FCRA Bill: ವಿಪಕ್ಷಗಳ ತೀವ್ರ ವಿರೋಧದ ನಡುವೆ ಧ್ವನಿ ಮತದ ಮೂಲಕ ಎಫ್‌ಸಿಆರ್‌ಎ ವಿಧೇಯಕ ಜೆಪಿಸಿಗೆ ರವಾನೆ – Kannada News | Modi government sends Foreign Funding Bill FCRA Bill to Joint Parliamentary Committee amid Opposition protest

ನವದೆಹಲಿ, ಆಗಸ್ಟ್ 12: ನವದೆಹಲಿ: ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆಯೇ ಕೇಂದ್ರ ಸರ್ಕಾರವು ವಿವಾದಾತ್ಮಕ ‘ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ, 2026’ (FCRA) ಅನ್ನು ಜಂಟಿ ಸಂಸದೀಯ ಸಮಿತಿಗೆ (JPC) ರವಾನಿಸಿದೆ. ವಿಪಕ್ಷಗಳ ಗದ್ದಲದ ಮಧ್ಯೆಯೇ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ್ ರೈ ಇಂದು (ಬುಧವಾರ) ಈ ಮಸೂದೆಯನ್ನು ಜೆಪಿಸಿಗೆ ಒಪ್ಪಿಸುವ ಪ್ರಸ್ತಾವನೆಯನ್ನು ಮಂಡಿಸಿದರು. ಲೋಕಸಭೆಯ ಪೂರಕ ಕಾರ್ಯಸೂಚಿಯಲ್ಲಿ ಎಫ್‌ಸಿಆರ್‌ಎ ಮಸೂದೆಯನ್ನು ಜೆಪಿಸಿಗೆ ರವಾನಿಸುವ ಪ್ರಸ್ತಾವನೆಯು ಗೃಹ ಸಚಿವ ಅಮಿತ್ ಶಾ ಅವರ ಹೆಸರಿನಲ್ಲಿ ಪಟ್ಟಿಯಾಗಿದ್ದರಿಂದ, ಸದನದಲ್ಲಿ ಅವರ ಗೈರುಹಾಜರಿಯನ್ನು ವಿರೋಧ ಪಕ್ಷಗಳು ಪ್ರಶ್ನಿಸಿದವು.

“ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ, 2026 ಅನ್ನು ಲೋಕಸಭೆಯ ಗೌರವಾನ್ವಿತ ಸ್ಪೀಕರ್ ಅವರಿಂದ ನಾಮನಿರ್ದೇಶನಗೊಳ್ಳುವ 21 ಸದಸ್ಯರು ಮತ್ತು ರಾಜ್ಯಸಭೆಯ ಸಭಾಪತಿಗಳಿಂದ ನಾಮನಿರ್ದೇಶನಗೊಳ್ಳುವ 10 ಸದಸ್ಯರನ್ನು ಒಳಗೊಂಡ ಉಭಯ ಸದನಗಳ ಜಂಟಿ ಸಮಿತಿಗೆ (JPC) ರವಾನಿಸಬೇಕು” ಎಂದು ಕಾರ್ಯಸೂಚಿಯ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಮಸೂದೆಯು ಎನ್‌ಜಿಒಗಳು ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳನ್ನು ಗುರಿಯಾಗಿಸಿಕೊಳ್ಳುತ್ತದೆ ಎಂದು ಆರೋಪಿಸಿ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಕೇಂದ್ರ ಸರ್ಕಾರವು ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.

ಏನಿದು ಎಫ್‌ಸಿಆರ್‌ಎ (FCRA) ವಿಧೇಯಕ?:

ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ, 2026ರ ಪ್ರಕಾರ, ಯಾವುದೇ ಸಂಸ್ಥೆಯ ಎಫ್‌ಸಿಆರ್‌ಎ ನೋಂದಣಿ ರದ್ದಾದರೆ, ಹಿಂಪಡೆಯಲ್ಪಟ್ಟರೆ ಅಥವಾ ನವೀಕರಣಗೊಳ್ಳದೆ ಅವಧಿ ಮುಗಿದರೆ, ಆ ಸಂಸ್ಥೆಯು ವಿದೇಶಿ ಕೊಡುಗೆಯಿಂದ ಪಡೆದ ಧನಸಹಾಯ ಮತ್ತು ಆಸ್ತಿಗಳನ್ನು ವಶಕ್ಕೆ ಪಡೆಯಲು ಸರ್ಕಾರಕ್ಕೆ ಅಧಿಕಾರ ಸಿಗಲಿದೆ. ವಶಪಡಿಸಿಕೊಂಡ ಆಸ್ತಿಯು ಪ್ರಾರ್ಥನಾ ಮಂದಿರ ಅಥವಾ ಧಾರ್ಮಿಕ ಸ್ಥಳವಾಗಿದ್ದರೆ, ಆ ಸ್ಥಳದ ಧಾರ್ಮಿಕ ಸ್ವರೂಪಕ್ಕೆ ಧಕ್ಕೆಯಾಗದಂತೆ ಪ್ರಾಧಿಕಾರ ನೋಡಿಕೊಳ್ಳಬೇಕು ಎಂದು ವಿಧೇಯಕದಲ್ಲಿ ಹೇಳಲಾಗಿದೆ.

ಇದರೊಂದಿಗೆ, ಕಾಯ್ದೆ ಉಲ್ಲಂಘನೆಗೆ ವಿಧಿಸಲಾಗುತ್ತಿದ್ದ ಗರಿಷ್ಠ ಶಿಕ್ಷೆಯನ್ನು 5 ವರ್ಷಗಳ ಜೈಲು ಶಿಕ್ಷೆಯಿಂದ 1 ವರ್ಷಕ್ಕೆ ಕಡಿತಗೊಳಿಸಲು ಪ್ರಸ್ತಾವಿಸಲಾಗಿದೆ. ಅಧಿಕೃತ ಪೋರ್ಟಲ್ ಪ್ರಕಾರ, ಜುಲೈ 15, 2026ರ ವೇಳೆಗೆ ದೇಶದಲ್ಲಿ 14,449 ಸಕ್ರಿಯ ಎಫ್‌ಸಿಆರ್‌ಎ ಪ್ರಮಾಣಪತ್ರಗಳಿದ್ದು, 22,498 ರದ್ದುಗೊಂಡಿವೆ ಮತ್ತು 15,212 ಅವಧಿ ಮುಗಿದ ಸ್ಥಿತಿಯಲ್ಲಿವೆ.

ಇದನ್ನೂ ಓದಿ: ಎಫ್​ಸಿಆರ್​ಎ ತಿದ್ದುಪಡಿ ಮಸೂದೆ, ಸದ್ಯ ಭಾರತಕ್ಕೆ ಯಾಕೆ ಮುಖ್ಯ ಗೊತ್ತಾ? ಇಲ್ಲಿದೆ ವಿವಿಧ ಕಾರಣಗಳು

ಅಖಿಲೇಶ್ ಯಾದವ್ ಆಕ್ಷೇಪ:

“ಎಲ್ಲ ವಿರೋಧ ಪಕ್ಷಗಳು ಸರ್ಕಾರ ತರುತ್ತಿರುವ ಈ ಎಫ್‌ಸಿಆರ್‌ಎ ಮಸೂದೆಯನ್ನು ವಿರೋಧಿಸುತ್ತಿದೆ. ಸಚಿವರು ಈ ಮಸೂದೆ ಅಲ್ಪಸಂಖ್ಯಾತರ ವಿರುದ್ಧವಿಲ್ಲ ಎಂದು ಹೇಳುತ್ತಿದ್ದಾರೆ. ಇಲ್ಲಿಯವರೆಗೆ ಈ ಸರ್ಕಾರ ತಂದಿರುವ ಯಾವ ಮಸೂದೆಯು ಅಲ್ಪಸಂಖ್ಯಾತರ ವಿರುದ್ಧವಾಗಿರಲಿಲ್ಲ? ಎಂದು ನಾನು ಸಚಿವರನ್ನು ಕೇಳಲು ಬಯಸುತ್ತೇನೆ” ಎಂದು ಅಖಿಲೇಶ್ ಯಾದವ್ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕಿರಣ್ ರಿಜಿಜು ತಿರುಗೇಟು:

“ಅಲ್ಪಸಂಖ್ಯಾತರ ವಿರುದ್ಧವಾಗಿರುವ ಒಂದೇ ಒಂದು ಅಂಶವನ್ನು ಬೆಟ್ಟು ಮಾಡಿ ತೋರಿಸುವಂತೆ ನಾನು ಅಖಿಲೇಶ್ ಯಾದವ್ ಅವರಿಗೆ ಸವಾಲು ಹಾಕುತ್ತೇನೆ. ನೀವು ಕೇವಲ ಸದನದ ದಾರಿ ತಪ್ಪಿಸಲು ಯತ್ನಿಸುತ್ತಿದ್ದೀರಿ” ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದರು. ಯಾವುದೇ ಕಾರಣಕ್ಕೂ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಪ್ರಶ್ನೆಯೇ ಇಲ್ಲ, ಮತ್ತು ದೇಶದಲ್ಲಿ ಯಾವುದೇ ಕಾನೂನು ಚೌಕಟ್ಟಿಲ್ಲದೆ ವಿದೇಶಿ ಹಣ ಹರಿದುಬರಲು ಬಿಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ, ಬೆಳಿಗ್ಗೆ ಕಲಾಪ ಮುಂದೂಡಿಕೆಯಾದ ನಂತರ ಲೋಕಸಭೆ ಮತ್ತೆ ಸಮಾವೇಶಗೊಂಡಾಗ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ್ ರೈ ಅವರು ಎಫ್‌ಸಿಆರ್‌ಎ ಮಸೂದೆಯನ್ನು ಜೆಪಿಸಿಗೆ ಒಪ್ಪಿಸುವ ಪ್ರಸ್ತಾವನೆಯನ್ನು ಮಂಡಿಸಿದರು.

31 ಸದಸ್ಯರ ಜಂಟಿ ಸಂಸದೀಯ ಸಮಿತಿ:

ಪ್ರಸ್ತಾವಿತ ಜಂಟಿ ಸಂಸದೀಯ ಸಮಿತಿಯು ಒಟ್ಟು 31 ಸದಸ್ಯರನ್ನು ಒಳಗೊಂಡಿರಲಿದೆ (ಲೋಕಸಭೆಯಿಂದ 21 ಹಾಗೂ ರಾಜ್ಯಸಭೆಯಿಂದ 10 ಸದಸ್ಯರು). ಲೋಕಸಭಾ ಸದಸ್ಯರನ್ನು ಸ್ಪೀಕರ್ ಹಾಗೂ ರಾಜ್ಯಸಭಾ ಸದಸ್ಯರನ್ನು ಸಭಾಪತಿಗಳು ನಾಮನಿರ್ದೇಶನ ಮಾಡಲಿದ್ದಾರೆ. ಈ ಸಮಿತಿಯು ಕಾಯ್ದೆಯ ನಿಯಮಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, 2026ರ ಚಳಿಗಾಲದ ಅಧಿವೇಶನದ ಮೊದಲ ವಾರದ ಕೊನೆಯ ದಿನದೊಳಗೆ ಸಂಸತ್ತಿಗೆ ವರದಿ ಸಲ್ಲಿಸಲಿದೆ. ಸಭೆಯ ಶಾಸನಬದ್ಧ ಹಾಜರಾತಿ (ಕೋರಂ) ಒಟ್ಟು ಸದಸ್ಯ ಬಲದ ಮೂರನೇ ಒಂದರಷ್ಟಿರಲಿದೆ.

ಇದನ್ನೂ ಓದಿ: ‘ನಾಳೆ ಮಧ್ಯಾಹ್ನ 3 ಗಂಟೆಯವರೆಗೂ ಚರ್ಚೆಗೆ ಸಿದ್ಧ’; ವಿಪಕ್ಷಗಳಿಗೆ ಗೃಹ ಸಚಿವ ಅಮಿತ್ ಶಾ ತಿರುಗೇಟು

ಕ್ರಿಶ್ಚಿಯನ್ ಸಂಸ್ಥೆಗಳು ಈ ವಿಧೇಯಕವನ್ನು ವಿರೋಧಿಸುತ್ತಿರುವುದೇಕೆ?:

ಭಾರತದಲ್ಲಿರುವ ಚರ್ಚ್‌ಗಳು ಮತ್ತು ಕ್ರಿಶ್ಚಿಯನ್ ಸಂಸ್ಥೆಗಳು ಎಫ್‌ಸಿಆರ್‌ಎ ತಿದ್ದುಪಡಿ ವಿಧೇಯಕವನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ಈ ಮಸೂದೆಯು ತಮ್ಮ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ನಾಗರಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಆತಂಕ ವ್ಯಕ್ತಪಡಿಸಿವೆ. ಕೇರಳ ಲ್ಯಾಟಿನ್ ಕ್ಯಾಥೋಲಿಕ್ ಅಸೋಸಿಯೇಷನ್ (KLCA) ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ಕಾಯ್ದೆಯಿಂದ ನೇರವಾಗಿ ಪ್ರಭಾವಿತರಾಗುವ ನಾಗರಿಕರು ಹಾಗೂ ಸಂಸ್ಥೆಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ತಿದ್ದುಪಡಿ ತರಲಾಗಿದೆ, ಇದರಿಂದ ಶಾಂತಿಯುತವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ಅನಿಶ್ಚಿತತೆ ಮೂಡಲಿದೆ ಎಂದು ಹೇಳಿದೆ.

ಕ್ರಿಶ್ಚಿಯನ್ ಸಮುದಾಯದ ಪ್ರಮುಖರು ಗೃಹ ಸಚಿವರನ್ನು ಭೇಟಿಯಾಗಿ ಮಸೂದೆಯನ್ನು ವಾಪಾಸ್ ಪಡೆಯಬೇಕು ಅಥವಾ ಜೆಪಿಸಿ (JPC) ತನಿಖೆಗೆ ಒಪ್ಪಿಸಬೇಕೆಂದು ಮನವಿ ಮಾಡಿದ್ದರು. ಅವರ ಮನವಿಯನ್ನು ಆಲಿಸಿದ ಅಮಿತ್ ಶಾ, ಈ ವಿಚಾರವನ್ನು ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರದ ಇತರ ಸದಸ್ಯರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:28 pm, Wed, 12 August 26

Source link

ಹೆಬ್ಬಾಳ್ ಟನಲ್ ಮೆಟ್ರೋ ಲೈನ್, ಸಬ್ ಅರ್ಬನ್ ರೈಲು ಸಂಘರ್ಷಿಸುವ ಸಾಧ್ಯತೆ: ಡಿಕೆಶಿಗೆ ತೇಜಸ್ವಿ ಸೂರ್ಯ ಪತ್ರ – Kannada News | Hebbal Tunnel Issue: Tejasvi Surya Seeks Scientific Assessment, Writes to DK Shivakumar

ತೇಜಸ್ವಿ ಸೂರ್ಯ, ಡಿಕೆ ಶಿವಕುಮಾರ್​Image Credit source: tv9 kannada

ಬೆಂಗಳೂರು, ಆಗಸ್ಟ್​​​ 12: ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಬ್ಬಾಳ ಶಾರ್ಟ್ ಟನಲ್ ಯೋಜನೆಗೆ ಬಿಡಿಎ ಮುಂದಾಗಿದೆ. ಇತ್ತೀಚೆಗೆ ಸುರಂಗ ಮಾರ್ಗದ ಕಾಮಗಾರಿಗಳಿಗೆ ಪ್ರಾಥಮಿಕವಾಗಿ ಚಾಲನೆ ನೀಡಲಾಗಿತ್ತು. ಸದ್ಯ ಈ ವಿಚಾರವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya), ಸಿಎಂ ಡಿಕೆ ಶಿವಕುಮಾರ್​ಗೆ (DK Shivakumar) ಪತ್ರ ಬರೆದಿದ್ದು, ‘1,140 ಕೋಟಿ ರೂ ಅಂದಾಜು ವೆಚ್ಚದ ಈ ಯೋಜನೆಯನ್ನು ವೈಜ್ಞಾನಿಕ ಮೌಲ್ಯಮಾಪನವಿಲ್ಲದೆ ಮುಂದುವರಿಸಬಾರದು’ ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬರೆದ ಪತ್ರದಲ್ಲಿ ಏನಿದೆ?

‘ಹೆಬ್ಬಾಳ ಶಾರ್ಟ್ ಟನಲ್​​ ಯೋಜನೆಯು ಹೆಬ್ಬಾಳ ಕೆರೆಯ ಜಮೀನಿನ ಮೂಲಕ ಹಾದುಹೋಗಲಿದ್ದು, ಯೋಜನಾ ಕಾಮಗಾರಿಗಾಗಿ ಸುಮಾರು 3.45 ಎಕರೆ ಭೂಮಿಯನ್ನು ವರ್ಗಾಯಿಸಲಾಗುತ್ತಿದೆ ಎಂದು ವರದಿಯಾಗಿದೆ. ಅಲ್ಲದೆ, ಇದು ಪ್ರಸ್ತಾವಿತ ಮೆಟ್ರೋ ರೆಡ್ ಲೈನ್ ಹಾಗೂ ಸಬ್ ಅರ್ಬನ್ ರೈಲು ಯೋಜನೆಗಳೊಂದಿಗೆ ಸಂಘರ್ಷಿಸುವ ಸಾಧ್ಯತೆಯಿದೆ’ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ತೇಜಸ್ವಿ ಸೂರ್ಯ ಟ್ವೀಟ್​

‘ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ಅನುಮೋದನೆಯನ್ನೇ ಪಡೆಯದೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಹಲವಾರು ನಾಗರಿಕ ಸಂಘಟನೆಗಳು ಈ ಬಗ್ಗೆ ಹಲವು ಬಾರಿ ಮನವಿ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಿದ್ದರೂ, ಅವರೊಂದಿಗೆ ಯಾವುದೇ ಅರ್ಥಪೂರ್ಣ ಸಮಾಲೋಚನೆ ನಡೆಸದೆ ಕಾಮಗಾರಿಯನ್ನು ಆರಂಭಿಸಲಾಗಿದೆ’ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: ಹೆಬ್ಬಾಳ ಜಂಕ್ಷನ್​​ನಲ್ಲಿ ಟ್ರಾಫಿಕ್​​ ಸಮಸ್ಯೆಗೆ ಮುಕ್ತಿ ನೀಡಲು ಮುಂದಾದ ಬಿಡಿಎ: ಟ್ವಿನ್ ಟನಲ್ ಯೋಜನೆಗೆ ಚಾಲನೆ

‘ಇನ್ನು ಯೋಜನೆಗೆ ಸಂಬಂಧಿಸಿದಂತೆ ಮುಂದಿನ ಯಾವುದೇ ಕಾಮಗಾರಿಯನ್ನು ಕೈಗೊಳ್ಳುವ ಮೊದಲು ಸಮಗ್ರ ಸಂಚಾರ ಸಿಮ್ಯುಲೇಷನ್ ಅಧ್ಯಯನ ನಡೆಸಬೇಕು ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯಿಂದ  ಸ್ವತಂತ್ರ ತಾಂತ್ರಿಕ ಮೌಲ್ಯಮಾಪನ ಮಾಡಿಸಬೇಕು. ಇದರ ಜೊತೆಗೆ, ಯೋಜನೆಯ ಕುರಿತು ನಗರಾಡಳಿತ ಭೂ ಸಾರಿಗೆ ನಿರ್ದೇಶನಾಲಯ ಹಾಗೂ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ಸಂಸ್ಥೆಗಳ ಅಭಿಪ್ರಾಯಗಳನ್ನು ಕಡ್ಡಾಯವಾಗಿ ಪಡೆಯಬೇಕು’ ಎಂದು ಪತ್ರದಲ್ಲಿ ಸಿಎಂ ಡಿ.ಕೆ.ಶಿವಕುಮಾರ್​​ಗೆ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:02 pm, Wed, 12 August 26

Source link

IND vs SL: 2ನೇ ಟೆಸ್ಟ್ ಪಂದ್ಯಕ್ಕೂ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಅನುಮಾನ – Kannada News | India vs SL Test: Washington Sundar Joins Bumrah, Sudharsan in Injury List – Big Blows for Team India

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗುವ ಮೊದಲೇ ಭಾರತ ತಂಡಕ್ಕೆ (Team India) ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಗಾಯದಿಂದಾಗಿ ಟೀಂ ಇಂಡಿಯಾ ಈಗಾಗಲೇ ಇಬ್ಬರು ಆಟಗಾರರನ್ನು ಕಳೆದುಕೊಂಡಿದೆ. ಶ್ರೀಲಂಕಾಕ್ಕೆ ಆಗಮಿಸುವ ಮೊದಲೇ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಯುವ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಅವರನ್ನು ಪ್ರವಾಸದಿಂದ ಹೊರಗಿಡಲಾಗಿತ್ತು. ಇದೀಗ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಸ್ಪಿನ್-ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ( Washington Sundar) ಕೂಡ ಎರಡನೇ ಟೆಸ್ಟ್ ಪಂದ್ಯದ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆಗಳಿಲ್ಲ ಎಂದು ವರದಿಯಾಗಿದೆ. ಅಂದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಸುಂದರ್ ಕೂಡ ಈ ಸರಣಿಯಿಂದ ಹೊರುಗಳಿಯಲಿದ್ದಾರೆ.

ಸುಂದರ್ ಸರಣಿಯಿಂದ ಔಟ್

ವಾಷಿಂಗ್ಟನ್ ಸುಂದರ್ ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಅವರನ್ನು ಮೊದಲ ಟೆಸ್ಟ್​ನಿಂದ ಹೊರಗಿಟ್ಟು, ಆಗಸ್ಟ್ 23 ರಿಂದ ಕೊಲಂಬೊದಲ್ಲಿ ನಡೆಯುವ ಎರಡನೇ ಟೆಸ್ಟ್‌ ಪಂದ್ಯಕ್ಕೆ ಮಾತ್ರ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೀಗ ಸುಂದರ್ ಎರಡನೇ ಟೆಸ್ಟ್‌ ವೇಳೆಗೆ ಫಿಟ್ ಆಗುವ ಸಾಧ್ಯತೆಗಳಿಲ್ಲ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ತಂಡದ ಆಡಳಿತ ಮಂಡಳಿ ಸುಂದರ್ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಇರಾದೆಯಲ್ಲಿಲ್ಲ. ಹೀಗಾಗಿ ಸುಂದರ್​ಗೆ ಚೇತರಿಸಿಕೊಳ್ಳಲು ಇನ್ನಷ್ಟು ಸಮಯ ಕೊಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ವಾಷಿಂಗ್ಟನ್ ಸುಂದರ್ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಚೇತರಿಕೆಯ ಹಾದಿಯಲ್ಲಿರುವ ಸುಂದರ್ ಅವರನ್ನು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿತ್ತು. ಆದರೆ, ಅವರನ್ನು ಎರಡನೇ ಟೆಸ್ಟ್‌ಗೆ ಆಯ್ಕೆ ಮಾಡಲಾಗಿದೆ. ಆದರೀಗ ಸುಂದರ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅಲ್ಲದೆ ಸುಂದರ್ ಅವರನ್ನು ಇಷ್ಟು ಬೇಗ ತಂಡದಲ್ಲಿ ಆಡಿಸಲು ಬಿಸಿಸಿಐಗೆ ಇಷ್ಟವಿಲ್ಲ. ಏಕೆಂದರೆ ಈ ಹಿಂದೆ ಇಂಜುರಿಯಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿದ್ದ ಆಟಗಾರರು ಕೇವಲ ಒಂದೆರಡು ಪಂದ್ಯಗಳನ್ನು ಆಡಿದ ಬಳಿಕ ಮತ್ತೆ ಗಾಯಕ್ಕೆ ತುತ್ತಾಗಿದ್ದರು. ಇದು ಬಿಸಿಸಿಐಗೆ ಸಾಕಷ್ಟು ಮುಜುಗರವನ್ನುಂಟು ಮಾಡಿತ್ತು.

IND vs SL: ಟೆಸ್ಟ್‌ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಟೀಂ ಇಂಡಿಯಾ

ಬಿಸಿಸಿಐ ಆತುರ ಪಡದಿರಲು ಕಾರಣವಿದು

ಈ ಹಿನ್ನೆಲೆಯಲ್ಲಿ, ಸುಂದರ್ ಪೂರ್ಣ ಫಿಟ್ನೆಸ್ ಮರಳಿ ಪಡೆದು ಮೈದಾನಕ್ಕೆ ಇಳಿಯುವ ಮೊದಲು ಅವರನ್ನು ಎಲ್ಲಾ ರೀತಿಯಲ್ಲೂ ಪರೀಕ್ಷಿಸಲು ಬಿಸಿಸಿಐ ಚಿಂತಿಸಿದೆ. ಇದರಿಂದ ಸುಂದರ ತಂಡಕ್ಕೆ ಮರಳಿದ ತಕ್ಷಣ ಗಾಯಗೊಳ್ಳುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ. ಹಾಗೆಯೇ ಆಟಗಾರರ ಫಿಟ್ನೆಸ್ ವಿಚಾರದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ವಿರುದ್ಧ ಎದ್ದಿರುವ ಅನುಮಾನಗಳನ್ನು ಶಮನಗೊಳಿಸುವುದು ಬಿಸಿಸಿಐ ಯೋಜನೆಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ’; ರಾಹುಲ್ ಗಾಂಧಿ ವ್ಯಂಗ್ಯ – Kannada News | Rahul Gandhi says not interested in Amit Shah’s lecture in Parliament

ನವದೆಹಲಿ, ಆಗಸ್ಟ್ 12: ಸಂಸತ್​​ನಲ್ಲಿ ಚರ್ಚೆಗೆ ಸಿದ್ಧ ಎಂಬ ಅಮಿತ್ ಶಾ ಅವರ ಆಫರ್‌ಗೆ ತಿರುಗೇಟು ನೀಡಿದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi), ವಿರೋಧ ಪಕ್ಷಕ್ಕೆ ಗೃಹ ಸಚಿವರಿಂದ ಉಪದೇಶ ಅಥವಾ ಉಪನ್ಯಾಸ ಕೇಳುವ ಆಸಕ್ತಿಯಿಲ್ಲ. ನಮಗೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಉತ್ತರಗಳು ಬೇಕಾಗಿವೆ ಎಂದು ಸ್ಪಷ್ಟಪಡಿಸಿದರು. “ಅವರು ಏನು ಹೇಳುತ್ತಾರೆ ಎಂಬ ಬಗ್ಗೆ ನಮಗೆ ಯೋಚನೆಯಿಲ್ಲ” ಎಂದು ರಾಹುಲ್ ವಾಗ್ದಾಳಿ ನಡೆಸಿದರು.

“ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಲು ಮತ್ತು ಲಾಠಿಚಾರ್ಜ್ ಮಾಡಲು ಆದೇಶ ನೀಡಿದ್ದು ಯಾರು? ಒಂದು ವೇಳೆ ಅಮಿತ್ ಶಾ ಅವರೇ ಈ ಆದೇಶ ನೀಡಿದ್ದರೆ ಅವರು ತಕ್ಷಣ ರಾಜೀನಾಮೆ ನೀಡಬೇಕು” ಎಂದು ರಾಹುಲ್ ಗಾಂಧಿ ಆಗ್ರಹಿಸಿದರು. ಅಲ್ಲದೆ, ಕಳೆದ 20 ದಿನಗಳಿಂದ ಗೃಹ ಸಚಿವರು ಸಂಸತ್ತಿಗೆ ಬಾರದೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

AAI Recruitment 2026: ಕೇಂದ್ರ ಸರ್ಕಾರಿ ಉದ್ಯೋಗವಕಾಶ; 389 ಹುದ್ದೆಗಳಿಗೆ ಅರ್ಜಿ ಆಹ್ವಾನ, 1.80 ಲಕ್ಷದವರೆಗೆ ವೇತನ – Kannada News | AAI Recruitment 2026: 389 Manager and Jr. Executive Jobs ;Apply by Sep 7

ಕೇಂದ್ರ ಸರ್ಕಾರಿ ಉದ್ಯೋಗವಕಾಶImage Credit source: Getty Images

ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಭರ್ಜರಿ ಉದ್ಯೋಗಾವಕಾಶ ನೀಡಿದೆ. AAI ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಮ್ಯಾನೇಜರ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಒಟ್ಟು 389 ಹುದ್ದೆಗಳನ್ನು ನಿಯಮಿತವಾಗಿ ಭರ್ತಿ ಮಾಡಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2026ರ ಸೆಪ್ಟೆಂಬರ್ 7ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆ ಆಗಸ್ಟ್ 8ರಿಂದ ಆರಂಭವಾಗಿದೆ.

ಯಾವ ಹುದ್ದೆಗಳಿಗೆ ನೇಮಕಾತಿ?

ಈ ನೇಮಕಾತಿಯಲ್ಲಿ ಮುಖ್ಯವಾಗಿ ಮ್ಯಾನೇಜರ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಒಟ್ಟು 389 ಹುದ್ದೆಗಳು ಖಾಲಿ ಇದ್ದು, ವಾಸ್ತುಶಿಲ್ಪ, ಹಣಕಾಸು, ಅಗ್ನಿಶಾಮಕ ಸೇವೆ, ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಕಾರ್ಪೊರೇಟ್ ಪ್ಲಾನಿಂಗ್, ನಿರ್ವಹಣಾ ಸೇವೆಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉದ್ಯೋಗಾವಕಾಶಗಳಿವೆ.

ಶೈಕ್ಷಣಿಕ ಅರ್ಹತೆ ಏನು?

ಹುದ್ದೆಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆ ಬದಲಾಗುತ್ತದೆ. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ, ಐಟಿಐ, ಬಿಇ/ಬಿಟೆಕ್, ಎಂಬಿಎ, ಎಂಸಿಎ ಮುಂತಾದ ವಿದ್ಯಾರ್ಹತೆಗಳನ್ನು ಹೊಂದಿರಬೇಕು. ಕೆಲವು ಹುದ್ದೆಗಳಿಗೆ ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವವೂ ಅಗತ್ಯವಿದೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ತಮ್ಮ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಮತ್ತು ಅನುಭವದ ಮಾನದಂಡಗಳನ್ನು ಪರಿಶೀಲಿಸಬೇಕು.

ವಯೋಮಿತಿ ಎಷ್ಟು?

ಅಭ್ಯರ್ಥಿಗಳ ವಯಸ್ಸನ್ನು 2026ರ ಸೆಪ್ಟೆಂಬರ್ 7ರ ಆಧಾರದ ಮೇಲೆ ಪರಿಗಣಿಸಲಾಗುತ್ತದೆ. ಮ್ಯಾನೇಜರ್ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 32 ವರ್ಷ ಹಾಗೂ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಗರಿಷ್ಠ 27 ವರ್ಷ ನಿಗದಿಪಡಿಸಲಾಗಿದೆ. ಸರ್ಕಾರಿ ನಿಯಮಗಳ ಪ್ರಕಾರ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ (ನಾನ್-ಕ್ರೀಮಿ ಲೇಯರ್) ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಲಭ್ಯವಿದೆ.

ತಿಂಗಳಿಗೆ 1.80 ಲಕ್ಷದವರೆಗೆ ವೇತನ:

AAIನಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆಕರ್ಷಕ ವೇತನದ ಜೊತೆಗೆ ನಿಯಮಾನುಸಾರ ವಿವಿಧ ಸರ್ಕಾರಿ ಸೌಲಭ್ಯಗಳು ದೊರೆಯಲಿವೆ. ಮ್ಯಾನೇಜರ್ ಹುದ್ದೆಗೆ 60,000ರಿಂದ 1,80,000ರೂ. ಹಾಗೂ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ 40,000ರಿಂದ 1,40,000 ರೂ. ವೇತನ ಶ್ರೇಣಿ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಹುದ್ದೆಗೆ ಅನುಗುಣವಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿವಿಧ ಹಂತಗಳಿರುತ್ತವೆ. ಸಾಮಾನ್ಯವಾಗಿ ಮೊದಲ ಹಂತವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳಿರುವುದಿಲ್ಲ. CBT ಬಳಿಕ ಅರ್ಜಿ ಪರಿಶೀಲನೆ, ಮುಂದಿನ ಹಂತದ ಪರೀಕ್ಷೆಗಳು ಮತ್ತು ಹುದ್ದೆಗೆ ಅನುಗುಣವಾಗಿ ಸಂದರ್ಶನ ನಡೆಯಲಿದೆ. ಪೋಸ್ಟ್ ಕೋಡ್ 1ರಿಂದ 11ರವರೆಗಿನ ಹುದ್ದೆಗಳಿಗೆ ಸಂದರ್ಶನವೂ ಆಯ್ಕೆ ಪ್ರಕ್ರಿಯೆಯ ಭಾಗವಾಗಿದೆ.

ಅಗ್ನಿಶಾಮಕ ಸೇವೆಗಳ ಹುದ್ದೆಗೆ ವಿಶೇಷ ಪರೀಕ್ಷೆ:

ಅಗ್ನಿಶಾಮಕ ಸೇವೆಗಳ ಮ್ಯಾನೇಜರ್ ಹುದ್ದೆಗೆ CBT ಬಳಿಕ ದೈಹಿಕ ಮಾಪನ ಪರೀಕ್ಷೆ, ಚಾಲನಾ ಪರೀಕ್ಷೆ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆ ನಡೆಸಲಾಗುತ್ತದೆ. ಈ ಹಂತಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ನಂತರ ಸಂದರ್ಶನಕ್ಕೆ ಕರೆಯಲಾಗುತ್ತದೆ. ಆದ್ದರಿಂದ ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಶೈಕ್ಷಣಿಕ ಅರ್ಹತೆಯ ಜೊತೆಗೆ ದೈಹಿಕ ಮಾನದಂಡಗಳನ್ನೂ ಪೂರೈಸಬೇಕಾಗುತ್ತದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು AAIನ ಅಧಿಕೃತ ನೇಮಕಾತಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಭರ್ತಿ ಮಾಡುವಾಗ ಶೈಕ್ಷಣಿಕ ಅರ್ಹತೆ, ವಯಸ್ಸು, ಕೆಲಸದ ಅನುಭವ ಸೇರಿದಂತೆ ಎಲ್ಲ ವಿವರಗಳನ್ನು ಸರಿಯಾಗಿ ನಮೂದಿಸಬೇಕು. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ಬಳಿಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ತಮ್ಮ ಹುದ್ದೆಗೆ ನಿಗದಿಪಡಿಸಿರುವ ಅರ್ಹತೆಗಳನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ.

ಪ್ರಮುಖ ದಿನಾಂಕಗಳು:

AAI ನೇಮಕಾತಿಗೆ ಆಗಸ್ಟ್ 8, 2026ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 7, 2026 ಕೊನೆಯ ದಿನಾಂಕವಾಗಿದೆ. ಒಟ್ಟು 389 ಹುದ್ದೆಗಳಿಗೆ ನಡೆಯುತ್ತಿರುವ ಈ ನೇಮಕಾತಿಯಲ್ಲಿ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಅರ್ಜಿ ಸಲ್ಲಿಸುವುದು ಉತ್ತಮ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಕರ್ನಾಟಕದಲ್ಲಿ ಕೋಟಿ ದಾಟಿದ ASDDO ವೋಟರ್ಸ್: ಡೇಂಜರ್ ಝೋನ್​​​​ನಲ್ಲಿ 1.8 ಕೋಟಿ ಮತದಾರರು! – Kannada News | Karnataka CEO: 100 percent digitisation of SIR forms complete, 1.8 crore voters marked ASDDO

ರಾಜ್ಯ ಚುನಾವಣಾಧಿಕಾರಿ ಅನ್ಬುಕುಮಾರ್

ಬೆಂಗಳೂರು, (ಆಗಸ್ಟ್ 12): ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಭಾಗವಾಗಿ ಈವರೆಗೆ ಕರ್ನಾಟಕದಲ್ಲಿ 1,08,75,304(19%) ಮತದಾರರನ್ನು ಎಎಸ್​​​​​ಡಿಡಿಒ ವರ್ಗೀಕರಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು ಗಣತಿ ನಮೂನೆ ವಿತರಣೆಗೆಂದು ಮನೆ ಮನೆಗೆ ಭೇಟಿ ನೀಡಿದಾಗ ಮತದಾರರು ಲಭ್ಯವಿಲ್ಲದೇ ಇದ್ದರೆ ಅವರನ್ನು ಪತ್ತೆಯಾಗದ, ಮನೆ ಖಾಲಿ ಮಾಡಿದ್ದರೆ ಸ್ಥಳಾಂತರ ಎಂದು ವರ್ಗೀಕರಣ ಮಾಡಲಾಗುತ್ತಿದೆ. ಜೊತೆಗೆ ಮೃತಪಟ್ಟಿದ್ದರೆ, ಮೃತ ಎಂದಯ ವರ್ಗೀಕರಿಸಲಾಗುತ್ತಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.

ASDDO ಮತದಾರರ ಪ್ರಮಾಣ ಶೇ.​​​​​​19% ರಷ್ಟು

ಬೆಂಗಳೂರಿನಲ್ಲಿಂದು (ಆಗಸ್ಟ್ 12) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ ಎಎಸ್​​​​​​ಡಿಡಿಒ (ಪತ್ತೆಯಾಗದವರು, ಸ್ಥಳಾಂತರ, ಮೃತ, ಹೆಚ್ಚು ಸ್ಥಳಗಳಲ್ಲಿ ನೋಂದಣಿ, ಇತರೆ) ಎಂದು ವರ್ಗೀಕರಿಸಲಾದವರ ಸಂಖ್ಯೆ ಇದೀಗ ​​​​​1,08,75,304 ಇದ್ದು, ರಾಜ್ಯದ ಒಟ್ಟು ಮತದಾರರ ಪೈಕಿ ಎಎಸ್​​​​​ಡಿಡಿಒ ಮತದಾರರ ಪ್ರಮಾಣ ಶೇ.​​​​​​19% ರಷ್ಟಾಗಿದೆ ಎಂದು ಮಾಹಿತಿ ನೀಡಿದರು.

ಶೇ.100% ಎನ್ಯೂಮರೇಷನ್ ಫಾರಂ ವಿತರಣೆ

ಈಗಾಗಲೇ 5,54,32,314 ಕೋಟಿ ಎನ್ಯೂಮರೇಷನ್ ಫಾರಂ ಕೊಟ್ಟಿದೀವಿ. BLO ಗಳಿಂದ 100% ಎನ್ಯೂಮರೇಷನ್ ಫಾರಂ ವಿತರಣೆ ಮಾಡಿದ್ದಾರೆ. ಅದರಲ್ಲಿ 4,45,57,010 ಸಾವಿರ ಅರ್ಜಿಗಳು ಡಿಜಿಟಲೈಜೇಷನ್ ಆಗಿದೆ. ರಾಜ್ಯದಲ್ಲಿ ಎನ್ಯೂಮರೇಷನ್ ಫಾರ್ಮ್ 80.38% ಡಿಜಿಟಲೀಕರಣವಾಗಿದೆ. ರಾಜ್ಯದಲ್ಲಿ ASDDO 1,08,75,304(19%) ಮತದಾರರ ಗುರುತು ಮಾಡಲಾಗಿದೆ. (ಆಬ್ಸೆಂಟ್ ಶಿಫ್ಟ್ ಡೆತ್ ಡೂಪ್ಲಿಕೇಟ್ & others) 65,73,976 ಮತದಾರರು ಶಾಶ್ವತವಾಗಿ ಸ್ಥಳಾಂತರ. 16,36,673 ಮತದಾರರು ಮೃತಪಟ್ಟಿದ್ದಾರೆ. ಎರಡು ಕಡೆ ವೋಟ್ ಹೊಂದಿದವರು 7,01,412 ಮತದಾರರು. 4,14,486 ಇತರೆ ಮತದಾರರು ಎಂದು ವಿವರಿಸಿದರು.

ಗೊಂದಲ ಇದ್ರೆ BLOಗಳಿಗೆ ಕರೆ ಮಾಡಲು ಮನವಿ

ಮತದಾರರ ಪಟ್ಟಿಯಲ್ಲಿ ಇನ್ನು ಏನಾದರೂ ಗೊಂದಲ ಇದ್ದರೆ ಸಂಬಂಧಪಟ್ಟ ಬಿಎಲ್​​​ಓಗಳಿಗೆ ದೂರವಾಣಿ ಕರೆ ಮಾಡಲು ತಿಳಿಸಿದ ಆಯುಕ್ತರು, 16-6-2026 ರ ಪಟ್ಟಿಯಲ್ಲಿ ಮತದಾರರು ವಾಸ ಇಲ್ಲವೋ ಅಂತವರನ್ನ ಆಬ್ಸೆಂಟ್,ಶಿಫ್ಟೆಡ್ ಕಾಲಂನಲ್ಲಿ ಸೇರಿಸಿದ್ದೇವೆ. ಯಾರ್ದಾದ್ರೂ ಹೆಸರು ಬಿಟ್ಟೋಗಿದ್ರೆ ಅಂತವರು ಫಾರ್ಮ್ -6 ನಡಿ ಅರ್ಜಿ ಹಾಕುವಂತೆ ಮನವಿ ಮಾಡಿದ್ದಾರೆ.

ಹೊಸ ವಿಳಾಸದಿಂದ ಅರ್ಜಿ ಹಾಕಲು ಮನವಿ

ಮೊದಲ ಪಟ್ಟಿ ಪ್ರಕಟ ಆಗಸ್ಟ್ 24ಕ್ಕೆ ಪ್ರಕಟವಾಗುತ್ತೆ. ಹೊಸ ಮತದಾರರು ಕೂಡ ಆನ್ ಲೈನ್ ನಲ್ಲಿ ಫಾರ್ಮ್ -6ನಡಿ ಅರ್ಜಿ ಹಾಕಬಹುದು. ಈಗ ಅರ್ಜಿಆನ್ ಲೈನ್ ನಲ್ಲಿ ಹಾಕಲು ಅವಕಾಶ ಇದ್ದು, ಈ ಅರ್ಜಿಯನ್ನ ಆಗಸ್ಟ್ 24ರ ನಂತರ ಪರಿಗಣಿಸಲಾಗುತ್ತೆ. ಹೀಗಾಗಿ 1-10-2026ಗೆ ಯಾರಿಗೆಲ್ಲಾ 18 ವರ್ಷ ತುಂಬುತ್ತೋ ಅಂತವರು ಫಾರ್ಮ್ ನಡಿ ಅರ್ಜಿ ಹಾಕಬಹುದು ಎಂದು ತಿಳಿಸಿದ್ದಾರೆ.

Source link

ಇರಾನ್‌ನಿಂದ ಹತ್ಯೆ ಬೆದರಿಕೆ ಭೀತಿ: ವಿಮಾನ ಬದಲಿಸಿದ್ದನ್ನು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ – Kannada News | Donald Trump’s Hidden Plane Swap Due to Iran Threat; NATO Summit Security

ವಾಷಿಂಗ್ಟನ್, ಆ.12 : ಕಳೆದ ತಿಂಗಳು ಟರ್ಕಿಯಲ್ಲಿ ನಡೆದ ‘ನಾಟೋ’ (NATO) ಶೃಂಗಸಭೆ ಮುಗಿಸಿ ಹಿಂತಿರುಗುವಾಗ ತಾವು ರಹಸ್ಯವಾಗಿ ಮತ್ತೊಂದು ಸಣ್ಣ ಸೇನಾ ವಿಮಾನಕ್ಕೆ ಸ್ಥಳಾಂತರಗೊಂಡಿದ್ದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಧಿಕೃತವಾಗಿ ದೃಢಪಡಿಸಿದ್ದಾರೆ. ಸಿಪಾಯಿಗಳು ಮತ್ತು ಸೀಕ್ರೆಟ್ ಸರ್ವಿಸ್‌ನ (Secret Service) ಸಲಹೆಯಂತೆ ತಾವು ವಿಮಾನ ಬದಲಿಸಿದ್ದಾಗಿ ಅವರು ತಿಳಿಸಿದ್ದಾರೆ.

ಇರಾನ್‌ನಿಂದ ಎದುರಾಗಿದ್ದ ಸಂಭಾವ್ಯ ಹತ್ಯೆ ಯತ್ನದ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಈ ರಹಸ್ಯ ಕಾರ್ಯಾಚರಣೆ ನಡೆಸಿದ್ದವು ಎಂದು ‘ವಾಷಿಂಗ್ಟನ್ ಪೋಸ್ಟ್’ ಇತ್ತೀಚೆಗೆ ವರದಿ ಮಾಡಿತ್ತು. ವಿಮಾನ ಬದಲಾವಣೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, “ನಾನು ಸೀಕ್ರೆಟ್ ಸರ್ವಿಸ್ ಮತ್ತು ಅಮೆರಿಕನ್ ಮಿಲಿಟರಿ ಸೂಚನೆಗಳನ್ನು ಪಾಲಿಸುತ್ತೇನೆ. ಅವರು ನನ್ನನ್ನು ಬೇರೊಂದು ವಿಮಾನದಲ್ಲಿ ಕರೆದೊಯ್ಯಲು ಬಯಸಿದ್ದರು. ಅಲ್ಲಿ ಏನೋ ಬೆದರಿಕೆ ಇತ್ತು ಎಂದು ಅನಿಸುತ್ತದೆ. ನಾನು ಅದರ ಬಗ್ಗೆ ಹೆಚ್ಚು ಪ್ರಶ್ನೆ ಮಾಡಲಿಲ್ಲ, ಏಕೆಂದರೆ ನನಗೆ ಇಂತಹ ಸಾಕಷ್ಟು ಬೆದರಿಕೆಗಳು ಬರುತ್ತಿರುತ್ತವೆ.” ಎಂದು ಹೇಳಿದರು.

“ವಾಸ್ತವವಾಗಿ ನಾನು ಪ್ರಯಾಣಿಸಿದ ವಿಮಾನವೇ ಹೆಚ್ಚಿನ ಅಪಾಯದಲ್ಲಿತ್ತು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ದಾಳಿಕೋರರು ಆ ವಿಮಾನವನ್ನೇ ಗುರಿಯಾಗಿಸಿಕೊಳ್ಳುವ ಸಾಧ್ಯತೆ ಹೆಚ್ಚಿತ್ತು” ಎಂದು ಟ್ರಂಪ್ ಹೇಳಿದ್ದಾರೆ. ವಾಷಿಂಗ್ಟನ್ ಪೋಸ್ಟ್ ವರದಿ ಹಾಗೂ ವಾಲ್ ಸ್ಟ್ರೀಟ್ ಜರ್ನಲ್ ವರದಿಗಳ ಪ್ರಕಾರ ಟರ್ಕಿಯಲ್ಲಿ ಶೃಂಗಸಭೆ ಮುಗಿಸಿದ ನಂತರ ಟ್ರಂಪ್ ಕ್ಯಾಮೆರಾಗಳ ಕಣ್ಣೆದುರೇ ಹಳೆಯ ‘ಏರ್ ಫೋರ್ಸ್ ಒನ್’ ವಿಮಾನವನ್ನು ಏರಿದ್ದರು. ವಿಮಾನ ಏರಿದ ತಕ್ಷಣ, ವಿಮಾನ ನಿಲ್ದಾಣದ ಆಹಾರ ಸರಬರಾಜು ಮಾಡುವ ಕ್ಯಾಟರಿಂಗ್ ಟ್ರಕ್ ಮೂಲಕ ಅವರನ್ನು ರಹಸ್ಯವಾಗಿ ಮತ್ತೊಂದು ಸಣ್ಣ ‘C-32A’ ಸೇನಾ ವಿಮಾನಕ್ಕೆ ಸ್ಥಳಾಂತರಿಸಲಾಯಿತು.

ಇದನ್ನೂ ಓದಿ: ಇರಾನ್​ಗೆ ಹೆದರಿ ಕ್ಯಾಟರಿಂಗ್ ಟ್ರಕ್ ಹತ್ತಿದ ಟ್ರಂಪ್; ಟರ್ಕಿಯಿಂದ ರಹಸ್ಯವಾಗಿ ಎಸ್ಕೇಪ್ ಆಗಿದ್ದ ಅಮೆರಿಕ ಅಧ್ಯಕ್ಷ

ಮಾಧ್ಯಮ ಪ್ರತಿನಿಧಿಗಳು ಹಾಗೂ ವೈಟ್ ಹೌಸ್‌ನ ಕೆಲವು ಸಿಬ್ಬಂದಿ ಮೂಲ ಏರ್ ಫೋರ್ಸ್ ಒನ್‌ನಲ್ಲೇ ಪ್ರಯಾಣಿಸಿದರು. ಟ್ರಂಪ್ ತಮ್ಮೊಂದಿಗಿದ್ದಾರೆ ಎಂದೇ ಅವರು ಭಾವಿಸಿದ್ದರು.ಇರಾನ್‌ನ ಬೆಂಬಲಿತ ಪಡೆಗಳು ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನದ ಮೇಲೆ ಕ್ಷಿಪಣಿ ದಾಳಿ ನಡೆಸಲು ಸಂಚು ರೂಪಿಸಿವೆ ಎಂದು ಇಸ್ರೇಲಿ ಗೂಢಚಾರಿ ಸಂಸ್ಥೆಗಳು ನೀಡಿದ ಮುನ್ಸೂಚನೆಯ ಆಧಾರದ ಮೇಲೆ ಈ ತುರ್ತು ಕ್ರಮ ಕೈಗೊಳ್ಳಲಾಗಿತ್ತು.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವೃತ್ತಿಜೀವನದ 2ನೇ ಇನ್ನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ – Kannada News | Ajinkya Rahane’s New Role: Commentary Debut for India Sri Lanka Test Series

ಟೀಂ ಇಂಡಿಯಾ ಕ್ರಿಕೆಟಿಗ ಅಜಿಂಕ್ಯ ರಹಾನೆ ಕೆಲವೇ ದಿನಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದರೊಂದಿಗೆ ಭಾರತ ಕ್ರಿಕೆಟ್​ನಲ್ಲಿ ಅವರ 18 ವರ್ಷಗಳ ಪ್ರಯಾಣ ಅಂತ್ಯವಾಗಿತ್ತು. ನಿವೃತ್ತಿಯ ಬಳಿಕ ರಹಾನೆ ವಿದೇಶಿ ಟಿ20 ಲೀಗ್​ಗಳಲ್ಲಿ ಆಡಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇದೀಗ ರಹಾನೆ ತಮ್ಮ ವೃತ್ತಿಜೀವನದ ಎರಡನೇ ಇನ್ನಿಂಗ್ಸ್ ಅನ್ನು ವೀಕ್ಷಕ ವಿವರಣೆಗಾರನಾಗಿ ಆರಂಭಿಸಲು ಸಜ್ಜಾಗಿದ್ದಾರೆ(PC-IPL).

1 / 5

ಆಗಸ್ಟ್ 15 ರಿಂದ 27 ರವರೆಗೆ ನಡೆಯಲಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ರಹಾನೆ ಮೊದಲ ಬಾರಿಗೆ ಕಾಮೆಂಟರಿ ಮಾಡಲಿದ್ದಾರೆ. ತಾನು ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಳ್ಳುವುದನ್ನು ಸ್ವತಃ ಅಜಿಂಕ್ಯ ರಹಾನೆ ಅವರೇ ಖಚಿತಪಡಿಸಿದ್ದಾರೆ(PC-BCCI).

2 / 5

ರಹಾನೆ ನೀಡಿದ ಹೇಳಿಕೆಯಲ್ಲಿ, ‘ಭಾರತದ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಸೋನಿ ಲಿವ್‌ನೊಂದಿಗೆ ನನ್ನ ಟೆಸ್ಟ್ ಕಾಮೆಂಟರಿಯ ಚೊಚ್ಚಲ ಪ್ರವೇಶ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಟೆಸ್ಟ್ ಕ್ರಿಕೆಟ್ ನಮ್ಮ ಆಟದ ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ಸ್ವರೂಪವಾಗಿದೆ. ಹಲವು ವರ್ಷಗಳ ಕಾಲ ಈ ಸ್ವರೂಪದಲ್ಲಿ ಭಾರತವನ್ನು ಪ್ರತಿನಿಧಿಸಿದ ನಂತರ, ಆಟವನ್ನು ವಿಭಿನ್ನ ದೃಷ್ಟಿಕೋನದಿಂದ ವೀಕ್ಷಿಸಲು ಮತ್ತು ವಿವರಿಸಲು ಈಗ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ’(PC-BCCI).

3 / 5

‘ನನ್ನ ಅನುಭವಗಳನ್ನು ಹಂಚಿಕೊಳ್ಳಲು, ಆಟದ ಸೂಕ್ಷ್ಮ ವ್ಯತ್ಯಾಸಗಳನ್ನು ಸರಳ ರೀತಿಯಲ್ಲಿ ವಿವರಿಸಲು ಮತ್ತು ಟೆಸ್ಟ್ ಪಂದ್ಯಗಳಲ್ಲಿನ ಪ್ರಮುಖ ನಿರ್ಧಾರಗಳು, ತಂತ್ರಗಳು ಮತ್ತು ಕ್ಷಣಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸಲು ನಾನು ಉತ್ಸುಕನಾಗಿದ್ದೇನೆ. ಅಭಿಮಾನಿಗಳಿಗೆ ವೀಕ್ಷಣಾ ಅನುಭವವನ್ನು ಹೆಚ್ಚಿಸಲು ಮತ್ತು ಮೈದಾನದಲ್ಲಿ ಏನಾಗುತ್ತದೆ ಎಂಬುದನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ನಾನು ಶ್ರಮಿಸುತ್ತೇನೆ’ ಎಂದಿದ್ದಾರೆ(PC-IPL).

4 / 5

ಇನ್ನು ಅಜಿಂಕ್ಯ ರಹಾನೆ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. 37 ವರ್ಷದ ಅಜಿಂಕ್ಯ ರಹಾನೆ ಭಾರತದ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 12 ಶತಕಗಳು ಮತ್ತು 26 ಅರ್ಧಶತಕಗಳು ಸೇರಿದಂತೆ 38.46 ಸರಾಸರಿಯಲ್ಲಿ 5,077 ರನ್ ಗಳಿಸಿದ್ದಾರೆ. ಹಾಗೆಯೇ ರಹಾನೆ ನಾಯಕತ್ವದಲ್ಲಿ, ಭಾರತ 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು. ಇದು ಒಂದು ಐತಿಹಾಸಿಕ ಸಾಧನೆಯಾಗಿತ್ತು(PC-BCCI).

5 / 5

Published On – 4:21 pm, Wed, 12 August 26

Source link

‘ಗೆಳತಿ ಗಾಯತ್ರಿ’ ಧಾರಾವಾಹಿಯಲ್ಲಿ ವೈಷ್ಣವಿ ಗೌಡ, ಕೃತಿಕಾ, ನಾಗಾರ್ಜುನ – Kannada News | Gelathi Gayathri serial Vaishnavi Gowda Kritika Nagarjuna in Sun Udaya Tv

ಈಗಾಗಲೇ ಕೆಲವು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಮೂಲಕ ಅಭಿಮಾನಿಗಳ ಮನಗೆದ್ದ ನಟಿ ವೈಷ್ಣವಿ ಗೌಡ ಅವರು ಈಗ ಹೊಸ ಸೀರಿಯಲ್ ಒಪ್ಪಿಕೊಂಡಿದ್ದಾರೆ. ‘ಗೆಳತಿ ಗಾಯತ್ರಿ’ (Gelathi Gayathri) ಎಂಬುದು ಈ ಸೀರಿಯಲ್ ಶೀರ್ಷಿಕೆ. ವೈವಿಧ್ಯಮಯ ಕಥಾಹಂದರಗಳ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ‘ಸನ್ ಉದಯ’ (Sun Udaya) ವಾಹಿನಿ ಇತ್ತೀಚೆಗಷ್ಟೇ ‘ಭಾಗ್ಯವಂತರು’ ಧಾರಾವಾಹಿ ಯಶಸ್ಸಿನ ಬಳಿಕ ಈ ಧಾರಾವಾಹಿಯನ್ನು ಪ್ರೇಕ್ಷಕರ ಎದುರು ತರುತ್ತಿದೆ. ‘ಗೆಳತಿ ಗಾಯತ್ರಿ’ ಸೀರಿಯಲ್ ಕಥೆ ಭಿನ್ನವಾಗಿದೆ ಎಂದು ವಾಹಿನಿ ಹೇಳಿದೆ. ವೈಷ್ಣವಿ ಗೌಡ (Vaishnavi Gowda) ಜೊತೆ ಕೃತಿಕಾ ಮತ್ತು ನಾಗಾರ್ಜುನ ಅವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ.

ಸ್ನೇಹದ ನಿಜವಾದ ಅರ್ಥ ಏನು ಎಂಬುದನ್ನು ‘ಗೆಳತಿ ಗಾಯತ್ರಿ’ ಸೀರಿಯಲ್ ತೋರಿಸಲಿದೆ. ಗೆಳೆತನದ ಬಾಂಧವ್ಯ ಮತ್ತು ಅದರ ಮಹತ್ವವನ್ನು ಹೃದಯಸ್ಪರ್ಶಿಯಾಗಿ ಬಿಂಬಿಸುವ ಈ ಧಾರಾವಾಹಿ ಆಗಸ್ಟ್ 17ರಿಂದ ಸೋಮವಾರದಿಂದ ಶನಿವಾರ ಸಂಜೆ 7ಕ್ಕೆ ಪ್ರಸಾರವಾಗಲಿದೆ. ಧಾರಾವಾಹಿಯ ಶೀರ್ಷಿಕೆಯೇ ಸೂಚಿಸುವಂತೆ ಇದು ಇಬ್ಬರು ಆತ್ಮೀಯ ಗೆಳತಿಯರ ಭಾವನಾತ್ಮಕ ಪಯಣದ ಕಥೆ ಆಗಿರಲಿದೆ.

‘ಗೆಳತಿ ಗಾಯತ್ರಿ’ ಸೀರಿಯಲ್ ಕಥೆ:

ಬಾಲ್ಯದಲ್ಲಿ ಪಾರ್ವತಿಗೆ ಸಿಕ್ಕ ಮೊದಲ ಸ್ನೇಹಿತೆಯೇ ಗಾಯತ್ರಿ. ಕೈತುತ್ತಿನಿಂದ ಕನವರಿಕೆಯವರೆಗೆ ಜೊತೆಗೆ ಆಡಿ ನಲಿದ ಈ ಸ್ನೇಹಿತೆಯರು ಕಾಲ ಸರಿದಂತೆ ಕಾರಣಾಂತರದಿಂದ ದೂರವಾಗುತ್ತಾರೆ. ಪಾರ್ವತಿಗೆ ಗಾಯತ್ರಿ ನೆನಪು ಆಗಾಗ ಕಾಡುತ್ತದೆ. ಶ್ರೀಮಂತ ಕುಟುಂಬದಲ್ಲಿ ಸುಖಸಂಸಾರ ನಡೆಸುತ್ತಿರುವ ಪಾರ್ವತಿಗೆ ಪ್ರೀತಿಯ ಪತಿ, ಮುದ್ದಾದ ಮಗಳು ಎಲ್ಲವೂ ಇದ್ದರೂ, ಗಾಯತ್ರಿಯನ್ನು ಕಾಣುವ ಹಂಬಲ ಕಡಿಮೆ ಆಗುವುದೇ ಇಲ್ಲ.

ಬಾಲ್ಯದಲ್ಲಿ ಕಣ್ಣಾಮುಚ್ಚಾಲೆ ಆಡಿದ ಗೆಳತಿಯನ್ನು ಹುಡುಕಲು ಒದ್ದಾಡುತ್ತಿರುವ ಪಾರ್ವತಿಯ ಒದ್ದಾಟಕ್ಕೆ ಉತ್ತರವಾಗಿ ಗಾಯತ್ರಿ ವಾಪಸ್ಸು ಬರುತ್ತಾಳಾ? ತನ್ನ ಗೆಳತಿ ತನಗೆ ಮತ್ತೆ ಸಿಗ್ತಾಳೆ ಎಂಬ ಪಾರ್ವತಿಯ ನಂಬಿಕೆ ಕೊನೆಗೂ ಫಲ ನೀಡುತ್ತಾ? ವರ್ಷಗಳ ಬಳಿಕ ಈ ಇಬ್ಬರು ಗೆಳತಿಯರು ಮತ್ತೆ ಒಂದಾಗುತ್ತಾರಾ? ಅವರ ಅನನ್ಯ ಸ್ನೇಹಕ್ಕೆ ವಿಧಿ ಯಾವ ಹೊಸ ತಿರುವು ನೀಡಲಿದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ‘ಗೆಳತಿ ಗಾಯತ್ರಿ’ ಸಂಚಿಕೆಗಳು ಮೂಡಿಬರಲಿವೆ.

ಇದನ್ನೂ ಓದಿ: ಗೆಳತಿ ಗಾಯತ್ರಿ; ಧಾರಾವಾಹಿ ಮೂಲಕ ವೈಷ್ಣವಿ ಗೌಡ ಕಂಬ್ಯಾಕ್; ಪ್ರೋಮೋ ರಿಲೀಸ್

ಯಾವ ಪಾತ್ರ ಯಾರಿಗೆ?

ಈ ಧಾರಾವಾಹಿಯಲ್ಲಿ ಪಾರ್ವತಿಯಾಗಿ ವೈಷ್ಣವಿ ಗೌಡ ಅಭಿನಯಿಸುತ್ತಿದ್ದಾರೆ. ಗಾಯತ್ರಿಯಾಗಿ ಕೃತಿಕಾ ನಟಿಸುತ್ತಿದ್ದಾರೆ. ನಾಗಾರ್ಜುನ ಅವರು ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಪದ್ಮಿನಿ ಮತ್ತು ರಾಘು ಅವರು ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ಶ್ರೀ ಜೈ ಮಾತಾ ಕಂಬೈನ್ಸ್’ ಮೂಲಕ ಜೆ. ಜಯಮ್ಮ, ಮಿಲನ ಪ್ರಕಾಶ್‌ ಮತ್ತು ತಶ್ವಿನಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಯಶವಂತ ಪಾಂಡು ನಿರ್ದೇಶನ, ಅನಂತ ಗೌಡ ಅವರ ಛಾಯಾಗ್ರಹಣ, ವಿಕಾಸ ನೇಗಿಲೋಣಿ ಅವರ ಚಿತ್ರಕಥೆ, ಅಭಿಜ್ಞಾ ಅವರ ಸಂಭಾಷಣೆಯಲ್ಲಿ ಈ ಧಾರಾವಾಹಿ ಮೂಡಿಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅನುದಾನ ದುರುಪಯೋಗ, ಲೈಂಗಿಕ ದೌರ್ಜನ್ಯ ಆರೋಪ: ಮೈಸೂರು ವಿವಿ ಕುಲಸಚಿವರ ಹುದ್ದೆಗೆ ಪ್ರೊ ಬಿಕೆ ಕೆಂಪೇಗೌಡ ನೇಮಕಕ್ಕೆ ವಿರೋಧ – Kannada News | Chalavadi Narayanaswamy Seeks Cancellation of B.K. Kempegowda’s Appointment as Mysuru University Registrar

ಮೈಸೂರು ವಿವಿ, ಛಲವಾದಿ ನಾರಾಯಣಸ್ವಾಮಿImage Credit source: tv9 kannada

ಬೆಂಗಳೂರು, ಆಗಸ್ಟ್​​ 12: ಮೈಸೂರು ವಿಶ್ವವಿದ್ಯಾನಿಲಯದ (Mysuru University) ಮೌಲ್ಯಮಾಪನ ಕುಲಸಚಿವರಾಗಿ ಪ್ರೊ ಬಿಕೆ ಕೆಂಪೇಗೌಡ ನೇಮಕ ಮಾಡಲಾಗಿದೆ. ಆದರೆ ನಿಯಮ ಬಾಹಿರವಾಗಿ ಮಾಡಿರುವ ನೇಮಕಾತಿಯನ್ನು ತಕ್ಷಣವೇ ರದ್ದುಗೊಳಿಸುವಂತೆ ಕೋರಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಛಲವಾದಿ ಬರೆದ ಪತ್ರದಲ್ಲಿ ಏನಿದೆ?

‘ಮೈಸೂರು ವಿವಿ ರಾಜ್ಯದ ಪ್ರತಿಷ್ಠಿತ ಹಾಗೂ ಐತಿಹಾಸಿಕ ಉನ್ನತ ಶಿಕ್ಷಣ ಸಂಸ್ಥೆಯಾಗಿದ್ದು, ಅದರ ಆಡಳಿತಾತ್ಮಕ ಹುದ್ದೆಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಅಧಿನಿಯಮ ಹಾಗೂ ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಂತ ಅಗತ್ಯವಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: ಹೈಸ್ಕೂಲ್, ಪಿಯುಸಿ ಮಕ್ಕಳಿಗೆ ಸಿಗಲಿದೆ ಮೆಂಟಲ್ ಹೆಲ್ತ್ ಸಪೋರ್ಟ್!

‘ಮೈಸೂರು ವಿವಿ ಮೌಲ್ಯಮಾಪನ ಕುಲಸಚಿವ ಹುದ್ದೆಗೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ವಿವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಅಥವಾ ವ್ಯಾಸಂಗ ವಿಭಾಗದ ಹಿರಿಯ ಸದಸ್ಯರನ್ನು ಪರಿಗಣಿಸಿ ನೇಮಕ ಮಾಡಬೇಕೆಂಬ ನಿಯಮವಿದೆ. ಕಾಲೇಜು ಶಿಕ್ಷಣ ಇಲಾಖೆ ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರನ್ನು ಈ ಹುದ್ದೆಗೆ ನೇಮಕ ಮಾಡಲು ಅವಕಾಶವಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ, ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​​ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊ. ಕೆಂಪೇಗೌಡ ಬಿಕೆರನ್ನು ಮೈಸೂರು ವಿವಿ ಮೌಲ್ಯಮಾಪನ ಕುಲಸಚಿವರ ಹುದ್ದೆಗೆ ನೇಮಕ ಮಾಡಿರುವುದು ಮೇಲ್ಕಂಡ ನಿಯಮಗಳು ಹಾಗೂ ವಿಶ್ವವಿದ್ಯಾನಿಲಯ ಅಧಿನಿಯಮದ ಆಶಯಕ್ಕೆ ವಿರುದ್ಧವಾಗಿರುವ ಸಾಧ್ಯತೆ ಕಂಡುಬರುತ್ತಿದೆ. ಆದ್ದರಿಂದ ಈ ನೇಮಕಾತಿಯ ಕಾನೂನು ಬದ್ಧತೆಯನ್ನು ಸರ್ಕಾರ ತಕ್ಷಣ ಪರಿಶೀಲಿಸುವ ಅಗತ್ಯವಿದೆ’ ಎಂದು ಹೇಳಿದ್ದಾರೆ.

ಪ್ರೊ.ಕೆಂಪೇಗೌಡ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ 

‘ಪ್ರೊ. ಕೆಂಪೇಗೌಡ ಬಿ.ಕೆ ವಿರುದ್ಧ ಈ ಹಿಂದೆ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳು ಬೆಳಕಿಗೆ ಬಂದಿರುವ ಕುರಿತು ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರದ ಶಾಸಕರು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಸಭೆ ನಡೆಸಿ, ಕೆಲವು ನಿರ್ದೇಶನಗಳ ಆಧಾರದ ಮೇಲೆ ಅವರನ್ನು ಪ್ರಾಂಶುಪಾಲರ ಹುದ್ದೆಯಿಂದ ಬದಲಾವಣೆ ಅಥವಾ ನಿಯುಕ್ತಿಗೊಳಿಸಿರುವುದಾಗಿ ತಿಳಿದುಬಂದಿದೆ. ನಂತರ ಅವರು ಅನಾರೋಗ್ಯದ ಕಾರಣ ನೀಡಿ ಕರ್ತವ್ಯಕ್ಕೆ ಗೈರುಹಾಜರಾಗಿರುವ ಕುರಿತು ಸಹ ಮಾಹಿತಿ ಲಭ್ಯವಾಗಿದೆ’.

ಸೂಕ್ತ ಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ 

‘ಈ ಆರೋಪಗಳ ಸತ್ಯಾಸತ್ಯತೆ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕಾಗಿದೆ. ಅದೇ ರೀತಿ, ಅವರು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದ, ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ಮೀಸಲಾದ ವಿಶೇಷ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪಗಳು ಸಹ ಕೇಳಿಬಂದಿದ್ದು, ಈ ಕುರಿತು ಪರಿಶೀಲನೆ ನಡೆಸಿ, ಆರೋಪಗಳು ಸತ್ಯವೆಂದು ಕಂಡುಬಂದಲ್ಲಿ ಸಂಬಂಧಪಟ್ಟ ಕಾನೂನುಗಳಡಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: ಹಾಸನ ಜಿಲ್ಲೆಗೆ ಬಂತು ವಂದೇ ಭಾರತ್ ಎಕ್ಸ್‌ಪ್ರೆಸ್: ಶಿರಾಡಿಘಾಟ್ ಮಾರ್ಗದಲ್ಲಿ ಯಶಸ್ವಿ ಪ್ರಾಯೋಗಿಕ ಸಂಚಾರ

‘ಈ ರೀತಿಯ ಗಂಭೀರ ಆರೋಪಗಳು ಹಾಗೂ ನೇಮಕಾತಿಯ ನಿಯಮಬದ್ಧತೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ ಅವರನ್ನು ಮೈಸೂರು ವಿವಿ ಪ್ರಮುಖ ಆಡಳಿತಾತ್ಮಕ ಹುದ್ದೆಗೆ ನೇಮಕ ಮಾಡಿರುವುದು ಸಾರ್ವಜನಿಕರಲ್ಲಿ ಸಹಜವಾಗಿಯೇ ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿವಿ ಆಡಳಿತದಲ್ಲಿ ಅರ್ಹತೆ, ಅನುಭವ, ನಿಯಮಬದ್ಧತೆ, ಪಾರದರ್ಶಕತೆ ಮತ್ತು ನೈತಿಕತೆಗಳಿಗೆ ಆದ್ಯತೆ ನೀಡಬೇಕಾದ ಸಂದರ್ಭದಲ್ಲಿ, ನಿಯಮಗಳನ್ನು ಕಡೆಗಣಿಸಿ ಯಾವುದೇ ನೇಮಕಾತಿ ಮಾಡುವುದು ಉನ್ನತ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡಬಹುದು’ ಎಂದು ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version