‘ಆಲ್ಫಾ’ ಬಾಕ್ಸ್ ಆಫೀಸ್ ಕಲೆಕ್ಷನ್; ಎರಡನೇ ದಿನವೂ ಮಂಕಾದ ಅಲಿಯಾ ಭಟ್ ಸಿನಿಮಾ – Kannada News | Alpha Box Office Collection Day 2 Alia bhatt Sharvari YRF Spy Universe Movie

ಯಶ್ ರಾಜ್ ಫಿಲ್ಮ್ಸ್ (YRF) ಸ್ಪೈ ಯೂನಿವರ್ಸ್‌ನ ಮೊದಲ ಮಹಿಳಾ ಪ್ರಧಾನ ಚಿತ್ರ ಎಂದೇ ಭಾರಿ ಸದ್ದು ಮಾಡಿದ್ದ ‘ಆಲ್ಫಾ’ (Alpha) ಸಿನಿಮಾ ಜುಲೈ 3ರಂದು ಅದ್ದೂರಿಯಾಗಿ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿತ್ತು. ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ (Alia Bhatt) ಮತ್ತು ಶರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಆ್ಯಕ್ಷನ್ ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರ ನೇರ ಪರಿಣಾಮ ಈಗ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯ ಮೇಲೂ ಬೀರಿದೆ. ಸಾಮಾನ್ಯವಾಗಿ ವೀಕೆಂಡ್, ಅದರಲ್ಲೂ ಮೊದಲ ಶನಿವಾರದಂದು ಚಿತ್ರದ ಕಲೆಕ್ಷನ್‌ನಲ್ಲಿ ಭಾರಿ ಏರಿಕೆ ನಿರೀಕ್ಷಿಸಲಾಗಿತ್ತು. ಆದರೆ, ‘ಆಲ್ಫಾ’ ಚಿತ್ರದ ವಿಚಾರದಲ್ಲಿ ಅದು ಉಲ್ಟಾ ಹೊಡೆದಿದ್ದು, ಎರಡನೇ ದಿನದ ಗಳಿಕೆಯಲ್ಲಿ ಕುಸಿತ ಕಂಡಿದೆ.

ಎರಡನೇ ದಿನ ‘ಆಲ್ಫಾ’ ಸಿನಿಮಾದ ಗಳಿಕೆ ಎಷ್ಟು?

ಚಿತ್ರರಂಗದ ಬಾಕ್ಸ್ ಆಫೀಸ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ನೀಡಿರುವ ಮಾಹಿತಿ ಪ್ರಕಾರ, ಶನಿವಾರದಂದು ಒಟ್ಟು 5,877 ಶೋಗಳಿಂದ ಈ ಸಿನಿಮಾ ಕೇವಲ 8.67 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನ (ಶುಕ್ರವಾರ) ಭಾರತದಲ್ಲಿ 9.25 ಕೋಟಿ ರೂಪಾಯಿ ಗಳಿಸುವ ಮೂಲಕ ಸಾಧಾರಣ ಆರಂಭ ಪಡೆದುಕೊಂಡಿತ್ತು. ದೇಶಾದ್ಯಂತ ಒಟ್ಟು 7,534 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಇಷ್ಟು ದೊಡ್ಡ ಮಟ್ಟದ ಹೈಪ್ ಇತ್ತಾದರೂ, ವೈಆರ್‌ಎಫ್ ಸ್ಪೈ ಯೂನಿವರ್ಸ್​ನ ಇತರೆ ಸಿನಿಮಾಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಓಪನಿಂಗ್. ಸದ್ಯಕ್ಕೆ ಎರಡು ದಿನಗಳ ಚಿತ್ರದ ಒಟ್ಟು ಕಲೆಕ್ಷನ್ 17.92 ಕೋಟಿ ರೂಪಾಯಿಗೆ ಬಂದು ತಲುಪಿದೆ.

ವೈಆರ್‌ಎಫ್ ಸ್ಪೈ ಯೂನಿವರ್ಸ್ ಸಿನಿಮಾಗಳಿಗೆ ಹೋಲಿಕೆ:

2023ರಲ್ಲಿ ಬಿಡುಗಡೆಯಾಗಿದ್ದ ಶಾರುಖ್ ಖಾನ್ ನಟನೆಯ ಸೂಪರ್ ಹಿಟ್ ಚಿತ್ರ ‘ಪಠಾಣ್’, ತನ್ನ ಎರಡನೇ ದಿನ ಭಾರತದಲ್ಲಿ ಬರೋಬ್ಬರಿ 70.50 ಕೋಟಿ ರೂ. ನೆಟ್ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿತ್ತು. ಅದೇ ವರ್ಷ ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’ ಸಿನಿಮಾ ದೇಶಾದ್ಯಂತ ಒಟ್ಟು 19,646 ಶೋಗಳಿಂದ ಎರಡನೇ ದಿನ 59.25 ಕೋಟಿ ರೂ. ಬಾಚಿಕೊಂಡಿತ್ತು.

ಅತ್ಯಂತ ಕಳಪೆ ಕಲೆಕ್ಷನ್ ಮಾಡಿದ ಸಿನಿಮಾ:

ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯ ಬಿಗ್ ಆ್ಯಕ್ಷನ್ ಸಿನಿಮಾ ‘ವಾರ್ 2’, ತನ್ನ ಎರಡನೇ ದಿನ 18,228 ಶೋಗಳಿಂದ 57.85 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ ಈ ಎಲ್ಲಾ ದೈತ್ಯ ಸಿನಿಮಾಗಳ ಎದುರು ಅಲಿಯಾ ಭಟ್ ಮತ್ತು ಶರ್ವರಿ ನಟನೆಯ ‘ಆಲ್ಫಾ’ ಸಿನಿಮಾ ಕೇವಲ 5,877 ಶೋಗಳಿಂದ ಕೇವಲ 8.67 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದೆ. ಈ ಮೂಲಕ ವೈಆರ್‌ಎಫ್ ಸ್ಪೈ ಯೂನಿವರ್ಸ್ ಇತಿಹಾಸದಲ್ಲೇ ಎರಡನೇ ದಿನದ ಅತ್ಯಂತ ಕಳಪೆ ಕಲೆಕ್ಷನ್ ದಾಖಲಿಸಿದ ಚಿತ್ರ ‘ಆಲ್ಫಾ’ ಆಗಿದೆ.

ಇದನ್ನೂ ಓದಿ: ‘ಧುರಂಧರ್’ ಬಗ್ಗೆ ಮೌನ, ಆದ್ರೆ ಆಲಿಯಾ ಸಿನಿಮಾಗೆ ಹೊಗಳಿಕೆ: ಟ್ರೋಲ್ ಆದ ಶಾರುಖ್ ಖಾನ್

ಶಿವ ರವೈಲ್ ನಿರ್ದೇಶನದ ಈ ಚಿತ್ರದಲ್ಲಿ ಅಲಿಯಾ ಭಟ್ ಮತ್ತು ಶರ್ವರಿ ವಾಗ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ಬಾಬಿ ಡಿಯೋಲ್ ಹಾಗೂ ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿಶೇಷವೆಂದರೆ, ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಸ್ಟಾರ್ ಸ್ಪೈ ‘ಕಬೀರ್’ ಪಾತ್ರದಲ್ಲಿ ಹೃತಿಕ್ ರೋಷನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದಾರೆ. ಹಾಗಿದ್ದರೂ ಚಿತ್ರದ ಕಲೆಕ್ಷನ್ ಹೆಚ್ಚುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಕ್ರಮ ಗಣಿಗಾರಿಕೆ ಕೇಸ್​: ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ? – Kannada News | Illegal Mining Case: Fresh Trouble for MLA Janardhana Reddy as Center Seeks Report on OMC

ಬಳ್ಳಾರಿ, ಜುಲೈ 05: ಓಬಳಾಪುರಂ ಮೈನಿಂಗ್ ಕಂಪನಿಯ (ಒಎಂಸಿ) ಅಕ್ರಮ ಗಣಿಗಾರಿಕೆ ಬಗ್ಗೆ ವರದಿ ನೀಡುವಂತೆ ರಾಜ್ಯ ಅರಣ್ಯ ಇಲಾಖೆಗೆ ಕೇಂದ್ರ ಪರಿಸರ ಸಚಿವಾಲಯ ಸೂಚಿಸಿರುವ ಹಿನ್ನೆಲೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಮತ್ತೆ ಸಂಕಷ್ಟದ ಭೀತಿ ಶುರುವಾಗಿದೆ. ಒಎಂಸಿ ಕಂಪನಿ ಕರ್ನಾಟಕ ಮತ್ತು ಆಂಧ್ರದ ನಡುವಿನ ಅಂತಾರಾಜ್ಯ ಗಡಿ ನಾಶಪಡಿಸಿದೆ ಎಂಬ ಆರೋಪ ಮೊದಲಿನಿಂದಲೂ ಇದೆ. ಮೀಸಲು ಅರಣ್ಯ ಪ್ರದೇಶಗಳಾದ ವಿಠಲಾಪುರ, ತುಮಟಿ ಸೇರಿ ವಿವಿಧೆಡೆ ಅಕ್ರಮವಾಗಿ 28.90 ಲಕ್ಷ ಟನ್ ಅದಿರನ್ನು ಹೊರತೆಗೆದು ಸಾಗಣೆ ಮಾಡಲಾಗಿದೆ ಎಂಬುದು ಸಾಬೀತಾಗಿದ್ದ ಪರಿಣಾಮ ಸಿಬಿಐ ನ್ಯಾಯಾಲಯ ಜನಾರ್ದನ ರೆಡ್ಡಿಗೆ ಶಿಕ್ಷೆ ಕೂಡ ವಿಧಿಸಿತ್ತು ಎಂಬುದಿಲ್ಲಿ ಗಮನಾರ್ಹ.

ರಾಜ್ಯದ ಜಾಗ ಅತಿಕ್ರಮಣ ಎಂದು ವರದಿ

ಇನ್ನು ಕೆಲ ತಿಂಗಳ ಹಿಂದೆ ನಿವೃತ್ತ ನ್ಯಾಯಾಧೀಶ ಸುಧಾಂಶ ಧುಲಿಯಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಆಂಧ್ರದ ರಾಯದುರ್ಗ ತಾಲೂಕಿನ ಮಲಪನಗುಡಿ ಗ್ರಾಮಕ್ಕೆ ಭೇಟಿ ನೀಡಿ ಡ್ರೋನ್ ಮೂಲಕ ಸರ್ವೇ ನಡೆಸಿತ್ತು. ಇದರಲ್ಲಿ ಅಂತರಗಂಗಮ್ಮ ಹೆಸರಿನ 68.50 ಹೆಕ್ಟೇ‌ರ್, ಸಿದ್ದಾಪುರದಲ್ಲಿನ ಬಿಐಒಸಿ ಕಂಪನಿಯ 27.12 ಹೆಕ್ಟೇರ್, ವೈ. ಮಹಾಬಲೇಶ್ವರಪ್ಪ ಸನ್ಸ್ ಹೆಸರಿನ 20.24 ಹೆಕ್ಟೇರ್, ಓಬಳಾಪುರಂ ಗ್ರಾಮದಲ್ಲಿನ ಒಎಂಸಿ ಹೆಸರಿನ 25.98 ಹೆಕ್ಟೇ‌ರ್, ಒಎಂಪಿ2 ಹೆಸರಿನ 39.50 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿ ಗುತ್ತಿಗೆ ಸಂಬಂಧ ಎರಡು ಹಂತಗಳಲ್ಲಿ ಸರ್ವೇ ಮಾಡಿತ್ತು. ಈ ಸರ್ವೇಯಲ್ಲಿ ಜನಾರ್ದನ ರೆಡ್ಡಿ ಒಡೆತನದ ಒಎಂಸಿಯ ಹೆಸರಿನಲ್ಲಿ 39.50 ಹೆಕ್ಟೇರ್, ಅಂತರಗಂಗಮ್ಮ ಹೆಸರಲ್ಲಿ 68.50 ಹೆಕ್ಟೇರ್ ಪ್ರದೇಶಗಳಲ್ಲಿ ಗಣಿಗುತ್ತಿಗೆ ಪ್ರದೇಶ ಮತ್ತು ಗಡಿಗಳ ಹೊಂದಾಣಿಕೆ ಆಗಿಲ್ಲ. ಹೀಗಾಗಿ ಈ ಕಂಪನಿಗಳು ಕರ್ನಾಟಕ ರಾಜ್ಯದಲ್ಲಿ ಅತಿಕ್ರಮಣ ಮಾಡಿವೆ ಎಂದು ತಂಡ ವರದಿ ನೀಡಿತ್ತು. ಇದೇ ವರದಿಯನ್ನ ದೂರುದಾರ ಟಪಾಲ್ ಗಣೇಶ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯಕ್ಕೆ ಸಲ್ಲಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಬರಿದಾದ ಮೂರು ರಾಜ್ಯಗಳ ಜೀವನಾಡಿ; ಹೊಸ ಕ್ರಸ್ಟ್​​ಗೇಟ್​​ಗಳನ್ನು ಕಂಡ ತುಂಗಭದ್ರಾ ಜಲಾಶಯವೀಗ ಭಣಭಣ

ದೂರುದಾರ ಟಪಾಲ್​​ ಗಣೇಶ್​​ ಆಕ್ರೋಶ

ಜನಾರ್ದನ ರೆಡ್ಡಿ 884 ಕೋಟಿ ಮೌಲ್ಯದ ಸಂಪತ್ತು ಲೂಟಿ ಮಾಡಿದ್ದಾರೆ. ಆಂಧ್ರದ ಪರ್ಮಿಟ್ ಮೇಲೆ ರಾಜ್ಯದ ಅದಿರು ದೋಚಿದ್ದಾರೆ. ಇಷ್ಟೆಲ್ಲ ಅಕ್ರಮ ಸಾಬೀತಾದರೂ ರಾಜ್ಯದ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಸಿಬಿಐ ಕೋರ್ಟ್ ಆದೇಶದ ಪ್ರತಿಗಳನ್ನ ಓದುವಷ್ಟು ಸಮಯವೂ ಇವರಿಗಿಲ್ಲ. ಹೀಗಾಗಿ ತಾನು ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆದಿದ್ದೆ. ನಾನು ಕೊಟ್ಟಿದ್ದ ದೂರಿನ ಮೇರೆಗೆ ಇದೀಗ ರಾಜ್ಯ ಸರ್ಕಾರಕ್ಕೆ ಕೇಂದ್ರ ಸೂಚನೆ ನೀಡಿದೆ ಎಂದು ಟಪಾಲ್ ಗಣೇಶ್ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಮಹತ್ವದ ಆದೇಶ: ಕುಡಿಯುವ ನೀರಿನ ಬಳಕೆಗೆ ಹೊಸ ಮಾರ್ಗಸೂಚಿ – Kannada News | BWSSB Issues Strict Guidelines: Bans Drinking Water for Swimming Pools and Construction in Bengaluru

ಬೆಂಗಳೂರು, ಜುಲೈ 05: ಮಳೆ ಕೊರತೆಯಿಂದ ನಗರದ ಕೆಲ ಭಾಗಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆ, ಕುಡಿಯುವ ನೀರಿನ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಬಿಡಬ್ಲ್ಯೂಎಸ್​​ಎಸ್​ಬಿ ಕಾಯ್ದೆ, 1964ರ ಕಲಂ 33 ಮತ್ತು 34ರ ಅಡಿಯಲ್ಲಿ ಮೂರು ನಿಷೇಧಾತ್ಮಕ ಹಾಗೂ ನಿಯಂತ್ರಣ ಆದೇಶಗಳನ್ನು ಹೊರಡಿಸಿದೆ. ಆ ಪ್ರಕಾರ ಈಜುಕೊಳಗಳನ್ನು ತುಂಬಿಸಲು ಕುಡಿಯುವ ನೀರನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳ ತರಬೇತಿಗಾಗಿ ಬಳಸುವ ಈಜುಕೊಳಗಳಿಗೆ ಮಂಡಳಿಯ ಪೂರ್ವಾನುಮತಿ ಪಡೆದಿದ್ದರೆ ಈ ನಿಷೇಧ ಅನ್ವಯಿಸುವುದಿಲ್ಲ.

ಅಗತ್ಯವಲ್ಲದ ಉದ್ದೇಶಗಳಿಗೆ ಕುಡಿಯುವ ನೀರಿನ ಬಳಕೆ ನಿಷೇಧ

ಇದರ ಜೊತೆಗೆ, ಹಲವು ಅಗತ್ಯವಲ್ಲದ ಉದ್ದೇಶಗಳಿಗೆ ಕುಡಿಯುವ ನೀರಿನ ಬಳಕೆಯನ್ನೂ BWSSB ನಿಷೇಧಿಸಿದೆ. ವಾಹನ ತೊಳೆಯುವುದು, ಕಟ್ಟಡ ನಿರ್ಮಾಣ ಕಾಮಗಾರಿಗಳು, ಕಾರಂಜಿಗಳಂತಹ ಅಲಂಕಾರಿಕ ಜಲಸೌಲಭ್ಯಗಳು, ಸಿನಿಮಾ ಮಂದಿರಗಳು ಹಾಗೂ ಮಾಲ್‌ಗಳಲ್ಲಿ ಕುಡಿಯುವ ಉದ್ದೇಶವಲ್ಲದ ನೀರಿನ ಬಳಕೆ, ರಸ್ತೆ ನಿರ್ಮಾಣ ಹಾಗೂ ರಸ್ತೆ ಸ್ವಚ್ಛತಾ ಕಾಮಗಾರಿಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ:  ಶ್ರೀರಾಮನ ಚಿನ್ನಾಭರಣ ದೋಚಲು 200 ಖದೀಮರ ಜಾಲ; ಅಯೋಧ್ಯೆಯಿಂದ ರೈಲಿನಲ್ಲಿ ಕರ್ನಾಟಕಕ್ಕೆ ಬರ್ತಿತ್ತಾ ಕದ್ದ ಚಿನ್ನ?

ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳು, ಸರ್ಕಾರಿ ಕಟ್ಟಡಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಧಾರ್ಮಿಕ ಸ್ಥಳಗಳನ್ನು ಒಳಗೊಂಡಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಉದ್ದೇಶಕ್ಕಾಗಿ ಬಳಸುವ ನಳಿಕೆಗಳು ಹಾಗೂ ನೀರಿನ ಔಟ್‌ಲೆಟ್‌ಗಳಿಗೆ ಫ್ಲೋ ರಿಸ್ಟ್ರಿಕ್ಟರ್‌ಗಳು (Flow Restrictors) ಅಥವಾ ಏರೇಟರ್‌ಗಳನ್ನು (Aerators) ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಎಲ್ಲಾ ನಿಯಮಗಳನ್ನು ಜುಲೈ 31ರೊಳಗೆ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಮಂಡಳಿ ಸೂಚಿಸಿದೆ.

ಕುಡಿಯುವ ನೀರಿನ ವಿವೇಕಪೂರ್ವ ಬಳಕೆ ಅತ್ಯಗತ್ಯ

ಬೆಂಗಳೂರು ನಗರದ ಶಾಶ್ವತ ಹಾಗೂ ತಾತ್ಕಾಲಿಕ ನಿವಾಸಿಗಳನ್ನು ಸೇರಿಸಿ ಸುಮಾರು 1.4 ಕೋಟಿ ಜನಸಂಖ್ಯೆ ಇರುವುದರಿಂದ ಕುಡಿಯುವ ನೀರನ್ನು ಸಮಾನವಾಗಿ ಮತ್ತು ವಿವೇಕಪೂರ್ವಕವಾಗಿ ಬಳಸುವುದು ಅತ್ಯಗತ್ಯವಾಗಿದೆ ಎಂದು BWSSB ತಿಳಿಸಿದೆ. ಕಡಿಮೆ ಮಳೆಯಿಂದ ನಗರದ ಕೆಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ನೀರಿನ ವ್ಯರ್ಥ ಬಳಕೆಯನ್ನು ತಡೆಯಲು ಈ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಲಾಶಯಗಳಲ್ಲಿ ನೀರಿನ ಸಂಗ್ರಹ ಗಣನೀಯ ಇಳಿಕೆ

ನಗರಕ್ಕೆ ಲಭ್ಯವಿರುವ ನೀರಿನ ಪ್ರಮಾಣದ ಕುರಿತು ಪ್ರತಿಕ್ರಿಯಿಸಿದ BWSSB ಅಧ್ಯಕ್ಷೆ ಮಂಜುಳಾ ಎನ್., ಕಡಿಮೆ ಮಳೆಯ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಶನಿವಾರ ಸಂಜೆ ವೇಳೆಗೆ ಜಲಾಶಯಗಳಲ್ಲಿ ಕೇವಲ 23 ಶೇಕಡಾ ನೀರು ಮಾತ್ರ ಸಂಗ್ರಹವಾಗಿತ್ತು. ಒಟ್ಟು 895.6 ಟಿಎಂಸಿ ಸಂಗ್ರಹ ಸಾಮರ್ಥ್ಯದಲ್ಲಿ ಸದ್ಯ 203 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಒಟ್ಟು 114.5 ಟಿಎಂಸಿ ಸಾಮರ್ಥ್ಯದ ಬದಲಾಗಿ ಕೇವಲ 36 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ಅವರು ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Horoscope Today: ಇಂದು ಈ ರಾಶಿಯವರು ಕೋಪ ತಾಪಗಳಿಗೆ ಒಳಗಾಗದೆ ಇದ್ದರೆ ಒಳಿತು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 05, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣಪಕ್ಷದಲ್ಲಿ ಶತಭಿಷಾ ನಕ್ಷತ್ರ, ಪಂಚಮಿ, ಆಯುಷ್ಮಾನ್ ಯೋಗ, ತೈತಲಕರಣ ಇರತಕ್ಕಂತಹ ಈ ದಿನದಂದು ರಾಹುಕಾಲವು ಸಂಜೆ 4:59 ರಿಂದ 6:43 ನಿಮಿಷದ ತನಕ ಇರಲಿದೆ. ಸಂಕಲ್ಪ ಕಾಲವು ಮಧ್ಯಾಹ್ನ 12:24 ನಿಮಿಷದಿಂದ 2 ಗಂಟೆಯ ತನಕ ಇರಲಿದ್ದು, ಸೂರ್ಯನ ಲಹರಿಗಳ ಪ್ರಭಾವ ಈ ದಿನ ಹೆಚ್ಚಾಗಿದೆ. ಇಂದು ರವಿ ಮಿಥುನ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯ ಶತಭಿಷಾ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದಾರೆ. ಜನ್ಮದಿನ ಆಚರಿಸಿಕೊಳ್ಳುವವರು ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿಗೆ ಗುರೂಜಿ ಶುಭ ಹಾರೈಸಿದ್ದಾರೆ.

 

 

 

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಕೋಪಗೊಂಡು ಸಿಗಬೇಕಾದ ಸ್ಥಾನವನ್ನು ಅನುಭವಿಸಲಾರಿರಿ… – Kannada News | Daily Horoscope for July 04, 2026: Uttarayan Greeshma season, Jyeshtha Masa Krishna Paksha Sunday astrology prediction

ಮೇಷ ರಾಶಿ:

ನಿಮ್ಮ ಇಷ್ಟದ ಆಯ್ಕೆ ವಿಚಾರದಲ್ಲಿ ನೀವು ಸೋಲಬಹುದು. ಕಹಿ ನೆನಪು ಕಾಡಲಿದೆ. ಸಂಗಾತಿಯ ಜೊತೆ ವಾಸ್ತವದ ಬಗ್ಗೆ ಆಲೋಚಿಸಿ. ಹೂಡಿಕೆಯಲ್ಲಿ ನಂಬಿಕೆ ಹೆಚ್ಚಾಗುವುದು. ಹೊಸ ವ್ಯವಹಾರ ಪ್ರಾರಂಭಿಸಲು ದಿನ ಲಾಭದಾಯಕ. ಸ್ನೇಹಿತರೊಂದಿಗೆ ಸಮಯ ಕಳೆಯುವುದು ಉಲ್ಲಾಸ ತರಬಹುದು. ನಿಮ್ಮ ಧ್ವನಿ ಸಾರ್ವಜನಿಕ ಕಾರ್ಯಕ್ಕೆ ಉಪಯೋಗವಾಗಲಿದೆ. ದಿನದ ಮೊದಲಾರ್ಧದಲ್ಲಿ ನಿರ್ಣಯಗಳಲ್ಲಿ ನಿಶ್ಚಿತತೆ ಇರಲಿ. ಆಸ್ತಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದು.

ವೃಷಭ ರಾಶಿ:

ಶತ್ರುಗಳ ಕಾಟಕ್ಕೆ ಪೂರ್ಣವಿರಾಮ ಬೇಕಾಗಿದೆ. ಮಾನಸಿಕವಾಗಿ ಅವರು ನಿಮಗೆ ಇಂದು ತೊಂದರೆಯನ್ನು ಕೊಡಬಹುದು. ಕುಟುಂಬದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಕಲಹಗಳು ಆಗಬಹುದು. ಬುದ್ದಿವಂತಿಕೆಯ ಸಹಾಯದಿಂದ ಸಮಸ್ಯೆಗಳನ್ನು ಪರಿಹರಿಸಬಲ್ಲಿರಿ. ಹಳೆಯ ಚಿಕ್ಕ ವಿಷಯ ಈಗ ದೊಡ್ಡ ವಿವಾದಕ್ಕೆ ಕಾರಣವಾಗಬಹುದು, ಎಚ್ಚರಿಕೆಯಿಂದಿರಿ. ಮಕ್ಕಳ ಬಗೆಗಿನ ಕಾಳಜಿ ಹೆಚ್ಚಾಗುವುದು. ಕೈಲಾಗದ್ದನ್ನು ಮಾಡುವ ಉತ್ಸಾಹ ಬೇಡ. ಆಸೆಯಿಂದ ಕಳೆದುಕೊಳ್ಳುವುದು ಹೆಚ್ಚಾಗಬಹುದು.

ಮಿಥುನ ರಾಶಿ:

ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ನೀವು ಸೋಲಬಹುದು. ದೇಹದಲ್ಲಿ ಸೌಖ್ಯವಿಲ್ಲದ ಭಾವನೆ ಉಂಟಾಗಬಹುದು. ಕೆಲ ಕಾಲ ಮನೋಭಾವ ಕುಂಠಿತವಾಗಿರಬಹುದು. ಮಧ್ಯಾಹ್ನದ ಬಳಿಕ ಕೆಲಸಗಳು ಸರಿದೂಗುತ್ತವೆ. ನಿಮ್ಮ ಬಗ್ಗೆ ವಿನೋದದ ಮಾತಿಗಳನ್ನಾಡುವರು. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ವಿಶೇಷ ಸಂದರ್ಭದಲ್ಲಿ ಭಾಗವಹಿಸಲಿದ್ದೀರಿ. ಅದೇ ನಿಮ್ಮ ತಲೆಯನ್ನು ದಿನವಿಡೀ ಕೊರೆಯಬಹುದು.

ಕರ್ಕಾಟಕ ರಾಶಿ:

ಗೊತ್ತಿದ್ದೂ ಉದ್ವೇಗದಲ್ಲಿ ಸಿಕ್ಕಿಕೊಳ್ಳಬೇಡಿ. ಹಿರಿಯರ ಜೊತೆ ಮಾತನಾಡುವಾಗ ಹಿಡಿತವಿರಲಿ. ಆಧ್ಯಾತ್ಮಿಕ ಪ್ರಗತಿ ಮಾರ್ಸಾಧ್ಯ. ವಿದ್ಯಾರ್ಥಿಗಳಿಗೆ ಎಚ್ಚರಿಕೆಯಿಂದ ಸಮಯ ಬಳಕೆ ಅಗತ್ಯ. ಕೆಲವು ಅಸಹಜ ಘಟನೆಗಳಿಂದ ಆತಂಕ ಉಂಟಾಗಬಹುದು. ಹಣಕಾಸಿನ ನಿರ್ವಹಣೆಯಲ್ಲಿ ಯುಕ್ತಿ ಅವಶ್ಯ. ಅಪವಾದದಿಂದ ನೀವು ಚುರುಕಾಗುವಿರಿ. ಆತ್ಮೀಯತೆಯು ಬದಲಾಗಬಹುದು. ನಿಮ್ಮವರನ್ನು ನೀವು ಬಿಟ್ಟುಕೊಡಲಾರಿರಿ. ನಿಮ್ಮ ಕೆಲಸವು ನಿಮಗೆ ತೃಪ್ತಿಕರವಾಗಿ ಇರಲಿದೆ.

ಸಿಂಹ ರಾಶಿ:

ಅನಗತ್ಯ ಓಡಾಟದಿಂದ ಶರೀರಕ್ಕೆ ಆಯಾಸವಾಗಬಹುದು. ವ್ಯವಸ್ಥಿತ ರೀತಿಯಿಂದ ಆಸ್ತಿಯ ಹಂಚಿಕೆಯನ್ನು ಮಾಡಿಕೊಳ್ಳಿ. ಮಾತು ಜವಾಬ್ದಾರಿಯಿಂದ ಕೂಡಿರಲಿ. ಆರ್ಥಿಕ ಲಾಭದ ಅವಕಾಶಗಳು ಬರಬಹುದು. ಕೆಲಸದಲ್ಲಿ ಹೆಚ್ಚುವರಿ ಹೊಣೆಗಾರಿಕೆ ಬರುವ ಸಾಧ್ಯತೆ. ಅನೇಕ ಕ್ಷೇತ್ರಗಳಲ್ಲಿ ಬೆಳೆಯಬೇಕು ಎಂಬ ತುಡಿತ ಉಂಟಾಗಬಹುದು. ಯಾರ ಜೊತೆ ಸ್ಪರ್ಧೆಗೆ ಇಳಿಯದೇ ನಿಮ್ಮ ಕೆಲಸವನ್ನು ಮುಂದುರಿಸುವುದು ಉತ್ತಮ.

ಕನ್ಯಾ ರಾಶಿ:

ಉದ್ಯೋಗವನ್ನು ಬದಲಿಸುವುದು ನಿಮಗೆ ನಿತ್ಯದ ಕೆಲಸದಂತೆ ಸಲೀಸಾಗಬಹುದು. ಒಂದೇ ಉದ್ಯೋಗವನ್ನು ಹೆಚ್ವು ಕಾಲ ಮಾಡಲು ಇಷ್ಟ ಪಡದೇ ಬದಲಿಸುವಿರಿ. ಮೂರನೇ ವ್ಯಕ್ತಿಗಳ ಮಾತನ್ನು ನಂಬಿ ಮೋಸಹೋಗುವಿರಿ. ಒತ್ತಡ ಇರಬಹುದು ಆದರೆ ತಾಳ್ಮೆಯಿಂದ ಜಯಿಸಬಹುದು. ವಾದವಿವಾದಗಳಲ್ಲಿ ತಾಳ್ಮೆ ಉಳಿಸಿ. ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಬಹುದು. ಸಂಧಿಗಳಲ್ಲಿ ನೋವುಗಳು ಹೆಚ್ಚಾಗಬಹುದು. ನಿಷ್ಕಾಳಜಿ ಮಾಡಬೇಡಿ.

ಇದನ್ನೂ ಓದಿ: ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ

ತುಲಾ ರಾಶಿ:

ವೈದ್ಯಕೀಯ ವೃತ್ತಿಯಲ್ಲಿ ಚುರುಕುತನ ಬೇಕಾಗಬಹುದು. ಕುಟುಂಬದಲ್ಲಿ ಮಂಗಲ ಕಾರ್ಯಗಳು ನಡೆಯಬಹುದು. ಸಂಗಾತಿಯ ಮಾತನ್ನು ಆಲಿಸಿ, ಇಲ್ಲವಾದರೆ ಸಿಟ್ಟಾದಾರು. ಕೆಲಸದಲ್ಲಿ ಚುರುಕು ಮತ್ತು ಸ್ಪಷ್ಟತೆ ಅಗತ್ಯ. ಇತ್ತೀಚಿನ ಯಾವುದೇ ತೀರ್ಮಾನವು ಪರಿಶೀಲನೆ ಅಗತ್ಯವಿದೆ. ಹಣಕಾಸಿನಲ್ಲಿ ನಿರೀಕ್ಷಿತ ಲಾಭದೊರೆಯಬಹುದು. ಪೋಷಕರ ಆರೋಗ್ಯಕ್ಕೆ ಆರೈಕೆ ಅವಶ್ಯ. ಆರ್ಥಿಕವಾದ ಕೆಲವು ವಿಚಾರಗಳಲ್ಲಿ ಗೌಪ್ಯತೆಯನ್ನು ಇಟ್ಟುಕೊಳ್ಳುವಿರಿ‌.

ವೃಶ್ಚಿಕ ರಾಶಿ:

ಸಹೋದ್ಯೋಗಿಗಳಿಂದ‌ ಕಛೇರಿಯಲ್ಲಿ ನಿಮಗೆ ಒತ್ತಡ ಪರಿಸ್ಥಿತಿ ಬರಬಹುದು. ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಯಶಸ್ಸು ಖಚಿತ. ಹಠ ಅಥವಾ ಜಿದ್ದು ದಾಂಪತ್ಯದಲ್ಲಿ ಅಸಮಾಧಾನ ತರಬಹುದು. ಹಣಕಾಸು ಸ್ಥಿತಿಯು ಸ್ಥಿರವಾಗಿರಲಿದೆ. ಹಿರಿಯರ ಸಲಹೆಗೆ ಕಿವಿಗೊಡಿ. ನಿಮ್ಮ ಆಪ್ತವಲಯವು ಇನ್ನೂ ದೊಡ್ಡದಾಗಬಹುದು. ಸಣ್ಣ ವಿವಾದಗಳು ಆಗಬಹುದು.‌ ಅಲ್ಲಿಯೇ ಬಗೆಹರಿಸಿಕೊಳ್ಳಿ. ದೊಡ್ಡ ಮಾಡಿಕೊಳ್ಳುವುದು ಬೇಡ.

ಧನು ರಾಶಿ:

ಗೌಪ್ಯತೆಯನ್ನು ನೀವು ಕಾಪಾಡಿಕೊಳ್ಳಲಿದ್ದೀರಿ. ನೆರೆಹೊರೆಯವರು ನಿಮ್ಮ ಮನೆಗೆ ಬರಬಹುದು. ನಿಮ್ಮ ಪ್ರಯತ್ನಗಳು ಗುರುತು ಕಾಣುವ ದಿನ. ಮಿತ್ರರ ಸಹಕಾರದಿಂದ ಕೆಲಸ ಸುಲಭವಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ಬದಲಾಗಬಹುದು. ಯಾರಿಂದಲಾದರೂ ಏನನ್ನಾದರೂ ಪಡೆಯುವಾಗ ವಿನಯವು ಇರಲಿ. ಅತಿಯಾದ ಆಲಸ್ಯದಿಂದ ಮನೆಯ ಕೆಲಸಗಳು ಹಾಗೆಯೇ ಉಳಿದುಕೊಳ್ಳಬಹುದು. ದೂರದ ಪ್ರಯಾಣವನ್ನು ಅಪೇಕ್ಷಿಸುವಿರಿ.

ಮಕರ ರಾಶಿ:

ಮನೆಯಿಂದ ದೂರ ಉದ್ಯೋಗದ ನಿಮಿತ್ತ ಇರಬೇಕಾಗಿ ಬರಬಹುದು. ಕೌಟುಂಬಿಕ ಚರ್ಚೆಗಳಲ್ಲಿ ತಾಳ್ಮೆಯಿಂದ ಪ್ರತಿಕ್ರಿಯಿಸಿ. ಆರ್ಥಿಕವಾಗಿ ಏರುಪೇರು ಆಗಬಹುದು. ಹೊಸ ಖರೀದಿಗೆ ದಿನ ಸೂಕ್ತವಲ್ಲ. ಸ್ನೇಹಿತರ ಮಾತುಗಳಲ್ಲಿ ಸತ್ಯತೆ ಇಲ್ಲದಿರುವ ಸಾಧ್ಯತೆ. ಅಸ್ತಿ ಸಂಬಂಧ ಕಾನೂನು ವ್ಯವಹಾರ ನೋಡಿಕೊಳ್ಳಿ. ಸಂಗಾತಿಯನ್ನು ಜೊತೆ ಹೊಸ ಉದ್ಯಮವನ್ನು ಆರಂಭಿಸುವ ಹುನ್ನಾರ ನಡೆಯಲಿದೆ. ನಿಮ್ಮ ಸುತ್ತಮುತ್ತಲಿನವರಿಂದ ಸಾಕಷ್ಟು ಪ್ರಶಂಸೆ ಪಡೆಯಲಿದ್ದೀರಿ.

ಕುಂಭ ರಾಶಿ:

ಹಲವು ವಿಚಾರಕ್ಕೆ ಮನಸ್ಸು ಕೆಡುವುದು ಬಿಟ್ಟರೆ ಮತ್ತೇನೂ ಆಗದು. ಯಾರ ಮಾತನ್ನೂ ಕೇಳದೇ ಹಣ ಹೂಡಿಕೆ‌ ಮಾಡಿ ಕಳೆದುಕಳ್ಳುವಿರಿ. ಹಣಕಾಸು ವಿಷಯದಲ್ಲಿ ಲಾಭದ ಸೂಚನೆಗಳಿವೆ. ಹಳೆಯ ಸ್ನೇಹಿತರಿಂದ ಸಂಪರ್ಕ ಬರಬಹುದು. ಕೆಲಸದ ಜವಾಬ್ದಾರಿಗಳಿಂದ ದೂರ ಉಳಿಯಲಾಗದು. ಆರೋಗ್ಯ ಸರಾಸರಿ ಇರುತ್ತದೆ. ಭವಿಷ್ಯದ‌ ಕುರಿತು ಆಲೋಚಿಸುವುದು ಉತ್ತಮ. ಉತ್ತಮವಾದುದನ್ನು ಪಡೆಯಲು ಪ್ರಯತ್ನಿಸಿ.

ಮೀನ ರಾಶಿ:

ನಿಮ್ಮ ಬುದ್ಧಿ, ಮನಸ್ಸುಗಳಿಗೆ ಸರಿಯಾದ ಕೆಲಸ ಬೇಕಿದೆ. ಸಂಗಾತಿಯ ಜೊತೆ ಸ್ವಲ್ಪ ಕಾಲ ಕಳೆಯಿರಿ. ಆತ್ಮವಿಶ್ವಾಸವನ್ನು ಬೆಳಸಿಕೊಂಡ ನಿಮಗೆ ಸದಾ ಸಂತೋಷವು ಇರಲಿದೆ. ಆರ್ಥಿಕ ವಿಚಾರದಲ್ಲಿ ಚಿಂತೆ ಇರಬಹುದು, ಆದರೆ ತಾಳ್ಮೆಯಿಂದ ನಿರ್ವಹಿಸಬಲ್ಲಿರಿ. ಕುಟುಂಬದೊಂದಿಗೆ ಸಮಯ ಕಳೆಯುವುದು ಸಂತೋಷ ತರುವದು. ಉದ್ಯೋಗದಲ್ಲಿನ ಒತ್ತಡ ಕಡಿಮೆಯಾಗಬಹುದು. ನಿಮ್ಮನ್ನು ಬಹು ದಿನಗಳಿಂದ ಬಾಧಿಸುತ್ತಿದ್ದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಭಾನು ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಆಯುಷ್ಮಾನ್, ಕರಣ : ತೈತಿಲ, ಸೂರ್ಯೋದಯ – 05 – 59 am, ಸೂರ್ಯಾಸ್ತ – 06 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:33 – 18:49, ಯಮಗಂಡ ಕಾಲ 12:24 – 14:00, ಗುಳಿಕ ಕಾಲ 15:37 – 17:33

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ: ಖರ್ಗೆಗೆ ವಿಜಯೇಂದ್ರ ತಿರುಗೇಟು! – Kannada News | Congress donkeys are ruining the SIR process: by Vijayendra sparks out Priyank Kharge

ಬೆಂಗಳೂರು, ಜುಲೈ 04: ಕೇಂದ್ರ ಚುನಾವಣಾ ಆಯೋಗ ತನ್ನ ಕರ್ತವ್ಯ ಸರಿಯಾಗಿ ಮಾಡುತ್ತಿದೆ. ಆದರೆ ರಾಜ್ಯದಲ್ಲಿರುವ ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ. ಆ ಮೂಲಕ ಚುನಾವಣಾ ಆಯೋಗ ಕತ್ತೆ ಕಾಯುತ್ತಿದೆಯಾ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಅತಂತ್ರ ಮಾಡುತ್ತಿವೆ. ಕೇಂದ್ರ ಚುನಾವಣಾ ಆಯೋಗ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು- ಉಗ್ರರ ನಡುವೆ ಎನ್​ಕೌಂಟರ್ ಆರಂಭ – Kannada News | Encounter breaks out between security forces and terrorists in Jammu and Kashmir Shopian

ಶ್ರೀನಗರ, ಜುಲೈ 4: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಉಗ್ರ ನಿಗ್ರಹ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಭೀಕರ ಗುಂಡಿನ ಚಕಮಕಿ ಎನ್‌ಕೌಂಟರ್ (Encounter) ಆರಂಭವಾಗಿದೆ. ಈ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಬೃಹತ್ ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಅಡಗಿದ್ದ ಉಗ್ರರು ಜಂಟಿ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಚಕಮಕಿ ಆರಂಭವಾಯಿತು. ಸದ್ಯ ಭದ್ರತಾ ಪಡೆಗಳು ಚಾನಪೋರಾ, ಸೈದಪೋರಾ, ಸೈದಪೋರಾ ಬಾಲಾ, ಅಮ್ಶಿಪೋರಾ ಮತ್ತು ಸುತ್ತಮುತ್ತಲಿನ ಹಲವು ಪ್ರದೇಶಗಳನ್ನು ಸಂಪೂರ್ಣವಾಗಿ ಸುತ್ತುವರೆದಿದ್ದು, ತೀವ್ರ ಶೋಧ ನಡೆಸುತ್ತಿದ್ದಾರೆ.

ಶೋಪಿಯಾನ್ ಜಿಲ್ಲೆಯಲ್ಲಿ ಸಂಶಯಾಸ್ಪದ ಓಡಾಟದ ಬಗ್ಗೆ ಸಿಕ್ಕ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಇಂದು ಮುಂಜಾನೆ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಕಾರ್ಯಾಚರಣೆ ಮುಂದುವರಿದಂತೆ ಉಗ್ರರು ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದು, ಇದು ಎನ್‌ಕೌಂಟರ್‌ಗೆ ಕಾರಣವಾಗಿದೆ. ಪ್ರಸ್ತುತ ಈ ಪ್ರದೇಶಕ್ಕೆ ಹೆಚ್ಚಿನ ಭದ್ರತಾ ಪಡೆಗಳನ್ನು ರವಾನಿಸಲಾಗಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ. ಅಲ್ಲಿ ಎಷ್ಟು ಜನ ಉಗ್ರರು ಸಿಲುಕಿಕೊಂಡಿದ್ದಾರೆ ಅಥವಾ ಸಾವು-ನೋವುಗಳ ಬಗ್ಗೆ ಅಧಿಕಾರಿಗಳು ಇನ್ನು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: ಬಿಹಾರದಲ್ಲಿ ಫೇಸ್‌ಬುಕ್ ಲೈವ್‌ನಲ್ಲಿ ಶರಣಾಗುವುದಾಗಿ ಹೇಳಿದ್ದ ರೌಡಿ ಎನ್‌ಕೌಂಟರ್‌ಗೆ ಬಲಿ!

ಅಮರನಾಥ ಯಾತ್ರೆಗೆ ಬಿಗಿ ಭದ್ರತೆ:

ಒಂದೆಡೆ ಎನ್‌ಕೌಂಟರ್ ನಡೆಯುತ್ತಿದ್ದರೆ, ಮತ್ತೊಂದೆಡೆ ಅಮರನಾಥ ಯಾತ್ರೆಯ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ವಾರ್ಷಿಕ ಅಮರನಾಥ ಯಾತ್ರೆಯಲ್ಲಿ ಭಾಗವಹಿಸಲು 4,812 ಯಾತ್ರಾರ್ಥಿಗಳ ಮೂರನೇ ತಂಡವು ಇಂದು ಮುಂಜಾನೆ ಜಮ್ಮುವಿನ ಭಗವತಿ ನಗರ ಬೇಸ್ ಕ್ಯಾಂಪ್‌ನಿಂದ ಹೊರಟಿದೆ. 966 ಮಹಿಳೆಯರು, 244 ಸಾಧುಗಳು ಮತ್ತು 157 ಸಾಧ್ವಿಗಳನ್ನು ಒಳಗೊಂಡ ಈ ತಂಡ ಬಿಗಿ ಭದ್ರತೆಯ ನಡುವೆ 126 ವಾಹನಗಳ 2 ಬೆಂಗಾವಲು ಪಡೆಗಳಲ್ಲಿ ಪ್ರಯಾಣ ಬೆಳೆಸಿದೆ. ಒಟ್ಟು ಯಾತ್ರಾರ್ಥಿಗಳಲ್ಲಿ 542 ಮಹಿಳೆಯರು ಮತ್ತು 6 ಮಕ್ಕಳು ಸೇರಿದಂತೆ 2,771 ಜನರು ಪಹಲ್ಗಾಮ್ ಬೇಸ್ ಕ್ಯಾಂಪ್‌ನತ್ತ ತೆರಳಿದ್ದರೆ, ಉಳಿದ ಯಾತ್ರಾರ್ಥಿಗಳು ಬಾಲ್ಟಾಲ್ ಮಾರ್ಗವನ್ನು ಆಯ್ದುಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲ ಪಂದ್ಯದಲ್ಲಿ ಯಾರೂ ಮಾಡದ ದಾಖಲೆ ಬರೆದ ವೈಭವ್! – Kannada News | Vaibhav Sooryavanshi 1st Indian to be stumped out on his T20I debut

ಟೀಮ್ ಇಂಡಿಯಾದಲ್ಲಿ ವೈಭವ್ ಸೂರ್ಯವಂಶಿ ಯುಗಾರಂಭವಾಗಿದೆ. ಮ್ಯಾಚೆಂಸ್ಟರ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದ ಮೂಲಕ ವೈಭವ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಪಾದಾರ್ಪಣೆಯೊಂದಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಶಕಗಳ ಹಳೆಯ ದಾಖಲೆಯನ್ನು ಮುರಿದು ಇತಿಹಾಸ ಸೃಷ್ಟಿಸಿದ್ದಾರೆ. ಇದರ ಬೆನ್ನಲ್ಲೇ ಅವರು ಭಾರತೀಯ ಕ್ರಿಕೆಟ್‌ನಲ್ಲಿ ಈವರೆಗೆ ಯಾರೂ ಮಾಡದ ವಿಶಿಷ್ಟ ಹಾಗೂ ಅಪರೂಪದ ಔಟಿಂಗ್ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಹೀಗೊಂದು ದಾಖಲೆ:

ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಈವರೆಗೆ 122 ಆಟಗಾರರು ಆಡಿದ್ದಾರೆ. ಈ 122 ಆಟಗಾರರಲ್ಲಿ ಪಾದಾರ್ಪಣೆ ಪಂದ್ಯದಲ್ಲೇ ಸ್ಟಂಪ್ ಔಟ್ ಆಗಿದ್ದು ವೈಭವ್ ಸೂರ್ಯವಂಶಿ ಮಾತ್ರ ಎಂದರೆ ನಂಬಲೇಬೇಕು. ಅಂದರೆ ಈ ಹಿಂದೆ ಕಣಕ್ಕಿಳಿದ 121 ಆಟಗಾರರು ಮೊದಲ ಮ್ಯಾಚ್​ನಲ್ಲಿ ಸ್ಟಂಪ್ ಔಟ್ ಆಗಿರಲಿಲ್ಲ.

ಆದರೆ ಮ್ಯಾಂಚೆಸ್ಟರ್​ನಲ್ಲಿ ನಡೆದ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ, ಇಂಗ್ಲೆಂಡ್‌ನ ಆಫ್-ಸ್ಪಿನ್ನರ್ ವಿಲ್ ಜಾಕ್ಸ್ ಎಸೆತವನ್ನು ಮುನ್ನುಗ್ಗಿ ಹೊಡೆಯಲು ಹೋಗಿ ಮಿಸ್ ಮಾಡಿದರು. ಕ್ಷಣಾರ್ಧದಲ್ಲೇ ವಿಕೆಟ್ ಕೀಪರ್ ಜೋಸ್ ಬಟ್ಲರ್ ಬೆಲ್ಸ್ ಹಾರಿಸಿದರು.

ಇದರೊಂದಿಗೆ ಭಾರತದ ಪರ ಟಿ20 ಪಾದಾರ್ಪಣೆ ಪಂದ್ಯದಲ್ಲೇ ಸ್ಟಂಪ್ ಔಟ್ ಆದ ಮೊದಲ ಆಟಗಾರ ಎಂಬ ವಿಚಿತ್ರ ದಾಖಲೆಯೊಂದು ವೈಭವ್ ಸೂರ್ಯವಂಶಿ ಹೆಸರಿಗೆ ಸೇರ್ಪಡೆಯಾಯಿತು.

ಹೊಸ ಇತಿಹಾಸ:

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ, ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೇವಲ 15 ವರ್ಷ 99 ದಿನಗಳ ಪ್ರಾಯದಲ್ಲಿ ಕಣಕ್ಕಿಳಿಯುವ ಮೂಲಕ ವೈಭವ್, 1989ರಲ್ಲಿ ಸಚಿನ್ ತೆಂಡೂಲ್ಕರ್ (16 ವರ್ಷ 205 ದಿನ) ನಿರ್ಮಿಸಿದ್ದ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಯಾರ ಹೆಸರಲ್ಲಿದೆ ವಿಶ್ವ ದಾಖಲೆ?

ವೈಭವ್ ಸೂರ್ಯವಂಶಿ, ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರೂ ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಜೂನ್ 28… ಭಾರತೀಯ ಕ್ರಿಕೆಟ್ ಇತಿಹಾಸದ ‘ಅತ್ಯಂತ ಕೆಟ್ಟ ದಿನ’!

ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 14 ವರ್ಷಕ್ಕೆ ಪಂದ್ಯವಾಡಿದ ಆಟಗಾರರಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರನ ಹೆಸರು ಹಸನ್ ರಾಝ.

  • ಹಸನ್ ರಾಝ (ಟೆಸ್ಟ್​): 1996 ರಲ್ಲಿ ಹಸನ್ ರಾಝ ಪಾಕಿಸ್ತಾನ್ ಪರ ಮೊದಲ ಟೆಸ್ಟ್ ಪಂದ್ಯವಾಡುವಾಗ ಅವರ ವಯಸ್ಸು ಕೇವಲ ವಯಸ್ಸು ಕೇವಲ 14 ವರ್ಷ 227 ದಿನಗಳು.
  • ಹಸನ್ ರಾಝ (ಏಕದಿನ): ಟೆಸ್ಟ್ ಆಡಿದ ಕೆಲವೇ ದಿನಗಳಲ್ಲಿ (14 ವರ್ಷ 233 ದಿನಗಳು) ಏಕದಿನ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿ ಎರಡೂ ಫಾರ್ಮ್ಯಾಟ್‌ಗಳಲ್ಲಿ ಕಣಕ್ಕಿಳಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಹಸನ್ ರಾಝ ನಿರ್ಮಿಸಿದ್ದಾರೆ.
  • ಮೇರಿಯನ್ ಗೆರಾಸಿಮ್ (ಟಿ20): ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕಣಕ್ಕಿಳಿದ ಕಿರಿಯ ಆಟಗಾರ ಎಂಬ ರೊಮೇನಿಯಾದ ಮೇರಿಯನ್ ಗೆರಾಸಿಮ್ ಹೆಸರಿನಲ್ಲಿದೆ. 2020 ರಲ್ಲಿ ಬಲ್ಗೇರಿಯಾ ವಿರುದ್ಧ ಕಣಕ್ಕಿಳಿದಾಗ ಮೇರಿಯನ್ ಗೆರಾಸಿಮ್ ಅವರ ವಯಸ್ಸು 14 ವರ್ಷ 16 ದಿನಗಳು.

ಇದೀಗ 15ನೇ ವಯಸ್ಸಿನಲ್ಲಿ ಕಣಕ್ಕಿಳಿಯುವ ಮೂಲಕ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಇಂಟರ್​ನ್ಯಾಷನಲ್ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ 10 ಎಸೆತಗಳನ್ನು ಎದುರಿಸಿದ ಯುವ ದಾಂಡಿಗ 2 ಭರ್ಜರಿ ಸಿಕ್ಸರ್​​ಗಳೊಂದಿಗೆ 14 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

Source link

ವಾರದ ಭವಿಷ್ಯ: ಜುಲೈ 5ರಿಂದ 11ರವರೆಗೆ ನಿಮ್ಮ ರಾಶಿಯ ಉದ್ಯೋಗ ಯೋಗ ಹೇಗಿದೆ? ಯಾರಿಗೆ ಒಲಿಯಲಿದೆ ವೃತ್ತಿ ಪ್ರಗತಿ – Kannada News | July 5 11 Career Forecast: Astrology Insights for Your Job and Professional Growth

ಜುಲೈ 05ರಿಂದ 11ರವರೆಗಿನ ವಾರದಲ್ಲಿ 12 ರಾಶಿಗಳ ಉದ್ಯೋಗ ಮತ್ತು ವೃತ್ತಿಜೀವನ ಸುಖಮಯವೂ ಗೊಂದಲಮಯವೂ ಕ್ಲಿಷ್ಟವೂ ಅನೇಕ ಸಕಾರಾತ್ಮಕ ನಕಾರಾತ್ಮಕ ಅಂಶಗಳಿಂದ ಕೂಡಿದ್ದೂ ಆಗಿದೆ. ಹೇಗಾದರೂ ದಾಟುತ್ತೇನೆ ಎಂಬ ಹುಂಬುತನ ಬೇಡ. ಯೋಜನೆಯ ಮೂಲಕ ಕಾರ್ಯ ಸಾಧನೆಯಾಗಲಿ.

​ಮೇಷ ರಾಶಿ:

ವೃಷಭ ರಾಶಿಯಲ್ಲಿರುವ ಮಂಗಳ ಮತ್ತು ರೋಹಿಣಿ ನಕ್ಷತ್ರದ ಚಂದ್ರನ ಪ್ರಭಾವ ನಿಮ್ಮ ಮೇಲಿರಲಿದೆ. ಉದ್ಯೋಗದಲ್ಲಿ ಹೊಸ ಆವೇಗ ಮತ್ತು ಉತ್ಸಾಹ ಕಂಡುಬರಲಿದೆ. ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಗಳು ಈ ವಾರ ವೇಗವನ್ನು ಪಡೆದುಕೊಳ್ಳಲಿವೆ. ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದ್ದು, ಆರ್ಥಿಕವಾಗಿ ಲಾಭದಾಯಕ ವಾರ ಇದಾಗಲಿದೆ.

​ವೃಷಭ ರಾಶಿ:

ನಿಮ್ಮದೇ ರಾಶಿಯಲ್ಲಿ ಚಂದ್ರ ಮತ್ತು ಮಂಗಳನ ಯುತಿಯು ರೋಹಿಣಿ ನಕ್ಷತ್ರದಲ್ಲಿ ಇರುವುದರಿಂದ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ನಿಮ್ಮ ಕಾರ್ಯಕ್ಷಮತೆಗೆ ತಕ್ಕ ಉತ್ತಮ ಗೌರವ ಮತ್ತು ಪ್ರಶಂಸೆ ಲಭಿಸಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಕಠಿಣ ಪರಿಶ್ರಮದ ನಂತರ ಯಶಸ್ಸು ಸಿಗಲಿದೆ.

​ಮಿಥುನ ರಾಶಿ:

ಸೂರ್ಯ ಮತ್ತು ಬುಧನು ಪುನರ್ವಸು ನಕ್ಷತ್ರದಲ್ಲಿ ನಿಮ್ಮ ರಾಶಿಯಲ್ಲಿದ್ದಾರೆ. ನಿಮ್ಮ ಸಂವಹನ ಕೌಶಲ್ಯ ಹಾಗೂ ತೀಕ್ಷ್ಣ ಬುದ್ಧಿವಂತಿಕೆಯಿಂದ ಕಚೇರಿಯ ಪ್ರಮುಖ ಸಭೆಗಳಲ್ಲಿ ಜಯ ಸಾಧಿಸುವಿರಿ. ಉದ್ಯೋಗದಲ್ಲಿ ಮೇಲಾಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಲಿದ್ದು, ನಿಮ್ಮ ಪ್ರಸ್ತಾಪಗಳಿಗೆ ಮನ್ನಣೆ ದೊರೆಯಲಿದೆ. ನಿರೀಕ್ಷಿತ ಪ್ರಗತಿ ಕಂಡುಬರಲಿದೆ.

​ಕರ್ಕಾಟಕ ರಾಶಿ:

ಗುರುವು ನಿಮ್ಮ ರಾಶಿಯಲ್ಲಿ ಪುಷ್ಯ ನಕ್ಷತ್ರದ ಎರಡನೇ ಪಾದದಲ್ಲಿ ಉಚ್ಛ ಸ್ಥಾನದಲ್ಲಿದ್ದಾನೆ. ವೃತ್ತಿಜೀವನದಲ್ಲಿ ಇದು ಅತ್ಯಂತ ಸುವರ್ಣ ಕಾಲ ಎನ್ನಬಹುದು. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಆಫರ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಯಶಸ್ಸು ಸಿಗಲಿದೆ.

​ಸಿಂಹ ರಾಶಿ:

ಶುಕ್ರ ಮತ್ತು ಕೇತು ಮಖಾ ನಕ್ಷತ್ರದಲ್ಲಿ ನಿಮ್ಮ ರಾಶಿಯಲ್ಲಿದ್ದಾರೆ. ಸೃಜನಶೀಲ, ಕಲಾತ್ಮಕ, ಐಟಿ ಮತ್ತು ಫ್ಯಾಶನ್ ರಂಗದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಇದು ಅತ್ಯಂತ ಲಾಭದಾಯಕ ವಾರ. ಆದಾಗ್ಯೂ, ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡದಂತೆ ಮಾತನಾಡುವಾಗ ಜಾಗರೂಕತೆ ವಹಿಸುವುದು ಒಳಿತು.

​ಕನ್ಯಾ ರಾಶಿ:

ವೃತ್ತಿರಂಗದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಕಡತಗಳು ವಿಲೇವಾರಿಯಾಗಲಿವೆ. ಹಿರಿಯ ಅಧಿಕಾರಿಗಳು ನಿಮ್ಮ ಶ್ರಮವನ್ನು ಗುರುತಿಸಲಿದ್ದು, ನಿಮ್ಮ ಗೌರವ ಹೆಚ್ಚಾಗಲಿದೆ. ವ್ಯಾಪಾರ ಮತ್ತು ಸೇವಾ ವಲಯದಲ್ಲಿರುವವರಿಗೆ ಉತ್ತಮ ಪ್ರಗತಿ ಕಾಣಿಸಲಿದೆ.

​ತುಲಾ ರಾಶಿ:

ವೃತ್ತಿ ಮತ್ತು ವ್ಯಾಪಾರದಲ್ಲಿ ಸ್ಥಿರವಾದ ಪ್ರಗತಿ ಕಾಣಬಹುದು. ಹೊಸ ಯೋಜನೆಗಳು ಅಥವಾ ಜಂಟಿ ಉದ್ಯಮಗಳನ್ನು ಆರಂಭಿಸಲು ಈ ವಾರ ಅತ್ಯಂತ ಸೂಕ್ತವಾಗಿದೆ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಶಾಂತಿಯುತ ವಾತಾವರಣ ಇರಲಿದ್ದು, ನಿಮ್ಮ ಗುರಿಗಳನ್ನು ಸಮಯಕ್ಕೆ ಸರಿಯಾಗಿ ತಲುಪುವಲ್ಲಿ ಯಶಸ್ವಿಯಾಗುವಿರಿ.

​ವೃಶ್ಚಿಕ ರಾಶಿ:

ವಾರದ ಆರಂಭದಲ್ಲಿ ಕೆಲಸದ ಒತ್ತಡ ಸ್ವಲ್ಪ ಹೆಚ್ಚಾಗಿರಬಹುದು. ಆದರೆ ವಾರದ ಮಧ್ಯಭಾಗದ ನಂತರ ಚಂದ್ರ ಮತ್ತು ಮಂಗಳನ ಶುಭ ದೃಷ್ಟಿಯಿಂದ ನಿಮ್ಮ ಕಾರ್ಯಕ್ಷಮತೆ ದುಪ್ಪಟ್ಟಾಗಲಿದೆ. ಹಠಾತ್ ಸವಾಲುಗಳನ್ನು ಎದುರಿಸಬೇಕಾಗಿ ಬಂದರೂ, ನಿಮ್ಮ ಚಾಕಚಕ್ಯತೆಯಿಂದ ಅದನ್ನು ನಿಭಾಯಿಸಿ ಸೈ ಎನಿಸಿಕೊಳ್ಳುವಿರಿ.

​ಧನು ರಾಶಿ:

ರಾಶಿಯ ಅಧಿಪತಿ ಪುಷ್ಯ ನಕ್ಷತ್ರದ ಎರಡನೇ ಪಾದದಲ್ಲಿ ಉಚ್ಛ ಸ್ಥಾನದಲ್ಲಿರುವ ಕಾರಣ ಉದ್ಯೋಗದಲ್ಲಿ ನಿಮ್ಮ ನಿರ್ಧಾರಗಳು ಅತ್ಯಂತ ನಿಖರ ಮತ್ತು ದೂರದೃಷ್ಟಿಯುಳ್ಳದ್ದಾಗಿರುತ್ತವೆ. ಕಷ್ಟದ ಕೆಲಸಗಳನ್ನು ಅತ್ಯಂತ ಸುಲಭವಾಗಿ ನಿಭಾಯಿಸುವಿರಿ. ಸ್ವತಂತ್ರ ಉದ್ಯೋಗಿಗಳಿಗೆ ಹಾಗೂ ಫ್ರೀಲಾನ್ಸರ್‌ಗಳಿಗೆ ಈ ವಾರ ಉತ್ತಮ ಆದಾಯ ತರಲಿದೆ.

​ಮಕರ ರಾಶಿ:

ಕಚೇರಿಯಲ್ಲಿ ನಿಮ್ಮ ಸ್ಥಾನಮಾನ ಮತ್ತು ಅಧಿಕಾರ ಹೆಚ್ಚಾಗುವ ಯೋಗವಿದೆ. ಸಂಬಳ ಹೆಚ್ಚಳ ಅಥವಾ ಬಡ್ತಿಗಾಗಿ ಕಾಯುತ್ತಿದ್ದವರಿಗೆ ಈ ವಾರದ ಕೊನೆಯಲ್ಲಿ ಶುಭ ವಾರ್ತೆ ಕೇಳಿಬರಬಹುದು. ವಿದೇಶಿ ಸಂಪರ್ಕಗಳಿಂದ ಲಾಭ ಪಡೆಯುವ ಉದ್ಯೋಗಿಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ.

ಇದನ್ನೂ ಓದಿ: ಸಿಂಹ ರಾಶಿಗೆ ಶುಕ್ರ ಪ್ರವೇಶ; ಜು.4 ರಿಂದ ಈ ರಾಶಿಗಳ ಜಾತಕದಲ್ಲಿ ಅದೃಷ್ಟದ ಮಳೆ!

​ಕುಂಭ ರಾಶಿ:

ರಾಹು ಶತಭಿಷ ನಕ್ಷತ್ರದಲ್ಲಿ ನಿಮ್ಮ ರಾಶಿಯಲ್ಲಿದ್ದಾನೆ. ರಾಜತಾಂತ್ರಿಕ ನಡೆ ಮತ್ತು ಬುದ್ಧಿವಂತಿಕೆಯಿಂದ ಕೆಲಸ ಸಾಧಿಸಲು ರಾಹು ನೆರವಾಗುತ್ತಾನೆ. ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಅದನ್ನು ನಿಮ್ಮ ಪರವಾಗಿ ತಿರುಗಿಸಿಕೊಳ್ಳುವಿರಿ. ಮಾರ್ಕೆಟಿಂಗ್ ಮತ್ತು ರಾಜಕೀಯ ರಂಗದಲ್ಲಿರುವವರಿಗೆ ಇದು ಯಶಸ್ಸಿನ ವಾರ.

​ಮೀನ ರಾಶಿ: 

ಶನಿ ರೇವತಿ ನಕ್ಷತ್ರದಲ್ಲಿ ನಿಮ್ಮ ರಾಶಿಯಲ್ಲಿದ್ದಾನೆ. ಆದ್ದರಿಂದ ಕೆಲಸದಲ್ಲಿ ಶಿಸ್ತು, ನಿರಂತರತೆ ಮತ್ತು ತಾಳ್ಮೆ ಅತ್ಯಗತ್ಯ. ಯಾವುದೇ ಶಾರ್ಟ್‌ಕಟ್‌ಗಳನ್ನು ಬಳಸದೆ ಪ್ರಾಮಾಣಿಕವಾಗಿ ಶ್ರಮಿಸಿದರೆ ದೀರ್ಘಕಾಲದ ಲಾಭಗಳು ನಿಶ್ಚಿತ. ತರಾತುರಿಯಲ್ಲಿ ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಬೇಡಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪೆದ್ದಿ’ ಬಂದಿತು ಒಟಿಟಿಗೆ, ಯಾವಾಗ ಬಿಡುಗಡೆ? ಎಲ್ಲಿ ನೋಡಬಹುದು? – Kannada News | Peddi Movie releasing on OTT on June 09

ರಾಮ್ ಚರಣ್, ಶಿವರಾಜ್ ಕುಮಾರ್, ಜಾನ್ಹವಿ ಕಪೂರ್ ನಟನೆಯ ‘ಪೆದ್ದಿ’ (Peddi) ಸಿನಿಮಾ ಕಳೆದ ತಿಂಗಳು ಬಿಡುಗಡೆ ಆಗಿ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಗಳಿಕೆ ಕಂಡಿದೆ. ಆರಂಭದಲ್ಲಿ ಕೆಲ ವಿವಾದಗಳಿಗೆ ಸಿಲುಕಿದರೂ ಸಹ ಸಿನಿಮಾ ಯಶಸ್ಸು ಗಳಿಸಿದೆ. 2026ರ ಈ ವರೆಗಿನ ತೆಲುಗಿನ ದೊಡ್ಡ ಸಿನಿಮಾ ಎನಿಸಿಕೊಂಡಿದೆ ‘ಪೆದ್ದಿ’. ಇದೀಗ ಈ ಸಿನಿಮಾ ತನ್ನ ಬಾಕ್ಸ್ ಆಫೀಸ್ ರನ್ ಅನ್ನು ಮುಕ್ತಾಯ ಮಾಡುವ ಹಂತ ತಲುಪಿದ್ದು, ಇದೀಗ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.

‘ಪೆದ್ದಿ’ ಸಿನಿಮಾವು ಜೂನ್ 9 ರಂದು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ನೆಟ್​​ಫ್ಲಿಕ್ಸ್​ನಲ್ಲಿ ವೀಕ್ಷಿಸಬಹುದಾಗಿದೆ. ಸಿನಿಮಾವನ್ನು ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ. ಆದರೆ ನೆಟ್​​ಫ್ಲಿಕ್ಸ್​​​ನಲ್ಲಿ ಹಿಂದಿ ಆವೃತ್ತಿ ಲಭ್ಯ ಇರುವುದಿಲ್ಲ. ಸಿನಿಮಾದ ಹಿಂದಿ ಆವೃತ್ತಿ ಬೇರೊಂದು ಒಟಿಟಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ನೆಟ್‌ಫ್ಲಿಕ್ಸ್ ಇಂಡಿಯಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ರಾಮ್ ಚರಣ್ ಅವರ ಚಿತ್ರದ ಬಿಡುಗಡೆಯ ಬಗ್ಗೆ ಘೋಷಿಸಿದೆ. ಸಿನಿಮಾದ ಪೋಸ್ಟರ್ ಜೊತೆಗೆ ಸಿನಿಮಾದ ಸಂಭಾಷಣೆಯನ್ನು ಸಹ ನೆಟ್​​ಫ್ಲಿಕ್ಸ್ ಇಂಡಿಯಾ ಬಳಸಿಕೊಂಡಿದೆ.

ಬುಚ್ಚಿ ಬಾಬು ಸಾನಾ ನಿರ್ದೇಶನದ ‘ಪೆದ್ದಿ’ ಜೂನ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾ ಗ್ರಾಮೀಣ ಭಾಗದ ಕ್ರೀಡಾಪಟುವೊಬ್ಬನ ಕತೆಯನ್ನು ಒಳಗೊಂಡಿದೆ. ಕ್ರೀಡೆಯ ಮಹತ್ವ, ಗ್ರಾಮೀಣ ಭಾಗದಲ್ಲಿರುವ ಪ್ರತಿಭೆಗಳು ಇನ್ನೂ ಹಲವು ಉತ್ತಮ ವಿಷಯಗಳನ್ನು ಈ ಸಿನಿಮಾ ಒಳಗೊಂಡಿದೆ. ಆದರೆ ಸಿನಿಮಾ ಬಿಡುಗಡೆ ಆದಾಗ ಸಿನಿಮಾನಲ್ಲಿ ನಾಯಕಿಯನ್ನು ತೋರಿಸಿರುವ ರೀತಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕೊನೆಗೆ ನಿರ್ದೇಶಕ ಬುಚ್ಚಿಬಾಬು ಸನಾ ಬಹಿರಂಗ ಕ್ಷಮೆ ಕೇಳಿ, ನಾಯಕಿ ಜಾನ್ಹವಿ ಕಪೂರ್ ಅವರು ನಟಿಸಿದ್ದ ಕೆಲ ದೃಶ್ಯಗಳನ್ನು ಡಿಲೀಟ್ ಮಾಡಿ ಮರು ಸೆನ್ಸಾರ್ ಮಾಡಿಸಿ ಬಿಡುಗಡೆ ಮಾಡಿದರು. ಈಗ ಒಟಿಟಿಗೆ ಸಹ ಎಡಿಟೆಡ್ ಆವೃತ್ತಿಯೇ ಬರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ರಾಮ್ ಚರಣ್ ಕಾರಣಕ್ಕೆ ಟ್ರೋಲ್​​ಗೆ ಒಳಗಾದ ಮೆಗಾಸ್ಟಾರ್ ಚಿರಂಜೀವಿ

‘ಪೆದ್ದಿ’ ಸಿನಿಮಾವು ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಸಿನಿಮಾವು ಈ ವರೆಗೆ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 400 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಸಿನಿಮಾವನ್ನು ಬುಚ್ಚಿಬಾಬು ಸನಾ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಅವರು ಸಹ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version