ಈ ವಾರ ನಿರೀಕ್ಷಿಸಿ ಹೊಸ ಸ್ವರೂಪದ ಇಪಿಎಫ್​ಒ; ಸೈಟ್ಸ್ ಅಳವಡಿಕೆ; ವೇಗದ ಸೇವೆ ಸುಲಭ ಬಳಕೆ; ಇನ್ನೇನಿದೆ ಇದರ ವಿಶೇಷತೆ? – Kannada News | EPFO with new technical upgrade coming this week, know what new features it has

ನವದೆಹಲಿ, ಜುಲೈ 8: ಇಪಿಎಫ್‌ಒ (EPFO – ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ತನ್ನ ಡಿಜಿಟಲ್ ಸೇವೆಯನ್ನು ಮೇಲ್ದರ್ಜೆಗೆ ಏರಿಸಿದ್ದು, ‘EPFO 2.01’ ಎಂಬ ಹೊಸ ಸ್ವರೂಪದಲ್ಲಿ ಈ ವಾರದಲ್ಲಿ ಪ್ರಾರಂಭಿಸಲಿದೆ. ಇದು ಸಂಸ್ಥೆಯ ಇತಿಹಾಸದಲ್ಲೇ ಅತಿದೊಡ್ಡ ತಾಂತ್ರಿಕ ಬದಲಾವಣೆಗಳಲ್ಲಿ ಒಂದಾಗಿದೆ. ಕೆಲ ದಿನಗಳ ಹಿಂದೆ ಇಪಿಎಫ್ ಡಿಜಿಟಲ್ ಪ್ಲಾಟ್​ಫಾರ್ಮ್ ಸಾರ್ವಜನಿಕವಾಗಿ ಅಲಭ್ಯವಾಗಿದ್ದು ಇದೇ ಕಾರಣಕ್ಕೆ. ಹೊಸ ಕೇಂದ್ರೀಕೃತ ಸಿಸ್ಟಂ ಅಳವಡಿಕೆಯಾಗುತ್ತಿದ್ದುದರಿಂದ ಇಪಿಎಫ್​ಒ ಡಿಜಿಟಲ್ ಪ್ಲಾಟ್​ಫಾರ್ಮ್ ಪುನಾರಂಭಗೊಳ್ಳುವುದು ವಿಳಂಬವಾಗಿತ್ತು. ಕೇಂದ್ರ ಸರ್ಕಾರದ ಸೈಟ್ಸ್ (CITES- Centralised IT Enabled Services) ಅಡಿಯಲ್ಲಿ ಪ್ಲಾಟ್​ಫಾರ್ಮ್​ಗೆ ಉನ್ನತ ತಂತ್ರಜ್ಞಾನದ ಸ್ಪರ್ಶ ತರಲಾಗಿದೆ. ಇಪಿಎಫ್ ಸೇವೆಗಳು ಹೆಚ್ಚು ವೇಗ, ಹೆಚ್ಚು ಪಾರದರ್ಶಕ ಮತ್ತು ಹೆಚ್ಚು ಸುಲಭವಾಗಿರುವಂತೆ ಈ ತಂತ್ರಜ್ಞಾನ ನೆರವಾಗಿದೆ. ಹೊಸ ಸ್ವರೂಪದ EPFO 2.01 ದಲ್ಲಿ ಏನೆಲ್ಲಾ ಬದಲಾವಣೆ ಇದೆ?

EPFO 2.01 ದಲ್ಲಿ ಪ್ರಮುಖ ಸೌಲಭ್ಯಗಳಿವು

  • ಕೇಂದ್ರೀಕೃತ ವ್ಯವಸ್ಥೆ (Centralized System): ಹಿಂದೆ ಪ್ರತಿಯೊಂದು ಪ್ರಾದೇಶಿಕ ಕಚೇರಿಯು ತನ್ನದೇ ಆದ ಡೇಟಾಬೇಸ್ ಹೊಂದಿತ್ತು. ಈಗ ಎಲ್ಲ ಸದಸ್ಯರ ವಿವರಗಳನ್ನು ಒಂದೇ ರಾಷ್ಟ್ರೀಯ ಡೇಟಾಬೇಸ್‌ಗೆ ತರಲಾಗಿದೆ. ಇದರಿಂದಾಗಿ ಸದಸ್ಯರು ತಮ್ಮ ಖಾತೆ ಇರುವ ಕಚೇರಿಗೆ ಮಾತ್ರ ಹೋಗುವ ಅವಶ್ಯಕತೆ ಇಲ್ಲ, ದೇಶದ ಯಾವುದೇ ಅಧಿಕೃತ ಇಪಿಎಫ್‌ಒ ಕಚೇರಿಯಲ್ಲಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬಹುದು.
  • ವೇಗದ ಕ್ಲೈಮ್‌ಗಳು (Faster Claims): ಕ್ಲೈಮ್‌ಗಳನ್ನು ಸಲ್ಲಿಸುವ ಮೊದಲು ಸಿಸ್ಟಮ್ ಸ್ವಯಂಚಾಲಿತವಾಗಿ ಅರ್ಜಿಯನ್ನು ಪರಿಶೀಲಿಸುತ್ತದೆ, ಇದರಿಂದಾಗಿ ತಿರಸ್ಕಾರಗಳು ಕಡಿಮೆಯಾಗುತ್ತವೆ. ಅಡ್ವಾನ್ಸ್ ಕ್ಲೈಮ್‌ಗಳಿಗಾಗಿ ಆಟೊ-ಸೆಟ್ಲ್‌ಮೆಂಟ್ ಮಿತಿಯನ್ನು ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
  • ಏಕೀಕೃತ ಸದಸ್ಯ ಪೋರ್ಟಲ್ (Unified Member Portal): ಇನ್ನುಮುಂದೆ ಬ್ಯಾಲೆನ್ಸ್ ಪರಿಶೀಲನೆ, ಕ್ಲೈಮ್ ಸ್ಥಿತಿ, ಪಿಂಚಣಿ ವಿವರಗಳು ಎಲ್ಲವನ್ನೂ ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ಪಡೆಯಬಹುದು. ಈ ಹಿಂದೆ ಇದ್ದ ವ್ಯವಸ್ಥೆಯಲ್ಲಿ ಬ್ಯಾಲನ್ಸ್ ನೋಡಲು, ಕ್ಲೇಮ್ ಸಲ್ಲಿಸಲು ಇತ್ಯಾದಿಗೆ ಬೇರೆ ಬೇರೆ ಪ್ಲಾಟ್​ಫಾರ್ಮ್​ಗಳಿಗೆ ಹೋಗಬೇಕಿತ್ತು. ಈಗ ಒಂದೇ ಕಡೆ ಎಲ್ಲಾ ಸೇವೆಗಳು ಸಿಗುತ್ತವೆ.
  • ಪಿಂಚಣಿದಾರರಿಗೆ ಅನುಕೂಲ: ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (CPPS): ಇಪಿಎಸ್ (EPS) ಪಿಂಚಣಿದಾರರು ಈಗ ದೇಶದ ಯಾವುದೇ ಇಪಿಎಫ್‌ಒ ಕಚೇರಿಯಲ್ಲಿ ಸೇವೆಗಳನ್ನು ಪಡೆಯಬಹುದು ಮತ್ತು ದೇಶದ ಯಾವುದೇ ಬ್ಯಾಂಕ್ ಖಾತೆಗೆ ತಮ್ಮ ಪಿಂಚಣಿಯನ್ನು ನೇರವಾಗಿ ಪಡೆಯಬಹುದು.

ಇದನ್ನೂ ಓದಿ: ಭಾರತ್ ಟ್ಯಾಕ್ಸಿ ಮಾದರಿಯಲ್ಲಿ ಸಹಕಾರಿ ಸಂಸ್ಥೆಗಳಿಂದಲೂ ಇನ್ಷೂರೆನ್ಸ್ ಸೇವೆ; ಸರ್ಕಾರ ಯೋಚನೆ

ಈ ಮೇಲ್ದರ್ಜೆಯು ಇಪಿಎಫ್‌ಒ ಸೇವೆಗಳನ್ನು ಹೆಚ್ಚು ಪಾರದರ್ಶಕ, ವೇಗವಾದ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.

ಇಪಿಎಫ್ ಬಡ್ಡಿ ಜಮಾ ಸದ್ಯದಲ್ಲೇ

ಇಪಿಎಫ್ ಅಕೌಂಟ್​ಗಳಿಗೆ 2025-26ನೇ ಸಾಲಿನ 8.25% ಬಡ್ಡಿಯು (EPF interest ಮುಂದಿನ ವಾರದಲ್ಲಿ ಜಮೆಯಾಗಲಿದೆ. ಸುಮಾರು 34 ಕೋಟಿ ಖಾತೆಗಳಿಗೆ ಒಟ್ಟು ₹1.44 ಲಕ್ಷ ಕೋಟಿ ಬಡ್ಡಿ ಹಣ ಜಮೆಯಾಗಲಿದೆ. ಸದಸ್ಯರು ಜುಲೈ 15 ರ ವೇಳೆಗೆ ತಮ್ಮ ಪಾಸ್‌ಬುಕ್‌ನಲ್ಲಿ ಈ ಹಣವನ್ನು ನೋಡಬಹುದು.

ಇಪಿಎಫ್ ಹಣ ಯುಪಿಐನಿಂದ ಹಿಂಪಡೆಯಬಹುದೆ?

ಇಪಿಎಫ್​ಒ ಸಿಸ್ಟಂ ಅಪ್​ಗ್ರೇಡ್ ಆಗಿರುವುದು ಯುಪಿಐ ಫೀಚರ್ ಜಾರಿ ಕುರಿತು ನಿರೀಕ್ಷೆ ಹೆಚ್ಚಿದೆ. ವರದಿ ಪ್ರಕಾರ, ಯುಪಿಐ ಮತ್ತು ಎಟಿಎಂ ಮೂಲಕ ಇಪಿಎಫ್ ಹಣ ಹಿಂಪಡೆಯುವ ಸೌಲಭ್ಯ ಬಹಳ ಶೀಘ್ರದಲ್ಲೇ ಬರಬಹುದು ಎನ್ನಲಾಗಿದೆ. ಆದರೆ, ಯಾವ ದಿನದೊಳಗೆ ಇದು ಆಗುತ್ತದೆ ಗೊತ್ತಿಲ್ಲ.

ಇದನ್ನೂ ಓದಿ: ವಿಶ್ವ ಬ್ಯಾಂಕ್​ನ ಮೇಲ್ಮಧ್ಯಮ ಆದಾಯ ಮಟ್ಟ ದಾಟಿದ ಕರ್ನಾಟಕ; ತಮಿಳುನಾಡನ್ನೂ ಮೀರಿಸಿದ ಕರುನಾಡು; ಟಾಪ್-5ನಲ್ಲಿ ದಕ್ಷಿಣ ರಾಜ್ಯಗಳೇ ಹೆಚ್ಚು

ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು ಮತ್ತು ಉತ್ತರಗಳು (FAQs)

ಪ್ರಶ್ನೆ: ಇಪಿಎಫ್ ಬಡ್ಡಿಹಣ ಯಾವಾಗ ಜಮೆ ಆಗುತ್ತದೆ?

ಉತ್ತರ: 2025-26ರ ವರ್ಷಕ್ಕೆ ಇಪಿಎಫ್ ಅಕೌಂಟ್​ಗಳಿಗೆ ಬಡ್ಡಿ ಸಂದಾಯ 2026ರ ಜುಲೈ 2ನೇ ವಾರದಲ್ಲಿ ಆಗುತ್ತದೆ.

ಪ್ರಶ್ನೆ: ಪರಿಷ್ಕೃತ EPFO ಪೋರ್ಟಲ್​ನ ವಿಶೇಷತೆ ಏನು?

ಉತ್ತರ: Unified Member Portal ​ನಲ್ಲಿ ಬ್ಯಾಲೆನ್ಸ್ ಪರಿಶೀಲನೆ, ಕ್ಲೈಮ್ ಸ್ಥಿತಿ, ಪಿಂಚಣಿ ಎಲ್ಲ ವಿವರವನ್ನೂ ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ಪಡೆಯಬಹುದು.

ಪ್ರಶ್ನೆ: ಇಪಿಎಫ್ ಅಕೌಂಟ್​ನಲ್ಲಿ ಸಮಸ್ಯೆಯಾದರೆ ನಿಗದಿತ ಪ್ರಾದೇಶಿಕ ಕಚೇರಿಗೆ ಹೋಗಬೇಕಾ?

ಉತ್ತರ: ಹೊಸ ಇಪಿಎಫ್ ಸಿಸ್ಟಂನಲ್ಲಿ ಕೇಂದ್ರೀಕೃತ ವ್ಯವಸ್ಥೆ ತರಲಾಗಿದೆ. ದೇಶದ ಯಾವುದೇ ಇಪಿಎಫ್ ಕಚೇರಿಗೆ ಹೋಗಿ ಕೆಲಸ ಮಾಡಿಸಿಕೊಳ್ಳಬಹುದು.

ಪ್ರಶ್ನೆ: ಇಪಿಎಫ್​ನಲ್ಲಿ ಯುಪಿಐ, ಎಟಿಎಂ ಫೀಚರ್ ಯಾವಾಗ?

ಉತ್ತರ: ಇಪಿಎಫ್ ಹಣವನ್ನು ಯುಪಿಐ ಅಥವಾ ಎಟಿಎಂನಲ್ಲಿ ವಿತ್​ಡ್ರಾ ಮಾಡುವ ಸೌಲಭ್ಯ ಬಹಳ ಶೀಘ್ರದಲ್ಲೇ ಬರಲಿದೆ.

Source link

ಅಮೆರಿಕ- ಇರಾನ್ ನಡುವಿನ ಕದನ ವಿರಾಮ ಅಂತ್ಯ; ಭಾರತದ ತಲೆಬಿಸಿಗೆ ಕಾರಣಗಳಿವು – Kannada News | US Iran War Ceasefire Ends Here Are the Reasons Behind Indias Growing Concerns

ನವದೆಹಲಿ, ಜುಲೈ 8: ದಿನಕ್ಕೊಂದು ಹೇಳಿಕೆ ನೀಡುತ್ತಾ, ಮನಬಂದಂತೆ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರಾದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಇರಾನ್ ಕದನವಿರಾಮಕ್ಕೆ ಒಪ್ಪುವವರೆಗೂ ಬೆಂಬಿಡದೆ ಕಾಡಿದ್ದ, ಒಪ್ಪದಿದ್ದರೆ ದೇಶವನ್ನೇ ನಾಶಪಡಿಸುವುದಾಗಿ ಬೆದರಿಕೆಯೊಡ್ಡಿದ್ದ ಟ್ರಂಪ್ ಇದೀಗ ಎರಡೂ ದೇಶಗಳ ನಡುವಿನ ಕದನವಿರಾಮ ಅಂತ್ಯಗೊಂಡಿದೆ ಎಂದು ಘೋಷಿಸಿದ್ದಾರೆ. ಅತ್ತ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ದಾಳಿ ನಡೆಸಿದ್ದರೆ ಇತ್ತ ಅಮೆರಿಕ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದಾರೆ. ಇವರಿಬ್ಬರ ಜಗಳದಿಂದ ಬಹ್ರೇನ್, ಕುವೈತ್ ಮೇಲೂ ಮತ್ತೆ ಇರಾನ್ ದಾಳಿ ಆರಂಭವಾಗಿದೆ. ಮತ್ತೆ ಇರಾನ್ ಮತ್ತು ಅಮೆರಿಕದ ನಡುವೆ ಆರಂಭವಾಗಿರುವ ಈ ಮಿಲಿಟರಿ ದಾಳಿಯ ಬಿಸಿ ಭಾರತಕ್ಕೂ ತಟ್ಟಲಿದೆ. ಹಾಗಾದರೆ, ಮತ್ತೊಮ್ಮೆ ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದರೆ ಅದರಿಂದ ಭಾರತದ ಮೇಲಾಗುವ ಪರಿಣಾಮಗಳೇನು? ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಇರಾನ್ ಜೊತೆ ಇನ್ಮುಂದೆ ಶಾಂತಿ ಮಾತುಕತೆಯ ಮಾತೇ ಇಲ್ಲ, ಕದನವಿರಾಮ ಅಂತ್ಯಗೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿರುವುದು ಸಹಜವಾಗಿಯೇ ಬೇರೆ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಹಲವು ತಿಂಗಳುಗಳಿಂದ ನಡೆಯುತ್ತಿರುವ ಈ ಎರಡೂ ದೇಶಗಳ ಯುದ್ಧದ ಪರಿಣಾಮವನ್ನು ಎದುರಿಸಿರುವ ದೇಶಗಳು ಕದನವಿರಾಮದ ಬಳಿಕ ನಿಟ್ಟುಸಿರು ಬಿಟ್ಟಿದ್ದವು. ಇದೀಗ ಮತ್ತೆ ಯುದ್ಧ ಆರಂಭವಾಗುವ ಲಕ್ಷಣಗಳು ಹೆಚ್ಚಾಗಿರುವುದರಿಂದ ಇತರೆ ದೇಶಗಳು ಕೂಡ ಚಿಂತಿತವಾಗಿವೆ. ಅದಕ್ಕೆ ಭಾರತವೂ ಹೊರತಾಗಿಲ್ಲ.

ಇದನ್ನೂ ಓದಿ: US-Iran War: ಬಹ್ರೇನ್, ಕುವೈತ್‌ನಲ್ಲಿ ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ಇರಾನ್ ರಾಕೆಟ್ ದಾಳಿ, ಡ್ರೋನ್ ಧ್ವಂಸ

ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಸೃಷ್ಟಿಯಾಗಿರುವ ಭೀಕರ ಮಿಲಿಟರಿ ಸಂಘರ್ಷ ಹಾಗೂ ಕದನ ವಿರಾಮದ ಮುರಿತವು ಜಾಗತಿಕವಾಗಿ ತಲ್ಲಣ ಸೃಷ್ಟಿಸಿದೆ. ಈ ಉದ್ವಿಗ್ನತೆಯು ಜಾಗತಿಕವಾದ ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ಮಾತ್ರವಲ್ಲದೆ, ಭಾರತದ ಮೇಲೂ ಅತ್ಯಂತ ಗಂಭೀರವಾದ ನೇರ ಪರಿಣಾಮಗಳನ್ನು ಬೀರುತ್ತದೆ.

ಭಾರತದ ಮೇಲಾಗುವ ಪರಿಣಾಮಗಳೇನು?

ಕಚ್ಚಾ ತೈಲ ಬೆಲೆಯ ಏರಿಕೆ:

ಭಾರತವು ತನ್ನ ಒಟ್ಟು ಇಂಧನದ ಶೇ. 80ಕ್ಕಿಂತ ಹೆಚ್ಚು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇರಾನ್-ಇಸ್ರೇಲ್-ಅಮೆರಿಕದ ನಡುವೆ ಯುದ್ಧ ಆರಂಭವಾದಾಗಿನಿಂದ ಭಾರತಕ್ಕೆ ಗಲ್ಫ್ ದೇಶಗಳಿಂದ ಇಂಧನದ ಪೂರೈಕೆಯ ಸಮಸ್ಯೆ ಉಂಟಾಗಿ ಭಾರತದಲ್ಲಿ ಇಂಧನದ ಬಿಕ್ಕಟ್ಟು ತಲೆದೋರಿತ್ತು. ಹೀಗಾಗಿ, ಇದೀಗ ಮತ್ತೆ ಅದೇ ಪರಿಸ್ಥಿತಿ ಉಂಟಾಗುವ ಆತಂಕ ಭಾರತಕ್ಕೆ ಎದುರಾಗಿದೆ.

ರೂಪಾಯಿ ಮೌಲ್ಯ ಕುಸಿತ:

ಇರಾನ್ ಮತ್ತು ಅಮೆರಿಕದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾದಾಗ ವಿದೇಶಿ ಹೂಡಿಕೆದಾರರು ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳಿಂದ ತಮ್ಮ ಹಣವನ್ನು ಹಿಂತೆಗೆದುಕೊಂಡು, ಸುರಕ್ಷಿತ ಹೂಡಿಕೆಯಾದ ಚಿನ್ನ ಮತ್ತು ಅಮೆರಿಕನ್ ಡಾಲರ್ ಮೇಲೆ ಹೂಡಿಕೆ ಮಾಡುತ್ತಾರೆ. ಇದರಿಂದ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಭಾರೀ ಹೊಡೆತ ಬೀಳುತ್ತದೆ. ಅಲ್ಲದೆ, ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯ ಕೂಡ ಭಾರಿ ಪ್ರಮಾಣದಲ್ಲಿ ಕುಸಿಯುತ್ತದೆ. ಇದರಿಂದ ಭಾರತ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆಯ ಹೊರೆಯೂ ಹೆಚ್ಚಾಗುತ್ತದೆ.

ಎರಡೂ ದೇಶಗಳ ಗೆಳೆಯ ಭಾರತ:

ಮೊದಲೇ ಹೇಳಿದಂತೆ ಭಾರತ ಎಲ್ಲ ದೇಶಗಳೊಂದಿಗೆ ಅತ್ಯುತ್ತಮ ಸ್ನೇಹ ಸಂಬಂಧವನ್ನು ಹೊಂದಿದೆ. ಭಾರತಕ್ಕೆ ಅಮೆರಿಕ ಮತ್ತು ಇರಾನ್ ಎರಡೂ ದೇಶಗಳೂ ಆಪ್ತ ದೇಶಗಳೇ ಆಗಿವೆ. ಅಮೆರಿಕ ಭಾರತದ ಅತಿ ದೊಡ್ಡ ಆರ್ಥಿಕ, ತಾಂತ್ರಿಕ ಮತ್ತು ರಕ್ಷಣಾ ಪಾಲುದಾರ ರಾಷ್ಟ್ರವಾಗಿದ್ದರೆ, ಮಧ್ಯ ಏಷ್ಯಾದ ಸಂಪರ್ಕಕ್ಕೆ ಮತ್ತು ಇಂಧನ ಸುರಕ್ಷತೆಗೆ ಭಾರತಕ್ಕೆ ಇರಾನ್‌ನ ಬೆಂಬಲ ಬೇಕೇ ಬೇಕು. ಹೀಗಾಗಿ, ಆ ಎರಡೂ ದೇಶಗಳ ನಡುವೆ ಯುದ್ಧ ಉಂಟಾದರೆ ಭಾರತ ಕೂಡ ಯಾವ ದೇಶಕ್ಕೆ ಬೆಂಬಲ ನೀಡಬೇಕೆಂಬ ಸಂದಿಗ್ಧತೆಗೆ ಸಿಲುಕುತ್ತದೆ. ಇದು ಜಾಗತಿಕವಾಗಿ ಭಾರತದ ಇಮೇಜ್ ಮೇಲೂ ಪರಿಣಾಮ ಬೀಡುವ ಸಾಧ್ಯತೆ ಇರುತ್ತದೆ.

ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು:

ಕದನವಿರಾಮದ ಮುಖ್ಯವಾದ ಷರತ್ತೇ ಹಾರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವುದಾಗಿತ್ತು. ಇದೀಗ ಈ ಒಪ್ಪಂದವೇ ರದ್ದಾಗಿರುವುದರಿಂದ ಇರಾನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವುದು ಖಚಿತ. ಇದರಿಂದ ಭಾರತದ ಇಂಧನದ ಟ್ಯಾಂಕರ್​ಗಳು ಹಾರ್ಮುಜ್ ಜಲಸಂಧಿಯನ್ನು ದಾಟಿ ಬರಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಜಾಗತಿಕವಾಗಿಯೂ ತೈಲದ ಬೆಲೆಗಳು ದುಪ್ಪಟ್ಟಾಗುತ್ತವೆ. ಕಚ್ಚಾತೈಲದ ಬೆಲೆಯ ಏರಿಕೆ ಭಾರತದ ಆಮದು ವೆಚ್ಚವನ್ನು ಹೆಚ್ಚಿಸುತ್ತದೆ. ತೈಲದ ಬೆಲೆ ಹೆಚ್ಚಾದರೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರಗಳು ಗಗನಕ್ಕೇರುತ್ತವೆ. ಇದು ಸರಕು ಸಾಗಣೆ ವೆಚ್ಚವನ್ನು ಹೆಚ್ಚಿಸಿ, ದೇಶದಲ್ಲಿ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಕದನ ವಿರಾಮ ಅಂತ್ಯವೆಂದು ಘೋಷಿಸಿದ ಟ್ರಂಪ್; ಇರಾನ್ ಮೇಲೆ ಅಮೆರಿಕದಿಂದ ಭೀಕರ ವೈಮಾನಿಕ ದಾಳಿ

ಅನಿವಾಸಿ ಭಾರತೀಯರ ಸುರಕ್ಷತೆಗೆ ತೊಂದರೆ:

ಪಶ್ಚಿಮ ಏಷ್ಯಾ ಅಥವಾ ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 85 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಈಗಾಗಲೇ ಅಮೆರಿಕದ ನೆಲೆಗಳಿರುವ ಬಹ್ರೇನ್ ಮತ್ತು ಕುವೈತ್ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದರಿಂದ ಗಲ್ಫ್ ಪ್ರದೇಶದಲ್ಲಿರುವ ಭಾರತೀಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಅಲ್ಲಿ ಯುದ್ಧದ ಪರಿಸ್ಥಿತಿ ಉಲ್ಬಣಿಸಿದರೆ ಲಕ್ಷಾಂತರ ಭಾರತೀಯರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆದುಕೊಂಡು ಬರಬೇಕಾದ ಸವಾಲು ಕೂಡ ಭಾರತಕ್ಕೆ ಎದುರಾಗಲಿದೆ.

ಚಾಬಹಾರ್ ಬಂದರು ಯೋಜನೆಗೆ ಸಂಕಷ್ಟ:

ಭಾರತವು ಇರಾನ್‌ನಲ್ಲಿ ಚಾಬಹಾರ್ ಬಂದರನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಮೂಲಕ ಪಾಕಿಸ್ತಾನದ ಮಾರ್ಗವನ್ನು ಬಿಟ್ಟು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾ ದೇಶಗಳಿಗೆ ವ್ಯಾಪಾರ ಸಂಪರ್ಕ ಹೊಂದುವುದು ಭಾರತದ ಗುರಿಯಾಗಿದೆ. ಆದರೆ, ಇದೀಗ ಅಮೆರಿಕವು ಇರಾನ್ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದರೆ, ದಾಳಿಗಳನ್ನು ಮುಂದುವರೆಸಿದರೆ ಭಾರತವು ಚಾಬಹಾರ್ ಬಂದರಿನ ಕೆಲಸ ಮಾಡುವುದು ಕಷ್ಟವಾಗುತ್ತದೆ. ಈ ಯೋಜನೆಗೆ ಭಾರತ ಮಾಡಿರುವ ಹೂಡಿಕೆಯೂ ವಾಪಾಸ್ ಬರುವುದಿಲ್ಲ.

ಈ ಎಲ್ಲ ಕಾರಣಗಳಿಂದ ಇರಾನ್ ಮತ್ತು ಅಮೆರಿಕದ ನಡುವಿನ ಯುದ್ಧ ಭಾರತಕ್ಕೂ ಅನೇಕ ಸವಾಲುಗಳನ್ನು ಒಡ್ಡುವುದಂತೂ ಖಚಿತ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವಾಗಿ ಆರಂಭವಾದ ಈ ಯುದ್ಧದಲ್ಲಿ ಅಮೆರಿಕ ಮಧ್ಯದಲ್ಲಿ ಎಂಟ್ರಿ ಕೊಟ್ಟಿತ್ತು. ಇದೀಗ ಇಸ್ರೇಲ್ ಕೊಂಚ ಹಿಂದೆ ಸರಿದು, ಸೈಲೆಂಟ್ ಆಗಿದ್ದರೂ ಅಮೆರಿಕ ಮಾತ್ರ ಇರಾನ್​ನ ಬೆನ್ನತ್ತಿದೆ. ಇದೀಗ ಈ ಯುದ್ಧ ಇರಾನ್ ಮತ್ತು ಅಮೆರಿಕದ ನಡುವೆ ದೊಡ್ಡ ಬಿರುಕನ್ನು ಉಂಟುಮಾಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ದಾವಣಗೆರೆ ಸೇರಿ 180 ನಗರಗಳಿಗೆ ‘ಫುಡ್ ಆನ್ ಟ್ರೈನ್’ ಸೇವೆ ವಿಸ್ತರಿಸಿದ ಸ್ವಿಗ್ಗಿ; ಬುಕ್‌ ಮಾಡುವ ವಿಧಾನ ಹೀಗಿದೆ – Kannada News | Swiggy expands ‘Food On Train’ Service 180 Train Stations including Davanagere, here Is How To book

ಬೆಂಗಳೂರು, (ಜುಲೈ 08): ದೂರದೂರಿಗೆ ರೈಲಿನಲ್ಲಿ (Train Journey) ಪ್ರಯಾಣಿಸುವಾಗ ಊಟ-ತಿಂಡಿಯ ಚಿಂತೆ ಅನೇಕ ಮಂದಿಯನ್ನು ಕಾಡುತ್ತದೆ. ಇದೀಗ ರೈಲ್ವೆ ನಿಲ್ದಾಣಗಳಲ್ಲಿ ಇಳಿದು ತರಾತುರಿಯಲ್ಲಿ ಆಹಾರ ಖರೀದಿಸುವ ಆತಂಕವನ್ನು ದೂರ ಮಾಡಲು ‘ಸ್ವಿಗ್ಗಿ’ ತನ್ನ ಜನಪ್ರಿಯ ‘ಫುಡ್ ಆನ್ ಟ್ರೈನ್’ (Swiggy Food On Train Service) ಸೇವೆಯನ್ನು ಈಗ ದೇಶಾದ್ಯಂತ 180 ನಗರಗಳಿಗೆ ವಿಸ್ತರಿಸಿದೆ. ಕರ್ನಾಟಕದ  (Karnataka) ದಾವಣಗೆರೆ (Davanagere) ಸೇರಿದಂತೆ 17 ರೈಲು ನಿಲ್ದಾಣಗಳಿಗೆ ಈ ಸೇವೆ ಹೊಸದಾಗಿ ಕಾಲಿಟ್ಟಿದ್ದು, ಬುಕ್ ಮಾಡಿದ್ರೆ ಸಾಕು ನಿಮ್ಮ ನೆಚ್ಚಿನ ಹೋಟೆಲ್‌ನಿಂದ ಊಟವನ್ನು ನೇರವಾಗಿ ನಿಮ್ಮ ರೈಲಿನ ಸೀಟಿಗೇ ತಂದುಕೊಡುತ್ತದೆ.

ಟಿಕೆಟ್ ಸ್ಕ್ಯಾನ್ ಮಾಡಿದರೆ ಸಾಕು, ಊಟ ರೆಡಿ!

ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಸ್ವಿಗ್ಗಿ ಇದೀಗ ‘ಸ್ಕ್ಯಾನ್ ಯುವರ್ ಟಿಕೆಟ್’ ಎಂಬ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಗ್ರಾಹಕರು ಸ್ವಿಗ್ಗಿ ಆ್ಯಪ್‌ನಲ್ಲಿ ತಮ್ಮ ರೈಲು ಟಿಕೆಟ್‌ನ ಫೋಟೋವನ್ನು ಅಪ್‌ಲೋಡ್ ಮಾಡಿದರೆ ಸಾಕು, ಆ್ಯಪ್ ತಾನಾಗಿಯೇ ನಿಮ್ಮ ಪಿಎನ್‌ಆರ್‌ ನಂಬರ್, ಬೋಗಿ ಮತ್ತು ಸೀಟ್ ನಂಬರ್ ಅನ್ನು ಪತ್ತೆಹಚ್ಚಿ, ನಿಮ್ಮ ನೆಚ್ಚಿನ ಹೋಟೆಲ್‌ನಿಂದ ಊಟವನ್ನು ನೇರವಾಗಿ ನಿಮ್ಮ ರೈಲಿನ ಸೀಟಿಗೇ ತಂದುಕೊಡುತ್ತದೆ.

ಇದನ್ನೂ ಓದಿ: ಮನೆ ಮಾಲೀಕರು, ಬಾಡಿಗೆದಾರರು ಆತಂಕ ಪಡಬೇಕಾಗಿಲ್ಲ: ಗೃಹ ಜ್ಯೋತಿ ಬಗ್ಗೆ ಬೆಸ್ಕಾಂ ನೀಡಿದ ಮಾಹಿತಿ ಹೀಗಿದೆ

ಆರ್ಡರ್‌ಗಳಲ್ಲಿ 3 ಪಟ್ಟು ಹೆಚ್ಚಳ

ಬೇಸಿಗೆ ರಜೆಯ ಪ್ರಯಾಣದ ಹಿನ್ನೆಲೆಯಲ್ಲಿ ಸ್ವಿಗ್ಗಿಯ ಈ ಸೇವೆಗೆ ಭಾರಿ ಬೇಡಿಕೆ ಕಂಡುಬಂದಿದೆ. ಏಪ್ರಿಲ್ – ಜೂನ್ 2026ರ ಅವಧಿಯಲ್ಲಿ ‘ಫುಡ್ ಆನ್ ಟ್ರೈನ್’ ಆರ್ಡರ್‌ಗಳು ಕಳೆದ ವರ್ಷಕ್ಕಿಂತ ಬರೋಬ್ಬರಿ 3 ಪಟ್ಟು ಹೆಚ್ಚಾಗಿವೆ. ಕೇವಲ ಒಂದು ಸ್ಟೇಷನ್‌ನಲ್ಲಿ ಮಾತ್ರವಲ್ಲದೆ, ಒಂದೇ ಪಿಎನ್‌ಆರ್‌ ನಂಬರ್ ಬಳಸಿ ಪ್ರಯಾಣದ ಉದ್ದಕ್ಕೂ 2-3 ಸ್ಟೇಷನ್‌ಗಳಲ್ಲಿ ಊಟ ಆರ್ಡರ್ ಮಾಡುವವರ ಸಂಖ್ಯೆ ಶೇ. 300ರಷ್ಟು ಏರಿಕೆಯಾಗಿದೆ.

ರೈಲಿನಲ್ಲಿ ಭಾರತೀಯರು ಹೆಚ್ಚಾಗಿ ತಿನ್ನುವುದೇನು?

ಈ ಬೇಸಿಗೆಯಲ್ಲಿ ರೈಲು ಪ್ರಯಾಣಿಕರು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಆಹಾರಗಳ ದತ್ತಾಂಶ ಕೂಡ ಅಚ್ಚರಿಯ ಮಾಹಿತಿಯನ್ನು ಬಿಚ್ಚಿಟ್ಟಿದೆ.

  •  4 ಲಕ್ಷ ರೊಟ್ಟಿಗಳು: ತವಾ ರೊಟ್ಟಿ, ತಂದೂರಿ ರೊಟ್ಟಿ, ಫುಲ್ಕಾಗಳನ್ನು ಒಳಗೊಂಡಂತೆ ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ರೊಟ್ಟಿಗಳನ್ನು ರೈಲು ಪ್ರಯಾಣಿಕರು ಆರ್ಡರ್ ಮಾಡಿದ್ದಾರೆ. ಇದರ ಜೊತೆಗೆ ಮಸಾಲ ದೋಸೆ, ಆಲೂ ಪರಾಟ ಮತ್ತು ಮ್ಯಾಕ್ ಆಲೂ ಟಿಕ್ಕಿ ಬರ್ಗರ್‌ಗಳು ಹೆಚ್ಚು ಡಿಮ್ಯಾಂಡ್‌ನಲ್ಲಿದ್ದವು.
  •  ನಾನ್ ವೆಜ್‌ನಲ್ಲಿ ಬಿರಿಯಾನಿ ಕಿಂಗ್: ಮಾಂಸಾಹಾರಿ ಖಾದ್ಯಗಳಲ್ಲಿ ‘ಚಿಕನ್ ಬಿರಿಯಾನಿ’ ಅತಿ ಹೆಚ್ಚು ಆರ್ಡರ್ ಆದ ತಿನಿಸಾಗಿದೆ.
  •  ಬೇಸಿಗೆ ಪಾನೀಯಗಳ ಅಬ್ಬರ : ಬಿಸಿಲಿನ ತಾಪಕ್ಕೆ ತಂಪು ಪಾನೀಯಗಳ ಆರ್ಡರ್ ಶೇ. 354ರಷ್ಟು ಹೆಚ್ಚಾಗಿದೆ. ಇದರಲ್ಲಿ ‘ಮ್ಯಾಂಗೋ ಶೇಕ್’ ನಂಬರ್ 1 ಸ್ಥಾನದಲ್ಲಿದ್ದರೆ, ಲಸ್ಸಿ ಆರ್ಡರ್ ಶೇ. 100ರಷ್ಟು ಮತ್ತು ಐಸ್‌ಕ್ರೀಮ್ ಆರ್ಡರ್ ಶೇ. 140ರಷ್ಟು ಏರಿಕೆಯಾಗಿದೆ.

ಪ್ರದೇಶಕ್ಕೆ ತಕ್ಕಂತೆ ರುಚಿಯಲ್ಲಿ ಬದಲಾವಣೆ

ಉತ್ತರ ಭಾರತದ ಪ್ರಯಾಣಿಕರು ರೊಟ್ಟಿ, ಪರಾಟ ಮತ್ತು ಬರ್ಗರ್‌ಗಳಿಗೆ ಆದ್ಯತೆ ನೀಡಿದ್ದರೆ, ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ನೆಲ್ಲೂರು ಬಳಿ ದೋಸೆ ಅತಿ ಹೆಚ್ಚು ಆರ್ಡರ್ ಆಗಿದೆ. ವಿಜಯವಾಡದಲ್ಲಿ ಪ್ರತಿ 5 ಆರ್ಡರ್‌ಗಳಲ್ಲಿ ಒಂದು ಬಿರಿಯಾನಿಯಾಗಿರುತ್ತಿದೆ!

ಪೂರ್ವ ಭಾರತದಲ್ಲಿ ಥಾಲಿ, ಫ್ರೈಡ್ ರೈಸ್ ಹೆಚ್ಚಾಗಿದ್ದರೆ, ಗೋವಾ-ಮಾರ್ಗದಲ್ಲಿ (ಮಡಗಾಂವ್ ಜಂಕ್ಷನ್) ಬಿರಿಯಾನಿಯನ್ನು ಹಿಂದಿಕ್ಕಿ ಬರ್ಗರ್ ಅತಿ ಹೆಚ್ಚು ಮಾರಾಟವಾಗಿದೆ. ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ, ಹಲ್ದಿರಾಮ್ಸ್, ಪ್ಯಾರಡೈಸ್ ಬಿರಿಯಾನಿ ಮತ್ತು ಎ2ಬಿ (ಅಡ್ಯಾರ್ ಆನಂದ ಭವನ್) ಗಳು ಪ್ರಯಾಣಿಕರ ನೆಚ್ಚಿನ ಹೋಟೆಲ್‌ಗಳಾಗಿ ಹೊರಹೊಮ್ಮಿವೆ.

ಫುಡ್ ಆನ್ ಟ್ರೈನ್ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಸ್ವಿಗ್ಗಿಯ ಉಪಾಧ್ಯಕ್ಷ ದೀಪಕ್ ಮಾಲೂ, “ಕಳೆದ ಒಂದು ವರ್ಷದಲ್ಲಿ ಈ ಸೇವೆ ಭಾರಿ ಬೆಳವಣಿಗೆ ಕಂಡಿದೆ. ಮೆಟ್ರೋ ಸಿಟಿಗಳಷ್ಟೇ ಅಲ್ಲದೆ, ಸಣ್ಣ ಸಣ್ಣ ಪಟ್ಟಣಗಳಲ್ಲೂ ಜನರು ಇದೇ ಮೊದಲ ಬಾರಿಗೆ ಡಿಜಿಟಲ್ ಫುಡ್ ಆರ್ಡರ್ ಮಾಡಲು ನಮ್ಮ ಸೇವೆ ಕಾರಣವಾಗಿದೆ. ವಿಶೇಷವಾಗಿ ಮೇ ತಿಂಗಳ ಕೊನೆಯ ವಾರದಲ್ಲಿ ಕಾಲೇಜಿಗೆ ಮರಳುವ ವಿದ್ಯಾರ್ಥಿಗಳ ಆರ್ಡರ್‌ಗಳು ಶೇ. 70ರಷ್ಟು ಹೆಚ್ಚಾಗಿದ್ದವು. ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ 4 ದಿನ ಮುಂಚಿತವಾಗಿಯೇ ಊಟವನ್ನು ಬುಕ್ ಮಾಡಿಕೊಳ್ಳುತ್ತಿರುವುದು ಈ ಸೇವೆಯ ಯಶಸ್ಸಿಗೆ ಸಾಕ್ಷಿ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೊಬ್ಬ ‘ಅರುಂಧತಿ’ ಆಗುವ ಹಾದಿಯಲ್ಲಿ ರಶ್ಮಿಕಾ ಮಂದಣ್ಣ: ಕೈ ಹಿಡಿಯುತ್ತಾ ‘ಮೈಸಾ’ – Kannada News | Rashmika Mandanna keeps hopes on her next movie Mysa

ರಶ್ಮಿಕಾ ಮಂದಣ್ಣ (Rashmika Mandanna), ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಕಳೆದ ಕೆಲ ವರ್ಷಗಳಲ್ಲಿ ರಶ್ಮಿಕಾ ಅವರಿಗೆ ಸಿಕ್ಕಷ್ಟು ಯಶಸ್ಸು ಬಹುಷಃ ಇನ್ಯಾವ ಭಾರತೀಯ ನಟಿಗೂ ದೊರೆತಿಲ್ಲ. ಆದರೆ ಮದುವೆ ಆದ ಬಳಿಕ ರಶ್ಮಿಕಾ ಅವರ ಸಿನಿಮಾ ಆಯ್ಕೆ ವಿಧಾನದಲ್ಲಿ ಬದಲಾವಣೆಗಳಾಗಿವೆ. ಮದುವೆಯ ಬಳಿಕ ಅವರು ಮಹಿಳಾ ಪ್ರಧಾನ ಸಿನಿಮಾಗಳು, ‘ಹೋಮ್ಲಿ’ ಆದಂಥಹಾ ಪಾತ್ರಗಳನ್ನೇ ಹೆಚ್ಚು ಒಪ್ಪಿಕೊಳ್ಳಲು ನಿಶ್ಚಯಿಸಿದ್ದಾರೆ. ಈ ಹಿಂದೆ ಅವರ ನಟನೆಯ ಮಹಿಳಾ ಪ್ರಧಾನ ಸಿನಿಮಾ ‘ಗರ್ಲ್​ ಫ್ರೆಂಡ್’ ಹಿಟ್ ಆಗಿರುವುದು ಅವರಿಗೆ ಇನ್ನಷ್ಟು ಸ್ಪೂರ್ತಿಯನ್ನು ನೀಡಿದೆ. ಇದೀಗ ರಶ್ಮಿಕಾ, ಹೊಸದೊಂದು ಮಹಿಳಾ ಪ್ರಧಾನ ಸಿನಿಮಾನಲ್ಲಿ ನಟಿಸುತ್ತಿದ್ದು, ಸಿನಿಮಾ ಮೇಲೆ ರಶ್ಮಿಕಾ ದೊಡ್ಡ ನಿರೀಕ್ಷೆ ಇರಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ‘ಮೈಸಾ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದು, ಇದು ಭಿನ್ನ ಕತೆಯುಳ್ಳ ಆಕ್ಷನ್, ಹಾರರ್, ಥ್ರಿಲ್ಲರ್ ಆಗಿದೆ. ಸಿನಿಮಾನಲ್ಲಿ ರಶ್ಮಿಕಾ ಹಿಂದೆಂದೂ ಕಾಣದ ರೀತಿಯ ಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ತೆಲುಗು ಚಿತ್ರರಂಗದಲ್ಲಿ ಅಬ್ಬರ ಸೃಷ್ಟಿಸಿದ್ದ ‘ಅರುಂಧತಿ’ ಸಿನಿಮಾವನ್ನು ನೆನಪಿಸುವಂಥಹಾ ಕತೆಯನ್ನು, ಪಾತ್ರಗಳನ್ನು ಈ ಸಿನಿಮಾ ಒಳಗೊಂಡಿದೆಂತೆ. ‘ಮೈಸಾ’ ಸಿನಿಮಾದ ಪೋಸ್ಟರ್ ನೋಡಿದರೆ ಇದು ನಿಜವೇ ಎನಿಸುತ್ತದೆ.

ಬಿಡುಗಡೆ ಆಗಿರುವ ‘ಮೈಸಾ’ ಸಿನಿಮಾದ ಪೋಸ್ಟರ್​​ನಲ್ಲಿ ಗಾಢ ಕೆಂಪು ಸೀರೆ ತೊಟ್ಟಿರುವ ರಶ್ಮಿಕಾ, ಕೈಯಲ್ಲಿ ಆಯುಧ ಹಿಡಿದು, ಮುಖಕ್ಕೆ ರಕ್ತ ಮೆತ್ತಿಕೊಂಡು ದುರ್ಗೆಯ ರೀತಿ ಕಾಣುತ್ತಿದ್ದಾರೆ. ಅನುಷ್ಕಾ ಶೆಟ್ಟಿ ನಟಿಸಿದ್ದ ‘ಅರುಂಧತಿ’ ಸಿನಿಮಾದ ಪೋಸ್ಟರ್ ಸಹ ತುಸು ಹೀಗೆಯೇ ಇತ್ತು. ಇದೀಗ ‘ಮೈಸಾ’ ಸಹ ‘ಅರುಂಧತಿ’ ಮಾದರಿಯ ಸಿನಿಮಾ ಎನ್ನಲಾಗುತ್ತಿದೆ. ‘ಅರುಂಧತಿ’ ಸಿನಿಮಾದ ಬಳಿಕ ಅನುಷ್ಕಾ ಶೆಟ್ಟಿ, ತೆಲುಗು ಸಿನಿಮಾ ಪ್ರೇಮಿಗಳ ಮನಗಳಲ್ಲಿ ಶಾಶ್ವತವಾಗಿ ನೆಲೆಸಿಬಿಟ್ಟರು, ಈಗ ರಶ್ಮಿಕಾ ಸಹ ಅದೇ ಗುರಿ ಹೊಂದಿದಂತಿದೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಜೊತೆ ಸಿನಿಮಾ, ಶೂಟಿಂಗ್​ಗೆ ಹಾಜರಾದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಪ್ರಸ್ತುತ ಪತಿ ವಿಜಯ್ ದೇವಕರೊಂಡ ಜೊತೆಗೆ ‘ರಣಬಲಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ‘ಮೈಸಾ’ ಸಿನಿಮಾನಲ್ಲೂ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ನಟನೆಯ ‘ರಾಕಾ’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ತಮಿಳಿನ ಸ್ಟಾರ್ ನಟ ಅಜಿತ್ ಅವರೊಟ್ಟಿಗೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಎರಡು ಬಾಲಿವುಡ್ ಸಿನಿಮಾಗಳನ್ನು ಸಹ ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ‘ಪುಷ್ಪ 3’ ಸಿನಿಮಾ ಸಹ ಬರಲಿದ್ದು, ಅದರಲ್ಲಿ ಸಹ ರಶ್ಮಿಕಾ ಇರುವುದು ಖಾತ್ರಿ. ಒಟ್ಟಾರೆ ರಶ್ಮಿಕಾ ಸಖತ್ ಬ್ಯುಸಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶ್ವಾನ ಪ್ರಿಯರೇ ಗಮನಿಸಿ: ಜುಲೈ 18ರಂದು ಜಿಬಿಎ ವತಿಯಿಂದ ‘ಸೆಕೆಂಡ್ ಇನ್ನಿಂಗ್ಸ್’ ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಆಯೋಜನೆ – Kannada News | GBA to Host ‘Second Innings’ Dog Adoption Drive in Bengaluru on July 18

ಬೆಂಗಳೂರು, ಜುಲೈ 08: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಜುಲೈ 18 (ಶನಿವಾರ) ಮಧ್ಯಾಹ್ನ 3 ಗಂಟೆಗೆ ವೈಟ್‌ಫೀಲ್ಡ್‌ನ ನೆಕ್ಸಸ್ ಶಾಂತಿನಿಕೇತನ ಮಾಲ್ ನಲ್ಲಿ “ಸೆಕೆಂಡ್ ಇನ್ನಿಂಗ್ಸ್” ನಾಯಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಅಪಘಾತ ಅಥವಾ ಕ್ರೌರ್ಯಕ್ಕೆ ಬಲಿಯಾದ, ತಾಯಿ ಇಲ್ಲದ, ಆರೈಕೆ ಮತ್ತು ಚಿಕಿತ್ಸೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಆರೋಗ್ಯವಂತ ದೇಸಿ ತಳಿ ನಾಯಿಗಳನ್ನು ದತ್ತು ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ನಾಯಿಗಳ ಮಾಹಿತಿ ತಿಳಿಯೋದು ಹೇಗೆ?

https://drive.google.com/drive/folders/1qljNy3UQAv4Zi32cQ7DN1proDf-ZUDha ಲಿಂಕ್​​ಗೆ ಭೇಟಿ ನೀಡಿ ದತ್ತುಗೆ ಲಭ್ಯವಿರುವ ದೇಸಿ ನಾಯಿಗಳ ವಿವರಗಳನ್ನು ತಿಳಿಯಬಹುದಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಆರೋಗ್ಯವಂತ ದೇಸಿ ನಾಯಿಗಳನ್ನು ದತ್ತು ಪಡೆದು ಅವುಗಳಿಗೆ ಹೊಸ ಜೀವನ ನೀಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಾರ್ವಜನಿಕರಿಗೆ ಮನವಿ ಮಾಡಿದೆ.

ಇದನ್ನೂ ಓದಿ: ಬೀದಿ ನಾಯಿಗಳು ಕಚ್ಚಿದ್ರೆ ಸರ್ಕಾರವೇ ಪರಿಹಾರ ನೀಡಬೇಕು; ಸುಪ್ರೀಂ

 ನಟ ಮಾಸ್ಟರ್ ಆನಂದ್ ಮನವಿ

ಶಾಶ್ವತ ಪ್ರೀತಿಯ ಮನೆಯ ನಿರೀಕ್ಷೆಯಲ್ಲಿರುವ ಸ್ಥಳೀಯ (ದೇಸಿ) ನಾಯಿಗಳನ್ನು ದತ್ತು ಪಡೆದು ಅವುಗಳಿಗೆ ಹೊಸ ಜೀವನ ನೀಡುವಂತೆ ಖ್ಯಾತ ಕನ್ನಡ ನಟ ಮಾಸ್ಟರ್ ಆನಂದ್ ಅವರು ಕೂಡ ಶ್ವಾನ ಪ್ರಿಯರಿಗೆ ಕರೆ ನೀಡಿದ್ದಾರೆ. ಈ ದತ್ತು ಸ್ವೀಕಾರ ಅಭಿಯಾನದಲ್ಲಿ ಭಾಗವಹಿಸಿ, ಆರೋಗ್ಯವಂತ ದೇಸಿ ನಾಯಿಯನ್ನು ದತ್ತು ಪಡೆಯುವ ಮೂಲಕ ಅವುಗಳ ಬದುಕಿಗೆ ಹೊಸ ಭರವಸೆ ಮತ್ತು ಪ್ರೀತಿಯ ನೆಲೆ ನೀಡೋಣ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:24 pm, Wed, 8 July 26

Source link

ICC Rankings: ರನ್ ಗಳಿಸದ ಕಿಶನ್​ಗೆ ಅಗ್ರಸ್ಥಾನ; ರನ್ ಗಳಿಸಿದ ಅಭಿಷೇಕ್​ಗೆ 2ನೇ ಸ್ಥಾನ

Source link

ರಾಮ ಮಂದಿರದ ಬೆನ್ನಲ್ಲೇ ಮಧ್ಯಪ್ರದೇಶದ ಬಾಗಲಾಮುಖಿ ದೇವಸ್ಥಾನದಲ್ಲೂ ಭುಗಿಲೆದ್ದ ದೇಣಿಗೆ ಕಳ್ಳತನ ವಿವಾದ – Kannada News | After Ayodhya Ram Mandir row Baglamukhi Temple donation theft controversy erupts

ಭೋಪಾಲ್, ಜುಲೈ 8: ಅಯೋಧ್ಯೆಯ ರಾಮ ಮಂದಿರದ ದೇಣಿಗೆಗೆ (Ram Mandir Donation Theft Row) ಸಂಬಂಧಿಸಿದಂತೆ ಇತ್ತೀಚೆಗೆ ಭಾರೀ ವಿವಾದ ಭುಗಿಲೆದ್ದಿದೆ. ಭಕ್ತರಿಂದ ಸಂಗ್ರಹಿಸಲಾಗಿದ್ದ ಎದ್ದಿದ್ದ ವಿವಾದದ ಬೆನ್ನಲ್ಲೇ, ಈಗ ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯ ನಲ್ಖೇಡಾ ಬಳಿಯ ಪ್ರಸಿದ್ಧ ‘ಮಾ ಬಾಗಲಾಮುಖಿ’ ದೇವಸ್ಥಾನದಲ್ಲೂ ದೇಣಿಗೆ ದುರುಪಯೋಗದ ಬಗ್ಗೆ ಹೊಸ ವಿವಾದ ಭುಗಿಲೆದ್ದಿದೆ. ಈ ದೇವಸ್ಥಾನಕ್ಕೆ ದೇಶದ ನಾನಾ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರಿದ್ದಾರೆ. ಈ ಭಕ್ತರು ದೇವಸ್ಥಾನಕ್ಕೆ ನೀಡಿರುವ ಕಾಣಿಕೆ ಮತ್ತು ದೇಣಿಗೆ ನಿರ್ವಹಣೆಯಲ್ಲಿ ಭಾರಿ ಹಣಕಾಸು ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿಬಂದಿದೆ.

ಈ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಈ ಪ್ರಕರಣದ ತನಿಖೆಗಾಗಿ 3 ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, 7 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಗರ್ ಮಾಲ್ವಾ ಜಿಲ್ಲಾಧಿಕಾರಿ ಪ್ರೀತಿ ಯಾದವ್ ಹೊರಡಿಸಿರುವ ಆದೇಶದ ಪ್ರಕಾರ, ಬಾಗಲಾಮುಖಿ ದೇವಸ್ಥಾನದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಮಿತಿಯೊಂದು ಸರ್ಕಾರಿ ಸ್ವಾಮ್ಯದ ಅಧಿಕೃತ ದೇವಸ್ಥಾನ ನಿರ್ವಹಣಾ ಸಮಿತಿಯ ಬದಲು ಭಕ್ತರಿಂದ ನಗದು ಹಣ, ಚಿನ್ನ ಮತ್ತು ಬೆಳ್ಳಿ ಕಾಣಿಕೆಗಳನ್ನು ಸಂಗ್ರಹಿಸುತ್ತಿದೆ ಎಂದು ಜಿಲ್ಲಾಡಳಿತಕ್ಕೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಲಾಗಿದೆ.

ಇದನ್ನೂ ಓದಿ: ರಾಮ ಮಂದಿರದ ಬೆನ್ನಲ್ಲೇ ಬದರಿನಾಥ ದೇವಾಲಯದಲ್ಲೂ ದೇಣಿಗೆ ಹಗರಣದ ಸದ್ದು, ತನಿಖೆಗೆ ಹೈಲೆವೆಲ್ ಕಮಿಟಿ ರಚನೆ

ಈ ದೇವಸ್ಥಾನಕ್ಕೆ ಭಕ್ತರು ನೀಡುವ ದೇಣಿಗೆಯನ್ನು ನಿರ್ವಹಿಸಲು ಈ ಖಾಸಗಿ ಸಮಿತಿಯು ತನ್ನದೇ ಆದ ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ಬಳಸುತ್ತಿದ್ದು, ದೇವಸ್ಥಾನದ ನಿಧಿಯ ದುರುಪಯೋಗ ಮಾಡಿಕೊಳ್ಳುತ್ತಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಗಂಭೀರ ಆರೋಪಗಳನ್ನು ಪರಿಗಣಿಸಿದ ಜಿಲ್ಲಾಧಿಕಾರಿಗಳು, ಸತ್ಯವನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (CEO) ಬಿ.ಎಸ್. ಸೋಲಂಕಿ ನೇತೃತ್ವದಲ್ಲಿ 3 ಸದಸ್ಯರ ತನಿಖಾ ಸಮಿತಿಯನ್ನು ನೇಮಿಸಿದೆ. ಜಿಲ್ಲಾ ಖಜಾನೆ ಅಧಿಕಾರಿ ಮನೀಶ್ ಸೋಲಂಕಿ ಮತ್ತು ನಲ್ಖೇಡಾ ನಗರ ಪರಿಷತ್ತಿನ ಮುಖ್ಯ ಮುನ್ಸಿಪಲ್ ಅಧಿಕಾರಿ ಮಿನ್ನಿ ಅಗರ್ವಾಲ್ ಅವರನ್ನು ಈ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ. ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ 7 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.

ಈ ತನಿಖೆಯ ಭಾಗವಾಗಿ ಸಮಿತಿಯು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ. ಈ ಅಕ್ರಮದಲ್ಲಿ ದೇವಸ್ಥಾನದ ಯಾವುದಾದರೂ ಅಧಿಕಾರಿ, ಉದ್ಯೋಗಿ, ನಿರ್ವಹಣಾ ಸಮಿತಿಯ ಪ್ರತಿನಿಧಿಯ ಪಾತ್ರವಿದೆಯೇ ಎಂಬುದನ್ನು ತನಿಖೆ ಮಾಡಲಾಗುತ್ತದೆ. ನಿಗದಿತ ಅವಧಿಯಲ್ಲಿ ಎಲ್ಲಾ ಪುರಾವೆಗಳನ್ನು ಸಂಗ್ರಹಿಸಿ, ಶಿಫಾರಸುಗಳೊಂದಿಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸಮಿತಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ: 45 ದಿನಗಳಲ್ಲಿ 70 ಬಾರಿ ಕಳ್ಳತನ, ಟ್ರಸ್ಟಿ ಅನಿಲ್ ಮಿಶ್ರಾ ವಿರುದ್ಧ ತನಿಖೆ

ಬಾಗಲಾಮುಖಿ ದೇವಾಲಯದ ಹಿನ್ನೆಲೆ:

ನಲ್ಖೇಡಾದಲ್ಲಿರುವ ಮಾ ಬಾಗಲಾಮುಖಿ ದೇವಸ್ಥಾನವು ದೇಶದ ಅತ್ಯಂತ ಪವಿತ್ರ ಮತ್ತು ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾಗಿದೆ. ಇಲ್ಲಿಗೆ ವರ್ಷಪೂರ್ತಿ ಸಾವಿರಾರು ಭಕ್ತರು ಮತ್ತು ಗಣ್ಯರು ಭೇಟಿ ನೀಡುತ್ತಾರೆ. ದೇವಸ್ಥಾನಕ್ಕೆ ಭಾರಿ ಪ್ರಮಾಣದ ಕಾಣಿಕೆ ಹರಿದುಬರುವುದರಿಂದ, ದೇಣಿಗೆ ನಿರ್ವಹಣೆಗೆ ಸಂಬಂಧಿಸಿದ ಆರೋಪಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆ ಮಾಲೀಕರು, ಬಾಡಿಗೆದಾರರು ಆತಂಕ ಪಡಬೇಕಾಗಿಲ್ಲ: ಗೃಹ ಜ್ಯೋತಿ ಬಗ್ಗೆ ಬೆಸ್ಕಾಂ ನೀಡಿದ ಮಾಹಿತಿ ಹೀಗಿದೆ – Kannada News | Tenants needn’t worry: here Is Bescom Gives Information about Gruha jyothi scheme

ಬೆಂಗಳೂರು, (ಜುಲೈ 8): 2023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿರುವ ಗೃಹ ಜ್ಯೋತಿ ಯೋಜನೆಯ (Gruha jyothi scheme) ಪುನರ್ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಬೆಸ್ಕಾಂ (bescom)  ಮಾಹಿತಿ ನೀಡಿದೆ. ಅದರಲ್ಲೂ ಮುಖ್ಯವಾಗೊ ಬಾಡಿಗೆದಾರರ ಗೊಂದಲಗಳಿಗೆ ಸ್ಪಷ್ಟನೆ ನೀಡಿದೆ.  ಎಸ್ಕಾಂಗಳ ಮೀಟರ್ ರೀಡರ್ ಗಳು ಹಾಗೂ ಎಸ್ಕಾಂ ಸಿಬ್ಬಂದಿ ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ದಾಖಲೆ ಪರಿಶೀಲನೆ ನಡೆಸಿ ಅವರ ಮಾಹಿತಿ ಸಂಗ್ರಹಿಸಿ, ಘೋಷಣಾ ಪತ್ರ ಮೂಲಕ ಸಿಬ್ಬಂದಿಯೇ ಅರ್ಜಿ ಭರ್ತಿ ಮಾಡುವ ಪ್ರಕ್ರಿಯೆನ್ನು ಪೂರ್ಣಗೊಳಿಸಲಿದ್ದಾರೆ. ಹೀಗಾಗಿ ಎಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ ಸಂದರ್ಭದಲ್ಲಿ ಈ ಕೆಳಗಿನ ದಾಖಲೆಗಳನ್ನು ಸಿದ್ದವಿಟ್ಟುಕೊಂಡು ಸಿಬ್ಬಂದಿಗೆ ತೋರಿಸಲು ಬೆಸ್ಕಾಂ ವಿನಂತಿಸಿದೆ.

ಬಾಡಿಗೆದಾರರು ಆತಂಕಪಡಬೇಕಿಲ್ಲ

ಬೆಸ್ಕಾಂ ಮೀಟರ್ ರೀಡರ್ ಹಾಗೂ ಸಿಬ್ಬಂದಿ ಫಲಾನುಭವಿಗಳ ಮನೆ ಮನೆ ಸಮೀಕ್ಷೆ ಕಾರ್ಯ ನಡೆಸುವ ವೇಳೆ ಹಳೆ ಬಾಡಿಗೆದರರ ಆಧಾರ್ ವಿವರ ತೆಗೆದು ಹಾಕಿ ಈಗಿರುವ ಬಾಡಿಗೆದಾರರ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳಲಾಗುವುದು, ಹಾಗಾಗಿ ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಆತಂಕ ಬೇಡ. ಈ ಹಿಂದೆ ಇದ್ದ ಬಾಡಿಗೆದಾರರ ಆಧಾರ್ ಮಾಹಿತಿಯಿಂದಾಗಿ ತಮಗೆ ಯೋಜನೆ ಸ್ಥಗಿತಗೊಳ್ಳಲಿದೆಯೇ ಎಂಬ ಆತಂಕ ಈಗಿರುವ ಬಾಡಿಗೆದಾರರಿಗೆ ಬಂದಿರಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಗೃಹ ಜ್ಯೋತಿ ಯೋಜನೆ: ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? 5 ಹಂತಗಳು ಇಲ್ಲಿದೆ ನೋಡಿ

ಯಾವೆಲ್ಲಾ ದಾಖಲೆಗಳು ತೋರಿಸಬೇಕು?

ಆಧಾರ್ ಕಾರ್ಡ್, ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ , ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ), ರೇಷನ್ ಕಾರ್ಡ್ ತೋರಿಸಲು ಕೋರಲಾಗಿದೆ. ಈ ಪ್ರಕ್ರಿಯೆಗೆ ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದ್ದು, ಗ್ರಾಹಕರು ಮತ್ತು ಫಲಾನುಭವಿಗಳು ಮೀಟರ್ ರೀಡರ್ ಗಳಿಗೆ ಸಂಪೂರ್ಣ ಸಹಕಾರ ನೀಡಿ, ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಂಧನ ಇಲಾಖೆ ಮನವಿ ಮಾಡಿದೆ. ರಾಜ್ಯದ ಐದು ಎಸ್ಕಾಂಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಹಾಗೂ ಸೆಸ್ಕ್ ಗಳ ವ್ಯಾಪ್ತಿಯಲ್ಲಿ ಪರಿಶೀಲನಾ ಕಾರ್ಯ ನಡೆಯಲಿದೆ.

ಪ್ರವರ್ಗ ಮಾಹಿತಿ ಕಡ್ಡಾಯವಲ್ಲ

ಗೃಹಜ್ಯೋತಿ ಫಲಾನುಭವಿಗಳ ಮಾಹಿತಿ ಪರಿಶೀಲನೆ ವೇಳೆ ಫಲಾನುಭವಿಯ ಪ್ರವರ್ಗದ (ಜಾತಿ ಪ್ರಮಾಣಪತ್ರ) ಸಂಬಂಧಿಸಿದ ಮಾಹಿತಿ ಕೇವಲ ಐಚ್ಛಿಕವಾಗಿದೆ. ಫಲಾನುಭವಿಗಳ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಪ್ರಶ್ನೆಗೆ ಸಂಬಂಧಿಸಿದಂತೆ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ.

ಫಲಾನುಭವಿಗಳಿಗೆ ಜಾತಿ ಮಾಹಿತಿ ನೀಡಲು ಇಷ್ಟವಿಲ್ಲದಿದ್ದರೆ ಮೊಬೈಲ್ ಅಪ್ಲಿಕೇಷನ್ ನಲ್ಲಿರುವ ʼಮಾಹಿತಿ ನೀಡಲು ನಿರಾಕರಣೆʼ ಎಂಬ ಆಯ್ಕೆಯನ್ನು ನಮೂದಿಸಲು ಸಿಬ್ಬಂದಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಹೆಚ್ಚಿನ ಮಾಹಿತಿ ಅಥವಾ ಗೊಂದಲಗಳಿದ್ದಲ್ಲಿ ಗ್ರಾಹಕರು ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.

ಸಹಾಯವಾಣಿ ಸಂಖ್ಯೆ: 9480816111, 9480816112, 9480816113, 9480816114 (ಸಹಾಯವಾಣಿಯು ಪ್ರತಿದಿನ ಬೆಳಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಲಭ್ಯವಿರುತ್ತದೆ).

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೊಂದು ಸಾಹಸಕ್ಕೆ ಕೈಹಾಕಿದ ಸರ್ಕಾರ: ಬಿಡದಿ ರೀತಿಯಲ್ಲೇ ಮತ್ತೊಂದು ಟೌನ್​​​ಶಿಪ್, ಎಲ್ಲಿ? – Kannada News | Karnataka Government Plans Another Township Like Bidadi: Here’s Where It Will Be Developed

ಸಿಎಂ ಡಿಕೆ ಶಿವಕುಮಾರ್​​ Image Credit source: tv9 kannada

ಬೆಂಗಳೂರು, ಜುಲೈ 08: ಬಿಡದಿ ಟೌನ್​ಶಿಪ್​ ಯೋಜನೆಗೆ (Bidadi Township Project) ಈಗಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಹೀಗಿರುವಾಗ ರಾಜ್ಯ ಸರ್ಕಾರ ಮತ್ತೊಂದು ಸಾಹಸಕ್ಕೆ ಕೈಹಾಕಿದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಸಮಗ್ರ ಟೌನ್‌ಶಿಪ್‌ ನಿರ್ಮಾಣ ಯೋಜನೆಗೆ (KGF township project) ಇದೀಗ ಮರುಜೀವ ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಸಮಗ್ರ ವರದಿ ಹಾಗೂ ಮಾರ್ಗಸೂಚಿ ಸಿದ್ಧಪಡಿಸಲು ಅರ್ಹ ಸಲಹೆಗಾರರ ನೇಮಕಕ್ಕೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಟೆಂಡರ್ ಆಹ್ವಾನಿಸಿದೆ.

ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಸಮಗ್ರ ಟೌನ್‌ಶಿಪ್‌ ನಿರ್ಮಾಣ ಯೋಜನೆ

ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಈ ಬೃಹತ್ ಯೋಜನೆಗೆ ಮರುಜೀವ ಕಲ್ಪಿಸಲು ಇದೀಗ ಸರ್ಕಾರ ಮುಂದಾಗಿದೆ. ಆಯ್ಕೆಗೊಳ್ಳುವ ಸಲಹೆಗಾರರು ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಸಮಗ್ರ ಟೌನ್‌ಶಿಪ್‌ ನಿರ್ಮಾಣ ಯೋಜನೆಯ ಆರ್ಥಿಕತೆ ಸೇರಿದಂತೆ ತಾಂತ್ರಿಕ ಕಾರ್ಯಗಳ ವರದಿಯನ್ನು ಸಿದ್ಧಪಡಿಸುವುದು, ಮಾರುಕಟ್ಟೆಯ ಬೇಡಿಕೆಯನ್ನು ಪರಿಶೀಲಿಸುವುದು, ಭೂಮಿಯ ಮೌಲ್ಯ ಹಾಗೂ ಸೂಕ್ತವಾದ ಪಿಪಿಪಿ ಮಾದರಿಯನ್ನು ಸರ್ಕಾರಕ್ಕೆ ಶಿಫಾರಸು ಮಾಡಲಿದ್ದಾರೆ.

ಇದನ್ನೂ ಓದಿ: ಬಿಡದಿ ಟೌನ್​ಶಿಪ್ ವಿರೋಧಿಸಿ ಅಪ್ಪಿಕೋ ಚಳವಳಿ: ರಾಜ್ಯವ್ಯಾಪಿ ಜನಾಂದೋಲನಕ್ಕೆ ಹೆಚ್​ಡಿ ಕುಮಾರಸ್ವಾಮಿ ತಂತ್ರ

ಇನ್ನು ದೇಶ-ವಿದೇಶಗಳಲ್ಲಿನ ಯಶಸ್ವಿ ಟೌನ್‌ಶಿಪ್​ ಯೋಜನೆಗಳ ಅಧ್ಯಯನ ಮಾಡಿ, ರಾಜ್ಯದಲ್ಲಿ ಹಂತ-ಹಂತವಾಗಿ ಯೋಜನೆಯನ್ನು ಹೇಗೆ ಜಾರಿಗೊಳಿಸಬೇಕು ಮತ್ತು ಅದರಿಂದ ಸರ್ಕಾರಕ್ಕೆ ಹೇಗೆ ಆದಾಯವಾಗಲಿದೆ ಎಂಬ ಕುರಿತಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಿದ್ದಾರೆ.

ಯೋಜನೆಯ ಹಿನ್ನೆಲೆ

ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಕೆಜಿಎಫ್, ಒಂದು ಕಾಲದಲ್ಲಿ ಭಾರತದ ಅತಿ ದೊಡ್ಡ ಚಿನ್ನದ ಗಣಿ ಕೇಂದ್ರವಾಗಿತ್ತು. 2001ರಲ್ಲಿ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಬಂದ್​​ ಆಗುವುದಕ್ಕೂ ಮುನ್ನ ಸುಮಾರು 800 ಟನ್ ಚಿನ್ನವನ್ನು ಉತ್ಪಾದಿಸಲಾಗುತ್ತಿತ್ತು. ಆದರೆ, ಆ ನಂತರ ಈ ಭಾಗದಲ್ಲಿ ಯಾವುದೇ ಪ್ರಮುಖ ಕೈಗಾರಿಕಾ ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ. ಹೀಗಾಗಿ ಸ್ಥಳೀಯರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಪ್ರಯಾಣಿಸುವ ಅನಿವಾರ್ಯ ಉಂಟಾಗಿತ್ತು.

960 ಎಕರೆ ಭೂಮಿ

ಈ ನಿಟ್ಟಿನಲ್ಲಿ ಕಳೆದ ವರ್ಷ ಅಂದರೆ 2025ರ ಮಾರ್ಚ್‌ನಲ್ಲಿ ಅಂದಿನ ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್​ ಬಿಜಿಎಂಎಲ್‌ಗೆ ಸೇರಿದ ಜಾಗದಲ್ಲಿ ಟೌನ್‌ಶಿಪ್‌ ನಿರ್ಮಿಸುವುದಾಗಿ ಹೇಳಿದ್ದರು. ಅದರಂತೆ ಯೋಜನೆಯ ಮೊದಲ ಹಂತವಾಗಿ ಸುಮಾರು 300 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಸದ್ಯ ಬಿಜಿಎಂಎಲ್‌ ಒಡೆತನದ ಸುಮಾರು 960 ಎಕರೆ ಭೂಮಿ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿದೆ.

ಇದನ್ನೂ ಓದಿ: ಟೌನ್​​ಶಿಪ್ ವಿವಾದ: ಕುಮಾರಸ್ವಾಮಿ ಹಣ ಕೊಟ್ಟ ಹೊರಗಿನವರನ್ನ ಕರೆಸಿದ್ರಾ? ಭುಗಿಲೆದ್ದ ಆಕ್ರೋಶ

ಇನ್ನು ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಚೆನೈ-ಬೆಂಗಳೂರು ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು ಬಳಸಿಕೊಂಡು, ಈ ಹೊಸ ಟೌನ್‌ಶಿಪ್ ಮೂಲಕ ಕೆಜಿಎಫ್‌ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಹೂಡಿಕೆದಾರರನ್ನು ಸೆಳೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಸತ್ಲುಜ್’ ಸಿನಿಮಾ ವಿವಾದ; ಒಟಿಟಿ ಬ್ಯಾನ್ ಬೆನ್ನಲ್ಲೇ ಐಎಂಡಿಬಿ ರೇಟಿಂಗ್ ಮಾಯ – Kannada News | Diljit Dosanjh Satluj Movie Controversy after OTT Ban now IMDb Rating not available

ಬಾಲಿವುಡ್ ಮತ್ತು ಪಂಜಾಬಿ ಚಿತ್ರರಂಗದ ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅಭಿನಯದ ‘ಸತ್ಲುಜ್’ (Satluj) ಸಿನಿಮಾ ದಿನಕ್ಕೊಂದು ಹೊಸ ವಿವಾದದ ಮೂಲಕ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನಾಧಾರಿತ ಈ ಬಯೋಪಿಕ್, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ಈಗ ಈ ಚಿತ್ರದ ಅಧಿಕೃತ ಐಎಂಡಿಬಿ (IMDb) ರೇಟಿಂಗ್ಸ್ ದಿಢೀರನೆ ನಾಪತ್ತೆಯಾಗಿದೆ.

ಬುಧವಾರ (ಜುಲೈ 8) ಮಧ್ಯಾಹ್ನದವರೆಗೆ ಆಲಿಯಾ ಭಟ್ ನಟನೆಯ ‘ಆಲ್ಫಾ’ ಮತ್ತು ಅಕ್ಷಯ್ ಕುಮಾರ್ ಅವರ ‘ವೆಲ್ಕಮ್ ಟು ದಿ ಜಂಗಲ್’ ನಂತಹ ಇತ್ತೀಚಿನ ಚಿತ್ರಗಳ ಐಎಂಡಿಬಿ ರೇಟಿಂಗ್ಸ್ ಕಾಣಿಸುತ್ತಿದ್ದವು. ಆದರೆ, ಈ ಹಿಂದೆ ‘ಪಂಜಾಬ್ 95’ ಎಂದು ಹೆಸರಿಡಲಾಗಿದ್ದ, ಸದ್ಯ 9.5ರಷ್ಟು ಭರ್ಜರಿ ರೇಟಿಂಗ್ ಹೊಂದಿದ್ದ ‘ಸತ್ಲುಜ್’ ಚಿತ್ರದ ರೇಟಿಂಗ್ ಪುಟ ಮಾತ್ರ ಸಂಪೂರ್ಣವಾಗಿ ಕಾಣೆಯಾಗಿದೆ.

ಎರಡು ದಿನದಲ್ಲೇ ಒಟಿಟಿಯಿಂದ ಔಟ್:

ಕಳೆದ ವಾರವಷ್ಟೇ ಈ ಸಿನಿಮಾ ಯಾವುದೇ ಮುನ್ಸೂಚನೆ ಇಲ್ಲದೆ Zee5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿತ್ತು. ಆದರೆ ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಈ ಚಿತ್ರವನ್ನು ಒಟಿಟಿಯಿಂದ ಕಿತ್ತೊಗೆಯಲಾಗಿತ್ತು. ಇದಕ್ಕೂ ಮುನ್ನ, ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಬರೋಬ್ಬರಿ 127 ಕಟ್‌ಗಳನ್ನು ಸೂಚಿಸಿತ್ತು. ಆದರೆ ಚಿತ್ರದ ನಿರ್ದೇಶಕ ಹನಿ ಟ್ರೆಹಾನ್, ‘ಒಂದೇ ಒಂದು ಸೀನ್ ಕಟ್ ಮಾಡಿದರೂ ನಾವು ಚಿತ್ರದೊಂದಿಗೆ ನಮ್ಮ ಹೆಸರನ್ನು ಉಳಿಸಿಕೊಳ್ಳುವುದಿಲ್ಲ’ ಎಂದು ಪಟ್ಟು ಹಿಡಿದಿದ್ದರು.

ಸಂಜಯ್ ಗುಪ್ತಾ ಆಕ್ರೋಶ:

ಚಿತ್ರದ ಐಎಂಡಿಬಿ ರೇಟಿಂಗ್ ಡಿಲೀಟ್ ಆಗಿರುವುದನ್ನು ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಸಂಜಯ್ ಗುಪ್ತಾ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ನಿನ್ನೆ ರಾತ್ರಿವರೆಗೂ ಈ ಚಿತ್ರಕ್ಕೆ 9.5 ರೇಟಿಂಗ್ ಇತ್ತು. ಇಂದು ಅದು ಮಾಯವಾಗಿದೆ. ನಾನೇನೂ ಐಎಂಡಿಬಿ ರೇಟಿಂಗ್ಸ್ ಅನ್ನು ಹೆಚ್ಚು ನಂಬುವುದಿಲ್ಲ. ಆದರೆ, ಇವೆಲ್ಲ ಎಷ್ಟು ಬೋಗಸ್ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಪ್ರಮಾಣಪತ್ರ ಪಡೆಯದೇ ‘ಸತ್ಲುಜ್’ ಸಿನಿಮಾ ಬಿಡುಗಡೆ: ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆರೋಪ

ಪೈರಸಿ ಲಿಂಕ್ ಹಂಚಿಕೊಳ್ಳಲು ಕರೆ ನೀಡಿದ ದಿಲ್ಜಿತ್:

ಸಿನಿಮಾವನ್ನು ಜೀ5 ಒಟಿಟಿಯಿಂದ ತೆಗೆದುಹಾಕಿದ ನಂತರ ನಟ ದಿಲ್ಜಿತ್ ದೋಸಾಂಜ್ ಇನ್‌ಸ್ಟಾಗ್ರಾಮ್ ಲೈವ್ ಬಂದು ಅಭಿಮಾನಿಗಳೊಂದಿಗೆ ಮಾತನಾಡಿದರು. ‘ಈಗಾಗಲೇ ಯಾರೆಲ್ಲಾ ಸಿನಿಮಾವನ್ನು ಡೌನ್‌ಲೋಡ್ ಮಾಡಿಕೊಂಡಿದ್ದೀರೋ, ಅವರೆಲ್ಲ ಇದರ ಲಿಂಕ್‌ಗಳನ್ನು ಬೇರೆಯವರಿಗೂ ತಲುಪಿಸಿ. ಈ ಸಿನಿಮಾವನ್ನು ಇನ್ಮುಂದೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಪರೋಕ್ಷವಾಗಿ ಪೈರಸಿಗೆ ಬೆಂಬಲ ನೀಡಿದರು. ಮತ್ತೊಂದೆಡೆ ಪ್ರಕಟಣೆ ಹೊರಡಿಸಿರುವ Zee5 ಸಂಸ್ಥೆಯು, ಚಿತ್ರವನ್ನು ಶೀಘ್ರದಲ್ಲೇ ಮತ್ತೆ ಒಟಿಟಿಗೆ ತರಲು ಪ್ರಯತ್ನಿಸುತ್ತಿದ್ದು, ಅಲ್ಲಿಯವರೆಗೆ ಯಾರೂ ಪೈರೇಟೆಡ್ ಲಿಂಕ್‌ಗಳನ್ನು ಬಳಸಬೇಡಿ ಎಂದು ವೀಕ್ಷಕರಲ್ಲಿ ಮನವಿ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version