡ್).
  •  ಫೈನಲ್: ಅಕಾನೆ ಯಮಗುಚಿ (ಜಪಾನ್) ವಿರುದ್ಧ ಐತಿಹಾಸಿಕ ಜಯ (21-17, 21-17).

ಇದನ್ನೂ ಓದಿ: ಕೇವಲ 1 ರನ್‌ನಿಂದ ಚಾಂಪಿಯನ್ ಪಟ್ಟಕ್ಕೇರಿದ ನೈಟ್ ರೈಡರ್ಸ್!

ಒಟ್ಟಾರೆಯಾಗಿ ಹೇಳುವುದಾದರೆ, ಪಿ.ವಿ ಸಿಂಧು ಅವರ ಈ ಜಪಾನ್ ಓಪನ್ ಐತಿಹಾಸಿಕ ಜಯವು ಕೇವಲ ಒಂದು ಪ್ರಶಸ್ತಿಯಷ್ಟೇ ಅಲ್ಲ. ಅದು ಅವರ ಅದ್ಭುತ ಪುನರಾಗಮನದ ಸಂಕೇತ. ದೀರ್ಘಕಾಲದ ಪ್ರಶಸ್ತಿ ಬರ ಹಾಗೂ ಸವಾಲುಗಳ ನಡುವೆಯೂ ಕಠಿಣ ಪರಿಶ್ರಮದಿಂದ ಮತ್ತೆ ವಿಶ್ವಮಟ್ಟದಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯಬಹುದು ಎಂಬುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Source link

Weekly Horoscope: ಜುಲೈ 20 ರಿಂದ 26ರ ವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿ ತಿಳಿಯಿರಿ – Kannada News | Weekly Horoscope: Astrological Predictions for July 20 26, 2026 by Dr. Basavaraj Guruji

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಜುಲೈ 20 ರಿಂದ 26ರ ವರೆಗಿನ ವಾರ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಅವರು ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸದ ವೈಶಿಷ್ಟ್ಯಗಳ ಬಗ್ಗೆ ವಿವರಿಸಿದ್ದಾರೆ. ಈ ವಾರದಲ್ಲಿ ಶನಿ ಗ್ರಹ ಮೀನ ರಾಶಿಯಲ್ಲಿ, ಕುಜ ಗ್ರಹ ವೃಷಭ ರಾಶಿಯಲ್ಲಿ, ಬುಧ ಗ್ರಹ ಮಿಥುನ ರಾಶಿಯಲ್ಲಿ, ಗುರು ಮತ್ತು ರವಿ ಗ್ರಹ ಕರ್ಕಾಟಕ ರಾಶಿಯಲ್ಲಿ, ಹಾಗೆಯೇ ಕೇತು ಮತ್ತು ಶುಕ್ರ ಗ್ರಹ ಸಿಂಹ ರಾಶಿಯಲ್ಲಿ ಸಂಚರಿಸಲಿವೆ. ರಾಹು ಗ್ರಹ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತದೆ. ಈ ಗ್ರಹಗಳ ಸ್ಥಾನಪಲ್ಲಟಗಳು ದ್ವಾದಶ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಗುರೂಜಿ ಅವರು ಸವಿಸ್ತಾರವಾಗಿ ವಿವರಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಆರ್ಥಿಕ, ವೃತ್ತಿ, ಕೌಟುಂಬಿಕ, ಆರೋಗ್ಯ ಮತ್ತು ಸಂಬಂಧಗಳ ಕುರಿತು ನಿರ್ದಿಷ್ಟ ಸಲಹೆಗಳು, ಅದೃಷ್ಟ ಸಂಖ್ಯೆಗಳು, ಬಣ್ಣಗಳು ಮತ್ತು ಪರಿಹಾರೋಪಾಯಗಳನ್ನು ನೀಡಲಾಗಿದೆ. ಸ್ಕಂದ ಷಷ್ಠಿ, ವೈವಸ್ವತ ಸಪ್ತಮಿ, ದೇವಶಯನ ಏಕಾದಶಿಯಂತಹ ಪ್ರಮುಖ ತಿಥಿಗಳು ಸಹ ಇದೇ ವಾರದಲ್ಲಿ ಬರಲಿವೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Amarnath Yatra 2026: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ; ಭಕ್ತರ ಪ್ರವೇಶ ಬಂದ್ ಮಾಡಿದ ಆಡಳಿತ ಮಂಡಳಿ! – Kannada News | Amarnath Yatra Suspended: IMD Weather Warnings, Landslide Threat in Jambu and Kashmir from July 19

ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತImage Credit source: Getty Images

ಭಾರತ ಹವಾಮಾನ ಇಲಾಖೆ (IMD) ನೀಡಿರುವ ತೀವ್ರ ಹವಾಮಾನ ವೈಪರೀತ್ಯದ ಮುನ್ನೆಚ್ಚರಿಕೆಗಳ ಹಿನ್ನೆಲೆಯಲ್ಲಿ, ಪ್ರಸಕ್ತ ಸಾಲಿನ ಪವಿತ್ರ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯಾತ್ರಾರ್ಥಿಗಳ ಜೀವ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಪಹಲ್ಗಾಮ್ ಮತ್ತು ಬಾಲ್ಟಾಲ್ ಎರಡೂ ಮಾರ್ಗಗಳ ಮೂಲಕ ಪವಿತ್ರ ಗುಹಾ ದೇಗುಲಕ್ಕೆ ತೆರಳುವ ಯಾತ್ರೆಯನ್ನು ಜುಲೈ 19 ರಿಂದ ತಡೆಹಿಡಿಯಲಾಗಿದೆ ಎಂದು ಜಮ್ಮು-ಕಾಶ್ಮೀರ ಆಡಳಿತದ ಹಿರಿಯ ಅಧಿಕಾರಿಗಳು ಅಧಿಕೃತವಾಗಿ ಘೋಷಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಭಾರೀ ಮಳೆ, ಭೂಕುಸಿತ ಹಾಗೂ ಹಠಾತ್ ಪ್ರವಾಹ ಉಂಟಾಗುವ ಭೀತಿ ಇರುವುದರಿಂದ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಬೇಸ್ ಕ್ಯಾಂಪ್‌ಗಳಲ್ಲೇ ಉಳಿಯಲಿರುವ ಯಾತ್ರಿಕರು:

ಅಧಿಕಾರಿಗಳ ನಿರ್ಧಾರದ ಪ್ರಕಾರ, ಜುಲೈ 19 ರಿಂದ ಬಾಲ್ಟಾಲ್ ಬೇಸ್ ಕ್ಯಾಂಪ್ ಮತ್ತು ನುನ್ವಾನ್-ಚಂದನ್ವರಿ ಬೇಸ್ ಕ್ಯಾಂಪ್‌ಗಳಿಂದ ಯಾವುದೇ ಯಾತ್ರಿಕರಿಗೆ ಗುಹೆಯ ಕಡೆಗೆ ಮುಂದುವರಿಯಲು ಅನುಮತಿ ನೀಡುವುದಿಲ್ಲ. ಪ್ರಸ್ತುತ ವಿವಿಧ ಬೇಸ್ ಕ್ಯಾಂಪ್‌ಗಳನ್ನು ತಲುಪಿರುವ ಭಕ್ತರು ಆಯಾ ಸ್ಥಳಗಳಲ್ಲೇ ಸುರಕ್ಷಿತವಾಗಿ ಉಳಿಯಬೇಕು ಮತ್ತು ಸ್ಥಳೀಯ ಅಧಿಕಾರಿಗಳು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವಿನಂತಿಸಲಾಗಿದೆ. ಹವಾಮಾನ ಪರಿಸ್ಥಿತಿಗಳು ಸುಧಾರಿಸಿದ ನಂತರ, ಯಾತ್ರಾ ಮಾರ್ಗಗಳ ಸುರಕ್ಷತೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಯಾತ್ರಾ ನಿರ್ವಹಣಾ ಸಮಿತಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಭೂಕುಸಿತ ಹಾಗೂ ಹಠಾತ್ ಪ್ರವಾಹದ ಭೀತಿ:

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ, ಜಮ್ಮು ಮತ್ತು ಕಾಶ್ಮೀರದ ಪರ್ವತ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಮತ್ತು ಬಂಡೆಗಳು ಕುಸಿಯುವ ಅಪಾಯ ಗಣನೀಯವಾಗಿ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಡಿದಾದ ಯಾತ್ರಾ ಮಾರ್ಗದಲ್ಲಿ ಪ್ರಯಾಣಿಸುವ ಭಕ್ತರ ಜೀವಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದಾಗ್ಯೂ, ಬೇಸ್ ಕ್ಯಾಂಪ್‌ಗಳಲ್ಲಿರುವ ಯಾತ್ರಿಕರು ಆತಂಕಪಡುವ ಅಗತ್ಯವಿಲ್ಲ. ಆಡಳಿತ ಮಂಡಳಿಯು ಹವಾಮಾನ ಪರಿಸ್ಥಿತಿಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ವಾತಾವರಣ ತಿಳಿಯಾದ ತಕ್ಷಣ ಯಾತ್ರೆ ಪುನರಾರಂಭದ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಭಕ್ತರಲ್ಲಿ ಅಧಿಕಾರಿಗಳ ವಿಶೇಷ ಮನವಿ:

ಈ ತುರ್ತು ಸಂದರ್ಭದಲ್ಲಿ, ಅಮರನಾಥ ಯಾತ್ರೆಗೆ ಹೊರಟಿರುವ ಹಾಗೂ ಈಗಾಗಲೇ ಕಾಶ್ಮೀರ ತಲುಪಿರುವ ಭಕ್ತರು ಕೇವಲ ಅಧಿಕೃತ ಪ್ರಕಟಣೆಗಳು, ಸ್ಥಳೀಯ ಆಡಳಿತ ಮತ್ತು ಯಾತ್ರಾ ನಿರ್ವಹಣಾ ಸಮಿತಿಯ (SASB) ನಿರ್ದೇಶನಗಳನ್ನು ಮಾತ್ರ ನಂಬಬೇಕು ಹಾಗೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಭಕ್ತಾದಿಗಳು ಆಡಳಿತ ಮಂಡಳಿಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ಕೋರಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಸ್​​ಐಆರ್​​ ಕಾರ್ಯಕ್ಕೆ ಶೇ.30ರಷ್ಟು ಶಿಕ್ಷಕರ ಬಳಕೆ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಡೋರಿಲ್ಲ ಪಾಠ ಪ್ರವಚನ! – Kannada News | Karnataka Schools Grapple with Teacher Shortage Amid Voter Roll Revision Drive

ಬೆಂಗಳೂರು, ಜುಲೈ 19: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (Special Intensive Revision – SIR) ಕಾರ್ಯಕ್ಕೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಅಂದಾಜು ಶೇ.30ರಷ್ಟು ಶಿಕ್ಷಕರನ್ನು ನಿಯೋಜಿಸಿರುವುದರಿಂದ, ಸಾವಿರಾರು ಶಾಲೆಗಳಲ್ಲಿ ಬೋಧನಾ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ. ಇದು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುವ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಅನೇಕ ಶಾಲೆಗಳಲ್ಲಿ ಒಂದೇ ಕೊಠಡಿಯಲ್ಲಿ ಮಕ್ಕಳಿಗೆ ಪಾಠ

ಜೂನ್ 30ರಿಂದ ಆಗಸ್ಟ್ 8ರವರೆಗೆ ಬೂತ್ ಮಟ್ಟದ ಅಧಿಕಾರಿಗಳಾಗಿ (BLO) ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದ್ದು, ಇದಕ್ಕೂ ಮುನ್ನವೇ ಜೂನ್ 20ರಿಂದ ಶಿಕ್ಷಕರಿಗೆ ಎಸ್‌ಐಆರ್ ತರಬೇತಿ ನೀಡಲಾಗಿತ್ತು. ಪರಿಣಾಮವಾಗಿ, ಹೊಸ ಶೈಕ್ಷಣಿಕ ವರ್ಷದ ಮೂರನೇ ವಾರದಿಂದಲೇ ಮಕ್ಕಳಿಗೆ ಪಾಠ ಪ್ರವಚನ ಮಾಡಬೇಕಿದ್ದ ಬಹುತೇಕ ಶಿಕ್ಷಕರು ಅಲಭ್ಯರಾಗಿದ್ದಾರೆ. ಶಿಕ್ಷಕರ ಕೊರತೆಯಿಂದ ಅನೇಕ ಶಾಲೆಗಳಲ್ಲಿ ವಿವಿಧ ತರಗತಿಗಳ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕುಳ್ಳಿರಿಸಿ, ಒಬ್ಬ ಅಥವಾ ಇಬ್ಬರು ಶಿಕ್ಷಕರಿಂದ ಮಾತ್ರ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಎಸ್​ಐಆರ್ ಪ್ರಕ್ರಿಯೆ​ಯಲ್ಲಿ ಲೋಪ ಆರೋಪ; ಮುಖ್ಯ ಚುನಾವಣಾ ಆಯುಕ್ತರಿಗೆ ಮೈತ್ರಿ ನಾಯಕರಿಂದ ದೂರು

ಶಾಲೆಗಳಲ್ಲಿ ಶೈಕ್ಷಣಿಕ ವಾತಾವರಣವೇ ಮಾಯ

ಬೆಂಗಳೂರು ಉತ್ತರ ಶಿಕ್ಷಣ ಜಿಲ್ಲೆಯಲ್ಲಿ ಒಟ್ಟು 3,735 ಶಿಕ್ಷಕರ ಪೈಕಿ 1,304 ಮಂದಿ 535 ಸರ್ಕಾರಿ ಹಾಗೂ 220 ಅನುದಾನಿತ ಶಾಲೆಗಳಿಂದ ಎಸ್‌ಐಆರ್ ಕರ್ತವ್ಯಕ್ಕೆ ನಿಯೋಜನೆಯಾಗಿದ್ದಾರೆ. ಬೆಂಗಳೂರು ದಕ್ಷಿಣ ಶಿಕ್ಷಣ ಜಿಲ್ಲೆಯಲ್ಲಿ ಈ ಸಂಖ್ಯೆ 2,344ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಕೆಲ ಶಾಲೆಗಳು ಎಸ್‌ಐಆರ್ ಕಾರ್ಯದ ಕೇಂದ್ರಗಳಾಗಿದ್ದು, ಶಾಲೆಗಳಲ್ಲಿ ಶೈಕ್ಷಣಿಕ ವಾತಾವರಣವೇ ಇಲ್ಲದಂತಾಗಿದೆ ಎಂದು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸದಸ್ಯರು ಆರೋಪಿಸಿದ್ದಾರೆ. ಮಕ್ಕಳು ಶಾಲೆಗೆ ಬಂದು ಮಧ್ಯಾಹ್ನದ ಊಟ ಮಾಡಿ ಮನೆಗೆ ಹೋಗುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ

ಪೋಷಕರಲ್ಲಿ ತಪ್ಪು ಕಲ್ಪನೆ ಮೂಡುವ ಬಗ್ಗೆ ತಜ್ಞರ ಎಚ್ಚರ

ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಉಂಟಾದ ಕಲಿಕಾ ನಷ್ಟ ಅನಿವಾರ್ಯವಾಗಿತ್ತು. ಆದರೆ ಇದು ಸರ್ಕಾರವೇ ಸೃಷ್ಟಿಸಿದ ಪರಿಸ್ಥಿತಿ. ಈಗ ಸಂಪೂರ್ಣ ಶೈಕ್ಷಣಿಕ ವರ್ಷವನ್ನು ಮರುನಿಗದಿ ಮಾಡುವ ಅಗತ್ಯವಿದೆ, ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ತಪ್ಪು ಕಲ್ಪನೆ ಮೂಡಿ, ಕಡಿಮೆ ಶುಲ್ಕದ ಖಾಸಗಿ ಶಾಲೆಗಳತ್ತ ಮುಖ ಮಾಡುವ ಸಾಧ್ಯತೆಯೂ ಇದೆ ಎಂದು ಅವರು ಎಚ್ಚರಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:02 am, Sun, 19 July 26

Source link

ಸ್ವಗ್ರಾಮದಲ್ಲಿ ಮೂರು ದೇವಸ್ಥಾನ ಕಟ್ಟಿಸಿರುವ ಹೆಚ್​ಡಿಡಿ ಧರ್ಮಪತ್ನಿ: ಚೆನ್ನಮ್ಮನ ದೈವಭಕ್ತಿಗೆ ಹುಟ್ಟೂರೇ ಸಾಕ್ಷಿ! – Kannada News | Deve Gowda’s Wife Chennamma Passes Away: How Late Chennamma Chose Divine Paths Over Political LimeLight

ಹಾಸನ, ಜುಲೈ 19: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮನವರು ಶನಿವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗಂಡ ಮುಖ್ಯಮಂತ್ರಿಯಾದಾಗ, ದೇಶದ ಪ್ರಧಾನಿಯಾದಾಗಲೂ ಎಂದಿಗೂ ಸಾರ್ವಜನಿಕ ಬೆಳಕಿಗೆ ಬಂದವರಲ್ಲ ಚೆನ್ನಮ್ಮ. ತಾವಾಯಿತು, ತಮ್ಮ ದೇವರಾಯಿತು ಎಂದು ಸದಾ ದೈವಾರಾಧನೆಯಲ್ಲೇ ಮುಳುಗಿದ ಮಹಿಳೆ ಅವರು. ಸ್ವತಃ ಶ್ರೀಮಂತರ ಮನೆಯ ಮಗಳಾದರೂ ಎಳ್ಳಷ್ಟೂ ಅಹಂಕಾರ ಇಲ್ಲದವರು ಆಕೆ. ಚೆನ್ನಮ್ಮರ ಅಪಾರ ದೈವಭಕ್ತಿಗೆ ಅವರು ತಮ್ಮ ಹುಟ್ಟೂರಲ್ಲಿ ಕಟ್ಟಿಸಿದ 3 ದೇವಾಲಯಗಳೇ ಜೀವಂತ ಸಾಕ್ಷಿಯಾಗಿವೆ.

ಪ್ರತಿ ವರ್ಷದ ಜಾತ್ರೆಯಲ್ಲಿ ಚೆನ್ನಮ್ಮನದೇ ಮೊದಲ ಪೂಜೆ

ಚೆನ್ನಮ್ಮನವರ ಈ ಅಪಾರ ದೈವಭಕ್ತಿಗೆ ಅವರ ಹುಟ್ಟೂರಾದ ಹಾಸನ ತಾಲೂಕಿನ ಮುತ್ತಿಗೆಹಿರೇಹಳ್ಳಿ ಗ್ರಾಮವೇ ಸಾಕ್ಷಿ. ಹುಟ್ಟೂರಿನ ಮೇಲೆ ಅವಿಸ್ಮರಣೀಯ ಪ್ರೀತಿ ಹೊಂದಿದ್ದ ಅವರು, ಗ್ರಾಮದಲ್ಲಿ ಮೂರು ಸುಂದರ ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ. ಇವುಗಳಲ್ಲಿ ಪ್ರಮುಖವಾದ ಚೆನ್ನಾಂಬಿಕಾ ದೇವಾಲಯ. ಐದು ಗ್ರಾಮಗಳು ಸೇರಿ ವರ್ಷಕ್ಕೊಮ್ಮೆ ಸಡಗರದಿಂದ ಮಾಡುವ ಜಂಟಿ ಜಾತ್ರಾ ಮಹೋತ್ಸವದಲ್ಲಿ ಚೆನ್ನಮ್ಮನವರಿಂದಲೇ ದೇವರಿಗೆ ಮೊದಲ ಪೂಜೆ ಸಲ್ಲುತ್ತಿತ್ತು. ಅವರು ದೇವಸ್ಥಾನದ ಒಳಗೆ ಪ್ರಾರ್ಥನೆ ಸಲ್ಲಿಸುವಾಗ ಯಾರೊಬ್ಬರೂ ಒಳಗೆ ಹೋಗುತ್ತಿರಲಿಲ್ಲ. ಅವರು ಪೂಜೆ ಮುಗಿಸಿ ಭಕ್ತಿಯಿಂದ ಹೊರಬಂದ ಮೇಲಷ್ಟೇ ಇಡೀ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಪೂಜೆ ಸಲ್ಲಿಸುವ ಸಂಪ್ರದಾಯವಿತ್ತು. ಆದರೆ, ಅನಾರೋಗ್ಯದ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಅವರು ತಮ್ಮ ಹುಟ್ಟೂರಿಗೆ ಬರಲು ಸಾಧ್ಯವಾಗಿರಲಿಲ್ಲ.

ರಾಜಮನೆತನದ ಹಿನ್ನೆಲೆ, ಧೀಮಂತ ವ್ಯಕ್ತಿತ್ವ!

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ್ಮನವರು ಕೇವಲ ರಾಜಕಾರಣಿಯ ಪತ್ನಿಯಷ್ಟೇ ಅಲ್ಲ, ಅವರು ಸ್ವತಃ ರಾಜಮನೆತನದ ಬೇರುಗಳನ್ನು ಹೊಂದಿದ್ದ ಅತ್ಯಂತ ಶ್ರೀಮಂತ ಹಾಗೂ ಪ್ರತಿಷ್ಠಿತ ಕುಟುಂಬದಿಂದ ಬಂದವರಾಗಿದ್ದರು. ಚೆನ್ನಮ್ಮನವರ ತಾತ ಪಟೇಲ್ ಸಬ್ಬೇಗೌಡರು ಅದೇ ತಾಲೂಕಿನ ಹರದನಹಳ್ಳಿಯ ರಾಜಮನೆತನದಲ್ಲಿ ಹುಟ್ಟಿ ಬೆಳೆದವರು. ಅವರ ಕುಟುಂಬಸ್ಥರ ಪ್ರಕಾರ, ಪಟೇಲ್ ಸಬ್ಬೇಗೌಡರು ಅಪಾರ ಶ್ರೀಮಂತರಾಗಿದ್ದರಲ್ಲದೆ, ಅತ್ಯಂತ ಜನಪ್ರಿಯ ದಾನಿಯಾಗಿದ್ದರು. ಬಡ ಕುಟುಂಬಗಳ ನೂರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿ ನಿಂತು ವಿದ್ಯಾಭ್ಯಾಸ ಕೊಡಿಸಿದ್ದ ಹೆಗ್ಗಳಿಕೆ ಅವರದಾಗಿತ್ತು. ಇಷ್ಟೇ ಅಲ್ಲದೆ ಹೆಚ್.ಡಿ. ದೇವೇಗೌಡರ ವಿದ್ಯಾಭ್ಯಾಸಕ್ಕೂ ಇವರ ತಾತ ಪಟೇಲ್ ಸಬ್ಬೇಗೌಡರೇ ಪ್ರಮುಖ ಪ್ರೇರಕ ಶಕ್ತಿಯಾಗಿದ್ದರು ಮತ್ತು ಆರ್ಥಿಕವಾಗಿ ಸಹಾಯ ಮಾಡಿದ್ದರು.

ಇದನ್ನೂ ಓದಿ ಚೆನ್ನಮ್ಮನ ಅಂತಿಮ ದರ್ಶನ ಪಡೆದು ದೇವೇಗೌಡ, ಕುಮಾರಸ್ವಾಮಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ

ಪತಿಯ ರಾಜಕೀಯ ಬದುಕಿನ ಬೆನ್ನೆಲುಬು

ಶ್ರೀಮಂತ ಹಿನ್ನೆಲೆಯ ತವರಿನಿಂದ ಬಂದಿದ್ದರೂ ಚೆನ್ನಮ್ಮನವರಲ್ಲಿ ಎಂದಿಗೂ ಅಹಂಕಾರ ಇರಲಿಲ್ಲ. ಅವರು ಸದಾ ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚುತ್ತಿದ್ದರು. ಅಪಾರ ದೈವಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಅವರು, ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರನ್ನು ಯಾವಾಗಲೂ ಅತ್ಯಂತ ಪ್ರೀತಿಯಿಂದ ತಮ್ಮ ಹತ್ತಿರದಲ್ಲೇ ಇಟ್ಟುಕೊಳ್ಳುತ್ತಿದ್ದರು.

ಚೆನ್ನಮ್ಮನವರು ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡಲಿಲ್ಲ. ಆದರೆ, ಹೆಚ್.ಡಿ. ದೇವೇಗೌಡರು ದೇಶದ ಅತ್ಯುನ್ನತ ಪ್ರಜಾಪ್ರಭುತ್ವ ಹುದ್ದೆಯಾದ ಪ್ರಧಾನಿ ಪಟ್ಟವನ್ನು ಏರುವವರೆಗಿನ ಅವರ ಸುದೀರ್ಘ ಹಾಗೂ ಹೋರಾಟದ ರಾಜಕೀಯ ಜೀವನದ ಏಳುಬೀಳುಗಳಲ್ಲಿ ಭದ್ರವಾದ ಬೆನ್ನೆಲುಬಾಗಿ ನಿಂತು ತಕ್ಕ ಸಾಥ್ ನೀಡಿದ್ದರು.

ತಾಯಿಯ ಅಗಲಿಕೆಗೆ ಕಣ್ಣೀರಿಟ್ಟ ತವರು ಗ್ರಾಮಸ್ಥರು

ಚೆನ್ನಮ್ಮನವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಮುತ್ತಿಗೆಹಿರೇಹಳ್ಳಿ ಗ್ರಾಮದಲ್ಲಿ ಶೋಕ ಸಾಗರವೇ ಹರಿದಿದೆ. ಸಂಬಂಧಿಕರು ಹಾಗೂ ಗ್ರಾಮಸ್ಥರು ತಮ್ಮ ನೆಚ್ಚಿನ ತಾಯಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಚೆನ್ನಮ್ಮನವರು ನಮ್ಮನ್ನು ಸ್ವಂತ ಮಕ್ಕಳಿಗಿಂತಲೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವರನ್ನು ಕಳೆದುಕೊಂಡು ಇಂದು ನಾವು ಅನಾಥರಾಗಿದ್ದೇವೆ ಎಂದು ಗ್ರಾಮದ ಮಹಿಳೆಯೊಬ್ಬರು ಕಣ್ಣೀರು ಸುರಿಸಿದ್ದಾರೆ.

ಗ್ರಾಮಸ್ಥರು ಹೇಳುವಂತೆ ಅನಾಥೆಯಾಗಿದ್ದ ಬಾಲಕಿಯೊಬ್ಬಳನ್ನು ಚೆನ್ನಮ್ಮನವರು ತಮ್ಮ ಮನೆಗೆ ಕರೆದೊಯ್ದು ಆಶ್ರಯ ನೀಡಿ ಬೆಳೆಸಿದ್ದರು. ಹಳ್ಳಿಯಿಂದ ಅವರ ಬೆಂಗಳೂರಿನ ಮನೆಗೆ ಯಾರು ಹೋದರೂ, ಯಾವುದೇ ಆಳು-ಕಾಳುಗಳನ್ನೂ ಬಿಡದೆ ಸ್ವತಃ ತಾವೇ ಕೈಯಾರೆ ಅಡುಗೆ ಮಾಡಿ ಬಡಿಸುತ್ತಿದ್ದರು. ಅಷ್ಟೇ ಅಲ್ಲದೆ, ಹಳ್ಳಿಯಿಂದ ಬಂದಿರುವ ಜನರಲ್ಲಿ ಹಣವಿದೆಯೋ ಇಲ್ಲವೋ ಎಂದು ಯೋಚಿಸಿ, ಮರಳಿ ಊರಿಗೆ ಹೋಗಲು ಬಸ್ ಚಾರ್ಜ್‌ಗೆ ಕೈತುಂಬಾ ಹಣ ಕೊಟ್ಟು ಕಳುಹಿಸುತ್ತಿದ್ದರು ಎಂದು ಗ್ರಾಮಸ್ಥರು ಸ್ಮರಿಸಿದ್ದಾರೆ.

ಇದನ್ನೂ ಓದಿ ದೇವೇಗೌಡರ ಪತ್ನಿ ಚೆನ್ನಮ್ಮನ ಮೇಲೆ ಆ್ಯಸಿಡ್ ದಾಳಿ ಎಲ್ಲಿ-ಯಾವಾಗ ಆಗಿತ್ತು ಗೊತ್ತಾ?

ಪಾರ್ಥಿವ ಶರೀರವನ್ನು ತವರಿಗೆ ತರುವಂತೆ ಗ್ರಾಮಸ್ಥರ ಕೊನೆಯ ಆಸೆ

ತಮ್ಮ ಊರಿನ ಮಗಳ ಮೇಲಿರುವ ಅಪಾರ ಗೌರವ ಹಾಗೂ ಪ್ರೀತಿಯಿಂದಾಗಿ ಮುತ್ತಿಗೆಹಿರೇಹಳ್ಳಿ ಗ್ರಾಮಸ್ಥರು ಮತ್ತು ಸಂಬಂಧಿಕರು ದೇವೇಗೌಡರ ಕುಟುಂಬಕ್ಕೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಚೆನ್ನಮ್ಮನವರ ಪಾರ್ಥಿವ ಶರೀರವನ್ನು ಒಮ್ಮೆ ಅವರ ತವರುಮನೆಗೆ ತರಬೇಕು. ನಾವು ಅವರಿಗೆ ಕೊನೆಯ ಪೂಜೆ ಸಲ್ಲಿಸಬೇಕು. ಕನಿಷ್ಠ 30 ನಿಮಿಷಗಳ ಕಾಲವಾದರೂ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹಾಸನ ತಾಲೂಕಿನ ಮುತ್ತಿಗೆಹಿರೇಹಳ್ಳಿ ಗ್ರಾಮಸ್ಥರು ಅತ್ಯಂತ ಭಾವನಾತ್ಮಕವಾಗಿ ವಿನಂತಿಸಿಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ತಾಳ್ಮೆ ಪರೀಕ್ಷಿಸಬೇಡಿ’; ಸೋನಮ್ ವಾಂಗ್‌ಚುಕ್ ಜೊತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರಕ್ಕೆ ಅಣ್ಣಾ ಹಜಾರೆ ಒತ್ತಾಯ – Kannada News | ‘Dont Test His Limits’ Anna Hazare Urges Government To Hold Talks With Sonam Wangchuk

ನವದೆಹಲಿ, ಜುಲೈ 19: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶಿಕ್ಷಣ ತಜ್ಞ ಹಾಗೂ ಹೋರಾಟಗಾರ ಸೋನಮ್ ವಾಂಗ್‌ಚುಕ್ (Sonam Wangchuk) ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಕ್ಷೀಣಿಸಿದೆ. 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಅವರನ್ನು ದೆಹಲಿ ಪೊಲೀಸರು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಸೋನಗ್ ವಾಂಗ್‌ಚುಕ್ ಪರವಾಗಿ ಧ್ವನಿ ಎತ್ತಿದ್ದು, “ಸರ್ಕಾರ ಅವರ ತಾಳ್ಮೆಯ ಗಡಿಯನ್ನು ಪರೀಕ್ಷಿಸಬಾರದು” ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.

“ಕೇಂದ್ರ ಸರ್ಕಾರ ವಾಂಗ್​ಚುಕ್ ಅವರ ತಾಳ್ಮೆಯನ್ನು ಪರೀಕ್ಷಿಸಬಾರದು. ಅವರ ಬೇಡಿಕೆಗಳಿಗೆ ‘ಹೌದು’ ಅಥವಾ ‘ಇಲ್ಲ’ ಎಂದು ಹೇಳಿ. ಅವರೊಂದಿಗೆ ಮಾತುಕತೆ ನಡೆಸಲು ಇರುವ ತೊಂದರೆಯಾದರೂ ಏನು?” ಎಂದು ಪ್ರಶ್ನಿಸಿದ್ದಾರೆ. 2011ರಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆ ನಡೆಸಿದ್ದ ಭ್ರಷ್ಟಾಚಾರ ವಿರೋಧಿ ಉಪವಾಸ ಸತ್ಯಾಗ್ರಹವು ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿ, ಲೋಕಪಾಲ್ ಕಾಯ್ದೆ ಜಾರಿಗೆ ಕಾರಣವಾಗಿತ್ತು. ಹೀಗಾಗಿ, ಅವರ ಈ ಇಂದಿನ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ಸೋನಂ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹಕ್ಕೆ ದೀಪಿಕಾ ಪಡುಕೋಣೆ ಬೆಂಬಲ? ಅಸಲಿ ಕಥೆ ಇಲ್ಲಿದೆ

ಸತ್ಯಾಗ್ರಹಿಯ ತಾಳ್ಮೆ ಪರೀಕ್ಷಿಸುವುದು ಸರಿಯಲ್ಲ:

ಈ ಬಗ್ಗೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅಣ್ಣಾ ಹಜಾರೆ, “ಸೋನಮ್ ವಾಂಗ್‌ಚುಕ್ ಅವರು ದೇಶದ ಪರಿಸರ ಮತ್ತು ಲಡಾಖ್‌ನ ಜನರ ಹಿತಾಸಕ್ತಿಗಾಗಿ ಶಾಂತಿಯುತವಾಗಿ ಹೋರಾಡುತ್ತಿದ್ದಾರೆ. ಒಬ್ಬ ಸತ್ಯಾಗ್ರಹಿಯ ತಾಳ್ಮೆಯನ್ನು ಪರೀಕ್ಷಿಸುವುದು ಪ್ರಜಾಪ್ರಭುತ್ವ ಸರ್ಕಾರಕ್ಕೆ ಶೋಭೆಯಲ್ಲ. ಕೇಂದ್ರ ಸರ್ಕಾರ ತಕ್ಷಣವೇ ಅವರೊಂದಿಗೆ ಮಾತುಕತೆ ನಡೆಸಿ ಬಿಕ್ಕಟ್ಟನ್ನು ಬಗೆಹರಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಉಪವಾಸ ನಿರತ ಹೋರಾಟಗಾರನ ಆರೋಗ್ಯದ ಭದ್ರತೆ ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರ ಮಾತುಕತೆಗೆ ಮುಂದಾಗದೆ ಹೀಗೆಯೇ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ಸೋನಮ್ ವಾಂಗ್‌ಚುಕ್ ಅವರಿಗೆ ಬೆಂಬಲವಾಗಿ ದೇಶದ ವಿವಿಧ ಭಾಗಗಳಲ್ಲಿ ನಾಗರಿಕರು ಬೀದಿಗೆ ಇಳಿಯಬೇಕಾಗುತ್ತದೆ” ಎಂದು ಅಣ್ಣಾ ಹಜಾರೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹವು 20 ದಿನಗಳನ್ನು ದಾಟಿದ್ದು, ಅಂಗಾಂಗ ವೈಫಲ್ಯದ ಭೀತಿ ಎದುರಾಗಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ದೆಹಲಿ ಹೈಕೋರ್ಟ್ ಈಗಾಗಲೇ ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇಡಲು ವೈದ್ಯಕೀಯ ಮಂಡಳಿಗೆ ಸೂಚಿಸಿದೆ. ದೆಹಲಿ ಹೈಕೋರ್ಟ್‌ನ ನಿರ್ದೇಶನ ಹಾಗೂ ವೈದ್ಯಕೀಯ ತಜ್ಞರ ಸಲಹೆಯ ಮೇರೆಗೆ ವಾಂಗ್‌ಚುಕ್ ಅವರನ್ನು ಪೊಲೀಸರು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಇದನ್ನೂ ಓದಿ: 20 ದಿನಗಳ ಉಪವಾಸದ ಬಳಿಕ ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ದಾಖಲು

ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿದರೂ ಹೋರಾಟ ನಿಂತಿಲ್ಲ. ಈ ಹಿಂದೆಯೇ ನಿಗದಿಯಾದಂತೆ ಜುಲೈ 20ರಂದು ಸಂಸತ್ತಿಗೆ ಹಮ್ಮಿಕೊಂಡಿರುವ ಬೃಹತ್ ರ‍್ಯಾಲಿ ನಡೆಯುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಾಂಗ್‌ಚುಕ್ ಅವರನ್ನು ಬಲವಂತವಾಗಿ ತೆರವುಗೊಳಿಸಿದ ಪೊಲೀಸರ ಕ್ರಮಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ನೀಟ್ ಅಕ್ರಮಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿವೆ.

ಕೇಜ್ರಿವಾಲ್ ಮತ್ತು ಇತರ ನಾಯಕರ ಬೆಂಬಲ:

ಆಪ್ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಈಗಾಗಲೇ ವಾಂಗ್‌ಚುಕ್ ಅವರನ್ನು ಭೇಟಿಯಾಗಿ ಬೆಂಬಲ ಸೂಚಿಸಿದ್ದು, ಜಂತರ್ ಮಂತರ್ ಪ್ರತಿಭಟನೆಗೆ ಸೇರುವಂತೆ ಜನರಿಗೆ ಕರೆ ನೀಡಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಡಿಎಂಕೆ ಸಂಸದೆ ಕನಿಮೊಳಿ ಮತ್ತು ಶಿವಸೇನೆಯ ಆದಿತ್ಯ ಠಾಕ್ರೆ ಅವರು ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದ್ದಾರೆ.

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು:

  • ನೀಟ್ ಹಗರಣದ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು.
  • ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA)ಯನ್ನು ವಿಸರ್ಜಿಸಬೇಕು.
  • ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನ್ನು ರದ್ದುಗೊಳಿಸಬೇಕು.
  • ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಕಠಿಣ ಕಾನೂನು ಜಾರಿಗೆ ತರಬೇಕು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ನನ್ನ ದೇವರನ್ನೇ ಕಳೆದುಕೊಂಡೆ’: ತಾಯಿ ಚೆನ್ನಮ್ಮ ನೆನೆದು ಗಳ ಗಳತೆ ಅತ್ತ ಹೆಚ್​​.ಡಿ. ರೇವಣ್ಣ – Kannada News | ‘I Lost My God’: Emotional H.D. Revanna Mourns Mother Chennamma’s Demise

ಹಾಸನ, ಜುಲೈ 19: ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ತಾಯಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನಡೆಯಲಿರುವ ಜಾಗವನ್ನು ಶಾಸಕ ಹೆಚ್​​.ಡಿ. ರೇವಣ್ಣ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುವಾಗ ಅಮ್ಮನನ್ನು ನೆನೆದು ಅವರು ಗಳ ಗಳನೆ ಅತ್ತಿದ್ದಾರೆ. ತಾಯಿ ಚೆನ್ನಮ್ಮ ನನಗೆ ದೇವತೆ ಸಮಾನ. ನನ್ನ ದೇವರನ್ನೇ ಕಳೆದುಕೊಂಡೆ ಎಂದು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಎಷ್ಟೋ ಜನರಿಗೆ ಅನ್ನ ಹಾಕಿದ ಕೈಅವರದು. ಕೊನೆಯದಾಗಿ ತಿರುಪತಿ ಪ್ರಸಾದ ಕೊಟ್ಟು ಮಾತನಾಡಿಸಿದ್ದೆ. ವೈದ್ಯರು ನಿನ್ನೆ ಬೆಳಗ್ಗೆ ಚೆನ್ನಮ್ಮ ಗುಣಮುಖ ಆಗ್ತಾರೆ ಎಂದಿದ್ದರು. ಆದರೆ ಅವರು ಬದುಕಿಬರಲಿಲ್ಲ ಎಂದು ಹೇಳುತ್ತಲೇ ಉಮ್ಮಳಿಸಿ ಬಂದ ದುಃಖ ತಡೆಯಲಾರದೆ ರೇವಣ್ಣ ಕಣ್ಣೀರಿಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version