Weekly Love Horoscope: ಸಿಂಹ ರಾಶಿಗೆ ಶುಕ್ರ-ಚಂದ್ರನ ಆಗಮನ ಪ್ರೇಮಲೋಕದಲ್ಲಿ ಯಾರಿಗಿದೆ ಅದೃಷ್ಟ? – Kannada News | July 12 18 Love Astrology: Your Weekly Relationship Guide by Zodiac

ಜುಲೈ 12ರಿಂದ ಜುಲೈ 18ರವರೆಗೆ ಮೂರನೇ ವಾರವಾಗಿದ್ದು ಆಳವಾದ ನಂಬಿಕೆ, ನಕಾರಾತ್ಮಕ ಭಾವನೆ, ಮೌನಪ್ರೇಮ, ಸೌಂದರ್ಯದಲ್ಲಿ ಸಮತೋಲನ, ಪಕ್ವತೆಯ ಆಲೋಚನೆ ಇವೆಲ್ಲ ಇರಲಿದೆ.

​ಮೇಷ ರಾಶಿ :

​ಈ ವಾರ ನಿಮ್ಮಲ್ಲಿ ಪ್ರೀತಿಯ ತೀವ್ರತೆ ಹೆಚ್ಚಿರುತ್ತದೆ. ಆದರೆ ನಿಮ್ಮ ರಾಶ್ಯಧಿಪತಿ ಮಂಗಳ ವೃಷಭದಲ್ಲಿದ್ದು, ನಿಮ್ಮ ಮಾತಿನಲ್ಲಿ ಕೊಂಚ ಹಠ ಅಥವಾ ಉದ್ವೇಗ ತರಬಹುದು. ಸಂಗಾತಿಯ ಎದುರು ನಿಮ್ಮ ಅಹಂಕಾರವನ್ನು ಬದಿಗಿಟ್ಟು ಪ್ರೀತಿಯಿಂದ ಮಾತನಾಡಿದರೆ, ಅವರು ನಿಮ್ಮ ಭಾವನೆಗಳಿಗೆ ಸಂಪೂರ್ಣವಾಗಿ ಶರಣಾಗುತ್ತಾರೆ. ವಾರದ ಮಧ್ಯಭಾಗದಲ್ಲಿ ನಿಮಗಾಗಿ ಅಚ್ಚರಿ ಇರಲಿದೆ.

ವೃಷಭ ರಾಶಿ :

​ನಿಮ್ಮದೇ ರಾಶಿಯಲ್ಲಿ ಮಂಗಳನ ಉಪಸ್ಥಿತಿ ಇರುವುದರಿಂದ ಪ್ರೇಮ ಜೀವನದಲ್ಲಿ ರೋಮಾಂಚನ ಹೆಚ್ಚಿರುತ್ತದೆ. ಆದರೆ ಅತಿಯಾದ ಒಡೆತನದ ಭಾವನೆ ಸಂಬಂಧಕ್ಕೆ ಬೇಡ. ಸಂಗಾತಿಯ ಸ್ವತಂತ್ರ ವಿಚಾರಗಳನ್ನು ಗೌರವಿಸಿ. ವಾರದ ಕೊನೆಯಲ್ಲಿ ಮನಸ್ಸಿನ ನೆಮ್ಮದಿ ಹೆಚ್ಚಲಿದ್ದು, ಪ್ರೀತಿಪಾತ್ರರೊಂದಿಗೆ ಮಧುರ ಕ್ಷಣಗಳನ್ನು ಕಳೆಯುವಿರಿ.

ಮಿಥುನ ರಾಶಿ :

​ನಿಮ್ಮ ರಾಶ್ಯಧಿಪತಿ ಬುಧನ ಅನುಗ್ರಹದಿಂದ ನಿಮ್ಮ ಸಂವಹನ ಕಲೆ ಅದ್ಭುತವಾಗಿರುತ್ತದೆ. ಈ ವಾರ ನಿಮ್ಮ ಪ್ರೇಮಿಯ ಮನಸ್ಸನ್ನು ಗೆಲ್ಲಲು ನಿಮ್ಮ ಮಾತುಗಳೇ ದೊಡ್ಡ ಅಸ್ತ್ರ. ಮುನಿಸಿಕೊಂಡಿರುವ ಸಂಗಾತಿಯನ್ನು ಒಲಿಸಿಕೊಳ್ಳಲು ಇದು ಸಕಾಲ. ಹೊಸ ಸಂಬಂಧದ ಹುಡುಕಾಟದಲ್ಲಿರುವವರಿಗೆ ಮನಸ್ಸಿಗೆ ಒಪ್ಪುವಂತಹ ಸಂಗಾತಿ ಸಿಗುವ ಲಕ್ಷಣಗಳಿವೆ.

ಕರ್ಕಾಟಕ ರಾಶಿ :

​ನಿಮ್ಮ ರಾಶಿಯಲ್ಲಿ ಗುರು ಮತ್ತು ಸೂರ್ಯನ ಸಮ್ಮಿಲನವಿದೆ. ನಿಮ್ಮ ವ್ಯಕ್ತಿತ್ವದಲ್ಲಿ ಒಂದು ಅಪೂರ್ವ ಕಾಂತಿ ಹಾಗೂ ಆಕರ್ಷಣೆ ಇರಲಿದೆ. ಪ್ರೀತಿಯಲ್ಲಿ ಆತುರ ಪಡದೆ, ನಿಧಾನವಾಗಿ ಹೆಜ್ಜೆ ಇಡಿ. ನಿಮ್ಮ ಸಂಗಾತಿಯು ನಿಮ್ಮ ಮನದ ಆಳದ ಭಾವನೆಗಳನ್ನು ಮಾತಿಲ್ಲದೆಯೇ ಅರ್ಥ ಮಾಡಿಕೊಳ್ಳಲಿದ್ದಾರೆ. ಈ ವಾರ ನಿಮ್ಮ ಪ್ರೀತಿ ಹೆಚ್ಚು ಪರಿಪಕ್ವವಾಗಲಿದೆ.

ಸಿಂಹ ರಾಶಿ :

​ಪ್ರೇಮದ ಕಾರಣ ಶುಕ್ರ ಮತ್ತು ಮನಸ್ಸಿನ ಕಾರಕ ಚಂದ್ರ ಇಬ್ಬರೂ ನಿಮ್ಮದೇ ರಾಶಿಯಲ್ಲಿದ್ದಾರೆ. ಈ ವಾರ ಪ್ರೇಮಲೋಕದ ಸಂಪೂರ್ಣ ಬೆಳಕು ನಿಮ್ಮ ಮೇಲೆಯೇ ಇರಲಿದೆ. ನಿಮ್ಮ ಆಕರ್ಷಣೆಗೆ ಸಂಗಾತಿ ಸಂಪೂರ್ಣವಾಗಿ ಫಿದಾ ಆಗಲಿದ್ದಾರೆ. ಹಳೆಯ ಎಲ್ಲ ಕಹಿ ನೆನಪುಗಳು ಕರಗಿ, ನಿಮ್ಮಿಬ್ಬರ ನಡುವೆ ಪ್ರೀತಿಯ ಹೊಸ ಅಧ್ಯಾಯ ಆರಂಭವಾಗಲಿದೆ.

ಕನ್ಯಾ ರಾಶಿ :

​ನಿಮ್ಮ ಪ್ರೀತಿಯನ್ನು ನೀವು ಅಬ್ಬರದಿಂದ ತೋರಿಸಿಕೊಳ್ಳುವುದಿಲ್ಲ, ಬದಲಿಗೆ ಸಣ್ಣ ಸಣ್ಣ ಕಾಳಜಿಯ ಮೂಲಕ ವ್ಯಕ್ತಪಡಿಸುತ್ತೀರಿ. ಈ ವಾರ ಸಂಗಾತಿಯ ಸಣ್ಣ ಅಗತ್ಯಗಳನ್ನು ಗುರುತಿಸಿ ಪೂರೈಸುವುದರಿಂದ ಅವರ ಕಣ್ಣಿನಲ್ಲಿ ನಿಮಗಾಗಿ ಪ್ರೀತಿ ದುಪ್ಪಟ್ಟಾಗಲಿದೆ. ದೂರದಲ್ಲಿರುವ ಪ್ರೇಮಿಯಿಂದ ನಿರೀಕ್ಷಿತ ಶುಭ ಸಂದೇಶ ಬರಲಿದೆ.

ತುಲಾ ರಾಶಿ :

​ಸಾಮಾಜಿಕ ಒಡನಾಟದ ಮೂಲಕ ಅಥವಾ ಸ್ನೇಹಿತರ ವಲಯದಲ್ಲಿ ಹೊಸ ಪ್ರೇಮದ ತರಂಗಗಳು ಮೂಡಬಹುದು. ವಿವಾಹಿತರಿಗೆ ಸಂಗಾತಿಯ ಕಡೆಯಿಂದ ಒಂದು ದೊಡ್ಡ ಬೆಂಬಲ ಅಥವಾ ಅನಿರೀಕ್ಷಿತ ಉಡುಗೊರೆ ಸಿಗಲಿದೆ. ಸಂಬಂಧದಲ್ಲಿ ಪರಸ್ಪರ ಗೌರವ ಹಾಗೂ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ.

ಇದನ್ನೂ ಓದಿ: ಜುಲೈ ಮೇಷ ಭವಿಷ್ಯ; ಶನಿ ಪ್ರಭಾವ, ಕೌಟುಂಬಿಕ ನೆಮ್ಮದಿ ಕೊರತೆ ಮತ್ತು ಜ್ಯೋತಿಷ್ಯ ಪರಿಹಾರಗಳು

ವೃಶ್ಚಿಕ ರಾಶಿ :

​ನಿಮ್ಮ ಮನಸ್ಸಿನಲ್ಲಿ ಪ್ರೀತಿಯ ಸಾಗರವೇ ಇದ್ದರೂ, ಅದನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ಈ ವಾರ ನಿಮ್ಮ ಭಾವನೆಗಳನ್ನು ಮುಚ್ಚಿಡದೆ ಮುಕ್ತವಾಗಿ ಹೇಳಿಕೊಂಡರೆ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ವಾರದ ಕೊನೆಯ ದಿನಗಳು ಪ್ರಣಯದಿಂದ ಇರಲಿದ್ದು, ಸಂಗಾತಿಯೊಂದಿಗೆ ಸುಂದರ ಸಮಯ ಕಳೆಯುವಿರಿ.

ಧನು ರಾಶಿ :

​ನಿಮ್ಮ ಪ್ರೇಮ ಜೀವನಕ್ಕೆ ಈ ವಾರ ಒಂದು ಹೊಸ ಉತ್ಸಾಹ ಸಿಗಲಿದೆ. ಸಂಗಾತಿಯೊಂದಿಗೆ ಸುದೀರ್ಘ ಪ್ರಯಾಣ ಅಥವಾ ಲಾಂಗ್ ಡ್ರೈವ್ ಹೋಗಲು ಯೋಜನೆ ರೂಪಿಸುವಿರಿ. ನಿಮ್ಮಿಬ್ಬರ ನಡುವಿನ ಬೌದ್ಧಿಕ ಮತ್ತು ಆಧ್ಯಾತ್ಮಿಕ ಚರ್ಚೆಗಳು ಪರಸ್ಪರ ನಂಬಿಕೆಯನ್ನು ಹೆಚ್ಚಿಸುತ್ತವೆ. ಹೊಸ ಪ್ರೀತಿಯ ಪ್ರಸ್ತಾಪಕ್ಕೆ ಇದು ಸಕಾಲ.

​ಮಕರ ರಾಶಿ :

​ನೀವು ಮೇಲ್ಮೈ ಆಕರ್ಷಣೆಗಿಂತ ಆಳವಾದ ಮತ್ತು ಶಾಶ್ವತವಾದ ಸಂಬಂಧವನ್ನು ಬಯಸುವವರು. ಈ ವಾರ ನಿಮ್ಮ ಸಂಗಾತಿಯು ನಿಮ್ಮ ನಿಶ್ಚಲವಾದ ನಂಬಿಕೆಯನ್ನು ಗೌರವಿಸುತ್ತಾರೆ. ಕಷ್ಟದ ಸಮಯದಲ್ಲಿ ಅವರು ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಮೂಲಕ ತಮ್ಮ ಪ್ರೀತಿಯನ್ನು ಸಾಬೀತುಪಡಿಸಲಿದ್ದಾರೆ.

​ಕುಂಭ ರಾಶಿ :

​ರಾಹುವಿನ ಪ್ರಭಾವದಿಂದ ಪ್ರೇಮ ಜೀವನದಲ್ಲಿ ಕೆಲವು ಅನಿರೀಕ್ಷಿತ ಗೊಂದಲಗಳು ಅಥವಾ ತಪ್ಪು ತಿಳುವಳಿಕೆಗಳು ಮೂಡಬಹುದು. ಮೂರನೇ ವ್ಯಕ್ತಿಯ ಮಾತುಗಳನ್ನು ಕೇಳಿ ಸಂಗಾತಿಯನ್ನು ಅನುಮಾನಿಸಬೇಡಿ. ನೇರವಾಗಿ ಕುಳಿತು ಮಾತನಾಡುವುದರಿಂದ ಪ್ರೀತಿಯ ಹಾದಿ ಸುಗಮವಾಗುತ್ತದೆ.

ಮೀನ ರಾಶಿ :

​ನಿಮ್ಮ ರಾಶಿಯಲ್ಲಿ ಶನಿ ಇರುವುದರಿಂದ ಪ್ರೀತಿಯಲ್ಲಿ ಭಾವನಾತ್ಮಕತೆಯ ಜೊತೆಗೆ ಪಕ್ವತೆಯೂ ಅಗತ್ಯವಿದೆ. ಅತಿಯಾದ ನಿರೀಕ್ಷೆಗಳು ಬೇಸರ ತರಬಹುದು. ಸಂಗಾತಿಗೆ ಅವರದ್ದೇ ಆದ ವೈಯಕ್ತಿಕ ಸ್ವಾತಂತ್ರ್ಯವನ್ನು ನೀಡಿ. ಅವರ ಸಣ್ಣ ತಪ್ಪುಗಳನ್ನು ಕ್ಷಮಿಸಿ ಮುನ್ನಡೆದರೆ ಈ ವಾರ ಪ್ರೀತಿ ಮತ್ತಷ್ಟು ಮಧುರವೆನಿಸಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:21 pm, Fri, 10 July 26

Source link

ಇಬ್ಬರು ಚೀನೀ ಹಳ್ಳಿಗರ ಯಶೋಗಾಥೆ; ಹಣತೆ ದೀಪದಲ್ಲಿ ಓದಿ ಜಗತ್ತಿಗೆ ಇವಿ ಕ್ರಾಂತಿ ಸೃಷ್ಟಿಸಿದವ ಒಬ್ಬ – Kannada News | Two Chinese villagers Chen Liquan, Ben De receive highest science awards for their tech revolutions

ಬೀಜಿಂಗ್, ಜುಲೈ 10: ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ದೇಶದ ಅತ್ಯುನ್ನತ ವಿಜ್ಞಾನ ಪುರಸ್ಕಾರವಾದ ‘ಸ್ಟೇಟ್ ಪ್ರಿ-ಎಮಿನೆಂಟ್ ಸೈನ್ಸ್ ಅಂಡ್ ಟೆಕ್ನಾಲಜಿ ಅವಾರ್ಡ್’ ಅನ್ನು ಇಬ್ಬರು ಹಿರಿಯ ವಿಜ್ಞಾನಿಗಳಿಗೆ ಪ್ರದಾನ ಮಾಡಿದ್ದಾರೆ. ತಮ್ಮ ಬಾಲ್ಯದಲ್ಲಿ ವಿದ್ಯುತ್ ಸೌಕರ್ಯವೂ ಇಲ್ಲದೆ ತೈಲ ದೀಪದ (ಲ್ಯಾಂಪ್) ಬೆಳಕಿನಲ್ಲಿ ಓದಿದ ಒಬ್ಬ ಹಳ್ಳಿಯ ಹುಡುಗ ಹಾಗೂ ಕೇವಲ ಎರಡು ತಿಂಗಳಲ್ಲಿ ಸ್ವಯಂಪ್ರೇರಿತರಾಗಿ ಇಂಗ್ಲಿಷ್ ಕಲಿತ ಮತ್ತೊಬ್ಬ ಸಾಮಾನ್ಯ ಕೃಷಿಕನ ಮಗ ಇಂದು ಚೀನಾದ ತಂತ್ರಜ್ಞಾನ ಮತ್ತು ರಕ್ಷಣಾ ವಲಯದ ದಿಕ್ಕನ್ನೇ ಬದಲಿಸಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚೆನ್ ಲಿಕುವಾನ್ ಮತ್ತು ಬೆನ್ ಡೆ ಆ ಇಬ್ಬರು ಸಾಮಾನ್ಯ ಹಿನ್ನೆಲೆಯ ಸಾಧಕರು.

ಚೆನ್ ಲಿಕುವಾನ್: ವಿಶ್ವದ ಮೂರನೇ ಒಂದು ಭಾಗದಷ್ಟು ಇವಿ ಬ್ಯಾಟರಿಗಳ ಜನಕ

1940ರಲ್ಲಿ ಸಿಚುವಾನ್ ಪ್ರಾಂತ್ಯದ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದ ಚೆನ್ ಲಿಕುವಾನ್ (Chen Liquan) ಅವರ ಮನೆಯಲ್ಲಿ ಕೇವಲ ಎಣ್ಣೆ ದೀಪಗಳಷ್ಟೇ ಇದ್ದವು. ನಮ್ಮ ಸರ್ ಎಂ ವಿಶ್ವೇಶರಾಯ ಅವರು ಬಾಲ್ಯದಲ್ಲಿ ಬೀದಿ ದೀಪದ ಬೆಳಕಿನಡಿ ಓದುತ್ತಿದ್ದ ಕಥೆ ನೆನಪಾಗಬಹುದು. ಚೆನ್ ಲಿಕುವಾನ್ ತಮ್ಮ ಹೈಸ್ಕೂಲ್ ಪ್ರವೇಶ ಪರೀಕ್ಷೆ ಬರೆಯಲು ಹೋದ ದಿನವೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಬಲ್ಬ್ ಅನ್ನು ನೋಡಿದ್ದು! ಆ ಒಂದು ಕ್ಷಣ ಅವರ ಜೀವನದ ಗುರಿಯನ್ನು ಬದಲಿಸಿತು. ಇತರ ಮಕ್ಕಳಿಗೆ ಬೆಳಕಿನ ಸೌಕರ್ಯ ಅಪರೂಪವಾಗಬಾರದು ಎಂದು ನಿರ್ಧರಿಸಿ ಭೌತಶಾಸ್ತ್ರವನ್ನು ಅಭ್ಯಾಸ ಮಾಡಿದರು.

ಜರ್ಮನಿಯ ಆ ಒಂದು ಮಾತು: 1976ರಲ್ಲಿ ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಗೆ ಭೇಟಿ ನೀಡಿದ್ದಾಗ, ಅಲ್ಲಿನ ವಿಜ್ಞಾನಿಯೊಬ್ಬರು ಜಂಟಿಯಾಗಿ ಮಾತನಾಡುತ್ತಾ, “ಲಿಥಿಯಂ ನೈಟ್ರೈಡ್ ಎಂಬ ವಸ್ತುವಿನಿಂದ ಭವಿಷ್ಯದಲ್ಲಿ ಬ್ಯಾಟರಿ ಹಾಗೂ ಕಾರುಗಳನ್ನು ತಯಾರಿಸಬಹುದು” ಎಂದು ಹೇಳಿದ್ದರು.

ಆ ಕಾಲದಲ್ಲಿ ಚೀನಾ ತೈಲ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಜರ್ಮನ್ ವಿಜ್ಞಾನಿಯ ಮಾತಿನಿಂದ ಪ್ರೇರಿತರಾದ ಚೆನ್, ತಮ್ಮ ಹಳೆಯ ಸಂಶೋಧನೆಗಳನ್ನು ಕೈಬಿಟ್ಟು ಸಂಪೂರ್ಣವಾಗಿ ಲಿಥಿಯಂ ಬ್ಯಾಟರಿ ಸಂಶೋಧನೆಗೆ ಧುಮುಕಿದರು.

ಇವರ ಪರಿಶ್ರಮದ ಫಲವಾಗಿ ಚೀನಾದ ಮೊದಲ ಲಿಥಿಯಂ ಬ್ಯಾಟರಿ ಸಿದ್ಧವಾಯಿತು. ಇಂದು ವಿಶ್ವದ ಅತಿ ದೊಡ್ಡ ಇವಿ ಬ್ಯಾಟರಿ ಸಂಸ್ಥೆಯಾದ CATL ನಂತಹ ದೈತ್ಯ ಕಂಪನಿಗಳ ಉಗಮಕ್ಕೆ ಇವರೇ ಅಡಿಪಾಯ ಹಾಕಿಕೊಟ್ಟರು. ಇಂದು ಜಗತ್ತಿನ ಒಟ್ಟು ಎಲೆಕ್ಟ್ರಿಕ್ ವಾಹನಗಳ (EVs) ಮೂರನೇ ಒಂದು ಭಾಗದಷ್ಟು ಇವಿಗಳಿಗೆ ಇವರ ತಂತ್ರಜ್ಞಾನವೇ ಶಕ್ತಿ ನೀಡುತ್ತಿದೆ.

ಇದನ್ನೂ ಓದಿ: ಇ20 ಪೆಟ್ರೋಲ್, ಭಯಪಡುವ ವಿಚಾರವಾ? ಜನರಿಗೆ ಇರುವ ಸಂದೇಹಗಳೇನು? ಸರ್ಕಾರ ಹೇಳುವುದೇನು? ಇಲ್ಲಿದೆ ಡೀಟೇಲ್ಸ್

ಬೆನ್ ಡೆ: ಫೈಟರ್ ಜೆಟ್‌ಗಳಿಗೆ ‘ಹದ್ದು ದೃಷ್ಟಿ’ ನೀಡಿದ ರೇಡಾರ್ ತಜ್ಞ

ಚೀನಾದ ವಾಯುಪಡೆಗೆ ಶಕ್ತಿ ತುಂಬಿದ 88 ವರ್ಷದ ವಿಜ್ಞಾನಿ ಬೆನ್ ಡೆ (Ben De) ಅವರ ಕಥೆಯೂ ಅಷ್ಟೇ ರೋಮಾಂಚನಕಾರಿಯಾಗಿದೆ. 1960 ಮತ್ತು 70ರ ದಶಕದ ಆತಂಕಕಾರಿ ಅಂತಾರಾಷ್ಟ್ರೀಯ ಪರಿಸ್ಥಿತಿಯಲ್ಲಿ ಚೀನಾಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಲು ‘ಫೇಸ್ಡ್-ಅರೇ ರೇಡಾರ್’ (Phased-array radar) ತಂತ್ರಜ್ಞಾನದ ತೀವ್ರ ಅಗತ್ಯವಿತ್ತು.

2 ತಿಂಗಳಲ್ಲಿ ಇಂಗ್ಲಿಷ್ ಕಲಿಕೆ: ಆಗ ಚೀನಾದಲ್ಲಿ ಈ ತಂತ್ರಜ್ಞಾನದ ಬಗ್ಗೆ ಯಾವುದೇ ಮಾಹಿತಿ ಅಥವಾ ಅನುಭವ ಇರಲಿಲ್ಲ. ಅಂತರರಾಷ್ಟ್ರೀಯ ಸಂಶೋಧನಾ ವರದಿಗಳನ್ನು ಓದಲು ಬೆನ್ ಡೆ ಅವರಿಗೆ ಇಂಗ್ಲಿಷ್ ಭಾಷೆಯ ಅನಿವಾರ್ಯತೆ ಇತ್ತು. ಕೇವಲ ಎರಡು ತಿಂಗಳ ಕಠಿಣ ಸ್ವಯಂ-ಅಧ್ಯಯನದ ಮೂಲಕ ಅವರು ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸಿ, ಜಾಗತಿಕ ರೇಡಾರ್ ವಿಜ್ಞಾನದ ದಾಖಲೆಗಳನ್ನು ಓದಿ ಅರ್ಥೈಸಿಕೊಂಡರು.

ಫೈಟರ್ ಜೆಟ್‌ಗಳಿಗೆ ಎಕ್ಸ್‌-ರೇ ದೃಷ್ಟಿ: 1979ರಲ್ಲಿ ಚೀನಾದ ಯುದ್ಧವಿಮಾನಗಳು ಕಣ್ಣಿಗೆ ಕಾಣಿಸದ ದೂರದಲ್ಲಿರುವ (Beyond-Visual-Range) ಮತ್ತು ಕೆಳಭಾಗದಲ್ಲಿ ಅಡಗಿರುವ ಶತ್ರು ವಿಮಾನಗಳನ್ನು ಪತ್ತೆಹಚ್ಚುವ ಅತ್ಯಾಧುನಿಕ ‘ಆ್ಯರ್‌ಬೋರ್ನ್ ಪಲ್ಸ್ ಡಾಪ್ಲರ್ ರೇಡಾರ್’ (Airborne Pulse-Doppler Radar) ತಂತ್ರಜ್ಞಾನವನ್ನು ಇವರ ನೇತೃತ್ವದ ತಂಡ ಅಭಿವೃದ್ಧಿಪಡಿಸಿತು.

ರೇಡಾರ್‌ನ ಡೇಟಾ ನಿಖರತೆಯನ್ನು ಪರೀಕ್ಷಿಸಲು ಬೆನ್ ಡೆ ಅವರು ಪ್ರತಿಯೊಂದು ಟೆಸ್ಟ್ ಫ್ಲೈಟ್‌ನಲ್ಲೂ ಸ್ವತಃ ತಾವೇ ಪ್ರಯಾಣಿಸುತ್ತಿದ್ದರು. ಈ ಪ್ರಯೋಗಗಳ ಸಮಯದಲ್ಲಿ ಇಂಜಿನ್ ವೈಫಲ್ಯ ಮತ್ತು ಲ್ಯಾಂಡಿಂಗ್ ಗೇರ್ ದೋಷದಿಂದಾಗಿ ಎರಡು ಬಾರಿ ಅವರು ಸಾವಿನ ಮುಖಾಮುಖಿಯಾಗಿ ಪಾರಾಗಿದ್ದರು.

ಇದನ್ನೂ ಓದಿ: ವಿಶ್ವದ ಹಲವು ದೇಶಗಳಿಗಿಂತ ಭಾರತದಲ್ಲಿ ಪೆಟ್ರೋಲ್ ಅಗ್ಗ; ಇದು ಹೇಗೆ ಸಾಧ್ಯವಾಯಿತು? ಸಚಿವ ಹರ್ದೀಪ್ ಸಿಂಗ್ ಪುರಿ ಬಿಚ್ಚಿಟ್ಟ ಸತ್ಯ

ಇಬ್ಬರು ಹಳ್ಳಿಗರಿಂದ ಚೀನಾದ ಸ್ವಾವಲಂಬನೆಯ ಸಂದೇಶ

ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ರಕ್ಷಣೆ ಮತ್ತು ದೈನಂದಿನ ತಂತ್ರಜ್ಞಾನದಲ್ಲಿ ಚೀನಾ ಸ್ವಾವಲಂಬನೆ ಸಾಧಿಸಬೇಕೆಂಬ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಮಹತ್ವಾಕಾಂಕ್ಷೆಗೆ ಈ ಇಬ್ಬರು ವಿಜ್ಞಾನಿಗಳ ಸಾಧನೆ ಅತ್ಯುತ್ತಮ ಉದಾಹರಣೆಯಾಗಿದೆ. ಶೂನ್ಯದಿಂದ ಆರಂಭಿಸಿ ದೇಶವನ್ನು ಜಾಗತಿಕ ತಂತ್ರಜ್ಞಾನದ ಸೂಪರ್ ಪವರ್ ಮಾಡಿದ ಇಬ್ಬರು ಹಳ್ಳಿಯ ಹುಡುಗರ ಯಶೋಗಾಥೆ ಎಲ್ಲರಿಗೂ ಸ್ಪೂರ್ತಿಯಾಗುವಂಥದ್ದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಪೊಲೀಸರನ್ನು ನಂಬಿದ್ದೆ, ಕಾಲ್ತುಳಿತದ ತಪ್ಪನ್ನೆಲ್ಲ ನನ್ನ ಮೇಲೆ ಹೊರಿಸಿಬಿಟ್ಟರು’; ಕರೂರ್​​ನಲ್ಲಿ ಸಿಎಂ ವಿಜಯ್ ಬೇಸರ – Kannada News | I trusted Police but they blamed me for stampede CM Vijay Speech in first visit to Karur

ಕರೂರ್, ಜುಲೈ 10: ತಮಿಳುನಾಡಿನ ವಿಧಾನಸಭಾ ಚುನಾವಣೆಗೂ ಮುನ್ನ ನಡೆದ ಪ್ರಚಾರದ ವೇಳೆ ಕರೂರ್​​ನಲ್ಲಿ (Karur Stampede) ಸಿಎಂ ವಿಜಯ್ ಭಾಷಣ ಮಾಡುವಾಗ ಕಾಲ್ತುಳಿತ ಉಂಟಾಗಿ ಸಾಕಷ್ಟು ಜನರು ಮೃತಪಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಘಟನೆ ವಿಜಯ್ (CM Vijay) ರಾಜಕೀಯ ಜೀವನಕ್ಕೆ ದೊಡ್ಡ ಕಪ್ಪುಚುಕ್ಕೆಯಾಗಲಿದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಭರ್ಜರಿ ಗೆಲುವು ಸಾಧಿಸಿತ್ತು. ಕರೂರ್​​ನಲ್ಲೂ ವಿಜಯ್ ಅವರ ಪಕ್ಷದ ಅಭ್ಯರ್ಥಿಗಳು ಭಾರೀ ಬಹುಮತ ಪಡೆದಿದ್ದರು. ಇದೀಗ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕರೂರ್​​ಗೆ ಭೇಟಿ ನೀಡಿರುವ ಸಿಎಂ ವಿಜಯ್ ಕಾಲ್ತುಳಿತದ ಘಟನೆಯನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಈ ಘಟನೆಯಲ್ಲಿ ಪೊಲೀಸರು ಯಾವ ರೀತಿ ವಿಜಯ್ ಮೇಲೆ ತಪ್ಪು ಹೊರಿಸಿದರು, ಡಿಎಂಕೆ ಯಾವ ರೀತಿ ಇದರ ಲಾಭ ಪಡೆಯಲು ಪ್ರಯತ್ನಿಸಿತು ಎಂಬೆಲ್ಲ ವಿಚಾರಗಳ ಬಗ್ಗೆ ಸಿಎಂ ವಿಜಯ್ ಮಾತನಾಡಿದ್ದಾರೆ.

ಪೊಲೀಸರು ಮುನ್ನೆಚ್ಚರಿಕೆ ನೀಡಬಹುದಿತ್ತು:

41 ಜನರ ಸಾವಿಗೆ ಕಾರಣವಾಗಿದ್ದ 2025ರ ಕರೂರ್‌ ಕಾಲ್ತುಳಿತ ದುರಂತದ ಕುರಿತು ವಿಷಾದ ವ್ಯಕ್ತಪಡಿಸಿದ ಮುಖ್ಯಮಂತ್ರಿ ವಿಜಯ್, “ನಾನು ಪೊಲೀಸರನ್ನು ಸಂಪೂರ್ಣವಾಗಿ ನಂಬಿದ್ದೆ. ಆದರೆ ದುರದೃಷ್ಟವಶಾತ್, ಅವರ ವೈಫಲ್ಯವನ್ನು ಮುಚ್ಚಿಕೊಳ್ಳಲು ಅವರು ಕಾಲ್ತುಳಿತಕ್ಕೆ ನನ್ನನ್ನೇ ಹೊಣೆಗಾರರನ್ನಾಗಿ ಮಾಡಲು ನೋಡಿದರು. ಅಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ಜನ ಸೇರುತ್ತಿದ್ದಾರೆ ಮತ್ತು ಪರಿಸ್ಥಿತಿ ಕೈಮೀರುತ್ತಿದೆ ಎಂಬ ಸಣ್ಣ ಸುಳಿವು ಸಿಕ್ಕಿದಾಗ ಪೊಲೀಸರು ನಮಗೆ ಅಥವಾ ನಮ್ಮ ತಂಡಕ್ಕೆ ಮುನ್ನೆಚ್ಚರಿಕೆ ನೀಡಬಹುದಿತ್ತು. ಆದರೆ, ಪೊಲೀಸರು ನಮಗೇನೂ ಹೇಳಲಿಲ್ಲ. ಅವರೇ ನಮ್ಮನ್ನು ಹೈವೇವರೆಗೂ ಕರೆದುಕೊಂಡು ಬಂದರು. ಇದೆಲ್ಲ ಯಾರ ಸೂಚನೆಯ ಮೇರೆಗೆ ನಡೆಯಿತು ಎಂದು ನನಗೆ ಗೊತ್ತಿಲ್ಲ. ಮುಂಚಿತವಾಗಿ ಅಲರ್ಟ್ ಮಾಡಿದ್ದರೆ ನಾವು ಕಾರ್ಯಕ್ರಮದ ಸ್ವರೂಪವನ್ನು ಬದಲಾಯಿಸುತ್ತಿದ್ದೆವು ಅಥವಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೆವು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾವೇರಿ ಜಲ ವಿವಾದ: ತಮಿಳುನಾಡು ವಿಧಾನಸಭೆ ವಿಪಕ್ಷ ನಾಯಕ ಉದಯನಿಧಿ ಆರೋಪಕ್ಕೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು

ಡಿಎಂಕೆ ವಿರುದ್ಧ ವಾಗ್ದಾಳಿ:

ಕರೂರ್ ಕಾಲ್ತುಳಿತ ಪ್ರಕರಣವನ್ನು ಮುಂದಿಟ್ಟುಕೊಂಡು ಟಿವಿಕೆ ವಿರುದ್ಧ ಮುಗಿಬಿದ್ದ ಡಿಎಂಕೆ ನಾಯಕರನ್ನು ಮುಖ್ಯಮಂತ್ರಿ ವಿಜಯ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಜನರ ಜೀವ ಹೋದ ಇಂತಹ ಅತ್ಯಂತ ನೋವಿನ ದುರಂತದಲ್ಲೂ ಡಿಎಂಕೆ ರಾಜಕೀಯ ಲಾಭವನ್ನು ಹುಡುಕಲು ಹೊರಟಿತು. ಜನರ ಕಣ್ಣೀರನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಂಡಿದ್ದು ಅತ್ಯಂತ ಖಂಡನೀಯ. ಡಿಎಂಕೆ ನಾನು ಈ ಜಿಲ್ಲೆಗೆ ಬಾರದಂತೆ ನನ್ನನ್ನು ತಡೆಯಿತು” ಎಂದು ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

ವಿಜಯ್ ಮುಖ್ಯಮಂತ್ರಿಯಾದ ನಂತರ ಕರೂರ್‌ಗೆ ನೀಡಿದ ಮೊದಲ ಅಧಿಕೃತ ಭೇಟಿ ಇದಾಗಿದ್ದು, ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಮತ್ತು ಮೃತರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯಾದ್ಯಂತ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುವುದು ಮತ್ತು ಈ ಘಟನೆಯ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಸದರ ಆಹ್ವಾನಿಸದೇ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ: ಹೆಚ್​​.ಡಿ. ರೇವಣ್ಣ ವಿರುದ್ಧ ಸಿಡಿದ ಕಾಂಗ್ರೆಸಿಗರು – Kannada News | HD Revanna’s Hospital Building Inauguration Leads to Protocol Breach Row, Congress JD(S) Face Off

ಕಾರ್ಯಕರ್ತರ ಪ್ರತಿಭಟನೆImage Credit source: Tv9 Kannada

ಹಾಸನ, ಜುಲೈ 10: ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚೇವು ಗ್ರಾಮದಲ್ಲಿನ ಸಮುದಾಯ ಅರೋಗ್ಯ ಕೇಂದ್ರದದ ನೂತನ ಕಟ್ಟಡ ಉದ್ಘಾಟನೆ ವಿಚಾರವಾಗಿ ದೊಡ್ಡ ಹೈಡ್ರಾಮಾವೇ ನಡೆದಿದೆ. ಸಂಸದರಿಗೆ ಆಹ್ವಾನ ನೀಡದೆಯೇ ಶಾಸಕ ಹೆಚ್​​. ಡಿ. ರೇವಣ್ಣ ಪೂಜೆ‌ಸಲ್ಲಿಸಿ ಕಟ್ಟಡ ಉದ್ಘಾಟನೆ ನೆರವೇರಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಈ ವೇಳೆ ಸ್ಥಳಕ್ಕೆ ಜೆಡಿಎಸ್​​ ಕಾರ್ಯಕರ್ತರೂ ಆಗಮಿಸಿದ ಕಾರಣ ಪರಿಸ್ಥಿತಿ ಬಿಗಡಾಯಿಸಿದೆ. ಕಾರ್ಯಕರ್ತರ ನಡುವೆ ವಾಗ್ವಾದವೂ ಆರಂಭವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿರುವ ಘಟನೆ ನಡೆದಿದೆ.

ರೇವಣ್ಣ ನಡೆಗೆ ಶ್ರೇಯಸ್ ಪಟೇಲ್ ಆಕ್ರೋಶ

ತಮಗೆ ಆಹ್ವಾನ ನೀಡದೆ ಆಸ್ಪತ್ರೆ ಕಟ್ಟಡ ಉದ್ಘಾಟನೆ ನೆರವೇರಿಸಿದ ಸ್ಥಳೀಯ ಶಾಸಕ ಹೆಚ್​​.ಡಿ. ರೇವಣ್ಣ ನಡೆಗೆ ಸಂಸದ ಶ್ರೇಯಸ್​​ ಪಟೇಲ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು ಗಾಳಿಗೆ ತೂರಿ, ನಿಯಮ ಉಲ್ಲಂಘನೆ ಮಾಡಿ ಕಟ್ಟಡ ಉದ್ಘಾಟನೆ ಮಾಡಿರೋದು ಖಂಡನೀಯ. ಹೊಳೆನರಸೀಪುರ ಶಾಸಕರು ಇದು ಇನ್ನೂ ಹತ್ತು, ಹದಿನೈದು ವರ್ಷ ಹಿಂದಿನ ವ್ಯವಸ್ಥೆ ಅಂದುಕೊಂಡಿದ್ದಾರೆ. ಕೇಂದ್ರ ಪುರಸ್ಕೃತ ಹಣ ಕೂಡ ಈ ಕಾಮಗಾರಿಯಲ್ಲಿ ಬಳಕೆಯಾಗಿದೆ. ಆದರೂ ಯಾವ ಅಧಿಕಾರಿಗಳೂ ತನಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ಅವರ ವಿರುದ್ದ ಕಠಿಣ ಕ್ರಮ ಆಗಬೇಕು ಎಂದವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!

‘ದ್ವೇಷ ರಾಜಕಾರಣ ಯಾಕೆಂಬುದು ಗೊತ್ತಿಲ್ಲ’

ಘಟನೆ ಸಂಬಂಧ ಸಂಸತ್ತಿನಲ್ಲಿ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ದೂರು‌ಕೊಡ್ತೇನೆ. ಇದು ಎಲ್ಲರಿಗು ಪಾಠ ಆಗಬೇಕು. ಅವರು ಹತಾಶರಾಗಿ ಕದ್ದು ಮುಚ್ಛಿ ಬೆಳಿಗ್ಗೆಯೇ ಬಂದು ಕಟ್ಟಡದ ಉದ್ಘಾಟನೆ ಮಾಡಿದ್ದಾರೆ. ಹಿರಿಯ ಶಾಸಕರಾಗಿ ಅವರಿಗೆ ಉದಾರ ಭಾವನೆ ಇರಬೇಕಿತ್ತು. ನಮಗೆ ‌ಮಾರ್ಗದರ್ಶನ ಮಾಡಿ ಜೊತೆಯಲ್ಲಿ ಕರೆದೊಯ್ಯುವ ಕೆಲಸ ಮಾಡಬೇಕಿತ್ತು. ಚುನಾವಣೆಯಲ್ಲಿ ರಾಜಕೀಯ ಮಾಡೋಣ, ಆದರೆ ಹಿರಿಯ ಶಾಸಕರಾಗಿ ಅವರೇ ಕಾನೂನು ಗಾಳಿಗೆ ತೂರಿದ್ದಾರೆ. ಉದ್ಘಾಟನೆ ಕಲ್ಲಿಗೆ ಎಲ್ಲಿ ನನ್ನ‌ ಹೆಸರು ಬೀಲುತ್ತೋ ಎಂದು ಹೀಗೆ ಮಾಡಿದ್ದಾರೆ. ನಾವು ದ್ವೇಷ ರಾಜಕಾರಣ ಮಾಡಲ್ಲ. ಅವರು ಯಾಕೆ‌ ಅದನ್ನ ಇನ್ನೂ ಬಿಟ್ಟಿಲ್ಲವೋ ಗೊತ್ತಿಲ್ಲ. ಈ ಬಗ್ಗೆ ಕಾನೂನು ಪ್ರಕಾರ ತನಿಖೆಗೆ ಡಿಸಿ ಅವರಿಗೆ ತಿಳಿಸುತ್ತೇನೆ. ಇಂತಹ ಘಟನೆಗಳು ಮರುಕಳಿಸಿದರೆ ನಾವೂ ನಮ್ಮ ಅಸ್ತಿತ್ವ ತೊರಿಸಬೇಕಾಗುತ್ತೆ ಎಂದು ಸಂಸದರು ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮೈಸೂರು ದಸರಾ ಮಹೋತ್ಸವಕ್ಕೆ ದಿನಾಂಕ ನಿಗದಿ: ಅ 11ಕ್ಕೆ ಉದ್ಘಾಟನೆ, 21ಕ್ಕೆ ಜಂಬೂಸವಾರಿ – Kannada News | Mysuru Dasara 2026: Inauguration on October 11, Jumbo Savari on October 21

ಮೈಸೂರು ದಸರಾ ಮಹೋತ್ಸವImage Credit source: tv9 kannada

ಮೈಸೂರು, ಜುಲೈ 10: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ (Mysuru Dasara) ಆಚರಣೆಗೆ ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ಆರಂಭಿಸಿದೆ. ಸಿಎಂ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಹತ್ವದ ದಸರಾ ಪೂರ್ವಸಿದ್ಧತಾ ಸಭೆ ನಡೆಯಿತು. ಸಭೆಯಲ್ಲಿ ದಸರಾ ಮಹೋತ್ಸವದ ದಿನಾಂಕವನ್ನು ಅಂತಿಮಗೊಳಿಸಲಾಗಿದ್ದು, ಅಕ್ಟೋಬರ್ 11ರ ಬೆಳಗ್ಗೆ 11.50ಕ್ಕೆ ದಸರಾ ಮಹೋತ್ಸವ ಉದ್ಘಾಟನೆಗೊಳ್ಳಲಿದ್ದು, ಅ. 21ರಂದು ಜಂಬೂಸವಾರಿ ನಡೆಯಲಿದೆ.

ದಸರಾ ಮಹೋತ್ಸವದ ವಿವರ ಹೀಗಿದೆ

  • ಜುಲೈ 26: ದಸರಾ ಗಜಪಡೆಯ ‘ಗಜಪಯಣ’ ಅಧಿಕೃತವಾಗಿ ಆರಂಭವಾಗಲಿದೆ.
  • ಆಗಸ್ಟ್ 26: ಮೈಸೂರು ಅರಮನೆಯ ಪ್ರವೇಶ ದ್ವಾರದಲ್ಲಿ ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾತ್ತದೆ.
  • ಅಕ್ಟೋಬರ್ 11 (ಬೆಳಗ್ಗೆ 11.50): ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶುಭ ಧನುರ್ ಲಗ್ನದಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ಸಿಗಲಿದೆ.
  • ಅಕ್ಟೋಬರ್ 21 (ವಿಜಯದಶಮಿ): ಅದ್ದೂರಿ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ನಡೆಯಲಿದೆ.

ಜಂಬೂಸವಾರಿಯ ಮುಹೂರ್ತದ ವಿವರ

ಅಕ್ಟೋಬರ್ 21ರ ಮಧ್ಯಾಹ್ನ 1.36ರಿಂದ 1.56ರ ನಡುವೆ: ಶುಭ ಮಕರ ಲಗ್ನದಲ್ಲಿ ಸಿಎಂ ಡಿ.ಕೆ. ಶಿವಕುಮಾರ್  ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಅದೇ ದಿನ ಸಂಜೆ 4.10ರಿಂದ 4.35ರ ಸಮಯದಲ್ಲಿ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿಗೆ ಸಿಎಂ ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡಲಿದ್ದಾರೆ.

ದಸರಾ ವೇಳೆ 2 ದಿನಗಳ ಕಾಲ ಕಂಬಳ ಆಯೋಜನೆಗೆ ಮನವಿ

ಇನ್ನು ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಅಕ್ಟೋಬರ್ 18 ಮತ್ತು 19ರಂದು ಎರಡು ದಿನಗಳ ಕಾಲ ಕಂಬಳ ಆಯೋಜಿಸಲು ಮತ್ತು ಇದಕ್ಕೆ ಪ್ರತ್ಯೇಕ ಅನುದಾನ ನೀಡುವಂತೆ ಕಂಬಳ ಸಮಿತಿ ಮಾಡಿದೆ.

ಇದನ್ನೂ ಓದಿ: ದಸರಾ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಗಜಪಡೆಗೆ ಇಸಿಜಿ ಟೆಸ್ಟ್! ಆನೆಗಳ ಆಯ್ಕೆ ಪ್ರಕ್ರಿಯೆ ಶುರು

ದಸರಾ ಮಹೋತ್ಸವದ ವೇಳೆ ಭದ್ರತೆ, ಸ್ವಚ್ಛತೆ ಕಾಪಾಡುವುದು, ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಹಾಗೂ ದೇಶ-ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮಕ್ಕೆ ವಿಶೇಷ ಉತ್ತೇಜನ ನೀಡುವ ಕುರಿತು ಸಭೆಯಲ್ಲಿ ಸುದೀರ್ಘ ಸಮಾಲೋಚನೆ ಮಾಡಲಾಗಿದೆ.

ಇನ್ನು ಈ ಬಾರಿಯ ದಸರಾ ಮಹೋತ್ಸವದ ಉದ್ಘಾಟಕರನ್ನು ನಿರ್ಣಯಿಸುವ ಅಧಿಕಾರವನ್ನು ಸಿಎಂಗೆ ವಹಿಸುವ ಸಾಧ್ಯತೆಯಿದೆ. ಸಭೆಯಲ್ಲಿ ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಕೆ. ವೆಂಕಟೇಶ್, ಮಾಜಿ ಸಚಿವ ಎಚ್.ಸಿ. ಮಹದೇವಪ್ಪ, ಶಾಸಕ ದೇವೇಗೌಡ ಸೇರಿದಂತೆ ಮೈಸೂರು ಭಾಗದ ಜನಪ್ರತಿನಿಧಿಗಳು ಹಾಗೂ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಸ್‌ಪಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:57 pm, Fri, 10 July 26

Source link

ನಮ್ಮ ಬೆಂಗಳೂರಿನಿಂದ ಹೊರಡೋ ಈ 5 ವಂದೇ ಭಾರತ್ ರೈಲುಗಳಲ್ಲಿದೆ ಸೂಪರ್ ವೀಕೆಂಡ್ ಟ್ರಿಪ್ ಪ್ಲಾನ್ – Kannada News | Bengaluru to Vande Bharat: Quick Weekend Trips: Top Destinations and Travel Guide

ಬೆಂಗಳೂರು, ಜು.10: ದಿನವಿಡೀ ಕೆಲಸದ ಒತ್ತಡ, ಟ್ರಾಫಿಕ್ ಕಿರಿಕಿರಿ ಮಧ್ಯೆ ಸಿಲುಕುವ ಬೆಂಗಳೂರಿಗರಿಗೆ ವೀಕೆಂಡ್ ಬಂತೆಂದರೆ ಎಲ್ಲಾದರೂ ದೂರ ಪ್ರಯಾಣ ಬೆಳೆಸಲು ಸಮಯದ ಅಭಾವ ಕಾಡುವುದು ಸಹಜ. ಆದರೆ, ಭಾರತೀಯ ರೈಲ್ವೆಯ (Indian Railways) ಹೆಮ್ಮೆಯ ‘ವಂದೇ ಭಾರತ್ ಎಕ್ಸ್‌ಪ್ರೆಸ್’ (Vande Bharat Express) ರೈಲುಗಳ ಜಾಲವು ಈಗ ಬೆಂಗಳೂರಿಗರ ವೀಕೆಂಡ್ ಪ್ಲಾನ್‌ಗಳನ್ನು ಮತ್ತಷ್ಟು ಸುಲಭ ಮತ್ತು ಆರಾಮದಾಯಕವಾಗಿಸಿದೆ. ಹೆದ್ದಾರಿಗಳ ಟ್ರಾಫಿಕ್ ಕಿರಿಕಿರಿ ಅಥವಾ ಏರ್‌ಪೋರ್ಟ್‌ಗಳ ಕ್ಯೂನಲ್ಲಿ ನಿಲ್ಲುವ ಜಂಜಾಟವಿಲ್ಲದೆ, ಕೇವಲ 2 ದಿನಗಳ ರಜೆಯಲ್ಲೇ ನೀವು ಭೇಟಿ ನೀಡಬಹುದು.

ಮೈಸೂರು: ಅರಮನೆಗಳ ನಗರಿಗೆ ಕೇವಲ 2 ಗಂಟೆಯಲ್ಲಿ ರಾಜಮನೆತನದ ಸವಾರಿ

ಬೆಂಗಳೂರಿಗರಿಗೆ ಅತ್ಯಂತ ಹತ್ತಿರದ ಮತ್ತು ಜನಪ್ರಿಯ ವೀಕೆಂಡ್ ತಾಣವೆಂದರೆ ಅದು ಸಾಂಸ್ಕೃತಿಕ ನಗರಿ ಮೈಸೂರು. ಮೈಸೂರು- ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣದಿಂದ ಹೊರಟು ಕೇವಲ 2 ಗಂಟೆಗಳಲ್ಲಿ ಮೈಸೂರು ತಲುಪಿಸುತ್ತದೆ. ವಿಶ್ವವಿಖ್ಯಾತ ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಸೇಂಟ್ ಫಿಲೋಮಿನಾ ಚರ್ಚ್, ದೇವರಾಜ ಮಾರುಕಟ್ಟೆ ಮತ್ತು ಬೃಂದಾವನ ಗಾರ್ಡನ್. ಇಲ್ಲಿನ ಮೈಸೂರು ಪಾಕ್ ಮತ್ತು ಸಾಂಪ್ರದಾಯಿಕ ಆಹಾರ ಸಂಸ್ಕೃತಿ ನಿಮ್ಮ ವೀಕೆಂಡ್ ಅನ್ನು ಮತ್ತಷ್ಟು ಮಧುರವಾಗಿಸಲಿದೆ.

ಧಾರವಾಡ: ಉತ್ತರ ಕರ್ನಾಟಕದ ಕಲೆ ಮತ್ತು ಪೇಡ ಸವಿಯಲು ಸೂಪರ್ ದಾರಿ

ಕೆಎಸ್‌ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಈಗ ಉತ್ತರ ಕರ್ನಾಟಕದ ಪ್ರವಾಸೋದ್ಯಮಕ್ಕೆ ಹೊಸ ವೇಗ ನೀಡಿದೆ. ಸರಿಸುಮಾರು 6 ಗಂಟೆಗಳ ಅವಧಿಯಲ್ಲಿ ಬೆಂಗಳೂರಿನಿಂದ ಧಾರವಾಡವನ್ನು ತಲುಪಬಹುದು. ಸಾಂಸ್ಕೃತಿಕ ಪರಂಪರೆ ಮತ್ತು ರುಚಿಕರ ಆಹಾರ ಇಷ್ಟಪಡುವವರಿಗೆ ಇದು ಬೆಸ್ಟ್ ಚಾಯ್ಸ್. ಉಣಕಲ್ ಕೆರೆ, ಧಾರವಾಡ ಕೋಟೆ, ಇಸ್ಕಾನ್ ಶ್ರೀ ಕೃಷ್ಣ ಬಲರಾಮ ದೇವಸ್ಥಾನ ಮತ್ತು ಹುಬ್ಬಳ್ಳಿ ನಗರ. ಇದರೊಂದಿಗೆ ವಿಶ್ವಪ್ರಸಿದ್ಧ ‘ಧಾರವಾಡ ಪೇಡ’ ಸವಿಯುವುದನ್ನು ಮರೆಯಬೇಡಿ.

ಚೆನ್ನೈ: ಸಮುದ್ರ ತೀರದ ಸೌಂದರ್ಯ ಸವಿಯಲು 5 ಗಂಟೆಯ ಜರ್ನಿ

ಕರಾವಳಿ ತೀರದ ಸೌಂದರ್ಯ, ಐತಿಹಾಸಿಕ ದೇವಸ್ಥಾನಗಳು ಮತ್ತು ಶಾಪಿಂಗ್ ಇಷ್ಟಪಡುವ ಪ್ರವಾಸಿಗರಿಗೆ ಚೆನ್ನೈ ಅತ್ಯುತ್ತಮ ತಾಣವಾಗಿದೆ. ದಕ್ಷಿಣ ಭಾರತದ ಅತ್ಯಂತ ಬ್ಯುಸಿ ರೈಲು ಮಾರ್ಗವಾಗಿರುವ ಈ ವಂದೇ ಭಾರತ್ ಎಕ್ಸ್‌ಪ್ರೆಸ್, ಬೆಂಗಳೂರಿನಿಂದ ಚೆನ್ನೈ ನಗರವನ್ನು ಕೇವಲ 5 ಗಂಟೆಗಳಲ್ಲಿ ತಲುಪಿಸುತ್ತದೆ. ಮರೀನಾ ಬೀಚ್, ಕಪಾಲೀಶ್ವರರ್ ದೇವಸ್ಥಾನ, ಸ್ಯಾಂಥೋಮ್ ಬೆಸಿಲಿಕಾ ಚರ್ಚ್, ಗೌರ್ಮೆಂಟ್ ಮ್ಯೂಸಿಯಂ ಮತ್ತು ಬೆಸೆಂಟ್ ನಗರ್ ಬೀಚ್. ದಕ್ಷಿಣ ಭಾರತದ ಅಪ್ಪಟ ಸಾಂಪ್ರದಾಯಿಕ ಆಹಾರಗಳನ್ನು ಸವಿಯಲು ಇದು ಸೂಕ್ತ ಜಾಗ.

ಎರ್ನಾಕುಲಂ – ಕೊಚ್ಚಿ: ಕೇರಳದ ಪ್ರಕೃತಿ ಸೌಂದರ್ಯಕ್ಕೆ ವೇಗದ ಲಿಂಕ್

ಬೆಂಗಳೂರಿನಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅತ್ಯಂತ ವೇಗದ ರೈಲು ಸೇವೆ ಎಂದರೆ ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್. ವೀಕೆಂಡ್‌ನಲ್ಲಿ ಕೊಂಚ ದೀರ್ಘಾವಧಿಯ ರಜೆ ಸಿಕ್ಕರೆ, ವಲಸೆ ಇತಿಹಾಸ ಮತ್ತು ಆಧುನಿಕ ಕೆಫೆ ಸಂಸ್ಕೃತಿಯ ಸಮ್ಮಿಶ್ರಣವಾಗಿರುವ ಕೊಚ್ಚಿ ನಗರಕ್ಕೆ ಆರಾಮವಾಗಿ ಭೇಟಿ ನೀಡಬಹುದು. ಫೋರ್ಟ್ ಕೊಚ್ಚಿ, ಚೀನಾ ಮೀನುಗಾರಿಕಾ ಬಲೆಗಳು , ಮಟ್ಟಂಚೇರಿ ಅರಮನೆ, ಜ್ಯೂ ಟೌನ್ ಮತ್ತು ಮೆರೈನ್ ಡ್ರೈವ್ ವಾಟರ್‌ಫ್ರಂಟ್ ವೀಕ್ಷಣೆ.

ಇದನ್ನೂ ಓದಿ: ಮಳೆ ಅಬ್ಬರಕ್ಕೆ ಅಂಬೋಲಿ ಫಾಲ್ಸ್​​ಗೆ ಜೀವ ಕಳೆ: ಜಲಪಾತ ನೋಡಲು ಮುಗಿಬಿದ್ದ ಪ್ರವಾಸಿಗರು

ಕೊಯಮತ್ತೂರು: ಊಟಿ, ಕೂನೂರು ಗಿರಿಧಾಮಗಳಿಗೆ ಗೇಟ್‌ವೇ

ತಮಿಳುನಾಡಿನ ಪ್ರಮುಖ ಕೈಗಾರಿಕಾ ನಗರಿ ಕೊಯಮತ್ತೂರು ಸಹ ಈಗ ಬೆಂಗಳೂರಿಗರಿಗೆ ವಂದೇ ಭಾರತ್ ಮೂಲಕ ಅತ್ಯಂತ ಹತ್ತಿರವಾಗಿದೆ. ಕೇವಲ ಕೊಯಮತ್ತೂರು ನಗರದ ದೇವಸ್ಥಾನಗಳು ಮತ್ತು ಶಾಪಿಂಗ್ ಮಾತ್ರವಲ್ಲದೆ, ಇಲ್ಲಿ ಇಳಿದುಕೊಂಡು ರಸ್ತೆ ಮಾರ್ಗದ ಮೂಲಕ ಪ್ರಸಿದ್ಧ ಗಿರಿಧಾಮಗಳಾದ ಊಟಿ, ಕೂನೂರು ಮತ್ತು ವಾಲ್ಪಾರೈಗೆ ಸುಲಭವಾಗಿ ತೆರಳಬಹುದು. ಮರುದಮಲೈ ದೇವಸ್ಥಾನ, ಪೇರೂರ್ ಪಟೀಶ್ವರರ್ ದೇವಸ್ಥಾನ, ವಿಒಸಿ ಪಾರ್ಕ್ ಮತ್ತು ಬ್ರೂಕ್‌ಫೀಲ್ಡ್ಸ್ ಮಾಲ್

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಲುಗಳ ಸರಣಿ ಮುಂದುವರೆದರೆ ಟೀಂ ಇಂಡಿಯಾ ಒಲಿಂಪಿಕ್ಸ್​ ಆಡುವುದು ಅನುಮಾನ..! – Kannada News | India’s Olympic Cricket Dream: T20 Ranking Crisis for LA28 Qualification

2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್​ನಲ್ಲಿ (2028 LA Olympics ) ಕ್ರಿಕೆಟ್ ಅನ್ನು ಸಹ ಸೇರ್ಪಡೆಗೊಳಿಸಲಾಗಿದೆ. ಬರೋಬ್ಬರಿ 128 ವರ್ಷಗಳ ನಂತರ ಒಲಿಂಪಿಕ್ಸ್​ಗೆ ಕ್ರಿಕೆಟ್ ಮರಳುತ್ತಿರುವುದು ಕ್ರಿಕೆಟ್ ಪ್ರೇಮಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಈ ಕ್ರೀಡಾಕೂಟದಲ್ಲಿ ಪುರುಷ ಹಾಗೂ ಮಹಿಳಾ ತಂಡಗಳ ತಲಾ ಆರು ತಂಡಗಳು ಭಾಗವಹಿಸಲಿವೆ. ಹಾಗೆಯೇ 2028 ರ ಜುಲೈ 22 ರಿಂದ ಜುಲೈ 29 ನಡುವೆ ಕ್ರಿಕೆಟ್ ಪಂದ್ಯಗಳು ನಡೆಯಲಿದ್ದು, ಜುಲೈ 29 ರಂದು ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಗಳನ್ನು ಟಿ20 ಸ್ವರೂಪದಲ್ಲಿ ಆಡಿಸಲು ತೀರ್ಮಾನಿಸಲಾಗಿದೆ. ಈ ಒಲಿಂಪಿಕ್ಸ್​ನಲ್ಲಿ ಟೀಂ ಇಂಡಿಯಾ (Team India) ಪದಕ ಗೆಲ್ಲುವುದು ಖಚಿತ ಎಂಬ ಕೂಗು ಜೋರಾಗಿ ಕೇಳಿಬರುತ್ತಿತ್ತು. ಆದರೆ ಭಾರತ ಟಿ20 ತಂಡದ ಇತ್ತೀಚಿನ ಪ್ರದರ್ಶನವನ್ನು ನೋಡಿದಾಗ ತಂಡ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುವುದು ಕಷ್ಟಕರವಾಗಿ ಕಾಣುತ್ತಿದೆ.

4 ತಂಡಗಳಿಗೆ ನೇರ ಸ್ಥಾನ

ಮೇಲೆ ಹೇಳಿದಂತೆ ಒಲಿಂಪಿಕ್ಸ್​ನಲ್ಲಿ 6 ತಂಡಗಳು ಪಾಲ್ಗೊಳ್ಳಲಿದ್ದು, ಇದರಲ್ಲಿ 4 ತಂಡಗಳನ್ನು ಐಸಿಸಿ ರ್ಯಾಂಕಿಂಗ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅದರಂತೆ ಐಸಿಸಿ ಟಿ20 ಶ್ರೇಯಾಂಕದಲ್ಲಿ ನಾಲ್ಕು ಖಂಡಗಳಿಂದ ಅಗ್ರಸ್ಥಾನದಲ್ಲಿರುವ 4 ತಂಡಗಳು ಒಲಿಂಪಿಕ್ಸ್‌ನಲ್ಲಿ ನೇರ ಸ್ಥಾನ ಪಡೆಯುತ್ತವೆ. ಈ 4 ತಂಡಗಳನ್ನು ಡಿಸೆಂಬರ್ 31, 2026 ರಂದು ಐಸಿಸಿ ಶ್ರೇಯಾಂಕದ ಮೂಲಕ ನಿರ್ಧರಿಸಲಾಗುತ್ತದೆ. ಇದರ ಅಡಿಯಲ್ಲಿ, ಏಷ್ಯಾ, ಯುರೋಪ್, ಆಫ್ರಿಕಾ ಮತ್ತು ಓಷಿಯಾನಿಯಾದಿಂದ ತಲಾ ಒಂದು ತಂಡವು ನೇರವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತದೆ. ಇದರರ್ಥ ಏಷ್ಯಾದಿಂದ ಭಾರತ, ಆಫ್ರಿಕಾದಿಂದ ದಕ್ಷಿಣ ಆಫ್ರಿಕಾ, ಯುರೋಪ್‌ನಿಂದ ಇಂಗ್ಲೆಂಡ್ ಮತ್ತು ಓಷಿಯಾನಿಯಾದಿಂದ ಆಸ್ಟ್ರೇಲಿಯಾ ನೇರ ಸ್ಥಾನ ಪಡೆಯುತ್ತವೆ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ ಭಾರತ ಪುರುಷರ ತಂಡದ ಇತ್ತೀಚಿನ ಪ್ರದರ್ಶನವನ್ನು ಗಮನಿಸಿದರೆ, ತಂಡ ಅರ್ಹತೆ ಪಡೆಯುವುದು ಅನುಮಾನ ಎನ್ನಲಾಗುತ್ತಿದೆ.

269 ಕ್ಕೆ ಕುಸಿದ ರೇಟಿಂಗ್ ಪಾಯಿಂಟ್ಸ್

ವಾಸ್ತವವಾಗಿ ಭಾರತ ಟಿ20 ತಂಡ ಐರ್ಲೆಂಡ್ ಪ್ರವಾಸವನ್ನು ಆರಂಭಿಸಿದಾಗ ಒಟ್ಟು 275 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿತ್ತು. ಆದರೆ ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ 2-0 ಅಂತರದ ಹೀನಾಯ ಸೋಲನ್ನು ಅನುಭವಿಸಿತು. ಇದರಿಂದಾಗಿ ಭಾರತ ತಂಡದ ರೇಟಿಂಗ್ ಪಾಯಿಂಟ್‌ಗಳು 272 ಕ್ಕೆ ಕುಸಿದಿದೆ. ಈಗ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ, ಭಾರತವು ಇಲ್ಲಿಯವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತಿದ್ದು, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಅವಮಾನಕರ ಪ್ರದರ್ಶನದ ನಂತರ, ಟೀಂ ಇಂಡಿಯಾದ ರೇಟಿಂಗ್ ಪಾಯಿಂಟ್‌ಗಳು 269 ಕ್ಕೆ ಕುಸಿದಿದೆ.

ಮತ್ತೊಂದೆಡೆ, ಇಂಗ್ಲೆಂಡ್ ತಂಡ ಸತತ ಗೆಲುವುಗಳ ಮೂಲಕ ತನ್ನ ರೇಟಿಂಗ್ ಪಾಯಿಂಟ್​ಗಳನ್ನು 267ಕ್ಕೆ ಏರಿಸಿಕೊಂಡಿದೆ. ಅಂದರೆ ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಕೇವಲ ಎರಡು ಪಾಯಿಂಟ್‌ಗಳ ಅಂತರವಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಐದನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ಸೋತರೆ, ತನ್ನ ನಂಬರ್ ಒನ್ ಸ್ಥಾನವನ್ನು ಕಳೆದುಕೊಳ್ಳುತ್ತದೆ.

ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲುವುದು ನನ್ನ ಗುರಿ; ಟಿವಿ9 ಜೊತೆ ಯುವ ಟೆನಿಸ್ ಆಟಗಾರ್ತಿ ಸೃಷ್ಟಿ ಕಿರಣ್ ಮಾತು

ಭಾರತದ ಸೋಲಿನಿಂದ ಪಾಕಿಸ್ತಾನಕ್ಕೆ ಲಾಭ

ಒಲಿಂಪಿಕ್ಸ್ ಅರ್ಹತಾ ನಿಯಮಗಳ ಪ್ರಕಾರ, ಭಾರತ ಪುರುಷರ ತಂಡವು ಒಲಿಂಪಿಕ್ಸ್​ಗೆ ನೇರವಾಗಿ ಅರ್ಹತೆ ಪಡೆಯಲು ಬಯಸಿದರೆ, 2026 ರ ಅಂತ್ಯದ ವೇಳೆಗೆ ಏಷ್ಯನ್ ತಂಡಗಳಲ್ಲಿ ಐಸಿಸಿ ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಉಳಿಯಬೇಕು. ಒಂದು ವೇಳೆ ಟೀಂ ಇಂಡಿಯಾದ ಪ್ರದರ್ಶನ ಇದೇ ರೀತಿ ಕುಸಿಯುತ್ತಲೇ ಇದ್ದರೆ, ಭವಿಷ್ಯದಲ್ಲಿ ಅದು ಗಮನಾರ್ಹ ನಷ್ಟವನ್ನು ಎದುರಿಸಬೇಕಾಗುತ್ತದೆ. ಏಷ್ಯನ್ ತಂಡ ಶ್ರೇಯಾಂಕದಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನವು ಒಟ್ಟಾರೆ ಶ್ರೇಯಾಂಕದಲ್ಲಿ 240 ರೇಟಿಂಗ್ ಅಂಕಗಳೊಂದಿಗೆ ಪ್ರಸ್ತುತ ಆರನೇ ಸ್ಥಾನದಲ್ಲಿದೆ, ಭಾರತಕ್ಕಿಂತ ಗಮನಾರ್ಹವಾಗಿ ಹಿಂದಿದೆ. ಆದಾಗ್ಯೂ, ಭಾರತ ತನ್ನ ಮುಂದಿನ ಪಂದ್ಯಗಳಲ್ಲೂ ಇದೇ ರೀತಿಯಾಗಿ ಸೋಲುತ್ತಾ ಹೋದರೆ, ಅದರ ರೇಟಿಂಗ್ ಪಾಯಿಂಟ್‌ಗಳು ಕಡಿಮೆಯಾಗಲಿವೆ. ಇದು ಪಾಕಿಸ್ತಾನಕ್ಕೆ ಲಾಭದಾಯಕವಾಗಬಹುದು. ಹೀಗಾಗಿ ಟೀಂ ಇಂಡಿಯಾ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಬೇಕೆಂದರೆ ತನ್ನ ಮುಂದಿನ ಟಿ20 ಪಂದ್ಯಗಳನ್ನು ಗೆಲ್ಲಲೇಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Aadhaar Card: ಆಧಾರ್ ಕಾರ್ಡ್​ನಲ್ಲಿ ಹೆಸರು, ವಿಳಾಸ ತಿದ್ದುಪಡಿ ಮಾಡುವ ಮುನ್ನ ಈ ವಿಷ್ಯ ತಿಳಿದಿರಲಿ – Kannada News | Aadhaar Card: Keep this in mind before correcting your name or address on your Aadhaar card.

ಆಧಾರ್‌ ಕಾರ್ಡ್‌ (Aadhaar Card) ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇದು ಭಾರತದ ಪ್ರತಿಯೊಬ್ಬ ನಿವಾಸಿಗೆ ನೀಡುವ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ. ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಬೇಕಾದ್ರು ಆಧಾರ್‌ ಕಾರ್ಡ್‌ ಅಗತ್ಯವಾಗಿ ಬೇಕು. ಆದರೆ ಈ ಆಧಾರ್‌ ಕಾರ್ಡ್‌ನಲ್ಲಿ ತಮ್ಮ ಹೆಸರು, ವಿಳಾಸ ಹಾಗೂ ಮೊಬೈಲ್‌ ನಂಬರ್‌ ಅನ್ನು ತಿದ್ದುಪಡಿ ಮಾಡುವುದಕ್ಕೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಅವಕಾಶ ನೀಡಿದೆ. ಆದರೆ, ಈ ಆಧಾರ್ ಕಾರ್ಡ್‌ನ ಪ್ರಮುಖ ಮಾಹಿತಿಗಳಾದ ಹೆಸರು, ವಿಳಾಸ, ಮೊಬೈಲ್ ನಂಬರನ್ನು ಎಷ್ಟು ಬಾರಿ ತಿದ್ದುಪಡಿ ಮಾಡಿಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ಕೆಲವರಿಗೆ ತಿಳಿದಿಲ್ಲ. ಈ ತಿದ್ದುಪಡಿಯ ಬಗ್ಗೆ ನೀವು ತಿಳಿದುಕೊಳ್ಳುವುದು ಒಳ್ಳೆಯದು.

ಆಧಾರ್‌ ಕಾರ್ಡ್‌ನಲ್ಲಿ ಎಷ್ಟು ಬಾರಿ ಈ ಎಲ್ಲಾ ಮಾಹಿತಿಗಳನ್ನು ತಿದ್ದುಪಡಿ ಮಾಡಬಹುದು?

  • ಹೆಸರು: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಜೀವಿತಾವಧಿಯಲ್ಲಿ ಕೇವಲ ಎರಡು ಬಾರಿ ಮಾತ್ರ ಬದಲಾಯಿಸಲು ಅವಕಾಶವಿದೆ.
  • ಹುಟ್ಟಿದ ದಿನಾಂಕ ಹಾಗೂ ಲಿಂಗ: ಈ ಮಾಹಿತಿಯನ್ನು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಬದಲಾವಣೆ ಮಾಡಬಹುದು.
  • ವಿಳಾಸ ಹಾಗೂ ಮೊಬೈಲ್ ಸಂಖ್ಯೆ: ನಿಮ್ಮ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯಲ್ಲಿ ಏನಾದ್ರೂ ಬದಲಾವಣೆ ಮಾಡಲು ನಿರ್ದಿಷ್ಟ ಮಿತಿಯನ್ನು ಹಾಕಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಷ್ಟು ಬಾರಿ ಬೇಕಾದರೂ ಬದಲಾಯಿಸಿಕೊಳ್ಳಬಹುದು.

ಆಧಾರ್‌ ಕಾರ್ಡ್‌ನ ಈ ಎಲ್ಲಾ ಮಾಹಿತಿಗಳನ್ನು ಅಪ್‌ಡೇಟ್‌ ಮಾಡಲು ಹೀಗೆ ಮಾಡಿ

ಹಂತ 1: ಮೊದಲಿಗೆ UIDAI ನ ಅಧಿಕೃತ ವೆಬ್‌ಸೈಟ್‌ನಿಂದ ಆಧಾರ್ ನೋಂದಣಿ ಹಾಗೂ ಅಪ್‌ಡೇಟ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಹಂತ 2: ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.

ಹಂತ 3: ಡೌನ್‌ಲೋಡ್ ಮಾಡಿದ ಫಾರ್ಮ್ ನಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ. ಆಧಾರ್ ನೋಂದಣಿ ಕೇಂದ್ರದ
ಕಾರ್ಯನಿರ್ವಾಹಕರಿಗೆ ನೀಡಿ.

ಹಂತ 4: ನಿಮಗೆ (ಹೆಸರು, ಲಿಂಗ, ವಿಳಾಸ, ಮೊಬೈಲ್ ಸಂಖ್ಯೆ) ಬದಲಾವಣೆಯಾಗಬೇಕಾಗಿರುವುದರ ಗುರುತಿನ ದಾಖಲೆ, ವಿಳಾಸದ ಪುರಾವೆ, ಜನ್ಮ ದಿನಾಂಕದ ಪುರಾವೆಯನ್ನು ನೀಡಿ.

ಹಂತ 5: ಕೊನೆಗೆ ಆಧಾರ್‌ನಲ್ಲಿ ನಿಮಗೆ ಬೇಕಿರುವ ಮಾಹಿತಿ (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ) ಅಪ್‌ಡೇಟ್‌ ಮಾಡಲು, 50ರೂ. ಶುಲ್ಕವನ್ನು ನೀಡಬೇಕು.

ಇದನ್ನೂ ಓದಿ: DigiLocker: ನಿಮ್ಮ ಡಿಜಿಲಾಕರ್ ಅಕೌಂಟ್‌ ಹ್ಯಾಕ್ ಆಗಿದೆ ಎಂದು ಹೀಗೆ ತಿಳಿಯಿರಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಆಧಾರ್‌ ಕಾರ್ಡ್‌ನಲ್ಲಿ ಎಷ್ಟು ಬಾರಿ ಅಗತ್ಯ ಮಾಹಿತಿಗಳನ್ನು ತಿದ್ದುಪಡಿ ಮಾಡಬಹುದು?

ಉತ್ತರ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಜೀವಿತಾವಧಿಯಲ್ಲಿ ಹೆಸರನ್ನು ಕೇವಲ ಎರಡು ಬಾರಿ, ಹುಟ್ಟಿದ ದಿನಾಂಕ ಮತ್ತು ಲಿಂಗ ಒಂದು ಬಾರಿ ಹಾಗೂ ವಿಳಾಸ, ಮೊಬೈಲ್ ಸಂಖ್ಯೆಯನ್ನು ಎಷ್ಟು ಬಾರಿಯಾದರೂ ತಿದ್ದುಪಡಿ ಮಾಡಲು ಅವಕಾಶ ನೀಡಿದೆ.

ಪ್ರಶ್ನೆ: ಆಧಾರ್‌ ಕಾರ್ಡ್‌ನ ಮಾಹಿತಿ ಅಪ್‌ಡೇಟ್‌ ಮಾಡಲು ಎಲ್ಲಿಗೆ ಹೋಗಬೇಕು?

ಉತ್ತರ: ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಲಿಂಗ ಈ ಎಲ್ಲಾ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳಬಹುದು.

ಪ್ರಶ್ನೆ: ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಶುಲ್ಕ ನೀಡಬೇಕೇ?

ಉತ್ತರ: ಆಧಾರ್‌ ಕಾರ್ಡ್‌ನಲ್ಲಿ ನಿಮಗೆ ಬೇಕಿರುವ ಮಾಹಿತಿ (ಹೆಸರು, ವಿಳಾಸ, ಮೊಬೈಲ್ ಸಂಖ್ಯೆ) ತಿದ್ದುಪಡಿ ಮಾಡಲು, 50ರೂ. ಶುಲ್ಕವನ್ನು ವಿಧಿಸುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೃಹ ಜ್ಯೋತಿ ಮೊಬೈಲ್ ಆ್ಯಪ್ ಓಪನ್ ಆಗ್ತಿಲ್ವಾ?: ಉಚಿತ 200 ಯೂನಿಟ್ ವಿದ್ಯುತ್ ಪಡೆಯಲು ಇಲ್ಲಿದೆ ಪರ್ಯಾಯ ಸರಳ ದಾರಿಗಳು – Kannada News | Gruha Jyothi Application: Fix Mobile App Issues, Use Seva Sindhu for Free Electricity

ಬೆಂಗಳೂರು, ಜು.10: ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹ ಜ್ಯೋತಿ’ (Gruha Jyothi) ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸಲು ಅಥವಾ ಸ್ಟೇಟಸ್ ಚೆಕ್ ಮಾಡಲು ಮೊಬೈಲ್ ಆ್ಯಪ್ ಬಳಸುವ ಗ್ರಾಹಕರಿಗೆ ಇತ್ತೀಚೆಗೆ ತಾಂತ್ರಿಕ ತೊಂದರೆಗಳು ಎದುರಾಗುತ್ತಿವೆ. ಸರ್ವರ್ ಲೋಡ್ ಅಥವಾ ತಾಂತ್ರಿಕ ಅಪ್‌ಡೇಟ್‌ಗಳ ಕಾರಣದಿಂದಾಗಿ ಆ್ಯಪ್ ಪದೇ ಪದೇ ಓಪನ್ ಆಗದೆ ನಾಗರಿಕರು ಕಂಗಾಲಾಗಿದ್ದಾರೆ. ಇದೀಗ ಇದಕ್ಕೆ ಪರ್ಯಾಯ ವಿಧಾನಗಳು ಯಾವುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಒಂದು ವೇಳೆ ನಿಮಗೂ ಗೃಹ ಜ್ಯೋತಿ ಮೊಬೈಲ್ ಆ್ಯಪ್ ಓಪನ್ ಆಗದಿದ್ದರೆ, ಆತಂಕಪಡುವ ಅಗತ್ಯವಿಲ್ಲ. ಅದಕ್ಕೆ ಪರ್ಯಾಯವಾಗಿರುವ ಸುಲಭ ದಾರಿಗಳು ಮತ್ತು ನೀವು ಮಾಡಬೇಕಾದ ಹಂತ-ಹಂತದ ವಿವರ ಇಲ್ಲಿದೆ.

ಅಧಿಕೃತ ವೆಬ್‌ಸೈಟ್ ಬಳಸಿ (ಸೇವಾ ಸಿಂಧು ಪೋರ್ಟಲ್)

ಮೊಬೈಲ್ ಆ್ಯಪ್ ಕೆಲಸ ಮಾಡದಿದ್ದಾಗ ನೇರವಾಗಿ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬ್ರೌಸರ್ ಮೂಲಕ ಸೇವಾ ಸಿಂಧು ವೆಬ್‌ಸೈಟ್‌ಗೆ ಭೇಟಿ ನೀಡುವುದು ಅತ್ಯಂತ ಸುರಕ್ಷಿತ ಮತ್ತು ಸುಲಭವಾದ ಮಾರ್ಗವಾಗಿದೆ.

ಹಂತ 1: ಮೊದಲು ನಿಮ್ಮ ಫೋನ್‌ನಲ್ಲಿ ಗೂಗಲ್ ಕ್ರೋಮ್ ಓಪನ್ ಮಾಡಿ sevasindhugs.karnataka.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ಹೋಮ್ ಪೇಜ್‌ನಲ್ಲಿ ಕಾಣಿಸುವ ‘ಗೃಹ ಜ್ಯೋತಿ ಯೋಜನೆ’ (Gruha Jyothi Scheme) ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ 3: ನಿಮ್ಮ ಭಾಷೆಯನ್ನು (ಕನ್ನಡ ಅಥವಾ ಇಂಗ್ಲಿಷ್) ಆಯ್ಕೆ ಮಾಡಿಕೊಳ್ಳಿ.

ಹಂತ 4: ನಿಮ್ಮ ಎಸ್ಕಾಂ (ESCOM) ಹೆಸರು (ಉದಾಹರಣೆಗೆ: BESCOM, MESCOM, HESCOM ಇತ್ಯಾದಿ) ಮತ್ತು ನಿಮ್ಮ ಖಾತೆ ಸಂಖ್ಯೆಯನ್ನು ನಮೂದಿಸಿ.

ಹಂತ 5: ಆಧಾರ್ ಕಾರ್ಡ್ ಸಂಖ್ಯೆ ಮತ್ತು ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ನಮೂದಿಸಿ ಅರ್ಜಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅಥವಾ ಸ್ಟೇಟಸ್ ಪರಿಶೀಲಿಸಿ.

ಇದನ್ನೂ ಓದಿ: ಇದು ಕರ್ನಾಟಕದಲ್ಲೇ ಮೊದಲು: ಮಂಗಳೂರಲ್ಲಿ ಒಣ ಕಸದಿಂದ ‘ಇಂಧನ ಪೆಲ್ಲೆಟ್‌’ ತಯಾರಿಕೆ; ಕಲ್ಲಿದ್ದಲಿಗೆ ಪರ್ಯಾಯವಾಗಿ ಪರಿಸರಸ್ನೇಹಿ ಆವಿಷ್ಕಾರ

ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ

ನೀವೇ ಸ್ವತಃ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದರೆ ಅಥವಾ ಸರ್ವರ್ ಸಮಸ್ಯೆ ಮುಂದುವರಿದರೆ, ಸರ್ಕಾರ ಅಧಿಕೃತವಾಗಿ ನಿಗದಿಪಡಿಸಿರುವ ಸೇವಾ ಕೇಂದ್ರಗಳಿಗೆ ಭೇಟಿ ನೀಡಬಹುದು.

ನಿಮ್ಮ ಹತ್ತಿರದ ಗ್ರಾಮ ಒನ್ , ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ.

ಅಲ್ಲಿನ ಸಿಬ್ಬಂದಿಗೆ ನಿಮ್ಮ ಆರ್ಆರ್ ಸಂಖ್ಯೆ (ವಿದ್ಯುತ್ ಬಿಲ್ ಸಂಖ್ಯೆ) ಮತ್ತು ಆಧಾರ್ ಕಾರ್ಡ್ ನೀಡುವ ಮೂಲಕ ಅತ್ಯಂತ ಸುಲಭವಾಗಿ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು

ಇವು ಸರ್ಕಾರದ ಅಧಿಕೃತ ಕೇಂದ್ರಗಳಾಗಿದ್ದು, ತಾಂತ್ರಿಕ ದೋಷಗಳಿಲ್ಲದೆ ನೇರ ಲಾಗಿನ್ ಮೂಲಕ ಕೆಲಸ ಮಾಡಿಕೊಡಲಾಗುತ್ತದೆ.

ಮೊಬೈಲ್ ಆ್ಯಪ್‌ನಲ್ಲಿ ಈ ಸಣ್ಣ ಟ್ರಿಕ್ ಬಳಸಿ ನೋಡಿ

ವೆಬ್‌ಸೈಟ್‌ಗೆ ಹೋಗುವ ಮುನ್ನ ನಿಮ್ಮ ಮೊಬೈಲ್ ಆ್ಯಪ್‌ನಲ್ಲೇ ಈ ಕೆಳಗಿನ ಹಂತಗಳನ್ನು ಒಮ್ಮೆ ಪ್ರಯತ್ನಿಸಿ

ಕ್ಯಾಶ್ ಕ್ಲಿಯರ್ ಮಾಡಿ : ನಿಮ್ಮ ಮೊಬೈಲ್ ಸೆಟ್ಟಿಂಗ್ಸ್, ಆ್ಯಪ್​​​​ಗೆ ಹೋಗಿ ಗೃಹ ಜ್ಯೋತಿ ಆ್ಯಪ್ ಆಯ್ದುಕೊಂಡು ‘Clear Cache’ ಮತ್ತು ‘Clear Data’ ನೀಡಿ. ನಂತರ ಆ್ಯಪ್ ಓಪನ್ ಮಾಡಿ.

ಅಪ್‌ಡೇಟ್ ಮಾಡಿ: ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಆ್ಯಪ್‌ನ ಲೇಟೆಸ್ಟ್ ವರ್ಷನ್ ಲಭ್ಯವಿದೆಯೇ ಎಂದು ಪರಿಶೀಲಿಸಿ, ಅಪ್‌ಡೇಟ್ ಮಾಡಿಕೊಳ್ಳಿ.

ಇಂಟರ್ನೆಟ್ ಪರಿಶೀಲಿಸಿ: ಕೆಲವೊಮ್ಮೆ ಇಂಟರ್ನೆಟ್ ವೇಗ ಕಡಿಮೆ ಇದ್ದಾಗಲೂ ಆ್ಯಪ್ ಓಪನ್ ಆಗುವುದಿಲ್ಲ. ನೆಟ್‌ವರ್ಕ್ ಬದಲಾಯಿಸಿ ಪ್ರಯತ್ನಿಸಿ.

ಆ್ಯಪ್ ತಾಂತ್ರಿಕ ತೊಂದರೆ ನೀಡಿದಾಗ ಇಂಟರ್ನೆಟ್ ಬ್ರೌಸರ್ ಮೂಲಕ ಸೇವಾ ಸಿಂಧು ಪೋರ್ಟಲ್ ಬಳಸುವುದು ಸದ್ಯದ ಮಟ್ಟಿಗೆ ಅತ್ಯಂತ ವೇಗವಾದ ಮತ್ತು ಗ್ಯಾರಂಟಿ ದಾರಿಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಳೆ ಅಬ್ಬರಕ್ಕೆ ಅಂಬೋಲಿ ಫಾಲ್ಸ್​​ಗೆ ಜೀವ ಕಳೆ: ಜಲಪಾತ ನೋಡಲು ಮುಗಿಬಿದ್ದ ಪ್ರವಾಸಿಗರು

ಬೆಳಗಾವಿ, ಜುಲೈ 10: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಹಿನ್ನೆಲೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಜಲಪಾತಗಳಿಗೆ ಜೀವಕಳೆ ಬಂದಿದೆ. ಆದರೆ ಬೆಳಗಾವಿ ಜಿಲ್ಲೆಯ 9 ಫಾಲ್ಸ್​​ಗಳಿಗೆ ಅರಣ್ಯ ಇಲಾಖೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿರುವ ಹಿನ್ನೆಲೆ ಮಹಾರಾಷ್ಟ್ರದ ಫಾಲ್ಸ್​​ಗಳತ್ತ ಪ್ರವಾಸಿಗರು ಮುಖ ಮಾಡಿದ್ದಾರೆ. ಪಶ್ಚಿಮ ಘಟ್ಟದ ಕಾಡಂಚಿನಲ್ಲಿ ಧುಮ್ಮಿಕ್ಕುವ ಅಂಬೋಲಿ ಫಾಲ್ಸ್​​ಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ನೂರು ಅಡಿಗೂ ಹೆಚ್ಚು ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ವೈಭವ ಕಣ್ತುಂಬಿಕೊಳ್ಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version