ತುಮಕೂರು: SIR ಕರ್ತವ್ಯಕ್ಕೆ ತೆರಳುತ್ತಿದ್ದಾಗ ಅಪಘಾತ; ಇಬ್ಬರು ಮಹಿಳಾ ಸಿಬ್ಬಂದಿ ಪೈಕಿ ಓರ್ವರ ಸ್ಥಿತಿ ಗಂಭೀರ – Kannada News | Two Female Staff Injured in Accident While Heading for SIR Duty; One Critical

ವಿಎಒ ಭುವನಾ, ವಿಎಇ ಸಹನಾImage Credit source: tv9 kannada

ತುಮಕೂರು, ಜುಲೈ 04: ರಾಜ್ಯಾದ್ಯಂತ ಎಸ್​ಐಆರ್ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ಕೆಲವೆಡೆ ಎಸ್​ಐಆರ್ ನಡೆಸುವ ಬಿಎಲ್​ಒಗಳು ನಿಯಮಗಳನ್ನ ಗಾಳಿಗೆ ತೂರಿರುವುದು, ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಈ ಮಧ್ಯೆ SIR ಕಾರ್ಯಕ್ಕಾಗಿ ತೆರಳುತ್ತಿದ್ದ ಇಬ್ಬರು ಸಿಬ್ಬಂದಿ ಅಪಘಾತದಲ್ಲಿ (Accident) ಗಂಭೀರ ಗಾಯಗೊಂಡಿರುವಂತಹ ಘಟನೆ ತುಮಕೂರಿನಲ್ಲಿ ನಡೆದಿದೆ. ಡಿಸಿ ಒತ್ತಡ ಹಾಕಿದ್ದಕ್ಕೆ, ಬೇಗನೆ ತೆರಳುತ್ತಿದ್ದಾಗ ಹೀಗಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ನಡೆದಿದ್ದೇನು?

SIR ಕರ್ತವ್ಯಕ್ಕೆ ತೆರಳುತ್ತಿದ್ದ ವಿಎಒ ಭುವನಾ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ತುಮಕೂರು ತಾಲೂಕಿನ ಗೂಳೂರು ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಸದ್ಯ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಲ್ಮೆಟ್ ಧರಿಸಿದ್ದರೂ ತಲೆಗೆ ಗಂಭೀರ ಗಾಯವಾಗಿದ್ದು, ಭುವನಾ ಪ್ರಜ್ಞಾಶೂನ್ಯರಾಗಿದ್ದಾರೆ.

ಭುವನಾ ಅಪಘಾತದ ಬಗ್ಗೆ ಮಾಹಿತಿ ನೀಡಿದ ಡಿಸಿ ಶುಭಕಲ್ಯಾಣ್

ಗಾಯಾಳು ಭುವನಾ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿ ಶುಭಕಲ್ಯಾಣ್, 2016ರಿಂದ ಭುವನಾ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ SIR ಕರ್ತವ್ಯಕ್ಕೆ ತೆರಳುತ್ತಿದ್ದಾಗ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿದ್ದು, ಭುವನಾಗೆ ಅಪಘಾತದಲ್ಲಿ ಗಾಯವಾಗಿದೆ. ಘಟನೆಯಿಂದ ವೈಯಕ್ತಿಕ ಹಾಗೂ ಇಲಾಖೆ ಸಿಬ್ಬಂದಿಗೆ ನೋವಾಗಿದೆ ಎಂದರು.

ಇದನ್ನೂ ಓದಿ: ನೆಲಮಂಗಲದಲ್ಲಿ ಬಿಎಲ್‌ಒಗಳ ಕಳ್ಳಾಟ ಬಯಲು: ಮನೆ ಮನೆಗೆ ಹೋಗುವ ಬದಲು ಮಸೀದಿಯಲ್ಲೇ ಕುಳಿತು ಎಸ್‌ಐಆರ್ ಪತ್ರ ವಿತರಣೆ!

ಟಿ.ಬೇಗೂರಿನಿಂದ ಬಸ್​ನಲ್ಲಿ ಬಂದಿದ್ದ ಭುವನಾ, ಬಸ್ ನಿಲ್ದಾಣದಿಂದ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಅಪಘಾತವಾಗಿದೆ. ಭುವನಾ ಹೆಲ್ಮೆಟ್ ಧರಿಸಿದ್ದರೂ ತಲೆಗೆ ಗಂಭೀರ ಗಾಯವಾಗಿದ್ದು, ಪ್ರಜ್ಞಾಶೂನ್ಯರಾಗಿದ್ದಾರೆ, ಆದರೆ ಹಾರ್ಟ್​ಬೀಟ್ ಇದೆ. ಭುವನಾ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಪಘಾತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಗೆ ಯಾರನ್ನು ಹೊಣೆ ಮಾಡಬೇಕೆಂದು ನನಗೆ ಗೊತ್ತಾಗುತ್ತಿಲ್ಲ. ಹುಟ್ಟು ಸಾವು ನಮ್ಮ ಕೈಯಲ್ಲಿಲ್ಲ, ಭುವನಾ ಅಪಘಾತ ಆಕಸ್ಮಿಕ ಘಟನೆ. ನಮಗೂ ಕುಟುಂಬವಿದೆ, ಭುವನಾ ಕುಟುಂಬ ಸದಸ್ಯರ ನೋವು ನಮಗೂ ತಿಳಿಯುತ್ತದೆ ಎಂದು ಡಿಸಿ ಶುಭಕಲ್ಯಾಣ್ ಹೇಳಿದ್ದಾರೆ.

ಮತ್ತೊಬ್ಬ ಸಿಬ್ಬಂದಿಗೂ ಅಪಘಾತ

ಇನ್ನು ಇದೇ ರೀತಿಯಾಗಿ SIR ಕರ್ತವ್ಯಕ್ಕೆ ತೆರಳುತ್ತಿದ್ದ ಮತ್ತೊಬ್ಬ ಸಿಬ್ಬಂದಿಗೂ ಅಪಘಾತವಾಗಿದ್ದು, ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹುಣಸೆಘಟ್ಟ ವೃತ್ತದ ಬಳಿ ಬೆಳಗ್ಗೆ 7.30ಕ್ಕೆ ದ್ವಿಚಕ್ರ ವಾಹನದಿಂದ ಬಿದ್ದು ವಿಎಇ ಸಹನಾ ಗಾಯಗೊಂಡಿದ್ದಾರೆ. ವಿಡಿಯೋ ಕಾಲ್ ಮೂಲಕ SIR ಪ್ರಕ್ರಿಯೆ ತೋರಿಸುವಂತೆ ತಹಶೀಲ್ದಾರ್ ಲೋಕೇಶ್​​ ಸೂಚನೆಯಂತೆ ಸ್ಥಳ ತೋರಿಸಲು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಸದ್ಯ ಗಾಯಾಳು ಸಹನಾ ತಿಪಟೂರಿನ ವೈಭವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಿಸಿ ಕಚೇರಿ ಎದುರು ವಿಎಒಗಳು ಧರಣಿ

ಇನ್ನು ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ತುಮಕೂರು ಡಿಸಿ ಕಚೇರಿ ಎದುರು ವಿಎಒಗಳು ಧರಣಿ ಮಾಡುತ್ತಿದ್ದಾರೆ. ಈ ವೇಳೆ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮಗಳ ವೈಯಕ್ತಿಕ ಪ್ರತಿಷ್ಠೆಗಾಗಿ ನೌಕರರನ್ನು ಬಲಿಪಶು ಮಾಡುತ್ತೀರಾ? ಜಿಲ್ಲಾಧಿಕಾರಿಗಳಿಗೆ ಕಾರು, ಬಂಗಲೆ ಎಲ್ಲೂ ಇದೆ, ಆದರೆ ನಮ್ಮ ಬಡ ನೌಕರರಿಗೆ ಏನ್ ಸವಲತ್ತು ಇದೆ ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿ ರಾಜ್ಯಮಟ್ಟದಲ್ಲಿ ಹೋರಾಟ
ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Cape Verde: ಬಂದ್ರು… ನಡುಗಿಸಿದ್ರು… ಇತಿಹಾಸ ಬರೆದ್ರು… ಹೋದ್ರು..! – Kannada News | Cape Verde’s Historic World Cup Run Ends in Glory

ಕೇವಲ ಐದೂವರೆ ಲಕ್ಷ ಜನಸಂಖ್ಯೆ… ನಕ್ಷೆಯಲ್ಲೂ ಹುಡುಕಬೇಕಾದ ಒಂದು ಪುಟ್ಟ ದ್ವೀಪ ರಾಷ್ಟ್ರ! ಬಂದಿರುವುದು ಯಾರಿಗೂ ಗೊತ್ತೇ ಇರಲಿಲ್ಲ… ಆದರೆ ಹೋಗುವಾಗ ಇಡೀ ವಿಶ್ವಕ್ಕೆ ಪರಿಚಿತರಾಗಿದ್ದರು. ಹೌದು, ನಾವು ಹೇಳುತ್ತಿರುವುದು ಕೇಪ್ ವರ್ಡೆ (Cabo Verde) ಬಗ್ಗೆ. 2026ರ ಫಿಫಾ ವಿಶ್ವಕಪ್ ಆರಂಭವಾಗುವ ಮುನ್ನ ಈ ಹೆಸರನ್ನು ಯಾರೂ ಸಹ ಹೆಚ್ಚಾಗಿ ಕೇಳಿರಲಿಲ್ಲ. ಆದರೆ ಇಂದು ಇಡೀ ಜಗತ್ತೇ ಈ ‘ಬ್ಲೂ ಶಾರ್ಕ್ಸ್’ ಪಡೆಗೆ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದೆ! ಇದಕ್ಕೆ ಕಾರಣ ನಾಲ್ಕೇ ನಾಲ್ಕು ಪಂದ್ಯಗಳಲ್ಲಿ ಕೇಪ್​ ವರ್ಡೆ ಪಡೆ ತೋರಿದ ಕೆಚ್ಚೆದೆಯ ಪ್ರದರ್ಶನ.

ಸದ್ದಿಲ್ಲದೆ ‘ಬಂದರು’!

ಅಟ್ಲಾಂಟಿಕ್ ಮಹಾಸಾಗರದ ಒಡಲಲ್ಲಿರುವ ಪುಟ್ಟ ದ್ವೀಪ ರಾಷ್ಟ್ರ ವಿಶ್ವಕಪ್‌ನ ಮಹಾ ವೇದಿಕೆಗೆ ಲಗ್ಗೆ ಇಡುತ್ತಾರೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಆಫ್ರಿಕನ್ ಅರ್ಹತಾ ಸುತ್ತಿನಲ್ಲಿ ಪ್ರಬಲ ಕ್ಯಾಮರೂನ್ ತಂಡಕ್ಕೇ ಶಾಕ್ ನೀಡಿ, ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆದಲೇ ಎಲ್ಲರ ಕಣ್ಣು ಅತ್ತ ಕಡೆಯತ್ತ ಸಾಗಬೇಕಿತ್ತು. ಆದರೆ ಈ ಪುಟ್ಟ ದೇಶದ ಪ್ರದರ್ಶನಕ್ಕೆ ನಿರೀಕ್ಷಿತ ಮಹತ್ವ ಸಿಕ್ಕಿರಲಿಲ್ಲ. ಹೀಗಾಗಿಯೇ ಈ ಬಾರಿಯ ವಿಶ್ವಕಪ್​ಗೆ ಕೇಪ್ ವರ್ಡೆ ಪಡೆ ಸದ್ದಿಲ್ಲದೆ ಆಗಮಿಸಿದ್ದರು.

ವಿಶ್ವಕಪ್ ಆಡುತ್ತಿರುವ ಅತ್ಯಂತ ಸಣ್ಣ ವಿಸ್ತೀರ್ಣದ ದೇಶ ಮತ್ತು ಅತಿ ಕಡಿಮೆ ಜನಸಂಖ್ಯೆಯ ಎರಡನೇ ದೇಶ ಎಂಬ ಹೆಗ್ಗಳಿಕೆಯೊಂದಿಗೆ ಅಖಾಡಕ್ಕಿಳಿದಾಗ ಕೇಪ್​ ವರ್ಡೆಯನ್ನು ಕೇವಲ ‘ಅಂಡರ್‌ಡಾಗ್ಸ್’ ಎಂದುಕೊಂಡಿದ್ದರು. ಆದರೆ, ನಿಜವಾದ ಆಟ ಶುರುವಾಗಿದ್ದೇ ಸ್ಪೇನ್ ವಿರುದ್ಧದ ಪಂದ್ಯದೊಂದಿಗೆ.

ಬಲಿಷ್ಠರನ್ನು ನಡುಗಿಸಿದರು!

ವಿಶ್ವಕಪ್‌ನ ಗ್ರೂಪ್ ‘H’ ನಲ್ಲಿ ಕಾಣಿಸಿಕೊಂಡ ಕೇಪ್ ವರ್ಡೆ ತಂಡಕ್ಕೆ ಎದುರಾಳಿಯಾಗಿ ಸಿಕ್ಕಿದ್ದು, ಯುರೋಪಿನ ಬಲಿಷ್ಠ ಪಡೆ ಸ್ಪೇನ್, ಮಾಜಿ ವಿಶ್ವ ಚಾಂಪಿಯನ್ಸ್ ಉರುಗ್ವೆ ಮತ್ತು ಏಷ್ಯಾದ ಬಲಿಷ್ಠ ತಂಡ ಸೌದಿ ಅರೇಬಿಯಾ! ಹೀಗಾಗಿಯೇ ಕೇಪ್ ವರ್ಡೆ ನಾಲ್ಕನೇ ಸ್ಥಾನ ಅಲಂಕರಿಸಲಿದೆ ಎಂದೇ ಎಲ್ಲರೂ ಷರಾ ಬರೆದಿದ್ದರು.

  • ಸ್ಪೇನ್​ಗೆ ಬಿಗ್ ಶಾಕ್: ಮೊದಲ ಪಂದ್ಯದಲ್ಲೇ ವಿಶ್ವದ ಪ್ರಬಲ ಸ್ಟ್ರೈಕರ್‌ಗಳನ್ನು ಹೊಂದಿದ್ದ ಸ್ಪೇನ್ ತಂಡವನ್ನು 0-0 ಗೋಲುಗಳಿಂದ ಕಟ್ಟಿಹಾಕಿದಾಗ ಜಗತ್ತಿಗೆ ಕೇಪ್​ ವರ್ಡೆ ಪಡೆಯ ತಾಕತ್ತು ಏನೆಂದು ತಿಳಿಯಿತು.
  • ಉರುಗ್ವೆಗೆ ಸೆಡ್ಡೆ: ಮಾಜಿ ವಿಶ್ವ ಚಾಂಪಿಯನ್ಸ್ ಉರುಗ್ವೆ ವಿರುದ್ಧದ ಪಂದ್ಯವನ್ನು 2-2 ರ ಅಂತರದಿಂದ ಸಮಗೊಳಿಸಿ ಕೇಪ್ ವರ್ಡೆ ಹೊಸ ಸಂಚಲನ ಸೃಷ್ಟಿಸಿದರು.
  • ಸೌದಿಗೆ ಆಘಾತ: ಕೊನೆಯ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಕೂಡ ಒಂದೇ ಒಂದು ಗೋಲು ಹೊಡೆಸಿಕೊಳ್ಳದೇ ಡ್ರಾ ಸಾಧಿಸಿದಾಗ ಫುಟ್‌ಬಾಲ್ ಜಗತ್ತು ಬೆರಗಾಗಿ ನೋಡಿತು.

ಇತಿಹಾಸ ಬರೆದರು!

ವಿಶ್ವಕಪ್ ಇತಿಹಾಸ ಆರಂಭವಾಗಿ 96 ವರ್ಷಗಳೇ ಕಳೆದಿವೆ. ಆದರೆ ಇಷ್ಟು ಕಡಿಮೆ ಜನಸಂಖ್ಯೆ ಹೊಂದಿರುವ ದೇಶವೊಂದು ಗ್ರೂಪ್ ಹಂತವನ್ನು ದಾಟಿ ನಾಕೌಟ್ (ರೌಂಡ್ ಆಫ್ 32) ಹಂತ ತಲುಪಿದ್ದು ಇದೇ ಮೊದಲು! 40 ವರ್ಷದ ಹಿರಿಯ ಗೋಲ್‌ಕೀಪರ್ ‘ವೊಝಿನ್ಹಾ’ ಗೋಲು ಪೋಸ್ಟ್​ ಮುಂದೆ ನಿಂತರೆ ಸಾಕು, ಎದುರಾಳಿಗಳಿಗೆ ಹಿಮಾಲಯ ಪರ್ವತವೇ ಎದುರು ನಿಂತಂತಾಗುತ್ತಿತ್ತು. ಈ ಮೂಲಕ ಮೊದಲ ಹಂತದಲ್ಲಿ ಸೋಲು ಕಾಣದೇ ನಾಕೌಟ್ ಹಂತ ತಲುಪಿದ ಜಗತ್ತಿನ ಅತ್ಯಂತ ಪುಟ್ಟ ರಾಷ್ಟ್ರ ಎಂಬ ಸಾರ್ವಕಾಲಿಕ ಇತಿಹಾಸವನ್ನು ಕೇಪ್ ವರ್ಡೆ ತನ್ನದಾಗಿಸಿಕೊಂಡಿತು.

ಹೃದಯ ಗೆದ್ದು ಹೋದರು!

ಮೊದಲ ಸುತ್ತಿನಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಕೇಪ್ ವರ್ಡೆ ಪಡೆಗೆ ದ್ವಿತೀಯ ಸುತ್ತಿನಲ್ಲಿ ಎದುರಾಗಿದ್ದು ಹಾಲಿ ಚಾಂಪಿಯನ್ ಅರ್ಜೆಂಟೀನಾ. ಅದರಲ್ಲೂ ಫುಟ್​ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ. ಆದರೆ ಇದ್ಯಾವುದೂ ಕೇಪ್​ ವರ್ಡೆಗೆ ಲೆಕ್ಕಕ್ಕೇ ಇರಲಿಲ್ಲ. ವಿಶ್ವ ಚಾಂಪಿಯನ್ನರ ಮುಂದೆಯೇ ತಮ್ಮ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದರು.

ಬಲಿಷ್ಠ ಅರ್ಜೆಂಟೀನಾ ಗೋಲು ಹೊಡೆದಾಗಲೆಲ್ಲಾ ಕೇಪ್ ವರ್ಡೆ ಆಟಗಾರರು ತಿರುಗಿಬಿದ್ದು ಗೋಲು ಸಮಬಲಗೊಳಿಸುತ್ತಿದ್ದರು. ಎಲ್ಲಿಯವರೆಗೆ ಎಂದರೆ ಪಂದ್ಯ ಮುಗಿಯುವವರೆಗೂ ಅರ್ಜೆಂಟೀನಾದ ಆಟಗಾರರು ಉಸಿರು ಗಟ್ಟಿ ಹಿಡಿದು ಆಡಬೇಕಾಗಿ ಬಂತು. ಅಂತಿಮವಾಗಿ ಎಕ್ಸ್‌ಟ್ರಾ ಟೈಮ್‌ನಲ್ಲಿ 3-2 ಗೋಲುಗಳ ಅಂತರದಿಂದ ಕೇಪ್ ವರ್ಡೆ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.  ಈ ಸೋಲಿನ ಹೊರತಾಗಿಯೂ ಕೇಪ್​ ವರ್ಡೆ ತಂಡ ಇಡೀ ಫುಟ್​ಬಾಲ್ ಪ್ರೇಮಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಅದರಲ್ಲೂ ಅರ್ಜೆಂಟೀನಾ ಆಟಗಾರರೇ ಕೇಪ್ ವರ್ಡೆಯ ಕೆಚ್ಚೆದೆಯ ಹೋರಾಟಕ್ಕೆ ತಲೆಬಾಗಿದರು.

ಇದನ್ನೂ ಓದಿ: 32 ತಂಡಗಳು ಔಟ್: ಫಿಫಾ ವಿಶ್ವಕಪ್​ ಪ್ರಿ-ಕ್ವಾರ್ಟರ್ ಫೈನಲ್ ವೇಳಾಪಟ್ಟಿ ಪ್ರಕಟ

ಈ ಬಾರಿಯ ವಿಶ್ವಕಪ್​ ಟ್ರೋಪಿಯನ್ನು ಯಾರಾದರೂ ಎತ್ತಿ ಹಿಡಿಯಬಹುದು, ಯಾವುದೇ ದೈತ್ಯ ರಾಷ್ಟ್ರ ಚಾಂಪಿಯನ್ ಪಟ್ಟವನ್ನೂ ಅಲಂಕರಿಸಬಹುದು. ಆದರೆ, 2026ರ ವಿಶ್ವಕಪ್​ ಇತಿಹಾಸದ ಪುಟಗಳಲ್ಲಿ ಮತ್ತು ಜಗತ್ತಿನ ಕೋಟ್ಯಂತರ ಫುಟ್​ಬಾಲ್​ ಪ್ರೇಮಿಗಳ ಮನಸ್ಸಿನಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುವುದು ಮಾತ್ರ ಕೇಪ್ ವರ್ಡೆ ಎಂಬ ಪುಟ್ಟ ಪಡೆಯ ಅಪ್ರತಿಮ ಹೋರಾಟದ ಕಾರಣದಿಂದ ಎಂಬುದೇ ಅಪ್ಪಟ ಸತ್ಯ!

Source link

ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರದಿಂದ 24 ಜೀವಾವಧಿ ಖೈದಿಗಳಿಗೆ ಅವಧಿ ಪೂರ್ವ ಬಿಡುಗಡೆ ಭಾಗ್ಯ – Kannada News | Bengaluru Prison Release: 24 Inmates Rehabilitated and Freed by Governor’s Order

ಸನ್ನಡತೆ ಆಧಾರದ ಮೇಲೆ ಖೈದಿಗಳ ಬಿಡುಗಡೆ ಹಾಗೂ ಗೃಹಸಚಿವ

ಬೆಂಗಳೂರು, ಜು.4: ತಿಳಿದೋ ತಿಳಿಯದೆಯೋ ತಪ್ಪು ಮಾಡಿ ಕಂಬಿ ಎಣಿಸುತ್ತಿದ್ದ ಖೈದಿಗಳ ಮನಪರಿವರ್ತನೆಯನ್ನು ಪರಿಗಣಿಸಿ, ಸನ್ನಡತೆ ಆಧಾರದ ಮೇಲೆ ಅವರನ್ನು ಅವಧಿ ಪೂರ್ವವಾಗಿ ಬಿಡುಗಡೆಗೊಳಿಸಲು ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ ವಿವಿಧ ಜೈಲುಗಳಲ್ಲಿದ್ದ ಒಟ್ಟು 24 ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಖೈದಿಗಳು ಇಂದು ಜೈಲಿನಿಂದ ಮುಕ್ತರಾಗಿದ್ದಾರೆ.

ಜೈಲಿನ ಕತ್ತಲ ಕೋಣೆಯಿಂದ ಹೊರಬಂದು ಸ್ವತಂತ್ರ ಹಕ್ಕಿಗಳಾಗಿ ಹೊಸ ಜೀವನ ಆರಂಭಿಸಲು ಖೈದಿಗಳ ಅಧಿಕೃತ ಬಿಡುಗಡೆ ಕಾರ್ಯಕ್ರಮವು ಇಂದು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ವಿಶೇಷ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ಯದ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಖೈದಿಗಳಿಗೆ ಬಿಡುಗಡೆಯ ಆದೇಶ ಪತ್ರಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕಾರಾಗೃಹ ಇಲಾಖೆಯ ಎಡಿಜಿಪಿ ಅಲೋಕ್ ಕುಮಾರ್, ಜೈಲು ಮುಖ್ಯ ಸೂಪರಿಂಟೆಂಡೆಂಟ್ ಅಂಶು ಕುಮಾರ್ ಸೇರಿದಂತೆ ಕಾರಾಗೃಹ ಇಲಾಖೆಯ ಉನ್ನತ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಹಾರಿದ ಯುವತಿ: ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಬದುಕುಳಿದ ಜೀವ, 10 ನಿಮಿಷ ರೈಲು ಸಂಚಾರ ವಿಳಂಬ

ಒಮ್ಮೆ ಅಪರಾಧ ಕೃತ್ಯ ಎಸಗಿ ಜೈಲು ಸೇರಿದ್ದ ಈ ಖೈದಿಗಳು, ಶಿಕ್ಷೆಯ ಅವಧಿಯಲ್ಲಿ ಜೈಲಿನ ನಿಯಮಾವಳಿಗಳನ್ನು ಪಾಲಿಸಿ, ಉತ್ತಮ ನಡವಳಿಕೆಯನ್ನು ರೂಢಿಸಿಕೊಂಡಿದ್ದರು. ಇವರಲ್ಲಿ ಉಂಟಾದ ಸಕಾರಾತ್ಮಕ ಮನಪರಿವರ್ತನೆ ಮತ್ತು ಇವರು ಒಳ್ಳೆಯ ಮನುಷ್ಯರಾಗಿ ಬದಲಾದ ಹಿನ್ನೆಲೆಯನ್ನು ಕಾನೂನುಬದ್ಧವಾಗಿ ಪರಿಶೀಲಿಸಿ, ಇಲಾಖೆಯ ಶಿಫಾರಸಿನ ಮೇರೆಗೆ ರಾಜ್ಯಪಾಲರು ಇವರ ಅವಧಿ ಪೂರ್ವ ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ. ಜೈಲಿನಿಂದ ಹೊರಬಂದ ಖೈದಿಗಳು ಹಾಗೂ ಅವರ ಕುಟುಂಬಸ್ಥರಲ್ಲಿ ಹೊಸ ಭರವಸೆಯ ಮೂಡಿದ್ದು, ಸಮಾಜದಲ್ಲಿ ಮುಖ್ಯವಾಹಿನಿಗೆ ಮರಳಲು ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಹಾರಿದ ಯುವತಿ: ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಬದುಕುಳಿದ ಜೀವ, 10 ನಿಮಿಷ ರೈಲು ಸಂಚಾರ ವಿಳಂಬ – Kannada News | Namma Metro Crisis: Rajajinagar Track Incident and Staff’s Heroic Rescue

ಬೆಂಗಳೂರು, ಜು.4: ರಾಜಧಾನಿಯ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಯುವತಿಯೊಬ್ಬಳು ಹಳಿಗೆ ಹಾರಿದ ಪರಿಣಾಮ ಮೆಟ್ರೋ ರೈಲು ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾದ ಘಟನೆ ಇಂದು (ಜು.4)  ಮಧ್ಯಾಹ್ನ ನಡೆದಿದೆ. ಬೆಂಗಳೂರಿನ ಹಸಿರು ಮಾರ್ಗದ (Green Line) ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮಧ್ಯಾಹ್ನ ಸುಮಾರು 12:25 ಗಂಟೆಗೆ ಯುವತಿಯೊಬ್ಬಳು ಇದ್ದಕ್ಕಿದ್ದಂತೆ ಮೆಟ್ರೋ ಹಳಿಗೆ ಹಾರಿದ್ದಾಳೆ.

ಆದರೆ, ನಿಲ್ದಾಣದ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ತ್ವರಿತ ಕಾರ್ಯಾಚರಣೆಯಿಂದಾಗಿ ಭಾರಿ ದುರಂತವೊಂದು ತಪ್ಪಿದಂತಾಗಿದೆ. ಯುವತಿ ಹಳಿಗೆ ಹಾರುತ್ತಿದ್ದಂತೆ ತಕ್ಷಣವೇ ಅಲರ್ಟ್ ಆದ ನಿಲ್ದಾಣ ನಿಯಂತ್ರಕರು ಮತ್ತು ಭದ್ರತಾ ಸಿಬ್ಬಂದಿ ನಿಗದಿತ ತುರ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಹಳಿಯ ಮೇಲಿದ್ದ ಯುವತಿಯನ್ನು ಅತ್ಯಂತ ಜಾಗರೂಕತೆಯಿಂದ, ಯಾವುದೇ ಗಾಯಗಳು ಆಗದಂತೆ ಸುರಕ್ಷಿತವಾಗಿ ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಡಿ ಗ್ರೂಪ್ ನೌಕರ, ಗಂಭೀರ ಗಾಯ

ಈ ಆಕಸ್ಮಿಕ ಘಟನೆಯ ಪರಿಣಾಮವಾಗಿ ಹಸಿರು ಮಾರ್ಗದ ಮೆಟ್ರೋ ರೈಲು ಸಂಚಾರವು ಸುಮಾರು 10 ನಿಮಿಷಗಳ ಕಾಲ ವಿಳಂಬಗೊಂಡಿತು. ಸಿಬ್ಬಂದಿಯು ಹಳಿ ಪ್ರದೇಶವನ್ನು ಸಂಪೂರ್ಣವಾಗಿ ತೆರವುಗೊಳಿಸಿ, ರೈಲು ಸಂಚಾರಕ್ಕೆ ನಿಗದಿತ ಎಲ್ಲಾ ಸುರಕ್ಷತಾ ನಿಯಮಗಳನ್ನು ಪೂರ್ಣಗೊಳಿಸಿದರು. ತದನಂತರ ಮಧ್ಯಾಹ್ನ 12:34 ಗಂಟೆಗೆ ಮೆಟ್ರೋ ರೈಲು ಸಂಚಾರವನ್ನು ಎಂದಿನಂತೆ ಪುನರಾರಂಭಿಸಲಾಯಿತು. ಸದ್ಯ ಪ್ರಯಾಣಿಕ ಸುರಕ್ಷಿತವಾಗಿದ್ದು, ಆತ ಹಳಿಗೆ ಹಾರಲು ಕಾರಣವೇನೆಂಬುದರ ಬಗ್ಗೆ ಬಿಎಂಆರ್‌ಸಿಎಲ್ ಮತ್ತು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ಹಿಂದೆ ಕೂಡ ಇಂತಹ ಘಟನೆಗಳು ನಡೆದಿತ್ತು. ಅಧಿಕಾರಿಗಳು ಎಷ್ಟೇ ಎಚ್ಚರ ವಹಿಸಿದರು ಈ ರೀತಿ ಘಟನೆಗಳು ನಡೆಯುತ್ತಿದೆ. ಈ ಹಿಂದೆ ಡಿ ಗ್ರೂಪ್ ನೌಕರ ನಮ್ಮ ಮೆಟ್ರೋ ರೈಲು ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಬೆಂಗಳೂರು ಮೆಜೆಸ್ಟಿಕ್​ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದ ಹಸಿರು ಮಾರ್ಗದಲ್ಲಿ ನಡೆದಿತ್ತು. ಸದ್ಯ ಮೆಟ್ರೋ ಅಧಿಕಾರಿಗಳು ವ್ಯಕ್ತಿಯನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು, ಚಿಕಿತ್ಸೆ ನೀಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:52 pm, Sat, 4 July 26

Source link

ಪ್ರಧಾನಿ ಮೋದಿಯಿಂದ ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ – Kannada News | PM Modi inaugurates new Jodhpur Airport terminal Today

ಜೋಧ್​ಪುರ, ಜುಲೈ 4: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಇಂದು ರಾಜಸ್ಥಾನ ಪ್ರವಾಸದ ವೇಳೆ ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಕೂಡ ಪ್ರಧಾನಿ ಮೋದಿಯವರ ಜೊತೆಗಿದ್ದರು. ಸುಮಾರು 23,000 ಚದರ ಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ಈ ನೂತನ ಟರ್ಮಿನಲ್ ವಾರ್ಷಿಕವಾಗಿ 20 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಪ್ರಧಾನಮಂತ್ರಿ ಕಾರ್ಯಾಲಯದ (PMO) ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಯೋಜನೆಯನ್ನು ಒಟ್ಟು 480 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರಯಾಣಿಕರಿಗೆ ಸುಗಮ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ಇದು ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡದ ಉದ್ಘಾಟನೆಯು ಈ ಪ್ರದೇಶದ ಪ್ರವಾಸೋದ್ಯಮ, ವ್ಯಾಪಾರ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ಒಟಿಟಿಗೆ ಬಂದಿವೆ ಕುತೂಹಲಕಾರಿ ಸಿನಿಮಾಗಳು, ಪಟ್ಟಿ ಇಲ್ಲಿದೆ – Kannada News | Here is the movie and web series releasing on OTT this week

‘3 ಇಡಿಯಟ್ಸ್’, ‘ಪಿಕೆ’, ‘ಮುನ್ನಾಭಾಯಿ’, ‘ಲಗೆ ರಹೊ ಮುನ್ನಾಭಾಯಿ’ ಅಂಥಹಾ ಕಲ್ಟ್ ಕ್ಲಾಸಿಕ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ರಾಜ್​ಕುಮಾರ್ ಹಿರಾನಿ ನಿರ್ದೇಶನ ಮಾಡಿರುವ ಮೊದಲ ವೆಬ್ ಸರಣಿ ‘ಪ್ರೀತಂ ಆಂಡ್ ಪೆದ್ರೊ’ ಈ ವಾರ ಒಟಿಟಿಗೆ ಬಂದಿದೆ. ಅರ್ಷದ್ ವಾರ್ಸಿ, ವಿಕ್ರಾಂತ್ ಮಾಸ್ಸಿ ಇನ್ನೂ ಕೆಲವರು ನಟಿಸಿರುವ ಈ ವೆಬ್ ಸರಣಿಯನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

Source link

PMFME, Mudra ಮತ್ತು ಇನ್ನುಳಿದ ಕೇಂದ್ರ ಸರ್ಕಾರಿ ಯೋಜನೆಗಳ ಸಾರ್ವಜನಿಕ ಸಂಪರ್ಕಾಧಿಕಾರಿಯಾಗುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ! – Kannada News | PRO Central Govt Schemes: Public Relations Officer Jobs PMFME, Mudra, Startup India

ಕೇಂದ್ರ ಸರ್ಕಾರವು ದೇಶದ ಆರ್ಥಿಕ ಪ್ರಗತಿ ಮತ್ತು ಸ್ವಯಂ ಉದ್ಯೋಗವನ್ನು ಉತ್ತೇಜಿಸಲು PMFME , ಮುದ್ರಾ ಯೋಜನೆ (Mudra Yojana) ಮತ್ತು ಸ್ಟಾರ್ಟ್ಅಪ್ ಇಂಡಿಯಾ ನಂತಹ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆ ಯಶಸ್ಸಿಯಾಗಬೇಕಾದರೆ ಸಾರ್ವಜನಿಕರನ್ನು ತಲುಪುವುದು ಅತ್ಯಂತ ಅಗತ್ಯ. ಹಾಗಾಗಿಯೇ, ಈ ಯೋಜನೆಗಳ ಪ್ರಚಾರ ಮತ್ತು ಸಾರ್ವಜನಿಕರೊಂದಿಗೆ ಸಂವಹನ ನಡೆಸಲು ಸಾರ್ವಜನಿಕ ಸಂಪರ್ಕಾಧಿಕಾರಿ (Public Relations Officer – PRO) ಅಥವಾ ಮಾಧ್ಯಮ ಸಲಹೆಗಾರರ ಹುದ್ದೆಗಳಿಗೆ ಭಾರಿ ಬೇಡಿಕೆಯಿದೆ. ಈ ಪ್ರತಿಷ್ಠಿತ ಹುದ್ದೆಯನ್ನು ನೀವು ಹೇಗೆ ಪಡೆದುಕೊಳ್ಳಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಮತ್ತು ಭಾಷಾ ಜ್ಞಾನ:

ಕೇಂದ್ರ ಸರ್ಕಾರದ ಯೋಜನೆಗಳ ಪ್ರಚಾರ ವಿಭಾಗ ಸೇರಲು ಶೈಕ್ಷಣಿಕ ಹಿನ್ನೆಲೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ (Journalism & Mass Communication) ಅಥವಾ ಸಾರ್ವಜನಿಕ ಸಂಪರ್ಕ (Public Relations) ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿರಬೇಕು. ಇದರೊಂದಿಗೆ ಕೇಂದ್ರ ಸರ್ಕಾರದ ಯೋಜನೆಗಳಾಗಿರುವುದರಿಂದ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಮೇಲೆ ಉತ್ತಮ ಹಿಡಿತವಿರಬೇಕು. ಸ್ಥಳೀಯ ಮಟ್ಟದಲ್ಲಿ (ಕರ್ನಾಟಕದಲ್ಲಿ) ಕಾರ್ಯನಿರ್ವಹಿಸಲು ಕನ್ನಡ ಭಾಷೆಯ ಪ್ರಾವೀಣ್ಯತೆ ಕಡ್ಡಾಯವಾಗಿರುತ್ತದೆ.

ನೇಮಕಾತಿ ಪ್ರಕ್ರಿಯೆ:

ಕೇಂದ್ರ ಸರ್ಕಾರವು ಇಂತಹ ಯೋಜನೆಗಳಿಗೆ PROಗಳನ್ನು ಮುಖ್ಯವಾಗಿ ಮೂರು ವಿಭಿನ್ನ ಮಾರ್ಗಗಳ ಮೂಲಕ ನೇಮಕ ಮಾಡಿಕೊಳ್ಳುತ್ತದೆ:

  • UPSC ಮತ್ತು SSC ಪರೀಕ್ಷೆಗಳು: ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಬರುವ IIS (Indian Information Service) ಹುದ್ದೆಗಳಿಗೆ UPSC ನಾಗರಿಕ ಸೇವಾ ಪರೀಕ್ಷೆಯ ಮೂಲಕ ನೇರ ನೇಮಕಾತಿ ನಡೆಯುತ್ತದೆ.
  • ಗುತ್ತಿಗೆ ಆಧಾರದ ನೇಮಕಾತಿ (Contract Basis): PMFME ಯೋಜನೆಯನ್ನು ಜಾರಿಗೊಳಿಸುವ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯ (MoFPI) ಅಥವಾ ಹಣಕಾಸು ಸಚಿವಾಲಯಗಳು ನೇರವಾಗಿ ತಮ್ಮ ಅಧಿಕೃತ ವೆಬ್‌ಸೈಟ್‌ಗಳಲ್ಲಿ “Media Consultant” ಅಥವಾ “Communication Specialist” ಹುದ್ದೆಗಳಿಗೆ 3 ರಿಂದ 5 ವರ್ಷಗಳ ಅನುಭವ ಹೊಂದಿದವರಿಂದ ಅರ್ಜಿ ಆಹ್ವಾನಿಸುತ್ತವೆ.
  • ಔಟ್‌ಸೋರ್ಸಿಂಗ್ ಏಜೆನ್ಸಿಗಳು: ಕೇಂದ್ರ ಸರ್ಕಾರವು ಸಾರ್ವಜನಿಕ ಸಂಪರ್ಕದ ಕೆಲಸಗಳನ್ನು ನಿರ್ವಹಿಸಲು BECIL (Broadcast Engineering Consultants India Limited) ನಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಜವಾಬ್ದಾರಿ ನೀಡುತ್ತದೆ. ಇವುಗಳ ವೆಬ್‌ಸೈಟ್‌ನಲ್ಲಿ ನಿಯತಕಾಲಿಕವಾಗಿ PRO ಹುದ್ದೆಗಳ ಅಧಿಸೂಚನೆ ಹೊರಡಿಸಲಾಗುತ್ತದೆ.

ಡಿಜಿಟಲ್ ಯುಗಕ್ಕೆ ಬೇಕಾದ ಪ್ರಮುಖ ಕೌಶಲ್ಯಗಳು:

ಇಂದಿನ ದಿನಗಳಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯ ಜವಾಬ್ದಾರಿ ಕೇವಲ ಪತ್ರಿಕಾ ಪ್ರಕಟಣೆಗಳಿಗೆ ಸೀಮಿತವಾಗಿಲ್ಲ. ಒಬ್ಬ ಯಶಸ್ವಿ PRO ಆಗಲು ಮಾಧ್ಯಮ ಮಿತ್ರರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವುದು ಎಷ್ಟು ಮುಖ್ಯವೋ, ಅಷ್ಟೇ ಸೋಷಿಯಲ್ ಮೀಡಿಯಾ ನಿರ್ವಹಣೆ ಕೂಡ ಮುಖ್ಯ. X (ಟ್ವಿಟರ್), ಫೇಸ್‌ಬುಕ್, ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಸರ್ಕಾರದ ಯೋಜನೆಗಳ ಸಾಧನೆಗಳನ್ನು ಕ್ರಿಯೇಟಿವ್ ಆಗಿ ಪೋಸ್ಟ್ ಮಾಡುವುದು, ಇನ್ಫೋಗ್ರಾಫಿಕ್ಸ್ ಸಿದ್ಧಪಡಿಸುವುದು ಮತ್ತು ಯೋಜನೆಗಳ ಬಗ್ಗೆ ಹರಡುವ ತಪ್ಪು ಮಾಹಿತಿಗೆ ತಕ್ಷಣವೇ ಅಧಿಕೃತ ಸ್ಪಷ್ಟನೆ ನೀಡುವುದು ಇಂದಿನ PROಗಳ ಮುಖ್ಯ ಕೆಲಸವಾಗಿದೆ.

ಇದನ್ನೂ ಓದಿ: ನೀಟ್ ಇಲ್ಲದೆಯೂ ವೈದ್ಯಕೀಯ ಲೋಕಕ್ಕೆ ಎಂಟ್ರಿ; 12ನೇ ತರಗತಿ ಅಂಕಗಳ ಆಧಾರದ ಮೇಲೆ ಸಿಗಲಿದೆ ಅಡ್ಮಿಷನ್!

ವೃತ್ತಿ ಆರಂಭಿಸಲು ಇಂದಿನಿಂದಲೇ ಏನು ಮಾಡಬೇಕು?

ನೀವು ಕೇಂದ್ರ ಸರ್ಕಾರದ ಯೋಜನೆಗಳ ಪ್ರಚಾರ ವಿಭಾಗದಲ್ಲಿ ಕೆಲಸ ಮಾಡಲು ಇಷ್ಟಪಡುವುದಾದರೆ, ಮೊದಲಿಗೆ ಸಚಿವಾಲಯಗಳ ಅಧಿಕೃತ ವೆಬ್‌ಸೈಟ್‌ಗಳಾದ mofpi.gov.in ಅಥವಾ mudra.org.in ನ ‘Careers’ ಅಥವಾ ‘Vacancies’ ಪುಟವನ್ನು ನಿಯಮಿತವಾಗಿ ಗಮನಿಸುತ್ತಿರಿ. ಇದರೊಂದಿಗೆ ಕೇಂದ್ರ ಸರ್ಕಾರದ NCS (National Career Service) ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಿ. ಆರಂಭದಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಅಥವಾ ಖಾಸಗಿ ಪಿಆರ್ (PR) ಏಜೆನ್ಸಿಗಳಲ್ಲಿ ಇಂಟರ್ನ್‌ಶಿಪ್ ಅಥವಾ ಕಿರಿಯ ಅಧಿಕಾರಿಯಾಗಿ ಕೆಲಸದ ಅನುಭವ ಪಡೆದರೆ, ಸರ್ಕಾರದ ನೇರ ಸಂದರ್ಶನಗಳಲ್ಲಿ ನಿಮಗೆ ಮೊದಲ ಆದ್ಯತೆ ಸಿಗುತ್ತದೆ.

ಸರ್ಕಾರದ ಯೋಜನೆಗಳು ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕೆಲಸ ಮಾಡುವ PRO ಹುದ್ದೆಯು ಆಕರ್ಷಕ ವೇತನದ ಜೊತೆಗೆ ಸಮಾಜದಲ್ಲಿ ಉತ್ತಮ ಗೌರವ ತಂದುಕೊಡುವ ವೃತ್ತಿಯಾಗಿದೆ. ಸರಿಯಾದ ತಯಾರಿ ಮತ್ತು ಕೌಶಲ್ಯವಿದ್ದರೆ ಕೇಂದ್ರ ಸರ್ಕಾರದ ಭಾಗವಾಗುವ ನಿಮ್ಮ ಕನಸು ಸುಲಭವಾಗಿ ನನಸಾಗಬಹುದು.

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

5 ನಿಮಿಷದ ಮಿನಿ ಸ್ಟ್ರೋಕ್‌ ಅನ್ನು ನಿರ್ಲಕ್ಷಿಸಬೇಡಿ! ಈ ಲಕ್ಷಣ ಸ್ಟ್ರೋಕ್‌ ಬರುವ ಮುನ್ಸೂಚನೆಯೇ? – Kannada News | Mini Stroke Warning: Know the Symptoms Before It’s Too Late

ಕೆಲವು ನಿಮಿಷಗಳ ಕಾಲ ಮಾತಾಡಲು ತೊಂದರೆ, ಕೈ- ಕಾಲುಗಳಲ್ಲಿ ದಿಢೀರ್ ದುರ್ಬಲತೆ ಅಥವಾ ದೃಷ್ಟಿ ಮಸುಕಾಗುವುದು ಕಾಣಿಸಿಕೊಂಡು ಬಳಿಕ ಸಹಜ ಸ್ಥಿತಿಗೆ ಮರಳಿದರೆ ಅದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸಬೇಡಿ. ಇದು ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು. ಹೌದು. ಈ ರೀತಿಯಾಗುವುದು ಟ್ರಾನ್ಸಿಯಂಟ್ ಇಸ್ಕೆಮಿಕ್ ಅಟ್ಯಾಕ್ (TIA) ಅಥವಾ ಮಿನಿ ಸ್ಟ್ರೋಕ್ (Mini Stroke) ಆಗಿರಬಹುದು. ಇದು ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ದೊಡ್ಡ ಸ್ಟ್ರೋಕ್‌ಗೆ ಮುನ್ನೆಚ್ಚರಿಕೆ ನೀಡುವ ಪ್ರಮುಖ ಸಂಕೇತವೂ ಆಗಿರಬಹುದು .

ಮಿನಿ ಸ್ಟ್ರೋಕ್ ಎಂದರೇನು?

ಸಾಮಾನ್ಯವಾಗಿ ಮಿನಿ ಸ್ಟ್ರೋಕ್ (TIA) ಸಂದರ್ಭದಲ್ಲಿ ಮೆದುಳಿನ ಒಂದು ಭಾಗಕ್ಕೆ ಕೆಲಕಾಲ ರಕ್ತಸಂಚಾರ ಕಡಿಮೆಯಾಗುತ್ತದೆ. ಲಕ್ಷಣಗಳು ಕೆಲವೇ ನಿಮಿಷಗಳಲ್ಲಿ ಮಾಯವಾದರೂ ಅಪಾಯ ಸಂಪೂರ್ಣವಾಗಿ ತಪ್ಪಿದೆ ಎಂದರ್ಥವಲ್ಲ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ಭವಿಷ್ಯದಲ್ಲಿ ಗಂಭೀರ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ.

ಮಿನಿ ಸ್ಟ್ರೋಕ್‌ನ ಪ್ರಮುಖ ಲಕ್ಷಣಗಳು:

  • ಮುಖದ ಒಂದು ಭಾಗ ಬಾಗುವುದು
  • ಒಂದು ಕೈ ಅಥವಾ ಕಾಲಿನಲ್ಲಿ ದುರ್ಬಲತೆ ಅಥವಾ ಸಂವೇದನೆ ಕಳೆದುಕೊಳ್ಳುವುದು
  • ಮಾತನಾಡಲು ಅಥವಾ ಅರ್ಥಮಾಡಿಕೊಳ್ಳಲು ತೊಂದರೆ
  • ಒಂದು ಅಥವಾ ಎರಡೂ ಕಣ್ಣುಗಳಲ್ಲಿ ದೃಷ್ಟಿ ಮಸುಕಾಗುವುದು
  • ಹಠಾತ್ ತಲೆಸುತ್ತು ಅಥವಾ ಸಮತೋಲನ ಕಳೆದುಕೊಳ್ಳುವುದು
  • ಕಾರಣವಿಲ್ಲದೆ ತೀವ್ರ ತಲೆನೋವು

ಈ ಲಕ್ಷಣಗಳು 5–10 ನಿಮಿಷಗಳಲ್ಲಿ ಕಡಿಮೆಯಾದರೂ ಕೂಡ ತಕ್ಷಣ ಆಸ್ಪತ್ರೆಗೆ ತೆರಳಬೇಕು.

ಇದನ್ನೂ ಓದಿ: ಮೈಗ್ರೇನ್ ಮತ್ತು ರಕ್ತಹೀನತೆಗೆ ಸಂಬಂಧವಿದೆಯೇ? ಅಧ್ಯಯನದ ತಿಳಿದುಬಂದ ಅಚ್ಚರಿ ಮಾಹಿತಿ ಇಲ್ಲಿದೆ

ಯಾರಿಗೆ ಹೆಚ್ಚು ಅಪಾಯ?

ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಧೂಮಪಾನ, ಬೊಜ್ಜು, ಹೃದಯದ ಸಮಸ್ಯೆಗಳು, 55 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ಕುಟುಂಬದಲ್ಲಿ ಸ್ಟ್ರೋಕ್ ಇತಿಹಾಸವಿರುವವರಿಗೆ ಅಪಾಯ ಹೆಚ್ಚಿರುತ್ತದೆ.

ಗೋಲ್ಡನ್ ಅವರ್ ಏಕೆ ಮುಖ್ಯ?

ಸ್ಟ್ರೋಕ್ ಚಿಕಿತ್ಸೆಯಲ್ಲಿ ಪ್ರತಿಯೊಂದು ನಿಮಿಷವೂ ಅಮೂಲ್ಯ. ಸಮಯಕ್ಕೆ ಆಸ್ಪತ್ರೆಗೆ ತಲುಪಿದರೆ ಮೆದುಳಿನ ಹಾನಿಯನ್ನು ಕಡಿಮೆ ಮಾಡುವ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ತಡೆಗಟ್ಟುವುದು ಹೇಗೆ?

ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ. ಆರೋಗ್ಯಕರ ಆಹಾರ ಸೇವಿಸಿ, ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ. ವೈದ್ಯರು ಸೂಚಿಸಿದ ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದು ಹಾಗೂ ಮಿನಿ ಸ್ಟ್ರೋಕ್‌ ಆಗಿದ್ದರೆ ಫಾಲೋ-ಅಪ್‌ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

32 ತಂಡಗಳು ಔಟ್: ಫಿಫಾ ವಿಶ್ವಕಪ್​ ಪ್ರಿ-ಕ್ವಾರ್ಟರ್ ಫೈನಲ್ ವೇಳಾಪಟ್ಟಿ ಪ್ರಕಟ – Kannada News | FIFA World Cup 2026 round of 16 schedule

FIFA World Cup 2026: ಫಿಫಾ ವಿಶ್ವಕಪ್​ನ ರೌಂಡ್ ಆಫ್-32 ಹಂತದ ಪಂದ್ಯಗಳು ಮುಗಿದಿವೆ. 32 ತಂಡಗಳ ನಡುವಣ ಈ ನಾಕೌಟ್ ಕದನದಲ್ಲಿ ಗೆದ್ದ 16 ತಂಡಗಳು ಮುಂದಿನ ಹಂತಕ್ಕೇರಿದೆ. ಈ ಹದಿನಾರು ತಂಡಗಳು ನಡುವೆ ​ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಗೆಲ್ಲುವ 8 ತಂಡಗಳು ಕ್ವಾರ್ಟರ್ ಫೈನಲ್​ಗೆ ಅರ್ಹತೆ ಪಡೆಯಲಿದೆ.

ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಗಳು ಜುಲೈ 4 ರಿಂದ ಶುರುವಾಗಲಿದ್ದು, ಜುಲೈ 8 ರವರೆಗೆ ನಡೆಯಲಿದೆ. ವಿಶೇಷವೆಂದರೆ ಈ ಬಾರಿ ಟೂರ್ನಿಗೆ ಆತಿಥ್ಯ ವಹಿಸಿರುವ ಮೂರೂ ದೇಶಗಳಾದ ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ ತಂಡಗಳು ಪ್ರಿ-ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದು ಇತಿಹಾಸ ಸೃಷ್ಟಿಸಿವೆ.

ಹಾಗೆಯೇ ಹಾಲಿ ಚಾಂಪಿಯನ್ ಅರ್ಜೆಂಟೀನಾ, ಬ್ರೆಝಿಲ್, ಫ್ರಾನ್ಸ್ ಮತ್ತು ಇಂಗ್ಲೆಂಡ್‌ನಂತಹ ಬಲಿಷ್ಠ ತಂಡಗಳು ಕೂಡ ಪ್ರಿ-ಕ್ವಾರ್ಟರ್ ನಾಕೌಟ್​ನಲ್ಲಿ ಕಣಕ್ಕಿಳಿಯಲಿವೆ. ಆದರೆ, ಜರ್ಮನಿ ಮತ್ತು ನೆದರ್ಲ್ಯಾಂಡ್ಸ್‌ನಂತಹ ಬಲಾಢ್ಯ ಪಡೆಗಳು ರೌಂಡ್ ಆಫ್ 32 ಹಂತದಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿದ್ದು, ಹೀಗಾಗಿ ಈ ಎರಡು ತಂಡಗಳು ಮುಂದಿನ ಸುತ್ತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅದರಂತೆ ​ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

ಪ್ರಿ-ಕ್ವಾರ್ಟರ್ ಫೈನಲ್ (ರೌಂಡ್ ಆಫ್ 16) ವೇಳಾಪಟ್ಟಿ:

ಪಂದ್ಯ ದಿನಾಂಕ (IST) ಸಮಯ (ಭಾರತೀಯ ಕಾಲಮಾನ) ಕ್ರೀಡಾಂಗಣ ಮತ್ತು ಸ್ಥಳ
ಕೆನಡಾ vs ಮೊರಾಕೊ ಜುಲೈ 4                10:30 PM ಹೂಸ್ಟನ್ ಸ್ಟೇಡಿಯಂ, ಟೆಕ್ಸಾಸ್
ಪರಾಗ್ವೆ vs ಫ್ರಾನ್ಸ್ ಜುಲೈ 5                 2:30 AM ಫಿಲಡೆಲ್ಫಿಯಾ ಸ್ಟೇಡಿಯಂ, ಪೆನ್ಸಿಲ್ವೇನಿಯಾ
ಬ್ರೆಜಿಲ್ vs ನಾರ್ವೆ ಜುಲೈ 6                 1:30 AM ನ್ಯೂಯಾರ್ಕ್ ನ್ಯೂಜೆರ್ಸಿ ಸ್ಟೇಡಿಯಂ
ಮೆಕ್ಸಿಕೋ vs ಇಂಗ್ಲೆಂಡ್ ಜುಲೈ 6                 5:30 AM ಮೆಕ್ಸಿಕೋ ಸಿಟಿ ಸ್ಟೇಡಿಯಂ, ಮೆಕ್ಸಿಕೋ
ಪೋರ್ಚುಗಲ್ vs ಸ್ಪೇನ್ ಜುಲೈ 7                12:30 AM ಡಲ್ಲಾಸ್ ಸ್ಟೇಡಿಯಂ, ಟೆಕ್ಸಾಸ್
ಅಮೆರಿಕ vs ಬೆಲ್ಜಿಯಂ ಜುಲೈ 7                 5:30 AM ಸಿಯಾಟಲ್ ಸ್ಟೇಡಿಯಂ, ವಾಷಿಂಗ್ಟನ್
ಅರ್ಜೆಂಟೀನಾ vs ಈಜಿಪ್ಟ್ ಜುಲೈ 7                9:30 PM ಅಟ್ಲಾಂಟಾ ಸ್ಟೇಡಿಯಂ, ಜಾರ್ಜಿಯಾ
ಸ್ವಿಟ್ಜರ್ಲೆಂಡ್ vs ಕೊಲಂಬಿಯಾ ಜುಲೈ 8                1:30 AM ಬಿಸಿ ಪ್ಲೇಸ್ ವ್ಯಾಂಕೋವರ್, ಕೆನಡಾ

ಪ್ರಿ-ಕ್ವಾರ್ಟರ್ ಫೈನಲ್​ ಹಂತದ ನಿಯಮಗಳು:

​ಪ್ರಿ-ಕ್ವಾರ್ಟರ್ ಫೈನಲ್ ಎಂಬುದು ನೇರ ನಾಕೌಟ್ ಹಂತವಾಗಿರುವುದರಿಂದ ಇಲ್ಲಿ ಯಾವುದೇ ಪಂದ್ಯಗಳು ಡ್ರಾ ಆಗುವಂತಿಲ್ಲ. ಅಂದರೆ ನಿಗದಿತ 90 ನಿಮಿಷಗಳ ಆಟದ ನಂತರ ಎರಡೂ ತಂಡಗಳು ಸಮಬಲ ಸಾಧಿಸಿದರೆ, 30 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ. ಈ ಹೆಚ್ಚುವರಿ ನಿಮಿಷದಲ್ಲೂ ಫಲಿತಾಂಶ ಬರದಿದ್ದರೆ, ಪೆನಾಲ್ಟಿ ಶೂಟೌಟ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ: ಎಂಬಾಪೆ ಪರಾಕ್ರಮಕ್ಕೆ ಮೆಸ್ಸಿಯ ವಿಶ್ವ ದಾಖಲೆ ಶೇಕಿಂಗ್!

ಹೀಗೆ ಗೆದ್ದ ತಂಡಗಳು ಕ್ವಾರ್ಟರ್ ಫೈನಲ್​ಗೆ ಅರ್ಹತೆ ಪಡೆಯಲಿದೆ. ಅಂದರೆ ಪ್ರಿ-ಕ್ವಾರ್ಟರ್ ಫೈನಲ್​ನಲ್ಲಿ ಕಣಕ್ಕಿಳಿಯಲಿರುವ 16 ತಂಡಗಳಲ್ಲಿ 8 ತಂಡಗಳು ಮುಂದಿನ ಹಂತಕ್ಕೇರಲಿದೆ. ಇನ್ನು ಕ್ವಾರ್ಟರ್ ಫೈನಲ್​ನಲ್ಲಿ ಕಣಕ್ಕಿಳಿಯಲಿರುವ 8 ತಂಡಗಳಲ್ಲಿ 4 ಟೀಮ್​ಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದೆ. ಸೆಮಿಫೈನಲ್​ನಲ್ಲಿ ಗೆಲ್ಲುವ ತಂಡಗಳು ಫೈನಲ್​ಗೆ ಪ್ರವೇಶಿಸಲಿದೆ. ಹೀಗಾಗಿ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಗಳಿಂದಲೇ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು.

ವಿಶ್ವಕಪ್​ನಿಂದ ಹೊರಬಿದ್ದ ತಂಡಗಳು:

  1.  ಜೆಕಿಯಾ
  2. ಸೌತ್ ಕೊರಿಯಾ
  3. ಖತಾರ್
  4. ಹೈಟಿ
  5. ಸ್ಕಾಟ್‌ಲ್ಯಾಂಡ್
  6. ಟರ್ಕಿ
  7. ಕುರಾಸಾವೊ
  8. ಟುನೀಶಿಯಾ
  9. ನ್ಯೂಝಿಲ್ಯಾಂಡ್
  10. ಸೌದಿ ಅರೇಬಿಯಾ
  11. ಉರುಗ್ವೆ
  12. ಇರಾನ್
  13. ಇರಾಕ್
  14. ಜೋರ್ಡನ್
  15. ಉಜ್ಬೇಕಿಸ್ತಾನ್
  16. ಪನಾಮಾ
  17. ಜರ್ಮನಿ
  18. ನೆದರ್ಲ್ಯಾಂಡ್ಸ್ದ
  19. ಸೌತ್ ಆಫ್ರಿಕಾ
  20. ಜಪಾನ್
  21. ಐವರಿ ಕೋಸ್ಟ್
  22. ಸ್ವೀಡನ್
  23. ಈಕ್ವೆಡಾರ್
  24. ಡಿಆರ್ ಕಾಂಗೋ
  25. ಸೆನೆಗಲ್
  26. ಬೋಸ್ನಿಯಾ-ಹೆರ್ಜೆಗೋವಿನಾ
  27. ಆಸ್ಟ್ರಿಯಾ
  28. ಕ್ರೊಯೇಷಿಯಾ
  29. ಅಲ್ಜೀರಿಯಾ
  30. ಆಸ್ಟ್ರೇಲಿಯಾ
  31. ಘಾನಾ
  32. ಕೇಪ್ ವರ್ಡೆ.

48 ತಂಡಗಳೊಂದಿಗೆ ಶುರುವಾದ ಫಿಫಾ ವಿಶ್ವಕಪ್​ನಲ್ಲಿ ಈಗ ಉಳಿದಿರುವುದು ಕೇವಲ 16 ತಂಡಗಳು ಮಾತ್ರ. ಈ ಹದಿನಾರು ತಂಡಗಳಲ್ಲಿ ಈ ಬಾರಿ ಕಪ್ ಗೆಲ್ಲೋರು ಯಾರು ಎಂಬುದು ಜುಲೈ 19 ರಂದು ಗೊತ್ತಾಗಲಿದೆ.

Source link

ಕೊಪ್ಪಳ: ಸಾಲಬಾಧೆಗೆ ನೇಣುಬಿಗಿದುಕೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆ – Kannada News | Three Members of the Same Family Die: Debt Burden Suspected

ಕೊಪ್ಪಳ, ಜುಲೈ 04: ನೇಣುಬಿಗಿದುಕೊಂಡು ಒಂದೇ ಕುಟುಂಬದ (Family) ಮೂವರು ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಗಂಗಾವತಿಯ ಪ್ರಶಾಂತನಗರದ‌ ಮನೆಯಲ್ಲಿ ನಡೆದಿದೆ. ಪತಿ ಪ್ರಕಾಶ್(54), ಪತ್ನಿ ಪ್ರಭಾ(46) ಮತ್ತು ಮಗ ಶಶಾಂಕ್(21) ಮೃತರು. ಸದ್ಯ ಸ್ಥಳಕ್ಕೆ ಗಂಗಾವತಿ ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆಗೆ ನಡೆಸಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು?

ಪ್ರಕಾಶ್ ರಾಯ್ಕರ್​ ಜ್ಯುವೆಲರಿ ಶಾಪ್ ನಡೆಸುತ್ತಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ ಸಾಲಬಾಧೆಯೇ ಈ ದುಡುಕಿನ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿಎಂಟಿಸಿ ಬಸ್​ ಡಿಕ್ಕಿ: ಬೈಕ್​ ಸವಾರ ಸ್ಥಳದಲ್ಲೇ ಸಾವು

ಬಿಎಂಟಿಸಿ ಬಸ್​ ಡಿಕ್ಕಿಯಾಗಿ ಬೈಕ್​ ಸವಾರ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನಲ್ಲಿ ಮಾರತ್​ಹಳ್ಳಿ-ಕಾಡು ಬೀಸನಹಳ್ಳಿ ರಸ್ತೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಆಂಧ್ರಪ್ರದೇಶ ಮೂಲದ ನಾಗಾರ್ಜುನ(29) ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ. ಬ್ರೇಕ್ ಹಾಕಿದಾಗ ಹಿಂಬದಿಯಿಂದ ಬೈಕ್​ಗೆ ಬಸ್​​ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಸ್ಥಳಕ್ಕೆ ಹೆಚ್​​ಎಸ್​ಆರ್​ ಲೇಔಟ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಪಾದಚಾರಿ ಸ್ಥಳದಲ್ಲೇ ಸಾವು

ಮತ್ತೊಂದು ಪ್ರಕಣದಲ್ಲಿ ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಗ್ರಾ. ಜಿಲ್ಲೆ ದೇವನಹಳ್ಳಿ ಹೊರವಲಯದ ರಾಣಿಕ್ರಾಸ್ ಬಳಿ ನಡೆದಿದೆ. ಆಂಧ್ರದ ಕದಿರಿ ಮೂಲದ ಸೂರ್ಯನಾರಾಯಣರೆಡ್ಡಿ(50) ಮೃತ ವ್ಯಕ್ತಿ.

ಇದನ್ನೂ ಓದಿ: K.R Circle Bus accident: ಕೆ. ಆರ್ ಸರ್ಕಲ್ ಟ್ರಾಫಿಕ್ ಸಿಗ್ನಲ್​ನಲ್ಲಿ ನಿಂತಿದ್ದ ಎಸಿ ಬಸ್​ಗೆ ಮತ್ತೊಂದು ಬಸ್ ಡಿಕ್ಕಿ!

ಹೆದ್ದಾರಿ ದಾಟುತ್ತಿದ್ದ ವೇಳೆ ಸೂರ್ಯನಾರಾಯಣರೆಡ್ಡಿಗೆ ಲಾರಿ ಗುದ್ದಿದೆ. ಲಾರಿ ಡಿಕ್ಕಿಯ ರಭಸಕ್ಕೆ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಟ್ಟಿದ್ದಾರೆ. ಇನ್ನು ಅಪಘಾತದ ನಂತರ ಲಾರಿ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version