ವಯನಾಡ್ ಸುರಂಗ ಮಾರ್ಗ ನಿರ್ಮಾಣ ಸ್ಥಳದಲ್ಲಿ ಭೂಕುಸಿತ: ಮೂವರ ರಕ್ಷಣೆ, ಹಲವರು ಸಿಲುಕಿರುವ ಶಂಕೆ – Kannada News | Wayanad Landslide at Tunnel Site: 3 Rescued, Many Feared Trapped Amid Heavy Rains

ವಯನಾಡ್, ಜುಲೈ 07: ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಕಲ್ಲಾಡಿಯಲ್ಲಿ ಮಂಗಳವಾರ ಭಾರಿ ಭೂಕುಸಿತ (Landslide) ಸಂಭವಿಸಿದೆ. ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಮಹತ್ವಾಕಾಂಕ್ಷೆಯ ಸುರಂಗ ರಸ್ತೆ ಯೋಜನೆ ನಡೆಯುತ್ತಿರುವ ಸ್ಥಳದಲ್ಲೇ ಈ ದುರಂತ ಸಂಭವಿಸಿದ್ದು, ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಆತಂಕ ಎದುರಾಗಿದೆ. ಪ್ರಸ್ತುತ ಸ್ಥಳದಲ್ಲಿ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ.

24 ಗಂಟೆಗಳಲ್ಲಿ 265 ಮಿಮೀ ಭಾರಿ ಮಳೆ
ಕಳೆದ 24 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಸುಮಾರು 265 ಮಿಮೀ ನಷ್ಟು ಭಾರಿ ಮಳೆಯಾಗಿದೆ. ಮಳೆಯ ತೀವ್ರತೆಗೆ ಮೀನಾಕ್ಷಿ ಸೇತುವೆಯ ಬಳಿ ಇರುವ ಗುಡ್ಡ ಕುಸಿದು ಬಿದ್ದಿದೆ. ಭಾರಿ ಮಳೆಯ ಮುನ್ಸೂಚನೆ ಇದ್ದಿದ್ದರಿಂದ ಸೋಮವಾರದಿಂದಲೇ ಸುರಂಗ ಯೋಜನೆಯ ಕೆಲಸಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯರಿಂದ ಮೂವರ ರಕ್ಷಣೆ
ದುರಂತ ಸಂಭವಿಸಿದ ತಕ್ಷಣ, ಅಗ್ನಿಶಾಮಕ ದಳ ಮತ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸುವ ಮೊದಲೇ ಸ್ಥಳೀಯ ನಿವಾಸಿಗಳು ಸಮಯಪ್ರಜ್ಞೆ ಮೆರೆದಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೂವರನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟವರು ಸುರಂಗ ಯೋಜನೆಯ ಕಾರ್ಮಿಕರಾಗಿದ್ದು, ಅವರು ಅಲ್ಲೇ ಇದ್ದ ವಸತಿಗೃಹದಲ್ಲಿ ತಂಗಿದ್ದರು ಎನ್ನಲಾಗಿದೆ. ಇನ್ನೂ ಎಷ್ಟು ಜನ ಕಾರ್ಮಿಕರು ಅಥವಾ ಸ್ಥಳೀಯರು ಸಿಲುಕಿದ್ದಾರೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಮತ್ತಷ್ಟು ಓದಿ: ಕಾಶ್ಮೀರದ ದೋಡಾ ಜಿಲ್ಲೆಯ ಹೆದ್ದಾರಿಯಲ್ಲಿ ಭೀಕರ ಭೂಕುಸಿತ; ವಾಹನ ಸಂಚಾರ ಸಂಪೂರ್ಣ ಸ್ಥಗಿತ

ಮನೆಗಳು ಮತ್ತು ವಾಹನಗಳು ಜಖಂ
ಗುಡ್ಡ ಕುಸಿದ ರಭಸಕ್ಕೆ ಆ ಪ್ರದೇಶದಲ್ಲಿದ್ದ ಕೆಲವು ವಸತಿ ಮನೆಗಳು, ಹೋಂಸ್ಟೇಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಸುರಂಗ ಯೋಜನೆಯ ಕೆಲಸಕ್ಕಾಗಿ ಬಳಸಲಾಗುತ್ತಿದ್ದ ಹಲವು ಜೆಸಿಬಿ, ಟ್ರಕ್ ಹಾಗೂ ಇತರೆ ವಾಹನಗಳು ಮಣ್ಣಿನ ಅಡಿಯಲ್ಲಿ ಸಿಲುಕಿ ನಜ್ಜುಗುಜ್ಜಾಗಿವೆ. ಹಾನಿಯ ಸಂಪೂರ್ಣ ಪ್ರಮಾಣ ಇನ್ನಷ್ಟೇ ತಿಳಿಯಬೇಕಿದೆ.

ಎನ್‌ಡಿಆರ್‌ಎಫ್ ನೆರವು
ಪರಿಸ್ಥಿತಿ ಗಂಭೀರವಾಗಿರುವುದರಿಂದ ಅಗ್ನಿಶಾಮಕ ದಳದ ಜೊತೆಗೆ ಕೇರಳ ಪೊಲೀಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ರಕ್ಷಣಾ ಕಾರ್ಯಾಚರಣೆಗೆ ಇಳಿದಿವೆ. ಕೇರಳ ಸಚಿವ ಟಿ. ಸಿದ್ದಿಕ್ ಮತ್ತು ವಯನಾಡ್ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಏನಿದು ಸುರಂಗ ರಸ್ತೆ ಯೋಜನೆ?
ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳ ನಡುವಿನ ಸಂಚಾರ ದೂರವನ್ನು ಕಡಿಮೆ ಮಾಡಲು ಮತ್ತು ಸಂಪರ್ಕವನ್ನು ಸುಧಾರಿಸಲು ಕೇರಳ ಸರ್ಕಾರವು ಈ ‘ಅನಕ್ಕೊಂಪೊಯಿಲ್-ಮೆಪ್ಪಾಡಿ ಸುರಂಗ ರಸ್ತೆ ಯೋಜನೆ’ಯನ್ನು ಹಮ್ಮಿಕೊಂಡಿದೆ. ಈ ಪ್ರಮುಖ ಮೂಲಸೌಕರ್ಯ ಯೋಜನೆಯ ಕಾಮಗಾರಿ ಕಳೆದ ವರ್ಷವಷ್ಟೇ ಆರಂಭವಾಗಿತ್ತು. ಸದ್ಯದ ಭೂಕುಸಿತದಿಂದಾಗಿ ಯೋಜನಾ ಸ್ಥಳಕ್ಕೆ ಎಷ್ಟು ಹಾನಿಯಾಗಿದೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:33 pm, Tue, 7 July 26

Source link

‘ಕರಾವಳಿ’ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಡಬ್ ಮಾಡಲ್ವ? ನಿರ್ದೇಶಕರ ಸ್ಪಷ್ಟನೆ ಇದು – Kannada News | Prajwal Devaraj Fans Clash at Karavali Film Event: Director Reacts to Absence

ಕರಾವಳಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರ ಅನುಪಸ್ಥಿತಿ ಅಭಿಮಾನಿಗಳ ಪ್ರತಿಭಟನೆಗೆ ಕಾರಣವಾಗಿ ಗೊಂದಲ ಸೃಷ್ಟಿಸಿತು. ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಚಿತ್ರತಂಡದ ನಿರ್ದೇಶಕ ಗುರುದತ್ ಗಾಣಿಗ, ‘ಪ್ರಜ್ವಲ್ ದೇವರಾಜ್ ಕಾರ್ಯಕ್ರಮಕ್ಕೆ ಬರುವುದಾಗಿ ನಿನ್ನೆ ರಾತ್ರಿ ಹೇಳಿದ್ದರು. ಅವರ ಅಭಿಮಾನಿಗಳ ಸುಮಾರು 100 ಜನರು ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಮಾಹಿತಿ ನೀಡಲಾಗಿತ್ತು ಮತ್ತು ಅವರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು’ ಎಂದಿದ್ದಾರೆ. ಆದರೆ, ಅವರು ಬರಲೇ ಇಲ್ಲ.

ಇನ್ನು, ಡಬ್ಬಿಂಗ್ ವಿಷಯವಾಗಿ ಮಾತನಾಡಿದ ಗುರುದತ್ ಅವರು, ‘ಕರಾವಳಿ ಚಿತ್ರ ಮಂಗಳೂರು ಶೈಲಿಯ ಭಾಷೆಯನ್ನು ಒಳಗೊಂಡಿರುವುದರಿಂದ, ಪ್ರಜ್ವಲ್ ಅವರ ಧ್ವನಿ ಅದಕ್ಕೆ ಸೂಕ್ತವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಚರ್ಚೆ ಇತ್ತು. ಚಿತ್ರವು ಇದೇ ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ ಮತ್ತು ಇನ್ನೂ ಡಬ್ಬಿಂಗ್ ಕೆಲಸಗಳು ಬಾಕಿ ಇವೆ. ಡಬ್ಬಿಂಗ್ ಸ್ಟುಡಿಯೋವನ್ನು ಸಹ ಇದಕ್ಕಾಗಿ ಕಾಯ್ದಿರಿಸಲಾಗಿದೆ’ ಎಂದಿದ್ದಾರೆ ಗುರುದತ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ವಿಶ್ವಕಪ್​ನಿಂದ ಅಮೆರಿಕ ಔಟ್: ಬೆಲ್ಜಿಯಂ ಆಟಗಾರರ ‘ಟ್ರಂಪ್ ಡ್ಯಾನ್ಸ್’ ತಿರುಗೇಟು! – Kannada News | Belgium Players Donald Trump dance goal celebration vs USA World Cup

ಫಿಫಾ ವಿಶ್ವಕಪ್​ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕ ತಂಡವನ್ನು ಬೆಲ್ಜಿಯಂ ಹೀನಾಯವಾಗಿ ಸೋಲಿಸಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಪ್ರಾಬಲ್ಯ ಮೆರೆದ ಬೆಲ್ಜಿಯಂ ಮುನ್ಪಡೆ ಆಟಗಾರರು ಗೋಲುಗಳ ಮೇಲೆ ಗೋಲು ಬಾರಿಸಿದರು. ಪರಿಣಾಮ ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡವು 4-1 ಅಂತರದಿಂದ ಸೋಲನುಭವಿಸಿತು. ಈ ಗೆಲುವಿನ ನಡುವೆ ಬೆಲ್ಜಿಯಂ ಆಟಗಾರರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸಿದ್ಧ ನೃತ್ಯದ ಶೈಲಿಯನ್ನು ಅಣಕಿಸುವ ಮೂಲಕ ಸಂಭ್ರಮಿಸಿದ್ದು ವಿಶೇಷವಾಗಿತ್ತು.

ರಾಜಕೀಯ ಹಸ್ತಕ್ಷೇಪಕ್ಕೆ ತಿರುಗೇಟು:

ಪಂದ್ಯದ ನಡುವೆ ಬೆಲ್ಜಿಯಂ ಆಟಗಾರರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸಿದ್ಧ ನೃತ್ಯದ ಶೈಲಿಯನ್ನು ಅಣಕಿಸಲು ಮುಖ್ಯ ಕಾರಣ ಈ ಮ್ಯಾಚ್​ಗೂ ಮುನ್ನ ನಡೆದ ರಾಜಕೀಯ ಹಸ್ತಕ್ಷೇಪ.

ಅಮೆರಿಕದ ಫಾರ್ವರ್ಡ್ ಆಟಗಾರ ಫೋಲಾರಿನ್ ಬಾಲೋಗುನ್ ಹಿಂದಿನ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದಿದ್ದರಿಂದ ಅವರಿಗೆ ಒಂದು ಪಂದ್ಯದ ನಿಷೇಧ ಹೇರಲಾಗಿತ್ತು. ಆದರೆ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರಿಗೆ ವೈಯಕ್ತಿಕವಾಗಿ ಕರೆ ಮಾಡಿ ಈ ನಿಷೇಧವನ್ನು ರದ್ದುಗೊಳಿಸುವಂತೆ ಒತ್ತಡ ಹೇರಿದ್ದರು.

ಈ ಒತ್ತಡಕ್ಕೆ ಮಣಿದ ಫಿಫಾ ಪಂದ್ಯಕ್ಕೆ ಕೆಲವೇ ಗಂಟೆಗಳ ಮುನ್ನ ನಿಷೇಧವನ್ನು ಹಿಂಪಡೆಯಿತು. ಇದು ಬೆಲ್ಜಿಯಂ ಫುಟ್‌ಬಾಲ್ ಸಂಸ್ಥೆ ಮತ್ತು ಯುರೋಪಿಯನ್ ಫುಟ್‌ಬಾಲ್ ಫೆಡರೇಶನ್ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಡೊನಾಲ್ಡ್ ಟ್ರಂಪ್ ಮಾಡಿದ ಈ ರಾಜಕೀಯ ಹಸ್ತಕ್ಷೇಪವನ್ನು ಅಣಕಿಸುವ ಸಲುವಾಗಿಯೇ ಬೆಲ್ಜಿಯಂ ಆಟಗಾರರು ಗೆಲುವು ಖಚಿತವಾಗುತ್ತಿದ್ದಂತೆ ‘ಟ್ರಂಪ್ ಡ್ಯಾನ್ಸ್’ ಮಾಡಿ ಸಂಭ್ರಮಿಸಿದ್ದಾರೆ.

ಪಂದ್ಯದ ಮುಖ್ಯಾಂಶ:

ಅಮೆರಿಕ ತಂಡವು ರಾಜಕೀಯ ಪ್ರಭಾವ ಬಳಸಿ ತನ್ನ ಆಟಗಾರನನ್ನು ಆಡಿಸಿದರೂ ಮೈದಾನದಲ್ಲಿ ಬೆಲ್ಜಿಯಂ ಎದುರು ತಲೆಬಾಗಬೇಕಾಯಿತು. ಲೂಮೆನ್ ಫೀಲ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಲ್ಜಿಯಂ ಆಟಗಾರರು ಅದ್ಭುತ ಆಟ ಪ್ರದರ್ಶಿಸಿದ್ದರು.

  • 9ನೇ ನಿಮಿಷ: ಬೆಲ್ಜಿಯಂನ ಚಾರ್ಲ್ಸ್ ಡಿ ಕೆಟೆಲೇರೆ ಮೊದಲ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
  •  31ನೇ ನಿಮಿಷ: ಅಮೆರಿಕದ ಮಲಿಕ್ ಟಿಲ್‌ಮನ್ ಫ್ರೀ-ಕಿಕ್ ಮೂಲಕ ಗೋಲು ಗಳಿಸಿ ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದರು.
  • 33ನೇ ನಿಮಿಷ: ಅಮೆರಿಕ ಗೋಲು ದಾಖಲಿಸಿದ ತಕ್ಷಣವೇ ತಿರುಗೇಟು ನೀಡಿದ ಡಿ ಕೆಟೆಲೇರೆ ಅದ್ಭುತ ಹೆಡರ್ ಮೂಲಕ ಗೋಲು ಬಾರಿಸಿ ಬೆಲ್ಜಿಯಂಗೆ 2-1 ಮುನ್ನಡೆ ನೀಡಿದರು.
  •  57ನೇ ನಿಮಿಷ: ಹ್ಯಾನ್ಸ್ ವನಾಕನ್ ಅಮೆರಿಕದ ಗೋಲ್‌ಕೀಪರ್ ಮಾಡಿದ ತಪ್ಪನ್ನು ಬಳಸಿ ಮೂರನೇ ಗೋಲು ಗಳಿಸಿದರು.
  •  90+3ನೇ ನಿಮಿಷ: ಪಂದ್ಯದ ಕೊನೆಯ ಹೆಚ್ಚುವರಿ ಸಮಯದಲ್ಲಿ ರೊಮೇಲು ಲುಕಾಕು ನಾಲ್ಕನೇ ಗೋಲು ಬಾರಿಸಿ 4-1 ಅಂತರದಿಂದ ಬೆಲ್ಜಿಯಂ ಗೆಲುವನ್ನು ಖಚಿತಪಡಿಸಿದರು.

ವೈರಲ್ ಆದ ಟ್ರಂಪ್ ಡ್ಯಾನ್ಸ್:

ಲುಕಾಕು ತಮ್ಮ ಗೋಲು ಗಳಿಸಿದ ತಕ್ಷಣ ಕಾರ್ನರ್ ಫ್ಲ್ಯಾಗ್ ಬಳಿ ಓಡಿಹೋಗಿ, ಇಡೀ ತಂಡದೊಂದಿಗೆ ಡೊನಾಲ್ಡ್ ಟ್ರಂಪ್ ಅವರ ಸಿಗ್ನೇಚರ್​ ಶೈಲಿಯಲ್ಲಿ  ನೃತ್ಯ ಮಾಡಿದರು.  ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ “ಇದನ್ನೂ ಈಗ ರದ್ದುಗೊಳಿಸಿ ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕ್ರಿಸ್ಟಿಯಾನೊ ಕಡೆಯಿಂದ ಈಡೇರಲಿದೆಯಾ ರೊನಾಲ್ಡೊ ವಿಶ್ವಕಪ್ ಕನಸು!

ಇನ್ನು ಈ ಸೋಲಿನೊಂದಿಗೆ ಟೂರ್ನಿಯ ಸಹ-ಆತಿಥೇಯ ರಾಷ್ಟ್ರಗಳಾದ ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ ಮೂರೂ ತಂಡಗಳು ವಿಶ್ವಕಪ್‌ನಿಂದ ಅಧಿಕೃತವಾಗಿ ಹೊರಬಿದ್ದಿವೆ. ಬೆಲ್ಜಿಯಂ ತಂಡವು ಜುಲೈ 10 ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಸ್ಪೇನ್ ತಂಡವನ್ನು ಎದುರಿಸಲಿದೆ.

Published On – 1:07 pm, Tue, 7 July 26

Source link

Video: ತಮ್ಮ ಮಾಸಿಕ ಹೂಡಿಕೆ 1.7 ಲಕ್ಷ ರೂ; ಇನ್ವೆಸ್ಟ್ಮೆಂಟ್ ಸೀಕ್ರೆಟ್ ರಿವೀಲ್ ಮಾಡಿದ ಬೆಂಗಳೂರಿನ ದಂಪತಿ – Kannada News | Bengaluru: Here’s another way to save; Bengaluru ‘millennial’ couple reveals their secret.

ಬೆಂಗಳೂರು, ಜುಲೈ 07: ಬೆಂಗಳೂರು (Bengaluru) ಅಂದ್ರೆ ಸಾಕು, ಕೆಲವರಿಗೆ ಎಷ್ಟು ದುಡಿದ್ರೂ ಸಾಕಾಗಲ್ಲ. ಉಳಿತಾಯ ಬಿಡಿ, ತಿಂಗಳ ಖರ್ಚು ವೆಚ್ಚ ಸರಿದೂಗಿಸುವುದರಲ್ಲೇ ಸಾಕಾಗಿ ಹೋಗುತ್ತದೆ. ಹೀಗಿರುವಾಗ ಬೆಂಗಳೂರಿನ ಈ ದಂಪತಿಯ ಮಾಸಿಕ ಹೂಡಿಕೆ ತಿಳಿದ್ರೆ ನೀವು ಶಾಕ್ ಆಗ್ತೀರಾ. ಹೌದು, ತಿಂಗಳಿಗೆ 1.7 ಲಕ್ಷ ರೂವನ್ನು ಎಸ್ಐಪಿ, ಇಕ್ವಿಟಿ ಸೇರಿದಂತೆ ಇನ್ನಿತ್ತರ ಷೇರುಗಳಲ್ಲೂ ಹೂಡಿಕೆ ಮಾಡಿ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವುದಾಗಿ ಹೇಳಿದ್ದಾರೆ. ಈ ದಂಪತಿಯ ಹೂಡಿಕೆ ತಂತ್ರಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಮೇಘಾ ಹಾಗೂ ಶುಭಮ್ (@the12absproject) ಹೆಸರಿನ ಜಂಟಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಬೆಂಗಳೂರು ಮೂಲದ ಮಿಲೇನಿಯಲ್ ದಂಪತಿ ಹಣವನ್ನು ಹೇಗೆ ನಿರ್ವಹಿಸುತ್ತಾರೆ ಎಂದು ವಿವರಿಸಿದ್ದಾರೆ. ಈ ದಂಪತಿಯರಿಬ್ಬರೂ ಬೆಂಗಳೂರಿನಲ್ಲಿ ಮಿಲೇನಿಯಲ್ ಕುಟುಂಬವಾಗಿ ನಾವು ನಮ್ಮ ಹಣವನ್ನು ಹೇಗೆ ಹೂಡಿಕೆ ಮಾಡುತ್ತೇವೆ ಎಂಬುದು ಇಲ್ಲಿದೆ ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ವರ್ಷಗಳಲ್ಲಿಎಸ್‌ಐಪಿಗಳನ್ನು ಹೆಚ್ಚಿಸಿದ್ದು, ತಿಂಗಳಿಗೆ 65,000 ರೂ ಹೂಡಿಕೆ ಮಾಡುತ್ತೇವೆ. ಈಕ್ವಿಟಿಗಳಲ್ಲಿ ಇನ್ವೆಸ್ಟ್ ಮಾಡುತ್ತೇವೆ. ಸಾಧ್ಯವಾದಾಗಲೆಲ್ಲಾ ದೊಡ್ಡ ಮೊತ್ತದ ಹಣವನ್ನು ಹಾಕುತ್ತೇವೆ. ತಮ್ಮ ನಿವೃತ್ತಿ ನಿಧಿಗೆ ಸ್ವಲ್ಪ ಹಣವನ್ನು ವಿನಿಯೋಗಿಸುತ್ತೇವೆ. ತಮ್ಮ ಮಗಳ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸರ್ಕಾರಿ ಯೋಜನೆಯಲ್ಲಿ ಹೂಡಿಕೆಮಾಡುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಅಂದು ಕಾಲೇಜ್ ಫೀಸ್ ಕಟ್ಟಲು ದುಡ್ಡಿಗಾಗಿ ಪರದಾಟ, ಇಂದು ಕೋಟಿ ರೂ ಸಂಪಾದನೆ; ಇದು ಬೆಂಗಳೂರು ಸಾಫ್ಟ್‌ವೇರ್ ಇಂಜಿನಿಯರ್‌ನ ಕಥೆ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ, ಈ ತಂತ್ರವು ಒಂದು ನಿರ್ದಿಷ್ಟ ಗುಂಪಿಗೆ ಮಾತ್ರ ಅನ್ವಯಿಸುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಇಷ್ಟು ಮೊತ್ತವನ್ನು ಹೂಡಿಕೆ ಮಾಡಿದ್ರೆ ಮಧ್ಯಮವರ್ಗದವರು ಖರ್ಚು ವೆಚ್ಚಗಳನ್ನು ಹೇಗೆ ನಿಭಾಯಿಸೋದು ಎಂದು ಕೇಳಿದ್ದಾರೆ. ಮತ್ತೊಬ್ಬರು, ಲಕ್ಷಾನುಗಟ್ಟಲೇ ಸಂಬಳವಿಲ್ಲದವರಿಗೆ ನಿಮ್ಮ ಸಲಹೆಗಳು ಪ್ರಸ್ತುತವಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IIMB: ಇಂಡೋನೇಷ್ಯಾದಲ್ಲೂ ತಲೆ ಎತ್ತಲಿದೆ ಐಐಎಂ ಬೆಂಗಳೂರು, ಪ್ರಧಾನಿ ಮೋದಿ ಘೋಷಣೆ – Kannada News | IIM Bangalore to Open New Indonesia Campus: PM Modi Announces Global Expansion

ಜಕಾರ್ತಾ, ಜುಲೈ 07: ಭಾರತದ ಪ್ರತಿಷ್ಠಿತ ಬಿಜಿನೆಸ್ ಸ್ಕೂಲ್ ಆದ ‘ಭಾರತೀಯ ನಿರ್ವಹಣಾ ಸಂಸ್ಥೆ ಬೆಂಗಳೂರು’ (IIM Bangalore – IIMB) ಇನ್ಮುಂದೆ ವಿದೇಶದಲ್ಲೂ ತನ್ನ ಹೆಜ್ಜೆಗುರುತನ್ನು ಮೂಡಿಸಲಿದೆ. ಇಂಡೋನೇಷ್ಯಾದಲ್ಲಿ ಐಐಎಂ ಬೆಂಗಳೂರಿನ ಹೊಸ ಅಂತರರಾಷ್ಟ್ರೀಯ ಕ್ಯಾಂಪಸ್ ಅನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಕಾರ್ತಾದಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.

ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಈ ವಿಷಯವನ್ನು ತಿಳಿಸಿದ್ದು, ಈ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ.

ದೇಶದ 2ನೇ ವಿದೇಶಿ ಐಐಎಂ ಕ್ಯಾಂಪಸ್
ಭಾರತದ ಐಐಎಂ ಸಂಸ್ಥೆಗಳ ಪೈಕಿ ವಿದೇಶದಲ್ಲಿ ಆರಂಭವಾಗುತ್ತಿರುವ ಎರಡನೇ ಕ್ಯಾಂಪಸ್ ಇದಾಗಿದೆ. ಇದಕ್ಕೂ ಮುನ್ನ ಐಐಎಂ ಅಹಮದಾಬಾದ್ ತನ್ನ ಕ್ಯಾಂಪಸ್ ಅನ್ನು ದುಬೈನಲ್ಲಿ ತೆರೆಯುವುದಾಗಿ ಘೋಷಿಸಿತ್ತು. ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐಐಟಿ ಮದ್ರಾಸ್ (ಟಾಂಜಾನಿಯಾ) ಮತ್ತು ಐಐಟಿ ದೆಹಲಿ (ಅಬುಧಾಬಿ) ಈಗಾಗಲೇ ವಿದೇಶದಲ್ಲಿ ತಮ್ಮ ಶಾಖೆಗಳನ್ನು ತೆರೆದಿದ್ದು, ಈಗ ಈ ಸಾಲಿಗೆ ಐಐಎಂ ಬೆಂಗಳೂರು ಕೂಡ ಸೇರ್ಪಡೆಯಾಗಿದೆ.

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF – 2025) ಪ್ರಕಾರ, ಐಐಎಂ ಬೆಂಗಳೂರು ಇಡೀ ದೇಶದಲ್ಲೇ ಎರಡನೇ ಅತ್ಯುತ್ತಮ ಮ್ಯಾನೇಜ್‌ಮೆಂಟ್ ಸಂಸ್ಥೆಯಾಗಿದೆ.

ಕ್ಯಾಂಪಸ್ ಎಲ್ಲಿ ಬರಲಿದೆ? ಏನಿದರ ವಿಶೇಷ?
ವಿಶೇಷ ಆರ್ಥಿಕ ವಲಯ: ಈ ಹೊಸ ಐಐಎಂ ಬೆಂಗಳೂರು ಕ್ಯಾಂಪಸ್ ಇಂಡೋನೇಷ್ಯಾದ ಪೂರ್ವ ಜಾವಾದ ಮಲಾಂಗ್‌ನಲ್ಲಿರುವ ‘ಸಿಂಘಾಸರಿ ವಿಶೇಷ ಆರ್ಥಿಕ ವಲಯ’ದಲ್ಲಿ (Singhasari SEZ) ತಲೆಯೆತ್ತಲಿದೆ. ಡಿಜಿಟಲ್ ಆರ್ಥಿಕತೆ, ನಾವೀನ್ಯತೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಮೀಸಲಾಗಿರುವ ಇಂಡೋನೇಷ್ಯಾದ ಮೊದಲ ವಿಶೇಷ ವಲಯ ಇದಾಗಿದೆ.

ಪ್ರಮುಖ ಕೋರ್ಸ್‌ಗಳು: ಈ ಕ್ಯಾಂಪಸ್‌ನಲ್ಲಿ ಮುಖ್ಯವಾಗಿ ಮ್ಯಾನೇಜ್‌ಮೆಂಟ್ (MBA), ಡಿಜಿಟಲ್ ಬಿಸಿನೆಸ್, ಕೃತಕ ಬುದ್ಧಿಮತ್ತೆ (AI), ಉದ್ಯಮಶೀಲತೆ (Entrepreneurship) ಮತ್ತು ನಾಯಕತ್ವ ಅಭಿವೃದ್ಧಿಯ ಕುರಿತು ಜಾಗತಿಕ ಮಟ್ಟದ ಕೋರ್ಸ್‌ಗಳನ್ನು ನೀಡಲಾಗುತ್ತದೆ.

ಮತ್ತಷ್ಟು ಓದಿ: Apply Now: IIM ಬೆಂಗಳೂರು ಡೇಟಾ ಸೈನ್ಸ್ ಮತ್ತು ಬಿ.ಎಸ್ಸಿ ಆನರ್ಸ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

‘ಆಸಿಯಾನ್’ ಯುವಕರಿಗೆ ಆಸರೆ: ಈ ಕ್ಯಾಂಪಸ್‌ನಿಂದ ಕೇವಲ ಇಂಡೋನೇಷ್ಯಾ ಮಾತ್ರವಲ್ಲದೆ, ಇಡೀ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ASEAN) ಯುವಕರಿಗೆ ಅತ್ಯುನ್ನತ ಶಿಕ್ಷಣ ಪಡೆಯಲು ದೊಡ್ಡ ಅನುಕೂಲವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತ-ಇಂಡೋನೇಷ್ಯಾ ಸ್ನೇಹ ವೃದ್ಧಿ
ಪ್ರಧಾನಿ ಮೋದಿಯವರ ಈ ಪ್ರವಾಸದಲ್ಲಿ ಕೇವಲ ಶಿಕ್ಷಣ ಮಾತ್ರವಲ್ಲದೆ ಕೃತಕ ಬುದ್ಧಿಮತ್ತೆ (AI), ದೂರಸಂಪರ್ಕ, ರಕ್ಷಣೆ (ಬ್ರಹ್ಮೋಸ್ ಮತ್ತು ಅಸ್ತ್ರ ಕ್ಷಿಪಣಿ), ಆರೋಗ್ಯ ಮತ್ತು ಕೃಷಿ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದಗಳು ನಡೆದಿವೆ. ಉಭಯ ದೇಶಗಳ ಈ ಕಾರ್ಯತಂತ್ರದ ಪಾಲುದಾರಿಕೆಯು ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಮತ್ತು ಆರ್ಥಿಕ ಪ್ರಗತಿಗೆ ಭಾರಿ ವೇಗ ನೀಡಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

MS Dhoni: 7ರ ಸರದಾರನ 7 ದಾಖಲೆಗಳು! – Kannada News | Mahendra singh dhoni Birthday: 7 unique records held by MS Dhoni

ಕ್ರಿಕೆಟ್ ಸಾಮ್ರಾಜ್ಯದ ಅಧಿಪತಿ, ಹೆಲಿಕಾಪ್ಟರ್ ಶಾಟ್‌ಗಳ ಸರದಾರ, ಜಗತ್ತು ಕಂಡ ಅತ್ಯಂತ ಯಶಸ್ವಿ ನಾಯಕ… ಅವರೇ ಮಹೇಂದ್ರ ಸಿಂಗ್ ಧೋನಿ. ಮೈದಾನದಲ್ಲಿ ಬಿರುಗಾಳಿಯಂತಹ ಪರಿಸ್ಥಿತಿ ಇದ್ದರೂ ಹಿಮದಂತೆ ಶಾಂತವಾಗಿರುತ್ತಿದ್ದ ಧೋನಿ, ಬರೀ ಪಂದ್ಯಗಳನ್ನಷ್ಟೇ ಗೆಲ್ಲಲಿಲ್ಲ, ವಿಶ್ವದ ಕೋಟ್ಯಂತರ ಅಭಿಮಾನಿಗಳ ಹೃದಯವನ್ನೂ ಗೆದ್ದರು.

ರಾಂಚಿಯ ಸಣ್ಣ ಹಳ್ಳಿಯಿಂದ ಬಂದು ಜಾಗತಿಕ ಕ್ರಿಕೆಟ್ ಅನ್ನೇ ಆಳಿದ ಈ ‘ಕ್ಯಾಪ್ಟನ್ ಕೂಲ್’ ಬೆನ್ನ ಮೇಲಿದ್ದ ಆ ಮ್ಯಾಜಿಕಲ್ ನಂಬರ್ ‘7’ ಕೇವಲ ಜೆರ್ಸಿ ಸಂಖ್ಯೆಯಾಗಿ ಉಳಿಯಲಿಲ್ಲ. ಅದೊಂದು ಇತಿಹಾಸದ ಹೆಗ್ಗುರುತಾಯಿತು. ವಿಶ್ವ ಕ್ರಿಕೆಟ್ ಮೈದಾನದಲ್ಲಿ ಧೋನಿ ಬರೆದಿಟ್ಟಿರುವ, ಯಾರೂ ಅಳಿಸಲಾಗದ ಆ 7 ಅಪರೂಪದ ಮತ್ತು ರೋಮಾಂಚನಕಾರಿ ದಾಖಲೆಗಳ ಅನಾವರಣ ಇಲ್ಲಿದೆ.

ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ:

ಕ್ರಿಕೆಟ್ ಜಗತ್ತಿನಲ್ಲಿ ಐಸಿಸಿಯ ಎಲ್ಲಾ ಮೂರು ಪ್ರಮುಖ ಬಿಳಿ ಚೆಂಡಿನ ಟ್ರೋಫಿಗಳನ್ನು ಮುಡಿಗೇರಿಸಿಕೊಂಡ ಏಕೈಕ ನಾಯಕ ಧೋನಿ. ಇವರ ನೇತೃತ್ವದಲ್ಲಿ ಭಾರತ ತಂಡವು 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿತು.

ಅತಿ ಹೆಚ್ಚು ಪಂದ್ಯಗಳ ಕ್ಯಾಪ್ಟನ್:

ವಿಶ್ವ ಕ್ರಿಕೆಟ್‌ನಲ್ಲಿ ‘ಕ್ಯಾಪ್ಟನ್ ಕೂಲ್’ ಎಂದೇ ಖ್ಯಾತರಾದ ಧೋನಿ, ಭಾರತ ತಂಡವನ್ನು ಒಟ್ಟು 332 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ (200 ಒನ್‌ಡೇ, 60 ಟೆಸ್ಟ್, 72 ಟಿ20) ಮುನ್ನಡೆಸಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿ ಕಾಣಿಸಿಕೊಂಡ ಆಟಗಾರ ಎನಿಸಿಕೊಂಡಿದ್ದಾರೆ.

ಅತಿ ಹೆಚ್ಚು ಸ್ಟಂಪಿಂಗ್ಸ್:

ವಿಕೆಟ್ ಹಿಂಭಾಗದಲ್ಲಿ ಧೋನಿ ಹೊಂದಿದ್ದ ಚಿರತೆಯಂತಹ ವೇಗ ಎಲ್ಲರಿಗೂ ಗೊತ್ತು. ಅವರು ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 195 ಸ್ಟಂಪಿಂಗ್ಸ್ ಮಾಡುವ ಮೂಲಕ ಜಗತ್ತಿನಲ್ಲೇ ನಂಬರ್ 1 ಸ್ಥಾನದಲ್ಲಿದ್ದಾರೆ. ಕೇವಲ 0.08 ಸೆಕೆಂಡ್‌ಗಳಲ್ಲಿ ಸ್ಟಂಪಿಂಗ್ ಮಾಡಿದ ವಿಶ್ವದ ಅತ್ಯಂತ ವೇಗದ ದಾಖಲೆಯೂ ಇವರ ಹೆಸರಿನಲ್ಲಿದೆ.

ಗರಿಷ್ಠ ವೈಯುಕ್ತಿಕ ಸ್ಕೋರ್:

2005ರಲ್ಲಿ ಶ್ರೀಲಂಕಾ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಧೋನಿ ಅಬ್ಬರಿಸಿ ಬೊಬ್ಬೆರೆದು ಔಟಾಗದೆ 183 ರನ್* ಚಚ್ಚಿದ್ದರು. ಎರಡು ದಶಕಗಳು ಕಳೆದರೂ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಒಬ್ಬರು ಗಳಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿ ಈ ದಾಖಲೆ ಇಂದಿಗೂ ಅಚಲವಾಗಿದೆ.

ಅಜೇಯ ದಾಖಲೆ:

ಕ್ರಿಕೆಟ್ ಜಗತ್ತಿನ ‘ಅತ್ಯುತ್ತಮ ಫಿನಿಶರ್’ ಎನಿಸಿಕೊಂಡಿರುವ ಧೋನಿ, ತಾವು ಆಡಿದ 350 ಒನ್‌ಡೇ ಪಂದ್ಯಗಳಲ್ಲಿ ದಾಖಲೆಯ 84 ಬಾರಿ ಔಟಾಗದೆ (ನಾಟ್ ಔಟ್) ಉಳಿದಿದ್ದಾರೆ. ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ದು ಗೆಲ್ಲಿಸುವ ಅವರ ಕಲೆಗೆ ಈ ಅಂಕಿ-ಅಂಶವೇ ಸಾಕ್ಷಿ.

ರನ್​ಗಳ ರಾಶಿ:

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ ಧೋನಿ, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನಾಯಕನಾಗಿ ಕಾರ್ಯನಿರ್ವಹಿಸುತ್ತಲೇ 5,000 ರನ್ ಪೂರೈಸಿದ ಮೊದಲ ಮತ್ತು ಏಕೈಕ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದರೊಂದಿಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಿಗೆ (226) ನಾಯಕತ್ವ ವಹಿಸಿದ ದಾಖಲೆಯೂ ಇವರದ್ದೇ ಆಗಿದೆ.

ಇದನ್ನೂ ಓದಿ: ಕ್ರಿಸ್ಟಿಯಾನೊ ಕಡೆಯಿಂದ ಈಡೇರಲಿದೆಯಾ ರೊನಾಲ್ಡೊ ವಿಶ್ವಕಪ್ ಕನಸು!

ಅತಿ ಹೆಚ್ಚು ಶತಕ:

ತಮ್ಮ ಜೆರ್ಸಿ ಸಂಖ್ಯೆ 7 ಕ್ಕೆ ತಕ್ಕಂತೆ ಧೋನಿ ಹೊಂದಿರುವ ಮತ್ತೊಂದು ಅಪರೂಪದ ದಾಖಲೆ ಇದು. ಸಾಮಾನ್ಯವಾಗಿ 7ನೇ ಕ್ರಮಾಂಕದಲ್ಲಿ ಬರುವ ಬ್ಯಾಟರ್‌ಗಳಿಗೆ ಹೆಚ್ಚು ಎಸೆತಗಳು ಸಿಗುವುದಿಲ್ಲ. ಆದರೂ ಧೋನಿ ಏಕದಿನ ಕ್ರಿಕೆಟ್‌ನಲ್ಲಿ ಈ ಸ್ಥಾನದಲ್ಲಿ ಕಣಕ್ಕಿಳಿದು 2 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 2 ಶತಕ ಸಿಡಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.

Source link

ಬಂಡಾಜೆ ಫಾಲ್ಸ್​ನಲ್ಲಿ ಪ್ರವಾಸಿಗರ ಹುಚ್ಚಾಟ! ಅಪಾಯಕಾರಿ ಸ್ಥಳದಲ್ಲಿ ಬೇಕಾ ಇಂತಾ ಸಾಹಸ? – Kannada News | Bandaje Falls: Tourists Reckless Antics Amidst Monsoon Fury and Extreme Danger

ಚಿಕ್ಕಮಗಳೂರು, ಜುಲೈ 07: ಮುಂಗಾರು ಮಳೆಯ ಅಬ್ಬರಕ್ಕೆ ಮೂಡಿಗೆರೆ ಮತ್ತು ಬೆಳ್ತಂಗಡಿ ಗಡಿಯಲ್ಲಿರುವ ಸುಂದರ ಬಂಡಾಜೆ ಜಲಪಾತವು ಮೈದುಂಬಿ ಹರಿಯುತ್ತಿದ್ದು, ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ. ಈ ಪ್ರಶಾಂತ ವಾತಾವರಣದಲ್ಲಿ ಕೆಲವು ಪ್ರವಾಸಿಗರು ಅಪಾಯಕಾರಿ ಹುಚ್ಚಾಟಕ್ಕೆ ಮುಂದಾಗುತ್ತಿದ್ದಾರೆ. ನೂರಾರು ಅಡಿಗಳ ಎತ್ತರದಿಂದ ಭೋರ್ಗರೆಯುವ ಜಲಪಾತದ ಅಂಚಿನಲ್ಲಿ ನಿಂತು ಸಾಹಸ ಪ್ರದರ್ಶಿಸುತ್ತಿದ್ದಾರೆ. ಸ್ವಲ್ಪ ಕಾಲು ಜಾರಿದರೂ ಸಾವಿರಾರು ಅಡಿಗಳ ಆಳಕ್ಕೆ ಬಿದ್ದು ಪ್ರಾಣಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯಿದ್ದರೂ ಪ್ರವಾಸಿಗರು ಎಚ್ಚರಿಕೆ ವಹಿಸುತ್ತಿಲ್ಲ. ಇಂತಹ ಅಪಾಯಕಾರಿ ಸ್ಥಳಗಳಲ್ಲಿ ಈ ರೀತಿಯ ಬೇಜವಾಬ್ದಾರಿಯುತ ವರ್ತನೆಗಳ ಬಗ್ಗೆ TV9 ಕನ್ನಡ ವರದಿ ಮಾಡಿದ್ದು, ಪ್ರವಾಸಿಗರು ತಮ್ಮ ಪ್ರಾಣಕ್ಕೆ ಬೆಲೆ ಕೊಟ್ಟು ಎಚ್ಚರಿಕೆಯಿಂದ ವರ್ತಿಸುವಂತೆ ಮನವಿ ಮಾಡಿದೆ.

ಸಾವಿರಾರು ಅಡಿ ಎತ್ತರದ ಈ ಕಡಿದಾದ ಪ್ರದೇಶದಲ್ಲಿ ಮಳೆಗಾಲದ ಕಾರಣ ಬಂಡೆಗಳು ತೀವ್ರವಾಗಿ ಜಾರುತ್ತಿರುತ್ತವೆ. ಸ್ವಲ್ಪ ಕಾಲು ಜಾರಿದರೂ ಪ್ರಾಣಕ್ಕೆ ಕಂಟಕ ಕಾಯಂ. ಪ್ರಕೃತಿಯ ಸೌಂದರ್ಯವನ್ನು ದೂರದಿಂದಲೇ ಆಸ್ವಾದಿಸಬೇಕೇ ಹೊರತು, ಕ್ಷಣಿಕ ಮೋಜು ಹಾಗೂ ಸಾಮಾಜಿಕ ಜಾಲತಾಣಗಳ ರೀಲ್ಸ್ ಹುಚ್ಚಾಟಕ್ಕಾಗಿ ಜೀವವನ್ನು ಪಣಕ್ಕಿಡುವುದು ಜಾಣತನವಲ್ಲ. ಪ್ರವಾಸಿಗರು ಜವಾಬ್ದಾರಿಯಿಂದ ವರ್ತಿಸಿ, ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಕೃಷ್ಣಭೈರೇಗೌಡರ ಆಪ್ತನಿಂದ ರಾಷ್ಟ್ರಪತಿಗಳ‌ ಹೆಸರಿನಲ್ಲಿರುವ ಜಾಗ ಕಬಳಿಕೆ ಆರೋಪ: ಲೋಕಾಯುಕ್ತಕ್ಕೆ ದೂರು – Kannada News | 100 Crore Land Scam: Complaint Filed with Lokayukta Against Minister Krishna Byre Gowda’s Aide for Grabbing Central Government Land

ಬೆಂಗಳೂರು, ಜುಲೈ 07: ಸಚಿವ ಕೃಷ್ಣ ಭೈರೇಗೌಡರ ಆಪ್ತ ಎನ್ನಲಾಗಿರುವ ಕೆ.ಎಂ. ಚೇತನ್​​ ಎಂಬವರ ವಿರುದ್ಧ ಭಾರತದ‌ ರಾಷ್ಟ್ರಪತಿಗಳ‌ ಹೆಸರಿನಲ್ಲಿರುವ ನೂರಾರು ಕೋಟಿ ಮೌಲ್ಯದ ಸರ್ಕಾರಿ ಸ್ವತ್ತು ಕಬಳಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗ ಕಬಳಿಸಲಾಗಿದೆ ಎಂದು ಆರೋಪಿಸಿ 2015-2020ರ ಅವಧಿಯಲ್ಲಿ ಬ್ಯಾಟರಾಯನಪುರದ ಕೊಡಿಗೇಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯರಾಗಿದ್ದ ಚೇತನ್​​ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದೂರು ಸಲ್ಲಿಸಿದ್ದಾರೆ.

32 ಗುಂಟೆ ಜಾಗಕ್ಕೆ ರಾತ್ರೋರಾತ್ರಿ ಬೇಲಿ

ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಕೊಡಿಗೇಹಳ್ಳಿ ಗ್ರಾಮದಲ್ಲಿನ ಚೇರ್‌ಮ್ಯಾನ್ ಕ್ಲಬ್ ಪಕ್ಕದಲ್ಲಿರುವ ಜಾಗವನ್ನು ಕಬಳಿಸಲಾಗಿದೆ. ಕೇಂದ್ರ ಇಂಧನ ಸಚಿವಾಲಯದ 32 ಗುಂಟೆ ವಿಸ್ತೀರ್ಣದ ಸ್ವತ್ತನ್ನೂ ಸೇರಿಸಿಕೊಂಡು ಚೇತನ್ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಈ ಜಾಗದ ಮೌಲ್ಯ ಸುಮಾರು 100 ಕೋಟಿ ರೂ.ಗಳಿಗೂ ಹೆಚ್ಚಾಗಿದೆ. ಸರ್ವೆ ನಂಬರ್ 14/1ರ 1 ಎಕರೆ 11 ಗುಂಟೆ ಜಾಗ ಮಾತ್ರ ಕ್ಲಬ್‌ಗೆ ಸೇರಿದೆ. ಅದಕ್ಕೆ ಹೊಂದಿಕೊಡಂತೆ ಪಶ್ಚಿಮ ಭಾಗದಲ್ಲಿ ರಾಷ್ಟ್ರಪತಿಗಳ ಹೆಸರಲ್ಲಿ ಇಂಧನ ಸಚಿವಾಲಯದ ಜಾಗ ಇದ್ದು, ಅಲ್ಲಿ ಇಂಧನ ಸಚಿವಾಲಯದ ಕ್ವಾಟ್ರಸ್‌ಗಳನ್ನ ನಿರ್ಮಿಸಲಾಗಿದೆ. ಅದರ ಹೊರತಾಗಿ ಖಾಲಿ ಇದ್ದ 32 ಗುಂಟೆ ಜಾಗಕ್ಕೆ ರಾತ್ರೋರಾತ್ರಿ ಬೇಲಿ ಹಾಕಿದ್ದಾರೆ. ತಪ್ಪು ಮಾಹಿತಿ ನೀಡಿ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಕೊಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಪಾಕ್ ಅಧಿಕಾರಿಗಳ ಜೊತೆ ರಾಮ್ ಮಾಧವ್ ಗೌಪ್ಯಸಭೆ ಹೇಳಿಕೆ; ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್​ಗೆ ಲೀಗಲ್ ನೋಟಿಸ್​

ಅಧಿಕಾರಿಗಳಿಗೆ ಬೆದರಿಕೆ ಆರೋಪ

ಈ ಬಗ್ಗೆಇಂಧನ ಸಚಿವಾಲಯ ದೂರು ದಾಖಲಿಸಿದ್ದು, ಉಚ್ಚ ನ್ಯಾಯಲಯದಲ್ಲಿ ವಿಚಾರಣೆ ಕೂಡ ನಡೆದಿದೆ. ಈ ವೇಳೆ ತಪ್ಪನ್ನು ಚೇತನ್​​ ಒಪ್ಪಿಕೊಂಡಿದ್ದಾರೆ. ಅದಾದ ಬಳಿಕ ಏಪ್ರಿಲ್‌ನಲ್ಲಿ ಅಂದಿನ ಕಂದಾಯ ಸಚಿವರಾಗಿದ್ದ ಕೃಷ್ಣಭೈರೇಗೌಡರನ್ನ ಇಂಧನ ಸಚಿವಾಲಯದ ಅಧಿಕಾರಿಗಳು ಭೇಟಿ ಮಾಡುತ್ತಾರೆ. ಆದರೆ ಆ ವೇಳೆ ಅವರನ್ನ ದಬ್ಬಾಳಿಕೆ ಮಾಡಿ ಹೊರದಬ್ಬುವ ಕೆಲಸ ನಡೆದಿದೆ. ಜಾಗವನ್ನ ತಮ್ಮ ವಶಕ್ಕೆ ಪಡೆದುಕೊಳ್ಳಲು ಅಧಿಕಾರಿಗಳು ಹೋದಾಗ ಚೇತನ್, ಅವರ ತಂದೆ ಮಂಜುನಾಥ್, ಕೃಷ್ಣ ಭೈರೇಗೌಡರ ಬೆಂಬಲಿಗರು ಅವರನ್ನಯ ಹೆದರಿಸಿದ್ದಾರೆ. ಶಾಲಿನಿ ರಜನೀಶ್ ಅವರಿಗೂ ಕೂಡ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಅವರು ಕೂಡ  ಪರೋಕ್ಷವಾಗಿ ಕೃಷ್ಣಭೈರೇಗೌಡರಿಗೆ ಸಹಕಾರ ನೀಡಿದ್ದಾರೆ. ಈ ವಿಚಾರವಾಗಿ ಲೋಕಾಯುಕ್ತಾಗೆ ದೂರು ನೀಡಿದ್ದು, ಮುಖ್ಯಮಂತ್ರಿಗಳಿಗೂ ಇದರ ದಾಖಲೆ ನೀಡಿ ಸಿಬಿಐ ತನಿಖೆ ಆಗ್ರಹಿಸುತ್ತೇನೆ ಎಂದು ಎನ್.ಆರ್. ರಮೇಶ್ ತಿಳಿಸಿದ್ದಾರೆ.

ವರದಿ: ಅರುಣ್​​ ಕುಮಾರ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಹಮದಾಬಾದ್ ಸರಣಿ ಸ್ಫೋಟ ಕೇಸ್: ಎಲ್ಲಾ 38 ಭಯೋತ್ಪಾದಕರ ಮರಣದಂಡನೆ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್ – Kannada News | Ahmedabad Bomb Blasts: High Court Upholds Death for 38 Terrorists

ಅಹಮದಾಬಾದ್, ಜುಲೈ 07: ದೇಶವನ್ನೇ ನಡುಗಿಸಿದ್ದ 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ(Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಮಂಗಳವಾರ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಎಲ್ಲಾ 38 ಅಪರಾಧಿಗಳ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ ಒಮ್ಮತದಿಂದ ಎತ್ತಿಹಿಡಿದಿದೆ. ಇದರೊಂದಿಗೆ ಪ್ರಕರಣದಲ್ಲಿದ್ದ ಇತರ 11 ಭಯೋತ್ಪಾದಕರ ಜೀವಾವಧಿ ಶಿಕ್ಷೆಯನ್ನು ಸಹ ನ್ಯಾಯಾಲಯ ಕಾಯ್ದುಕೊಂಡಿದೆ.

ಇದೇ ವೇಳೆ, ಸ್ಫೋಟದಲ್ಲಿ ಮೃತರಾದ 56 ಜನರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಹಾಗೂ ಗಾಯಗೊಂಡ 200ಕ್ಕೂ ಹೆಚ್ಚು ಸಂತ್ರಸ್ತರಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡುವಂತೆಯೂ ಹೈಕೋರ್ಟ್ ಆದೇಶಿಸಿದೆ.

ಏನಿದು ಘಟನೆ?
ಜುಲೈ 26, 2008 ರಂದು ಗುಜರಾತ್‌ನ ಅಹಮದಾಬಾದ್‌ನಾದ್ಯಂತ ಕೇವಲ 70 ನಿಮಿಷಗಳ ಅವಧಿಯಲ್ಲಿ 20 ವಿವಿಧ ಸ್ಥಳಗಳಲ್ಲಿ ಬರೋಬ್ಬರಿ 21 ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಇಡೀ ನಗರವನ್ನು ಭೀತಿಯಲ್ಲಿ ಮುಳುಗಿಸಿದ್ದ ಈ ಭೀಕರ ಭಯೋತ್ಪಾದಕ ದಾಳಿಯಲ್ಲಿ 56 ಅಮಾಯಕರು ಜೀವ ಕಳೆದುಕೊಂಡಿದ್ದರು ಮತ್ತು 200 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದರು. ಈ ದಾಳಿಯ ಹೊಣೆಯನ್ನು ‘ಹರ್ಕತ್-ಉಲ್-ಜಿಹಾದ್-ಅಲ್-ಇಸ್ಲಾಮಿ’ (Huji) ಎಂಬ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿತ್ತು.

ಮತ್ತಷ್ಟು ಓದಿ: ಬೀದರ್​ನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ! ಶಾಲೆಗೆ ತೆರಳುತ್ತಿದ್ದ ಮಕ್ಕಳಿಗೆ ಗಂಭೀರ ಗಾಯ

ದೆಹಲಿ ಕೆಂಪು ಕೋಟೆ ಕಾರ್ ಬಾಂಬ್ ಸ್ಫೋಟ ತನಿಖೆಯೂ ಚುರುಕು
ಮತ್ತೊಂದೆಡೆ, ದೆಹಲಿಯ ಕೆಂಪು ಕೋಟೆ ಬಳಿ ನಡೆದಿದ್ದ ಕಾರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತೀವ್ರಗೊಳಿಸಿದೆ. ಸ್ಫೋಟದ ತೀವ್ರತೆಗೆ ಸಿಲುಕಿ ಮೃತಪಟ್ಟವರ ದೇಹದ ಭಾಗಗಳಿಗೆ ಸಂಬಂಧಿಸಿದ ಪ್ರಮುಖ ವಿಧಿವಿಜ್ಞಾನ (FSL) ವರದಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.

ದಾಳಿಯ ಸ್ವರೂಪ: ಅತಿ ಹೆಚ್ಚು ತೀವ್ರತೆಯ ವಾಹನ ಆಧಾರಿತ ಸುಧಾರಿತ ಸ್ಫೋಟಕ ಸಾಧನ ಬಳಸಿ ನಡೆಸಲಾದ ಈ ಕಾರು ಬಾಂಬ್ ಸ್ಫೋಟದಲ್ಲಿ 11 ಜನರು ಸಾವನ್ನಪ್ಪಿದ್ದರು ಮತ್ತು ಸಾರ್ವಜನಿಕ ಆಸ್ತಿಗೆ ಭಾರಿ ಹಾನಿಯಾಗಿತ್ತು.

ಭಯೋತ್ಪಾದಕ ಸಂಘಟನೆ ‘ಅನ್ಸಾರ್ ಗಜಾವತ್ ಉಲ್ ಹಿಂದ್’ ಜೊತೆ ಸಂಪರ್ಕ ಹೊಂದಿದ್ದ ಜಮೀರ್ ಅಹ್ಮದ್ ಅಹಂಗರ್ ಮತ್ತು ತುಫೈಲ್ ಅಹ್ಮದ್ ಭಟ್ ಎಂಬ ಇಬ್ಬರು ಪ್ರಮುಖ ಆರೋಪಿಗಳನ್ನು ಫೆಬ್ರವರಿ 2026 ರಲ್ಲಿ ಬಂಧಿಸಲಾಗಿದ್ದು, ಸದ್ಯ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.

ಶಸ್ತ್ರಾಸ್ತ್ರ ಸರಬರಾಜು: ಆರೋಪಿಗಳಾದ ಜಮೀರ್ ಮತ್ತು ತುಫೈಲ್ ದೇಶದ ವಿವಿಧೆಡೆ ದಾಳಿ ನಡೆಸಲು ರೈಫಲ್, ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸುತ್ತಿದ್ದರು ಎಂದು ಎನ್‌ಐಎ ತನ್ನ ಪೂರಕ ಆರೋಪಪಟ್ಟಿಯಲ್ಲಿ ತಿಳಿಸಿದೆ. ನ್ಯಾಯಾಲಯವು ವಿಧಿವಿಜ್ಞಾನ ವರದಿಯ ಮುಂದಿನ ಪರಿಶೀಲನೆಗಾಗಿ ಜುಲೈ 13 ರ ದಿನಾಂಕವನ್ನು ನಿಗದಿಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಶ್ವಬ್ಯಾಂಕ್‌ನ ಮೇಲ್ಮಧ್ಯಮ ಆದಾಯದ ಮಿತಿ ದಾಟಿದ ಕರ್ನಾಟಕ: ಗ್ಯಾರಂಟಿ ಯೋಜನೆಗಳೇ ಆರ್ಥಿಕ ಪ್ರಗತಿಯ ಬುನಾದಿ ಎಂದ ಸಿಎಂ – Kannada News | Karnataka Crosses World Bank Upper Middle Income Threshold: CM Credits 5 Guarantee Schemes for Economic Milestone

ವಿಶ್ವಬ್ಯಾಂಕ್‌ನ ಮೇಲ್ಮಧ್ಯಮ ಆದಾಯದ ಮಿತಿ ದಾಟಿದ ಕರ್ನಾಟಕImage Credit source: tv9

ಬೆಂಗಳೂರು, ಜುಲೈ 7: ವಿಶ್ವಬ್ಯಾಂಕ್‌ನ ಇತ್ತೀಚಿನ ವರದಿಯ ಪ್ರಕಾರ, ಭಾರತದ ಐದು ರಾಜ್ಯಗಳು ‘ಮೇಲ್ಮಧ್ಯಮ ವರ್ಗದ ಆದಾಯ (Upper Middle-Income)’ ಹೊಂದಿರುವ ಆರ್ಥಿಕತೆಗಳ ಮಿತಿಯನ್ನು (ಕಟ್ ಆಫ್) ಯಶಸ್ವಿಯಾಗಿ ದಾಟಿದ್ದು, ಈ ಪೈಕಿ ಕರ್ನಾಟಕವು ಮುಂಚೂಣಿಯಲ್ಲಿದೆ. ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕವು 5,579 ಡಾಲರ್ ತಲಾ ಆದಾಯದೊಂದಿಗೆ ದ್ವಿತೀಯ ಸ್ಥಾನ ಪಡೆದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಈ ಮಹತ್ವದ ಸಾಧನೆಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ಸಂತಸ ಹಂಚಿಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಇದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವಂತಹ ಕ್ಷಣವಾಗಿದೆ ಎಂದು ಬಣ್ಣಿಸಿದ್ದಾರೆ.

ಕನ್ನಡಿಗರ ಪರಿಶ್ರಮ, ಗ್ಯಾರಂಟಿ ಯೋಜನೆಗಳ ಕೊಡುಗೆ: ಡಿಕೆಶಿ

ರಾಜ್ಯದ ಈ ಹೆಮ್ಮೆಯ ಸಾಧನೆಯು ನಮ್ಮ ಉದ್ಯಮಿಗಳು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಜನತೆಯ ಕಠಿಣ ಪರಿಶ್ರಮ, ಅನ್ವೇಷಣಾ ಮನೋಭಾವ ಹಾಗೂ ಕ್ರಿಯಾಶೀಲತೆಗೆ ಸಂದ ಜಯವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದೇ ವೇಳೆ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡಿರುವ ಅವರು, ‘ನಮ್ಮ ಐದು ಗ್ಯಾರಂಟಿ ಯೋಜನೆಗಳು ಕೇವಲ ಕಲ್ಯಾಣ ಕಾರ್ಯಕ್ರಮಗಳಲ್ಲ; ಅವು ಜನರ ಮೇಲಿನ ಹೂಡಿಕೆಗಳಾಗಿವೆ. ಕುಟುಂಬಗಳ ಆದಾಯವನ್ನು ಬಲಪಡಿಸುವ, ಜೀವನೋಪಾಯವನ್ನು ಭದ್ರಪಡಿಸುವ ಮೂಲಕ ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ವಿಸ್ತರಿಸುವ ಮೂಲಕ, ಒಳಗೊಳ್ಳುವಿಕೆಯ ಬೆಳವಣಿಗೆಯೇ (Inclusive Growth) ಸುಸ್ಥಿರ ಆರ್ಥಿಕ ಪ್ರಗತಿಗೆ ಅತ್ಯಂತ ಬಲವಾದ ಬುನಾದಿ ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ’ ಎಂದು ಪ್ರತಿಪಾದಿಸಿದ್ದಾರೆ.

ವಿಶ್ವಬ್ಯಾಂಕ್‌ನ ನಿಯಮಾವಳಿಗಳ ಅನ್ವಯ ತಲಾ ಆದಾಯವು $1,175 ರಿಂದ $4,635 ರಷ್ಟಿದ್ದರೆ ಅದನ್ನು ಮಧ್ಯಮ ಆದಾಯದ ಮಿತಿ ಎನ್ನಲಾಗುತ್ತದೆ. ಭಾರತದ ಒಟ್ಟಾರೆ ಆರ್ಥಿಕತೆಗಿಂತ ಭಿನ್ನವಾಗಿ ದೆಹಲಿ ($6,217), ಕರ್ನಾಟಕ ($5,579), ತೆಲಂಗಾಣ ($5,407), ತಮಿಳುನಾಡು ($5,329) ಮತ್ತು ಗುಜರಾತ್ ($4,734) ರಾಜ್ಯಗಳು ಈ ಮಿತಿಯನ್ನು ಮೀರಿ ಮೇಲ್ಮಧ್ಯಮ ಆದಾಯದ ಜಾಗತಿಕ ಗುಣಮಟ್ಟವನ್ನು ತಲುಪಿವೆ. ಮಹಾರಾಷ್ಟ್ರ, ಹರಿಯಾಣ ಮತ್ತು ಕೇರಳ ರಾಜ್ಯಗಳು ಅತ್ಯಲ್ಪ ಅಂತರದಲ್ಲಿ ಈ ಮೈಲಿಗಲ್ಲನ್ನು ಮಿಸ್ ಮಾಡಿಕೊಂಡಿವೆ.

ಇದನ್ನೂ ಓದಿ: ಕೇವಲ 1 ತಿಂಗಳಲ್ಲಿ ಡಿಕೆಶಿ ಸಾಕಷ್ಟು ಕನಸಿನ ಯೋಜನೆ, ಹತ್ತಾರು ಸವಾಲುಗಳನ್ನ ಮೆಟ್ಟಿ ಆಡಳಿತಕ್ಕೆ ಚುರುಕು

ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಭಾರತದ ನಂಬರ್ ಒನ್ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು, ಬೆಳವಣಿಗೆಯ ಲಾಭಗಳು ಪ್ರತಿ ಮನೆಗೂ ತಲುಪುವಂತೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಂದೇಶದಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version