ಶರಾವತಿ ವಿದ್ಯುದಾಗಾರಕ್ಕೆ ನುಗ್ಗಿದ ನೀರು: 7ನೇ ಯುನಿಟ್‌ನಲ್ಲಿ ಭಾರೀ ಅವಘಡ – Kannada News | Technical Snag at Sharavathi Hydroelectric Power Project: Power Generation Briefly Halted After Penstock Pipe Leak

ಶಿವಮೊಗ್ಗ, ಜೂನ್ 26: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಬಳಿ ಇರುವ ಪ್ರಸಿದ್ಧ ಶರಾವತಿ ಜಲವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಗುರುವಾರ ನಿರ್ವಹಣಾ ಕಾರ್ಯದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಲಿಂಗನಮಕ್ಕಿ ಜಲಾಶಯದ ವ್ಯಾಪ್ತಿಗೆ ಬರುವ ಈ ವಿದ್ಯುದಾಗಾರದ 7ನೇ ಘಟಕದಲ್ಲಿ ನಿಯಮಿತ ದುರಸ್ತಿ ಕಾರ್ಯ ಪ್ರಗತಿಯಲ್ಲಿತ್ತು. ಈ ವೇಳೆ ಪೈಪ್‌ನಲ್ಲಿದ್ದ ನೀರನ್ನು ಖಾಲಿ ಮಾಡುವಾಗ ಬೃಹತ್ ಗಾತ್ರದ ಪೆನ್‌ಸ್ಟಾಕ್ ಪೈಪ್‌ಗಳ ಡ್ರೈನ್ ವಾಲ್ವ್‌ನಲ್ಲಿ (Drain Valve) ಇದ್ದಕ್ಕಿದ್ದಂತೆ ಲೀಕೇಜ್ ಉಂಟಾಗಿ ಭಾರಿ ಪ್ರಮಾಣದ ನೀರು ಒಳಗೆ ನುಗ್ಗಿದೆ.

ಡ್ರೈನ್ ವಾಲ್ವ್ ಲೀಕೇಜ್ ಆದ ಪರಿಣಾಮವಾಗಿ ಇಡೀ ಟರ್ಬೈನ್ ಮತ್ತು ನೆಲಮಾಳಿಗೆಯ (Basement) ಸುತ್ತಮುತ್ತ ಸುಮಾರು ಒಂದೂವರೆ ಅಡಿಯಷ್ಟು ನೀರು ಶೇಖರಣೆಯಾಗಿತ್ತು. ಏಕಾಏಕಿ ನೀರು ನುಗ್ಗಿದ್ದರಿಂದ ಇಡೀ ಪ್ಲಾಂಟ್‌ನಲ್ಲಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸುರಕ್ಷತಾ ಸಿಬ್ಬಂದಿ ಮತ್ತು ಅಧಿಕಾರಿಗಳು, ಇಡೀ ವಿದ್ಯುದಾಗಾರದ ಸುರಕ್ಷತೆಯ ದೃಷ್ಟಿಯಿಂದ ಚಾಲನೆಯಲ್ಲಿದ್ದ ಘಟಕ 1, 8 ಮತ್ತು 9ರ ವಿದ್ಯುತ್ ಉತ್ಪಾದನೆಯನ್ನು ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

ಹಂತ ಹಂತವಾಗಿ ಪುನರಾರಂಭಗೊಂಡ ವಿದ್ಯುತ್ ಉತ್ಪಾದನೆ

ಘಟನೆ ತಿಳಿಯುತ್ತಿದ್ದಂತೆಯೇ ಕೆಪಿಸಿಎಲ್ (KPCL) ಹಿರಿಯ ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರ ತಂಡ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಕಾರ್ಯಾಚರಣೆ ನಡೆಸಿತು. ಯಶಸ್ವಿ ಕಾರ್ಯಾಚರಣೆಯ ಮೂಲಕ ನೀರಿನ ಹರಿವನ್ನು ತಡೆಗಟ್ಟಿದ ಅಧಿಕಾರಿಗಳು, ಕೆಲವೇ ನಿಮಿಷಗಳಲ್ಲಿ ನೆಲಮಾಳಿಗೆಯಲ್ಲಿ ಶೇಖರಣೆಯಾಗಿದ್ದ ನೀರನ್ನು ಪಂಪ್‌ಗಳ ಮೂಲಕ ಸಂಪೂರ್ಣವಾಗಿ ಖಾಲಿ ಮಾಡಿದರು. ಬಳಿಕ ಇಡೀ ಜಲವಿದ್ಯುದಾಗಾರದ ಸುರಕ್ಷತೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ಯಾವುದೇ ದೊಡ್ಡ ಮಟ್ಟದ ಹಾನಿ ಸಂಭವಿಸದ ಕಾರಣ, ನಿನ್ನೆ ಸಂಜೆ ವೇಳೆಗೆ ಹಂತ ಹಂತವಾಗಿ ಸ್ಥಗಿತಗೊಂಡಿದ್ದ ಎಲ್ಲಾ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಯಶಸ್ವಿಯಾಗಿ ಪುನರಾರಂಭಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ದಳಪತಿ ವಿಜಯ್ ಭೇಟಿಯಾದ ನಟಿ ರಮ್ಯಾ; ಫೋಟೋ ವೈರಲ್ – Kannada News | CM Joseph Vijay Meets Ramya Subramanian: Actress Praises Unchanged Persona

ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು (Vijay) ನಟಿ ಮತ್ತು ಖ್ಯಾತ ವಿಜೆ ರಮ್ಯಾ ಸುಬ್ರಮಣಿಯನ್ ಭೇಟಿಯಾಗಿದ್ದಾರೆ. ಸಿಎಂ ಭೇಟಿಯಾದ ಫೋಟೋವನ್ನು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಜಯ್ ಅವರಿಗೆ ತಡವಾಗಿ ಜನ್ಮದಿನದ ಶುಭಾಶಯ ಕೋರಿ ದೊಡ್ಡ ಪೋಸ್ಟ್ ಒಂದನ್ನು ಬರೆದುಕೊಂಡಿದ್ದಾರೆ. ಮುಖ್ಯಮಂತ್ರಿಯಾದ ಮೇಲೂ ವಿಜಯ್ ಅವರ ಗುಣ ಬದಲಾಗಿಲ್ಲ ಎಂದು ರಮ್ಯಾ ಹೊಗಳಿದ್ದಾರೆ. ಸದ್ಯ ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದೆ.

ರಮ್ಯಾ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದೇನು?

‘ಆರು ತಿಂಗಳ ಹಿಂದೆ ಮಲೇಷ್ಯಾದಲ್ಲಿ ನಡೆದ ಅವರ ಕೊನೆಯ ಸಿನಿಮಾದ ಕಾರ್ಯಕ್ರಮವನ್ನು ನಾನು ನಿರೂಪಣೆ ಮಾಡಿದ್ದೆ. ನಿನ್ನೆ ಸಂಜೆ ನಾನು ನಮ್ಮ ಮುಖ್ಯಮಂತ್ರಿಯವರನ್ನು ಭೇಟಿಯಾದೆ. ಕಾಲ ಬದಲಾಗಿದೆ. ಅವರ ಬಿರುದುಗಳು ಬದಲಾಗಿವೆ. ಇತಿಹಾಸವೇ ಬದಲಾಗಿದೆ. ಆದರೆ ವಿಜಯ್ ಮಾತ್ರ ಬದಲಾಗಿಲ್ಲ. ಬಹುಶಃ ಇದೇ ಅವರ ದೊಡ್ಡ ಶಕ್ತಿ’ ಎಂದು ರಮ್ಯಾ ಬರೆದಿದ್ದಾರೆ.

‘ಕಳೆದ ಎರಡು ದಶಕಗಳಿಂದ ನಾನು ಅವರನ್ನು ನೋಡುತ್ತಿದ್ದೇನೆ. ಅವರು ಎಲ್ಲರಿಗಿಂತ ವಿಭಿನ್ನವಾಗಿ ಕಾಣುತ್ತಾರೆ. ಅದಕ್ಕೆ ಅವರ ಸ್ಟಾರ್‌ಡಮ್ ಕಾರಣವಲ್ಲ. ಅವರು ಯಾವುದೇ ಕಾರ್ಯಕ್ರಮದಲ್ಲಿದ್ದರೂ ಬೇರೆಯವರಿಗೆ ಹೆಚ್ಚು ಗೌರವ ನೀಡುತ್ತಾರೆ’ ಎಂದು ರಮ್ಯಾ ಗುಣಗಾನ ಮಾಡಿದ್ದಾರೆ.

ವಿಜಯ್ ಒಬ್ಬ ಜಂಟಲ್‌ಮನ್!

‘ವಿಜಯ್ ಎಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಎದುರಿಗಿರುವವರು ಹೇಳುವುದನ್ನು ತಾಳ್ಮೆಯಿಂದ ಕೇಳುತ್ತಾರೆ. ಎಲ್ಲರ ಮೇಲೂ ಕಾಳಜಿ ತೋರಿಸುತ್ತಾರೆ. ಅವರು ಸದಾ ಭರವಸೆಯನ್ನು ನೀಡುತ್ತಾರೆ. ಈ ಜಗತ್ತಿನಲ್ಲಿ ಅವರು ಒಬ್ಬ ನಿಜವಾದ ಜಂಟಲ್‌ಮನ್ ತರಹ ನಡೆದುಕೊಳ್ಳುತ್ತಾರೆ’ ಎಂದು ರಮ್ಯಾ ಹೇಳಿದ್ದಾರೆ.

‘ಇಂದು ಅವರು ಮುಖ್ಯಮಂತ್ರಿಯಾಗಿದ್ದರೂ ನಮ್ಮ ಭೇಟಿಯ ಶೈಲಿ ಮೊದಲಿನಂತೆಯೇ ಇತ್ತು. ಅದೇ ನಗು ಮತ್ತು ಅದೇ ಪ್ರೀತಿ ನಮ್ಮ ನಡುವೆ ಇತ್ತು’ ಎಂದು ರಮ್ಯಾ ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​: ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಪ್ರಯಾಣ

ತಡವಾಗಿ ಶುಭಾಶಯ ತಿಳಿಸಿದ ರಮ್ಯಾ

‘ನನ್ನ ಪ್ರೀತಿಯ ಸಿಎಂ ಜೋಸೆಫ್ ವಿಜಯ್ ಅವರಿಗೆ ಜನ್ಮದಿನದ ಶುಭಾಶಯಗಳು. ತಮಿಳುನಾಡಿನ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ 40 ದಿನ ಪೂರೈಸಿದ್ದಕ್ಕೆ ಅಭಿನಂದನೆಗಳು’ ಎಂದು ರಮ್ಯಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ನಟಿ ರಮ್ಯಾ ಅವರು ಚಿತ್ರರಂಗದಲ್ಲಿ ನಟನೆಯ ಜೊತೆಗೆ ಹಲವು ದೊಡ್ಡ ಸಿನಿಮಾಗಳ ಆಡಿಯೋ ಲಾಂಚ್ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಪಘಾತದವೇಳೆ ದರ್ಶನ್ ಪುತ್ರ ವಿನೀಶ್ ಕಾರು ಓಡಿಸುತ್ತಿದ್ದರಾ? ಅಸಲಿ ವಿಷಯ ರಿವೀಲ್ – Kannada News | Vinish Darshan Car Accident: Here is What Happend And Mother Vijayalakshmi clarification

ಬೆಂಗಳೂರು, ಜೂನ್ 26: ಸ್ಯಾಂಡಲ್‌ವುಡ್ ನಟ ದರ್ಶನ್ ಅವರ ಪುತ್ರ ವಿನೀಶ್ ಪ್ರಯಾಣಿಸುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಟಚ್ ಆಗಿದ್ದು, ಸ್ಥಳೀಯರು ಹಾಗೂ ವಿನೀಶ್ ನಡುವೆ ವಾಗ್ವಾದ ನಡೆದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಬೆಂಗಳೂರಿನ ಆರ್.ಆರ್. ನಗರದ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ (ಜೂನ್ 25) ಈ ಅಪಘಾತ ಸಂಭವಿಸಿದೆ. ವಿನೀಶ್ ಕಾರು ಓಡಿಸುತ್ತಿದ್ದರು ಎಂಬ ಬಗ್ಗೆ ವರದಿ ಆಗಿತ್ತು. ಆದರೆ, ಅದು ನಿಜವಲ್ಲ ಎಂಬ ವಿಷಯವೂ ರಿವೀಲ್ ಆಗಿದೆ.

ವಿನೀಶ್ ಕಾರು ಓಡಿಸುತ್ತಿರಲಿಲ್ಲ

ವಿನೀಶ್ ಅವರು KA01 MU9969 ಸಂಖ್ಯೆಯ ಫೋರ್ಡ್ ಕಾರಿನಲ್ಲಿ ತೆರಳುತ್ತಿದ್ದರು. ಅಪಘಾತದ ಸಮಯದಲ್ಲಿ ವಿನೀಶ್ ಕಾರನ್ನು ಓಡಿಸುತ್ತಿರಲಿಲ್ಲ. ಅವರು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದರು ಎಂಬುದು ಸ್ಪಷ್ಟವಾಗಿದೆ. ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾದ ಕಾರಣ ಸ್ಥಳದಲ್ಲಿ ಕೆಲಕಾಲ ಗಲಾಟೆ ಮತ್ತು ವಾಗ್ವಾದ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.

ವಿಜಯಲಕ್ಷ್ಮೀ ಸ್ಪಷ್ಟನೆ

ಈ ಘಟನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳ ಕುರಿತು ವಿನೀಶ್ ತಾಯಿ ವಿಜಯಲಕ್ಷ್ಮೀ ದರ್ಶನ್ ಅವರು ಪತ್ರದ ಮೂಲಕ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

‘ವಿನೀಶ್‌ಗೆ ದೊಡ್ಡ ಅಪಘಾತವಾಗಿದೆ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹರಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು. ವಿನೀಶ್ ಸುರಕ್ಷಿತವಾಗಿದ್ದಾನೆ ಮತ್ತು ಆರಾಮಾಗಿದ್ದಾನೆ. ಎಂದಿನಂತೆ ನಮ್ಮ ಚಾಲಕನೇ ಕಾರನ್ನು ಚಲಾಯಿಸುತ್ತಿದ್ದನು. ವಿನೀಶ್ ವಾಹನ ಚಲಾಯಿಸುತ್ತಿರಲಿಲ್ಲ. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಾಮಾನ್ಯ ಎನ್ನುವಂತಹ ಒಂದು ಸಣ್ಣ ರಸ್ತೆ ಅಪಘಾತ ಸಂಭವಿಸಿದೆ ಅಷ್ಟೆ. ಎದುರಿಗಿದ್ದ ಬೈಕ್ ಸವಾರರು ಕೂಡ ತಮ್ಮದೇ ತಪ್ಪು ಎಂದು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ’ ಎಂದು ವಿಜಯಲಕ್ಷ್ಮೀ ಪತ್ರದಲ್ಲಿ ತಿಳಿಸಿದ್ದಾರೆ.

‘ಬೈಕ್‌ನಲ್ಲಿದ್ದವರು ಸುರಕ್ಷಿತವಾಗಿದ್ದಾರೆಯೇ ಎಂದು ನೋಡಲು ವಿನೀಶ್ ಕಾರಿನಿಂದ ಕೆಳಗಿಳಿದಿದ್ದನು. ಆದರೆ ಆ ಕೆಲವು ಕ್ಷಣಗಳ ದೃಶ್ಯಗಳನ್ನು ಸಂದರ್ಭಕ್ಕೆ ತಕ್ಕುದಲ್ಲದ ರೀತಿಯಲ್ಲಿ ಮತ್ತು ತಪ್ಪು ದಾರಿಗೆಳೆಯುವಂತೆ ಬಿಂಬಿಸಲಾಗಿದೆ. ಯಾರು ಕೂಡ ಇಂತಹ ಸುಳ್ಳು ವರದಿಗಳನ್ನು ನಂಬಬೇಡಿ ಮತ್ತು ಶೇರ್ ಮಾಡಬೇಡಿ’ ಎಂದು ಅವರು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

Source link

ಬಿಗ್ ಅಪ್ಡೇಟ್: ‘ಬಾಹುಬಲಿ 3’ ಬರೋದು ಪಕ್ಕಾ; ರಿವೀಲ್ ಮಾಡಿದ ಪ್ರಭಾಸ್-ರಾನಾ ಜೋಡಿ – Kannada News | Bahubali 3 Confirmed Prabhas, Rana, Anushka Announce Highly Anticipated Sequel

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಚಿತ್ರಗಳು ಹೊಸ ದಾಖಲೆ ಬರೆದಿದ್ದವು. ಈ ಸಿನಿಮಾಗೆ ಮೂರನೇ ಭಾಗ ಬರಲಿದೆಯೇ ಎಂಬ ಪ್ರಶ್ನೆ ಮೊದಲಿನಿಂದಲೂ ಅಭಿಮಾನಿಗಳಿಗೆ ಕಾಡುತ್ತಾ ಇತ್ತು. ಇದಕ್ಕೆ ಕೊನೆಗೂ ಅಧಿಕೃತ ಉತ್ತರ ಸಿಕ್ಕಿದೆ. ಇಷ್ಟು ದಿನ ಕೇವಲ ವದಂತಿಯಾಗಿದ್ದ ಈ ವಿಷಯವನ್ನು ಚಿತ್ರದ ಮುಖ್ಯ ತಾರಾಗಣದವರಾದ ಪ್ರಭಾಸ್, ರಾನಾ ದಗ್ಗುಬಾಟಿ ಹಾಗೂ ಅನುಷ್ಕಾ ಶೆಟ್ಟಿ ಈಗ ಖಚಿತಪಡಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಮೂವರೂ ಒಟ್ಟಿಗೆ ಕುಳಿತು ಮಾತನಾಡಿರುವ ವಿಶೇಷ ವಿಡಿಯೋವೊಂದು ಬಿಡುಗಡೆಯಾಗಿದ್ದು, ಭಾರಿ ವೈರಲ್ ಆಗುತ್ತಿದೆ. ‘ಬಾಹುಬಲಿ’ ಸಿನಿಮಾ ಬಗ್ಗೆ ಮಾತನಾಡಲು ಇವರು ಒಂದೆಡೆ ಸೇರಿದ್ದರು. ಚಿತ್ರದ ದೃಶ್ಯಗಳ ಕುರಿತು, ಸಿನಿಮಾ ಶೂಟ್ ಸೆಟ್​​ನ ಸಿಹಿ ಅನುಭವವನ್ನು ಇವರು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಒಂದು ದೊಡ್ಡ ಅಪ್​​ಡೇಟ್ ಕೂಡ ಸಿಕ್ಕಿದೆ.

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ರಾನಾ ದಗ್ಗುಬಾಟಿ ಅವರು ಮಾತನಾಡುತ್ತಾ, ‘ಇದನ್ನು ನಿಮ್ಮ ಹತ್ತಿರ ಹೇಳಬೇಕೋ ಬೇಡವೋ ಗೊತ್ತಿಲ್ಲ. ಈಗ ಇಲ್ಲಿ ರಾಜಮೌಳಿ ಅವರಾಗಲಿ ಅಥವಾ ನಿರ್ಮಾಪಕರಾಗಲಿ ಇಲ್ಲ. ಅದಕ್ಕೆ ನಾನು ಈ ವಿಷಯವನ್ನು ಹೇಳುತ್ತಿದ್ದೇನೆ. ಈ ಜಗತ್ತು ಇನ್ನೂ ಅದಕ್ಕೆ ಸಿದ್ಧವಾಗಿಲ್ಲದೇ ಇರಬಹುದು. ಆದರೆ ‘ಬಾಹುಬಲಿ…’ ಬರಲಿದೆ’ ಎಂದು ಅರ್ಧಕ್ಕೆ ನಿಲ್ಲಿಸಿದ್ದಾರೆ. ತಕ್ಷಣವೇ ನಟಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ‘ಬಾಹುಬಲಿ 3’ ಎಂದು ಧ್ವನಿಗೂಡಿಸಿ ನಗುತ್ತಾರೆ. ವಿಡಿಯೋದ ಕೊನೆಯಲ್ಲಿ ‘ಆ್ಯಂಡ್ ದಿ ಲೆಗಸಿ ಕಂಟಿನ್ಯೂಸ್ ಅಂದರೆ ಪರಂಪರೆ ಮುಂದುವರಿಯುತ್ತದೆ ಎಂಬ ಬರಹ ಮೂಡಿಬಂದಿದ್ದು, ಸಿನಿಮಾ ಪ್ರೇಕ್ಷಕರಲ್ಲಿ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ‘ವಾರಣಾಸಿ’ ದೃಶ್ಯಕ್ಕಾಗಿ ಮಹೇಶ್ ಬಾಬುಗೆ 100 ಟೇಕ್; ಸಿಟ್ಟು ಬಂದು ಪ್ಯಾಕಪ್​ ಎಂದ ರಾಜಮೌಳಿ

ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ರಾಜಮೌಳಿ ನಿರ್ದೇಶನದ ‘ಬಾಹುಬಲಿ: ದಿ ಬಿಗಿನ್ನಿಂಗ್’ ಮತ್ತು ‘ಬಾಹುಬಲಿ: ದಿ ಕನ್‌ಕ್ಲೂಷನ್’ ಚಿತ್ರಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದವು. ಕಥೆ ಮುಗಿದಿದ್ದರೂ ಮೂರನೇ ಭಾಗ ಬರಬಹುದು ಎಂಬ ನಿರೀಕ್ಷೆ ಇತ್ತು. ಈಗ ಸ್ವತಃ ಭಲ್ಲಾಳದೇವ (ರಾನಾ), ಬಾಹುಬಲಿ (ಪ್ರಭಾಸ್) ಮತ್ತು ದೇವಸೇನಾ (ಅನುಷ್ಕಾ) ಈ ವಿಷಯವನ್ನು ಖಚಿತಪಡಿಸಿರುವುದರಿಂದ ಚಿತ್ರರಂಗದಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಹೈಪ್ ಸೃಷ್ಟಿಯಾಗಿದೆ. ಆದರೆ ಚಿತ್ರ ಯಾವಾಗ ಸೆಟ್ಟೇರಲಿದೆ ಎಂಬ ಸಂಪೂರ್ಣ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದುವೆ ಬೇಡ ಅಂದ್ರೂ ಕೇತನ್ ಕೇಳಲಿಲ್ಲ, ಓಡ್ಹೋಗ್ತೀಯಾ ಹೋಗು ನೀನೆಲ್ಲಿದ್ರೂ ಹುಡುಕ್ತೀವಿ ಅಂದಿದ್ರು: ಸಿಯಾ – Kannada News | Lohagad Fort Case: Siya Claims She Opposed the Marriage, New Details Surface During Probe

ಪುಣೆ, ಜೂನ್ 26: ಪುಣೆಯ ಲೋಹಗಡ್ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್(Ketan Agarwal) ಅವರನ್ನು ಕಂದಕಕ್ಕೆ ತಳ್ಳಿ ಕೊಂದ ಪ್ರಕರಣ ದಿನಕ್ಕೊಂದು ಆಘಾತಕಾರಿ ತಿರುವು ಪಡೆಯುತ್ತಿದೆ. ಇಷ್ಟು ದಿನ ಕೌಟುಂಬಿಕ ಒತ್ತಡದಿಂದ ಕೊಲೆ ಮಾಡಿದ್ದಾಗಿ ಹೇಳಿದ್ದ ಹಂತಕಿ ಸಿಯಾ ಗೋಯಲ್, ಈಗ ಪೊಲೀಸರ ಮುಂದೆ ಹೊಸ ವಾದ ಮಂಡಿಸಿದ್ದಾಳೆ. ನನಗೆ ಈ ಮದುವೆ ಇಷ್ಟವಿಲ್ಲ ಎಂದು ಕೇತನ್ ಬಳಿ ಹೇಳಿದ್ದೆ.

ಆದರೆ, ನಮ್ಮದು ಪ್ರಭಾವಿ ಮತ್ತು ಶ್ರೀಮಂತ ಕುಟುಂಬ, ನೀನು ನನ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಓಡಿ ಹೋಗ್ತೀಯಾ ಹೋಗು ನೀನೆಲ್ಲಿದ್ರೂ ಹುಡುಕ್ತೀವಿ ಎಂದು ಕೇತನ್ ಹೇಳಿದ್ದಾಗಿ ಸಿಯಾ ತನಿಖಾಧಿಕಾರಿಗಳಿಗೆ ತಿಳಿಸಿದ್ದಾಳೆ. ಆದಾಗ್ಯೂ, ಆಕೆಯ ಈ ಹೇಳಿಕೆಯನ್ನು ಪೊಲೀಸರು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಿದ್ದಾರೆ.

ಕೊಲೆಗೆ ಮುನ್ನ ಓಡಿಹೋಗಲು ಪ್ಲಾನ್ ಮಾಡಿದ್ದ ಪ್ರೇಮಿಗಳು

ಪೊಲೀಸ್ ಮೂಲಗಳ ಪ್ರಕಾರ, ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಆರಂಭದಲ್ಲಿ ಮದುವೆ ತಪ್ಪಿಸಲು ಓಡಿಹೋಗಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ತನ್ನ ಹೆತ್ತವರ ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ಬರಬಹುದೆಂಬ ಕಾರಣಕ್ಕೆ ಸಿಯಾ ಹಿಂದೆ ಸರಿದಿದ್ದಳು. ಮದುವೆ ಮುರಿಯಲು ಹಲವು ದಾರಿಗಳನ್ನು ಹುಡುಕಿ ಸುಸ್ತಾದ ಇಬ್ಬರೂ ಸೇರಿ ಕೇತನ್‌ನನ್ನು ಜಗತ್ತಿನಿಂದಲೇ ಮುಗಿಸುವ ಕರಾಳ ನಿರ್ಧಾರಕ್ಕೆ ಬಂದಿದ್ದರು.

ಬಯಲಾಯ್ತು 2,004 ಕರೆಗಳ ಕಳ್ಳಪ್ರೇಮದ ಇತಿಹಾಸ

ಸಿಯಾ ಮತ್ತು ಚೇತನ್ ನಡುವಿನ ಅಕ್ರಮ ಸಂಬಂಧ ನವೆಂಬರ್ 2025 ರಲ್ಲಿ ದೀಪಾವಳಿ ಪಾರ್ಟಿಯೊಂದರಲ್ಲಿ ಆರಂಭವಾಗಿತ್ತು. ಒಂದೆಡೆ ಕುಟುಂಬಸ್ಥರು ನವೆಂಬರ್‌ನಲ್ಲಿ ನಡೆಯಬೇಕಿದ್ದ 17 ಕೋಟಿ ರೂಪಾಯಿ ವೆಚ್ಚದ ಅದ್ದೂರಿ ಮದುವೆಗೆ ಜೈಪುರದಲ್ಲಿ ಅರಮನೆ ಹಾಗೂ ಪ್ರತ್ಯೇಕ ಖಾಸಗಿ ಜೆಟ್‌ಗಳನ್ನು ಬುಕ್ ಮಾಡುತ್ತಿದ್ದರೆ, ಇತ್ತ ಪ್ರೇಮಿಗಳಿಬ್ಬರು ಫೋನ್‌ನಲ್ಲಿ ಮಗ್ನರಾಗಿದ್ದರು.

ಕಳೆದ ಕೇವಲ ಏಳು ತಿಂಗಳಲ್ಲಿ ಸಿಯಾ ಮತ್ತು ಚೇತನ್ ಪರಸ್ಪರ 2,004 ಬಾರಿ ಫೋನ್ ಕರೆ ಮಾಡಿಕೊಂಡಿದ್ದು, ಬರೋಬ್ಬರಿ 238 ಗಂಟೆಗಳ ಕಾಲ ಕೊಲೆಯ ಸಂಚಿನ ಬಗ್ಗೆಯೇ ಮಾತನಾಡಿದ್ದಾರೆ ಎಂದು ಪೊಲೀಸರ ತಾಂತ್ರಿಕ ತನಿಖೆಯಲ್ಲಿ ಬಹಿರಂಗವಾಗಿದೆ.

ಮತ್ತಷ್ಟು ಓದಿ: ತಪ್ಪಿತಸ್ಥಳೆಂದು ಸಾಬೀತಾದರೆ ಮಗಳನ್ನು ಕೂಡ ಅದೇ ಕೋಟೆಯಿಂದ ತಳ್ಳಿ, ಸಿಯಾ ಬಗ್ಗೆ ತಂದೆಯ ಭಾವುಕ ಮಾತು

‘ಪ್ಲಾನ್ ಬಿ’ ಇಂದ ‘ಪ್ಲಾನ್ ಸಿ’ ವರೆಗಿನ ಕರಾಳ ಹೆಜ್ಜೆಗಳು

ಜೂನ್ 14 ರಂದು ಲೋಹಗಡ್ ಕೋಟೆಯಲ್ಲಿ ಸಿಯಾ, ಕೇತನ್‌ನನ್ನು ಮೊದಲ ಬಾರಿ ಬಂಡೆಯಿಂದ ಕೆಳಗೆ ತಳ್ಳಿದ್ದಳು. ಆದರೆ ಆತ ಪೊದೆ ಹಿಡಿದು ಬದುಕುಳಿದಾಗ, ಹಾವು ಬಂತು ಎಂದು ಸುಳ್ಳು ಹೇಳಿ ಅಪ್ಪಿಕೊಂಡು ನಾಟಕವಾಡಿದ್ದಳು . ಈ ಪ್ರಯತ್ನ ವಿಫಲವಾದಾಗ ಪ್ರೇಮಿಗಳಿಬ್ಬರು ಮತ್ತೊಂದು ಯೋಜನೆ ರೂಪಿಸಿದ್ದರು. ಇದರಂತೆ ಜೂನ್ 18 ರಂದು ಸಿಯಾ ಮತ್ತೆ ಕೇತನ್‌ನನ್ನು ಅದೇ ಕೋಟೆಗೆ ಕರೆತಂದಿದ್ದಾಳೆ. ಈ ಬಾರಿ ಚೇತನ್‌ನನ್ನೂ ಜೊತೆಗೆ ಕರೆಯಿಸಿಕೊಂಡು, ಇಬ್ಬರೂ ಸೇರಿ ಕೇತನ್‌ನನ್ನು ಹಿಂದಿನಿಂದ 400 ಅಡಿ ಆಳದ ಕಂದಕಕ್ಕೆ ತಳ್ಳಿ ಮುಗಿಸಿದ್ದಾರೆ.

ಕೊಲೆ ಮಾಡಿ ಅದನ್ನು ಅಪಘಾತ ಎಂದು ಬಿಂಬಿಸಲು ಇಬ್ಬರೂ ಯಶಸ್ವಿಯಾಗಿದ್ದರು. ಆದರೆ ಸಿಯಾ ಮುಖದಲ್ಲಿ ದುಃಖವಿಲ್ಲದ್ದನ್ನು ಕಂಡು ಪೊಲೀಸರು ಬಂಧಿಸಿದ ತಕ್ಷಣ, ಇಬ್ಬರ ಕಳ್ಳಪ್ರೇಮದ ನಾಟಕ ಮುಗಿದಿದೆ. ಈಗ ಜೈಲಿನಲ್ಲಿ ಇಬ್ಬರೂ ಒಬ್ಬರ ಮೇಲೊಬ್ಬರು ತಪ್ಪು ಹೊರಿಸಲು ಆರಂಭಿಸಿದ್ದಾರೆ. ನನಗೆ ಸಿಯಾಳನ್ನು ಕರ್ಕೊಂಡು ಓಡಿಹೋಗುವುದಷ್ಟೇ ಗುರಿಯಾಗಿತ್ತು. ಆದರೆ ಕೇತನ್‌ನನ್ನು ಕೊಲ್ಲುವಂತೆ ನನ್ನನ್ನು ಸಂಪೂರ್ಣವಾಗಿ ಪ್ರೇರೇಪಿಸಿದ್ದೇ ಸಿಯಾ ಎಂದು ಚೇತನ್ ಹೇಳಿದ್ದಾನೆ. ಕೊಲೆ ಮಾಡುವುದು ಚೇತನ್ ಐಡಿಯಾ ಆಗಿತ್ತು. ಜೂನ್ 14 ರಂದು ಮೊದಲ ಕೊಲೆ ಯತ್ನ ವಿಫಲವಾದಾಗ ಚೇತನ್ ನನ್ನ ಮುಂದೆ ಮಗುವಿನಂತೆ ಕಣ್ಣೀರು ಹಾಕಿದ್ದ, ಹಾಗಾಗಿ ನಾನು ಒಪ್ಪಬೇಕಾಯಿತು ಎಂದಿದ್ದಾಳೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕದಲ್ಲಿ ಜೂನ್​ನಲ್ಲೇ ಶೇ 41 ರಷ್ಟು ಮಳೆ ಕೊರತೆ: ಸೂಪರ್ ಎಲ್ ನಿನೋ ಭೀತಿ – Kannada News | Karnataka Faces 41 Percent Monsoon Deficit in June as Super El Nino Threat Looms Large

ಬೆಂಗಳೂರು, ಜೂನ್ 26: ಕರ್ನಾಟಕದಲ್ಲಿ ಈ ವರ್ಷದ ನೈಋತ್ಯ ಮುಂಗಾರು (Monsoon) ಆರಂಭದ ಮೊದಲ ತಿಂಗಳಿನಲ್ಲೇ ತೀವ್ರ ಆಘಾತ ನೀಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಹವಾಮಾನ ತಜ್ಞರು ಇದನ್ನು ‘ವಿಫಲ ಮುಂಗಾರು’ ಎಂದು ಘೋಷಿಸಿದ್ದಾರೆ. ಜೂನ್ ತಿಂಗಳಿನಲ್ಲಿ ಇಡೀ ಕರ್ನಾಟಕದಲ್ಲಿ ಸರಾಸರಿ ಶೇ 41 ರಷ್ಟು ಮಳೆ ಕೊರತೆ ಕಂಡುಬಂದಿದೆ. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ನಿರೀಕ್ಷಿತ ಪ್ರಮಾಣದ ಪೂರಕ ವಾತಾವರಣ (Weather Systems) ರೂಪುಗೊಳ್ಳದ ಕಾರಣ ಮುಂಗಾರು ಮಾರುತಗಳು ತೀರಾ ದುರ್ಬಲಗೊಂಡಿದ್ದು, ಇದು ದೇಶ ಹಾಗೂ ರಾಜ್ಯದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವ ಮುನ್ಸೂಚನೆ ನೀಡಿದೆ.

ವಾಡಿಕೆಗಿಂತ ಭಾರಿ ಕುಸಿತ ಕಂಡ ಮುಂಗಾರು ಮಳೆ ಪ್ರಮಾಣ

ಹವಾಮಾನ ಇಲಾಖೆಯ ಅಧಿಕೃತ ದತ್ತಾಂಶಗಳ ಪ್ರಕಾರ, ಜೂನ್ 25 ರ ಅವಧಿಗೆ ರಾಜ್ಯದಲ್ಲಿ ವಾಡಿಕೆಯಾಗಿ 162.5 ಮಿಮೀ ಮಳೆಯಾಗಬೇಕಿತ್ತು. ಆದರೆ ಕೇವಲ 95.2 ಮಿಮೀ ಮಳೆ ದಾಖಲಾಗಿದೆ. ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 89 ಮಿಮೀ ವಾಡಿಕೆ ಮಳೆಗೆ ಬದಲಾಗಿ ಕೇವಲ 66 ಮಿಮೀ ಮಳೆಯಾಗಿದೆ.

ಎಲ್ ನಿನೋ ಪ್ರಭಾವವೇ ಕಾರಣ

ಈ ಬಾರಿ ಮುಂಗಾರು ವೈಫಲ್ಯಕ್ಕೆ ಎಲ್ ನಿನೋ (El Nino) ಪ್ರಭಾವ ಪ್ರಮುಖವಾಗಿದೆ ಎಂದು ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಸಿಎಸ್ ಪಾಟೀಲ್ ತಿಳಿಸಿದ್ದಾರೆ. ಮುಂಗಾರು ಅವಧಿಯಲ್ಲೂ ಮಳೆ ಮಾರುತಗಳು ದುರ್ಬಲವಾಗಿರುವುದರಿಂದ ರಾಜ್ಯದ ಹಲವೆಡೆ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇತ್ತೀಚೆಗೆ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕರಾವಳಿ ಕರ್ನಾಟಕದಲ್ಲಿ ಶೇ 50 ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ 25 ರಷ್ಟು ಮಳೆ ಕೊರತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಸೂಪರ್ ಎಲ್ ನಿನೋ ಎದುರಿಸಲು ಸಜ್ಜಾಗಿ: ಸಚಿವ ಪರಮೇಶ್ವರ್ ಸೂಚನೆ

ಮಳೆಯ ತೀವ್ರ ಕೊರತೆ ಮತ್ತು ನೀರಿನ ಬಿಕ್ಕಟ್ಟಿನ ಆತಂಕದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ‘ಸೂಪರ್ ಎಲ್ ನಿನೋ’ ಪ್ರಭಾವದಿಂದಾಗಿ ಮುಂಬರುವ ತಿಂಗಳುಗಳಲ್ಲಿ ರಾಜ್ಯದಲ್ಲಿ ಎದುರಾಗಬಹುದಾದ ಭೀಕರ ಬರಗಾಲದಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: ಎಲ್ ನಿನೋ ಆತಂಕ: ಮುಂಗಾರು ಮಳೆಗೆ ಕಂಟಕ, ದೇಶಾದ್ಯಂತ ಬರಗಾಲದ ಭೀತಿ!

ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಸದ್ಯ ರಾಜ್ಯದ 122 ತಾಲೂಕುಗಳು ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿವೆ. ಈ ಪೈಕಿ 139 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, 669 ಹಳ್ಳಿಗಳ ದಾಹ ನೀಗಿಸಲು 789 ಖಾಸಗಿ ಬೋರ್‌ವೆಲ್‌ಗಳನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿದೆ. ತಜ್ಞರು ಕ್ಲೌಡ್ ಸೀಡಿಂಗ್ (ಮೋಡ ಬಿತ್ತನೆ) ಸದ್ಯಕ್ಕೆ ಅಸಾಧ್ಯ ಎಂದಿದ್ದು, ಸರ್ಕಾರಗಳು ದೀರ್ಘಾವಧಿಯ ಬರ ನಿರ್ವಹಣಾ ಯೋಜನೆಗಳನ್ನು ರೂಪಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಬೆಂಗಳೂರಲ್ಲಿ ಇಳಿದ ಮಾಲಿನ್ಯ; ಕರಾವಳಿ, ಚಿಕ್ಕಬಳ್ಳಾಪುರದಲ್ಲಿ ಅತ್ಯಂತ ಶುದ್ಧ ಗಾಳಿ! – Kannada News | Bengaluru AQI Today: Air Quality Improves Across Karnataka Cities Due to Monsoon

ಬೆಂಗಳೂರು, ಜೂನ್ 26: ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿರುವುದರಿಂದ ವಾತಾವರಣದಲ್ಲಿನ ಧೂಳಿನ ಕಣಗಳು ಕಡಿಮೆಯಾಗಿದ್ದು, ಇಂದಿನ ವಾಯು ಗುಣಮಟ್ಟವು ಬಹುತೇಕ ಕಡೆಗಳಲ್ಲಿ ಉತ್ತಮ ಹಾಗೂ ತೃಪ್ತಿಕರ ಸ್ಥಿತಿಯಲ್ಲಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ನಗರಗಳ ಇಂದಿನ ವಾಯು ಗುಣಮಟ್ಟ ಸೂಚ್ಯಂಕದ (AQI) ಸದ್ಯದ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಉತ್ತಮ

ಬೆಂಗಳೂರು ನಗರದಲ್ಲಿ ಇಂದು ಜೂನ್ 26 ರಂದು ವಾಯು ಗುಣಮಟ್ಟ ಸೂಚ್ಯಂಕವು (AQI) ಸರಾಸರಿ 60 ರಿಂದ 72ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದು ಸಾಧಾರಣ ಅತ್ಯಂತ ತೃಪ್ತಿಕರ ವಲಯದಲ್ಲಿದೆ. ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ನಗರದ ಮಾಲಿನ್ಯದ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ.

ನಗರದ ಪ್ರಮುಖ ಪ್ರದೇಶಗಳ ಇಂದಿನ AQI ವಿವರ

  • ಬಿಟಿಎಂ ಲೇಔಟ್: 60-67 (ಸಾಧಾರಣ)
  • ಹೆಬ್ಬಾಳ: 20-23 (ಉತ್ತಮ)
  • ಸಿಟಿ ರೈಲ್ವೆ ಸ್ಟೇಷನ್: 52 (ಸಾಧಾರಣ)
  • ಬಸವನಗುಡಿ: 71 (ಸಾಧಾರಣ)
  • ಬನಶಂಕರಿ: 82 (ಸಾಧಾರಣ)

ಬೆಂಗಳೂರಿನಲ್ಲಿ ಪ್ರಮುಖ ಮಾಲಿನ್ಯಕಾರಕಗಳಾದ PM2.5 ಪ್ರಮಾಣ 21 µg/m³ ಮತ್ತು PM10 ಪ್ರಮಾಣ 25 µg/m³ ನಷ್ಟಿದ್ದು, ಉಸಿರಾಟಕ್ಕೆ ಯಾವುದೇ ಗಂಭೀರ ಆರೋಗ್ಯದ ಅಪಾಯಗಳಿಲ್ಲ. ಆದಾಗ್ಯೂ, ತೀವ್ರ ಉಸಿರಾಟದ ಸಮಸ್ಯೆಯಿರುವ ಸೂಕ್ಷ್ಮ ಜೀವಿಗಳು ಹೊರಗಡೆ ಓಡಾಡುವಾಗ ಕೊಂಚ ಜಾಗ್ರತೆ ವಹಿಸುವುದು ಉತ್ತಮ.

ಕರ್ನಾಟಕದ ಇತರೆ ಪ್ರಮುಖ ನಗರಗಳ ಇಂದಿನ AQI ಸ್ಥಿಗತಿ

ರಾಜ್ಯದ ಇತರೆ ಜಿಲ್ಲೆಗಳಲ್ಲೂ ಮುಂಗಾರು ಮಳೆಯ ಪ್ರಭಾವದಿಂದಾಗಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ. ಕೆಲವು ನಗರಗಳಲ್ಲಿ ಅತ್ಯಂತ ಶುದ್ಧವಾದ ಗಾಳಿ ದಾಖಲಾಗಿದೆ.

  • ಚಿಕ್ಕಬಳ್ಳಾಪುರ: ಇಲ್ಲಿ ಅತ್ಯಂತ ಸ್ವಚ್ಛವಾದ ಗಾಳಿ ಇದ್ದು, AQI ಕೇವಲ 23 (ಉತ್ತಮ) ದಾಖಲಾಗಿದೆ.
  • ಯಾದಗಿರಿ: ಯಾದಗಿರಿಯಲ್ಲೂ ವಾಯು ಗುಣಮಟ್ಟ ಉತ್ತಮವಾಗಿದ್ದು, AQI 17ರಷ್ಟಿದೆ. (ಉತ್ತಮ)
  • ಮಂಗಳೂರು ಮತ್ತು ಕರಾವಳಿ ಭಾಗ: ನಿರಂತರ ಮಳೆಯ ಹಿನ್ನೆಲೆಯಲ್ಲಿ ಇಲ್ಲಿನ AQI 30 ರಿಂದ 45ರ ಒಳಗೆ (ಉತ್ತಮ) ದಾಖಲಾಗಿದೆ.
  • ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡ: ಸಾಧಾರಣ ಮಳೆಯಿಂದಾಗಿ ಈ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 40-55 ರ ಆಸುಪಾಸಿನಲ್ಲಿ (ಸಾಧಾರಣ)ಇದೆ.

ಒಟ್ಟಾರೆಯಾಗಿ ಇಂದಿನ ವಾತಾವರಣವು ರಾಜ್ಯದ ಜನತೆಗೆ ಆರೋಗ್ಯಕರವಾಗಿದ್ದು, ಮಾಲಿನ್ಯ ಮುಕ್ತ ಗಾಳಿಯನ್ನು ಆನಂದಿಸಬಹುದಾಗಿದೆ. ಮಳೆಯ ಅಬ್ಬರ ಹೆಚ್ಚಾದಂತೆ ಗಾಳಿಯ ಗುಣಮಟ್ಟ ಇನ್ನಷ್ಟು ಸುಧಾರಿಸುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಕೇಂದ್ರ, ಉದ್ಯಮಿಗಳಿಗೆ ಬಿಗ್ ರಿಲೀಫ್ – Kannada News | Middle East Crisis Eases: India Restores Commercial LPG Supplies, Boosting Hospitality Sector

ನವದೆಹಲಿ, ಜೂನ್ 26: ಕೈಗಾರಿಕಾ ಮತ್ತು ವಾಣಿಜ್ಯ ಎಲ್‌ಪಿಜಿ (LPG) ಗ್ರಾಹಕರಿಗೆ ಕೇಂದ್ರ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತು ದೇಶೀಯವಲ್ಲದ ಎಲ್‌ಪಿಜಿ ಪೂರೈಕೆಯ ಮೇಲೆ ಹೇರಲಾಗಿದ್ದ ಎಲ್ಲಾ ವಲಯ ನಿರ್ಬಂಧಗಳನ್ನು ಕೇಂದ್ರವು ಸಂಪೂರ್ಣವಾಗಿ ಹಿಂತೆಗೆದುಕೊಂಡಿದೆ. ಇನ್ಮುಂದೆ ಈ ಸರಬರಾಜುಗಳು ಸಹಜ ಸ್ಥಿತಿಗೆ ಮರಳಲಿವೆ.

ಈ ಒಪ್ಪಂದದಿಂದಾಗಿ, ಭಾರತದ ಕಚ್ಚಾ ತೈಲ ಮತ್ತು ಎಲ್‌ಪಿಜಿ ಆಮದಿನ ಪ್ರಮುಖ ಮಾರ್ಗವಾಗಿದ್ದ ‘ಹಾರ್ಮುಜ್ ಜಲಸಂಧಿ’ ಸಮುದ್ರ ಮಾರ್ಗವು ಮತ್ತೆ ಮುಕ್ತವಾಗಿದೆ. ಹೀಗಾಗಿ ಆಮದು ಪ್ರಮಾಣ ಮತ್ತು ಸ್ಥಳೀಯ ಇಂಧನ ಲಭ್ಯತೆ ಗಣನೀಯವಾಗಿ ಸುಧಾರಿಸಿದೆ.

ಯುದ್ಧದ ವಾತಾವರಣದಿಂದಾಗಿ ಜಾಗತಿಕ ಪೂರೈಕೆಯಲ್ಲಿ ಅಡಚಣೆ ಉಂಟಾದಾಗ ವಾಣಿಜ್ಯ ಬಳಕೆದಾರರಿಗೆ ಬೃಹತ್ ಎಲ್‌ಪಿಜಿ (Bulk LPG) ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿರುವುದರಿಂದ, ಬಿಕ್ಕಟ್ಟಿನ ಮುಂಚೆ ಇದ್ದ ಬಳಕೆಯ ಮಟ್ಟದ ಶೇ. 50 ರಷ್ಟು ಪೂರೈಕೆಯನ್ನು ತಕ್ಷಣವೇ ಪುನಃಸ್ಥಾಪಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಆದೇಶಿಸಿದೆ. ಇದು ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಉತ್ಪಾದನೆ ಹೆಚ್ಚಿಸಲು ಭಾರಿ ನೆರವಾಗಲಿದೆ.

ಈ ಹೊಸ ಇಂಧನ ನೀತಿಯ ಸುಗಮ ಜಾರಿಗೆ ಸಹಕರಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಗಳು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಇದು ದೇಶದ ಇಂಧನ ಅಗತ್ಯಗಳನ್ನು ಸಮತೋಲನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಟಾಕ್ಸಿಕ್’ ಚಿತ್ರದ ‘ತಬಾಹಿ’ ವಿಡಿಯೋ ಸಾಂಗ್ ರಿಲೀಸ್​​ಗೆ ದಿನಾಂಕ ಫಿಕ್ಸ್? – Kannada News | Yash’s Toxic Movie: ‘Tabahi’ Video Song Kicks Off Grand Promotions in July

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ (Toxic) ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಆಗಸ್ಟ್ 26ರಂದು ಸಿನಿಮಾ ತೆರೆಮೇಲೆ ಬರಲಿದೆ. ಈ ಚಿತ್ರ ಸಾಕಷ್ಟು ಬಾರಿ ತನ್ನ ರಿಲೀಸ್​ ದಿನಾಂಕವನ್ನು ಮುಂದಕ್ಕೆ ಹಾಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಟಾಕ್ಸಿಕ್’ ಸಿನಿಮಾನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇರುವುದರಿಂದ ಈ ರೀತಿಯ ಕ್ರಮ ಕೈಗೊಳ್ಳಲಾಗಿತ್ತು. ಸದ್ಯದ ಮಾಹಿತಿ ಪ್ರಕಾರ ಜುಲೈನಿಂದಲೇ ‘ಟಾಕ್ಸಿಕ್’ ಹಬ್ಬ ಶುರುವಾಗಲಿದೆ.

‘ಟಾಕ್ಸಿಕ್’ ಚಿತ್ರ ತುಂಬಾನೇ ದೊಡ್ಡ ಮಟ್ಟದಲ್ಲಿ ತೆರೆಗೆ ಬರಲು ರೆಡಿ ಆಗಿದೆ. ಈ ಕಾರಣದಿಂದ ಜುಲೈನಿಂದಲೇ ಸಿನಿಮಾದ ಪ್ರಚಾರ ಕಾರ್ಯ ಆರಂಭ ಆಗಲಿದೆಯಂತೆ. ಜುಲೈ ಎರಡನೇ ವಾರದಲ್ಲಿ ‘ತಬಾಹಿ’ಯ ವಿಡಿಯೋ ಸಾಂಗ್ ರಿಲೀಸ್ ಆಗಲಿದೆ ಎಂದು ವರದಿ ಆಗಿದೆ. ಈ ಹಾಡಿನಲ್ಲಿ ಸಖತ್ ಬೋಲ್ಡ್ ದೃಶ್ಯಗಳು ಇರಲಿವೆ ಎಂದು ಊಹಿಸಲಾಗಿದೆ.

ಈ ಮೊದಲೇ ‘ತಬಾಹಿ’ ಚಿತ್ರದ ಲಿರಿಕಲ್ ವರ್ಷನ್ ರಿಲೀಸ್ ಆಗಿದೆ. ಆಗಲೇ ವಿಡಿಯೋ ಸಾಂಗ್ ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿಕೊಳ್ಳುವ ಪ್ಲ್ಯಾನ್ ಇದ್ದಿದ್ದರಿಂದ ಕೇವಲ ಲಿರಿಕಲ್ ವಿಡಿಯೋ ರಿಲೀಸ್ ಮಾಡಲಾಗಿತ್ತು ಎಂದು ವರದಿ ಆಗಿತ್ತು. ಈಗ ಸಿನಿಮಾ ರಿಲೀಸ್​​ಗೆ ಎರಡು ತಿಂಗಳು ಇರುವಾಗ ಚಿತ್ರದ ಪ್ರಚಾರ ಆರಂಭಿಸಲಾಗಿದೆ.

ಇದನ್ನೂ ಓದಿ: ‘ಯಶ್ ಸಿನಿಮಾ ಎಂದರೆ ಏನೋ ಒಂದು ಅದ್ಭುತ ವಿಷಯ ಇರುತ್ತೆ’; ‘ಟಾಕ್ಸಿಕ್’ ಬಗ್ಗೆ ಪ್ರಿಯಾ ಆನಂದ್ ಮಾತು

‘ಟಾಕ್ಸಿಕ್’ ಚಿತ್ರಕ್ಕೆ ಮಲಯಾಳಂನ ಗೀತು ಮೋಹನ್‌ದಾಸ್ ನಿರ್ದೇಶನ ಇದೆ. ಇತ್ತೀಚಿನ ದಿನಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ಚಿತ್ರವಾಗಿದೆ. ಇದೊಂದು ಹೈ-ಬಜೆಟ್ ಆ್ಯಕ್ಷನ್ ಓರಿಯಂಟೆಡ್ ಸಿನಿಮಾ ಇದಾಗಿದ್ದು, ಅಂತರರಾಷ್ಟ್ರೀಯ ಮಟ್ಟದ ಡ್ರಗ್ ಮಾಫಿಯಾ ಹಿನ್ನೆಲೆಯನ್ನು ಹೊಂದಿದೆ ಎನ್ನಲಾಗಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದೆ. ಸಿನಿಮಾದಲ್ಲಿ ಯಶ್ ಅವರ ಲುಕ್ ಮತ್ತು ಸ್ಟೈಲ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಚಿತ್ರದಲ್ಲಿ ಅವರದ್ದು ಡಬಲ್ ಪಾತ್ರ ಎಂಬುದು ಕೂಡ ರಿವೀಲ್ ಆಗಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರವು ವಿಭಿನ್ನ ಮೇಕಿಂಗ್ ಮತ್ತು ಅದ್ದೂರಿ ತಾರಾಗಣದಿಂದಾಗಿ ಗಾಂಧಿನಗರ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೆಟ್ರೋ ಸ್ಟೇಷನ್​ಗಳಲ್ಲಿ ಆತ್ಮಹತ್ಯೆ ಕೇಸ್ ಹೆಚ್ಚಳ ಹಿನ್ನೆಲೆ BMRCL ವಿನೂತನ ಕ್ರಮ! – Kannada News | BMRCL Partners with NIMHANS to Launch Tele MANAS Mental Health Helpline Boards at Bengaluru Metro Stations

ನಮ್ಮ ಮೆಟ್ರೋ ನಿಲ್ದಾಣ (ಸಾಂದರ್ಭಿಕ ಚಿತ್ರ)Image Credit source: PTI

ಬೆಂಗಳೂರು, ಜೂನ್ 26: ಸಿಲಿಕಾನ್ ಸಿಟಿ ಬೆಂಗಳೂರಿನ ಸಾರ್ವಜನಿಕ ಸಾರಿಗೆಯ ಜೀವನಾಡಿಯಾಗಿರುವ ‘ನಮ್ಮ ಮೆಟ್ರೋ’ ನಿಲ್ದಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಳಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗುವ ಘಟನೆಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಅಮೂಲ್ಯ ಜೀವಗಳು ನಷ್ಟವಾಗುವುದರ ಜೊತೆಗೆ ಮೆಟ್ರೋ ಸಂಚಾರದಲ್ಲೂ ಗಂಟೆಗಟ್ಟಲೆ ವ್ಯತ್ಯಯ ಉಂಟಾಗಿ ನಿತ್ಯ ಪ್ರಯಾಣಿಕರು ತೀವ್ರ ಪರದಾಡುವಂತಾಗುತ್ತದೆ. ಈ ಗಂಭೀರ ಸಮಸ್ಯೆಗೆ ಕಡಿವಾಣ ಹಾಕಲು ಮುಂದಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL), ಮೆಟ್ರೋ ನಿಲ್ದಾಣಗಳನ್ನು ಸುರಕ್ಷಿತವಾಗಿಸಲು ಮತ್ತು ಜನರ ಮನಸ್ಥಿತಿಯನ್ನು ಬದಲಾಯಿಸಲು ನಿಮ್ಹಾನ್ಸ್ (NIMHANS) ಸಂಸ್ಥೆಯೊಂದಿಗೆ ಕೈಜೋಡಿಸಿ ವಿಶೇಷ ಜಾಗೃತಿ ಅಭಿಯಾನವನ್ನು ಆರಂಭಿಸಿದೆ.

‘ಯೋಚನೆ ಬೇಡ, ಚಿಂತೆ ಬಿಡಿ, ಮಾತ್ನಾಡಿ’: ಮೆಟ್ರೋ ಹಳಿಗಳ ಬಳಿ ಬೋರ್ಡ್

ಕಳೆದ ಎರಡು ವರ್ಷಗಳ ಅವಧಿಯಲ್ಲಿ 11ಕ್ಕೂ ಹೆಚ್ಚು ಜನರು ಮೆಟ್ರೋ ಟ್ರ್ಯಾಕ್‌ಗೆ ಜಿಗಿದಿರುವ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತಹ ದುರ್ಘಟನೆಗಳನ್ನು ತಡೆಯಲು ಮೆಜೆಸ್ಟಿಕ್, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಪ್ರಮುಖ ಮೆಟ್ರೋ ನಿಲ್ದಾಣಗಳ ಹಳಿಗಳ ಪಕ್ಕದಲ್ಲಿಯೇ ಬಿಎಂಆರ್‌ಸಿಎಲ್ ವಿಶೇಷ ಡಿಜಿಟಲ್ ಡಿಸ್ಪ್ಲೇ ಮತ್ತು ಸೈನ್ ಬೋರ್ಡ್‌ಗಳನ್ನು ಅಳವಡಿಸಿದೆ. ಈ ಬೋರ್ಡ್‌ಗಳಲ್ಲಿ ‘‘ಯೋಚನೆ ಬೇಡ, ಚಿಂತೆ ಬಿಡಿ, ಮಾತ್ನಾಡಿ’’ ಹಾಗೂ ‘‘ದಣಿವಾಗೋದು ಸಹಜ, ಸಹಾಯ ಕೇಳೋದು ಸಹಜ’’ ಎಂಬ ಸಾಲುಗಳನ್ನು ಬರೆಯಲಾಗಿದ್ದು, ಕಷ್ಟದಲ್ಲಿ ಇರುವವರಿಗೆ ಮಾನಸಿಕ ಧೈರ್ಯ ತುಂಬುವ ಪ್ರಯತ್ನ ಮಾಡಲಾಗುತ್ತಿದೆ.

‘ಟೆಲಿಮನಸ್’ ಯೋಜನೆಯಡಿ ಆಪ್ತ ಸಮಾಲೋಚನೆ

ನಿಮ್ಹಾನ್ಸ್ ಸಂಸ್ಥೆಯ ಆರ್ಥಿಕ ಮತ್ತು ತಾಂತ್ರಿಕ ಸಹಯೋಗದೊಂದಿಗೆ ಟೆಲಿಮನಸ್ (Tele-MANAS) ಕಾರ್ಯಕ್ರಮದ ಅಡಿಯಲ್ಲಿ ಈ ಜಾಗೃತಿ ಮೂಡಿಸಲಾಗುತ್ತಿದೆ. ನಿಲ್ದಾಣಗಳ ಪ್ರಮುಖ ಸ್ಥಳಗಳಲ್ಲಿ ಕಾಲ್ ಸೆಂಟರ್ ಸಹಾಯವಾಣಿ ಸಂಖ್ಯೆಗಳನ್ನು ಡಿಸ್ಪ್ಲೇ ಮಾಡಲಾಗಿದೆ. ಯಾವುದೇ ವ್ಯಕ್ತಿ ಮಾನಸಿಕ ಒತ್ತಡದಲ್ಲಿದ್ದರೆ ಅಥವಾ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಆಲೋಚನೆ ಬರುತ್ತಿದ್ದರೆ, ತಕ್ಷಣವೇ ಈ ಸಂಖ್ಯೆಗಳಿಗೆ ಕರೆ ಮಾಡಿ ತಜ್ಞರಿಂದ ಉಚಿತ ಆಪ್ತ ಸಮಾಲೋಚನೆ ಹಾಗೂ ಸಹಾಯ ಪಡೆಯುವಂತೆ ಮನವಿ ಮಾಡಲಾಗಿದೆ.

ಮೆಟ್ರೋದಲ್ಲಿ ಹೆಚ್ಚಿದ ಸಮಸ್ಯೆ

ನಮ್ಮ ಮೆಟ್ರೋ ಟ್ರ್ಯಾಕ್​ಗೆ ಜಿಗಿದು ಪ್ರಾಣ ಕಳೆದುಕೊಳ್ಳುವ ಪ್ರಕರಣಗಳ ಸಂಖ್ಯೆ ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗಿದೆ. ಕಳೆದ 2 ವರ್ಷಗಳ ಅವಧಿಯಲ್ಲಿ ಕನಿಷ್ಠ 3 ಮಂದಿ ಮೃತಪಟ್ಟಿದ್ದು, 5ಕ್ಕೂ ಹೆಚ್ಚು ಆತ್ಮಹತ್ಯೆ ಯತ್ನ ನಡೆದಿವೆ.

ಇದನ್ನೂ ಓದಿ: ಮತ್ತೆ ಕೈಕೊಟ್ಟ ನಮ್ಮ ಮೆಟ್ರೋ: ಬಾಗಿಲು ಲಾಕ್ ಆಗದೇ ನಿಂತಲ್ಲೇ ನಿಂತ ರೈಲು

ಒಟ್ಟಿನಲ್ಲಿ, ಟ್ರಾಫಿಕ್ ಕಿರಿಕಿರಿ ಇಲ್ಲದೆ ನಿಶ್ಚಿಂತೆಯಿಂದ ಪ್ರಯಾಣಿಸಲು ಜನ ಆಶ್ರಯಿಸುವ ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತೆಗಾಗಿ ಬಿಎಂಆರ್‌ಸಿಎಲ್ ಕೈಗೊಂಡಿರುವ ಈ ಜನಪರ ನಿರ್ಧಾರಕ್ಕೆ ಸಾರ್ವಜನಿಕರು ಹಾಗೂ ಸವಾರರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:36 am, Fri, 26 June 26

Source link

Exit mobile version