ರಾಮ ಮಂದಿರ ಹುಂಡಿ ಎಣಿಕೆ ಲೂಟಿ ಮಧ್ಯೆ ಅನುಮಾನಕ್ಕೆ ಎಡೆ ಮಾಡಿಕೊಟ್ಟ ಅಂಜನಾದ್ರಿ ಹುಂಡಿ ಎಣಿಕೆ – Kannada News | Koppal Anjanadri Hill Hundi: Rs 71.77 Lakh and Foreign Currency Found Amidst Delays

ಕೊಪ್ಪಳ, ಜು.7: ಅಯೋಧ್ಯೆಯ ರಾಮ ಮಂದಿರದ ಹುಂಡಿ ಎಣಿಕೆ ವೇಳೆ ಲೂಟಿ ನಡೆದಿರುವ ವಿವಾದದ ಬೆನ್ನಲ್ಲೇ, ಈಗ ಹನುಮ ಜನ್ಮ ಸ್ಥಳವಾದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಸಿದ್ಧ ಅಂಜನಾದ್ರಿ ಬೆಟ್ಟದ (Anjanadri Hill) ಹುಂಡಿ ಎಣಿಕೆ ಪ್ರಕ್ರಿಯೆಯೂ ತೀವ್ರ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹುಂಡಿ ಎಣಿಕೆ ಕಾರ್ಯ ಮುಗಿದು ನಾಲ್ಕು ದಿನ ಕಳೆದರು ಯಾವುದೇ ಮಾಹಿತಿ ನೀಡದೆ, ತಡವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ತಾಲೂಕು ಆಡಳಿತದ ನಡೆ ಸದ್ಯ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

ಜುಲೈ 3ರಂದು (ಶುಕ್ರವಾರ) ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣದ ಎಣಿಕೆ ಕಾರ್ಯ ನಡೆದಿತ್ತು. ಸಾಮಾನ್ಯವಾಗಿ ಹುಂಡಿ ಎಣಿಕೆ ಮುಗಿದ ತಕ್ಷಣವೇ ಇಲಾಖೆಯು ಸಂಗ್ರಹವಾದ ಮೊತ್ತದ ಅಧಿಕೃತ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತದೆ. ಆದರೆ, ಈ ಬಾರಿ ಎಣಿಕೆ ಮುಗಿದು 4 ದಿನಗಳ ಕಾಲ ತಾಲೂಕು ಆಡಳಿತ ಮೌನ ವಹಿಸಿದ್ದು, ಇಂದು ಜುಲೈ 7 ರಂದು ತಡವಾಗಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ರಾಮ ಮಂದಿರದ ಹುಂಡಿ ವಿವಾದದ ಮಧ್ಯೆ ಅಧಿಕಾರಿಗಳು ಈ ರೀತಿ ನಡೆದುಕೊಂಡಿರುವುದು ಹನುಮ ಭಕ್ತರಲ್ಲಿ ಹಲವು ಸಂಶಯಗಳನ್ನು ಹುಟ್ಟುಹಾಕಿದೆ.

94 ದಿನಗಳಲ್ಲಿ ಬರೊಬ್ಬರಿ 71.77 ಲಕ್ಷ ರೂ. ಸಂಗ್ರಹ:

ಇದಕ್ಕೂ ಮುನ್ನ ಮಾರ್ಚ್ 23 ರಂದು ಅಂಜನಾದ್ರಿಯ ಹುಂಡಿ ಎಣಿಕೆ ಮಾಡಲಾಗಿತ್ತು. ಅದಾಗಿ ಕಳೆದ 94 ದಿನಗಳ ಅವಧಿಯಲ್ಲಿ ಭಕ್ತರು ದೇವಸ್ಥಾನದ ಹುಂಡಿಗೆ ಭರಪೂರ ಕಾಣಿಕೆ ಅರ್ಪಿಸಿದ್ದಾರೆ. ಪ್ರಸ್ತುತ ಜುಲೈ 3 ರಂದು ನಡೆದ ಎಣಿಕೆಯಲ್ಲಿ ಒಟ್ಟು 71,77,460 ರೂಪಾಯಿ ನಗದು ಹಣ ಸಂಗ್ರಹವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ: 45 ದಿನಗಳಲ್ಲಿ 70 ಬಾರಿ ಕಳ್ಳತನ, ಟ್ರಸ್ಟಿ ಅನಿಲ್ ಮಿಶ್ರಾ ವಿರುದ್ಧ ತನಿಖೆ

ಹುಂಡಿಯಲ್ಲಿ ಪತ್ತೆಯಾದ ವಿದೇಶಿ ಕರೆನ್ಸಿಗಳು:

ಈ ಬಾರಿಯ ಕಾಣಿಕೆಯಲ್ಲಿ ಭಾರತೀಯ ಕರೆನ್ಸಿ ಮಾತ್ರವಲ್ಲದೆ ಗಣನೀಯ ಪ್ರಮಾಣದಲ್ಲಿ ವಿದೇಶಿ ನೋಟುಗಳು ಸಹ ಪತ್ತೆಯಾಗಿವೆ. ದೇಶ-ವಿದೇಶಗಳಿಂದ ಅಂಜನಾದ್ರಿಗೆ ಆಗಮಿಸುವ ಭಕ್ತರು ದೊಡ್ಡ ಮಟ್ಟದಲ್ಲಿ ಕಾಣಿಕೆ ಹಾಕಿದ್ದು, ಹುಂಡಿಯಲ್ಲಿ ಮುಖ್ಯವಾಗಿ ನೇಪಾಳ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ , ಥೈಲ್ಯಾಂಡ್ ಹಾಗೂ ಹಾಂಗ್ ಕಾಂಗ್ ದೇಶಗಳ ಕರೆನ್ಸಿಗಳು ಲಭ್ಯವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:46 pm, Tue, 7 July 26

Source link

ಮಲೆನಾಡಲ್ಲಿ ಮಳೆ ಅಬ್ಬರ: ಜೋಗ ಜಲಪಾತದ ಜಲವೈಭವ ಕಣ್ತುಂಬಿಕೊಂಡ ಪ್ರವಾಸಿಗರು – Kannada News | Malnad Rain Fury: Jog Falls Comes Alive as Tourists Flock to Witness Stunning Monsoon Glory

ಶಿವಮೊಗ್ಗ, ಜುಲೈ 07: ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಅಬ್ಬರ ಹೆಚ್ಚಾದ ಪರಿಣಾಮ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಲ್ಲಿರುವ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ. ಧುಮ್ಮುಕ್ಕುತ್ತಿರುವ ಫಾಲ್ಸ್​​ ನೋಡಲು ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದ್ದು, ಜಲವೈಭವಕ್ಕೆ ಮನಸೂರೆಗೊಂಡು ಫಾಲ್ಸ್​​ ಎದುರು ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಾರ್ವಜನಿಕರು ಖುಷಿ ಪಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ: ವಿಡಿಯೋ ವೈರಲ್ – Kannada News | Road Rage on Bengaluru Mysuru Expressway: Driver Brutally Assaulted in Front of Family; Shocking Dashcam Video Goes Viral

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ: ವಿಡಿಯೋ ವೈರಲ್
Image Credit source: Siraj Noorani X Account

ಬೆಂಗಳೂರು, ಜುಲೈ 07: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿದ್ದ ಕುಟುಂಬದ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಂಡ್ಯ ಜಿಲ್ಲೆಯ ಮದ್ದೂರು ಸಮೀಪದ ಎಕ್ಸ್‌ಪ್ರೆಸ್‌ವೇನಲ್ಲಿ ಗಲಾಟೆ ನಡೆದಿದೆ ಎನ್ನಲಾಗಿದೆ. ಹಿಂಬದಿಯಿಂದ ಬರುತ್ತಿದ್ದ ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಘಟನೆಯ ಸಂಪೂರ್ಣ ದೃಶ್ಯ ದಾಖಲಾಗಿದೆ.

ವೈರಲ್​​ ವಿಡಿಯೋದಲ್ಲಿ ಏನಿದೆ?

ವೈರಲ್ ವಿಡಿಯೋದಲ್ಲಿ, ಕೆಲವರು ಹೆದ್ದಾರಿಯ ಮಧ್ಯೆಯೇ ನೀಲಿ ಬಣ್ಣದ ಕಾರನ್ನು ಅಡ್ಡಗಟ್ಟಿ, ಬಲವಂತವಾಗಿ ಬಾಗಿಲು ತೆರೆದು ಚಾಲಕನ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಕಾರಿನಲ್ಲಿ ಮಹಿಳೆ ಮತ್ತು ಮಗು ಸೇರಿ ನಾಲ್ಕೈದು ಮಂದಿ ಇದ್ದರು ಎನ್ನಲಾಗಿದ್ದು, ಗುಂಪಿನಲ್ಲಿದ್ದ ಕೆಲವರು ಚಾಲಕನಿಗೆ ನಿರಂತರವಾಗಿ ಥಳಿಸಿದ್ದಾರೆ. ಒಬ್ಬ ವ್ಯಕ್ತಿ ಲೋಹದ ವಸ್ತುವಿನಂತಿದ್ದ ಆಯುಧದಿಂದ ಹೊಡೆಯುತ್ತಿರುವ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ. ಸ್ವಲ್ಪ ಸಮಯದ ಬಳಿಕ ಸ್ಥಳದಲ್ಲಿದ್ದ ಇತರ ವಾಹನ ಸವಾರರು ಮಧ್ಯಪ್ರವೇಶಿಸಿ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಘಟನೆಯ ಕೊನೆಯಲ್ಲಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಹೊರಬಂದು ದುಷ್ಕರ್ಮಿಗಳ ಬಳಿ ಹಲ್ಲೆ ನಿಲ್ಲಿಸುವಂತೆ ಮನವಿ ಮಾಡುತ್ತಿರುವುದು ಕಾಣಿಸುತ್ತದೆ. ಆದರೂ ಚಾಲಕನನ್ನು ಕಾರಿನಿಂದ ಹೊರಗೆ ಎಳೆದು ಥಳಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಡೇ ಕೇರ್ ಕ್ರೌರ್ಯ; ಸಿಸಿಟಿವಿ ದೃಶ್ಯ ಆಧರಿಸಿ ಪ್ರಮುಖ ಆರೋಪಿ ವಿಜಯಲಕ್ಷ್ಮೀ ಸೇರಿ ಇಬ್ಬರು ಅರೆಸ್ಟ್!

ಅಪಘಾತವೇ ಹಲ್ಲೆಗೆ ಕಾರಣ

ಮಾಹಿತಿಯ ಪ್ರಕಾರ, ಶ್ರೀರಂಗಪಟ್ಟಣ ಟೋಲ್‌ಗೇಟ್ ಸಮೀಪ ಬೆಂಗಳೂರು ಕಡೆಗೆ ಬರುತ್ತಿದ್ದ ವೇಳೆ ಸಂತ್ರಸ್ತರ ಕಾರು ಮತ್ತು ಆರೋಪಿಗಳ ಕಾರಿನ ನಡುವೆ ಸಣ್ಣ ಅಪಘಾತ ಸಂಭವಿಸಿತ್ತು. ಅಪಘಾತದ ಬಳಿಕ ಎರಡೂ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದರೂ, ನಂತರ ತಮ್ಮ ತಮ್ಮ ದಾರಿಯಲ್ಲಿ ತೆರಳಿದ್ದರು. ಆದರೆ ಬಳಿಕ ತಮ್ಮ ಕಾರಿಗೆ ಹೆಚ್ಚಿನ ಹಾನಿಯಾಗಿರುವುದು ಗಮನಿಸಿದ ಆರೋಪಿಗಳು ಮತ್ತೊಂದು ಕಾರನ್ನು ನಿಲ್ಲಿಸಲು ಯತ್ನಿಸಿದ್ದಾರೆ. ಚಾಲಕ ವಾಹನ ನಿಲ್ಲಿಸದ ಕಾರಣ, ಎಕ್ಸ್‌ಪ್ರೆಸ್‌ವೇನಲ್ಲಿ ಬೆನ್ನಟ್ಟಿ ಕಾರನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:22 pm, Tue, 7 July 26

Source link

Vastu Tips: ನಿಮ್ಮ ಸ್ನಾನಗೃಹದಲ್ಲಿ ಮಾಡುವ ಈ ತಪ್ಪುಗಳೇ ಹಣದ ಕೊರತೆಗೆ ಕಾರಣ; ಇಂದೇ ಈ ಬದಲಾವಣೆ ಮಾಡಿ – Kannada News | Bathroom Vastu Tips: Prevent Financial Loss and Attract Wealth to Your Home

ದಿನದ 24 ಗಂಟೆಯೂ ಕಷ್ಟಪಟ್ಟು ದುಡಿದು, ಉತ್ತಮ ಆದಾಯ ಗಳಿಸಿದರೂ ಸಹ ತಿಂಗಳ ಅಂತ್ಯದ ವೇಳೆಗೆ ಕೈಯಲ್ಲಿ ಕಾಸು ಇರುವುದಿಲ್ಲ. ಇದಕ್ಕೆ ನಾವು ತಿಳಿಯದೆ ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳೇ ಕಾರಣವಾಗಿರುತ್ತವೆ. ಅದರಲ್ಲಿಯೂ ನಿಮ್ಮ ಮನೆಯ ಸ್ನಾನಗೃಹ (Bathroom) ಆರ್ಥಿಕ ನಷ್ಟಕ್ಕೆ ಪ್ರಮುಖ ಕಾರಣವಾಗಿರಬಹುದು ಎಂಬುದು ನಿಮಗೆ ತಿಳಿದಿದೆಯೇ? ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹವು ರಾಹು, ಕೇತು ಮತ್ತು ಚಂದ್ರನ ಶಕ್ತಿಗಳಿಂದ ಪ್ರಭಾವಿತವಾಗಿರುತ್ತದೆ. ಇಲ್ಲಿ ಮಾಡುವ ತಪ್ಪುಗಳು ಗಂಭೀರ ವಾಸ್ತು ದೋಷಗಳನ್ನು ಸೃಷ್ಟಿಸಿ, ಲಕ್ಷ್ಮಿ ದೇವಿಯ ಅಸಮಾಧಾನಕ್ಕೆ ಕಾರಣವಾಗುತ್ತವೆ. ನಿಮ್ಮ ಮನೆಯ ಆರ್ಥಿಕ ಯಶಸ್ಸನ್ನು ತಡೆಯುತ್ತಿರುವ ಅಂತಹ ಗಂಭೀರ ವಾಸ್ತು ದೋಷಗಳು ಮತ್ತು ಅವುಗಳಿಗೆ ಸರಳ ಪರಿಹಾರಗಳು ಇಲ್ಲಿವೆ.

ಸ್ನಾನಗೃಹದಲ್ಲಿ ಖಾಲಿ ಬಕೆಟ್ ಅಥವಾ ಖಾಲಿ ಟಬ್ ಇಡುವುದು:

ಸ್ನಾನಗೃಹದಲ್ಲಿ ಖಾಲಿ ಬಕೆಟ್ ಅಥವಾ ಟಬ್ ಅನ್ನು ಎಂದಿಗೂ ಹಾಗೆಯೇ ಬಿಡಬಾರದು. ವಾಸ್ತು ಪ್ರಕಾರ, ಖಾಲಿ ಬಕೆಟ್ ಮನೆಯೊಳಗಿನ ಶೂನ್ಯತೆ ಮತ್ತು ಆರ್ಥಿಕ ತೊಂದರೆಗಳನ್ನು ಸಂಕೇತಿಸುತ್ತದೆ. ಇದು ಜಲ ದೇವನಾದ ವರುಣ ಮತ್ತು ಸಂಪತ್ತಿನ ಅಧಿಪತಿಯಾದ ಚಂದ್ರನಿಗೆ ಸಂಬಂಧಿಸಿದ ನಕಾರಾತ್ಮಕ ಪ್ರಭಾವಗಳನ್ನು ಆಕರ್ಷಿಸುತ್ತದೆ. ಇದರಿಂದಾಗಿ ಮನೆಯಲ್ಲಿ ಹಣದ ಹರಿವು ಸಂಪೂರ್ಣವಾಗಿ ಅಡಚಣೆಯಾಗುತ್ತದೆ. ಆದ್ದರಿಂದ, ಸ್ನಾನಗೃಹದ ಬಕೆಟ್‌ನಲ್ಲಿ ಯಾವಾಗಲೂ ಸ್ವಲ್ಪ ನೀರನ್ನು ತುಂಬಿಸಿಡುವುದು ಒಳ್ಳೆಯದು.

ತೊಟ್ಟಿಕ್ಕುವ ನಲ್ಲಿ (Dripping Tap):

ನಿಮ್ಮ ಸ್ನಾನಗೃಹದಲ್ಲಿನ ನಲ್ಲಿ (Tap) ದೋಷಪೂರಿತವಾಗಿದ್ದರೆ ಅಥವಾ ಅದರಿಂದ ನಿರಂತರವಾಗಿ ನೀರು ತೊಟ್ಟಿಕ್ಕುತ್ತಿದ್ದರೆ, ವಾಸ್ತು ಶಾಸ್ತ್ರದಲ್ಲಿ ಇದನ್ನು ಅತ್ಯಂತ ದೊಡ್ಡ ದೋಷವೆಂದು ಪರಿಗಣಿಸಲಾಗುತ್ತದೆ. ನಲ್ಲಿಯಿಂದ ನೀರು ನಿರಂತರವಾಗಿ ವ್ಯರ್ಥವಾಗಿ ಸೋರುವಂತೆ, ಮನೆಯಿಂದ ಹಣವೂ ಸಹ ಹರಿದು ಹೋಗುತ್ತದೆ. ಈ ರೀತಿ ತೊಟ್ಟಿಕ್ಕುವ ನೀರು ರಾಹುವಿನ ನಕಾರಾತ್ಮಕ ಪ್ರಭಾವವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಹಠಾತ್ ಆರ್ಥಿಕ ನಷ್ಟಗಳು ಅಥವಾ ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳು ಎದುರಾಗುತ್ತವೆ. ಹಾಗಾಗಿ, ತಕ್ಷಣವೇ ದೋಷಪೂರಿತ ನಲ್ಲಿಗಳನ್ನು ದುರಸ್ತಿಗೊಳಿಸಿ.

ಇದನ್ನೂ ಓದಿ Panchamukhi Ganesha: ಪಂಚಮುಖಿ ಗಣೇಶ ಮನೆಯಲ್ಲಿದ್ದರೆ ಸಕಲ ಕಷ್ಟಗಳೂ ನಿವಾರಣೆ; ಐದು ಮುಖಗಳ ದಿವ್ಯ ರಹಸ್ಯವೇನು?

ಸ್ನಾನಗೃಹದ ಬಾಗಿಲನ್ನು ತೆರೆದಿಡುವುದು:

ಮನೆಯ ನಕಾರಾತ್ಮಕ ಶಕ್ತಿಯು ಅತಿ ಹೆಚ್ಚು ಕೇಂದ್ರೀಕೃತವಾಗಿರುವ ಪ್ರದೇಶವೆಂದರೆ ಅದು ಸ್ನಾನಗೃಹ. ಅನೇಕರು ಸ್ನಾನಗೃಹವನ್ನು ಬಳಸಿದ ನಂತರ ಅದರ ಬಾಗಿಲನ್ನು ಹಾಗೆಯೇ ತೆರೆದಿಡುತ್ತಾರೆ. ಹೀಗೆ ಮಾಡುವುದರಿಂದ, ಅಲ್ಲಿನ ನಕಾರಾತ್ಮಕ ಶಕ್ತಿಯು ಮನೆಯಾದ್ಯಂತ, ವಿಶೇಷವಾಗಿ ಮಲಗುವ ಕೋಣೆ (Bedroom) ಮತ್ತು ಅಡುಗೆಮನೆಯಾದ್ಯಂತ ಹರಡುತ್ತದೆ. ಇದು ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಹಾಗೂ ಜಗಳಗಳು ಹೆಚ್ಚಾಗಲು ಕಾರಣವಾಗುತ್ತದೆ. ಆದ್ದರಿಂದ ಬಳಸಿದ ತಕ್ಷಣ ಬಾಗಿಲನ್ನು ಮುಚ್ಚುವ ಅಭ್ಯಾಸ ಮಾಡಿಕೊಳ್ಳಿ.

ರಾಹು ದೋಷ ನಿವಾರಣೆಗೆ ಇಲ್ಲಿದೆ ಅತ್ಯಂತ ಪರಿಣಾಮಕಾರಿ ಪರಿಹಾರ:

ಸ್ನಾನಗೃಹದಲ್ಲಿ ಉತ್ಪತ್ತಿಯಾಗುವ ನಕಾರಾತ್ಮಕ ಶಕ್ತಿ ಮತ್ತು ರಾಹು ದೋಷವನ್ನು ಸಂಪೂರ್ಣವಾಗಿ ನಿವಾರಿಸಲು ವಾಸ್ತು ಶಾಸ್ತ್ರದಲ್ಲಿ ಒಂದು ಅದ್ಭುತ ಪರಿಹಾರವನ್ನು ಹೇಳಲಾಗಿದೆ. ಒಂದು ಸಣ್ಣ ಗಾಜಿನ ಬಟ್ಟಲಿನಲ್ಲಿ (Glass Bowl) ಕಲ್ಲುಪ್ಪನ್ನು (Rock Salt) ಪೂರ್ತಿಯಾಗಿ ತುಂಬಿಸಿ, ಅದನ್ನು ಸ್ನಾನಗೃಹದ ಯಾವುದಾದರೂ ಒಂದು ಮೂಲೆಯಲ್ಲಿ ಇರಿಸಿ. ಈ ಉಪ್ಪು ಅಲ್ಲಿನ ಇಡೀ ನಕಾರಾತ್ಮಕತೆಯನ್ನು ಹೀರಿಕೊಳ್ಳುತ್ತದೆ. ನೆನಪಿಡಿ, ಪ್ರತಿ ತಿಂಗಳು ಈ ಬಟ್ಟಲಿನಲ್ಲಿರುವ ಉಪ್ಪನ್ನು ಬದಲಾಯಿಸುತ್ತಿರಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

28 ವರ್ಷಗಳ ಬಳಿಕ ಒಂದಾದ ನಾಗಾರ್ಜುನ-ಟಬು ಜೋಡಿ: ಈ ಬಾರಿ ರೋಮ್ಯಾನ್ಸ್ ಅಲ್ಲ, ವಿಲನ್ – Kannada News | Nagarjuna Tabu Reunite After 28 Years for King 100: Tabu as Villain

ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಇಷ್ಟಪಟ್ಟ ಜೋಡಿಗಳಲ್ಲಿ ನಾಗಾರ್ಜುನ ಮತ್ತು ಟಬು ಜೋಡಿ ಕೂಡ ಒಂದು. ಕಳೆದ 28 ವರ್ಷಗಳಿಂದ ಈ ಜೋಡಿ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಈಗ ನಾಗಾರ್ಜುನ ಅವರ ಮೈಲಿಗಲ್ಲಿನ 100ನೇ ಚಿತ್ರಕ್ಕಾಗಿ ಇವರಿಬ್ಬರು ಮತ್ತೆ ಒಂದಾಗುತ್ತಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರಕ್ಕೆ ‘ಕಿಂಗ್ 100’ ಎಂದು ಹೆಸರಿಡಲಾಗಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಈ ಬಾರಿ ವಿಲನ್ ಪಾತ್ರದಲ್ಲಿ ಟಬು

ಹಳೆಯ ಸಿನಿಮಾಗಳಲ್ಲಿ ಇವರಿಬ್ಬರ ರೋಮ್ಯಾಂಟಿಕ್ ಕೆಮಿಸ್ಟ್ರಿ ಹಿಟ್ ಆಗಿತ್ತು. ಆದರೆ ಈ ಬಾರಿ ರಾ. ಕಾರ್ತಿಕ್ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ ಸಿನಿಮಾದಲ್ಲಿ ಟಬು ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಾಗಾರ್ಜುನ ಎದುರಾಳಿಯಾಗಿ ಟಬು ಅಬ್ಬರಿಸಲಿದ್ದಾರೆ. ಈ ಮೊದಲು ಕೂಡ ಟಬು ಅವರು ನೆಗೆಟಿವ್ ರೋಲ್​​ಗಳನ್ನು ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಹೀಗಾಗಿ, ಅವರಿಗೆ ಇದು ಚಾಲೆಂಜಿಂಗ್ ಎನಿಸಲಿಕ್ಕಿಲ್ಲ ಎಂಬುದು ಅನೇಕರ ಊಹೆ.

1995ರಲ್ಲಿ ರಿಲೀಸ್ ಆದ ‘ಸಿಸಿಂದ್ರಿ ’ ಚಿತ್ರದಲ್ಲಿ ನಾಗಾರ್ಜುನ ಅವರ ಮಗ ಅಖಿಲ್ ಅಕ್ಕಿನೇನಿ ಬಾಲನಟನಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಟಬು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಗಾರ್ಜುನ ಹಾಗೂ ಟಬು ಒಟ್ಟಿಗೆ ಕಾಣಿಸಿಕೊಂಡ ಮೊದಲ ಸಿನಿಮಾ ಇದಾಗಿದೆ.

ಇದನ್ನೂ ಓದಿ: ವಿಜಯ್ ಸೇತುಪತಿ ಎದುರು ವಿಲನ್ ಆದ ಟಬು, ಸಿನಿಮಾ ಯಾವುದು?

ಕೃಷ್ಣ ವಂಶಿ ನಿರ್ದೇಶನದ 1996ರ ‘ನಿನ್ನೆ ಪೆಳ್ಳಾಡತಾ’ ಸಿನಿಮಾ ತೆಲುಗು ಚಿತ್ರರಂಗದ ಐಕಾನಿಕ್ ಲವ್ ಸ್ಟೋರಿಗಳಲ್ಲಿ ಒಂದಾಗಿದೆ. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ನಾಗಾರ್ಜುನ-ಟಬು ಕೆಮಿಸ್ಟ್ರಿ ಸೂಪರ್ ಹಿಟ್ ಆಗಿತ್ತು. 1998ರಲ್ಲಿ ರಿಲೀಸ್ ಆದ ‘ಆವಿಡಾ ಮಾ ಆವಿಡೇ’ ಚಿತ್ರದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ಈ ಜೋಡಿ ನಟಿಸಿದ ಕೊನೆಯ ಸಿನಿಮಾ ಇದು. ಕಾಮಿಡಿ ಡ್ರಾಮಾ ಶೈಲಿಯ ಈ ಚಿತ್ರದ ಬಳಿಕ ಇಬ್ಬರೂ ಒಟ್ಟಿಗೆ ನಟಿಸಿರಲಿಲ್ಲ. ಈಗ 28 ವರ್ಷಗಳ ಬಳಿಕ ನಾಗಾರ್ಜುನ ಜೊತೆ ನಟಿಸಲು ಟಬು ರೆಡಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಫುಟ್‌ಪಾತ್ ತೆರವು ಅಭಿಯಾನ: ಆರ್.ಟಿ. ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿಭಟನೆ – Kannada News | Bengalurus Footpath Clearance Drive Continues: Street Vendors Protest in RT Nagar

ಬೆಂಗಳೂರು, ಜುಲೈ 07: ನಗರದಲ್ಲಿ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ಏಳನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಆರ್.ಟಿ. ನಗರದ ಜೆ.ಸಿ. ನಗರ ಮುಖ್ಯರಸ್ತೆಯಲ್ಲಿ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರ್ಯಾಯ ಜಾಗ ನೀಡದೆ ತೆರವುಗೊಳಿಸುತ್ತಿರುವುದಕ್ಕೆ ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ. ಜಿಬಿಎನಿಂದ ಐಡಿ ಕಾರ್ಡ್‌ಗಳನ್ನು ಪಡೆದು, ಸಾಲ ಪಡೆದು ವ್ಯಾಪಾರ ಮಾಡುತ್ತಿದ್ದೇವೆ. ಈಗ ಬೇರೆ ಜಾಗ ತೋರಿಸದೆ ತೆರವುಗೊಳಿಸಿದರೆ ನಮ್ಮ ಜೀವನ ಹೇಗೆ? ಎಂದು ವ್ಯಾಪಾರಿಗಳು ಪ್ರಶ್ನಿಸಿದ್ದಾರೆ. ವ್ಯಾಪಾರಿಗಳ ಪ್ರತಿರೋಧದ ನಡುವೆಯೂ ತೆರವು ಕಾರ್ಯ ಮುಂದುವರಿದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆಗಸ್ಟ್ 1ರಿಂದ ದಕ್ಷಿಣ ಭಾರತದಾದ್ಯಂತ ಲಾರಿ ಮುಷ್ಕರ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಗಡುವು ನೀಡಿದ ಲಾರಿ ಮಾಲೀಕರ ಸಂಘ – Kannada News | South India Lorry Strike from August 1: Lorry Owners Association Demands Removal of GPS Mandate and Checkposts

ಬೆಂಗಳೂರು, ಜುಲೈ 7: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಗಸ್ಟ್ 1ರಿಂದ ದಕ್ಷಿಣ ಭಾರತದಾದ್ಯಂತ ಲಾರಿಗಳ ಮುಷ್ಕರ (Lorry Strike) ನಡೆಸಲು ಲಾರಿ ಮಾಲೀಕರು ಮುಂದಾಗಿದ್ದಾರೆ. ಈ ಬಗ್ಗೆ ದಕ್ಷಿಣ ಭಾರತ ಲಾರಿ ಮಾಲೀಕರ ಸಂಘದ (SIMA) ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಮಾಹಿತಿ ನೀಡಿದ್ದಾರೆ. ಜುಲೈ 30ರ ಒಳಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಮುಂದಾಗದಿದ್ದರೆ, ಆಗಸ್ಟ್ 1ರಿಂದ ದಕ್ಷಿಣ ಭಾರತದ ಎಲ್ಲಾ ಲಾರಿಗಳು ನಿಂತಲ್ಲೇ ನಿಲ್ಲಲಿವೆ ಎಂದು ಅವರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಈ ಮುಷ್ಕರದಿಂದಾಗಿ ದಕ್ಷಿಣ ಭಾರತದ ಸುಮಾರು 24 ಲಕ್ಷ ಹಾಗೂ ಕರ್ನಾಟಕ ರಾಜ್ಯದ 7 ಲಕ್ಷ ಲಾರಿಗಳು ರಸ್ತೆಗಿಳಿಯದೆ ಸಂಚಾರ ಸ್ಥಗಿತಗೊಳಿಸಲಿವೆ.

ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಕೆಯಲ್ಲಿ ಸಾವಿರಾರು ಕೋಟಿ ಹಗರಣ ಆರೋಪ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಆರ್ ಷಣ್ಮುಗಪ್ಪ, ‘2012ರ ನಿರ್ಭಯಾ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಾಣಿಜ್ಯ ವಾಹನಗಳಿಗೂ ಜಿಪಿಎಸ್ (GPS) ಹಾಗೂ ಪ್ಯಾನಿಕ್ ಬಟನ್ ಕಡ್ಡಾಯಗೊಳಿಸಿತ್ತು. ಆದರೆ, ಇದರಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ದರ ನಿಗದಿ ಮಾಡಲಾಗಿದ್ದು, ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಕೆಗೆ ಒಂದು ರಾಜ್ಯದಲ್ಲಿ 3 ಸಾವಿರ ರೂಪಾಯಿ ಇದ್ದರೆ, ಮತ್ತೊಂದು ರಾಜ್ಯದಲ್ಲಿ 15 ಸಾವಿರ ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಸಾರಿಗೆ (ಪ್ಯಾಸೆಂಜರ್) ವಾಹನಗಳಲ್ಲಿ ಇದನ್ನು ಅಳವಡಿಸಲಾಗಿದೆಯಾದರೂ ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಹೀಗಿರುವಾಗ ಸರಕು ಸಾಗಣೆ (ಗೂಡ್ಸ್) ವಾಹನಗಳಿಗೆ ಇದರ ಅವಶ್ಯಕತೆ ಏನಿದೆ’ ಎಂದು ಪ್ರಶ್ನಿಸಿದ್ದಾರೆ. ಈ ಅಕ್ರಮವನ್ನು ಪತ್ತೆಹಚ್ಚಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕ, ತಮಿಳುನಾಡಿನಲ್ಲಿ ಚೆಕ್‌ಪೋಸ್ಟ್ ತೆರವಿಗೆ ಆಗ್ರಹ

ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಾರ್ಡರ್ ಚೆಕ್‌ಪೋಸ್ಟ್‌ಗಳನ್ನು (ಗಡಿ ತಪಾಸಣಾ ಕೇಂದ್ರ) ಈಗಾಗಲೇ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ತೆಲಂಗಾಣದಲ್ಲಿ ಕೂಡ 6 ತಿಂಗಳ ಹಿಂದೆ ಹಾಗೂ ಆಂಧ್ರಪ್ರದೇಶದಲ್ಲಿ ಒಂದೂವರೆ ವರ್ಷದ ಹಿಂದೆಯೇ ಚೆಕ್‌ಪೋಸ್ಟ್‌ಗಳನ್ನು ಮುಚ್ಚಲಾಗಿದೆ. ಆದರೆ ಕಾಂಗ್ರೆಸ್ ಹಾಗೂ ಟಿವಿಕೆ ಅಧಿಕಾರದಲ್ಲಿರುವ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾತ್ರ ಇನ್ನೂ ಬಾರ್ಡರ್ ಚೆಕ್‌ಪೋಸ್ಟ್‌ಗಳನ್ನು ಉಳಿಸಿಕೊಳ್ಳಲಾಗಿದೆ. ಇದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಷಣ್ಮುಗಪ್ಪ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಸಾಗಾಟ ಲಾರಿಗಳ ಮುಷ್ಕರ ವಾಪಸ್: ಬಾಕಿ ಹಣ ಬಿಡುಗಡೆ ಘೋಷಣೆ ಬೆನ್ನಲ್ಲೇ ಕ್ರಮ

ಕರ್ನಾಟಕದ ನೂತನ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ತಕ್ಷಣವೇ ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಝಿಂಬಾಬ್ವೆ ಸರಣಿಯಿಂದ ಹೊರಗುಳಿಯಲಿರುವ ಗೌತಮ್ ಗಂಭೀರ್! – Kannada News | Gautam Gambhir out of Zimbabwe tour

ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಝಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಜುಲೈ 23 ರಿಂದ ಶುರುವಾಗಲಿರುವ ಈ ಸರಣಿಯಿಂದ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೊರಗುಳಿಯಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮುಂಬರುವ ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿ.

ಇಂಗ್ಲೆಂಡ್ ವಿರುದ್ಧದ ಸರಣಿ ಬಳಿಕ ಭಾರತ ತಂಡವು ಬ್ಯಾಕ್ ಟು ಬ್ಯಾಕ್ ಸರಣಿ ಹಾಗೂ ಟೂರ್ನಿಗಳನ್ನು ಆಡಲಿದೆ. ಹೀಗಾಗಿ ಕೋಚಿಂಗ್ ಸಿಬ್ಬಂದಿ ವಿಭಾಗವನ್ನು ವಿಭಜಿಸಿ ವಿಶ್ರಾಂತಿ ನೀಡಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅದರಂತೆ ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ವಿವಿಎಸ್​ ಲಕ್ಷ್ಮಣ್ ಕಾಣಿಸಿಕೊಳ್ಳಲಿದ್ದಾರೆ.

ಕೋಚಿಂಗ್ ಸ್ಟಾಫ್ ವಿಭಜನೆಗೆ ಕಾರಣವೇನು?

  • ಒಂದೇ ಸಮಯದಲ್ಲಿ ಎರಡು ಸರಣಿ: ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಟಿ20 ಟೂರ್ನಿ ಮತ್ತು ಭಾರತದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಎರಡೂ ಒಂದೇ ಅವಧಿಯಲ್ಲಿ ಆಯೋಜನೆಗೊಳ್ಳಲಿವೆ.
  • ಗಂಭೀರ್ ತವರಿನಲ್ಲಿ ಬ್ಯುಸಿ: ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಪ್ರಮುಖ ಸರಣಿಗಾಗಿ ಭಾರತದ ಹಿರಿಯ ಆಟಗಾರರ ತಂಡದೊಂದಿಗೆ ಇರಲಿದ್ದಾರೆ.
  • ಲಕ್ಷ್ಮಣ್ ಹೆಗಲಿಗೆ ಯುವ ಪಡೆ: ಈ ಹಿನ್ನೆಲೆಯಲ್ಲಿ, ಸೆಂಟರ್ ಆಫ್ ಎಕ್ಸಲೆನ್ಸ್ (CoE) ಮುಖ್ಯಸ್ಥರಾಗಿರುವ ವಿ.ವಿ.ಎಸ್. ಲಕ್ಷ್ಮಣ್ ಅವರಿಗೆ ಝಿಂಬಾಬ್ವೆ ಪ್ರವಾಸ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಯುವ ತಂಡವನ್ನು ಮುನ್ನಡೆಸುವ ಹೊಣೆ ನೀಡಲಾಗಿದೆ.

ಲಕ್ಷ್ಮಣ್ ಟೀಮ್:

ಟೀಮ್ ಇಂಡಿಯಾದೊಂದಿಗೆ ವಿವಿಎಸ್​ ಲಕ್ಷ್ಮಣ್ ಅವರ ಸಿಬ್ಬಂದಿ ತಂಡ ಕಾರ್ಯ ನಿರ್ವಹಿಸಲಿದೆ. ಇಲ್ಲಿ ಲಕ್ಷ್ಮಣ್ ಹೆಡ್ ಕೋಚ್ ಆಗಿ ಕಾಣಿಸಿಕೊಂಡರೆ, ಟೀಮ್ ಇಂಡಿಯಾದ ಮತ್ತಿಬ್ಬರು ಮಾಜಿ ಆಟಗಾರರು ಬ್ಯಾಟಿಂಗ್ ಹಾಗೂ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

  • ಬ್ಯಾಟಿಂಗ್ ಕೋಚ್: ಮಾಜಿ ಕ್ರಿಕೆಟಿಗ ಹೃಷಿಕೇಶ್ ಕಾನಿಟ್ಕರ್.
  •  ಬೌಲಿಂಗ್ ಕೋಚ್: ಮಾಜಿ ಸ್ಪಿನ್ನರ್ ಸುನಿಲ್ ಜೋಶಿ.

ಇದನ್ನೂ ಓದಿ: ಕ್ರಿಸ್ಟಿಯಾನೊ ಕಡೆಯಿಂದ ಈಡೇರಲಿದೆಯಾ ರೊನಾಲ್ಡೊ ವಿಶ್ವಕಪ್ ಕನಸು!

ಕಣದಲ್ಲಿ ಬಲಿಷ್ಠ ಪಡೆ:

ಸೀನಿಯರ್ ಆಟಗಾರರು ವೆಸ್ಟ್ ಇಂಡೀಸ್ ಸರಣಿಯಲ್ಲಿ ಬ್ಯುಸಿಯಾಗಿರುವುದರಿಂದ, ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಪದಕವನ್ನು ಉಳಿಸಿಕೊಳ್ಳಲು ಬಲಿಷ್ಠ ಯುವ ಪಡೆಯನ್ನು ಆಯ್ಕೆ ಮಾಡಲಾಗಿದೆ. ಈ ತಂಡದಲ್ಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

ಏಷ್ಯನ್ ಗೇಮ್ಸ್​ಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪಾನಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಜಸ್​ಪ್ರೀತ್ ಬುಮ್ರಾ ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ವೈಭವ್ ಸೂರ್ಯವಂಶಿ.

Source link

ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ: ಎರಡು ವರ್ಷಗಳಲ್ಲಿ 70ಕ್ಕೂ ಹೆಚ್ಚು ‘ಸ್ಕಲ್ ಬೇಸ್ ಆಸ್ಟಿಯೋಮೈಲೈಟಿಸ್’ ರೋಗಿಗಳಿಗೆ ಯಶಸ್ವಿ ಟ್ರೀಟ್​​ಮೆಂಟ್​ – Kannada News | Hubballi KMCRI Milestone: Over 70 Patients Successfully Treated for Rare ‘Skull Base Osteomyelitis’ Infection

ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಅಪರೂಪದ ಶಸ್ತ್ರಚಿಕಿತ್ಸೆImage Credit source: Arvind Canchi X Account

ಹುಬ್ಬಳ್ಳಿ, ಜುಲೈ 07: ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (KMCRI) ವೈದ್ಯರು ಕಳೆದ ಎರಡು ವರ್ಷಗಳಲ್ಲಿ ‘ಸ್ಕಲ್ ಬೇಸ್ ಆಸ್ಟಿಯೋಮೈಲೈಟಿಸ್’ (Skull Base Osteomyelitis – SBO) ಎಂಬ ಅಪರೂಪದ ಹಾಗೂ ಜೀವಕ್ಕೆ ಅಪಾಯ ಉಂಟುಮಾಡುವ ಸೋಂಕಿನಿಂದ ಬಳಲುತ್ತಿದ್ದ 70ಕ್ಕೂ ಹೆಚ್ಚು ರೋಗಿಗಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಹಾಗೂ ಚಿಕಿತ್ಸೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಸೋಂಕು ಸಾಮಾನ್ಯವಾಗಿ ವಯೋವೃದ್ಧರು, ನಿಯಂತ್ರಣದಲ್ಲಿಲ್ಲದ ಮಧುಮೇಹ (ಡಯಾಬಿಟಿಸ್) ಇರುವವರು ಹಾಗೂ ತೀವ್ರ ಕಿವಿ ಸೋಂಕಿನಿಂದ ಬಳಲುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಿವಿಯಿಂದ ಸೋಂಕು ತಲೆಬುರುಡೆಯ ತಳಭಾಗಕ್ಕೆ (Skull Base) ಹಾಗೂ ಅದರ ಸುತ್ತಲಿನ ಪ್ರಮುಖ ಅಂಗಗಳಿಗೆ ಹರಡಿದರೆ ತೀವ್ರ ಕಿವಿನೋವು, ಅಸಹನೀಯ ತಲೆನೋವು, ಮುಖದ ನರಗಳ ಪಾರ್ಶ್ವವಾಯು, ನುಂಗಲು ತೊಂದರೆ ಮತ್ತು ಮುಂದುವರಿದ ಹಂತದಲ್ಲಿ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿದೆ.

ಕೆಎಂಸಿಆರ್‌ಐಯ ಕಿವಿ-ಮೂಗು-ಗಂಟಲು (ENT) ಮತ್ತು ಲ್ಯಾಟರಲ್ ಸ್ಕಲ್ ಬೇಸ್ ಶಸ್ತ್ರಚಿಕಿತ್ಸಕರಾದ ಡಾ. ಮಂಜುನಾಥ ದಂಡಿ, ಹಿರಿಯ ಇಎನ್‌ಟಿ ತಜ್ಞ ಡಾ. ರವೀಂದ್ರ ಗದಗ ಹಾಗೂ ಇಎನ್‌ಟಿ ಮತ್ತು ಹೆಡ್-ನೆಕ್ ಸರ್ಜರಿ ವಿಭಾಗದ ತಂಡ ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಅನೇಕ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ.  ಡಾ. ಮಂಜುನಾಥ ದಂಡಿ ಅವರ ಪ್ರಕಾರ, ಈ ಕಾಯಿಲೆಯಿಂದ ಬಳಲುವವರು ವಿಶೇಷವಾಗಿ ರಾತ್ರಿ ವೇಳೆ ತೀವ್ರವಾದ ನೋವಿನಿಂದ ನಿದ್ರೆಯಿಲ್ಲದೆ ಬಳಲುತ್ತಾರೆ. ಇದರಿಂದ ಅವರ ಜೀವನದ ಗುಣಮಟ್ಟವೇ ಹದಗೆಡುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಕಾಯಿಲೆಗೆ ಸಾಮಾನ್ಯವಾಗಿ ಇಂಟ್ರಾವೆನಸ್ ಆಂಟಿಬಯೋಟಿಕ್‌ಗಳು ಹಾಗೂ ಕಿವಿಯ ಶಸ್ತ್ರಚಿಕಿತ್ಸೆಯೇ ಪ್ರಮುಖ ಚಿಕಿತ್ಸೆಯಾಗಿದ್ದರೂ, ಕೆಲವರಲ್ಲಿ ದೀರ್ಘಕಾಲ ಚಿಕಿತ್ಸೆ ಪಡೆದ ಬಳಿಕವೂ ಸೋಂಕು ಮತ್ತು ನೋವು ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೋಗಿಗಳು ಸಾಮಾನ್ಯವಾಗಿ ಕಾಯಿಲೆ ಮುಂದುವರಿದ ಹಂತದಲ್ಲಿ ಕೆಎಂಸಿಆರ್‌ಐಗೆ ಬರುತ್ತಾರೆ. ಆದರೆ ಆರಂಭದಲ್ಲೇ ಚಿಕಿತ್ಸೆ ಪಡೆದರೆ ಔಷಧಿ ಹಾಗೂ ಇಂಜೆಕ್ಷನ್‌ಗಳ ಮೂಲಕವೇ ಕಾಯಿಲೆಯನ್ನು ನಿಯಂತ್ರಿಸಿ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದ ಕ್ರಮಕ್ಕೆ ಕಂಗಾಲಾದ ವಯೋವೃದ್ಧ ಪಿಂಚಣಿದಾರರು; ಕಚೇರಿಗೆ ಅಲೆದಾಟ

ಉತ್ತರ ಕರ್ನಾಟಕದಲ್ಲೇ ಅತ್ಯಾಧುನಿಕ ಚಿಕಿತ್ಸೆ

ಉತ್ತರ ಕರ್ನಾಟಕದಲ್ಲಿ ಅತ್ಯಾಧುನಿಕ ಲ್ಯಾಟರಲ್ ಸ್ಕಲ್ ಬೇಸ್ ಶಸ್ತ್ರಚಿಕಿತ್ಸಾ ಪರಿಣತಿ ಲಭ್ಯವಿರುವುದರಿಂದ ರೋಗಿಗಳು ಚಿಕಿತ್ಸೆಗಾಗಿ ಬೇರೆ ರಾಜ್ಯಗಳ ತೃತೀಯ ಹಂತದ ಆಸ್ಪತ್ರೆಗಳಿಗೆ ಹೋಗುವ ಅವಶ್ಯಕತೆ ತಪ್ಪಿದೆ. ಮಧುಮೇಹ ಹೊಂದಿರುವವರು ನಿರಂತರ ಕಿವಿನೋವು, ತಲೆನೋವು ಅಥವಾ ಕಿವಿ ಸೋಂಕಿನಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ರೋಗಿಗಳಲ್ಲೂ ಹಾಗೂ ಆರೋಗ್ಯ ಸಿಬ್ಬಂದಿಯಲ್ಲೂ ಜಾಗೃತಿ ಮೂಡಿದರೆ ಆರಂಭದಲ್ಲೇ ರೋಗ ಪತ್ತೆಹಚ್ಚಿ ಗಂಭೀರ ಸಮಸ್ಯೆಗಳನ್ನು ತಡೆಯಬಹುದು ಎಂದು ಚಿಕಿತ್ಸಾ ತಂಡ ತಿಳಿಸಿದೆ.

ಇಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳು ಕೈಗೆತ್ತಿಕೊಳ್ಳುವುದಿಲ್ಲ. ಅನೇಕ ಆಸ್ಪತ್ರೆಗಳು ರೋಗಿಗಳನ್ನು ಚಿಕಿತ್ಸೆಗಾಗಿ ಕೆಎಂಸಿಆರ್‌ಐಗೆ ಕಳುಹಿಸುತ್ತವೆ. ಈ ಶಸ್ತ್ರಚಿಕಿತ್ಸೆಗೆ ಪರಿಣಿತ ವೈದ್ಯರು, ಶಸ್ತ್ರಚಿಕಿತ್ಸೆಯ ನಂತರದ ವಿಶೇಷ ಆರೈಕೆ ಹಾಗೂ ಐಸಿಯು ಸೌಲಭ್ಯ ಅಗತ್ಯವಿದ್ದು, ಇವೆಲ್ಲವೂ ಕೆಎಂಸಿಆರ್‌ಐನಲ್ಲಿ ಲಭ್ಯವಿದೆ ಎಂದು ಹಿರಿಯ ಇಎನ್‌ಟಿ ಶಸ್ತ್ರಚಿಕಿತ್ಸಕರಾದ ಡಾ. ರವೀಂದ್ರ ಗದಗ ತಿಳಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:46 am, Tue, 7 July 26

Source link

ಒಂದೇ ರಾತ್ರಿಯಲ್ಲಿ ದೂದ್​ಗಂಗಾ ನದಿಯಲ್ಲಿ 20 ಅಡಿ ಏರಿಕೆ! – Kannada News | Doodhganga River Surges 20 Feet Overnight, Submerging Bridges and Threatening Villages in Chikkodi

ಬೆಳಗಾವಿ, ಜುಲೈ 07: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ದೂದ್‌ಗಂಗಾ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ಒಂದೇ ರಾತ್ರಿಯಲ್ಲಿ ದೂದ್‌ಗಂಗಾ ನದಿಯಲ್ಲಿ ಬರೋಬ್ಬರಿ 20 ಅಡಿಗಳಷ್ಟು ನೀರು ಏರಿಕೆ ಆಗಿದ್ದು, ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಪ್ರಸ್ತುತ ಹತ್ತು ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ. ಮಲ್ಲಿಕವಾಡ ಮತ್ತು ದತ್ತವಾಡ ಗ್ರಾಮಗಳನ್ನು ಸಂಪರ್ಕಿಸುವ ಸೇತುವೆಯೂ ಸಂಪೂರ್ಣವಾಗಿ ಮುಳುಗಿದ್ದು, ಸೇತುವೆಯ ಮೇಲ್ಭಾಗದಲ್ಲಿ ನೀರು ಹರಿಯುತ್ತಿದೆ. ಇದರಿಂದ ಈ ಎರಡು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ನದಿ ಪಾತ್ರದ ಜಮೀನುಗಳಲ್ಲಿನ ಬೆಳೆಗಳು ಮುಳುಗಡೆಯಾಗುವ ಭೀತಿ ಎದುರಾಗಿದ್ದು, ರೈತರು ತಮ್ಮ ಜಾನುವಾರುಗಳಿಗೆ ಮೇವನ್ನು ಕಟಾವು ಮಾಡಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

ಪ್ರವಾಹದ ಈ ಸ್ಥಿತಿ ಮುಂದುವರಿದರೆ ಮಲ್ಲಿಕವಾಡ ಸೇರಿದಂತೆ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಕಡಿಮೆಯಾಗದಿದ್ದರೆ ಚಿಕ್ಕೋಡಿ ಭಾಗದ ಜನರಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version