ರೀಟೇಲ್ ಹಣದುಬ್ಬರ ಜುಲೈನಲ್ಲಿ ಶೇ. 4.45ಕ್ಕೆ ಏರಿಕೆ; ಆರ್​ಬಿಐನ ತಾಳಿಕೆ ಮಿತಿಯೊಳಗಿದೆ ಬೆಲೆ ಏರಿಕೆ ದರ – Kannada News | CPI based Retail Inflation in July 2026 rise to 4.45pc from 4.38pc in June

ನವದೆಹಲಿ, ಆಗಸ್ಟ್ 12: ಆಹಾರ ಪದಾರ್ಥಗಳ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತದ ರೀಟೇಲ್ ಹಣದುಬ್ಬರವು (Consumer Price Index – CPI) ಜುಲೈ ತಿಂಗಳಲ್ಲಿ 4.45% ಗೆ ಏರಿಕೆಯಾಗಿದೆ. ಜೂನ್ ತಿಂಗಳಿನಲ್ಲಿ ಇದು 4.38% ಆಗಿತ್ತು. ಇದರೊಂದಿಗೆ ದೇಶದ ಚಿಲ್ಲರೆ ಹಣದುಬ್ಬರವು ಸತತ ಎರಡನೇ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಗದಿಪಡಿಸಿರುವ 4% ಮಧ್ಯಮಾವಧಿ ಗುರಿಗಿಂತ ಮೇಲೆ ಹೋಗಿದೆ. ಆದರೆ, ಹಣದುಬ್ಬರ ತಾಳಿಕೆ ಮಿತಿಯಾದ 6% ಒಳಗೆಯೇ ಇದೆ.

ಹಣದುಬ್ಬರ ಹೆಚ್ಚಳಕ್ಕೆ ಆಹಾರ ಪದಾರ್ಥಗಳ ಬೆಲೆ ಕಾರಣ

ಗ್ರಾಹಕ ಬೆಲೆ ಅನುಸೂಚಿ ಆಧಾರಿತವಾದ ಈ ಚಿಲ್ಲರೆ ಹಣದುಬ್ಬರದ ಏರಿಕೆಗೆ ಆಹಾರ ದರಗಳ ತೀವ್ರ ಹೆಚ್ಚಳವೇ ಮುಖ್ಯ ಕಾರಣವಾಗಿದೆ. ಜುಲೈನಲ್ಲಿ ಆಹಾರ ಹಣದುಬ್ಬರ ಅಥವಾ ಆಹಾರ ಪದಾರ್ಥಗಳ ಸರಾಸರಿ ಬೆಲೆ ಏರಿಕೆ 5.52% ಇದೆ.

ಉಳ್ಳಿ, ಖಾದ್ಯ ತೈಲಗಳು, ಅಕ್ಕಿ ಮತ್ತು ಬೇಳೆಕಾಳುಗಳಂತಹ ಅತ್ಯಗತ್ಯ ಆಹಾರವಸ್ತುಗಳ ದರ ಹೆಚ್ಚಳವು ಗ್ರಾಹಕರ ಬಜೆಟ್ ಮೇಲೆ ನೇರ ಪರಿಣಾಮ ಬೀರಿದೆ.

ಇದನ್ನೂ ಓದಿ: ಟಾಟಾ ಸನ್ಸ್ ಉನ್ನತ ಸ್ಥಾನ ತೊರೆದ ಎನ್ ಚಂದ್ರಶೇಖರನ್ ಅವರ ವೇತನ, ಕಮಿಷನ್ ಇತ್ಯಾದಿ ವರಮಾನ ಎಷ್ಟು ಗೊತ್ತಾ?

ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಭಾವ: ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರದ ಪ್ರಭಾವ ಹೆಚ್ಚಾಗಿದೆ. ಗ್ರಾಮೀಣ ಭಾಗದ ಕುಟುಂಬಗಳ ವೆಚ್ಚದಲ್ಲಿ ಆಹಾರ ಧಾನ್ಯಗಳ ಪಾಲು ಹೆಚ್ಚಾಗಿರುವುದೇ ಇದಕ್ಕೆ ಕಾರಣ.

ಮುಂಗಾರು ಮತ್ತು ಬೆಳೆ ಸ್ಥಿತಿಗತಿ

ದೇಶದಾದ್ಯಂತ ಅಸಮಾನ ಮುಂಗಾರು ಮಳೆಯು ಕೃಷಿ ಉತ್ಪಾದನೆ ಮತ್ತು ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರಿದೆ. ಜುಲೈ ದ್ವಿತೀಯಾರ್ಧದಲ್ಲಿ ಮಳೆ ಪ್ರಮಾಣ ಸುಧಾರಿಸಿದ್ದು, ಶೇಕಡಾ 63 ರಷ್ಟು ರಾಜ್ಯಗಳಲ್ಲಿ ಸಾಧಾರಣ ಮಳೆಯಾಗಿದೆ. ಖಾರಿಫ್ ಬೆಳೆಗಳ ಬಿತ್ತನೆ ಪ್ರಮಾಣ ಉತ್ತಮವಾಗಿದ್ದರೂ, ಆಹಾರ ಪದಾರ್ಥಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ದರ ಏರಿಕೆಗೆ ದಾರಿಯಾಗಿದೆ.

ಇದನ್ನೂ ಓದಿ: ಕೆಲಸ ಬಿಟ್ಟ ಆರು ಮಂದಿಯ ಹುಚ್ಚುತನದಲ್ಲಿ ಆರಂಭವಾಗಿತ್ತು ಎಚ್​ಸಿಎಲ್; ಕಾರು ಮಾರಿ ಕಟ್ಟಿದ ಕಂಪನಿಯ ಕಥೆ ಇದು…

ಆರ್‌ಬಿಐ (RBI) ನಿಲುವು ಮತ್ತು ಭವಿಷ್ಯದ ಅಂದಾಜು

ಹಣದುಬ್ಬರವು ಆರ್‌ಬಿಐನ 4% ಗುರಿಯನ್ನು ಮೀರಿದ್ದರೂ, ಅದು ನಿಗದಿಪಡಿಸಿರುವ 2% ನಿಂದ 6% ಒಳಗಿನ ತಾಳಿಕೆಯ ಮಿತಿಯಲ್ಲೇ ಇದೆ. ಆದ್ದರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಇತ್ತೀಚಿನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರಗಳನ್ನು (Repo Rate) ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದೆ.

ಆದಾಗ್ಯೂ, ಹವಾಮಾನ ವೈಪರೀತ್ಯ ಹಾಗೂ ಕಚ್ಚಾ ತೈಲ ದರಗಳ ಏರಿಳಿತಗಳಿಂದಾಗಿ ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Balasana Benefits: ಪ್ರತಿದಿನ ಬೆಳಗ್ಗೆ 15 ನಿಮಿಷಗಳ ಬಾಲಾಸನ ಮಾಡಿ, ಈ ಎಲ್ಲಾ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ – Kannada News | Balasana Benefits: Do Child’s Pose for 15 minutes every day to relieve stress

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು, ಉತ್ತಮ ಜೀವನಶೈಲಿ, ಪೌಷ್ಟಿಕ ಆಹಾರ ಮತ್ತು ದೈಹಿಕ ಚಟುವಟಿಕೆ ಅತ್ಯಗತ್ಯ. ಆದರೆ ಇಂದಿನ ಈ ಬ್ಯುಸಿ ಜೀವನದ ಕಾರಣದಿಂದಾಗಿ ಅನೇಕರಿಗೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಒತ್ತಡವೂ (stress) ಹೆಚ್ಚುತ್ತಿದೆ. ಈ ಒತ್ತಡವು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಹಾನಿ ಉಂಟುಮಾಡುತ್ತದೆ. ಈ ಒಂದು ಸಮಸ್ಯೆಗೆ ನಿತ್ಯ ಬಾಲಾಸನ ಮಾಡುವ ಮೂಲಕ ಪರಿಹಾರವನ್ನು ಪಡೆಯಬಹುದು. ಒತ್ತಡವನ್ನು ನಿವಾರಿಸುವಲ್ಲಿ ಬಾಲಾಸನ ಅತ್ಯಂತ ಪರಿಣಾಮಕಾರಿ ಯೋಗಭಂಗಿಯಾಗಿದೆ. ಚೈಲ್ಡ್ಸ್ ಪೋಸ್ ಎಂದೂ ಕರೆಯಲಾಗುವ ಬಾಲಾಸನದ ನಿಯಮಿತ ಅಭ್ಯಾಸವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಒತ್ತಡ, ಆತಂಕ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.

ಬಾಲಾಸನ ಮಾಡುವುದರಿಂದ ಲಭಿಸುವ ಪ್ರಯೋಜನಗಳು:

ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ:  ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ನೀವು ಬಾಲಾಸನವನ್ನು ಪ್ರತಿದಿನವೂ ಅಭ್ಯಾಸ ಮಾಡಬೇಕು. ಇದು ಮನಸ್ಸಿಗೆ ಶಾಂತಿಯನ್ನು ತರುತ್ತದೆ ಮತ್ತು ಉದ್ವೇಗವನ್ನು ಕಡಿಮೆ ಮಾಡುತ್ತದೆ. ರಮಂಡಲವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ, ಮಾನಸಿಕವಾಗಿ ಹಗುರ ಮತ್ತು ಸಮತೋಲನವನ್ನು ಅನುಭವಿಸಲು ಸಹಾಯ ಮಾಡುತ್ತದೆ.

ಬೆನ್ನು ನೋವಿನಿಂದ ಪರಿಹಾರ: ಪ್ರತಿದಿನ 15 ನಿಮಿಷಗಳ ಕಾಲ ಬಾಲಾಸನವನ್ನು ಅಭ್ಯಾಸ ಮಾಡುವುದರಿಂದ ಬೆನ್ನು ನೋವು ನಿವಾರಣೆಯಾಗುತ್ತದೆ ಮತ್ತು ಗಮನಾರ್ಹ ವಿಶ್ರಾಂತಿ ದೊರೆಯುತ್ತದೆ. ಬಾಲಾಸನವು ಬೆನ್ನುಮೂಳೆ ಮತ್ತು ಬೆನ್ನಿನ ಸ್ನಾಯುಗಳನ್ನು ನಿಧಾನವಾಗಿ ಬಲಗೊಳಿಸಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:  ಬಾಲಾಸನವು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

ಮಾನಸಿಕ ಶಾಂತಿ: ನಿಯಮಿತ ಅಭ್ಯಾಸವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಕುತ್ತಿಗೆ ಮತ್ತು ಭುಜಗಳಲ್ಲಿನ ಬಿಗಿತವನ್ನು ಕಡಿಮೆ ಮಾಡುತ್ತದೆ: ಪ್ರತಿದಿನ ಬಾಲಾಸನವನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಕುತ್ತಿಗೆ ಮತ್ತು ಭುಜಗಳಲ್ಲಿನ ಬಿಗಿತ ಕಡಿಮೆಯಾಗುತ್ತದೆ. ಲ್ಯಾಪ್‌ಟಾಪ್ ಅಥವಾ ಮೊಬೈಲ್ ಫೋನ್‌ನ ಅತಿಯಾದ ಬಳಕೆಯು ನಿಮ್ಮ ಕುತ್ತಿಗೆ ಮತ್ತು ಭುಜಗಳಲ್ಲಿ ಗಮನಾರ್ಹ ಒತ್ತಡವನ್ನು ಉಂಟುಮಾಡಬಹುದು. ಇದರಿಂದ ಪರಿಹಾರವನ್ನು ಕಂಡುಕೊಳ್ಳಲು ನಿತ್ಯ 15 ನಿಮಿಷಗಳ ಕಾಲ ಬಾಲಾಸನ ಮಾಡುವುದು ಒಳ್ಳೆಯದು.

ಉತ್ತಮ ನಿದ್ರೆಗೆ ಸಹಕಾರಿ:  ಈ ಆಸನವನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಉತ್ತಮ ನಿದ್ರೆ ಪಡೆಯಬಹುದು. ಒತ್ತಡ ಅಥವಾ ಆತಂಕದಿಂದಾಗಿ ನಿಮಗೆ ನಿದ್ರಿಸಲು ತೊಂದರೆಯಾಗಿದ್ದರೆ, ನೀವು ಮಲಗುವ ಮುನ್ನ ಈ ಆಸನವನ್ನು ಅಭ್ಯಾಸ ಮಾಡಿ.

ಬಾಲಾಸನ ಮಾಡುವ ಸರಿಯಾದ ವಿಧಾನ:

ಹಂತ 1- ಯೋಗ ಚಾಪೆಯ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ
ಹಂತ 2:  ನಿಮ್ಮ ಕಾಲ್ಬೆರಳುಗಳನ್ನು (ಕಣಕಾಲು) ನೇರವಾಗಿ ಹಿಂದಕ್ಕೆ ಚಾಚಿ ಮತ್ತು ನಿಮ್ಮ ಹಿಮ್ಮಡಿಯ ಮೇಲೆ ಕುಳಿತುಕೊಳ್ಳಿ.
ಹಂತ 3: ಉಸಿರನ್ನು ಎಳೆದುಕೊಳ್ಳುತ್ತಾ ನಿಧಾನವಾಗಿ ಮುಂದಕ್ಕೆ ಬಾಗಿ ನಿಮ್ಮ ಹಣೆಯನ್ನು ನೆಲಕ್ಕೆ ಸ್ಪರ್ಶಿಸಿ.
ಹಂತ 4: ಎರಡೂ ಕೈಗಳನ್ನು ನೇರವಾಗಿ ಮುಂದಕ್ಕೆ ಅಥವಾ  ಹಿಂದಕ್ಕೆ ಚಾಚಿ.
ಹಂತ 5:  ನಿಧಾನವಾಗಿ  ಉಸಿರಾಡುತ್ತಾ   30 ಸೆಕೆಂಡುಗಳಿಂದ 2 ನಿಮಿಷಗಳವರೆಗೆ ಇದೇ ಸ್ಥಾನದಲ್ಲಿರಿ.
ಹಂತ 7:  ನಿಧಾನವಾಗಿ ಆರಂಭಿಕ ಸ್ಥಾನಕ್ಕೆ ಹಿಂತಿರುಗಿ. ಮತ್ತೆ 3-5 ಬಾರಿ ಪುನರಾವರ್ತಿಸಿ.

ಇದನ್ನೂ ಓದಿ: ಒತ್ತಡದಿಂದ ಮುಕ್ತರಾಗಲು ಬಯಸಿದರೆ ಗಾರ್ಡನಿಂಗ್‌ ಹವ್ಯಾಸವನ್ನು ಬೆಳೆಸಿಕೊಳ್ಳಿ

ಬಾಲಾಸನ ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:

  • ತೀವ್ರವಾದ ಮೊಣಕಾಲು ನೋವು ಇದ್ದರೆ, ವೈದ್ಯರ ಸಲಹೆ ಇಲ್ಲದೆ ಈ ಆಸನವನ್ನು ಮಾಡಬಾರದು
  • ಗರ್ಭಿಣಿಯರು ತಜ್ಞರ ಸಲಹೆಯಿಲ್ಲದೆ ಇದನ್ನು ಮಾಡಬಾರದು.
  • ನಿಮಗೆ ಅಧಿಕ ರಕ್ತದೊತ್ತಡ ಅಥವಾ ತಲೆತಿರುಗುವಿಕೆ ಇದ್ದರೆ ಜಾಗರೂಕರಾಗಿರಿ.
  • ಕುತ್ತಿಗೆಗೆ ಗಾಯವಾಗಿದ್ದರೆ ಜಾಗರೂಕರಾಗಿರಿ.
  • ಹೆಚ್ಚು ಒತ್ತಡ ಹೇರಿ ನಿಮ್ಮ ಹಣೆಯನ್ನು ನೆಲದ ಮೇಲೆ ಇಡಬೇಡಿ.

ಬಾಲಾಸನವನ್ನು ಯಾವಾಗ ಮಾಡಬೇಕು?

  • ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಲಾಸನ ಮಾಡುವುದು ಉತ್ತಮ.
  • ಉತ್ತಮ ನಿದ್ರೆಗಾಗಿ ರಾತ್ರಿ ಮಲಗುವ ಮುನ್ನ ಬಾಲಾಸನ ಅಭ್ಯಾಸ ಮಾಡುವುದು ಒಳ್ಳೆಯದು.
  • ನೀವು ಒತ್ತಡಕ್ಕೊಳಗಾದಾಗಲೆಲ್ಲಾ ಬಾಲಾಸನ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:16 pm, Wed, 12 August 26

Source link

ಐವಿಎಫ್ ಬಳಿಕ ಬಾಣಂತಿಯರು ಮಗುವಿಗೆ ಹಾಲುಣಿಸಬಹುದೇ? ತಜ್ಞರು ನೀಡಿರುವ ಉತ್ತರವೇನು? – Kannada News | Can IVF Affect Breastfeeding After Delivery? Know What Doctors Say

ಐವಿಎಫ್ (IVF) ಮೂಲಕ ಗರ್ಭಧಾರಣೆ ಮಾಡಿಕೊಂಡ ಮಹಿಳೆಯರಲ್ಲಿ ಡೆಲಿವರಿ ನಂತರ ಮಗುವಿಗೆ ಸ್ತನ್ಯಪಾನ ಮಾಡಿಸಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿದೆ. ಐವಿಎಫ್ ವೇಳೆ ಹಾರ್ಮೋನ್‌ ಆಧಾರಿತ ಔಷಧಿಗಳನ್ನು ನೀಡುವುದರಿಂದ, ನಂತರ ಎದೆಹಾಲು ಉತ್ಪಾದನೆಗೆ ತೊಂದರೆಯಾಗಬಹುದೇ ಎಂಬ ಆತಂಕವೂ ಇರುತ್ತದೆ. ಹಾಗಾದರೆ ಐವಿಎಫ್ ನಂತರ ಸ್ತನ್ಯಪಾನ ಮಾಡುವಾಗ ನಿಜವಾಗಿಯೂ ಸಮಸ್ಯೆ ಉಂಟಾಗಬಹುದೇ, ಯಾವ ಅಂಶಗಳು ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಸ್ಟೋರಿಯಲ್ಲಿದೆ.

ಐವಿಎಫ್ ಬಳಸುವ ಹಾರ್ಮೋನ್‌ ಔಷಧಿಗಳು ಸಾಮಾನ್ಯವಾಗಿ ಚಿಕಿತ್ಸೆಯ ನಿರ್ದಿಷ್ಟ ಹಂತದಲ್ಲಿ ಮಾತ್ರ ಅಗತ್ಯವಿರುತ್ತವೆ. ಗರ್ಭಧಾರಣೆಯ ನಂತರ ವೈದ್ಯರ ಸಲಹೆಯಂತೆ ಅವುಗಳನ್ನು ಕ್ರಮೇಣ ನಿಲ್ಲಿಸಲಾಗುತ್ತದೆ. ಮಗುವಿನ ಜನನದ ವೇಳೆಗೆ ಸ್ತನ್ಯಪಾನವನ್ನು ನಿಯಂತ್ರಿಸುವ ದೇಹದ ಸ್ವಾಭಾವಿಕ ಹಾರ್ಮೋನ್‌ ಪ್ರಕ್ರಿಯೆಯೇ ಪ್ರಮುಖವಾಗಿರುತ್ತದೆ. ಅದರಲ್ಲಿಯೂ ಐವಿಎಫ್ ಮೂಲಕ ಗರ್ಭಧಾರಣೆಯಾದ ಕಾರಣಕ್ಕೆ ಮಾತ್ರ ಸ್ತನ್ಯಪಾನದಲ್ಲಿ ಸಮಸ್ಯೆ ಉಂಟಾಗುತ್ತದೆ ಎಂಬುದಕ್ಕೆ ಬಲವಾದ ವೈಜ್ಞಾನಿಕ ಸಾಕ್ಷ್ಯವಿಲ್ಲ.

ಐವಿಎಫ್ ನಂತರ ಸ್ತನ್ಯಪಾನ ಮಾಡಿಸಬಹುದೇ?

ಸಾಮಾನ್ಯವಾಗಿ ಐವಿಎಫ್ ಮೂಲಕ ಪ್ರೇಗ್ನೆಂಟ್ ಆದ ಮಹಿಳೆಯರೂ ಸಾಮಾನ್ಯವಾಗಿ ಮಗುವಿಗೆ ಸ್ತನ್ಯಪಾನ ಮಾಡಿಸಬಹುದು. ಮಗುವಿನ ಜನನದ ನಂತರ ಪ್ಲಾಸೆಂಟಾ ಹೊರಬಂದಾಗ ಗರ್ಭಾವಸ್ಥೆಯಲ್ಲಿ ಹೆಚ್ಚಾಗಿದ್ದ ಕೆಲವು ಹಾರ್ಮೋನ್‌ಗಳ ಮಟ್ಟ ಕಡಿಮೆಯಾಗುತ್ತದೆ. ಪ್ರೊಲ್ಯಾಕ್ಟಿನ್‌ (Prolactin) ಹಾರ್ಮೋನ್ ಎದೆಹಾಲು ಉತ್ಪಾದನೆಗೆ ಸಹಾಯ ಮಾಡುತ್ತದೆ. ಮಗು ಸ್ತನಕ್ಕೆ ಹಾಲು ಕುಡಿಯಲು ಅಂಟಿಕೊಂಡಾಗ ಆಕ್ಸಿಟೋಸಿನ್‌ (Oxytocin) ಬಿಡುಗಡೆಯಾಗಿ ಹಾಲು ಹೊರಬರಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆ ಸ್ವಾಭಾವಿಕವಾಗಿ ಗರ್ಭಧಾರಣೆಯಾದ ಮಹಿಳೆಯರಲ್ಲಿಯೂ, IVF ಮೂಲಕ ಗರ್ಭಧಾರಣೆಯಾದ ಮಹಿಳೆಯರಲ್ಲಿಯೂ ಒಂದೇ ರೀತಿಯಾಗಿದೆ.

ತಜ್ಞರು ಏನು ಹೇಳುತ್ತಾರೆ?

ಐವಿಎಫ್ ತಜ್ಞೆ ಡಾ. ಸುತಪಾ ಸೇನ್ ಅವರ ಪ್ರಕಾರ, ಮಗುವಿನ ಜನನದ ನಂತರ ಸ್ತನ್ಯಪಾನ ಯಾವ ವಿಧಾನದಿಂದ ಆಯಿತು ಎನ್ನುವುದಕ್ಕಿಂತ, ಹೆರಿಗೆ ನಂತರ ತಾಯಿ ಮತ್ತು ಮಗುವಿಗೆ ಸಿಗುವ ಆರೈಕೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಮಗುವಿನ ಜನನದ ಮೊದಲ ಗಂಟೆಯೊಳಗೆ ಸ್ತನ್ಯಪಾನ ಆರಂಭಿಸುವುದು, ತಾಯಿ-ಮಗುವಿನ Skin-to-Skin Contact, ಸರಿಯಾದ ರೀತಿಯಲ್ಲಿ ಮಗುವನ್ನು ಸ್ತನಕ್ಕೆ ಅಂಟಿಸುವುದು ಮತ್ತು ಮಗುವಿಗೆ ಆಗಾಗ ಹಾಲುಣಿಸುವುದು ಸ್ತನ್ಯಪಾನ ಯಶಸ್ವಿಯಾಗಲು ಸಹಾಯ ಮಾಡಬಹುದು.

ಮಹಿಳೆಯ ವಯಸ್ಸು ಹೆಚ್ಚಿರುವುದು, ಸಿಸೇರಿಯನ್ ಹೆರಿಗೆ, ಅವಳಿ ಗರ್ಭಧಾರಣೆ, ಅವಧಿಗೂ ಮುನ್ನ ಹೆರಿಗೆ, ಗರ್ಭಾವಸ್ಥೆಯ ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ಅಂಶಗಳು ಸ್ತನ್ಯಪಾನ ಆರಂಭದ ಮೇಲೆ ಪರಿಣಾಮ ಬೀರಬಹುದು. ಮಗುವಿನ ಜನನದ ನಂತರ ಸಾಧ್ಯವಾದಷ್ಟು ಬೇಗ ಸ್ತನ್ಯಪಾನ ಆರಂಭಿಸುವುದು, ಮಗುವನ್ನು ತಾಯಿಯೊಂದಿಗೆ ಹೆಚ್ಚು ಸಮಯ ಇರಿಸುವುದು ಮತ್ತು ಮಗುವಿಗೆ ಅಗತ್ಯಕ್ಕೆ ಅನುಗುಣವಾಗಿ ಆಗಾಗ ಹಾಲುಣಿಸುವುದು ಸಹಾಯಕವಾಗಬಹುದು.

ಮಗುವಿಗೆ ಹಾಲು ಸರಿಯಾಗಿ ಸಿಗುತ್ತಿಲ್ಲ ಎಂದು ಅನಿಸಿದರೆ, ಹಾಲಿನ ಪ್ರಮಾಣ ಕಡಿಮೆಯಾಗಿದೆ ಎಂದು ಅನುಮಾನವಿದ್ದರೆ ಅಥವಾ ಸ್ತನಗಳಲ್ಲಿ ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ. ಸ್ತ್ರೀರೋಗ ತಜ್ಞರು, ಫರ್ಟಿಲಿಟಿ ತಜ್ಞರು ಅಥವಾ ಲ್ಯಾಕ್ಟೇಶನ್‌ ಕನ್ಸಲ್ಟೆಂಟ್‌ರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾಲು ಸಾಲು ಅಕ್ರಮ ಆರೋಪ: ಕೆಪಿಎಸ್​​​​ಸಿಗೆ ಮೇಜರ್ ಸರ್ಜರಿ! – Kannada News | KPSC Officer Transfers: IAS H. Prasanna, Lavish Ordia Appointed Amid Allegations

ಬೆಂಗಳೂರು, ಆಗಸ್ಟ್​​ 12: ಕರ್ನಾಟಕ ಲೋಕಸೇವಾ ಆಯೋಗದ (KPSC) ಇತ್ತೀಚಿನ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಅಕ್ರಮಗಳ ವಿರುದ್ಧ ರಾಜ್ಯದಲ್ಲಿ ಉದ್ಯೋಗಾಕಾಂಕ್ಷಿಗಳು ಉಗ್ರ ಹೋರಾಟ ಕೂಡ ಮಾಡಿದ್ದರು. ಹೀಗೆ ಸಾಲು ಸಾಲು ಅಕ್ರಮ ಆರೋಪಗಳ ಬೆನ್ನಲ್ಲೇ ಇದೀಗ ಸರ್ಕಾರ ಕೆಪಿಎಸ್​​​​ಸಿಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಅಧಿಕಾರಿಗಳ ವರ್ಗಾವಣೆ (Transfer) ಮಾಡಿ ಆದೇಶ ಹೊರಡಿಸಿದೆ.

ಕೆಪಿಎಸ್‌ಸಿಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಪ್ರಮುಖ ಅಧಿಕಾರಿಗಳ ಎತ್ತಂಗಡಿಗೆ ಆದೇಶಿಸಿದ್ದು, ಕೆಪಿಎಸ್‌ಸಿಗೆ ಇಬ್ಬರು ಐಎಎಸ್ (IAS) ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ: ಸುಳ್ಳು ಆದಾಯ ಪ್ರಮಾಣಪತ್ರ ವಿವಾದ: ಸುಮಾ ಸಾಹುಕಾರ್‌ಗೆ ಹೈಕೋರ್ಟ್ ತರಾಟೆ, ಕೆಪಿಎಸ್​ಸಿ ಕಾರ್ಯವೈಖರಿ ಬಗ್ಗೆ ಗರಂ

ಈ ಮುಂಚೆ ಪರೀಕ್ಷಾ ನಿಯಂತ್ರಣ ಅಧಿಕಾರಿಯಾಗಿದ್ದ ದಿಗ್ವಿಜಯ್ ಬೋಡ್ಕೆ ಅವರನ್ನು ಯಾವುದೇ ಪರ್ಯಾಯ ಜಾಗ ತೋರಿಸದೆ ಸರ್ಕಾರ ವರ್ಗಾವಣೆಗೊಳಿಸಿದೆ. ತೆರವಾದ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ಹುದ್ದೆಗೆ ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಹೆಚ್. ಪ್ರಸನ್ನ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ಕೆಪಿಎಸ್‌ಸಿ ಜಂಟಿ ಪರೀಕ್ಷಾ ನಿಯಂತ್ರಕರಾಗಿ ಲವೀಶ್ ಓರ್ಡಿಯಾ ನೇಮಕ 

ಇನ್ನು ಕೆಪಿಎಸ್‌ಸಿ ಜಂಟಿ ಪರೀಕ್ಷಾ ನಿಯಂತ್ರಕರಾಗಿ ಐಎಎಸ್ ಅಧಿಕಾರಿ ಲವೀಶ್ ಓರ್ಡಿಯಾ ಅವರನ್ನು ನೇಮಕ ಮಾಡಲಾಗಿದೆ. ಸದ್ಯ ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಲವೀಶ್ ಓರ್ಡಿಯಾ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಕೆಪಿಎಸ್‌ಸಿ ಜಂಟಿ ಪರೀಕ್ಷಾ ನಿಯಂತ್ರಕರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: KPSC ಪರೀಕ್ಷೆ ಅಕ್ರಮ, ಒಂದೇ ಕೊಠಡಿಯಲ್ಲಿದ್ದ 15 ಮಂದಿ ಪಾಸ್! ಕೆಎಎಸ್ ಮುಖ್ಯಪರೀಕ್ಷೆ ಫಲಿತಾಂಶದ ಬಗ್ಗೆಯೇ ಹತ್ತಾರು ಸಂಶಯ

ಸರ್ಕಾರದ ಆದೇಶದಂತೆ ಈ ಎರಡೂ ಹುದ್ದೆಗಳನ್ನು ಪೌರಾಡಳಿತ ನಿರ್ದೇಶಕರ ಹುದ್ದೆಗೆ ಸಮಾನವಾಗಿ ಪರಿಗಣಿಸಿ ಈ ನೇಮಕಾತಿಗಳನ್ನು ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Independence Day 2026: 1947 ಆಗಸ್ಟ್ 14-15ರ ಆ 24 ಗಂಟೆಗಳು: ಭಾರತದಲ್ಲಿ ನಡೆದ ರೋಮಾಂಚಕಾರಿ ಕ್ಷಣಗಳು – Kannada News | The 24 Hours of August 14–15, 1947; How the moment Indians felt during Indian Independence Announcement; details in Kannada

ದೆಹಲಿ, ಆ.12: ಬ್ರಿಟಿಷರ ಗುಲಾಮಿ ಸಂಕೋಲೆಯನ್ನು ಕಳಚಿ, ಭಾರತವು ಸ್ವತಂತ್ರ ರಾಷ್ಟ್ರವಾಗಿ ಜನ್ಮತಳೆದ 1947ರ ಆಗಸ್ಟ್ 14ರ ಸಂಜೆಯಿಂದ ಆಗಸ್ಟ್ 15ರ ಸಂಜೆಯವರೆಗಿನ 24 ಗಂಟೆಗಳು ಭಾರತೀಯ ಇತಿಹಾಸದ ಅತ್ಯಂತ ಅವಿಸ್ಮರಣೀಯ ಅಧ್ಯಾಯ. ಒಂದೆಡೆ ದಶಕಗಳ ಸುದೀರ್ಘ ಹೋರಾಟಕ್ಕೆ ಸಿಕ್ಕ ಸ್ವಾತಂತ್ರ್ಯದ ಪರಮೋಚ್ಛ ಆನಂದ, ಮತ್ತೊಂದೆಡೆ ದೇಶ ವಿಭಜನೆಯ ಭೀಕರ ರಕ್ತಪಾತ ಮತ್ತು ನೋವು. ಈ 24 ಗಂಟೆಗಳಲ್ಲಿ ಇಡೀ ದೇಶ ಅನುಭವಿಸಿದ ಭಾವನೆಗಳನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ. ಅಂದು ದೆಹಲಿಯ ರಾಜಬೀದಿಗಳಿಂದ ಹಿಡಿದು ಗಡಿಭಾಗದ ಹಳ್ಳಿಗಳವರೆಗೆ ಭಾರತೀಯರ ಎದೆಯಲ್ಲಿ ಮೂಡಿದ ರೋಮಾಂಚಕಾರಿ ಘಟನೆಗಳು ಇಲ್ಲಿವೆ.

ಆಗಸ್ಟ್ 14, ಸಂಜೆ 4:00 ರಿಂದ ರಾತ್ರಿ 10:00: ದೆಹಲಿಯಲ್ಲಿ ನೆರೆದ ಜನಸ್ತೋಮ

ಆಗಸ್ಟ್ 14ರ ಸಂಜೆಯಾಗುತ್ತಿದ್ದಂತೆ ದೆಹಲಿಯ ಸಂವಿಧಾನ ಸಭೆಯ ಹೊರಭಾಗದಲ್ಲಿ ಲಕ್ಷಾಂತರ ಜನರು ಜಮಾಯಿಸಿದ್ದರು. ಮಳೆಯ ವಾತಾವರಣವಿದ್ದರೂ ಜನರ ಉತ್ಸಾಹ ಕುಂದಿರಲಿಲ್ಲ. ಕತ್ತಲಾಗುತ್ತಿದ್ದಂತೆ ಸರ್ಕಾರಿ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಇನ್ನೊಂದೆಡೆ, ಅಂತಿಮವಾಗಿ ಯೂನಿಯನ್ ಜ್ಯಾಕ್ (ಬ್ರಿಟಿಷ್ ಧ್ವಜ) ಅನ್ನು ಕೆಳಗಿಳಿಸಿ, ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲು ಸಿದ್ಧತೆಗಳು ಬಿರುಸಿನಿಂದ ಸಾಗಿದ್ದವು. ಬೀದಿ ಬೀದಿಗಳಲ್ಲಿ ‘ಇಂಕ್ವಿಲಾಬ್ ಜಿಂದಾಬಾದ್’, ‘ವಂದೇ ಮಾತರಂ’ ಮತ್ತು ‘ಮಹಾತ್ಮ ಗಾಂಧಿ ಕೀ ಜೈ’ ಎಂಬ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು.

ಆಗಸ್ಟ್ 14, ಮಧ್ಯರಾತ್ರಿ 11:55 ರಿಂದ 12:00: ‘ಟ್ರಿಸ್ಟ್ ವಿತ್ ಡೆಸ್ಟಿನಿ’ ಮತ್ತು ಸ್ವಾತಂತ್ರ್ಯದ ಉದಯ

ಸಂವಿಧಾನ ಸಭೆಯಲ್ಲಿ ಜವಾಹರಲಾಲ್ ನೆಹರೂ ಅವರು ತಮ್ಮ ಐತಿಹಾಸಿಕ “ಟ್ರಿಸ್ಟ್ ವಿತ್ ಡೆಸ್ಟಿನಿ” ಭಾಷಣವನ್ನು ಪ್ರಾರಂಭಿಸಿದರು. “ಮಧ್ಯರಾತ್ರಿಯ ಗಂಟೆ ಬಾರಿಸುತ್ತಿದ್ದಂತೆ, ಇಡೀ ಪ್ರಪಂಚವೇ ನಿದ್ರಿಸುತ್ತಿರುವಾಗ, ಭಾರತವು ಜೀವಂತಿಕೆ ಮತ್ತು ಸ್ವಾತಂತ್ರ್ಯದೊಂದಿಗೆ ಹೊಸ ಮುಂಜಾನೆಗೆ ಎಚ್ಚರಗೊಳ್ಳುತ್ತದೆ.” ಎಂದು ಹೇಳಿದರು. ಗಡಿಯಾರದಲ್ಲಿ ಸರಿ ಮಧ್ಯರಾತ್ರಿ 12 ಘಂಟೆಯಾಗುತ್ತಿದ್ದಂತೆ, ಸಂಸತ್ತಿನ Central Hall ನಲ್ಲಿದ್ದ ಶಂಖಗಳು ಮೊಳಗಿದವು. ಸ್ವತಂತ್ರ ಭಾರತದ ಮೊದಲ ಸಂಸತ್ತು ಅಧಿಕೃತವಾಗಿ ಜನ್ಮ ತಾಳಿತು. ಭಾರತೀಯರ ಮುಖದಲ್ಲಿ ಆನಂದಭಾಷ್ಪ ಹರಿಯಿತು.

ಇದನ್ನೂ ಓದಿ: ಹೆಮ್ಮೆಯ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಈ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು

ಆಗಸ್ಟ್ 15, ಮುಂಜಾನೆ 6:30: ರೇಡಿಯೋದಲ್ಲಿ ‘ವಂದೇ ಮಾತರಂ’ ಧ್ವನಿ

ಆಗಸ್ಟ್ 15ರ ಮುಂಜಾನೆ ಆಲ್ ಇಂಡಿಯಾ ರೇಡಿಯೋ (All India Radio) ಮೂಲಕ ಪಂಡಿತ್ ಓಂಕಾರನಾಥ್ ಠಾಕೂರ್ ಅವರ ಕಂಠದಲ್ಲಿ ‘ವಂದೇ ಮಾತರಂ’ ಗೀತೆ ಪ್ರಸಾರವಾಯಿತು. ಇದನ್ನು ಕೇಳಿದ ಕೋಟ್ಯಂತರ ಭಾರತೀಯರಲ್ಲಿ ದೇಶಭಕ್ತಿಯ ಅಲೆ ಎದ್ದಿತು. ಬೆಳಗ್ಗೆ ಲಾರ್ಡ್ ಮೌಂಟ್‌ಬ್ಯಾಟನ್ ಅವರು ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಆಗಿ ಪ್ರಮಾಣವಚನ ಸ್ವೀಕರಿಸಿದರು ಮತ್ತು ಜವಾಹರಲಾಲ್ ನೆಹರೂ ಅವರು ಭಾರತದ ಮೊದಲ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.

ಕಲ್ಕತ್ತಾದಲ್ಲಿ ಶಾಂತಿಗಾಗಿ ಗಾಂಧೀಜಿ ಉಪವಾಸ: ಸಂಭ್ರಮದ ನಡುವೆ ವಿಭಜನೆಯ ಕಣ್ಣೀರು

ದೆಹಲಿಯಲ್ಲಿ ಸ್ವಾತಂತ್ರ್ಯದ ವಿಜಯೋತ್ಸವ ನಡೆಯುತ್ತಿದ್ದರೆ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮಾತ್ರ ಯಾವುದೇ ಸರ್ಕಾರಿ ಸಂಭ್ರಮದಲ್ಲಿ ಭಾಗವಹಿಸಲಿಲ್ಲ. ಅವರು ಕಲ್ಕತ್ತಾದ (ಈಗಿನ ಕೋಲ್ಕತಾ) ಬೆಲಿಯಾಘಾಟಾದಲ್ಲಿ ಹಿಂದೂ-ಮುಸ್ಲಿಂ ಕೋಮು ಗಲಭೆಯನ್ನು ಶಾಂತಗೊಳಿಸಲು 24 ಗಂಟೆಗಳ ಕಾಲ ಮೌನ ವ್ರತ ಹಾಗೂ ಉಪವಾಸ ಸತ್ಯಾಗ್ರಹದಲ್ಲಿದ್ದರು. “ನಾಳೆ ನಮಗೆ ಬ್ರಿಟಿಷ್ ಆಡಳಿತದಿಂದ ಮುಕ್ತಿ ಸಿಗಲಿದೆ. ಆದರೆ ಮಧ್ಯರಾತ್ರಿಯಿಂದ ಭಾರತವು ಇಬ್ಭಾಗವಾಗಲಿದೆ. ನಾಳೆ ನಮಗೆ ಆನಂದದ ದಿನ ಹೌದು, ಆದರೆ ಅದಕ್ಕಿಂತ ಹೆಚ್ಚಿನ ದುಃಖ ಮತ್ತು ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ.” ಎಂದು ಗಾಂಧಿ ಹೇಳಿದರು. ಪಂಜಾಬ್ ಮತ್ತು ಬೆಂಗಾಲ್ ಗಡಿಭಾಗಗಳಲ್ಲಿ ಕೋಟ್ಯಾಂತರ ಜನರು ತಮ್ಮ ಮನೆ-ಮಠಗಳನ್ನು ತೊರೆದು ವಲಸೆ ಹೋಗುತ್ತಿದ್ದರು. ಲಕ್ಷಾಂತರ ಜನರ ಆಕ್ರಂದನ ಹಾಗೂ ವಿಭಜನೆಯ ನೋವು ಸ್ವಾತಂತ್ರ್ಯದ ಸಂಭ್ರಮದ ಮೇಲೆಯೂ ನೆರಳು ಚೆಲ್ಲಿತ್ತು.

ಆಗಸ್ಟ್ 15, ಮಧ್ಯಾಹ್ನ ಮತ್ತು ಸಂಜೆ: ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ

ಆಗಸ್ಟ್ 15ರ ಮಧ್ಯಾಹ್ನದ ವೇಳೆಗೆ ದೆಹಲಿಯ ಇಂಡಿಯಾ ಗೇಟ್ ಹಾಗೂ ಸಂಸತ್ತಿನ ಸುತ್ತಮುತ್ತ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಜಮಾಯಿಸಿದ್ದರು. ಜನಸಂದಣಿ ಎಷ್ಟಿತ್ತೆಂದರೆ ನಿಗದಿತ ಧ್ವಜಾರೋಹಣ ಕಾರ್ಯಕ್ರಮಗಳನ್ನು ನಿರ್ವಹಿಸುವುದೇ ಸವಾಲಾಗಿತ್ತು. ಪ್ರಧಾನಿ ನೆಹರೂ ಅವರು ಮೊದಲ ಬಾರಿಗೆ ಕೆಂಪುಕೋಟೆಯ ಮೇಲೆ ಭಾರತದ ಹೆಮ್ಮೆಯ ತ್ರಿವರ್ಣ ಧ್ವಜವನ್ನು ಹಾರಿಸಿ, ದೇಶವನ್ನು ಉದ್ದೇಶಿಸಿ ಮಾತನಾಡಿದರು.

24 ಗಂಟೆಗಳಲ್ಲಿ ಭಾರತೀಯರು ಅನುಭವಿಸಿದ ಮೂರು ಮುಖ್ಯ ಘಟನೆಗಳು

ಎರಡು ಶತಮಾನಗಳ ಗುಲಾಮಗಿರಿಯಿಂದ ಮುಕ್ತಿ ಸಿಕ್ಕಿದ ಭಾವನೆ.

ದೇಶ ವಿಭಜನೆ ಹಾಗೂ ಗಡಿಭಾಗದ ರಕ್ತಪಾತದಿಂದ ಹುಟ್ಟಿದ ನೋವು.

ಸ್ವಂತ ಆಡಳಿತ, ಪ್ರಜಾಪ್ರಭುತ್ವ ಮತ್ತು ಕಟ್ಟಕಡೆಯ ವ್ಯಕ್ತಿಗೂ ಸ್ವತಂತ್ರ ಸಿಗಬೇಕೆಂಬ ಬದ್ಧತೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪುಷ್ಕರ್ ಮಲ್ಲಿಕಾರ್ಜುನಯ್ಯ ನಟನೆಯ ‘ವಿಜಯನಗರ ಸಾಮ್ರಾಜ್ಯ’ ಚಿತ್ರದಲ್ಲಿ ಹೊಸ ತಂತ್ರಜ್ಞಾನ – Kannada News | Pushkarah Mallikarjunaiah Acting Directorial debut Vijayanagara Samrajya Movie

ಪುಷ್ಕರ್ ಮಲ್ಲಿಕಾರ್ಜುನಯ್ಯ (Pushkarah Mallikarjunaiah) ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸಾಹಸಕ್ಕೆ ಕೈ ಹಾಕುತ್ತಾರೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕಿರಿಕ್ ಪಾರ್ಟಿ’, ‘ಅವನೇ ಶ್ರೀಮನ್ನಾರಾಯಣ’, ‘ಅವತಾರ ಪುರುಷ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿರುವ ಅವರು ಈಗ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಾಯಕನಟ ಆಗಲು ಅವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಈಗ ಅವರು ‘ವಿಜಯನಗರ ಸಾಮ್ರಾಜ್ಯ’ (Vijayanagara Samrajya) ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ನೂತನ ತಂತ್ರಜ್ಞಾನ ಬಳಸಲಾಗುತ್ತಿದೆ.

ಹೊಸ ತಂತ್ರಜ್ಞಾನದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈ ಚಿತ್ರವನ್ನು ವರ್ಚುವಲ್ ಪ್ರೊಡಕ್ಷನ್ (ಅನ್ ರಿಯಲ್ ಇಂಜಿನ್ ಬಳಸಿ) ಚಿತ್ರೀಕರಿಸಲಾಗುತ್ತಿದೆ. ಈವರೆಗೆ ಕನ್ನಡ ಚಿತ್ರರಂಗದಲ್ಲಿ ಬಳಕೆ ಆಗದ ತಂತ್ರಜ್ಞಾನ ಇದಾಗಿದೆ. ದುಬೈ, ಮುಂಬೈ ಮೂಲದ ತಂತ್ರಜ್ಞರು ಈ ಸಿನಿಮಾಗಾಗಿ ಕಾರ್ಯ ನಿರ್ವಹಿಸಿದ್ದಾರೆ. ತುಂಬಾ ಮುಂದುವರಿದ ಟೆಕ್ನಾಲಜಿಯನ್ನು ಈ ಸಿನಿಮಾಕ್ಕೆ ಬಳಸಿರುವುದು ಔಟ್ ಪುಟ್ ನೋಡಿದಾಗ ತಿಳಿಯುತ್ತದೆ ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಹೇಳಿದ್ದಾರೆ.

‘ವಿಜಯನಗರ ಸಾಮ್ರಾಜ್ಯ’ ಸಿನಿಮಾಗೆ ಈಗಾಗಲೇ ಶೇ.70ರಷ್ಟು ಕೆಲಸಗಳು ಪೂರ್ಣಗೊಂಡಿವೆ. ವಿಶೇಷ ಎಂದರೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೇ ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿ ಹಾಗೂ ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತು ಅವರು ಕಾರ್ಯನಿರತರಾಗಿದ್ದಾರೆ.

ಹೀರೋ ಆಗಿ ನಟಿಸುತ್ತಿರುವ ಮೊದಲ ಸಿನಿಮಾದಲ್ಲೇ ಬೃಹತ್ ವೆಚ್ಚದ, ಕರುನಾಡ ಮಹಿಮೆ ಸಾರುವ ವಿಜಯನಗರ ಸಾಮ್ರಾಜ್ಯದ ವೈಭವವನ್ನು ತೆರೆಯ ಮೇಲೆ ಕಟ್ಟಿ ಕೊಡಲು ಪುಷ್ಕರ್ ಮಲ್ಲಿಕಾರ್ಜುನಯ್ಯ ಮುಂದಾಗಿದ್ದಾರೆ. ಎರಡು ಕಾಲಘಟ್ಟದಲ್ಲಿ ಈ ಕಥೆ ಸಾಗಲಿದೆ. ಹಂಪಿ ಸುತ್ತಮುತ್ತ ಹಾಗೂ ಬೃಹತ್ ಸೆಟ್ ನಿರ್ಮಿಸಿ ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ: ನಾನಿ ವಿರುದ್ಧ ನಿರ್ಮಾಪಕ ಪುಷ್ಕರ್ ಕಿಡಿ; ಹಕ್ಕು ಪಡೆಯದೇ ಸಿನಿಮಾ ರಿಮೇಕ್ ಮಾಡಿದ ಆರೋಪ

ಸಿನಿಮಾ ಕುರಿತು ಪುಷ್ಕರ್ ಮಲ್ಲಿಕಾರ್ಜುನಯ್ಯ ಮಾತನಾಡಿದ್ದಾರೆ. ‘ಹಕ್ಕ ಬುಕ್ಕ ವಿದ್ಯಾರಣ್ಯರಿಂದ ಸ್ಥಾಪನೆಯಾದ ವಿಜಯನಗರ ಸಾಮ್ರಾಜ್ಯದ, 1565ರ ತಾಳಿಕೋಟೆ ಕದನದಲ್ಲಿ ಪತನವಾಗುವವರೆಗೂ ಸುಮಾರು 250 ವರ್ಷ ನಡೆದ ಕೆಲವು ಮಹತ್ತರ ಘಟನೆಗಳನ್ನು ಈ ಚಿತ್ರದಲ್ಲಿ ತೋರಿಸಲಿದ್ದೇನೆ. ದಕ್ಷಿಣ ಭಾರತವನ್ನು 250 ವರ್ಷ ಒಂದು ಸಾಮ್ರಾಜ್ಯ ಹೇಗೆ ಕಾಪಾಡಿಕೊಂಡು ಬಂತು ಎಂಬುದು ಒಂದು ಅಂಶವಾದರೆ, 1770ರಲ್ಲಿ ನಡೆಯುವ ಒಂದು ಘಟನೆ ಪ್ಲಾಶ್ ಬ್ಯಾಕ್ ನಲ್ಲಿ ಬರುತ್ತದೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಅಧಿಕೃತ ಪಟ್ಟಿ – Kannada News | Portfolios allocated to 19 newly sworn in Karnataka Ministers, here Is List

ಬೆಂಗಳೂರು, (ಆಗಸ್ಟ್ 11):  ತೀವ್ರ ಕುತೂಹಲ ಮೂಡಿಸಿರುವ ನೂತನ ಸಚಿವರಿಗೆ ಖಾತೆ ಹಂಚಿಕೆ ಗೊಂದಲ ಕೊನೆಗೂ ಬಗೆಹರಿದಿದೆ.  ಎರಡನೇ ಹಂತದ ಸಂಪುಟ ಪುನಾರಚನೆಯಲ್ಲಿ ಡಿಕೆ ಶಿವಕುಮಾರ್ ಕ್ಯಾಬಿನೆಟ್ ಸೇರಿದ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಹೌದು….ಆಗಸ್ಟ್ 3ರಂದು ಸಂಪುಟ ಪುನಾರಚನೆ (Karnataka Cabinet Expansion)  ವೇಳೆ ಪ್ರಮಾಣವಚನ  ಸ್ವೀಕರಿಸಿದ  19 ನೂತನ ಸಚಿವರಿಗೆ ಖಾತೆ (Portfolios) ನೀಡಬೇಕೆಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪಟ್ಟಿಯನ್ನು ಅಂತಿಮಗೊಳಿಸಿದ್ದು, ರಾಜಭವನದ ಅಂಕಿತ ಹಾಗೂ ಸರ್ಕಾರದ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.

ಖಾತೆ ಹಂಚಿಕೆಗಾಗಿ ಸಚಿವ ಆಕಾಂಕ್ಷಿಗಳು ಹಾಗೂ ಹಿರಿಯ ನಾಯಕರು ನಡೆಸುತ್ತಿದ್ದ ಕಸರತ್ತು, ದೆಹಲಿ ಮಟ್ಟದ ಸಭೆಗಳು ಹಾಗೂ ಮುಖ್ಯಮಂತ್ರಿಗಳ ಜೊತೆಗಿನ ಸುದೀರ್ಘ ಚರ್ಚೆಗಳ ನಂತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪ್ರಮುಖ ಇಲಾಖೆಗಳಿಗೆ ಅನುಭವ ಹಾಗೂ ಪ್ರಾದೇಶಿಕ ಸಮತೋಲನವನ್ನು ಆಧರಿಸಿ ನಾಯಕರಿಗೆ ಜವಾಬ್ದಾರಿ ನೀಡಲಾಗಿದ್ದು, ಕೆಲ ಸಚಿವರ ಖಾತೆಗಳನ್ನೂ ಸಹ ಬದಲಾವಣೆ ಮಾಡಲಾಗಿದೆ.

ಯಾರಿಗೆ ಯಾವ ಖಾತೆ?

ಲಕ್ಷ್ಮಣ ಸವದಿ- ಸಹಕಾರ ಇಲಾಖೆ

ರಾಮಲಿಂಗರೆಡ್ಡಿ-ಅರಣ್ಯ (ಈ ಹಿಂದೆ ಜಲ ಸಂಪನ್ಮೂಲ)

ಕೆ.ಹೆಚ್.ಮುನಿಯಪ್ಪ-ಸಮಾಜ ಕಲ್ಯಾಣ ಇಲಾಖೆ

ಸಂತೋಷ್ ಲಾಡ್- ಕಾರ್ಮಿಕ ಇಲಾಖೆ

ಯು.ಟಿ.ಖಾದರ್-ಆರೋಗ್ಯ ಮತ್ತು ಕಲ್ಯಾಣ ಇಲಾಖೆ

ಶಿವರಾಜ್ ತಂಗಡಗಿ- ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ

ಬಸವರಾಜ ರಾಯರೆಡ್ಡಿ-ಉನ್ನತ ಶಿಕ್ಷಣ

ಎಚ್‌.ಸಿ.ಬಾಲಕೃಷ್ಣ-ಪೌರಾಡಳಿತ

ಕೆ.ಎಸ್‌.ಬಸವಂತಪ್ಪ-ಮುಜರಾಯಿ, ಮೀನುಗಾರಿಕೆ

ಎನ್‌.ಚಲುವರಾಯಸ್ವಾಮಿ- ಕೃಷಿ

ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಎಸ್‌.ಎಸ್‌.ಮಲ್ಲಿಕಾರ್ಜುನ್‌- ಗಣಿ ಮತ್ತು ಭೂವಿಜ್ಞಾನ ಇಲಾಖೆ

ಬಿ.ನಾಗೇಂದ್ರ-ಯೋಜನೆ & ಸಾಂಖ್ಯಿಕ ಇಲಾಖೆ

ಪಿ.ಎಂ.ನರೇಂದ್ರಸ್ವಾಮಿ-ಕೃಷಿ ಇಲಾಖೆ

ಸಿ.ಪುಟ್ಟರಂಗಶೆಟ್ಟಿ-ಪಶು ಸಂಗೋಪನಾ ಇಲಾಖೆ, ರೇಷ್ಮೆ

ಟಿ.ರಘುಮೂರ್ತಿ-ಪರಿಶಿಷ್ಟ ಪಂಗಡ ಕಲ್ಯಾಣ ಖಾತೆ

ರಿಜ್ವಾನ್‌ ಅರ್ಷದ್‌-ಆಹಾರ & ನಾಗರಿಕ ಪೂರೈಕೆ ಇಲಾಖೆ

ರುದ್ರಪ್ಪ ಲಮಾಣಿ- ಸಕ್ಕರೆ ಮತ್ತು ಜವಳಿ

ಶಿವಲಿಂಗೇಗೌಡ-ಅಬಕಾರಿ ಖಾತೆ

ವಿಜಯಾನಂದ ಕಾಶಪ್ಪನವರ್‌-ಸಣ್ಣ ಕೈಗಾರಿಕೆ

ಜಮೀರ್‌ ಅಹ್ಮದ್‌ ಖಾನ್-ವಸತಿ

ಅಜಯ್ ಸಿಂಗ್-ಸಣ್ಣ ನೀರಾವರಿ, ಐಟಿ ಬಿಟಿ

Published On – 5:36 pm, Wed, 12 August 26

Source link

ದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ 3 ಆರೋಪಗಳು ಸಾಬೀತು – Kannada News | Justice Yashwant Varma found guilty in cash row case Panel Finds All 3 Charges Proved

ನವದೆಹಲಿ, ಆಗಸ್ಟ್ 12: ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಸಂಭವಿಸಿದ ಬೆಂಕಿ ಅವಘಡದ ನಂತರ ಪತ್ತೆಯಾದ ಮೂಲವಿಲ್ಲದ ಬೃಹತ್ ನಗದಿಗೆ ಸಂಬಂಧಿಸಿದಂತೆ, ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ಅವರ ವಿರುದ್ಧದ ಮೂರೂ ಆರೋಪಗಳು ಸಾಬೀತಾಗಿವೆ ಎಂದು ಸಂಸದೀಯ ತನಿಖಾ ಸಮಿತಿ ತಿಳಿಸಿದೆ. ದೆಹಲಿಯ 30 ತುಘಲಕ್ ಕ್ರೆಸೆಂಟ್‌ನಲ್ಲಿರುವ ಅಧಿಕೃತ ನಿವಾಸದ ಸ್ಟೋರ್‌ರೂಮ್‌ನಲ್ಲಿ ಕಳೆದ ವರ್ಷ ಭಾರೀ ಪ್ರಮಾಣದ ಹಣ ಪತ್ತೆಯಾಗಿತ್ತು. ಈ ಸ್ಥಳವು ನ್ಯಾಯಮೂರ್ತಿ ವರ್ಮಾ ಅವರ ಸುಪರ್ದಿಯಲ್ಲೇ ಇತ್ತು. ಅಲ್ಲಿ ಪತ್ತೆಯಾದ ಹಣದ ಮೂಲದ ಬಗ್ಗೆ ಅವರು ಸೂಕ್ತ ವಿವರಣೆ ನೀಡಲು ವಿಫಲರಾಗಿದ್ದಾರೆ ಎಂದು ಸಮಿತಿ ತೀರ್ಮಾನಿಸಿದೆ.

ಪ್ರಕರಣದ ಹಿನ್ನೆಲೆ:

2025ರ ಮಾರ್ಚ್ 14-15ರ ಮಧ್ಯರಾತ್ರಿ ದೆಹಲಿಯಲ್ಲಿರುವ ನ್ಯಾಯಮೂರ್ತಿ ವರ್ಮಾ ಅವರ ಸರ್ಕಾರಿ ನಿವಾಸದ ಸ್ಟೋರ್‌ರೂಮ್‌ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿತ್ತು. ಆ ವೇಳೆ ಯಶವಂತ್ ವರ್ಮಾ ಮನೆಯಲ್ಲಿ ಇರಲಿಲ್ಲ. ಹೀಗಾಗಿ, ಅವರ ಮನೆಯ ಸದಸ್ಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಈ ವೇಳೆ ಆ ಸ್ಥಳಕ್ಕೆ ಆಗಮಿಸಿದ ದೆಹಲಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಸ್ಟೋರ್‌ರೂಮ್‌ನಲ್ಲಿ ಅರ್ಧ ಸುಟ್ಟ, ಒದ್ದೆಯಾದ ಹಾಗೂ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅಪಾರ ಪ್ರಮಾಣದ 500 ರೂಪಾಯಿ ಮುಖಬೆಲೆಯ ನೋಟುಗಳ ಕಟ್ಟುಗಳು ಕಂಡುಬಂದಿದ್ದವು. ಅಧಿಕಾರಿಗಳ ಹೇಳಿಕೆಗಳು, ಫೋಟೋಗಳು ಮತ್ತು ವಿಡಿಯೋ ರೆಕಾರ್ಡಿಂಗ್‌ಗಳು ಆ ಮನೆಯಲ್ಲಿ ಅಪಾರ ಪ್ರಮಾಣದ ನಗದು ಇದ್ದುದನ್ನು ಖಚಿತಪಡಿಸಿದ್ದವು.

ಆ ಸಮಯದಲ್ಲಿ ನೋಟುಗಳನ್ನು ಸ್ಥಳದಲ್ಲೇ ವಶಪಡಿಸಿಕೊಳ್ಳಲಿಲ್ಲ, ಎಣಿಕೆ ಮಾಡಲಿಲ್ಲ ಅಥವಾ ಪಟ್ಟಿಯನ್ನು ಸಿದ್ಧಪಡಿಸಲಿಲ್ಲ. ಹೀಗಾಗಿ ಪತ್ತೆಯಾದ ಹಣದ ನಿಖರ ಮೊತ್ತವನ್ನು ವರದಿಯಲ್ಲಿ ಉಲ್ಲೇಖಿಸಲು ಸಾಧ್ಯವಿಲ್ಲ ಎಂದು ಸಮಿತಿ ತಿಳಿಸಿದೆ. ಆದರೆ, ಅಲ್ಲಿ ಭಾರಿ ಪ್ರಮಾಣದ 500 ರೂ. ಮುಖಬೆಲೆಯ ನೋಟುಗಳಿದ್ದವು ಎಂಬುದಕ್ಕೆ ಬಲವಾದ ಸಾಕ್ಷ್ಯಗಳಿವೆ ಎಂದು ಸಮಿತಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ನ್ಯಾ. ಯಶವಂತ್ ವರ್ಮಾ ಪದಚ್ಯುತಿಗೆ ಲೋಕಸಭೆಯಲ್ಲಿ ಶೀಘ್ರದಲ್ಲೇ ಪ್ರಕ್ರಿಯೆ ಆರಂಭ; ಕಿರಣ್ ರಿಜಿಜು

ಯಶವಂತ್ ವರ್ಮಾ ಮೇಲಿರುವ 3 ಆರೋಪಗಳೇನು?:

1. ಹಣದ ಮೂಲದ ಬಗ್ಗೆ ತೃಪ್ತಿಕರ ಉತ್ತರವಿಲ್ಲ:

ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಸುಪರ್ದಿಯಲ್ಲಿದ್ದ ಸರ್ಕಾರಿ ನಿವಾಸದಲ್ಲಿ ದಾಖಲೆಯಿಲ್ಲದ ಬೃಹತ್ ಪ್ರಮಾಣದ ನಗದು ಪತ್ತೆಯಾಗಿದ್ದು ಮೊದಲ ಆರೋಪವಾಗಿತ್ತು. ಈ ಆರೋಪ ಸಾಬೀತಾಗಿದೆ ಎಂದು ಸಮಿತಿ ಹೇಳಿದೆ. ನೋಟುಗಳ ಮೂಲ ಅಥವಾ ಮಾಲೀಕತ್ವದ ಬಗ್ಗೆ ನ್ಯಾಯಮೂರ್ತಿ ವರ್ಮಾ ಸೂಕ್ತ ಸ್ಪಷ್ಟನೆ ನೀಡಲು ವಿಫಲರಾಗಿದ್ದಾರೆ.

“ಈ ಹಣ ಜಡ್ಜ್‌ಗೆ ಸೇರಿದ್ದು ಎಂದು ನೇರವಾಗಿ ಹೇಳದಿದ್ದರೂ, ಅವರ ನಿಯಂತ್ರಣದಲ್ಲಿದ್ದ ಆವರಣದಲ್ಲಿ ಇಷ್ಟೊಂದು ನಗದು ಸಿಕ್ಕಿರುವುದು ಹಾಗೂ ಅದಕ್ಕೆ ಸೂಕ್ತ ಉತ್ತರ ನೀಡದಿರುವುದೇ ಆರೋಪ ಸಾಬೀತಾಗಲು ಸಾಕು” ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ತಮ್ಮ ಗೈರುಹಾಜರಿ ಅಥವಾ ಬೇರೆಯವರು ಗೂಢಚರ್ಯೆ ನಡೆಸಿ ಹಣ ತಂದಿಟ್ಟಿದ್ದಾರೆ ಎಂಬ ಯಶವಂತ್ ವರ್ಮಾ ಅವರ ಸಂಚಿನ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಸಮಿತಿ ಹೇಳಿದೆ.

2: ಸಾಕ್ಷ್ಯ ನಾಶ:

ಬೆಂಕಿ ನಂದಿಸಿದ ನಂತರ ಘಟನಾ ಸ್ಥಳ ಮತ್ತು ಸಾಕ್ಷ್ಯಾಧಾರಗಳನ್ನು ಸೂಕ್ತವಾಗಿ ಸಂರಕ್ಷಿಸದಿರುವುದು ಎರಡನೇ ಆರೋಪವಾಗಿತ್ತು. ಸರ್ಕಾರಿ ಅಧಿಕಾರಿಗಳು ಆವರಣವನ್ನು ಪರಿಶೀಲಿಸಿ ಸೀಲ್ ಮಾಡುವ ಮೊದಲೇ ಸ್ಟೋರ್‌ರೂಮ್‌ನ ಸ್ಥಿತಿಗತಿಯನ್ನು ಬದಲಾಯಿಸಲಾಯಿತು ಮತ್ತು ಅಲ್ಲಿದ್ದ ನಗದು ನಂತರ ಕಣ್ಮರೆಯಾಯಿತು. ನ್ಯಾಯಮೂರ್ತಿ ವರ್ಮಾ ಅವರೇ ಖುದ್ದಾಗಿ ಹಣವನ್ನು ತೆರವುಗೊಳಿಸಿದ್ದಾರೆ ಎಂದು ಸಮಿತಿ ಹೇಳಿಲ್ಲವಾದರೂ, ತನಿಖೆಗೆ ಅತ್ಯಗತ್ಯವಾಗಿದ್ದ ಪ್ರಮುಖ ಸಾಕ್ಷ್ಯಗಳನ್ನು ರಕ್ಷಿಸುವಲ್ಲಿ ಮತ್ತು ಸ್ಥಳದ ಸತ್ಯಾಸತ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಈ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಲಾಗಿದೆ.

3: ನೀಡಿದ ವಿವರಣೆಗಳು ಅಪೂರ್ಣ ಹಾಗೂ ದಾರಿ ತಪ್ಪಿಸುವಂತಿದ್ದವು:

ಆ ಘಟನೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಯಶವಂತ್ ವರ್ಮಾ ನೀಡಿದ ಹೇಳಿಕೆಗಳು ಮತ್ತು ವಿವರಣೆಗಳು ಕಾಲಕಾಲಕ್ಕೆ ಬದಲಾಗಿದ್ದವು. ಸಂವಿಧಾನಾತ್ಮಕ ಹುದ್ದೆಯಲ್ಲಿದ್ದ ವ್ಯಕ್ತಿಯಿಂದ ನಿರೀಕ್ಷಿಸುವಷ್ಟು ಪಾರದರ್ಶಕತೆ ಅವರ ಉತ್ತರಗಳಲ್ಲಿ ಇರಲಿಲ್ಲ ಎಂದು ಮೂರನೇ ಆರೋಪವನ್ನು ಸಮಿತಿ ಎತ್ತಿಹಿಡಿದಿದೆ. ಆರಂಭದಲ್ಲಿ ತಮಗೆ ಹಣದ ಬಗ್ಗೆ ಏನೂ ತಿಳಿದಿಲ್ಲ ಎಂದಿದ್ದ ವರ್ಮಾ, ನಂತರ ಹಣ ಜಪ್ತಿ ಮತ್ತು ಆವರಣ ಸ್ವಚ್ಛಗೊಳಿಸಿದ ವಿಚಾರಗಳನ್ನು ಪ್ರಸ್ತಾಪಿಸಿದರು. ಸಿಬ್ಬಂದಿಯ ಮೇಲೆ ಅನುಮಾನ ವ್ಯಕ್ತಪಡಿಸಿ, ಯಾರೋ ಹಣವನ್ನು ತಂದಿಟ್ಟಿದ್ದಾರೆ ಅಥವಾ ತೆಗೆದುಕೊಂಡು ಹೋಗಿದ್ದಾರೆ ಎಂಬ ಹಾರಿಕೆ ಉತ್ತರಗಳನ್ನು ನೀಡಿದ್ದರು. ಆದರೆ ಇವುಗಳನ್ನು ಸಾಬೀತುಪಡಿಸಲು ಯಾವುದೇ ಸಾಕ್ಷಿಗಳನ್ನು ಹಾಜರುಪಡಿಸದ ಕಾರಣ, ಅವರ ಸಮಜಾಯಿಷಿ ತೃಪ್ತಿಕರವಾಗಿಲ್ಲ ಎಂದು ಸಮಿತಿ ಹೇಳಿದೆ.

ಇದನ್ನೂ ಓದಿ: ನ್ಯಾಯಮೂರ್ತಿ ಯಶವಂತ್ ವರ್ಮಾ ಮನೆಯಲ್ಲಿ ಹಣ ಪತ್ತೆಯಾಗಿದ್ದು ದೃಢ; ರಾಜೀನಾಮೆಗೆ ಸೂಚನೆ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನ್ಯಾಯಮೂರ್ತಿ ವರ್ಮಾ ಅವರ ವಜಾಗೊಳಿಸುವ ಪ್ರಸ್ತಾವನೆಯನ್ನು ಒಪ್ಪಿಕೊಂಡ ನಂತರ, ಸೆಪ್ಟೆಂಬರ್ 2025ರಲ್ಲಿ ಈ ಜಂಟಿ ತನಿಖಾ ಸಮಿತಿಯನ್ನು ರಚಿಸಲಾಗಿತ್ತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಈ ಸಮಿತಿಯು ನವೆಂಬರ್‌ನಲ್ಲಿ ದೋಷಾರೋಪಣೆ ಪಟ್ಟಿಯನ್ನು ಸಿದ್ಧಪಡಿಸಿತ್ತು. ಸಮಿತಿಯ ರಚನೆಯನ್ನು ಪ್ರಶ್ನಿಸಿ ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಜನವರಿ 2026ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ದೆಹಲಿ ಪೊಲೀಸ್, ಸಿಆರ್‌ಪಿಎಫ್ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳ ಹೇಳಿಕೆ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಸಮಿತಿಯು ತನ್ನ ವರದಿಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿದ್ದು, ಇದು ಮುಂದಿನ ಸಂಸದೀಯ ಪ್ರಕ್ರಿಯೆಗೆ ಆಧಾರವಾಗಲಿದೆ.

ಪೊಲೀಸ್ ಮತ್ತು ಅಗ್ನಿಶಾಮಕ ಅಧಿಕಾರಿಗಳ ನಿರ್ಲಕ್ಷ್ಯ:

ಘಟನಾ ಸ್ಥಳಕ್ಕೆ ತೆರಳಿದ್ದ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳ ಕರ್ತವ್ಯ ಲೋಪದ ಕುರಿತೂ ಸಮಿತಿ ಪ್ರಶ್ನೆ ಎತ್ತಿದೆ. ನಿಯಮಗಳ ಪ್ರಕಾರ ನಗದನ್ನು ತಕ್ಷಣವೇ ವಶಪಡಿಸಿಕೊಂಡು, ಮಹಜರು ನಡೆಸಿ, ಸಾಕ್ಷ್ಯಗಳನ್ನು ಸಂರಕ್ಷಿಸಬೇಕಿದ್ದ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿರುವುದು ಗಂಭೀರ ಲೋಪ ಎಂದು ಸಮಿತಿ ಸಾಕ್ಷ್ಯಾಧಾರಸಹಿತವಾಗಿ ಆರೋಪಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಕ್ಕರೆ ತಿಂದರೆ ಆಸಿಡಿಟಿ ಹೆಚ್ಚಾಗುತ್ತದೆಯೇ? ಎದೆ ಉರಿ ಬಗ್ಗೆ ವೈದ್ಯರು ನೀಡಿದ ಮಹತ್ವದ ಮಾಹಿತಿ ಇಲ್ಲಿದೆ – Kannada News | Heartburn After Sweets? Doctor Explains How Sugary Foods May Trigger Acid Reflux

ಊಟದ ಬಳಿಕ ಎದೆ ಉರಿ, ಹೊಟ್ಟೆ ಉಬ್ಬರ, ಹುಳಿ ತೇಗು, ಬಾಯಿಯಲ್ಲಿ ಹುಳಿ ರುಚಿ… ಇಂತಹ ಸಮಸ್ಯೆಗಳು ಇತ್ತೀಚೆಗೆ ಹಲವರನ್ನು ಕಾಡುತ್ತಿವೆ. ಸಾಮಾನ್ಯವಾಗಿ ಮಸಾಲೆ, ಎಣ್ಣೆಯುಕ್ತ ಅಥವಾ ಹೆಚ್ಚು ಖಾರವಾದ ಆಹಾರವೇ ಆಸಿಡಿಟಿಗೆ ಕಾರಣ ಎಂದುಕೊಳ್ಳಲಾಗುತ್ತದೆ. ಆದರೆ ಸಿಹಿ ಪದಾರ್ಥಗಳು ತಿಂದರೂ ಆಸಿಡಿಟಿ ಹೆಚ್ಚಾಗುತ್ತದೆಯೇ? ಎಂಬ ಗೊಂದಲ ಹಲವರದ್ದು. ತಜ್ಞರು ಹೇಳುವ ಪ್ರಕಾರ, ಸಕ್ಕರೆ ಸ್ವತಃ ಆಸಿಡ್ ರಿಫ್ಲಕ್ಸ್‌ಗೆ ನೇರ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಹೆಚ್ಚಿನ ಸಕ್ಕರೆ, ಕೊಬ್ಬು ಮತ್ತು ಕ್ಯಾಲೊರಿ ಇರುವ ಕೇಕ್, ಪೇಸ್ಟ್ರಿ, ಚಾಕೊಲೇಟ್, ಐಸ್‌ಕ್ರೀಂ, ಸಿಹಿ ಪಾನೀಯಗಳು ಮತ್ತು ಇತರ ಸಿಹಿತಿಂಡಿಗಳು ಕೆಲವರಲ್ಲಿ ಆಸಿಡಿಟಿ ಸಮಸ್ಯೆಯನ್ನು ಹೆಚ್ಚಿಸಬಹುದು. ಹಾಗಾದರೆ ಸಕ್ಕರೆ ಮತ್ತು ಆಸಿಡಿಟಿ ನಡುವೆ ಇರುವ ಸಂಬಂಧವೇನು, ಈ ರೀತಿ ಆಗುವುದಕ್ಕೆ ಕಾರಣವೇನು ಮತ್ತು ಇದನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಕ್ಕರೆ ತಿಂದರೆ ನೇರವಾಗಿ ಆಸಿಡಿಟಿ ಬರುತ್ತದೆಯೇ?

ಡಾ. ಜತೀಂದರ್ ಸಿಂಗ್ ಭೋಗಲ್, (ಸೀನಿಯರ್ ಕನ್ಸಲ್ಟೆಂಟ್, ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ, ಕೈಲಾಶ್ ದೀಪಕ್ ಹಾಸ್ಪಿಟಲ್) ಅವರ ಪ್ರಕಾರ, ಕೇವಲ ಸಕ್ಕರೆ ಸೇವನೆಯೇ ಆಸಿಡ್ ರಿಫ್ಲಕ್ಸ್‌ಗೆ ನೇರ ಕಾರಣ ಎಂದು ಹೇಳುವುದು ಸರಿಯಲ್ಲ. ಆದರೆ ಹೆಚ್ಚು ಸಕ್ಕರೆ ಹೊಂದಿರುವ ಆಹಾರಗಳಲ್ಲಿ ಸಾಮಾನ್ಯವಾಗಿ ಕೊಬ್ಬು ಮತ್ತು ಕ್ಯಾಲೊರಿಗಳ ಪ್ರಮಾಣವೂ ಹೆಚ್ಚಿರುತ್ತದೆ. ಇಂತಹ ಆಹಾರಗಳನ್ನು ಪದೇಪದೇ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಕೆಲವರಿಗೆ ಆಸಿಡಿಟಿ ಮತ್ತು ರಿಫ್ಲಕ್ಸ್ ಸಮಸ್ಯೆ ಹೆಚ್ಚಾಗಬಹುದು.

ಆಸಿಡ್ ರಿಫ್ಲಕ್ಸ್ ಏಕೆ ಉಂಟಾಗುತ್ತದೆ?

ಹೊಟ್ಟೆ ಮತ್ತು ಆಹಾರನಾಳದ ನಡುವೆ ಲೋವರ್ ಈಸೋಫೇಜಿಯಲ್ ಸ್ಫಿಂಕ್ಟರ್ (LES) ಎಂಬ ಸ್ನಾಯು ಇರುತ್ತದೆ. ಇದು ಸರಿಯಾಗಿ ಮುಚ್ಚಿಕೊಳ್ಳದಿದ್ದಾಗ ಹೊಟ್ಟೆಯಲ್ಲಿರುವ ಆಮ್ಲ ಆಹಾರನಾಳದ ಕಡೆಗೆ ಮೇಲಕ್ಕೆ ಬರುತ್ತದೆ. ಇದರಿಂದ ಎದೆ ಉರಿ, ಹುಳಿ ತೇಗು, ಬಾಯಿಯಲ್ಲಿ ಹುಳಿ ಅಥವಾ ಕಹಿ ರುಚಿ, ಹೊಟ್ಟೆ ಉಬ್ಬರ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಸಿಹಿ ಆಹಾರಗಳು ಆಸಿಡಿಟಿಯನ್ನು ಹೇಗೆ ಹೆಚ್ಚಿಸಬಹುದು?

ಕೇಕ್, ಪೇಸ್ಟ್ರಿ, ಐಸ್‌ಕ್ರೀಂ, ಚಾಕೊಲೇಟ್, ಸಿಹಿ ಪಾನೀಯಗಳು ಮತ್ತು ಇತರ ಹೆಚ್ಚು ಸಕ್ಕರೆ ಇರುವ ಆಹಾರಗಳಲ್ಲಿ ಕೊಬ್ಬು ಮತ್ತು ಕ್ಯಾಲೊರಿಗಳೂ ಹೆಚ್ಚಿರಬಹುದು. ಇಂತಹ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಹೊಟ್ಟೆಯ ಸುತ್ತ ಕೊಬ್ಬು ಹೆಚ್ಚಾದಾಗ ಹೊಟ್ಟೆಯ ಮೇಲೆ ಒತ್ತಡ ಹೆಚ್ಚಾಗಿ, ಆಮ್ಲ ಮೇಲಕ್ಕೆ ಬರುವ ಸಾಧ್ಯತೆ ಹೆಚ್ಚಾಗಬಹುದು. ಹೀಗಾಗಿ ಸಕ್ಕರೆ ಮಾತ್ರವಲ್ಲ, ಒಟ್ಟಾರೆ ಆಹಾರ ಪದ್ಧತಿ, ತೂಕ ಮತ್ತು ಜೀವನಶೈಲಿಯೂ ಆಸಿಡ್ ರಿಫ್ಲಕ್ಸ್‌ನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಆಸಿಡಿಟಿ ಕಡಿಮೆ ಮಾಡಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಸಿಹಿ ಅಥವಾ ನಿರ್ದಿಷ್ಟ ಆಹಾರ ತಿಂದ ನಂತರವೇ ಎದೆ ಉರಿ ಹೆಚ್ಚಾಗುತ್ತಿದೆ ಎಂದು ಗಮನಿಸಿದರೆ, ಅದನ್ನು ಕಡಿಮೆ ಮಾಡಿ. ಯಾವ ಆಹಾರ ನಿಮ್ಮ ಸಮಸ್ಯೆಗೆ ಕಾರಣವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಫುಡ್ ಡೈರಿ ಇಟ್ಟುಕೊಳ್ಳಬಹುದು. ಒಮ್ಮೆಲೇ ಹೆಚ್ಚು ಆಹಾರ ಸೇವಿಸುವುದನ್ನು ತಪ್ಪಿಸಿ. ಊಟ ಮಾಡಿದ ತಕ್ಷಣ ಮಲಗಬೇಡಿ. ಊಟದ ನಂತರ ಕನಿಷ್ಠ 2ರಿಂದ 3 ಗಂಟೆಗಳ ಕಾಲ ಮಲಗದೆ ಇರುವುದು ಸಹಾಯಕವಾಗಬಹುದು. ತೂಕವನ್ನು ಆರೋಗ್ಯಕರ ಮಟ್ಟದಲ್ಲಿ ಕಾಪಾಡಿಕೊಳ್ಳಿ. ನಿಮಗೆ ಪದೇಪದೇ ಸಮಸ್ಯೆ ಉಂಟುಮಾಡುವ ಆಹಾರಗಳನ್ನು ಗುರುತಿಸಿ ಅವುಗಳ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ.

ಒಂದೆರಡು ಬಾರಿ ಎದೆ ಉರಿ ಕಾಣಿಸಿಕೊಂಡರೆ ಆತಂಕಪಡುವ ಅಗತ್ಯವಿಲ್ಲ. ಆದರೆ ಸಮಸ್ಯೆ ಪದೇಪದೇ ಕಾಣಿಸಿಕೊಳ್ಳುತ್ತಿದ್ದರೆ ಅಥವಾ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿದ ನಂತರವೂ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಾಟಾ ಸನ್ಸ್ ಉನ್ನತ ಸ್ಥಾನ ತೊರೆದ ಎನ್ ಚಂದ್ರಶೇಖರನ್ ಅವರ ವೇತನ, ಕಮಿಷನ್ ಇತ್ಯಾದಿ ವರಮಾನ ಎಷ್ಟು ಗೊತ್ತಾ? – Kannada News | Tata Sons Chairman N Chandrasekaran’s remuneration, commission and other income details

ಎನ್. ಚಂದ್ರಶೇಖರನ್Image Credit source: PTI

ನವದೆಹಲಿ, ಆಗಸ್ಟ್ 12: ಟಾಟಾ ಸನ್ಸ್‌ನ ಎಕ್ಸಿಕ್ಯೂಟಿವ್ ಛೇರ್ಮನ್ ಹುದ್ದೆಯಿಂದ ನಿರ್ಗಮಿಸುತ್ತಿರುವ ಎಚ್. ಎನ್. ಚಂದ್ರಶೇಖರನ್ (ನಟರಾಜನ್ ಚಂದ್ರಶೇಖರನ್) ಅವರು ಭಾರತದ ಅತ್ಯಧಿಕ ವೇತನ ಪಡೆಯುವ ಕಾರ್ಪೊರೇಟ್ ಮುಖ್ಯಸ್ಥರಲ್ಲಿ ಪ್ರಮುಖರಾಗಿದ್ದಾರೆ. ಕಂಪನಿಯ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಅವರು ಕಳೆದ ಆರ್ಥಿಕ ವರ್ಷದಲ್ಲಿ (FY26) ದಾಖಲೆಯ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. 2025-26ರ ಹಣಕಾಸು ವರ್ಷದಲ್ಲಿ ಎನ್. ಚಂದ್ರಶೇಖರನ್ ಅವರ ಒಟ್ಟು ಸಂಭಾವನೆ ₹158.66 ಕೋಟಿಗೆ ತಲುಪಿದೆ.

ಅವರ ಈ ಒಟ್ಟು ವೇತನ ಪ್ಯಾಕೇಜ್‌ನಲ್ಲಿ ಮೂಲ ವೇತನಕ್ಕಿಂತ ‘ಲಾಭ ಆಧಾರಿತ ಕಮಿಷನ್’ (Profit-linked commission) ಪಾತ್ರವೇ ಅತಿ ದೊಡ್ಡದಾಗಿದೆ:

  • ಮೂಲ ವೇತನ ಮತ್ತು ಇತರೆ ಸೌಲಭ್ಯಗಳು: ₹17.97 ಕೋಟಿ (ಹಿಂದಿನ ವರ್ಷಕ್ಕಿಂತ 18% ಹೆಚ್ಚಳ)
  • ಲಾಭ ಆಧಾರಿತ ಕಮಿಷನ್: ₹140.69 ಕೋಟಿ

ಇದನ್ನೂ ಓದಿ: ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ ರಾಜೀನಾಮೆ; ಅವರು ಕೆಳಗಿಳಿಯಲು ಏನು ಕಾರಣ?

ಕಳೆದ ಐದು ವರ್ಷದಲ್ಲಿ ಟಾಟಾ ಸನ್ಸ್ ಸಂಸ್ಥೆಯು ಚಂದ್ರಶೇಖರನ್ ಅವರಿಗೆ ಕೊಟ್ಟಿರುವ ಒಟ್ಟು ಸಂಭಾವನೆ ₹671.4 ಕೋಟಿ ಎನ್ನಲಾಗಿದೆ. ಕಳೆದ ಐದು ವರ್ಷದಲ್ಲಿ ಅವರಿಗೆ ಸಿಕ್ಕಿರುವ ಒಟ್ಟು ಸಂಭಾವನೆಯ ವಿವರ ಈ ಕೆಳಕಂಡಂತಿದೆ:

  • FY18: ₹55.11 ಕೋಟಿ
  • FY22: ₹109.00 ಕೋಟಿ
  • FY24: ₹135.32 ಕೋಟಿ
  • FY25: ₹155.81 ಕೋಟಿ
  • FY26: ₹158.66 ಕೋಟಿ

8 ವರ್ಷಗಳಲ್ಲಿ ಚಂದ್ರಶೇಖರನ್ ಸಂಭಾವನೆ ಮೂರು ಪಟ್ಟು ಹೆಚ್ಚಳ

2017 ರ ಫೆಬ್ರವರಿಯಲ್ಲಿ ಟಾಟಾ ಸನ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಚಂದ್ರಶೇಖರನ್ ಅವರ ಮೊದಲ ವರ್ಷದ (FY18) ಸಂಭಾವನೆ ₹55.11 ಕೋಟಿಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಕಳೆದ 8 ವರ್ಷಗಳಲ್ಲಿ ಅವರ ಒಟ್ಟು ವೇತನ ಮೂರು ಪಟ್ಟು (ಸುಮಾರು 188%) ಹೆಚ್ಚಾಗಿದೆ.

ಇದನ್ನೂ ಓದಿ: ಹಿಮಾಚಲದಲ್ಲಿ ಪೆಟ್ರೋಲ್, ಡೀಸಲ್ ಮೇಲೆ ವಿಧವೆ ಅನಾಥರ ಕಲ್ಯಾಣ ಸೆಸ್; ವ್ಯಾಟ್, ಸೆಸ್​ಗಳಿಂದಾಗಿ ಇಂಧನ ದುಬಾರಿ

ಸಂಸ್ಥೆಯ ಬೆಳವಣಿಗೆಗೆ ತಕ್ಕಂತೆ ವೇತನ ಏರಿಕೆ

ಚಂದ್ರಶೇಖರನ್ ಅವರ ನಾಯಕತ್ವದಲ್ಲಿ ಟಾಟಾ ಸಮೂಹದ ಲಾಭ ಮತ್ತು ಆದಾಯದಲ್ಲಿ ಗಣನೀಯ ಏರಿಕೆ ಕಂಡಿದೆ. ಕಂಪನಿಯ ಲಾಭ ಹೆಚ್ಚಾದಂತೆ ಅವರಿಗೆ ಸಿಗುವ ಕಮಿಷನ್ ಮೊತ್ತವೂ ಏರಿಕೆಯಾಯಿತು. FY18 ರಲ್ಲಿ ₹47 ಕೋಟಿಯಾಗಿದ್ದ ಕಮಿಷನ್ ಮೊತ್ತ FY26 ರಲ್ಲಿ ₹140.69 ಕೋಟಿಗೆ ಏರಿದೆ.

ಟಾಟಾ ಸನ್ಸ್ ಮಂಡಳಿಯ 9 ಮಂದಿ ನಿರ್ದೇಶಕರಲ್ಲಿ ಇಬ್ಬರಿಗೆ ಮಾತ್ರ ಸಂಭಾವನೆ ಸಿಕ್ಕಿದೆ. ಚಂದ್ರಶೇಖರನ್ ಹಾಗೂ ಸಿಎಫ್​ಒ ಸೌರಭ್ ಅರ್ವಾಲ್ ಅವರಿಗೆ ಮಾತ್ರವೇ ಸಂಭಾವನೆ ಬಂದಿದೆ. ಇತರ ಏಳು ನಿರ್ದೇಶಕರಿಗೆ ಸಂಭಾವೆ ಇಲ್ಲ. ಇವರ ಪೈಕಿ ಆರು ಮಂದಿ ನಿರ್ದೇಶಕರಿಗೆ ತಲಾ 1 ಕೋಟಿ ರೂನಿಂದ 3 ಕೋಟಿ ರೂವರೆಗೆ ಕಮಿಷನ್​ಗಳು ಸಿಕ್ಕಿವೆ. ಟಿವಿಎಸ್ ಮೋಟಾರ್ ಕಂಪನಿಯ ವೇಣು ಶ್ರೀನಿವಾಸನ್ ಅವರು ಮಾತ್ರವೇ ಸಂಭಾವನೆಯಾಗಲೀ, ಕಮಿಷನ್ ಆಗಲೀ ಪಡೆದಿಲ್ಲ.

ಚಂದ್ರಶೇಖರನ್ ಅವರು ಫೆಬ್ರವರಿ 2027 ರವರೆಗೆ ತಮ್ಮ ಪ್ರಸ್ತುತ ಅವಧಿಯನ್ನು ಪೂರ್ಣಗೊಳಿಸಲಿದ್ದು, ನಂತರ ಈ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version