S Janaki Passes Away: ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ? – Kannada News | S. Janakis Unbreakable Bond with Mysuru: Caretaker Naveen Shares Final Wishes and Memories

ಮೈಸೂರು, ಜುಲೈ 12: ಎಸ್. ಜಾನಕಿ ಅವರು ಆಂಧ್ರದಲ್ಲಿ ಜನಿಸಿದ್ದರೂ, ಮೈಸೂರಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ತಮ್ಮ ಜೀವನದ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕೆಂಬ ಅವರ ಅಚಲ ನಿರ್ಧಾರವಾಗಿತ್ತು. ಅವರ ಕೇರ್ ಟೇಕರ್ ನವೀನ್ ಈ ಕುರಿತು ಮಾತನಾಡುತ್ತಾ, ಜಾನಕಮ್ಮನವರ ಮಗ ಮೈಸೂರಿನಲ್ಲೇ ನಿಧನರಾದ ಬಳಿಕ, ಅವರು ಮೈಸೂರನ್ನು ಬಿಟ್ಟು ಹೋಗಲು ನಿರಾಕರಿಸಿದ್ದರು. ನಾನು ಮೈಸೂರಿನಲ್ಲೇ ಇರುತ್ತೇನೆ, ನಿಮ್ಮೊಂದಿಗೇ ಇರುತ್ತೇನೆ ಎಂದು ಹೇಳಿ ಕೈ ಹಿಡಿದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಜಾನಕಮ್ಮ ಹೈದರಾಬಾದ್‌ನಲ್ಲಿ ಅರಮನೆಯಂತಹ ಮನೆಯನ್ನು ಹೊಂದಿದ್ದರೂ, ಮೈಸೂರಿನಲ್ಲಿ ನವೀನ್ ಅವರೊಂದಿಗೆ ಸರಳವಾಗಿ ಉಳಿಯಲು ಬಯಸಿದರು. ನನ್ನ ಕೊನೆಯ ಉಸಿರು ಮೈಸೂರಿನಲ್ಲೇ ಹೋಗಬೇಕು ಎಂದು ಅವರು ಆಗಾಗ ಹೇಳುತ್ತಿದ್ದರು. ತಾವು ಹಾಡಿದ ಹಾಡುಗಳನ್ನು ಕೇಳಿದಾಗ ಅಮ್ಮ ಬಹಳ ಖುಷಿಪಡುತ್ತಿದ್ದರು. ತಮ್ಮ ಸ್ಮರಣಶಕ್ತಿಯ ಬಗ್ಗೆಯೂ ಅವರಿಗೆ ಅಪಾರ ಹೆಮ್ಮೆಯಿತ್ತು. ಅನಾರೋಗ್ಯದ ನಡುವೆಯೂ ಹಳೆಯ ಕಲಾವಿದರ ಹೆಸರುಗಳನ್ನು ನಿಖರವಾಗಿ ಹೇಳುತ್ತಿದ್ದರು ಎಂದು ನವೀನ್ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಮುಖ ಸ್ಟ್ರೈಕರ್​ಗೆ ರೆಡ್ ಕಾರ್ಡ್​: ಅರ್ಜೆಂಟೀನಾ ಪಂದ್ಯದಲ್ಲಿ ಮತ್ತೆ ವಿವಾದ! – Kannada News | Argentina vs Switzerland: breel embolo red card controversy and rules

ಫಿಫಾ ವಿಶ್ವಕಪ್ 2026ರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ವಿಟ್ಜರ್‌ಲ್ಯಾಂಡ್ ತಂಡದ ಫಾರ್ವರ್ಡ್ ಆಟಗಾರ ಬ್ರೀಲ್ ಎಂಬೊಲೊ ಅವರಿಗೆ ನೀಡಲಾದ ರೆಡ್ ಕಾರ್ಡ್ ಹಾಗೂ ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ನಿರ್ಧಾರವು ಜಾಗತಿಕ ಫುಟ್‌ಬಾಲ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾನ್ಸಾಸ್ ಸಿಟಿಯಲ್ಲಿರುವ ‘ಆ್ಯರೋಹೆಡ್ ಸ್ಟೇಡಿಯಂ’ನಲ್ಲಿ ನಡೆದ ಈ ಪಂದ್ಯದಲ್ಲಿ ಅರ್ಜೆಂಟೀನಾ ಹಾಗೂ ಸ್ವಿಟ್ಜರ್‌ಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ದವು.

ಜಿದ್ದಾಜಿದ್ದಿನ ಪೈಪೋಟಿಗೆ ಕಾರಣವಾಗಿದ್ದ ಈ ಪಂದ್ಯದ 10ನೇ ನಿಮಿಷದಲ್ಲಿ ಲಿಯೋನೆಲ್ ಮೆಸ್ಸಿ ನೀಡಿದ ಅದ್ಭುತ ಕಾರ್ನರ್ ಪಾಸ್ ಅನ್ನು ಬಳಸಿಕೊಂಡ ಅಲೆಕ್ಸಿಸ್ ಮ್ಯಾಕ್ ಆಲಿಸ್ಟರ್, ಹೆಡರ್  ಮೂಲಕ ಗೋಲು ಬಾರಿಸಿ ಅರ್ಜೆಂಟೀನಾಗೆ 1-0 ಮುನ್ನಡೆ ತಂದುಕೊಟ್ಟರು.

ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸ್ವಿಟ್ಜರ್‌ಲ್ಯಾಂಡ್ ಪರ ಡಾನ್ ನ್ಡೋಯ್ ಆಕರ್ಷಕ ಗೋಲು ಹೊಡೆದು ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದರು.

ನಾಟಕೀಯ ತಿರುವು:

ಸ್ವಿಟ್ಜರ್‌ಲ್ಯಾಂಡ್ ತಂಡವು ಸಮಬಲ ಸಾಧಿಸುತ್ತಿದ್ದಂತೆ ಪೈಪೋಟಿ ಮತ್ತಷ್ಟು ತೀವ್ರಗೊಂಡಿತು. ಇದರ ನಡುವೆ ನಡೆದ ನಾಟಕೀಯ ತಿರುವುದು ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು.

  •  72ನೇ ನಿಮಿಷದ ಹೈಡ್ರಾಮಾ: ಪಂದ್ಯದ 72ನೇ ನಿಮಿಷದಲ್ಲಿ ಅರ್ಜೆಂಟೀನಾದ ಲಿಯಾಂಡ್ರೊ ಪರೇಡೆಸ್ ಅವರು ಎಂಬೊಲೊ ಅವರನ್ನು ಕೆಳಗೆ ಬೀಳಿಸಿದರು ಎಂದು ರೆಫರಿ ಜೋವಾವೊ ಪಿನ್ಹೈರೊ ಮೊದಲು ಫೌಲ್ ಘೋಷಿಸಿ, ಪರೇಡೆಸ್ ಅವರಿಗೆ ಯೆಲ್ಲೋ ಕಾರ್ಡ್ ತೋರಿಸಿದ್ದರು.
  •  VAR ಹಸ್ತಕ್ಷೇಪ: ಕೂಡಲೇ ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ತಂಡವು ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮೈದಾನದ ರೆಫರಿಗೆ ಸೂಚಿಸಿತು. ರಿಪ್ಲೇಗಳನ್ನು ಪರಿಶೀಲಿಸಿದಾಗ, ಪರೇಡೆಸ್ ಅವರ ಸಂಪರ್ಕ ಸಿಗುವ ಮುನ್ನವೇ ಎಂಬೊಲೊ ಡೈವ್ ಹೊಡೆದು (ಅಭಿನಯಿಸಿ) ಬಿದ್ದಿರುವುದು ಸ್ಪಷ್ಟವಾಯಿತು.
  • ರೆಡ್ ಕಾರ್ಡ್ ಶಿಕ್ಷೆ: ರೆಫರಿ ತಕ್ಷಣವೇ ಪರೇಡೆಸ್ ಅವರ ಯೆಲ್ಲೋ ಕಾರ್ಡ್ ಅನ್ನು ರದ್ದುಗೊಳಿಸಿ, ಡೈವಿಂಗ್ ಮಾಡಿದ್ದಕ್ಕಾಗಿ ಎಂಬೊಲೊ ಅವರಿಗೆ ಯೆಲ್ಲೋ ಕಾರ್ಡ್ ನೀಡಿದರು. ಎಂಬೊಲೊ ಈಗಾಗಲೇ 44ನೇ ನಿಮಿಷದಲ್ಲಿ ಒಂದು ಯೆಲ್ಲೋ ಕಾರ್ಡ್ ಪಡೆದಿದ್ದರಿಂದ, ಇದು ಎರಡನೇ ಯೆಲ್ಲೋ ಕಾರ್ಡ್ ಆಗಿ ಮಾರ್ಪಟ್ಟು, ನಿಯಮದಂತೆ ಅವರಿಗೆ ರೆಡ್ ಕಾರ್ಡ್ ನೀಡಿ ಮೈದಾನದಿಂದ ಹೊರಗಟ್ಟಲಾಯಿತು.

ನಿಯಮ ಏನು ಹೇಳುತ್ತದೆ?

ಸಾಮಾನ್ಯವಾಗಿ ಕೇವಲ ಯೆಲ್ಲೋ ಕಾರ್ಡ್ ಅಥವಾ ಡೈವಿಂಗ್‌ಗಾಗಿ VAR ಪರಿಶೀಲನೆ ನಡೆಸಲು ನಿಯಮಗಳಲ್ಲಿ ಅವಕಾಶವಿಲ್ಲ. ಆದರೆ 2026ರ ವಿಶ್ವಕಪ್‌ಗಾಗಿ ಅಂತರರಾಷ್ಟ್ರೀಯ ಫುಟ್‌ಬಾಲ್ ಅಸೋಸಿಯೇಷನ್ ಮಂಡಳಿ (IFAB) ಜಾರಿಗೆ ತಂದ ಹೊಸ ‘ಮಿಸ್ಟೇಕನ್ ಐಡೆಂಟಿಟಿ’ (ತಪ್ಪು ಗುರುತಿಸುವಿಕೆ) ನಿಯಮ ಇಲ್ಲಿ ಬಳಕೆಯಾಗಿದೆ.

ತಪ್ಪಾದ ಆಟಗಾರನಿಗೆ ಕಾರ್ಡ್ ನೀಡಿದಾಗ ಅಥವಾ ಎದುರಾಳಿ ಆಟಗಾರ ತಪ್ಪು ಮಾಡದಿದ್ದರೂ ಶಿಕ್ಷಿಸಿದಾಗ ಅದನ್ನು ಸರಿಪಡಿಸಲು VAR ಗೆ ಈ ನಿಯಮ ಅಧಿಕಾರ ನೀಡುತ್ತದೆ. ರೆಫರಿ ಮೊದಲು ಪರೇಡೆಸ್ ಅವರಿಗೆ ಕಾರ್ಡ್ ನೀಡಿದ್ದರಿಂದ, ಆ ತಪ್ಪನ್ನು ತಿದ್ದಲು ಹೋದಾಗ ನಿಜವಾದ ತಪ್ಪುಗಾರ ಎಂಬೊಲೊ ಸಿಕ್ಕಿಬಿದ್ದರು.

ವಿವಾದಕ್ಕೆ ಕಾರಣಗಳೇನು?

ಅರ್ಜೆಂಟೀನಾ ತಂಡಕ್ಕೆ VAR ನಿಯಮಗಳು ಪದೇ ಪದೇ ನೆರವಾಗುತ್ತಿವೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ. ಟೂರ್ನಿಯ ಆರಂಭದಲ್ಲಿ ಈಜಿಪ್ಟ್ ವಿರುದ್ಧದ ಪಂದ್ಯದಲ್ಲೂ ಇಂತಹದ್ದೇ ವಿವಾದಾತ್ಮಕ ತೀರ್ಪು ಅರ್ಜೆಂಟೀನಾ ಪರವಾಗಿ ಬಂದಿತ್ತು.

ಸ್ವಿಟ್ಜರ್‌ಲ್ಯಾಂಡ್ ತಂಡದ ಮುಖ್ಯ ತರಬೇತುದಾರ ಮುರಾತ್ ಯಾಕಿನ್ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದು, ಇದು ಪಂದ್ಯದ ಗತಿಯನ್ನೇ ಬದಲಿಸಿತು ಎಂದು ಆಸಮಾಧಾನ ವ್ಯಕ್ತಪಡಿಸಿದ್ದಾರೆ.

1-1 ಸಮಬಲ ಸಾಧಿಸಿದ ಕೇವಲ 5 ನಿಮಿಷಗಳಲ್ಲಿ ಸ್ವಿಟ್ಜರ್‌ಲ್ಯಾಂಡ್ 10 ಆಟಗಾರರಿಗೆ ಸೀಮಿತವಾಗಿದ್ದರಿಂದ, ಎಕ್ಸ್‌ಟ್ರಾ ಟೈಮ್‌ನಲ್ಲಿ ಅರ್ಜೆಂಟೀನಾ ಮೇಲುಗೈ ಸಾಧಿಸಲು ಸಾಧ್ಯವಾಯಿತು ಎಂದು ಮುರಾತ್ ಯಾಕಿನ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ರೆಡ್ ಕಾರ್ಡ್ ನೀಡಲೇಬೇಕಿತ್ತಾ?

ಫಿಫಾ ನಿಯಮಗಳ ಪ್ರಕಾರ ಇದು ರೆಡ್ ಕಾರ್ಡ್ ನೀಡಬಹುದಾದ ತಪ್ಪೇ ಆಗಿತ್ತು. ಆದರೆ, ಎಂಬೊಲೊ ಅವರಿಗೆ ನೇರವಾಗಿ  ರೆಡ್ ಕಾರ್ಡ್ ನೀಡಲಾಗಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಬದಲಿಗೆ ಎರಡು ಯೆಲ್ಲೋ ಕಾರ್ಡ್‌ಗಳು ಸೇರಿದ ಪರಿಣಾಮವಾಗಿ ಅವರು ಮೈದಾನದಿಂದ ಹೊರಹೋಗಬೇಕಾಯಿತು.

  • ಬ್ರೀಲ್ ಎಂಬೊಲೊ ಅವರು ಪಂದ್ಯದ 44ನೇ ನಿಮಿಷದಲ್ಲೇ ಒಂದು ಫೌಲ್ ಮಾಡಿದ್ದಕ್ಕಾಗಿ ಮೊದಲ ಯೆಲ್ಲೋ ಕಾರ್ಡ್ (ಎಚ್ಚರಿಕೆ) ಪಡೆದುಕೊಂಡಿದ್ದರು
  • 72ನೇ ನಿಮಿಷದಲ್ಲಿ ಅವರು ಪೆನಾಲ್ಟಿ ಪಡೆಯುವ ಉದ್ದೇಶದಿಂದ ಮೈದಾನದಲ್ಲಿ ಡೈವ್ ಮಾಡಿದ್ದು (ಅಭಿನಯಿಸಿದ್ದು) ರಿಪ್ಲೇನಲ್ಲಿ ಸಾಬೀತಾಯಿತು.

ಫುಟ್‌ಬಾಲ್ ನಿಯಮ 12ರ ಪ್ರಕಾರ ಆಟಗಾರರನ್ನು ಹಾದಿ ತಪ್ಪಿಸಲು ಮೈದಾನದಲ್ಲಿ ನಟಿಸುವುದು ಕ್ರೀಡಾ ವಿರೋಧಿ ನಡವಳಿಕೆಯಾಗಿದ್ದು, ಇದಕ್ಕೆ ಕಡ್ಡಾಯವಾಗಿ ಯೆಲ್ಲೋ ಕಾರ್ಡ್ ನೀಡಲಾಗುತ್ತದೆ. ಒಂದೇ ಪಂದ್ಯದಲ್ಲಿ ಎರಡು ಯೆಲ್ಲೋ ಕಾರ್ಡ್ ಪಡೆದ ಆಟಗಾರನನ್ನು ನಿಯಮಾವಳಿಗಳ ಪ್ರಕಾರ ರೆಡ್ ಕಾರ್ಡ್ ನೀಡಿ ಹೊರಗಟ್ಟಲಾಗುತ್ತದೆ.

ಹೀಗಾಗಿ ಬ್ರೀಲ್ ಎಂಬೊಲೊ ಅವರನ್ನು ರೆಡ್ ಕಾರ್ಡ್ (ಡಬಲ್ ಯೆಲ್ಲೋ ಕಾರ್ಡ್​) ಮೂಲಕ ಹೊರಗೆ ಕಳುಹಸಿದ್ದು, ಮ್ಯಾಚ್ ರೆಫರಿಯ ಸರಿಯಾದ ನಿರ್ಧಾರ.  ಇದಾಗ್ಯೂ ರೆಫರಿಯ ಈ ನಿರ್ಧಾರ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!

ಮಾಜಿ ಪ್ರೀಮಿಯರ್ ಲೀಗ್ ರೆಫರಿ ಮಾರ್ಕ್ ಕ್ಲಾಟನ್‌ಬರ್ಗ್ ಸೇರಿದಂತೆ ಕೆಲವರು ಈ ತೀರ್ಪನ್ನು ಟೀಕಿಸಿದ್ದಾರೆ. ನಿಯಮದ ಪ್ರಕಾರ ಕಾರ್ಡ್ ಬದಲಾಯಿಸಿದ್ದು ಸರಿಯಾಗಿದ್ದರೂ, ಆಟಗಾರ ಈಗಾಗಲೇ ಮೊದಲ ಹಂತದಲ್ಲಿ ಒಂದು ಯೆಲ್ಲೋ ಕಾರ್ಡ್ ಪಡೆದಿದ್ದಾನೆ ಎಂಬುದನ್ನು ಗಮನಿಸಬೇಕಿತ್ತು.

ಕೇವಲ ಡೈವಿಂಗ್ ಮಾಡಿದ್ದಕ್ಕಾಗಿ ಪಂದ್ಯದ ಅಷ್ಟು ದೊಡ್ಡ ಹಂತದಲ್ಲಿ ಎರಡನೇ ಯೆಲ್ಲೋ ಕಾರ್ಡ್ (ಅಂದರೆ ರೆಡ್ ಕಾರ್ಡ್) ನೀಡಿದ್ದು ತುಂಬಾ ಕಠೋರವಾದ ನಿರ್ಧಾರ ಎಂದು  ಮಾಜಿ ಪ್ರಸಿದ್ಧ ರೆಫರಿ ಹಾಗೂ ಫಾಕ್ಸ್ ಸ್ಪೋರ್ಟ್ಸ್ ವಿಶ್ಲೇಷಕ ಮಾರ್ಕ್ ಕ್ಲಾಟನ್‌ಬರ್ಗ್ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

Published On – 11:59 am, Sun, 12 July 26

Source link

Rock Salt Vastu Tips: ಮನೆಯ ನಾಲ್ಕು ಮೂಲೆಗಳಲ್ಲಿ ಕಲ್ಲುಪ್ಪು ಇಡಿ; ಪ್ರಯೋಜನ ಸಾಕಷ್ಟಿವೆ – Kannada News | Rock Salt Vastu Tips: Remove Negative Energy, Attract Peace and Positivity to Your Home

ವಾಸ್ತು ಶಾಸ್ತ್ರ ಮತ್ತು ಕೆಲವು ಜ್ಯೋತಿಷ್ಯ ಸಂಪ್ರದಾಯಗಳ ಪ್ರಕಾರ, ಕಲ್ಲುಪ್ಪು (Rock Salt) ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದೆ ಎಂದು ನಂಬಲಾಗುತ್ತದೆ. ಮನೆಯ ಹೊರಗಿನಿಂದ ಬರುವ ನಕಾರಾತ್ಮಕ ಪ್ರಭಾವಗಳು, ಕೆಟ್ಟ ದೃಷ್ಟಿ ಅಥವಾ ಅಶುಭ ಶಕ್ತಿಗಳು ಮನೆಯ ವಾತಾವರಣದ ಮೇಲೆ ಪರಿಣಾಮ ಬೀರುತ್ತವೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ಪರಿಹಾರವನ್ನು ಅನೇಕರು ಅನುಸರಿಸುತ್ತಾರೆ.

ಮನೆಯ ನಾಲ್ಕು ಮೂಲೆಗಳಲ್ಲಿ ಕಲ್ಲುಪ್ಪು ಇಡಿ:

ವಾಸ್ತು ನಂಬಿಕೆಗಳ ಪ್ರಕಾರ, ಮನೆಯ ನಾಲ್ಕೂ ಮೂಲೆಗಳಲ್ಲಿ ಒಂದು ಸಣ್ಣ ಪಾತ್ರೆ, ಕಾಗದದ ತುಂಡು ಅಥವಾ ಬಟ್ಟಲಿನಲ್ಲಿ ಸ್ವಲ್ಪ ಪ್ರಮಾಣದ ಕಲ್ಲುಪ್ಪನ್ನು ಇಡುವುದು ಶುಭಕರವೆಂದು ಹೇಳಲಾಗುತ್ತದೆ. ಇದರಿಂದ ಮನೆಯೊಳಗಿನ ನಕಾರಾತ್ಮಕ ಶಕ್ತಿಯನ್ನು ಕಲ್ಲುಪ್ಪು ತನ್ನತ್ತ ಸೆಳೆಯುತ್ತದೆ ಎಂದು ನಂಬಲಾಗಿದೆ.

ಬಳಿಕ ಈ ಉಪ್ಪನ್ನು ಏನು ಮಾಡಬೇಕು?

ಮರುದಿನ ಅಥವಾ ಸಂಜೆ ಹೊರಗಿನಿಂದ ಮನೆಗೆ ಬಂದ ನಂತರ, ಆ ಕಲ್ಲುಪ್ಪನ್ನು ಕೈಯಿಂದ ನೇರವಾಗಿ ಮುಟ್ಟದೆ ಸಿಂಕ್‌ಗೆ ಅಥವಾ ಹರಿಯುವ ನೀರಿನಲ್ಲಿ ಹಾಕಿ ತೊಳೆದುಬಿಡುವಂತೆ ವಾಸ್ತು ಶಾಸ್ತ್ರದಲ್ಲಿ ಸಲಹೆ ನೀಡಲಾಗಿದೆ. ಇದರಿಂದ ಮನೆಯ ವಾತಾವರಣವು ಶುದ್ಧ ಮತ್ತು ಸಕಾರಾತ್ಮಕವಾಗಿರುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಕೌಟುಂಬಿಕ ಶಾಂತಿಗೆ ಸಹಕಾರಿ ಎಂಬ ನಂಬಿಕೆ

ವಾಸ್ತು ಸಂಪ್ರದಾಯದ ಪ್ರಕಾರ, ಇಂತಹ ಸರಳ ಆಧ್ಯಾತ್ಮಿಕ ಅಭ್ಯಾಸಗಳನ್ನು ದೈನಂದಿನ ಜೀವನದ ಭಾಗವಾಗಿಸಿಕೊಂಡರೆ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ, ಕುಟುಂಬದ ಸದಸ್ಯರ ನಡುವಿನ ಅನಗತ್ಯ ಭಿನ್ನಾಭಿಪ್ರಾಯಗಳು ಹಾಗೂ ಕಲಹಗಳು ಕಡಿಮೆಯಾಗಲು ಸಹಕಾರಿಯಾಗುತ್ತದೆ ಎಂಬ ನಂಬಿಕೆಯೂ ಇದೆ.

ದೇವರ ಮೇಲಿನ ಭಕ್ತಿ, ಕೃತಜ್ಞತಾ ಭಾವನೆ ಮತ್ತು ಮನೆಯ ವಾತಾವರಣವನ್ನು ಸಕಾರಾತ್ಮಕವಾಗಿರಿಸುವ ಇಂತಹ ಆಚರಣೆಗಳು ಮನಸ್ಸಿಗೆ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ನೀಡಬಹುದು. ಜೀವನದಲ್ಲಿ ನಿರಂತರ ಒತ್ತಡ ಅಥವಾ ಅಡೆತಡೆಗಳನ್ನು ಅನುಭವಿಸುತ್ತಿದ್ದರೆ, ನಿಮ್ಮ ವೈಯಕ್ತಿಕ ನಂಬಿಕೆಗಳಿಗೆ ಅನುಗುಣವಾಗಿ ಇಂತಹ ಸಂಪ್ರದಾಯಗಳನ್ನು ಅನುಸರಿಸಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:34 am, Sun, 12 July 26

Source link

‘ಬೆಂಗಳೂರಿಗರಿಗೆ ಬಸ್ಸುಗಳು ಬೇಡವೇ?’: ಇ-ಬಸ್ ವಿಳಂಬ ನೀತಿ ವಿರುದ್ಧ ಜೆಡಿಎಸ್ ಕೆಂಡಾಮಂಡಲ! – Kannada News | Bengaluru E Bus Row: JDS Slams Karnataka Government Over Delay in PM E Drive Scheme

ಇ-ಬಸ್ ವಿಳಂಬ ನೀತಿ ವಿರುದ್ಧ ಜೆಡಿಎಸ್ ಕೆಂಡಾಮಂಡಲ!

ಬೆಂಗಳೂರು, ಜುಲೈ 12: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಪ್ರಯಾಣಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ‘ಪ್ರಧಾನಮಂತ್ರಿ ಇ-ಡ್ರೈವ್’ (PM E-Drive) ಯೋಜನೆಯಡಿ ಒಟ್ಟು 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿದೆ. ಇದಕ್ಕೆ ಪೂರಕವಾಗಿ 1,505 ಕೋಟಿ ರೂ. ಭಾರಿ ಸಹಾಯಧನವನ್ನೂ ಘೋಷಿಸಲಾಗಿದೆ. ಆದರೆ, ಕೇಂದ್ರದ ಈ ಬೃಹತ್ ಯೋಜನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಕ್ಯಾಬಿನೆಟ್‌ನಲ್ಲಿ ಇನ್ನೂ ಅನುಮೋದನೆ ನೀಡದೆ ವಿಳಂಬ ಮಾಡುತ್ತಿರುವುದು ಈಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಬಗ್ಗೆ ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಅಸಮಾಧಾನ ಹೊರಹಾಕಿದೆ.

ಎಕ್ಸ್ (X) ಖಾತೆಯಲ್ಲಿ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ

ರಾಜ್ಯ ಸರ್ಕಾರದ ಈ ನಿಲುವನ್ನು ತೀವ್ರವಾಗಿ ಖಂಡಿಸಿರುವ ಜೆಡಿಎಸ್, ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ವಾಗ್ದಾಳಿ ನಡೆಸಿದೆ. “60% ಖ್ಯಾತಿಯ ‘ಕಮಿಷನ್’ ಕಾಂಗ್ರೆಸ್ ಸರ್ಕಾರಕ್ಕೆ ಸಾರ್ವಜನಿಕ ಸಾರಿಗೆಗಿಂತ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ” ಎಂದು ಜೆಡಿಎಸ್ ಆಕ್ರೋಶ ಹೊರಹಾಕಿದೆ.

ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ಈ ಯೋಜನೆ ಮಂಜೂರಾಗಿದ್ದು, 2025ರಲ್ಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಫೈಲ್ ಧೂಳು ಹಿಡಿಯುತ್ತಿರುವುದೇಕೆ ಎಂದು ಪ್ರಶ್ನಿಸಿದೆ. ಹೈದರಾಬಾದ್, ಸೂರತ್, ಅಹಮದಾಬಾದ್ ನಗರಗಳು ಈಗಾಗಲೇ ಕಾರ್ಯಾದೇಶ ನೀಡಿ ಮುನ್ನುಗ್ಗುತ್ತಿದ್ದರೆ, ನಮ್ಮ ‘ಸೋಮಾರಿ’ ಕಾಂಗ್ರೆಸ್ ಸರ್ಕಾರ ದ್ವೇಷ ಸಾಧನೆಗಾಗಿ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ ಎಂದು ಜೆಡಿಎಸ್ ದೂರಿದೆ.

“ಡಿ.ಕೆ.ಶಿವಕುಮಾರ್ ಅವರೇ, ಬೆಂಗಳೂರಿನ ಜನರಿಗೆ ಬಸ್ಸುಗಳು ಬೇಡವೇ? ಸಹಾಯಧನವನ್ನೂ ಬಳಸಿಕೊಳ್ಳದ ನಿಮ್ಮ ಆಡಳಿತ ವೈಫಲ್ಯಕ್ಕೆ ಏನನ್ನಬೇಕು? ಬಸ್ಸುಗಳು ಬೇರೆ ರಾಜ್ಯಗಳ ಪಾಲಾದರೆ ಬೆಂಗಳೂರಿಗರು ನಿಮ್ಮನ್ನು ಕ್ಷಮಿಸಲ್ಲ” ಎಂದು ಜೆಡಿಎಸ್ ಎಚ್ಚರಿಸಿದ್ದು, ಸರ್ಕಾರದ ಈ ನಿರಾಸಕ್ತಿಗೆ ಕನ್ನಡಿಗರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ ಕರ್ನಾಟಕದ ವಿಳಂಬ ನೀತಿ: ಕೇಂದ್ರದಿಂದ ಬೆಂಗಳೂರಿಗೆ ಸಿಗಲಿದ್ದ 4500 ಇ-ಬಸ್ ಬೇರೆ ರಾಜ್ಯಗಳ ಪಾಲಾಗುವ ಆತಂಕ!

ಯೋಜನೆಯಿಂದ ರಾಜ್ಯಕ್ಕೆ ಆರ್ಥಿಕ ಹೊರೆ

ಕೇಂದ್ರದ ಈ ಇ-ಬಸ್ ಯೋಜನೆಗೆ ಒಪ್ಪಿಗೆ ನೀಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿರುವುದರ ಹಿಂದಿನ ಆರ್ಥಿಕ ಕಾರಣಗಳನ್ನು ನೀಡಿದ್ದ ಸಾರಿಗೆ ಸಚಿವ ಭೈರತಿ ಸುರೇಶ್ , ಕೇಂದ್ರದ ಕಠಿಣ ನಿಯಮಾವಳಿಗಳಿಂದ ರಾಜ್ಯ ಸಾರಿಗೆ ಸಂಸ್ಥೆಗೆ ಭಾರಿ ಆರ್ಥಿಕ ನಷ್ಟ ಉಂಟಾಗಲಿದೆ ಎಂದು ಹೇಳಿದ್ದರು. ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಈ ತೊಂದರೆಯನ್ನು ನೀಗಿಸುವುದಿಲ್ಲ ಎಂದೂ ಸಹ ಹೇಳಿದ್ದರು. ಇದರ ಬೆನ್ನಲ್ಲೇ ಈಗ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದ್ದು, ಸಹಾಯಧನವನ್ನೂ ಬಳಸಿಕೊಳ್ಳಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:34 am, Sun, 12 July 26

Source link

ಆಂಧ್ರದಲ್ಲಿ ಮತ್ತೆ ಕೋವಿಡ್ ಆತಂಕ: 2022 ರ ನಂತರ ಮೊದಲ ಸಾವು ದಾಖಲು, ಕಡಪದಲ್ಲಿ ಇಬ್ಬರು ಬಲಿ, ನಾಲ್ವರಿಗೆ ಪಾಸಿಟಿವ್ – Kannada News | Andhra COVID Resurgence: Kadapa Reports First Deaths Since 2022, New Cases Emerge

ಅಮರಾವತಿ, ಜುಲೈ 12: ಕಳೆದ ಹಲವು ವರ್ಷಗಳಿಂದ ಸಂಪೂರ್ಣವಾಗಿ ಶಾಂತವಾಗಿದ್ದ ಮಹಾಮಾರಿ ಕೋವಿಡ್-19 (Covid-19) ವೈರಸ್ ಆಂಧ್ರಪ್ರದೇಶದಲ್ಲಿ ಮತ್ತೊಮ್ಮೆ ಆತಂಕ ಮೂಡಿಸಿದೆ. ಕಡಪ ಜಿಲ್ಲೆಯಲ್ಲಿ ಭೀಕರ ಕೋವಿಡ್ ಸೋಂಕಿಗೆ ಇಬ್ಬರು ರೋಗಿಗಳು ಬಲಿಯಾಗಿದ್ದು, ಇದು 2022 ರ ನಂತರ ಆಂಧ್ರಪ್ರದೇಶದಲ್ಲಿ ವರದಿಯಾದ ಮೊದಲ ಕೋವಿಡ್ ಸಂಬಂಧಿತ ಸಾವಿನ ಪ್ರಕರಣಗಳಾಗಿವೆ. ಇದರ ಬೆನ್ನಲ್ಲೇ ನಾಲ್ಕು ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ತೀವ್ರ ಕಣ್ಗಾವಲು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಕಡಪದಲ್ಲಿ ಮೃತಪಟ್ಟ ಇಬ್ಬರು ರೋಗಿಗಳ ಹಿನ್ನೆಲೆ

ಮೊದಲ ಸಾವು: ಕಡಪ ಜಿಲ್ಲೆಯ 60 ವರ್ಷದ ವೃದ್ಧರೊಬ್ಬರು ತೀವ್ರ ಅನಾರೋಗ್ಯದಿಂದ ತಿರುಪತಿಯ ಸ್ವೀಮ್ಸ್ (SVIMS) ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರಿನ ಪ್ರಸಿದ್ಧ ಸಿಎಂಸಿ (CMC) ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಿಸದೆ ಜೂನ್ 28 ರಂದು ಅವರು ಮೃತಪಟ್ಟಿದ್ದರು. ಅವರ ಸಾವಿನ ನಂತರ ನಡೆಸಿದ ಆರ್‌ಟಿ-ಪಿಸಿಆರ್ (RT-PCR) ಪರೀಕ್ಷೆಯಲ್ಲಿ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿದೆ.

ಎರಡನೇ ಸಾವು: ಕಡಪದ ಮಾಸಪೇಟೆಯ 46 ವರ್ಷದ ವ್ಯಕ್ತಿಯೊಬ್ಬರು ತೀವ್ರ ಜ್ವರ ಮತ್ತು ಕೆಮ್ಮಿನಿಂದ ಜುಲೈ 4 ರಂದು ಕಡಪದ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಶ್ವಾಸಕೋಶಕ್ಕೆ ಸೋಂಕು ತೀವ್ರವಾಗಿ ಹರಡಿದ್ದರಿಂದ ನಾಲ್ಕು ದಿನಗಳ ಹೋರಾಟದ ನಂತರ ಅವರು ಕೊನೆಯುಸಿರೆಳೆದಿದ್ದಾರೆ. ಈ ರೋಗಿಗೆ ಅತಿಯಾದ ಮದ್ಯಪಾನದ ಇತಿಹಾಸವಿದ್ದುದು ಅವರ ಉಸಿರಾಟದ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ನಾಲ್ಕು ಹೊಸ ಪ್ರಕರಣಗಳು ಪತ್ತೆ; ಒಬ್ಬರು ಆಸ್ಪತ್ರೆಗೆ ದಾಖಲು

ಮರಣ ಹೊಂದಿದ ಇಬ್ಬರಲ್ಲದೆ, ಜಿಲ್ಲೆಯ ವಿವಿಧ ಭಾಗಗಳಲ್ಲಿ ನಾಲ್ಕು ಹೊಸ ಕೋವಿಡ್ ಸೋಂಕುಗಳು ಪತ್ತೆಯಾಗಿವೆ. ಇವರಲ್ಲಿ ಸೌಮ್ಯ ರೋಗಲಕ್ಷಣಗಳಿರುವ ಮೂವರು ರೋಗಿಗಳನ್ನು ಮನೆಯಲ್ಲೇ ಪ್ರತ್ಯೇಕವಾಗಿರಲು ಸೂಚಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಮತ್ತಷ್ಟು ಓದಿ: Video: ಕೋವಿಡ್ ಸಮಯದಲ್ಲಿ ವ್ಯವಹಾರದಲ್ಲಿ 2 ಕೋಟಿ ರೂ ನಷ್ಟ, ನಗುತಲೇ ಎಲ್ಲವನ್ನು ಜಯಿಸಿದ ಈ ವ್ಯಕ್ತಿ ಎಲ್ಲರಿಗೂ ಸ್ಫೂರ್ತಿ

ತೀವ್ರ ಲಕ್ಷಣಗಳಿದ್ದ ಒಬ್ಬ ರೋಗಿಯನ್ನು ಕಡಪ ರಿಮ್ಸ್ ಆಸ್ಪತ್ರೆಯ ವಿಶೇಷ ಕೋವಿಡ್ ವಾರ್ಡ್‌ಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಈ ಪ್ರಕರಣಗಳು ಬಂದಿರುವುದರಿಂದ ಇಲಾಖೆ ಹೆಚ್ಚಿನ ಎಚ್ಚರಿಕೆ ವಹಿಸಿದೆ.

ಹೊಸ ರೂಪಾಂತರದ ಶಂಕೆ? ಪುಣೆಗೆ ಮಾದರಿ ರವಾನೆ

ಈ ಇತ್ತೀಚಿನ ಸೋಂಕುಗಳ ಹಿಂದೆ ಕೋವಿಡ್‌ನ ಹೊಸ ಓಮಿಕ್ರಾನ್ ಉಪ-ರೂಪಾಂತರ ಇರಬಹುದೇ ಎಂಬ ಬಲವಾದ ಶಂಕೆ ಅಧಿಕಾರಿಗಳಲ್ಲಿದೆ. ವೈರಸ್‌ನ ನಿಖರವಾದ ತಳಿಯನ್ನು ಪತ್ತೆಹಚ್ಚಲು ಮೃತಪಟ್ಟ ಇಬ್ಬರು ರೋಗಿಗಳ ಮಾದರಿಗಳನ್ನು ಜೀನೋಮ್ ಅನುಕ್ರಮಣಿಕೆಗಾಗಿ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (NIV) ಕಳುಹಿಸಿಕೊಡಲಾಗಿದೆ. ಇದರ ವರದಿ ಬಂದ ನಂತರ ಮುಂದಿನ ಚಿಕಿತ್ಸಾ ತಂತ್ರಗಳನ್ನು ರೂಪಿಸಲಾಗುತ್ತದೆ.

ಜನಸಾಮಾನ್ಯರಲ್ಲಿ ಆತಂಕ ಬೇಡ, ಜಾಗರೂಕತೆ ಇರಲಿ

ರಾಜ್ಯ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯು ಕಡಪ ಹಾಗೂ ನೆರೆಯ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಇನ್ಫ್ಲುಯೆನ್ಸ (ಜ್ವರ, ಕೆಮ್ಮು) ಲಕ್ಷಣಗಳಿರುವ ರೋಗಿಗಳನ್ನು ತಕ್ಷಣವೇ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ.

ಆದಾಗ್ಯೂ, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸದ್ಯಕ್ಕೆ ಇದು ಕೇವಲ ಸೀಮಿತ ಪ್ರಕರಣಗಳಾಗಿದ್ದು, ಯಾವುದೇ ರೀತಿಯ ದೊಡ್ಡ ಮಟ್ಟದ ಸಮುದಾಯ ಪ್ರಸರಣ ಕಂಡುಬಂದಿಲ್ಲ. ಆದರೂ, ಮುನ್ನೆಚ್ಚರಿಕಾ ಕ್ರಮವಾಗಿ ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಮೊದಲೇ ಆರೋಗ್ಯ ಸಮಸ್ಯೆ ಇರುವವರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಜನದಟ್ಟಣೆಯ ಪ್ರದೇಶಗಳಿಂದ ದೂರವಿರುವುದು ಒಳಿತು ಎಂದು ಸಲಹೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತಮ್ಮ ಕುರಿತ ಅಪಪ್ರಚಾರದ ಬಗ್ಗೆ ನೊಂದಿದ್ದ ಜಾನಕಮ್ಮ: ಕಾಡಿಗೆ ಹೋಗಿಬಿಡ್ತೀನಿ ಎಂದಿದ್ದರಂತೆ ಗಾನಕೋಗಿಲೆ! – Kannada News | Rumours Left S. Janaki Disturbed; Caretaker Reveals the Legendary Singer’s Final Days

ಅಪಪ್ರಚಾರದ ಬಗ್ಗೆ ನೊಂದಿದ್ದ ಜಾನಕಮ್ಮImage Credit source: Tv9 Kannada

ಮೈಸೂರು, ಜುಲೈ 12: ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನದ ಬಳಿಕ ಅವರ ಕೊನೆಯ ದಿನಗಳ ಕುರಿತು ಹಲವು ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಅವರ ಕೇರ್‌ಟೇಕರ್ ನವೀನ್ ಅವರು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಬಗ್ಗೆ ಸಾರ್ವಜನಿಕವಾಗಿ ಅಪಪ್ರಚಾರ ನಡೆಯುತ್ತಿದೆ ಎಂದು ತಿಳಿದಾಗ ಜಾನಕಮ್ಮನವರು ತೀವ್ರ ಅಸಮಾಧಾನಗೊಂಡಿದ್ದರಂತೆ. ಜನಗಳ ಮಧ್ಯೆ ಇರಲು ಇಷ್ಟವಿಲ್ಲ ಎಂದು ಹೇಳಿ, ಕಾಡಿಗೆ ಹೋಗಿ ಬಿಡುತ್ತೇನೆ ಎಂಬಂತಹ ಮಾತುಗಳನ್ನು ಕೂಡ ಆಡಿದ್ದರು. ಈ ವೇಳೆ ಕಾಡಿಗೆ ಒಬ್ಬರೇ ಹೋಗಿ ಏನು ಮಾಡ್ತೀರಾ ಎಂದು ಕೇಳಿದರೆ ನಿಮ್ಮನ್ನೂ ಜೊತಯಲ್ಲಿ ಕರೆದೊಯ್ಯುತ್ತೇನೆ ಎಂದು ಹೇಳುತ್ತಿದ್ದರು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.

ರಸ್ತೆಗೆ ಎಸ್​​. ಜಾನಕಿ ಹೆಸರಿಡಲು ಮನವಿ

ಜಾನಕಮ್ಮನವರ ಆರೋಗ್ಯದ ಬಗ್ಗೆಯೂ ನವೀನ್ ಸ್ಪಷ್ಟನೆ ನೀಡಿದ್ದು, ಬಿಪಿ ಮತ್ತು ಶುಗರ್‌ನಂತಹ ಸಾಮಾನ್ಯ ಸಮಸ್ಯೆಗಳ ಹೊರತುಪಡಿಸಿ ಯಾವುದೇ ಗಂಭೀರ ಕಾಯಿಲೆ ಅವರಿಗೆ ಇರಲಿಲ್ಲ ಎಂದು ತಿಳಿಸಿದ್ದಾರೆ. ಮೈಸೂರು ಮೇಲೆ ಅಪಾರ ಪ್ರೀತಿ ಹೊಂದಿದ್ದ ಜಾನಕಮ್ಮನವರ ನೆನಪಿಗಾಗಿ ನವೀನ್ ಅವರು ಒಂದು ವಿಶೇಷ ಮನವಿಯನ್ನೂ ಮಾಡಿದ್ದು, ಗದ್ದಿಗೆ ಮುಖ್ಯ ರಸ್ತೆಗೆ ಎಸ್. ಜಾನಕಿ ಮುಖ್ಯ ರಸ್ತೆ ಎಂದು ಹೆಸರಿಸಬೇಕು ಎಂದು ಅವರು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಸಿಎಂ ಈಡೇರಿಸಿದರೆ, ಜಾನಕಿ ಅವರಿಗೆ ಮೈಸೂರು ಮೇಲಿದ್ದ ಪ್ರೀತಿ ಸಾರ್ಥಕವಾಗಲಿದೆ ಎಂದು ನವೀನ್ ಹೇಳಿದ್ದಾರೆ.

ಇದನ್ನೂ ಓದಿ: ಸಂಗೀತ ಲೋಕದ ಮಹಾರಾಣಿ ಇನ್ನಿಲ್ಲ; ಜಾನಕಮ್ಮನ ಅಗಲಿಕೆಗೆ ಕಂಬನಿ ಮಿಡಿದ ಇಂಟರ್ನೆಟ್ ಜಗತ್ತು!

ಜಾನಕಮ್ಮನ ಇಷ್ಟದ ಜಾಗದಲ್ಲೇ ಅಂತ್ಯಕ್ರಿಯೆ

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ತೋಟದಲ್ಲಿ ಎಸ್​​. ಜಾನಕಿ ಅವರ ಅಂತ್ಯಕ್ರಿಯೆ ನೆರವೇರಲಿದೆ. ಈ ಜಾಗ ಅವರಿಗೆ ಬಹಳ ಇಷ್ಟವಾಗಿತ್ತು. ಕಳೆದ ನಾಲ್ಕು ವರ್ಷಗಳ ಹಿಂದೆ ನವೀನ್​​ ಖರೀದಿ ಮಾಡಿದ್ದ ಈ ತೋಟಕ್ಕೆ ಬಂದರೆ ಬೆಳಿಗ್ಗೆಯಿಂದ ಸಂಜೆಯವರೆಗೂ ಜಾನಕಿ ಅವರು ಇಲ್ಲೇ ಇರುತ್ತಿದ್ದರು. ಅವರ ಆಸೆಯಂತೆ ಇದೇ ಜಾಗದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆದಿದೆ. ಇದೇ ತೋಟದಲ್ಲಿ ಮನೆ ಕಟ್ಟಬೇಕು ಎಂದು ಜಾನಕಿಯವರು ಆಸೆ ಇಟ್ಟುಕೊಂಡಿದ್ದರು. ತೋಟಕ್ಕೆ ಬಂದಾಗ ಸ್ಥಲೀಯ ಗ್ರಾಮಸ್ಥರ ಜೊತೆ ಖುಷಿಯಿಂದ ಮಾತನಾಡುತ್ತಿದ್ದರು ಎಂಬ ವಿಚಾರವೂ ಗೊತ್ತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮೈಸೂರಿನಲ್ಲೇ ಎಸ್. ಜಾನಕಿ ಸ್ಮಾರಕ ಆಗಲಿ: ಕಣ್ಣೀರು ಹಾಕುತ್ತಾ ಹಂಸಲೇಖ ವಿನಂತಿ – Kannada News | Music Director Hamsalekha Requests KFCC President Jayamala for S Janaki Memorial in Mysore

ಹಿರಿಯ ಗಾಯಕಿ ಎಸ್. ಜಾನಕಿ (S Janaki) ಅವರು ನಿಧನರಾಗಿದ್ದಾರೆ. ಭಾರತೀಯ ಚಿತ್ರರಂಗದ ಅನೇಕ ಗಣ್ಯರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಮತ್ತು ಜಾನಕಿ ಅವರ ಕಾಂಬಿನೇಷನ್​ನಲ್ಲಿ ಅನೇಕ ಸೂಪರ್ ಹಿಟ್ ಹಾಡುಗಳು ಬಂದಿವೆ. ಜಾನಕಿ ಅವರ ನಿಧನದಿಂದ ಹಂಸಲೇಖ ಅವರಿಗೆ ತೀವ್ರ ನೋವುಂಟಾಗಿದೆ. ಈ ಸಂದರ್ಭದಲ್ಲಿ ಅವರು ವಿಡಿಯೋ ಮೂಲಕ ಒಂದು ಮುಖ್ಯವಾದ ವಿಷಯವನ್ನು ಹಂಚಿಕೊಂಡಿದ್ದಾರೆ. ಮೈಸೂರಿನಲ್ಲಿ ಜಾನಕಿ ಅವರ ಸ್ಮಾರಕ (S Janaki Memorial) ನಿರ್ಮಾಣ ಆಗಬೇಕು ಎಂದು ಹಂಸಲೇಖ ಅವರು ಕಣ್ಣೀರಿಡುತ್ತಾ ಹೇಳಿದ್ದಾರೆ.

ಎಸ್. ಜಾನಕಿ ಸ್ಮಾರಕ ಮಾಡುವ ಯೋಜನೆ:

‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜಯಮಾಲಮ್ಮ ಅವರಿಗೆ ನಮಸ್ಕಾರಗಳು. ಗಾನ ಕೋಗಿಲೆ ಜಾನಕಿ ಅಮ್ಮ, ಕರುನಾಡಿನ ಮೈಸೂರಿನ ಮಣ್ಣಿನಲ್ಲಿ ತಮ್ಮ ಅಂತ್ಯವನ್ನು ಕಂಡಿದ್ದಾರೆ. ಅವರು ಮಣ್ಣಿಗೆ ಹೋಗುವುದಕ್ಕೂ ಮುಂಚೆ ಕರುನಾಡಿನ ಜನರು ಕಣ್ಣು ತೆರೆಯಬೇಕು. ಅವರಿಗಾಗಿ ಇಲ್ಲೊಂದು ಸ್ಮಾರಕ ಮಾಡುವ ಯೋಜನೆಯನ್ನು ಅವರ ಕುಟುಂಬಕ್ಕೆ ನಾವು ವಿನಂತಿಸಬೇಕು’ ಎಂದಿದ್ದಾರೆ ಹಂಸಲೇಖ.

ಸೂಕ್ತವಾದ ಜಾಗ ನಿಗದಿಪಡಿಸಿ:

‘ಕುಟುಂಬದವರು ಒಪ್ಪಿದರೆ ಅದಕ್ಕೆ ಈಗಲೂ ಒಂದು ಸಿದ್ಧತೆ ಆಗುವ ಹಾಗೆ ಒಂದು ಸೂಕ್ತವಾದ ಜಾಗವನ್ನು ನಿಗದಿಪಡಿಸಲು ತಾವು ಸರ್ಕಾರಕ್ಕೆ ಮತ್ತು ಬಲ್ಲವರಿಗೆ ತಿಳಿಸುವ ದೊಡ್ಡ ಮನಸ್ಸು ಮಾಡಬೇಕು ಅಂತ ನಾನು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ’ ಎಂದು ಹಂಸಲೇಖ ಅವರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡ ಈ ವಿಡಿಯೋ ನೋಡಿ ಜನರು ಕೂಡ ಸಹಮತ ಸೂಚಿಸಿದ್ದಾರೆ.

ಸರ್ಕಾರಕ್ಕೆ ಹಂಸಲೇಖ ವಿನಂತಿ:

‘ಜಾನಕಿ ಅಂದರೆ ಸೀತೆ. ಸೀತೆ ಎಂದರೆ ನಮಗೆ ಗೀತೆ. ಆಕೆಯ ಆಸೆ ಕರುನಾಡಿನಲ್ಲಿ ಇರೋದು. ನಾವು ಅದಕ್ಕೆ ಇಂಬು ಕೊಡುವುದು ಬೇಡವೇ? ದಯಮಾಡಿ ನೀವು ಈ ಸುದ್ದಿಯನ್ನು ಸರ್ಕಾರಕ್ಕೆ ತಿಳಿಸಬೇಕು ಅಂತ ವಿನಂತಿಸಿಕೊಳ್ಳುತ್ತೇನೆ’ ಎಂದು ಹಂಸಲೇಖ ಅವರು ಹೇಳಿದ್ದಾರೆ. ಇದಕ್ಕೆ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಇದನ್ನೂ ಓದಿ: ಹೈದರಾಬಾದ್​​ನಲ್ಲಿ ಪ್ಯಾಲೇಸ್​​ನಂತಹ ಮನೆಯಿದ್ದರೂ ಮೈಸೂರಲ್ಲಿಯೇ ವಾಸ: ಹೇಗಿತ್ತು ಗೊತ್ತಾ ಗಾನಕೋಗಿಲೆ ಎಸ್​. ಜಾನಕಿ ಅಂತಿಮ ದಿನಗಳು?

ತಮ್ಮ ಇಷ್ಟದ ಊರಾದ ಮೈಸೂರಿನಲ್ಲೇ ಎಸ್. ಜಾನಕಿ ಅವರು ಕೊನೆಯ ದಿನಗಳನ್ನು ಕಳೆದರು. ಅಲ್ಲಿಯೇ ಕೊನೆಯುಸಿರು ಎಳೆದರು. ಇಂದು (ಜುಲೈ 12) ಮೈಸೂರಿನಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ. ಮಹಾರಾಜ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಗಣ್ಯರು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೀರೆಂದು ಭಾವಿಸಿ ಆ್ಯಸಿಡ್ ಕುಡಿದ ಮಹಿಳೆ, ಆಭರಣದಂಗಡಿಯಲ್ಲಿ ನಡೆದ ಘಟನೆ – Kannada News | Hapur Acid Incident: Woman Drinks Acid Instead of Water at Jewelry Shop, Critical

ಹಾಪುರ್, ಜುಲೈ 12: ಆಭರಣ(Jewellery) ಖರೀದಿಗೆಂದು ಜ್ಯುವೆಲ್ಲರಿ ಶಾಪ್​ಗೆ ಬಂದಿದ್ದ ಮಹಿಳೆ ಬಾಯಾರಿಕೆ ಎಂದು ಬಾಟಲಿಯನ್ನು ತೆಗೆದು ಬಾಯಿಗಿಟ್ಟರೆ ಅದರಲ್ಲಿ ಇದ್ದಿದ್ದು ನೀರಲ್ಲ, ಅದು ಆ್ಯಸಿಡ್ ಆಗಿತ್ತು. ಈ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದಿದೆ. ಅರ್ಜುನ್ ನಗರ ಪ್ರದೇಶದ ನಿವಾಸಿಯಾದ ಮಹಿಳೆಯೊಬ್ಬರು ಶುಕ್ರವಾರ ಸಂಜೆ ಒಡವೆಗಳನ್ನು ಖರೀದಿಸಲು ಸ್ಥಳೀಯ ಆಭರಣದ ಅಂಗಡಿಯೊಂದಕ್ಕೆ ಹೋಗಿದ್ದರು. ಒಡವೆಗಳನ್ನು ನೋಡುತ್ತಿದ್ದಾಗ ಆಕೆಗೆ ತೀವ್ರ ಬಾಯಾರಿಕೆಯಾಗಿ ಗಂಟಲು ಒಣಗಿದಂತಾಗಿದೆ. ತಕ್ಷಣ ಆಕೆ ಅಂಗಡಿಯವರ ಬಳಿ ಕುಡಿಯಲು ನೀರು ಕೇಳಿದ್ದಾರೆ.

ಗ್ರಾಹಕರಿಗೆ ನೀರು ತರಲು ಆಭರಣ ಅಂಗಡಿಯ ಸಿಬ್ಬಂದಿ ಹತ್ತಿರದಲ್ಲೇ ಇದ್ದ ಸಿಹಿ ತಿನಿಸುಗಳ ಅಂಗಡಿಗೆ ಓಡಿದ್ದಾರೆ. ಅಲ್ಲಿನ ಅಂಗಡಿಯವರು ಫ್ರಿಡ್ಜ್‌ನಲ್ಲಿದ್ದ ಸಂಪೂರ್ಣ ಸೀಲ್ ಆಗಿದ್ದ ನೀರಿನ ಬಾಟಲಿಯೊಂದನ್ನು ಕೊಟ್ಟಿದ್ದಾರೆ. ನೌಕರ ಅದನ್ನು ತಂದು ಜ್ಯೂವೆಲ್ಲರಿ ಶಾಪ್‌ನಲ್ಲಿದ್ದ ಮಹಿಳೆಗೆ ಕೊಟ್ಟಿದ್ದಾರೆ.

ಒಂದು ಸಿಪ್ ಕುಡಿಯುತ್ತಿದ್ದಂತೆ ನರಕಯಾತನೆ
ಬಾಟಲಿಯ ಒಳಗೆ ಏನಿದೆ ಎಂಬ ಸಣ್ಣ ಅರಿವೂ ಇಲ್ಲದ ಆ ಮಹಿಳೆ, ಬಾಟಲಿಯ ಸೀಲ್ ಒಡೆದು ತಕ್ಷಣ ಒಂದು ಸಿಪ್ ಕುಡಿದಿದ್ದಾರೆ. ಆ್ಯಸಿಡ್ ಗಂಟಲಿಗೆ ಇಳಿಯುತ್ತಿದ್ದಂತೆ ತೀವ್ರ ಉರಿ ಹಾಗೂ ನೋವಿನಿಂದ ಕಿರುಚಾಡಿದ ಮಹಿಳೆ, ತಕ್ಷಣವೇ ಅಂಗಡಿಯಿಂದ ಹೊರಗೆ ಓಡಿಬಂದು ಅದನ್ನು ಉಗುಳಿದ್ದಾರೆ.

ಆಸಿಡ್‌ನ ತೀವ್ರತೆಗೆ ಆಕೆಯ ಬಾಯಿ ಮತ್ತು ಗಂಟಲಿನ ಭಾಗ ಸಂಪೂರ್ಣ ಸುಟ್ಟುಹೋಗಿದ್ದು, ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರಿಸ್ಥಿತಿ ತೀರಾ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಸದ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತಷ್ಟು ಓದಿ: CET ಪರೀಕ್ಷೆ: ಆಭರಣ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಶಾಕ್​​ ಕೊಟ್ಟ ಸಿಬ್ಬಂದಿ

ತನಿಖೆ ಚುರುಕು: ಪೊಲೀಸರ ವಶದಲ್ಲಿ ಅಂಗಡಿ ಮಾಲೀಕ
ಘಟನೆಯ ನಂತರ ಕಾರ್ಯಪ್ರವೃತ್ತರಾಗಿರುವ ಹಾಪುರ್ ಪೊಲೀಸರು ಸಿಹಿ ತಿನಿಸುಗಳ ಅಂಗಡಿಯ ಮಾಲೀಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆತನ ಅಂಗಡಿಯಿಂದ ಕೆಲವು ಆ್ಯಸಿಡ್ ಬಾಟಲಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಆಭರಣ ಅಂಗಡಿಯ ಮಾಲೀಕ ಡೇನು, ‘‘ನಮಗೆ ತಿಳಿದ ಮಟ್ಟಿಗೆ ಆ ಬಾಟಲಿ ಸಂಪೂರ್ಣವಾಗಿ ಸೀಲ್ ಆಗಿತ್ತು. ಸ್ವೀಟ್ ಸ್ಟಾಲ್‌ನವನು ಫ್ರಿಡ್ಜ್‌ನಿಂದ ಹೇಗೆ ತೆಗೆದುಕೊಟ್ಟನೋ, ನಾವು ಹಾಗೆಯೇ ತಂದು ಗ್ರಾಹಕರಿಗೆ ನೀಡಿದ್ದೆವು” ಎಂದು ಹೇಳಿದ್ದಾನೆ. ಫ್ರಿಡ್ಜ್‌ನಲ್ಲಿ ನೀರಿನ ಬಾಟಲಿಗಳ ಪಕ್ಕದಲ್ಲೇ ಆಸಿಡ್ ಬಾಟಲಿಯನ್ನು ಇಡಲಾಗಿತ್ತೇ ಅಥವಾ ಕಂಪನಿಯಿಂದಲೇ ಪ್ಯಾಕಿಂಗ್‌ನಲ್ಲಿ ಅದಲುಬದಲಾಗಿದೆಯೇ ಎಂಬ ಕೋನದಲ್ಲಿ ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಬಾಟಲಿಗಳನ್ನು ನೋಡದೆ ಕಣ್ಣು ಮುಚ್ಚಿ ಇಂತಹ ವಸ್ತುಗಳನ್ನು ಬಳಸುವ ಮುನ್ನ ಎಚ್ಚರಿಕೆ ಅಗತ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕ್ರೆಡಿಟ್ ಕಾರ್ಡ್ ಹೊಂದಿರುವವರು ದಿಢೀರ್ ಮೃತಪಟ್ಟರೆ ಬಿಲ್ ಕಟ್ಟೋರು ಯಾರು? ಕುಟುಂಬದವರ ಜವಾಬ್ದಾರಿಯೇ? – Kannada News | Credit Card Debt After Death: Is Family Liable? Know Your Legal Rights

ನವದೆಹಲಿ, ಜುಲೈ 12: ಇಂದಿನ ಡಿಜಿಟಲ್ ಯುಗದಲ್ಲಿ ಡೆಬಿಟ್ ಕಾರ್ಡ್‌ಗಳಿಗಿಂತ ಕ್ರೆಡಿಟ್ ಕಾರ್ಡ್‌(Credit Card)ಗಳ ಬಳಕೆ ಅತಿಯಾಗಿದೆ. ಆಕರ್ಷಕ ರಿವಾರ್ಡ್ ಪಾಯಿಂಟ್‌ಗಳು, ಕ್ಯಾಶ್‌ಬ್ಯಾಕ್ ಮತ್ತು ಸುಲಭ ಇಎಂಐ (EMI) ಸೌಲಭ್ಯಗಳಿಗಾಗಿ ಜನರು ದೈನಂದಿನ ಶಾಪಿಂಗ್‌ನಿಂದ ಹಿಡಿದು ಪ್ರಯಾಣದ ಬುಕಿಂಗ್‌ವರೆಗೆ ಎಲ್ಲದಕ್ಕೂ ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಆದರೆ, ಒಂದು ವೇಳೆ ಕ್ರೆಡಿಟ್ ಕಾರ್ಡ್ ಹೊಂದಿರುವ ವ್ಯಕ್ತಿ ಬಿಲ್ ಪಾವತಿಸುವ ಮುನ್ನವೇ ಅನಿರೀಕ್ಷಿತವಾಗಿ ಮರಣ ಹೊಂದಿದರೆ, ಆ ಸಾಲವನ್ನು ಯಾರು ತೀರಿಸಬೇಕು? ಬ್ಯಾಂಕ್‌ಗಳು ಕುಟುಂಬದವರನ್ನು ಪಾವತಿಸುವಂತೆ ಒತ್ತಾಯಿಸಬಹುದೇ? ಈ ಪ್ರಶ್ನೆಗೆ ಕಾನೂನು ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಕಠಿಣ ನಿಯಮ: ಕುಟುಂಬದವರು ಹಣ ನೀಡಬೇಕಾಗಿಲ್ಲ

ಕಾನೂನಿನ ಪ್ರಕಾರ, ಕ್ರೆಡಿಟ್ ಕಾರ್ಡ್ ಸಾಲವನ್ನು ‘ವೈಯಕ್ತಿಕ ಮತ್ತು ಭದ್ರತೆಯಿಲ್ಲದ ಸಾಲ’ ಎಂದು ಪರಿಗಣಿಸಲಾಗುತ್ತದೆ. ಕಾರ್ಡ್ ಹೊಂದಿರುವ ವ್ಯಕ್ತಿ ಮೃತಪಟ್ಟರೆ, ಅವರ ಸಂಗಾತಿ (ಪತ್ನಿ/ಪತಿ), ಮಕ್ಕಳು ಅಥವಾ ಪೋಷಕರು ತಮ್ಮ ಸ್ವಂತ ಹಣದಿಂದ ಆ ಬಿಲ್ ಅನ್ನು ಪಾವತಿಸಬೇಕಾದ ಯಾವುದೇ ಕಾನೂನುಬದ್ಧ ಜವಾಬ್ದಾರಿ ಇರುವುದಿಲ್ಲ. ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಕಂಪನಿಗಳು ಮೃತರ ಕುಟುಂಬ ಸದಸ್ಯರ ಮೇಲೆ ಹಣ ಪಾವತಿಸುವಂತೆ ಒತ್ತಡ ಹೇರುವಂತಿಲ್ಲ.

ಹಾಗಾದರೆ ಬ್ಯಾಂಕ್ ತನ್ನ ಹಣವನ್ನು ಹೇಗೆ ವಸೂಲಿ ಮಾಡುತ್ತದೆ?

ಕ್ರೆಡಿಟ್ ಕಾರ್ಡ್ ಸಾಲವು ವ್ಯಕ್ತಿಯ ಮರಣದ ನಂತರ ತಾನಾಗಿಯೇ ಮನ್ನವಾಗುವುದಿಲ್ಲ. ಬ್ಯಾಂಕ್ ಈ ಹಣವನ್ನು ಮೃತ ವ್ಯಕ್ತಿಯ ಮೃತರ ಹೆಸರಿನಲ್ಲಿರುವ ಸ್ವತ್ತುಗಳ ಮೂಲಕ ವಸೂಲಿ ಮಾಡುತ್ತದೆ.

ಆಸ್ತಿಗಳ ಮುಟ್ಟುಗೋಲು: ಮೃತ ವ್ಯಕ್ತಿಯ ಹೆಸರಿನಲ್ಲಿರುವ ಬ್ಯಾಂಕ್ ಉಳಿತಾಯ ಖಾತೆ, ಸ್ಥಿರ ಠೇವಣಿ (FD), ಷೇರು ಮಾರುಕಟ್ಟೆ ಹೂಡಿಕೆಗಳು, ಚಿನ್ನಾಭರಣ ಅಥವಾ ಸ್ವಂತ ಜಮೀನು ಅಥವಾ ಮನೆ ಇದ್ದರೆ, ಆ ಆಸ್ತಿಯನ್ನು ಉತ್ತರಾಧಿಕಾರಿಗಳಿಗೆ ವರ್ಗಾಯಿಸುವ ಮುನ್ನ ಬ್ಯಾಂಕ್ ತನ್ನ ಸಾಲದ ಮೊತ್ತವನ್ನು ಕಡಿತಗೊಳಿಸುವ ಅಥವಾ ವಸೂಲಿ ಮಾಡುವ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತದೆ.

ಕುಟುಂಬದವರು ತಮ್ಮ ಸ್ವಂತ ಹಣ ನೀಡಬೇಕಾಗಿಲ್ಲದಿದ್ದರೂ, ಮೃತರ ಹೆಸರಿನಲ್ಲಿದ್ದ ಆಸ್ತಿಯಿಂದ ಸಾಲದ ಮೊತ್ತ ಪಾವತಿಯಾಗುವವರೆಗೂ ಆ ಆಸ್ತಿಯನ್ನು ಕಾನೂನುಬದ್ಧವಾಗಿ ಬಳಸಲು ಅಥವಾ ಮಾರಾಟ ಮಾಡಲು ಬರುವುದಿಲ್ಲ.

ಸಾಲದ ವಿಲೇವಾರಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಮೃತ ವ್ಯಕ್ತಿಯ ಆಸ್ತಿ ಮತ್ತು ಸಾಲವನ್ನು ನಿರ್ವಹಿಸಲು ಒಬ್ಬ ‘ನಿರ್ವಾಹಕ’ ಕಡ್ಡಾಯವಾಗಿ ಬೇಕಾಗುತ್ತದೆ. ಮೃತ ವ್ಯಕ್ತಿ ಮೊದಲೇ ವಿಲ್ ಮಾಡಿದ್ದರೆ, ಅದರಲ್ಲಿ ಹೆಸರಿಸಲಾದ ಕಾರ್ಯನಿರ್ವಾಹಕನು ಮೃತರ ಆಸ್ತಿಯನ್ನು ಮಾರಿ ಅಥವಾ ಬ್ಯಾಂಕ್ ಖಾತೆಯಿಂದ ಮೊದಲು ಕ್ರೆಡಿಟ್ ಕಾರ್ಡ್ ಸೇರಿದಂತೆ ಎಲ್ಲಾ ಸಾಲಗಳನ್ನು ತೀರಿಸುತ್ತಾನೆ. ಅದರ ನಂತರ ಉಳಿದ ಆಸ್ತಿಯನ್ನು ವಾರಸುದಾರರಿಗೆ ಹಂಚಲಾಗುತ್ತದೆ.

ಮತ್ತಷ್ಟು ಓದಿ: 2026ರ ಜನವರಿ 1ರಿಂದ ನಿಷ್ಕ್ರಿಯಗೊಳ್ಳಲಿವೆ ಈ ಪ್ಯಾನ್ ಕಾರ್ಡ್​ಗಳು; ಕಾರಣವೇನು, ಪರಿಹಾರವೇನು ಇತ್ಯಾದಿ ವಿವರ ಇಲ್ಲಿದೆ

ವಿಲ್ ಇಲ್ಲದಿದ್ದರೆ: ವ್ಯಕ್ತಿ ಯಾವುದೇ ಉಯಿಲು ಬರೆಯದೆ ಮೃತಪಟ್ಟರೆ, ನ್ಯಾಯಾಲಯವು ಒಬ್ಬ ಅಧಿಕೃತ ನಿರ್ವಾಹಕರನ್ನು ನೇಮಿಸುತ್ತದೆ. ಅವರ ಮೂಲಕವೇ ಸಾಲದ ಸೆಟಲ್ಮೆಂಟ್ ಪ್ರಕ್ರಿಯೆ ನಡೆಯುತ್ತದೆ. ಒಂದೊಮ್ಮೆ ಮೃತ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲದಿದ್ದರೆ ಆ ಸಾಲವನ್ನು ಬ್ಯಾಂಕ್ ‘ಬ್ಯಾಡ್ ಡೆಟ್’ ಅಂದರೆ ವಸೂಲಾಗದ ಸಾಲ ಎಂದು ಪರಿಗಣಿಸಿ ಮನ್ನಾ ಮಾಡಬೇಕಾಗುತ್ತದೆ.

ಜಂಟಿ ಕಾರ್ಡ್ ಮತ್ತು ಆ್ಯಡ್-ಆನ್ ಕಾರ್ಡ್‌ಗಳ ನಿಯಮ

ಒಂದೊಮ್ಮೆ ಕ್ರೆಡಿಟ್ ಕಾರ್ಡ್ ಅನ್ನು ಇಬ್ಬರು ಸೇರಿ (ಉದಾಹರಣೆಗೆ ಪತಿ ಮತ್ತು ಪತ್ನಿ) ಜಂಟಿಯಾಗಿ ಪಡೆದಿದ್ದರೆ ಮತ್ತು ಪ್ರಾಥಮಿಕ ಕಾರ್ಡ್‌ದಾರ ಮರಣ ಹೊಂದಿದರೆ, ಮತ್ತೊಬ್ಬ ಜಂಟಿ ಕಾರ್ಡ್‌ದಾರರು ಇಡೀ ಬಿಲ್ ಬಾಕಿಯನ್ನು ಪಾವತಿಸಲು ಸಂಪೂರ್ಣ ಜವಾಬ್ದಾರರಾಗಿರುತ್ತಾರೆ.

ಆ್ಯಡ್-ಆನ್ ಕಾರ್ಡ್ : ಮುಖ್ಯ ಕಾರ್ಡ್‌ದಾರರು ತಮ್ಮ ಕುಟುಂಬದವರಿಗೆ ಆ್ಯಡ್-ಆನ್ ಕಾರ್ಡ್  ಕೊಡಿಸಿದ್ದರೆ, ಮುಖ್ಯ ಕಾರ್ಡ್‌ದಾರರ ಮರಣದ ನಂತರ ಆ್ಯಡ್-ಆನ್ ಕಾರ್ಡ್ಕಾ ಬಳಸುವವರು ಬಿಲ್ ಕಟ್ಟಬೇಕಾಗಿಲ್ಲ. ಆದರೆ ಮುಖ್ಯ ಕಾರ್ಡ್ ಬ್ಲಾಕ್ ಆಗುವುದರಿಂದ ಆ್ಯಡ್-ಆನ್ ಕಾರ್ಡ್ ಕೂಡ ತಾನಾಗಿಯೇ ರದ್ದಾಗುತ್ತದೆ.

ವಿಮೆ ಸೌಲಭ್ಯ : ಇತ್ತೀಚಿನ ದಿನಗಳಲ್ಲಿ ಅನೇಕ ಬ್ಯಾಂಕುಗಳು ಕ್ರೆಡಿಟ್ ಕಾರ್ಡ್‌ಗಳ ಜೊತೆಗೆ ‘ಕ್ರೆಡಿಟ್ ಶೀಲ್ಡ್’ ಅಥವಾ ಇನ್ಶೂರೆನ್ಸ್ ಪಾಲಿಸಿಯನ್ನು ನೀಡುತ್ತವೆ. ಕಾರ್ಡ್‌ದಾರರು ಅಪಘಾತ ಅಥವಾ ಅನಾರೋಗ್ಯದಿಂದ ಮೃತಪಟ್ಟರೆ, ಆ ಇನ್ಶೂರೆನ್ಸ್ ಕಂಪನಿಯೇ ಇಡೀ ಸಾಲವನ್ನು ಬ್ಯಾಂಕಿಗೆ ಪಾವತಿಸುತ್ತದೆ. ಕುಟುಂಬಸ್ಥರು ಮರಣ ಪ್ರಮಾಣಪತ್ರವನ್ನು ಸಲ್ಲಿಸಿ ಈ ಸೌಲಭ್ಯವನ್ನು ಪಡೆಯಬಹುದು.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ : ಕ್ರೆಡಿಟ್ ಕಾರ್ಡ್ ಹೊಂದಿರುವ ವ್ಯಕ್ತಿ ಸತ್ತರೆ, ಆತನ ಸಾಲವನ್ನು ಪತ್ನಿ ಅಥವಾ ಮಕ್ಕಳು ತೀರಿಸಬೇಕೇ?
ಉತ್ತರ: ಖಂಡಿತವಾಗಿಯೂ ಇಲ್ಲ. ಕ್ರೆಡಿಟ್ ಕಾರ್ಡ್ ಸಾಲವನ್ನು ಭದ್ರತೆಯಿಲ್ಲದ ವೈಯಕ್ತಿಕ ಸಾಲ (Unsecured Debt) ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಮೃತರ ಸಂಗಾತಿ, ಮಕ್ಕಳು ಅಥವಾ ಪೋಷಕರು ಈ ಬಿಲ್ ಪಾವತಿಸಬೇಕಾದ ಯಾವುದೇ ಕಾನೂನುಬದ್ಧ ಜವಾಬ್ದಾರಿ ಇರುವುದಿಲ್ಲ. ಬ್ಯಾಂಕುಗಳು ಸಹ ಕುಟುಂಬಸ್ಥರ ಮೇಲೆ ಹಣಕ್ಕಾಗಿ ಒತ್ತಡ ಹೇರುವಂತಿಲ್ಲ.

ಪ್ರಶ್ನೆ : ಮೃತ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಆಸ್ತಿ ಅಥವಾ ಬ್ಯಾಂಕ್ ಬ್ಯಾಲೆನ್ಸ್ ಇಲ್ಲದಿದ್ದರೆ ಕ್ರೆಡಿಟ್ ಕಾರ್ಡ್ ಬಿಲ್ ಏನಾಗುತ್ತದೆ?
ಉತ್ತರ: ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಉಳಿತಾಯ ಖಾತೆ, ಸ್ಥಿರ ಠೇವಣಿ (FD), ಜಮೀನು, ಮನೆ ಅಥವಾ ಯಾವುದೇ ಹೂಡಿಕೆಗಳು ಇಲ್ಲದಿದ್ದರೆ, ಬ್ಯಾಂಕ್ ಆ ಸಾಲವನ್ನು ಮೃತರ ಕುಟುಂಬದಿಂದ ವಸೂಲಿ ಮಾಡಲು ಬರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಬ್ಯಾಂಕುಗಳು ಆ ಬಾಕಿಯನ್ನು ‘ಬ್ಯಾಡ್ ಡೆಟ್’ (Bad Debt – ವಸೂಲಾಗದ ಸಾಲ) ಎಂದು ಪರಿಗಣಿಸಿ ಸಂಪೂರ್ಣವಾಗಿ ಮನ್ನಾ ಮಾಡಬೇಕಾಗುತ್ತದೆ.

ಪ್ರಶ್ನೆ : ತಂದೆಯ ಹೆಸರಿನಲ್ಲಿದ್ದ ಕ್ರೆಡಿಟ್ ಕಾರ್ಡ್ ಸಾಲ ತೀರದಿದ್ದರೆ, ಅವರ ಹೆಸರಿನಲ್ಲಿದ್ದ ಮನೆಯನ್ನು ಮಕ್ಕಳು ಮಾರಾಟ ಮಾಡಬಹುದೇ?
ಉತ್ತರ: ಸಾಲ ತೀರುವವರೆಗೂ ಮಾರಾಟ ಮಾಡಲು ಬರುವುದಿಲ್ಲ. ಮೃತರ ಕುಟುಂಬಸ್ಥರು ತಮ್ಮ ಸ್ವಂತ ಹಣ ನೀಡಬೇಕಾಗಿಲ್ಲದಿದ್ದರೂ, ಮೃತ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಯ ಮೇಲೆ ಬ್ಯಾಂಕಿಗೆ ಕಾನೂನುಬದ್ಧ ಹಕ್ಕು ಇರುತ್ತದೆ. ತಂದೆಯ ಆಸ್ತಿ ಅಥವಾ ಮನೆ ಮಕ್ಕಳ ಹೆಸರಿಗೆ ವರ್ಗಾವಣೆ ಆಗಬೇಕೆಂದರೆ ಅಥವಾ ಅದನ್ನು ಮಾರಾಟ ಮಾಡಬೇಕೆಂದರೆ, ಮೊದಲು ಆ ಆಸ್ತಿಯ ಮೌಲ್ಯದಿಂದ ಕ್ರೆಡಿಟ್ ಕಾರ್ಡ್ ಸಾಲವನ್ನು ಚುಕ್ತಾ ಮಾಡಬೇಕಾಗುತ್ತದೆ. ಸಾಲದ ಸೆಟಲ್ಮೆಂಟ್ ಆಗುವವರೆಗೂ ಆ ಆಸ್ತಿಯನ್ನು ಬಳಸಲು ಕಾನೂನುಬದ್ಧವಾಗಿ ಬರುವುದಿಲ್ಲ.

ಪ್ರಶ್ನೆ : ಮುಖ್ಯ ಕಾರ್ಡ್‌ದಾರರು ಮೃತಪಟ್ಟರೆ, ಕುಟುಂಬದವರು ಬಳಸುತ್ತಿದ್ದ ‘ಆ್ಯಡ್-ಆನ್’ ಕಾರ್ಡ್ ಬಿಲ್ ಯಾರು ಕಟ್ಟಬೇಕು?
ಉತ್ತರ: ಮುಖ್ಯ ಕಾರ್ಡ್ ಹೊಂದಿದ್ದ ವ್ಯಕ್ತಿ ಮರಣ ಹೊಂದಿದರೆ, ಆ್ಯಡ್-ಆನ್ ಕಾರ್ಡ್ ಬಳಸುತ್ತಿದ್ದ ಕುಟುಂಬದ ಸದಸ್ಯರು ಆ ಬಿಲ್ ಕಟ್ಟಬೇಕಾಗಿಲ್ಲ. ಆ ಸಾಲವನ್ನೂ ಸಹ ಮುಖ್ಯ ಕಾರ್ಡ್‌ದಾರರ ಆಸ್ತಿಯಿಂದಲೇ ವಸೂಲಿ ಮಾಡಲಾಗುತ್ತದೆ. ಆದರೆ, ಮುಖ್ಯ ಕಾರ್ಡ್‌ದಾರರು ಮೃತಪಟ್ಟ ತಕ್ಷಣ ಮುಖ್ಯ ಕಾರ್ಡ್ ಬ್ಲಾಕ್ ಆಗುವುದರಿಂದ, ಅದರ ಅಡಿಯಲ್ಲಿ ನೀಡಲಾದ ಆ್ಯಡ್-ಆನ್ ಕಾರ್ಡ್‌ಗಳು ಸಹ ತಾನಾಗಿಯೇ ರದ್ದಾಗುತ್ತವೆ .

ವಾಣಿಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Viral: ಮೊದಲ ಬಾರಿಗೆ ದೂರದ ಊರಿಗೆ ಹೊರಟ ಮಗಳು, ರೈಲು ಹತ್ತಿಸಿ ಕಣ್ಣೀರು ಹಾಕಿದ ತಂದೆ – Kannada News | A father became emotional after seeing his daughter off on a train to a distant town

ತಂದೆ (father) ಅಂದ್ರೆ ಹೆಣ್ಣು ಮಕ್ಕಳ ಪಾಲೀನ ಸೇಫ್‌ ಪ್ಲೇಸ್‌ ಅಂತಾನೇ ಹೇಳಬಹುದು. ತಂದೆಗೂ ಅಷ್ಟೆ ತನ್ನ ಮಗಳೆಂದರೆ ಎಲ್ಲಿಲ್ಲದ ಪ್ರೀತಿ. ಮಗಳು ವೃತ್ತಿ ಬದುಕಿಗಾಗಿ ಬೇರೆ ಊರಿಗೆ ಹೊರಟು ನಿಂತರೆ ತಂದೆಯೂ ಭಾವುಕನಾಗುತ್ತಾನೆ. ಇಂತಹದ್ದೇ ಭಾವುಕ ಕ್ಷಣದ ಪೋಸ್ಟ್ ವೈರಲ್ ಆಗಿದೆ. ಈ ದೃಶ್ಯದಲ್ಲಿ ಮಗಳನ್ನು ರೈಲು ಹತ್ತಿಸಿದ ತಂದೆ, ಕೈಯಲ್ಲಿ ದುಡ್ಡು ಇಟ್ಟು ಕಳುಹಿಸಿಕೊಟ್ಟು ಭಾವುಕನಾಗಿದ್ದಾನೆ. ಈ ದೃಶ್ಯ ನೋಡಿ ನೆಟ್ಟಿಗರ ಕಣ್ಣು ಒದ್ದೆಯಾಗಿದೆ.

ಅನುರಾಧ (Anuradha) ಹೆಸರಿನ ಎಕ್ಸ್ ಖಾತೆಯಲ್ಲಿ ತಂದೆ ಹಾಗೂ ಮಗಳ ಬಾಂಧವ್ಯದ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ನಲ್ಲಿ ಮಗಳು ಕೆಲಸಕ್ಕಾಗಿ ದೂರದ ಊರಿಗೆ ಹೊರಟು ನಿಂತಿದ್ದಾಳೆ. ಮಗಳನ್ನು ಬಿಡಲು ಹೆತ್ತವರು ರೈಲ್ವೆ ಸ್ಟೇಷನ್‌ಗೆ ಬಂದಿದ್ದಾರೆ. ಇದೇ ವೇಳೆ ತಂದೆಯ ಕಣ್ಣಲ್ಲಿ ನೀರು ತುಂಬಿದ್ದು, ಮಗಳ ಬಳಿ ದುಡ್ದು ಇದೆಯೇ ಎಂದು ಕೇಳುತ್ತಾನೆ. ನನ್ನ ಫೋನ್ ಪೇಯಲ್ಲಿದೆ ಎಂದ ಮಗಳ ಕೈಗೆ ಒಂದಿಷ್ಟು ಹಣ ಇಟ್ಟು, ಇದನ್ನೂ ಇಟ್ಟುಕೋ ಎಂದು ಹೇಳುವ ತಂದೆಯ ಕಾಳಜಿಯು ಇಲ್ಲಿ ವ್ಯಕ್ತವಾಗಿದೆ. ಮಗಳನ್ನು ಕಳುಹಿಸಿ ಕೊಡುವ ವೇಳೆ ತಂದೆ ಭಾವುಕನಾಗಿರುವುದನ್ನು ಕಾಣಬಹುದು.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ಪುಟ್ಟ ಕಂದಮ್ಮನನ್ನು ಬೇಬಿ ಕ್ಯಾರಿಯರ್‌ನಲ್ಲಿ ಕೂರಿಸಿಕೊಂಡು ಡ್ಯಾನ್ಸ್ ಮಾಡಿದ ತಂದೆ

ಈ ಪೋಸ್ಟ್ ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಫೋನ್ ಪೇ ನಲ್ಲಿ ನೆಟ್ವರ್ಕ್ ಸಮಸ್ಯೆ ಬರಬಹುದು. ಆದರೆ ತಂದೆಯ ಬಳಿ ಹಣ ಯಾವಾಗಲೂ ಇರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಮಗಳ ಮೇಲೆ ತಂದೆಯ ಪ್ರೀತಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ತನ್ನ ಮಕ್ಕಳಿಗಾಗಿ ತಂದೆ ತನ್ನ ಜೀವನವೆಲ್ಲವನ್ನು ಮುಡಿಪಾಗಿ ಇಡುತ್ತಾನೆ ಎಂದು ಕಾಮೆಂಟ್ ಮಾಡಿದ್ದಾನೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version