ಏರ್‌ಪೋರ್ಟ್ ಪ್ರಯಾಣಿಕರೇ ಎಚ್ಚರ: ಬೆಂಗಳೂರಿನಲ್ಲಿ ರೈಡರ್‌ಗಳ ವಂಚಿಸಲು ನಕಲಿ ಕ್ಯಾಬ್ ಆ್ಯಪ್ ಬಳಸ್ತಿದ್ದಾರೆ ಚಾಲಕರು! – Kannada News | Bengaluru Airport Cab Scam: Drivers Using Fake Cloned Apps of Uber and Rapido to Inflate Fares Warning Issued

ಬೆಂಗಳೂರು, ಜೂನ್ 20: ಬೆಂಗಳೂರಿನ (Bengaluru) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಆವರಣದಲ್ಲಿ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಹೊಸ ಮಾದರಿಯ ವಂಚನೆ ಜಾಲವೊಂದು ಸಕ್ರಿಯವಾಗಿರುವುದಾಗಿ ವರದಿಯಾಗಿದೆ. ಓಲಾ, ಉಬರ್ ಮತ್ತು ರ‍್ಯಾಪಿಡೋ ನಂತಹ ಪ್ರಮುಖ ರೈಡ್ ಬುಕಿಂಗ್ ಆ್ಯಪ್‌ಗಳ ರೀತಿಯೇ ಕಾಣುವ ನಕಲಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ಕೆಲವು ಚಾಲಕರು ಬಳಸುತ್ತಿದ್ದು, ಪ್ರಯಾಣದ ಕೊನೆಯಲ್ಲಿ ಗ್ರಾಹಕರಿಗೆ ದುಪ್ಪಟ್ಟು ದರದ ಬಿಲ್ ತೋರಿಸಿ ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮುಖ್ಯಾಂಶಗಳು

  • ನಕಲಿ ಆ್ಯಪ್ ಬಳಸಿ ದುಪ್ಪಟ್ಟು ದರ ವಸೂಲಿ.
  • ಏರ್‌ಪೋರ್ಟ್ ಪ್ರಯಾಣಿಕರೇ ವಂಚಕರ ಮುಖ್ಯ ಟಾರ್ಗೆಟ್.
  • ರ‍್ಯಾಪಿಡೋ ಹಾಗೂ ಉಬರ್ ಸಂಸ್ಥೆಗಳಿಂದ ತನಿಖೆ.

400 ರಿಂದ 700 ರೂ.ವರೆಗೆ ಹೆಚ್ಚುವರಿ ವಸೂಲಿ

ಇತ್ತೀಚೆಗೆ ವಿಮಾನ ನಿಲ್ದಾಣದಿಂದ ಮಲ್ಲೇಶ್ವರಂಗೆ ರ‍್ಯಾಪಿಡೋ ಮೂಲಕ ಪ್ರಯಾಣಿಸಿದ ಪ್ರತೀಕ್ ಎನ್ (38) ಎಂಬ ಪ್ರಯಾಣಿಕರು ಈ ವಂಚನೆಗೆ ಒಳಗಾಗಿದ್ದಾರೆ. ಅವರ ಆ್ಯಪ್‌ನಲ್ಲಿ 720 ರೂ. ದರ ತೋರಿಸಿದ್ದರೆ, ಚಾಲಕನ ಫೋನ್‌ನಲ್ಲಿದ್ದ ನಕಲಿ ಆ್ಯಪ್‌ನಲ್ಲಿ ಬರೋಬ್ಬರಿ 1,110 ರೂ. ಬಿಲ್ ತೋರಿಸಿತ್ತು. ವಿಮಾನ ನಿಲ್ದಾಣದ ಪಾರ್ಕಿಂಗ್ ಶುಲ್ಕ ಹೆಚ್ಚಳ ಹಾಗೂ ಟ್ರಾಫಿಕ್ ನೆಪ ಒಡ್ಡಿ ಚಾಲಕ ಹೆಚ್ಚುವರಿ ಹಣ ವಸೂಲಿ ಮಾಡಿದ್ದಾಗಿ ಪ್ರತೀಕ್ ದೂರಿದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ವರದಿ ಮಾಡಿದೆ.

ಇದೇ ರೀತಿ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಉಬರ್ ಕ್ಯಾಬ್ ಬುಕ್ ಮಾಡಿದ್ದ ಮತ್ತೊಬ್ಬ ಪ್ರಯಾಣಿಕನಿಗೆ 1,330 ರೂ. ಬದಲಾಗಿ 2,000 ರೂಪಾಯಿಗೂ ಅಧಿಕ ದರ ತೋರಿಸಿ ವಂಚಿಸಲು ಯತ್ನಿಸಲಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.

ವಂಚನೆ ಜಾಲದ ಅಸಲಿ ತಂತ್ರ ಏನು?

ಈ ನಕಲಿ ಆ್ಯಪ್ ದೋಖಾ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ ಜಿ. ನಾರಾಯಣಸ್ವಾಮಿ ಬಿಚ್ಚಿಟ್ಟಿದ್ದಾರೆ. ಚಾಲಕರು ಮೊದಲು ಸಾಮಾನ್ಯ ಆ್ಯಪ್‌ನಲ್ಲಿ ರೈಡ್ ಬುಕ್ ಮಾಡಿಕೊಂಡು, ಗ್ರಾಹಕರಿಂದ ಒಟಿಪಿ (OTP) ಪಡೆದು ರೈಡ್ ಸ್ಟಾರ್ಟ್ ಮಾಡುತ್ತಾರೆ. ಇದೇ ವೇಳೆ ತಮ್ಮ ಫೋನ್‌ನಲ್ಲಿರುವ ಮತ್ತೊಂದು ನಕಲಿ ಆ್ಯಪ್ ಅನ್ನೂ ರನ್ ಮಾಡುತ್ತಾರೆ. ಈ ನಕಲಿ ಆ್ಯಪ್‌ಗಳ ವಿನ್ಯಾಸ ತದ್ರೂಪು ಉಬರ್ ಅಥವಾ ರ‍್ಯಾಪಿಡೋದಂತೆಯೇ ಇರುತ್ತದೆ. ಇನ್ನು ಕೆಲವರು ಮೊದಲೇ ಎಡಿಟ್ ಮಾಡಿಟ್ಟುಕೊಂಡ ಹೆಚ್ಚಿನ ದರದ ನಕಲಿ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ ಜನರನ್ನು ನಂಬಿಸುತ್ತಾರೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಯೂನಿಯನ್ ವತಿಯಿಂದ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದೂ ತಿಳಿಸಿದ್ದಾರೆ.

ಅನುಮಾನ ಬಂದರೆ ಪ್ರಯಾಣಿಕರು ಏನು ಮಾಡಬೇಕು?

ಈ ಕುರಿತು ಪ್ರತಿಕ್ರಿಯಿಸಿರುವ ರ‍್ಯಾಪಿಡೋ ವಕ್ತಾರರು, ಇಂತಹ ದೂರುಗಳು ಕೇವಲ ವಿಮಾನ ನಿಲ್ದಾಣಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದಿದ್ದಾರೆ. ದೂರು ಬಂದ ತಕ್ಷಣ ತನಿಖೆ ನಡೆಸಿ ಗ್ರಾಹಕರಿಗೆ ಹಣ ಮರುಪಾವತಿ ಮಾಡಲಾಗುತ್ತಿದ್ದು, ವಂಚಕ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಗ್ರಾಹಕರು ತಮ್ಮದೇ ಮೊಬೈಲ್ ಸ್ಕ್ರೀನ್ ಮೇಲೆ ಕಾಣಿಸುವ ದರವನ್ನು ಮಾತ್ರ ಪಾವತಿಸಬೇಕು ಎಂದು ಮನವಿ ಮಾಡಿದ್ದಾರೆ. ಉಬರ್ ಸಂಸ್ಥೆಯು ಸಹ ಪ್ರಯಾಣಿಕರು ಇಂತಹ ದರ ವ್ಯತ್ಯಾಸಗಳು ಕಂಡುಬಂದಲ್ಲಿ ತಕ್ಷಣವೇ ಅಪ್ಲಿಕೇಶನ್‌ನಲ್ಲಿರುವ 24×7 ಹೆಲ್ಪ್‌ಲೈನ್ ಮೂಲಕ ಕೇವಲ 30 ಸೆಕೆಂಡುಗಳಲ್ಲಿ ನೆರವು ಪಡೆಯಬಹುದು ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಮಹಿಳೆಯರೇ, ಇನ್ಮುಂದೆ ಉಚಿತವಾಗಿ ಬಸ್ಸಲ್ಲಿ ಹೋಗ್ಬೇಕಿದ್ರೆ ವೋಟರ್ ಐಡಿ ಬೇಕೇಬೇಕು! ಶಕ್ತಿ ಯೋಜನೆ ದುರ್ಬಳಕೆ ತಡೆಗೆ ಸರ್ಕಾರ ಕ್ರಮ

ವಿಮಾನ ನಿಲ್ದಾಣದ ಆಪರೇಟರ್ (BIAL) ಸಂಸ್ಥೆಯು ಸಾರ್ವಜನಿಕರು ಕೇವಲ ಅಧಿಕೃತ 8 ಕ್ಯಾಬ್ ಪಾಲುದಾರರ ಸೇವೆಗಳನ್ನು ಮಾತ್ರ ಬಳಸುವಂತೆ ಕೋರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಸಾಮುದ್ರಿಕ ಶಾಸ್ತ್ರ; ಮೂಗಿನ ಆಕಾರದ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ತಿಳಿಯಿರಿ – Kannada News | Unlocking Destiny: What Your Nose Shape Reveals About Your Personality and Future

ಪ್ರಾಚೀನ ಜ್ಯೋತಿಷ್ಯ ಶಾಸ್ತ್ರ ಮತ್ತು ಸಾಮುದ್ರಿಕ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಮೂಗಿನ ಆಕಾರವನ್ನು ಸೂಕ್ಷ್ಮವಾಗಿ ಗಮನಿಸುವುದರ ಮೂಲಕ ಅವರ ಗುಣಗಳು, ಸಾಮರ್ಥ್ಯಗಳು ಮತ್ತು ಭವಿಷ್ಯದ ಕುರಿತು ತಿಳಿದುಕೊಳ್ಳಬಹುದು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಮೂಗಿನ ಆಕಾರದ ಮೂಲಕ ವ್ಯಕ್ತಿತ್ವ ವಿಶ್ಲೇಷಣೆಯು ಅದೆಷ್ಟೋ ಶತಮಾನಗಳಿಂದಲೂ ರೂಢಿಯಲ್ಲಿದೆ. ನಮ್ಮ ಹಸ್ತ ರೇಖೆಗಳು ಬದಲಾಗುವಂತೆ, ಮೂಗಿನ ಆಕಾರವು ಬದಲಾಗುವುದಿಲ್ಲ. ಇದು ವ್ಯಕ್ತಿಯ ಮೂಲ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಪ್ರಾಚೀನ ಸಾಮುದ್ರಿಕ ಶಾಸ್ತ್ರವು ಮೂಗಿನ ವಿನ್ಯಾಸವು ವ್ಯಕ್ತಿಯ ಅಸಲಿ ಸ್ವಭಾವ ಮತ್ತು ಭವಿಷ್ಯದ ರಹಸ್ಯಗಳನ್ನು ಹೇಳುತ್ತದೆ ಎಂದು ಪ್ರತಿಪಾದಿಸುತ್ತದೆ. ಪ್ರತಿಯೊಬ್ಬರ ಮೂಗು ಸಹ ಒಂದೊಂದು ವಿಶೇಷವಾದ ಆಕೃತಿಯನ್ನು ಹೊಂದಿರುತ್ತದೆ. ಹಾಗೆಯೇ ಪ್ರತಿಯೊಬ್ಬರೂ ವಿಶೇಷವಾದ ಶಕ್ತಿಗಳನ್ನು ಸಹ ಹೊಂದಿರುತ್ತಾರೆ. ಈ ಶಕ್ತಿಗಳು ಮತ್ತು ಮೂಗಿನ ಆಕಾರದ ನಡುವೆ ಒಂದು ಪೂರಕ ಸಂಬಂಧವಿದೆ.

ಮಹಾಪುರುಷರ ಉದಾಹರಣೆಗಳನ್ನು ಗಮನಿಸಿದರೆ ಈ ವಿಷಯ ಇನ್ನಷ್ಟು ಸ್ಪಷ್ಟವಾಗುತ್ತದೆ. ಸರ್ ಎಂ. ವಿಶ್ವೇಶ್ವರಯ್ಯನವರ ನೀಳವಾದ, ಉದ್ದನೆಯ ಮೂಗು, ಅಗಲವಾದ ಕಿವಿಗಳು ಮತ್ತು ಶಂಖಾಕೃತಿಯ ತಲೆ, ಅವರು ನೂರ ಹತ್ತು ವರ್ಷಗಳ ಕಾಲ ಬದುಕಿ ಕೀರ್ತಿ ಪ್ರತಿಷ್ಠೆಗಳನ್ನು ಗಳಿಸಲು ಪೂರಕವಾಗಿತ್ತು. ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ಅರವಿಂದರು, ರಮಣ ಮಹರ್ಷಿಗಳು ಹೀಗೆ ಹಲವು ಮಹನೀಯರ ಮೂಗಿನ ಆಕಾರವು ಅವರ ವ್ಯಕ್ತಿತ್ವಕ್ಕೆ ಪೂರಕವಾಗಿರುವುದನ್ನು ನಾವು ಗಮನಿಸಬಹುದು.

ಜ್ಯೋತಿಷ್ಯ ಶಾಸ್ತ್ರವು ನಾಲ್ಕು ಪ್ರಮುಖ ರೀತಿಯ ಮೂಗಿನ ಆಕಾರಗಳನ್ನು ಗುರುತಿಸುತ್ತದೆ ಮತ್ತು ಅವುಗಳ ಗುಣಲಕ್ಷಣಗಳನ್ನು ವಿವರಿಸುತ್ತದೆ:

ನೇರ ಮತ್ತು ಚೂಪಾದ ಮೂಗು:

ಈ ರೀತಿಯ ಮೂಗನ್ನು ಹೊಂದಿರುವವರು ತೀಕ್ಷ್ಣ ಬುದ್ಧಿವಂತರಾಗಿರುತ್ತಾರೆ. ವಿಷಯಗಳನ್ನು ಬೇಗನೆ ಗ್ರಹಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಇವರು ಶಿಸ್ತುಬದ್ಧರು, ಕಠಿಣ ಪರಿಶ್ರಮಿಗಳು ಮತ್ತು ತಮ್ಮ ಕೆಲಸದಲ್ಲಿ ಬಹಳ ನಿಷ್ಠೆಯನ್ನು ಹೊಂದಿರುತ್ತಾರೆ. ನೇರವಾಗಿ ಮಾತನಾಡುತ್ತಾರೆ ಮತ್ತು ಯಾವುದೇ ವಿಷಯದಲ್ಲಿ ಸ್ಪಷ್ಟ ನಿಲುವು ಹೊಂದಿರುತ್ತಾರೆ.

ಗಿಳಿಯ ಮೂಗಿನಂತೆ ಬಾಗಿದ ಮೂಗು:

ಇಂಗ್ಲಿಷ್‌ನಲ್ಲಿ ಇದನ್ನು ಪ್ಯಾರೆಟ್ ನೋಸ್ ಎಂದು ಕರೆಯಲಾಗುತ್ತದೆ. ಈ ಆಕಾರದ ಮೂಗನ್ನು ಹೊಂದಿರುವವರು ಪ್ರಾಮಾಣಿಕರು, ನಿಷ್ಠೆ ಮತ್ತು ಶ್ರದ್ಧೆ ಇರುವವರು. ಕೆಲಸ ಕಾರ್ಯಗಳಲ್ಲಿ ಕ್ರಮಬದ್ಧತೆ ಇರುತ್ತದೆ. ಇವರು ಸ್ವಪ್ರಯತ್ನದಿಂದ ಕೀರ್ತಿ ಪ್ರತಿಷ್ಠೆಗಳನ್ನು ಗಳಿಸುತ್ತಾರೆ ಮತ್ತು ಯಾರ ಮುಲಾಜಿಗೂ ಒಳಗಾಗಲು ಬಯಸುವುದಿಲ್ಲ. ಅಲ್ಪ ತೃಪ್ತರಾಗಿದ್ದು, ಇರುವಷ್ಟರಲ್ಲಿಯೇ ಸಂತೃಪ್ತರಾಗಿರುತ್ತಾರೆ.

ಅಗಲವಾದ ಮೂಗು:

ದಪ್ಪ ಮತ್ತು ಅಗಲವಾದ ಮೂಗನ್ನು ಹೊಂದಿರುವವರು ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ಇವರಿಗೆ ಸಾಮಾಜಿಕ ಕಳಕಳಿ ಇರುತ್ತದೆ ಮತ್ತು ರಾಜಕೀಯದಲ್ಲಿ ಅಥವಾ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಸಾಧ್ಯತೆ ಇರುತ್ತದೆ. ಜವಾಬ್ದಾರಿಗಳನ್ನು ತೆಗೆದುಕೊಳ್ಳುವ, ಆಡಳಿತದ ಬಗ್ಗೆ ಗಮನವಿರುವ, ಯಾವಾಗಲೂ ಕಮಾಂಡಿಂಗ್ ಸ್ವಭಾವವನ್ನು ಪ್ರದರ್ಶಿಸುತ್ತಾರೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಚಿಕ್ಕ ಮತ್ತು ಚಪ್ಪಟೆಯಾದ ಮೂಗು:

ಈ ರೀತಿಯ ಮೂಗನ್ನು ಹೊಂದಿರುವವರು ಸಾಮಾನ್ಯವಾಗಿ ಭಾವಜೀವಿಗಳಾಗಿರುತ್ತಾರೆ. ಬಾಂಧವ್ಯಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಕುಟುಂಬ, ಸ್ನೇಹಿತರು ಮತ್ತು ಗ್ರಾಮದ ಬಗ್ಗೆ ಅತಿಯಾದ ಪ್ರೀತಿ ಹೊಂದಿರುತ್ತಾರೆ. ಅಮೆರಿಕಾದಂತಹ ದೂರದ ದೇಶಗಳಲ್ಲಿ ಅವಕಾಶ ಸಿಕ್ಕಿದರೂ, ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರನ್ನು ಬಿಟ್ಟು ಹೋಗಲು ಹಿಂಜರಿಯುತ್ತಾರೆ. ಇವರು ಹೆಚ್ಚು ಕೌಶಲ್ಯವಂತರು ಮತ್ತು ಅಪಾರ ಜ್ಞಾನವನ್ನು ಹೊಂದಿರುತ್ತಾರೆ.

ಮೂಗಿನ ಆಕಾರವು ಮಾನವನ ಜೀವನದ ಮೇಲೆ ಗಣನೀಯ ಪ್ರಭಾವ ಬೀರುತ್ತದೆ. ಕರ್ಮಫಲಗಳು ಒಂದು ಕಡೆಯಾದರೆ, ಈ ದೈಹಿಕ ಲಕ್ಷಣಗಳು ನಮ್ಮ ಅದೃಷ್ಟವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ವಿಷಯಗಳನ್ನು ತಿಳಿದುಕೊಳ್ಳುವುದರಿಂದ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಮತ್ತು ನಮ್ಮ ಸುತ್ತಮುತ್ತಲಿನವರನ್ನು ಗುರುತಿಸಲು ಸಹಕಾರಿಯಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಳಿಗಳ ಮೇಲೆ ಓಡೋ ಲಕ್ಸುರಿ ಹೋಟೆಲ್!: ವೈರಲ್ ಆಯ್ತು ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ‘ಫಸ್ಟ್ ಎಸಿ’ ಲುಕ್ – Kannada News | Star Hotel Luxury on Rails: Vande Bharat Sleeper First AC Interiors Revealed

ಬೆಂಗಳೂರು, ಜೂ.20: ಭಾರತೀಯ ರೈಲ್ವೆಯ ಪ್ರಯಾಣಿಕರಿಗೆ ಇನ್ಮುಂದೆ ರಾತ್ರಿ ಪ್ರಯಾಣದ ವೇಳೆ ಸ್ಟಾರ್ ಹೋಟೆಲ್‌ಗಳ ಅನುಭವ ಸಿಗಲಿದೆ. ಮುಂಬೈ ಮತ್ತು ಬೆಂಗಳೂರು ಐಟಿ ಹಬ್‌ಗಳನ್ನು ಸಂಪರ್ಕಿಸುವ ಮುಂಬರುವ ‘ವಂದೇ ಭಾರತ್ ಸ್ಲೀಪರ್’ ರೈಲಿನ ಮೊದಲ ದರ್ಜೆ ಎಸಿ (First AC) ಕೋಚ್‌ನ ಅತ್ಯಾಕರ್ಷಕ ಒಳಾಂಗಣ ವಿನ್ಯಾಸದ (Interiors) ವಿಡಿಯೋ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಾಂಪ್ರದಾಯಿಕ ರೈಲುಗಳ ಇಕ್ಕಟ್ಟಾದ ಬರ್ತ್‌ಗಳು ಹಾಗೂ ಸೌಲಭ್ಯ ರಹಿತ ಶೌಚಾಲಯಗಳ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸಿ, ವಿಶ್ವದರ್ಜೆಯ ವಿನ್ಯಾಸದೊಂದಿಗೆ ಈ ಕೋಚ್‌ಗಳನ್ನು ಸಿದ್ಧಪಡಿಸಲಾಗಿದೆ.

ಭಾರತೀಯ ಜನತಾ ಪಾರ್ಟಿ (BJP) ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ, ಭಾರತೀಯ ರೈಲ್ವೆಯ ಆಧುನಿಕ ಮುಖವನ್ನು ಪರಿಚಯಿಸಿದೆ. ವಂದೇ ಭಾರತ್ ಸ್ಲೀಪರ್‌ನ ಮೊದಲ ದರ್ಜೆ ಎಸಿ ವಿಭಾಗದಲ್ಲಿ ಪ್ರಯಾಣಿಕರ ಗೌಪ್ಯತೆ ಮತ್ತು ನೆಮ್ಮದಿಗೆ ಆದ್ಯತೆ ನೀಡಿ ‘ಪ್ರೈವೇಟ್ ಕ್ಯಾಬಿನ್’ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಲೈಟಿಂಗ್ ವ್ಯವಸ್ಥೆ, ಪ್ರೀಮಿಯಂ ಫಿನಿಶಿಂಗ್ ಮತ್ತು ವಿಶಾಲವಾದ ಜಾಗವನ್ನು ಹೊಂದಿರುವ ಈ ಕೋಚ್ ಸಂಪೂರ್ಣವಾಗಿ ಕಾರ್ಪೊರೇಟ್ ಲುಕ್ ಪಡೆದುಕೊಂಡಿದೆ. ಇದೇ ಕಾರಣಕ್ಕೆ ನೆಟ್ಟಿಗರು ಇದನ್ನು ಹಳಿಗಳ ಮೇಲೆ ಓಡೋ ಲಕ್ಸುರಿ ಹೋಟೆಲ್ ಎಂದು ಬಣ್ಣಿಸುತ್ತಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಈ ವಂದೇ ಭಾರತ್ ರೈಲುಗಳು ಕೇವಲ ಹಗಲು ಪ್ರಯಾಣದ ‘ಚೇರ್ ಕಾರ್’ ಸೌಲಭ್ಯ ಹೊಂದಿವೆ. ಆದರೆ ಹೊಸ ಸ್ಲೀಪರ್ ಆವೃತ್ತಿಯನ್ನು ದೂರದ ಪ್ರಯಾಣಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ. ಮುಂಬೈ ಮತ್ತು ಬೆಂಗಳೂರು ನಡುವೆ ನಿರಂತರವಾಗಿ ಉದ್ಯೋಗ, ವ್ಯಾಪಾರ ಹಾಗೂ ಪ್ರವಾಸಕ್ಕಾಗಿ ಓಡಾಡುವ ಜನರಿಗೆ ಈ ಹೈ-ಸ್ಪೀಡ್ ಸ್ಲೀಪರ್ ರೈಲು ಅತ್ಯಂತ ವೇಗದ ಮತ್ತು ಆರಾಮದಾಯಕ ಆಯ್ಕೆಯಾಗಲಿದೆ.

ಇದನ್ನೂ ಓದಿ; ನಮ್ಮ ಮೆಟ್ರೋ 3ನೇ ಹಂತದ ಯೋಜನೆ: 3,627 ಮರಗಳ ಹನನಕ್ಕೆ BMRCLನಿಂದ ಪ್ರಸ್ತಾವನೆ ಸಲ್ಲಿಕೆ

ಗಮನ ಸೆಳೆಯುವ ಪ್ರಮುಖ ಸೌಲಭ್ಯಗಳು:

ಪ್ರೀಮಿಯಂ ಸ್ಲೀಪಿಂಗ್ ಬರ್ತ್‌ಗಳು ಮತ್ತು ಸುಧಾರಿತ ಮೆಟ್ಟಿಲುಗಳ ವ್ಯವಸ್ಥೆ.

ಸೆನ್ಸಾರ್ ಆಧರಿತ ಮತ್ತು ಬಯೋ-ವ್ಯಾಕ್ಯೂಮ್ ತಂತ್ರಜ್ಞಾನದ ಪ್ರೀಮಿಯಂ ಶೌಚಾಲಯಗಳು.

ಡಿಜಿಟಲ್ ಪ್ಯಾಸೆಂಜರ್ ಮಾಹಿತಿ ಡಿಸ್‌ಪ್ಲೇ ಸಿಸ್ಟಮ್.

ಸುರಕ್ಷತೆಗಾಗಿ ಪ್ರತಿ ಮೂಲೆಯಲ್ಲೂ ಸಿಸಿಟಿವಿ (CCTV) ಕ್ಯಾಮೆರಾಗಳ ಕಣ್ಗಾವಲು.

ದೂರದ ಪ್ರಯಾಣದ ರೈಲುಗಳನ್ನು ಸಂಪೂರ್ಣವಾಗಿ ಆಧುನೀಕರಿಸುವ ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಈ ಸ್ಲೀಪರ್ ರೈಲನ್ನು ಪರಿಚಯಿಸಲಾಗುತ್ತಿದ್ದು, ಅಧಿಕೃತ ಚಾಲನೆಗೂ ಮುನ್ನವೇ ಇದು ಪ್ರಯಾಣಿಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್ – Kannada News | My Lady Fans count increased After Madeva Movie Says Vinod Raj

‘ಬಲರಾಮನ ದಿನಗಳು’ ಸಿನಿಮಾವು ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ. ಇದು ಹಳ್ಳಿಯ ಸೊಗಡು ಅಥವಾ ಕೌಟುಂಬಿಕ ಸಂಬಂಧಗಳ ಹಿನ್ನೆಲೆಯಲ್ಲಿ ಮೂಡಿಬರುತ್ತಿರುವ ಕಥೆಯಾಗಿದ್ದು, ನೈಜ ಘಟನೆಗಳು ಹಾಗೂ ಭಾವನಾತ್ಮಕ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ . ಈ ಸಿನಿಮಾ ಬಗ್ಗೆ ಮಾತನಾಡುವಾಗ ‘ಮಾದೇವ’ ಸಿನಿಮಾ ನೆನಪಿಸಿಕೊಂಡಿದ್ದಾರೆ. ಈ ಚಿತ್ರ ರಿಲೀಸ್ ಆದ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ ಎಂದು ಅವರು ಹೇಳಿದ್ದಾರೆ. 2025ರಲ್ಲಿ ‘ಮಾದೇವ’ ಸಿನಿಮಾ ತೆರೆಗೆ ಬಂದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಶ್ವ ದಾಖಲೆಯ ಶತಕ ಸಿಡಿಸಿದ ಫಾಫ್ ಡುಪ್ಲೆಸಿಸ್ – Kannada News | Faf Du Plessis Creates New World Record in T20 Cricket

2017 ರಲ್ಲಿ ಕೌಂಟಿ ಕ್ರಿಕೆಟ್​ನಲ್ಲಿ ಡರ್ಹಾಮ್ ತಂಡದ ಪರ ಕಣಕ್ಕಿಳಿದಿದ್ದ ಪೌಲ್ ಕಾಲಿಂಗ್​ವುಡ್ ಭರ್ಜರಿ ಸೆಂಚುರಿ ಸಿಡಿಸಿದ್ದರು. ಈ ವೇಳೆ ಅವರ ವಯಸ್ಸು 41 ವರ್ಷ, 65 ದಿನಗಳಾಗಿತ್ತು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಅತ್ಯಂತ ಹಿರಿಯ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು. (PC: SportsInfo)

Source link

‘ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ಒಂದು ಡಿಸಾಸ್ಟರ್ ಅಂದಿದ್ದರು’; ರಾಜಕುಮಾರ್ ಹಿರಾನಿ – Kannada News | Munna Bhai MBBS: Rajkumar Hirani Recalls “Disaster” Tag Before Blockbuster Success

ಚಿತ್ರರಂಗದಲ್ಲಿ ಕೆಲವು ಸಿನಿಮಾಗಳು ಬಿಡುಗಡೆಗೂ ಮುನ್ನ ಭಾರಿ ನೆಗೆಟಿವ್ ವಿಮರ್ಶೆ ಎದುರಿಸುತ್ತವೆ, ಆದರೆ ಥಿಯೇಟರ್‌ಗೆ ಬಂದ ಬಳಿಕ ಬಾಕ್ಸ್ ಆಫೀಸ್ ಇತಿಹಾಸವನ್ನೇ ಬದಲಾಯಿಸುತ್ತವೆ. ಅಂತಹದ್ದೇ ಒಂದು ಟ್ರೆಂಡ್ ಸೆಟ್ಟರ್ ಸಿನಿಮಾ ಬಾಲಿವುಡ್‌ನ ‘ಮುನ್ನಾಭಾಯ್ M.B.B.S’. ಇಂದು ಈ ಚಿತ್ರಕ್ಕೆ ಕ್ಲಾಸಿಕ್ ಪಟ್ಟ ಸಿಕ್ಕಿರಬಹುದು, ಆದರೆ ಸಿನಿಮಾ ರಿಲೀಸ್ ಆಗುವ ಮುನ್ನ ಉದ್ಯಮದವರೇ ಇದನ್ನು ‘ಫ್ಲಾಪ್’ ಎಂದು ಭವಿಷ್ಯ ನುಡಿದಿದ್ದರಂತೆ. ಈ ಆಸಕ್ತಿದಾಯಕ ಕಥೆಯನ್ನು ಖ್ಯಾತ ನಿರ್ದೇಶಕ ರಾಜಕುಮಾರ್ ಹಿರಾನಿ ಇತ್ತೀಚಿನ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.

ಅಂದು ಆ್ಯಕ್ಷನ್ ಹೀರೊ ಆಗಿ ಅಬ್ಬರಿಸುತ್ತಿದ್ದ ಸಂಜಯ್ ದತ್ ಅವರನ್ನು ಹಿಡಿದು, ಆಸ್ಪತ್ರೆ ಹಿನ್ನೆಲೆಯಲ್ಲಿ ಕಾಮಿಡಿ ಸಿನಿಮಾ ಮಾಡಲು ಹೊರಟಾಗ ಹಿರಾನಿ ಅವರಿಗೆ ಎಲ್ಲರಿಂದಲೂ ಅಪಸ್ವರವೇ ಕೇಳಿಬಂದಿತ್ತಂತೆ.

ಚಿತ್ರದ ಮೊದಲ ಪ್ರದರ್ಶನದ ದಿನಗಳನ್ನು ನೆನಪಿಸಿಕೊಂಡ ಹಿರಾನಿ, ‘ಸಿನಿಮಾ ಮುಗಿದ ಮೇಲೆ ಚಿತ್ರರಂಗದ ಕೆಲವು ಪ್ರಮುಖರಿಗಾಗಿ ಶೋ ಇಟ್ಟಿದ್ದೆವು. ಸಿನಿಮಾ ನೋಡಿ ಹೊರಬಂದ ಒಬ್ಬ ಪ್ರಸಿದ್ಧ ನಿರ್ದೇಶಕರು ನನ್ನ ಬಳಿ ಬಂದು, ‘ಏನ್ ಗುರು ಇಂಥ ಸಿನಿಮಾ ಮಾಡಿದ್ದೀಯಾ? ಇದೊಂದು ಬಿಗ್ ಡಿಸಾಸ್ಟರ್ ಆಗಲಿದೆ. ಸಂಜಯ್ ದತ್ ಒಬ್ಬ ಆ್ಯಕ್ಷನ್ ಹೀರೊ, ಅವನನ್ನು ತಂದು ಆಸ್ಪತ್ರೆಯಲ್ಲಿ ನಿಲ್ಲಿಸಿದ್ದೀಯಾ. ಚಿತ್ರದ ಹಾಡುಗಳನ್ನಾದರೂ ವಿದೇಶದಲ್ಲಿ ಶೂಟ್ ಮಾಡಬೇಕಿತ್ತು, ಅದನ್ನೂ ಇಲ್ಲೇ ಮಾಡಿದ್ದೀಯಾ’ ಎಂದು ಬೇಸರ ಹೊರಹಾಕಿದ್ದರು’ ಎಂದಿದ್ದಾರೆ. ಅಷ್ಟೇ ಅಲ್ಲದೆ, ಸಿನಿಮಾ ಕಲರ್‌ಫುಲ್ ಆಗಿಲ್ಲ, ಎಲ್ಲರಿಗೂ ಆಸ್ಪತ್ರೆಯ ಯೂನಿಫಾರ್ಮ್ ಹಾಕಿ ಕೂರಿಸಿದ್ದೀಯಾ ಎಂದು ಆ ನಿರ್ದೇಶಕರು ಹಿರಾನಿ ಅವರನ್ನು ತರಾಟೆಗೆ ತಗೆದುಕೊಂಡಿದ್ದರಂತೆ.

ಚಿತ್ರ ಬಿಡುಗಡೆಯಾದ ಮೊದಲ ದಿನ ಮುಂಬೈನ ಪ್ರಖ್ಯಾತ ‘ಗೈಟಿ ಗ್ಯಾಲಕ್ಸಿ’ ಥಿಯೇಟರ್‌ಗೆ ಹಿರಾನಿ ಭೇಟಿ ನೀಡಿದ್ದರು. ‘ನಾನು ಥಿಯೇಟರ್ ಒಳಗಡೆ ಹೋಗುವಾಗ ಅಲ್ಲಿದ್ದ ಗೇಟ್‌ಕೀಪರ್‌ನ ಕೇಳಿದೆ. ಅವನು ಹೆಬ್ಬೆರಳು ಕೆಳಗೆ ತೋರಿಸಿ (Thumbs-down) ಸನ್ನೆ ಮಾಡಿದ. ಅದನ್ನು ನೋಡಿ ನನ್ನ ಹೃದಯ ಒಂದು ಕ್ಷಣ ನಿಂತಂತಾಯಿತು, ಸಿನಿಮಾ ಮುಗಿಯಿತು ಅಂದುಕೊಂಡೆ. ಆದರೆ ಒಳಗೆ ಹೋದಾಗ ಕೇವಲ ಶೇ. 50 ರಷ್ಟು ಸೀಟುಗಳು ಮಾತ್ರ ಭರ್ತಿಯಾಗಿದ್ದವು. ಟಿಕೆಟ್ ಮಾರುವ ಅವನಿಗೆ ಹೌಸ್‌ಫುಲ್ ಆಗದಿದ್ದರೆ ಸಿನಿಮಾ ಫ್ಲಾಪ್ ಎಂದರ್ಥ. ಆದರೆ ಒಳಗಿದ್ದ ಪ್ರೇಕ್ಷಕರು ಮಾತ್ರ ಪ್ರತಿ ದೃಶ್ಯಕ್ಕೂ ನಕ್ಕು ನಕ್ಕು ಬಿದ್ದು ಒದ್ದಾಡುತ್ತಿದ್ದರು. ಅದೇ ದಿನ ಸಂಜೆಯಷ್ಟರಲ್ಲಿ ಸಿನಿಮಾ ಸೂಪರ್ ಹಿಟ್ ಎಂಬ ಟಾಕ್ ಹರಡಿ, ರಾತ್ರಿಯ ಶೋಗಳೆಲ್ಲ ಹೌಸ್‌ಫುಲ್ ಪ್ರದರ್ಶನ ಕಂಡವು’ ಎಂದು ಹಿರಾನಿ ಆ ದಿನದ ನೆನಪನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಾಗತಿಕ ವೇದಿಕೆಯಲ್ಲಿ ನೋರಾ ಫತೇಹಿ ಅಬ್ಬರ; ಆಲಿಯಾ, ದೀಪಿಕಾರನ್ನು ಹಿಂದಿಕ್ಕಿದ ನಟಿ – Kannada News | Nora Fatehi Dazzles at FIFA World Cup 2026 Opening, Tops Google Trends

2026ರ ಫಿಫಾ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ನೋರಾ ಫತೇಹಿ ತಮ್ಮ ಹೈ-ವೋಲ್ಟೇಜ್ ನೃತ್ಯದ ಮೂಲಕ ಜಾಗತಿಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಈ ಬೆನ್ನಲ್ಲೇ ಗೂಗಲ್ ಟ್ರೆಂಡ್ಸ್‌ನಲ್ಲಿ ಬಾಲಿವುಡ್‌ನ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ ಅವರನ್ನೇ ಹಿಂದಿಕ್ಕಿ, ಸದ್ಯ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ನಟಿಯಾಗಿ ನೋರಾ (Nora Fatehi) ಹೊರಹೊಮ್ಮಿದ್ದಾರೆ.

ಜೂನ್ 12ರ ಧಮಾಕಾ, ಸೋಶಿಯಲ್ ಮೀಡಿಯಾ ಉಡೀಸ್

ಜೂನ್ 12ರಂದು ನಡೆದ ಫಿಫಾ ಉದ್ಘಾಟನಾ ಪಂದ್ಯದ ವೇಳೆ ನೋರಾ ಸ್ಟೇಜ್ ಮೇಲೆ ಬರುತ್ತಿದ್ದಂತೆ ಕ್ರೀಡಾಂಗಣದಲ್ಲಿ ಉತ್ತಮ ವೈಬ್ ಸೃಷ್ಟಿಯಾಗಿತ್ತು. ಅವರ ಪರ್ಫಾಮೆನ್ಸ್‌ನ ಸಣ್ಣ ಸಣ್ಣ ಕ್ಲಿಪ್‌ಗಳು ಇಂಟರ್ನೆಟ್‌ಗೆ ಲಗ್ಗೆ ಇಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಬಿರುಗಾಳಿಯೇ ಎದ್ದಿತು. ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳು ಈ ವಿಡಿಯೋಗಳನ್ನು ಶೇರ್ ಮಾಡಿದ್ದಲ್ಲದೆ, ನೋರಾ ನೃತ್ಯಕ್ಕೆ ಫಿದಾ ಆಗಿದ್ದಾರೆ.

ಈ ಐತಿಹಾಸಿಕ ಸಾಧನೆಯ ಬೆನ್ನಲ್ಲೇ ನೋರಾ ಫತೇಹಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಯಶಸ್ಸಿನ ಹಿಂದಿರುವ ಆಪ್ತರ ಚಿತ್ರಗಳನ್ನು ಪೋಸ್ಟ್ ಮಾಡಿರುವ ಅವರು, ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ಫುಟ್​​ಬಾಲ್ ವಿಶ್ವಕಪ್ ಉದ್ಘಾಟನೆಯಲ್ಲಿ ಹೀಗಿತ್ತು ನೋರಾ ಫತೇಹಿ ಪ್ರದರ್ಶನ

ಯೂಟ್ಯೂಬ್‌ನಲ್ಲೂ ರೆಕಾರ್ಡ್ ಬ್ರೇಕ್ ಗಳಿಕೆ

ನೋರಾ ಫತೇಹಿ ಅವರಿಗೆ ಫಿಫಾ ವೇದಿಕೆ ಹೊಸದೇನಲ್ಲ. ಇದಕ್ಕೂ ಮುನ್ನ 2022ರ ವಿಶ್ವಕಪ್‌ನಲ್ಲೂ ಅವರು ಕಾಣಿಸಿಕೊಂಡು ಭಾರಿ ಸದ್ದು ಮಾಡಿದ್ದರು. ಆದರೆ ಈ ಬಾರಿ ಕೆನಡಾದ ಟೊರಾಂಟೊದಲ್ಲಿರುವ ‘ಬಿಎಂಒ ಫೀಲ್ಡ್’ ಮೈದಾನದಲ್ಲಿ ಅವರು ನೀಡಿದ ಪ್ರದರ್ಶನ ನೆಕ್ಸ್ಟ್ ಲೆವೆಲ್‌ನಲ್ಲಿದೆ. ವಿಶೇಷವೆಂದರೆ, ಅವರ ‘ಸೀರ್ ಸೀರ್’ ಟ್ರ್ಯಾಕ್ ಪ್ರದರ್ಶನ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ ಬರೊಬ್ಬರಿ 2 ಕೋಟಿಗೂ ಅಧಿಕ ವೀಕ್ಷಣೆಗಳನ್ನು ಪಡೆದು ಡಿಜಿಟಲ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀಮ್ ಇಂಡಿಯಾಗೆ ಹರ್ಷಿತ್ ರಾಣಾ ಎಂಟ್ರಿ: ತಂಡದಿಂದ ಯಾರು ಔಟ್? – Kannada News | Harshit Rana joins Team India squad

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಯುವ ವೇಗಿ ಹರ್ಷಿತ್ ರಾಣಾ (Harshit Rana) ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಗಾಯದ ಸಮಸ್ಯೆಯ ಕಾರಣ ಕಳೆದ ಕೆಲ ತಿಂಗಳಿಂದ ಹೊರಗುಳಿದಿದ್ದ ಹರ್ಷಿತ್ ಇದೀಗ ಚೆನ್ನೈನಲ್ಲಿ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ.

  • ಹರ್ಷಿತ್ ರಾಣಾ ಟಿ20 ವಿಶ್ವಕಪ್​ ವೇಳೆ ಗಾಯಗೊಂಡಿದ್ದರು.
  • ಮೊಣಕಾಲಿನ ಗಾಯದ ಕಾರಣ ಅವರು ಟಿ20 ವಿಶ್ವಕಪ್​ ಟೂರ್ನಿಯನ್ನು ಅರ್ಧದಲ್ಲೇ ತೊರೆದಿದ್ದರು.
  • ಈ ಗಾಯದ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ಕಣಕ್ಕಿಳಿದಿರಲಿಲ್ಲ.

ಅತ್ತ ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಹರ್ಷಿತ್ ರಾಣಾ ಅವರನ್ನು ಈ ಮೊದಲು  ಅಫ್ಘಾನಿಸ್ತಾನ್ ವಿರುದ್ಧದ ಸರಣಿಗೆ ಆಯ್ಕೆ ಮಾಡಿರಲಿಲ್ಲ. ಇದಾಗ್ಯೂ ಅವರು ಐರ್ಲೆಂಡ್ ಹಾಗೂ ಇಂಗ್ಲೆಂಡ್​ ವಿರುದ್ಧದ ಸರಣಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.

ಇದೀಗ ಸಂಪೂರ್ಣ ಫಿಟ್​ನೆಸ್ ಸಾಧಿಸಿರುವ ಕಾರಣ ಅವರನ್ನು ಅಫ್ಘಾನ್ ವಿರುದ್ಧದ ಕೊನೆಯ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅದರಂತೆ ಇಂದಿನ ಪಂದ್ಯದಲ್ಲಿ ಯುವ ವೇಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು.

ಟೀಮ್ ಇಂಡಿಯಾದಿಂದ ಯಾರು ಔಟ್?

ಹರ್ಷಿತ್ ರಾಣಾ ಎಂಟ್ರಿಯಿಂದಾಗಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಈ ಬದಲಾವಣೆಯೊಂದಿಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಆಡುವ ಬಳಗದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚು.

ಏಕೆಂದರೆ ಅಪ್ಘಾನಿಸ್ತಾನ್ ವಿರುದ್ಧದ 3ನೇ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡಾಸ್ಚೇಟ್ ಅವರು ಅರ್ಷದೀಪ್ ಸಿಂಗ್ ಅವರಿಗೆ ವಿಶ್ರಾಂತಿ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ.

ಇತ್ತ ಅರ್ಷದೀಪ್ ಸಿಂಗ್ ಹೊರಗುಳಿದರೆ ಅವರ ಸ್ಥಾನದಲ್ಲಿ ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಬಹುದು. ಹೀಗಾಗಿ ರಾಣಾ ಎಂಟ್ರಿಯೊಂದಿಗೆ ಅರ್ಷದೀಪ್ ಸಿಂಗ್ ಆಡುವ ಬಳಗದಿಂದ ಹೊರಬೀಳುವ ಸಾಧ್ಯತೆ ಹೆಚ್ಚು.

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ) , ಕೆಎಲ್ ರಾಹುಲ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ , ಯಶಸ್ವಿ ಜೈಸ್ವಾಲ್ , ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ , ವಾಷಿಂಗ್ಟನ್ ಸುಂದರ್ , ನಿತೀಶ್ ಕುಮಾರ್ ರೆಡ್ಡಿ , ಹರ್ಷ್ ದುಬೆ , ಕುಲ್ದೀಪ್ ಯಾದವ್ , ಅರ್ಷದೀಪ್ ಸಿಂಗ್ , ಗುರ್ನೂರ್ ಬ್ರಾರ್ , ಪ್ರಸಿದ್ಧ್ ಕೃಷ್ಣ , ಪ್ರಿನ್ಸ್ ಯಾದವ್, ಹರ್ಷಿತ್ ರಾಣಾ.

ಕ್ಲೀನ್ ಸ್ವೀಪ್ ಪ್ಲ್ಯಾನ್:

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಧರ್ಮಶಾಲಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ 7 ವಿಕೆಟ್​ಗಳ ಜಯ ಸಾಧಿಸಿದ್ದ ಭಾರತ ತಂಡವು ಲಕ್ನೋನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ 170 ರನ್​ಗಳ ಅಮೋಘ ಗೆಲುವು ದಾಖಲಿಸಿತ್ತು.

ಇದನ್ನೂ ಓದಿ: ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವ ದಾಖಲೆ ಮುರಿದ ಲಿಯೋನೆಲ್ ಮೆಸ್ಸಿ

ಇದೀಗ ಮೂರನೇ ಪಂದ್ಯದಲ್ಲೂ ಜಯ ಸಾಧಿಸುವ ಮೂಲಕ 3-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸಿದೆ. ಅದರಂತೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲೂ ಭಾರತ ತಂಡದ ಅಮೋಘ ಗೆಲುವನ್ನು ಎದುರು ನೋಡಬಹುದು.

Published On – 7:28 am, Sat, 20 June 26

Source link

ಇಂದಿನ ವಾಯು ಗುಣಮಟ್ಟ ವರದಿ: ರಾಜ್ಯದ ಈ ನಗರದಲ್ಲಿದೆ ಅತ್ಯಂತ ಸ್ವಚ್ಛ ವಾತಾವರಣ; ನಿಮ್ಮ ಊರಿನ AQI ಮಟ್ಟ ಚೆಕ್ ಮಾಡಿ – Kannada News | Rain Boosts Karnataka Air Quality: Bengaluru, Mysuru See ‘Good’ AQI, Health Advisory

ಬೆಂಗಳೂರು, ಜೂ.20: ರಾಜ್ಯದಲ್ಲಿ ನಿರಂತರವಾಗಿ ಬೀಸುತ್ತಿರುವ ತಂಪು ಗಾಳಿ ಮತ್ತು ಮಳೆಯ ಕಾರಣದಿಂದಾಗಿ ವಾತಾವರಣದಲ್ಲಿದ್ದ ಧೂಳಿನ ಕಣಗಳು ಮತ್ತು ಮಾಲಿನ್ಯಕಾರಕಗಳು ಗಣನೀಯವಾಗಿ ಕಡಿಮೆಯಾಗಿವೆ. ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ‘ಉತ್ತಮ’ (Good) ಹಾಗೂ ‘ತೃಪ್ತಿಕರ’ (Satisfactory) ಮಟ್ಟದಲ್ಲಿದೆ.

ಸಿಲಿಕಾನ್ ಸಿಟಿಯ ಹೆಬ್ಬಾಳ, ಸಿಲ್ಕ್ ಬೋರ್ಡ್, ಜಯನಗರ ಮತ್ತು ಮೈಸೂರು ರಸ್ತೆ ಸೇರಿದಂತೆ ಎಲ್ಲಾ ಪ್ರಮುಖ ವಲಯಗಳಲ್ಲಿ ಗಾಳಿಯು ಅತ್ಯಂತ ಶುದ್ಧವಾಗಿದೆ. ಯಾವುದೇ ಆರೋಗ್ಯದ ಅಪಾಯಗಳಿಲ್ಲ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ್ಯದಲ್ಲೇ ಅತ್ಯಂತ ಸ್ವಚ್ಛ ಹಾಗೂ ಶುದ್ಧ ಗಾಳಿ ದಾಖಲಾಗಿದೆ. ಇನ್ನು ಕರಾವಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ವಾಯು ಮಾಲಿನ್ಯ ಶೂನ್ಯ ಮಟ್ಟಕ್ಕೆ ಕುಸಿದಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಧೂಳಿನ ವಾತಾವರಣವಿದ್ದರೂ ಗಾಳಿಯ ಗುಣಮಟ್ಟ ನಿಯಂತ್ರಣದಲ್ಲಿದೆ.

ಕರ್ನಾಟಕದ ಪ್ರಮುಖ ನಗರಗಳ ಇಂದಿನ ವಾಯು ಗುಣಮಟ್ಟ

ನಗರ / ಜಿಲ್ಲೆ ಇಂದಿನ AQI ಮಟ್ಟ ಗಾಳಿಯ ಗುಣಮಟ್ಟದ ಸ್ಥಿತಿ (Status)
ಕೊಪ್ಪಳ 44 ಅತ್ಯಂತ ಉತ್ತಮ (Good)
ಬಳ್ಳಾರಿ 18 ಅತ್ಯಂತ ಉತ್ತಮ (Good)
ದಾವಣಗೆರೆ 51 ತೃಪ್ತಿಕರ (Satisfactory)
ಚಿಕ್ಕಮಗಳೂರು 58 ತೃಪ್ತಿಕರ (Satisfactory)
ಚಾಮರಾಜನಗರ 62 ತೃಪ್ತಿಕರ (Satisfactory)
ಶಿವಮೊಗ್ಗ 67 ತೃಪ್ತಿಕರ (Satisfactory)
ವಿಜಯಾಪುರ 69 ತೃಪ್ತಿಕರ (Satisfactory)
ತುಮಕೂರು 71 ತೃಪ್ತಿಕರ (Satisfactory)
ಗೌರಿಬಿದನೂರು / ಚಿಕ್ಕಬಳ್ಳಾಪುರ 84 ಸಾಧಾರಣ (Moderate)
ರಾಮನಗರ 84 ಸಾಧಾರಣ (Moderate)
ಹುಬ್ಬಳ್ಳಿ – ಧಾರವಾಡ 82 – 131 ಸಾಧಾರಣದಿಂದ ಕಳಪೆ (Moderate to Poor)

ಪ್ರಸುತ್ತ ವಾಯು ಗುಣಮಟ್ಟವು ಮನುಷ್ಯರು ಹಾಗೂ ಪ್ರಾಣಿಗಳಿಗೆ ಸಂಪೂರ್ಣ ಸುರಕ್ಷಿತವಾಗಿದೆ. ಉಸಿರಾಟದ ಸಮಸ್ಯೆ ಅಥವಾ ಅಸ್ತಮಾ ಇರುವವರು ಕೂಡ ಮುಕ್ತವಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಬಳ್ಳಾರಿ, ಕೊಪ್ಪಳ ಮತ್ತು ಕರಾವಳಿಯ ಮಂಗಳೂರು ಭಾಗಗಳಲ್ಲಿ ವಾಯು ಮಾಲಿನ್ಯ ಅತ್ಯಂತ ಕನಿಷ್ಠ ಮಟ್ಟದಲ್ಲಿದ್ದು, ಹಸಿರು ವಲಯದಲ್ಲಿದೆ. ಉತ್ತರ ಕರ್ನಾಟಕದ ಈ ಭಾಗದಲ್ಲಿ ಕೈಗಾರಿಕಾ ಪ್ರದೇಶ ಹಾಗೂ ಧೂಳಿನ ವಾತಾವರಣದ ಕಾರಣದಿಂದಾಗಿ ಗಾಳಿಯ ಗುಣಮಟ್ಟ ಸ್ವಲ್ಪ ‘ಕಳಪೆ’ (Poor) ಮಟ್ಟ ತಲುಪಿದೆ. ಅಸ್ತಮಾ ಅಥವಾ ಅಲರ್ಜಿ ಸಮಸ್ಯೆ ಇರುವವರು ಮುಂಜಾಗ್ರತೆ ವಹಿಸುವುದು ಒಳಿತು.

ಇದನ್ನೂ ಓದಿ: ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ; ಬೆಂಗಳೂರಿನಲ್ಲಿ ವೀಕೆಂಡ್ ಕೂಲ್ ಕೂಲ್

ಹುಬ್ಬಳ್ಳಿ – ಧಾರವಾಡದಲ್ಲಿ ರಸ್ತೆ ಕಾಮಗಾರಿಗಳು, ಕಟ್ಟಡ ನಿರ್ಮಾಣದ ಧೂಳು ಮತ್ತು ಹೆದ್ದಾರಿಯಲ್ಲಿ ಸಂಚರಿಸುವ ಭಾರಿ ವಾಹನಗಳ ಹೊಗೆಯಿಂದ ಅಲ್ಲಿನ ಗಾಳಿ ಗುಣಮಟ್ಟದಲ್ಲಿ ಸ್ವಲ್ಪ ವ್ಯಾತ್ಯಾಸ ಕಾಣುಬಹುದು. ಕಲಬುರಗಿಯಲ್ಲಿ ಸಿಮೆಂಟ್ ಕಾರ್ಖಾನೆಗಳ ಧೂಳು ಮತ್ತು ಪ್ರಸ್ತುತ ಇರುವ ಒಣ ಹವಾಮಾನದ ಗಾಳಿಯಿಂದ ಅಲ್ಲಿಯೂ ಗಾಳಿಯ ಗುಣಮಟ್ಟದಲ್ಲಿ ಕಳಪೆ ಕಾಣಿಸಬಹುದು. ಮಾಲಿನ್ಯ ಹೆಚ್ಚಿರುವ ಕೈಗಾರಿಕಾ ವಲಯಗಳಲ್ಲಿ ಓಡಾಡುವಾಗ N95 ಮಾಸ್ಕ್ ಧರಿಸುವುದು ಗಾಳಿಯಲ್ಲಿನ ಸೂಕ್ಷ್ಮ ಕಣಗಳನ್ನು (PM 2.5) ತಡೆಯಲು ನೆರವಾಗುತ್ತದೆ. AQI ಮಟ್ಟ 100 ದಾಟಿರುವ ಪ್ರದೇಶಗಳಲ್ಲಿ ಮುಂಜಾನೆಯ ವಾಕಿಂಗ್ ಅಥವಾ ಹೊರಾಂಗಣ ವ್ಯಾಯಾಮಗಳನ್ನು ಮಾಡಬೇಡಿ. ಮನೆಯ ಒಳಗೇ ಯೋಗ ಅಥವಾ ಲಘು ವ್ಯಾಯಾಮ ಮಾಡಿ ಎಂಬ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:29 am, Sat, 20 June 26

Source link

ಕೆಲಸದ ಒತ್ತಡದಿಂದ ನಿದ್ದೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ ಅಮಿತಾಭ್ ಬಚ್ಚನ್ – Kannada News | Amitabh Bachchan: Sleepless Nights, Intense Work Ethic and Kalki 2898 AD Sequel Details

ಸಿನಿಮಾ ರಂಗದಲ್ಲಿ ಬರೋಬ್ಬರಿ ಐದು ದಶಕಗಳಿಗೂ ಹೆಚ್ಚು ಕಾಲ ಸುದೀರ್ಘ ಪ್ರಯಾಣ ಬೆಳೆಸಿರುವ ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಈಗಲೂ ಕೆಲಸದ ಮೇಲಿನ ಶ್ರದ್ಧೆ ಹಾಗೆಯೇ ಇದೆ. ಸಿನಿಮಾ ಕೆಲಸದಿಂದ ಆಗುವ ಒತ್ತಡವು ರಾತ್ರಿ ಇಡೀ ನಿದ್ದೆ ಬರದಂತೆ ಮಾಡುತ್ತಿದೆಯಂತೆ. ಚಿತ್ರರಂಗದ ದಣಿವರಿಯದ ನಾಯಕ ಎಂದೇ ಹೆಸರಾಗಿರುವ ಅಮಿತಾಭ್ (Amitabh), ಶೂಟಿಂಗ್ ಮುಗಿದು ಮನೆಗೆ ಬಂದ ಮೇಲೂ ಸಿನಿಮಾದ ಆಲೋಚನೆಗಳೇ ತಲೆಯಲ್ಲಿ ಓಡುತ್ತಿರುತ್ತವೆ ಎಂದು ಒಪ್ಪಿಕೊಂಡಿದ್ದಾರೆ.

ಇತ್ತೀಚಿನ ತಮ್ಮ ಬ್ಲಾಗ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಬಿಗ್ ಬಿ, ಬಿಡುವಿಲ್ಲದ ಕೆಲಸದ ವೇಳಾಪಟ್ಟಿ ಹಾಗೂ ಅದರಿಂದಾಗಿ ತಮಗೆ ಎದುರಾಗುತ್ತಿರುವ ನಿದ್ರಾಹೀನತೆಯ ಬಗ್ಗೆ ಹೇಳಿಕೊಂಡಿದ್ದಾರೆ. ಮುಂಬರುವ ಶೂಟಿಂಗ್‌ಗಳು, ತಮಗಿರುವ ಜವಾಬ್ದಾರಿಗಳ ಬಗ್ಗೆಯೇ ಸದಾ ಯೋಚಿಸುವುದರಿಂದ ಸರಿಯಾಗಿ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಆದಾಗ್ಯೂ, ಈ ವಯಸ್ಸಿನಲ್ಲೂ ಅವರು ಸಿನಿಮಾಗಾಗಿ ಶ್ರಮಿಸುತ್ತಿದ್ದಾರೆ.

‘ಬೆಳಗಾಗಿದ್ದೇ ಗೊತ್ತಾಗಲಿಲ್ಲ’ ಎಂದ ನಟ:

ಶುಕ್ರವಾರ ಮುಂಜಾನೆ ಹಿಂದಿಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಬಿಗ್ ಬಿ, ‘ಕೆಲಸದ ನಡುವೆ ಸಿಕ್ಕ ಕೆಲವು ಕ್ಷಣಗಳಿವು. ಶೂಟಿಂಗ್ ಮುಗಿಸಿದ ಬಳಿಕ, ಅದನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎನಿಸಿತು. ಅದಕ್ಕೆ ಅನುಮತಿ ಪಡೆದು ಮತ್ತೊಮ್ಮೆ ಆ ದೃಶ್ಯವನ್ನು ಮಾಡಿದೆ. ಈಗ ಅದು ಮೊದಲಗಿಂತ ಚೆನ್ನಾಗಿ ಮೂಡಿಬಂದಿದೆಯೋ ಇಲ್ಲವೋ ಗೊತ್ತಿಲ್ಲ, ಪ್ರೇಕ್ಷಕರೇ ನಿರ್ಧರಿಸಬೇಕು. ಇದೇ ಯೋಚನೆಯಲ್ಲಿ ರಾತ್ರಿ ಇಡೀ ನಿದ್ದೆ ಬರಲಿಲ್ಲ, ಮುಂಜಾನೆಯಾಗಿದ್ದೇ ತಿಳಿಯಲಿಲ್ಲ’ ಎಂದು ಬರೆದುಕೊಂಡು ತಮ್ಮ ಅಭಿಮಾನಿಗಳಿಗೆ ಪ್ರೀತಿ ಪೂರ್ವಕ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಅಮಿತಾಭ್ ಬಚ್ಚನ್-ಮಾಧುರಿ ಒಟ್ಟಿಗೆ ಕೆಲಸ ಮಾಡದಿರಲು ಕಾರಣವಾದ ಆ ಹೀರೋ ಯಾರು?

36 ಗಂಟೆಗಳ ದಿನ ಬೇಕಂತೆ!

ಅಮಿತಾಭ್ ಸದ್ಯ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಕುರಿತು ಮತ್ತೊಂದು ಪೋಸ್ಟ್‌ನಲ್ಲಿ ತಮಾಷೆಯಾಗಿ ಬರೆದುಕೊಂಡಿದ್ದ ಅವರು, ‘ದಿನದ 24 ಗಂಟೆಗಳಲ್ಲಿ ಮಾಡಲು ತುಂಬಾ ಕೆಲಸಗಳಿವೆ, ಸಮಯವೇ ಸಾಲುತ್ತಿಲ್ಲ. ದಿನಕ್ಕೆ 36 ಗಂಟೆಗಳಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಒಂದು ವೇಳೆ 36 ಗಂಟೆ ಸಿಕ್ಕರೆ, ಆಗ ಮನುಷ್ಯ 48 ಗಂಟೆ ಬೇಕು ಎನ್ನಬಹುದು, ಅದು ಜೀವನದ ತತ್ವ. ಆದರೆ ಕಲಿಯಲು, ಸಾಧಿಸಲು ತುಂಬಾ ಇದೆ, ಸಮಯ ಮಾತ್ರ ಕಡಿಮೆ’ ಎಂದು ಬರೆದಿದ್ದಾರೆ. ಅಲ್ಲದೆ, ಸದಾ ನಮ್ಮನ್ನು ನಾವು ಶ್ರೇಷ್ಠ ಅಂದುಕೊಳ್ಳಬಾರದು, ನಮ್ಮನ್ನು ಮೀರಿಸುವವರು ಜಗತ್ತಿನಲ್ಲಿ ಇರುತ್ತಾರೆ, ಪರರ ಕೆಲಸವನ್ನು ಗೌರವಿಸಬೇಕು ಎಂಬ ಜೀವನದ ತತ್ವವನ್ನೂ ಅವರು ಹಂಚಿಕೊಂಡಿದ್ದಾರೆ.

‘ಕಲ್ಕಿ 2’ ಚಿತ್ರದಲ್ಲಿ ಮತ್ತೆ ಅಶ್ವತ್ಥಾಮ:

ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಚಿತ್ರದ ಎರಡನೇ ಭಾಗದ ಕೆಲಸಗಳು ಈಗಾಗಲೇ ಆರಂಭವಾಗಿವೆ ಎಂದು ಬಿಗ್ ಬಿ ಖಚಿತಪಡಿಸಿದ್ದಾರೆ. ಈ ಚಿತ್ರದಲ್ಲಿ ಅವರು ಮತ್ತೊಮ್ಮೆ ಅಶ್ವತ್ಥಾಮನಾಗಿ ಅಬ್ಬರಿಸಲಿದ್ದಾರೆ. ಈ ಸೀಕ್ವೆಲ್‌ನಲ್ಲಿ ಅಮಿತಾಭ್ ಜೊತೆಗೆ ಪ್ರಭಾಸ್ ಹಾಗೂ ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಮೊದಲ ಭಾಗದಲ್ಲಿದ್ದ ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಇರುವುದಿಲ್ಲ ಎನ್ನಲಾಗಿದ್ದು, ಅವರ ಜಾಗಕ್ಕೆ ಸಾಯಿ ಪಲ್ಲವಿ ಬರಲಿದ್ದಾರೆ ಎಂಬ ವದಂತಿ ಇದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನು ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:33 am, Sat, 20 June 26

Source link

Exit mobile version