Karnataka Dam Water Level: ಕೆಆರ್​ಎಸ್ ಡ್ಯಾಂ ಒಳಹರಿವಿನಲ್ಲಿ ಭಾರಿ ಇಳಿಕೆ, ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ – Kannada News | Karnataka Reservoir Water Level on 16 July 2026: KRS Inflow Drops Sharply, Water Storage Remains Below Last Year

ಬೆಂಗಳೂರು, ಜುಲೈ 16: ಕರ್ನಾಟಕದಲ್ಲಿ (Karnataka) ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಪರಿಣಾಮ ಪ್ರಮುಖ ಜಲಾಶಯಗಳಿಗೆ ಒಳಹರಿವು ಇನ್ನೂ ಗಣನೀಯವಾಗಿ ಹೆಚ್ಚಾಗಿಲ್ಲ. ವಿಶೇಷವಾಗಿ ಕಾವೇರಿ ಕಣಿವೆಯ ಕೆಆರ್‌ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೀರಿನ ಸಂಗ್ರಹ (Karnataka Dam Water Level) ಕಡಿಮೆಯೇ ಇದೆ. ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು 2 ಸಾವಿರ ಕ್ಯೂಸೆಕ್‌ಗಿಂತಲೂ ಕಡಿಮೆಯಾಗಿದ್ದು, ಜಲಾಶಯದ ನೀರಿನ ಮಟ್ಟ ಇನ್ನೂ 100 ಅಡಿ ಗಡಿ ದಾಟಿಲ್ಲ.

ಕೆಆರ್‌ಎಸ್ ಜಲಾಶಯ ನೀರಿನ ಮಟ್ಟ

ಬೆಂಗಳೂರಿನ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿಯಾಗಿದ್ದು, ಗುರುವಾರ ಬೆಳಿಗ್ಗೆ ಜಲಾಶಯದ ನೀರಿನ ಮಟ್ಟ 92.90 ಅಡಿ ದಾಖಲಾಗಿದೆ. ಜಲಾಶಯಕ್ಕೆ 1,909 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 626 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಕೆಆರ್‌ಎಸ್ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಆಗಿದ್ದು, ಪ್ರಸ್ತುತ 17.740 ಟಿಎಂಸಿ ನೀರು ಸಂಗ್ರಹವಾಗಿದೆ.

ಕಬಿನಿ ಜಲಾಶಯದ ನೀರಿನ ಮಟ್ಟ

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ನೀರಿನ ಮಟ್ಟ 70.90 ಅಡಿ ಇದೆ. ಕಳೆದ ವರ್ಷ ಇದೇ ದಿನ 81.15 ಅಡಿ ನೀರಿನ ಮಟ್ಟ ದಾಖಲಾಗಿತ್ತು. ಜಲಾಶಯದಲ್ಲಿ ಪ್ರಸ್ತುತ 12.12 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ದಿನ 17.72 ಟಿಎಂಸಿ ನೀರಿತ್ತು. ಜಲಾಶಯಕ್ಕೆ 1,636 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಇದೇ ದಿನ 10,995 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಪ್ರಸ್ತುತ 400 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಕಳೆದ ವರ್ಷ ಇದೇ ದಿನ 12,000 ಕ್ಯೂಸೆಕ್ ನೀರು ಹೊರಹರಿಸಲಾಗಿತ್ತು. ಕಳೆದ 24 ಗಂಟೆಗಳಲ್ಲಿ ಜಲಾನಯನ ಪ್ರದೇಶದಲ್ಲಿ 5 ಮಿ.ಮೀ. ಮಳೆಯಾಗಿದೆ.

ತುಂಗಭದ್ರಾ ಜಲಾಶಯ ನೀರಿನ ಮಟ್ಟ

ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದ ಗರಿಷ್ಠ ಮಟ್ಟ 1633 ಅಡಿ. ಪ್ರಸ್ತುತ ನೀರಿನ ಮಟ್ಟ 1603.12 ಅಡಿ ಇದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಆಗಿದ್ದು, ಸದ್ಯ 25.826 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ 24 ಗಂಟೆಗಳ ಸರಾಸರಿ ಒಳಹರಿವು 4,814 ಕ್ಯೂಸೆಕ್, ಪ್ರಸ್ತುತ ಒಳಹರಿವು 4,620 ಕ್ಯೂಸೆಕ್ ಇದೆ. ಸರಾಸರಿ 522 ಕ್ಯೂಸೆಕ್ ನೀರನ್ನು ಕಾಲುವೆಗಳಿಗೆ ಬಿಡಲಾಗುತ್ತಿದ್ದು, ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿಲ್ಲ.

ಹಾರಂಗಿ ಜಲಾಶಯ ನೀರಿನ ಮಟ್ಟ

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿ. ಪ್ರಸ್ತುತ ನೀರಿನ ಮಟ್ಟ 2847.90 ಅಡಿ ದಾಖಲಾಗಿದೆ. ಜಲಾಶಯಕ್ಕೆ 1,012 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 180 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಹೇಮಾವತಿ ಜಲಾಶಯ ನೀರಿನ ಮಟ್ಟ

ಹಾಸನ ಜಿಲ್ಲೆಯ ಗೊರೂರು ಸಮೀಪದ ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922 ಅಡಿ (37 ಟಿಎಂಸಿ). ಪ್ರಸ್ತುತ ನೀರಿನ ಮಟ್ಟ 2903.77 ಅಡಿ ಇದ್ದು, ಜಲಾಶಯದಲ್ಲಿ 22.218 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 1,383 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 300 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 2920.87 ಅಡಿ ಇದ್ದು, 36.108 ಟಿಎಂಸಿ ನೀರು ಸಂಗ್ರಹವಾಗಿತ್ತು. ಆಗ 8,714 ಕ್ಯೂಸೆಕ್ ಒಳಹರಿವು ಹಾಗೂ 5,350 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು.

ಇದನ್ನೂ ಓದಿ: ಇನ್ನೂ 100 ಅಡಿ ತಲುಪಿಲ್ಲ ಕೆಆರ್​ಎಸ್, ಕರ್ನಾಟಕದ ಡ್ಯಾಂಗಳ ಇಂದಿನ ನೀರಿನ ಮಟ್ಟದ ವಿವರ

ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿಯದಿರುವುದರಿಂದ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹ ಇನ್ನೂ ಕಳೆದ ವರ್ಷದ ಮಟ್ಟವನ್ನು ತಲುಪಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪ್ಪ ಇಟ್ಟ ಹೆಸರಿನಿಂದ ಹೊಸ ಉದ್ಯಮ ಆರಂಭಿಸಿದ ಅಪ್ಪು ಪುತ್ರಿ – Kannada News | Puneeth Rajkumar’s daughter Vanditha started small business

ಪುನೀತ್ ರಾಜ್​ಕುಮಾರ್ (Puneeth Rajkumar) ಅವರಿಗೆ ಉದ್ಯಮಗಳ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ನಟರಾಗಿರುವ ಜೊತೆಗೆ ನಿರ್ಮಾಣ ಮತ್ತು ಸಂಗೀತ ಕ್ಷೇತ್ರದಲ್ಲಿ ಉದ್ಯಮವನ್ನು ಪುನೀತ್ ನಡೆಸುತ್ತಿದ್ದರು. ಜೊತೆಗೆ ಇತರೆ ಕೆಲವು ಉದ್ಯಮಗಳ ಮೇಲೂ ಸಹ ಅವರು ಹೂಡಿಕೆ ಮಾಡಿದ್ದರು. ಮಾತ್ರವಲ್ಲದೆ, ಅವರ ಅತ್ತಿಗೆ, ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹ ಬೇಕಿಂಗ್ ಉದ್ಯಮ ಆರಂಭಿಸುವಂತೆ ಅಪ್ಪು ತಮಗೆ ಹೇಳುತ್ತಿದ್ದುದಾಗಿ ಹಿಂದೆ ಹೇಳಿಕೊಂಡಿದ್ದರು. ಆದರೆ ಇದೀಗ ಪುನೀತ್ ರಾಜ್​​ಕುಮಾರ್ ಅವರ ಪುತ್ರಿಯೇ ಹೊಸ ಉದ್ಯಮ ಆರಂಭ ಮಾಡಿದ್ದಾರೆ. ಅದೂ ಅಪ್ಪ ತಮಗೆ ಇಟ್ಟ ಹೆಸರಿನಿಂದಲೇ ಉದ್ಯಮ ಆರಂಭಿಸಿರುವುದು ವಿಶೇಷ.

ಪುನೀತ್ ರಾಜ್​​ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ ಅವರು ಬೇಕಿಂಗ್ ಉದ್ಯಮ ಆರಂಭಿಸಿದ್ದಾರೆ. ದೊಡ್ಡಮ್ಮ ಗೀತಾ ಶಿವರಾಜ್ ಕುಮಾರ್ ರೀತಿಯಲ್ಲಿಯೇ ವಂದಿತಾ ಅವರಿಗೂ ಸಹ ಬೇಕಿಂಗ್ ಬಗ್ಗೆ ಸಾಕಷ್ಟು ಆಸಕ್ತಿ ಮತ್ತು ನಿಪುಣತೆಯೂ ಇದೆ. ಹಾಗಾಗಿ ಇದೀಗ ಅವರೇ ಖುದ್ದು ಬೇಕಿಂಗ್ ಉದ್ಯಮಕ್ಕೆ ಕಾಲಿರಿಸಿದ್ದು, ಸಣ್ಣದಾಗಿ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ. ಅದಕ್ಕೆ ‘ನುಕಾಸ್ ಕೆಫೆ’ ಎಂದು ಹೆಸರಿಟ್ಟಿದ್ದಾರೆ. ಅಂದಹಾಗೆ ನುಕಾ ಎಂಬುದು, ವಂದಿತಾರನ್ನು ಅಪ್ಪು ಅವರು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು.

ಕೇಕು, ಬಿಸ್ಕೆಟ್ಟುಗಳು ಸೇರಿದಂತೆ ಇನ್ನೂ ಹಲವು ಬೇಕ್ಡ್ ಐಟಂಗಳನ್ನು ವಂದಿತಾ ಮಾರಾಟ ಮಾಡುತ್ತಿದ್ದಾರೆ. ಆನ್​​ಲೈನ್ ಮೂಲಕ ಆರ್ಡರ್ ಮಾಡಿ ಖಾಸ್ಯಗಳನ್ನು ಖರೀದಿ ಮಾಡಬಹುದಾಗಿದೆ. ಕೆಫೆಗಾಗಿ ವಿಶೇಷ ವೆಬ್​​ಸೈಟ್ ಅನ್ನು ಸಹ ವಂದಿತಾ ಮಾಡಿಸಿದ್ದಾರೆ. ಖುದ್ದು ಅವರೇ ಮನೆಯಲ್ಲಿ ಖಾದ್ಯ ತಯಾರಿಸಿ ಅದನ್ನು ಆನ್​​ಲೈನ್​​ನಲ್ಲಿ ಮಾರಾಟ ಮಾಡುತ್ತಾರೆ ವಂದಿತಾ. ತಾವು ಒಬ್ಬರೇ ಈ ಖಾದ್ಯಗಳನ್ನು ತಯಾರಿಸುವ ಕಾರಣ, ಕೆಲವೊಮ್ಮೆ ಆರ್ಡರ್ ಹೆಚ್ಚಾದಾಗ ಡೆಲಿವರಿ ತಡ ಆಗಬಹುದು ಎಂದು ತಮ್ಮ ವೆಬ್​​ಸೈಟ್​​ನಲ್ಲಿ ಅವರು ಮೊದಲೇ ಹೇಳಿಬಿಟ್ಟಿದ್ದಾರೆ.

ಇದನ್ನೂ ಓದಿ:ಶಾಲಾ ಪಠ್ಯಪುಸ್ತಕದಲ್ಲಿ ಇರಲಿದೆ ಪುನೀತ್ ರಾಜ್​ಕುಮಾರ್ ಜೀವನದ ಪಾಠ

ವಂದಿತಾ ಅವರು ತಮ್ಮ ಪ್ರೀತಿ ಪಾತ್ರರಿಗೆ, ಆಪ್ತರಿಗಾಗಿ ಕೇಕು ಇನ್ನಿತರೆ ಖಾದ್ಯಗಳನ್ನು ತಯಾರಿಸುತ್ತಿದ್ದರಂತೆ. ಇತ್ತೀಚೆಗಷ್ಟೆ ತಮ್ಮ ಸಹೋದರ ವಿನಯ್ ರಾಜ್​ಕುಮಾರ್ ಅವರ ‘ಗ್ರಾಮಾಯಣ’ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ವಂದಿತಾ ಅವರು ಅಣ್ಣನಿಗಾಗಿ ವಿಶೇಷ ಕೇಕ್ ತಯಾರಿಸಿದ್ದರು. ಅದರ ಮೇಲೆ ‘ಗ್ರಾಮಾಯಣ’ ಎಂದು ಸಹ ಬರೆದಿದ್ದರು. ಈ ಹವ್ಯಾಸವನ್ನೇ ಈಗ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ.

ಬೇಕಿಂಗ್ ಎಂಬುದು ವಂದಿತಾ ಅವರಿಗೆ ಹವ್ಯಾಸ ಆಗಿತ್ತಂತೆ ಈಗ ಹವ್ಯಾಸವನ್ನೇ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ತಿರಮಿಸು, ಥರಹೇವಾರಿ ಕೇಕುಗಳು, ಬಿಸ್ಟೆಟ್ಟುಗಳು, ಬ್ರೆಡ್, ಬ್ರೌನಿ, ಚೀಸ್​ ಕೇಕ್, ಕಪ್ ಕೇಕ್ ಇನ್ನೂ ಹಲವು ಖಾದ್ಯಗಳನ್ನು ವಂದಿತಾ ರೆಡಿ ಮಾಡಿ ಗ್ರಾಹಕರು ಮನೆಗಳಿಗೆ ಕಳಿಸಿಕೊಡುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:48 am, Thu, 16 July 26

Source link

ಇಷ್ಟಪಟ್ಟು ಕಾರು ತಗೊಂಡೆ, ಇಎಂಐ ಕಟ್ಟೋದು ಕಷ್ಟ ಆಗ್ತಿದೆ: ಮೋಕ್ಷಿತಾ – Kannada News | Mokshitha Pai talks about her new car and EMI struggles

ಮೋಕ್ಷಿತಾ (Mokshita) ಅವರು ‘ಜಗದ್ಧಾತ್ರಿ’ ಹೆಸರಿನ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ್ದಾರೆ. ಅದರ ಜೊತೆಗೆ ಇದೀಗ ಮೋಕ್ಷಿತಾ ಹೊಸ ಸಿನಿಮಾನಲ್ಲಿ ಸಹ ನಟಿಸುತ್ತಿದ್ದಾರೆ. ಒಟ್ಟಾರೆ ಅವರಿಗೆ ಇದು ಡಬಲ್ ಧಮಾಕಾ ಆಗಿದೆ. ಅಂದಹಾಗೆ ಇತ್ತೀಚೆಗಷ್ಟೆ ಮೋಕ್ಷಿತಾ ಅವರು ತಮ್ಮಿಷ್ಟದ ಕಾರೊಂದನ್ನು ಸಹ ಖರೀದಿ ಮಾಡಿದ್ದಾರೆ. ಮಹಿಂದ್ರಾ ಕಂಪೆನಿಯ ಎಲೆಕ್ರಿಕ್ ಕಾರೊಂದನ್ನು ಸಹ ನಟಿ ಖರೀದಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ನಟಿ ಮೋಕ್ಷಿತಾ, ತಮಗೆ ಕಾರು ಬಹಳ ಇಷ್ಟ, ಆ ಕಾರು ಬಹಳ ಇಷ್ಟವಾಗಿ ಖರೀದಿ ಮಾಡಿದೆ. ಈಗ ತಿಂಗಳಿಗೊಮ್ಮೆ ಇಎಂಐ ಕಟ್ಟಬೇಕು, ಅದೇ ಬೇಸರ ಎಂದಿದ್ದಾರೆ. ನಟಿ ಹೇಳಿರುವುದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Kids Sleep: ಸ್ಕೂಲ್‌ನಿಂದ ಬಂದ ತಕ್ಷಣ ಮಕ್ಕಳನ್ನು ಮಲಗಿಸಬಹುದೇ? – Kannada News | Should kids sleep after returning from school

ಶಾಲೆಯಿಂದ ಮನೆಗೆ ಬಂದ ಮಕ್ಕಳು (Children) ತುಂಬಾ ದಣಿದಂತೆ ಕಾಣುವುದು ಸಾಮಾನ್ಯ. ಬ್ಯಾಗ್ ಹೊತ್ತು, ತರಗತಿಗಳಲ್ಲಿ ಹಲವು ಗಂಟೆಗಳ ಕಾಲ ಕುಳಿತುಕೊಳ್ಳುವುದು, ಆಟ-ಪಾಠಗಳಲ್ಲಿ ಭಾಗವಹಿಸುವುದು, ಹೋಮ್‌ವರ್ಕ್‌ನ ಒತ್ತಡ ಇವೆಲ್ಲವೂ ಮಕ್ಕಳನ್ನು ಆಯಾಸಗೊಳಿಸುತ್ತವೆ. ಹೀಗಾಗಿ ಅನೇಕ ಪೋಷಕರು, “ಸ್ವಲ್ಪ ಹೊತ್ತು ಮಲಗಿದರೆ ದಣಿವು ಕಡಿಮೆಯಾಗುತ್ತದೆ” ಎಂದು ಮಕ್ಕಳನ್ನು ಮಲಗಲು ಬಿಡುತ್ತಾರೆ. ಆದರೆ ಶಾಲೆಯಿಂದ ಬಂದ ತಕ್ಷಣ ಮಕ್ಕಳನ್ನು ಮಲಗಿಸುವುದು ಎಲ್ಲ ಸಂದರ್ಭದಲ್ಲೂ ಸರಿಯಾದ ಅಭ್ಯಾಸವಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.

ತಜ್ಞರ ಪ್ರಕಾರ, ಮಕ್ಕಳು ಶಾಲೆಯಿಂದ ಮನೆಗೆ ಬಂದ ಕೂಡಲೇ ಎರಡು-ಮೂರು ಗಂಟೆಗಳ ಕಾಲ ಮಲಗಿದರೆ ರಾತ್ರಿ ನಿದ್ರೆಯ ಸಮಯ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ರಾತ್ರಿ ತಡವಾಗಿ ಮಲಗುವುದು, ಬೆಳಗ್ಗೆ ಎದ್ದೇಳಲು ಕಷ್ಟವಾಗುವುದು ಮತ್ತು ಮರುದಿನ ಶಾಲೆಯಲ್ಲಿ ಏಕಾಗ್ರತೆ ಕಡಿಮೆಯಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಬಹುದು. ಆದ್ದರಿಂದ ಶಾಲೆಯ ನಂತರದ ನಿದ್ರೆಯನ್ನು ನಿಯಂತ್ರಿಸುವುದು ಮುಖ್ಯ.

ಒಂದು ವೇಳೆ ಮಗು ತುಂಬಾ ದಣಿದಿದ್ದರೆ ಅಥವಾ ಆರೋಗ್ಯ ಸರಿಯಿಲ್ಲದಿದ್ದರೆ, 20 ರಿಂದ 30 ನಿಮಿಷಗಳವರೆಗೆ ಮಾತ್ರ ವಿಶ್ರಾಂತಿ ಪಡೆಯಲು ಅವಕಾಶ ನೀಡಬಹುದು. ಇದಕ್ಕಿಂತ ಹೆಚ್ಚು ಹೊತ್ತು ಮಲಗಿದರೆ ದೇಹದ ಜೈವಿಕ ಗಡಿಯಾರ (Body Clock) ಅಸ್ತವ್ಯಸ್ತವಾಗುವ ಸಾಧ್ಯತೆ ಇರುತ್ತದೆ. ಪರಿಣಾಮವಾಗಿ ರಾತ್ರಿ ಸಮಯದಲ್ಲಿ ನಿದ್ರೆ ಬರದೆ ಮಗು ಮೊಬೈಲ್, ಟಿವಿ ಅಥವಾ ಇತರ ಚಟುವಟಿಕೆಗಳತ್ತ ಹೆಚ್ಚು ಗಮನ ಹರಿಸಬಹುದು.

ಮಕ್ಕಳು ಮನೆಗೆ ಬಂದ ಬಳಿಕ ಮೊದಲು ಸ್ವಲ್ಪ ನೀರು ಕುಡಿಯುವುದು, ಪೌಷ್ಟಿಕ ತಿಂಡಿ ತಿನ್ನುವುದು ಮತ್ತು 30-45 ನಿಮಿಷಗಳ ಕಾಲ ಆಟವಾಡುವುದು ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗುವುದು ಉತ್ತಮ. ಇದರಿಂದ ಅವರ ದಣಿವು ಸಹಜವಾಗಿ ಕಡಿಮೆಯಾಗುತ್ತದೆ. ನಂತರ ಹೋಮ್‌ವರ್ಕ್ ಅಥವಾ ಓದಿಗೆ ಸಮಯ ಮೀಸಲಿಡಬಹುದು.

ಸಂಬಂಧ ಹಾಳಾಗದಿರಲು 35 ವರ್ಷದೊಳಗೆ ಈ 4 ವೈವಾಹಿಕ ಪಾಠಗಳನ್ನು ಕಲಿಯಿರಿ

ಮಕ್ಕಳಿಗೆ ಬೇಕಾಗುವ ನಿದ್ರೆಯ ಪ್ರಮಾಣ ಅವರ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. 6 ರಿಂದ 12 ವರ್ಷದ ಮಕ್ಕಳಿಗೆ ಪ್ರತಿದಿನ ಸುಮಾರು 9 ರಿಂದ 12 ಗಂಟೆಗಳ ನಿದ್ರೆ ಇದ್ದರೆ ಒಳ್ಳೆಯದು. 13 ರಿಂದ 18 ವರ್ಷದ ಹದಿಹರೆಯದವರಿಗೆ 8 ರಿಂದ 10 ಗಂಟೆಗಳ ನಿದ್ರೆ ಸಾಕಷ್ಟು ಎಂದು ನಿದ್ರಾ ತಜ್ಞರು ಶಿಫಾರಸು ಮಾಡುತ್ತಾರೆ. ಈ ಪ್ರಮಾಣದ ನಿದ್ರೆ ದೊರೆತರೆ ಮಕ್ಕಳ ಮೆದುಳಿನ ಬೆಳವಣಿಗೆ, ನೆನಪಿನ ಶಕ್ತಿ, ಕಲಿಕೆಯ ಸಾಮರ್ಥ್ಯ, ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

ಪೋಷಕರು ಮತ್ತೊಂದು ವಿಷಯಕ್ಕೂ ಗಮನ ಕೊಡಬೇಕು. ರಾತ್ರಿ ಮಲಗುವ ಮುನ್ನ ಮೊಬೈಲ್, ಟ್ಯಾಬ್ಲೆಟ್ ಅಥವಾ ಟಿವಿಯ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಪರದೆಗಳಿಂದ ಹೊರಬರುವ ನೀಲಿ ಬೆಳಕು (Blue Light) ನಿದ್ರೆಗೆ ಅಗತ್ಯವಾದ ಮೆಲಟೊನಿನ್ ಹಾರ್ಮೋನ್ ಉತ್ಪಾದನೆಗೆ ಅಡ್ಡಿಯಾಗುತ್ತದೆ. ಇದರಿಂದ ಮಕ್ಕಳು ತಡವಾಗಿ ನಿದ್ರೆಗೆ ಜಾರುವ ಸಾಧ್ಯತೆ ಹೆಚ್ಚಾಗುತ್ತದೆ.

ಒಟ್ಟಾರೆ, ಶಾಲೆಯಿಂದ ಬಂದ ತಕ್ಷಣ ಮಕ್ಕಳನ್ನು ದೀರ್ಘ ಸಮಯ ಮಲಗಿಸುವ ಬದಲು, ಅವರಿಗೆ ಆರೋಗ್ಯಕರ ತಿಂಡಿ, ಸ್ವಲ್ಪ ವಿಶ್ರಾಂತಿ, ಆಟ ಮತ್ತು ನಿಯಮಿತ ದಿನಚರಿಯನ್ನು ರೂಢಿಸುವುದು ಉತ್ತಮ. ಅಗತ್ಯವಿದ್ದರೆ ಕೇವಲ 20-30 ನಿಮಿಷಗಳ ಚಿಕ್ಕ ನಿದ್ದೆ ಸಾಕು. ಆದರೆ ಮಕ್ಕಳಿಗೆ ವಯಸ್ಸಿಗೆ ತಕ್ಕಷ್ಟು ರಾತ್ರಿ ನಿದ್ರೆ ದೊರೆಯುವಂತೆ ಪೋಷಕರು ಗಮನಹರಿಸಿದರೆ ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಉತ್ತಮವಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

World Snakes Day 2026: ವಿಶ್ವ ಹಾವುಗಳ ದಿನದ ಆಚರಣೆಯ ಹಿಂದಿದೆ ಈ ಉದ್ದೇಶ – Kannada News | World Snakes Day 2026: What are the history and significance of World Snakes Day

ವಿಶ್ವ ಹಾವುಗಳ ದಿನImage Credit source: Alan Tunnicliffe Photography/Moment/Getty Images

ಹಾವುಗಳೆಂದರೆ (Snakes) ಎಲ್ಲರಿಗೂ ಭಯನೇ. ತಮ್ಮ ಮನೆಯ ಸುತ್ತ ಮುತ್ತ ಹಾವುಗಳು ಬಂತೆಂದರೆ ಓಡಿ ಹೋಗುವವರೇ ಹೆಚ್ಚು. ಆದರೆ ಈ ಹಾವುಗಳ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ಈ ಭಾವನೆಯನ್ನು ತೊಡೆದು ಹಾಕಿ ಪರಿಸರ ಸಮತೋಲನದಲ್ಲಿ ಅವುಗಳ ಪಾತ್ರವನ್ನು ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 16 ರಂದು ವಿಶ್ವ ಹಾವುಗಳ ದಿನವನ್ನು (World Snakes Day) ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆ ಹುಟ್ಟಿಕೊಂಡದ್ದು ಹೇಗೆ? ಈ ಮಾಹಿತಿ ಇಲ್ಲಿದೆ ನೋಡಿ.

ವಿಶ್ವ ಹಾವುಗಳ ದಿನದ ಇತಿಹಾಸವೇನು?

ವಿಶ್ವ ಹಾವು ದಿನವನ್ನು ಯಾವಾಗಿನಿಂದ ಆಚರಣೆ ಮಾಡಿಕೊಂಡು ಬರಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಈ ಹಾವುಗಳ ಉಳಿವಿಗಾಗಿ ಬಹಳ ಹಿಂದಿನಿಂದಲೂ ಕೆಲ ಧಾರ್ಮಿಕ ಆಚರಣೆಗಳು ಜಾರಿಯಲ್ಲಿದೆ.

ಇದನ್ನೂ ಓದಿ: World Youth Skills Day 2026: ವಿಶ್ವ ಯುವ ಕೌಶಲ್ಯ ದಿನದ ಇತಿಹಾಸ, ಮಹತ್ವ ತಿಳಿಯಿರಿ

ವಿಶ್ವ ಹಾವುಗಳ ದಿನ ಮಹತ್ವ ಹಾಗೂ ಆಚರಣೆ ಹೇಗೆ?

ಭಾರತವು ಸರಿಸುಮಾರು 300 ಹಾವು ಪ್ರಭೇದಗಳಿವೆ. ಆದರೆ ಈ ಎಲ್ಲಾ ಹಾವುಗಳು ವಿಷಕಾರಿಗಳಲ್ಲ. ಆದರೆ ಇವು ಪರಿಸರ ಸಮತೋಲನಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತವೆ. ಇಲಿಗಳನ್ನು ನಿಯಂತ್ರಿಸುವುದರೊಂದಿಗೆ ಅವುಗಳಿಂದ ಹರಡುವ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾವುಗಳ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಉತ್ತೇಜಿಸಲು, ಅವುಗಳ ಸಂತತಿಗಳ ಉಳಿಸಲು ಹಾಗೂ ತಪ್ಪು ಕಲ್ಪನೆಯನ್ನು ಹೋಗಲಾಡಿಸುವುದೇ ಈ ದಿನದ ಮೂಲ ಉದ್ದೇಶ. ಈ ಉರಗ ದಿನದಂದು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:51 am, Thu, 16 July 26

Source link

ಮದ್ಯ ಪ್ರಿಯರಿಗೆ ವರದಾನವಾದ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ: ಕರ್ನಾಟಕದಲ್ಲಿ ಪ್ರೀಮಿಯಂ ಮದ್ಯದ ದರ ಮತ್ತಷ್ಟು ಇಳಿಕೆ! – Kannada News | India UK FTA to Make Premium Scotch and Imported Liquor Cheaper in Karnataka After New Excise Policy

ಬೆಂಗಳೂರು, ಜುಲೈ 16: ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (CETA) ಜುಲೈ 15ರಿಂದ ಜಾರಿಗೆ ಬಂದಿದ್ದು, ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಪ್ರೀಮಿಯಂ ಆಮದು ಮದ್ಯದ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಅಬಕಾರಿ ತೆರಿಗೆ ನೀತಿಯಿಂದ ಪ್ರೀಮಿಯಂ ಮದ್ಯದ ಬೆಲೆ ಇಳಿಕೆಯಾಗಿದ್ದು, ಇದೀಗ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದಿಂದ ಗ್ರಾಹಕರಿಗೆ ಮತ್ತಷ್ಟು ಬೆಲೆ ರಿಯಾಯಿತಿ ದೊರೆಯುವ ನಿರೀಕ್ಷೆ ಮೂಡಿದೆ.

ಕರ್ನಾಟಕ ಸರ್ಕಾರ ಮೇ 11ರಿಂದ ‘ಆಲ್ಕೋಹಾಲ್ ಇನ್ ಬೇವರೇಜ್ (Alcohol in Beverage – AIB)’ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿದ ಹೊಸ ಅಬಕಾರಿ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ನೀತಿಯ ಪರಿಣಾಮವಾಗಿ ಕಡಿಮೆ ಆಲ್ಕೋಹಾಲ್ ಅಂಶ ಹೊಂದಿರುವ ದುಬಾರಿ, ಪ್ರೀಮಿಯಂ ಆಮದು ಮದ್ಯಗಳ ಬೆಲೆ ಈಗಾಗಲೇ ಶೇ 15ರಿಂದ 23ರಷ್ಟು ಇಳಿಕೆಯಾಗಿದೆ. ಇದಕ್ಕೆ ವಿರುದ್ಧವಾಗಿ, ಹೆಚ್ಚು ಆಲ್ಕೋಹಾಲ್ ಅಂಶ ಹೊಂದಿರುವ ಕೆಲವು ಕಡಿಮೆ ಬೆಲೆಯ ಬ್ರಾಂಡ್‌ಗಳ ದರ ಏರಿಕೆಯಾಗಿದೆ.

ಬ್ರಿಟನ್​ನಿಂದ ಆಮದಾಗುವ ಸ್ಕಾಚ್ ವಿಸ್ಕಿ ದರ ಇಳಿಕೆ

ಈ ಬೆಳವಣಿಗೆಯ ಬೆನ್ನಲ್ಲೇ ಭಾರತ-ಬ್ರಿಟನ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಜುಲೈ 15ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಇದರಡಿ ಬ್ರಿಟನ್‌ನಿಂದ ಆಮದು ಮಾಡಿಕೊಳ್ಳುವ ಸ್ಕಾಚ್ ವಿಸ್ಕಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ತಕ್ಷಣದಿಂದಲೇ ಶೇ 150 ರಿಂದ ಶೇ 75ಕ್ಕೆ ಇಳಿಸಲಾಗಿದೆ. ಮುಂದಿನ 10 ವರ್ಷಗಳಲ್ಲಿ ಇದನ್ನು ಹಂತ ಹಂತವಾಗಿ ಶೇ 40ಕ್ಕೆ ಇಳಿಸುವ ಯೋಜನೆ ಇದೆ.

ಎಷ್ಟು ಇಳಿಕೆಯಾಗಲಿದೆ ಪ್ರೀಮಿಯಂ ಮದ್ಯದ ಬೆಲೆ?

ಇಂಟರ್‌ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ISWAI) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಿತ್ ಪಾಧಿ ಅವರ ಪ್ರಕಾರ, ಕರ್ನಾಟಕದ ಹೊಸ ತೆರಿಗೆ ನೀತಿಯಿಂದಲೇ ಆಮದು ಮದ್ಯದ ಬೆಲೆ ಗಣನೀಯವಾಗಿ ಇಳಿದಿದೆ. ಇದೀಗ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದ ಪರಿಣಾಮವಾಗಿ ಇನ್ನೂ ಶೇ 5ರಿಂದ 7ರಷ್ಟು ಹೆಚ್ಚುವರಿ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.

ತಕ್ಷಣವೇ ಪ್ರೀಮಿಯಂ ಮದ್ಯದ ಬೆಲೆ ಇಳಿಕೆಯಾಗುತ್ತಾ?

ಆದರೆ ಈ ಬೆಲೆ ಇಳಿಕೆ ತಕ್ಷಣವೇ ಜಾರಿಗೆ ಬರುವುದಿಲ್ಲ. ಹೊಸ ಸುಂಕ ವ್ಯವಸ್ಥೆ ಜಾರಿ, ಅಗತ್ಯ ದಾಖಲೆ ಪ್ರಕ್ರಿಯೆ ಹಾಗೂ ವಿತರಣಾ ವ್ಯವಸ್ಥೆಯ ಬದಲಾವಣೆ ಪೂರ್ಣಗೊಂಡ ನಂತರವೇ ಗ್ರಾಹಕರಿಗೆ ಇದರ ಸಂಪೂರ್ಣ ಲಾಭ ಸಿಗಲಿದೆ ಎಂದು ಉದ್ಯಮ ವಲಯ ಹೇಳಿದೆ.

ಭಾರತೀಯ ಮದ್ಯ ತಯಾರಕರಿಗೆ ಇದೆ ಸವಾಲು

ಇನ್ನೊಂದೆಡೆ, ಭಾರತೀಯ ಮದ್ಯ ತಯಾರಕರು ಈ ಒಪ್ಪಂದದಿಂದ ಕೆಲವು ಸವಾಲುಗಳನ್ನೂ ಎದುರಿಸಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಆಮದು ಸ್ಕಾಚ್ ವಿಸ್ಕಿಯ ಬೆಲೆ ಕಡಿಮೆಯಾಗುವುದರಿಂದ ಭಾರತೀಯ ಪ್ರೀಮಿಯಂ ಸಿಂಗಲ್ ಮಾಲ್ಟ್ ಹಾಗೂ ಇತರ ಉನ್ನತ ದರ್ಜೆಯ ಬ್ರಾಂಡ್‌ಗಳಿಗೆ ಸ್ಪರ್ಧೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಬಲ್ಕ್ ಸ್ಕಾಚ್ ಆಮದು ಸುಲಭವಾಗುವುದರಿಂದ ದೇಶೀಯ ಉತ್ಪಾದಕರಿಗೂ ಕೆಲವು ಮಟ್ಟದಲ್ಲಿ ಅನುಕೂಲವಾಗಲಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಹೊಸ ಆಲ್ಕೋಹಾಲ್ ನೀತಿ ಮ್ಯಾಜಿಕ್: ಬಿಯರ್ ಮಾರಾಟದಲ್ಲಿ ಶೇ 19.5 ರ ಭಾರಿ ಏರಿಕೆ, ಹರಿದುಬರುತ್ತಿದೆ ಅಬಕಾರಿ ಆದಾಯ

ತಜ್ಞರ ಪ್ರಕಾರ, ಈ ಮುಕ್ತ ವ್ಯಾಪಾರ ಒಪ್ಪಂದದಿಂದ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗಲಿದ್ದು, ಜಾಗತಿಕ ಪ್ರೀಮಿಯಂ ಬ್ರಾಂಡ್‌ಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯುವ ಸಾಧ್ಯತೆ ಇದೆ. ಜೊತೆಗೆ ದೇಶೀಯ ಮದ್ಯ ಉತ್ಪಾದಕರಿಗೂ ಉತ್ತಮ ಗುಣಮಟ್ಟದ ಬಲ್ಕ್ ಸ್ಕಾಚ್ ಲಭ್ಯವಾಗುವ ನಿರೀಕ್ಷೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:43 am, Thu, 16 July 26

Source link

KEA ಮೊದಲ ಸುತ್ತಿನ ಸೀಟು ಹಂಚಿಕೆ ಪೂರ್ಣ: ಇಂಜಿನಿಯರಿಂಗ್ ಸೇರ ಬಯಸುವವರಿಗೆ ಜುಲೈ 24 ಕೊನೆ ದಿನ; ಈ ಬಾರಿ ನಿಯಮದಲ್ಲಿ ದೊಡ್ಡ ಬದಲಾವಣೆ – Kannada News | KEA Counseling Results: 90K+ Engineering Seats Allotted, New Withdrawal Option

ಬೆಂಗಳೂರು, ಜು.16: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಸಿದ್ದ ಮೊದಲ ಸುತ್ತಿನ ಸೀಟು ಹಂಚಿಕೆಯ (Seat Allotment) ಫಲಿತಾಂಶವನ್ನು ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿ ಇಂಜಿನಿಯರಿಂಗ್ ವಿಭಾಗದಲ್ಲಿ ದಾಖಲೆಯ ಮಟ್ಟದ ಸೀಟುಗಳು ಹಂಚಿಕೆಯಾಗಿರುವುದು ವಿಶೇಷವಾಗಿದೆ.

ರಾಜ್ಯಾದ್ಯಂತ ಲಭ್ಯವಿದ್ದ ಒಟ್ಟು 91,724 ಇಂಜಿನಿಯರಿಂಗ್ ಸೀಟುಗಳ ಪೈಕಿ ಬರೋಬ್ಬರಿ 90,748 ಸೀಟುಗಳು ಈಗಾಗಲೇ ಮೊದಲ ಸುತ್ತಿನಲ್ಲೇ ಹಂಚಿಕೆಯಾಗಿವೆ. ಸದ್ಯ ಕೇವಲ 976 ಸೀಟುಗಳು ಮಾತ್ರ ಖಾಲಿ ಉಳಿದುಕೊಂಡಿವೆ.ವೈದ್ಯಕೀಯ, ದಂತವೈದ್ಯಕೀಯ, ಆಯುಷ್ ಮತ್ತು ಫಾರ್ಮಸಿ ಕೋರ್ಸ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವೃತ್ತಿಪರ ಕೋರ್ಸ್‌ಗಳ ಕೌನ್ಸೆಲಿಂಗ್ ನಡೆಸಲಾಗಿದೆ. ಲಭ್ಯವಿದ್ದ ಒಟ್ಟು 1,41,872 ಸೀಟುಗಳ ಪೈಕಿ 1,22,512 ಸೀಟುಗಳು ಹಂಚಿಕೆಯಾಗಿದ್ದು, 19,374 ಸೀಟುಗಳು ಖಾಲಿ ಉಳಿದಿವೆ.

ಮೊದಲ ಸುತ್ತಿನಲ್ಲಿ ಸೀಟು ಪಡೆದುಕೊಂಡ ವಿದ್ಯಾರ್ಥಿಗಳು ತಮಗೆ ಹಂಚಿಕೆಯಾಗಿರುವ ಕಾಲೇಜುಗಳಿಗೆ ಹೋಗಿ ವರದಿ ಮಾಡಿಕೊಳ್ಳಲು ಜುಲೈ 24 ರವರೆಗೆ ಕಾಲಾವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಸೀಟುಗಳ ಆಯ್ಕೆಯನ್ನು ದಾಖಲಿಸಲು (Choice Entry) ಪ್ರತಿ ಕೋರ್ಸ್‌ಗೂ ಭಿನ್ನವಾದ ದಿನಾಂಕಗಳನ್ನು ನಿಗದಿಪಡಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ನೆನಪಿಸಿದ್ದಾರೆ.

ಇಂಜಿನಿಯರಿಂಗ್ ಅಭ್ಯರ್ಥಿಗಳು ಜುಲೈ 16 ರಿಂದ ಚಾಯ್ಸ್ ಎಂಟ್ರಿ ಮಾಡಬಹುದು. ಕೃಷಿ ವಿಜ್ಞಾನ ಮತ್ತು ವೆಟರಿನರಿ ಅಭ್ಯರ್ಥಿಗಳು ಜುಲೈ 17 ರಿಂದ ಆಯ್ಕೆ ದಾಖಲಿಸಬಹುದು. ಯೋಗ ಮತ್ತು ನ್ಯಾಚುರೋಪತಿ ಅಭ್ಯರ್ಥಿಗಳು ಇವರಿಗೂ ಪ್ರತ್ಯೇಕ ದಿನಾಂಕಗಳನ್ನು ನೀಡಲಾಗಿದೆ.

ಇದನ್ನೂ ಓದಿ: TV9 Kannada News Live: ಫ್ಲ್ಯಾಟ್ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ, ಕುಸಿದು ಬಿದ್ದು 5ನೇ ತರಗತಿ ವಿದ್ಯಾರ್ಥಿ ಸಾವು; ಇಂದಿನ ಪ್ರಮುಖ ಸುದ್ದಿಗಳು

ಸೀಟು ಹಿಂಪಡೆಯಲು ಈ ಬಾರಿ ಹೊಸ ಸೌಲಭ್ಯ:

ಹಿಂದಿನ ವರ್ಷಗಳಲ್ಲಿ ಒಮ್ಮೆ ಸೀಟು ಹಂಚಿಕೆಯಾದ ನಂತರ ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯನ್ನು ಬದಲಾಯಿಸಲು ಅಥವಾ ಸೀಟನ್ನು ಹಿಂಪಡೆಯಲು ಅವಕಾಶವಿರಲಿಲ್ಲ. ಆದರೆ ಈ ಬಾರಿ ವಿದ್ಯಾರ್ಥಿ ಸ್ನೇಹಿ ನಿಯಮ ತರಲಾಗಿದ್ದು, ನಿಗದಿತ ಅವಧಿಯೊಳಗೆ ವಿದ್ಯಾರ್ಥಿಗಳು ತಮ್ಮ ಆಯ್ಕೆಯನ್ನು ಬದಲಾಯಿಸಿಕೊಳ್ಳಬಹುದು. ಉದಾಹರಣೆಗೆ, ‘Option 2’ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಆ ಬಳಿಕ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉತ್ತರ ಪ್ರದೇಶ: ಚಲಿಸುತ್ತಿದ್ದ ಟ್ರಕ್ ಟೈರ್ ಸ್ಫೋಟ, ಮನೆಯೊಳಗೆ ನುಗ್ಗಿದ ಲಾರಿಗೆ, ಒಂದೇ ಕುಟುಂಬದ ಮೂವರು ಬಲಿ – Kannada News | Mirzapur Fatal Accident: Truck Tire Burst Kills Three Family Members in House Crash

ಮಿರ್ಜಾಪುರ, ಜುಲೈ 16: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಬೆಳಗಿನ ಜಾವ ನಡೆದ ಭೀಕರ ರಸ್ತೆ ಅಪಘಾತ(Accident)ದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಸಿಮೆಂಟ್ ತುಂಬಿದ ಲಾರಿಯೊಂದು ಚಲಿಸುತ್ತಿರುವಾಗಲೇ ಟೈರ್ ಸ್ಫೋಟಗೊಂಡು, ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯೊಂದಕ್ಕೆ ನುಗ್ಗಿದ್ದರಿಂದ ಈ ಘೋರ ದುರಂತ ಸಂಭವಿಸಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಸಿಮೆಂಟ್ ಚೀಲಗಳನ್ನು ಹೊತ್ತ ಟ್ರಕ್ ವಾರಾಣಸಿಯಿಂದ ಸೋನಭದ್ರಕ್ಕೆ ವೇಗವಾಗಿ ಪ್ರಯಾಣಿಸುತ್ತಿತ್ತು. ಮಿರ್ಜಾಪುರ ಜಿಲ್ಲೆಯ ಹೆದ್ದಾರಿ ಬಳಿ ತಲುಪುತ್ತಿದ್ದಂತೆ ಲಾರಿಯ ಒಂದು ಟೈರ್ ಹಠಾತ್ತನೆ ಸ್ಫೋಟಗೊಂಡಿದೆ. ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ದೈತ್ಯ ಟ್ರಕ್, ನೇರವಾಗಿ ರಸ್ತೆ ಪಕ್ಕದಲ್ಲಿದ್ದ ಮನೆಯೊಳಗೆ ನುಗ್ಗಿದೆ.

ಗಾಢ ನಿದ್ರೆಯಲ್ಲಿದ್ದಾಗಲೇ ನಜ್ಜುಗುಜ್ಜಾದ ಜೀವಗಳು
ಅಪಘಾತ ಸಂಭವಿಸಿದಾಗ ಮುಂಜಾನೆ ಸಮಯವಾಗಿದ್ದರಿಂದ ಮನೆಯ ಸದಸ್ಯರೆಲ್ಲರೂ ಗಾಢ ನಿದ್ರೆಯಲ್ಲಿದ್ದರು. ನಿಯಂತ್ರಣ ತಪ್ಪಿದ ಲಾರಿ ನೇರವಾಗಿ ಮನೆಗೆ ಡಿಕ್ಕಿ ಹೊಡೆದ ರಭಸಕ್ಕೆ ಗೋಡೆಗಳು ಕುಸಿದು ಬಿದ್ದಿದ್ದು, ಮಲಗಿದ್ದವರ ಮೇಲೆಯೇ ಲಾರಿ ಹರಿದಿದೆ.

ಘಟನೆಯಲ್ಲಿ ರಾಜಾರಾಮ್ (47), ಸುಖಿಯಾ (70) ಮತ್ತು ಚಂದತಾರಾ (45) ಎಂಬುವವರು ಲಾರಿಯ ಚಕ್ರಗಳ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: ಎರಡು ಟ್ರಕ್​ಗಳ ನಡುವೆ ಸಿಲುಕಿ ಪಿಕಪ್ ವ್ಯಾನ್ ನಜ್ಜುಗುಜ್ಜು, ಮದುವೆ ಮನೆಯಿಂದ ಬರುತ್ತಿದ್ದ 13 ಮಂದಿ ಸಾವು

ಇಬ್ಬರಿಗೆ ಗಂಭೀರ ಗಾಯ: ಅಪಘಾತದಲ್ಲಿ 12 ವರ್ಷದ ಬಾಲಕಿ ಸೇರಿದಂತೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಮತ್ತು ಪೊಲೀಸರು ಗಾಯಾಳುಗಳನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವಾರಣಾಸಿಯ ಟ್ರಾಮಾ ಸೆಂಟರ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಡಿಯೋ

ಕ್ರೇನ್ ಮೂಲಕ ಟ್ರಕ್ ಹೊರಕ್ಕೆ
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಲಾರಿ ಸಂಪೂರ್ಣವಾಗಿ ಮನೆಯೊಳಗೆ ಸಿಲುಕಿಕೊಂಡಿತ್ತು. ನಂತರ ಪೊಲೀಸರು ಭಾರಿ ಗಾತ್ರದ ಕ್ರೇನ್ ಯಂತ್ರವನ್ನು ಸ್ಥಳಕ್ಕೆ ತರಿಸಿ, ಹಾನಿಗೊಳಗಾದ ಮನೆಯ ಅವಶೇಷಗಳ ಮಧ್ಯದಿಂದ ಟ್ರಕ್ ಅನ್ನು ಹೊರಕ್ಕೆ ತೆಗೆದಿದ್ದಾರೆ. ಸದ್ಯ ಲಾರಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಅಪಘಾತಕ್ಕೆ ಚಾಲಕನ ಬೇಜವಾಬ್ದಾರಿತನ ಕಾರಣವೇ ಅಥವಾ ತಾಂತ್ರಿಕ ದೋಷವೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ನಿದ್ರೆಯಲ್ಲಿದ್ದಾಗಲೇ ಮೂವರನ್ನು ಬಲಿಪಡೆದ ಈ ದುರಂತ ಸ್ಥಳೀಯರಲ್ಲಿ ಭಾರಿ ಶೋಕ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟಿ20 ವಿಶ್ವಕಪ್​ನಲ್ಲೂ ಎಲಿಮಿನೇಟರ್ ರೌಂಡ್: ಸೆಮಿಫೈನಲ್ ಎಂಟ್ರಿ ಮತ್ತಷ್ಟು ರೋಚಕ! – Kannada News | ICC T20 World Cup 2028 format explained in Kannada

2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಸ್ವರೂಪದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯೊಂದಿಗೆ ಟಿ20 ವಿಶ್ವಕಪ್​ಗೂ ಐಪಿಎಲ್ ಮಾದರಿಯ ಎಲಿಮಿನೇಟರ್ ರೌಂಡ್ ಅನ್ನು ಪರಿಚಯಿಸಲಾಗಿದೆ. ಹಾಗೆಯೇ ಈ ಹಿಂದೆ ಇದ್ದ ಸಾಂಪ್ರದಾಯಿಕ ‘ಸೂಪರ್ 8’ ಹಂತಕ್ಕೆ ಬ್ರೇಕ್ ಹಾಕಿರುವ ಐಸಿಸಿ, ಅದರ ಜಾಗದಲ್ಲಿ ಮತ್ತಷ್ಟು ರೋಮಾಂಚನಕಾರಿ ಹಾಗೂ ಕಠಿಣ ಸವಾಲಿನ ‘ಸೂಪರ್ 10’ ಹಂತವನ್ನು ಪರಿಚಯಿಸಿದೆ.

ಹೊಸ ಸಹವರ್ತಿ ರಾಷ್ಟ್ರಗಳಿಗೆ ವಿಶ್ವ ವೇದಿಕೆಯಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಲು ಅವಕಾಶ ಕಲ್ಪಿಸುವ ಮತ್ತು ಟೂರ್ನಿಯ ಉತ್ತರಾರ್ಧದ ಪಂದ್ಯಗಳನ್ನು ಮತ್ತಷ್ಟು ರೋಚಕಗೊಳಿಸುವ ಉದ್ದೇಶದಿಂದ ಐಸಿಸಿ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಒಟ್ಟು ಪಂದ್ಯಗಳ ಸಂಖ್ಯೆ 55 ರಷ್ಟೇ ಉಳಿದಿದ್ದರೂ, ಲೀಗ್ ಹಂತ ಮತ್ತು ನಾಕೌಟ್ ಹಂತಗಳಲ್ಲಿ ಭಾರಿ ಬದಲಾವಣೆಗಳನ್ನು ಮಾಡಲಾಗಿದ್ದು, ಈ ಬದಲಾವಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಂತ 1: ಗ್ರೂಪ್ ಸ್ಟೇಜ್:

  • ತಂಡಗಳ ಸಂಖ್ಯೆ:  2028ರ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಕಳೆದ ಬಾರಿಯಂತೆ ಒಟ್ಟು 20 ತಂಡಗಳು ಭಾಗವಹಿಸಲಿವೆ.
  • ಬದಲಾವಣೆ: ಈ ಹಿಂದೆ ಇದ್ದ 5 ತಂಡಗಳ 4 ಗುಂಪುಗಳ ಬದಲಾಗಿ, ಇನ್ನು ಮುಂದೆ ತಲಾ 4 ತಂಡಗಳ 5 ಗುಂಪುಗಳನ್ನು  ಮಾಡಲಾಗುತ್ತದೆ.
  • ಪಂದ್ಯಗಳು: ಈ ಹಂತದಲ್ಲಿ ಒಟ್ಟು 30 ಪಂದ್ಯಗಳು ನಡೆಯಲಿವೆ (ಹಿಂದೆ 40 ಪಂದ್ಯಗಳಿದ್ದವು).
  • ಅರ್ಹತೆ: ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ಒಟ್ಟು 10 ತಂಡಗಳು ಮುಂದಿನ ಹಂತಕ್ಕೆ ಲಗ್ಗೆ ಇಡಲಿವೆ.

ಹಂತ 2:  ‘ಸೂಪರ್ 10’:

  • 2 ಗ್ರೂಪ್: ಮೊದಲ ಸುತ್ತಿನಿಂದ ಅರ್ಹತೆ ಪಡೆದ 10 ತಂಡಗಳನ್ನು ತಲಾ 5 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.
  • ಪಂದ್ಯಗಳು: ರೌಂಡ್-ರಾಬಿನ್ ಮಾದರಿಯಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿವೆ.
  • ನೇರ ಸೆಮಿಫೈನಲ್: ಸೂಪರ್ 10 ಹಂತದ ಎರಡು ಗುಂಪುಗಳ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಎರಡು ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.

ಹಂತ 3: ಎಲಿಮಿನೇಟರ್ ರೌಂಡ್:

  • ಎಲಿಮಿನೇಟರ್ ಪಂದ್ಯಗಳು: ಈ ಸುತ್ತಿನಲ್ಲಿ ಸೂಪರ್ 10ರ ಗ್ರೂಪ್-1 ರಲ್ಲಿ 2ನೇ ಸ್ಥಾನ ಪಡೆದ ತಂಡವು ಗ್ರೂಪ್-2ರ 3ನೇ ಸ್ಥಾನಿ ತಂಡದೊಂದಿಗೆ ಸೆಣಸಾಡಲಿದೆ. ಅದೇ ರೀತಿ ಗ್ರೂಪ್-2ರ 2ನೇ ಸ್ಥಾನಿ ತಂಡವು ಗ್ರೂಪ್-1ರ 3ನೇ ಸ್ಥಾನಿ ತಂಡದ ವಿರುದ್ಧ ಆಡಲಿದೆ.
  • ಸೆಮಿಫೈನಲ್: ಎಲಿಮಿನೇಟರ್ ಪಂದ್ಯಗಳಲ್ಲಿ ಗೆದ್ದ 2 ತಂಡಗಳು, ಈಗಾಗಲೇ ನೇರ ಅರ್ಹತೆ ಪಡೆದಿರುವ 2 ತಂಡಗಳೊಂದಿಗೆ ಸೆಮಿಫೈನಲ್‌ನಲ್ಲಿ ಕಾದಾಡಲಿವೆ.
  • ಫೈನಲ್ ಪಂದ್ಯ: ಸೆಮಿಫೈನಲ್​ನಲ್ಲಿ ಗೆಲ್ಲುವ ಎರಡು ತಂಡಗಳು ಫೈನಲ್​ಗೆ ಪ್ರವೇಶಿಸಲಿದೆ.

ಅಂದರೆ ಈ ಬಾರಿ ಸೂಪರ್ 10 ಹಂತದಿಂದ ಒಟ್ಟು 6 ತಂಡಗಳು ಸೆಮಿಫೈನಲ್​ ರೇಸ್‌ನಲ್ಲಿ ಉಳಿಯಲಿವೆ. ಮೊದಲಿಗೆ ಎರಡು ಗ್ರೂಪ್‌ಗಳ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟರೆ, ಉಳಿದ ನಾಲ್ಕು ತಂಡಗಳು ಎಲಿಮಿನೇಟರ್ ಪಂದ್ಯಗಳ ಮೂಲಕ ಸೆಮಿಫೈನಲ್‌ನ ಉಳಿದ 2 ಸ್ಥಾನಗಳಿಗಾಗಿ ಹೋರಾಡಲಿವೆ. ಇದರಿಂದಾಗಿ ಮುಂಬರುವ ಟಿ20 ವಿಶ್ವಕಪ್​ನ ನಾಕೌಟ್ ಹಂತವು ಮತ್ತಷ್ಟು ರೋಚಕವಾಗಿರಲಿದೆ.

ಇದನ್ನೂ ಓದಿ: 11+3 ತಂಡಗಳು, ಸೂಪರ್-7: ಏಕದಿನ ವಿಶ್ವಕಪ್ ಸ್ವರೂಪ ಬದಲು

ಒಟ್ಟಾರೆಯಾಗಿ ಹೇಳುವುದಾದರೆ, ಐಸಿಸಿ ತಂದಿರುವ ಈ ಹೊಚ್ಚ ಹೊಸ ‘ಸೂಪರ್ 10’ ಮತ್ತು ‘ಎಲಿಮಿನೇಟರ್’ ಸ್ವರೂಪವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲಿದೆ. ಐಪಿಎಲ್ ಮಾದರಿಯ ಈ ನಾಕೌಟ್ ನಿಯಮದಿಂದಾಗಿ ಪ್ರತಿ ಪಂದ್ಯವೂ ಅಂತಿಮ ಓವರ್‌ನವರೆಗೂ ಕುತೂಹಲ ಕಾಯ್ದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದು.

Source link

TV9 Kannada News Live: ಫ್ಲ್ಯಾಟ್ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ, ಕುಸಿದು ಬಿದ್ದು 5ನೇ ತರಗತಿ ವಿದ್ಯಾರ್ಥಿ ಸಾವು; ಇಂದಿನ ಪ್ರಮುಖ ಸುದ್ದಿಗಳು – Kannada News | V9 Kannada Live Breaking News 16 July 2026 CM DK Shivakumar, Karnataka Politics, Dharwad News Cinema Latest Updates Online

Breaking News Today Live Updates in Kannada: ರಾಜಧಾನಿಯಲ್ಲಿ ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಗಂಭೀರ ಆರೋಪದ ಮೇಲೆ ತಾಯಿ ಹಾಗೂ ಮಗಳ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಅರ್ಹನ್ ಪಾಷಾ (12) ಎಂಬ ಬಾಲಕ ಕ್ಲಾಸ್ ರೂಮ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಇಂದು ದೆಹಲಿಯಲ್ಲಿ ಸಿಎಂ ಡಿಕೆ ಶಿವಕುಮಾರ್​ ಅವರು ಹೈಕಮಾಂಡ್​​​ನ್ನು ಭೇಟಿಯಾಗಿ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮನೆಗೆ ನೆಂಟಸ್ತನಕ್ಕೆ ಬಂದು ಉಪಹಾರ ಸವಿದು, ಅದೇ ಮನೆಯ ಬೀಗತಿಯ ಕುತ್ತಿಗೆಯಲ್ಲಿದ್ದ 5 ಲಕ್ಷ ರೂಪಾಯಿ ಮೌಲ್ಯದ 45 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದ ಕಿರಾತಕಿ ಸುಶೀಲಮ್ಮ ಎಂಬಾಕೆಯನ್ನು ಶ್ರೀನಿವಾಸಪುರ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ಲೂರು ಗ್ರಾಮದಲ್ಲಿ ಈ ವಿಚಿತ್ರ ಹಾಗೂ ರೋಚಕ ಕಳ್ಳತನ ನಡೆದಿತ್ತು. ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷವು ರಕ್ತಸಿಕ್ತ ಕ್ರಾಂತಿಗೆ ಕಾರಣವಾಗಿದೆ. ಕೇವಲ 24 ಗಂಟೆಗಳಲ್ಲಿ ಇರಾನ್ ಮೇಲೆ 3ನೇ ಬಾರಿಗೆ ಭೀಕರ ವಾಯುದಾಳಿ ನಡೆಸಿರುವ ಅಮೆರಿಕ ಪಡೆಗಳು, ಇರಾನ್ ಬಂದರುಗಳಿಗೆ ಕಠಿಣ ನೌಕಾ ದಿಗ್ಬಂಧನ ವಿಧಿಸಿವೆ. ಹೀಗೆ ಇಂದಿನ ಪ್ರಮುಖ ಸುದ್ದಿಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ ನೋಡಿ

Source link

Exit mobile version