ಕೋಲ್ಕತ್ತಾದಿಂದ ಬೆಂಗಳೂರು ಸೇರಿ ನಾಲ್ಕು ಮಹಾನಗರಗಳಿಗೆ ಐಷಾರಾಮಿ ಬಸ್ ಸೇವೆ ಆರಂಭ: ಪ್ರಯಾಣದ ಸಮಯ, ಟಿಕೆಟ್​​ ದರದ ಬಗ್ಗೆ ಇಲ್ಲಿದೆ ಮಾಹಿತಿ – Kannada News | Luxury Bus Services Launches From Kolkata to Bengaluru, Delhi, Chennai, and Puri: Check Travel Time, Ticket Fares and Amenities

ಕೋಲ್ಕತ್ತಾದಿಂದ ಬೆಂಗಳೂರಿಗೆ ಐಷಾರಾಮಿ ಬಸ್ ಸೇವೆ ಆರಂಭ

ಕೋಲ್ಕತ್ತಾ, ಜುಲೈ 15: ಕೋಲ್ಕತ್ತಾದಿಂದ ದೂರ ಪ್ರಯಾಣ ಮಾಡುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು, ದೆಹಲಿ, ಚೆನ್ನೈ ಹಾಗೂ ಪುರಿಗೆ ಐಷಾರಾಮಿ ಬಸ್ ಸೇವೆ ಆರಂಭಿಸಲಾಗಿದೆ. ರೈಲು ಹಾಗೂ ವಿಮಾನ ಪ್ರಯಾಣಕ್ಕೆ ಪರ್ಯಾಯವಾಗಿ ಈ ಸೇವೆಯನ್ನು ಪರಿಚಯಿಸಲಾಗಿದೆ. ಈ ಬಸ್‌ಗಳು ಕರುಣಾಮಯಿ ಬಸ್ ಟರ್ಮಿನಸ್‌ನಿಂದ ಸಂಚಾರ ಆರಂಭಿಸಲಿದ್ದು, ವಾರದ ಎಲ್ಲಾ ದಿನಗಳಲ್ಲೂ ಸೇವೆ ಲಭ್ಯವಿರಲಿದೆ ಎಂದು ಸಂಸ್ಥೆ ತಿಳಿಸಿದೆ.

ಮಾರ್ಗಗಳು ಮತ್ತು ಪ್ರಯಾಣ ದರ

  • ಕೋಲ್ಕತ್ತಾ–ದೆಹಲಿ: ₹2,500 ರಿಂದ ₹3,000, ಸುಮಾರು 17 ಗಂಟೆಗಳ ಪ್ರಯಾಣ.
  • ಕೋಲ್ಕತ್ತಾ–ಬೆಂಗಳೂರು: ₹4,500, ಸುಮಾರು 35 ಗಂಟೆಗಳ ಪ್ರಯಾಣ.
  • ಕೋಲ್ಕತ್ತಾ–ಚೆನ್ನೈ: ₹4,700, ಸುಮಾರು 24 ಗಂಟೆಗಳ ಪ್ರಯಾಣ.
  • ಕೋಲ್ಕತ್ತಾ–ಪುರಿ (ವೋಲ್ವೋ ವಿಶೇಷ): ₹1,500 ರಿಂದ ₹2,000, ಸುಮಾರು 8 ಗಂಟೆಗಳ ಪ್ರಯಾಣ.

ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ; ಬಂಡಾಯ ಬಣ ಸೇರಿದ ಟಿಎಂಸಿ ಹಿರಿಯ ನಾಯಕ ಮದನ್ ಮಿತ್ರ

ಪ್ರಯಾಣಿಕರಿಗೆ ಏನೆಲ್ಲ ಸೌಲಭ್ಯಗಳು ಲಭ್ಯ ?

ದೂರ ಪ್ರಯಾಣವನ್ನು ಆರಾಮದಾಯಕವಾಗಿಸಲು ಬಸ್‌ಗಳಲ್ಲಿ ಹಲವು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಬಯೋ ಟಾಯ್ಲೆಟ್, ದಿಂಬು ಮತ್ತು ಹೊದಿಕೆ, ವೈಯಕ್ತಿಕ ಮನರಂಜನೆ ಪರದೆ (OTT ವೀಕ್ಷಣೆಯೊಂದಿಗೆ), ಕುಡಿಯುವ ನೀರು, ತಿಂಡಿ, ಚಹಾ ಮತ್ತು ಕಾಫಿ, ಮಿನಿ ಸ್ನ್ಯಾಕ್ ಬಾರ್

ಈ ಸೇವೆಗೆ ಸಾರಿಗೆ ಸಚಿವ ಅರ್ಜುನ್ ಸಿಂಗ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಚಾಲನೆ ನೀಡಿದ್ದಾರೆ.  ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಸೇವೆ ನೀಡುವುದು ನಮ್ಮ ಗುರಿ. ಸರ್ಕಾರಿ ಬಸ್‌ಗಳಿಂದ ಮಾತ್ರ ಸಮಗ್ರ ಸೇವೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಖಾಸಗಿ ಸಂಸ್ಥೆಗಳ ಭಾಗವಹಿಸುವಿಕೆಯನ್ನು ನಾವು ಸ್ವಾಗತಿಸುತ್ತೇವೆ. ಖಾಸಗಿ ಬಸ್‌ಗಳಿಗೆ ಪರವಾನಗಿ ಮತ್ತು ಅನುಮತಿ ಪಡೆಯುವ ಪ್ರಕ್ರಿಯೆಯನ್ನೂ ಸರಳಗೊಳಿಸಲಾಗುತ್ತಿದೆ ಎಂದು  ಶಮಿಕ್ ಭಟ್ಟಾಚಾರ್ಯ ತಿಳಿಸಿದ್ದಾರೆ.

ಹಿಂದಿನ ಸರ್ಕಾರದ ವಿರುದ್ಧ ಸಂಸ್ಥೆ ಆರೋಪ

ಖಾಸಗಿ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಈ ಯೋಜನೆ ಹಲವು ವರ್ಷಗಳಿಂದ ಅನುಮತಿ ಸಿಗದೆ ವಿಳಂಬವಾಗಿತ್ತು ಎಂದು ಆರೋಪಿಸಿದ್ದಾರೆ. ಹಿಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಮಾರ್ಗಗಳಿಗೆ ಅನುಮತಿ ಪಡೆಯಲು ನಾಲ್ಕು ವರ್ಷಗಳ ಕಾಲ ಸಚಿವರ ಕಚೇರಿಗೆ ಅಲೆದಾಡಬೇಕಾಯಿತು. ಪ್ರತಿ ಹಂತದಲ್ಲೂ ಸಹಕಾರ ಸಿಗಲಿಲ್ಲ. ಕಡತಗಳು ಒಂದು ಮೇಜಿನಿಂದ ಮತ್ತೊಂದು ಮೇಜಿಗೆ ಸಾಗಲಿಲ್ಲ. ವಿವಿಧ ರೀತಿಯ ಒತ್ತಡಗಳು ಮತ್ತು ಪರೋಕ್ಷವಾಗಿ ಹಣದ ಬೇಡಿಕೆಯ ಸೂಚನೆಗಳು ಎದುರಾದವು. ಸರ್ಕಾರದ ಸಹಕಾರದ ಕೊರತೆಯಿಂದ ಸೇವೆ ಆರಂಭಿಸಲು ಸಾಧ್ಯವಾಗಿರಲಿಲ್ಲ ಎಂದು ಅವರು ದೂರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭ್ರಷ್ಟಾಚಾರದ ವಿರುದ್ಧ ವಿಜಯ್ ಕರೆ ನೀಡಿದ ಬೆನ್ನಲ್ಲೇ ಬಿಜೆಪಿಯಿಂದ ಟಿವಿಕೆ ನಾಯಕನ ಲಂಚದ ವಿಡಿಯೋ ಬಿಡುಗಡೆ – Kannada News | BJP releases TVK Bribery Video Tamil Nadu CM Vijay opens Helpline Number Against Corruption

ಚೆನ್ನೈ, ಜುಲೈ 15: ಭ್ರಷ್ಟಾಚಾರದ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (Joseph Vijay) ಕರೂರ್ ರ್‍ಯಾಲಿಯಲ್ಲಿ ನೀಡಿದ್ದ ಭಾಷಣದ ವಿಡಿಯೋ ಭಾರಿ ವೈರಲ್ ಆಗುತ್ತಿರುವ ಬೆನ್ನಲ್ಲೇ, ಅವರದ್ದೇ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಜಿಲ್ಲಾ ಪದಾಧಿಕಾರಿಯೊಬ್ಬರು ಲಂಚ ಪಡೆಯುತ್ತಿರುವ ಆಪಾದಿತ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿದೆ. ತಮಿಳುನಾಡು ಬಿಜೆಪಿ ನಾಯಕ ವಿನೋಜ್ ಪಿ. ಸೆಲ್ವಂ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ವಿಜಯ್ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಥವಚ್ಚಾ ಪೂರ್ವ ಜಿಲ್ಲೆಯ ಜಂಟಿ ಕಾರ್ಯದರ್ಶಿ ವೀರ ಎಂಬ ವ್ಯಕ್ತಿ ಸರ್ಕಾರಿ ಗುತ್ತಿಗೆದಾರರೊಬ್ಬರಿಂದ 1.30 ಲಕ್ಷ ರೂ. ಲಂಚ ಪಡೆಯುತ್ತಿರುವ ವಿಡಿಯೋ ಆ ಪಕ್ಷದ ನಿಜವಾದ ಮುಖವಾಡವನ್ನು ಬಯಲು ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

ಜುಲೈ 10 ರಂದು ಕರೂರ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ರ್‍ಯಾಲಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ವಿಜಯ್ ಭ್ರಷ್ಟಾಚಾರದ ವಿರುದ್ಧ ಗುಡುಗಿದ್ದರು. ತಮ್ಮ ಆಡಳಿತದಲ್ಲಿ ಲಂಚ ಪಡೆಯುವ ಅಥವಾ ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಯಾವುದೇ ವ್ಯಕ್ತಿಗೆ ಅವಕಾಶ ನೀಡುವುದಿಲ್ಲ. ಅಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಅವರು ಭರವಸೆ ನೀಡಿದ್ದರು. ಹಾಗೇ, ಯಾರಾದರೂ ನಿಮ್ಮ ಬಳಿ ಲಂಚ ಕೇಳಿದರೆ ಕೊಡುವುದಿಲ್ಲ ಎಂದು ಹೇಳಿ ಎಂದಿದ್ದರು. ಭ್ರಷ್ಟಾಚಾರದ ವಿರುದ್ಧ ಸಹಾಯವಾಣಿಯನ್ನೂ ಬಿಡುಗಡೆ ಮಾಡಿದ್ದರು. ಅದರ ಬೆನ್ನಲ್ಲೇ ಈ ಲಂಚದ ವಿಡಿಯೋ ಬಹಿರಂಗವಾಗಿರುವುದು ವಿಜಯ್ ಅಭಿಮಾನಿಗಳಿಗೆ ಮತ್ತು ಪಕ್ಷಕ್ಕೆ ಮುಜುಗರ ತಂದಿಟ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೆಮಿಕಂಡಕ್ಟರ್, ಮೂಲಸೌಕರ್ಯ, ಮೊಬೈಲ್ ಫೋನ್ ಉತ್ಪಾದನೆ ಸೇರಿದಂತೆ ಏಳು ಪ್ರಮುಖ ಯೋಜನೆಗಳಿಗೆ ಸರ್ಕಾರದ ಅನುಮೋದನೆ – Kannada News | Union Cabinet approves few big steps, including Semicon mission, mobile PLI, Varanasi projects

ನವದೆಹಲಿ, ಜುಲೈ 15: ಭಾರತದಲ್ಲಿ ತಯಾರಿಕಾ ಕ್ಷೇತ್ರ ಮತ್ತು ಮೂಲಸೌಕರ್ಯ ಕ್ಷೇತ್ರಕ್ಕೆ ಮತ್ತಷ್ಟು ಪುಷ್ಟಿ ಕೊಡಲು ಸರ್ಕಾರ ಪ್ರಯತ್ನಗಳನ್ನು ಮುಂದುವರಿಸಿದೆ. ಈ ನಿಟ್ಟಿನಲ್ಲಿ ಕೆಲ ಮಹತವದ ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಮತ್ತು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ದೇಶದ ಮೂಲಸೌಕರ್ಯ, ಸೆಮಿಕಂಡಕ್ಟರ್, ಕೃಷಿ ಮತ್ತು ರೈಲ್ವೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 2,19,353 ಕೋಟಿ ರೂ ವೆಚ್ಚದ 7 ಪ್ರಮುಖ ಐತಿಹಾಸಿಕ ನಿರ್ಧಾರಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳ ವಿವರ ಈ ಕೆಳಕಂಡಂತಿದೆ:

1) ವಾರಣಾಸಿಯಲ್ಲಿ ಎರಡು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು

ಉತ್ತರಪ್ರದೇಶದ ವಾರಣಾಸಿ ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಆಧುನಿಕ ಸಂಪರ್ಕ ಕಲ್ಪಿಸಲು ಎರಡು ಬೃಹತ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ:

  • ಲಿಂಕ್ ಕಾರಿಡಾರ್ ನಿರ್ಮಾಣ: ರಾಷ್ಟ್ರೀಯ ಹೆದ್ದಾರಿ-19 (NH-19) ಅನ್ನು ವಾರಣಾಸಿ ರಿಂಗ್ ರೋಡ್‌ಗೆ ಸಂಪರ್ಕಿಸುವ 46.039 ಕಿಮೀ ಉದ್ದದ ಲಿಂಕ್ ಕಾರಿಡಾರ್ ನಿರ್ಮಿಸಲಾಗುವುದು. ಗಂಗಾ ನದಿ ತೀರದ ಮೂಲಕ ಹಾದುಹೋಗುವ ಈ ಯೋಜನೆಗೆ ರೂ. 14,447.64 ಕೋಟಿ ವೆಚ್ಚವಾಗಲಿದೆ. ಇದರಲ್ಲಿ 6-ಲೇನ್ ಎಲಿವೇಟೆಡ್ ರಸ್ತೆ ಮತ್ತು ಅತ್ಯಾಧುನಿಕ ಕೇಬಲ್ ಸೇತುವೆ (Cable-stayed bridge) ಒಳಗೊಂಡಿರುತ್ತದೆ.
  • ಎಲಿವೇಟೆಡ್ ಕಾರಿಡಾರ್: ವರುಣಾ ನದಿ ತೀರದಲ್ಲಿ 6/4 ಲೇನ್‌ಗಳ ಮತ್ತೊಂದು ಬೃಹತ್ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಇದಕ್ಕೆ ರೂ. 10,998.32 ಕೋಟಿ ವೆಚ್ಚವಾಗಲಿದೆ.

ಇದನ್ನೂ ಓದಿ: ದೇಶದ ಭದ್ರತೆಗೆ ಕ್ವಾಂಟಮ್ ಕವಚ; ಡಿಆರ್​ಡಿಒದಿಂದ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಶನ್ ಸಿಸ್ಟಂನ ಪ್ರಯೋಗ ಯಶಸ್ವಿ; ಏನಿದು QKD?

2) ಸೆಮಿಕಾನ್ 2.0 ಮಿಷನ್

ಭಾರತವನ್ನು ಜಾಗತಿಕ ಚಿಪ್ ತಯಾರಿಕಾ ಹಬ್ ಮಾಡಲು ಐತಿಹಾಸಿಕ ಹೆಜ್ಜೆ ಇಡಲಾಗಿದೆ. ಭಾರತೀಯ ಸೆಮಿಕಂಡಕ್ಟರ್ ಮಿಷನ್‌ನ ಎರಡನೇ ಆವೃತ್ತಿಯಾದ ‘ಸೆಮಿಕಾನ್ 2.0’ ಯೋಜನೆಗೆ (Semicon 2.0 Mission) ರೂ. 1.27 ಲಕ್ಷ ಕೋಟಿ ಭಾರಿ ಮೊತ್ತದ ಅನುಮೋದನೆ ನೀಡಲಾಗಿದೆ. ಇದು ದೇಶದಲ್ಲಿ ಹೈ-ಟೆಕ್ ತಂತ್ರಜ್ಞಾನ ಮತ್ತು ಉದ್ಯೋಗ ಸೃಷ್ಟಿಗೆ ದೊಡ್ಡ ಕೊಡುಗೆ ನೀಡಲಿದೆ.

3) ಮೊಬೈಲ್ ಫೋನ್ ತಯಾರಿಕೆ

ದೇಶೀಯ ಮೊಬೈಲ್ ಉತ್ಪಾದನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಮೊಬೈಲ್ ಉತ್ಪಾದನಾ ಪ್ರೋತ್ಸಾಹಕ ಯೋಜನೆ (PLI) ಯ ಎರಡನೇ ಆವೃತ್ತಿಗೆ (Mobile PLI – 2nd Edition) ಅನುಮೋದನೆ ನೀಡಲಾಗಿದೆ. ಇದಕ್ಕೆ ರೂ. 62,500 ಕೋಟಿ ಅನುದಾನ ಮೀಸಲಿಡಲಾಗಿದೆ.

4) ಯೂರಿಯಾ ರಾಷ್ಟ್ರೀಯ ಹೂಡಿಕೆ ನೀತಿ – 2026

ರಸಗೊಬ್ಬರ (ಯೂರಿಯಾ) ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಹೊಸ ಹೂಡಿಕೆ ನೀತಿಯನ್ನು (National Investment Policy for Urea) ತರಲಾಗಿದೆ. ಇದರ ಅಡಿಯಲ್ಲಿ ದೇಶದಲ್ಲಿ 9 ಹೊಸ ಯೂರಿಯಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು. ಇದರಿಂದ ಹೆಚ್ಚುವರಿಯಾಗಿ 1 ಕೋಟಿ ಟನ್ ಯೂರಿಯಾ ಉತ್ಪಾದನೆಯಾಗಲಿದ್ದು, ಭಾರತವು ಯೂರಿಯಾ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಬಹುದಾಗಿದೆ.

ಇದನ್ನೂ ಓದಿ: ರಷ್ಯಾ ತೈಲ ಖರೀದಿ: ಭಾರತ ಮತ್ತು ಚೀನಾ ವಿರುದ್ಧ ಶೇ. 100 ಸುಂಕ ವಿಧಿಸಲು ಅಮೆರಿಕ ಮುಂದು; ಬಂತು ಹೊಸ ವಿಧೇಯಕ

5) ರೈಲ್ವೆ ಜಾಲದ ನವೀಕರಣ ಮತ್ತು ನಾಲ್ಕನೇ ರೈಲ್ವೆ ಲೈನ್

ರೈಲ್ವೆ ಸಂಪರ್ಕವನ್ನು ಬಲಪಡಿಸಲು ಮತ್ತು ಸಾರಿಗೆ ವೇಗವನ್ನು ಹೆಚ್ಚಿಸಲು ಹಳಿಗಳ ದ್ವಿಗುಣಗೊಳಿಸುವಿಕೆ (Track Doubling) ಹಾಗೂ ರೈಲ್ವೆ ಜಾಲದ ನವೀಕರಣ ಯೋಜನೆಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇದರಲ್ಲಿ ಅತ್ಯಂತ ಬ್ಯುಸಿ ಇರುವ ಮಾರ್ಗಗಳಲ್ಲಿ ನಾಲ್ಕನೇ ರೈಲ್ವೆ ಹಳಿ (4th Railway Line) ನಿರ್ಮಾಣ ಯೋಜನೆಯೂ ಸೇರಿದೆ.

ಈ ಎಲ್ಲಾ ಯೋಜನೆಗಳಿಗೆ ಒಟ್ಟಾರೆಯಾಗಿ ರೂ. 2.19 ಲಕ್ಷ ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಲಾಗುತ್ತಿದ್ದು, ಇದು ದೇಶದ ಆರ್ಥಿಕ ಪ್ರಗತಿಯನ್ನು ಹೆಚ್ಚಿಸುವುದರ ಜೊತೆಗೆ ಲಕ್ಷಾಂತರ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಸಭೆಗೆ ಗೈರಾದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ: “ನನಗೇನು ಸಮಸ್ಯೆ ಇರಲಿಲ್ಲ, ಅದಕ್ಕೆ ಹೋಗಲಿಲ್ಲ” – Kannada News | Ramalinga Reddy Dismisses Dissatisfaction Rumours After Skipping CMs Bengaluru Meeting

ಬೆಂಗಳೂರು ಜು.15: ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರು ಇತ್ತೀಚೆಗೆ ಕರೆದಿದ್ದ ಬೆಂಗಳೂರು ಶಾಸಕರ ಸಭೆಗೆ ಗೈರು ಆಗಿರುವ ಕುರಿತು ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. “ಸಮಸ್ಯೆಗಳಿದ್ದವರು ಮುಖ್ಯಮಂತ್ರಿಗಳ ಸಭೆಗೆ ಹೋಗಿದ್ದರು. ನನಗೇನು ಸಮಸ್ಯೆಗಳಿರಲಿಲ್ಲ, ಆದ್ದರಿಂದ ನಾನು ಹೋಗಲಿಲ್ಲ,” ಎಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಡಾ. ಜಿ. ಪರಮೇಶ್ವರ ಅವರು ಬೆಂಗಳೂರಿಗೆ ಸಂಬಂಧಿಸಿದ BMRDA ಮತ್ತು BDA ಖಾತೆಗಳನ್ನು ಹೊಂದಿದ್ದಾರೆ. ಸಮಸ್ಯೆಗಳಿದ್ದ ಶಾಸಕರು ಸಭೆಗೆ ಹಾಜರಾಗಿದ್ದರು. ತಮಗೆ ಯಾವುದೇ ವಿಷಯಗಳ ಕುರಿತು ಚರ್ಚೆ ಅಗತ್ಯವಿಲ್ಲದ ಕಾರಣ ಸಭೆಯಿಂದ ದೂರ ಉಳಿದಿರುವುದಾಗಿ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಈ ಹಿಂದೆ, ಬೆಂಗಳೂರು ಅಭಿವೃದ್ಧಿ ಖಾತೆ ಸಿಗದಿರುವ ಬಗ್ಗೆ ಅವರಲ್ಲಿ ಅಸಮಾಧಾನವಿದೆ ಎಂಬ ಊಹಾಪೋಹಗಳಿದ್ದವು. ಆದರೆ, ಈ ಕುರಿತು ಕೇಳಿದ ಪ್ರಶ್ನೆಗೆ ರಾಮಲಿಂಗಾ ರೆಡ್ಡಿ, “ಅದೆಲ್ಲಾ ಹಳೆಯ ಕಥೆಯಾಗಿದೆ. ನನಗೇನು ಅಸಮಾಧಾನವಿದ್ದರೆ ವಿಧಾನಸೌಧಕ್ಕೇ ಬರುತ್ತಿರಲಿಲ್ಲ,” ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಸಂಪುಟ ವಿಸ್ತರಣೆ ಮತ್ತು ಖಾತೆ ಬದಲಾವಣೆಯ ಕುರಿತು ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Auto Tips: ವಿವಿಧ ರೀತಿಯ ಹೈಬ್ರಿಡ್ ಕಾರುಗಳು ಯಾವುವು?, ಅವು ಹೇಗೆ ಕಾರ್ಯನಿರ್ವಹಿಸುತ್ತವೆ? – Kannada News | Auto Tips Types of hybrid cars explained parallel series plug in mild hybrid guide

ಇಂಧನ ಬೆಲೆ ಏರಿಕೆಯಾಗುತ್ತಿರುವ ಈ ಸಮಯದಲ್ಲಿ ಹೈಬ್ರಿಡ್ ಕಾರುಗಳ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಮಾನ್ಯ ಪೆಟ್ರೋಲ್ (Petrol) ಅಥವಾ ಡೀಸೆಲ್ ಕಾರುಗಳಿಗಿಂತ ಉತ್ತಮ ಮೈಲೇಜ್ ನೀಡುವ ಕಾರಣದಿಂದ ಅನೇಕರು ಹೈಬ್ರಿಡ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಹೈಬ್ರಿಡ್ ಕಾರುಗಳಲ್ಲಿ ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟರ್ ಕೂಡ ಇರುತ್ತದೆ. ಈ ಎರಡೂ ವ್ಯವಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸುವುದರಿಂದ ಇಂಧನ ಬಳಕೆ ಕಡಿಮೆಯಾಗುತ್ತದೆ ಮತ್ತು ಕಾರಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ಆದರೆ ಹೈಬ್ರಿಡ್ ಕಾರುಗಳು ಒಂದೇ ಮಾದರಿಯಲ್ಲ. ಅವು ಹಲವು ವಿಧಗಳಾಗಿದ್ದು, ಪ್ರತಿಯೊಂದರ ಕಾರ್ಯವಿಧಾನವೂ ವಿಭಿನ್ನವಾಗಿದೆ.

  1. ಪ್ಯಾರಲೆಲ್ ಹೈಬ್ರಿಡ್ (Parallel Hybrid)

ಇದು ಅತ್ಯಂತ ಸಾಮಾನ್ಯವಾಗಿ ಬಳಸುವ ಹೈಬ್ರಿಡ್ ತಂತ್ರಜ್ಞಾನವಾಗಿದೆ. ಮೊಟ್ಟಮೊದಲಿಗೆ ಟೊಯೋಟಾ ಪ್ರಿಯಸ್ ಕಾರಿನಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಲಾಯಿತು.

ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ವ್ಯವಸ್ಥೆಯಲ್ಲಿ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟರ್ ಎರಡೂ ನೇರವಾಗಿ ಚಕ್ರಗಳಿಗೆ ಶಕ್ತಿ ನೀಡುತ್ತವೆ. ಕಡಿಮೆ ವೇಗದಲ್ಲಿ ಕಾರು ಕೇವಲ ಬ್ಯಾಟರಿಯ ಸಹಾಯದಿಂದಲೇ ಚಲಿಸಬಹುದು. ಹೆಚ್ಚಿನ ವೇಗ ಅಥವಾ ಹೆಚ್ಚು ಶಕ್ತಿ ಬೇಕಾದಾಗ ಎಂಜಿನ್ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಯೋಜನ:

ಬ್ರೇಕ್ ಹಾಕುವಾಗ ಉತ್ಪತ್ತಿಯಾಗುವ ಶಕ್ತಿಯನ್ನು ವ್ಯರ್ಥ ಮಾಡದೇ ಬ್ಯಾಟರಿಗೆ ಮರುಸಂಗ್ರಹಿಸಲಾಗುತ್ತದೆ. ಇದನ್ನು ರೀಜೆನೆರೇಟಿವ್ ಬ್ರೇಕಿಂಗ್ (Regenerative Braking) ಎಂದು ಕರೆಯಲಾಗುತ್ತದೆ. ಇದರಿಂದ ವಿಶೇಷವಾಗಿ ನಗರ ಸಂಚಾರದಲ್ಲಿ ಉತ್ತಮ ಮೈಲೇಜ್ ಸಿಗುತ್ತದೆ.

  1. ಸೀರೀಸ್ ಹೈಬ್ರಿಡ್ (Series Hybrid)

ಈ ತಂತ್ರಜ್ಞಾನ ಸರಳವಾಗಿದ್ದರೂ ಕಾರುಗಳಲ್ಲಿ ಹೆಚ್ಚು ಬಳಸುವುದಿಲ್ಲ.

ಹೇಗೆ ಕಾರ್ಯನಿರ್ವಹಿಸುತ್ತದೆ?

ಇದರಲ್ಲಿ ಪೆಟ್ರೋಲ್ ಎಂಜಿನ್‌ಗೆ ಚಕ್ರಗಳೊಂದಿಗೆ ನೇರ ಸಂಪರ್ಕ ಇರುವುದಿಲ್ಲ. ಎಂಜಿನ್ ಕೇವಲ ಜನರೇಟರ್‌ನಂತೆ ಕೆಲಸ ಮಾಡಿ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಕಾರಿನ ಚಕ್ರಗಳು ಸಂಪೂರ್ಣವಾಗಿ ಎಲೆಕ್ಟ್ರಿಕ್ ಮೋಟರ್‌ನಿಂದಲೇ ಚಲಿಸುತ್ತವೆ.

ಬಳಕೆ:

ಈ ತಂತ್ರಜ್ಞಾನವನ್ನು ಹೆಚ್ಚಾಗಿ ದೊಡ್ಡ ರೈಲು ಎಂಜಿನ್‌ಗಳು ಮತ್ತು ಭಾರೀ ಟ್ರಕ್‌ಗಳಲ್ಲಿ ಬಳಸಲಾಗುತ್ತದೆ.

  1. ಪ್ಲಗ್-ಇನ್ ಹೈಬ್ರಿಡ್ (Plug-in Hybrid – PHEV)

ಇದು ಸಾಮಾನ್ಯ ಹೈಬ್ರಿಡ್ ಮತ್ತು ಸಂಪೂರ್ಣ ಎಲೆಕ್ಟ್ರಿಕ್ ಕಾರಿನ ನಡುವಿನ ತಂತ್ರಜ್ಞಾನವಾಗಿದೆ. ಹಲವು ವಾಹನ ತಯಾರಕ ಕಂಪನಿಗಳು ಈಗ ಪ್ಲಗ್-ಇನ್ ಹೈಬ್ರಿಡ್ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಜೂನ್​ನಲ್ಲಿ ಆಟೊಮೊಬೈಲ್ ಕ್ಷೇತ್ರಕ್ಕೆ ಸುಗ್ಗಿ; 25 ಲಕ್ಷಕ್ಕೂ ಅಧಿಕ ವಾಹನಗಳ ದಾಖಲೆ ಮಾರಾಟ

ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ಕಾರಿನಲ್ಲಿ ದೊಡ್ಡ ಸಾಮರ್ಥ್ಯದ ಬ್ಯಾಟರಿ ಇರುತ್ತದೆ. ಅದನ್ನು ಮನೆ ಅಥವಾ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ನಲ್ಲಿ ಪ್ಲಗ್ ಮೂಲಕ ಚಾರ್ಜ್ ಮಾಡಬಹುದು.

ಪ್ರಯೋಜನ:

ಬ್ಯಾಟರಿ ಪೂರ್ಣ ಚಾರ್ಜ್ ಇದ್ದರೆ 50 ರಿಂದ 80 ಕಿಲೋಮೀಟರ್‌ವರೆಗೆ ಕೇವಲ ವಿದ್ಯುತ್‌ನಲ್ಲೇ ಪ್ರಯಾಣಿಸಬಹುದು. ಬ್ಯಾಟರಿ ಖಾಲಿಯಾದ ನಂತರ ಇದು ಸಾಮಾನ್ಯ ಹೈಬ್ರಿಡ್ ಕಾರಿನಂತೆ ಕಾರ್ಯನಿರ್ವಹಿಸುತ್ತದೆ.

  1. ಮೈಲ್ಡ್ ಹೈಬ್ರಿಡ್ (Mild Hybrid)

ಹೆಸರೇ ಸೂಚಿಸುವಂತೆ, ಇದು ಹಗುರವಾದ ಹೈಬ್ರಿಡ್ ತಂತ್ರಜ್ಞಾನವಾಗಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ಕಾರಿನ ಎಲೆಕ್ಟ್ರಿಕ್ ಮೋಟರ್ ಸ್ವತಂತ್ರವಾಗಿ ಕಾರನ್ನು ಚಲಿಸುವಷ್ಟು ಶಕ್ತಿಯುತವಾಗಿರುವುದಿಲ್ಲ. ಇದು ಕೇವಲ ಪೆಟ್ರೋಲ್ ಎಂಜಿನ್‌ಗೆ ನೆರವಾಗುತ್ತದೆ. ಇದರಿಂದ ವೇಗ ಹೆಚ್ಚಿಸುವಾಗ ಎಂಜಿನ್ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ಇಂಧನದ ಉಳಿತಾಯವಾಗುತ್ತದೆ.

ಪ್ರಯೋಜನ:

ಈ ತಂತ್ರಜ್ಞಾನ ಕಡಿಮೆ ವೆಚ್ಚದಲ್ಲಿ ತಯಾರಾಗುವುದರಿಂದ ಅನೇಕ ಬಜೆಟ್ ಕಾರುಗಳಲ್ಲಿ ಇದನ್ನು ಬಳಸಲಾಗುತ್ತದೆ. ಆದರೆ ಇದರ ಮೈಲೇಜ್ ಫುಲ್ ಅಥವಾ ಪ್ಯಾರಲೆಲ್ ಹೈಬ್ರಿಡ್‌ಗಳಷ್ಟಿರದು.

ನಿಮಗೆ ಯಾವ ಹೈಬ್ರಿಡ್ ಕಾರು ಸೂಕ್ತ?

  • ದೂರದ ಪ್ರಯಾಣವನ್ನು ಹೆಚ್ಚಾಗಿ ಮಾಡುವವರಾದರೆ- ಪ್ಯಾರಲೆಲ್ ಹೈಬ್ರಿಡ್ ಉತ್ತಮ ಆಯ್ಕೆ.
  • ಮನೆ ಅಥವಾ ಕಚೇರಿಯಲ್ಲಿ ಚಾರ್ಜಿಂಗ್ ಸೌಲಭ್ಯ ಇದ್ದರೆ- ಪ್ಲಗ್-ಇನ್ ಹೈಬ್ರಿಡ್ (PHEV) ಹೆಚ್ಚು ಇಂಧನ ಉಳಿತಾಯ ಮಾಡುತ್ತದೆ.
  • ಕಡಿಮೆ ಬೆಲೆಯಲ್ಲಿ ಸ್ವಲ್ಪ ಹೆಚ್ಚು ಮೈಲೇಜ್ ಬೇಕಾದರೆ- ಮೈಲ್ಡ್ ಹೈಬ್ರಿಡ್ ಉತ್ತಮ ಆಯ್ಕೆಯಾಗಬಹುದು.

ಒಟ್ಟಾರೆ, ಹೈಬ್ರಿಡ್ ಕಾರುಗಳು ಇಂಧನ ಉಳಿತಾಯ, ಕಡಿಮೆ ಮಾಲಿನ್ಯ ಮತ್ತು ಉತ್ತಮ ಚಾಲನಾ ಅನುಭವ ನೀಡುವ ತಂತ್ರಜ್ಞಾನವನ್ನು ಹೊಂದಿವೆ. ಆದರೆ ಯಾವ ಮಾದರಿಯನ್ನು ಆಯ್ಕೆ ಮಾಡಬೇಕು ಎಂಬುದು ನಿಮ್ಮ ಬಜೆಟ್, ದಿನನಿತ್ಯದ ಪ್ರಯಾಣದ ದೂರ ಮತ್ತು ಚಾರ್ಜಿಂಗ್ ಸೌಲಭ್ಯದ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ; ಬಂಡಾಯ ಬಣ ಸೇರಿದ ಟಿಎಂಸಿ ಹಿರಿಯ ನಾಯಕ ಮದನ್ ಮಿತ್ರ – Kannada News | Another big blow to Mamata Banerjee TMC Leader Madan Mitra joins rebel faction

ಕೊಲ್ಕತ್ತಾ, ಜುಲೈ 15: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದೆ. ಟಿಎಂಸಿಯ ಹಿರಿಯ ನಾಯಕ ಮದನ್ ಮಿತ್ರ ಇಂದು ಟಿಎಂಸಿ ಪಕ್ಷ ತೊರೆದು, ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಟಿಎಂಸಿ ಬಣವನ್ನು ಸೇರಿಕೊಂಡಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಕಾಮರ್ಹಾಟಿ ಕ್ಷೇತ್ರದಿಂದ ಟಿಎಂಸಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದ ಮದನ್ ಮಿತ್ರ ಪಕ್ಷದ ಇತ್ತೀಚಿನ ಆಂತರಿಕ ಬಿಕ್ಕಟ್ಟಿನ ಸಮಯದಲ್ಲೂ ಮಮತಾ ಬ್ಯಾನರ್ಜಿ ಪರ ನಿಂತಿದ್ದರು. ಆದರೆ ಈಗ ಅವರು ರೆಬೆಲ್ ಬಣ ಸೇರಿಕೊಂಡಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ವಿರುದ್ಧ ಗಂಭೀರ ಆರೋಪ:

ಟಿಎಂಸಿ ಪಕ್ಷ ತೊರೆಯುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಮದನ್ ಮಿತ್ರ, ಮಮತಾ ಬ್ಯಾನರ್ಜಿ ಅವರ ಸೋದರಳಿಯನಾದ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಗಂಭೀರ ವಾಗ್ದಾಳಿ ನಡೆಸಿದರು. ಪಕ್ಷವನ್ನು ಬಲಪಡಿಸಲು ತಾವು ನೀಡಿದ ಸಲಹೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

“ನಾನು ಅಭಿಷೇಕ್ ಬ್ಯಾನರ್ಜಿಗೆ 6 ತಿಂಗಳು ಅಥವಾ ಒಂದು ವರ್ಷದ ಮಟ್ಟಿಗೆ ಪಕ್ಷದ ಜವಾಬ್ದಾರಿಯಿಂದ ಪಕ್ಕಕ್ಕೆ ಸರಿಯುವಂತೆ ಸಲಹೆ ನೀಡಿದ್ದೆ. ಮೊದಲು ನಾವೆಲ್ಲರೂ ಸೇರಿ ಪಕ್ಷವನ್ನು ಮರುನಿರ್ಮಾಣ ಮಾಡೋಣ, ಆಮೇಲೆ ನೀವು ಬಂದು ನಿಮ್ಮ ಸ್ಥಾನವನ್ನು ವಹಿಸಿಕೊಳ್ಳಿ ಎಂದು ಹೇಳಿದ್ದೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ನಾನು ಪಕ್ಷ ಬಿಡುವುದಿಲ್ಲ ಎಂದರು. ಈಗ ಪಕ್ಷ ಮುಳುಗುತ್ತಿದೆ. ಜನರು ಸಂಕಷ್ಟದಲ್ಲಿದ್ದಾರೆ. ಆದರೂ, ಎಲ್ಲರೂ ಸತ್ತರೂ ಪರವಾಗಿಲ್ಲ, ಅಭಿಷೇಕ್‌ನನ್ನು ಮಾತ್ರ ಉಳಿಸಬೇಕು ಎಂದು ಪಕ್ಷ ನಿರ್ಧರಿಸಿದೆ. ಹಾಗೆ ಮಾಡಲು ಪಕ್ಷಕ್ಕೆ ಒತ್ತಡ ಹೇರಲಾಗಿದೆ. ಇದು ಅತ್ಯಂತ ದುಃಖದ ಸಂಗತಿ. ಪಕ್ಷ ಎಲ್ಲರಿಗೂ ಸೇರಿದ್ದು. ಆದರೆ ಇವತ್ತು ಅದು ಕೇವಲ ಅಭಿಷೇಕ್ ಸೇವೆಗಷ್ಟೇ ಸೀಮಿತವಾಗಿರುವಂತೆ ಕಾಣುತ್ತಿದೆ” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ನಾನಿನ್ನೂ ಬದುಕಿದ್ದೇನೆ ಎಂಬುದು ನೆನಪಿರಲಿ; ಟಿಎಂಸಿ ಬಂಡಾಯ ನಾಯಕರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ

ಜಾರಿ ನಿರ್ದೇಶನಾಲಯವು ಮದನ್ ಮಿತ್ರ ಅವರ ಪತ್ನಿ ಮತ್ತು ಪುತ್ರರಿಗೆ ಸಮನ್ಸ್ ಜಾರಿ ಮಾಡಿದ ಕೇವಲ ಒಂದು ದಿನದ ಬೆನ್ನಲ್ಲೇ ಈ ದಿಢೀರ್ ಬೆಳವಣಿಗೆ ನಡೆದಿದ್ದು, ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಧೋರಣೆಯೇ ತಮ್ಮ ಈ ನಿರ್ಧಾರಕ್ಕೆ ಕಾರಣ ಎಂದು ಮಿತ್ರ ಆರೋಪಿಸಿದ್ದಾರೆ.

ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಮಾತನಾಡಿದ ಮದನ್ ಮಿತ್ರ, ತಾವು ತೃಣಮೂಲ ಕಾಂಗ್ರೆಸ್‌ನ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದರೂ, ಶಾಸಕ ಸ್ಥಾನದಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಮದನ್ ಮಿತ್ರ ಅವರ ಈ ನಿರ್ಧಾರ ಈಗಾಗಲೇ ಸಂಕಷ್ಟದಲ್ಲಿರುವ ತೃಣಮೂಲ ಕಾಂಗ್ರೆಸ್‌ಗೆ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸಲಿದೆ. ಮಿತ್ರ ಅವರ ಈ ಆರೋಪಗಳಿಗೆ ಟಿಎಂಸಿ ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ನಂತರ, ಮಮತಾ ಬ್ಯಾನರ್ಜಿ ಅವರು ಕೇವಲ ಎರಡು ವಾರಗಳ ಹಿಂದಷ್ಟೇ ಮದನ್ ಮಿತ್ರ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಅವರು ಬಂಡಾಯವೆದ್ದಿದ್ದಾರೆ. ಇತ್ತೀಚೆಗಷ್ಟೇ ಟಿಎಂಸಿಯ ಬಂಗಾಳ ಘಟಕದ ಅಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮದನ್ ಮಿತ್ರ ಅವರ ಈ ನಿರ್ಧಾರ ಮಮತಾಗೆ ದೊಡ್ಡ ಹೊಡೆತ ನೀಡಿದೆ.

ಇದನ್ನೂ ಓದಿ: ಟಿಎಂಸಿ ಪಕ್ಷ ತೊರೆದಿದ್ದ ಮೂವರು ಮಾಜಿ ಸಂಸದರು ಬಿಜೆಪಿಗೆ ಸೇರ್ಪಡೆ

ಟಿಎಂಸಿಯಲ್ಲಿ ಬಂಡಾಯದ ಬಿಕ್ಕಟ್ಟು:

2011ರಿಂದ ಸತತ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಅವರು 2026ರ ಚುನಾವಣಾ ಸೋಲಿನ ನಂತರ ಸರಣಿ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ರಿತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಟಿಎಂಸಿಯ 58 ಶಾಸಕರು ಈಗಾಗಲೇ ಬಂಡಾಯವೆದ್ದಿದ್ದು, ಕಳೆದ ತಿಂಗಳು ನಡೆದ ವಿಶೇಷ ಅಧಿವೇಶನದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಿ, ಅರೂಪ್ ರಾಯ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿ ವಿಧಾನಸಭೆಯ ಅಧಿಕೃತ ವಿರೋಧ ಪಕ್ಷದ ನಾಯಕರಾಗಿದ್ದಾರೆ. ತಾವೇ ನಿಜವಾದ ಟಿಎಂಸಿ ಎಂದು ಘೋಷಿಸಿಕೊಳ್ಳಲು ಈ ಬಣವು ಚುನಾವಣಾ ಆಯೋಗದ ಮೆಟ್ಟಿಲೇರಿದೆ.

ಇನ್ನೊಂದೆಡೆ, ಟಿಎಂಸಿಯ 28 ಲೋಕಸಭಾ ಸಂಸದರ ಪೈಕಿ 20 ಸಂಸದರು ಈಗಾಗಲೇ ಪಕ್ಷದಿಂದ ಹೊರಬಂದು ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಜೊತೆ ವಿಲೀನಗೊಂಡು, ಕೇಂದ್ರದ ಬಿಜೆಪಿ ನೇತೃತ್ವದ NDA ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲಿ ದಾಖಲೆ ಬರೆದ ಉಷ್ಣಾಂಶ: 112 ವರ್ಷಗಳ ಬಳಿಕ ಜುಲೈನಲ್ಲಿ ಅತ್ಯಧಿಕ ತಾಪಮಾನ ದಾಖಲು – Kannada News | Karnataka Weather Updates: Bengaluru Records 33.6°C, Breaking 112 Year Old Maximum Temperature Record for July

ಬೆಂಗಳೂರಲ್ಲಿ 112 ವರ್ಷದ ಬಳಿಕ ಜುಲೈನಲ್ಲಿ ದಾಖಲೆ ತಾಪಮಾನImage Credit source: Getty Images

ಬೆಂಗಳೂರು, ಜುಲೈ 15: ನೈಋತ್ಯ ಮುಂಗಾರು ದುರ್ಬಲಗೊಂಡಿರುವ ಪರಿಣಾಮ ಕರ್ನಾಟಕದಾದ್ಯಂತ ತಾಪಮಾನ ಏರಿಕೆಯಾಗಿದ್ದು, ಮಂಗಳವಾರ (ಜುಲೈ 14)ರಂದು ಬೆಂಗಳೂರಲ್ಲಿ ಗರಿಷ್ಠ ತಾಪಮಾನ 33.6 ಡಿಗ್ರಿ ಸೆಲ್ಸಿಯಸ್ ಕಂಡುಬಂದಿದೆ. ಜುಲೈ ತಿಂಗಳಲ್ಲಿ 112 ವರ್ಷಗಳ ಬಳಿಕ ನಗರದಲ್ಲಿ ದಾಖಲಾಗಿರುವ ಅತ್ಯಧಿಕ ತಾಪಮಾನ ಇದಾಗಿದೆ. ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ, ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಜುಲೈ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪಮಾನ 33.3 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಅದು 1914 ಮತ್ತು 1926ರಲ್ಲಿ ಸಂಭವಿಸಿತ್ತು. ಇದೀಗ 33.6 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ಆ ದಾಖಲೆಯನ್ನು ಬೆಂಗಳೂರು ಮುರಿದಿದೆ.

ತಾಪಮಾನ ಹೆಚ್ಚಳ ಯಾಕೆ?

ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಬೆಂಗಳೂರಿನ ಗರಿಷ್ಠ ತಾಪಮಾನ 28.3 ಡಿಗ್ರಿ ಸೆಲ್ಸಿಯಸ್ ಇರಬೇಕಾಗಿದ್ದು, ಈ ಬಾರಿ ಅದು 5 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ಏರಿಕೆಯಾಗಿದೆ. ಬೆಂಗಳೂರಷ್ಟೇ ಅಲ್ಲದೆ, ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲೂ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚು ದಾಖಲಾಗಿದೆ. ಹವಾಮಾನ ತಜ್ಞರ ಪ್ರಕಾರ, ನೈಋತ್ಯ ಮುಂಗಾರು ದುರ್ಬಲಗೊಂಡಿರುವುದರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಅದರ ಪರಿಣಾಮವಾಗಿ ತಾಪಮಾನ ಏರಿಕೆಯಾಗಿದೆ. ಉತ್ತರ ಒಳನಾಡು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಕೆಲ ದಿನಗಳು ಒಣಹವಾಮಾನ ಮುಂದುವರಿಯುವ ಸಾಧ್ಯತೆಯಿದೆ.

ಇದನ್ನೂ ಓದಿ: ರೈತರೇ ಗಮನಸಿ; ಬಿತ್ತನೆ ಸಂಬಂಧ ಹವಾಮಾನ ತಜ್ಞರು ನೀಡಿರುವ ಸಲಹೆ ಇಲ್ಲಿದೆ

ಉಷ್ಣಾಂಶ ಮತ್ತಷ್ಟು ಹೆಚ್ಚಳದ ಎಚ್ಚರಿಕೆ

ಈ ನಡುವೆ ರಾಜ್ಯದಲ್ಲಿ ಜುಲೈ 15ರಿಂದ 19ರ ವರೆಗೆ ಉಷ್ಣಾಂಶದಲ್ಲಿ 3-5 ಡಿಗ್ರಿ ಸೆಲ್ಸಿಯಸ್​​ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಬಿಸಿಗಾಳಿ ಮತ್ತು ತೇವಾಂಶ ಪರಿಸ್ಥಿತಿಗಳು ಹೆಚ್ಚಲಿರುವ ಸಾಧ್ಯತೆ ಹಿನ್ನಲೆ ಯೆಲ್ಲೋ ಅಲರ್ಟ್​​ ಘೋಷಿಸಿರೋದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು: ಶಿಥಿಲಾವಸ್ಥೆಗೆ ತಲುಪಿದ ಫ್ಲೈಓವರ್ ತಡೆಗೋಡೆ; ಜನರ ಜೀವಕ್ಕೆ ಕಂಟಕ! – Kannada News | Bengaluru Flyover Retaining Wall on the Verge of Collapse; Poses Serious Threat to Public Safety

ಬೀಳುವ ಹಂತದಲ್ಲಿರುವ ಫ್ಲೈಓವರ್ ತಡೆಗೋಡೆImage Credit source: tv9 kannada

ಬೆಂಗಳೂರು, ಜುಲೈ 15: ಸಿಲಿಕಾನ್ ಸಿಟಿಯಲ್ಲಿ (Bengaluru) ರಸ್ತೆ ಗುಂಡಿಗಳಿಂದ ಹೈರಾಣಾಗಿರುವ ವಾಹನ ಸವಾರರಿಗೆ ಈಗ ಮತ್ತೊಂದು ಹೊಸ ಗಂಡಾಂತರ ಎದುರಾಗಿದೆ. ನಗರದ ಪ್ರಮುಖ ರಸ್ತೆಯೊಂದರಲ್ಲಿ ಶಿಥಿಲಾವಸ್ಥೆಗೊಂಡು ರಸ್ತೆಯ ಕಡೆಗೆ ವಾಲಿ ನಿಂತಿರುವ ತಡೆಗೋಡೆಯೊಂದು ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ಅಪಾಯ ಕಣ್ಣೆದುರೇ ಕಾಣುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಮೇಲ್ಸೇತುವೆ ತಡೆಗೋಡೆ ದುರಸ್ತಿಗೆ ಜಿಬಿಎ (GBA) ಮೀನಾಮೇಷ ಎಣಿಸುತ್ತಿದೆ.

ಶಿಥಿಲಾವಸ್ಥೆಗೆ ತಲುಪಿದ ಮೇಲ್ಸೇತುವೆಯ ತಡೆಗೋಡೆ 

ಬೆಂಗಳೂರಿನಲ್ಲಿ ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿಗೆ ಮತ್ತೊಂದು ನಿದರ್ಶನ ಸಿಕ್ಕಿದೆ. ತುಮಕೂರು ರಸ್ತೆಯ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಸಮೀಪದ ಮೇಲ್ಸೇತುವೆಯ ತಡೆಗೋಡೆ ಶಿಥಿಲಾವಸ್ಥೆಗೆ ತಲುಪಿದೆ. ತಡೆಗೋಡೆಯ ಕಬ್ಬಿಣದ ಕಂಬಿಗಳು ಹೊರಗೆ ಬಂದಿದ್ದು, ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಭೀತಿ ಎದುರಾಗಿದೆ. ಯಶವಂತಪುರ ಟು ರಾಜಾಜಿನಗರ ಸಂಪರ್ಕಿಸುವ ಅತ್ಯಂತ ಪ್ರಮುಖ ರಸ್ತೆಯಲ್ಲೇ ಈ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಲ್ಲಿ ಆತಂಕ ಮನೆ ಮಾಡಿದೆ.

ವಾಹನ ಸವಾರರು ಹೇಳಿದ್ದಿಷ್ಟು 

“ಬೆಂಗಳೂರಿನಲ್ಲಿ ಜನಸಾಮಾನ್ಯರ ಜೀವಕ್ಕೆ ಗ್ಯಾರಂಟಿಯೇ ಇಲ್ಲದಂತಾಗಿದೆ. ಮೇಲಿಂದ ಯಾವಾಗ ಏನು ಬಂದು ಬೀಳುತ್ತದೋ ಎಂಬ ಭಯದಲ್ಲೇ ಓಡಾಡುವ ಪರಿಸ್ಥಿತಿ ಇದೆ,” ಎಂದು ವಾಹನ ಸವಾರರಾದ ಸಾಂಬಯ್ಯ ಅಳಲು ತೋಡಿಕೊಂಡಿದ್ದಾರೆ. ಮತ್ತೊಬ್ಬ ವಾಹನ ಸವಾರ ಚಂದ್ರಶೇಖರ್ ಮಾತನಾಡಿದ್ದು, “ಅಪಾಯಕಾರಿ ತಡೆಗೋಡೆಯನ್ನು ತೆರವುಗೊಳಿಸಿ ಹೊಸ ಗೋಡೆ ನಿರ್ಮಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ,” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಬಲಿಗಾಗಿ ಕಾದಿವೆ ಅಪಾಯಕಾರಿ ಗೋಡೆಗಳು? ಜೋರು ಮಳೆ ಬಂದ್ರೆ ಕುಸಿಯುವುದು ಗ್ಯಾರಂಟಿ

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ತುರ್ತು ಕ್ರಮ ಅಗತ್ಯವಾಗಿದೆ. ಯಾವುದೇ ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡು, ತಕ್ಷಣವೇ ಈ ಶಿಥಿಲಗೊಂಡ ತಡೆಗೋಡೆಯನ್ನು ತೆರವುಗೊಳಿಸಿ ಹೊಸ ತಡೆಗೋಡೆ ನಿರ್ಮಿಸಬೇಕು ಎಂದು ಸ್ಥಳೀಯರು ಹಾಗೂ ವಾಹನ ಸವಾರರು ಬಿಗಿ ಒತ್ತಾಯ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜುಲೈ 23ಕ್ಕೆ ಬಿಡುಗಡೆ ಆಗಲಿದೆ ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ – Kannada News | Actor CM Vijay Jana Nayagan movie Release Date Confirmed July 23 KVN Productions

ಕಾಲಿವುಡ್ ಸ್ಟಾರ್ ನಟ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Thalapathy Vijay) ಅವರ ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಬಿಡುಗಡೆ ದಿನಾಂಕ (Jana Nayagan Release Date) ಘೋಷಣೆ ಆಗಿದೆ. ಈ ಬಹುನಿರೀಕ್ಷಿತ ಸಿನಿಮಾಗೆ ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆ ಬಂಡವಾಳ ಹೂಡಿದ್ದು, ಈಗ ಚಿತ್ರದ ಬಿಡುಗಡೆಗೆ ಸಕಲ ತಯಾರಿ ಮಾಡಿಕೊಂಡಿದೆ. ಕಳೆದ ಏಳು ತಿಂಗಳಿನಿಂದ ಎದುರಿಸುತ್ತಿದ್ದ ಎಲ್ಲಾ ಕಾನೂನು ಹೋರಾಟಗಳು ಮತ್ತು ಸೆನ್ಸಾರ್ ಮಂಡಳಿ ಜೊತೆಗಿನ ವಿವಾದಗಳಿಗೆ ತೆರೆ ಬಿದ್ದಿದ್ದು, ‘ಜನ ನಾಯಕನ್’ ಚಿತ್ರವು ಜುಲೈ 23ರಂದು ವಿಶ್ವಾದ್ಯಂತ ಗ್ರ್ಯಾಂಡ್ ಆಗಿ ತೆರೆಕಾಣಲಿದೆ.

ಈ ಮೂಲಕ ಅಭಿಮಾನಿಗಳ ತಿಂಗಳುಗಳ ಕಾಯುವಿಕೆಗೆ ಚಿತ್ರತಂಡ ಅಧಿಕೃತವಾಗಿ ತೆರೆ ಎಳೆದಿದೆ. ನಟ ವಿಜಯ್ ಅವರು ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ‘ಜನ ನಾಯಗನ್’ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ ‘ಎ’ ಸರ್ಟಿಫಿಕೇಟ್ ಪಡೆದುಕೊಂಡಿರುವ ಈ ಚಿತ್ರವು ಜುಲೈ 23ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ.

ಕಿಚ್ಚು ಹಚ್ಚಿದ ಕೆವಿಎನ್ ಪ್ರೊಡಕ್ಷನ್ಸ್ ಪೋಸ್ಟ್:

ಕನ್ನಡದ ಹೆಸರಾಂತ ನಿರ್ಮಾಣ ಸಂಸ್ಥೆಯಾದ ‘ಕೆವಿಎನ್ ಪ್ರೊಡಕ್ಷನ್ಸ್’ ಈ ಚಿತ್ರವನ್ನು ಅತ್ಯಂತ ಅದ್ಧೂರಿಯಾಗಿ ನಿರ್ಮಿಸಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿ ಟ್ವೀಟ್ ಮಾಡಿರುವ ಸಂಸ್ಥೆ, ‘ಬೆಂಕಿಯಿಂದ ಪರೀಕ್ಷಿಸಲ್ಪಟ್ಟಿದೆ. ಸಮಯದಿಂದ ರೂಪಿಸಲ್ಪಟ್ಟಿದೆ. ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಹೋರಾಟ ಎಷ್ಟು ಕಠಿಣವಾಗಿರುತ್ತದೆಯೋ, ಜಯ ಅಷ್ಟೇ ಭರ್ಜರಿಯಾಗಿರುತ್ತದೆ’ ಎಂದು ಬರೆದುಕೊಂಡು ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ.

ಏಳು ತಿಂಗಳ ಸುದೀರ್ಘ ಹೋರಾಟ:

ವಾಸ್ತವವಾಗಿ ‘ಜನ ನಾಯಗನ್’ ಸಿನಿಮಾ ಈ ವರ್ಷದ ಆರಂಭದಲ್ಲಿ, ಅಂದರೆ ಜನವರಿ 9ರಂದು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಸೆನ್ಸಾರ್ ಪ್ರಮಾಣಪತ್ರದ ವಿವಾದ ಹಾಗೂ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ಕಾನೂನು ಪ್ರಕ್ರಿಯೆಗಳಿಂದಾಗಿ ಸಿನಿಮಾ ಬಿಡುಗಡೆ ತಡವಾಗಿತ್ತು. ಇಷ್ಟೇ ಅಲ್ಲದೆ, ಚಿತ್ರದ ಕೆಲವು ಪ್ರಮುಖ ದೃಶ್ಯಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದರೆ ಈಗ ಎಲ್ಲಾ ಅಡೆತಡೆಗಳನ್ನು ದಾಟಿ ಸಿನಿಮಾ ರಿಲೀಸ್ ಆಗುತ್ತಿರುವುದು ವಿಜಯ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.

ಕೊನೆಯ ಸಿನಿಮಾ; ನಿರೀಕ್ಷೆ ಅಪಾರ:

ದಳಪತಿ ವಿಜಯ್ ಅವರು ರಾಜಕೀಯಕ್ಕೆ ಪ್ರವೇಶಿಸಿ, ತಮಿಳುನಾಡಿನ ಸಿಎಂ ಆದ ಬಳಿಕ ತೆರೆಗೆ ಬರುತ್ತಿರುವ ಚಿತ್ರ ಇದಾಗಿದೆ. ಅಲ್ಲದೇ ಅವರು ನಟಿಸಿರುವ ಕೊನೆಯ ಸಿನಿಮಾ ಕೂಡ ಹೌದು. ಆ ಕಾರಣದಿಂದ ಸಿನಿಮಾ ಮೇಲಿನ ಜನರ ಕ್ರೇಜ್ ದುಪ್ಪಟ್ಟಾಗಿದೆ. ಈ ಮೊದಲೇ ಈ ಚಿತ್ರವು ಆನ್​ಲೈನ್​ನಲ್ಲಿ ಲೀಕ್ ಆಗಿತ್ತು. ಹಾಗಾಗಿ ಬಾಕ್ಸ್ ಆಫೀಸ್ ಭವಿಷ್ಯ ಏನಾಗಬಹುದು ಎಂಬುದನ್ನು ಕಾದುನೋಡಬೇಕು.

ಇದನ್ನೂ ಓದಿ: ‘ಜನ ನಾಯಗನ್’ ಚಿತ್ರದಿಂದ ದಳಪತಿ ವಿಜಯ್ ಮಗ ಜೇಸನ್ ಸಿನಿಮಾಗೆ ಸಂಕಷ್ಟ

ಎಚ್. ವಿನೋದ್ ನಿರ್ದೇಶನದ ಈ ಬಿಗ್ ಬಜೆಟ್ ರಾಜಕೀಯ ಆ್ಯಕ್ಷನ್ ಡ್ರಾಮಾದಲ್ಲಿ ವಿಜಯ್​ಗೆ ಜೋಡಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ ಮತ್ತು ನರೇನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತುಮಕೂರು: ಸರ್ಕಾರಿ ಆಸ್ಪತ್ರೆಯ ಮಾತ್ರೆಗಳು ಸ್ಮಶಾನ, ಗೋಮಾಳದಲ್ಲಿ ಪತ್ತೆ – Kannada News | Tumakuru: Govt Hospital Meds Found Dumped in Koratagere, Water Pollution Risk

ಕೊರಟಗೆರೆ, ಜು.15: ಬಡ ರೋಗಿಗಳಿಗೆ ಉಚಿತವಾಗಿ ಸಿಗಬೇಕಾದ ಸರ್ಕಾರಿ ಆಸ್ಪತ್ರೆಯ ಮಾತ್ರೆಗಳು ಸ್ಮಶಾನ ಹಾಗೂ ಜಾನುವಾರುಗಳು ಮೇಯುವ ಗೋಮಾಳದಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹುಲಿಕುಂಟೆ ಸಮೀಪದ ಕಾಮೇನಹಳ್ಳಿಯಲ್ಲಿ ನಡೆದಿದೆ. ಇನ್ನೂ ಬಳಸಲು ಯೋಗ್ಯವಾಗಿದ್ದ ಸಾವಿರಾರು ಮಾತ್ರೆಗಳನ್ನು ಯಾರಿಗೂ ತಿಳಿಯದಂತೆ ನಿರ್ಜನ ಪ್ರದೇಶದಲ್ಲಿ ಎಸೆದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರೆಗಳು ಸಿಕ್ಕ ಜಾಗದ ಸಮೀಪದಲ್ಲೇ ಪ್ರಮುಖ ಕೆರೆಯೊಂದಿದ್ದು, ಮಳೆ ಬಂದರೆ ಈ ಮಾತ್ರೆಗಳ ರಾಸಾಯನಿಕ ನೀರು ಕೆರೆ ಸೇರಿ ಇಡೀ ಗ್ರಾಮದ ಜಲಮೂಲ ಕಲುಷಿತಗೊಳ್ಳುವ ಭೀತಿ ಎದುರಾಗಿದೆ. ಪತ್ತೆಯಾದ ಮಾತ್ರೆಗಳಲ್ಲಿ ಬಹುತೇಕವು ಸಕ್ಕರೆ ಕಾಯಿಲೆ ಅಥವಾ ಮಧುಮೇಹ (Diabetes) ನಿಯಂತ್ರಣಕ್ಕೆ ನೀಡುವ ಮಾತ್ರೆಗಳಾಗಿದ್ದು, ಇವೆಲ್ಲವೂ ಸ್ಮಶಾನದ ಜಾಗದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸಾಮಾನ್ಯವಾಗಿ ಹಳೇ ಸ್ಟಾಕ್ ಅಥವಾ ಅವಧಿ ಮುಗಿದ (Expired) ಮಾತ್ರೆಗಳನ್ನು ಹೀಗೆ ಎಸೆಯಲಾಗುತ್ತದೆ. ಆದರೆ, ಇಲ್ಲಿ ಪತ್ತೆಯಾದ ಮಾತ್ರೆಗಳ ಮೇಲೆ ಆಗಸ್ಟ್ ಮತ್ತು ಸೆಪ್ಟೆಂಬರ್ 2026ರವರೆಗೆ ಬಳಸಲು ಕಾಲಾವಕಾಶ ಇರುವುದು ಕಂಡುಬಂದಿದೆ.ಈ ಎಲ್ಲಾ ಮಾತ್ರೆಗಳ ಸ್ಟ್ರಿಪ್ ಮೇಲೆ ಸ್ಪಷ್ಟವಾಗಿ ಇವು “ಸರ್ಕಾರಿ ಆಸ್ಪತ್ರೆಯ ಸರಬರಾಜು” ಎಂದು ಮುದ್ರಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version