ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು – Kannada News | Singer S Janaki Funeral and Last respect at Mysore Maharaja Ground

ಲೆಜೆಂಡರಿ ಗಾಯಕಿ ಎಸ್. ಜಾನಕಿ (S Janaki) ಅವರು ನಿಧನರಾಗಿದ್ದು, ಮೈಸೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಬಂದು ಅಂತಿಮ ನಮನ ಸಲ್ಲಿಸಿದ್ದಾರೆ. ಜಾನಕಿ ಅವರಿಗೆ ಇರುವ ಅಭಿಮಾನಿಗಳ ಬಳಗ ದೊಡ್ಡದು. ಅಂತಿಮ ದರ್ಶನ ಪಡೆಯಲು ಬಂದ ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಜಾನಕಿ ಅವರಿಗೆ ಮೈಸೂರಿನ ಜೊತೆ ವಿಶೇಷ ನಂಟು ಇತ್ತು. ಅವರನ್ನು ಸ್ಮರಿಸಿಕೊಂಡು ಅಭಿಮಾನಿಗಳು ಭಾವುಕರಾಗಿದ್ದಾರೆ. ಮೈಸೂರು ಎಂದರೆ ಎಸ್. ಜಾನಕಿ ಅವರಿಗೆ ಪಂಚಪ್ರಾಣ ಆಗಿತ್ತು. ಕೊನೇ ದಿನಗಳನ್ನು ಅವರು ಮೈಸೂರಿನಲ್ಲೇ ಕಳೆದರು. ಅವರ ಆಸೆಯಂತೆ ಮೈಸೂರಿನಲ್ಲೇ ಎಸ್. ಜಾನಕಿ ಅವರ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಮೈಸೂರಿನ ಮಹಾರಾಜ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆ ತನಕ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಶ್ವಕಪ್​ನಲ್ಲೂ ಟೀಮ್ ಇಂಡಿಯಾ ಈ ರೀತಿಯಾಗಿ ಸೋತಿಲ್ಲ! – Kannada News | India’s Historic T20I Slump: Thrashed 4 0 by England in Record Defeat

ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ ಎಂದೂ ಕಾಣದಂತಹ ಹೀನಾಯ ಸೋಲಿನ ಮುಖಭಂಗಕ್ಕೆ ಒಳಗಾಗಿದೆ. ಜುಲೈ 2026 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಭಾರತ ಬರೋಬ್ಬರಿ 4 ಪಂದ್ಯಗಳಲ್ಲಿ ಸೋಲುವ ಮೂಲಕ ಅನಪೇಕ್ಷಿತ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಟಿ20 ಸರಣಿ ಅಥವಾ ಟೂರ್ನಿಯೊಂದರಲ್ಲಿ ಭಾರತ ತಂಡ 4 ಪಂದ್ಯಗಳನ್ನು ಸೋತಿರುವುದು ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು. ಐದು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆದರೆ ಉಳಿದ ನಾಲ್ಕೂ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು ಸಂಪೂರ್ಣವಾಗಿ ಹತ್ತಿಕ್ಕಿ 4-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

ಟಿ20 ವಿಶ್ವಕಪ್​ನಲ್ಲೂ ಈ ರೀತಿ ಸೋತಿಲ್ಲ!

ಭಾರತ ತಂಡವು ಟಿ20 ವಿಶ್ವಕಪ್​ನಲ್ಲೂ ಈವರೆಗೆ 4 ಪಂದ್ಯಗಳನ್ನು ಸೋತಿರಲಿಲ್ಲ. ಇನ್ನು ದ್ವಿಪಕ್ಷೀಯ ಸರಣಿಯಲ್ಲಿ ಸೋತ ಅತ್ಯಧಿಕ ಪಂದ್ಯಗಳ ಸಂಖ್ಯೆ 3. ಆದರೆ ಈ ಬಾರಿ ಸತತ ನಾಲ್ಕು ಮ್ಯಾಚ್​ಗಳಲ್ಲಿ ಸೋಲುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿದೆ.

  •  ಇಂಗ್ಲೆಂಡ್ ಸರಣಿ (2026): 4 ಸೋಲುಗಳು (5 ಪಂದ್ಯಗಳ ಸರಣಿಯಲ್ಲಿ 4-0 ಅಂತರದ ಸೋಲು)
  •  ವೆಸ್ಟ್ ಇಂಡೀಸ್ ಸರಣಿ (2023): 3 ಸೋಲುಗಳು (5 ಪಂದ್ಯಗಳ ಸರಣಿಯಲ್ಲಿ 3-2 ಅಂತರದ ಸೋಲು)
  •  ಟಿ20 ವಿಶ್ವಕಪ್ (2010 – ವೆಸ್ಟ್ ಇಂಡೀಸ್): 3 ಸೋಲುಗಳು (ಸೂಪರ್ 8 ಹಂತದಲ್ಲೇ ಹೊರಬಿದ್ದಿತ್ತು)
  • ಟಿ20 ವಿಶ್ವಕಪ್ (2009 – ಇಂಗ್ಲೆಂಡ್): 3 ಸೋಲುಗಳು (ಸೂಪರ್ 8 ಹಂತದಲ್ಲೇ ಹೊರಬಿದ್ದಿತ್ತು).

ಅಂದರೆ ಬಹುಪಂದ್ಯಗಳ ಟೂರ್ನಮೆಂಟ್​ನಲ್ಲೂ ಟೀಮ್ ಇಂಡಿಯಾ 4 ಪಂದ್ಯಗಳನ್ನು ಸೋತಿರಲಿಲ್ಲ. ಆದರೆ ಈ ಬಾರಿ ಭಾರತ ತಂಡಕ್ಕೆ ಹೀನಾಯ ಸೋಲುಣಿಸುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗಿದೆ.

ಸೋಲಿಗೆ ಪ್ರಮುಖ ಕಾರಣಗಳು:

  • ಬ್ಯಾಟಿಂಗ್ ವೈಫಲ್ಯ: ಇಂಗ್ಲೆಂಡ್‌ನ ವೇಗದ ಪಿಚ್‌ಗಳ ಸವಾಲನ್ನು ಎದುರಿಸಲು ಭಾರತದ ಮುಂಚೂಣಿ ಬ್ಯಾಟರ್‌ಗಳು ಸಂಪೂರ್ಣ ವಿಫಲರಾದರು.
  •  ದುರ್ಬಲ ಬೌಲಿಂಗ್: ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ರನ್ ನಿಯಂತ್ರಿಸಲು ಭಾರತೀಯ ಬೌಲರ್‌ಗಳು ತಡಕಾಡಿದರು.
  • ಹೊಂದಾಣಿಕೆಯ ಕೊರತೆ: ಸರಣಿಯುದ್ದಕ್ಕೂ ಪ್ರಯೋಗಗಳನ್ನು ಮಾಡಲು ಹೋಗಿ ತಂಡದ ಮಧ್ಯಮ ಕ್ರಮಾಂಕವು ಸ್ಥಿರತೆ ಕಳೆದುಕೊಂಡಿತು.

ಇದನ್ನೂ ಓದಿ: ನಾವು ಇನ್ನೂ ಸಹ ತುಂಬಾ ಕಲಿಯಬೇಕಿದೆ: ಶ್ರೇಯಸ್ ಅಯ್ಯರ್

ಈ ಸೋಲುಗಳೊಂದಿಗೆ ಟೀಮ್ ಇಂಡಿಯಾ ಐಸಿಸಿ ಟಿ20 ತಂಡಗಳ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನವನ್ನು ಕಳೆದುಕೊಂಡಿದೆ. ಇತ್ತ ಭಾರತ ತಂಡವನ್ನು ಬಗ್ಗು ಬಡಿದಿರುವ ಇಂಗ್ಲೆಂಡ್ ತಂಡವು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ 1 ತಂಡವಾಗಿ ಹೊರ ಹೊಮ್ಮಿದ್ದಾರೆ.

ಇದೀಗ ಟಿ20 ಸರಣಿ ಸೋತಿರುವ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆಡಲು ಸಜ್ಜಾಗಿದೆ. ಈ ಸರಣಿಯು ಜುಲೈ 14 ರಿಂದ ಶುರುವಾಗಲಿದೆ.

Source link

ಲಕ್ಕವಳ್ಳಿ ಭದ್ರಾ ಜಲಾಶಯದಲ್ಲಿ ಕುಸಿದ ಸಂಗ್ರಹ: ಕುಡಿಯುವ ಉದ್ದೇಶಕ್ಕೆ ಮಾತ್ರ ನೀರು ಮೀಸಲಿರಿಸಿ ಆದೇಶ; ರೈತರಿಗೆ ಸಂಕಷ್ಟ – Kannada News | Water Crisis: Bhadra Reservoir Level Plummets; Supply Restricted Only for Drinking Purpose Leaving Farmers Anxious

ಚಿಕ್ಕಮಗಳೂರು/ಶಿವಮೊಗ್ಗ, ಜುಲೈ 12: ಈ ವರ್ಷದ ಮುಂಗಾರು ಮಳೆ ಕೊರತೆಯಿಂದ ಕರ್ನಾಟಕದಲ್ಲಿ ನೀರಿನ ಅಭಾವ ಹೆಚ್ಚಿದೆ. ಅದರಲ್ಲೂ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲಾಡಳಿತವು ಲಕ್ಕವಳ್ಳಿ ಭದ್ರಾ ಜಲಾಶಯದ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಮೀಸಲಿಡಲು ನಿರ್ಧರಿಸಿದೆ. ಜಲಸಂಪನ್ಮೂಲ ಇಲಾಖೆ ಹಾಗೂ ಮೈಸೂರು ಪ್ರಾದೇಶಿಕ ಆಯುಕ್ತರ ನಿರ್ದೇಶನದ ಮೇರೆಗೆ ಚಿಕ್ಕಮಗಳುರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವಂತೆ ಆದೇಶ ಹೊರಡಿಸಿದ್ದಾರೆ.ಈ ಕ್ರಮದಿಂದ ನೀರಾವರಿಯನ್ನು ಅವಲಂಬಿಸಿರುವ ರೈತರಲ್ಲಿ ತೀವ್ರ ಆತಂಕ ಉಂಟಾಗಿದೆ.

ಡಿಸಿ ಆದೇಶದಲ್ಲಿ ಏನಿದೆ?

ಈ ನಿರ್ಧಾರದಿಂದ ನೀರಾವರಿಗೆ ನೀರು ಬಿಡುಗಡೆಗೆ ನಿರ್ಬಂಧ ಉಂಟಾಗಲಿದ್ದು, ರೈತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಬಹುದು. ಆದರೆ ಬರ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಈಗಿರುವ ನೀರನ್ನು ಸಂರಕ್ಷಿಸುವುದು ಅನಿವಾರ್ಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಒಣಹವಾಮಾನ ಮುಂದುವರಿದರೆ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಅನಿವಾರ್ಯವಾಗಿದೆ ಎಂದೂ ಡಿಸಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಕಾಲುವೆಗಳ ಮೂಲಕ ನೀರಾವರಿ ಪಡೆಯುವ ರೈತರಿಗೆ ಇದರಿಂದ ತೊಂದರೆಯಾಗಬಹುದು ಎಂಬುದನ್ನು ಒಪ್ಪಿಕೊಂಡಿದ್ದರೂ, ಲಭ್ಯವಿರುವ ನೀರನ್ನು ಸಂರಕ್ಷಿಸುವುದು ಅತ್ಯಗತ್ಯ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಕರಾವಳಿ, ಮಲೆನಾಡಿನಲ್ಲಿ ವರುಣನ ಅಬ್ಬರಕ್ಕೆ ಬ್ರೇಕ್! ಉತ್ತರ ಕರ್ನಾಟಕದಲ್ಲಿ ಒಣ ಹವೆಯ ಮುನ್ಸೂಚನೆ

ಜಲಾಶಯದಲ್ಲಿರೋದು ಕೇವಲ 31.257 ಟಿಎಂಸಿ ನೀರು!

186 ಅಡಿ ಪೂರ್ಣ ಜಲಮಟ್ಟ ಹಾಗೂ 71.535 ಟಿಎಂಸಿ ಒಟ್ಟು ಸಂಗ್ರಹ ಸಾಮರ್ಥ್ಯ ಹೊಂದಿರುವ ಭದ್ರಾ ಜಲಾಶಯದಲ್ಲಿ ಜುಲೈ 10ರ ವೇಳೆಗೆ ಕೇವಲ 146 ಅಡಿ ನೀರಿನ ಮಟ್ಟವಿದ್ದು, 31.257 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 173.7 ಅಡಿಗೆ ತಲುಪಿದ್ದು, 56.794 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ವರ್ಷದ ಸ್ಥಿತಿಗೆ ಹೋಲಿಸಿದರೆ ಇದು ಭಾರೀ ಕುಸಿತವಾಗಿದೆ. ಪ್ರಸ್ತುತ ಜಲಾಶಯಕ್ಕೆ 13,123 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೂ, ನೀರಿನ ಸಂರಕ್ಷಣೆಯ ಉದ್ದೇಶದಿಂದ ಹೊರಹರಿವನ್ನು ಕೇವಲ 218 ಕ್ಯೂಸೆಕ್‌ಗೆ ಮಿತಿಗೊಳಿಸಲಾಗಿದೆ. ಇದರಲ್ಲಿ ಎಡದಂಡೆ ಕಾಲುವೆಗೆ 50 ಕ್ಯೂಸೆಕ್, ಬಲದಂಡೆ ಕಾಲುವೆಗೆ 10 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಸುಮಾರು 6 ಕ್ಯೂಸೆಕ್ ನೀರು ಆವಿಯಾಗುತ್ತಿದೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸ್ವಿಟ್ಜರ್ಲೆಂಡ್ ಪ್ರವಾಸಕ್ಕೆ ಹೋಗಿದ್ದ ಹೈದರಾಬಾದ್ ದಂಪತಿ ನಾಪತ್ತೆ, 50 ಕೋಟಿ ರೂ. ವಂಚಿಸಿ ಎಸ್ಕೇಪ್ ಆದ್ರಾ? – Kannada News | Hyderabad Couple Missing in Switzerland: Did They Escape with rs 50 Crore Fraud

ಹೈದರಾಬಾದ್, ಜುಲೈ 12: ಯುರೋಪಿನ ಸುಂದರ ದೇಶ ಸ್ವಿಟ್ಜರ್ಲೆಂಡ್‌ಗೆ ಪ್ರವಾಸ(Tour)ಕ್ಕೆ ಹೋಗಿದ್ದ ಹೈದರಾಬಾದ್‌ನ ಉದ್ಯಮಿ ದಂಪತಿ ಕಳೆದ ಕೆಲವು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ಸಾಧಾರಣ ನಾಪತ್ತೆ ಪ್ರಕರಣದಂತೆ ಕಂಡರೂ, ಇದರ ಹಿಂದೆ ಬರೋಬ್ಬರಿ 50 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ವಂಚನೆಯ ಕರಾಳ ಹಗರಣ ಅಡಗಿರುವ ಶಂಕೆ ವ್ಯಕ್ತವಾಗಿದೆ.

ನಾಪತ್ತೆಯಾದ ದಂಪತಿಯನ್ನು ಉದ್ಯಮಿ ಪಬ್ಬಾ ಚಂದ್ರಶೇಖರ್ (51) ಹಾಗೂ ಅವರ ಪತ್ನಿ ಸ್ವಪ್ನಾ (42) ಎಂದು ಗುರುತಿಸಲಾಗಿದೆ. ಜೂನ್ 22 ರಂದು ರಜೆಗಾಗಿ ವಿದೇಶಕ್ಕೆ ತೆರಳಿದ್ದ ಇವರು ಜುಲೈ 8 ರವರೆಗೆ ತಮ್ಮ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ಅಂದಿನಿಂದ ಇಬ್ಬರ ಮೊಬೈಲ್ ಫೋನ್‌ಗಳು ದಿಢೀರನೆ ಸ್ವಿಚ್ ಆಫ್ ಆಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಮಗಳ ದೂರು

ತಂದೆ-ತಾಯಿ ಜುಲೈ 8 ರ ನಂತರ ಯಾವುದೇ ಕರೆಗಳಿಗೂ ಸಿಗದೇ ಹೋದಾಗ ಆತಂಕಗೊಂಡ ಅವರ 23 ವರ್ಷದ ಮಗಳು ಶ್ರೇಯಾ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ಮಗಳ ದೂರಿನ ಆಧಾರದ ಮೇಲೆ ಪೊಲೀಸರು ಸದ್ಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ದಂಪತಿ ಭಾರತದಿಂದ ಹೊರಟ ವಲಸೆ ದಾಖಲೆಗಳು, ವಿಮಾನದ ಟಿಕೆಟ್‌ಗಳು ಹಾಗೂ ಸ್ವಿಟ್ಜರ್ಲೆಂಡ್‌ನಲ್ಲಿ ಅವರ ಕೊನೆಯ ಲೊಕೇಶನ್ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಸೈಬರ್ ಕ್ರೈಮ್ ಪೊಲೀಸರು ಇಂಟರ್‌ಪೋಲ್ ನೆರವು ಕೋರಲು ಸಜ್ಜಾಗಿದ್ದಾರೆ.

ನಾಪತ್ತೆಯ ಹಿಂದೆ 50 ಕೋಟಿ ರೂ. ರಹಸ್ಯ

ಪೊಲೀಸ್ ತನಿಖೆ ಆಳವಾಗುತ್ತಿದ್ದಂತೆ ದಂಪತಿಯ ಮತ್ತೊಂದು ಶಾಕಿಂಗ್ ಮುಖ ಬಯಲಾಗಿದೆ. ಉದ್ಯಮಿ ಚಂದ್ರಶೇಖರ್ ಕಳೆದ ಕೆಲವು ವರ್ಷಗಳಿಂದ ಪರಿಚಯಸ್ಥರು ಹಾಗೂ ಹೂಡಿಕೆದಾರರು ಸೇರಿದಂತೆ ಸುಮಾರು 60 ಕ್ಕೂ ಹೆಚ್ಚು ಜನರಿಂದ ಬರೋಬ್ಬರಿ 50 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಿರುವುದು ಪತ್ತೆಯಾಗಿದೆ.

ಮತ್ತಷ್ಟು ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲೇ ದುರಂತ: ಮಸ್ಸೂರಿ ಹೋಂಸ್ಟೇಯಲ್ಲಿ ಮಹಿಳೆ ನಿಗೂಢ ಸಾವು, ತಿಂಗಳ ಬಳಿಕ ಟೆಕ್ಕಿ ಪತಿ ಅರೆಸ್ಟ್

ತಮ್ಮ ವೈಯಕ್ತಿಕ ಮತ್ತು ಬಿಸಿನೆಸ್ ಅಗತ್ಯಗಳ ಹೆಸರಿನಲ್ಲಿ, ಬ್ಯಾಂಕುಗಳಿಗಿಂತ ಹೆಚ್ಚಿನ ಲಾಭ ಅಥವಾ ಬಡ್ಡಿ ನೀಡುವುದಾಗಿ ನಂಬಿಸಿ ಚಂದ್ರಶೇಖರ್ ಜನರಿಂದ ಕೋಟ್ಯಂತರ ರೂಪಾಯಿ ಕೈಗಡ ತಂದಿದ್ದರು.

ಹೂಡಿಕೆದಾರರು ಹಣ ವಾಪಸ್ ಕೇಳಲು ಶುರುಮಾಡಿದ ಬೆನ್ನಲ್ಲೇ ದಂಪತಿ ಸ್ವಿಟ್ಜರ್ಲೆಂಡ್ ಪ್ಲಾನ್ ಮಾಡಿದ್ದರು. ಹೀಗಾಗಿ ಇವರು ಉದ್ದೇಶಪೂರ್ವಕವಾಗಿಯೇ ಜನರಿಗೆ ವಂಚಿಸಿ, ವಿದೇಶದಲ್ಲಿ ಹಣ ಅಡಗಿಸಿಟ್ಟು ದೇಶ ಬಿಟ್ಟು ಓಡಿಹೋಗಿದ್ದಾರೆಯೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರ್ಥಿಕ ಅಪರಾಧಿಗಳ ನೆಚ್ಚಿನ ತಾಣ ಸ್ವಿಟ್ಜರ್ಲೆಂಡ್?

ಜಾಗತಿಕವಾಗಿ ಭಾರತದ ಬ್ಯಾಂಕುಗಳಿಗೆ ಅಥವಾ ಹೂಡಿಕೆದಾರರಿಗೆ ವಂಚಿಸುವ ಆರ್ಥಿಕ ಅಪರಾಧಿಗಳು ಲಂಡನ್ ಅಥವಾ ಸ್ವಿಟ್ಜರ್ಲೆಂಡ್‌ನಂತಹ ದೇಶಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಸ್ವಿಸ್ ಬ್ಯಾಂಕ್ ರಹಸ್ಯ: ಸ್ವಿಟ್ಜರ್ಲೆಂಡ್‌ನ ಬ್ಯಾಂಕಿಂಗ್ ಕಾನೂನುಗಳು ಖಾತೆದಾರರ ಮಾಹಿತಿಯನ್ನು ಅತ್ಯಂತ ರಹಸ್ಯವಾಗಿಡುತ್ತವೆ. ಹೀಗಾಗಿ ಕಪ್ಪುಹಣ ಮತ್ತು ವಂಚನೆಯ ಹಣವನ್ನು ಅಲ್ಲಿಗೆ ವರ್ಗಾಯಿಸುವುದು ಸುಲಭ ಎಂಬ ನಂಬಿಕೆ ಇದೆ.

ಹಸ್ತಾಂತರ ಪ್ರಕ್ರಿಯೆ ಕಷ್ಟ: ಭಾರತದೊಂದಿಗೆ ಅಪರಾಧಿಗಳ ಹಸ್ತಾಂತರ ಒಪ್ಪಂದ ಇದ್ದರೂ, ವಿದೇಶಿ ನ್ಯಾಯಾಲಯಗಳಲ್ಲಿನ ಕಾನೂನು ಹೋರಾಟ ವರ್ಷಗಟ್ಟಲೆ ಎಳೆಯುವುದರಿಂದ ವಂಚಕರು ಇಂತಹ ದೇಶಗಳಲ್ಲಿ ಆಶ್ರಯ ಪಡೆಯಲು ಯತ್ನಿಸುತ್ತಾರೆ.

ಸದ್ಯಕ್ಕೆ ಹೈದರಾಬಾದ್ ಪೊಲೀಸರು ವಂಚನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಎಫ್‌ಐಆರ್ ದಾಖಲಿಸಿಲ್ಲವಾದರೂ, ದಂಪತಿಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ದಂಪತಿ ತಾವಾಗಿಯೇ ನಾಪತ್ತೆಯಾಗಿದ್ದಾರೆಯೇ ಅಥವಾ ಯಾವುದಾದರೂ ಅಪಾಯದಲ್ಲಿ ಸಿಲುಕಿದ್ದಾರೆಯೇ ಎಂಬುದು ಸದ್ಯದಲ್ಲೇ ತಿಳಿಯಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:17 am, Sun, 12 July 26

Source link

FIFA World Cup 2026: ಸೆಮಿಫೈನಲ್ ವೇಳಾಪಟ್ಟಿ ಪ್ರಕಟ – Kannada News | Fifa world cup 2026 semi final schedule

ಫಿಫಾ ವಿಶ್ವಕಪ್​ ಈಗ ರಣರೋಚಕ ಘಟ್ಟಕ್ಕೆ ತಲುಪಿದೆ. 48 ತಂಡಗಳೊಂದಿಗೆ ಶುರುವಾದ ಟೂರ್ನಿಯಲ್ಲಿ ಈಗ ಉಳಿದಿರುವುದು ಕೇವಲ 4 ತಂಡಗಳು ಮಾತ್ರ. ಈ ನಾಲ್ಕು ತಂಡಗಳ ನಡುವೆ ಸೆಮಿಫೈನಲ್ ನಡೆಯಲಿದ್ದು, ಇದರಲ್ಲಿ ಗೆಲ್ಲುವ ತಂಡಗಳು ಫೈನಲ್​ನಲ್ಲಿ ಮುಖಾಮುಖಿಯಾಗಲಿದೆ.

ಸೆಮಿಫೈನಲ್ ತಲುಪಿದ ತಂಡಗಳು:

ಕಳೆದ ಕೆಲವು ವಾರಗಳಿಂದ ನಡೆದ ರೋಚಕ ಕ್ವಾರ್ಟರ್‌ಫೈನಲ್ ಪಂದ್ಯಗಳ ನಂತರ, ನಾಲ್ಕು ಬಲಿಷ್ಠ ತಂಡಗಳು ತಮ್ಮ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ.

  • ಫ್ರಾನ್ಸ್: ಮೊರಾಕೊ ವಿರುದ್ಧ 2-0 ಗೋಲುಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
  •  ಸ್ಪೇನ್: ಯೂರೋಪಿಯನ್ ಚಾಂಪಿಯನ್ಸ್ ಸ್ಪೇನ್ ತಂಡವು ಬೆಲ್ಜಿಯಂ ವಿರುದ್ಧ 2-1 ಗೋಲುಗಳ ರೋಚಕ ಗೆಲುವು ದಾಖಲಿಸಿ ಸೆಮಿಫೈನಲ್​ಗೇರಿದೆ.
  • ಇಂಗ್ಲೆಂಡ್: ನಾರ್ವೆ ವಿರುದ್ಧದ ಪಂದ್ಯದಲ್ಲಿ ಜೂಡ್ ಬೆಲ್ಲಿಂಗ್‌ಹ್ಯಾಮ್ ಅವರ ಅದ್ಭುತ ಆಟದ (2-1 ಗೆಲುವು) ನೆರವಿನಿಂದ ಸೆಮಿಫೈನಲ್ ಪ್ರವೇಶಿಸಿದೆ.
  • ಅರ್ಜೆಂಟೀನಾ: ಸ್ವಿಟ್ಜರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 3-1 ಅಂತರದಿಂದ ಜಯ ಸಾಧಿಸಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ.

ಸೆಮಿಫೈನಲ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ:

ಸೆಮಿಫೈನಲ್ ಪಂದ್ಯಗಳು ಅಮೆರಿಕದ ಅತ್ಯಾಧುನಿಕ ಕ್ರೀಡಾಂಗಣಗಳಲ್ಲಿ ಜುಲೈ 14 ಮತ್ತು 15 ರಂದು ನಡೆಯಲಿವೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯಗಳ ವಿವರ ಹೀಗಿದೆ.

ಪಂದ್ಯ ದಿನಾಂಕ  ಮುಖಾಮುಖಿ ಕ್ರೀಡಾಂಗಣ ಸಮಯ (IST)
ಸೆಮಿಫೈನಲ್ 1 15 ಜುಲೈ 2026 ಫ್ರಾನ್ಸ್ vs ಸ್ಪೇನ್ ಎಟಿ ಅಂಡ್ ಟಿ ಸ್ಟೇಡಿಯಂ (ಡಲ್ಲಾಸ್) ಮಧ್ಯರಾತ್ರಿ 12:30 AM
ಸೆಮಿಫೈನಲ್ 2 16 ಜುಲೈ 2026 ಇಂಗ್ಲೆಂಡ್ vs ಅರ್ಜೆಂಟೀನಾ ಮರ್ಸಿಡಿಸ್-ಬೆಂಝ್ ಸ್ಟೇಡಿಯಂ (ಅಟ್ಲಾಂಟಾ) ಮಧ್ಯರಾತ್ರಿ 12:30 AM

ಟೂರ್ನಿಯಿಂದ ಹೊರಬಿದ್ದಿರುವ 44 ತಂಡಗಳು:

  • ರೌಂಡ್ ಆಫ್ 16 ಹಂತದಲ್ಲಿ ಹೊರಬಿದ್ದ ತಂಡಗಳು (8 ತಂಡಗಳು: ಕೆನಡಾ, ಪರಾಗ್ವೆ, ಬ್ರೆಝಿಲ್, ಮೆಕ್ಸಿಕೋ, ಪೋರ್ಚುಗಲ್, ಅಮೆರಿಕ, ಈಜಿಪ್ಟ್, ಕೊಲಂಬಿಯಾ.
  • ರೌಂಡ್ ಆಫ್ 32 ಹಂತದಲ್ಲಿ ಹೊರಬಿದ್ದ ತಂಡಗಳು (16 ತಂಡಗಳು): ಸೌತ್ ಆಫ್ರಿಕಾ, ಜರ್ಮನಿ, ನೆದರ್ಲ್ಯಾಂಡ್ಸ್ , ಐವರಿ ಕೋಸ್ಟ್, ಆಸ್ಟ್ರೇಲಿಯಾ, ಸ್ವೀಡನ್, ಈಕ್ವಡಾರ್, ಡಿಆರ್ ಕಾಂಗೋ, ಸೆನೆಗಲ್, ಬೋಸ್ನಿಯಾ ಅ್ಯಂಡ್ ಹೆರ್ಜೆಗೋವಿನಾ, ಆಸ್ಟ್ರಿಯಾ, ಕ್ರೊಯೇಷಿಯಾ, ಅಲ್ಜೀರಿಯಾ, ಕೇಪ್ ವರ್ಡೆ, ಘಾನಾ, ಉಝ್ಬೇಕಿಸ್ತಾನ್.
  • ಲೀಗ್ ಹಂತದಲ್ಲೇ ಹೊರಬಿದ್ದ ತಂಡಗಳು (16 ತಂಡಗಳು): ಸೌತ್ ಕೊರಿಯಾ, ಚೆಕಿಯಾ, ಖತಾರ್, ಸ್ಕಾಟ್ಲೆಂಡ್ , ಹೈಟಿ, ಟರ್ಕಿ, ಕುರಾಸಾವೊ, ಟುನೀಶಿಯಾ, ಇರಾನ್ , ನ್ಯೂಝಿಲೆಂಡ್, ಉರುಗ್ವೆ, ಸೌದಿ ಅರೇಬಿಯಾ, ಇರಾಕ್, ಜೋರ್ಡನ್ , ಪನಾಮ, ಜಪಾನ್.
  • ಕ್ವಾರ್ಟರ್ ಫೈನಲ್​ನಲ್ಲಿ ಹೊರಬಿದ್ದ ತಂಡಗಳು (4 ತಂಡಗಳು): ಬೆಲ್ಜಿಯಂ, ಮೊರಾಕೊ, ನಾರ್ವೆ, ಸ್ವಿಟ್ಜರ್ಲೆಂಡ್.

ಇದನ್ನೂ ಓದಿ: ನಾವು ಇನ್ನೂ ಸಹ ತುಂಬಾ ಕಲಿಯಬೇಕಿದೆ: ಶ್ರೇಯಸ್ ಅಯ್ಯರ್

ಫೈನಲ್ ಪಂದ್ಯ ಯಾವಾಗ?

ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ಜಯಶಾಲಿಯಾಗುವ ತಂಡಗಳು ಜುಲೈ 19, 2026 ರಂದು ನ್ಯೂಜೆರ್ಸಿಯ ಪ್ರಸಿದ್ಧ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಭವ್ಯ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ.

Source link

ಸಂಗೀತ ಲೋಕದ ಮಹಾರಾಣಿ ಇನ್ನಿಲ್ಲ: ಜಾನಕಿ ಅಮ್ಮನ ಅಗಲಿಕೆಗೆ ಕಂಬನಿ ಮಿಡಿದ ಇಂಟರ್ನೆಟ್ ಜಗತ್ತು! – Kannada News | S Janaki Demise: Netizens Grieve the Loss of Nightingale of South India S Janaki Amma

ಎಸ್. ಜಾನಕಿ

ಬೆಂಗಳೂರು, ಜುಲೈ 12: ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ, ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ ‘ಜಾನಕಿ ಅಮ್ಮ‘ ಅವರ ನಿಧನದಿಂದಾಗಿ ಇಡೀ ಸಂಗೀತ ಲೋಕ ತೀವ್ರ ದುಃಖದಲ್ಲಿ ಮುಳುಗಿದೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 88 ವರ್ಷದ ದಂತಕಥೆ ಜಾನಕಿ ಅಮ್ಮ ಅವರು ಮೈಸೂರಿನಲ್ಲಿ ಶನಿವಾರ (ಜು 11) ಕೊನೆಯುಸಿರೆಳೆದಿದ್ದಾರೆ. ಈ ದುಃಖದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿಯ ಮಹಾಪೂರವೇ ಹರಿದುಬಂದಿದೆ. ವಿವಿಧ ತಲೆಮಾರಿನ ಅಭಿಮಾನಿಗಳು, ಸಂಗೀತಗಾರರು ಮತ್ತು ಗಣ್ಯರು ತಮ್ಮ ನೆಚ್ಚಿನ ಗಾಯಕಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

“ಒಂದು ಸುವರ್ಣ ಯುಗ ಅಂತ್ಯವಾಯಿತು”: ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ

ಸುದ್ದಿ ಹೊರಬಿದ್ದ ಕೆಲವೇ ನಿಮಿಷಗಳಲ್ಲಿ ಎಕ್ಸ್ (ಟ್ವಿಟರ್), ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಜಾನಕಿ ಅಮ್ಮನ ಸಾವಿರಾರು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ಚಿತ್ರರಂಗದ ಸಂಗೀತ ಲೋಕವನ್ನು ಆಳಿದ ದಿವ್ಯ ಚೇತನದ ಅಗಲಿಕೆಗೆ ನೆಟ್ಟಿಗರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಅಭಿಮಾನಿಯೊಬ್ಬರು ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿ, “ಒಂದು ಅದ್ಭುತ ಯುಗ ಕೊನೆಗೊಂಡಿದೆ, ಆದರೆ ಜಾನಕಿ ಅಮ್ಮನ ಧ್ವನಿ ತಲೆಮಾರುಗಳವರೆಗೆ ಹೃದಯಗಳನ್ನು ಸ್ಪರ್ಶಿಸುತ್ತಲೇ ಇರುತ್ತದೆ! ಇಂದು ನಾವು ನಿಜವಾದ ದಂತಕಥೆಯನ್ನು ಕಳೆದುಕೊಂಡಿದ್ದೇವೆ” ಎಂದು ಬರೆದಿದ್ದಾರೆ.

ಅವರ ಅಪ್ರತಿಮ ಧ್ವನಿಯ, ಅಪಾರ ಸಾಧನೆಯನ್ನು ನೆಟ್ಟಿಗರು ಸ್ಮರಿಸುತ್ತಿದ್ದಾರೆ. ಮತ್ತೊಬ್ಬ ಅಭಿಮಾನಿ,”ಎಸ್. ಜಾನಕಿ ಅವರು 20 ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವರ್ಷದಲ್ಲೇ (1957) 6 ವಿಭಿನ್ನ ಭಾಷೆಗಳಲ್ಲಿ ಹಾಡಿದ್ದರು. 4 ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತರಿವರು. ನಮಗೆ ಸಾವಿರಾರು ಮಧುರ ಗೀತೆಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಅಮ್ಮ” ಎಂದು ಪೋಸ್ಟ್ ಮಾಡಿ ತಮ್ಮ ದುಃಖವನ್ನು ಹೊರಹಾಕಿದ್ದಾರೆ.

ಎಸ್‌ಪಿಬಿ ಮತ್ತು ಜಾನಕಿ ಜೋಡಿಯ ಸುವರ್ಣ ಕಾಲದ ನೆನಪು

80ರ ದಶಕದ ಹಳೆಯ ಹಾಡುಗಳ ಪ್ರೇಮಿಗಳಿಗೆ, ಜಾನಕಿ ಅಮ್ಮನ ಅಗಲಿಕೆಯು ದಿವಂಗತ ಗಾನಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ (ಎಸ್‌ಪಿಬಿ)ಮತ್ತು ಇಳಯರಾಜ ಅವರೊಂದಿಗಿನ ಅಪೂರ್ವ ಒಡನಾಟದ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಅಂದಿನ ದಿನಗಳಲ್ಲಿ ಇಡೀ ಚಿತ್ರದ ಎಲ್ಲ ಹಾಡುಗಳನ್ನು ಕೇವಲ ಇವರಿಬ್ಬರ ಧ್ವನಿಯಲ್ಲೇ ರೆಕಾರ್ಡ್ ಮಾಡಲಾಗುತ್ತಿದ್ದ ಮಧುರ ದಿನಗಳನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.

ಅಂದಿನ ದಿನಗಳಲ್ಲಿ, ಬಹುತೇಕ ಸಿನಿಮಾಗಳನ್ನು ಕೇವಲ ಈ ಇಬ್ಬರು ಗಾಯಕರು ಮಾತ್ರವೇ ಆಳುತ್ತಿದ್ದರು. ಎಸ್​ಪಿಬಿ ಮತ್ತು ಎಸ್ ಜಾನಕಿ. ಆದರೆ ಇಂದು ಸಂಗೀತ ಲೋಕ ತನ್ನ ಮಹಾರಾಣಿಯನ್ನು ಕಳೆದುಕೊಂಡಿದೆ ಎಂದು ತಮಿಳು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಗಡಿ ಮೀರಿದ ಸಂಗೀತ ಪರಂಪರೆ

ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ದೇಶ-ವಿದೇಶಗಳ ಅಭಿಮಾನಿಗಳು ಭಾಷೆ ಮತ್ತು ಸಂಸ್ಕೃತಿಯ ಗಡಿಗಳನ್ನು ಮೀರಿ ಜಾನಕಿ ಅಮ್ಮನ ಧ್ವನಿ ಹೇಗೆ ಎಲ್ಲರನ್ನೂ ತಲುಪಿತ್ತು ಎಂಬುದನ್ನು ನೆಟ್ಟಿಗರು ನೆನೆದಿದ್ದಾರೆ. ಸಣ್ಣ ಮಗುವಿನ ತೊದಲು ನುಡಿಯಿಂದ ಹಿಡಿದು, ಗಂಭೀರ ಶಾಸ್ತ್ರೀಯ ಸಂಗೀತ ಮತ್ತು ಅತ್ಯಂತ ನೋವಿನ ಭಾವನಾತ್ಮಕ ಗೀತೆಗಳವರೆಗೆ ಅವರ ಕಂಠಸಿರಿ ಸಾಟಿಯಿಲ್ಲದ್ದು. ಮೈಸೂರಿನಲ್ಲಿ ಗಾನ ಕೋಗಿಲೆಯ ಭೌತಿಕ ಧ್ವನಿ ಇನ್ನು ಮೂಗದಿದ್ದರೂ, ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಗೌರವವ, ಅಭಿಮಾನವು ಜಾನಕಿ ಅಮ್ಮನನ್ನು ಎಂದೆಂದಿಗೂ ಶಾಶ್ವತವಾಗಿ ಉಳಿಸುತ್ತವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weekly Horoscope: ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ – Kannada News | Dr. Basavaraj Guruji Weekly Horoscope: Zodiac Predictions July 13 19, 2026

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯವನ್ನು ನೀಡಿದ್ದಾರೆ. ಈ ವಾರವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜ್ಯೇಷ್ಠ ಮಾಸವನ್ನು ಒಳಗೊಂಡಿದ್ದು, ಇದೇ ವಾರದಲ್ಲಿ ದಕ್ಷಿಣಾಯನ ಮತ್ತು ಆಷಾಢ ಮಾಸವೂ ಪ್ರಾರಂಭವಾಗಲಿದೆ. ಮಣ್ಣೆತ್ತಿನ ಅಮಾವಾಸ್ಯೆ, ಅಮೃತ ಲಕ್ಷ್ಮೀ ವ್ರತ, ಕಟಕ ಸಂಕ್ರಮಣದಂತಹ ಹಲವು ವಿಶೇಷತೆಗಳಿಂದ ಈ ವಾರ ಕೂಡಿರುತ್ತದೆ. ಗ್ರಹಗಳ ಸ್ಥಾನಗಳ ಕುರಿತು ವಿವರಿಸಿರುವ ಗುರೂಜಿ, ಶನಿ ಮೀನ ರಾಶಿಯಲ್ಲಿ, ರಾಹು ಕುಂಭದಲ್ಲಿ, ಕುಜ ವೃಷಭದಲ್ಲಿ, ರವಿ ಮತ್ತು ಬುಧ ಮಿಥುನದಲ್ಲಿ, ಹಾಗೂ ಗುರು ಕಟಕ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ರವಿ ಗ್ರಹವು ಜುಲೈ 16 ರಂದು ಕಟಕ ರಾಶಿಯನ್ನು ಪ್ರವೇಶಿಸಲಿದೆ. ಸಿಂಹದಲ್ಲಿ ಕೇತು ಮತ್ತು ಶುಕ್ರ ಸಂಚಾರದಲ್ಲಿರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

 

 

Source link

Vastu Guide: ಒಂದೇ ಮನೆಯಲ್ಲಿ ಎರಡು ದೇವರ ಕೋಣೆ ಇರುವುದು ಅಶುಭವೇ? ಶಾಸ್ತ್ರಗಳು ಹೇಳುವುದೇನು? – Kannada News | Vastu Guide: Two Pooja Rooms at Home? Rules for Mandir Placement and Harmony

ಹಿಂದೂ ಸಂಪ್ರದಾಯದಲ್ಲಿ ಪೂಜೆ ಮತ್ತು ಪ್ರಾರ್ಥನೆಗಳಿಗೆ ಅತ್ಯುನ್ನತ ಸ್ಥಾನವಿದೆ. ದೇವರನ್ನು ನಿಯಮಿತವಾಗಿ ಭಕ್ತಿಯಿಂದ ಪೂಜಿಸುವುದರಿಂದ ದೈವಿಕ ಆಶೀರ್ವಾದಗಳು ಲಭಿಸುವುದಲ್ಲದೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂಬ ಬಲವಾದ ನಂಬಿಕೆಯಿದೆ. ಇದೇ ಕಾರಣಕ್ಕಾಗಿ ಬಹುತೇಕ ಪ್ರತಿಯೊಂದು ಮನೆಯಲ್ಲೂ ಒಂದು ವಿಶೇಷ ಪೂಜಾ ಸ್ಥಳ ಅಥವಾ ಪುಟ್ಟ ದೇವಾಲಯವನ್ನು ಸ್ಥಾಪಿಸಲಾಗುತ್ತದೆ. ಈ ಪವಿತ್ರ ಸ್ಥಳದಲ್ಲಿ ದಿನದಲ್ಲಿ ಸ್ವಲ್ಪ ಸಮಯ ಧ್ಯಾನ ಮಾಡುವುದು ಅಥವಾ ಪ್ರಾರ್ಥಿಸುವುದರಿಂದ ಮನಸ್ಸಿಗೆ ಅಪಾರ ಶಾಂತಿ ಸಿಗುತ್ತದೆ ಮತ್ತು ದೈನಂದಿನ ಮಾನಸಿಕ ಒತ್ತಡವೂ ದೂರವಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ದೇವರ ಕೊಠಡಿ ಇಡೀ ಮನೆಯಲ್ಲೇ ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಆದ್ದರಿಂದ, ಅದರ ಸ್ಥಳ, ನಿರ್ದೇಶನ ಮತ್ತು ನಿರ್ಮಾಣದ ಬಗ್ಗೆ ಕೆಲವು ನಿರ್ದಿಷ್ಟ ನಿಯಮಗಳನ್ನು ಅನುಸರಿಸುವುದು ಅತ್ಯಗತ್ಯ. ಸರಿಯಾದ ವಾಸ್ತು ಪ್ರಕಾರ ಸ್ಥಾಪಿಸಲಾದ ಪೂಜಾ ಕೊಠಡಿಯು ಕುಟುಂಬದಲ್ಲಿ ಸಂತೋಷ, ಸಂಪತ್ತು ಮತ್ತು ಆಧ್ಯಾತ್ಮಿಕ ವಾತಾವರಣವನ್ನು ತರುತ್ತದೆ ಎಂದು ನಂಬಲಾಗಿದೆ.

ಒಂದೇ ಮನೆಯಲ್ಲಿ ಎರಡು ಪೂಜಾ ಕೊಠಡಿಗಳನ್ನು ಸ್ಥಾಪಿಸಬಹುದೇ?

ಮನೆ ದೊಡ್ಡದಾಗಿದ್ದರೆ ಅಥವಾ ಹಲವು ಕೊಠಡಿಗಳಿದ್ದರೆ, ಅನುಕೂಲಕ್ಕಾಗಿ ಎರಡು ಪೂಜಾ ಕೊಠಡಿಗಳನ್ನು ಹೊಂದಬಹುದೇ ಎಂದು ಅನೇಕ ಜನರು ಆಲೋಚಿಸುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಒಂದೇ ಕುಟುಂಬ ವಾಸಿಸುವ ಮನೆಯಲ್ಲಿ ಎರಡು ಪ್ರತ್ಯೇಕ ಪೂಜಾ ಕೊಠಡಿಗಳು ಅಥವಾ ದೇವಾಲಯಗಳು ಇರದಿರುವುದು ಉತ್ತಮ.

ಇದನ್ನೂ ಓದಿ: ಶ್ರಾದ್ಧದಲ್ಲಿ ಮೊದಲು ಕಾಗೆಗೆ ಅನ್ನ ಯಾಕೆ ನೀಡುತ್ತಾರೆ? ಇದರ ಹಿಂದಿದೆ ಗರುಡ ಪುರಾಣ ಮತ್ತು ರಾಮಾಯಣದ ಕುತೂಹಲಕಾರಿ ಕಥೆ

ವಾಸ್ತು ತಜ್ಞರ ಪ್ರಕಾರ, ಮನೆಯಲ್ಲಿರುವ ಪೂಜಾ ಸ್ಥಳವನ್ನು ಕುಟುಂಬದ ಒಗ್ಗಟ್ಟು ಮತ್ತು ಐಕ್ಯತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಒಂದೇ ಮನೆಯಲ್ಲಿ ಎರಡು ದೇವಾಲಯಗಳಿದ್ದರೆ, ವಿಭಿನ್ನ ಪೂಜಾ ವಿಧಾನಗಳು ಮತ್ತು ಆಚರಣೆಗಳು ನಡೆದು, ಅದು ಕುಟುಂಬದ ಸದಸ್ಯರಲ್ಲಿ ಅಭಿಪ್ರಾಯ ವ್ಯತ್ಯಾಸಗಳು ಹಾಗೂ ಸಣ್ಣಪುಟ್ಟ ವಿವಾದಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಇಡೀ ಕುಟುಂಬದ ಆಧ್ಯಾತ್ಮಿಕ ಅಭ್ಯಾಸಕ್ಕಾಗಿ ಒಂದೇ ಪೂಜಾ ಕೊಠಡಿಯನ್ನು ಹೊಂದಿರುವುದು ಅತ್ಯಂತ ಶುಭ ಹಾಗೂ ಶ್ರೇಯಸ್ಕರ.

ಎರಡು ಪೂಜಾ ಕೊಠಡಿಗಳನ್ನು ಯಾವಾಗ ಸ್ಥಾಪಿಸಬಹುದು?

ಕೆಲವು ವಿಶೇಷ ಸಂದರ್ಭಗಳಲ್ಲಿ ಎರಡು ಪೂಜಾ ಕೊಠಡಿಗಳನ್ನು ಹೊಂದಲು ವಾಸ್ತುವಿನಲ್ಲಿ ವಿನಾಯಿತಿ ಇದೆ. ಒಂದೇ ಕಟ್ಟಡದಲ್ಲಿ ಎರಡು ಕುಟುಂಬಗಳು ಸಂಪೂರ್ಣವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ಅಂದರೆ ಅವರ ಅಡುಗೆ ಮನೆ ಮತ್ತು ಜೀವನಶೈಲಿ ಬೇರೆಬೇರೆಯಾಗಿದ್ದರೆ, ಅಂತಹ ಸಂದರ್ಭದಲ್ಲಿ ಪ್ರತಿ ಕುಟುಂಬವು ತಮಗಾಗಿ ಪ್ರತ್ಯೇಕ ಪ್ರಾರ್ಥನಾ ಕೊಠಡಿಯನ್ನು ಹೊಂದಬಹುದು. ಇಂತಹ ಪರಿಸ್ಥಿತಿಯಲ್ಲಿ, ವಾಸ್ತುವಿನ ದೃಷ್ಟಿಕೋನದಿಂದ ಎರಡು ಪ್ರಾರ್ಥನಾ ಕೊಠಡಿಗಳನ್ನು ನಿರ್ಮಿಸಲು ಯಾವುದೇ ಆಕ್ಷೇಪಣೆಯಿರುವುದಿಲ್ಲ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu Guide: ಮನೆಯಲ್ಲಿ ಸೂರ್ಯೋದಯದ ಚಿತ್ರ ಯಾಕೆ ಇಡಬೇಕು ಗೊತ್ತಾ? ವಾಸ್ತು ಸಲಹೆ ಇಲ್ಲಿದೆ – Kannada News | Vastu Guide: Placing Sunrise Picture for Positive Home Energy and Success

ವಾಸ್ತು ಶಾಸ್ತ್ರದಲ್ಲಿ, ಮನೆಯ ಅಲಂಕಾರವು ಕೇವಲ ಸೌಂದರ್ಯಕ್ಕೆ ಮಾತ್ರ ಸೀಮಿತವಾಗಿರದೆ, ಅದು ಮನೆಯ ಸಕಾರಾತ್ಮಕ ಶಕ್ತಿಯೊಂದಿಗೂ ನೇರ ಸಂಬಂಧವನ್ನು ಹೊಂದಿದೆ. ಅನೇಕ ಜನರು ತಮ್ಮ ಮನೆಯ ಗೋಡೆಗಳ ಮೇಲೆ ಪ್ರಕೃತಿಗೆ ಸಂಬಂಧಿಸಿದ ಸುಂದರ ಚಿತ್ರಗಳನ್ನು ಪ್ರದರ್ಶಿಸಲು ಇಷ್ಟಪಡುತ್ತಾರೆ. ಇವುಗಳಲ್ಲಿ, ಉದಯಿಸುತ್ತಿರುವ ಸೂರ್ಯ ಅಥವಾ ಸೂರ್ಯೋದಯದ ಚಿತ್ರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸೂರ್ಯೋದಯವು ಹೊಸ ಆರಂಭ, ಅಪಾರ ಶಕ್ತಿ, ಯಶಸ್ಸು ಮತ್ತು ಭರವಸೆಯ ಸಂಕೇತವಾಗಿದೆ. ಆದರೆ, ವಾಸ್ತು ಪ್ರಕಾರ ಇದನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸೂಕ್ತ ಸ್ಥಳದಲ್ಲಿ ಇಡುವುದು ಅಷ್ಟೇ ಮುಖ್ಯ. ಇಲ್ಲದಿದ್ದರೆ ಅದರ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಸೂರ್ಯೋದಯದ ಚಿತ್ರವನ್ನು ಶುಭವೆಂದು ಏಕೆ ಪರಿಗಣಿಸಲಾಗುತ್ತದೆ?

ವಾಸ್ತು ಶಾಸ್ತ್ರದ ಪ್ರಕಾರ, ಉದಯಿಸುತ್ತಿರುವ ಸೂರ್ಯನನ್ನು ಹೊಸ ಶಕ್ತಿ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಸೂರ್ಯನ ಮೊದಲ ಕಿರಣಗಳು ಜಗತ್ತಿನ ಕತ್ತಲೆಯನ್ನು ಹೋಗಲಾಡಿಸುವಂತೆಯೆ, ಸೂರ್ಯೋದಯದ ಚಿತ್ರವು ಮನೆಯಲ್ಲಿರುವ ನಕಾರಾತ್ಮಕತೆಯನ್ನು ದೂರ ಮಾಡಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ಕುಟುಂಬದ ಸದಸ್ಯರಲ್ಲಿ ಸದಾ ಉತ್ಸಾಹ ಮತ್ತು ಸಂತೋಷದ ವಾತಾವರಣ ನೆಲೆಸುವಂತೆ ಮಾಡುತ್ತದೆ ಎಂದು ನಂಬಲಾಗಿದೆ.

ಚಿತ್ರವನ್ನು ಯಾವ ದಿಕ್ಕಿನಲ್ಲಿ ಇಡಬೇಕು?

ವಾಸ್ತು ಪ್ರಕಾರ, ಸೂರ್ಯೋದಯದ ಚಿತ್ರವನ್ನು ಇಡಲು ಪೂರ್ವ ದಿಕ್ಕನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೂರ್ವ ದಿಕ್ಕನ್ನು ಸೂರ್ಯನ ಸ್ವಂತ ಸ್ಥಳವೆಂದು ಪರಿಗಣಿಸಲಾಗುವುದರಿಂದ, ಈ ದಿಕ್ಕಿನಲ್ಲಿ ಉದಯಿಸುತ್ತಿರುವ ಸೂರ್ಯನ ಚಿತ್ರವನ್ನು ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಗಣನೀಯವಾಗಿ ಹೆಚ್ಚುತ್ತದೆ. ಯಾವುದೇ ಕಾರಣಕ್ಕೂ ಪೂರ್ವ ದಿಕ್ಕಿನಲ್ಲಿ ಜಾಗ ಲಭ್ಯವಿಲ್ಲದಿದ್ದರೆ, ಈಶಾನ್ಯ ದಿಕ್ಕು ಅಥವಾ ಈಶಾನ್ಯ ಮೂಲೆಯನ್ನು (ದೇವ ಮೂಲೆ) ಅತ್ಯುತ್ತಮ ಪರ್ಯಾಯ ಆಯ್ಕೆಯಾಗಿ ಬಳಸಬಹುದು.

ಮಲಗುವ ಕೋಣೆಯಲ್ಲಿ ಇಡುವುದನ್ನು ತಪ್ಪಿಸಿ:

ವಾಸ್ತು ತತ್ವಗಳ ಪ್ರಕಾರ, ಮಲಗುವ ಕೋಣೆಯು (Bedroom) ವಿಶ್ರಾಂತಿ ಮತ್ತು ಶಾಂತಿಯ ಸ್ಥಳವಾಗಿದೆ. ಆದರೆ ಉದಯಿಸುತ್ತಿರುವ ಸೂರ್ಯನು ತೀವ್ರ ಚಟುವಟಿಕೆ ಮತ್ತು ಶಕ್ತಿಯನ್ನು ಸಂಕೇತಿಸುತ್ತಾನೆ. ಆದ್ದರಿಂದ, ಮಲಗುವ ಕೋಣೆಯಲ್ಲಿ ಸೂರ್ಯೋದಯದ ಫೋಟೋವನ್ನು ಇಡುವುದನ್ನು ಕಡ್ಡಾಯವಾಗಿ ತಪ್ಪಿಸುವುದು ಒಳ್ಳೆಯದು. ಅದೇ ರೀತಿ, ಇಂತಹ ಚಿತ್ರವನ್ನು ಅಡುಗೆಮನೆ, ಸ್ನಾನಗೃಹ ಅಥವಾ ಸ್ಟೋರ್ ರೂಂಗಳಲ್ಲಿ ಎಂದಿಗೂ ಇಡಬಾರದು.

ಇದನ್ನೂ ಓದಿ: ಶ್ರಾದ್ಧದಲ್ಲಿ ಮೊದಲು ಕಾಗೆಗೆ ಅನ್ನ ಯಾಕೆ ನೀಡುತ್ತಾರೆ? ಇದರ ಹಿಂದಿದೆ ಗರುಡ ಪುರಾಣ ಮತ್ತು ರಾಮಾಯಣದ ಕುತೂಹಲಕಾರಿ ಕಥೆ

ಸೂರ್ಯೋದಯದ ಛಾಯಾಚಿತ್ರ ಹೇಗಿರಬೇಕು?

ಚಿನ್ನದ ಕಿರಣಗಳೊಂದಿಗೆ ಸ್ಪಷ್ಟ ಹಾಗೂ ಪ್ರಕಾಶಮಾನವಾದ ಸೂರ್ಯೋದಯವನ್ನು ವಾಸ್ತು ಶಾಸ್ತ್ರದಲ್ಲಿ ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಚಿತ್ರದಲ್ಲಿ ತೆರೆದ ಆಕಾಶ, ಹಸಿರು ಪ್ರಕೃತಿ, ಶಾಂತವಾಗಿ ಹರಿಯುವ ನದಿ ಅಥವಾ ಸಾಗರದ ನೋಟವಿದ್ದರೆ ತುಂಬಾ ಒಳ್ಳೆಯದು. ಆದರೆ, ತುಂಬಾ ಗಾಢವಾದ ಬಣ್ಣಗಳು, ಮಸುಕಾದ ದೃಶ್ಯಗಳು ಅಥವಾ ಮನಸ್ಸಿನಲ್ಲಿ ದುಃಖದ ಭಾವನೆಯನ್ನು ಉಂಟುಮಾಡುವ ಫೋಟೋಗಳನ್ನು ಮನೆಯ ಅಲಂಕಾರಕ್ಕೆ ಬಳಸಬಾರದು.

ಚಿತ್ರವನ್ನು ಇರಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:

ಸೂರ್ಯೋದಯದ ಚಿತ್ರವು ಯಾವಾಗಲೂ ಧೂಳಿಲ್ಲದೆ ಸ್ವಚ್ಛವಾಗಿ ಮತ್ತು ಉತ್ತಮ ಸ್ಥಿತಿಯಲ್ಲಿರಬೇಕು. ನಿಯತಕಾಲಿಕವಾಗಿ ಅದನ್ನು ಒರೆಸಿ ಸ್ವಚ್ಛಗೊಳಿಸುತ್ತಿರಿ. ಮುರಿದ ಫ್ರೇಮ್ ಇರುವ, ಹರಿದ ಅಥವಾ ಹಳೆಯದಾದ ಚಿತ್ರಗಳು ಮನೆಯಲ್ಲಿ ನಕಾರಾತ್ಮಕ ಪರಿಣಾಮ ಬೀರಬಹುದು. ಚಿತ್ರವನ್ನು ಎಲ್ಲರಿಗೂ ಸುಲಭವಾಗಿ ಗೋಚರಿಸುವಂತಹ ಮತ್ತು ಅನಗತ್ಯ ವಸ್ತುಗಳ ಗಿಜಿಗಿಜಿಯಿಲ್ಲದ ಗೋಡೆಯ ಎತ್ತರದ ಜಾಗದಲ್ಲಿ ವ್ಯವಸ್ಥಿತವಾಗಿ ಇಡಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಈ ಮರುಜನ್ಮ ನಿಮಗೆ ಅರ್ಪಣೆ’: ಬಹಿರಂಗ ಆಗುತ್ತಿದೆ ಶಿವಣ್ಣ ಕಷ್ಟದ ದಿನಗಳ ಪೂರ್ತಿ ಮಾಹಿತಿ – Kannada News | Shivarajkumar Birthday special Survivor Documentary Promo released by Geetha Pictures

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ (Shivarajkumar) ಅವರು ಇಂದು (ಜುಲೈ 12) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಜನಪರ ಕಾರ್ಯಗಳ ಮೂಲಕ ಜನ್ಮದಿನವನ್ನು ವಿಶೇಷವಾಗಿಸುತ್ತಿದ್ದಾರೆ. ಇದರ ನಡುವೆ ಒಂದು ವಿಶೇಷ ಪ್ರೋಮೋ ಹಂಚಿಕೊಳ್ಳಲಾಗಿದೆ. ಶಿವರಾಜ್​ಕುಮಾರ್ ಅವರು ಅನಾರೋಗ್ಯದ ಕಾರಣದಿಂದ ಒಂದಷ್ಟು ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದು, ಸಂಪೂರ್ಣ ಗುಣಮುಖರಾಗಿ ಮರಳಿದರು. ಆದರೆ ಆ ಜರ್ನಿ ಹೇಗಿತ್ತು ಎಂಬುದು ಅಭಿಮಾನಿಗಳಿಗೆ ತಿಳಿದಿಲ್ಲ. ಆ ಬಗ್ಗೆ ಮೊದಲ ಬಾರಿಗೆ ಶಿವಣ್ಣ ಮತ್ತು ಅವರ ಕುಟುಂಬದವರು ಮಾತನಾಡಿದ್ದಾರೆ. ‘ಸರ್ವೈವರ್’ (Survivor) ಶೀರ್ಷಿಕೆಯಲ್ಲಿ ಸಾಕ್ಷ್ಯಚಿತ್ರ ಸಿದ್ಧವಾಗಿದೆ. ಶೀಘ್ರದಲ್ಲೇ ಅದು ಬಿಡುಗಡೆ ಆಗಲಿದೆ.

‘ಗೀತಾ ಪಿಕ್ಚರ್ಸ್’ ಮೂಲಕ ನಿರ್ಮಾಣ:

ಗೀತಾ ಶಿವರಾಜ್​ಕುಮಾರ್ ಒಡೆತನದ ‘ಗೀತಾ ಪಿಕ್ಚರ್ಸ್’ ಮೂಲಕ ಈ ಸಾಕ್ಷ್ಯಚಿತ್ರ ನಿರ್ಮಾಣ ಆಗಿದೆ. ಹುಟ್ಟುಹಬ್ಬದ ಪ್ರಯುಕ್ತ ಅದರ ಪ್ರೋಮೋ ರಿಲೀಸ್ ಮಾಡಲಾಗಿದ್ದು, ಶಿವಣ್ಣ ಅವರ ಜೀವನದ ಕೆಲವು ಮಹತ್ವ ಘಟನೆಗಳನ್ನು ಇದರಲ್ಲಿ ಮೆಲುಕು ಹಾಕಲಾಗಿದೆ. ಗೀತಾ ಶಿವರಾಜ್​ಕುಮಾರ್, ಮಧು ಬಂಗಾರಪ್ಪ, ನಿವೇದಿತಾ ಶಿವರಾಜ್​ಕುಮಾರ್ ಮುಂತಾದವರು ಇದರಲ್ಲಿ ಮಾತನಾಡಿದ್ದಾರೆ.

ಶಿವರಾಜ್​ಕುಮಾರ್ ಆಪ್ತರ ಮಾತುಗಳು:

ಶಿವಣ್ಣ ಅವರನ್ನು ಹತ್ತಿರದಿಂದ ಕಂಡಿರುವ ಕಿಚ್ಚ ಸುದೀಪ್, ಸಾಯಿ ಕುಮಾರ್, ಕಮಲ್ ಹಾಸನ್, ನಾಗಾರ್ಜುನ, ದುನಿಯಾ ವಿಜಯ್, ಡಾಲಿ ಧನಂಜಯ ಸೇರಿದಂತೆ ಹಲವರು ಕೂಡ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅನಾರೋಗ್ಯದ ಸಂದರ್ಭದಲ್ಲಿ ಶಿವರಾಜ್​ಕುಮಾರ್ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರ ಮಾತುಗಳು ಕೂಡ ಈ ಸಾಕ್ಷ್ಯಚಿತ್ರದಲ್ಲಿವೆ.

ಆಸ್ಪತ್ರೆಯೊಳಗಿನ ದೃಶ್ಯಗಳು ಸಹ ಇರಲಿವೆ:

ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾಗ ಶಿವರಾಜ್​ಕುಮಾರ್ ಅವರು ಯಾವ ರೀತಿ ಇದ್ದರು ಎಂಬುದು ಅಭಿಮಾನಿಗಳಿಗೆ ತಿಳಿದಿಲ್ಲ. ಆ ಬಗ್ಗೆ ಕೂಡ ‘ಸರ್ವೈವರ್’ ಸಾಕ್ಷ್ಯಚಿತ್ರದಲ್ಲಿ ವಿವರ ನೀಡಲಾಗುತ್ತಿದೆ. ಆಸ್ಪತ್ರೆಯೊಳಗಿನ ದೃಶ್ಯಗಳು ಕೂಡ ಇದರಲ್ಲಿ ಇವೆ. ಸದ್ಯಕ್ಕೆ ಇದರ ಪ್ರೋಮೋ ಮಾತ್ರ ಬಿಡುಗಡೆ ಆಗಿದ್ದು, ಶೀಘ್ರದಲ್ಲೇ ‘ಗೀತಾ ಪಿಕ್ಚರ್ಸ್’ ಮೂಲಕ ಈ ಸಾಕ್ಷ್ಯಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ.

ಇದನ್ನೂ ಓದಿ: ಮತ್ತೆ ಲಾಯರ್ ಪಾತ್ರ ಮಾಡಿದ ಶಿವರಾಜ್​ಕುಮಾರ್; ‘ಮಹಾನ್’ ಸಿನಿಮಾದಲ್ಲಿ ನಟನೆ

ಶಿವರಾಜ್​ಕುಮಾರ್ ಅವರ ಎನರ್ಜಿಗೆ ಎಲ್ಲರೂ ಫಿದಾ ಆಗುತ್ತಾರೆ. ಅನಾರೋಗ್ಯ ಬಂದರೂ ಕೂಡ ಶಿವಣ್ಣ ಕುಗ್ಗಲಿಲ್ಲ. ಎಲ್ಲವನ್ನೂ ಎದುರಿಸಿ ಬಂದ ಅವರು ಮತ್ತೆ ಮೊದಲಿನಂತೆ ಆ್ಯಕ್ಟೀವ್ ಆಗಿದ್ದಾರೆ. ಅವರ ಈ ಜರ್ನಿಯು ಅನೇಕರಿಗೆ ಸ್ಫೂರ್ತಿ ತುಂಬುವಂತಿದೆ. ತಮ್ಮ ಕಷ್ಟದ ದಿನಗಳ ಬಗ್ಗೆ ಸ್ವತಃ ಶಿವರಾಜ್​ಕುಮಾರ್ ಅವರು ಮಾತನಾಡಿರುವ ಈ ಸಾಕ್ಷ್ಯಚಿತ್ರವನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version