ವೈಭವ್​ನ ಆಡಿಸ್ತೀರಾ? ಎಲ್ಲರೂ ರನ್​ಗಳಿಸಿಯೇ ಬಂದಿದ್ದಾರೆ: ಶ್ರೇಯಸ್ ಖಡಕ್ ಉತ್ತರ – Kannada News | Shreyas Iyer Breaks Silence On Vaibhav Sooryavanshi’s Team India Debut

ಭಾರತ ಮತ್ತು ಇಂಗ್ಲೆಂಡ್ ನಡುವಣ ಐದು ಮ್ಯಾಚ್​ಗಳ ಟಿ20 ಸರಣಿ ಇಂದಿನಿಂದ (ಜು.1) ಶುರುವಾಗಲಿದೆ. ಈ ಸರಣಿಯ ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡ ಭಾರತ ಟಿ20 ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಯ ಪಾದಾರ್ಪಣೆ ಕುರಿತಾದ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಹಾಗೂ ಇತರೆ ವಿಚಾರಗಳ ಬಗ್ಗೆ ಅಯ್ಯರ್ ಏನು ಹೇಳಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ…

ಎಲ್ಲರೂ ರನ್​ಗಳಿಸಿಯೇ ಬಂದಿದ್ದಾರೆ:

ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ 0-2 ಅಂತರದಿಂದ ಆಘಾತಕಾರಿ ಸೋಲು ಅನುಭವಿಸಿದ ಬೆನ್ನಲ್ಲೇ, 15 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಪ್ಲೇಯಿಂಗ್ ಇಲೆವೆನ್​  ಸೇರಿಸಬೇಕೆಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಮಾತನಾಡಿದ ಅಯ್ಯರ್, “ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನೂ ಪ್ರದರ್ಶನ ನೀಡಿಯೇ ಇಲ್ಲಿಗೆ ಬಂದಿದ್ದಾನೆ. ಯಾರೋ ಒಬ್ಬ ಆಟಗಾರ ಮಾತ್ರ ರನ್ ಗಳಿಸುತ್ತಿದ್ದಾನೆ ಎಂದಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ.

“ನಾವು ಆಟಗಾರರಲ್ಲಿ ಭದ್ರತೆ ಮತ್ತು ನಂಬಿಕೆಯನ್ನು ಮೂಡಿಸಬೇಕಿದೆ. ಆಗ ಮಾತ್ರ ಅವರು ಆತ್ಮವಿಶ್ವಾಸದಿಂದ ಆಡಲು ಸಾಧ್ಯ. ಕಳೆದ ಟಿ20 ವಿಶ್ವಕಪ್ ಗೆದ್ದುಕೊಟ್ಟ ಆಟಗಾರರಿಗೆ ಈ ಸ್ವರೂಪದಲ್ಲಿ ಹೇಗೆ ಆಡಬೇಕೆಂಬ ಸ್ಪಷ್ಟ ಕಲ್ಪನೆಯಿದೆ. ಅವರೇ ನಮ್ಮ ಟಿ20 ತಂಡದ ಮುಖ್ಯ ಆಧಾರಸ್ತಂಭಗಳು, ಹಾಗಾಗಿ ಅವರಿಗೆ ಬೆಂಬಲ ನೀಡುವುದು ಅತ್ಯಗತ್ಯ” ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ನಮ್ಮ ಕೈಗಳೂ ಕಟ್ಟಲ್ಪಟ್ಟಿವೆ!

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ವೈಭವ್‌ ಸೂರ್ಯವಂಶಿಗೆ ಅವಕಾಶ ನೀಡಲಿದ್ದಾಋಆ ಎಂಬ ನೇರ ಪ್ರಶ್ನೆಗೆ ಉತ್ತರಿಸಿದ ಅಯ್ಯರ್, “ಮುಂದೇನಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ನಮ್ಮ ಕೈಗಳೂ ಕಟ್ಟಲ್ಪಟ್ಟಿವೆ. ತಂಡದ ರಣತಂತ್ರಗಳು ಅತ್ಯಂತ ರಹಸ್ಯವಾಗಿದ್ದು, ಅದನ್ನು ನಾವು ತಂಡದ ಒಳಗೆ ಮಾತ್ರ ಚರ್ಚಿಸುತ್ತೇವೆ. ಪಂದ್ಯದ ಸಂಯೋಜನೆಯನ್ನು ಮೊದಲೇ ಬಹಿರಂಗಪಡಿಸಿ ಎದುರಾಳಿ ತಂಡಕ್ಕೆ ಅನುಕೂಲ ಮಾಡಿಕೊಡಲು ಸಾಧ್ಯವಿಲ್ಲ” ಎಂದರು.

ಅಯ್ಯರ್ ಖಡಕ್ ಉತ್ತರ:

ಐರ್ಲೆಂಡ್ ವಿರುದ್ಧದ ಸರಣಿ ಬೆನ್ನಲ್ಲೇ ಮಾಜಿ ಕ್ರಿಕೆಟರುಗಳು ವೈಭವ್ ಸೂರ್ಯವಂಶಿಗೆ ಚಾನ್ಸ್ ನೀಡದಿರುವ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದರು. ಇನ್ನು ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು.

ಆದರೆ ವಿಶ್ವಕಪ್​ ಗೆದ್ದುಕೊಟ್ಟಂತಹ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ಆರಂಭಿಕ ಜೋಡಿಯನ್ನು ಬದಲಾಯಿಸಲು ಮ್ಯಾನೇಜ್‌ಮೆಂಟ್ ಸದ್ಯಕ್ಕೆ ಸಿದ್ಧವಿಲ್ಲ ಎಂಬ ಮುನ್ಸೂಚನೆಯನ್ನು ಶ್ರೇಯಸ್ ಅಯ್ಯರ್ ನೀಡಿದ್ದಾರೆ.

ಅಲ್ಲದೆ ನಾನು ಸೋಶಿಯಲ್ ಮೀಡಿಯಾ ಅಥವಾ ಇನ್‌ಸ್ಟಾಗ್ರಾಮ್ ಸುದ್ದಿಗಳನ್ನು ಫಾಲೋ ಮಾಡುವುದಿಲ್ಲ, ಅಲ್ಲಿ ಏನು ನಡೆಯುತ್ತಿದೆ, ಯಾರ ಬಗ್ಗೆ ಹೈಪ್ ಇದೆ ಎಂಬುದೂ ನನಗೆ ತಿಳಿಯದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಇದನ್ನೂ ಓದಿ: IND vs ENG: ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್

ಇದಾಗ್ಯೂ ವೈಭವ್ ಸೂರ್ಯವಂಶಿ ಒಬ್ಬ ಅದ್ಭುತ ಪ್ರತಿಭೆಯಾಗಿದ್ದು, ಅವಕಾಶ ಸಿಕ್ಕಾಗ ಖಂಡಿತವಾಗಿಯೂ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಎಂಬ ಭರವಸೆಯನ್ನೂ ಶ್ರೇಯಸ್ ಅಯ್ಯರ್ ವ್ಯಕ್ತಪಡಿಸಿದ್ದಾರೆ.

Source link

’12th ಫೇಲ್’ ನಟಿ ಮೇಧಾ ಶಂಕರ್ ಜೊತೆ ಸಮಯ್ ರೈನಾ ಜೊತೆ ಡೇಟಿಂಗ್? ವಿಡಿಯೋ ವೈರಲ್ – Kannada News | Samay Raina and Medha Shankr Dating? Viral Video Sparks Relationship Rumours!

ಖ್ಯಾತ ಕಾಮಿಡಿಯನ್ ಸಮಯ್ ರೈನಾ ಮತ್ತು ’12th ಫೇಲ್’ ಚಿತ್ರದ ನಟಿ ಮೇಧಾ ಶಂಕರ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಜೋರಾಗಿದೆ. ಇವರಿಬ್ಬರು ಇತ್ತೀಚೆಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಇವರಿಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚೇನೋ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ನೆಟ್ಟಿಗರೊಬ್ಬರು ಇವರಿಬ್ಬರ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಸಮಯ್ ಮತ್ತು ಮೇಧಾ ಒಂದೇ ಕಡೆ ಒಟ್ಟಿಗೆ ಇದ್ದರು ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಅಲ್ಲಿ ಕ್ಯಾಮೆರಾ ಕಣ್ಣುಗಳು ಅಂದರೆ ಪ್ಯಾಪರಾಜಿಗಳು ಕಾಣಿಸುತ್ತಿದ್ದಂತೆ ಇಬ್ಬರೂ ಬೇರೆ ಬೇರೆಯಾಗಿ ನಡೆದಿದ್ದಾರೆ. ಮಾಧ್ಯಮಗಳ ಗಮನ ಸೆಳೆಯಬಾರದು ಎಂದು ಅವರು ಹೀಗೆ ಮಾಡಿದ್ದಾರೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಇವರಿಬ್ಬರು ಈ ಹಿಂದೆಯೂ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು ಎಂದು ಆ ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ಮತ್ತೆ ಬರುತ್ತಿದೆ ವಿವಾದಾತ್ಮಕ ಶೋ, ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ ಸಮಯ್ ರೈನಾ

ಸಮಯ್ ಮತ್ತು ಮೇಧಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಗಾಸಿಪ್ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಇಬ್ಬರೂ ಒಂದೇ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದನ್ನು ಅಭಿಮಾನಿಗಳು ಗಮನಿಸಿದ್ದರು. ಆದರೆ ಈ ವದಂತಿಗಳ ಬಗ್ಗೆ ಸಮಯ್ ರೈನಾ ಅಥವಾ ಮೇಧಾ ಶಂಕರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇವರಿಬ್ಬರ ರಿಲೇಶನ್‌ಶಿಪ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಸದ್ಯಕ್ಕೆ ಇದೆಲ್ಲವೂ ಕೇವಲ ಅಭಿಮಾನಿಗಳ ಊಹೆ ಮತ್ತು ವೈರಲ್ ವಿಡಿಯೋಗಳ ಮೇಲಷ್ಟೇ ಹರಿದಾಡುತ್ತಿದೆ.

ಇನ್ನು ಸಮಯ್ ರೈನಾ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರ ಜನಪ್ರಿಯ ಶೋ ‘ಇಂಡಿಯಾಸ್ ಗಾಟ್ ಲೇಟೆಂಟ್’ ಎರಡನೇ ಸೀಸನ್‌ನೊಂದಿಗೆ ಮರಳಿದ್ದಾರೆ. ಇದರ ಮೊದಲ ಎಪಿಸೋಡ್ ನೆಟ್‌ಫ್ಲಿಕ್ಸ್ ಮತ್ತು ಯೂಟ್ಯೂಬ್‌ನಲ್ಲಿ ಒಟ್ಟಿಗೆ ಬಿಡುಗಡೆಯಾಗಿದೆ. ಈ ಎಪಿಸೋಡ್‌ನಲ್ಲಿ ಸ್ಟಾರ್ ನಟಿಯರಾದ ಆಲಿಯಾ ಭಟ್ ಮತ್ತು ಶಾರ್ವರಿ ಭಾಗವಹಿಸಿದ್ದರು. ಶೋ ನಂತರ ಸಮಯ್ ರೈನಾ ಇಬ್ಬರು ನಟಿಯರನ್ನು ಹೊಗಳಿದ್ದಾರೆ. ಅವರು ತುಂಬಾ ಸಿಂಪಲ್ ಮತ್ತು ಮಜಾವಾಗಿ ಇದ್ದರು ಎಂದು ಸಮಯ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಪ್ಪುಗೆ ‘ಸಿಐಡಿ 999’ ಕತೆ ಹೇಳಿದ್ದ ನಿರ್ದೇಶಕ ಹೇಮಂತ್ ರಾವ್ – Kannada News | Hemanth Rao once told Spy action story to Puneeth Rajkumar

‘ಸಪ್ತ ಸಾಗರದಾಚೆ ಎಲ್ಲೊ’ (Saptha Sagaradache Ello) ಸಿನಿಮಾದ ಮೂಲಕ ದೇಶದಾದ್ಯಂತ ಸಿನಿಮಾ ಪ್ರೇಮಿಗಳ ಗಮನ ಸೆಳೆದಿರುವ ನಿರ್ದೇಶಕ ಹೇಮಂತ್ ರಾವ್ ಇದೀಗ ಶಿವರಾಜ್ ಕುಮಾರ್, ಡಾಲಿ ಧನಂಜಯ್ ನಟನೆಯ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ರೆಟ್ರೊ ಶೈಲಿಯ ಕತೆಯನ್ನು ಈ ಸಿನಿಮಾ ಹೊಂದಿದ್ದು, ಸಿನಿಮಾವು ಒಂದು ರೀತಿ ಹಳೆಯ ಸ್ಪೈ ಆಕ್ಷನ್ ಸಿನಿಮಾ ಇದ್ದಂತಿದೆ. ಅಸಲಿಗೆ ಇಂಥಹುದೇ ಒಂದು ಸಿನಿಮಾ ಕತೆಯನ್ನು ಹೇಮಂತ್ ರಾವ್ ಅವರು ಪುನೀತ್ ರಾಜ್​​ಕುಮಾರ್ ಅವರಿಗೆ ಹೇಳಿದ್ದರಂತೆ. ಆ ಬಗ್ಗೆ ಇತ್ತೀಚೆಗಿನ ಸಂದರ್ಶನದಲ್ಲಿ ಹೇಮಂತ್ ರಾವ್ ನೆನಪು ಮಾಡಿಕೊಂಡಿದ್ದಾರೆ.

ಹೇಮಂತ್ ರಾವ್ ಹಾಗೂ ಪುನೀತ್ ರಾಜ್​ಕುಮಾರ್ ಬಲು ಆತ್ಮೀಯರಾಗಿದ್ದರು. ಹೇಮಂತ್ ಅವರ ಪ್ರತಿಭೆ ಬಗ್ಗೆ ಅಪ್ಪು ಅವರಿಗೆ ಅಪಾರ ನಂಬಿಕೆ ಮತ್ತು ಗೌರವ ಇತ್ತು. ಇದೇ ಕಾರಣಕ್ಕೆ ಹೇಮಂತ್ ಅವರ ‘ಕವಲುದಾರಿ’ ಸಿನಿಮಾಕ್ಕೆ ಅಪ್ಪು ಅವರು ಖುದ್ದು ಬಂಡವಾಳ ಹೂಡಿದ್ದರು. ಅದಾದ ಬಳಿಕವೂ ಸಹ ಸಾಕಷ್ಟು ಕತೆಗಳ ಬಗ್ಗೆ ಇಬ್ಬರೂ ಚರ್ಚೆ ಮಾಡಿದ್ದರು. ಅದರಲ್ಲಿ ಒಂದು ಕತೆ ‘ಸಿಐಡಿ 999’.

ಕನ್ನಡದ ಮೊಟ್ಟ ಮೊದಲ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಜೇಡರ ಬಲೆ’ ಸಿನಿಮಾನಲ್ಲಿ ಡಾ ರಾಜ್​​ಕುಮಾರ್ ಅವರು ಸಿಐಡಿ 999 ಪಾತ್ರದಲ್ಲಿ ನಟಿಸಿದ್ದರು. ಅದೇ ಕತೆಯ ಮುಂದುವರೆದ ಭಾಗದಂತೆ ‘ಸಿಐಡಿ 999’ ಸಿನಿಮಾವನ್ನು ಹೇಮಂತ್ ರಾವ್ ಮಾಡಿದ್ದರಂತೆ. ‘ಸಿಐಡಿ 999’ ಸಿನಿಮಾವನ್ನು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ನಿರೂಪಣೆ ಹಾಗೂ ತಂತ್ರಜ್ಞಾನದ ಬಳಕೆ ಮಾಡಿಕೊಂಡು ಚಿತ್ರೀಕರಿಸುವುದು ಹೇಮಂತ್ ರಾವ್ ಉದ್ದೇಶವಾಗಿತ್ತಂತೆ. ಪುನೀತ್ ರಾಜ್​ಕುಮಾರ್ ಅವರಿಗೂ ಸಹ ಕತೆ ಬಹಳ ಇಷ್ಟವಾಗಿತ್ತಂತೆ. ‘ಭಗವಾನ್’ ಅವರು ಇಂಥಹದೇ ರೀತಿಯ ಕತೆಯೊಂದನ್ನು ಡಾ ರಾಜ್​ಕುಮಾರ್ ಅವರಿಗಾಗಿ ಮಾಡಿಕೊಂಡಿದ್ದರು. ಅವರನ್ನೊಮ್ಮೆ ಭೇಟಿ ಮಾಡಿ ಮಾತನಾಡಿ, ನಿಮಗೆ ಇನ್ನೂ ಕೆಲವು ವಿಷಯಗಳು ಸಿಗಬಹುದು ಎಂಬ ಸಲಹೆಯನ್ನೂ ಸಹ ಅಪ್ಪು ನೀಡಿದ್ದರಂತೆ. ಆದರೆ ಆ ಸಿನಿಮಾ ಸೆಟ್ಟೇರುವ ಮುನ್ನವೇ ಅಪ್ಪು ಕಾಲವಾದರು.

ಇದನ್ನೂ ಓದಿ:ಜಾಲಿಯಾಗಿ ಪ್ರಚಾರ ಮಾಡಿದ ಗ್ರಾಮಾಯಣ ಸಿನಿಮಾ ಟೀಮ್

ಹೇಮಂತ್ ರಾವ್ ಅವರು ಇದೀಗ ಶಿವರಾಜ್ ಕುಮಾರ್ ಅವರ ಜೊತೆಗೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಹೆಸರು ಪೋಸ್ಟರ್​​ಗಳನ್ನು ನೋಡಿದರೆ ಇದೊಂದು ಸ್ಪೈ ಆಕ್ಷನ್ ಜೊತೆಗೆ ಸೈಂಟಿಫಿಕ್ ಥ್ರಿಲ್ಲರ್ ಕತೆ ಇರಬಹುದೆಂಬ ಅನುಮಾನವೂ ಮೂಡುತ್ತಿದೆ. ಸಿನಿಮಾವನ್ನು ರೆಟ್ರೊ ಶೈಲಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಶಿವರಾಜ್ ಕುಮಾರ್ ಅವರ ಪೋಸ್ಟರ್ ನೋಡುತ್ತಿದ್ದರೆ, ‘ಜೇಡರ ಬಲೆ’ ಸಿನಿಮಾನಲ್ಲಿ ಡಾ ರಾಜ್​​ಕುಮಾರ್ ಅವರ ಪಾತ್ರದಂತೆಯೇ ಕಾಣುತ್ತಿದೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು ಇನ್ನಷ್ಟೆ ಬಿಡುಗಡೆ ದಿನಾಂಕ ಘೋಷಿಸಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಮುಂದಿನ ಕೆಲವು ದಿನ ಭಾರಿ ಮಳೆ; ಉಡುಪಿ, ಮಂಗಳೂರು ಸೇರಿ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್! – Kannada News | Karnataka Weather Forecast: Orange Alert Issued for Coastal Districts; Heavy Rain Forecast

ಬೆಂಗಳೂರು, ಜುಲೈ 01: ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗುವ (Weather) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಾಳಿಯ ವೇಗವು ಗಂಟೆಗೆ 30 ರಿಂದ 40 ಕಿಲೋಮೀಟರ್ ಇರಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ಜಿಲ್ಲೆಗಳಿಗೆ ಅಲರ್ಟ್ ಘೋಷಿಸಲಾಗಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ?

ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ತೀವ್ರ ಜಾಗ್ರತೆ ವಹಿಸಲು ಸೂಚಿಸಲಾಗಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಈ ಜಿಲ್ಲೆಗಳೀಗೆ ಆರೆಂಜ್ ಅಲರ್ಟ್​ ನೀಡಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ ಹಾಗೂ ದಕ್ಷಿಣ ಒಳನಾಡಿನ ಶಿವಮೊಗ್ಗ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸಾರ್ವಜನಿಕರು ನದಿ, ಜಲಪಾತಗಳ ಬಳಿ ಹೋಗದಂತೆ ಮತ್ತು ಹಳೆಯ ಮರಗಳು ಹಾಗೂ ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಸಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್?

ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್​ ನೀಡಲಾಗಿದೆ.

ಪ್ರಾದೇಶಿಕ ಹವಾಮಾನದ ವಿವರ

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿಯಲ್ಲಿ ಭಾರಿ ಮಳೆಯಾಗಲಿದ್ದರೆ, ಬಾಗಲಕೋಟೆ, ಬಿದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ಮೈಸೂರು, ಕೋಲಾರ, ಮಂಡ್ಯ, ಕೊಡಗು, ತುಮಕೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್ – Kannada News | England announces playing XI for 1st T20I against India

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿ ಇಂದಿನಿಂದ (ಜು.1) ಶುರುವಾಗಲಿದೆ. ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡವು ತನ್ನ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದೆ. ಬಲಿಷ್ಠ ದಾಂಡಿಗರ ದಂಡನ್ನೇ ಹೊಂದಿರುವ ಈ ಆಡುವ ಬಳಗವನ್ನು ಯುವ ಸ್ಫೊಟಕ ಬ್ಯಾಟರ್ ಹ್ಯಾರಿ ಬ್ರೂಕ್ ಮುನ್ನಡೆಸಲಿದ್ದಾರೆ.

ಇನ್ನು ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್​ನಲ್ಲಿ ನಾಲ್ವರು ಬ್ಯಾಟರ್​ಗಳಿದ್ದರೆ, 4 ಮಂದಿ ಆಲ್​ರೌಂಡರ್​ಗಳಿದ್ದಾರೆ. ಅಂದರೆ 8ನೇ ಕ್ರಮಾಂಕದವರೆಗೆ ಬ್ಯಾಟ್ಸ್​ಮನ್​ಗಳು ಮುಂದುವರೆಯಲಿದ್ದಾರೆ. ಇನ್ನು ಬೌಲರ್​ಗಳಾಗಿ 2 ವೇಗಿಗಳನ್ನು ಹಾಗೂ ಏಕೈಕ ಸ್ಪಿನ್ನರ್ ಅನ್ನು ಆಯ್ಕೆ ಮಾಡಿದ್ದಾರೆ. ಅದರಂತೆ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಇಂಗ್ಲೆಂಡ್ ಪ್ಲೇಯಿಂಗ್ XI

ಆಟಗಾರರು ಪಾತ್ರ
ಫಿಲ್ ಸಾಲ್ಟ್  ಬ್ಯಾಟರ್
ಜೋಸ್ ಬಟ್ಲರ್ ವಿಕೆಟ್ ಕೀಪರ್/ ಬ್ಯಾಟರ್
ಹ್ಯಾರಿ ಬ್ರೂಕ್  ನಾಯಕ / ಬ್ಯಾಟರ್
ಜೇಕಬ್ ಬೆಥೆಲ್ ಆಲ್ ರೌಂಡರ್
ಟಾಮ್ ಬ್ಯಾಂಟನ್ ವಿಕೆಟ್ ಕೀಪರ್ ಬ್ಯಾಟರ್
ಸ್ಯಾಮ್ ಕರನ್ ಆಲ್ ರೌಂಡರ್
ವಿಲ್ ಜಾಕ್ಸ್ ಆಲ್ ರೌಂಡರ್
ಲಿಯಾಮ್ ಡಾಸನ್ ಆಲ್ ರೌಂಡರ್
ಸಾಕಿಬ್ ಮಹಮೂದ್ ವೇಗದ ಬೌಲರ್
ಆದಿಲ್ ರಶೀದ್  ಸ್ಪಿನ್ ಬೌಲರ್
ಲ್ಯೂಕ್ ವುಡ್ ವೇಗದ ಬೌಲರ್

ಯಾರೆಲ್ಲಾ ಅಲಭ್ಯ?

ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ವೇಗಿಗಳಾದ ಜೋಫ್ರಾ ಆರ್ಚರ್ ಮತ್ತು ಜೋಶ್ ಟಂಗ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಫಿಟ್​ನೆಸ್ ಸಮಸ್ಯೆಯ ಕಾರಣ ಜೇಮಿ ಓವರ್ಟನ್ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ರಿವರ್‌ಸೈಡ್ ಮೈದಾನದಲ್ಲಿ ಟೀಮ್ ಇಂಡಿಯಾ ವಿರುದ್ಧ ವೇಗಿಗಳಾಗಿ ಸಾಕಿಬ್ ಮಹಮೂದ್ ಹಾಗೂ ಲ್ಯೂಕ್ ವುಡ್ ಕಣಕ್ಕಿಳಿಯಲಿದ್ದಾರೆ.

ಇಂಗ್ಲೆಂಡ್ ಟಿ20 ತಂಡ: ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಫಿಲ್ ಸಾಲ್ಟ್, ಜೋರ್ಡನ್ ಕಾಕ್ಸ್ (ವಿಕೆಟ್ ಕೀಪರ್), ಟಾಮ್ ಬ್ಯಾಂಟನ್, ಜೋಫ್ರಾ ಆರ್ಚರ್, ಸ್ಯಾಮ್ ಕರನ್, ವಿಲ್ ಜಾಕ್ಸ್, ಜೇಕಬ್ ಬೆಥೆಲ್, ಜೇಮ್ಸ್ ಕೋಲ್ಸ್, ಆದಿಲ್ ರಶೀದ್, ರೆಹಾನ್ ಅಹ್ಮದ್, ಲಿಯಾಮ್ ಡಾಸನ್, ಸಾಕಿಬ್ ಮಹಮೂದ್, ಜೋಶ್ ಟಂಗ್, ಲ್ಯೂಕ್ ವುಡ್, ಸೋನಿ ಬೇಕರ್.

ಇದನ್ನೂ ಓದಿ: IND vs ENG: 6 ಎಡಗೈ ದಾಂಡಿಗರು: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ, ಸೂರ್ಯಂಶ್ ಶೆಡ್ಗೆ.

Source link

ತಮಿಳಿಗೆ ಕಾಲಿಡಲಿರುವ ಜಾನ್ಹವಿ ಕಪೂರ್, ಮೊದಲ ಬಾರಿ ಗ್ಲಾಮರ್ ರಹಿತ ಪಾತ್ರ – Kannada News | Janhvi Kapoor to act in Tamil movie directed by Pa Ranjith

ಬಾಲಿವುಡ್​​ನ ಸ್ಟಾರ್ ಯುವನಟಿ ಜಾನ್ಹವಿ ಕಪೂರ್ (Janhvi Kapoor), ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಜಾನ್ಹವಿ ಕಪೂರ್​​ ಅವರನ್ನು ಸಾಮಾನ್ಯವಾಗಿ ಗ್ಲಾಮರ್​ಗಾಗಿಯೇ ಸಿನಿಮಾಗಳಿಗೆ ಹಾಕಿಕೊಳ್ಳಲಾಗುತ್ತದೆ. ಜಾನ್ಹವಿ ಸಹ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಹಿಂಜರಿಯುವುದಿಲ್ಲ. ಎರಡು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಜಾನ್ಹವಿ ಕಪೂರ್, ಎರಡೂ ಸಿನಿಮಾಗಳಲ್ಲಿ ಕೇವಲ ಗ್ಲಾಮರ್ ಗೊಂಬೆಯಾಗಿ ಅಷ್ಟೆ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಅವರ ನಟನೆಯ ‘ಪೆದ್ದಿ’ ಸಿನಿಮಾನಲ್ಲಿ ಅವರನ್ನು ಅತಿಯಾಗಿ ಗ್ಲಾಮರಸ್ ಆಗಿ ತೋರಿಸಲಾಗಿರುವುದು ವಿವಾದಕ್ಕೆ ಸಹ ಕಾರಣವಾಗಿತ್ತು. ಇದೀಗ ಜಾನ್ಹವಿ ಕಪೂರ್ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಬಾರಿ ಮೊದಲ ಬಾರಿ ದಕ್ಷಿಣದಲ್ಲಿ ಗ್ಲಾಮರ್ ರಹಿತ ಪಾತ್ರದಲ್ಲಿ ಅವರು ನಟಿಸಲಿದ್ದಾರೆ.

ಜಾನ್ಹವಿ ಕಪೂರ್ ಅವರು ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ತಮಿಳಿನ ಪ್ರತಿಭಾವಂತ ನಿರ್ದೇಶಕರೊಬ್ಬರ ಸಿನಿಮಾನಲ್ಲಿ ನಟಿಸಲಿದ್ದಾರೆ. ಶೋಷಿತ ವರ್ಗಗಗಳ ಪರ ಸಿನಿಮಾ ಮಾಡುವ, ಸಮಾಜದ ವರ್ಗ ಭೇದ, ಜಾತಿ ಬೇಧಗಳನ್ನು ತಮ್ಮ ಸಿನಿಮಾಗಳಲ್ಲಿ ತೋರಿಸುತ್ತಾ ಬಂದಿರುವ ನಿರ್ದೇಶಕ ಪಾ ರಂಜಿತ್ ಅವರ ಹೊಸ ಸಿನಿಮಾನಲ್ಲಿ ಜಾನ್ಹವಿ ಕಪೂರ್ ಅವರು ನಾಯಕಿಯಾಗಿ ನಟಿಸಲಿದ್ದಾರೆ.

ಪಾ ರಂಜಿತ್ ಅವರು ನೈಜ ಕತೆಯೊಂದನ್ನು ಆಧರಿಸಿದ ಸಿನಿಮಾ ಮಾಡುತ್ತಿದ್ದು, ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ. ಇದು ಅವರ ಮೊದಲ ಗ್ಲಾಮರ್ ರಹಿತ ಪಾತ್ರ ಆಗಲಿದೆ. ಬಾಲಿವುಡ್​​ನಲ್ಲಿ ‘ಮಿಲಿ’, ‘ಗುಡ್ ಲಕ್ ಜೆರ್ರಿ’, ‘ಗುಂಜನ್ ಸಕ್ಸೇನಾ’, ‘ಹೋಮ್​​ಬೌಂಡ್’ ಅಂಥಹಾ ಸಿನಿಮಾಗಳಲ್ಲಿ ಅವರು ಗ್ಲಾಮರ್ ರಹಿತ ಪಾತ್ರಗಳಲ್ಲಿ ನಟಿಸಿದ್ದರು. ಇದೀಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮೊದಲ ಬಾರಿಗೆ ಗ್ಲಾಮರ್ ರಹಿತ ಸಿನಿಮಾನಲ್ಲಿ ನಟಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:ದಕ್ಷಿಣದ ಚಿತ್ರರಂಗದಿಂದ ದೂರಾಗಲಿದ್ದಾರೆಯೇ ನಟಿ ಜಾನ್ಹವಿ ಕಪೂರ್

ಪಾ ರಂಜಿತ್ ಅವರು ನೈಜ ಕತೆಯೊಂದನ್ನು ಆಧರಿಸಿದ ಸಿನಿಮಾ ಮಾಡಲು ಮುಂದಾಗಿದ್ದಾರೆ. ವಿಶೇಷವೆಂದರೆ ಇದು ಮಹಿಳಾ ಪ್ರಧಾನ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದ್ದು, ಜಾನ್ಹವಿ ಅವರೇ ಈ ಸಿನಿಮಾದ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ. ‘ಕಾಲಾ’, ‘ಕಬಾಲಿ’, ‘ಸರ್ಪಟ್ಟ ಪರಂಬರೈ’, ‘ತಂಗಾಲನ್’ ಅಂಥಹಾ ಸಿನಿಮಾಗಳನ್ನು ನಿರ್ದೇಶಿಸಿರುವ ಪಾ ರಂಜಿತ್ ಇದೀಗ ಜಾನ್ಹವಿ ಅವರೊಟ್ಟಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಜಾನ್ಹವಿ ಕಪೂರ್ ಪ್ರಸ್ತುತ ‘ಲಗ್ ಜಾ ಗಲೆ’ ಹೆಸರಿನ ರೊಮ್ಯಾಂಟಿಕ್ ಹಿಂದಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಬಳಿಕ ತಮಿಳು ಸಿನಿಮಾ ಸೆಟ್​ ಸೇರಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರಿನಲ್ಲಿ ದುರಂತ: ಭಾರೀ ಮಳೆಗೆ ಕುಸಿದ ಹಂಚಿನ ಮನೆಯ ಮೇಲ್ಚಾವಣಿ, ಇಬ್ಬರು ಬಾಲಕಿಯರು ಸೇರಿ ಮೂವರು ಸ್ಥಳದಲ್ಲೇ ಸಾವು – Kannada News | Mangaluru Rain Fury: 3 Dead Including Two Girls as House Roof Collapses in Kankanady

ಮಂಗಳೂರು, ಜುಲೈ 1: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಗೆ ಮಂಗಳೂರು ನಗರದ ಕಂಕನಾಡಿಯಲ್ಲಿ ಭೀಕರ ದುರಂತ ಸಂಭವಿಸಿದೆ. ಇಲ್ಲಿನ ಹಳೆಯ ಹಂಚಿನ ಮನೆಯೊಂದರ ಮೇಲ್ಚಾವಣಿ ಹಾಗೂ ಗೋಡೆ ಬುಧವಾರ ಮುಂಜಾನೆ ದಿಢೀರನೆ ಕುಸಿದು ಬಿದ್ದ ಪರಿಣಾಮ, ಮನೆಯೊಳಗೆ ನಿದ್ದೆಯ ಮಂಪರಿನಲ್ಲಿದ್ದ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಒಬ್ಬ ಮಹಿಳೆ ಹಾಗೂ ಇಬ್ಬರು ಬಾಲಕಿಯರು ಎಂದು ಗುರುತಿಸಲಾಗಿದೆ.

ಘಟನೆಯ ನಡೆದ ತಕ್ಷಣ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮೇಲ್ಚಾವಣಿಯ ಅವಶೇಷಗಳ ಅಡಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಒಬ್ಬ ಪುರುಷ ಹಾಗೂ ಇಬ್ಬರು ಬಾಲಕಿಯರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಮಂಗಳವಾರ ರಾತ್ರಿಯಿಂದ ತಡೆವಿಲ್ಲದೆ ಸುರಿದ ಭಾರಿ ಮಳೆಯಿಂದಾಗಿ ಹಳೆಯದಾಗಿದ್ದ ಮನೆಯ ಗೋಡೆಗಳು ಸಂಪೂರ್ಣವಾಗಿ ತೇವಗೊಂಡು ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

(ಮಾಹಿತಿ ಅಪ್​ಡೇಟ್ ಆಗಲಿದೆ)

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

LPG Cylinder Price: ವಾಣಿಜ್ಯ ಸಿಲಿಂಡರ್ ದರದಲ್ಲಿ 183.50 ರೂ ಇಳಿಕೆ! ಹೋಟೆಲ್ ಮಾಲೀಕರಿಗೆ ಬಿಗ್ ರಿಲೀಫ್ – Kannada News | Commercial LPG Cylinder Prices Slashed by Rs 183.50; Check Revised Rates Here

ವಾಣಿಜ್ಯ ಸಿಲಿಂಡರ್ ದರದಲ್ಲಿ 183.50 ರೂ ಇಳಿಕೆ!Image Credit source: PTI

ಬೆಂಗಳೂರು, ಜುಲೈ 01: ಅಮೇರಿಕಾ ಮತ್ತು ಇರಾನ್ ನಡುವಿನ ಯುದ್ಧದ ಬಳಿಕ ಪೆಟ್ರೋಲ್ (Petrol), ಡೀಸೆಲ್ ಸೇರಿದಂತೆ ವಾಣಿಜ್ಯ ಮತ್ತು ಗೃಹಬಳಕೆ ಸಿಲಿಂಡರ್ ಬೆಲೆಗಳಲ್ಲಿ ಸತತವಾಗಿ ಏರಿಕೆ ಕಂಡುಬಂದಿತ್ತು. ಆದರೆ ಇಂದಿನಿಂದ (ಜು.01) ವಾಣಿಜ್ಯ ಬಳಕೆಯ (19 ಕೆಜಿ) ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 183.50 ರೂಪಾಯಿಗಳಷ್ಟು ಕಡಿತಗೊಳಿಸಲಾಗಿದ್ದು, ವ್ಯಾಪಾರಿಗಳು ಮತ್ತು ಹೋಟೆಲ್ ಮಾಲೀಕರಿಗೆ ಭಾರಿ ಗುಡ್ ನ್ಯೂಸ್ ಸಿಕ್ಕಿದೆ.

ಹೋಟೆಲ್ ಅಸೋಸಿಯೇಷನ್ ಮಾಹಿತಿ

ಈ ವರ್ಷದ ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯು ಜಾಗತಿಕವಾಗಿ ತೀವ್ರ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ಈ ದಾಳಿಯ ನಂತರ, ಇರಾನ್ ತನ್ನ ನಿಯಂತ್ರಣದಲ್ಲಿರುವ ‘ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಜಲಸಂಧಿಯ ಮೂಲಕ ಕಚ್ಚಾ ತೈಲ ಮತ್ತು ಅನಿಲವನ್ನು ಸಾಗಿಸುವ ಹಡಗುಗಳ ಸಂಚಾರವನ್ನು ನಿರ್ಬಂಧಿಸಿತ್ತು. ಈ ಪೂರೈಕೆ ವ್ಯತ್ಯಯದಿಂದಾಗಿ ವಿಶ್ವಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳು ಗಗನಕ್ಕೇರಿದ್ದವು. ಇದೀಗ ಹೋಟೆಲ್ ಅಸೋಸಿಯೇಷನ್ ನೀಡಿರುವ ಮಾಹಿತಿಯ ಪ್ರಕಾರ, ಕಳೆದ ಜೂನ್ ತಿಂಗಳಲ್ಲಿ 3,198 ರೂಪಾಯಿ ತಲುಪಿದ್ದ 19 ಕೆಜಿಯ ಕಮರ್ಷಿಯಲ್ ಸಿಲಿಂಡರ್ ದರವು, ಸದ್ಯ 3,021 ರೂಪಾಯಿಗೆ ಇಳಿಕೆಯಾಗಿದೆ.

ಇತ್ತೀಚೆಗೆ ನಾಲ್ಕು ಬಾರಿ ಹೆಚ್ಚಾಗಿದ್ದ ವಾಣಿಜ್ಯ ಸಿಲಿಂಡರ್ ಬೆಲೆ

ಹಾರ್ಮುಜ್ ಜಲಸಂಧಿಯ ಇಂಧನ ಪೂರೈಕೆ ಅಡಚಣೆಯ ನಂತರ ಭಾರತದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಒಟ್ಟು ನಾಲ್ಕು ಬಾರಿ ಹೆಚ್ಚಿಸಲಾಗಿತ್ತು. ಭಾರಿ ನಷ್ಟದ ಹಿನ್ನೆಲೆಯನ್ನು ಉಲ್ಲೇಖಿಸಿ ತೈಲ ಕಂಪನಿಗಳು ಮಾರ್ಚ್‌ನಲ್ಲಿ 144 ರೂ., ಏಪ್ರಿಲ್‌ನಲ್ಲಿ 195.50 ರೂ. ಮತ್ತು ಮೇ ತಿಂಗಳಲ್ಲಿ ಬರೋಬ್ಬರಿ 993 ರೂ.ನಷ್ಟು ಬೆಲೆ ಏರಿಕೆ ಮಾಡಿದ್ದವು. ತದನಂತರ, ಜೂನ್‌ನಲ್ಲಿ ಮತ್ತೊಮ್ಮೆ 42 ರೂ. ಹೆಚ್ಚಿಸಲಾಗಿತ್ತು. ಹೀಗೆ ಒಟ್ಟು ನಾಲ್ಕು ಕಂತುಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 1,374.50 ರೂ.ನಷ್ಟು ಹೆಚ್ಚಿಸಲಾಗಿತ್ತು.

ಅದೇ ರೀತಿ, ಗೃಹಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕೂಡ ಎರಡು ಕಂತುಗಳಲ್ಲಿ ಒಟ್ಟು 89 ರೂ.ನಷ್ಟು ಹೆಚ್ಚಿಸಲಾಗಿತ್ತು. ತೈಲ ಕಂಪನಿಗಳು ಮೊದಲು ಮಾರ್ಚ್‌ನಲ್ಲಿ 60 ರೂ. ಮತ್ತು ನಂತರ ಜೂನ್‌ನಲ್ಲಿ 29 ರೂ.ನಷ್ಟು ಬೆಲೆಯನ್ನು ಏರಿಸಿದ್ದವು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:41 am, Wed, 1 July 26

Source link

ಅಮೋಘ ಗೆಲುವಿನೊಂದಿಗೆ ಫೈನಲ್​ಗೇರಿದ ಆಸ್ಟ್ರೇಲಿಯಾ – Kannada News | Australia book their place in the ICC Women’s T20 World Cup Final

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್​ನಲ್ಲಿ ಅಮೋಘ ಗೆಲುವು ದಾಖಲಿಸಿ ಆಸ್ಟ್ರೇಲಿಯಾ ತಂಡ ಫೈನಲ್​ಗೆ ಲಗ್ಗೆಯಿಟ್ಟಿದೆ. ಲಾರ್ಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿ ಆಸೀಸ್ ಪಡೆ 8ನೇ ಬಾರಿ ಫೈನಲ್​ಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ದುಕೊಂಡಿತು.

ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕರಾದ ಕ್ಯಾಪ್ಟನ್ ಹೇಲಿ ಮ್ಯಾಥ್ಯೂಸ್ (30 ರನ್) ಮತ್ತು ಕಯಾನಾ ಜೋಸೆಫ್ (16 ರನ್) ಉತ್ತಮ ಆರಂಭ ಒದಗಿಸಿದ್ದರು.  ಮೊದಲ ವಿಕೆಟ್‌ಗೆ 47 ರನ್ ಪೇರಿಸಿದ್ದ ಈ ಜೋಡಿಯನ್ನು ಜಾರ್ಜಿಯಾ ವೇರ್‌ಹ್ಯಾಮ್ ಬೇರ್ಪಡಿಸಿದರು.

ಆ ಬಳಿಕ ಆಸ್ಟ್ರೇಲಿಯಾದ ಆಶ್ಲೀ ಗಾರ್ಡ್ನರ್ (2/13) ಮತ್ತು ಜಾರ್ಜಿಯಾ ವೇರ್ಹ್ಯಾಮ್ (2/17) ಅವರ ಸ್ಪಿನ್​ಗೆ ಸಿಲುಕಿದ ವೆಸ್ಟ್ ಇಂಡೀಸ್ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡರು. ಪರಿಣಾಮ ವೆಸ್ಟ್ ಇಂಡೀಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್‌ಗಳಿಸಲಷ್ಟೇ ಶಕ್ತರಾದರು.

13 ಓವರ್​ಗಳಲ್ಲಿ ಪಂದ್ಯ ಫಿನಿಶ್!

126 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲೇ ಜಾರ್ಜಿಯಾ ವೋಲ್ (16) ಮತ್ತು ಫೋಬೆ ಲಿಚ್‌ಫೀಲ್ಡ್ (4) ವಿಕೆಟ್ ಕಳೆದುಕೊಂಡಿತು. ಆದರೆ ಮತ್ತೊಂದೆಡೆ ಅನುಭವಿ ಆಟಗಾರ್ತಿ ಬೆತ್ ಮೂನಿ ಕೇವಲ 36 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ ಅಜೇಯ 61 ರನ್ ಸಿಡಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ಈ ಮೂಲಕ ಆಸ್ಟ್ರೇಲಿಯಾ ತಂಡ ಇನ್ನು 42 ಎಸೆತಗಳು ಬಾಕಿ ಇರುವಂತೆಯೇ 13 ಓವರ್‌ಗಳಲ್ಲಿ 127 ರನ್ ಗಳಿಸಿ ಜಯಭೇರಿ ಬಾರಿಸಿತು.

ಪಂದ್ಯದ ಸಂಕ್ಷಿಪ್ತ ಸ್ಕೋರ್:

  • ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 125/7 (ಹೇಲಿ ಮ್ಯಾಥ್ಯೂಸ್ 30, ಡೀಂದ್ರಾ ಡಾಟಿನ್ 26*; ಆಶ್ಲೀ ಗಾರ್ಡ್ನರ್ 2/13, ಜಾರ್ಜಿಯಾ ವೇರ್ಹ್ಯಾಮ್ 2/17).
  • ಆಸ್ಟ್ರೇಲಿಯಾ: 13 ಓವರ್‌ಗಳಲ್ಲಿ 127/2 (ಬೆತ್ ಮೂನಿ 61*, ಆಶ್ಲೀ ಗಾರ್ಡ್ನರ್ 35*; ಚಿನೆಲ್ಲೆ ಹೆನ್ರಿ 1/21).
  • ಪಂದ್ಯ ಶ್ರೇಷ್ಠ ಪ್ರಶಸ್ತಿ: ಆಶ್ಲೀ ಗಾರ್ಡ್ನರ್ (2 ವಿಕೆಟ್ ಮತ್ತು ಅಜೇಯ 35 ರನ್).

ಇದನ್ನೂ ಓದಿ: IND vs ENG: 6 ಎಡಗೈ ದಾಂಡಿಗರು: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11

ಫೈನಲ್ ಯಾವಾಗ?

ಮಹಿಳಾ ಟಿ20 ವಿಶ್ವಕಪ್​ನ ಫೈನಲ್ ಪಂದ್ಯವು ಜುಲೈ 5 ರಂದು ನಡೆಯಲಿದೆ. ಲಾರ್ಡ್ಸ್​ ಮೈದಾನದಲ್ಲಿ ಗುರುವಾರ ನಡೆಯಲಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೌತ್ ಆಫ್ರಿಕಾ ಅಥವಾ ಇಂಗ್ಲೆಂಡ್ ತಂಡ ಕಣಕ್ಕಿಳಿಯಲಿದೆ.

Source link

Vastu Tips: ತುಳಸಿ ಗಿಡದಲ್ಲಿ ಅತಿಯಾಗಿ ಹೂವುಗಳಿದೆಯೇ? ಹಾಗಿದ್ದರೆ ಆರ್ಥಿಕ ಲಾಭಕ್ಕಾಗಿ ಈ ಪರಿಹಾರ ತಪ್ಪದೇ ಮಾಡಿ! – Kannada News | Tulsi Buds for Wealth: Vastu and Astrology Secrets for Financial Prosperity

ಸನಾತನ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರ ಮತ್ತು ಪೂಜನೀಯ ಎಂದು ಪರಿಗಣಿಸಲಾಗುತ್ತದೆ. ಈ ದಿವ್ಯ ಸಸ್ಯವು ಬಹುತೇಕ ಪ್ರತಿ ಹಿಂದೂಗಳ ಮನೆಯ ಅಂಗಳದಲ್ಲಿ ಕಂಡುಬರುತ್ತದೆ. ಲಕ್ಷ್ಮಿ ದೇವಿಯ ಸ್ವರೂಪವಾಗಿರುವ ತುಳಸಿಯನ್ನು ಪ್ರತಿದಿನ ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ವಿಷ್ಣು ದೇವನಿಗೆ ತುಳಸಿ ಎಂದರೆ ಅತ್ಯಂತ ಪ್ರೀತಿಯಾದ್ದರಿಂದ ಇದನ್ನು ‘ಹರಿಪ್ರಿಯಾ’ ಎಂದೂ ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿಯಲ್ಲಿ ಲಕ್ಷ್ಮಿ ದೇವಿಯು ವಾಸಿಸುತ್ತಾಳೆ. ಆದರೆ, ಕೆಲವೊಮ್ಮೆ ತುಳಸಿ ಸಸ್ಯವು ಇದ್ದಕ್ಕಿದ್ದಂತೆ ಅನೇಕ ಮೊಗ್ಗುಗಳನ್ನು ಅಥವಾ ಹೂವುಗಳನ್ನು ಬಿಡುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಇದಕ್ಕೆ ವಿಶೇಷ ಮಹತ್ವವಿದ್ದು, ಆರ್ಥಿಕ ಪ್ರಗತಿಗಾಗಿ ಕೆಲವು ದಿವ್ಯ ಪರಿಹಾರಗಳನ್ನು ಸೂಚಿಸಲಾಗಿದೆ.

ತುಳಸಿ ಮೊಗ್ಗುಗಳು ಮೂಡುವುದು ಶುಭ ಸಂಕೇತ:

ತುಳಸಿ ಗಿಡದ ಮೇಲೆ ಮೊಗ್ಗುಗಳು ಅಥವಾ ಹೂವುಗಳು ಕಾಣಿಸಿಕೊಳ್ಳುವುದನ್ನು ವಾಸ್ತು ಮತ್ತು ಜ್ಯೋತಿಷ್ಯ ಎರಡರಲ್ಲೂ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಕೇತ ಮತ್ತು ದೇವಿಯ ಆಶೀರ್ವಾದದ ಹೆಗ್ಗುರುತು ಎಂದು ನಂಬಲಾಗುತ್ತದೆ. ಜ್ಯೋತಿಷಿಗಳು ಮತ್ತು ವಾಸ್ತು ತಜ್ಞರ ಪ್ರಕಾರ, ಈ ಮೊಗ್ಗುಗಳಿಗೆ ಸಂಬಂಧಿಸಿದ ಕೆಲವು ವಿಶೇಷ ಪರಿಹಾರಗಳನ್ನು ಮಾಡುವುದರಿಂದ ಮನೆಗೆ ಅಪಾರ ಆರ್ಥಿಕ ಸಮೃದ್ಧಿ ಬರುತ್ತದೆ.

ಆರ್ಥಿಕ ಸುಧಾರಣೆ ಹಾಗೂ ಧನಲಾಭಕ್ಕಾಗಿ ಸರಳ ಪರಿಹಾರಗಳು:

ಒಣಗಿದ ತುಳಸಿ ಮೊಗ್ಗುಗಳನ್ನು ಸಂಗ್ರಹಿಸಿ, ಒಂದು ಸ್ವಚ್ಛವಾದ ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ಈ ಸಣ್ಣ ಬಂಡಲ್ ಅನ್ನು ನಿಮ್ಮ ಮನೆಯ ತಿಜೋರಿಯಲ್ಲಿ ಅಥವಾ ನೀವು ಹಣ ಇಡುವ ಸ್ಥಳದಲ್ಲಿ ಸುರಕ್ಷಿತವಾಗಿ ಇರಿಸಿ. ಈ ಪರಿಹಾರವು ಆರ್ಥಿಕ ಅಡೆತಡೆಗಳನ್ನು ನಿವಾರಿಸಿ, ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ನೆಲೆಸುವಂತೆ ಮಾಡುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ದೀಪದ ಆರತಿಗೆ ಬಳಸಿ:

ಪ್ರತಿದಿನ ಮನೆಯಲ್ಲಿ ಪೂಜೆ ಮಾಡುವಾಗ, ಹಚ್ಚುವ ದೀಪಕ್ಕೆ ಒಂದು ಚಿಟಿಕೆ ಒಣಗಿದ ತುಳಸಿ ಮೊಗ್ಗುಗಳನ್ನು ಸೇರಿಸಿ. ಈ ಪರಿಹಾರವು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಸಂಪೂರ್ಣವಾಗಿ ನಿವಾರಿಸಲು ಸಹಾಯ ಮಾಡುತ್ತದೆ. ಇದರ ದಿವ್ಯ ಸುವಾಸನೆಯು ವಾತಾವರಣವನ್ನು ಶುದ್ಧೀಕರಿಸಿ, ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ಲಕ್ಷ್ಮಿ-ನಾರಾಯಣರಿಗೆ ಅರ್ಪಿಸಿ:

ಪ್ರತಿ ಶುಕ್ರವಾರದಂದು ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ತಾಜಾ ಅಥವಾ ಒಣಗಿದ ತುಳಸಿ ಮೊಗ್ಗುಗಳನ್ನು ಭಕ್ತಿಯಿಂದ ಅರ್ಪಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ-ನಾರಾಯಣರ ವಿಶೇಷ ಆಶೀರ್ವಾದ ನಿಮ್ಮದಾಗಿ, ಧನಧಾನ್ಯಗಳು ವೃದ್ಧಿಯಾಗುತ್ತವೆ.

ಸಸ್ಯದ ಮೇಲೆಯೇ ಮೊಗ್ಗುಗಳನ್ನು ಬಿಡುವುದು ವಾಸ್ತು ದೋಷ:

ಸಾಮಾನ್ಯವಾಗಿ ಅನೇಕರು ತುಳಸಿ ಗಿಡದ ಮೇಲಿರುವ ಮೊಗ್ಗುಗಳು ಅಥವಾ ಹೂವುಗಳನ್ನು ಹಾಗೆಯೇ ಬಿಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡದ ಮೇಲೆ ಅತಿಯಾಗಿ ಮೊಗ್ಗುಗಳು ಬೆಳೆದರೆ ಅದು ಸಸ್ಯದ ಭಾರವನ್ನು ಹೆಚ್ಚಿಸುತ್ತದೆ (ಅತಿಕ್ರಮಿಸುತ್ತದೆ). ಇದರಿಂದಾಗಿ ಹಚ್ಚಹಸಿರಾದ ತುಳಸಿ ಗಿಡವು ಒಣಗಲು ಪ್ರಾರಂಭಿಸುತ್ತದೆ.

ಮನೆಯಲ್ಲಿ ತುಳಸಿ ಗಿಡವು ಒಣಗುವುದನ್ನು ದೊಡ್ಡ ವಾಸ್ತು ದೋಷವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಒಣಗಲು ಆರಂಭಿಸಿದ ತಕ್ಷಣ, ಅವುಗಳನ್ನು ಗಿಡದಿಂದ ಬೇಗನೆ ಕಿತ್ತುಹಾಕಬೇಕು. ಹೀಗೆ ಮೊಗ್ಗುಗಳನ್ನು ಕೀಳುವುದು ತುಳಸಿ ಸಸ್ಯಕ್ಕೆ ಹೊಸ ಜೀವವನ್ನು ನೀಡುವ ಮತ್ತು ವಾಸ್ತು ದೋಷವನ್ನು ತಡೆಯುವ ಅತ್ಯುತ್ತಮ ಮಾರ್ಗವಾಗಿದೆ.

ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣವಾಗಿ ಸನಾತನ ಧರ್ಮದ ನಂಬಿಕೆಗಳು, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version