IND vs ENG: 6 ಎಡಗೈ ದಾಂಡಿಗರು: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11 – Kannada News | India playing xi for 1st t20 against England

ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಯು ಜುಲೈ 1 ರಿಂದ ಶುರುವಾಗಲಿದೆ. ಚೆಸ್ಟರ್-ಲೆ-ಸ್ಟ್ರೀಟ್ ರಿವರ್​ ಸೈಡ್ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಈ ಪ್ಲೇಯಿಂಗ್ ಇಲೆವೆನ್​​ನಲ್ಲಿ 6 ಎಡಗೈ ದಾಂಡಿಗರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಏಕೆಂದರೆ ಟೀಮ್ ಇಂಡಿಯಾದಲ್ಲಿ ಎಡಗೈ ದಾಂಡಿಗರ ದಂಡೇ ಇದ್ದು, ಈ ದಂಡಿಗೆ ವೈಭವ್ ಸೂರ್ಯವಂಶಿ ಕೂಡ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಿದೆ. ಅಂದರೆ ಐರ್ಲೆಂಡ್ ವಿರುದ್ಧದ 2 ಪಂದ್ಯಗಳಲ್ಲಿ ಸಂಪೂರ್ಣ ವಿಫಲರಾಗಿದ್ದ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಟ್ಟು ವೈಭವ್ ಸೂರ್ಯವಂಶಿಯನ್ನು ಆರಂಭಿಕನಾಗಿ ಕಣಕ್ಕಿಳಿಸಬಹುದು.

ಆರು ಎಡಗೈ ದಾಂಡಿಗರು:

ವೈಭವ್ ಸೂರ್ಯವಂಶಿಯನ್ನು ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ಗೆ ಸೇರಿಸಿದರೆ ಆಡುವ ಬಳಗದಲ್ಲಿ 6 ಮಂದಿ ಲೆಫ್ಟ್ ಹ್ಯಾಂಡ್​ ಬ್ಯಾಟರ್​ಗಳು ಕಾಣಿಸಿಕೊಳ್ಳಬಹುದು. ಅವರೆಂದರೆ…

  1. ವೈಭವ್ ಸೂರ್ಯವಂಶಿ
  2. ಅಭಿಷೇಕ್ ಶರ್ಮಾ
  3. ಇಶಾನ್ ಕಿಶನ್
  4. ತಿಲಕ್ ವರ್ಮಾ
  5. ಶಿವಂ ದುಬೆ
  6. ಅಕ್ಷರ್ ಪಟೇಲ್

ಒಂದು ವೇಳೆ ಅಕ್ಷರ್ ಪಟೇಲ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಲ್​ರೌಂಡರ್ ಆಗಿ ಕಣಕ್ಕಿಳಿಸಿದರೆ ಅವರು ಕೂಡ ಎಡಗೈ ದಾಂಡಿಗ ಎಂಬುದು ಇಲ್ಲಿ ಉಲ್ಲೇಖಾರ್ಹ.

ಅಂದರೆ ಸಂಜು ಸ್ಯಾಮ್ಸನ್ ಅವರನ್ನು ಆಡುವ ಬಳಗದಿಂದ ಕೈ ಬಿಟ್ಟರೆ ಶ್ರೇಯಸ್ ಅಯ್ಯರ್ ಮಾತ್ರ ಬಲಗೈ ದಾಂಡಿಗನಾಗಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿಯೇ ಆಂಗ್ಲರ ವಿರುದ್ಧ ಟೀಮ್ ಇಂಡಿಯಾ ಎಡಗೈ ಪ್ರಯೋಗ ನಡೆಸಲಿದೆಯಾ ಎಂಬುದೇ ಈಗ ಕುತೂಹಲ.

ಹೇಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11?

ಮೊದಲ ತಿಳಿಸಿದಂತೆ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಆಗಿ ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಆಡಿದರೆ, ಐದನೇ ಕ್ರಮಾಂಕದಲ್ಲಿ ಉಪನಾಯಕ ತಿಲಕ್ ವರ್ಮಾ ಬ್ಯಾಟ್ ಬೀಸಲಿದ್ದಾರೆ. ಇನ್ನು ಆಲ್​ರೌಂಡರ್​ಗಳಾಗಿ ಶಿವಂ ದುಬೆ, ಅಕ್ಷರ್ ಪಟೇಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ಬೌಲರ್​ಗಳಾಗಿ ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್ ಇರಲಿದ್ದು, ಇವರೊಂದಿಗೆ ಪರಿಪೂರ್ಣ ಸ್ಪಿನ್ನರ್​ನ ಕಣಕ್ಕಿಳಿಸಲು ಮುಂದಾದರೆ ರವಿ ಬಿಷ್ಣೋಯ್​ಗೆ ಚಾನ್ಸ್ ಸಿಗಲಿದೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  •  ಅಭಿಷೇಕ್ ಶರ್ಮಾ (ಆರಂಭಿಕ ಬ್ಯಾಟರ್)
  • ವೈಭವ್ ಸೂರ್ಯವಂಶಿ (ಆರಂಭಿಕ ಬ್ಯಾಟರ್)
  •  ಇಶಾನ್ ಕಿಶನ್ (ವಿಕೆಟ್ ಕೀಪರ್)
  • ಶ್ರೇಯಸ್ ಅಯ್ಯರ್ (ನಾಯಕ)
  •  ತಿಲಕ್ ವರ್ಮಾ (ಉಪನಾಯಕ)
  •  ಶಿವಂ ದುಬೆ (ಆಲ್ ರೌಂಡರ್)
  •  ಅಕ್ಷರ್ ಪಟೇಲ್ (ಆಲ್ ರೌಂಡರ್)
  •  ರವಿ ಬಿಷ್ಣೋಯ್ (ಸ್ಪಿನ್ನರ್)
  • ಹರ್ಷಿತ್ ರಾಣಾ (ವೇಗದ ಬೌಲರ್)
  •  ಅರ್ಷದೀಪ್ ಸಿಂಗ್ (ವೇಗದ ಬೌಲರ್)
  • ಪ್ರಿನ್ಸ್ ಯಾದವ್ (ವೇಗದ ಬೌಲರ್)

ಇದನ್ನೂ ಓದಿ: IND vs ENG ಟಿ20 ಸರಣಿ ಎಷ್ಟು ಗಂಟೆಗೆ ಶುರು? ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ, ಸೂರ್ಯಂಶ್ ಶೆಡ್ಗೆ.

Source link

RRB Recruitment 2026: ಆರ್‌ಆರ್‌ಬಿಯಲ್ಲಿ ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ಭರ್ಜರಿ ನೇಮಕಾತಿ; ಪದವೀಧರರು ಅರ್ಹರು! – Kannada News | RRB Section Controller Recruitment 2026: 119 Railway Jobs for Degree Holders, Apply Now!

ರೈಲ್ವೇ ಇಲಾಖೆಯಲ್ಲಿ ಉದ್ಯೋಗImage Credit source: Getty Images

ರೈಲ್ವೇ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ರೈಲ್ವೇ ನೇಮಕಾತಿ ಮಂಡಳಿಯು (RRB) ಈ ವರ್ಷದ ಮೂರನೇ ಕೇಂದ್ರೀಕೃತ ಉದ್ಯೋಗ ಅಧಿಸೂಚನೆಯನ್ನು (ಸಿಇಎನ್-2) ಹೊರಡಿಸಲು ಸಿದ್ಧತೆ ನಡೆಸಿದ್ದು, ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇದಕ್ಕಾಗಿ ಇನ್ನೆರಡು ದಿನಗಳಲ್ಲಿ ಕಿರು ಅಧಿಸೂಚನೆಯು ಪ್ರಕಟವಾಗುವ ನಿರೀಕ್ಷೆಯಿದೆ. ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಆರ್‌ಆರ್‌ಬಿ ವಲಯಗಳಲ್ಲೂ ಒಟ್ಟಾರೆ 119 ಹುದ್ದೆಗಳನ್ನು ಇದಕ್ಕಾಗಿ ಗುರುತಿಸಲಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ಆಕರ್ಷಕ ವೇತನ ಶ್ರೇಣಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ವಿಭಾಗದಲ್ಲಿ ಪದವಿ (Degree) ಮುಗಿಸಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಇದು 6ನೇ ಹಂತದ ವೇತನ ಶ್ರೇಣಿಯ ಹುದ್ದೆಗಳಾಗಿದ್ದು, ಆರಂಭಿಕ ವೇತನವು ಮಾಸಿಕ 35,400ರೂ. ಆಗಿರಲಿದೆ.

ವಯೋಮಿತಿ ಮತ್ತು ಸಡಿಲಿಕೆ ವಿವರಗಳು:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 33 ವರ್ಷ ವಯೋಮಾನವನ್ನು ನಿಗದಿಪಡಿಸಲಾಗಿದೆ. ಇದರೊಂದಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ವಯೋಸಡಿಲಿಕೆಯನ್ನು ಸಹ ನೀಡಲಾಗಿದೆ:

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC/ST): 5 ವರ್ಷ ಸಡಿಲಿಕೆ.
  • ಒಬಿಸಿ (OBC) ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ.
  • ಅಂಗವಿಕಲ (PwBD) ಅಭ್ಯರ್ಥಿಗಳಿಗೆ: 10 ವರ್ಷ ಸಡಿಲಿಕೆ.
  • ಒಬಿಸಿ ವರ್ಗದ ಅಂಗವಿಕಲರಿಗೆ: 13 ವರ್ಷ ಸಡಿಲಿಕೆ.
  • ಪರಿಶಿಷ್ಟ ಜಾತಿ/ಪಂಗಡದ ಅಂಗವಿಕಲರಿಗೆ: 15 ವರ್ಷಗಳ ವಯೋಸಡಿಲಿಕೆ ಇರಲಿದೆ.

ಅರ್ಜಿ ಶುಲ್ಕದ ವಿವರ:

ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮಹಿಳೆ, ಪರಿಶಿಷ್ಟ ಜಾತಿ/ಪಂಗಡ, ಮಾಜಿ ಸೈನಿಕರು, ಅಂಗವಿಕಲರು, ತೃತೀಯ ಲಿಂಗಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (EBC) 250 ರೂ. ಅರ್ಜಿ ಶುಲ್ಕ ಇರಲಿದೆ. ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 500ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಅರ್ಹ ಅಭ್ಯರ್ಥಿಗಳನ್ನು ಒಟ್ಟು ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ. ಆರಂಭಿಕ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಸಲಾಗುತ್ತದೆ. ಈ ಲಿಖಿತ ಪರೀಕ್ಷೆಯಲ್ಲಿ ಪ್ರಮುಖವಾಗಿ ಸಾಮಾನ್ಯ ಜ್ಞಾನ, ಸಾಮಾನ್ಯ ಗಣಿತ, ಲಾಜಿಕಲ್ ಮತ್ತು ಮೆಂಟಲ್ ರೀಸನಿಂಗ್ ವಿಷಯಗಳ ಕುರಿತಾದ ಪ್ರಶ್ನೆಗಳು ಇರಲಿವೆ. ಇದರಲ್ಲಿ ತೇರ್ಗಡೆಯಾದವರಿಗೆ ತದನಂತರ ದಾಖಲೆಗಳ ಪರಿಶೀಲನೆ (Document Verification) ಮತ್ತು ವೈದ್ಯಕೀಯ ಪರೀಕ್ಷೆ (Medical Examination) ನಡೆಯಲಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಮುಖ್ಯವಾಗಿ ದೃಷ್ಟಿ ಪರೀಕ್ಷೆಗಳನ್ನು (Eye Test) ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳು:

ಅಭ್ಯರ್ಥಿಗಳು ಕೇವಲ ಒಂದು ಆರ್‌ಆರ್‌ಬಿ ಮಂಡಳಿಯಿಂದ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಆನ್‌ಲೈನ್ ಲಿಂಕ್ ಮೂಲಕ ಲಾಗಿನ್ ಆಗಿ ಮೊದಲು ಒಂದು ಬಾರಿಯ ನೋಂದಣಿ (One Time Registration) ಪೂರ್ಣಗೊಳಿಸಬೇಕು. ನಂತರ ಆನ್‌ಲೈನ್ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು. ಅಭ್ಯರ್ಥಿಗಳಿಗೆ ಆಧಾರ್ ಧೃಢೀಕರಣ ವಿಧಾನವನ್ನು ಅನುಸರಿಸಲು ಸಲಹೆ ನೀಡಲಾಗಿದೆ. ಜುಲೈ 15 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಇರಲಿದ್ದು, ಆಸಕ್ತರು ಆಗಸ್ಟ್ 14 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Karnataka Voter List Revision: ಎಸ್​ಐಆರ್​ ಬಗ್ಗೆ ನಿಮಗೆ ಗೊಂದಲಗಳಿವೆಯೇ? ಇಲ್ಲಿದೆ ನಿಮ್ಮ ಪ್ರಶ್ನೆಗಳಿಗೆ ಉತ್ತರ – Kannada News | Karnataka Voter List Revision: What If Your House Is Locked, Key SIR FAQs Answered

ಎಸ್​ಐಆರ್​ ಬಗ್ಗೆ ನಿಮಗೆ ಗೊಂದಲಗಳಿವೆಯಾ? ಇಲ್ಲಿದೆ ನಿಮ್ಮ ಪ್ರಶ್ನೆಗಳಿಗೆ ಉತ್ತರ

ಬೆಂಗಳೂರು, ಜೂನ್ 30: ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ. ಜುಲೈ 29 ರವರೆಗೆ ನಡೆಯಲಿರುವ ಈ ಒಂದು ತಿಂಗಳ ಅಭಿಯಾನದಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಪ್ರತಿ ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರ ಪರಿಶೀಲಿಸಲಿದ್ದಾರೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಗೊಂದಲಗಳಿದ್ದರೆ, ಅವೆಲ್ಲಕ್ಕೂ ಉತ್ತರ ಇಲ್ಲಿದೆ.

1. ಮನೆ ಬೀಗ ಹಾಕಿದ್ದರೆ ಏನು ಮಾಡಲಾಗುತ್ತದೆ?

ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅಧಿಕಾರಿಗಳು ನಿಮ್ಮ ಮನೆಗೆ ಭೇಟಿ ನೀಡಿದಾಗ ನಿಮ್ಮ ಮನೆಗೆ ಬೀಗ ಹಾಕಿದ್ದರೆ, ಬಿಎಲ್‌ಓಗಳು ಗಣತಿ ನಮೂನೆಯನ್ನು (Enumeration Form) ಅಲ್ಲೇ ಬಿಟ್ಟು ಹೋಗುತ್ತಾರೆ. ನಂತರ ಆ ಫಾರ್ಮ್ ಸಂಗ್ರಹಿಸಲು ಕನಿಷ್ಠ 3 ಬಾರಿ ನಿಮ್ಮ ಮನೆಗೆ ಭೇಟಿ ನೀಡುತ್ತಾರೆ.

2. ಈಗಾಗಲೇ ಮತದಾರರಾಗಿದ್ದರೂ ಅರ್ಜಿ ಸಲ್ಲಿಸಬೇಕೇ?

ಹೌದು. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಸಹ ಬಿಎಲ್‌ಓ ಮನೆಗೆ ಬಂದಾಗ ಫಾರ್ಮ್ ಭರ್ತಿ ಮಾಡಿ ನೀಡಿ, ಅದಕ್ಕೆ ಪ್ರತಿಯಾಗಿ ರಸೀದಿಯನ್ನು ಪಡೆದುಕೊಳ್ಳಬೇಕು.

3. ಫಾರ್ಮ್​ ಜೊತೆ ದಾಖಲೆಗಳನ್ನು ನೀಡಲೇಬೇಕೆ?

ಇಲ್ಲ. ಚುನಾವಣಾ ಆಯೋಗದ ಸ್ಪಷ್ಟನೆ ಪ್ರಕಾರ ಗಣತಿ ನಮೂನೆ ಜೊತೆಗೆ ಆಧಾರ್ ಕಾರ್ಡ್, ಪಾಸ್‌ಪೋರ್ಟ್‌ನಂತಹ ಯಾವುದೇ ಪ್ರತ್ಯೇಕ ದಾಖಲೆಗಳನ್ನು ಸಬ್ಮಿಟ್ ಮಾಡುವ ಅಗತ್ಯವಿಲ್ಲ.

4. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದೇ?

ಹೌದು. ಬಿಎಲ್‌ಓಗಳಿಗಾಗಿ ಕಾಯಲು ಇಷ್ಟವಿಲ್ಲದಿದ್ದರೆ, ಚುನಾವಣಾ ಆಯೋಗದ ಅಧಿಕೃತ ವೋಟರ್ ಪೋರ್ಟಲ್ (Voter Portal) ಮೂಲಕ ಆನ್‌ಲೈನ್‌ನಲ್ಲೇ ಗಣತಿ ನಮೂನೆಯನ್ನು ಭರ್ತಿ ಮಾಡಬಹುದು.

ಇದನ್ನೂ ಓದಿ SIR ಬಗ್ಗೆ ಯಾರೂ ಗಾಬರಿಯಾಗುವುದು ಬೇಡ: ಜನರಿಗೆ ಧೈರ್ಯ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್

5. ಹಳೆಯ ಮತದಾರರ ಪಟ್ಟಿಯ ವಿವರ ನೆನಪಿಲ್ಲದಿದ್ದರೆ ಏನು ಮಾಡಬೇಕು?

ನಿಮ್ಮ ವೋಟರ್ ಐಡಿ (EPIC) ಸಂಖ್ಯೆ, ಹೆಸರು, ಅಥವಾ ಮತದಾನ ಕೇಂದ್ರದ (Polling Station) ಹೆಸರನ್ನು ಬಳಸಿ ಆನ್‌ಲೈನ್‌ನಲ್ಲಿ ನಿಮ್ಮ ಹಳೆಯ ವಿವರಗಳನ್ನು ಸುಲಭವಾಗಿ ಹುಡುಕಬಹುದು.

6. ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ?

ಆಗಸ್ಟ್ 5 ರಂದು ಮತದಾರರ ಪಟ್ಟಿಯ ಕರಡು ಪ್ರತಿ (Draft Electoral Roll) ಪ್ರಕಟವಾಗಲಿದೆ. ಅದರಲ್ಲಿ ಏನಾದರೂ ತಪ್ಪುಗಳಿದ್ದರೆ ಆಗಸ್ಟ್ 5 ರಿಂದ ಸೆಪ್ಟೆಂಬರ್ 4 ರ ನಡುವೆ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು. ಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 7 ರಂದು ಬಿಡುಗಡೆಯಾಗಲಿದೆ. ಸಹಾಯಕ್ಕಾಗಿ ಸಾರ್ವಜನಿಕರು 1950 ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಓಜಿ’ ಸೀಕ್ವೆಲ್​​ನಲ್ಲಿ ಪವನ್ ಕಲ್ಯಾಣ್‌ಗೆ ಪೂಜಾ ಹೆಗ್ಡೆ ಜೋಡಿ? – Kannada News | Pawan Kalyan’s OG 2: Pooja Hegde Rumored for Lead OG Universe Explained

ಪವನ್ ಕಲ್ಯಾಣ್ ನಟನೆಯ ‘ಓಜಿ’ ಚಿತ್ರದ ಸೀಕ್ವೆಲ್ ಬಗ್ಗೆ ಹೊಸದೊಂದು ಸುದ್ದಿ ಹರಿದಾಡುತ್ತಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಇದು ಕೇವಲ ಸಾಮಾಜಿಕ ಜಾಲತಾಣಗಳ ವದಂತಿಯಾಗಿದೆ. ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ‘ಓಜಿ’ ಮೊದಲ ಭಾಗದಲ್ಲಿ ಪ್ರಿಯಾಂಕಾ ಮೋಹನ್ ನಾಯಕಿಯಾಗಿದ್ದರು. ಆದರೆ ಅವರ ಪಾತ್ರವು ಚಿತ್ರದ ಮಧ್ಯದಲ್ಲೇ ಕೊನೆಗೊಳ್ಳುತ್ತದೆ. ಹೀಗಾಗಿ ಎರಡನೇ ಭಾಗಕ್ಕೆ ಪೂಜಾ ಹೆಗ್ಡೆ ಅವರನ್ನು ಪರಿಗಣಿಸಲಾಗುತ್ತಿದೆ ಎಂಬ ಸುದ್ದಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಅಧಿಕೃತವಾಗಿ ಘೋಷಣೆಯಾದ ‘ಓಜಿ’ ಯುನಿವರ್ಸ್’

ಇತ್ತೀಚೆಗೆ ‘ಓಜಿ ಯುನಿವರ್ಸ್’ ಬಗ್ಗೆ ಹೊಸ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿತ್ತು. ನಿರ್ದೇಶಕ ಸುಜೀತ್ ಮತ್ತು ಪವನ್ ಕಲ್ಯಾಣ್ ಕುಳಿತು ‘ಓಜಿ’ ಕಥೆ ಹುಟ್ಟಿದ ಬಗ್ಗೆ ಮಾತನಾಡಿದ್ದರು. ಚಿತ್ರಕ್ಕೆ ಸೀಕ್ವೆಲ್ ಬರೋ ಬಗ್ಗೆಯೂ ಘೋಷಣೆ ಮಾಡಲಾಗಿತ್ತು

ಪವನ್ ಕಲ್ಯಾಣ್ ಹೇಳಿದ್ದೇನು?

2025ರ ವಿಶೇಷ ಪ್ರದರ್ಶನವೊಂದರಲ್ಲಿ ಪವನ್ ಕಲ್ಯಾಣ್ ಸಿನಿಮಾ ಬಗ್ಗೆ ಮಾತನಾಡಿದ್ದರು. ‘ಯಾವುದೇ ಒಳ್ಳೆಯ ಕೆಲಸಕ್ಕೆ ಅತ್ಯುತ್ತಮ ತಂಡ ಬೇಕು. ಓಜಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಯಶಸ್ಸು ಅಥವಾ ಕಲೆಕ್ಷನ್ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಸಿನಿಮಾ ಮಾತ್ರ ಅದ್ಭುತ ವೀಕ್ಷಣೆಯ ಅನುಭವ ನೀಡುತ್ತದೆ. ನಾವು ಓಜಿ ಯುನಿವರ್ಸ್ ಬಗ್ಗೆ ಎದುರು ನೋಡುತ್ತಿದ್ದೇವೆ. ಇದು ಸಂಪೂರ್ಣವಾಗಿ ಸುಜೀತ್ ಅವರ ಸೃಷ್ಟಿ’ ಎಂದು ಪವನ್ ಕಲ್ಯಾಣ್ ಚಿತ್ರತಂಡವನ್ನು ಶ್ಲಾಘಿಸಿದ್ದರು.

ಇದನ್ನೂ ಓದಿ: ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್

ಪೂಜಾ ಹೆಗ್ಡೆ ಮುಂಬರುವ ಚಿತ್ರಗಳು

ನಟಿ ಪೂಜಾ ಹೆಗ್ಡೆ ಮುಂದಿನ ದಿನಗಳಲ್ಲಿ ದುಲ್ಕರ್ ಸಲ್ಮಾನ್ ಜೊತೆ ‘DQ41’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಎಸ್‌ಎಲ್‌ವಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸುಧಾಕರ್ ಚೆರುಕೂರಿ ನಿರ್ಮಿಸುತ್ತಿದ್ದಾರೆ. ಇದು ಈ ಸಂಸ್ಥೆಯ 10ನೇ ಸಿನಿಮಾವಾಗಿದೆ. ಈ ಚಿತ್ರದ ಬಗ್ಗೆಯೂ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ?: ಜಿಬಿಎ ಸಭೆಯಲ್ಲಿ ಅಧಿಕಾರಿಗಳ ಮೇಲೆ ಸಚಿವ ಕೃಷ್ಣಭೈರೇಗೌಡ ಗರಂ – Kannada News | Bengaluru City Development Minister Krishna Byre Gowda Raps GBA Officials Over Misleading Data

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡImage Credit source: Krishna Byre Gowda Facebook

ಬೆಂಗಳೂರು, ಜೂನ್​​ 30: ನಾಯಿಗಳ ಸಂತಾನ ಹರಣ ಕಾರ್ಯಕ್ರಮದ ವಿಚಾರವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅಧಿಕಾರಿಗಳನ್ನು ತರಾಟೆಗೆ ಪಡೆದ ಘಟನೆ ನಡೆದಿದೆ. ಜಿಬಿಎ ಸಭೆಗೆ ಅಂಕಿಅಂಶಗಳು ಇಲ್ಲದೆ ಬರಿಗೈನಲ್ಲಿ ಬಂದ ಆಫೀಸರ್​​ ವಿರುದ್ಧ ಗರಂ ಆದ ಸಚಿವರು, ಪಶುಸಂಗೋಪನೆ ಇಲಾಖೆಯಲ್ಲಿ 19 ಜನ ಅಧಿಕಾರಿಗಳಿದ್ದು ಸಚಿವರ ಸಭೆಗೆ ಕನಿಷ್ಠ ಡಾಟಾವೂ ಇಲ್ಲದೇ ಬಂದಿದ್ದೀರ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 20 ವರ್ಷದಿಂದಲೂ ಸಂತಾನ ಹರಣ ಮಾಡಿಯೂ ನಾಯಿಗಳ ಸಂಖ್ಯೆ ಅಷ್ಟೇ ಇರಲು ಹೇಗೆ ಸಾಧ್ಯ? ನಾನೇನು ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ? ಎಂದು ಅಧಿಕಾರಿಗಳ ಅಸಂಬದ್ಧ ಉತ್ತರಕ್ಕೆ ಸಚಿವರು ಕಿಡಿ ಕಾರಿದ್ದಾರೆ.

ಇರುವ ನಾಯಿಗಳಿಗಿಂತ ಹೆಚ್ಚಾಗಿ ಸಂತಾನಹರಣ ಚಿಕಿತ್ಸೆ!

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಚರ್ಚೆ ಸಂಬಂಧ ಮಾಹಿತಿ ನೀಡಿದ ಸಚಿವರು, ಬೀದಿ ನಾಯಿಗಳ ಸಮಸ್ಯೆಗೆ ಕಾನೂನಾತ್ಮಕ ಪರಿಹಾರ ಮತ್ತು ನಗರದಲ್ಲಿ ಗಿಡ ನೆಡುವ ಕಾರ್ಯದ ವಿಚಾರವಾಗಿ ಸುದೀರ್ಘ ಚರ್ಚೆ ಆಗಿದೆ. ನಗರದಲ್ಲಿ ಬೀದಿ ನಾಯಿಗಳ ಸಮಸ್ಯೆ ಕಳೆದ 50 ವರ್ಷಗಳಿಂದ ಇದ್ದು, ನಾನು ಕಾಲೇಜು ದಿನಗಳಿಂದ ಈ ಸಮಸ್ಯೆ ನೋಡುತ್ತಿದ್ದೇನೆ. 2000ನೇ ಇಸವಿಯಿಂದಲೂ ನಾಯಿಗಳ ಸಂತಾನ ಹರಣ ಚಿಕಿತ್ಸೆ ಆಗುತ್ತಿದೆ. ಈ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದು, ಬಿಬಿಎಂಪಿ ಆದ ಬಳಿಕ 8.80 ಲಕ್ಷ ನಾಯಿಗಳಿಗೆ ಮತ್ತು 2016ರಿಂದ 2023ರ ವರೆಗೆ 3.33 ಲಕ್ಷ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಆಗಿದೆ ಎಂದಿದ್ದಾರೆ. 2019ರ ಸರ್ವೆ ಪ್ರಕಾರ 3.10 ಲಕ್ಷ, 2023ರ ಸರ್ವೆ ಪ್ರಕಾರ 2.79 ಲಕ್ಷ ಬೀದಿ ನಾಯಿಗಳು ಇವೆ. ಇವರು ಹೇಳುತ್ತಿರುವ ಪ್ರಕಾರ ಇರುವ ನಾಯಿಗಳಿಗಿಂತ ಹೆಚ್ಚಾಗಿ ಸಂತಾನಹರಣ ಚಿಕಿತ್ಸೆ ನಡೆದಿದ್ದು, ಈ ಕುರಿತಾಗಿ ಅಧಿಕಾರಿಗಳ ಬಳಿ ಸಮರ್ಪಕ ಮಾಹಿತಿ ಇಲ್ಲ. ಕಳೆದ 5 ವರ್ಷಗಳಲ್ಲಿ 42 ಕೋಟಿ ಇದಕ್ಕಾಗಿ ಖರ್ಚು ಮಾಡಿದ್ದಾರೆ . ಜನರ ತೆರಿಗೆ ದುಡ್ಡು ಖರ್ಚಾಗುತ್ತಲೇ ಇದೆ. ಆದರೆ ನಾಯಿಗಳ ಸಂತಾನ ಮುಂದುವರೆದಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರ ಬಗ್ಗೆ ಸಚಿವ ಕೃಷ್ಣಭೈರೇಗೌಡರ ಅಂತರಾಳದ ನುಡಿಗಳು

ಸಂತಾನಹರಣ ಚಿಕಿತ್ಸೆ ಸಂಖ್ಯೆ ದ್ವಿಗುಣಕ್ಕೆ ಸೂಚನೆ

ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಸಂಖ್ಯೆ ದ್ವಿಗುಣಕ್ಕೆ ಸೂಚಿಸಿದ್ದೇನೆ. ಇದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಿ ಅಂತಲೂ ಹೇಳಿದ್ದೇನೆ. ಜೊತೆಗೆ ಬೇರೆ ಸಂಸ್ಥೆಗಳನ್ನು ಆಹ್ವಾನ ಮಾಡಬಹುದು. ವೈದ್ಯಕೀಯ ಸಿಬ್ಬಂದಿ ಸಾಲದೇ ಹೋದರೆ ಹೊರಗುತ್ತಿಗೆ ಮೇಲೆ ಮಾಡಿ ಎಂದೂ ಅಧಿಕಾರಿಗಳಿಗೆ ತಿಳಿಸಿರೋದಾಗಿ ಸಚಿವರು ಹೇಳಿದ್ದಾರೆ.

‘ನೆಟ್ಟ ಗಿಡಗಳು ಇಲ್ಲಿ ಹೋದವು?’

2008ರಿಂದ 20 ಲಕ್ಷ ಗಿಡ ನೆಟ್ಟಿದ್ದೇವೆ ಎಂದು ಹೇಳುತ್ತಾರೆ. ಮರಗಣತಿ ಪ್ರಕಾರ ಎಷ್ಟು ಆಗಿದೆ ಅಂತ ಕೇಳಿದರೆ 9 ಲಕ್ಷ ಮರಗಳು ಇವೆಯೆಂದು ಇವರೇ ಹೇಳುತ್ತಿದ್ದಾರೆ. ಹಾಗಾದರೆ ನೆಟ್ಟ ಗಿಡಗಳು ಎಲ್ಲಿ ಹೋದವು? ಎಂದೂ ಸಚಿವ ಕೃಷ್ಣಭೈರೇಗೌಡ ಪ್ರಶ್ನಿಸಿದ್ದಾರೆ. ಒಂದು ಗಿಡ ಬೆಳೆಸಲು 2,300 ರೂಪಾಯಿ ಖರ್ಚಾಗುತ್ತೆ. ಅರಣ್ಯ ಕಾರ್ಯಕ್ರಮದಲ್ಲಿ ನೆಟ್ಟರೆ 3,300 ರೂ. ವೆಚ್ಚ ಮಾಡುತ್ತೇವೆ. ಗುಂಡಿ ತೊಡೋಕೆ 300 ರೂ., 1064 ರೂ. ನೀರು ಹಾಕಲು, ಟ್ರೀ ಗಾರ್ಡ್ ಹಾಕೋಕೆ 452 ರೂ. ಸೇರಿ 3 ವರ್ಷದ ನಿರ್ವಹಣೆಗೆ ಹಣ ವ್ಯಯಮಾಡಲಾಗುತ್ತೆ. 2.5 ಅಡಿ ಆಳ 2.5 ಅಡಿ ಉದ್ದ ತೆಗೆದು ಗಿಡ ನೆಡಬೇಕು ಎಂದಿದೆ. ಆದರೆ ನನ್ನ ಕ್ಷೇತ್ರದಲ್ಲಿ ಈ ರೀತಿ ನೆಟ್ಟಿರೋದನ್ನು ನಾನು ನೋಡಿಲ್ಲ ಎಂದು ಸಚಿವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪೋರ್ಚುಗಲ್ ಪರ ಕಣಕ್ಕಿಳಿಯಲಿದ್ದಾರೆ ಆಸ್ಟ್ರೇಲಿಯಾ ಕ್ರಿಕೆಟಿಗ! – Kannada News | Australian cricketer Moises Henriques to play for Portugal

ಆಸ್ಟ್ರೇಲಿಯಾದ ಆಲ್-ರೌಂಡರ್ ಮೊಯ್ಸೆಸ್ ಹೆನ್ರಿಕ್ಸ್ ಪೋರ್ಚುಗಲ್ ಪರ ಹೊಸ ಇನಿಂಗ್ಸ್ ಆರಂಭಿಸಲು ನಿರ್ಧರಿಸಿದ್ದಾರೆ. ಅಂದರೆ ಆಸ್ಟ್ರೇಲಿಯಾ ಕ್ರಿಕೆಟ್ ತೊರೆದು, ಪೋರ್ಚುಗಲ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಮುಂದಾಗಿದ್ದಾರೆ. ಅದರಂತೆ ಮುಂಬರುವ ಆಗಸ್ಟ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಅರ್ಹತಾ ಪಂದ್ಯದಲ್ಲಿ ಮೊಯ್ಸೆಸ್ ಹೆನ್ರಿಕ್ಸ್ ಪೋರ್ಚುಗಲ್ ಪರ ಕಣಕ್ಕಿಳಿಯಲಿದ್ದಾರೆ. (PC: getty images)

Source link

Typist Recruitment 2026: ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ; ಬೆರಳಚ್ಚುಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನ! – Kannada News | Chikkamagaluru Court Typist Recruitment 2026: Apply Online for 6 Vacancies!

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ. ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಬೆರಳಚ್ಚುಗಾರರ (Typist) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಅವಧಿಯೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ನೇಮಕಾತಿ ಅಧಿಸೂಚನೆಯ ಪ್ರಕಾರ, ಒಟ್ಟು 06 ಬೆರಳಚ್ಚುಗಾರರ (Typist) ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 34,100 ರಿಂದ 67,600 ರೂ. ವರೆಗೆ ಮತ್ತು ಇತರ ಭತ್ಯೆಗಳನ್ನು ಒಳಗೊಂಡಂತೆ ಆಕರ್ಷಕ ಸಂಬಳ ಇರಲಿದೆ.

ಹುದ್ದೆಗಳ ವರ್ಗೀಕರಣ:

ಒಟ್ಟು 06 ಹುದ್ದೆಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ:

  • ಸಾಮಾನ್ಯ ಅರ್ಹತೆ (ಸಾ.ಅ.): 02 ಹುದ್ದೆಗಳು (ಮಹಿಳಾ ಅಭ್ಯರ್ಥಿ – 01, ಗ್ರಾಮೀಣ ಅಭ್ಯರ್ಥಿ – 01)
  • ಪರಿಶಿಷ್ಟ ಪಂಗಡ (ಪ.ಪಂ.): 01 ಹುದ್ದೆ (ಅಂ.ವಿ. – 01)
  • ಪ್ರವರ್ಗ-1: 01 ಹುದ್ದೆ (ಮಹಿಳಾ ಅಭ್ಯರ್ಥಿ – 01)
  • ಪ್ರವರ್ಗ-2ಎ: 01 ಹುದ್ದೆ (ಗ್ರಾಮೀಣ ಅಭ್ಯರ್ಥಿ – 01)
  • ಪ್ರವರ್ಗ-2ಬಿ: 01 ಹುದ್ದೆ (ಅಂ.ವಿ. ದೃಷ್ಟಿಮಾಂದ್ಯ/ದೃಷ್ಟಿದೋಷ – 01)

(ಗಮನಿಸಿ: ನಿಯಮಗಳ ಪ್ರಕಾರ ಅರ್ಹ ಮಹಿಳಾ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಆ ಸ್ಥಾನಗಳಿಗೆ ನಿಯಮಾನುಸಾರ ಅದೇ ವರ್ಗದ ಇತರ ಅರ್ಹ ಪುರುಷ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು).

ಇದನ್ನೂ ಓದಿ : ಕೇಂದ್ರದ 4,500 ಎಲೆಕ್ಟ್ರಿಕ್ ಬಸ್‌ಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲವೇಕೆ: ಕಾರಣ ಬಿಚ್ಚಿಟ್ಟ ತೇಜಸ್ವಿ ಸೂರ್ಯ

ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ಲಿಂಕ್:

  • ಅಭ್ಯರ್ಥಿಗಳು ಆನ್‌ಲೈನ್ ಲಿಂಕ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ.
  • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 29.06.2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28.07.2026 (ರಾತ್ರಿ 11.59 ರವರೆಗೆ ಮಾತ್ರ)

ಅಧಿಕೃತ ವೆಬ್‌ಸೈಟ್‌ ಲಿಂಕ್:

ಅಭ್ಯರ್ಥಿಗಳು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ chikkamagaluru.dcourts.gov.in/notice-category/recruitments/ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ ಮತ್ತು ಅಧಿಕೃತ ಪ್ರಕಟಣೆಯನ್ನು ಓದಲು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:51 pm, Tue, 30 June 26

Source link

ಬೆಳಗ್ಗೆ ಎದ್ದ ತಕ್ಷಣ ಏನ್ ಮಾಡ್ಬೇಕು? ನಿಮ್ಮ ದಿನಚರಿ ಆರೋಗ್ಯಕರವಾಗಿ ಆರಂಭವಾಗಲು ಈ 7 ಅಭ್ಯಾಸಗಳನ್ನು ರೂಢಿಸಿಕೊಳ್ಳಿ – Kannada News | Want More Energy? Follow These Morning Habits After Waking Up

ಇಂದಿನ ವೇಗದ ಜೀವನಶೈಲಿಯಲ್ಲಿ ಅನೇಕರು ಬೆಳಗಿನ ಸಮಯವನ್ನು ನಿರ್ಲಕ್ಷಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ನಿದ್ರೆಯಿಂದ ಎದ್ದ ನಂತರದ ಮೊದಲ 60– 90 ನಿಮಿಷಗಳು ದಿನದ ಉಳಿದ ಸಮಯದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಮಹತ್ತರ ಪರಿಣಾಮ ಬೀರುತ್ತವೆ. ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ನ್ಯೂರಾಲಜಿಸ್ಟ್ ಡಾ. ಸುಧೀರ್ ಕುಮಾರ್ (Dr Sudhir Kumar M) ಅವರು ಹೇಳುವ ಪ್ರಕಾರ, ಈ ಸಮಯದಲ್ಲಿ ಅನುಸರಿಸುವ ಸರಿಯಾದ ಆರೋಗ್ಯಕರ ಅಭ್ಯಾಸಗಳು ದೇಹದ ಜೈವಿಕ ಗಡಿಯಾರ (Circadian Rhythm) ಅನ್ನು ಸಮತೋಲನಗೊಳಿಸಿ, ಶಕ್ತಿ, ಏಕಾಗ್ರತೆ ಮತ್ತು ಉತ್ತಮ ನಿದ್ರೆಗೆ ಸಹಕಾರಿಯಾಗುತ್ತವೆ.

ಸೂರ್ಯನ ಬೆಳಕನ್ನು ಪಡೆಯಿರಿ

ಎದ್ದ 30–60 ನಿಮಿಷಗಳೊಳಗೆ 10– 20 ನಿಮಿಷ ನೈಸರ್ಗಿಕ ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯಿರಿ. ಇದು ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್‌ನ ಆರೋಗ್ಯಕರ ಬಿಡುಗಡೆಯನ್ನು ಉತ್ತೇಜಿಸಿ, ದಿನವಿಡೀ ಚೈತನ್ಯದಿಂದ ಇರಲು ಸಹಾಯ ಮಾಡುತ್ತದೆ.

ಎದ್ದ ಕೂಡಲೇ ಕಾಫಿ ಕುಡಿಯಬೇಡಿ

ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಚಹಾ ಕುಡಿಯುವುದನ್ನು ತಪ್ಪಿಸಿ. ಕನಿಷ್ಠ 60–90 ನಿಮಿಷಗಳ ನಂತರ ಸೇವಿಸಿದರೆ ದೇಹದ ಸಹಜ ಶಕ್ತಿ ಮಟ್ಟ ಸಮತೋಲನದಲ್ಲಿರುತ್ತದೆ.

ಮೊದಲು ನೀರು ಕುಡಿಯಿರಿ

ರಾತ್ರಿಯ ನಿದ್ರೆಯ ನಂತರ ದೇಹದಲ್ಲಿ ಸ್ವಲ್ಪ ನೀರಿನ ಕೊರತೆ ಉಂಟಾಗುತ್ತದೆ. ಆದ್ದರಿಂದ ಬೆಳಗ್ಗೆ ಸುಮಾರು 500 ಮಿ.ಲೀ. ನೀರು ಕುಡಿಯುವುದು ದೇಹವನ್ನು ಚುರುಕುಗೊಳಿಸುತ್ತದೆ.

ಲಘು ವ್ಯಾಯಾಮ ಮಾಡಿ

ಸ್ವಲ್ಪ ಸ್ಟ್ರೆಚಿಂಗ್ ಅಥವಾ ಚಿಕ್ಕ ವಾಕಿಂಗ್ ಕೂಡ ಸಾಕು. ಇದು ಮೆದುಳಿಗೆ ದಿನ ಆರಂಭವಾಗಿದೆ ಎಂಬ ಸಂದೇಶ ನೀಡಿ, ಏಕಾಗ್ರತೆ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಬೆಳಗ್ಗೆ ಬೇಗ ಏಳುವುದರಿಂದ ನೀವು ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು

ಮೊಬೈಲ್ ಬಳಕೆ ಮಾಡಬೇಡಿ

ಎದ್ದ ತಕ್ಷಣ ಸಾಮಾಜಿಕ ಜಾಲತಾಣ ಅಥವಾ ಇಮೇಲ್‌ಗಳನ್ನು ನೋಡುವುದು ಒತ್ತಡವನ್ನು ಹೆಚ್ಚಿಸಬಹುದು. ಮೊದಲ ಒಂದು ಗಂಟೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ.

ಸ್ನೂಜ್ ಬಟನ್ ಒತ್ತಬೇಡಿ

ಮತ್ತೆ ಮತ್ತೆ ಅಲಾರಂ ಸ್ನೂಜ್ ಮಾಡುವುದರಿಂದ ಮೆದುಳು ಗೊಂದಲಕ್ಕೊಳಗಾಗಿ, ಹೆಚ್ಚು ದಣಿವು ಮತ್ತು ಮಂಕುತನ ಉಂಟಾಗಬಹುದು.

ಆರೋಗ್ಯಕರ ಉಪಹಾರವನ್ನು ಆಯ್ಕೆ ಮಾಡಿ

ಸಕ್ಕರೆ ಹೆಚ್ಚಿರುವ ಆಹಾರಗಳ ಬದಲು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿರುವ ಉಪಹಾರ ಸೇವಿಸುವುದು ದಿನವಿಡೀ ಶಕ್ತಿ ನೀಡುತ್ತದೆ.

ಈ ಸರಳ ಅಭ್ಯಾಸಗಳನ್ನು ಪ್ರತಿದಿನ ಪಾಲಿಸಿದರೆ ಉತ್ತಮ ಆರೋಗ್ಯ, ಸ್ಥಿರ ಮನಸ್ಥಿತಿ ಮತ್ತು ನಿದ್ರೆ ಚೆನ್ನಾಗಿ ಬರಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SIR ಬಗ್ಗೆ ಯಾರೂ ಗಾಬರಿಯಾಗುವುದು ಬೇಡ: ಜನರಿಗೆ ಧೈರ್ಯ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್

ಹಾಸನ, ಜೂನ್ 30: ಹಾಸನದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (SIR) ಪ್ರಕ್ರಿಯೆಯು ಆರಂಭವಾಗಿದ್ದು, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಮನೆಯಿಂದಲೇ ಇದಕ್ಕೆ ಚಾಲನೆ ದೊರೆತಿದೆ. ಪ್ರಕ್ರಿಯೆಯ ಕುರಿತು ಆರಂಭದಲ್ಲಿ ತನಗೂ ಭಯವಿತ್ತು ಎಂದು ಹೇಳಿರುವ ಬಾನು ಮುಷ್ತಾಕ್, ಇದೊಂದು ಕಠಿಣ ಪ್ರಕ್ರಿಯೆ ಎಂಬ ಫೋಬಿಯಾ ರಾಜಕೀಯ ಕಾರ್ಯಕರ್ತರ ಮತ್ತು ಪ್ರಮುಖರ ಮಾತಿನಿಂದಾಗಿ ಸಾರ್ವಜನಿಕರಲ್ಲಿ ಸೃಷ್ಟಿಯಾಗಿದೆ ಎಂದಿದ್ದಾರೆ. ಆದರೆ, ಪ್ರಕ್ರಿಯೆಗೆ ಒಳಗಾದ ನಂತರ ತಮ್ಮ ಭಯ ನಿವಾರಣೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳೊಂದಿಗೆ ಎನ್ಯೂಮರೇಷನ್ ಫಾರ್ಮ್ ಭರ್ತಿ ಮಾಡಿದಾಗ, ಕೇವಲ ಎರಡು ದಾಖಲೆಗಳು, ಅಂದರೆ ಆಧಾರ್ ಕಾರ್ಡ್ ಮತ್ತು ಹಳೆಯ ಮತದಾರರ ಗುರುತಿನ ಚೀಟಿ ಮಾತ್ರ ಬೇಕಾಗಿತ್ತು. ಈ ಪ್ರಕ್ರಿಯೆ ಬಹಳ ಸುಲಭ ಮತ್ತು ಸರಳವಾಗಿದ್ದು, ಯಾವುದೇ ನಾಗರಿಕರು ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಅಧಿಕಾರಿಗಳು ತಾಳ್ಮೆಯಿಂದ ಮತ್ತು ಸಂಯಮದಿಂದ ಜನರಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳಿಗೆ ಬಾನು ಮುಷ್ತಾಕ್ ಮನವಿ ಮಾಡಿದ್ದಾರೆ. ಒಂದು ವೇಳೆ ತೊಂದರೆ ಎದುರಾದಲ್ಲಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಹೆಚ್.ಕೆ ಸುರೇಶ್ ಪ್ರಮಾಣ! – Kannada News | Cross Voting Allegations: Belur BJP MLA HK Suresh Takes Oath at Dharmasthala Manjunatha Temple

ಮಂಗಳೂರು, ಜೂನ್ 30: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡಮತದಾನ (ಕ್ರಾಸ್ ವೋಟಿಂಗ್) ನಡೆದಿದೆ ಎಂಬ ಆರೋಪಗಳ ಬೆನ್ನಲ್ಲೇ, ಹಾಸನ ಜಿಲ್ಲೆಯ ಬೇಲೂರು ಕ್ಷೇತ್ರದ ಬಿಜೆಪಿ ಶಾಸಕ ಹೆಚ್.ಕೆ.ಸುರೇಶ್ ಅವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ.

ಇಂದು ಮಂಜುನಾಥ ಸ್ವಾಮಿಯ ದರ್ಶನ ಪಡೆದ ಶಾಸಕರು, ದೇವರ ಮುಂದೆ ಮುಷ್ಟಿ ಕಾಣಿಕೆ ಹಾಕಿ ಪ್ರಾರ್ಥಿಸಿದರು. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ. ನಾನು ಈಗಲೂ, ಮುಂದೆಯೂ ಬಿಜೆಪಿಯಲ್ಲೇ ಇರುತ್ತೇನೆ. ಶಾಸಕನಾಗಿ ಆಯ್ಕೆಯಾದಾಗಿನಿಂದ ಕಾಯಾ ವಾಚಾ ಮನಸಾ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂದು ದೇವರ ಎದುರು ಅಡ್ಡಮತದಾನದ ಅಪವಾದವನ್ನು ನಿರಾಕರಿಸಿ ಸುರೇಶ್ ಭಾವನಾತ್ಮಕವಾಗಿ ಪ್ರಮಾಣ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version