ಮುಂಗಾರು ಮಳೆಗೆ ಶುದ್ಧವಾದ ಕರ್ನಾಟಕದ ವಾಯು: ಸಿಲಿಕಾನ್ ಸಿಟಿಯಲ್ಲಿ ಗಣನೀಯವಾಗಿ ಸುಧಾರಿಸಿದ ಗಾಳಿಯ ಗುಣಮಟ್ಟ – Kannada News | Monsoon Magic: Bengaluru AQI Improves, Karnataka Breathes Easier

ಬೆಂಗಳೂರು, ಜೂ.25: ರಾಜ್ಯಾದ್ಯಂತ ನೈಋತ್ಯ ಮುಂಗಾರು ಮಳೆ ಚುರುಕಾಗಿರುವುದರಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ (Air Quality) ಗಣನೀಯವಾಗಿ ಸುಧಾರಿಸಿದೆ. ಸತತವಾಗಿ ಬೀಸುತ್ತಿರುವ ತಂಪಾದ ಗಾಳಿ ಮತ್ತು ಮಳೆಯ ಸಿಂಚನದಿಂದಾಗಿ ವಾತಾವರಣದಲ್ಲಿದ್ದ ಧೂಳಿನ ಕಣಗಳು ಕರಗಿದ್ದು, ಪರಿಸರ ಪ್ರೇಮಿಗಳು ಹಾಗೂ ವಾಯುವಿಹಾರ ಹೋಗುವ ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಸಾಮಾನ್ಯವಾಗಿ ವಾಹನಗಳ ದಟ್ಟಣೆ ಮತ್ತು ಕೈಗಾರಿಕೆಗಳಿಂದಾಗಿ ಮಾಲಿನ್ಯದ ಮುಂಚೂಣಿಯಲ್ಲಿರುತ್ತಿದ್ದ ರಾಜಧಾನಿ ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕ ಅತ್ಯಂತ ಆಶಾದಾಯಕವಾಗಿದೆ. ನಗರದ ಬಹುತೇಕ ಭಾಗಗಳಲ್ಲಿ AQI ಪ್ರಮಾಣ 35 ರಿಂದ 60 ರ ಆಸುಪಾಸಿನಲ್ಲಿದ್ದು, ಇದು ಉತ್ತಮ ಮತ್ತು ತೃಪ್ತಿದಾಯಕ ವಿಭಾಗಕ್ಕೆ ಸೇರುತ್ತದೆ. ಮೆಜೆಸ್ಟಿಕ್, ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್‌ನಂತಹ ಸದಾ ಬ್ಯುಸಿಯಾಗಿರುವ ವಲಯಗಳಲ್ಲೂ ಮಾಲಿನ್ಯದ ಮಟ್ಟ ಗಣನೀಯವಾಗಿ ತಗ್ಗಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನೀಡಿರುವ ಇಂದಿನ ದತ್ತಾಂಶಗಳ ಪ್ರಕಾರ ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಇಲ್ಲಿನ ಗಾಳಿಯ ಗುಣಮಟ್ಟ ಅತ್ಯಂತ ಅತ್ಯುತ್ತಮವಾಗಿದ್ದು, AQI 25 ರಿಂದ 35 ರ ಒಳಗೆ ದಾಖಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಉತ್ತರ ಕರ್ನಾಟಕದ ಅವಳಿ ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಸಂಪೂರ್ಣ ಹತೋಟಿಯಲ್ಲಿದ್ದು, ಉಸಿರಾಟಕ್ಕೆ ಪೂರಕವಾದ ಶುದ್ಧ ಗಾಳಿ ಇದೆ. ಈ ಭಾಗಗಳಲ್ಲಿ ಕೊಂಚ ಒಣ ಹವಾಮಾನ ಇದ್ದರೂ, ಗಾಳಿಯ ವೇಗ ಹೆಚ್ಚಿರುವುದರಿಂದ ಮಾಲಿನ್ಯಕಾರಕ ಕಣಗಳು ಚದುರಿಹೋಗಿದ್ದು, ಗಾಳಿಯ ಗುಣಮಟ್ಟ ಮಧ್ಯಮದಿಂದ ತೃಪ್ತಿದಾಯಕ ಸ್ಥಿತಿಯಲ್ಲಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮುಂದುವರಿದ ಕೂಲ್ ಕೂಲ್ ಕ್ಲೈಮೇಟ್: ಕರಾವಳಿಯ 3 ಜಿಲ್ಲೆಗಳಿಗೆ ಹೈ ಅಲರ್ಟ್

ಮಳೆಗಾಲದ ಈ ಅವಧಿಯು ಉಸಿರಾಟದ ತೊಂದರೆ ಅಥವಾ ಅಸ್ತಮಾ ಇರುವ ರೋಗಿಗಳಿಗೆ ವಾಯು ಮಾಲಿನ್ಯದ ದೃಷ್ಟಿಯಿಂದ ಅತ್ಯಂತ ಸುರಕ್ಷಿತವಾಗಿದ್ದು, ಆರೋಗ್ಯ ತಜ್ಞರು ಪರಿಸರದ ಈ ಸುಧಾರಣೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಯಶ್ ಸಿನಿಮಾ ಎಂದರೆ ಏನೋ ಒಂದು ಅದ್ಭುತ ವಿಷಯ ಇರುತ್ತೆ’; ‘ಟಾಕ್ಸಿಕ್’ ಬಗ್ಗೆ ಪ್ರಿಯಾ ಆನಂದ್ ಮಾತು – Kannada News | Priya Anand on Yash: Kannada Cinema’s Global Rise and’Toxic’ Excitement

ಕನ್ನಡ ಚಿತ್ರರಂಗ ಇಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ‘ಕೆಜಿಎಫ್’, ‘ಕಾಂತಾರ’ದಂತಹ ಸಿನಿಮಾಗಳ ನಂತರ ಚಂದನವನದ ಮಾರುಕಟ್ಟೆ ಮತ್ತು ಸಿನಿಮಾಗಳ ವ್ಯಾಪ್ತಿ ದೊಡ್ಡದಾಗಿದೆ. ಇದೀಗ ಇದೇ ವಿಷಯವಾಗಿ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ಪ್ರಿಯಾ ಆನಂದ್ (Priya Anand), ರಾಕಿಂಗ್ ಸ್ಟಾರ್ ಯಶ್ ಅವರ ಶ್ರಮ ಹಾಗೂ ಮುಂಬರುವ ‘ಟಾಕ್ಸಿಕ್’ ಸಿನಿಮಾ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ಯಶ್ ಅವರ ಬಗ್ಗೆ ಮಾತನಾಡಿದ ಪ್ರಿಯಾ ಆನಂದ್, ‘ಕನ್ನಡ ಚಿತ್ರರಂಗಕ್ಕೆ ದೇಶ ಹಾಗೂ ಜಾಗತಿಕ ಮಟ್ಟದಲ್ಲಿ ಇಂತಹದೊಂದು ಮನ್ನಣೆ ಸಿಗಲು ಇದು ಸೂಕ್ತ ಸಮಯ. ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಯಶ್ ಅವರಿಗಿಂತ ಅತ್ಯುತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ. ಒಬ್ಬ ನಟನಾಗಿ ಅವರು ಎಲ್ಲರಿಗೂ ತುಂಬಾನೇ ಸ್ಫೂರ್ತಿ ನೀಡುತ್ತಾರೆ’ ಎಂದು ಹೊಗಳಿದ್ದಾರೆ.

ಇದೇ ವೇಳೆ ತಮ್ಮ ಹಳೆಯ ನೆನಪನ್ನು ಹಂಚಿಕೊಂಡ ಪ್ರಿಯಾ, ‘ನಾನು ರಾಜಕುಮಾರ ಸಿನಿಮಾ ಸೈನ್ ಮಾಡುವುದಕ್ಕೂ ವರ್ಷಗಳ ಮೊದಲು ಬೆಂಗಳೂರಿನ ಮಾಲ್ ಒಂದರಲ್ಲಿ ಯಶ್ ನಟನೆಯ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಸಿನಿಮಾ ನೋಡಿದ್ದೆ. ಯಶ್ ಅವರ ಅಭಿನಯವನ್ನು ನಾನು ಮೊದಲ ಬಾರಿಗೆ ಪರದೆ ಮೇಲೆ ನೋಡಿದ್ದು ಅದೇ ಚಿತ್ರದಲ್ಲಿ. ಅದಾದ ನಂತರ ಅವರ ‘ಗೂಗ್ಲಿ’ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೋಡಿದೆ’ ಎಂದಿದ್ದಾರೆ.

ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ಪ್ರಿಯಾ ಆನಂದ್, ‘ಯಶ್ ಅವರು ಒಂದು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರೆ ಅಲ್ಲಿ ಖಂಡಿತಾ ಏನೋ ಒಂದು ಅದ್ಭುತವಾದ ಹಾಗೂ ಎಕ್ಸೈಟಿಂಗ್ ಆದ ವಿಷಯ ಇದ್ದೇ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ ಯಶ್ ಅವರ ಮುಂದಿನ ಸಿನಿಮಾದಲ್ಲಿ ಏನಿರಬಹುದು ಎಂದು ನೋಡಲು ನಾನು ತುಂಬಾ ಕುತೂಹಲದಿಂದ ಕಾಯುತ್ತಿದ್ದೇನೆ. ‘ಟಾಕ್ಸಿಕ್’ ಚಿತ್ರದ ಬಗ್ಗೆ ನನಗೆ ತುಂಬಾನೇ ಎಕ್ಸೈಟ್‌ಮೆಂಟ್ ಇದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ನಾನು ನಿಮ್ಮ ಭಾಷೆ ಕಲಿತಿದ್ದು ಪುನೀತ್​​ಗಾಗಿ’; ಕನ್ನಡದ ಬಗ್ಗೆ ಪ್ರೀತಿ ಹೊರ ಹಾಕಿದ ಪ್ರಿಯಾ ಆನಂದ್

ಪ್ರಿಯಾ ಆನಂದ್ ಅವರು ಪುನೀತ್ ರಾಜ್​​ಕುಮಾರ್ ನಟನೆಯ ‘ರಾಜಕುಮಾರ’ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಆ ಬಳಿಕ ಕೆಲವೇ ಕೆಲವು ಕನ್ನಡ ಚಿತ್ರಗಳನ್ನು ಅವರು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವೆನೆಜುವೆಲಾದಲ್ಲಿ ಒಂದು ನಿಮಿಷದ ಅಂತರದಲ್ಲಿ ಎರಡೆರಡು ಪ್ರಬಲ ಭೂಕಂಪ, ಕಟ್ಟಡಗಳ ಕುಸಿತ, ಬೀದಿಗಳಲ್ಲಿ ಕುಳಿತು ರಾತ್ರಿ ಕಳೆದ ಜನ – Kannada News | Venezuela Earthquake: 7.5 Magnitude Quake Rocks Caracas, Buildings Collapse

ಕ್ಯಾರಕಾಸ್, ಜೂನ್ 25: ವೆನೆಜುವೆಲಾದಲ್ಲಿ ಎರಡು ಅತ್ಯಂತ ಪ್ರಬಲ ಭೂಕಂಪ(Earthquake)ಗಳು ಸಂಭವಿಸಿದ್ದು, ಇಡೀ ದೇಶವೇ ನಡುಗಿದೆ. ರಾಜಧಾನಿ ಕ್ಯಾರಕಾಸ್‌ನಲ್ಲಿ ಹಲವು ಬಹುಮಹಡಿ ಕಟ್ಟಡಗಳು ಮತ್ತು ವಸತಿ ಗೃಹಗಳು ಕುಸಿದು ಬಿದ್ದಿದ್ದು, ಕಣ್ಮುಚ್ಚಿ ಬಿಡುವಷ್ಟರಲ್ಲಿ ಇಡೀ ನಗರವೇ ಧೂಳಿನ ಮಯವಾಗಿದೆ. ಒಂದು ಶತಮಾನಕ್ಕೂ (100 ವರ್ಷ) ಹೆಚ್ಚು ಅವಧಿಯಲ್ಲಿ ವೆನೆಜುವೆಲಾವನ್ನು ಅಪ್ಪಳಿಸಿದ ಅತ್ಯಂತ ಭೀಕರ ಭೂಕಂಪ ಇದಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಸಂಜೆ 6 ಗಂಟೆಯ ಬಳಿಕ 7.1 ತೀವ್ರತೆಯ ಮೊದಲ ಭೂಕಂಪ ಸಂಭವಿಸಿತು. ಇದರ ಕೇಂದ್ರಬಿಂದು ಕ್ಯಾರಕಾಸ್‌ನಿಂದ 168 ಕಿ.ಮೀ ದೂರದ ಮೊರೊನ್ ಕರಾವಳಿಯ 22 ಕಿ.ಮೀ ಆಳದಲ್ಲಿತ್ತು. ಅಂದರೆ ಕೇವಲ ಒಂದು ನಿಮಿಷದ ಅಂತರದಲ್ಲಿ ಮತ್ತೊಂದು ಭೀಕರ 7.5 ತೀವ್ರತೆಯ ಭೂಕಂಪ ಸಂಭವಿಸಿತು. ಇದು ಭೂಮಿಯ ಒಳಗಡೆ ಕೇವಲ 10 ಕಿ.ಮೀ ಆಳದಲ್ಲಿದ್ದ ಕಾರಣ ವಿನಾಶದ ತೀವ್ರತೆ ಹೆಚ್ಚಾಗಿತ್ತು.

ಕಣ್ಣೆದುರೇ ಕುಸಿದು ಬಿದ್ದ ಗೋಡೆಗಳು, ಬೀದಿಯಲ್ಲೇ ರಾತ್ರಿ ಕಳೆದ ಜನ

ಕಂಪನ ಆರಂಭವಾಗುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಕ್ಯಾರಕಾಸ್ ನಗರದ ಜನನಿಬಿಡ ಪ್ರದೇಶಗಳಲ್ಲಿ ಕಟ್ಟಡಗಳ ದೊಡ್ಡ ದೊಡ್ಡ ಗೋಡೆಗಳು ಕುಸಿದು ಬಿದ್ದಿವೆ. ಮನೆಗಳ ಗೋಡೆಗಳು ಇಲ್ಲದಂತಾಗಿ ಒಳಗಿದ್ದ ಪೀಠೋಪಕರಣಗಳು ನೇರವಾಗಿ ರಸ್ತೆಗೆ ಕಾಣಿಸುವಷ್ಟು ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ.

ಮತ್ತಷ್ಟು ಓದಿ: ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ

ರಾತ್ರಿಯಲ್ಲೂ ಜನರು ಮನೆಗಳ ಒಳಗೆ ಹೋಗಲು ಹೆದರಿ ಬೀದಿಗಳಲ್ಲೇ ಕಾಲ ಕಳೆದರು. ಅನೇಕರು ಆಘಾತದಿಂದ ತಮ್ಮ ಸಾಕುಪ್ರಾಣಿಗಳನ್ನು ಬಿಗಿಯಾಗಿ ಅಪ್ಪಿಕೊಂಡು ರಸ್ತೆಯ ಮೇಲೆಯೇ ಕುಳಿತಿದ್ದ ದೃಶ್ಯಗಳು ಕಂಡುಬಂದವು.

ವಿಡಿಯೋ

ಜಾಗತಿಕವಾಗಿ ಸುನಾಮಿ ಎಚ್ಚರಿಕೆ

ವೆನೆಜುವೆಲಾದಲ್ಲಿ ಇಷ್ಟೊಂದು ಪ್ರಬಲ ಭೂಕಂಪಗಳು ಸಂಭವಿಸುವುದು ತೀರಾ ಅಪರೂಪ. ಈ ಭೀಕರ ಭೂಕಂಪದ ಬೆನ್ನಲ್ಲೇ ಅಮೆರಿಕದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ವರ್ಜಿನ್ ದ್ವೀಪಗಳು ಹಾಗೂ ಡೊಮಿನಿಕನ್ ಗಣರಾಜ್ಯದ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಪೋರ್ಟೊ ರಿಕೊಗೆ ನೀಡಲಾಗಿದ್ದ ಎಚ್ಚರಿಕೆಯನ್ನು ಸದ್ಯಕ್ಕೆ ಹಿಂಪಡೆಯಲಾಗಿದೆ. ಯುದ್ಧೋಪಾದಿಯಲ್ಲಿ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಗಗನಕ್ಕೇರುತ್ತಿದೆ ತರಕಾರಿ ದರ: ನೂರರ ಗಡಿ ದಾಟಿದ ಬೀನ್ಸ್, ಬದನೆಕಾಯಿ – Kannada News | Bengaluru Vegetable Prices Skyrocket Post Weather Anomalies, Beans and Brinjal Cross Rs 100 Mark

ಬೆಂಗಳೂರು, ಜೂನ್ 25: ಬೆಂಗಳೂರಿನ (Bengaluru) ಸಾರ್ವಜನಿಕರಿಗೆ ಹಾಗೂ ಗೃಹಿಣಿಯರಿಗೆ ಮಾರುಕಟ್ಟೆಯಲ್ಲಿ ಏಕಕಾಲಕ್ಕೆ ಸಿಹಿ ಹಾಗೂ ಕಹಿ ಸುದ್ದಿ ಎದುರಾಗಿದೆ. ರಾಜ್ಯದಲ್ಲಿ ಎದುರಾಗಿರುವ ಅನಾವೃಷ್ಟಿ ಮತ್ತು ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕೇರಳದಲ್ಲಿನ ಹವಾಮಾನ ಏರಿಳಿತದ ನೇರ ಎಫೆಕ್ಟ್ ತರಕಾರಿ ಮಾರುಕಟ್ಟೆಯ ಮೇಲೆ ಬೀರಿದೆ. ಕೆಆರ್ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ಹೋಲ್‌ಸೇಲ್ ಬಜಾರ್‌ಗಳಲ್ಲೇ ತರಕಾರಿ ಮತ್ತು ಸೊಪ್ಪುಗಳ ದರ ಸೆಂಚುರಿ ಬಾರಿಸಿದ್ದು, ನಿತ್ಯದ ಅಡುಗೆಗೆ ತರಕಾರಿ ಕೊಳ್ಳಲು ಜನಸಾಮಾನ್ಯರು ಪರದಾಡುವಂತಾಗಿದೆ.

ಮಾರುಕಟ್ಟೆಯಲ್ಲಿ ತರಕಾರಿ ದರಗಳ ಪಟ್ಟಿ (ಪ್ರತಿ ಕೆಜಿಗೆ)

ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರಮುಖ ತರಕಾರಿಗಳ ದರ ವಿವರ ಹೀಗಿದೆ;

  • ನುಗ್ಗೆಕಾಯಿ: 200 ರಿಂದ 220 ರೂ.
  • ಬೀನ್ಸ್: 115 ರಿಂದ 140 ರೂ.
  • ಮೆಂತ್ಯ ಸೊಪ್ಪು: 120 ರಿಂದ 130 ರೂ.
  • ಬಿಳಿ ಬದನೆಕಾಯಿ: 110 ರಿಂದ 120 ರೂ.
  • ಬಟಾಣಿ ಹಾಗೂ ಹಸಿಮೆಣಸಿನಕಾಯಿ: 100 ರಿಂದ 120 ರೂ.
  • ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಂ) ಹಾಗೂ ಕ್ಯಾರೆಟ್: 80 ರಿಂದ 100 ರೂ.
  • ಬೆಳ್ಳುಳ್ಳಿ: 200 ರಿಂದ 220 ರೂ.

ಟೊಮೆಟೊ-ಈರುಳ್ಳಿ ಬೆಲೆ ಇಳಿಕೆ, ಮೊಟ್ಟೆ ದುಬಾರಿ

ಇಷ್ಟೆಲ್ಲಾ ತರಕಾರಿಗಳ ಬೆಲೆ ಏರಿಕೆಯ ನಡುವೆ ಸಮಾಧಾನಕರ ಸಂಗತಿಯೆಂದರೆ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಟೊಮೆಟೊ ದರ 10 ರಿಂದ 15 ರೂಪಾಯಿ ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 15-20 ರೂಪಾಯಿಗೆ ಸಿಗುತ್ತಿದೆ. ಹಾಗೆಯೇ ಈರುಳ್ಳಿ ಕೂಡ ಕೆಜಿಗೆ 20 ರಿಂದ 25 ರೂಪಾಯಿಗೆ ಲಭ್ಯವಿದೆ. ಇತ್ತ ತರಕಾರಿ ಬೆಲೆ ಏರಿಕೆಯ ಬೆನ್ನಲ್ಲೇ ಈ ಹಿಂದೆ 6.50 ರೂಪಾಯಿ ಇದ್ದ ಒಂದು ಕೋಳಿ ಮೊಟ್ಟೆಯ ಬೆಲೆ ಈಗ ದಿಢೀರನೆ 8 ರೂಪಾಯಿಗೆ ಏರಿಕೆಯಾಗಿದೆ.

ವ್ಯಾಪಾರವಿಲ್ಲದೆ ತತ್ತರಿಸಿದ ವರ್ತಕರು

ಕಳೆದ ಕೆಲವು ವಾರಗಳಿಂದ ದೇಶದ ವಿವಿಧೆಡೆ ಕೆಲವೆಡೆ ಅತಿವೃಷ್ಟಿಯಾಗಿ ಬೆಳೆ ಕೊಳೆತಿದ್ದರೆ, ಇನ್ನು ಕೆಲವು ಭಾಗಗಳಲ್ಲಿ ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಒಣಗಿ ನಿಂತಿವೆ. ಬಿಳಿ ಬದನೆಕಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ 100ರ ಗಡಿ ದಾಟಿದ್ದು, ವಾಂಗಿಬಾತ್ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ತರಕಾರಿ ದರ ದುಬಾರಿಯಾದ ಹಿನ್ನೆಲೆಯಲ್ಲಿ ಈ ಹಿಂದೆ ಕೆಜಿಗಟ್ಟಲೆ ಕೊಳ್ಳುತ್ತಿದ್ದ ಗ್ರಾಹಕರು ಈಗ ಕಾಲು ಕೆಜಿ, ಅರ್ಧ ಕೆಜಿಗೆ ಸೀಮಿತವಾಗಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಸರಿಯಾಗಿ ವ್ಯಾಪಾರವಾಗುತ್ತಿಲ್ಲ ಎಂದು ತರಕಾರಿ ವ್ಯಾಪಾರಿ ಸೆಲ್ವಿ ಅಳಲು ತೋಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಹವಾಮಾನ ವೈಪರೀತ್ಯದ ಈ ಆಟ ಸಿಲಿಕಾನ್ ಸಿಟಿಯ ಜನಸಾಮಾನ್ಯರ ಮಾಸಿಕ ಬಜೆಟ್‌ಅನ್ನು ಸಂಪೂರ್ಣವಾಗಿ ಏರುಪೇರು ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ವಿಶ್ವಕಪ್​ ಸೆಮಿಫೈನಲ್​ಗೇರಿದ ಇಂಗ್ಲೆಂಡ್ – Kannada News | England Enters To Womens T20 World Cup 2026 Semi Final

ಮಹಿಳಾ ಟಿ20 ವಿಶ್ವಕಪ್​ನ 22ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆಂಗ್ಲರ ಪಡೆ ಸೆಮಿಫೈನಲ್​ಗೇರಿದೆ. ಲಂಡನ್​ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಡ್ಯಾನಿ ವ್ಯಾಟ್-ಹಾಡ್ಜ್ 42 ಎಸೆತಗಳಲ್ಲಿ 8 ಫೋರ್​ಗಳೊಂದಿಗೆ 65 ರನ್ ಬಾರಿಸಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಅಲಿಸ್ ಕ್ಯಾಪ್ಸಿ 28 ರನ್​ಗಳ ಕೊಡುಗೆ ನೀಡಿದರೆ, ಅಂತಿಮ ಓವರ್​ಗಳಲ್ಲಿ ಅಬ್ಬರಿಸಿದ ಹೀದರ್ ನೈಟ್ 26 ಎಸೆತಗಳಲ್ಲಿ 7 ಫೋರ್​ಗಳೊಂದಿಗೆ 43 ರನ್​ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 186 ರನ್​ ಕಲೆಹಾಕಿತು.

187 ರನ್​ಗಳ ಗುರಿ:

187 ರನ್​ಗಳ ಕಠಿಣ ಗುರಿ ಪಡೆದ ವೆಸ್ಟ್ ಇಂಡೀಸ್​ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 69 ರನ್​ಗಳಿಸುವಷ್ಟರಲ್ಲಿ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಕಣಕ್ಕಿಳಿದ ಶಿನೆಲ್ಲೆ ಹೆನ್ರಿ 30 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 51 ರನ್ ಬಾರಿಸಿದರು.

ಇದಾಗ್ಯೂ ವೆಸ್ಟ್ ಇಂಡೀಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 148 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಇಂಗ್ಲೆಂಡ್ ತಂಡವು 38 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಸೆಮಿಫೈನಲ್​ಗೆ ಎಂಟ್ರಿ:

ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ಗ್ರೂಪ್-ಬಿ ಯಿಂದ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇತ್ತ ಸೋತಿರುವ ವೆಸ್ಟ್ ಇಂಡೀಸ್ ತಂಡವು ಸೆಮಿಫೈನಲ್​ಗೆ ಪ್ರವೇಶಿಸಬೇಕಿದ್ದರೆ ಐರ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕು.

ಮತ್ತೊಂದೆಡೆ ಇಂಗ್ಲೆಂಡ್ ತಂಡದ ಗೆಲುವಿನೊಂದಿಗೆ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳು ಟಿ20 ವಿಶ್ವಕಪ್ ಸೆಮಿಫೈನಲ್ ರೇಸ್​ನಿಂದ ಹೊರಬಿದ್ದಿದೆ.

ಇಂಗ್ಲೆಂಡ್ ಪ್ಲೇಯಿಂಗ್ 11: ಆಮಿ ಜೋನ್ಸ್ (ವಿಕೆಟ್ ಕೀಪರ್ ) ಡ್ಯಾನಿ ವ್ಯಾಟ್-ಹಾಡ್ಜ್ , ಸೋಫಿಯಾ ಡಂಕ್ಲಿ , ಅಲಿಸ್ ಕ್ಯಾಪ್ಸಿ ,
ಹೀದರ್ ನೈಟ್ , ಫ್ರೇಯಾ ಕೆಂಪ್ , ಡೇನಿಯಲ್ ಗಿಬ್ಸನ್ , ಷಾರ್ಲೆಟ್ ಡೀನ್ (ನಾಯಕಿ) , ಸೋಫಿ ಎಕ್ಲೆಸ್ಟೋನ್ , ಲಿನ್ಸೆ ಸ್ಮಿತ್ , ಲಾರೆನ್ ಬೆಲ್.

ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯಲಿರುವ ಭಾರತೀಯ..!

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಹೇಲಿ ಮ್ಯಾಥ್ಯೂಸ್ (ನಾಯಕಿ) , ಡಿಯಾಂಡ್ರಾ ಡಾಟಿನ್ , ಶೆಮೈನ್ ಕ್ಯಾಂಪ್ಬೆಲ್ (ವಿಕೆಟ್ ಕೀಪರ್) , ಸ್ಟೆಫನಿ ಟೇಲರ್ , ಜಹಜಾರಾ ಕ್ಲಾಕ್ಸ್ಟನ್ , ಶಿನೆಲ್ಲೆ ಹೆನ್ರಿ , ಜಾನಿಲಿಯಾ ಗ್ಲ್ಯಾಸ್ಗೋ , ಅಶ್ಮಿನಿ ಮುನಿಸರ್ , ಆಲಿಯಾ ಅಲ್ಲೆಯ್ನೆ , ಅಫಿ ಫ್ಲೆಚರ್ , ಕರಿಷ್ಮಾ ರಾಮ್‌ಹರಾಕ್.

Published On – 7:18 am, Thu, 25 June 26

Source link

73 ವರ್ಷಗಳ ಬಳಿಕ ತುಂಗಭದ್ರಾ ಡ್ಯಾಂ ಪುನರುಜ್ಜೀವನ: ಇಂದು 33 ಹೊಸ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ, ಮೂರು ರಾಜ್ಯಗಳ ಸಿಎಂಗಳ ಸಮಾಗಮ – Kannada News | Historic Day for Tungabhadra Dam: 33 Rebuilt Crest Gates to Be Inaugurated Jointly by Three Chief Ministers

ತುಂಗಭದ್ರಾ ಜಲಾಶದ ಹೊರಭಾಗದ ನೋಟImage Credit source: tv9

ಕೊಪ್ಪಳ, ಜೂನ್ 25: ತುಂಗಭದ್ರಾ ಜಲಾಶಯವು (Tungabhadra Dam) ಇತಿಹಾಸದಲ್ಲೇ ಇಂದು ಅತ್ಯಂತ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲಿದೆ. 2024ರ ಆಗಸ್ಟ್ ತಿಂಗಳಲ್ಲಿ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿ ಸೃಷ್ಟಿಯಾಗಿದ್ದ ಆತಂಕಕ್ಕೆ ಶಾಶ್ವತ ಪರಿಹಾರ ಸಿಕ್ಕಿದ್ದು, ಬರೋಬ್ಬರಿ 51 ಕೋಟಿ ರೂಪಾಯಿ ವೆಚ್ಚದಲ್ಲಿ ಜಲಾಶಯದ ಎಲ್ಲಾ 33 ಕ್ರಸ್ಟ್ ಗೇಟ್‌ಗಳನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಇಂದು (ಜೂನ್ 25) ಬೆಳಗ್ಗೆ 10 ಗಂಟೆಗೆ ಈ ನೂತನ ಗೇಟ್‌ಗಳ ಭವ್ಯ ಲೋಕಾರ್ಪಣೆ ಕಾರ್ಯಕ್ರಮ ನೆರವೇರಲಿದೆ. ದಶಕಗಳ ಬಳಿಕ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಒಂದೇ ವೇದಿಕೆಯಲ್ಲಿ ಒಂದಾಗುತ್ತಿದ್ದಾರೆ.

ಗೇಟ್ 19 ದುರಂತ ಮತ್ತು ಪುನರ್ನಿರ್ಮಾಣದ ಇತಿಹಾಸ

1953ರಲ್ಲಿ ಅಳವಡಿಸಲಾಗಿದ್ದ 20 ಅಡಿ ಎತ್ತರ, 60 ಅಡಿ ಅಗಲ ಹಾಗೂ 48.50 ಟನ್ ತೂಕದ ಹಳೆಯ ಗೇಟ್‌ಗಳು ಸಂಪೂರ್ಣ ಸವಕಳಿಯಾಗಿದ್ದವು. 2024ರ ಆಗಸ್ಟ್‌ನಲ್ಲಿ 19ನೇ ಗೇಟ್ ಕೊಚ್ಚಿಹೋದಾಗ ಡ್ಯಾಂ ಸುರಕ್ಷತಾ ತಂಡ ಹಾಗೂ ಕೇಂದ್ರ ಜಲಶಕ್ತಿ ಆಯೋಗ ಇಡೀ ವ್ಯವಸ್ಥೆಯನ್ನು ಪರಿಶೀಲಿಸಿ, ಎಲ್ಲಾ 33 ಗೇಟ್‌ಗಳನ್ನು ಬದಲಾಯಿಸಲು ಸೂಚಿಸಿತ್ತು. ಅದರಂತೆ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿ ನೂತನ ಗೇಟ್‌ಗಳನ್ನು ಅಳವಡಿಸಲಾಗಿದೆ.

ಒಂದೇ ವೇದಿಕೆಯಲ್ಲಿ ಮೂವರು ಸಿಎಂಗಳು

ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಆಂಧ್ರಪ್ರದೇಶದ ಸಿಎಂ ಎನ್ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ಎ ರೇವಂತ್ ರೆಡ್ಡಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಈ ಗೇಟ್‌ಗಳನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ.

ನವಲಿ ಜಲಾಶಯ, ಹೂಳು ಎತ್ತುವ ಯೋಜನೆಗೆ ಚಾಲನೆ?

ಬೆಳಗ್ಗೆ 11 ಗಂಟೆಗೆ ಮುನಿರಾಬಾದ್‌ನ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳ ಸುಮಾರು 20 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ ಇದೆ. ಇದೇ ವೇದಿಕೆಯಲ್ಲಿ ಮೂರೂ ರಾಜ್ಯಗಳ ನಾಯಕರು ಜಲಾಶಯದಲ್ಲಿ ತುಂಬಿರುವ ಹೂಳು ಮತ್ತು ಬಹುಕಾಲದ ಬೇಡಿಕೆಯಾದ ‘ನವಲಿ ಸಮಾನಾಂತರ ಜಲಾಶಯ’ ನಿರ್ಮಾಣದ ಕುರಿತು ಅನೌಪಚಾರಿಕ ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ: ತುಂಗಭದ್ರಾದ ಹೊಸ ಕ್ರಸ್ಟ್‌ಗೇಟ್‌ಗಳ ಲೋಕಾರ್ಪಣೆ: ಜೂ 25ರಂದು ಶಾಲೆಗಳಿಗೆ ರಜೆ ಘೋಷಣೆ

ಈ ಹಿಂದೆ ಕರ್ನಾಟಕ ಸರ್ಕಾರವು ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳಿಗೆ ಮಾತುಕತೆಗೆ ಮನವಿ ಮಾಡಿದ್ದರೂ ಸಾಧ್ಯವಾಗಿರಲಿಲ್ಲ. ಇಂದಿನ ವೇದಿಕೆ ಈ ಯೋಜನೆಗೆ ಮರುಜೀವ ನೀಡುವ ಸಾಧ್ಯತೆ ಇದೆ. ಹೈವೋಲ್ಟೇಜ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಲಾಶಯದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಬೆಂಗಳೂರಲ್ಲಿ ಮುಂದುವರಿದ ಕೂಲ್ ಕೂಲ್ ಕ್ಲೈಮೇಟ್: ಕರಾವಳಿಯ 3 ಜಿಲ್ಲೆಗಳಿಗೆ ಹೈ ಅಲರ್ಟ್ – Kannada News | Heavy Rain in Karnataka: IMD Predicts Intense Monsoon for Coastal, Malnad; Bengaluru Cloudy

ಬೆಂಗಳೂರು, ಜೂ.25: ನೈಋತ್ಯ ಮುಂಗಾರು ಮಾರುತಗಳು ರಾಜ್ಯಾದ್ಯಂತ ತೀವ್ರಗೊಂಡಿದ್ದು, ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ವಿಶೇಷವಾಗಿ ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡಿನ ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಲಿದ್ದು, ಆ ಜಿಲ್ಲೆಗಳ ಜನರು ಎಚ್ಚರ ಇರುವಂತೆ ಹಾಗೂ ಅಧಿಕಾರಿಗಳು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದೆ.

ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಇಂದ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಇನ್ನು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಮಲೆನಾಡು ಭಾಗದಲ್ಲೂ ಗಾಳಿಯ ವೇಗ ಹೆಚ್ಚಾಗಲಿದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ರಸ್ತೆಗಳಲ್ಲಿ ಸಾಗುವ ವಾಹನ ಸವಾರರು ಹಾಗೂ ನದಿ ತೀರದ ನಿವಾಸಿಗಳು ಜಾಗರೂಕರಾಗಿರಲು ಜಿಲ್ಲಾಡಳಿತಗಳು ಪ್ರಕಟಣೆ ಹೊರಡಿಸಿವೆ.

ಇದನ್ನೂ ಓದಿ: ಫುಟ್ ಪಾತ್ ತೆರವಿಗೆ ಕೃಷ್ಣಭೈರೇಗೌಡ ಪಣ:ಒತ್ತುವರಿದಾರರಿಗೆ ಡೆಡ್​​ಲೈನ್, ರಸ್ತೆ ಬದಿ ನಿಲ್ಲಿಸುವ ಗಾಡಿ ಗುಜರಿಗೆ

ರಾಜಧಾನಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ವಾತಾವರಣ ಸದ್ಯ ತಂಪಾಗಿದ್ದು, ಮೋಡಕವಿದ ವಾತಾವರಣ ಮುಂದುವರಿಯಲಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ಜಿಟಿಜಿಟಿ ಮಳೆಯಾಗುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಬಹುದು. ಬಯಲು ಸೀಮೆಯ ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ದಾವಣಗೆರೆ ಜಿಲ್ಲೆಗಳಲ್ಲೂ ಹಗುರವಾದ ಮಳೆಯ ಸಿಂಚನವಾಗಲಿದೆ. ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕಾಗಲಿದ್ದು, ಕೃಷಿ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಎಲ್ಲರೂ ರಶ್ಮಿಕಾ ಮಂದಣ್ಣ ಆಗಲು ಸಾಧ್ಯವಿಲ್ಲ’; ಹಾಡಿ ಹೊಗಳಿದ ನಟಿ ಐಶ್ವರ್ಯಾ ಲಕ್ಷ್ಮಿ – Kannada News | Aishwarya Lekshmi Hails Rashmika Mandanna’s Hard Work and Success: Not Just Luck

ಸಿನಿಮಾ ರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ (Rashmika Mandanna) ಬೆಳವಣಿಗೆಯನ್ನು ಕಂಡು ಅನೇಕರು ಇದು ಕೇವಲ ‘ಅದೃಷ್ಟ’ ಎಂದು ಮಾತನಾಡಿಕೊಂಡಿದ್ದಿದೆ. ಆದರೆ, ರಶ್ಮಿಕಾ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿರುವುದರ ಹಿಂದೆ ಅವರದ್ದೇ ಆದ ಕಠಿಣ ಶ್ರಮವಿದೆ. ಇಂಡಸ್ಟ್ರಿಯಲ್ಲಿ ಅವರ ಶ್ರಮ ಹಾಗೂ ನಟನೆಯನ್ನು ಗುರುತಿಸಿ ಗೌರವಿಸುವವರ ಸಂಖ್ಯೆಯೂ ದೊಡ್ಡದಿದೆ. ಇದೀಗ ಅದೇ ಸಾಲಿಗೆ ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯಾ ಲಕ್ಷ್ಮಿ ಕೂಡ ಸೇರಿದ್ದು, ರಶ್ಮಿಕಾ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಪ್ರತಿಭೆಯನ್ನು ಮುಕ್ತ ಕಂಠದಿಂದ ಕೊಂಡಾಡಿರುವ ಐಶ್ವರ್ಯಾ ಲಕ್ಷ್ಮಿ, ‘ಎಲ್ಲರೂ ರಶ್ಮಿಕಾ ಮಂದಣ್ಣ ಆಗಲು ಸಾಧ್ಯವಿಲ್ಲ. ರಶ್ಮಿಕಾ ಮಾಡುವ ಕೆಲಸಗಳನ್ನು ಮಾಡಲು ನನ್ನಿಂದ ಖಂಡಿತಾ ಸಾಧ್ಯವಿಲ್ಲ. ಅವರು ಸಿನಿಮಾಗಳಲ್ಲಿ ಅಷ್ಟೊಂದು ಆಕರ್ಷಕವಾಗಿ, ಅದ್ಭುತವಾಗಿ ನಟಿಸುತ್ತಾರೆ. ಅವರು ಪರದೆ ಮೇಲೆ ಮಾಡುವ ಮ್ಯಾಜಿಕ್ ಅಷ್ಟು ಸುಲಭದ ವಿಷಯವಲ್ಲ. ಅವರು ಸಾಕಷ್ಟು ಕಮರ್ಷಿಯಲ್ ಸಿನಿಮಾಗಳನ್ನು ಮಾಡುವುದರ ಜೊತೆಗೆ ವೈವಿಧ್ಯಮಯ ಪಾತ್ರಗಳಲ್ಲೂ ನಟಿಸಿದ್ದಾರೆ. ಮುಖ್ಯವಾಗಿ, ರಶ್ಮಿಕಾ ತರಹ ಎನರ್ಜಿಟಿಕ್ ಆಗಿ ಡ್ಯಾನ್ಸ್ ಮಾಡಲು ನನ್ನಿಂದ ಸಾಧ್ಯವೇ ಇಲ್ಲ’ ಎಂದು ಹೊಗಳಿದ್ದಾರೆ.

ಐಶ್ವರ್ಯಾ ಲಕ್ಷ್ಮಿ ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ರಶ್ಮಿಕಾ ಕೇವಲ ಅದೃಷ್ಟದಿಂದ ಮೇಲೆ ಬಂದಿಲ್ಲ, ಬದಲಿಗೆ ಅವರ ಪರಿಶ್ರಮದಿಂದಲೇ ಈ ಸ್ಥಾನ ಗಳಿಸಿದ್ದಾರೆ ಎಂಬುದಕ್ಕೆ ಈ ಮಾತುಗಳೇ ಸಾಕ್ಷಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಾಲು ಸಾಲು ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಕೇವಲ ಸೌತ್ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ತಮ್ಮದೇ ಆದ ದೊಡ್ಡ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಹೊಸ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ

ಇನ್ನು ರಶ್ಮಿಕಾ ಮಂದಣ್ಣ ಅವರ ಮುಂಬರುವ ಚಿತ್ರಗಳ ಬಗ್ಗೆ ಹೇಳುವುದಾದರೆ, ಅವರಿಗೆ ಸಾಲು ಸಾಲು ಯಶಸ್ಸು ಸಿಗುತ್ತಿದೆ. ಅವರು ‘ಮೈಸಾ’ ಹೆಸರಿನ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್​​ಗಳು ಗಮನ ಸೆಳೆದಿವೆ. ಇತ್ತೀಚೆಗೆ ವಿವಾಹ ಆಗಿರೋ ಅವರು, ಸಿನಿಮಾ ಕೆಲಸಗಳನ್ನು ಮೊದಲಿನ ವೇಗದಲ್ಲೇ ಮುಂದುವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿರ್ಜಲ ಏಕಾದಶಿಯ ದಿನ ಯಾರಿಗೆ ಒಲಿಯಲಿದೆ ಅದೃಷ್ಟ? ನಿಮ್ಮ ರಾಶಿಯ ಆರ್ಥಿಕ ಸ್ಥಿತಿ, ಉದ್ಯೋಗ ಭವಿಷ್ಯ ಹೇಗಿದೆ? – Kannada News | Astrological Forecast: Dr. Basavaraj Guruji on Zodiac Sign Effects

ಬೆಂಗಳೂರು, ಜೂ.25: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 25 ಜೂನ್ 2026, ಗುರುವಾರದ ದ್ವಾದಶ ರಾಶಿಗಳ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ಈ ದಿನಾಂಕವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ಏಕಾದಶಿ, ಸ್ವಾತಿ ನಕ್ಷತ್ರ, ವಣಿಜ ಯೋಗ, ಶಿವಯೋಗ ಮತ್ತು ವಣಿಜ ಕರಣಗಳಿಂದ ಕೂಡಿದೆ. ರಾಹುಕಾಲ ಮಧ್ಯಾಹ್ನ 1:57 ರಿಂದ 3:33 ರವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲವು ಮಧ್ಯಾಹ್ನ 12:22 ರಿಂದ 1:57 ರವರೆಗೆ ಇದೆ. ಇಂದು ಗುರುವಾರವಾಗಿದ್ದು, ನಿರ್ಜಲ ಏಕಾದಶಿಯ ಪವಿತ್ರ ದಿನವೂ ಆಗಿದೆ. ಏಕಾದಶಿ ತಿಥಿ ಭಗವಂತನ ಸ್ಮರಣೆಗೆ ಮತ್ತು ಕೃಪೆಗೆ ಪಾತ್ರರಾಗಲು ವಿಶೇಷ ದಿನವಾಗಿದೆ. ರವಿಯು ಮಿಥುನ ರಾಶಿಯಲ್ಲಿ ಮತ್ತು ಚಂದ್ರನು ತುಲಾ ರಾಶಿಯ ಸ್ವಾತಿ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾರೆ. ಪ್ರತಿ ರಾಶಿಯವರಿಗೆ ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಜೀವನ, ಆರೋಗ್ಯ, ಶುಭ ಬಣ್ಣ, ಅದೃಷ್ಟ ಸಂಖ್ಯೆ ಮತ್ತು ಪ್ರಯಾಣದ ದಿಕ್ಕಿನ ಬಗ್ಗೆ ವಿಶ್ಲೇಷಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಅನುಕೂಲಗಳು ಮತ್ತು ಎಚ್ಚರಿಕೆಗಳನ್ನು ನೀಡಿದ್ದು, ಸೂಕ್ತ ಮಂತ್ರ ಜಪದ ಮಹತ್ವವನ್ನು ತಿಳಿಸಿದ್ದಾರೆ. ಈ ದಿನದ ಗ್ರಹಗಳ ಸಂಚಾರವು ದ್ವಾದಶ ರಾಶಿಗಳ ಮೇಲೆ ಬೀರುವ ಪರಿಣಾಮಗಳನ್ನು ಅವರು ವಿವರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಪ್ರಪಂಚ ಮತ್ತಷ್ಟು ವಿಸ್ತಾರ ಆಗಲಿದೆ – Kannada News | Daily Horoscope for June 25, 2026: Thursday Astrology Predictions

ಮೇಷ ರಾಶಿ:

ನಿಮ್ಮ ಆಪ್ತ ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಲಿದೆ. ಹೂಡಿಕೆ ಮಾಡುವ ಮೊದಲು ಆಳವಾಗಿ ಪರಿಶೀಲಿಸಿ. ಸಂಗಾತಿಯ ಮಾತನ್ನು ಉಳಿಸಿಕೊಳ್ಳುವಿರಿ. ಕೆಲಸ ಹಾಗೂ ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡುವುದು ಉತ್ತಮ. ವೈಯಕ್ತಿಕ ಜೀವನವನ್ನು ಕೆಲವರು ಅನುಸರಿಸಲು ಇಷ್ಟಪಡಬಹುದು. ಫಲವೂ ಉತ್ತಮವಾದುದೇ ಸಿಗುವುದು. ಹೆಚ್ಚಿನ ನೀರಿಕ್ಷೆಯನ್ನು ಮಾಡಿ ಕೊರಗಬೇಡಿ ಆನಂತರದ‌ ಜೀವನದಲ್ಲಿ.

ವೃಷಭ ರಾಶಿ:

ಎಲ್ಲ ಹಾದಿಗಳೂ ನಿಮ್ಮದೇ ಆಗಿದ್ದರೂ ಒಂದು ಹಾದಿಯಲ್ಲಿ ಮಾತ್ರ ನಡೆಯಲು ಸಾಧ್ಯ. ನಿಮ್ಮ ಚೈತನ್ಯವನ್ನು ಸದ್ವಿನಿಯೋಗಿಸಿ. ಖರ್ಚುಗಳನ್ನು ನಿಯಂತ್ರಿಸಿ ಮತ್ತು ಮನೆಯ ಸುಧಾರಣೆಯ ಬಗ್ಗೆ ಯೋಚಿಸಿ. ವೈವಾಹಿಕ ಜೀವನದಲ್ಲಿ ಅಸಾಧಾರಣ ಕ್ಷಣಗಳಾಗಲಿದ್ದು, ಪ್ರೀತಿಪಾತ್ರರಿಗೆ ಅಗತ್ಯವಾದ ಸಮಯವನ್ನು ನೀಡಿ. ಸಕಾರಾತ್ಮಕ ಚಿಂತನೆಯನ್ನು ಮಾಡಿ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ.

ಮಿಥುನ ರಾಶಿ:

ನಿಮ್ಮ ಎಂದಿನ‌ ನಿಚ್ಚಲ ಮನಸ್ಸಿನಿಂದ ವಿಚಲಿತರಾಗಬೇಡಿ. ನಿಮಗೆ ಯಾರಿಂದಲಾದರೂ ಕೆಲಸವಾಗಬೇಕಿದ್ದರೆ ಪ್ರೀತಿಯಿಂದ ಹೇಳಿ, ಅನಾಯಾಸವಾಗಿ ಆಗುವುದು. ಸ್ನೇಹಿತರ ಭೇಟಿ ಉತ್ಸಾಹಭರಿತವಾಗಿದ್ದು, ಯುವಕರು ಶೈಕ್ಷಣಿಕ ಸಲಹೆ ಪಡೆಯಬಹುದು. ಸಮಾಜದ ಬಗ್ಗೆ ಚಿಂತಕರಾಗಿದ್ದರೆ ಅತಿಥಿಯಾಗಿ ನೀವು ಇರುವಿರಿ. ಒತ್ತಾಯಕ್ಕೆ ನೀವು ಕಾರ್ಯವನ್ನು ಮಾಡಬೇಕಾಗುವುದು. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ.

ಕರ್ಕಾಟಕ ರಾಶಿ:

ನಿಮ್ಮೊಳಗಿದ್ದ ಮೋಡಗಟ್ಟಿದ ವಾತಾವರಣ, ಕರಗಿ‌ಹರೊಯವುದು. ಮಕ್ಕಳಿಂದ ಮಾನಸಿಕ ಹಿಂಸೆ ಎದುರಾದೀತು. ಸಂಬಂಧಗಳಿಗಿಂತ ಹೆಚ್ಚಿನ ಪ್ರಾಶಸ್ತ್ರ ನೀಡಬಾರದು. ಪ್ರೀತಿಪಾತ್ರರಿಂದ ವಿಶೇಷ ಆಶ್ಚರ್ಯ ಸಿಗಬಹುದು. ಇದರಿಂದ ನಿಮ್ಮ ದಿನ ಹತ್ತಿರದವರ ಸಮ್ಮುಖದಲ್ಲಿ ಸಂತೋಷವಿರಲಿದೆ. ಯಾರದೋ ಕಾರ್ಯವನ್ನು ನಿಮ್ಮದೆಂದು ಬಿಂಬಿಸುವುದು ಬೇಡ. ಯಾರಿಗಾದರೂ ನೀವು ಹಣವನ್ನು ಕೊಡುವ ಸಂದರ್ಭವು ಬರಬಹುದು. ಜಾಣತನದಿಂದ ಇಂದಿನ ಕಾರ್ಯವನ್ನು ಮಾಡುವಿರಿ.

ಸಿಂಹ ರಾಶಿ :

ಇನ್ನೊಬ್ಬರನ್ನು ಗೌರವಿಸುವ ಅಭ್ಯಾಸದಿಂದ ನಿಮಗೆ ಶ್ರೇಷ್ಠವಾದ ಮಾರ್ಗವು ತೆರೆದುಕೊಳ್ಳಬಹುದು. ಸಂಶಯಾಸ್ಪದ ವ್ಯಕ್ತಿಗಳಿಂದ ದೂರವಿರಿ. ಪ್ರಾಣಿಗಳ ಜೊತೆ ಒಡನಾಟ ಜಾಸ್ತಿಯಾಗಿರುವುದು. ಪ್ರೀತಿಯನ್ನು ಹೊಸ ರೀತಿಯಲ್ಲಿ ಅನುಭವಿಸಲು ಆಪ್ತರ ಭೇಟಿಯ ಅವಕಾಶ ದೊರೆಯುತ್ತದೆ. ಅನಗತ್ಯ ವಿಚಾರಗಳಲ್ಲಿ ಸಮಯ ವ್ಯರ್ಥವಾಗಬಹುದು. ನೀವು ಕೆಲಸಕ್ಕೆ ಸಂಬಂಧಿಸಿದಂತೆ ಯಾರೊಂದಿಗಾದರೂ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದರೆ, ಇಂದು ನಿಮಗೆ ಅದೃಷ್ಟವನ್ನು ತರಬಹುದು.

ಕನ್ಯಾ ರಾಶಿ:

ಮನೆಯಲ್ಲಿ ಸಣ್ಣ ಸಣ್ಣ ಖರ್ಚುಗಳಿಗೆ ಧನವನ್ನು ಖರ್ಚು ಮಾಡಬೇಕಾಗಬಹುದು. ಆರ್ಥಿಕ ಸ್ಥಿತಿ ಸುಧಾರಿಸಿದರೂ ಖರ್ಚುಗಳ ಮೇಲೆ ನಿಯಂತ್ರಣ ಅಗತ್ಯ. ಪ್ರೇಮಜೀವನದಲ್ಲಿ ಹೊಸ ಉತ್ಸಾಹ ದೊರೆಯುತ್ತಿದ್ದು, ಸಂಗಾತಿಯೊಂದಿಗೆ ವಿಶೇಷ ಕ್ಷಣಗಳನ್ನು ಅನುಭವಿಸುವ ಅವಕಾಶ ಸಿಗಲಿದೆ. ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ವಾಹನದ ಅಪಘಾತವನ್ನು ನಿಮ್ಮದೇ ತಪ್ಪಿನಿಂದ ಆಗಲಿದೆ. ಸಾಹಿತ್ಯಕ್ಷೇತ್ರದವರು ಸಾಧಿಸಲು ಮಾರ್ಗಗಳು ಗೊತ್ತಾಗಲಿವೆ.

ತುಲಾ ರಾಶಿ:

ಇಂದು ನಿಮ್ಮ ಮನಸ್ಸು ಶಕ್ತಿಯನ್ನು ಕಳೆದುಕೊಳ್ಳಬಹುದು. ಪರಿಹಾರದ ದಾರಿಗಳು ಆ ಕ್ಷಣದಲ್ಲಿ ಸ್ಫುರಿಸುವುದು. ವ್ಯಾಪಾರಿಗಳಿಗೆ ನಷ್ಟವಾಗುವ ಸಂಭವವಿದ್ದು, ಅದರ ಸುಧಾರಣೆಗೆ ಹೆಚ್ಚುವರಿ ಹಣ ಖರ್ಚಾಗುತ್ತದೆ. ಸಂಗಾತಿಯೊಂದಿಗೆ ಸರಿಯಾದ ಸಂಭಾಷಣೆ ಮತ್ತು ಸಹಕಾರದಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ, ಸಂತೋಷದ ಕ್ಷಣಗಳು ನಿಮ್ಮ ದಿನವನ್ನು ಅಲಂಕರಿಸಬಹುದು. ದೂರದ ಊರಿಗೆ ಹೋಗಬೇಕಾಗುವುದು. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ.

ವೃಶ್ಚಿಕ ರಾಶಿ:

ಸರ್ಕಾರಿ ಕೆಲಸಗಳು ನಿಧಾನಗತಿಯಲ್ಲಿ ಆಗುವುದು. ಆಸ್ತಿಯ ವಿಚಾರದಲ್ಲಿ ಕಾನೂನಿನ ತೊಂದರೆಗಳು ಇದ್ದು ಅದನ್ನು ಸರಿಪಡಿಸಿಕೊಳ್ಳಲು ಓಡಾಟಗಳಾಗಬಹುದು. ಬೇಸರದಿಂದ ಏಕಾಂತವಾಗಬೇಕಾಗುವುದು. ಆರ್ಥಿಕವಾಗಿ ಸುಧಾರಣೆ ಕಾಣುವ ದಿನವಾಗಿದ್ದು, ನೀಡಿದ ಸಾಲವನ್ನು ಮರಳಿ ಪಡೆಯುವ ಅವಕಾಶವಿದೆ. ಉನ್ನತ ವ್ಯಾಸಂಗಕ್ಕೆ ತೆರಳುವ ಮನಸ್ಸು ಮಾಡುವಿರಿ. ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಲಿದೆ. ಸಂಗಾತಿಗೆ ಉಡುಗೊರೆಯನ್ನು ಕೊಟ್ಟು ಸಂತೋಷಗೊಳಿಸುವಿರಿ.

ಧನು ರಾಶಿ:

ಇಂದು ಬಂದ ಅತಿಥಿಯ ಜೊತೆ ಹರಟೆಯನ್ನು ಹೊಡೆಯುತ್ತೀರಿ. ಖರ್ಚು ನಿಮ್ಮ ಹಣಕಾಸು ಸ್ಥಿತಿಯನ್ನು ಹದಗೆಡಿಸಬಹುದು. ಕೆಲಸದ ಹಣವನ್ನು ಪಡೆಯಲು ಬಾಕಿ ಇರುವುದು. ವ್ಯಾಸಂಗವನ್ನು ನಿರ್ಲಕ್ಷಿಸುವುದು ಪೋಷಕರ ಅಸಮಾಧಾನಕ್ಕೆ ಕಾರಣವಾಗುತ್ತದೆ, ಆದ್ದರಿಂದ ಸಮತೋಲನ ಅವಶ್ಯಕ. ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿರುವುದು ಹಿಂಸೆಯಾದೀತು. ಆತುರಾತುರದಿಂದ ನೀವು ಮಾಡುವ ನಿರ್ಧಾರಗಳು ಮುಜುಗರ ಉಂಟುಮಾಡಲಿದೆ. ನಿಮಗೆ ಪ್ರಶಂಸೆಯು ಬಲವನ್ನು ಕೊಡುವುದು.

ಮಕರ ರಾಶಿ:

ಸಹೋದರ ಒಡನಾಟದಿಂದ ದೂರಾಗಲಿದೆ. ಸಂಗಾತಿಯ ಮಾತುಗಳನ್ನು ಕೇಳಿ ನೀವು ತಾಳ್ಮೆಯಿಂದ ಇದ್ದರೆ ನಿಜವಾಗಿಯೂ ದೊಡ್ಡವರೇ. ಮಾತನಾಡುವಾಗ ಪದಗಳನ್ನು ಸರಿಯಾಗಿ ಬಳಸುವುದು ಉತ್ತಮ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನು ಕೊಡಿ. ಬರಬೇಕಾದ ಹಣವು ಮಧ್ಯವರ್ತಿಗಳ ಕೈಯ್ಯಲ್ಲಿರುತ್ತದೆ. ಕೆಲವನ್ನು ಕೇಳಿ ಪಡೆಯಬೇಕಾಗುವುದು. ಉನ್ನತ ಶಿಕ್ಷಣವನ್ನು ಪಡೆಯಲು ನೀವು ಸಫಲರಾಗಬಹುದು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ಜವಾಬ್ದಾರಿ ಆಗಿರುವಿರಿ.

ಕುಂಭ ರಾಶಿ:

ತಂದೆಯ ಸಲಹೆಯಿಂದ ಹಣದ ಲಾಭವನ್ನು ಸಾಧಿಸಬಹುದು. ಪ್ರೀತಿಯ ಕಥೆಯಲ್ಲಿ ಹೊಸ ತಿರುವು ಹಾಗೂ ಸಂಗಾತಿಯೊಂದಿಗೆ ಮದುವೆಯ ಕುರಿತು ಚರ್ಚೆ ನಡೆಯುತ್ತದೆ. ಆದ್ದರಿಂದ ಯಾವುದೇ ನಿರ್ಧಾರವನ್ನು ತಾಳ್ಮೆಯಿಂದಿರಿ. ಹತ್ತಿರದ ವ್ಯಕ್ತಿಗಳು ಕಾರಣಾಂತರಗಳಿಂದ ದೂರಾಗಬಹುದು. ಸಮಯ ಸಂದರ್ಭಗಳನ್ನು ನೋಡಿಕೊಂಡು ಮಾತನಾಡಿ. ಅಪಹಾಸ್ಯಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆಬಿದೆ. ನಿಮಗೆ ಸಿಗುವ ಸೂಚನೆಗಳನ್ನು ಗಮನಿಸಿಕೊಂಡು ವ್ಯವಹಾರಾದಿಗಳನ್ನು ಮಾಡಿ.

ಮೀನ ರಾಶಿ:

ಇಂದು ನಿಮ್ಮ ಮನಸ್ಸಿಗೆ ಧಾರ್ಮಿಕತೆಯು ಶಾಂತಿಯನ್ನೂ ನೆಮ್ಮದಿಯನ್ನೂ ನೀಡುತ್ತದೆ. ಹಾಸ್ಯದಿಂದ ಇನ್ನೊಬ್ಬರಿಗೆ ನೋವಾಂಟಾಗಬಹುದು. ದ್ವೇಷವನ್ನು ದೂರ ಮಾಡಿಕೊಳ್ಳಲಾಗದು. ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವ ಅವಕಾಶವಿದೆ. ಪೋಷಕರ ಸಲಹೆಗಳು ನಿಮ್ಮ ನಿರ್ಧಾರವನ್ನು ಬದಲಿಸುತ್ತಸದೆ. ಸರ್ಕಾರಿ ಕೆಲಸದಲ್ಲಿರುವವರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಪ್ರಯಾಣ ಮಾಡಲಿರುವಿರಿ. ವಸ್ತುಗಳು ಕಾಣೆಯಾಗಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಸ್ವಾತಿ, ಯೋಗ : ಶಿವ, ಕರಣ : ವಣಿಜ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:58 – 15:35, ಯಮಗಂಡ ಕಾಲ 05:57 – 07:33, ಗುಳಿಕ ಕಾಲ 09:10 – 10:46

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version