ಸಚಿವ ಪ್ರಿಯಾಂಕ್ ಖರ್ಗೆ ಕಾರಿಗೆ ಬಿತ್ತು ಟ್ರಾಫಿಕ್ ಫೈನ್!; 4 ಕೇಸ್, 2,500 ದಂಡ ಬಾಕಿ; 50% ಆಫರ್ ಬಳಸಿ ಬೇಗ ಕಟ್ಟಿ ಎಂದು ಕಾಲೆಳೆದ ಬಿಜೆಪಿ – Kannada News | Priyank Kharge’s Car Fined Amid 50% Traffic E Challan Discount: BJP Alleges Hypocrisy

ಬೆಂಗಳೂರು, ಜೂ.25: ರಾಜ್ಯದಲ್ಲಿ ಜೂನ್ 21 ರಿಂದ ಜುಲೈ 10ರ ವರೆಗೆ ಬಾಕಿ ಇರುವ ಸಂಚಾರ ಉಲ್ಲಂಘನೆ ಇ-ಚಲನ್ ದಂಡಗಳ (Traffic E-Challan Fines) ಮೇಲೆ ಕರ್ನಾಟಕ ಸರ್ಕಾರವು ಶೇಕಡಾ 50 ರಷ್ಟು ಭರ್ಜರಿ ರಿಯಾಯಿತಿ ಘೋಷಿಸಿತ್ತು. ಈ ಬಗ್ಗೆ ಎಕ್ಸ್​​ನಲ್ಲಿ ಗೃಹಸಚಿವ ಪ್ರಿಯಾಂಕ ಖರ್ಗೆ ಕೂಡ ಪೋಸ್ಟ್​​ನ್ನು ಹಂಚಿಕೊಂಡಿದ್ದರು. ಆದರೆ ಜಾಗೃತಿ ಮೂಡಿಸುತ್ತಿರುವ ಸರ್ಕಾರದ ನಿಯಮಗಳನ್ನು ಸ್ವತಃ ಗೃಹ ಸಚಿವರೇ ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಎಕ್ಸ್​​ನಲ್ಲಿ ಪ್ರಿಯಾಂಕ ಖರ್ಗೆಗೆ ಪ್ರತಿಕ್ರಿಯಿಸಿ ತಿರುಗೇಟು ನೀಡಿದ ಬಿಜೆಪಿ, ಒಂದು ಕಡೆ ಸಂಚಾರ ನಿಯಮವನ್ನು ಪಾಲಿಸುವಂತೆ ಸರ್ಕಾರ ಹೇಳುತ್ತಿದೆ. ಇನ್ನೊಂದೆಡೆ ಅದೇ ಸರ್ಕಾರ ಗೃಹ ಸಚಿವರೇ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಸಂಚಾರ ನಿಯಮಗಳು ರಸ್ತೆಯ ಮೇಲಿನ ಕೇವಲ ಗೆರೆಗಳಲ್ಲ, ಅವು ಪ್ರತಿಯೊಬ್ಬರ ಜೀವನಾಡಿ ಎಂದು ಜಾಗೃತಿ ಮೂಡಿಸುವ ಗೃಹಸಚಿವರೇ ಈಗ ಸಂಚಾರ ನಿಯಮವನ್ನು ಪಾಲಿಸಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧಿಕೃತ ಕಾರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡವನ್ನು ಬಾಕಿ ಉಳಿಸಿಕೊಂಡಿರುವುದನ್ನು ಮುಂದಿಟ್ಟುಕೊಂಡು ಬಿಜೆಪಿ ಕರ್ನಾಟಕ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಲೇವಡಿ ಮಾಡಿದೆ. ಎಕ್ಸ್​​ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧಿಕೃತ ಕಾರು ಎನ್ನಲಾದ KA42 GA 0099 ಸಂಖ್ಯೆಯ ವಾಹನದ ಇ-ಚಲನ್ ವಿವರಗಳನ್ನು ಬಿಜೆಪಿ ಹಂಚಿಕೊಂಡಿದೆ. ಸಂಚಾರ ಪೊಲೀಸರ ಕ್ಯಾಮೆರಾಗಳಲ್ಲಿ ಈ ವಾಹನವು ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸಿರುವುದು ಹಾಗೂ ಸೀಟ್‌ಬೆಲ್ಟ್ ಧರಿಸದೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವುದು ದಾಖಲಾಗಿದೆ. ಪ್ರಸ್ತುತ ಈ ವಾಹನದ ಹೆಸರಿನಲ್ಲಿ ಒಟ್ಟು 4 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಇದ್ದು, ಒಟ್ಟು 2,500 ರೂ. ದಂಡ ಪಾವತಿಸಬೇಕಾಗಿದೆ ಎಂಬ ಪೋಸ್ಟ್​​ನ್ನು ಹಂಚಿಕೊಂಡಿದ್ದಾರೆ.

ಬಿಜೆಪಿ ತನ್ನ ಅಧಿಕೃತ ಎಕ್ಸ್​​​ ಖಾತೆಯಲ್ಲಿ ಸಚಿವರನ್ನು ಟ್ಯಾಗ್ ಮಾಡಿ ಕಾಲೆಳೆದಿದೆ. “ಸಂಚಾರ ನಿಯಮಗಳು ಎಲ್ಲರ ಜೀವನಾಡಿ ಎಂಬ ನಿಮ್ಮ ಮಾತನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ ಪ್ರಿಯಾಂಕ್ ಖರ್ಗೆ ಅವರೇ! ಆದರೆ… ಸೀಟ್‌ಬೆಲ್ಟ್ ಧರಿಸುವುದು ಮತ್ತು ವೇಗದ ಮಿತಿ ನಿಯಮಗಳು ನಿಮಗೆ ಅನ್ವಯಿಸುವುದಿಲ್ಲವೇ? ನಿಮ್ಮ KA42 GA 0099 ವಾಹನವು ಅತಿ ವೇಗ ಹಾಗೂ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದಿದೆ! ಎಂದು ಟ್ವೀಟ್ ಮಾಡಿದೆ. ಅಲ್ಲದೆ, ಸದ್ಯ ರಾಜ್ಯ ಸರ್ಕಾರವೇ ಜೂನ್ 21 ರಿಂದ ಜುಲೈ 10 ರವರೆಗೆ ಶೇ. 50ರಷ್ಟು ದಂಡ ರಿಯಾಯಿತಿ ನೀಡಿರುವುದರಿಂದ, ಸಚಿವರು ತಕ್ಷಣವೇ ‘ಕೆಎಸ್‌ಪಿ ಆಪ್’ (KSP App), ‘ಆಸ್ಟ್ರಂ ಆಪ್’ (ASTram App) ಅಥವಾ ‘ಕರ್ನಾಟಕ ಒನ್’ ಮೂಲಕ ಈ ಡಿಸ್ಕೌಂಟ್ ಆಫರ್ ಬಳಸಿ ತಮ್ಮ ಬಾಕಿ ದಂಡವನ್ನು ಶೀಘ್ರವಾಗಿ ಪಾವತಿಸಿ ಮುಗಿಸಲಿ ಎಂದು ಬಿಜೆಪಿ ಲೇವಡಿ ಮಾಡಿದೆ. ಸಾರ್ವಜನಿಕರಿಗೆ ಬುದ್ಧಿ ಹೇಳುವ ಸಚಿವರೇ ನಿಯಮ ಉಲ್ಲಂಘಿಸಿರುವುದು ಸರಿಯೇ ಎಂದು ಎಕ್ಸ್​​​ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಕೋರ್ಟ್‌ಗೆ ಅಲೆಯಬೇಕಿಲ್ಲ! ಕಳವಾಗಿದ್ದ ಬೈಕ್‌ಗಳನ್ನು ಠಾಣೆಯಲ್ಲೇ ಮಾಲೀಕರಿಗೆ ಒಪ್ಪಿಸಿ ವಿಜಯಪುರ ಪೊಲೀಸರ ವಿನೂತನ ಕಾರ್ಯ

ರಾಜ್ಯದಲ್ಲಿ ಬಾಕಿ ಉಳಿಸಿಕೊಂಡಿರುವ ಎಲ್ಲಾ ಸಂಚಾರ ಇ-ಚಲನ್ ದಂಡಗಳ ಮೇಲೆ ಬರೋಬ್ಬರಿ ಶೇಕಡಾ 50 ರಷ್ಟು (50% Discount) ವಿನಾಯಿತಿ ನೀಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು. ಈ ವಿಶೇಷ ರಿಯಾಯಿತಿ ಕೊಡುಗೆಯು 2026ರ ಜೂನ್ 21 ರಿಂದ ಆರಂಭವಾಗಿದ್ದು, ಜುಲೈ 10ರ ವರೆಗೆ ಮಾತ್ರ ಲಭ್ಯವಿರುತ್ತದೆ. ಈ ಅವಧಿಯೊಳಗೆ ವಾಹನ ಸವಾರರು ತಮ್ಮ ವಾಹನಗಳ ಮೇಲಿರುವ ಬಾಕಿ ದಂಡದ ಅರ್ಧದಷ್ಟು ಹಣವನ್ನು ಮಾತ್ರ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಆದೇಶವನ್ನು ನೀಡಿತ್ತು. ಇದೀಗ ಈ ಬಗ್ಗೆ ಸರ್ಕಾರದ ಸಚಿವರೇ ನಿಯಮ ಪಾಲಿಸಿಲ್ಲ ಎಂದು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರನ್‌ವೇಯಲ್ಲಿ ಮುಖಾಮುಖಿಯಾದ ಏರ್ ಇಂಡಿಯಾ, ಇಂಡಿಗೋ ವಿಮಾನಗಳು, ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ – Kannada News | Ahmedabad Runway Near Miss: Air India and IndiGo Flights Avert Disaster by 200m

ಅಹಮದಾಬಾದ್, ಜೂನ್ 25: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಜೆ ವಿಮಾನ(Flight) ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಏರ್ ಇಂಡಿಯಾ ವಿಮಾನವೊಂದು ತಪ್ಪು ತಿರುವು ಪಡೆದಿದ್ದರಿಂದ, ರನ್‌ವೇ ಕಡೆಗೆ ಸಾಗುತ್ತಿದ್ದ ಇಂಡಿಗೋ ವಿಮಾನದ ಎದುರೇ ಬಂದು ನಿಂತಿತ್ತು. ಏರ್ ಟ್ರಾಫಿಕ್ ಕಂಟ್ರೋಲ್ (ATC) ಅಧಿಕಾರಿಗಳು ಸಮಯಪ್ರಜ್ಞೆ ಮೆರೆದು ತಕ್ಷಣವೇ ಎರಡೂ ವಿಮಾನಗಳನ್ನು ತಡೆದಿದ್ದರಿಂದ ನೂರಾರು ಪ್ರಯಾಣಿಕರ ಪ್ರಾಣ ಉಳಿದಿದೆ.

ಕೇವಲ 200 ಮೀಟರ್ ಅಂತರದಲ್ಲಿ ನಿಂತ ವಿಮಾನಗಳು

ಬುಧವಾರ ಸಂಜೆ 6.30 ರ ಸುಮಾರಿಗೆ ಮುಂಬೈನಿಂದ ಅಹಮದಾಬಾದ್‌ಗೆ ಬಂದಿಳಿದ ಏರ್ ಇಂಡಿಯಾ ವಿಮಾನ (AI-2493), ರನ್‌ವೇಯಿಂದ ಪಾರ್ಕಿಂಗ್ ಬೇ ಕಡೆಗೆ ಹೋಗುವಾಗ ಪೈಲಟ್ ಮಾಡಿದ ಸಣ್ಣ ತಪ್ಪು ತಿರುವು ಇಡೀ ಆತಂಕಕ್ಕೆ ಕಾರಣವಾಯಿತು.

ಏರ್ ಇಂಡಿಯಾ ವಿಮಾನ ಸಕ್ರಿಯ ಟ್ಯಾಕ್ಸಿವೇಗೆ (ವಿಮಾನಗಳು ಚಲಿಸುವ ಮಾರ್ಗ) ಪ್ರವೇಶಿಸಿತು. ಇದೇ ಸಮಯದಲ್ಲಿ ಮುಂಬೈಗೆ ಟೇಕ್-ಆಫ್ ಆಗಲು ಸಿದ್ಧವಾಗುತ್ತಿದ್ದ ಇಂಡಿಗೋ ವಿಮಾನ (6E-5160) ಅದೇ ಮಾರ್ಗದಲ್ಲಿ ವೇಗವಾಗಿ ಬರುತ್ತಿತ್ತು. ಇದನ್ನು ಗಮನಿಸಿದ ವಾಯು ಸಂಚಾರ ನಿಯಂತ್ರಣ (ATC) ಸಿಬ್ಬಂದಿ ತಕ್ಷಣವೇ ಮಧ್ಯಪ್ರವೇಶಿಸಿ ಇಬ್ಬರೂ ಪೈಲಟ್‌ಗಳಿಗೆ ವಿಮಾನ ನಿಲ್ಲಿಸುವಂತೆ ತುರ್ತು ಸಂದೇಶ ರವಾನಿಸಿದರು. ಪರಿಣಾಮವಾಗಿ, ಎರಡೂ ವಿಮಾನಗಳು ಮುಖಾಮುಖಿಯಾಗುವ ಕೇವಲ 200 ಮೀಟರ್ ಮುಂಚಿತವಾಗಿಯೇ ಸ್ತಬ್ಧಗೊಂಡವು.

ಮತ್ತಷ್ಟು ಓದಿ:
Video: ಲುಫ್ಥಾನ್ಸಾ ಬೋಯಿಂಗ್ ವಿಮಾನದ ಲ್ಯಾಂಡಿಂಗ್ ಗೇರ್ ಕುಸಿತ, ಹಲವರಿಗೆ ಗಾಯ

ಸುರಕ್ಷಿತವಾಗಿ ಪಾರ್ಕಿಂಗ್ ಬೇ ತಲುಪಿದ ವಿಮಾನ

ಸಾಮಾನ್ಯ ಸ್ಥಿತಿಗೆ ಮರಳಿದ ಸಂಚಾರ: ಅಪಘಾತದ ಭೀತಿ ದೂರಾದ ಬಳಿಕ, ತಪ್ಪು ತಿರುವು ಪಡೆದಿದ್ದ ಏರ್ ಇಂಡಿಯಾ ವಿಮಾನವನ್ನು ನೆಲದ ಸಹಾಯದ ಮೂಲಕ ಸುರಕ್ಷಿತವಾಗಿ ಅದರ ನಿಗದಿತ ಪಾರ್ಕಿಂಗ್ ಬೇಗೆ ಎಳೆದುಕೊಂಡು ಹೋಗಲಾಯಿತು. ಇದರ ನಂತರ ಇಂಡಿಗೋ ವಿಮಾನವು ಸಾಮಾನ್ಯ ಕಾರ್ಯಾಚರಣೆಯೊಂದಿಗೆ ಸುರಕ್ಷಿತವಾಗಿ ಮುಂಬೈಗೆ ಹಾರಾಟ ನಡೆಸಿ ತಲುಪಿದೆ.

ತನಿಖೆಗೆ ಆದೇಶಿಸಿದ ನಾಗರಿಕ ವಿಮಾನಯಾನ ಸಂಸ್ಥೆ

ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಅಥವಾ ವಿಮಾನಗಳಿಗೆ ಹಾನಿಯಾಗಿಲ್ಲ ಎಂದು ಎರಡೂ ವಿಮಾನಯಾನ ಸಂಸ್ಥೆಗಳು ಅಧಿಕೃತ ಪ್ರಕಟಣೆಯಲ್ಲಿ ದೃಢಪಡಿಸಿವೆ. ಅಪಘಾತಕ್ಕೆ ಸಿಲುಕಲಿದ್ದ ಎರಡೂ ವಿಮಾನಗಳು ಏರ್‌ಬಸ್ A320 ಮಾದರಿಯಾಗಿದ್ದು, ತಲಾ 150 ರಿಂದ 180 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದವು. ಈ ಗಂಭೀರ ಲೋಪದ ಬಗ್ಗೆ ನಾಗರಿಕ ವಿಮಾನಯಾನ ನಿಯಂತ್ರಕರಿಗೆ (DGCA) ಮಾಹಿತಿ ನೀಡಲಾಗಿದ್ದು, ಘಟನೆಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ಆರಂಭಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

FIFA World Cup 2026: ನಾಕೌಟ್ ರೌಂಡ್​ಗೆ ಬ್ರೆಝಿಲ್ ಎಂಟ್ರಿ – Kannada News | Fifa world cup 2026 brazil clinches spot in round of 32 match

ಫಿಫಾ ವಿಶ್ವಕಪ್ 2026ರ 49ನೇ ಪಂದ್ಯದಲ್ಲಿ ಬ್ರೆಝಿಲ್ ತಂಡ ಭರ್ಜರಿ ಜಯ ಸಾಧಿಸಿದೆ. ಮಿಯಾಮಿ ನಗರದ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಬ್ರೆಝಿಲ್ ಹಾಗೂ ಸ್ಕಾಟ್​ಲ್ಯಾಂಡ್ ತಂಡಗಳು ಮುಖಾಮುಖಿಯಾಗಿತ್ತು. ಈ ಹಿಂದಿನ ಪಂದ್ಯದಂತೆ ಈ ಮ್ಯಾಚ್​ನಲ್ಲೂ ಸಾಂಪ್ರದಾಯಿಕ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಬ್ರೆಝಿಲ್ ಮೊದಲಾರ್ಧದಲ್ಲೇ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು.

ಅದರಲ್ಲೂ ವೇಗದೊಂದಿಗೆ ಮುನ್ನುಗ್ಗಿ ಆಡಿದ ಸ್ಟಾರ್ ಫಾರ್ವರ್ಡ್ ಆಟಗಾರ ವಿನೀಸಿಯಸ್ ಜೂನಿಯರ್ ಪಂದ್ಯದ ಆರಂಭದಲ್ಲೇ (7ನೇ ನಿಮಿಷದಲ್ಲಿ) ಮೊದಲ ಗೋಲು ಬಾರಿಸಿದರು. ನಂತರ ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ (ಇಂಜುರಿ ಟೈಮ್) ಮತ್ತೊಂದು ಆಕರ್ಷಕ ಹೆಡರ್ ಮೂಲಕ 2ನೇ ಗೋಲು ದಾಖಲಿಸಿದರು.

ಇನ್ನು ದ್ವಿತೀಯಾರ್ಧದ 60ನೇ ನಿಮಿಷದಲ್ಲಿ ಬ್ರೂನೋ ಗಿಮರೈಸ್ ನೀಡಿದ ಅದ್ಭುತ ಪಾಸ್ ಅನ್ನು ಮ್ಯಾಥ್ಯೂಸ್ ಕುನ್ಹಾ ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಬ್ರೆಝಿಲ್ ತಂಡವು  3-0 ಅಂತರದ ಜಯವನ್ನು ಖಚಿತಪಡಿಸಿಕೊಂಡಿತು.

ನೇಮರ್ ಕಂಬ್ಯಾಕ್:

ಈ ಪಂದ್ಯದ ಮೂಲಕ ಬ್ರೆಝಿಲ್​ನ ಸಾರ್ವಕಾಲಿಕ ಗರಿಷ್ಠ ಗೋಲುಗಾರ ನೇಮರ್ ಜೂನಿಯರ್ ಕಂಬ್ಯಾಕ್ ಮಾಡಿದ್ದಾರೆ.. ಬಲಗಾಲಿನ ಸ್ನಾಯು ಸೆಳೆತದ ಗಾಯದಿಂದ ಬಳಲುತ್ತಿದ್ದ ಅವರು ಈ ಹಿಂದಿನ ಎರಡು ಮ್ಯಾಚ್​ಗಳಲ್ಲಿ ಕಣಕ್ಕಿಳಿದಿರಲಿಲ್ಲ. ಆದರೆ ಸ್ಕಾಟ್​ಲ್ಯಾಂಡ್ ವಿರುದ್ಧದ  ಪಂದ್ಯದ 76ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದರು. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ನೇಮರ್ ಜೂನಿಯರ್ ಕಣಕ್ಕಿಳಿಯುವುದು ಖಚಿತ ಎಂದೇ ಹೇಳಬಹುದು.

ನಾಕೌಟ್ ಹಂತಕ್ಕೆ ಬ್ರೆಝಿಲ್ ಎಂಟ್ರಿ:

ಈ ಗೆಲುವಿನೊಂದಿಗೆ ಬ್ರೆಝಿಲ್ ಒಟ್ಟು 7 ಅಂಕಗಳನ್ನು ಗಳಿಸಿ, ಉತ್ತಮ ಗೋಲುಗಳ ವ್ಯತ್ಯಾಸದ ಆಧಾರದ ಮೇಲೆ ಮೊರಾಕೊ ತಂಡವನ್ನು ಹಿಂದಿಕ್ಕಿ ಗ್ರೂಪ್ ‘ಸಿ’ ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದರೊಂದಿಗೆ ಸಾಂಬಾ ಪಡೆ ಮುಂದಿನ ಹಂತಕ್ಕೇರಿದೆ. ಅಂದರೆ 32 ತಂಡಗಳ ನಡುವಣ ನಾಕೌಟ್ ರೌಂಡ್​ನಲ್ಲಿ ಬ್ರೆಝಿಲ್ ಕಣಕ್ಕಿಳಿಯಲಿದೆ.

ಇದನ್ನೂ ಓದಿ: ಧೈರ್ಯವಿದ್ದರೆ ನೇರವಾಗಿ ಹೇಳಿ: ಆಯ್ಕೆ ಸಮಿತಿ ವಿರುದ್ಧ ಮಂಜ್ರೇಕರ್ ವಾಗ್ದಾಳಿ

ಬ್ರೆಝಿಲ್ ಎದುರಾಳಿ ಯಾರು?

ಲೀಗ್​ ಹಂತದಲ್ಲಿ ಗ್ರೂಪ್ ‘ಸಿ’ ಅಂಕ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದಿರುವ ಬ್ರೆಝಿಲ್, ಜೂನ್ 29 ರಂದು ತನ್ನ ಮೊದಲ ನಾಕೌಟ್ ಪಂದ್ಯವನ್ನು ಆಡಲಿದೆ.  ಈ ಪಂದ್ಯದಲ್ಲಿ ಬ್ರೆಝಿಲ್ ಪಾಲಿಗೆ ಎದುರಾಳಿಯಾಗಿ ಗ್ರೂಪ್ ‘ಎಫ್’ ನ ರನ್ನರ್ ಅಪ್ ತಂಡ ಸಿಗಲಿದೆ. ಅಂದರೆ ನೆದರ್ಲ್ಯಾಂಡ್ಸ್ ಅಥವಾ ಜಪಾನ್ ಅಥವಾ ಸ್ವೀಡನ್ ತಂಡದೊಂದಿಗೆ ಬ್ರೆಝಿಲ್ ಸೆಣಸಲಿದೆ.

Source link

ಸಚಿವ ಸತೀಶ್ ಜಾರಕಿಹೊಳಿ ಬಾಮೈದನ ಮನೆ ಮೇಲೆ ಇಡಿ ದಾಳಿ: 24 ಗಂಟೆ ಕಳೆದ್ರೂ ಮುಗಿಯದ ಶೋಧ – Kannada News | ED Raids on Minister Satish Jarkiholi’s Brother in Law Manjunath Continue For Over 24 Hours in Belagavi

ಬೆಳಗಾವಿ, ಜೂನ್ 25: ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಭಾವಮೈದ ಮತ್ತು ಬೆಳಗಾವಿಯ ಅಬಕಾರಿ ಇಲಾಖೆಯ ಹೆಚ್ಚುವರಿ ಉಪ ಆಯುಕ್ತ ಮಂಜುನಾಥ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ 24 ಗಂಟೆಗಳು ಕಳೆದರೂ ಶೋಧ ಕಾರ್ಯ ಮುಂದುವರಿದಿದೆ. ಬುಧವಾರ ಬೆಳಗ್ಗೆ 5:30ಕ್ಕೆ ಪ್ರಾರಂಭವಾದ ಈ ದಾಳಿ ಇವತ್ತು ಬೆಳಗ್ಗೆ 6 ಗಂಟೆಯವರೆಗೆ, ಅಂದರೆ ಸತತ 25 ಗಂಟೆಗಳ ಕಾಲ ಮುಂದುವರಿದಿದೆ.

ಬೆಳಗಾವಿಯ ಟಿವಿ ಸೆಂಟರ್‌ನಲ್ಲಿರುವ ಮಂಜುನಾಥ್ ಮನೆ ಸೇರಿದಂತೆ ರಾಜ್ಯದ ಒಟ್ಟು 10 ಸ್ಥಳಗಳಲ್ಲಿ ಈ ಏಕಕಾಲಿಕ ಕಾರ್ಯಾಚರಣೆ ನಡೆದಿದೆ. ಈ ಸ್ಥಳಗಳಲ್ಲಿ ಬೆಳಗಾವಿಯಲ್ಲಿ ಆರು, ದಾವಣಗೆರೆ ಮತ್ತು ಮೈಸೂರಿನಂತಹ ನಗರಗಳೂ ಸೇರಿವೆ. ದಾಳಿಯ ವೇಳೆ, ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು, ಬೇನಾಮಿ ಬಾರ್ ಪರವಾನಗಿಗಳು, ಅಕ್ರಮ ಆಸ್ತಿ ಪತ್ರಗಳು ಮತ್ತು ಚಿನ್ನಾಭರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಮಂಜುನಾಥ್ ಅವರ ಪತ್ನಿಯನ್ನೂ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಮತ್ತು ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನಗೆ ವಿಷಯ ತಿಳಿಸಿದ್ರೆ ಮದುವೆಯನ್ನೇ ಕ್ಯಾನ್ಸಲ್ ಮಾಡ್ತಿದ್ದೆ, ಆದ್ರೆ ನನ್ನ ಮಗನನ್ನು ಸಿಯಾ ಕೊಂದಿದ್ಯಾಕೆ? ಕೇತನ್ ತಂದೆ ಪ್ರಶ್ನೆ – Kannada News | Pune Lohagad Tragedy: Ketan’s Father Demands Justice, Alleges Fiancée Siya’s Treachery

ಪುಣೆ, ಜೂನ್ 25: ಸಿಯಾಳಿಗೆ ಬೇರೊಬ್ಬನ ಜೊತೆ ಸಂಬಂಧವಿದ್ದರೆ ಆ ವಿಷಯವನ್ನು ನಮಗೆ ಒಂದು ಮೆಸೇಜ್ ಮೂಲಕ ತಿಳಿಸಬಹುದಿತ್ತು. ನಾವು ಮದುವೆ(Marriage)ಯನ್ನೇ ರದ್ದು ಮಾಡುತ್ತಿದ್ದೆವು. ಆದರೆ, ಇಷ್ಟು ಸಣ್ಣ ವಿಷಯಕ್ಕೆ ನನ್ನ ಮಗನನ್ನು ಆಕೆ ಕೊಂದಿದ್ದೇಕೆ? ಎಂದು ಮೃತ ಕೇತನ್ ತಂದೆ ವಿಶಾಲ್ ಆಕ್ರೋಶ ಹೊರಹಾಕಿದ್ದಾರೆ.

ಫೋನ್ ಯಾವಾಗಲೂ ಬ್ಯುಸಿ ಇರುತ್ತಿತ್ತು: ತಂದೆ ಬಿಚ್ಚಿಟ್ಟ ರಹಸ್ಯ

ವಿಶಾಲ್ ಅಗರ್ವಾಲ್ ಅವರ ಪ್ರಕಾರ, ಸಿಯಾ ತನಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇರುವುದನ್ನು ಎಂದಿಗೂ ಬಿಟ್ಟುಕೊಟ್ಟಿರಲಿಲ್ಲ. ಹೊರಗಣ್ಣಿಗೆ ಆಕೆ ಇಡೀ ಕುಟುಂಬದ ಜೊತೆ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದಳು.
ಆದರೆ, ಕೇತನ್ ಒಮ್ಮೆ ತನ್ನ ತಂದೆಯ ಬಳಿ, ಸಿಯಾಳ ಫೋನ್ ಯಾವಾಗಲೂ ಬ್ಯುಸಿ ಇರುತ್ತದೆ, ವೇಟಿಂಗ್‌ನಲ್ಲಿ ಬರುತ್ತದೆ ಎಂದು ಹೇಳಿಕೊಂಡಿದ್ದರು. ಈ ಬಗ್ಗೆ ಕೇತನ್ ಪ್ರಶ್ನಿಸಿದಾಗ, ಆಕೆ ತಾನು ಸ್ನೇಹಿತರೊಂದಿಗೆ ಮಾತನಾಡುತ್ತಿರುವುದಾಗಿ ಸುಳ್ಳು ಹೇಳಿ ನಂಬಿಸಿದ್ದಳು.

ಕೊಲೆಯ ಕಳ್ಳಾಟ ಬಯಲು ಮಾಡಿದ್ದೇ ಕೇತನ್ ಸಹೋದರಿ

ಜೂನ್ 18 ರಂದು ಲೋಹಗಡ ಕೋಟೆಯಲ್ಲಿ ಕೇತನ್ ಕಂದಕಕ್ಕೆ ಬಿದ್ದಾಗ ಸಿಯಾ ಅದನ್ನು ಅಪಘಾತ ಎಂದು ಬಿಂಬಿಸಿದ್ದಳು. ಆದರೆ ಕೇತನ್ ಸಹೋದರಿ ಸಂಜನಾಗೆ ಆಕೆಯ ನಡವಳಿಕೆಯ ಮೇಲೆ ಅನುಮಾನವಿತ್ತು.

ಶವವನ್ನು ಕಂದಕದಿಂದ ಹೊರತೆಗೆದಾಗ ಸಂಜನಾ ಸಿಯಾಳಿಗೆ, ಇದು ಹೇಗೆ ಸಂಭವಿಸಿತು? ಅಣ್ಣ ಅಷ್ಟೊಂದು ಅಂಚಿಗೆ ಏಕೆ ಹೋಗಿದ್ದ ಎಂಬ ಸಾಮಾನ್ಯ ಪ್ರಶ್ನೆಗಳನ್ನು ಕೇಳಿದ್ದಳು. ಆದರೆ ಸಿಯಾಳ ಬಳಿ ಯಾವುದೇ ಉತ್ತರಗಳಿರಲಿಲ್ಲ. ಏಕೆಂದರೆ ಬಂಡೆಯ ಅಪಾಯಕಾರಿ ಅಂಚಿನಲ್ಲಿ ನಿಲ್ಲುವ ವ್ಯಕ್ತಿ ಕೇತನ್ ಆಗಿರಲಿಲ್ಲ ಎಂದು ಸಹೋದರಿ ದೃಢವಾದ ನಂಬಿಕೆ ಇತ್ತು. ಇದೇ ಅನುಮಾನ ಮುಂದೆ ಪೊಲೀಸ್ ತನಿಖೆಗೆ ಕಾರಣವಾಗಿ ಕೊಲೆ ಬಯಲಾಯಿತು.

ಮತ್ತಷ್ಟು ಓದಿ: ಮೊದಲ ಬಾರಿ ತಳ್ಳಿದಾಗ ಪೊದೆ ಹಿಡಿದು ಬದುಕಿದ್ದ ವರ: ರಹಸ್ಯ ಮುಚ್ಚಿಹಾಕಲು ಹಾವಿನ ಕಥೆ ಕಟ್ಟಿ ಅಪ್ಪಿಕೊಂಡಿದ್ದ ಕಪಟ ಯುವತಿ

ಹೆತ್ತವರ ಒತ್ತಡವೇ ಕೊಲೆಗೆ ಕಾರಣ?

ಸಿಯಾಳ ಹೆತ್ತವರು ಮತ್ತು ಆಕೆಯ ಚಿಕ್ಕಮ್ಮನಿಗೆ ಈ ಕಳ್ಳಪ್ರೇಮದ ವಿಷಯ ಮೊದಲೇ ತಿಳಿದಿತ್ತು ಎಂದು ಕೇತನ್ ತಂದೆ ಶಂಕಿಸಿದ್ದಾರೆ. ಗೋಯಲ್ ಕುಟುಂಬದವರೇ ಶ್ರೀಮಂತ ಉದ್ಯಮಿ ಕೇತನ್ ಜೊತೆ ಮದುವೆಯಾಗುವಂತೆ ಸಿಯಾಳ ಮೇಲೆ ಭಾರಿ ಒತ್ತಡ ಹೇರಿದ್ದರು. ಇದೇ ಕಾರಣಕ್ಕೆ ಆಕೆ ಕೇತನ್‌ನನ್ನು ಮುಗಿಸಲು ಸ್ಕೆಚ್ ಹಾಕಿದ್ದಾಳೆ. ಇದರ ಹಿಂದೆ ನಮಗೆ ತಿಳಿಯದ ದೊಡ್ಡ ಪಿತೂರಿ ಇರಬಹುದು, ಪೊಲೀಸರು ಅದನ್ನು ಪತ್ತೆಹಚ್ಚಬೇಕು ಎಂದು ತಂದೆ ಹೇಳಿದ್ದಾರೆ.

ಹಂತಕರಿಗೆ ಮರಣದಂಡನೆ ಶಿಕ್ಷೆಯಾಗಲಿ

ಪೊಲೀಸರ ಪ್ರಕಾರ ಮೇ 31 ರಂದೇ ಮೊದಲ ಕೊಲೆ ಯತ್ನ ನಡೆದಿತ್ತು. ನಂತರ ಜೂನ್ 14 ರಂದು ಸಿಯಾ ಕೋಟೆಯ ಮೇಲಿಂದ ತಳ್ಳಿದಾಗ ಕೇತನ್ ಪೊದೆಯನ್ನು ಹಿಡಿದು ಬದುಕುಳಿದಿದ್ದ. ಆಗ ಸಿಯಾ, ಹಾವಿನಿಂದ ನಿನ್ನನ್ನು ರಕ್ಷಿಸಲು ತಳ್ಳಿದೆ ಎಂದು ನಂಬಿಸಿದ್ದಳು. ಕೊನೆಗೂ ಜೂನ್ 18 ರಂದು ಪ್ರಿಯಕರ ಚೇತನ್ ಜೊತೆ ಸೇರಿ ಆಕೆಯನ್ನು ಕಂದಕಕ್ಕೆ ತಳ್ಳಿದ್ದಾಳೆ.

ಇಷ್ಟು ಕ್ರೂರವಾಗಿ ನನ್ನ ಮಗನನ್ನು ಕೊಂದ ಆ ಇಬ್ಬರು ಹಂತಕರಿಗೆ ಕೋರ್ಟ್ ಮರಣದಂಡನೆ ಶಿಕ್ಷೆಯನ್ನೇ ವಿಧಿಸಬೇಕು ಎಂದು ವಿಶಾಲ್ ಅಗರ್ವಾಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Breaking News Today Live: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಲೋಕಾರ್ಪಣೆಗೆ ಕ್ಷಣಗಣನೆ, ಇಂದಿನ ಪ್ರಮುಖ ಸುದ್ದಿಗಳು ಇಲ್ಲಿದೆ – Kannada News | TV9 Kannada News Live 25 June 2026 Tungabhadra Dam’s New Crest Gates Inauguration Bidadi Township Row Politics Cinema Latest News

ಬೆಂಗಳೂರು, ಜೂ.25: ವಿಜಯನಗರ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಇತಿಹಾಸದಲ್ಲೇ ಇಂದು ಅತ್ಯಂತ ಮಹತ್ವದ ದಿನ. ಕಳೆದ ವರ್ಷ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿ ಆತಂಕ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ, ಈಗ ಡ್ಯಾಂನ ಎಲ್ಲಾ 33 ಕ್ರಸ್ಟ್ ಗೇಟ್‌ಗಳನ್ನು ಯಶಸ್ವಿಯಾಗಿ ಬದಲಾಯಿಸಲಾಗಿದ್ದು, ಅವುಗಳ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆದಿವೆ. ಇದರ ನಡುವೆ ದಕ್ಷಿಣ ಅಮೆರಿಕದ ದೇಶವಾದ ವೆನೆಜುವೆಲಾದಲ್ಲಿ ಬ್ಯಾಕ್-ಟು-ಬ್ಯಾಕ್ ಎರಡು ಭೀಕರ ಹಾಗೂ ಪ್ರಬಲ ಭೂಕಂಪಗಳು ಸಂಭವಿಸಿದ್ದು, ಇಡೀ ದೇಶವೇ ನಡುಗಿದೆ. ಯುಎಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ, ಮೊದಲು 7.2 ತೀವ್ರತೆ ಹಾಗೂ ಅದರ ಬೆನ್ನಲ್ಲೇ ಕೇವಲ 40 ಸೆಕೆಂಡುಗಳ ಅಂತರದಲ್ಲಿ 7.5 ತೀವ್ರತೆಯ ಮತ್ತೊಂದು ಪ್ರಬಲ ಭೂಕಂಪ ಸಂಭವಿಸಿದೆ. ಇನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಅವರ ನಿಯೋಗದ ಸದಸ್ಯರನ್ನು ಹತ್ಯೆ ಮಾಡಲು ಇಸ್ರೇಲ್‌ನ ರಹಸ್ಯ ಗುಪ್ತಚರ ಸಂಸ್ಥೆ ‘ಮೊಸಾದ್’ (Mossad) ಭೀಕರ ಸಂಚು ರೂಪಿಸಿತ್ತು ಎಂಬ ಆಘಾತಕಾರಿ ರಹಸ್ಯವನ್ನು ಬ್ರೆಜಿಲ್‌ನ ಖ್ಯಾತ ಪತ್ರಕರ್ತರೊಬ್ಬರು ಬಯಲಿಗೆಳೆದಿದ್ದಾರೆ. ಹೀಗೆ ಪ್ರಮುಖ ಸುದ್ದಿಗಳ ಲೈವ್​​​ ಅಪ್ಡೇಟ್​​​ಗಳನ್ನು ಇಲ್ಲಿ ನೀಡಲಾಗುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋರ್ಟ್‌ಗೆ ಅಲೆಯಬೇಕಿಲ್ಲ! ಕಳವಾಗಿದ್ದ ಬೈಕ್‌ಗಳನ್ನು ಠಾಣೆಯಲ್ಲೇ ಮಾಲೀಕರಿಗೆ ಒಪ್ಪಿಸಿ ವಿಜಯಪುರ ಪೊಲೀಸರ ವಿನೂತನ ಕಾರ್ಯ – Kannada News | Devanahalli Vijayapura Police Launch First of its Kind Initiative to Release Stolen Bikes Directly at Station

ಬಾಂಡ್ ಪೇಪರ್ ಸಹಿ ಪಡೆದು ಮೂಲ ಮಾಲೀಕರಿಗೆ ಬೈಕ್ ಹಸ್ತಾಂತರಿಸಿದ ಪೊಲೀಸರುImage Credit source: tv9

ದೇವನಹಳ್ಳಿ, ಜೂನ್ 25: ಕಳೆದುಹೋದ ಅಥವಾ ಕಳವಾಗಿದ್ದ ಬೈಕ್‌ಗಳು ಪತ್ತೆಯಾದರೂ, ಅವುಗಳನ್ನು ಮರಳಿ ಪಡೆಯಲು ಕೋರ್ಟ್‌ ಆವರಣದಲ್ಲಿ ತಿಂಗಳುಗಟ್ಟಲೆ ಅಲೆಯಬೇಕಾಗಿದ್ದ ಸಾರ್ವಜನಿಕರ ಪರದಾಟಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆಯು ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ಇಂತಹದೊಂದು ವಿನೂತನ ಮತ್ತು ಜನಸ್ನೇಹಿ ಕಾರ್ಯಕ್ಕೆ ಮುನ್ನುಡಿ ಬರೆದಿದೆ. ಕಳ್ಳತನವಾಗಿದ್ದ ದ್ವಿಚಕ್ರ ವಾಹನಗಳನ್ನು ಕೋರ್ಟ್ ಪ್ರಕ್ರಿಯೆಗಳ ವಿಳಂಬವಿಲ್ಲದೆ, ಕೇವಲ ಬಾಂಡ್ ಪೇಪರ್ ಪಡೆದು ನೇರವಾಗಿ ಪೊಲೀಸ್ ಠಾಣೆಯ ಆವರಣದಲ್ಲೇ ಮೂಲ ಮಾಲೀಕರಿಗೆ ಹಸ್ತಾಂತರಿಸುವ ನೂತನ ವ್ಯವಸ್ಥೆಯನ್ನು ಇಲ್ಲಿ ಜಾರಿಗೊಳಿಸಲಾಗಿದೆ.

ಕಳವಾಗಿದ್ದ ಬೈಕ್ ಸಿಕ್ಕರೂ ಸಂತ್ರಸ್ತರು ಕೋರ್ಟ್​ಗೆ ಅಲೆಯಬೇಕಿತ್ತು

ಈ ಹಿಂದೆ ಕಳ್ಳತನವಾದ ಬೈಕ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದರೂ, ಅವುಗಳನ್ನು ಬಿಡಿಸಿಕೊಳ್ಳಲು ಮಾಲೀಕರು ನ್ಯಾಯಾಲಯಕ್ಕೆ ಅಲೆಯಬೇಕಿತ್ತು. ವಕೀಲರ ಫೀಸ್, ಸಮಯ ವ್ಯರ್ಥ ಹಾಗೂ ಕಾಗದ ಪತ್ರಗಳ ದೀರ್ಘ ಪ್ರಕ್ರಿಯೆಯಿಂದ ಬೇಸತ್ತು ಹಲವು ಮಾಲೀಕರು ತಮ್ಮ ಬೈಕ್‌ಗಳು ಸಿಕ್ಕಿದ್ದರೂ ಅವುಗಳನ್ನು ಕೋರ್ಟ್ ಆವರಣದಲ್ಲೇ ಬಿಟ್ಟುಬಿಡುತ್ತಿದ್ದರು.

ವಿಜಯಪುರ ಪೊಲೀಸರಿಂದ ವಿನೂತನ ಕಾರ್ಯ

ಸಾರ್ವಜನಿಕರ ಈ ತೊಂದರೆಯನ್ನು ಮನಗಂಡ ವಿಜಯಪುರ ಪೊಲೀಸರು, ಮಾನ್ಯ ನ್ಯಾಯಾಧೀಶರ ಪೂರ್ವ ಅನುಮತಿಯನ್ನು ಪಡೆದು ಹೊಸದೊಂದು ಮಾರ್ಗೋಪಾಯ ಕಂಡುಕೊಂಡಿದ್ದಾರೆ. ಬೈಕ್ ಕಳೆದುಕೊಂಡವರು ಸೂಕ್ತ ದಾಖಲೆಗಳನ್ನು ತಂದು ಪರಿಶೀಲನೆ ನಡೆಸಿದ ಬಳಿಕ, ಠಾಣೆಯಲ್ಲೇ ಬಾಂಡ್ ಪೇಪರ್ ಬರೆದುಕೊಟ್ಟು ತಮ್ಮ ವಾಹನಗಳನ್ನು ಹುಡುಕಿ ವಾಪಸ್ ಕೊಂಡೊಯ್ಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಪೊಲೀಸರ ಈ ಜನಪರ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಬೈಕ್ ಕಳ್ಳತನ ಆರೋಪಿಯ ಬಂಧನ

ಮಹತ್ವದ ಕಾರ್ಯಾಚರಣೆ ನಡೆಸಿರುವ ವಿಜಯಪುರ ಪೊಲೀಸರು ಬೈಕ್ ಕಳ್ಳತನ ಜಾಲವನ್ನು ಭೇದಿಸಿದ್ದಾರೆ. ಕದ್ದ ಬೈಕ್‌ಗಳನ್ನು ಕೇವಲ 2 ರಿಂದ 2.5 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಇನ್ನು ಕದ್ದ ಬೈಕ್‌ಗಳನ್ನು ಕೇವಲ 2 ಸಾವಿರಕ್ಕೆ ಪಡೆದು ಸಾರ್ವಜನಿಕರಿಗೆ 10 ರಿಂದ 20 ಸಾವಿರ ರೂಪಾಯಿಗಳಿಗೆ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುತ್ತಿದ್ದ ಆರು ಜನ ಬ್ರೋಕರ್‌ಗಳನ್ನು (ಖರೀದಿದಾರರು) ಪತ್ತೆ ಹಚ್ಚಲಾಗಿದ್ದು, ಅವರ ವಿರುದ್ಧವೂ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧೈರ್ಯವಿದ್ದರೆ ನೇರವಾಗಿ ಹೇಳಿ: ಆಯ್ಕೆ ಸಮಿತಿ ವಿರುದ್ಧ ಮಂಜ್ರೇಕರ್ ವಾಗ್ದಾಳಿ – Kannada News | Team First, Not Stars: Sanjay Manjrekar’s Blunt Message to BCCI

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಯುವ ದಾಂಡಿಗ ಯಶಸ್ವಿ ಜೈಸ್ವಾಲ್​ಗೆ ಸ್ಥಾನ ನೀಡಲಾಗಿಲ್ಲ. ಬದಲಾಗಿ ರೋಹಿತ್ ಶರ್ಮಾ ಹಾಗೂ ಶುಭ್​​ಮನ್ ಗಿಲ್ ಅವರನ್ನು ಆರಂಭಿಕರಾಗಿ ಆಯ್ಕೆಯಾಗಿದ್ದಾರೆ.  ಇಲ್ಲಿ ರೋಹಿತ್ ಶರ್ಮಾ ತಂಡಕ್ಕೆ ನೀಡುವ ಅನುಭವ ಮತ್ತು ಗುಣಮಟ್ಟ ಪ್ರಶ್ನಾತೀತವಾಗಿದ್ದರೂ, ಭಾರತದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಬಿಸಿಸಿಐ ಆಯ್ಕೆ ಸಮಿತಿಯ ನಡೆಯನ್ನು ಪ್ರಶ್ನಿಸಿದ್ದಾರೆ.

ಯಶಸ್ವಿ ಜೈಸ್ವಾಲ್ ತಮ್ಮ ಕೊನೆಯ ಮೂರು ಏಕದಿನ ಪಂದ್ಯಗಳಲ್ಲಿ ಎರಡು ಶತಕಗಳನ್ನು ಬಾರಿಸಿದ್ದಾರೆ. ಆದರೆ ಬಿಸಿಸಿಐ ಆಯ್ಕೆದಾರರು ಅವರಿಗೆ ಯಾವುದೇ ಅವಕಾಶ ನೀಡಿಲ್ಲ. ಅದರಲ್ಲೂ ಕೊನೆಯ ಮ್ಯಾಚ್​ನಲ್ಲಿ ಜೈಸ್ವಾಲ್ ಅಫ್ಘಾನಿಸ್ತಾನ್ ವಿರುದ್ಧ 110 ರನ್​ಗಳ ಇನಿಂಗ್ಸ್ ಆಡಿದ್ದರು. ಇದಾಗ್ಯೂ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿಲ್ಲ. ಈ ಬಗ್ಗೆ ಸಂಜಯ್ ಮಂಜ್ರೇಕರ್ ಪ್ರಶ್ನೆಗಳನ್ನೆತ್ತಿದ್ದಾರೆ.

ಯಶಸ್ವಿ ಜೈಸ್ವಾಲ್ ತಮ್ಮ ಕೊನೆಯ ಮೂರು ಏಕದಿನ ಪಂದ್ಯಗಳಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ. ಅವರು ಸೌತ್ ಆಫ್ರಿಕಾ ವಿರುದ್ಧ ಅಜೇಯ 116 ರನ್ ಬಾರಿಸಿದ್ದರು, ಇದೀಗ ಅಫ್ಘಾನ್ ವಿರುದ್ಧ ಕೂಡ ಸೆಂಚುರಿ ಸಿಡಿಸಿದ್ದಾರೆ. ಅಂದರೆ ಭಾರತ ಏಕದಿನ ತಂಡದಲ್ಲಿ ಆರಂಭಿಕನಾಗಿ ಸಿಕ್ಕ ಅವಕಾಶವನ್ನು ಜೈಸ್ವಾಲ್ ಸದುಪಯೋಗಪಡಿಸಿಕೊಂಡಿದ್ದಾರೆ. ಆದರೆ ದುರಾದೃಷ್ಟ ಅವರನ್ನು ಕಾಡುತ್ತಿದೆ ಎಂದು ಸಂಜಯ್ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ಈ ದುರಾದೃಷ್ಟಕ್ಕೆ ಕಾರಣ ಬಿಸಿಸಿಐ ಆಯ್ಕೆ ಸಮಿತಿ. ಏಕೆಂದರೆ ಆಯ್ಕೆದಾರರು ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಿದ್ದರೆ, ಅವರು 2027 ರ ವಿಶ್ವಕಪ್ ಯೋಜನೆಗಳ ಭಾಗವಾಗಿದ್ದಾರೆ ಎಂದೇ ಅರ್ಥ. ಆದರೆ ಬಿಸಿಸಿಐ ಮತ್ತು ಭಾರತೀಯ ಕ್ರಿಕೆಟ್ ತಂಡದ ಆಡಳಿತವು ದೊಡ್ಡ ಹೆಸರನ್ನು ಮೀರಿ ನೋಡಬೇಕಾದ ಅಗತ್ಯವಿದೆ ಎಂದು ಮಂಜ್ರೇಕರ್ ಹೇಳಿದ್ದಾರೆ.

ದೊಡ್ಡ ಆಟಗಾರರ ಸುತ್ತಲಿನ ಸಂಸ್ಕೃತಿ ನಮಗೆಲ್ಲರಿಗೂ ತಿಳಿದಿದೆ. ಕ್ರಿಕೆಟ್‌ನ ಅರ್ಹತೆಯ ಮೇಲೆ ನಿರ್ಣಯಿಸುವಷ್ಟು ಸರಳ ನಿರ್ಧಾರಗಳು ಅಪರೂಪ. ರೋಹಿತ್ ವಿಷಯದಲ್ಲೂ ಹಾಗೆಯೇ ಇದೆ ಎಂದು ತೋರುತ್ತದೆ. ಆಯ್ಕೆದಾರರು ರೋಹಿತ್ ಶರ್ಮಾ ದೀರ್ಘಾವಧಿಯ ಯೋಜನೆಯ ಭಾಗ ಎಂದು ನಂಬಿದರೆ, ಅವರು ಹಾಗೆ ಹೇಳಬೇಕು. ನೀವುಗಳು ಧೈರ್ಯವಾಗಿ ನಿಮ್ಮ ನಿಲುವುಗಳನ್ನು ಸ್ಪಷ್ಟಪಡಿಸಬೇಕು.

ಇಲ್ಲಾ, ರೋಹಿತ್ ಶರ್ಮಾ ಅವರನ್ನು ಕೈಬಿಡಲು ಸಿದ್ಧರಿಲ್ಲದ ಕಾರಣ ಅವರನ್ನು ಆಯ್ಕೆ ಮಾಡಲಾಗುತ್ತಿದ್ದರೆ, ಅದು ಭಾರತೀಯ ಕ್ರಿಕೆಟ್ ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ.  ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಥವಾ ಜಸ್​ಪ್ರೀತ್ ಬುಮ್ರಾ ಅವರಿಗೆ ಯಾವುದು ಉತ್ತಮ ಎಂಬುದರ ಮೇಲೆ ಆಯ್ಕೆ ಎಂದಿಗೂ ಇರಬಾರದು. ಆಯ್ಕೆಯು ಯಾವಾಗಲೂ ಭಾರತೀಯ ಕ್ರಿಕೆಟ್‌ಗೆ ಯಾವುದು ಉತ್ತಮ ಎಂಬುದರ ಮೇಲೆ ನಿರ್ಧಾರವಾಗಬೇಕು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ಸಂಜಯ್ ಮಂಜ್ರೇಕರ್ ಆಯ್ಕೆದಾರರ ನಿಲುವುಗಳ ಪ್ರಶ್ನೆಗಳನ್ನೆತ್ತಲು ಮುಖ್ಯ ಕಾರಣ ಆಟಗಾರರ ವಯಸ್ಸು. ಅಂದರೆ ರೋಹಿತ್ ಶರ್ಮಾ ಈಗಲೂ ಏಕದಿನ ತಂಡದ ಭಾಗವಾಗುತ್ತಿರುವ ಕಾರಣ ಅವರು 2027ರ ಏಕದಿನ ವಿಶ್ವಕಪ್ ಆಡುವುದು ಬಹುತೇಕ ಖಚಿತ. ಆದರೆ 2027ರ ವಿಶ್ವಕಪ್ ವೇಳೆಗೆ ರೋಹಿತ್‌ ಶರ್ಮಾ ವಯಸ್ಸು 40 ವರ್ಷ ಆಗಿರಲಿದೆ.

ಇದನ್ನೂ ಓದಿ: ವೈಭವ್ ವಿಷಯದಲ್ಲಿ ತಾಳ್ಮೆ ಇರಲಿ, 22 ವರ್ಷದವರೆಗೆ ಕಾಯಿರಿ: ಕಪಿಲ್ ದೇವ್

ಅಂದರೆ ಪ್ರಮುಖ ಟೂರ್ನಿಗೆ ಯುವ ಆಟಗಾರರನ್ನು ಕಡೆಗಣಿಸಿ, 40 ವರ್ಷದ ಹಿರಿಯ ಆಟಗಾರರನ್ನು ಆಯ್ಕೆ ಮಾಡುತ್ತಿರುವುದು ಆಯ್ಕೆ ಸಮಿತಿಯಲ್ಲಿನ ವೈಫಲ್ಯಕ್ಕೆ ಸಾಕ್ಷಿ. ಹೀಗಾಗಿಯೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಥವಾ ಜಸ್​ಪ್ರೀತ್ ಬುಮ್ರಾ ಅವರಿಗೆ ಯಾವುದು ಉತ್ತಮ ಎಂಬುದರ ಮೇಲೆ ಆಯ್ಕೆ ನಡೆಯಬಾರದು. ಆಯ್ಕೆಯು ಯಾವಾಗಲೂ ಭಾರತೀಯ ಕ್ರಿಕೆಟ್‌ಗೆ ಯಾವುದು ಉತ್ತಮ ಎಂಬುದರ ಮೇಲೆ ನಿರ್ಧಾರವಾಗಬೇಕು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

Source link

ಪಾಸ್‌ಪೋರ್ಟ್ ಕೇವಲ ಪ್ರಯಾಣ ದಾಖಲೆ, ಪೌರತ್ವದ ಪುರಾವೆಯಲ್ಲ:ವಿದೇಶಾಂಗ ಸಚಿವಾಲಯ – Kannada News | Indian Passport is Travel Document, Not Citizenship Proof: MEA Clarifies Key Updates

ನವದೆಹಲಿ, ಜೂನ್ 25: ಸರ್ಕಾರಿ ಸೌಲಭ್ಯಗಳು ಮತ್ತು ಪೌರತ್ವಕ್ಕೆ ಅರ್ಹತೆಯ ಪುರಾವೆಯಾಗಿ ಪಾಸ್‌ಪೋರ್ಟ್‌(Passport)ಗಳ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಗೊಂದಲಕ್ಕೆ ವಿದೇಶಾಂಗ ಸಚಿವಾಲಯ (MEA) ತೆರೆ ಎಳೆದಿದೆ. ಭಾರತೀಯ ಪಾಸ್‌ಪೋರ್ಟ್ ಕಟ್ಟುನಿಟ್ಟಾಗಿ ಒಂದು ಅಂತರರಾಷ್ಟ್ರೀಯ ಪ್ರಯಾಣ ದಾಖಲೆಯಾಗಿದೆಯೇ ಹೊರತು, ಅದನ್ನು ಪೌರತ್ವದ ನಿರ್ಣಾಯಕ ಪುರಾವೆಯಾಗಿ ಪರಿಗಣಿಸಬಾರದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ದೇಶದ ಪಾಸ್‌ಪೋರ್ಟ್ ಸೇವೆಗಳು ಹಾಗೂ ಜಾಗತಿಕ ಚಲನಶೀಲತೆಯ ಸುಧಾರಣೆಗಳ ಕುರಿತು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಅಧಿಕಾರಿಗಳು ಈ ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ.

ಕೇವಲ 5 ದಿನಗಳಲ್ಲಿ ಕೈಗೆ ಪಾಸ್‌ಪೋರ್ಟ್

ತಂತ್ರಜ್ಞಾನದ ಬಳಕೆಯಿಂದಾಗಿ ಈಗ ಪಾಸ್‌ಪೋರ್ಟ್ ವಿತರಣೆಯ ಸಮಯವನ್ನು ಕೇವಲ 5 ಕೆಲಸದ ದಿನಗಳಿಗೆ ಇಳಿಸಲಾಗಿದೆ. ಇನ್ನು ಅರ್ಜಿದಾರರು ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ (PSK) ಕಳೆಯುವ ಸಮಯ 45 ನಿಮಿಷಗಳಿಗಿಂತ ಕಡಿಮೆಯಾಗಿದೆ.

ಕಳೆದ ವರ್ಷ ಮೇ ತಿಂಗಳಿನಿಂದ ದೇಶದಲ್ಲಿ ಹೊಸದಾಗಿ ವಿತರಿಸಲಾಗುತ್ತಿರುವ ಎಲ್ಲಾ ಪಾಸ್‌ಪೋರ್ಟ್‌ಗಳಲ್ಲಿ ಬಯೋಮೆಟ್ರಿಕ್ ಮಾಹಿತಿ ಒಳಗೊಂಡ ಸುರಕ್ಷಿತ ಎಲೆಕ್ಟ್ರಾನಿಕ್ ಚಿಪ್‌ಗಳನ್ನು (e-Passports) ಅಳವಡಿಸಲಾಗುತ್ತಿದೆ. ಇದು ನಕಲಿ ಪಾಸ್‌ಪೋರ್ಟ್ ದಂಧೆಗೆ ಬ್ರೇಕ್ ಹಾಕಲಿದ್ದು, ವಿದೇಶಿ ಗಡಿಗಳಲ್ಲಿ ಸುಲಭ ತಪಾಸಣೆಗೆ ನೆರವಾಗಲಿದೆ.

ಮತ್ತಷ್ಟು ಓದಿ: Legal Advice: ಪ್ರೇಮ ವಿವಾಹ ಅಥವಾ ಕೋರ್ಟ್‌ ಮ್ಯಾರೇಜ್‌ ಆಗಲು ಈ ದಾಖಲೆಗಳು ಬೇಕೇ ಬೇಕು

ಆರು ಪಟ್ಟು ವಿಸ್ತರಣೆ: ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಕೇಂದ್ರ

ಒಂದು ದಶಕದ ಹಿಂದೆ ತೀರಾ ಸೀಮಿತವಾಗಿದ್ದ ಪಾಸ್‌ಪೋರ್ಟ್ ವಿತರಣಾ ಜಾಲ ಈಗ ದೇಶಾದ್ಯಂತ ಭಾರಿ ಬೆಳವಣಿಗೆ ಕಂಡಿದೆ. ಸದ್ಯ ಭಾರತದಲ್ಲಿ 545 ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

2027 ರ ವೇಳೆಗೆ ದೇಶದ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಕನಿಷ್ಠ ಒಂದು ಪಾಸ್‌ಪೋರ್ಟ್ ಕೇಂದ್ರ ಇರುವಂತೆ ನೋಡಿಕೊಳ್ಳಲು ಸರ್ಕಾರ ನಿರ್ಧರಿಸಿದ್ದು, ಈ ವರ್ಷ ಹೊಸದಾಗಿ 20 ಹೆಚ್ಚುವರಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ದೂರದ ಹಳ್ಳಿಗಳು ಮತ್ತು ಪ್ರವೇಶಿಸಲು ಕಷ್ಟವಿರುವ ಪ್ರದೇಶಗಳಿಗಾಗಿ ವಿಶೇಷ ಮೊಬೈಲ್ ಪಾಸ್‌ಪೋರ್ಟ್ ತಂಡಗಳನ್ನು ಕಳುಹಿಸಲಾಗುತ್ತಿದೆ.

ಕೇವಲ ಶೇ. 10 ರಷ್ಟು ಭಾರತೀಯರ ಬಳಿ ಮಾತ್ರ ಪಾಸ್‌ಪೋರ್ಟ್

ದೇಶದಲ್ಲಿ ಇಷ್ಟೆಲ್ಲಾ ಸೌಲಭ್ಯಗಳು ಸಿಗುತ್ತಿದ್ದರೂ, ಪ್ರಸ್ತುತ ಭಾರತದ ಒಟ್ಟು ಜನಸಂಖ್ಯೆಯ ಕೇವಲ ಶೇಕಡಾ 10 ರಷ್ಟು ಜನರ ಬಳಿ ಮಾತ್ರ ಪಾಸ್‌ಪೋರ್ಟ್ ಇದೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಪಾಸ್‌ಪೋರ್ಟ್ ವ್ಯಾಪ್ತಿಯನ್ನು ಎಲ್ಲರಿಗೂ ತಲುಪಿಸುವುದು ಸರ್ಕಾರದ ಮುಖ್ಯ ಆದ್ಯತೆಯಾಗಿದೆ ಎಂದು ಸಚಿವಾಲಯ ಹೇಳಿದೆ.

ಭಾರತೀಯರಿಗೆ ಸುಲಭ ವಿದೇಶಿ ಪ್ರಯಾಣ ಮತ್ತು ವೀಸಾ ಸೌಲಭ್ಯಗಳು

ಪ್ರಸ್ತುತ ವಿಶ್ವದ 27 ದೇಶಗಳು ಭಾರತೀಯರಿಗೆ ವೀಸಾ-ಮುಕ್ತ (Visa-Free) ಪ್ರವೇಶ ನೀಡುತ್ತಿವೆ. ಇದರೊಂದಿಗೆ 47 ದೇಶಗಳು ‘ಆಗಮನದ ನಂತರ ವೀಸಾ’ (Visa on Arrival) ಮತ್ತು 66 ದೇಶಗಳು ಇ-ವೀಸಾ (e-Visa) ಸೌಲಭ್ಯವನ್ನು ವಿಸ್ತರಿಸಿವೆ. ಭಾರತವು ಈಗಾಗಲೇ ಯುಕೆ, ಆಸ್ಟ್ರೇಲಿಯಾ, ಯುರೋಪಿಯನ್ ಒಕ್ಕೂಟ ಸೇರಿದಂತೆ 25 ಪ್ರಮುಖ ರಾಷ್ಟ್ರಗಳೊಂದಿಗೆ 27 ಸುಗಮ ಸಂಚಾರ ಒಪ್ಪಂದಗಳಿಗೆ ಸಹಿ ಹಾಕಿದೆ.

ಅಲ್ಲದೆ, ವಿದೇಶಕ್ಕೆ ಉದ್ಯೋಗಕ್ಕೆ ಹೋಗುವ ಕಾರ್ಮಿಕರ ವಲಸೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ‘ಇ-ಮೈಗ್ರೇಟ್ 2.0’ ಪೋರ್ಟಲ್ ತರಲಾಗಿದ್ದು, ಇದರ ಮೂಲಕ 7 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಪ್ರಯೋಜನ ಪಡೆದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭಾರತ ಚಿತ್ರರಂಗ ಬಿಟ್ಟ ಪ್ರಿಯಾಂಕಾಗೆ ಪಶ್ಚಾತಾಪ? ಓಪನ್ ಆಗಿ ಮಾತನಾಡಿದ ನಟಿ – Kannada News | Priyanka Chopra: Hollywood Journey Lags Bollywood Success; India Comeback with Rajamouli

ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಹಾಗೂ ಹಾಲಿವುಡ್ ಎರಡೂ ಚಿತ್ರರಂಗದಲ್ಲೂ ಯಶಸ್ಸು ಕಂಡ ಕೆಲವೇ ಕೆಲವು ಭಾರತೀಯ ನಟಿಯರಲ್ಲಿ ಒಬ್ಬರು. ಹಿಂದಿ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಅವರು ಅಮೆರಿಕಾಗೆ ವಲಸೆ ಹೋಗಿ ಅಲ್ಲಿನ ಸಿನಿಮಾಗಳಲ್ಲಿ ಬ್ಯುಸಿಯಾದರು. ಹಾಲಿವುಡ್‌ನಲ್ಲಿ ಹಲವು ಪ್ರಮುಖ ಪ್ರಾಜೆಕ್ಟ್‌ಗಳನ್ನು ಮಾಡಿದ್ದರೂ ಸಹ, ಬಾಲಿವುಡ್‌ನಲ್ಲಿ ತಾವು ಗಳಿಸಿದ ಖ್ಯಾತಿ ಮತ್ತು ಮಾಡಿದ ವೈವಿಧ್ಯಮಯ ಕೆಲಸಗಳಿಗೆ ಹೋಲಿಸಿದರೆ ಹಾಲಿವುಡ್ ಜರ್ನಿ ಇನ್ನು ಆರಂಭಿಕ ಹಂತದಲ್ಲೇ ಇದೆ ಎಂದು ಪ್ರಿಯಾಂಕಾ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ನಡೆದ ಕಾನ್ ಲಯನ್ಸ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಪ್ರಿಯಾಂಕಾ, ತಮ್ಮ ಹಾಲಿವುಡ್ ವೃತ್ತಿಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ‘ನನ್ನ ಹಿಂದಿ ಚಿತ್ರರಂಗದ ವೃತ್ತಿಜೀವನದಲ್ಲಿ ನಾನು ಅತ್ಯುತ್ತಮ ಚಿತ್ರನಿರ್ಮಾಪಕರು ಹಾಗೂ ಅತ್ಯುತ್ತಮ ನಟರೊಂದಿಗೆ ಕೆಲಸ ಮಾಡಿದ್ದೇನೆ. ಅದ್ಭುತ ಕಥೆಗಳನ್ನು ಹೇಳುತ್ತಾ, ಹಲವು ವಿಭಿನ್ನ ಶೈಲಿಯ ಪಾತ್ರಗಳನ್ನು ಪೋಷಿಸಿದ್ದೇನೆ. ಆದರೆ ಅಮೆರಿಕಾದಲ್ಲಿ, ಅಂದರೆ ನನ್ನ ಇಂಗ್ಲಿಷ್ ಸಿನಿಮಾಗಳ ಜರ್ನಿಯಲ್ಲಿ ನಾನು ಅಷ್ಟೊಂದು ದೊಡ್ಡ ಮಟ್ಟದ ವೈವಿಧ್ಯಮಯ ಕೆಲಸಗಳನ್ನು ಮಾಡಲು ಇನ್ನೂ ಸಾಧ್ಯವಾಗಿಲ್ಲ’ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ಭಾರತದಲ್ಲಿ ತಮಗೆ ಸಿಕ್ಕ ಯಶಸ್ಸು ಮತ್ತು ಮನ್ನಣೆಗೆ ಹೋಲಿಸಿದರೆ ಹಾಲಿವುಡ್‌ನಲ್ಲಿ ತಮ್ಮ ಬೆಸ್ಟ್ ವರ್ಕ್ ಇನ್ನೂ ಬರಬೇಕಿದೆ ಎಂದು ಅವರು ಭಾವಿಸಿದ್ದಾರೆ.

ಮುಂದಿನ ಗುರಿ ಏನು?

ಭಾರತೀಯ ಚಿತ್ರರಂಗದಲ್ಲಿ ತಮಗೆ ಸಿಕ್ಕ ಖ್ಯಾತಿ ಮತ್ತು ವಿಭಿನ್ನ ಪಾತ್ರಗಳನ್ನು ಮಾಡುವ ಅವಕಾಶ, ಇನ್ನುಮುಂದೆ ತಮ್ಮ ಇಂಗ್ಲಿಷ್ ಸಿನಿಮಾಗಳಲ್ಲೂ ಸಿಗುವಂತೆ ಮಾಡುವುದು ಹಾಗೂ ತಮ್ಮ ಗ್ಲೋಬಲ್ ಕೆರಿಯರ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದೇ ತಮ್ಮ ಮುಂದಿನ ಗುರಿ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ‘ವಾರಣಾಸಿ’ ಬಗ್ಗೆ ಬಾಲಿವುಡ್ ಮಂದಿಯ ಅಪಪ್ರಚಾರ; ಸಿನಿಮಾ ಮೂಲಕವೇ ಉತ್ತರಿಸುತ್ತಾರೆ ರಾಜಮೌಳಿ

ರಾಜಮೌಳಿ ಸಿನಿಮಾ ಮೂಲಕ ಮತ್ತೆ ಎಂಟ್ರಿ

ಬಾಲಿವುಡ್‌ನಲ್ಲಿ ‘ಫ್ಯಾಷನ್’, ‘ಬರ್ಫಿ’, ‘ಬಾಜೀರಾವ್ ಮಸ್ತಾನಿ’ಯಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿ, ಬಳಿಕ 2015 ರಲ್ಲಿ ‘ಕ್ವಾಂಟಿಕೋ’ ಸರಣಿ ಮೂಲಕ ಹಾಲಿವುಡ್‌ಗೆ ಕಾಲಿಟ್ಟಿದ್ದ ಪ್ರಿಯಾಂಕಾ, ಇದೀಗ ಹಲವು ವರ್ಷಗಳ ನಂತರ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಪ್ಯಾನ್-ಇಂಡಿಯಾ ಸಿನಿಮಾ ‘ವಾರಣಾಸಿ’ ಮೂಲಕ ಪ್ರಿಯಾಂಕಾ ಚೋಪ್ರಾ ಕಂಬ್ಯಾಕ್ ಮಾಡುತ್ತಿದ್ದು, ಈ ಚಿತ್ರ 2027ರ ಏಪ್ರಿಲ್​​ನಲ್ಲಿ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version