ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್​​ ಶಾಸಕರ ಪೈಪೋಟಿ ನಡುವೆ ತನಗೆ ಮಂತ್ರಿಗಿರಿಯೇ ಬೇಡವೆಂದ ಕೆ.ಎನ್​​. ರಾಜಣ್ಣ! – Kannada News | K.N. Rajanna Declines Ministerial Post Amid Congress MLAs’ Race for Cabinet Berths

ಬೆಂಗಳೂರು, ಜೂನ್​​ 30: ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್​​ ಶಾಸಕರು ಪೈಪೋಟಿ ನಡೆಸುತ್ತಿರುವ ನಡುವೆ ತನಗೆ ಮಂತ್ರಿ ಸ್ಥಾನ ಬೇಡ ಎಂದು ಕೆ.ಎನ್​​. ರಾಜಣ್ಣ ಹೇಳಿದ್ದಾರೆ. ಮಂತ್ರಿ ಸ್ಥಾನದ ಆಕಾಂಕ್ಷಿ ಅಂತ ನಾನು ಎಲ್ಲೂ ಹೇಳಿಲ್ಲ. ಹೀಗಾಗಿ ತನೆಗೆ ಕೊಟ್ಟರೂ ಸಚಿವ ಸ್ಥಾನ ಬೇಡ. ಇದರಲ್ಲಿ ವೈರಾಗ್ಯ ಅಂತೇನೂ ಇಲ್ಲ. ನಾನು ಎರಡು ವರ್ಷ ಮಂತ್ರಿ ಕೆಲಸವನ್ನು ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ಮಾಡಿದ್ದೀನಿ. ಅದಕ್ಕೆ ಬೇರೆಯವರಿಗೂ ಅವಕಾಶ ಕೊಡಲಿ ಎಂದವರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚಪ್ಪಲಿ ಎಸೆತ ಪ್ರಕರಣ: ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಶಾಸಕ ಪ್ರದೀಪ್​​ ಈಶ್ವರ್​​ ಕಣ್ಣೀರು – Kannada News | Chikkaballapur MLA Pradeep Eshwar Breaks Down Before Siddaramaiah Over Slipper Throwing Incident

ಸಿದ್ದರಾಮಯ್ಯ ಅವರನ್ನು ಭೇಟಿಯಾದ ಶಾಸಕ ಪ್ರದೀಪ್​​ ಈಶ್ವರ್​​Image Credit source: Siddaramaiah X Account

ಬೆಂಗಳೂರು, ಜೂನ್​​ 30: ತಮ್ಮ ಮೇಲೆ ಚಪ್ಪಲಿ ಎಸೆತ ಪ್ರಕರಣ ಸಂಬಂಧ ಸಿದ್ದರಾಮಯ್ಯ ಎದುರು ಶಾಸಕ ಪ್ರದೀಪ್ ಈಶ್ವರ್ ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ. ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಚಪ್ಪಲಿ ಎಸೆದಿದ್ದಲ್ಲದೆ ತಮ್ಮ ಹಾಗೂ ತಮ್ಮ ಕುಟುಂಬವನ್ನು ನಿಂದಿಸಿದ್ದನ್ನು ವಿವರಿಸಿ ಪ್ರದೀಪ್ ಈಶ್ವರ್‌ ಭಾವುಕರಾಗಿದ್ದಾರೆ. ಈ ವೇಳೆ ಪ್ರದೀಪ್ ಈಶ್ವರ್‌ಗೆ ಸಿದ್ದರಾಮಯ್ಯ ಧೈರ್ಯ ತುಂಬಿದ್ದು, ರಾಜಕಾರಣದಲ್ಲಿ ಇಂಥ ಘಟನೆ ಸಾಮಾನ್ಯ. ಇಂಥವನ್ನು ಎದುರಿಸಬೇಕು, ಇದರಿಂದ ಧೃತಿಗೆಡಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ತಿಳಿಸಿದ್ದಾರೆ.

ಗೃಹ ಸಚಿವರ ಜೊತೆ ಸಿದ್ದರಾಮಯ್ಯ ಚರ್ಚೆ

ಬಳಿಕ ಘಟನೆ ಸಂಬಂಧ ಗೃಹ ಸಚಿವರ ಜೊತೆಗೂ ದೂರವಾಣಿ ಮೂಲಕ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಪ್ರಿಯಾಂಕ್‌ ಖರ್ಗೆಗೆ ಮಾಜಿ ಸಿಎಂ ತಿಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಅದರಲ್ಲೂ ಆಡಳಿತ ಪಕ್ಷದ ಶಾಸಕರಿಗೆ ಈ ರೀತಿ ಆಗಿರುವುದರ ಬಗ್ಗೆ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ; ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ನಾಲ್ವರ ಬಂಧನ

ಪ್ರದೀಪ್​​​​ ಬೆಂಬಲಿಸಿ ಸಿಎಂ ಡಿಕೆಶಿ ಪೋಸ್ಟ್​​

ಮತ್ತೊಂದೆಡೆ ಎಕ್ಸ್​ ಮೂಲಕ ಶಾಸಕ ಪ್ರದೀಪ್ ಈಶ್ವರ್ ಪರ ಸಿಎಂ ಡಿಕೆ ಶಿವಕುಮಾರ್​​ ಕೂಡ ಪೋಸ್ಟ್​ ಮಾಡಿದ್ದು, ಸಾರ್ವಜನಿಕವಾಗಿ ಸೋತಾಗ ಸಭ್ಯತೆಯೂ ಸತ್ತುಹೋಗುತ್ತದೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಮೇಲೆ ಚಪ್ಪಲಿ‌ ಎಸೆದ ನೀಚ ಕೃತ್ಯವು ವಿರೋಧ ಪಕ್ಷದವರ ಹತಾಶೆಯ ಪರಮಾವಧಿ. ಒಬ್ಬ ಯುವ ನಾಯಕನ ಜನಪ್ರಿಯತೆ, ಮಾತುಗಳನ್ನ ಜೀರ್ಣಿಸಿಕೊಳ್ಳಲಾಗದೆ ತರ್ಕದ ವೇದಿಕೆಯಿಂದ ತರಗೆಲೆ ರಾಜಕಾರಣಕ್ಕೆ ಇಳಿದಿರುವುದು ನಿಮ್ಮ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಪ್ರಜಾಪ್ರಭುತ್ವದ ಆಶಯಗಳನ್ನು ಬೀದಿಗೆ ತಂದು ಹರಾಜಿಗಿಟ್ಟಿರುವ ನೀವು ನಿಮ್ಮ ಕಾರ್ಯಕರ್ತರಿಗೆ ಕಲಿಸುತ್ತಿರುವ ಸಂಸ್ಕಾರವಾದರೂ ಇಂತಹುದೇನಾ? ನೆನಪಿರಲಿ, ಇಂತಹ ಹಿಂಸಾತ್ಮಕ ದಾಳಿಗಳು ನಮ್ಮ ನಾಯಕರ ಹೋರಾಟದ ಹಾದಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆಯೇ ಹೊರತು ಎಂದಿಗೂ ಧೃತಿಗೆಡಿಸುವುದಿಲ್ಲ. ಇದು ಬಸವಣ್ಣನವರ, ಕುವೆಂಪು ಅವರ ಶಾಂತಿಪ್ರಿಯ ಕರ್ನಾಟಕ. ಇಲ್ಲಿ ಇಂತಹ ವಿಕೃತ, ಹಿಂಸಾತ್ಮಕ ಪುಂಡಾಟಿಕೆಗಳಿಗೆ ಜಾಗವಿಲ್ಲ. ಸಾರ್ವಜನಿಕ ಸಭ್ಯತೆಯ ಗಡಿ ದಾಟಿದ ಪ್ರತಿಯೊಬ್ಬರ ವಿರುದ್ಧವೂ ನಾವು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:57 pm, Tue, 30 June 26

Source link

ಒಂದು ಗಿಡಕ್ಕೆ 3,300 ರೂ., ಗುಂಡಿ ತೋಡಲು 300 ರೂ.!: ನೀವು ಹಣ ದುರ್ಬಳಕೆ ಮಾಡ್ತಿದ್ದೀರಾ? ಬಿಬಿಎಂಪಿ ಅಧಿಕಾರಿಗಳ ಬೆವರಿಳಿಸಿದ ಕೃಷ್ಣಭೈರೇಗೌಡ – Kannada News | Bengalurus Tree Planting Scandal: Officials Silent as Minister Krishna Byregowda Demands Answers on Inflated Costs

ಬೆಂಗಳೂರು, ಜೂ.30: ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡರು, ಬಿಬಿಎಂಪಿ ಅಧಿಕಾರಿಗಳು ಗಿಡ ನೆಡುವ ಕಾರ್ಯಕ್ರಮದಲ್ಲಿ ಅತಿಯಾದ ವೆಚ್ಚ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಸಚಿವರು, ಬಿಬಿಎಂಪಿ ವತಿಯಿಂದ ಒಂದು ಗಿಡ ನೆಡಲು 3,300 ರೂ. ಖರ್ಚು ಮಾಡಲಾಗುತ್ತಿದೆ ಎಂದು ತಿಳಿಸಿದ್ದು, ಅದರಲ್ಲಿ ಗುಂಡಿ ತೋಡಲು 300 ರೂ. ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ. ಆದರೆ, ತಮ್ಮ ಕ್ಷೇತ್ರದಲ್ಲಿ ನೆಡಲಾದ ಯಾವ ಗಿಡಕ್ಕೂ ಸರಿಯಾದ ಗುಂಡಿ ತೋಡಿಲ್ಲ ಎಂದು ಸಚಿವರು ಅಧಿಕಾರಿಗಳಿಗೆ ಸವಾಲು ಹಾಕಿದ್ದಾರೆ. ಫುಟ್‌ಪಾತ್ ಅಥವಾ ಮೀಡಿಯನ್‌ಗಳಲ್ಲಿ ಮೇಲ್ನೋಟಕ್ಕೆ ಗಿಡಗಳನ್ನು ಇರಿಸಲಾಗಿದೆಯೇ ಹೊರತು, ನಿಯಮದ ಪ್ರಕಾರ ಗುಂಡಿಗಳನ್ನು ತೋಡಿಲ್ಲ ಎಂದು ಆರೋಪಿಸಿದರು. ಗುಂಡಿ ತೋಡಲು ಮೀಸಲಿಟ್ಟ 300 ರೂ. ಹಣವನ್ನು ಅಧಿಕಾರಿಗಳು ನೇರವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ 20 ವರ್ಷಗಳಲ್ಲಿ ಬಿಬಿಎಂಪಿ (ಹಿಂದಿನ ಬಿಎಂಪಿ ಸೇರಿದಂತೆ) ಎಷ್ಟು ಗಿಡಗಳನ್ನು ನೆಟ್ಟಿದೆ, ಮರಗಣತಿ (Tree Census) ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ ಮತ್ತು ನೆಟ್ಟ ಗಿಡಗಳು ಮರಗಣತಿಯಲ್ಲಿ ಪ್ರತಿಫಲಿಸುತ್ತಿವೆಯೇ ಎಂದು ಸಚಿವರು ಪ್ರಶ್ನಿಸಿದರು. ಈ ಎಲ್ಲಾ ಪ್ರಶ್ನೆಗಳಿಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲು ವಿಫಲರಾದರು. ಸಾರ್ವಜನಿಕ ಹಣದ ಪೋಲು ಮತ್ತು ನಿರ್ಲಕ್ಷ್ಯದ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

EPI Recruitment 2026: ಪಿಐಎಲ್‌ನಲ್ಲಿ ಉದ್ಯೋಗಾವಕಾಶ; ಬಿಇ, ಬಿಟೆಕ್ ಪದವೀಧರರು ಅರ್ಹರು – Kannada News | EPI Recruitment 2026: Assistant and Senior Manager Jobs Apply by July 3rd

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ವಲಯದ ಉದ್ಯಮವಾದ ಇಂಜಿನಿಯರಿಂಗ್ ಪ್ರಾಜೆಕ್ಟ್ಸ್ ಇಂಡಿಯಾ ಲಿಮಿಟೆಡ್ (EPI) ಸ್ಥಿರ-ಅವಧಿಯ ಗುತ್ತಿಗೆ ಆಧಾರದ ಮೇಲೆ (Fixed-term contract) ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇಪಿಐ ಸಂಸ್ಥೆಯು ಮುಖ್ಯವಾಗಿ ವಿದ್ಯುತ್, ಉಕ್ಕು ಕೈಗಾರಿಕೆ, ನಾಗರಿಕ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಬೃಹತ್ ಯೋಜನೆಗಳನ್ನು ನಿರ್ವಹಿಸುತ್ತಿದ್ದು, ಪ್ರಸ್ತುತ ಸಹಾಯಕ ವ್ಯವಸ್ಥಾಪಕ ಹಾಗೂ ಹಿರಿಯ ವ್ಯವಸ್ಥಾಪಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.

ಖಾಲಿ ಇರುವ ಹುದ್ದೆಗಳು ಯಾವುವು?

ಇಪಿಐ ಸಂಸ್ಥೆಯು ಪ್ರಸ್ತುತ ಕೆಳಗಿನ ವಿಭಾಗಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ:

  • ಸಹಾಯಕ ವ್ಯವಸ್ಥಾಪಕ (Assistant Manager): ಸಿವಿಲ್, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ವಿಭಾಗಗಳು.
  • ಹಿರಿಯ ವ್ಯವಸ್ಥಾಪಕ (Senior Manager): ಸಿವಿಲ್ ವಿಭಾಗ ಮಾತ್ರ.

ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ವಿವರಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇಂಜಿನಿಯರಿಂಗ್ ಪದವಿಯ ಜೊತೆಗೆ ನಿಗದಿಪಡಿಸಿದ ಕೆಲಸದ ಅನುಭವ ಇರುವುದು ಕಡ್ಡಾಯವಾಗಿದೆ:

ವಿದ್ಯಾರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ / ಬಿ.ಟೆಕ್ (B.E / B.Tech) ಪದವಿ ಹೊಂದಿರಬೇಕು. ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಕನಿಷ್ಠ 2 ವರ್ಷ ಹಾಗೂ ಹಿರಿಯ ವ್ಯವಸ್ಥಾಪಕ ಹುದ್ದೆಗೆ ಕನಿಷ್ಠ 9 ವರ್ಷಗಳ ಸಂಬಂಧಿತ ವೃತ್ತಿಪರ ಅನುಭವ ಅಗತ್ಯವಾಗಿರುತ್ತದೆ.

ವೇತನ ಶ್ರೇಣಿ ಮತ್ತು ಕಾರ್ಯಕ್ಷೇತ್ರ:

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಒಟ್ಟು 14 ಹುದ್ದೆಗಳು ಲಭ್ಯವಿದ್ದು, ಮಾಸಿಕ 40,000 ದಿಂದ 70,000ರೂ. ವರೆಗೆ ಆಕರ್ಷಕ ವೇತನವನ್ನು ನೀಡಲಾಗುತ್ತದೆ. ಇದರೊಂದಿಗೆ ನಿಯಮಾನುಸಾರ ಮನೆ ಬಾಡಿಗೆ ಭತ್ಯೆ (HRA) ಹಾಗೂ ಇತರೆ ಸೌಲಭ್ಯಗಳು ಸಿಗಲಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಆಯ್ಕೆ ಪ್ರಕ್ರಿಯೆ ಮತ್ತು ಸಂದರ್ಶನದ ಸ್ಥಳ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಅರ್ಹರನ್ನು ಶಾರ್ಟ್‌ಲಿಸ್ಟ್ ಮಾಡಿ ನೇರ ಸಂದರ್ಶನದ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳಿಗಾಗಿನ ಸಂದರ್ಶನಗಳು ಮುಂಬೈನ ಇಪಿಐನ ಪಶ್ಚಿಮ ಪ್ರಾದೇಶಿಕ ಕಚೇರಿಯಲ್ಲಿ (Western Regional Office, Mumbai) ನಡೆಯಲಿವೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಿರುತ್ತದೆ. ಇಪಿಐ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ epi.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 3 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಪಿಐನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಧುರಂಧರ್ 2’ ಯಶಸ್ಸಿನ ಬಳಿಕ ಹೊಸ ಸಿನಿಮಾ ಒಪ್ಪಿಕೊಂಡ ರಣ್ವೀರ್ ಸಿಂಗ್ – Kannada News | Ranveer Singh preparing himself for his next movie Pralay

ಧುರಂಧರ್’ (Dhurandhar) ಸಿನಿಮಾದ ಯಶಸ್ಸಿನ ನಂತರ ರಣ್ವೀರ್ ಸಿಂಗ್ ನಟಿಸಬೇಕಿದ್ದ ‘ಡಾನ್ 3’ ಸಿನಿಮಾದಿಂದ ಅವರು ಹಿಂದೆ ಸರಿದಿದ್ದಾರೆ. ‘ಧುರಂಧರ್’ ಮತ್ತು ‘ಧುರಂಧರ್ 2’ ಅಂಥಹಾ ಎರಡೂ ಸೂಪರ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ರಣ್ವೀರ್ ಸಿಂಗ್ ಅವರ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂಬ ಕುತೂಹಲ ಸಹಜವಾಗಿಯೇ ಇದೆ. ರಣ್ವೀರ್ ಅವರ ಮುಂದಿನ ಸಿನಿಮಾ ಬಗ್ಗೆ ಈಗಾಗಲೇ ಹಲವು ಸುದ್ದಿಗಳು ಹರಿದಾಡುತ್ತಿವೆ. ಇದೀಗ ರಣ್ವೀರ್ ಅವರ ಹೊಸ ಸಿನಿಮಾದ ಬಗ್ಗೆ ಖಚಿತ ಸುದ್ದಿ ಹೊರಬಿದ್ದಿದೆ.

ರಣವೀರ್ ಸಿಂಗ್ ಅವರು ಜೈ ಮೆಹ್ತಾ ನಿರ್ದೇಶಿಸಲಿರುವ ‘ಪ್ರಳಯ’ ಹೆಸರಿನ ಸಿನಿಮಾನಲ್ಲಿ ನಟಿಸುವುದು ಖಾತ್ರಿಯಾಗಿದೆ. ವಿಶೇಷವೆಂದರೆ ಈ ಸಿನಿಮಾ ಸಾಮಾನ್ಯ ಕತೆ ಹೊಂದಿರುವ ಸಿನಿಮಾ ಅಲ್ಲ ಬದಲಿಗೆ ಹಾಲಿವುಡ್​​ನಲ್ಲಿ ಜನಪ್ರಿಯವಾಗಿರುವ ಜೋಂಬಿ ಥ್ರಿಲ್ಲರ್ ಕತೆಯನ್ನು ಹೊಂದಿರುವ ಸಿನಿಮಾ ಆಗಿದೆ. ಜೋಂಬಿಗಳೇ ತುಂಬಿರುವ ಪ್ರಪಂಚದಲ್ಲಿ ದಂಪತಿಯು, ಬದುಕಿ ಉಳಿಯುವ ಸರ್ವೈವಲ್ ಥ್ರಿಲ್ಲರ್ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ರಣ್ವೀರ್ ಸಿಂಗ್ ಅವರ ‘ಪ್ರಳಯ’ ಸಿನಿಮಾದ ಚಿತ್ರೀಕರಣವು 2026ರ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಈ ಚಿತ್ರದ ಬಹುಪಾಲು ದೃಶ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಚಿತ್ರೀಕರಿಸಲು ಚಿತ್ರತಂಡ ಯೋಜನೆ ರೂಪಿಸಿದೆ. ಸಿನಿಮಾಕ್ಕಾಗಿ ತಯಾರಿಯನ್ನು ರಣ್ವೀರ್ ಸಿಂಗ್ ಈಗಾಗಲೇ ಆರಂಭಿಸಿದ್ದಾರೆ. ಜಾಂಬಿ ಥ್ರಿಲ್ಲರ್ ಆಗಿರುವ ಕಾರಣಕ್ಕೆ ಸಿನಿಮಾನಲ್ಲಿ ಅತಿಯಾದ ವಿಎಫ್​​ಎಕ್ಸ್, ಗ್ರಾಫಿಕ್ಸ್ ಬಳಕೆ ಆಗಲಿದೆ. ರಣ್ವೀರ್ ಸಿಂಗ್ ಸಹ ಇನ್ನಷ್ಟು ಯಂಗ್ ಆಗಿ ಕಾಣಿಸಿಕೊಳ್ಳಲು ತಯಾರಿ ಆರಂಭಿಸಿದ್ದಾರೆ.

ಇದನ್ನೂ ಓದಿ:ಧುರಂಧರ್​ ಸಿನಿಮಾ ಶೈಲಿಯಲ್ಲಿ ಸ್ಕೆಚ್: ಸ್ಫೋಟಕ ಮಾಹಿತಿ ಬಯಲು

ಸುಮಾರು 300 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ‘ಪ್ರಳಯ’ ಸಿನಿಮಾ ನಿರ್ಮಾಣ ಆಗಲಿದೆ. ರಣವೀರ್ ಸಿಂಗ್ ಅವರ ವೃತ್ತಿಜೀವನದ ಅತ್ಯಂತ ದುಬಾರಿ ಸಿನಿಮಾ ಇದಾಗಿರಲಿದೆ. ಈ ಸಿನಿಮಾನಲ್ಲಿ ನಾಯಕಿಯಾಗಿ ದಕ್ಷಿಣದ ನಟಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ‘ಲೋಕಃ’ ಸಿನಿಮಾದ ನಾಯಕಿ ಕಲ್ಯಾಣಿ ಪ್ರಿಯದರ್ಶನ್ ಈ ಸಿನಿಮಾನಲ್ಲಿ ರಣ್ವೀರ್​​ಗೆ ಜೋಡಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಣ್ವೀರ್ ಸಿಂಗ್ ಅವರು ‘ಧುರಂಧರ್’ ಮತ್ತು ‘ಧುರಂದರ್ 2’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಅಂಥಹದೇ ದೇಶಭಕ್ತಿಯ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಅವರ ನಿರ್ದೇಶನದ ಹೊಸ ಸಿನಿಮಾನಲ್ಲಿ ರಣ್ವೀರ್ ಸಿಂಗ್ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಆದರೆ ಎಲ್ಲವನ್ನೂ ಸುಳ್ಳು ಮಾಡಿ ರಣ್ವೀರ್ ಅವರು ಜಾಂಬಿ ಥ್ರಿಲ್ಲರ್ ಕತೆಯನ್ನು ಕೈಗೆತ್ತಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:39 pm, Tue, 30 June 26

Source link

ಕಾರಹುಣ್ಣಿಮೆ: ಮಸೀದಿ ಬಳಿ ಪಟಾಕಿ ಸಿಡಿಸಿದ್ದಕ್ಕೆ ಗಲಾಟೆ, ರೈತನ ಕೈ ಕಟ್ – Kannada News | Haveri Violence: clash Between Hindu Muslim In naregal village firecracker during karahunnime Celebration

ಹಾವೇರಿ (ಜೂನ್ 30): ಕಾರಹುಣ್ಣಿಮೆ ಹಬ್ಬದ ಹಿನ್ನೆಲೆ ಹೋರಿಗಳನ್ನು ಓಡಿಸುವ ಸ್ಪರ್ಧೆ ವೇಳೆ ಪಟಾಕಿ ಸಿಡಿಸಿದ್ದಕ್ಕೆ ರೈತನ ಮೇಲೆ ಹಲ್ಲೆ ಮಾಡಿ ಕೈ ಕಟ್ ಮಾಡಿರುವ ಅಮಾನುಷ ಘಟನೆ ಹಾವೇರಿ(Haveri) ಜಿಲ್ಲೆ ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮದಲ್ಲಿ (Naregal village) ನಡೆದಿದೆ. ನಿನ್ನೆ (ಜೂನ್ 29) ಕಾರಹುಣ್ಣಿಮೆ ಹಬ್ಬದ ಹಿನ್ನೆಲೆ ಹೋರಿಗಳನ್ನು ಓಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆ ಪಟಾಕಿ ಸಿಡಿಸಿದ ಕಾರಣಕ್ಕೆ ಎರಡು ಕೋಮಿನ ಜನರ ನಡುವೆ ಮಾರಾಮಾರಿ ನಡೆದಿದೆ. ಮಸೀದಿ ಬಳಿ ಪಟಾಕಿ ಸಿಡಿಸಿದ ಎಂಬ ಕಾರಣಕ್ಕೆ ರೈತ ಕೈ ಕತ್ತರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸದ್ಯ ಬೂದಿಮುಚ್ಚಿದ ಕೆಂಡದಂತಿರುವ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಮಸೀದಿ ಬಳಿ ಪಟಾಕಿ ಸಿಡಿಸಿದ್ದೆ ತಪ್ಪಾಯ್ತಾ?

ಕಾರಹುಣ್ಣಿಮೆ ಅಂಗವಾಗಿ ನರೇಗಲ್ಲ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಹೋರಿ ಓಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಗೇ ರೈತರು ತಮ್ಮ ಎತ್ತುಗಳನ್ನು ಓಡಿಸುವ ಸಂದರ್ಭದಲ್ಲಿ ಗ್ರಾಮದ ಮಸೀದಿ ಬಳಿ ಪಟಾಕಿ ಸಿಡಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಾಷಾಸಾಬ ಗೌಂಡಿ ಎಂಬುವರು ನಮ್ಮ ಮಸೀದಿ ಬಳಿ ಏಕೆ ಪಟಾಕಿ ಸಿಡಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ತಿಪ್ಪೆ ಜಾಗದ ವಿವಾದಕ್ಕೆ ದಲಿತ ಕುಟುಂಬಗಳಿಗೆ ಬಹಿಷ್ಕಾರ: 3 ದಿನಗಳಿಂದ ಊರ ಒಳಗೆ ಹೋಗಲಾಗದೆ ಪರದಾಟ

ಮಾರಾಮಾರಿಗೆ ತಿರುಗಿದ ಮಾತಿನ ಚಕಮಕಿ

ಪಟಾಕಿ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಎರಡು ಕೋಮಿನವರ ನಡುವೆ ಘರ್ಷಣೆಯಾಗಿ ಮಾರ್ಪಟ್ಟಿದೆ. ಹೋರಿ ಹಿಂದೆ ಬರುತ್ತಿದ್ದ ಲೋಹಿತ್ ಜಯಪ್ಪ ಎಂಬುವರ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಇದರಿಂದ ಉದ್ವಿಗ್ನಗೊಂಡ ಮತ್ತೊಂದು ಗುಂಪು ಕುಡುಗೋಲು ಸೇರಿದಂತೆ ವಿವಿಧ ಆಯುಧಗಳಿಂದ ಪ್ರತಿದಾಳಿ ನಡೆಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಗಲಾಟೆಯಲ್ಲಿ ಓರ್ವ ರೈತನ ಕೈ ಕತ್ತರಿಸಿರುವ ಆರೋಪವೂ ಕೇಳಿಬಂದಿದ್ದು, ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರಿಗೆ ಕೈಗೆ ಗಂಭೀರ ಗಾಯಗಳಾಗಿದ್ದು, ಉಳಿದವರು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

26 ಜನರ ವಿರುದ್ಧ FIR

ಪ್ರಕರಣಕ್ಕೆ ಸಂಬಂಧಿಸಿದಂತೆ ಆಡೂರು ಪೊಲೀಸ್ ಠಾಣೆಯಲ್ಲಿ 26 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹರೀಶ್ ತಂದೆ ರಾಮಪ್ಪ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಖ್ವಾಜಾ, ಭಾಷಾಸಾಬ, ಮೆಹಬೂಬ್ ಅಲಿ, ಮಹಬೂಬಸಾಬ ಸೇರಿದಂತೆ ಒಟ್ಟು 26 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.ಪ್ರಕರಣ ಸಂಖ್ಯೆ 109/2026 ಅಡಿ BNS ಸೆಕ್ಷನ್ 189(2), 191(2) ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಶಾಂತಿ ಕಾಪಾಡುವಂತೆ ಪೊಲೀಸರ ಮನವಿ

ಘಟನೆ ಬಳಿಕ ನರೇಗಲ್ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿದೆ. ಇನ್ನು ಪೊಲೀಸರು ಘಟನೆಯ ನಿಖರ ಕಾರಣ, ಘರ್ಷಣೆಗೆ ಕಾರಣವಾದ ಬೆಳವಣಿಗೆಗಳು ಹಾಗೂ ಹಲ್ಲೆಯಲ್ಲಿ ಭಾಗಿಯಾಗಿದ್ದವರ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಶಾಂತಿ ಕಾಪಾಡುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.

ನರೇಗಲ್ ಗ್ರಾಮದಲ್ಲಿ ಪರಿಸ್ಥಿತಿ ಶಾಂತ

ಘಟನೆ ಬಳಿಕ ಎಚ್ಚೆತ್ತ ಆಡೂರು ಠಾಣೆ ಪೊಲೀಸರು, ನರೇಗಲ್ ಗ್ರಾಮದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಗ್ರಾಮದಲ್ಲಿ 20ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಶಾಂತಗೊಂಡಿದೆ. ಇನ್ನು ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.

ಗ್ರಾಮಕ್ಕೆ ವಿಜಯೇಂದ್ರ ಭೇಟಿ

ಇನ್ನು ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದು, ಘಟನಾ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ನೀಡಲಿದ್ದಾರೆ. ಇಂದು (ಜೂನ್ 30) ಮಧ್ಯಾಹ್ನ 3-30 ಕ್ಕೆ ನರೇಗಲ್ ಗ್ರಾಮಕ್ಕೆ ಆಗಮಿಸಲಿರುವ ವಿಜಯೇಂದ್ರ ಅವರು ಗಲಾಟೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. ನಂತರ ಹಾವೇರಿ ಜಿಲ್ಲಾಸ್ಪತ್ರೆಗೆ ಆಗಮಿಸಿ ಗಾಯಾಳು ಆರೋಗ್ಯ ವಿಚಾರಿಸಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:32 pm, Tue, 30 June 26

Source link

ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ – Kannada News | Karnataka Government Transfers Several IAS Officers; Here’s the Full List

ಬೆಂಗಳೂರು, ಜೂನ್ 30: ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಮಹತ್ವದ ಆದೇಶ ಹೊರಡಿಸಿದೆ. ಅದರನ್ವಯ ಅಭಿರಾಮ್ ಜಿ. ಶಂಕರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಮೈನಿಂಗ್ ಎನ್ವಿರಾನ್‌ಮೆಂಟ್ ರೆಸ್ಟೋರೇಶನ್ ಕಾರ್ಪೊರೇಷನ್ (KMERC) ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಜೂನ್ 30ರಂದು ನಿವೃತ್ತಿಯಾಗಿರುವ ಡಾ. ಸಂಜಯ್ ಎಸ್. ಬಿಜ್ಜೂರು ಅವರ ಸ್ಥಾನವನ್ನು ಇವರು ಭರಿಸಲಿದ್ದಾರೆ.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾಗಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರನ್ನು ನೇಮಕ ಮಾಡಲಾಗಿದೆ. ಜೊತೆಗೆ, ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ (KEONICS) ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ಇವರಿಗೆ ವಹಿಸಲಾಗಿದೆ. ಯೋಗೀಶ್ ಎ. ಎಂ. ಅವರನ್ನು ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಪ್ರಸನ್ನ ಎಚ್. ಅವರಿಗಿದ್ದ ಹೆಚ್ಚುವರಿ ಜವಾಬ್ದಾರಿಯನ್ನು ಹಿಂಪಡೆಯಲಾಗಿದೆ.

ಇದನ್ನೂ ಓದಿ: ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ?; ಜಿಬಿಎ ಸಭೆಯಲ್ಲಿ ಅಧಿಕಾರಿಗಳ ಮೇಲೆ ಸಚಿವ ಕೃಷ್ಣಭೈರೇಗೌಡ ಗರಂ

ಗ್ರಾಮೀಣಾಭಿವೃದ್ಧಿ ಆಯುಕ್ತರಾಗಿ ದಿವ್ಯಾ ಪ್ರಭು ಜಿ.ಆರ್.ಜೆ. ಅವರನ್ನು ನೇಮಕ ಮಾಡಲಾಗಿದ್ದು, ಡಾ. ಅರುಂಧತಿ ಚಂದ್ರಶೇಖರ್ ಅವರಿಗಿದ್ದ ಹೆಚ್ಚುವರಿ ಜವಾಬ್ದಾರಿಯನ್ನು ತೆರವುಗೊಳಿಸಲಾಗಿದೆ. ಇದರ ಜೊತೆಗೆ, ಪುರಸಭೆ ಆಡಳಿತ ನಿರ್ದೇಶಕರ ಕ್ಯಾಡರ್ ಹುದ್ದೆಗೆ ಸಮಾನವಾದ ಸ್ಥಾನಮಾನ ಮತ್ತು ಜವಾಬ್ದಾರಿಗಳನ್ನು ಹೊಂದಿರುವ ಕೆಲವು ಹುದ್ದೆಗಳನ್ನು ಐಎಎಸ್ (ವೇತನ) ನಿಯಮಗಳು–2016ರ ನಿಯಮ 12ರ ಅಡಿಯಲ್ಲಿ ಸಮಾನ ಹುದ್ದೆಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು–1) ಅಧೀನ ಕಾರ್ಯದರ್ಶಿ ಟಿ. ಮಹಾಂತೇಶ್ ಅವರು ರಾಜ್ಯಪಾಲರ ಹೆಸರಿನಲ್ಲಿ ಹೊರಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:59 pm, Tue, 30 June 26

Source link

ಬ್ಯಾಂಕುಗಳ ಮಿಸ್-ಸೆಲ್ಲಿಂಗ್​ನಿಂದ ಹಿಡಿದು ಇಪಿಎಫ್​ಒವರೆಗೆ, ಜುಲೈನಿಂದ ಬದಲಾಗಲಿರುವ 8 ಹಣಕಾಸು ನಿಯಮಗಳು – Kannada News | Important Financial Rules change from July 2026, that might impact common persons

ನವದೆಹಲಿ, ಜೂನ್ 30: ನಾಳೆಯಿಂದ, ಅಂದರೆ ಜುಲೈ 1 ರಿಂದ ದೇಶಾದ್ಯಂತ ಹಣಕಾಸು ಮತ್ತು ನಾಗರಿಕ ಸೇವೆಗಳಿಗೆ ಸಂಬಂಧಿಸಿದ ಹಲವು ಪ್ರಮುಖ ನಿಯಮಗಳು (Financial rules) ಬದಲಾಗುತ್ತಿದೆ. ಇವು ನಿಮ್ಮ ಮಾಸಿಕ ಬಜೆಟ್, ಬ್ಯಾಂಕಿಂಗ್ ಮತ್ತು ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರಬಹುದು. ಐಟಿ ರಿಟರ್ನ್ ಸಲ್ಲಿಕೆಯ ಗಡುವು, ಆಧಾರ್​ನಲ್ಲಿ ಇಮೇಲ್ ಐಡಿ ಲಿಂಕ್ ಮಾಡುವುದು, ಕೆಲ ಕ್ರೆಡಿಟ್ ಕಾರ್ಡ್​ಗಳ ನಿಯಮಗಳಲ್ಲಿ ಬದಲಾವಣೆ ಇತ್ಯಾದಿ ವಿವಿಧ ಹಣಕಾಸು ನಿಯಮ ಬದಲಾವಣೆಗಳಿವೆ.

1. ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಗಡುವು

ಆರ್ಥಿಕ ವರ್ಷದ ಐಟಿಆರ್ (Income Tax Return) ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಆದರೆ ಜುಲೈ 1 ರಿಂದ ತೆರಿಗೆ ಇಲಾಖೆಯು ಪರಿಶೀಲನಾ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸಲಿದೆ. ಯಾವುದೇ ತಪ್ಪುಗಳಿಲ್ಲದೆ ಬೇಗನೇ ಐಟಿಆರ್ ಸಲ್ಲಿಸುವುದು ಸೂಕ್ತ, ಇಲ್ಲದಿದ್ದರೆ ಗಡುವಿನ ನಂತರ ಭಾರಿ ದಂಡ ತೆರಬೇಕಾಗಬಹುದು.

2. ಆಧಾರ್‌ನಲ್ಲಿ ಉಚಿತವಾಗಿ ಇಮೇಲ್ ಐಡಿ ಅಪ್‌ಡೇಟ್

ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಕಾರ್ಡ್‌ದಾರರಿಗೆ ಭರ್ಜರಿ ಕೊಡುಗೆ ನೀಡಿದೆ. ಆಧಾರ್ ಮೊಬೈಲ್ ಆ್ಯಪ್ ಅಥವಾ ಪೋರ್ಟಲ್ ಮೂಲಕ ಇಮೇಲ್ ಐಡಿ ಲಿಂಕ್ ಮಾಡಲು ಅಥವಾ ಅಪ್‌ಡೇಟ್ ಮಾಡಲು ಇದ್ದ ₹75 ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ. ಈ ಉಚಿತ ಸೌಲಭ್ಯವು ಮುಂದಿನ 6 ತಿಂಗಳವರೆಗೆ (ಡಿಸೆಂಬರ್ 31 ರವರೆಗೆ) ಲಭ್ಯವಿರಲಿದೆ.

ಇದನ್ನೂ ಓದಿ: ವಿಶ್ವದ ನಂ. 1 ಶಿಪ್ಪಿಂಗ್ ಕಂಪನಿಯಿಂದ ಭಾರತದ ವಿಳಿಂಜಮ್ ಪೋರ್ಟ್​ನಲ್ಲಿ ಭಾರೀ ಹೂಡಿಕೆ; ಅದಾನಿ ಸಂಸ್ಥೆಯಿಂದ ಶೇ. 49 ಪಾಲು ಮಾರಾಟ

3. ಎಚ್‌ಡಿಎಫ್‌ಸಿ (HDFC) ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆ

HDFC ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್‌ಗಳ ಏರ್‌ಪೋರ್ಟ್ ಲಾಂಜ್ ಆಕ್ಸೆಸ್ (Airport Lounge Access) ನಿಯಮಗಳನ್ನು ಬದಲಾಯಿಸುತ್ತಿದೆ. ಇನ್ಮುಂದೆ ಉಚಿತ ಲಾಂಜ್ ಸೌಲಭ್ಯ ಪಡೆಯಲು ಗ್ರಾಹಕರು ಹಿಂದಿನ ತ್ರೈಮಾಸಿಕದಲ್ಲಿ (Quarter) ಕನಿಷ್ಠ ₹60,000 ಖರ್ಚು ಮಾಡಿರಬೇಕಾಗುತ್ತದೆ. ಉದಾಹರಣೆಗೆ, ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಲಾಂಜ್ ಆಕ್ಸೆಸ್ ಬೇಕಾದರೆ, ಏಪ್ರಿಲ್-ಜೂನ್ ನಡುವೆ ₹60,000 ಖರ್ಚು ಮಾಡಿರಬೇಕು.

4. ಎಸ್‌ಬಿಐ (SBI) ಫೋನ್‌ಪೇ ಕಾರ್ಡ್ ರಿವಾರ್ಡ್ ಪಾಯಿಂಟ್ಸ್

SBI ಕಾರ್ಡ್‌ನ ಫೋನ್‌ಪೇ ವೇರಿಯಂಟ್‌ಗಳಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸುವ ಮಿತಿಯನ್ನು ಪರಿಷ್ಕರಿಸಲಾಗಿದೆ. ಕೆಲವು ನಿರ್ದಿಷ್ಟ ವಹಿವಾಟುಗಳನ್ನು (Transactions) ಇನ್ಮುಂದೆ ರಿವಾರ್ಡ್ ಪಾಯಿಂಟ್ಸ್ ಪಟ್ಟಿಯಿಂದ ಹೊರಗಿಡಲಾಗುವುದು.

5. ಪಾಸ್‌ಪೋರ್ಟ್ ಸೇವಾ ಶುಲ್ಕ ಹೆಚ್ಚಳ

ಜುಲೈ 1 ರಿಂದ ಪಾಸ್‌ಪೋರ್ಟ್ ಮಾಡಿಸುವುದು ಹೆಚ್ಚು ದುಬಾರಿಯಾಗಲಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಾಮಾನ್ಯ (Normal) ಮತ್ತು ತತ್ಕಾಲ್ (Tatkal) ಎರಡೂ ಮಾದರಿಯ ಪಾಸ್‌ಪೋರ್ಟ್ ಅರ್ಜಿಗಳ ಶುಲ್ಕವನ್ನು ಹೆಚ್ಚಿಸುತ್ತಿದೆ.

6. ಮಿಸ್-ಸೆಲ್ಲಿಂಗ್ ವಿರುದ್ಧ ಆರ್‌ಬಿಐ (RBI) ಕಠಿಣ ಕ್ರಮ

ಬ್ಯಾಂಕುಗಳು ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ಹಣಕಾಸು ಉತ್ಪನ್ನಗಳನ್ನು (ವಿಮೆ, ಹೂಡಿಕೆ ಯೋಜನೆಗಳು ಇತ್ಯಾದಿ) ಮಿಸ್-ಸೆಲ್ಲಿಂಗ್ ಮಾಡುವುದನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಬ್ಯಾಂಕ್ ಮೋಸ ಮಾಡಿರುವುದು ಸಾಬೀತಾದರೆ ಗ್ರಾಹಕರಿಗೆ ಸಂಪೂರ್ಣ ಹಣ ಮರುಪಾವತಿ (Full Refund) ಮತ್ತು ನಷ್ಟದ ಭರ್ತಿ ಸಿಗಲಿದೆ.

ಇದನ್ನೂ ಓದಿ: ಯೂಸರ್​ನೇಮ್ ಇಟ್ಟು ಪೋನ್ ನಂಬರ್ ರಹಸ್ಯವಾಗಿಡಿ; ವಾಟ್ಸಾಪ್​ನಲ್ಲಿ ಹೊಸ ಫೀಚರ್

7. ಇಪಿಎಫ್‌ಒ (EPFO 3.0) ಡಿಜಿಟಲ್ ಅಪ್‌ಗ್ರೇಡ್

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ತನ್ನ ಸೇವೆಗಳನ್ನು ಸರಳಗೊಳಿಸಲು ‘EPFO 3.0’ ಆವೃತ್ತಿಯನ್ನು ಪರಿಚಯಿಸುತ್ತಿದೆ. ಈ ನೂತನ ವ್ಯವಸ್ಥೆಯ ಮೂಲಕ ಯುಪಿಐ (UPI) ಮತ್ತು ಎಟಿಎಂ ನೆಟ್‌ವರ್ಕ್ ಬಳಸಿ ಪಿಎಫ್ ಹಣವನ್ನು ಅತ್ಯಂತ ವೇಗವಾಗಿ ಹಿಂಪಡೆಯಲು (PF Withdrawal) ಸಾಧ್ಯವಾಗಲಿದೆ.

8. ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತು ರೈಲ್ವೆ ನಿಯಮಗಳು

ಪ್ರತಿ ತಿಂಗಳ ಮೊದಲ ದಿನದಂತೆ ಜುಲೈ 1 ರಂದೂ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬೆಲೆಗಳು ಪರಿಷ್ಕರಣೆಯಾಗಲಿವೆ. ಎಟಿಎಫ್ ಇಂಧನಗಳ ಬೆಲೆ ಪರಿಷ್ಕರಣೆಯೂ ಆಗಲಿದೆ. ಹಾಗೆಯೇ, ರೈಲ್ವೆಯಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ವಿಧಿಸುವ ದಂಡದ ಪ್ರಮಾಣವನ್ನೂ ಹೆಚ್ಚಿಸುವ ಸಾಧ್ಯತೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ; ಹಣ ಎಣಿಸುವಾಗ ನಿಯಮಗಳನ್ನು ಹೇಗೆ ಉಲ್ಲಂಘಿಸಲಾಯಿತು? – Kannada News | Ram Temple donation row SIT Probe on SBI operational protocol financial records

ನವದೆಹಲಿ, ಜೂನ್ 30: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಡುವೆ ಸಹಿ ಹಾಕಲಾದ ಒಪ್ಪಂದದಲ್ಲಿ ಹಲವಾರು ಲೋಪಗಳನ್ನು ವಿಶೇಷ ತನಿಖಾ ತಂಡ (SIT) ತನಿಖೆ ವೇಳೆ ಕಂಡುಹಿಡಿದಿದೆ. ರಾಮ ಮಂದಿರದ (Ram Temple Donation Row) ಭದ್ರತೆ ಮತ್ತು ಕಣ್ಗಾವಲು ನಿಬಂಧನೆಗಳನ್ನು ಏಕೆ ಪಾಲಿಸಲಿಲ್ಲ ಮತ್ತು ಇದಕ್ಕೂ ಕಳ್ಳತನಕ್ಕೂ ಯಾವುದಾದರೂ ಸಂಬಂಧವಿದೆಯೇ ಎಂದು ತನಿಖಾ ಸಂಸ್ಥೆಗಳು ಈಗ ತನಿಖೆ ನಡೆಸುತ್ತಿವೆ.

ಮೂಲಗಳ ಪ್ರಕಾರ, ಫೆಬ್ರವರಿ 2025ರಲ್ಲಿ ಟ್ರಸ್ಟ್ ಮತ್ತು ಎಸ್‌ಬಿಐ ನಡುವೆ ಸಹಿ ಹಾಕಲಾದ ಒಪ್ಪಂದವು ದೇಣಿಗೆ ಪೆಟ್ಟಿಗೆಗಳನ್ನು ತೆರೆಯುವಾಗ ಮತ್ತು ಎಣಿಕೆ ಕೊಠಡಿಯ ಕಾರ್ಯಾಚರಣೆಯ ಸಮಯದಲ್ಲಿ ಟ್ರಸ್ಟ್ ಮತ್ತು ಬ್ಯಾಂಕ್ ಅಧಿಕಾರಿಗಳ ಜಂಟಿ ಉಪಸ್ಥಿತಿಯನ್ನು ಕಡ್ಡಾಯಗೊಳಿಸಿತು. ಹಣ ಎಣಿಕೆಯಲ್ಲಿ ತೊಡಗಿರುವ ಉದ್ಯೋಗಿಗಳಿಗೆ ಡ್ರೆಸ್ ಕೋಡ್ ಅನ್ನು ಸಹ ಸೂಚಿಸಲಾಗಿತ್ತು. ಆದರೆ ಈ ನಿಯಮಗಳನ್ನು ಪರಿಣಾಮಕಾರಿಯಾಗಿ ಪಾಲಿಸಲಾಗಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಈ ಒಪ್ಪಂದವು ಬ್ಯಾಂಕ್ ಅಧಿಕಾರಿಗಳ ಮಾಸಿಕ ಪರಿಚಲನೆಗೆ ಅವಕಾಶ ನೀಡಿದ್ದು, ಅದೇ ಉದ್ಯೋಗಿಯನ್ನು ಸೂಕ್ಷ್ಮ ಪ್ರದೇಶದಲ್ಲಿ ದೀರ್ಘಕಾಲದವರೆಗೆ ನಿಯೋಜಿಸಲಾಗುವುದಿಲ್ಲ ಎಂದು ಖಚಿತಪಡಿಸುತ್ತದೆ. ಆದರೆ, ಕೆಲವು ಉದ್ಯೋಗಿಗಳು ದೀರ್ಘಕಾಲದವರೆಗೆ ಅದೇ ಪ್ರದೇಶದಲ್ಲಿ ಉಳಿದುಕೊಂಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಇದಲ್ಲದೆ, ದೇಣಿಗೆಯ ಹುಂಡಿಯ ಹಣದ ಎಣಿಕೆ ಕೋಣೆಗೆ ಪ್ರವೇಶಿಸುವ ಮತ್ತು ನಿರ್ಗಮಿಸುವ ನೌಕರರ ನಿಯಮಿತ ತಪಾಸಣೆ, ಪ್ರತಿ ದೇಣಿಗೆ ಪೆಟ್ಟಿಗೆಯಲ್ಲಿನ ಮೊತ್ತದ ಪ್ರತ್ಯೇಕ ದಾಖಲೆಗಳನ್ನು ನಿರ್ವಹಿಸುವುದು ಮತ್ತು ಅನುಕ್ರಮ ಎಣಿಕೆಯಂತಹ ನಿಯಮಗಳ ಅನುಸರಣೆಯನ್ನು ಸಹ ಪರಿಶೀಲಿಸಲಾಗುತ್ತಿದೆ.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ; 8 ಆರೋಪಿಗಳಿಗೂ 14 ದಿನಗಳ ನ್ಯಾಯಾಂಗ ಬಂಧನ

ನಡೆದಿರಬಹುದಾದ ಯಾವುದೇ ಅಕ್ರಮಗಳನ್ನು ಗುರುತಿಸಲು ಎಸ್‌ಐಟಿ ದೈನಂದಿನ ಲೆಕ್ಕಾಚಾರ ವರದಿಗಳು, ಬ್ಯಾಂಕ್ ಠೇವಣಿ ಸ್ಲಿಪ್‌ಗಳು ಮತ್ತು ಸಂಬಂಧಿತ ರಿಜಿಸ್ಟರ್‌ಗಳನ್ನು ಸಹ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ತನಿಖಾಧಿಕಾರಿಗಳು ಆರೋಪಿಗಳ ಹಣಕಾಸಿನ ಚಟುವಟಿಕೆಗಳ ಮೇಲೆಯೂ ಗಮನಹರಿಸಿದ್ದಾರೆ. ಕಳೆದ 3 ವರ್ಷಗಳಲ್ಲಿ ಬಂಧಿತ 8 ಆರೋಪಿಗಳು ಸಂಪಾದಿಸಿರುವ ಚರ ಮತ್ತು ಸ್ಥಿರ ಆಸ್ತಿಗಳ ಸಂಪೂರ್ಣ ವಿವರಗಳನ್ನು ಪೊಲೀಸರು ಕೋರಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಭೂಮಿ, ಮನೆಗಳು, ಆಭರಣಗಳು, ವಾಹನಗಳು ಮತ್ತು ಇತರ ಬೆಲೆಬಾಳುವ ವಸ್ತುಗಳ ಖರೀದಿಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಲಾಗುತ್ತಿದೆ. ಆರೋಪಿಗಳ ಘೋಷಿತ ಆದಾಯ ಮತ್ತು ವೆಚ್ಚಗಳನ್ನು ಹೋಲಿಸುವ ಮೂಲಕ ಆರೋಪಿತ ಅಕ್ರಮ ಹಣವನ್ನು ಯಾವ ಆಸ್ತಿಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದನ್ನು ಕಂಡುಹಿಡಿಯಲು ತನಿಖಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ದೇಣಿಗೆ ಲೂಟಿ; ಆರೋಪಿಗಳಿಂದ ಹಣ, ಚಿನ್ನ ಜಪ್ತಿ, ವಕಾಲತ್ ವಹಿಸಲು ಒಪ್ಪದ ವಕೀಲರು

ವಿಶೇಷ ತನಿಖಾ ತಂಡದ (SIT) ತನಿಖೆ ಮುಂದುವರಿದಿರುವ ಬೆನ್ನಲ್ಲೇ, ರಾಮ ಮಂದಿರದ ಆರ್ಥಿಕ ನಿರ್ವಹಣೆಯ ವಿಚಾರವಾಗಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಈ ಪ್ರಕರಣವು ಉತ್ತರ ಪ್ರದೇಶದಲ್ಲಿ ಭಾರಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾ – Kannada News | Hubballi Neha Murder Case: High Court Denies Fayaz Bail, CID Intensifies Probe

ಧಾರವಾಡ, ಜೂನ್ 30: ಇಡೀ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದ (Neha Hiremath Murder Case) ಮುಖ್ಯ ಆರೋಪಿ ಫಯಾಜ್‌ಗೆ ನ್ಯಾಯಾಲಯದಲ್ಲಿ ಮತ್ತೊಮ್ಮೆ ಭಾರಿ ಮುಖಭಂಗವಾಗಿದೆ. ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು (Bail Petition) ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಇಂದು (ಮಂಗಳವಾರ) ವಜಾಗೊಳಿಸಿ ಆದೇಶ ಹೊರಡಿಸಿದೆ.

ಈ ಹಿಂದೆ ಹುಬ್ಬಳ್ಳಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿ ಫಯಾಜ್‌ನ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಜಿಲ್ಲಾ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಹಾಗೂ ತನಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದನು. ಹೈಕೋರ್ಟ್‌ನಲ್ಲಿ ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು, ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿ ಆರೋಪಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ.

ಕೊಲೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಪರವಾಗಿ ಹಿರಿಯ ನ್ಯಾಯವಾದಿ ರಾಘವೇಂದ್ರ ಮುತ್ತಗಿ ಅವರು ಹೈಕೋರ್ಟ್‌ನಲ್ಲಿ ಬಲವಾದ ವಾದ ಮಂಡಿಸಿದರು. ಆರೋಪಿ ಮಾಡಿರುವ ಕೃತ್ಯ ಅತ್ಯಂತ ಕ್ರೂರವಾಗಿದ್ದು, ಆತನಿಗೆ ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಮತ್ತು ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಕಾಲೇಜು ಆವರಣದಲ್ಲೇ ಸಾರ್ವಜನಿಕವಾಗಿ ನಡೆದಿದ್ದ ಈ ಭೀಕರ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿ (CID) ತೀವ್ರಗೊಳಿಸಿದ್ದು, ಹೈಕೋರ್ಟ್‌ನ ಈ ನಿರ್ಧಾರದಿಂದ ನೇಹಾ ಕುಟುಂಬಕ್ಕೆ ಕಾನೂನು ಹೋರಾಟದಲ್ಲಿ ದೊಡ್ಡ ಜಯ ಸಿಕ್ಕಂತಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ ನೇಹಾ ಹಿರೇಮಠ ಕೊಲೆ ಪ್ರಕರಣ: ಹಂತಕ ಫಯಾಜ್ ಜಾಮೀನು ಅರ್ಜಿ ವಜಾ

ಪ್ರಕರಣದ ಹಿನ್ನೆಲೆ ಇಲ್ಲಿದೆ

ಏಪ್ರಿಲ್ 18, 2024 ರಂದು ಹುಬ್ಬಳ್ಳಿಯ ಪ್ರತಿಷ್ಠಿತ ಬಿವಿಬಿ (BVB) ಕಾಲೇಜು ಆವರಣದಲ್ಲಿ 24 ವರ್ಷದ ಎಂಸಿಎ (MCA) ವಿದ್ಯಾರ್ಥಿನಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಅವರನ್ನು ಆರೋಪಿ ಫಯಾಜ್ ಸಾರ್ವಜನಿಕವಾಗಿ ಅಡ್ಡಗಟ್ಟಿ, ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ನೇಹಾಗೆ ಚಾಕುವಿನಿಂದ 10 ಕ್ಕೂ ಹೆಚ್ಚು ಬಾರಿ ಮನಬಂದಂತೆ ಇರಿದು ಬರ್ಬರವಾಗಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದನು. ತೀವ್ರ ರಕ್ತಸ್ರಾವದಿಂದಾಗಿ ನೇಹಾ ಕಾಲೇಜು ಆವರಣದಲ್ಲೇ ಕೊನೆಯುಸಿರೆಳೆದಿದ್ದಳು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಹುಬ್ಬಳ್ಳಿ ಪೊಲೀಸರು, ಕೊಲೆಗಡುಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇಬ್ಬರೂ ಒಟ್ಟಿಗೆ ಬಿಸಿಎ ಓದುತ್ತಿದ್ದಾಗ ಪರಿಚಯವಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:04 pm, Tue, 30 June 26

Source link

Exit mobile version