ದಸರಾ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಗಜಪಡೆಗೆ ಇಸಿಜಿ ಟೆಸ್ಟ್! ಆನೆಗಳ ಆಯ್ಕೆ ಪ್ರಕ್ರಿಯೆ ಶುರು – Kannada News | Mysuru Dasara 2026: First Time Ever ECG and Ultrasound Scanning Done for Dasara Elephants Selection Process

ದಸರಾ ಆನೆಗಳ ಆಯ್ಕೆ ಪ್ರಕ್ರಿಯೆ ಶುರುImage Credit source: tv9

ಮೈಸೂರು, ಜುಲೈ 7: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ (Mysuru Dasara 2026) ಆಚರಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ದಸರಾ ಗಜಪಡೆಯ ಆಯ್ಕೆ ಪ್ರಕ್ರಿಯೆಗೆ ಅರಣ್ಯ ಇಲಾಖೆ ಚಾಲನೆ ನೀಡಿದೆ. ವಿವಿಧ ಆನೆ ಶಿಬಿರಗಳಲ್ಲಿರುವ ಗಜಪಡೆಯ ಆರೋಗ್ಯ ತಪಾಸಣೆ ಅತ್ಯಂತ ವೈಜ್ಞಾನಿಕ ಹಾಗೂ ಸುಧಾರಿತ ಮಾದರಿಯಲ್ಲಿ ಪ್ರಗತಿಯಲ್ಲಿದೆ ಎಂದು ಮೈಸೂರು (Mysuru) ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ತಿಳಿಸಿದೆ.

ಶಿಬಿರಗಳಿಗೆ ತಜ್ಞ ವೈದ್ಯರ ಭೇಟಿ, ಸ್ಯಾಂಪಲ್ ಸಂಗ್ರಹ

ದಸರಾ ಮಹೋತ್ಸವದ ಅಂಗವಾಗಿ ಮತ್ತಿಗೋಡು, ದುಬಾರೆ ಮತ್ತು ರಾಮಾಪುರ ಆನೆಗಳ ಶಿಬಿರಗಳಿಗೆ ಪಶುವೈದ್ಯಾಧಿಕಾರಿಗಳ ವಿಶೇಷ ತಜ್ಞರ ತಂಡವು ಈಗಾಗಲೇ ಭೇಟಿ ನೀಡಿದೆ. ಶಿಬಿರಗಳಲ್ಲಿರುವ ಸುಮಾರು 20ಕ್ಕೂ ಹೆಚ್ಚು ಆನೆಗಳ ಆರೋಗ್ಯವನ್ನು ಕೂಲಂಕಷವಾಗಿ ತಪಾಸಣೆ ಮಾಡಲಾಗಿದ್ದು, ತದನಂತರ ಆನೆಗಳ ರಕ್ತ ಮತ್ತು ಮಲದ ಮಾದರಿಗಳನ್ನು (Samples) ಸಂಗ್ರಹಿಸಿ ವಿವಿಧ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.

ಇತಿಹಾಸದಲ್ಲೇ ಮೊದಲು ಇಸಿಜಿ ಮತ್ತು ಸ್ಕ್ಯಾನಿಂಗ್

ಗಜಪಡೆಯ ಇತಿಹಾಸದಲ್ಲೇ ಈ ಬಾರಿ ಅತ್ಯಂತ ಅಪರೂಪದ ಹಾಗೂ ಪ್ರಮುಖ ಹೆಜ್ಜೆಯೊಂದನ್ನು ಅರಣ್ಯ ಇಲಾಖೆ ಇರಿಸಿದೆ. ಶಿಬಿರಗಳಲ್ಲಿರುವ ಹೆಣ್ಣಾನೆಗಳ ಗರ್ಭಧಾರಣೆಯನ್ನು ನಿಖರವಾಗಿ ಪರೀಕ್ಷಿಸಲು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ (Ultrasound Scanning) ಮುಖಾಂತರ ತಪಾಸಣೆ ನಡೆಸುವ ಕಾರ್ಯ ಪ್ರಗತಿಯಲ್ಲಿದೆ. ಇದರ ಜೊತೆಗೆ, ಅತ್ಯಂತ ಪ್ರಮುಖವಾಗಿ ಈ ಬಾರಿ ಮೊಟ್ಟಮೊದಲ ಬಾರಿಗೆ ಆನೆಗಳ ಹೃದಯದ ಆರೋಗ್ಯ ಮತ್ತು ಸಾಮರ್ಥ್ಯವನ್ನು ಪರೀಕ್ಷಿಸಲು ಇಸಿಜಿ (ECG) ಪರೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ.

ಪ್ರಯೋಗಾಲಯಗಳಿಂದ ವೈದ್ಯಕೀಯ ವರದಿಗಳು ಬಂದ ತಕ್ಷಣ, ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದ ಅಧಿಕೃತ ತಂಡವು ವಿವಿಧ ಆನೆ ಶಿಬಿರಗಳಿಗೆ ಖುದ್ದಾಗಿ ಭೇಟಿ ನೀಡಿ ಅಂತಿಮವಾಗಿ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳಲಿದೆ. ಆನೆಗಳ ಈ ತಾತ್ಕಾಲಿಕ ಆಯ್ಕೆಯ ಪಟ್ಟಿಯನ್ನು ಎಲ್ಲಾ ಆರೋಗ್ಯ ವಿವರಗಳೊಂದಿಗೆ ರಾಜ್ಯ ಮಟ್ಟದ ದಸರಾ ಆನೆಗಳ ಆಯ್ಕೆ ಸಮಿತಿಗೆ ಸಲ್ಲಿಕೆ ಮಾಡಲಾಗುತ್ತದೆ.

ಈ ಬಾರಿ 20 ದಿನ ತಡವಾಗಿ ಬರಲಿವೆ ಆನೆಗಳು

2026ನೇ ಸಾಲಿನ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯು ಕಳೆದ ಸಾಲಿಗಿಂತ ಈ ಬಾರಿ ಸುಮಾರು 20 ದಿನಗಳು ತಡವಾಗಿ ಬರಲಿದೆ. ಈ ಕಾರಣದಿಂದಾಗಿ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಹಾಗೂ ಗಜಪಯಣದ ಸಿದ್ಧತೆಗಳನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಕೊಂಚ ತಡವಾಗಿಯೇ ಆರಂಭಿಸಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಆಷಾಢ ಮಾಸದಲ್ಲಿ ಚಾಮುಂಡಿ ದರ್ಶನ: ಈ ಬಾರಿ 300 ರೂ. ಟಿಕೆಟ್ ರದ್ದು! ಭಕ್ತರು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿವಾದಕ್ಕೆ ಸಿಲುಕಿದ ಕಂಗನಾ ರನೌತ್ ಸಿನಿಮಾ, 250 ಕೋಟಿ ಮೊಕದ್ದಮೆ ದಾಖಲು – Kannada News | Kangana’s Queen 2 movie got into trouble, Pantom studious demands 250 crore rs

ಕಂಗನಾ ರನೌತ್ (Kangana Ranauat), ಭಾರತೀಯ ಚಿತ್ರರಂಗದ ಅದ್ಭುತ ನಟಿಯರಲ್ಲಿ ಪ್ರಮುಖರು. ನಟನೆಗೆ ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಭಾರತೀಯ ನಟಿ. ಅತಿ ಹೆಚ್ಚು ಬಾರಿ ರಾಷ್ಟ್ರಪ್ರಶಸ್ತಿ ಪಡೆದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಕಂಗನಾ. ಇದೀಗ ಸಂಸದೆಯೂ ಆಗಿರುವ ಕಂಗನಾ, ಈಗಲೂ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಆದರೆ ಇತ್ತೀಚೆಗೆ ಅವರ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಸತತವಾಗಿ ಸೋಲುತ್ತಿವೆ. ಕಂಗನಾ ನಟಿಸಿದ ಸುಮಾರು ಐದಾರು ಸಿನಿಮಾಗಳು ಸತತವಾಗಿ ಸೋಲು ಕಂಡಿವೆ. ಇದೀಗ ಕಂಗನಾ ತಮ್ಮದೇ ಬ್ಲಾಕ್ ಬಸ್ಟರ್ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಗೆ ಮುನ್ನ ವಿವಾದಕ್ಕೆ ಸಿಲುಕಿಕೊಂಡಿದೆ.

ಕಂಗನಾ ರನೌತ್ ಅವರ ನಟನಾ ಪ್ರತಿಭೆಯನ್ನು ಸಾರಿದ ಸಿನಿಮಾ ‘ಕ್ವೀನ್’. ಒಳ್ಳೆಯ ಕತೆಯ ಜೊತೆಗೆ ಕಂಗನಾರ ಅದ್ಭುತ ನಟನೆಯಿಂದ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. 2014 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾದ ಸೀಕ್ವೆಲ್​​ನಲ್ಲಿ ಕಂಗನಾ ಇದೀಗ ನಟಿಸಿದ್ದಾರೆ. ಸಿನಿಮಾವನ್ನು ಜಿಯೋ ನಿರ್ಮಾಣ ಮಾಡಿದೆ. 2014ರ ‘ಕ್ವೀನ್’ ನಿರ್ದೇಶಿಸಿದ್ದ ವಿಕಾಸ್ ಭಾಲ್ ಅವರೇ ಈ ಸಿನಿಮಾವನ್ನು ಸಹ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಜಾರಿಯಲ್ಲಿದೆ. ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಸಹ ಆಗಲಿತ್ತು, ಆದರೆ ಇದೀಗ ಸಂಕಷ್ಟವೊಂದು ಎದುರಾಗಿದೆ.

ಇದನ್ನೂ ಓದಿ:ಕಂಗನಾ ರನೌತ್ ಮುಂದಿನ ಸಿನಿಮಾಕ್ಕೆ ಆ ಕರಾಳ ಘಟನೆ ಸ್ಪೂರ್ತಿ

‘ಕ್ವೀನ್ 2’ ಸಿನಿಮಾದ ಮೇಲೆ ಪ್ಯಾಂಟಮ್ ಸ್ಟುಡಿಯೋಸ್ ದಾವೆ ಹೂಡಿದೆ. ಬರೋಬ್ಬರಿ 250 ಕೋಟಿ ರೂಪಾಯಿ ಹಣವನ್ನು ದಂಡವಾಗಿ ಪಾವತಿಸಬೇಕು ಎಂದು ಒತ್ತಾಯಿಸಿದೆ. 2014 ರಲ್ಲಿ ಬಿಡುಗಡೆ ಆಗಿದ್ದ ‘ಕ್ವೀನ್’ ಸಿನಿಮಾವನ್ನು ಪ್ಯಾಂಟಮ್ ಸ್ಟುಡಿಯೋಸ್ ನಿರ್ಮಾಣ ಮಾಡಿತ್ತು. ಆದರೆ ಈಗ ‘ಕ್ವೀನ್ 2’ ಸಿನಿಮಾವನ್ನು ಜಿಯೋ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾವನ್ನು ಅನಧಿಕೃತ ಸೀಕ್ವೆಲ್ ಎಂದು ಕರೆದಿರುವ ಪ್ಯಾಂಟಮ್, ತಮ್ಮ ಬೌದ್ಧಿಕ ಆಸ್ತಿ (ಇಂಟೆಲೆಕ್ಚುಲ್ ಪ್ರಾಪರ್ಟಿ)ಯನ್ನು ಅನುಮತಿ ಇಲ್ಲದೆ ತೆಗೆದುಕೊಂಡಿದ್ದಾರೆಂದು ದಾವೆ ಹೂಡಿದ್ದು, 250 ಕೋಟಿ ರೂಪಾಯಿ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Viral: ಅಂದು ಕಾಲೇಜ್ ಫೀಸ್ ಕಟ್ಟಲು ದುಡ್ಡಿಗಾಗಿ ಪರದಾಟ, ಇಂದು ಕೋಟಿ ರೂ ಸಂಪಾದನೆ; ಇದು ಬೆಂಗಳೂರು ಸಾಫ್ಟ್‌ವೇರ್ ಇಂಜಿನಿಯರ್‌ನ ಕಥೆ – Kannada News | A Bengaluru software engineer earning Rs 1.9 crore; a young man who reveals the story of his life’s struggle.

ಬೆಂಗಳೂರು, ಜುಲೈ 07: ಬದುಕು ಒಂದೇ ರೀತಿ ಇರಲ್ಲ. ಏನು ಇಲ್ಲದೆ ಒಂದೊಂದು ರೂಪಾಯಿಗೂ ಕಷ್ಟ ಪಡ್ತಾ ಇದ್ದ ವ್ಯಕ್ತಿ ಯಾರು ಊಹೆ ಮಾಡದ ಮಟ್ಟಿಗೆ ಬೆಳೆಯಬಹುದು. ಹೀಗಾಗಿ ಯಶಸ್ಸು ಯಾರಪ್ಪ ಸ್ವತ್ತು ಅಲ್ಲ. ಇದಕ್ಕೆ ಉದಾಹರಣೆಯಂತಿದ್ದಾನೆ ಬೆಂಗಳೂರಿನ (Bengaluru) ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್ ಇಂಜಿನಿಯರ್ (software engineer) . ಒಂದು ಕಾಲದಲ್ಲಿ ಕಾಲೇಜ್ ಫೀಸ್ ಕಟ್ಟಲು ಅಮ್ಮ ತನ್ನ ಬಳೆಯಿದ್ದ ಮಾರಿದ್ದನಂತೆ. ಆದರೆ ಇದೀಗ ಕೋಟಿಗಟ್ಟಲೆ ದುಡಿದು ಅಮ್ಮನಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳುತ್ತಿದ್ದಾನೆ. ತನ್ನ ಯಶಸ್ಸಿನ ಹಿಂದಿನ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ನೆಟ್ಟಿಗರು ಈ ಯುವಕನ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ.

ಮನು ಅಗರವಾಲ್ (Manu Agrawal) ತಮ್ಮ ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ತನ್ನ ಜೀವನದ ಕಥೆ ಹಾಗೂ ತಂದೆ ತಾಯಿಯ ತ್ಯಾಗವನ್ನು ನೆನಪಿಸಿಕೊಂಡಿದ್ದಾನೆ. ಈ ಪೋಸ್ಟ್ ನಲ್ಲಿ ನಾನು ಇಂಜಿನಿಯರ್ ಓದುತ್ತಿದ್ದ ಸಂದರ್ಭದಲ್ಲಿ ಒಂದು ಸೆಮಿಸ್ಟರ್‌ನ ಫೀಸ್ 15,000 ರೂ ಕಟ್ಟಲು ನನ್ನ ಅಪ್ಪ ಅಮ್ಮನ ಒಡವೆಯನ್ನು ಮಾರಿದರು. ನನ್ನ ತಾಯಿ ಹಿಂದೆ ಮುಂದೆ ನೋಡದೆ ಚಿನ್ನದ ಬಳೆಗಳನ್ನು ನೀಡಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಅಮ್ಮ ಕಣ್ಣೀರು ಹಾಕಲಿಲ್ಲ. ಅವರು ನನ್ನನ್ನು ನೋಡಿ ಬಳೆ ನೀಡಿದ ದಿನ, ನಾನು ನಿದ್ದೆಯನ್ನು ಮಾಡಲೇ ಇಲ್ಲ ಎಂದು ಹೇಳಿದ್ದಾನೆ.

ಲಿಂಕ್ಡ್ ಇನ್ ಪೋಸ್ಟ್ ಇಲ್ಲಿದೆ

ಓದು ಮುಗಿಯುತ್ತಿದ್ದಂತೆ , ಅಮೆರಿಕದ ಮೈಕ್ರೋಸಾಫ್ಟ್‌ನ ಸಿಯಾಟಲ್ ಕಚೇರಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದೆ. ನನಗೆ ಈಗ ವಾರ್ಷಿಕ ಸಂಬಳ 1.9 ಕೋಟಿ ರೂ. ಕೆಲಸ ಸಿಕ್ಕೊಡನೆ ತಾಯಿಗೆ ಕರೆ ಮಾಡಿ, ನಿನಗೆ ಇಷ್ಟ ಬಂದಷ್ಟು ಒಡವೆಗಳನ್ನು ಖರೀದಿಸು ಎಂದು ಹೇಳಿದ್ದೆ. ನನ್ನ ಅಮ್ಮ ಮಾತ್ರ, ನನಗೆ  ನಾನು ಎಲ್ಲವನ್ನೂ ಮರಳಿ ಪಡೆದುಕೊಂಡೆ ಎಂದು ಬಿಟ್ಟರು. ಅದರ ಕೆಲವು ಸಾಲಗಳನ್ನು ತೀರಿಸಲು ಸಾಧ್ಯವಿಲ್ಲ ಎಂದು ತಂದೆ ತಾಯಿಯ ನಿಸ್ವಾರ್ಥ ಪ್ರೀತಿಯನ್ನು ವಿವರಿಸಿದ್ದಾನೆ.

ಇದನ್ನೂ ಓದಿ: ‘ಬೆಂಗಳೂರು ಭಾರತದ ಯುರೋಪ್ ಇದ್ದಂತೆ! ಸಿಲಿಕಾನ್ ಸಿಟಿಗೆ ಫಿದಾ ಆದ ಯುವತಿಯ ವಿಡಿಯೋ ವೈರಲ್

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತಂದೆ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಇಂತಹ ಮಗನನ್ನು ಪಡೆದ ನೀವೇ ಧನ್ಯರು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇದು ನಿಜಕ್ಕೂ ಸ್ಫೂರ್ತಿದಾಯಕ ಕಥೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಾ ಮಳೆಗೆ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ: ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ – Kannada News | Krishna River Overflows: Chikkodi Faces Flood Threat as Inflow Crosses 1 Lakh Cusecs Due to Maharashtra Rains

ಬೆಳಗಾವಿ, ಜುಲೈ 7: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚಳವಾಗುತ್ತಿದೆ. ಪ್ರಸ್ತುತ ಕೃಷ್ಣಾ ನದಿಗೆ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದುಬರುತ್ತಿದ್ದು, ನದಿ ತನ್ನ ದಂಡೆಯನ್ನು ಮೀರಿ ಹೊರಭಾಗದಲ್ಲಿ ಹರಿಯುತ್ತಿದೆ. ಚಿಕ್ಕೋಡಿ ತಾಲೂಕಿನ ಮಾಂಜರಿ ಮತ್ತು ಅಂಕಲಿ ಸುತ್ತಮುತ್ತಲಿನ ಜಮೀನುಗಳಿಗೆ ನೀರು ನುಗ್ಗಿದೆ. ಕೇವಲ ಐದು ದಿನಗಳ ಹಿಂದೆ ಬರಡಾಗಿದ್ದ ಈ ಪ್ರದೇಶವು ಈಗ ಜಲಾವೃತವಾಗಿದೆ. ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ನೀರಿನಲ್ಲಿ ಮುಳುಗಿ ಹಾಳಾಗುವ ಆತಂಕದಲ್ಲಿ ರೈತರಿದ್ದಾರೆ. ಘಟಪ್ರಭಾ ನದಿಗೆ 22,000 ಕ್ಯೂಸೆಕ್ ಹಾಗೂ ಮಲಪ್ರಭಾ ನದಿಗೆ 5,000 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಹಿಡಕಲ್ ಮತ್ತು ನವಿಲು ತೀರ್ಥ ಜಲಾಶಯಗಳ ನೀರಿನ ಸಂಗ್ರಹ ಮಟ್ಟವೂ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಮುಂದುವರಿದರೆ, ಕೃಷ್ಣಾ ನದಿಯ ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ನದಿ ಪಾತ್ರದ ರೈತರಲ್ಲಿ ಆತಂಕ ಮನೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂಡೋನೇಷ್ಯಾ ಪ್ರವಾಸದಲ್ಲಿ ಪ್ರಧಾನಿ ಮೋದಿ: ಭಾರತದ ‘ಅಸ್ತ್ರ’ ಕ್ಷಿಪಣಿ ಖರೀದಿಗೆ ಒಪ್ಪಂದ – Kannada News | PM Modi in Indonesia: Astra Missile Deal, Sabang Port and Critical Mineral Investment Boost India’s Global Role

ಜಕಾರ್ತ, ಜುಲೈ 07: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಇಂಡೋನೇಷ್ಯಾ ಪ್ರವಾಸವು ಉಭಯ ದೇಶಗಳ ರಕ್ಷಣೆ, ತಂತ್ರಜ್ಞಾನ ಮತ್ತು ಆರ್ಥಿಕ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ. ಈ ಪ್ರವಾಸದ ವೇಳೆ ಭಾರತ ಮತ್ತು ಇಂಡೋನೇಷ್ಯಾ ನಡುವೆ ಹಲವು ಐತಿಹಾಸಿಕ ಮತ್ತು ಮಹತ್ವದ ಒಪ್ಪಂದಗಳು ಏರ್ಪಟ್ಟಿದ್ದು, ಜಾಗತಿಕ ಮಟ್ಟದಲ್ಲಿ ಭಾರತದ ತಂತ್ರಜ್ಞಾನ ಹಾಗೂ ರಕ್ಷಣಾ ಸಾಮರ್ಥ್ಯಕ್ಕೆ ಮತ್ತೊಂದು ದೊಡ್ಡ ಮನ್ನಣೆ ಸಿಕ್ಕಿದೆ.

ಇಂಡೋನೇಷ್ಯಾ ಚುನಾವಣೆಗೆ ಭಾರತದ ಇವಿಎಂ ಮಾದರಿ
ಭಾರತದ ಬಲಿಷ್ಠ ಮತ್ತು ಯಶಸ್ವಿ ಚುನಾವಣಾ ನಿರ್ವಹಣಾ ಮಾದರಿಯನ್ನು ಇಂಡೋನೇಷ್ಯಾ ಮುಕ್ತವಾಗಿ ಶ್ಲಾಘಿಸಿದೆ. ಅಲ್ಲಿನ ಮುಂಬರುವ ಚುನಾವಣೆಗಳಿಗಾಗಿ ಇಂಡೋನೇಷ್ಯಾದ ಅಗತ್ಯಕ್ಕೆ ತಕ್ಕಂತೆ ವಿಶೇಷ ಇವಿಎಂ (EVM – ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಭಾರತ ಸಂಪೂರ್ಣ ಬೆಂಬಲ ನೀಡಲಿದೆ.

ಭಾರತದ ‘ಅಸ್ತ್ರ’ ಕ್ಷಿಪಣಿ ಖರೀದಿಸಲಿರುವ ಇಂಡೋನೇಷ್ಯಾ
ಭಾರತೀಯ ವಾಯುಸೇನೆಯ ಇತ್ತೀಚಿನ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಭಾರತದಲ್ಲೇ ತಯಾರಾದ ಗಾಕಿನಿಂದ ಗಾಳಿಗೆ ಚಿಮ್ಮುವ ‘ಅಸ್ತ್ರ’ (Astra Missile) ಕ್ಷಿಪಣಿಗಳ ಭೀಕರ ಯಶಸ್ಸನ್ನು ಕಂಡು ಇಂಡೋನೇಷ್ಯಾ ಬೆರಗಾಗಿದೆ. ಹೀಗಾಗಿ, ತನ್ನ ವಾಯುಪಡೆಯ ಬಲವನ್ನು ಹೆಚ್ಚಿಸಿಕೊಳ್ಳಲು ಭಾರತದಿಂದ ‘ಅಸ್ತ್ರ’ ಕ್ಷಿಪಣಿಗಳನ್ನು ಆಮದು ಮಾಡಿಕೊಳ್ಳಲು ಇಂಡೋನೇಷ್ಯಾ ನಿರ್ಧರಿಸಿದೆ.

ಮತ್ತಷ್ಟು ಓದಿ: ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ

‘ಬ್ರಹ್ಮೋಸ್’ ಸೂಪರ್‌ಸಾನಿಕ್ ಕ್ಷಿಪಣಿ ಖರೀದಿ ವಿಸ್ತರಣೆ
ಇಂಡೋನೇಷ್ಯಾ ಈಗಾಗಲೇ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿಸುತ್ತಿದೆ. ಈಗ ತನ್ನ ಬ್ರಹ್ಮೋಸ್ ಕ್ಷಿಪಣಿಗಳ ಸಂಗ್ರಹವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದ್ದು, ಭಾರತವು ಇಂಡೋನೇಷ್ಯಾಕ್ಕೆ ಹೆಚ್ಚಿನ ಬ್ರಹ್ಮೋಸ್ ಕ್ಷಿಪಣಿ ಬ್ಯಾಟರಿಗಳನ್ನು ಮತ್ತು ತಾಂತ್ರಿಕ ನೆರವನ್ನು ನೀಡಲು ಒಪ್ಪಿಗೆ ಸೂಚಿಸಿದೆ.

ಚೀನಾಕ್ಕೆ ಟಕ್ಕರ್: ಜಂಟಿಯಾಗಿ ‘ಸಬಾಂಗ್ ಬಂದರು’ ಅಭಿವೃದ್ಧಿ
ಸಮುದ್ರ ಮಾರ್ಗದ ಭದ್ರತೆ ಮತ್ತು ವ್ಯಾಪಾರದ ದೃಷ್ಟಿಯಿಂದ ಅತ್ಯಂತ ಆಯಕಟ್ಟಿನ ಜಾಗದಲ್ಲಿರುವ ಸಬಾಂಗ್ ಬಂದರನ್ನು (Sabang Port) ಭಾರತ ಮತ್ತು ಇಂಡೋನೇಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಲಿವೆ. ಈ ಬಂದರು ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗವಾದ ‘ಮಲಕ್ಕಾ ಜಲಸಂಧಿ’ಯ (Strait of Malacca) ಮೇಲ್ವಿಚಾರಣೆ ನಡೆಸಲು ಸಹಕಾರಿಯಾಗಿದೆ. ವಿಶೇಷವೆಂದರೆ, ಭಾರತದ ಗ್ರೇಟ್ ನಿಕೋಬಾರ್ ಬಂದರು ಯೋಜನೆಯಿಂದ ಇದು ಕೇವಲ 100 ಮೈಲಿ ದೂರದಲ್ಲಿದೆ. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯಕ್ಕೆ ತಕ್ಕ ಟಕ್ಕರ್ ನೀಡಲಿದೆ.

ಖನಿಜ ವಲಯದಲ್ಲಿ ಭಾರಿ ಹೂಡಿಕೆ
ಭವಿಷ್ಯದ ಕೈಗಾರಿಕೆಗಳಿಗೆ ಅತ್ಯಂತ ಅಗತ್ಯವಿರುವ ನಿರ್ಣಾಯಕ ಖನಿಜಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಭಾರತವು ಇಂಡೋನೇಷ್ಯಾದಲ್ಲಿ ಉಕ್ಕು (Steel), ನಿಕಲ್ ಮತ್ತು ಅಪರೂಪದ ಭೂಮಿಯ ಖನಿಜಗಳಿಂದ ತಯಾರಾಗುವ ಕಾಯಂ ಕಾಂತಗಳ ಉತ್ಪಾದನಾ ವಲಯದಲ್ಲಿ ಭಾರಿ ಹೂಡಿಕೆ ಮಾಡಲಿದೆ.

ಈ ನಿರ್ಧಾರಗಳು ರಕ್ಷಣಾ ಮತ್ತು ತಂತ್ರಜ್ಞಾನ ವಲಯದಲ್ಲಿ ಭಾರತ ಕೇವಲ ಗ್ರಾಹಕ ದೇಶವಾಗಿರದೆ, ಜಗತ್ತಿಗೆ ತಂತ್ರಜ್ಞಾನ ನೀಡುವ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿರುವುದನ್ನು ತೋರಿಸುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Amarnath Yatra 2026: ಅಮರನಾಥ ಯಾತ್ರೆಗೆ ಹೊರಟಿದ್ದೀರಾ? ಇಲ್ಲಿದೆ ಆಡಳಿತ ಮಂಡಳಿಯ ಕಟ್ಟುನಿಟ್ಟಿನ ಮಾರ್ಗಸೂಚಿ! – Kannada News | Amarnath Yatra 2026 Guide: Registration, Rules and Safe Travel Essential

2026ರ ಪವಿತ್ರ ಅಮರನಾಥ ಯಾತ್ರೆ ಅಧಿಕೃತವಾಗಿ ಪ್ರಾರಂಭವಾಗಿದ್ದು, ದೇಶಾದ್ಯಂತ ಲಕ್ಷಾಂತರ ಭಕ್ತರು ಶಿವಲಿಂಗದ ಶುಭ ದರ್ಶನಕ್ಕಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸುತ್ತಿದ್ದಾರೆ. ಪ್ರತಿ ವರ್ಷದಂತೆ, ಯಾತ್ರಿಕರಿಗೆ ಸುರಕ್ಷಿತ, ಕ್ರಮಬದ್ಧ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಆಡಳಿತವು ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ವರ್ಷ ನೀವು ಅಮರನಾಥ ಯಾತ್ರೆಯನ್ನು ಕೈಗೊಳ್ಳಲು ಯೋಜಿಸುತ್ತಿದ್ದರೆ, ಸುರಕ್ಷಿತ ಪ್ರಯಾಣಕ್ಕಾಗಿ ಈ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.

ಪೂರ್ವ ನೋಂದಣಿ ಇಲ್ಲದೆ ಬರುವ ಯಾತ್ರಾರ್ಥಿಗಳಿಂದ ಹೆಚ್ಚಿದ ಒತ್ತಡ:

ಇತ್ತೀಚಿನ ಅಧಿಕೃತ ಹೇಳಿಕೆಯ ಪ್ರಕಾರ, ಹೆಚ್ಚಿನ ಸಂಖ್ಯೆಯ ಯಾತ್ರಿಕರು ಪೂರ್ವ ನೋಂದಣಿ ಮಾಡಿಕೊಳ್ಳದೆ ಜಮ್ಮು ಮತ್ತು ಕಾಶ್ಮೀರಕ್ಕೆ ಬರುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೆಲವರು ತಮಗೆ ನಿಗದಿಯಾದ ದಿನಾಂಕಕ್ಕಿಂತ ಮುಂಚಿತವಾಗಿಯೇ ಯಾತ್ರೆಯನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಯಾತ್ರೆಯ ವ್ಯವಸ್ಥೆ ಹಾಗೂ ನಿರ್ವಹಣೆಯ ಮೇಲೆ ಹೆಚ್ಚುವರಿ ಒತ್ತಡವನ್ನು ಹೇರುತ್ತಿದೆ. ಆದ್ದರಿಂದ, ಎಲ್ಲಾ ಯಾತ್ರಿಕರ ಸುರಕ್ಷತೆ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು, ನಿಗದಿತ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಆಡಳಿತವು ಭಕ್ತರಲ್ಲಿ ಮನವಿ ಮಾಡಿದೆ.

ಪ್ರತಿದಿನ ಸೀಮಿತ ಸಂಖ್ಯೆಯ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ:

ಅಮರನಾಥ ಯಾತ್ರೆಯು ಹಿಮಾಲಯದ ಅತ್ಯಂತ ಕಠಿಣ ಮತ್ತು ಸೂಕ್ಷ್ಮ ಪರ್ವತ ಶ್ರೇಣಿಗಳ ಮೂಲಕ ಹಾದುಹೋಗುತ್ತದೆ. ಆದ್ದರಿಂದ, ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ, ಪ್ರತಿದಿನ ಯಾತ್ರಾ ಮಾರ್ಗದಲ್ಲಿ ಪ್ರಯಾಣಿಸುವ ಭಕ್ತರ ಗರಿಷ್ಠ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಈ ವ್ಯವಸ್ಥೆಯ ಉದ್ದೇಶ ಯಾರನ್ನೂ ನಿರ್ಬಂಧಿಸುವುದಲ್ಲ, ಬದಲಿಗೆ ಜನಸಂದಣಿಯನ್ನು ನಿಯಂತ್ರಿಸುವ ಮೂಲಕ ಪ್ರತಿಯೊಬ್ಬ ಭಕ್ತರ ಸುರಕ್ಷತೆಯನ್ನು ಖಚಿತಪಡಿಸುವುದಾಗಿದೆ. ಹವಾಮಾನ ವೈಪರೀತ್ಯ, ಕಿರಿದಾದ ಮಾರ್ಗಗಳು ಮತ್ತು ಎತ್ತರವಾದ ಪ್ರದೇಶಗಳು ಜನದಟ್ಟಣೆಯ ಅಪಾಯವನ್ನು ಹೆಚ್ಚಿಸುವುದರಿಂದ, ಸಂಘಟಕರು ಪ್ರತಿದಿನ ನಿಗದಿತ ಸಾಮರ್ಥ್ಯದವರೆಗೆ ಮಾತ್ರ ಭಕ್ತರನ್ನು ಮುಂದುವರಿಯಲು ಅನುಮತಿಸುತ್ತಾರೆ.

ಆನ್‌ಲೈನ್ ಪೂರ್ವ ನೋಂದಣಿ ಇನ್ನು ಕಡ್ಡಾಯ:

ಯಾತ್ರೆ ಆರಂಭವಾಗುವ ಮೊದಲೇ ದೇಶಾದ್ಯಂತ ಅಧಿಕೃತ ಬ್ಯಾಂಕ್ ಶಾಖೆಗಳಲ್ಲಿ ಆನ್‌ಲೈನ್ ಪೂರ್ವ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಲಕ್ಷಾಂತರ ಯಾತ್ರಿಕರು ಈಗಾಗಲೇ ತಮ್ಮ ನೋಂದಣಿಯನ್ನು ಪೂರ್ಣಗೊಳಿಸಿದ್ದಾರೆ. ನೀವು ಇನ್ನೂ ನೋಂದಾಯಿಸದಿದ್ದರೆ, ನೋಂದಣಿ ಇಲ್ಲದೆ ನೇರವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸುವುದರಿಂದ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಯಾತ್ರಿಕರು ಮೊದಲು ತಮ್ಮ ನೋಂದಣಿಯನ್ನು ದೃಢೀಕರಿಸಿಕೊಂಡು, ಆ ನಂತರವೇ ಪ್ರಯಾಣ ಯೋಜಿಸಬೇಕು ಎಂದು ಆಡಳಿತವು ಸ್ಪಷ್ಟಪಡಿಸಿದೆ.

ಇದನ್ನೂ ಓದಿ Panchamukhi Ganesha: ಪಂಚಮುಖಿ ಗಣೇಶ ಮನೆಯಲ್ಲಿದ್ದರೆ ಸಕಲ ಕಷ್ಟಗಳೂ ನಿವಾರಣೆ; ಐದು ಮುಖಗಳ ದಿವ್ಯ ರಹಸ್ಯವೇನು?

ತತ್ಕಾಲ (ತ್ವರಿತ) ನೋಂದಣಿ ನಂಬಿ ಬರುವುದು ಸೂಕ್ತವಲ್ಲ:

ಮುಂಚಿತವಾಗಿ ನೋಂದಾಯಿಸಿಕೊಳ್ಳದ ಭಕ್ತರು ಸ್ಥಳದಲ್ಲೇ (On-site) ನೋಂದಾಯಿಸಿಕೊಂಡು ಯಾತ್ರೆ ಪ್ರಾರಂಭಿಸಬಹುದು ಎಂದು ಭಾವಿಸಿದ್ದರೆ ಅದು ನಿರಾಶೆ ತರಬಹುದು. ಏಕೆಂದರೆ, ಈ ಬಾರಿ ಆನ್-ಸೈಟ್ ನೋಂದಣಿ ಸೌಲಭ್ಯವು ತುಂಬಾ ಸೀಮಿತವಾಗಿದ್ದು, ಅದು ಸಂಪೂರ್ಣವಾಗಿ ದೈನಂದಿನ ಲಭ್ಯವಿರುವ ಸ್ಲಾಟ್‌ಗಳ ಮೇಲೆ ಮಾತ್ರ ಆಧಾರಿತವಾಗಿರುತ್ತದೆ. ತ್ವರಿತ ನೋಂದಣಿಗಾಗಿ ಪ್ರತಿದಿನ ಸಾವಿರಾರು ಯಾತ್ರಿಕರು ಆಗಮಿಸುತ್ತಿರುವುದರಿಂದ, ಸೀಮಿತ ಸಾಮರ್ಥ್ಯದ ಕಾರಣ ಎಲ್ಲರಿಗೂ ಒಂದೇ ದಿನ ಅನುಮತಿ ಸಿಗುವುದು ಅಸಾಧ್ಯ. ಆದ್ದರಿಂದ, ಯಾತ್ರೆಗಾಗಿ ಕೇವಲ ತತ್ಕಾಲ ನೋಂದಣಿಯನ್ನೇ ನೆಚ್ಚಿಕೊಳ್ಳುವುದು ಸೂಕ್ತವಲ್ಲ.

ನಿಗದಿತ ದಿನಾಂಕಕ್ಕಿಂತ ಮುಂಚೆ ಬಂದರೆ ಸಿಗಲ್ಲ ಅನುಮತಿ:

ಈಗಾಗಲೇ ನೋಂದಾಯಿಸಿಕೊಂಡಿರುವ ಅನೇಕ ಯಾತ್ರಿಕರು ತಮಗೆ ನಿಗದಿಯಾದ ಪ್ರಯಾಣದ ದಿನಾಂಕಗಳಿಗಿಂತ ಮೊದಲೇ ಜಮ್ಮು ಮತ್ತು ಕಾಶ್ಮೀರವನ್ನು ತಲುಪುತ್ತಿದ್ದಾರೆ. ಆದರೆ, ಯಾವುದೇ ಭಕ್ತರಿಗೆ ಅವರ ನೋಂದಾಯಿತ ದಿನಾಂಕಕ್ಕಿಂತ ಮುಂಚಿತವಾಗಿ ಯಾತ್ರಾ ಮಾರ್ಗದಲ್ಲಿ ಮುಂದುವರಿಯಲು ಅವಕಾಶವಿರುವುದಿಲ್ಲ. ಉದಾಹರಣೆಗೆ, ನಿಮ್ಮ ಪ್ರಯಾಣದ ದಿನಾಂಕ ಜುಲೈ 20 ಆಗಿದ್ದರೆ, ನೀವು ಜುಲೈ 18 ಅಥವಾ 19 ರಂದೇ ಅಲ್ಲಿಗೆ ತಲುಪಿದರೂ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಆದ್ದರಿಂದ, ನಿಮ್ಮ ನೋಂದಣಿ ದಿನಾಂಕವನ್ನು ಆಧರಿಸಿಯೇ ರೈಲು, ವಿಮಾನ, ಹೋಟೆಲ್ ಇತ್ಯಾದಿಗಳನ್ನು ಕಾಯ್ದಿರಿಸಿಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂದು ಕಾರು ಶೆಡ್‌ನಲ್ಲಿ ವಾಸ, ಇಂದು ರೆಸಾರ್ಟ್‌ನಂತಹ ಬಂಗಲೆ: ಇದು ಸೂಪರ್‌ಸ್ಟಾರ್ ಕಥೆ

ಒಂದು ಕಾಲದಲ್ಲಿ ಅವರಿಗೆ ಧರಿಸಲು ಕೇವಲ ಒಂದೇ ಜೋಡಿ ಬಟ್ಟೆ ಇತ್ತು. ಕುಡಿಯಲು ನೀರು ಮಾತ್ರ ಸಿಗುತ್ತಿತ್ತು. ಹಲವು ದಿನಗಳು ಅವರು ಉಪವಾಸ ಮಲಗಿದ್ದರು. ಅವರು ಶೌಚಾಲಯವೂ ಇಲ್ಲದ ಒಂದು ಸಣ್ಣ ಕಾರು ಶೆಡ್‌ನಲ್ಲಿ ವಾಸಿಸುತ್ತಿದ್ದರು. ಆದರೆ ಇಂದು ಅವರು 10 ಎಕರೆ ವಿಸ್ತೀರ್ಣದ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಆ ನಟ ಬೇರೆ ಯಾರೂ ಅಲ್ಲ. ಅವರೇ ತೆಲುಗು ಚಿತ್ರರಂಗದ ಖ್ಯಾತ ನಟ ಮೋಹನ್ ಬಾಬು.

ತಿಂಗಳಿಗೆ 40 ರೂಪಾಯಿ ಸಂಬಳ

ಸಿನಿಮಾಗೆ ಬರುವ ಮುನ್ನ ಮೋಹನ್ ಬಾಬು ಪಿಟಿ ಟೀಚರ್ ಆಗಿದ್ದರು. ಆಗ ಅವರ ತಿಂಗಳ ಸಂಬಳ ಕೇವಲ 40 ರೂಪಾಯಿ ಆಗಿತ್ತು. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

‘ನನ್ನ ತಂದೆ ಕೂಡ ಶಿಕ್ಷಕರಾಗಿದ್ದರು. ಅವರು ನನಗೆ ಶಿಸ್ತನ್ನು ಕಲಿಸಿದರು. ನೇರ ನಡೆ-ನುಡಿ ನನ್ನ ಪದ್ಧತಿ. ನನಗೆ ಕೋಪ ಕೂಡ ಜಾಸ್ತಿ’ ಎಂದು ಮೋಹನ್ ಬಾಬು ಹೇಳಿದ್ದಾರೆ.

ಕಾರು ಶೆಡ್‌ನ ಕಷ್ಟದ ದಿನಗಳು

ಹಳೆಯ ದಿನಗಳ ಬಗ್ಗೆ ಮೋಹನ್ ಬಾಬು ಭಾವುಕರಾಗಿ ಮಾತನಾಡಿದ್ದಾರೆ. ‘ನಾನು ಬಾಡಿಗೆ ಕಾರು ಶೆಡ್‌ನಲ್ಲಿ ವಾಸವಾಗಿದ್ದೆ. ಅದಕ್ಕೆ ತಿಂಗಳಿಗೆ 30 ರೂಪಾಯಿ ಬಾಡಿಗೆ ಕಟ್ಟುತ್ತಿದ್ದೆ. ಅಲ್ಲಿ ಶೌಚಾಲಯ ಅಥವಾ ಸ್ನಾನದ ಗೃಹ ಇರಲಿಲ್ಲ. ಆಗ ನನ್ನನ್ನು ನೋಡಲು ಯಾರೂ ಬರುತ್ತಿರಲಿಲ್ಲ. ನಾನು ತುಂಬಾ ಕಷ್ಟಪಟ್ಟಿದ್ದೇನೆ. ತಿನ್ನಲು ಊಟ ಇಲ್ಲದೆ ಬರೀ ನೀರು ಕುಡಿದು ಮಲಗಿದ ದಿನಗಳಿವೆ’ ಎಂದು ಅವರು ಹೇಳಿದ್ದಾರೆ.

10 ಎಕರೆಯ ಐಷಾರಾಮಿ ಅರಮನೆ

ಇಂದು ಮೋಹನ್ ಬಾಬು ಅವರ ಜೀವನ ಸಂಪೂರ್ಣ ಬದಲಾಗಿದೆ. ಹೈದರಾಬಾದ್‌ನ ಜಲ್ಪಳ್ಳಿಯಲ್ಲಿ ಅವರು ಬೃಹತ್ ಬಂಗಲೆ ಹೊಂದಿದ್ದಾರೆ. ಇದು 10 ಎಕರೆ ಪ್ರದೇಶದಲ್ಲಿದೆ. ಸುತ್ತಲೂ ಹಸಿರಿನಿಂದ ಕೂಡಿದೆ. ಇದು ನೋಡಲು ಒಂದು ಐಷಾರಾಮಿ ರೆಸಾರ್ಟ್‌ನಂತೆ ಕಾಣುತ್ತದೆ.

ಮನೆಯ ಒಳಗೇನಿದೆ?

  1. ಈ ಮನೆಯಲ್ಲಿ ದೊಡ್ಡ ಲಿವಿಂಗ್ ರೂಮ್ ಇದೆ. ಅದರಲ್ಲಿ ಒಳಾಂಗಣ ಕಾರಂಜಿ ಇದೆ.
  2. ಗೋಡೆಗಳ ಮೇಲೆ ಶಿವ-ಪಾರ್ವತಿಯ ದೊಡ್ಡ ಪೇಂಟಿಂಗ್ ಇದೆ.
  3. ಮನೆಯ ಡೈನಿಂಗ್ ಏರಿಯಾದಿಂದ ಹೊರಗಿನ ತೋಟ ಕಾಣಿಸುತ್ತದೆ. ಅಲ್ಲಿ ನವಿಲುಗಳು ಓಡಾಡುತ್ತವೆ.
  4. ಮನೆಯಲ್ಲಿ ಒಂದು ಖಾಸಗಿ ಬಾರ್ ಮತ್ತು ಅತ್ಯಾಧುನಿಕ ಅಡುಗೆ ಮನೆ ಇದೆ.
  5. ಮೊಮ್ಮಕ್ಕಳಿಗಾಗಿ ಪ್ರತ್ಯೇಕ ಆಟದ ಕೋಣೆ ಇದೆ.
  6. ಸಿನಿಮಾಗಳ ಕಥೆ ಚರ್ಚಿಸಲು ಮತ್ತು ಡ್ಯಾನ್ಸ್ ರಿಹರ್ಸಲ್ ಮಾಡಲು ದೊಡ್ಡ ಹಾಲ್ ಇದೆ.
  7. ಮನೆಯೊಳಗೆ 20 ಕ್ಕೂ ಹೆಚ್ಚು ಜನರು ಕೂರಬಹುದಾದ ಹೋಮ್ ಥಿಯೇಟರ್ ಇದೆ. ಸಾಕ್ಷ್ಯಚಿತ್ರಗಳು ಮತ್ತು ಸಿನಿಮಾಗಳ ಸಿಡಿಗಳನ್ನು ಇಡಲು ಪ್ರತ್ಯೇಕ ರೂಮ್ ಇದೆ.
  8. ಟೆರೇಸ್ ಮೇಲೆ ಈಜುಕೊಳ ಇದೆ. ತರಕಾರಿ ಬೆಳೆಯಲು ಸ್ವಂತ ಫಾರ್ಮ್‌ಲ್ಯಾಂಡ್ ಕೂಡ ಇದೆ.

ತಂದೆಯೇ ಪ್ರೇರಣೆ

ಮೋಹನ್ ಬಾಬು ಅವರ ತಂದೆ ರಂಗಭೂಮಿ ಕಲಾವಿದರಾಗಿದ್ದರು. ಅವರನ್ನು ನೋಡಿಯೇ ಮೋಹನ್ ಬಾಬು ಅವರಿಗೆ ನಟನೆಯಲ್ಲಿ ಆಸಕ್ತಿ ಬಂತು. 10ನೇ ತರಗತಿಯಲ್ಲಿದ್ದಾಗ ಜಾಹೀರಾತು ನೋಡಿ ಸಿನಿಮಾಗೆ ಅರ್ಜಿ ಹಾಕಿದರು. ಆಗ ಅವರ ತಂದೆಯ ಸಂಬಳ ಕೇವಲ 180 ರೂಪಾಯಿ ಇತ್ತು. ಆದರೂ ಮಗನಿಗಾಗಿ 50 ರೂಪಾಯಿ ಖರ್ಚು ಮಾಡಿ ಅರ್ಜಿ ಕಳುಹಿಸಿದ್ದರು.

ಮೋಹನ್ ಬಾಬು ಕೇವಲ ನಟರಾಗಿ ಉಳಿಯಲಿಲ್ಲ. ಅವರು ದೊಡ್ಡ ಶೈಕ್ಷಣಿಕ ಸಂಸ್ಥೆಯನ್ನು ಕಟ್ಟಿದ್ದಾರೆ. ಇಂದು ಅವರು ಸ್ವಂತ ಶಾಲೆ ಮತ್ತು ವಿಶ್ವವಿದ್ಯಾಲಯವನ್ನು ನಡೆಸುತ್ತಿದ್ದಾರೆ. ಅವರ ಮನೆಯಲ್ಲಿಯೇ 25 ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಕಟ್ಟುನಿಟ್ಟಿನ ನಿಯಮಗಳು

  1. ಮನೆಯಲ್ಲಿ ಎಷ್ಟೇ ಐಷಾರಾಮಿ ವ್ಯವಸ್ಥೆ ಇದ್ದರೂ ಶಿಸ್ತು ಮಾತ್ರ ಕಡ್ಡಾಯವಾಗಿದೆ. ಮನೆಯೊಳಗೆ ಎರಡು ಮುಖ್ಯ ನಿಯಮಗಳಿವೆ.
  2. ಮನೆಯೊಳಗೆ ಪಾದರಕ್ಷೆಗಳನ್ನು ಹಾಕುವಂತಿಲ್ಲ.
  3. ಊಟ ಮಾಡುವಾಗ ಯಾರೂ ಮಾತನಾಡುವಂತಿಲ್ಲ.
  4. ಮೋಹನ್ ಬಾಬು ಅವರು ಎಂದಿಗೂ ದೇವರ ಪೂಜೆಯನ್ನು ತಪ್ಪಿಸುವುದಿಲ್ಲ. ಜ್ವರ ಬಂದಿದ್ದರೂ ಅವರು ಪೂಜೆ ಮಾಡಿಯೇ ದಿನ ಆರಂಭಿಸುತ್ತಾರೆ.

ಅವರ ಮನೆಯಲ್ಲಿ ಬಾಳೆ ಎಲೆಯಲ್ಲೇ ಊಟ ಬಡಿಸಲಾಗುತ್ತದೆ. ಬೆಳಿಗ್ಗೆ 7:30 ರಿಂದ 8 ಗಂಟೆಯೊಳಗೆ ತಿಂಡಿ ಸಿದ್ಧವಾಗಬೇಕು. ಮಧ್ಯಾಹ್ನ 12:45 ರಿಂದ 1 ಗಂಟೆಯೊಳಗೆ ಊಟದ ಸಮಯ. ಒಂದು ವೇಳೆ ಸಮಯ ಮೀರಿದರೆ ಮೋಹನ್ ಬಾಬು ಅವರು ಊಟ ಮಾಡುವುದೇ ಇಲ್ಲ. ಅಷ್ಟೊಂದು ಶಿಸ್ತನ್ನು ಅವರು ಇಂದಿಗೂ ಪಾಲಿಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಎಗ್​ ಫ್ರೀಜ್ ಮಾಡಿದ ಕೃತಿ ಸನೋನ್; ಕಾರಣ ಕೊಟ್ಟ ನಟಿ – Kannada News | Kriti Sanon Reveals Egg Freezing: How Mimi Role Aided Her Future Fertility Choice

ಬಾಲಿವುಡ್ ಖ್ಯಾತ ನಟಿ ಕೃತಿ ಸನೋನ್ ತಮ್ಮ ಎಗ್​ (ಅಂಡಾಣು) ಫ್ರೀಜ್ ಮಾಡಿರುವುದಾಗಿ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ನ್ಯಾಷನಲ್ ಅವಾರ್ಡ್ ತಂದುಕೊಟ್ಟ ‘ಮಿಮಿ’ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಳ್ಳುತ್ತಿದ್ದ ಸಮಯದಲ್ಲಿ ಅವರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಈ ಪ್ರಕ್ರಿಯೆಯಿಂದ ದೇಹದಲ್ಲಿ ಆಗುವ ಬದಲಾವಣೆಗಳನ್ನು ಸುಲಭವಾಗಿ ನಿಭಾಯಿಸಲು ಆ ಸಮಯ ಅವರಿಗೆ ಸಹಾಯ ಮಾಡಿತು.

ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಕೃತಿ ಸನೋನ್ ಈ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ‘ಎಗ್ ಫ್ರೀಜ್ ಮಾಡುವ ಪ್ರಕ್ರಿಯೆಯಲ್ಲಿ ಹಾರ್ಮೋನ್ ಇಂಜೆಕ್ಷನ್‌ಗಳನ್ನು ನೀಡಲಾಗುತ್ತದೆ. ಇದರಿಂದ ದೇಹ ಸ್ವಲ್ಪ ಊದಿಕೊಳ್ಳುತ್ತದೆ. ಮಿಮಿ ಚಿತ್ರದ ಪಾತ್ರಕ್ಕಾಗಿ ನಾನು ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಹಾಗಾಗಿ ಅದೇ ಸರಿಯಾದ ಸಮಯ ಎಂದು ಈ ನಿರ್ಧಾರ ಮಾಡಿದೆ’ ಎಂದಿದ್ದಾರೆ ಕೃತಿ ಸನೋನ್.

ಮಹಿಳೆಯರಿಗೆ ಇದು ಅತ್ಯುತ್ತಮ ಉಡುಗೊರೆ

‘ನಮಗೆ ನಾವೇ ಕೊಟ್ಟುಕೊಳ್ಳಬಹುದಾದ ಅತ್ಯುತ್ತಮ ಉಡುಗೊರೆ. ಆಪ್ತರೊಬ್ಬರು ನೀಡಿದ ಸಲಹೆ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿತ್ತು. ಭವಿಷ್ಯದಲ್ಲಿ ತಾಯಿಯಾಗುವ ಹಕ್ಕನ್ನು ಉಳಿಸಿಕೊಳ್ಳಲು ಈ ವೈದ್ಯಕೀಯ ಪದ್ಧತಿ ಸಹಕಾರಿಯಾಗಿದೆ’ ಎಂದಿದ್ದಾರೆ ಕೃತಿ. ನಟನೆಯಲ್ಲಿ ಬ್ಯುಸಿ ಇರುವ ಕಾರಣ ಅವರು ಈ ಸ್ಮಾರ್ಟ್ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

‘ಮಿಮಿ’ ಚಿತ್ರದ ಕಥೆ ಏನು?

2021 ರಲ್ಲಿ ಬಿಡುಗಡೆಯಾಗಿದ್ದ ‘ಮಿಮಿ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಂಡಿತ್ತು. ಇದರಲ್ಲಿ ಕೃತಿ ಸನೋನ್ ಬಾಡಿಗೆ ತಾಯಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಈ ಚಿತ್ರದ ನಟನೆಗಾಗಿ ಅವರಿಗೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ಅತ್ಯುತ್ತಮ ನಟಿ’ ಪ್ರಶಸ್ತಿ ಒಲಿದುಬಂದಿತ್ತು. ಪಂಕಜ್ ತ್ರಿಪಾಠಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದರು.

ಇದನ್ನೂ ಓದಿ: ನಟಿಯರನ್ನು ಕೀಳಾಗಿ ಕಾಣಲಾಗುತ್ತದೆ: ನಟಿ ಕೃತಿ ಸನೋನ್ ಆರೋಪ

ಉದ್ಯಮಿ ಕಬೀರ್ ಬಹಿಯಾ ಜೊತೆ ಡೇಟಿಂಗ್

ಕೃತಿ ಸನೋನ್ ಸದ್ಯ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕೂ ಸುದ್ದಿಯಲ್ಲಿದ್ದಾರೆ. ಯುಕೆ ಮೂಲದ ಉದ್ಯಮಿ ಕಬೀರ್ ಬಹಿಯಾ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಇವರಿಬ್ಬರು ಗ್ರೀಸ್ ಪ್ರವಾಸಕ್ಕೆ ಒಟ್ಟಿಗೆ ಹೋಗಿದ್ದರು. ಇತ್ತೀಚೆಗೆ ಮುಂಬೈನಲ್ಲಿ ಇವರಿಬ್ಬರು ಒಟ್ಟಿಗೆ ಡಿನ್ನರ್ ಮಾಡಲು ಹೋಗಿದ್ದ ಫೋಟೋಗಳು ವೈರಲ್ ಆಗಿವೆ. ಇದರಿಂದ ಇವರ ಬ್ರೇಕಪ್ ವದಂತಿಗಳಿಗೆ ಬ್ರೇಕ್ ಬಿದ್ದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಶ್ಚಿಮ ಘಟ್ಟದಲ್ಲಿ ಮುಂದುವರಿದ ಮಳೆಯ ಅಬ್ಬರ; ನರಸಿಂಹವಾಡಿ ದತ್ತ ಮಂದಿರ ಜಲಾವೃತ! – Kannada News | Heavy Rains Submerge Narasimhawadi Datta Mandir in Maharashtras Western Ghats

ಬೆಳಗಾವಿ, ಜುಲೈ 07: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯ ಅಬ್ಬರ ಮುಂದುವರಿದಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿ ಮತ್ತು ಪಂಚಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರ ಪರಿಣಾಮವಾಗಿ, ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನಲ್ಲಿರುವ ಪ್ರಸಿದ್ಧ ನರಸಿಂಹವಾಡಿ ದತ್ತ ಮಂದಿರವು ಜಲಾವೃತಗೊಂಡಿದೆ.

ನರಸಿಂಹವಾಡಿ ದತ್ತ ಮಂದಿರವು ಕೃಷ್ಣಾ ಮತ್ತು ಪಂಚಗಂಗಾ ನದಿಗಳ ಸಂಗಮ ಸ್ಥಳದಲ್ಲಿದೆ. ಪ್ರಸ್ತುತ, ದೇವಸ್ಥಾನದ ಬಹುಭಾಗವು ನೀರಿನಿಂದ ಆವೃತವಾಗಿದ್ದು, ದೇವಸ್ಥಾನದೊಳಗೆ ನೀರು ನುಗ್ಗಿದೆ. ಭಕ್ತರು ನೀರಿನ ಮಧ್ಯದಲ್ಲೇ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಈ ಪರಿಸ್ಥಿತಿಯ ನಡುವೆಯೂ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ.

ಸ್ಥಳೀಯ ಅಧಿಕಾರಿಗಳ ಪ್ರಕಾರ, ಮಳೆಯ ಪ್ರಮಾಣ ಹೆಚ್ಚಾದರೆ ಯಾವುದೇ ಕ್ಷಣದಲ್ಲಿ ದೇವಸ್ಥಾನವು ಸಂಪೂರ್ಣವಾಗಿ ಮುಳುಗಡೆಯಾಗುವ ಸಾಧ್ಯತೆಯಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಭಕ್ತರು ಮತ್ತು ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದಾಗ ಭೀಕರ ದುರಂತ: ಟ್ರಕ್‌ಗೆ ಕಾರು ಡಿಕ್ಕಿಯಾಗಿ ಒಂದೇ ಕುಟುಂಬದ ಐವರು ಸಾವು – Kannada News | Maihar Road Accident: 5 Dead from Same Family, SUV Truck Collision After Party

ಭೋಪಾಲ್, ಜುಲೈ 07: ಮಧ್ಯಪ್ರದೇಶದ ಮೈಹಾರ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗಿನ ಜಾವ ರಸ್ತೆ ಅಪಘಾತ(Accident)ವೊಂದು ಸಂಭವಿಸಿದೆ. ಚಲಿಸುತ್ತಿದ್ದ ಟ್ರಕ್‌ಗೆ ಎಸ್‌ಯುವಿ (SUV) ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸದಸ್ಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.

ಅಪಘಾತ ನಡೆದಿದ್ದು ಹೇಗೆ?
ಮೈಹಾರ್ ಜಿಲ್ಲೆಯ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-30 ರ ರಿಗ್ರಾ ಗ್ರಾಮದ ಬಳಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಮೃತರಾದವರೆಲ್ಲರೂ ಅಮರಪಟನ್‌ನಲ್ಲಿ ನಡೆದ ಸೋದರ ಸಂಬಂಧಿ ಮನೋಜ್ ಪಟೇಲ್ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿ ಮೈಹಾರ್‌ಗೆ ಹಿಂತಿರುಗುತ್ತಿದ್ದರು.

ಅತಿ ವೇಗವಾಗಿ ಬಂದ ಕಾರು ಮುಂಭಾಗದಲ್ಲಿದ್ದ ಟ್ರಕ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗಿದ್ದ ಆರೂ ಜನರು ಟ್ರಕ್‌ನ ಹಿಂಭಾಗದಲ್ಲಿ ಸಿಲುಕಿಕೊಂಡಿದ್ದರು.

ಸ್ಥಳದಲ್ಲೇ ಐವರ ಸಾವು
ಮಾಹಿತಿ ತಿಳಿದ ತಕ್ಷಣ ಹೆದ್ದಾರಿ ಗಸ್ತು ತಂಡ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಭಾರಿ ಹರಸಾಹಸದ ನಂತರ ಕಾರಿನಲ್ಲಿದ್ದವರನ್ನು ಹೊರತೆಗೆಯಲಾಯಿತಾದರೂ, ಅಷ್ಟರಲ್ಲೇ ಐವರು ಯುವಕರು ಪ್ರಾಣ ಬಿಟ್ಟಿದ್ದರು.

ಮತ್ತಷ್ಟು ಓದಿ: ತುಮಕೂರು: SIR ಕರ್ತವ್ಯಕ್ಕೆ ತೆರಳುತ್ತಿದ್ದಾಗ ಅಪಘಾತ; ಇಬ್ಬರು ಮಹಿಳಾ ಸಿಬ್ಬಂದಿ ಪೈಕಿ ಓರ್ವರ ಸ್ಥಿತಿ ಗಂಭೀರ

ಮೃತರ ವಿವರ
ಮೃತರನ್ನು ಅಂಕುರ್ ಪಟೇಲ್ (40), ಮೃದುಲ್ ಪಟೇಲ್ (32), ವಿಜಯ್ ಪಟೇಲ್ (30), ಹರಿಶಂಕರ್ ಪಟೇಲ್ (25) ಮತ್ತು ಶಿವ ಪಟೇಲ್ (23) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸ್ಥಳೀಯ ಕಾಂಗ್ರೆಸ್ ನಾಯಕ ಮನೀಶ್ ಪಟೇಲ್ ಅವರ ಸಹೋದರರು ಎಂದು ತಿಳಿದುಬಂದಿದೆ.

ಒಬ್ಬರ ಸ್ಥಿತಿ ಗಂಭೀರ
ಅಪಘಾತದಲ್ಲಿ ಬದುಕುಳಿದಿರುವ ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಅಮರ್‌ಪಟಾನ್ ಸಿವಿಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಸತ್ನಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮೈಹಾರ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದ್ದು, ಇಡೀ ಗ್ರಾಮದಲ್ಲಿ ಸದ್ಯ ಶೋಕದ ಅಲೆ ಆವರಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version