ಸೂಪರ್ ಕಿಂಗ್ಸ್ ಪರ ಐತಿಹಾಸಿಕ ಶತಕ ಸಿಡಿಸಿದ 41 ವರ್ಷದ ಫಾಫ್ ಡು ಪ್ಲೆಸಿಸ್ – Kannada News | MLC 2026: Faf Du Plessis’ Record Century Secures Texas Super Kings Win vs Seattle Orcas

4ನೇ ಆವೃತ್ತಿಯ ಮೇಜರ್ ಲೀಗ್ ಕ್ರಿಕೆಟ್ ಇಂದಿನಿಂದ ಆರಂಭವಾಗಿದೆ. ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಹಾಗೂ ಸಿಯಾಟಲ್ ಓರ್ಕಾಸ್‌ ತಂಡಗಳು ಮುಖಾಮುಖಿಯಾಗಿದ್ದವು. ಎರಡೆರಡು ಶತಕಗಳಿಗೆ ಸಾಕ್ಷಿಯಾದ ಈ ಉದ್ಘಾಟನಾ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್‌ ತಂಡವನ್ನು ಮಣಿಸಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ ಗೆಲುವಿನ ಶುಭಾರಂಭ ಮಾಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸಿಯಾಟಲ್ ಓರ್ಕಾಸ್‌ ತಂಡ ಟಿಮ್ ಸೈಫರ್ಟ್​ ಅವರ ಶತಕದಿಂದಾಗಿ 220 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ ನಾಯಕ ಫಾಫ್ ಡು ಪ್ಲೆಸಿಸ್ ಅವರ ಅಜೇಯ ಶತಕದ ನೆರವಿನಿಂದ 18.3 ಓವರ್​ಗಳಲ್ಲಿ ಗೆಲುವಿನ ನಗೆ ಬೀರಿತು.

ಟಿಮ್ ಸೈಫರ್ಟ್ ಶತಕ

ಮೊದಲು ಬ್ಯಾಟಿಂಗ್‌ ಮಾಡಿದ ಸಿಯಾಟಲ್ ಓರ್ಕಾಸ್‌ ತಂಡಕ್ಕೆ ಆರಂಭಿಕರಾದ ಟಿಮ್ ಸೈಫರ್ಟ್ ಹಾಗೂ ಶಯಾನ್ ಜಹಾಂಗೀರ್ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಇವರಿಬ್ಬರು ಮೊದಲ ವಿಕೆಟ್​ಗೆ 191 ರನ್​ಗಳ ಜೊತೆಯಾಟವನ್ನಾಡಿದರು. ಇದರಲ್ಲಿ ಟಿಮ್ ಸೈಫರ್ಟ್ 66 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಸಹಿತ 104 ರನ್ ಬಾರಿಸಿದರೆ, ಶಯಾನ್ ಜಹಾಂಗೀರ್ 47 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳ ಸಹಿತ 78 ರನ್ ಬಾರಿಸಿದರು. ಇವರಿಬ್ಬರ ಈ ದಾಖಲೆಯ ಜೊತೆಯಾಟದಿಂದಾಗಿ ಸಿಯಾಟಲ್ ತಂಡ ಕೇವಲ 2 ವಿಕೆಟ್ ಕಳೆದುಕೊಂಡು 220 ರನ್ ಪೇರಿಸಿತು.

52 ಎಸೆತಗಳಲ್ಲಿ 113 ರನ್ ಬಾರಿಸಿದ ಫಾಫ್

ಈ ಗುರಿ ಬೆನ್ನಟ್ಟಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ಮೊದಲ ಓವರ್​ನ ಎರಡನೇ ಎಸೆತದಲ್ಲೇ ಆಘಾತ ಎದುರಾಯಿತು. ಆರಂಭಿಕ ಸೈತೇಜ ಮುಕ್ಕಮಲ್ಲ ಶೂನ್ಯಕ್ಕೆ ಔಟಾದರು. ಆದರೆ ನಾಯಕ ಫಾಫ್ ಡು ಪ್ಲೆಸಿಸ್ ಮಾತ್ರ ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದರು. ಇದರ ಪರಿಣಾಮವಾಗಿ ಕೇವಲ 45 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಈ ಪಂದ್ಯದಲ್ಲಿ ಅಜೇಯರಾಗಿ ಉಳಿದ ಫಾಫ್, ಕೇವಲ 52 ಎಸೆತಗಳನ್ನು ಎದುರಿಸಿ 113 ರನ್ ಗಳಿಸಿದರು. ಫಾಫ್ ಅವರ ಈ ಇನ್ನಿಂಗ್ಸ್​ನಿಂದಾಗಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು 18.3 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಗುರಿಯನ್ನು ತಲುಪಿತು.

ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ

ಮೇಜರ್ ಲೀಗ್ ಕ್ರಿಕೆಟ್​ನ ಉದ್ಘಾಟನಾ ಪಂದ್ಯದಲ್ಲಿ ಅಬ್ಬರಿಸಿರುವ ಫಾಫ್ ಡು ಪ್ಲೆಸಿಸ್, ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಈ ಪಂದ್ಯದಲ್ಲಿ ಹಲವಾರು ಪ್ರಮುಖ ದಾಖಲೆಗಳನ್ನು ಮುರಿದರು. 41 ವರ್ಷ ಮತ್ತು 341 ದಿನ ವಯಸ್ಸಿನ ಫಾಫ್ ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ವಿಶ್ವದ ಎಲ್ಲಾ ಟಿ20 ಲೀಗ್‌ಗಳ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಹಿರಿಯ ಆಟಗಾರನೆಂಬ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆಯೂ ಈ ದಾಖಲೆ ಫಾಫ್ ಅವರ ಹೆಸರಿನಲ್ಲೇ ಇತ್ತು. ಇದೇ ಲೀಗ್​ನ ಕಳೆದ ಆವೃತ್ತಿಯಲ್ಲೂ ಫಾಫ್ 40 ಶತಕ ಬಾರಿಸಿದ್ದರು. ಈ ಮೂಲಕ 40 ವರ್ಷ ವಯಸ್ಸಿನ ನಂತರ ಎರಡು ಲೀಗ್ ಶತಕಗಳನ್ನು ಬಾರಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಫಾಫ್ ಪಾತ್ರರಾಗಿದ್ದಾರೆ.

ಈ ಲೀಗ್​ನಲ್ಲಿ ನಾಲ್ಕು ಶತಕಗಳು

ನಾಯಕ ಫಾಫ್ ಡು ಪ್ಲೆಸಿಸ್ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್‌ಸಿ) ಇತಿಹಾಸದಲ್ಲಿ ನಾಲ್ಕು ಶತಕಗಳನ್ನು ಗಳಿಸಿದ ಮೊದಲ ಮತ್ತು ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಪಂದ್ಯಾವಳಿಯಲ್ಲಿ ಬೇರೆ ಯಾವುದೇ ಬ್ಯಾಟ್ಸ್‌ಮನ್ ಅವರ ಹತ್ತಿರವೂ ಇಲ್ಲ. ಈ ಲೀಗ್‌ನ 26 ಇನ್ನಿಂಗ್ಸ್‌ಗಳಲ್ಲಿ, ಅವರು ನಾಲ್ಕು ಶತಕಗಳು ಮತ್ತು ಆರು ಅರ್ಧಶತಕಗಳು ಸೇರಿದಂತೆ 43.62 ಸರಾಸರಿಯಲ್ಲಿ 1047 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರ ಸ್ಟ್ರೈಕ್ ರೇಟ್ ಕೂಡ 167.25 ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಲವಂತವಾಗಿ ನಟಿಯರ ಮೈಮುಟ್ಟಿ ಮಾತನಾಡಿಸಿ ಟ್ರೋಲ್ ಆದ ಹಿರಿಯ ನಿರ್ದೇಶಕ – Kannada News | Raghavendra Rao trolled for grabbing Keerthy Suresh Krithi Shetty arms

ತೆಲುಗು ಚಿತ್ರರಂಗದ ಖ್ಯಾತ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರು ಇತ್ತೀಚೆಗೆ ನಡೆದ ಸಿನಿಮಾವೊಂದರ ಮುಹೂರ್ತದ ವೇಳೆ ಸ್ಟಾರ್ ನಟಿಯರಾದ ಕೀರ್ತಿ ಸುರೇಶ್ (Keerthy Suresh) ಮತ್ತು ಕೃತಿ ಶೆಟ್ಟಿ ಅವರ ಕೈಗಳನ್ನು ಬಲವಂತವಾಗಿ ಹಿಡಿದು ಎಳೆದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಮೊದಲು ಕೂಡ ಕೆ. ರಾಘವೇಂದ್ರ ರಾವ್ (Raghavendra Rao) ಅವರು ಈ ರೀತಿಯ ವರ್ತನೆಯಿಂದ ಟ್ರೋಲ್ ಆಗಿದ್ದರು. ಈಗ ಮತ್ತೆ ಅದೇ ವರ್ತನೆ ಮುಂದುವರಿಸಿದ್ದಾರೆ.

ಖ್ಯಾತ ನಿರ್ದೇಶಕ ಅನಿಲ್ ರವಿಪುಡಿ ನಿರ್ದೇಶನದ, ಹಿರಿಯ ನಟ ವೆಂಕಟೇಶ್ ಮತ್ತು ಕಲ್ಯಾಣ್ ರಾಮ್ ನಂದಮೂರಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಹೊಸ ಚಿತ್ರದ ಮುಹೂರ್ತ ಸಮಾರಂಭ ಗುರುವಾರ (ಜೂನ್ 18) ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ 84 ವರ್ಷದ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರಿಗೆ ಚಿತ್ರದ ಮೊದಲ ದೃಶ್ಯಕ್ಕೆ ಆ್ಯಕ್ಷನ್-ಕಟ್ ಹೇಳಲು ಆಹ್ವಾನಿಸಲಾಗಿತ್ತು.

ಮುಹೂರ್ತದ ಶಾಟ್ ನಿರ್ದೇಶಿಸುವ ಸಂದರ್ಭದಲ್ಲಿ ರಾಘವೇಂದ್ರ ರಾವ್ ಅವರು ನಟಿ ಕೀರ್ತಿ ಸುರೇಶ್ ಅವರ ಕೈಯನ್ನು ಬಲವಂತವಾಗಿ ಹಿಡಿದು ಹತ್ತಿರಕ್ಕೆ ಎಳೆದಿದ್ದಾರೆ. ಆ ನಂತರ ತಕ್ಷಣವೇ ತಮ್ಮ ನಿರ್ಧಾರ ಬದಲಾಯಿಸಿದವರಂತೆ ಮತ್ತೊಬ್ಬ ನಟಿ ಕೃತಿ ಶೆಟ್ಟಿ ಅವರ ಕೈ ಹಿಡಿದು ಎಳೆದಿದ್ದಾರೆ. ಬಳಿಕ ನಟರಾದ ವೆಂಕಟೇಶ್ ಮತ್ತು ಕಲ್ಯಾಣ್ ರಾಮ್ ಅವರ ಹೆಗಲ ಮೇಲೆ ನಟಿಯರು ಹೇಗೆ ಕೈ ಇಡಬೇಕು ಎಂದು ತೋರಿಸಿಕೊಡುವ ನೆಪದಲ್ಲಿ ಈ ರೀತಿ ವರ್ತಿಸಿದ್ದಾರೆ. ಸದ್ಯ ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿಯರ ಅನುಮತಿ ಇಲ್ಲದೆ ಈ ರೀತಿ ಸಾರ್ವಜನಿಕವಾಗಿ ಕೈ ಹಿಡಿದು ಎಳೆದ ಹಿರಿಯ ನಿರ್ದೇಶಕನ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ‘ಈ ಮುದುಕನಿಗೆ ಪ್ರತಿ ಬಾರಿಯೂ ನಟಿಯರನ್ನು ಮುಟ್ಟಿ ನೋಡುವುದೇ ಕೆಲಸವಾಗಿದೆ’ ಎಂದು ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ. ‘ಮಹಿಳೆಯರ ಒಪ್ಪಿಗೆ ಇಲ್ಲದೆ ಅವರ ದೇಹ ಮುಟ್ಟಲು ಈತನಿಗೆ ಹಕ್ಕು ಕೊಟ್ಟವರು ಯಾರು? ತುಂಬಾ ಕೀಳು ಮಟ್ಟದ ವರ್ತನೆ’ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಟಿ ಕೀರ್ತಿ ಸುರೇಶ್​ಗೆ ಬಾಡಿ ಶೇಮಿಂಗ್; ಸರ್ಜರಿ ವದಂತಿಗಳಿಗೆ ಖಡಕ್ ತಿರುಗೇಟು

ಇದೇ ಮೊದಲಲ್ಲ, ಈ ಹಿಂದೆ ನಟಿ ನಿಹಾರಿಕಾ ಕೊನಿಡೇಲ ಅವರ ವಿಷಯದಲ್ಲೂ ರಾಘವೇಂದ್ರ ರಾವ್ ಇದೇ ರೀತಿ ನಡೆದುಕೊಂಡು ಟ್ರೋಲ್ ಆಗಿದ್ದರು. ‘ಹಳೇ ಕಾಲದಲ್ಲಿ ಸೋಶಿಯಲ್ ಮೀಡಿಯಾ ಇರಲಿಲ್ಲ ಎಂದು ಇವರು ಬಚಾವ್ ಆಗುತ್ತಿದ್ದರು, ಆದರೆ ಈಗಲೂ ಇವರು ಬುದ್ಧಿ ಕಲಿತಿಲ್ಲ’ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಗರಂ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಂಚಿಯ ಆರ್‌ಎಸ್‌ಎಸ್ ಕಚೇರಿಯ ದಾಳಿಗೆ ಐಎಸ್‌ಐ ನಂಟು; ಭಯೋತ್ಪಾದನಾ ಕೃತ್ಯಕ್ಕೆ ಪಾಕಿಸ್ತಾನದಿಂದ ಫಂಡಿಂಗ್ – Kannada News | Sources say arrested men in RSS Ranchi office attack Case linked to ISI Funded TTH

ರಾಂಚಿ, ಜೂನ್ 19: ಜಾರ್ಖಂಡ್‌ನ ರಾಂಚಿಯಲ್ಲಿ ಜೂನ್ 16ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಚೇರಿ ಮೇಲೆ ನಡೆದ ಪೆಟ್ರೋಲ್ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರೂ ಆರೋಪಿಗಳು ಪಾಕಿಸ್ತಾನದ ಐಎಸ್‌ಐ (ISI) ಫಂಡಿಂಗ್ ಮಾಡುತ್ತಿರುವ ‘ತೆಹ್ರೀಕ್-ಎ-ತಾಲಿಬಾನ್ ಹಿಂದೂಸ್ತಾನ್’ (TTH) ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ. ರಾಂಚಿ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಜಂಟಿಯಾಗಿ ನಡೆಸಿದ ತನಿಖೆಯ ವೇಳೆ, ಆರ್‌ಎಸ್‌ಎಸ್ ಕಚೇರಿಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯು ಕೇವಲ ಸ್ಥಳೀಯ ಘಟನೆಯಲ್ಲ, ಇದರ ಹಿಂದೆ ಅಂತಾರಾಷ್ಟ್ರೀಯ ಉಗ್ರರ ಜಾಲ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ.

ಆರೋಪಿಗಳಾದ ಸೈಫ್ ಅನ್ಸಾರಿ ಮತ್ತು ಅಮಾನ್ ಅನ್ಸಾರಿ ದುಬೈಗೆ ಪ್ರಯಾಣಿಸಿದ್ದಾಗ ಅಲ್ಲಿ ಅವರಿಗೆ ಪಾಕಿಸ್ತಾನದ ಪ್ರಜೆಯಾದ ಶಹಬಾಜ್ ರಾಣಾ ಅಲಿಯಾಸ್ ಭಟ್ಟಿ ಎಂಬಾತನ ಸಂಪರ್ಕ ಸಿಕ್ಕಿತ್ತು ಎಂದು ಮೂಲಗಳು ಬಹಿರಂಗಪಡಿಸಿವೆ. “ಇದಾದ ಬಳಿಕ ಅವರು ಉಗ್ರ ಸಿದ್ಧಾಂತಕ್ಕೆ ಒಳಗಾಗಿದ್ದು, ಭಾರತದಾದ್ಯಂತ ತೆಹ್ರೀಕ್-ಎ-ತಾಲಿಬಾನ್ ಹಿಂದೂಸ್ತಾನ್ (TTH)ನ ಭಾರತ ವಿರೋಧಿ ಚಟುವಟಿಕೆಗಳನ್ನು ಹರಡಲು ಒಪ್ಪಿಕೊಂಡಿದ್ದರು” ಎಂದು ಮೂಲಗಳು ಹೇಳಿವೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ, ಭಾರತದಲ್ಲಿ ಅಸ್ಥಿರತೆ ಮತ್ತು ಕೋಮು ಗಲಭೆಗಳನ್ನು ಸೃಷ್ಟಿಸಲು ಈ ಸಂಘಟನೆಗೆ ದೊಡ್ಡ ಮಟ್ಟದಲ್ಲಿ ಹಣಕಾಸಿನ ನೆರವು (ಫಂಡಿಂಗ್) ನೀಡುತ್ತಿದೆ ಎಂಬುದು ಡಿಜಿಟಲ್ ಪುರಾವೆಗಳಿಂದ ಸಾಬೀತಾಗಿದೆ. ಜಾರ್ಖಂಡ್ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿರುವ ಸ್ಥಳೀಯ ಸ್ಲೀಪರ್ ಸೆಲ್‌ಗಳು ಹಾಗೂ ಕೆಲವು ಯುವಕರನ್ನು ಬಳಸಿಕೊಂಡು ಈ ದಾಳಿಯನ್ನು ಕಾರ್ಯಗತಗೊಳಿಸಲಾಗಿತ್ತು.

ಇದನ್ನೂ ಓದಿ: ಆರ್​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್ ಇದ್ದ ರೈಲಿನ ಮೇಲೆ ಕಲ್ಲು ತೂರಾಟ

ಉಗ್ರರು ದಾಳಿಯ ಯೋಜನೆ ರೂಪಿಸಲು ಮತ್ತು ಪರಸ್ಪರ ಸಂವಹನ ನಡೆಸಲು ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಶನ್ ಹೊಂದಿರುವ ‘ಟೆಲಿಗ್ರಾಮ್’ ಚಾನೆಲ್‌ಗಳು ಮತ್ತು ಕೆಲವು ಸೀಕ್ರೆಟ್ ಡಾರ್ಕ್ ವೆಬ್ ಲಿಂಕ್‌ಗಳನ್ನು ಬಳಸಿಕೊಂಡಿದ್ದರು. ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳ ವಿಧಿವಿಜ್ಞಾನ ತನಿಖೆಯ ವೇಳೆ, ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಅವರು ನಡೆಸಿದ ಚಾಟ್‌ಗಳು ಮತ್ತು ಹಣ ವರ್ಗಾವಣೆಯ ವಿವರಗಳು ಪತ್ತೆಯಾಗಿವೆ.

ಆರ್‌ಎಸ್‌ಎಸ್ ಕಚೇರಿ ಮೇಲಿನ ದಾಳಿಯ ಹಿಂದೆ ಪಾಕ್ ಲಿಂಕ್ ಪತ್ತೆಯಾಗುತ್ತಿದ್ದಂತೆ ಜಾರ್ಖಂಡ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ತನಿಖಾ ಸಂಸ್ಥೆಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಉಗ್ರರ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Video: ರಾಂಚಿಯ ಆರ್‌ಎಸ್‌ಎಸ್ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ತನಿಖೆಯಲ್ಲಿ ಅಂತಾರಾಷ್ಟ್ರೀಯ ಮತ್ತು ಭಯೋತ್ಪಾದನಾ ಲಿಂಕ್‌ಗಳು ಬಯಲಾಗಿರುವುದರಿಂದ ಈ ಪ್ರಕರಣವನ್ನು ಜಾರ್ಖಂಡ್ ಭಯೋತ್ಪಾದನಾ ನಿರೋಧಕ ದಳಕ್ಕೆ (ATS) ವರ್ಗಾಯಿಸಲು ಶಿಫಾರಸು ಮಾಡಲಾಗಿದೆ. ಇವರ ನೆಟ್‌ವರ್ಕ್ ಮತ್ತು ಫಂಡಿಂಗ್ ಕುರಿತು ತನಿಖೆ ನಡೆಸಲಾಗುತ್ತಿದ್ದು, ಇನ್ನು ಹಲವರ ಬಂಧನವಾಗುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ. ಜೂನ್ 16ರ ಮಧ್ಯರಾತ್ರಿ ಇಬ್ಬರು ಯುವಕರು ಆರ್‌ಎಸ್‌ಎಸ್ ಕಚೇರಿಯ ಕಡೆಗೆ ಪೆಟ್ರೋಲ್ ಬಾಂಬ್ ಎಸೆಯುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕದ ಹಲವು ಜಿಲ್ಲಾ ಕೋರ್ಟ್​ಗಳಿಗೆ ಬಾಂಬ್ ಬೆದರಿಕೆ ಕರೆ – Kannada News | Bomb Threat Calls Received by Several District Courts Across Karnataka

ಬೆಂಗಳೂರು, ಜೂನ್​​ 19: ರಾಜ್ಯದಲ್ಲಿ ಮತ್ತೆ ಹುಸಿ ಬಾಂಬ್​​ ಬೆದರಿಕೆ (bomb threat) ಕರೆಗಳ ಹಾವಳಿ ಜೋರಾಗಿದೆ. ಇಂದು ಒಂದೇ ದಿನ ಬಾಗಲಕೋಟೆ, ದಾವಣಗೆರೆ, ಧಾರವಾಡ, ಕೋಲಾರ ಜಿಲ್ಲಾ ನ್ಯಾಯಾಲಯಗಳಿಗೆ ಅನುಮಾನಾಸ್ಪದ ಐಡಿಯಿಂದ ಬಾಂಬ್ ಬೆದರಿಕೆಯ ಇ-ಮೇಲ್​​​​ಗಳು ಬಂದಿವೆ. ಬಾಂಬ್​​ ಬೆದರಿಕೆ ಹಿನ್ನೆಲೆ ನ್ಯಾಯಾಲಯದ (court) ಆವರಣದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು. ಪೊಲೀಸರು ತಪಾಸಣೆ ಮಾಡಿದ್ದಾರೆ.

ಮುಖ್ಯಾಂಶಗಳು

  • ಕರ್ನಾಟಕ ಜಿಲ್ಲಾ ನ್ಯಾಯಾಲಯಗಳಿಗೆ ಇ-ಮೇಲ್ ಬಾಂಬ್ ಬೆದರಿಕೆ
  • ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರಿಂದ ತೀವ್ರ ತಪಾಸಣೆ
  • ಬಾಗಲಕೋಟೆ, ದಾವಣಗೆರೆ ಸೇರಿ ಹಲವೆಡೆ ನ್ಯಾಯಾಲಯಗಳಲ್ಲಿ ಆತಂಕ

ಸೈನೈಡ್ ವಾಯು ಗುಂಡಿಗಳು ಸ್ಫೋಟಿಸುವುದಾಗಿ ಬೆದರಿಕೆ

ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೆ karunanidhi.kundi@underworld.dog ಎಂಬ ಐಡಿಯಿಂದ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ಇಂದು ಮಧ್ಯಾಹ್ನ 2 ಗಂಟೆಗೆ 23 ಸೈನೈಡ್ ವಾಯು ಗುಂಡಿಗಳು ಸ್ಫೋಟವಾಗಲಿವೆ ಎಂದು ಮೇಲ್​​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಬಾಂಬ್ ಬೆದರಿಕೆ ಹಾಕಿದ ಯುವಕನ ಬಂಧನ

ಮೊದಲು ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರಿಗೆ ಮೇಲ್ ಬಂದಿದ್ದು, ಅಲ್ಲಿಂದ ಬಾಗಲಕೋಟೆಗೆ ರವಾನಿಸಲಾಗಿದೆ. ನ್ಯಾಯಾಂಗ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದಿಂದ ಜಡ್ಜ್ ಹಾಲ್, ವಿವಿಧ ಕೊಠಡಿ ಸೇರಿ ಇಡೀ ಕೋರ್ಟ್ ತಪಾಸಣೆ ಮಾಡಿದ್ದಾರೆ.

ವಯನಾಡಿನಿಂದ ಬಾಂಬ್ ಬೆದರಿಕೆ ಕರೆ

ದಾವಣಗೆರೆ ನಗರದ ಪಿಬಿ ರಸ್ತೆ ಬಳಿ ಇರುವ ಜಿಲ್ಲಾ ಕೋರ್ಟ್ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ. ಕೆರಳದ ವಯನಾಡಿನಿಂದ ಜಿಲ್ಲಾ ನ್ಯಾಯಾಲಯದ ಅಧಿಕೃತ ಇ-ಮೇಲ್​ ಐಡಿಗೆ ಸಂದೇಶ‌ ಬಂದಿದೆ. ಬೆದರಿಕೆ ಕರೆ ಬೆನ್ನಲ್ಲೇ ಅಲರ್ಟ್​ ಆದ ಪೊಲೀಸರು, ಶ್ವಾನದಳದಿಂದ ತಪಾಸಣೆ ಮಾಡಿದ್ದಾರೆ.

ಇದನ್ನೂ ಓದಿ: Bomb Threat: ಚಾಮರಾಜನಗರ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ: ನೌಕರರಿಗೆ ರಜೆ ಘೋಷಣೆ

ಕೋಲಾರ ಜಿಲ್ಲಾ ನ್ಯಾಯಾಲಯಕ್ಕೂ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಕೂಡಲೇ ಕೋರ್ಟ್ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಕೋಲಾರ ಗಲ್ ಪೇಟೆ ಪೊಲೀಸರು ಪರಿಶೀಲನೆ ಮಾಡಿದರು.

ಕೋರ್ಟ್ ಸುತ್ತಮುತ್ತ ಆತಂಕ

ಇನ್ನು ಕೋರ್ಟ್ ಹಾಗೂ ಕಾಂಪ್ಲೆಕ್ಸ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಉಪನಗರ ಠಾಣಾ ವ್ಯಾಪ್ತಿಯ ಧಾರವಾಡ ಜಿಲ್ಲಾ ಕೋರ್ಟ್‌ಗೂ ಬಾಂಬ್ ಬೆದರಿಕೆ ಕರೆ ಬಂದಿದೆ. ಅಪರಿಚಿತನ ಬಾಂಬ್​ ಕರೆ ಕೋರ್ಟ್ ಸುತ್ತಮುತ್ತ ಆತಂಕ ಸೃಷ್ಟಿಸಿತ್ತು. ಕೂಡಲೇ ವಕೀಲರು ಮತ್ತು ಕಕ್ಷಿದಾರರು ನ್ಯಾಯಾಲಯ ಆವರಣದಿಂದ ಹೊರಬಂದಿದ್ದಾರೆ. ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಆಗಮಿಸಿ ಕೋರ್ಟ್‌ನ ಒಳಗಡೆ ತಪಾಸಣೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Reliance AGM 2026: ರಿಲಯನ್ಸ್ ಇಂಡಸ್ಟ್ರೀಸ್​ನಿಂದ ಭರ್ಜರಿ ಬಂಡವಾಳ ವೆಚ್ಚ; ಒಂದು ವರ್ಷದಲ್ಲಿ 1.44 ಲಕ್ಷ ಕೋಟಿ ರೂ ವೆಚ್ಚ – Kannada News | Reliance generates huge revenue and profit in 2025 26, spent over 1.44 lakh crore on capex

ಮುಕೇಶ್ ಅಂಬಾನಿImage Credit source: Youtube @RelianceUpdates

ಮುಂಬೈ, ಜೂನ್ 19: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ಆರ್ಥಿಕ ಫಲಿತಾಂಶಗಳನ್ನು ಪ್ರಕಟಿಸಿದ್ದು, ಈ ಬಾರಿಯ ವರದಿಯಲ್ಲಿ ಕಂಪನಿಯು ಭಾರಿ ಬಂಡವಾಳ ಹೂಡಿಕೆ ಮತ್ತು ದಾಖಲೆಯ ಆದಾಯವನ್ನು ದಾಖಲಿಸಿದೆ. 2025-2026ರ ಹಣಕಾಸು ವರ್ಷದಲ್ಲಿ (FY26) ರಿಲಯನ್ಸ್ ಸಂಸ್ಥೆ ಬರೋಬ್ಬರಿ ₹95,754 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಬರೋಬ್ಬರಿ ಶೇ. 17.8ರಷ್ಟು ಏರಿಕೆ ಆಗಿದೆ. ಇವತ್ತು ನಡೆದ ಅರ್​ಐಎಲ್​ನ 49ನೇ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ಛೇರ್ಮನ್ ಮತ್ತು ಎಂಡಿ ಮುಕೇಶ್ ಅಂಬಾನಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ರಿಲಯನ್ಸ್ ಸಂಸ್ಥೆ ತನ್ನ ವಿವಿಧ ವ್ಯವಹಾರಗಳ ವಿಸ್ತರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ₹1,44,271 ಕೋಟಿಯನ್ನು ಬಂಡವಾಳ ವೆಚ್ಚವಾಗಿ (Capital Expenditure) ವ್ಯಯಿಸಿದೆ. ಅದರ ಆದಾಯವೇ ₹11,75,919 ಕೋಟಿ ಇದೆ. ಹಿಂದಿನ ವರ್ಷದಕ್ಕಿಂತ ಆದಾಯದಲ್ಲಿ ಶೇ. 9.8ರಷ್ಟು ಹೆಚ್ಚಳ ಆಗಿದೆ.

ಇದನ್ನೂ ಓದಿ: ಅಕ್ಸೆಂಚರ್ ಕೊಟ್ಟ ಒಂದು ರಿಪೋರ್ಟ್​ಗೆ ಭಾರತದ ಷೇರುಬಜಾರು ಅಲ್ಲೋಲಕಲ್ಲೋಲ; ಶುಕ್ರವಾರ 2 ಲಕ್ಷ ಕೋಟಿ ರೂ ನಷ್ಟ

ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಮುಕೇಶ್ ಅಂಬಾನಿ, ಕಳೆದ ಐದು ವರ್ಷದಲ್ಲಿ ರಿಲಯನ್ಸ್ ಸಂಸ್ಥೆ ಮಾಡಿರುವ ಬಂಡವಾಳ ವೆಚ್ಚ 6,48,428 ಕೋಟಿ ಎಂದು ತಿಳಿಸಿದ್ದಾರೆ. ‘ಈ ಅವಧಿಯಲ್ಲಿ ಭಾರತದ ಬೇರಾವುದೇ ಕಂಪನಿ ಮಾಡಿರುವುದಕ್ಕಿಂತ ಹೆಚ್ಚಿನ ಬಂಡವಾಳ ವ್ಯಯಿಸಿದ್ದೇವೆ. ಕಳೆದ ಐದು ವರ್ಷದಲ್ಲಿ ಭಾರತದ 50 ಅಗ್ರಗಣ್ಣ ಕಾರ್ಪೊರೇಟ್ ಸಂಸ್ಥೆಗಳು ಮಾಡಿರುವ ಒಟ್ಟು ವೆಚ್ಚದಲ್ಲಿ ರಿಲಯನ್ಸ್ ಪಾಲು ಮೂರನೇ ಒಂದರಷ್ಟಿದೆ’ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಕಂಪನಿಯು ತನ್ನ ಜಿಯೋ (Jio) ಡಿಜಿಟಲ್ ಸೇವೆಗಳು, ರೀಟೇಲ್ ವಿಭಾಗ ಮತ್ತು ಇಂಧನ ವಲಯದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಈ ದೊಡ್ಡ ಮೊತ್ತದ ಹೂಡಿಕೆಯನ್ನು ಮಾಡಿದೆ. ಈ ಹೂಡಿಕೆಯು ರಿಲಯನ್ಸ್‌ನ ಭವಿಷ್ಯದ ಬೆಳವಣಿಗೆಯ ಯೋಜನೆಗಳಾದ 5G ವಿಸ್ತರಣೆ, ಗ್ರೀನ್ ಎನರ್ಜಿ ಯೋಜನೆಗಳು ಮತ್ತು ಡಿಜಿಟಲ್ ವ್ಯವಹಾರಗಳನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವ್ಯವಹಾರಿಕ ಸ್ಥಿರತೆಯನ್ನು ಕಾಯ್ದುಕೊಂಡಿರುವುದು ಈ ಫಲಿತಾಂಶಗಳ ಮೂಲಕ ಸಾಬೀತಾಗಿದೆ.

ಇದನ್ನೂ ಓದಿ: ಇನ್ಸ್​ಟಾ ಸ್ಕ್ರೋಲ್ ಮಾಡುವಾಗ ಬೇಡದ್ದು ಬರುತ್ತಿವೆಯಾ? ನೀವಿಚ್ಛಿಸುವವೇ ಫೀಡ್​ನಲ್ಲಿ ಬರುವಂತೆ ಮಾಡುತ್ತದೆ ಈ ಹೊಸ ಮೆಟಾ ಫೀಚರ್

ಒಟ್ಟಾರೆಯಾಗಿ, ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಮಾರುಕಟ್ಟೆ ಪಾಲನ್ನು ಉಳಿಸಿಕೊಳ್ಳಲು ಮತ್ತು ಭವಿಷ್ಯದ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿರಲು ಭಾರಿ ಪ್ರಮಾಣದ ಬಂಡವಾಳವನ್ನು ಹೂಡಿಕೆ ಮಾಡುತ್ತಿದೆ ಎಂಬುದನ್ನು ಈ ಆರ್ಥಿಕ ವರದಿ ಸ್ಪಷ್ಟಪಡಿಸುತ್ತದೆ.

ರಿಲಯನ್ಸ್ ರೀಟೇಲ್ ಅದಾಯ 3.7 ಲಕ್ಷ ಕೋಟಿ ರೂ

ಇದೇ ವೇಳೆ, ಎಜಿಎಂ ಸಭೆಯಲ್ಲಿ ಮಾತನಾಡಿದ ರಿಲಯನ್ಸ್ ರೀಟೇಲ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಇಶಾ ಅಂಬಾನಿ ಅವರು ಆದಾಯದ ಮಾಹಿತಿ ನೀಡಿದ್ದಾರೆ. 2025-26ರಲ್ಲಿ ರಿಲಯನ್ಸ್ ರೀಟೇಲ್​ನ ಒಟ್ಟು ಆದಾಯ 3.70 ಲಕ್ಷ ಕೋಟಿ ರೂ ದಾಖಲಾಗಿದೆ. ಹಿಂದಿನ ವರ್ಷದಕ್ಕಿಂತ ಆದಾಯದಲ್ಲಿ ಶೇ. 11.8ರಷ್ಟು ವೃದ್ಧಿಯಾಗಿದೆ. ಪಿಎಟಿ ಅಥವಾ ನಿವ್ವಳ ಆದಾಯ ಶೇ. 12ರಷ್ಟು ಹೆಚ್ಚಳಗೊಂಡು 13,838 ಕೋಟಿ ರೂ ಆಗಿದೆ. ನೊಂದಾಯಿತ ಗ್ರಾಹಕರ ಸಂಖ್ಯೆ ಶೇ. 11ರಷ್ಟು ಏರಿಕೆಯಾಗಿ 38.7 ಕೋಟಿ ತಲುಪಿರುವ ಮಾಹಿತಿಯನ್ನು ಇಶಾ ಅಂಬಾನಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 3:16 pm, Fri, 19 June 26

Source link

ಭಾರಿ ಸಂಭಾವನೆ ಡಿಮ್ಯಾಂಡ್: ಬ್ಯಾಕ್ ಟು ಬ್ಯಾಕ್ ಆಫರ್ ಕಳೆದುಕೊಳ್ಳುತ್ತಿದ್ದಾರಾ ಪೂಜಾ ಹೆಗ್ಡೆ? – Kannada News | Pooja Hegde’s Stiff Salary Demand: Why Tollywood Producers Are Turning Away?

ಸಾಮಾನ್ಯವಾಗಿ ನಟ-ನಟಿಯರು ನಿರಂತರ ಫ್ಲಾಪ್ ಕೊಟ್ಟರೆ ಬೇಡಿಕೆ ಕಡಿಮೆ ಆಗುತ್ತದೆ. ಆ ಸಂದರ್ಭದಲ್ಲಿ ಸಂಭಾವನೆ ತಗ್ಗಿಸಿಕೊಂಡರೆ ಆಫರ್​​ಗಳು ಬರುತ್ತವೆ. ಆದರೆ, ನನಗೆ ಇಷ್ಟೇ ಹಣ ಬೇಕು ಎಂದು ಕುಳಿತರೆ ಸಿಕ್ಕ ಆಫರ್ ಕೂಡ ಕೈ ತಪ್ಪುತ್ತದೆ. ಈಗ ನಟಿ ಪೂಜಾ ಹೆಗ್ಡೆ ಅವರಿಗೂ (Pooja Hegde) ಇದೇ ರೀತಿ ಆಗಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಪೂಜಾ ಹೆಗ್ಡೆ ಸದ್ಯ ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಬಿಸಿಬಿಸಿ ಚರ್ಚೆಯೊಂದು ಟಾಲಿವುಡ್ ವಲಯದಲ್ಲಿ ಕೇಳಿಬರುತ್ತಿದೆ. ಸದ್ಯಕ್ಕೆ ಕೈಯಲ್ಲಿ ದೊಡ್ಡ ಮಟ್ಟದ ತೆಲುಗು ಸಿನಿಮಾಗಳಿಲ್ಲದ ಪೂಜಾ ಹೆಗ್ಡೆ ಅವರ ಈ ಹಿನ್ನಡೆಗೆ ಅವರ ‘ಭಾರಿ ಸಂಭಾವನೆ’ಯೇ ಮುಖ್ಯ ಕಾರಣ ಎನ್ನಲಾಗುತ್ತಿದೆ. 2021ರಲ್ಲಿ ತೆರೆಗೆ ಬಂದ ‘ಮೋಸ್ಟ್ ಎಲಿಬೆಲ್ ಬ್ಯಾಚುಲರ್’ ಚಿತ್ರವೇ ಕೊನೆ. ಇದಾದ ಬಳಿಕ ತೆಲುಗಿಗೆ ಅವರು ಬಂದಿಲ್ಲ. ಇಷ್ಟೇ ಅಲ್ಲದೆ, ಇನ್ನೂ ಕೆಲವು ತೆಲುಗು ಸಿನಿಮಾಗಳನ್ನು ಅವರು ರಿಜೆಕ್ಟ್ ಮಾಡಿದ್ದರು.

ವರದಿಗಳ ಪ್ರಕಾರ, ಸಿನಿಮಾವೊಂದಕ್ಕೆ ನಟಿ ಪೂಜಾ ಹೆಗ್ಡೆ ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆಗೆ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಕಥೆ ಇಷ್ಟವಾಗಿ ಚಿತ್ರತಂಡಗಳು ಇವರನ್ನು ಸಂಪರ್ಕಿಸಿದರೂ, ಈ ಭಾರಿ ಮೊತ್ತದ ಪ್ರೈಸ್ ಟ್ಯಾಗ್ ಕೇಳಿ ನಿರ್ಮಾಪಕರು ಹಿಂದೇಟು ಇಡುತ್ತಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಪೂಜಾ ಹೆಗ್ಡೆ ನಟನೆಯ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದೇ ಫ್ಲಾಪ್ ಆಗಿವೆ. ಇದರ ಬೆನ್ನಲ್ಲೇ ಚಿತ್ರರಂಗಕ್ಕೆ ಹೊಸ ಹಾಗೂ ಯುವ ನಟಿಯರ ಎಂಟ್ರಿ ಹೆಚ್ಚಾಗಿದೆ. ಹೀಗಾಗಿ ನಿರ್ಮಾಪಕರು ಕಮ್ಮಿ ಬಜೆಟ್‌ನಲ್ಲಿ ಸಿಗುವ ಇತರೆ ಯುವ ನಟಿಯರನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.

ಇದನ್ನೂ ಓದಿ: ಪೂಜಾ ಹೆಗ್ಡೆ ಅದೃಷ್ಟ ಬದಲಿಸುತ್ತಾ ವರುಣ್ ಧವನ್ ಸಿನಿಮಾ?

ಪೂಜಾ ಹೆಗ್ಡೆ ಅವರ ಈ ಕಠಿಣ ಸಂಭಾವನೆ ನಿಲುವಿನಿಂದಾಗಿ ಟಾಲಿವುಡ್ ನಿರ್ಮಾಪಕರು ಬೇರೆ ನಟಿಯರತ್ತ ಮುಖ ಮಾಡುತ್ತಿದ್ದು, ಸ್ಟಾರ್ ನಟಿಗೆ ಆಫರ್‌ಗಳು ಕೈತಪ್ಪುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಅವರಿಗೆ ಸಂಭಾವನೆ ಕಡಿಮೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾಲಿವುಡ್​​ ಸೂಪರ್​​ಹೀರೋಗೆ ಬಾಲಿವುಡ್​​ಗೆ ಬರುವ ಆಸೆ, ಸಹಾಯ ಕೇಳಿದ ಸ್ಟಾರ್ ನಟ – Kannada News | Jason Momoa wants to act in Indian movie, says Vidyut is most handsome actor

ಜೇಸನ್ ಮೊಮೊವಾ (Jason Momoa) ಅಂದರೆ ಹೆಚ್ಚು ಜನರಿಗೆ ಗೊತ್ತಾಗುವುದಿಲ್ಲ ಅದೇ ‘ಆಕ್ವಾಮನ್’ ಎಂದರೆ ಥಟ್ಟನೆ ಹೊಳೆಯುತ್ತದೆ. ಹಾಲಿವುಡ್​ನ ಜನಪ್ರಿಯ ಸೂಪರ್ ಹೀರೋ ಸಿನಿಮಾಗಳಲ್ಲಿ ಒಂದಾಗಿರುವ ‘ಆಕ್ವಾಮನ್’ ಪಾತ್ರಧಾರಿ ಝೇಸನ್ ಮೊಮೊವಾ ಅವರಿಗೆ ಬಾಲಿವುಡ್​ಗೆ ಬರುವ ಆಸೆಯಂತೆ. ಈ ಬಗ್ಗೆ ಮಾತನಾಡಿರುವ ಹಾಲಿವುಡ್ ಸ್ಟಾರ್ ನಟ, ತಮಗೆ ಭಾರತೀಯ ಚಿತ್ರರಂಗ ಪ್ರವೇಶಿಸಲು ಬಾಲಿವುಡ್​ನ ನಟನ ಸಹಾಯ ಅಗತ್ಯವಿದೆ ಎಂದು ಮನವಿ ಸಹ ಮಾಡಿದ್ದಾರೆ.

ಹಾಲಿವುಡ್ ತಾರೆ ಜೇಸನ್ ಮೊಮೊವಾ ಇದೀಗ ‘ಸ್ಟ್ರೀಟ್ ಫೈಟರ್’ ಸಿನಿಮಾನಲ್ಲಿ ನಟಿಸಿದ್ದಾರೆ. ಇದೇ ಸಿನಿಮಾನಲ್ಲಿ ಭಾರತೀಯ ನಟ ವಿದ್ಯುತ್ ಜಾಮ್ವಾಲ್ ಸಹ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿರುವ ಜೇಸನ್ ಮೊಮೊವಾ, ‘ನಾನು ನೋಡಿದ ಅತ್ಯಂತ ಸುಂದರ ವ್ಯಕ್ತಿಗಳಲ್ಲಿ ಒಬ್ಬರು’ ಎಂದು ವಿದ್ಯುತ್ ಜಾಮ್ವಾಲ್ ಅವರನ್ನು ಬಣ್ಣಿಸಿದ್ದಾರೆ. ಅಲ್ಲದೆ ತಮಗೆ ಬಾಲಿವುಡ್ ಚಿತ್ರರಂಗಕ್ಕೆ ಪ್ರವೇಶಿಸಲು ವಿದ್ಯುತ್ ಸಹಾಯ ಮಾಡಬೇಕೆಂದು ಹೇಳಿದ್ದಾರೆ.

ವಿದ್ಯುತ್ ಅವರು ತಮಗೆ ಭಾರತೀಯ ಚಿತ್ರರಂಗದಲ್ಲಿ (ಬಾಲಿವುಡ್) ಕೆಲಸ ಪಡೆಯಲು ಸಹಾಯ ಮಾಡಬೇಕೆಂದು ತಮಾಷೆಯಾಗಿ ಹೇಳಿದ್ದಾರೆ. ‘ಅವರು (ವಿದ್ಯುತ್) ನನಗೆ ಬಾಲಿವುಡ್‌ನಲ್ಲಿ ಕೆಲಸ ಕೊಡಿಸಬೇಕು. ನಾವಿಬ್ಬರೂ ಸೇರಿ ಏನಾದರೂ ವಿಶೇಷ ಮಾಡಬೇಕು, ಅದು ಖುಷಿ ಕೊಡುತ್ತದೆ. ನಾನು ಹೇಳಿದ್ದೇನೆ, ಅದಕ್ಕೆ ಬದ್ಧನಾಗಿದ್ದೇನೆ. ಒಂದಲ್ಲ ಒಂದು ದಿನ ಭಾರತಕ್ಕೆ ಬರಲು ನಾನು ಕಾಯುತ್ತಿದ್ದೇನೆ’ ಎಂದು ಜೇಸನ್ ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ರಶ್ಮಿಕಾ-ವಿಜಯ್ ಚಿತ್ರಕ್ಕೆ ವಿಲನ್ ಆದ ಹಾಲಿವುಡ್​ನ ‘ದಿ ಮಮ್ಮಿ’ ಚಿತ್ರದ ಖಳ

‘ಸ್ಟ್ರೀಟ್ ಫೈಟರ್’ ಸಿನಿಮಾ ಮೂಲಕ ವಿದ್ಯುತ್ ಜಮ್ವಾಲ್ ಹಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಅವರು ‘ಧಾಲ್ಸಿಮ್’ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಬೋಳು ತಲೆ, ಗಂಭೀರ ನೋಟ ಮತ್ತು ವಿಭಿನ್ನ ಅವತಾರದಲ್ಲಿ ವಿದ್ಯುತ್ ಕಾಣಿಸಿಕೊಂಡಿದ್ದು, ಅವರ ಈ ಹೊಸ ಲುಕ್ ಎಲ್ಲರ ಗಮನ ಸೆಳೆದಿದೆ. ‘ಸ್ಟ್ರೀಟ್ ಫೈಟರ್’ ಬಲು ಜನಪ್ರಿಯ ಗೇಮ್ ಒಂದರಿಂದ ಸ್ಪೂರ್ತಿ ಪಡೆದು ನಿರ್ಮಿಸಲಾಗಿರುವ ಸಿನಿಮಾ ಆಗಿದೆ. ಈ ಸಿನಿಮಾ ಅಕ್ಟೋಬರ್ 16ರಂದು ತೆರೆಗೆ ಬರಲಿದೆ.

ಜೇಸನ್ ಮೊಮೊವಾ, ಹಾಲಿವುಡ್​ನ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ‘ಗೇಮ್ ಆಫ್ ಥ್ರೋನ್ಸ್’ ನಕ್ಲಿ ಕಾರ್ಲ್ಸ್ ಡ್ರಾಗೊ ಪಾತ್ರದಲ್ಲಿ ನಟಿಸಿದ್ದ ಜೇಸನ್ ಅವರಿಗೆ ಭಾರಿ ಹೆಸರು ತಂದುಕೊಟ್ಟಿದ್ದು ‘ಆಕ್ವಮಾನ್’ ಸಿನಿಮಾ. ಆ ಬಳಿಕ ಅವರು ಸೂಪರ್ ಮ್ಯಾನ್, ಬ್ಯಾಟ್​​ಮ್ಯಾನ್ ಸಿನಿಮಾಗಳಲ್ಲಿ, ‘ಜಸ್ಟಿಸ್ ಲೀಗ್’ ಸಿನಿಮಾಗಳಲ್ಲಿಯೂ ನಟಿಸಿದರು. ಇತ್ತೀಚೆಗೆ ಬಂದ ‘ತ್ರಿಬಲ್ ಎಕ್ಸ್’ ಸಿನಿಮಾನಲ್ಲಿ ವಿಲನ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಈಗ ಭಾರತೀಯ ಸಿನಿಮಾಗಳಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶ್ರೇಯಾಂಕ ಪಾಟೀಲ್ ಬದಲಿಗೆ ಟೀಂ ಇಂಡಿಯಾ ಸೇರಿಕೊಂಡ ಆರ್​ಸಿಬಿ ಆಟಗಾರ್ತಿ – Kannada News | Shreyanka Patil Out of T20 World Cup 2026 Due to Injury; Prema Rawat Replaces Her

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಶ್ರೇಯಾಂಕ ಪಾಟೀಲ್ (Shreyanka Patil) ಅವರನ್ನು ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 (Women’s T20 World Cup 2026) ರಿಂದ ಹೊರಗಿಡಲಾಗಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ ಶ್ರೇಯಾಂಕ ಪಾಟೀಲ್ ಗಾಯಕ್ಕೆ ಒಳಗಾಗಿದ್ದರು. ಗಾಯ ಗಂಭೀರವಾಗಿರುವ ಕಾರಣ ಶ್ರೇಯಾಂಕರನ್ನು ಪಂದ್ಯಾವಳಿಯಿಂದ ಹೊರಗಿಟ್ಟಿರುವ ಬಿಸಿಸಿಐ, ಅವರ ಬದಲಿ ಆಟಗಾರ್ತಿಯನ್ನು ಸಹ ತಂಡಕ್ಕೆ ಆಯ್ಕೆ ಮಾಡಿದೆ. ಅದರಂತೆ ಟೀಂ ಇಂಡಿಯಾ ಪರ ಇದುವರೆಗೆ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನು ಆಡದ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ (Prema Rawat) ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಪ್ರೇಮಾ ರಾವತ್ ಡಬ್ಲ್ಯೂಪಿಎಲ್​ನಲ್ಲಿ ಆರ್​ಸಿಬಿ ಪರ ಆಡುತ್ತಿದ್ದು, ಇದೀಗ ಆರ್​ಸಿಬಿ ಪರ ಆಡುವ ಶ್ರೇಯಾಂಕ ಪಾಟೀಲ್ ಬದಲಿಗೆ ತಂಡವನ್ನು ಕೂಡಿಕೊಂಡಿದ್ದಾರೆ.

ಶ್ರೇಯಾಂಕ ಬದಲಿಯಾಗಿ ಬಂದ ಪ್ರೇಮಾ

ಶ್ರೇಯಾಂಕ ಪಾಟೀಲ್ ಬದಲಿಗೆ ಬಿಸಿಸಿಐ, ಯುವ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ ಅವರನ್ನು ಭಾರತ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದೆ. ಮೇಲೆ ಹೇಳಿದಂತೆ ಪ್ರೇಮಾ ರಾವತ್ ಭಾರತ ತಂಡಕ್ಕೆ ಆಯ್ಕೆಯಾಗಿರುವುದು ಇದೇ ಮೊದಲು. ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಪ್ರೇಮಾ ರಾವತ್ ಅವರನ್ನು ಶ್ರೇಯಾಂಕ ಪಾಟೀಲ್ ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳಲು ಐಸಿಸಿಯ ತಾಂತ್ರಿಕ ಸಮಿತಿ ಕೂಡ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಪ್ರೇಮಾ ಇಷ್ಟರಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅನುಕೂಲಕರವೆಂಬಂತೆ ಪ್ರೇಮಾ ರಾವತ್ ಈಗಾಗಲೇ ಇಂಗ್ಲೆಂಡ್‌ನಲ್ಲಿದ್ದಾರೆ. ಪರಿಣಾಮವಾಗಿ, ಐಸಿಸಿ ಅನುಮೋದನೆ ಪಡೆದ ತಕ್ಷಣ ಅವರು ವಿಶ್ವಕಪ್ ತಂಡವನ್ನು ಸೇರಲಿದ್ದಾರೆ.

ಶ್ರೇಯಾಂಕ ಗಾಯಗೊಂಡಿದ್ದು ಹೇಗೆ?

ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ವೇಳೆ ಶ್ರೇಯಾಂಕ ಪಾಟೀಲ್ ಬಲಗಾಲಿನ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ನೆದರ್ಲ್ಯಾಂಡ್ಸ್ ಇನ್ನಿಂಗ್ಸ್‌ನ ಆರನೇ ಓವರ್‌ನ ಮೊದಲ ಎಸೆತದಲ್ಲಿ ಈ ಅವಘಡ ಸಂಭವಿಸಿತ್ತು. ಚೆಂಡನ್ನು ಹಿಡಿಯುವ ಯತ್ನದಲ್ಲಿ ಶ್ರೇಯಾಂಕ ಅವರ ಬಲಗಾಲು ಉಳುಕಿತ್ತು. ಹೀಗಾಗಿ ಅವರನ್ನು ಸ್ಟ್ರೆಚರ್‌ನಲ್ಲಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಟೂರ್ನಿಯ ಆರಂಭದಲ್ಲೇ ಶ್ರೇಯಾಂಕ ತಂಡದಿಂದ ಹೊರಬಿದ್ದಿರುವುದು ನಾಯಕಿ ಹರ್ಮನ್ಪ್ರೀತ್ ಕೌರ್ ಮತ್ತು ತಂಡದ ನಿರ್ವಹಣೆಗೆ ದೊಡ್ಡ ಹೊಡೆತ ಬಿದ್ದಿದೆ. ಏಕೆಂದರೆ ಶ್ರೇಯಾಂಕ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದು, ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ ಕೂಡ ಮಾಡುತ್ತಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:49 pm, Fri, 19 June 26

Source link

ಹೆಚ್‌ಐವಿ ಇದೆ ಎಂದು ವದಂತಿ ಹಬ್ಬಿಸುವುದಾಗಿ ಬೆದರಿಸಿ 50 ಲಕ್ಷಕ್ಕೆ ಬೇಡಿಕೆ: ಪತ್ನಿ ವಿರುದ್ಧವೇ ಉದ್ಯಮಿ ದೂರು – Kannada News | Wife Booked After Tech Firm Owner Alleges Blackmail with Fake HIV Rumours and 50 Lakh Demand

ಬೆಂಗಳೂರು, ಜೂನ್​​ 19: ಹೆಚ್‌ಐವಿ/ಏಡ್ಸ್‌ ಸೋಂಕು ಇದೆ ಎಂಬ ಸುಳ್ಳು ಸುದ್ದಿ ಹಬ್ಬಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಪತ್ನಿ ವಿರುದ್ಧವೇ ಬೆಂಗಳೂರಿನ (Bengaluru) ಉದ್ಯಮಿಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ. 51 ವರ್ಷದ ವ್ಯಕ್ತಿ ನೀಡಿರುವ ದೂರಿನ ಆಧಾರದಲ್ಲಿ ಮಾರತ್ತಹಳ್ಳಿ ಪೊಲೀಸರು 37 ವರ್ಷದ ಸ್ವಾತಿ ಬಿ. ವಿರುದ್ಧ ವಂಚನೆ, ನಂಬಿಕೆ ದ್ರೋಹ, ಕಳವು, ಸುಲಿಗೆ, ಮಾನಹಾನಿ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಉದ್ಯಮಿ ಆರೋಪವೇನು?

ಮಾರತ್ತಹಳ್ಳಿಯಲ್ಲಿ ಕಂಪ್ಯೂಟರ್ ಏಡೆಡ್ ಡಿಸೈನ್ ಅಂಡ್ ಡ್ರಾಫ್ಟಿಂಗ್ (CADD) ತರಬೇತಿ ಸಂಸ್ಥೆ ನಡೆಸುತ್ತಿರುವ ಉದ್ಯಮಿ, 2021ರ ಅಕ್ಟೋಬರ್‌ನಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಸ್ವಾತಿಯನ್ನು ಪರಿಚಯಿಸಿಕೊಂಡು 2022ರ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ವಿವಾಹದ ನಂತರ ಮಹಿಳೆ ತನ್ನ ಅಸಲಿ ಮುಖ ತೋರಿಸಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ಸುಳ್ಳು ಆರೋಪಗಳನ್ನು ಹರಡುತ್ತೇನೆ ಎಂದು ಉದ್ಯಮಿಯಾಗಿರುವ ಪತಿಗೆ ಬೆದರಿಕೆ ಹಾಕಿದ್ದಾಳೆ. 50 ಲಕ್ಷ ಹಣಕ್ಕೂ ಬೇಡಿಕೆ ಇಟ್ಟಿದ್ದಾಳೆ. ಹಣ ನೀಡದಿದ್ದರೆ  ಹೆಚ್‌ಐವಿ/ಏಡ್ಸ್‌ ಇದೆ ಹಾಗೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದೇನೆ ಎಂಬ ಸುಳ್ಳು ಪ್ರಚಾರ ಮಾಡುವುದಾಗಿ ತನಗೆ ಬೆದರಿಸಿದ್ದಾಳೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಉಚಿತ 5G ಅಪ್‌ಗ್ರೇಡ್ ಆಸೆಗೆ ಬಿದ್ದ ಬೆಂಗಳೂರು ವ್ಯಕ್ತಿಗೆ ಶಾಕ್; ಅಕೌಂಟ್ ಹ್ಯಾಕ್ ಮಾಡಿ 15 ಲಕ್ಷ ರೂ. ಸಾಲ ಪಡೆದ ಸೈಬರ್ ವಂಚಕರು!

3 ಮದುವೆ ಆರೋಪ

ಮನೆಯಿಂದ 18 ಲಕ್ಷ ನಗದು, ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವುದಲ್ಲದೆ, ನಕಲಿ ಕೀಲಿ ಬಳಸಿ ಕಾರು ಕೂಡ ತೆಗೆದುಕೊಂಡು ಹೋಗಿದ್ದಾಳೆ. ಸಾಲದ್ದಕ್ಕೆ ಕಚೇರಿಗೆ ಹಾನಿ ಮಾಡುವ ಜೊತೆಗೆ ಚೆಕ್‌ಗೆ ನಕಲಿ ಸಹಿ ಹಾಕಿ ಬ್ಯಾಂಕ್ ಖಾತೆಯಿಂದ 83 ಸಾವಿರ ಹಣ ಡ್ರಾ ಮಾಡಿಕೊಂಡಿರುವುದಾಗಿ ಕೂಡ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ತನ್ನನ್ನು ಮದುವೆಯಾಗುವ ಮೊದಲು ಆಕೆ ಮೂರು ಬಾರಿ ಮದುವೆಯಾಗಿದ್ದಳು. ನ್ಯಾಯಾಧೀಶರು, ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಪರಿಚಯವಿದೆ ಎಂದು ಹೇಳಿಕೊಂಡು, ನನ್ನ ವಿರುದ್ಧ ಏನು ಬೇಕಾದರೂ ಮಾಡಬಲ್ಲೆ ಎಂದು ಆಗಾಗ ಬೆದರಿಸುತ್ತಿದ್ದಳು. ಮದುವೆಗೆ ಮುನ್ನವೂ ಹಿಂದಿನ ವಿವಾಹದಿಂದ ಜನಿಸಿದ ಮಗನ ಶಿಕ್ಷಣಕ್ಕಾಗಿ ತನ್ನಿಂದ ಹೆಚ್ಚಿನ ಹಣ ಖರ್ಚು ಮಾಡಿಸಿಕೊಂಡಿದ್ದಾಳೆ ಎಂದು ಉದ್ಯಮಿ ಆರೋಪಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದೇವಸ್ಥಾನದಲ್ಲಿ ಹುಂಡಿ ಹಣ ಎಣಿಸುವಾಗ 20 ರೂ. ನೋಟಿನ ಮೇಲೆ ಬರೆದಿದ್ದ ಕೋರಿಕೆ ನೋಡಿ ಸಿಬ್ಬಂದಿ ಶಾಕ್ – Kannada News | Viral 20 Rupee Note Shocks Temple Staff: A Plea for Mother in Law’s Death

ಅನಂತಪುರ, ಜೂನ್ 19: ಭಕ್ತರು ಸಾಮಾನ್ಯವಾಗಿ ದೇವರ ಹುಂಡಿಗೆ ಕಾಣಿಕೆ ಹಾಕುವಾಗ ತಮಗೆ ಒಳ್ಳೆಯದಾಗಲಿ, ಆರೋಗ್ಯ, ಅಷ್ಟೈಶ್ವರ್ಯ ಸಿಗಲು, ಒಳ್ಳೆಯ ಕೆಲಸ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪಂಪನೂರು ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯ(Temple)ದಲ್ಲಿ ಇತ್ತೀಚೆಗೆ ಹುಂಡಿ ಎಣಿಕೆಯ ವೇಳೆ ಕಂಡುಬಂದ ನೋಟೊಂದು ದೇವಾಲಯದ ಸಿಬ್ಬಂದಿ ಹಾಗೂ ಭಕ್ತರನ್ನು ಅಚ್ಚರಿಗೊಳಿಸಿದೆ.

ಹುಂಡಿಯಲ್ಲಿ ಸಿಕ್ಕ ಇಪ್ಪತ್ತು ರೂಪಾಯಿ ನೋಟಿನ ಮೇಲೆ ಭಕ್ತರೊಬ್ಬರು ಬರೆದಿದ್ದ ವಿಚಿತ್ರ ಕೋರಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಹುಂಡಿ ಎಣಿಕೆ ಮಾಡುವಾಗ ಸಿಬ್ಬಂದಿಗೆ ಸಿಕ್ಕ 20 ರೂ. ನೋಟಿನ ಮೇಲೆ ತೆಲುಗಿನಲ್ಲಿ ದೇವರೇ ನನ್ನ ಅತ್ತೆ ಬೇಗ ಸಾಯಬೇಕು ಎಂದು ಬರೆಯಲಾಗಿತ್ತು.

ಸಾಮಾನ್ಯವಾಗಿ ಕಾಗದದ ಮೇಲೆ ಕಷ್ಟಗಳನ್ನು ಬರೆದು ಹಾಕುವುದನ್ನು ನೋಡಿದ್ದ ಸಿಬ್ಬಂದಿಗೆ, ನೋಟಿನ ಮೇಲೆಯೇ ಯಾರೋ ಒಬ್ಬರ ಸಾವು ಬಯಸಿ ದೂರು ನೀಡಿರುವುದು ತೀವ್ರ ಆಶ್ಚರ್ಯ ಮೂಡಿಸಿದೆ.
ಈ ವಿಚಿತ್ರ ಪ್ರಾರ್ಥನೆಯ ಫೋಟೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಮತ್ತಷ್ಟು ಓದಿ: 85 ಕೋಟಿ ರೂ. ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ

ಆಕೆ ಕೇವಲ 20 ರೂಪಾಯಿ ಸುಪಾರಿ ನೀಡಿ ದೇವರಿಗೇ ನೇರ ದೂರು ದಾಖಲಿಸಿದ್ದಾಳೆ, ಇಪ್ಪತ್ತು ರೂಪಾಯಿಗೆ ಅತ್ತೆಯನ್ನೇ ಕೊಲ್ಲಲು ಹೊರಟಿದ್ದಾಳೆ. ದೇವರು ಕೂಡ ಇಂತಹ ವಿನಂತಿಯನ್ನು ಖಂಡಿತಾ ಊಹಿಸಿರಲ್ಲ ಎಂದು ಹಲವರು ತಮಾಷೆ ಮಾಡಿದ್ದಾರೆ.

ಇನ್ನು ಕೆಲವರು, ಇದು ಕೇವಲ ನಗುವ ವಿಷಯವಲ್ಲ. ಆ ಮಹಿಳೆ ಮನೆಯಲ್ಲಿ ಎಂತಹ ನರಕಯಾತನೆ ಮತ್ತು ಮಾನಸಿಕ ಒತ್ತಡ ಅನುಭವಿಸುತ್ತಿರಬಹುದು ಎಂಬುದಕ್ಕೆ ಈ ನೋಟೇ ಸಾಕ್ಷಿ. ಕೌಟುಂಬಿಕ ಕಲಹಗಳು ಈ ಮಟ್ಟಕ್ಕೆ ತಲುಪಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸದ್ಯಕ್ಕೆ ಇಂಟರ್ನೆಟ್‌ನಲ್ಲಿ ನಗುವಿನ ಅಲೆ ಎಬ್ಬಿಸಿದ್ದರೂ, ಸಮಾಜದಲ್ಲಿ ಮತ್ತು ಕುಟುಂಬಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ ಹಾಗೂ ಭಿನ್ನಾಭಿಪ್ರಾಯಗಳಿಗೆ ಕನ್ನಡಿ ಹಿಡಿದಂತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version